Saturday, December 10, 2011

ರಾಮುಲು ಗೆಲುವು ಬಿಜೆಪಿಗೆ ದಿಗಿಲು

ಈ ಬಾರಿ ಮಾಗಿಯ ಚಳಿಯಲ್ಲಿ ರಾಜ್ಯದ ಶ್ರೀಸಾಮಾನ್ಯ ಆರಾಮವಾಗಿ ದಿನ ಸಾಗಿಸುತ್ತಿದ್ದರೆ ರಾಜ್ಯದ ಅಧಿಕಾರರೂಢರು ಮಾತ್ರ ಗಡಗಡ ನಡುಗುತ್ತ ಅಯ್ಯೋ ರಾಮ ರಾಮ ಅನ್ನುತ್ತಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಕಂಬಳಿ ಹೊದ್ದುಕೊಂಡೆ ವಿಧಾನ ಸೌಧವನ್ನು ಆಳುತ್ತಿದ್ದವರನ್ನು ಈ ಬಾರಿ ಬಳ್ಳಾರಿಯಿಂದ ಬೀಸಿದ ರಾಮುಲು ನಾಮಧೇಯದ ಶೀತಲ ಮಾರುತ ಥರಗುಟ್ಟುವಂತೆ ಮಾಡಿದೆ.

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ‘ಸ್ವಾಭಿಮಾನಿ’ ಶ್ರೀರಾಮುಲು ಮತ್ತು ಕುಮಾರಸ್ವಾಮಿ ಗೆದ್ದಿದ್ದಾರೆ. ಬಿಜೆಪಿ ಸೋತಿದೆ. ಕಾಂಗ್ರೆಸ್ ಉಪಚುನಾವಣೆಗಳಲ್ಲಿ ಸೋಲುವ ತನ್ನ ಸಂಪ್ರದಾಯವನ್ನು ಇಲ್ಲಿಯೂ ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದೆ. ಇದು ಮೊನ್ನೆ ಭಾನುವಾರದ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಿದ್ದ ವಿದ್ಯಮಾನ. ಆದರೆ ಈ ಚುನಾವಣೆ ನಡೆಯಲು ಕಾರಣ, ಚುನಾವಣೆಗೆ ನಡೆದ ಪ್ರಚಾರ ಯಾವುವು ಕೂಡ ಜನರ ಕಣ್ಣಿಗೆ ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲವೂ ರಾಜಕೀಯದ ಕರಾಳ ಕತ್ತಲೆಯ ಕೂಪದಲ್ಲಿ ನಡೆದ, ಆದರೆ ನಡೆಯಬಾರದ ಸಂಗತಿಗಳಾಗಿದ್ದವು ಎಂದೇ ನಾಡಿನ ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.

ರಾಮುಲು ಒಂದೆ ಒಂದು ಮತದಿಂದ ಗೆದ್ದಿದ್ದರೂ ಕೂಡ ರಾಜ್ಯ ರಾಜಕೀಯ ಮಗ್ಗಲು ಬದಲಾಯಿಸುವುದು ಸಾಧ್ಯವಿತ್ತು. ಅಂತಹದ್ದರಲ್ಲಿ ಅವರು ಗಳಿಸಿರುವ ಈ ಭಾರಿ ಅಂತರದ ಗೆಲುವಂತೂ ನಮ್ಮ ರಾಜ್ಯದ ರಾಜಕೀಯ ಚಿತ್ರಣವನ್ನೆ ಬದಲಾಯಿಸುವ ಎಲ್ಲ ಸಾಧ್ಯತೆಗಳಿವೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (ಈ ಹಿಂದೆ ಕುರಗೋಡು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಹೆಚ್ಚಾಗಿ ಲಿಂಗಾಯತರೇ ಗೆದ್ದು ಬರುತ್ತಿದ್ದರು. ರಾಮುಲು ಈ ಪರಂಪರೆಯನ್ನು ಮುರಿದಿದ್ದಾರೆ (ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ). ಆದರೆ ಈ ಮುರಿಯುವ ಪ್ರಕ್ರಿಯೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಅನಭಿಷಿಕ್ತ ನಾಯಕ ತಾನೇ ಎಂದು ಸ್ವಯಂಘೋಷಿಸಿಕೊಂಡಿರುವ ಅಥವಾ ಆ ರೀತಿ ತನ್ನ ಭಟ್ಟಂಗಿಗಳಿಂದ ಘೋಷಿಸಲ್ಪಟ್ಟಿರುವ ಯಡಿಯೂರಪ್ಪರಿಗೆ ಒಂದು ರೀತಿಯಲ್ಲಿ ಹೊಡೆತ ಮತ್ತು ಮತ್ತೊಂದು ರೀತಿಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ.

ಹೊಡೆತ ಹೇಗೆಂದರೆ ಯಡಿಯೂರಪ್ಪ ತಾವೇ ಖುದ್ದು ಚುನಾವಣೆಯಲ್ಲಿ ಬಂದು ಪ್ರಚಾರ ನಡೆಸಿದ್ದರೂ ಕೂಡ ತಮ್ಮ ಸಮುದಾಯಕ್ಕೆ ಸೇರಿದ ೩೦,೦೦೦ ಮತಗಳಲ್ಲಿ ಶೇ. ೭೫ನ್ನು ಕೂಡ ಗಾದಿ ಲಿಂಗಪ್ಪರ ತೆಕ್ಕೆಗೆ ಹಾಕಲು ಅವರಿಂದ ಸಾಧ್ಯವಾಗದೇ ಹೋಯಿತು. "ಯಡಿಯೂರಪ್ಪರ ಪೊಟೋ ಹಿಡ್ಕೊಂಡೆ ಬಳ್ಳಾರಿ ಚುನಾವಣೆ ಗೆಲ್ತಿವಿ" ಎಂದು ಕೊಚ್ಚಿಕೊಂಡಿದ್ದ ಅಬಕಾರಿ ಸಚಿವ ರೇಣುಕಾಚಾರ್ಯರಿಗಂತೂ ಮತ್ತೊಮ್ಮೆ ಮುಖಭಂಗವಾಗಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ಯಡಿಯೂರಪ್ಪ ಬಯಸಿದ್ದೆ ಆಗಿದ್ದರೆ ಅವರು ಗೆದ್ದಿದ್ದಾರೆ. ಬಿಜೆಪಿ ಸರ್ಕಾರ ಪತನದಂಚಿಗೆ ಬಂದು ನಿಂತಿದೆ. ಮತ್ತೆ ಅಪರೇಷನ್ ಮಾಡಿ ಸರ್ಕಾರ ಉಳಿಸುವ ಪ್ರಯತ್ನ ನಡೆದಿದೆ. ಯಡಿಯೂರಪ್ಪರಿಗೆ ಪಕ್ಷಕ್ಕೆ ತನ್ನ ನಾಯಕತ್ವ, ತಂತ್ರಗಾರಿಕೆ ಎಷ್ಟು ಅನಿವಾರ್ಯವಾಗಿದೆ ಎಂಬುದನ್ನು ತೋರಿಸಿಕೊಡಲು ಮತ್ತೊಂದು ಅವಕಾಶ ಪ್ರಾಪ್ತವಾಗಿದೆ.

ರಾಮುಲುರ ಗೆಲುವಿನ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ಹಿರಿಯ ಪತ್ರಕರ್ತ ಮದನ್ ಮೋಹನ್, “ಇದನ್ನು ಯಾರೂ ಊಹಿಸಿರಲು ಸಾಧ್ಯವಿಲ್ಲ. ರಾಜಕೀಯ ಪಕ್ಷವೊಂದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಬೇರೆ, ಸ್ವತಂತ್ರ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಗೆಲ್ಲುವುದು ಬೇರೆ. ಈ ಗೆಲುವಿನ ಮೌಲ್ಯಮಾಪನ ಮಾಡುವುದು ಕಷ್ಟ ಯಾಕೆಂದರೆ ಕೇವಲ ಹಣ ಇಷ್ಟೊಂದು ಮತ ಗಳಿಸಿಕೊಡಲು ಸಾಧ್ಯವಿಲ್ಲ; ಅದ್ದರಿಂದ ಇವರ ಗೆಲುವಿಗೆ ಬೇರೆ ಆಯಾಮಗಳು ಕೂಡ ಇವೆ” ಎನ್ನುತ್ತಾರೆ. ಆದರೆ ನಾಡಿನ ಹಿರಿಯ ಚಿಂತಕ ಚಂದ್ರಶೇಖರ ಪಾಟೀಲ (ಚಂಪಾ) ಅವರು, “ಕಾಂಗ್ರೆಸ್‌ನ ನಿಷ್ಕ್ರೀಯತೆ ಮತ್ತು ಬಿಜೆಪಿಯ ಅಸಮರ್ಥತೆಗೆ ಜನರು ಈ ಮೂಲಕ ಪಾಠ ಕಲಿಸಿದ್ದಾರೆ. ರಾಮುಲುರ ಮೇಲೆ ಜನರಿಗಿದ್ದ ಪ್ರೀತಿ ಮತ್ತು ಅವರು ಬಳಸಿಕೊಂಡ ಸ್ವಾಭಿಮಾನದ ಟ್ಯಾಗ್ ಅವರನ್ನು ಗೆಲ್ಲಿಸಿದೆ” ಎನ್ನುತ್ತಾರೆ.

ಆದರೆ ರಾಮುಲುರ ಹೆಸರು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಗೊಂಡಿತ್ತು ಎನ್ನುವ ಅಂಶದ ಬಗ್ಗೆ ಮದನ್ ಮೋಹನ್ ಹೇಳುವುದು ಹೀಗೆ, “ದೇಶದಲ್ಲಿ ಯಾವತ್ತೂ ಭ್ರಷ್ಟಾಚಾರ ಮತದಾನದ ವಿಷಯವಾಗಿಲ್ಲ. ಈಗ ಯಡಿಯೂರಪ್ಪ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ. ಚುನಾವಣೆಯಲ್ಲಿ ಬೀಳುವ ಮತಗಳು ಅನೇಕ ಅಂಶಗಳನ್ನು ಆಧಾರಿಸಿರುತ್ತದೆ. ಚುನಾವಣೆ ಒಂದು ಸಂಕೀರ್ಣ ವಿಷಯ ಅದನ್ನು ಒಂದೇ ವಿಷಯದಿಂದ ಅಳೆಯಲಾಗದು”.

“ಎಲ್ಲರೂ ಭ್ರಷ್ಟರಾಗಿದ್ದಾರೆ ಅದ್ದರಿಂದ ರಾಮುಲುರ ಮೇಲಿದ್ದ ಭ್ರಷ್ಟಾಚಾರದ ಆರೋಪ ಕೆಲಸ ಮಾಡಲಿಲ್ಲ. ಶ್ರೀರಾಮುಲುರಲ್ಲಿ ಸ್ವಲ್ಪ ಮಟ್ಟಿನ ಪ್ರಾಮಾಣಿಕತೆ ಇದ್ದುದ್ದರಿಂದ ಅವರಿಗೆ ಈ ಗೆಲುವು ಸಾಧ್ಯವಾಯಿತು. ಅವರ ಹೆಸರು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದೆ. ನಿಜ. ಆದರೆ ಕೊನೆಗೆ ಕಾನೂನು ಉಳಿಯಬೇಕು. ಜನಾದೇಶವಲ್ಲ” ಎಂಬುದು ಚಂಪಾ ಅಭಿಪ್ರಾಯ.
ಆದರೆ ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಸಿದ್ಧಪಡಿಸಿದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಕಾರ, “ಖಂಡಿತವಾಗಿಯೂ ಇದು ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕಾದ ಸೋಲಲ್ಲ, ಒಂದು ವೇಳೆ ಯಾರಾದರೂ ಹಣ ಪಡೆದು ಮತ ನೀಡಿದ್ದೆ ಆದರೆ ಅವರು ತಮ್ಮ ಆತ್ಮಸಾಕ್ಷಿಗೆ ಉತ್ತರ ನೀಡಬೇಕಾಗಿದೆ. ಅದೂ ಅಲ್ಲದೆ ಯಾವುದೇ ರಾಜಕೀಯ ಪಕ್ಷ ಕೂಡ ಲೋಕಾಯುಕ್ತ ವರದಿಯನ್ನು ತಮ್ಮ ಚುನಾವಣಾ ವಿಷಯವನ್ನಾಗಿಸಿಕೊಂಡಿರಲಿಲ್ಲ” ಎನ್ನುತ್ತಾರೆ. ರಾಮುಲುರ ಗೆಲುವಿನ ಬಗ್ಗೆ ಚಂಪಾರ ಅಭಿಪ್ರಾಯದ ಬಗ್ಗೆ ಸಹಮತ ವ್ಯಕ್ತಪಡಿಸಿರುವ ಹೆಗ್ದೆ, “ಬಳ್ಳಾರಿ ಜನರಿಗೆ ಅನ್ಯ ಆಯ್ಕೆಗಳಿರಲಿಲ್ಲ” ಎನ್ನುತ್ತಾರೆ.
ಇದೀಗ ರಾಜ್ಯದಲ್ಲಿ ಮತ್ತೊಂದು ಹಾವುಏಣಿಯಾಟದ ಕಣ ಸಿದ್ಧವಾಗಿದೆ. ರಾಮುಲು ಬಿಜೆಪಿಯಿಂದ ಅಧಿಕೃತವಾಗಿ ಹೊರಬಂದಿದ್ದಾರೆ. ಜೆಡಿಎಸ್ ಶ್ರೀರಾಮುಲು ಜೊತೆ ಅಧಿಕೃತವಾಗಿಯೇ ಹೆಜ್ಜೆ ಹಾಕುತ್ತಿದೆ. ರಾಮುಲು ಜೆಡಿಎಸ್ ಸೇರುವ ಸಾಧ್ಯತೆ ಬಲು ಕ್ಷೀಣ. ಏಕೆಂದರೆ ರಾಜ್ಯದಲ್ಲಿನ ತೃತೀಯ ರಂಗದಲ್ಲಿದ್ದ ಪ್ರಬಲ ನಾಯಕರೆಲ್ಲರಿಗೂ ಆ ಪಕ್ಷದಲ್ಲಿನ ಕುಟುಂಬ ರಾಜಕಾರಣದ ಭಸ್ಮಾಸುರ ಕಾಟದಿಂದ ತೊಂದರೆಗೀಡಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಮುಲು ಮತ್ತು ಜೆಡಿಎಸ್ ಜೊತೆಯಾಗಿಯೇ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಇದು ಸಾಧ್ಯವಾಗಬೇಕಾದರೆ ಒಂದೋ ರಾಮುಲು ಪಕ್ಷೇತರರಾಗಿಯೇ ಉಳಿಯಬೇಕು ಇಲ್ಲ ತಮ್ಮದೆ ಆದ ಪ್ರಾದೇಶಿಕ ಪಕ್ಷ ಕಟ್ಟಿಕೊಳ್ಳಬೇಕು. ಆದರೆ ಅವರೀಗ ಜೆಡಿಯುನ ಬಾಗಿಲು ಬಡಿಯುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಅದರ ಜೊತೆಗೆ ಅಹಿಂದವನ್ನು ಸೇರಿಕೊಳ್ಳುತ್ತಾರೆ ಎಂಬ ಗಾಳಿಪಟ ಕೂಡ ಹಾರಾಡುತ್ತಿದೆ.

ಆದರೆ ರಾಮುಲು ಗೆದ್ದಿರುವುದಕ್ಕೂ ನಾಳೆ ಅವರ ಹಿಂಬಾಲಕರನ್ನು ಗೆಲ್ಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈ ವರ್ಷ ನಡೆದಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ರೆಡ್ಡಿ ಸೋದರ ಆರ್ಭಟ ಉತ್ತುಂಗದಲ್ಲಿದ್ದರೂ ಕೂಡ ಬಳ್ಳಾರಿಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರಲಿಲ್ಲ. ಬಳ್ಳಾರಿಯ ೩೬ ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಅದು ಕೇವಲ ೧೮ ಸ್ಥಾನ ಗೆದ್ದಿತ್ತು. ಅಪರೇಷನ್ ಕಮಲಕ್ಕೆ ಮೊರೆ ಹೋಗಿ ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಬಳ್ಳಾರಿ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮುಲು ಸೋದರಿ ಜೆ. ಶಾಂತ ಕೇವಲ ೨,೦೦೦ ಮತಗಳಿಂದ ಗೆದ್ದಿದ್ದರೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅನಿಲ್ ಲಾಡ್ ವಿರುದ್ಧ ಸ್ಪರ್ಧಿಸಿದ್ದ ಸೋಮಶೇಖರ ರೆಡ್ಡಿ ಕೇವಲ ೧,೧೦೦ ಮತದಿಂದ ಗೆದ್ದಿದ್ದರು. ಇದರರ್ಥ ಬಳ್ಳಾರಿ ಸಾರಸಾಗಟಾಗಿ ರೆಡ್ಡಿಗಳ ಪಾರುಪತ್ಯಕ್ಕೆ ಒಳಪಟ್ಟಿಲ್ಲ ಎಂಬುದೇ ಆಗಿದೆ.

ಆದರೆ ರಾಮುಲುರ ಗೆಲುವು ಇದನ್ನು ಸುಳ್ಳು ಎಂಬುದು ಸಾಬೀತು ಮಾಡಿಲ್ಲವೇ ಎಂದು ಭಾವಿಸಬಹುದು. ನಾಮಪತ್ರ ಸಲ್ಲಿಸಲು ಕೊನೆಯ ದಿನನದರೆಗೂ ಬಿಜೆಪಿ ರಾಮುಲುರನ್ನು ತಮ್ಮ ಪಕ್ಷದ ಅಭ್ಯರ್ಥಿ ಆಗುತ್ತಾರೆ ಎಂದೆ ಭಾವಿಸಿತ್ತು. ಕೊನೆಗೆ ‘ಹಕ್ಕಿ ಪಂಜರೊಳಿಲ್ಲ’ ಎಂದು ಅರಿವಾಗುತ್ತಲೆ ಗಾದಿಲಿಂಗಪ್ಪರನ್ನು ತಮ್ಮ ಅಭ್ಯರ್ಥಿಯನ್ನಾಗಿಸುವ ಶಾಸ್ತ್ರ ಮಾಡಿತ್ತು. ಅದು ಅಲ್ಲದೆ ಚುನಾವಣಾ ಆಯೋಗ ಕೂಡ ತೆರವಾದ ಸ್ಥಾನಕ್ಕೆ ಬಹಳ ಬೇಗನೆ ಚುನಾವಣೆಯನ್ನು ಘೋಷಿಸಿತ್ತು. ಅದ್ದರಿಂದ ಬಿಜೆಪಿಗೆ ಚುನಾವಣೆಗೆ ಸಿದ್ಧವಾಗಲು ಸಮಯವೇ ಇರಲಿಲ್ಲ. ಇದರ ಜೊತೆಗೆ ರಾಮುಲು ತಮ್ಮ ಸ್ವಾಭಿಮಾನ ಎಂಬ ಭಾವನಾತ್ಮಕ ವಿಷಯವನ್ನು ಮುಂದೊಡ್ಡಿದ್ದರು. ಭಾರತೀಯ ಮತದಾರರು ಭಾವನಾತ್ಮಕವಾಗಿ ಭಾರಿ ಉದಾರಿಗಳು ಎಂದು ಆಗಾಗ ಸಾಬೀತಾಗುತ್ತಲೇ ಇದೆ. ರಾಜೀವ್ ಗಾಂಧಿಯವರ ಹತ್ಯೆ ಕಾಂಗ್ರೆಸ್‌ಗೆ ೧೯೯೧ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ತಂದುಕೊಟ್ಟರೆ, ಆಯೋಧ್ಯೆ ವಿವಾದ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿತ್ತು. ಇಷ್ಟೆ ಏಕೆ ನಮ್ಮ ರಾಜ್ಯದಲ್ಲಿ ೨೦೦೮ರಲ್ಲಿ ಬಿಜೆಪಿ ಗದ್ದುಗೆ ಏರಲು ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿದ್ದ ಅಂಶವೆ ಪ್ರಮುಖ ಕಾರಣವಾಗಿತ್ತು. ಇಂತಹ ಭಾವನಾತ್ಮಕ ಅಲೆಯ ಮೇಲೆ ತೇಲಿದ ರಾಮುಲು ವಿಜಯದ ದಡ ಸೇರಿದ್ದಾರೆ. ಆದರೆ ಈ ಭಾವನಾತ್ಮಕ ಅಂಶ ಎಲ್ಲಿವರೆಗೆ ಇರಬಹುದು ಅನ್ನುವುದೇ ಈಗಿರುವ ಪ್ರಶ್ನೆ. ನಮ್ಮ ದೇಶದಲ್ಲಿ ಯಾವುದೇ ಒಂದು ಭಾವನಾತ್ಮಕ ಸಂಗತಿ ಒಂದು ಚುನಾವಣೆಗಿಂತ ಹೆಚ್ಚು ಸಲ ಕೆಲಸ ಮಾಡಿದ್ದು ಬಹು ಅಪರೂಪ. ಚಂಪಾರ ಮಾತುಗಳಲ್ಲಿ ಇದನ್ನು ಹೇಳುವುದಾದರೆ, “ರಾಮುಲು ಅವರು ತಮ್ಮ ವೈಯಕ್ತಿಕ ಸ್ವಾಭಿಮಾನದ ಜೊತೆಗೆ ಕರ್ನಾಟಕದ ಸ್ವಾಭಿಮಾನವನ್ನು ತಮ್ಮ ಆದ್ಯ ವಿಷಯವಾಗಿಸಿಕೊಳ್ಳಬೇಕು”.

ಈಗ ರಾಮುಲುರ ಗೆಲುವು ರಾಜ್ಯದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷದ ಬಗೆಗೆನ ಚರ್ಚೆಯನ್ನು ಮುನ್ನೆಲೆಗೆ ತಂದಿರುವುದು ಸುಳ್ಳಲ್ಲ. “ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಬೇಕು. ಅವುಗಳಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂಬುದನ್ನು ತಡವಾಗಿಯಾದರೂ ರಾಜ್ಯದ ಜನತೆ ತಿಳಿದುಕೊಳ್ಳುತ್ತಿದ್ದಾರೆ. ಕಾರಣ ಏನೇ ಆಗಿದ್ದರೂ ಕೂಡ ರಾಷ್ಟ್ರೀಯ ಪಕ್ಷಗಳು ಮಣ್ಣು ಮುಕ್ಕಿರುವುದು ನನಗೆ ಖುಷಿ ಕೊಟ್ಟಿದೆ” ಎಂಬ ಚಂಪಾರ ಅಭಿಪ್ರಾಯ ಮತ್ತು “ರಾಮುಲು ಗೆಲುವಿನಿಂದ ರಾಜ್ಯ ರಾಜಕೀಯದ ಚಿತ್ರಣ ಬದಲಾಗುವುದು ಖಂಡಿತ. ಅವರು ತಮ್ಮ ಜಿಲ್ಲೆಯ ಜೊತೆಗೆ ಬೇರೆ ಕಡೆಗೂ ತಮ್ಮ ವರ್ಚಸ್ಸನ್ನು ಬೀರುತ್ತಾರೆ. ಅವರಿಗೆ ಜನರನ್ನು ಸೆಳೆಯುವ ಸಾಮರ್ಥ್ಯವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನ ಅಧ್ಯಕ್ಷ ಕುಮಾರಸ್ವಾಮಿ ಮತ್ತು ರಾಮುಲುರ ನಡೆಗಳು ರಾಜ್ಯ ರಾಜಕೀಯವ ಭವಿಷ್ಯವನ್ನು ಬರೆಯಲಿದೆ” ಎನ್ನುವ ಮದನ್ ಮೋಹನ್‌ರ ಅನಿಸಿಕೆ ಈ ನಡೆಯನ್ನೆ ಪ್ರತಿಫಲಿಸುತ್ತದೆ. 

ಆದರೆ ರಾಮುಲುರ ಮುಂದಿನ ನಡೆ, ಗಾಲಿ ಜನಾರ್ದನ ರೆಡ್ಡಿಯ ಬಿಡುಗಡೆ ಮತ್ತು ಈಗ ತಟಸ್ಥರಾಗಿ ಉಳಿದಿರುವ ಕರುಣಾಕರ ರೆಡ್ಡಿಯವರ ಮೌನ ಜೊತೆಗೆ ಯಡಿಯೂರಪ್ಪ ಉರುಳಿಸಲಿರುವ ದಾಳಗಳು ಮುಂದಿನ ರಾಜಕೀಯದಾಟದ ನಿಯಮಗಳನ್ನು ರೂಪಿಸುವುದು ನಿಶ್ವಿತ.

ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಇಂದಿರಾ ಗಾಂಧಿಯ ಬಗ್ಗೆ “ಜನಪ್ರಿಯತೆಯಿಂದಾಗಿ ಅಧಿಕಾರಕ್ಕೇರಿದ ನಾಯಕನೊಬ್ಬ ರಾಜಕೀಯವಾಗಿ ಸ್ವಪ್ರಶಂಸಕನಾದಾಗ ಪ್ರಜಾಪ್ರಭುತ್ವದ ವಿರುದ್ಧ ದುರಂತ ಮೇಲುಗೈ ಸಾಧಿಸುತ್ತದೆ” ಎಂಬ ಮಾತನ್ನು ಹೇಳಿದ್ದರು. ಆ ಮಾತು ರಾಜ್ಯದಲ್ಲಿ ನಾನಾ ಕಾರಣಗಳಿಂದ ಮತ್ತು ವಿವಿಧ ವ್ಯಕ್ತಿಗಳಿಂದಾಗಿ ಮತ್ತೆ ಮತ್ತೆ ರುಜುವಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ.

Monday, November 28, 2011

ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯವಾಗಿ ವಿಶೇಷ ಆದ್ಯತೆಯಿದೆ. ಆ ರಾಜ್ಯಗಳಲ್ಲಿನ ರಾಜಕೀಯ ಸಂರಚನೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಸಂಚಲನ ಸೃಷ್ಟಿಸುವ ಆವುಗಳ ಸಾಮರ್ಥ್ಯದಿಂದಾಗಿಯೇ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಏನನ್ನೂ ಬೇಕಾದರೂ ನಾವು ಕಿತ್ತುಕೊಳ್ಳುತ್ತೇವೆ ಎಂಬ ದಾರ್ಷ್ಟ್ಯ ಅನಾಮತ್ತಾಗಿಯೇ ಸಿಕ್ಕಿದೆ. ಹಾಗೆಯೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳು ಕೂಡ ತಮ್ಮ ’ಗೌರವ’ ಮೂರಾಬಟ್ಟೆಯಾದರೂ ಪರವಾಗಿಲ್ಲ ಆ ರಾಜ್ಯಗಳ ತಂಟೆಗೆ ಮಾತ್ರ ಹೋಗದೆ ಅಲ್ಲಿನ ನಾಯಕರನ್ನು ಓಲೈಸಿಕೊಂಡೇ ರಾಜಕಾರಣ ಮಾಡುತ್ತವೆ.

ಇದಕ್ಕೆಲ್ಲ ಕಾರಣವೇನು? ಕರ್ನಾಟಕದಲ್ಲಿರದ್ದು ಆ ರಾಜ್ಯಗಳಲ್ಲಿ ಏನಿದೆ? ನಮ್ಮ ರಾಜ್ಯದೊಳಗೆ ಘರ್ಜಿಸುವ ಸಿಂಹಗಳಿಗೆ ರಾಜ್ಯದ ಗಡಿ ದಾಟಿದೊಡನೆ ಕವಡೆ ಕಿಮ್ಮತ್ತು ಸಿಗದಿರಲು ಕಾರಣವೇನು? ದೆಹಲಿಯಲ್ಲಿ ರಾಜ್ಯದ ನೋವಿಗೆ ದನಿ ಸಿಗುತ್ತಿಲ್ಲವೇಕೆ ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅವಿರತವಾಗಿ ಅನ್ಯಾಯ ಏಕೆ ಆಗುತ್ತಿದೆ? ಇದಕ್ಕಿರುವ ಏಕೈಕ ಉತ್ತರ ನಮ್ಮಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಇಲ್ಲದಿರುವುದು.

ತನ್ನ ರಾಜ್ಯದ ಹಿತ ಕಾಯುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆ ತಮಿಳುನಾಡಿಗೆ ಸುಮ್ಮ ಸುಮ್ಮನೆ ಸಿಕ್ಕಿಲ್ಲ. ಅಲ್ಲಿನ ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಎದುರು ಹಾಕಿಕೊಳ್ಳುವ ಧೈರ್ಯ ರಾಷ್ಟ್ರೀಯ ಪಕ್ಷಗಳಿಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹುಟ್ಟಿಕೊಂಡದ್ದು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಉಳಿಸುವುದಕ್ಕಾಗಿನ ಹೋರಾಟ ಮತ್ತು ಲಾಬಿ ರಾಜಕಾರಣ ಹುಟ್ಟಿಕೊಂಡದ್ದೆ ತಮಿಳುನಾಡಿನಿಂದ.

ದೇಶದಲ್ಲಿ ಪ್ರಥಮ ಮಹಾಚುನಾವಣೆ (೧೯೫೨) ನಡೆದಾಗ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ೩೫ ಸ್ಥಾನಗಳಿಸಿದ್ದವು. ೭ ಸ್ಥಾನ ಗೆದ್ದ ಪಿಡಿಎಫ್ ಅತ್ಯಂತ ಬಲಿಷ್ಠ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ ೧೯೬೭ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಡಿಎಂಕೆ ೨೫ ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು! ಅನಂತರ ಡಿಎಂಕೆ ವಿಭಜನೆಗೊಂಡು ಎಮ್.ಜಿ. ರಾಮಚಂದ್ರನ್ ನೇತೃತ್ವದಲ್ಲಿ ಎಐಎಡಿಎಂಕೆ ಉದಿಸಿತು. ಅದು  ೧೯೭೭ರಲ್ಲಿ ತಾನೆದುರಿಸಿದ ಮೊದಲ ಚುನಾವಣೆಯಲ್ಲೇ ೧೯ ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಬಳಿಕ ತಮಿಳುನಾಡು ಈ ಎರಡು ರಾಜಕೀಯ ಪಕ್ಷಗಳ ಒಡ್ಡೋಲಗವಾಗಿ ಬಿಟ್ಟಿದೆ. ಈ ಪಕ್ಷಗಳ ಪಾಲಿಗೆ ಸೋಕಾಲ್ಡ್ ರಾಷ್ಟ್ರೀಯ ಪಕ್ಷಗಳು ತಮ್ಮ ಅಸ್ಥಾನ ಕವಿಗಳಿದ್ದಂತೆ!

ಇತ್ತ ಆಂಧ್ರಪ್ರದೇಶದಲ್ಲಿಯೂ ಪರಿಸ್ಥಿತಿ ಭಿನ್ನವಾಗೇನಿಲ್ಲ. ಆದರೆ ಅಲ್ಲಿ ಪ್ರಾದೇಶಿಕ ಪಕ್ಷದ ಹವೆ ಜೋರಾಗಿ ಬೀಸಿದ್ದು ಮಾತ್ರ ೧೯೮೪ರಲ್ಲಿ. ಅಲ್ಲಿ ಎನ್.ಟಿ. ರಾಮರಾವ್‌ರ ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಲೋಕಸಭೆಯಲ್ಲಿ ೩೦ ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು. ಆನಂತರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಅದು ಕೇಂದ್ರ ರಾಜಕೀಯ ಸಮೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಚುನಾವಣೆಯಲ್ಲಿ ಮಾತ್ರ ಅದು ಒಂದಷ್ಟು ಬಸವಳಿದಿರುವಂತೆ ಕಂಡಿದೆ. ಆದರೆ ಆಂಧ್ರದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆ ಇಟ್ಟಿರುವ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಕೇಂದ್ರ ಸರ್ಕಾರದ ಬೆವರಿಳಿಸುತ್ತಿದೆ. ಇತ್ತ ಕಾಂಗ್ರೆಸ್‌ನಿಂದ ಬಂಡೆದ್ದ ಜಗಮೋಹನ್ ರೆಡ್ಡಿ ವೈಎಸ್‌ಅರ್ ಕಾಂಗ್ರೆಸ್ ಸ್ಥಾಪಿಸಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಅಲ್ಲಿನ ಕಾಂಗ್ರೆಸ್‌ಗೆ ಮುಳುಗು ನೀರು ಆಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಜಗನ್ ಜೊತೆ ಗುರುತಿಸಿಕೊಂಡಿದ್ದ ಅನೇಕ ಶಾಸಕರು ಮರಳಿ ಮಾತೃ ಪಕ್ಷದತ್ತ ಮುಖ ಮಾಡಿರುವುದು ಪಕ್ಷದ ಬೆಳವಣಿಗೆಗೆ ಬಿದ್ದ ಹೊಡೆತ ಎಂದೇ ಪರಿಗಣಿಸಬಹುದು. ಆದೇನೆ ಇದ್ದರೂ ಅಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ರಾಷ್ಟ್ರೀಯ ಪಕ್ಷಗಳಿಗೆ ಹೊಡೆತ ನೀಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ. 

ಇತ್ತ ಮಹಾರಾಷ್ಟ್ರದ ಹಿತ ಕಾಯಲು ಶಿವಸೇನೆ ಮತ್ತು ರಾಷ್ಟೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇವೆ. ಶಿವಸೇನೆ ೧೯೯೦ರ ಬಳಿಕ ಬಲಿಷ್ಠವಾಗಿ ರೂಪುಗೊಂಡರೆ,  ಆ ದಶಕದ ಕೊನೆಗೆ ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯ ಜನ್ಮತಳೆಯಿತು. ಆದರೆ ಎನ್‌ಸಿಪಿ ಮೂಲತಃ ರಾಷ್ಟ್ರೀಯ ಆಶಯಗಳನ್ನು ಇಟ್ಟುಕೊಂಡು ಹುಟ್ಟಿದ್ದ ಪಕ್ಷ. ಕಾಂಗ್ರೆಸ್‌ನ ಅಧ್ಯಕ್ಷಗಿರಿಯನ್ನು ವಿದೇಶಿ ಮೂಲದ ಸೋನಿಯಾ ಗಾಂಧಿಯವರಿಗೆ ನೀಡುವುದನ್ನು ಖಂಡಾತುಂಡವಾಗಿ ವಿರೋಧಿಸಿ ಶರದ್ ಪವಾರ್, ಪಿ.ಎ. ಸಂಗ್ಮಾ ಮತ್ತು ತಾರೀಖ್ ಅನ್ಚರ್ ೧೯೯೯ರ ಜೂನ್‌ನಲ್ಲಿ ಎನ್‌ಸಿಪಿಯನ್ನು ಸ್ಥಾಪಿಸಿದ್ದರು. ಅದು ದೇಶದ ಬೇರೆ ಭಾಗಗಳಲ್ಲಿ ನೆಲೆ ಕಾಣಲು ವಿಫಲವಾದರೂ ಮಹಾರಾಷ್ಟ್ರದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಇತ್ತ ಯುಪಿಎ ಸರ್ಕಾರದಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯಲ್ಲಿರುವಾಗ ಅದರ ಬಗ್ಗೆ ಚರ್ಚಿಸಲು ಸಂಪುಟ ಕಾರ್ಯದರ್ಶಿಗಳು ಕರ್ನಾಟಕ ಮತ್ತು ಮಹರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆಯುವಂತೆ ಎನ್‌ಸಿಪಿ ನೋಡಿಕೊಂಡದ್ದನ್ನು ನಾವು ಯಾವ ಕಾರಣಕ್ಕೂ ಮರೆಯವ ಹಾಗಿಲ್ಲ. ಇದು ಶಿವಸೇನೆಯಷ್ಟು ಉಗ್ರವಾಗಿ ಮರಾಠಿ ಮಾನೂಸ್‌ನ್ನು ಪ್ರತಿಪಾದಿಸದಿದ್ದರೂ ತನ್ನ ನೆಲ ಜಲದ ಪ್ರಶ್ನೆ ಬಂದಾಗ ಲಾಬಿ ಮಾಡಲು ಹಿಂಜರಿದಿಲ್ಲ. ಇತ್ತ ಶಿವಸೇನೆ ಬಿಜೆಪಿಯ ಹೆಗಲಿಗೆ ಕೈ ಹಾಕಿದೆ. ಅದ್ದರಿಂದ ಮಹಾರಾಷ್ಟ್ರದ ಹಿತಕ್ಕೆ ಯಾವ ಪಕ್ಷ ಅಧಿಕಾರಕ್ಕೇರಿದರೂ ಯಾವುದೇ ಧಕ್ಕೆಯಿಲ್ಲ.

ನಮ್ಮ ನೆರೆಯ ರಾಜ್ಯಗಳನ್ನು ಹೊರತಾಗಿ ನೋಡಿದರೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಬಿಹಾರದಲ್ಲಿ ಜನತಾದಳ (ಸಂಯುಕ್ತ), ರಾಷ್ಟ್ರೀಯ ಜನತಾದಳ, ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ, ಒರಿಸ್ಸಾದಲ್ಲಿ ಬಿಜು ಜನತಾದಳ, ಅಸ್ಸಾಂನಲ್ಲಿ ಅಸೋಮ್ ಗಣ ಪರಿಷತ್, ಪಂಜಾಬ್‌ನಲ್ಲಿ ಅಕಾಲಿ ದಳ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮುಂತಾದ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಕಲ್ಯಾಣಕ್ಕಾಗಿ ಎಷ್ಟು ದುಡಿಯುತ್ತಿವೆ ಎಂಬ ಪ್ರಶ್ನೆಗಳ ನಡುವೆಯೂ ರಾಜ್ಯದ ಹಿತ ಕಾಯುವುದಕ್ಕಾಗಿ ಕೇಂದ್ರ ಸರ್ಕಾರದ ನಡುವೆ ಗುದ್ದಾಟ ನಡೆಸುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಒಪ್ಪಬೇಕಾಗುತ್ತದೆ.

ಬಹುಶಃ ೧೯೭೫ವರೆಗೆ, ಅಂದರೆ ಕಾಂಗ್ರೆಸ್ ಪಕ್ಷದ ಏಕಮೇವಾದಿಪತ್ಯ ಆಡಳಿತ ದೇಶದಲ್ಲಿ ಇರುವ ತನಕ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಮಾನ್ಯತೆ ಇರಲಿಲ್ಲ (೧೯೬೯ರಲ್ಲಿ ಇಂದಿರಾ ಗಾಂಧಿ ದೇಶದ ಮೊತ್ತಮೊದಲ ಅಲ್ಪ ಬೆಂಬಲದ ಸರ್ಕಾರ ರಚಿಸಿದ್ದಾಗ ಸಿಪಿಐ ಅದನ್ನು ಬೆಂಬಲಿಸಿತ್ತು). ಆದರೆ ೧೯೭೭ರಲ್ಲಿ ೨೯೨ ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೇರಿದ ಜನತಾ ಪಕ್ಷಕ್ಕೆ ಅವಶ್ಯಕತೆ ಇಲ್ಲದಿದ್ದರೂ ಡಿಎಮ್‌ಕೆ ಮತ್ತು ಅಕಾಲಿ ದಳ ಬೆಂಬಲ ನೀಡಿದ್ದವು. ಆಗ ಎಲ್ಲ ಪ್ರಾದೇಶಿಕ ಪಕ್ಷಗಳು ಪಡೆದ ಮತವನ್ನು ಲೆಕ್ಕ ಹಾಕಿದರೆ ಅದು ಚಲಾವಣೆಯಾದ ಮತದ ಶೇ. ೫ ರಿಂದ ಶೇ. ೧೦ ರಷ್ಟು ಮತವಾಗುತ್ತಿತ್ತು ಅಷ್ಟೆ. ಬಳಿಕ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಸರ್ಕಾರಗಳ ಶಖೆ ಪ್ರಾರಂಭವಾಯಿತು. ಆದರೆ ೧೯೮೯ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಲೇ ಪ್ರಾದೇಶಿಕ ಪಕ್ಷಗಳ ಕಾರುಬಾರಿಗೆ ದೆಹಲಿಯ ಸಂಸತ್ ಭವನ ಆಡುಂಬೊಲವಾಗುವುದು ಅಧಿಕೃತವಾಯಿತು!  ಜೊತೆಗೆ ಬಲಿಷ್ಠ ಪ್ರಾದೇಶಿಕ ಪಕ್ಷಗಳು ಆಡಿದ್ದೆ ಆಟ ಎಂಬ ಪರಿಸ್ಥಿತಿ ಉದ್ಭವಿಸಿತು ಆದು ಈಗಲೂ ಮುಂದುವರಿದೆ ಕೂಡ. ಆದರೆ ಹೇಳಿಕೊಳ್ಳಲು ತನ್ನದೆನ್ನುವ ಒಂದೇ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಹೊಂದಿರದ, ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನೆ ಹೆಚ್ಚಾಗಿ ಬೆಂಬಲಿಸುತ್ತಿರುವ ಕರ್ನಾಟಕ ಮಾತ್ರ ಈ ರಾಜಕೀಯದಾಟದಲ್ಲಿ ಬರಿ ಮೂಕಪ್ರೇಕ್ಷಕ ಮಾತ್ರವಲ್ಲ ಬಲಿಪಶು ಕೂಡ.

ಕರ್ನಾಟಕದಲ್ಲಿ ಪ್ರಾದೇಶಿಕತೆಯ ಬಗೆಗಿನ ಅರಿವು, ಅದನ್ನು ಉಳಿಸಿಕೊಳ್ಳುವುದಕ್ಕಾಗಿನ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ಸ್ವಾತಂತ್ರ್ಯಪೂರ್ವದ ಇತಿಹಾಸವೇ ಇದೆ. ಅಲೂರು ವೆಂಕಟರಾವ್‌ರ ಮುಂದಾಳತ್ವದಲ್ಲಿ ನಡೆದ ಕರ್ನಾಟಕ ಏಕೀಕರಣ ಚಳವಳಿ ಇಂತಹದ್ದೆ ಒಂದು ಹೋರಾಟವಾಗಿತ್ತು.

ನಾಗ್ಪುರದಲ್ಲಿ ೧೯೨೦ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು (ಕೆಪಿಸಿಸಿ) ಸ್ಥಾಪಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಪ್ಪಿತ್ತು. ಹಾಗೆಯೇ ಸ್ಥಾಪನೆ ಕೂಡ ಮಾಡಿತ್ತು. ಗುಡ್ಲಪ್ಪ ಹಳ್ಳಿಕೇರಿಯವರ ಪ್ರಯತ್ನದ ಫಲವಾಗಿ ನೆಹರು ಸಮಿತಿಯೂ ೧೯೨೮ರಲ್ಲಿ ಕನ್ನಡ ಮಾತನಾಡುವ ಎಲ್ಲರನ್ನು ಒಂದೇ ಪ್ರಾಂತ್ಯದ ಸೂರಿನಡಿಗೆ ತರುವ ಶಿಫಾರಸ್ಸು ಕೂಡ ಮಾಡಿತ್ತು. ಆದರೆ ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕುತ್ತಲೆ ಏಕೀಕರಣ ಚಳವಳಿಯ ಕಾಲೆಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈ ಹಾಕಿತ್ತು. ಆಗ ಕನ್ನಡಿಗರು ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿ, ಕೊಡಗು, ಮೈಸೂರು ಮತ್ತು ಹೈದರಾಬಾದ್‌ಗಳ ಮಧ್ಯೆ ಹರಿದು ಹಂಚಿ ಹೋಗಿದ್ದರು. ೧೯೪೮ರಲ್ಲಿ ರಚನೆಯಾದ ಧರ್ ಸಮಿತಿ ರಾಜ್ಯಗಳ ಪುನರ್ರಚನೆಯನ್ನು ವಿರೋಧಿಸಿತ್ತು. ನಂತರ ಸರ್ಕಾರ ಜೆವಿಪಿ (ಜವಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ಸಮಿತಿಯನ್ನು ರಚಿಸಿತು. ಸಮಿತಿ ಆಂಧ್ರಪ್ರದೇಶವನ್ನು ರಚಿಸಲು ಮಾತ್ರ ತನ್ನ ಒಲವನ್ನು ವ್ಯಕ್ತಪಡಿಸಿತು.
ಇದನ್ನು ತನಗೆ ಬಗೆದ ದ್ರೋಹ ಎಂದೆ ಭಾವಿಸಿದ ಏಕೀಕರಣ ಚಳವಳಿಗಾರರು ೧೯೫೧ರ ಚುನಾವಣೆಯಲ್ಲಿ ಸ್ಪರ್ಧಿಸಲು ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷವನ್ನು ನಮ್ಮ ರಾಜ್ಯದ ಮೊದಲ ಪ್ರಾದೇಶಿಕ ಪಕ್ಷ ಎಂದು ಕರೆಯಬಹುದು. ಈ ಪಕ್ಷವನ್ನು ಕೆಂಗಲ್ ಹನುಮಂತರಾಯ ಎಸ್.ನಿಜಲಿಂಗಪ್ಪ, ಮುಂತಾದವರು ಬೆಂಬಲಿಸಿದ್ದರು! ಕನ್ನಡಿಗರ ಒತ್ತಾಯಕ್ಕೆ ಮಣಿದ ಆಗಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಫಜಲ್ ಅಲಿ ಸಮಿತಿ ರಚಿಸಿದರು. ಈ ಸಮಿತಿ ಕಾಸರಗೋಡನ್ನು ಹೊರತುಪಡಿಸಿ ಕರ್ನಾಟಕದ ಏಕೀಕರಣಕ್ಕೆ ಒಪ್ಪಿಕೊಂಡಿತ್ತು. ಅಂದರೆ ಸ್ವಾತಂತ್ರ್ಯೋತ್ತದ ಮೊದಲ ವರ್ಷಗಳಲ್ಲಿಯೇ ಕನ್ನಡಿಗರು ತಮ್ಮದೇ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿ ಕೇಂದ್ರವ ಬಲಿಷ್ಠ ನಾಯಕತ್ವಕ್ಕೆ ಸಡ್ಡು ಹೊಡೆದು ತಮ್ಮ ಗುರಿ ಸಾಧಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಆದರೆ ಆ ಬಳಿಕ?

ಎಸ್ ನಿಜಲಿಂಗಪ್ಪ (ಎಸ್‌ಎನ್) ಅವರನ್ನು ಅಧುನಿಕ ಕರ್ನಾಟಕದ ನಿರ್ಮಾತೃ ಎಂದೆ ಕರೆಯಲಾಗುತ್ತದೆ. ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ (೧೯೬೯) ನೀಲಂ ಸಂಜೀವ ರೆಡ್ಡಿಯವರನ್ನು ರಾಷ್ಟ್ರಪತಿಯನ್ನಾಗಿಸಬೇಕೆಂಬ ಅವರ ಆಸೆಗೆ ಇಂದಿರಾಗಾಂಧಿ ಅಡ್ಡಿಯಾದರು. ಅದೇ ಕಾಂಗ್ರೆಸ್‌ನ ವಿಭಜನೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ ನಿಜಲಿಂಗಪ್ಪ, ಕಾಮರಾಜ್, ಎಸ್.ಕೆ. ಪಾಟೀಲ್, ರಾಮಕೃಷ್ಣ ಹೆಗಡೆ ಮುಂತಾದವರು ಕಾಂಗ್ರೆಸ್ (ಒ) ಸ್ಥಾಪಿಸಿದರು. ಈ ಪಕ್ಷಕ್ಕೆ ರಾಷ್ಟೀಯ ಮಾನ್ಯತೆ ಮತ್ತು ಸ್ವರೂಪವಿದ್ದರೂ ಎಸ್.ಎನ್. ಮತ್ತು ರಾಮಕೃಷ್ಣ ಹೆಗಡೆಗೆ ಕರ್ನಾಟಕದ ಜೊತೆಗಿದ್ದ ನಂಟಿನಿಂದಾಗಿ ಈ ಪಕ್ಷ ರಾಜ್ಯದಲ್ಲಿ ಬಿರುಗಾಳಿ ಸೃಷ್ಟಿsಸಬಹುದು ಎಂದು ನಂಬಲಾಗಿತ್ತು ಆದರೆ ಆ ಬಿರುಗಾಳಿಯ ಭ್ರಮೆ ಬೋರಾಲಾಗಿ ಬಿದ್ದು ಹೋಯಿತು.
ಅನಂತರ ಹಿಂದುಳಿದ ವರ್ಗಗಳ ನಾಯಕರೆಂದೆ ಜನಪ್ರಿಯರಾಗಿದ್ದ ದೇವರಾಜ ಅರಸು ಇಂದಿರಾ ಗಾಂಧಿ ಜೊತೆ ಮುನಿಸಿಕೊಂಡು ೭೦ರ ದಶಕದ ಅಂತ್ಯಕ್ಕೆ ಅರಸು ಕಾಂಗ್ರೆಸ್ ಕಟ್ಟಿದರು. ಆದರೆ ಅ ಪಕ್ಷ ಕೂಡ ರಾಜ್ಯದ ಜನತೆಯ ಮನದರಸನಾಗದೆ ಹೋಯಿತು. ಅರಸು ತಮ್ಮ ‘ಕ್ರಾಂತಿರಂಗ’ವನ್ನು ಗಟ್ಟಿ ತಳಪಾಯದ ಮೇಲೆ ಕಟ್ಟುವ ಮುಂಚಿತವಾಗಿಯೇ ವಿಧಿವಶರಾದರು. ಈ ಬಗ್ಗೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾರ ಜೊತೆ ಮಾತನಾಡಿದಾಗ, "ಅರಸು ತಮ್ಮ ಕಾರ್ಯಕ್ರಮಗಳನ್ನು ಮೊದಲು ಇಂದಿರಾ ಗಾಂಧಿಯ ಕಾರ್ಯಕ್ರಮಗಳೆಂದೆ ಪ್ರಚಾರ ಮಾಡಿದ್ದರು. ಅದ್ದರಿಂದ ಜನರು ಕೂಡ ಅದನ್ನೆ ಸತ್ಯ ಎಂದು ನಂಬಿದ್ದರು. ಹಾಗೆ ಅವರು ಇನ್ನೂ ಕೆಲ ಸಮಯ ಬದುಕಿರಬೇಕಿತ್ತು. ಆಗ ನಾಡಿನ ಚಿತ್ರಣವೇ ಬದಲಾಗುತ್ತಿತ್ತು" ಎನ್ನುತ್ತಾರೆ. ಮುಂದಿನ ದಶಕ ಕರ್ನಾಟಕದಲ್ಲಿ ಅನೇಕ ರಾಜಕೀಯ ಸ್ಥಿತ್ಯಂತರಗಳೇ ನಡೆದವು. ಜನತಾ ಪಕ್ಷ, ಜನತಾದಳಗಳ ಕಾರುಬಾರು ರಾಜ್ಯದಲ್ಲಿ ಇತ್ತು. ಆದರೆ ಆ ಪಕ್ಷಗಳಿಗೆ ರಾಷ್ಟೀಯ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿತ್ತು.

೯೦ರ ದಶಕದಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಕೂಡ ಎರಡೆರಡು ಪಕ್ಷ ಕಟ್ಟಿದರೂ ತಮ್ಮ ಗುರಿ ತಲುಪಲು ಆಗಲಿಲ್ಲ. ಅವರು ೧೯೯೪ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ ಆ ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ೧೦ ಸ್ಥಾನಗಳನ್ನು ಗೆದ್ದರು. ಅದಕ್ಕಿಂತ ಹೆಚ್ಚಾಗಿ ಅನೇಕ ಕ್ಷೇತ್ರಗಳು ಕಾಂಗ್ರೆಸ್‌ನ ಕೈ ತಪ್ಪುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಅನಂತರ ಕರ್ನಾಟಕ ವಿಕಾಸ ಪಕ್ಷ ಕಟ್ಟಿದ್ದರು. ಆದರೆ ಅವರು ಆ ಮೂಲಕ ಗುಡ್ಡಕ್ಕೆ ಮಣ್ಣು ಹೊರುವ ಕೆಲಸಮಾಡಿದರು ಎಂದು ನಾವು ಹೇಳುವ ಹಾಗೆ ಇಲ್ಲ. ಏಕೆಂದರೆ ಅವರು ಆ ಪಕ್ಷ ಕಟ್ಟಿ ಅಲ್ಲೆ ಮರೆತು ಬಿಟ್ಟರು, ಇನ್ನು ಮಣ್ಣು ಹೊರುವ ಶ್ರಮವೆಲ್ಲಿ!

ಇನ್ನು ರಾಜ್ಯದ ಮೊದಲ ಕಾಂಗ್ರೆಸ್ಸೆತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಲಾಲು ಪ್ರಸಾದ್ ಯಾದವ್ ದೇವೇಗೌಡರ ಸಲಹೆಯ ಮೇರೆಗೆ ಜನತಾದಳದಿಂದ ಉಚ್ಛಾಟಿಸಿದ್ದರು. ಹೆಗಡೆ ’ಲೋಕಶಕ್ತಿ’ ಮತ್ತು ’ರಾಷ್ಟ್ರೀಯ ನವನಿರ್ಮಾಣ ವೇದಿಕೆ’ ಎಂಬ ರಾಜಕೀಯ ಸಂಘಟನೆ ಕಟ್ಟಿಕೊಂಡು ಅಧಿಕಾರದ ಪಡಸಾಲೆಗೆ ಏರುವ ಪ್ರಯತ್ನ ಮಾಡಿದರೂ ಒಂದು ಹೆಜ್ಜೆ ಇಡಲು ಅವರಿಂದ ಸಾಧ್ಯವಾಗಲಿಲ್ಲ. ಲೋಕಶಕ್ತಿ ಆ ಬಳಿಕ ಸಂಯುಕ್ತ ಜನತಾದಳದೊಂದಿಗೆ ವಿಲೀನವಾಯಿತು.

ಈಗ ನಮ್ಮ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜನತಾದಳ (ಎಸ್), ಜನತಾದಳ (ಯು), ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಸಿಪಿಐ, ಸಿಪಿಐ(ಎಂ) ಮುಂತಾದ ರಾಷ್ಟ್ರೀಯ ಪಕ್ಷಗಳಿವೆ. ಇವುಗಳಲ್ಲಿ ಮೊದಲ ಮೂರು ಪಕ್ಷಗಳನ್ನು ಬಿಟ್ಟರೆ ಉಳಿದ ಪಕ್ಷಗಳದ್ದು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಅನ್ನುವ ಪರಿಸ್ಥಿತಿ ಇದೆ.

ಜನತಾದಳ (ಎಸ್) ಮಾಜಿ ಪ್ರಧಾನಿ ದೇವೆಗೌಡರ ವಶದಲ್ಲಿದ್ದು ದೇಶದ ಬೇರೆಡೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಆದರೆ ನಮ್ಮ ರಾಜ್ಯದಲ್ಲಿ ಇದರ ಶಕ್ತಿ ಮತ್ತು ಯುಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಜನತಾದಳ(ಎಸ್) ನಮ್ಮ ಮಣ್ಣಿನ ಮಗನ ಪಕ್ಷವಾಗಿದ್ದರೂ ಕೂಡ ಅದು ಈ ಮಣ್ಣಿನ ಪಕ್ಷವಾಗಿ ಬೆಳೆದಿಲ್ಲ. ಈಗ ಅದು ಬೇರೆ ಎಲ್ಲೂ ತನಗೆ ನಾಯಕರು ಇಲ್ಲ, ನೆಲೆಯೂ ಇಲ್ಲ ಎಂದು ನಮ್ಮ ಈ ಫಲವತ್ತಾದ ನಾಡಿನಲ್ಲಿ ತೆನೆ ಹೊರುತ್ತಿದ್ದಾರೆಯೇ ಹೊರತು ಈ ನಾಡ ಪ್ರೇಮದಿಂದಲ್ಲ.  

ರೈತ ಸಂಘದ ನಂಜುಂಡಸ್ವಾಮಿಯವರ ಕನ್ನಡ ದೇಶ, ವಿಜಯ್ ಮಲ್ಯರ ಜನತಾ ಪಕ್ಷ, ವಾಟಾಳ್ ನಾಗರಾಜ್‌ರ ಕರ್ನಾಟಕ ವಾಟಳ್ ಪಕ, ವಿಜಯ್ ಸಂಕೇಶ್ವರರ ಕನ್ನಡ ನಾಡು ಪಕ್ಷ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿಯವರ ಪ್ರಗತಿರಂಗ, ದೇವನೂರು ಮಹಾದೇವರ ಸರ್ವೋದಯ ಕರ್ನಾಟಕ, ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್‌ರ ಸುವರ್ಣ ಕರ್ನಾಟಕ, ಹರಿ ಖೋಡೆಯವರ ಅರಸು ಸಂಯುಕ್ತ ಪಕ್ಷ - ಎಲ್ಲವು ಕರ್ನಾಟಕದ ರಾಜಕೀಯ ರಂಗದಲ್ಲಿ ಒಂದು ಪ್ರಯತ್ನವಾಗಿ ದಾಖಲಾಗಿದೆಯೇ ಹೊರತು ಒಂದು ಪರ್ಯಾಯ ಶಕ್ತಿಯಾಗಿ ಅಲ್ಲ.

ನಮ್ಮಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದವರಿಗೆ ತಾಳ್ಮೆ ಕಡಿಮೆ ಇತ್ತು. ಅವರೆಲ್ಲ ಒಂದೆ ಚುನಾವಣೆಯಲ್ಲಿ ಬಸವಳಿದು ಹೋಗಿದ್ದರು. ಬಹುತೇಕರು ತಮ್ಮ ಇಳಿವಯಸ್ಸಿನಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದರು. ಅದ್ದರಿಂದ ತಮ್ಮ ಪ್ರಯತ್ನವನ್ನು ಒಂದು ತಾರ್ಕಿಕ ಅಂತ್ಯ ತಲುಪಿಸಲು ಅವರ ವಯಸ್ಸು ಮತ್ತು ಆರೋಗ್ಯ ಜೊತೆ ನೀಡಲಿಲ್ಲ. ಕನ್ನಡದ ಜನಪ್ರಿಯ ನಟರಾದ ರಾಜ್‌ಕುಮಾರ್, ವಿಷ್ಣುವರ್ಧನ್ ಮುಂತಾದವರು ರಾಜಕೀಯ ಪ್ರವೇಶಿಸುವ ಅವಕಾಶವಿದ್ದರೂ ದೂರ ನಿಂತದ್ದು, ಹಾಗೇ ಅಂಬರೀಷ್‌ರಂತಹ ನಟರು ರಾಷ್ಟ್ರೀಯ ಪಕ್ಷವನ್ನೆ ನೆಚ್ಚಿಕೊಂಡದ್ದು ಕೂಡ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷವೊಂದು ಹುಟ್ಟದಂತೆ ತಡೆಯಿತು ಎಂದು ಊಹಿಸಬಹುದು.

ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ಮಾಜಿ ಮೀನುಗಾರಿಕ ಸಚಿವ ಜಯಪ್ರಕಾಶ್ ಹೆಗ್ಡೆ, "ಪ್ರಾದೇಶಿಕ ಪಕ್ಷ ಕಟ್ಟಲು ಉತ್ತಮ ನಾಯಕತ್ವ ಬೇಕು. ಅರಸುರಂತಹ ದೊಡ್ಡ ನಾಯಕರಿಗೂ ಪ್ರಾದೇಶಿಕ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಾಗಲಿಲ್ಲ. ಇದರ ಜೊತೆಗೆ ಹಣ ಬಲವು ಬೇಕಿದೆ. ಇಂದು ಹಣ ಇರುವವರಿದ್ದರೆ ಆದರೆ ಅವರಲ್ಲಿ ನಾಯಕತ್ವ ಗುಣವಿಲ್ಲ" ಎನ್ನುತ್ತಾರೆ.
ಪಿಜಿಆರ್ ಸಿಂಧ್ಯಾರ ಪ್ರಕಾರ, "ನಮ್ಮ ನಾಡಿಗೆ ಹೊಸ ಪ್ರಾದೇಶಿಕ ಪಕ್ಷದ ಅಗತ್ಯವಿಲ್ಲ, ಜೆಡಿಎಸ್ ಪ್ರಾದೇಶಿಕ ಪಕ್ಷದ ಕೆಲಸ ಮಾಡುತ್ತಿದೆ. ಇಂದು ಜಾತಿ ಅಧಾರದಲ್ಲಿ ಮತ ಧ್ರುವೀಕರಣವಾಗಿದೆ. ಉನ್ನತ ತತ್ವಗಳನ್ನು ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮತದಾರರು ಪ್ರಬುದ್ಧರಿದ್ದಾರೆ ಅವರು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದೆನ್ನುತ್ತಾರೆ.

ಇದೀಗ ಯಡಿಯೂರಪ್ಪ ಹಾಗೂ ಶ್ರೀರಾಮುಲು ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆಯಲ್ಲಿದ್ದಾರೆ ಅನ್ನುವ ಸುದ್ದಿ ಹುಟ್ಟಿಕೊಂಡಿದೆ. ಅದಕ್ಕೆ ಇಂಬು ನೀಡುವ ಅನೇಕ ಪ್ರಯತ್ನಗಳು ಕೂಡ ಸಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದು ಸುಲಭ, ಆದರೆ ಅದನ್ನು ಬೆಳೆಸಲು ಎಷ್ಟು ಕಷ್ಟವಿದೆ ಎಂಬುದಕ್ಕೆ ನಮ್ಮ ರಾಜ್ಯದಲ್ಲಿ ಚರಿತ್ರೆಯ ಪುಟಗಳಲ್ಲಿ ಹೇಳ ಹೆಸರಿಲ್ಲದೆ ಹೋಗಿರುವ ಅನೇಕ ಪ್ರಾದೇಶಿಕ ಪಕ್ಷಗಳ ಹೆಸರೇ ಸಾಕ್ಷಿ. ಈ ಇತಿಹಾಸವನ್ನು ಕಂಡೆ ಬೆಚ್ಚಿ ಬಿದ್ದ ಸಿದ್ಧರಾಮಯ್ಯ ತಮ್ಮ ಅಹಿಂದದ ಸಹವಾಸ ತೊರೆದು ಕಾಂಗ್ರೆಸ್‌ನ ಅಂಗಳಕ್ಕೆ ಬಂದಿದ್ದು.

ಯಡಿಯೂರಪ್ಪರಂತು ತಮ್ಮ ಜಾತಿ ಬಾಂಧವರನ್ನು ನೆಚ್ಚಿಕೊಂಡಿದ್ದಾರೆ. ಶ್ರೀರಾಮುಲುವಿಗೆ ಹೋಲಿಸಿದರೆ ಇವರಿಗೆ ಹೆಚ್ಚಿನ ಜನ ಮತ್ತು ಅನುಭವದ ಬೆಂಬಲವಿದೆ. ಆದರೆ ಇದೆಲ್ಲವು ಮತವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದು ಅಲ್ಲದೆ ಅವರ ಮೇಲೆ ಭ್ರಷ್ಟಾಚಾರದ ಅನೇಕ ಆರೋಪಗಳಿದ್ದು ಒಂದೆರಡು ಪ್ರಕರಣಗಳಲ್ಲಿ ಮಾತ್ರ ಅವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ. ಇನ್ನು ಅವರು ವಾಪಾಸು ಯಾವಾಗ ಜೈಲು ವಾಸ ಶುರು ಮಾಡಬೇಕಾಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಮಾಜಿ ಟೆಲಿಕಾಂ ಸಚಿವ ಸುಖರಾಂರವರಿಗೆ ೧೫ ವರ್ಷಗಳ ಬಳಿಕ ಶಿಕ್ಷೆಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಾದೇಶಿಕ ಪಕ್ಷಗಳು ವೈಯಕ್ತಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹುಟ್ಟಿಕೊಂಡವೇ ಹೊರತು ಕನ್ನಡ ನಾಡಿನ ಇಶ್ಯೂಗಳ ಆಧಾರದಲ್ಲಿ ಅಲ್ಲ. ಮೂಲ ಪಕ್ಷದಲ್ಲಾದ ಅವಮಾನ, ನಿರ್ಲಕ್ಷ್ಯ, ಸೂಕ್ತ ಸ್ಥಾನಮಾನ ನೀಡದಿರುವುದು ಅಥವಾ ಪಕ್ಷದಿಂದಲೇ ಉಚ್ಛಾಟನೆಗಳ ಕಾರಣಕ್ಕಾಗಿ ಬಹುತೇಕ ನಾಯಕರು ಹೊಸ ಪಕ್ಷ ಕಟ್ಟಿದ್ದು. ಅರಸು, ಹೆಗಡೆ, ಬಂಗಾರಪ್ಪ ಇವರೆಲ್ಲರ ವಿಷಯದಲ್ಲಿ ಇದು ನಿಜ. ಇದೀಗ ಯಡಿಯೂರಪ್ಪ ಮತ್ತು ಶ್ರೀರಾಮುಲುರ ವಿಷಯದಲ್ಲಿ ಕೂಡ ಅದೇ ರೀತಿ ಆಗಲಿದೆ. ಹೊದ ಪುಟ್ಟ, ಬಂದ ಪುಟ್ಟ ಪಕ್ಷಗಳ ಸಾಲಿಗೆ ಇವರೂ ಕೂಡ ತಮ್ಮ ಹೆಸರು ನೋಂದಾಯಿಸುತ್ತ್ತಾರಷ್ಟೆ.

Tuesday, November 22, 2011

"I have never lost faith in the power of journalism"

[IT IS AN EXCLUSIVE INTERVIEW WITH R. POORNIMA (ASSISTANT  EDITOR OF MAYURA MONTHLY MAGAZINE) FOR OUR SUPPLEMENT MEDIA WATCH]


 What inspired you to enter into the field of Journalism?

I never dreamt that I would become a journalist some day. I entered the field by chance. In 1973, I passed my master’s degree in Kannada Literature with First Rank and two Gold medals. And the decade of 1970- 1980 was filled with different democratic movements. There was that big JP movement against emergency. Its cascading effect shook the society. There were Bandaya (rebel) Literary movement, Samudaya People’s Theatre movement, Democratic Women’s movement, Farmers’ movement etc.in Karnataka. As a student and a young writer I identified with all of them. One day, I applied for a job in Prajavani and became a journalist. I found that working as a journalist would be an extension of my involvement in cultural, social and political movements.  I can not imagine journalism without social perspective and social responsibility.

What was the actual condition of women journalists when you entered the field? How was their representation compared to these days?
Kannada Journalism developed along National movement for Independence like in any other language. Women in Karnataka were attracted to Journalism since its beginning, as early as 1920. But 1950s and 1960s saw many women starting there own monthly and weekly magazines. It was more a passion than profession. But in 1970s few women entered weekly magazines published by big media houses.  But there were hardly any women working in newspaper offices. It was the conscious decision of K.N. Hari Kumar (editor of Deccan Herald and Prajavani at that time) which made history. The 1980s saw few women like us working in the newsroom as subeditors. We never begged for exemptions from late night duties and night shifts.

What were challenges you personally faced in the beginning of your carrier?
I entered Journalism with great enthusiasm. And there were no role models. We had to prove ‘double’ than the boys. The male dominated field was watching us, with a pinch of suspicion. But as a tough girl ‘shaped and seasoned’ by movements, I viewed all challenges as opportunities. ‘Prajavani’ had enlightened leadership and the company always stood for social justice in letter and spirit. Nobody dared to humiliate us. I personally did not face much discrimination. I did not wait for reporting beats or assignments to write; I created my own. I could write on more than ten subjects and my growth as a journalistic writer was cool. I firmly believed that if we work with dedication and conviction, recognition (inside and outside) would naturally follow. After all, all our work will be in ‘black and white’!

What are the challenges women journalists have to face today?

Today, women in media have lot of opportunities. The challenge before them is to recognize them. Those who do will get recognition. Another challenge to overcome, as well as fight is the ‘attitude’ problem. I feel that women should challenge discrimination at workplace through their good work.

Do you think that you have achieved what you had thought of at the beginning?
I have never lost faith in the power of  journalism. But I have miles to go before I sleep!

Could you tell us some of your most interesting and passionate work in your career?

To name a few, my writing on the problems of rural areas, female foeticide, health care, HIV, communalism.

How you define the present journalism with a comparison the journalism of yours initial days?
Passion and Fashion- today there is remixing. And there is addition of Corruption.

Does patriarchy get manifested in the field of journalism, may be in terms of discriminations in salary, promotion, assignments etc? If yes, how to tackle it?
Discrimination if any depends on the policy of the media house. The best way to tackle that is through excellence.

Do you think that the explosion of visual media is threatening to the growth of print media?
The explosion of visual media has forced the print media to set its priorities right. In Asia, the growth is not very much affected. The real challenge before print media is to groom its future generations of readers. Today’s children should be today’s readers- for a safe tomorrow!

How do you see the future of print media in the face of growing internet and visual media?
Newspapers will not die; they live long- on the net. We should see that the internet, the new technology, every new gadget will serve the print media. Only difference is the printing will be on LCD screen. But still, at least in Asia, there is no good morning without a newspaper.

What do you think of editorial sanctity in the backdrop of increasing reports of paid news, trade interests, castism, favoritism, corruption in the media?
Paid news, trade interests, casteism, favoritism and corruption are rapidly increasing types of cancers affecting the media. They are both institutional and individual.  Excepting in a very few media houses, the editorial sanctity is in ICU. Media is demanding and getting its ‘scoop’ in the loot. This is really a heart-breaking news.

Women are projected as either sex objects or a tool to sell the products and services of corporate firms, particularly through advertisements? How do you see the trend?
This is not a new trend. Advertisements always reflected the society. Now the curve is more visible and downwards.

How you state your dream journalism?
Dream Journalism! -  By fair people, for the welfare of the people.

Yours tips to budding journalists?

Be on the information highway, to be on the right path.

Brief  Note about Dr. R. Poornima

Dr. R. Poornima has over three decades of experience in Kannada Journalism (18 years in Prajavani, 11 years in Udayavani and now again with Prajavani). She is a well-known Development Journalist and also writes on Culture (Literature, Music, Cinema and Arts). She has worked in daily newspaper, weekly and monthly magazines and all sections of the news room. She is the first woman in Kannada Journalism to get an opportunity to work as Bureau Chief (Mangalore Bureau of Prajavani) and Editor of a daily newspaper (Udayavani Bangalore Edition). She is recognized as a trend setter in many ways. She has earned more than a dozen awards for excellence in media.

Wednesday, November 16, 2011

ರೇಷ್ಮೆ ರೈತರಿಗೆ ನೋವಿನ ಕುಲುಮೆ

ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಗೂಡುಗಳ ಬೆಲೆ ತೀವೃವಾಗಿ ಕುಸಿತವಾದುದನ್ನು ಕಂಡು ರೊಚ್ಚಿಗೆದ್ದು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ಸುಮಾರು ೬ ಗಂಟೆಗಳ ಕಾಲ ಬಂದ್ ಮಾಡಿರುವುದು ಅಚ್ಚರಿಯ ಸಂಗತಿಯೂ ಅಲ್ಲ, ಇದು ನೊಂದ ರೈತರ ತಕ್ಷಣದ ಪ್ರತಿಕ್ರಿಯೆಯಂತೂ ಖಂಡಿತವಾಗಿಯೂ ಅಲ್ಲ. ಕಳೆದ ಫೆಬ್ರುವರಿಯಿಂದ ಸತತವಾಗಿ ತಾವು ಬೆಳೆದ ರೇಷ್ಮೆಯ ಬೆಲೆ ಪಾತಾಳಮುಖಿಯಾಗಿ ಸಾಗುತ್ತಿರುವುದನ್ನು ಹತಾಶರಾಗಿ ನೋಡುತ್ತಿದ್ದ, ಈ ಬೆಲೆ ಕುಸಿತವನ್ನು ಇನ್ನು ಸಹಿಸಿಕೊಳ್ಳಲಾಗದ ಹಂತಕ್ಕೆ ಬಂದ ರೈತರು ತಮ್ಮ ಆಕ್ರೋಶವನ್ನು ರಸ್ತೆ ತಡೆ ಮಾಡುವ ಮೂಲಕ ವ್ಯಕ್ತಪಡಿಸಿದ್ದರು.

ಈ ರೇಷ್ಮೆ ಬೆಲೆ ಕುಸಿತ ಈಗಾಗಲೇ ಎರಡು ಜೀವಗಳನ್ನು (ಸ್ವಾಮಿಗೌಡ ಮತ್ತು ಆತನ ಪತ್ನಿ ವಸಂತ) ಬಲಿ ತೆಗೆದುಕೊಂಡಿದೆ. ೨೦೦೯ರ ಏಪ್ರಿಲ್‌ನಲ್ಲಿ ಮಿಶ್ರ ತಳಿಯ ರೇಷ್ಮೆಗೆ ಕೆಜಿಗೆ ಸರಾಸರಿ ೧೫೬ರೂ ಗಳಿತ್ತು. ೨೦೧೦ರ ಏಪ್ರಿಲ್‌ನಲ್ಲಿ ಇದು ೧೯೫ ರೂಗಳನ್ನು ತಲುಪಿತ್ತು. ಅದೇ ೨೦೧೧ರಲ್ಲಿ ಒಂದು ಕೆಜಿ ರೇಷ್ಮೆಯ ಬೆಲೆ ಸರಾಸರಿ ೩೧೧ ರೂ ಇತ್ತು!

ಆದರೆ ರೇಷ್ಮೆ ಬೆಳೆಗಾರರ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ ಅಥವಾ ಉಳಿಯಲು ನಮ್ಮ ಘನ ಸರ್ಕಾರಗಳು ಬಿಡಲಿಲ್ಲ. ೨೦೧೧ರ ಮೇ ಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆಜಿಗೆ ಸರಾಸರಿ ೧೮೫ ರೂಗೆ ಇಳಿದಿತ್ತು. ರೇಷ್ಮೆ ಬೆಳೆಗಾರರ ಕತ್ತು ಹಿಸುಕುವ ಕೆಲಸವನ್ನು ಈ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್‌ನ ಮೂಲಕ ನೇರವಾಗಿಯೇ ಮಾಡಿತ್ತು. ಕೇಂದ್ರ ತನ್ನ ಬಜೆಟ್‌ನಲ್ಲಿ ರೇಷ್ಮೆ ಮೇಲೆ ಶೇ. ೩೦ ರಷ್ಟಿದ್ದ ಆಮದು ಸುಂಕವನ್ನು ಕೇವಲ ಶೇ. ೫ಕ್ಕೆ ಇಳಿಸಿತು. ಅದ್ದರಿಂದ ಈ ಬಾರಿಯ ಬಜೆಟ್ ರೇಷ್ಮೆ ಬೆಳೆಗಾರರಿಗೆ ಮರಣ ಶಾಸನವಾಯಿತು.

ಬೆಲೆ ಇಳಿಕೆಯನ್ನು ಅವಡುಗಚ್ಚಿ ಸಹಿಸಿಕೊಂಡಿದ್ದ ರೈತರಿಗೆ ರೇಷ್ಮೆ ಗೂಡಿನ ಬೆಲೆ ಎರಡಂಕಿಗೆ (೩೦-೫೦ರೂ) ಇಳಿದಾಗ ತೀವೃ ಅಘಾತಕ್ಕೀಡಾಗಿ ಹರಾಜು ಪ್ರಕ್ರಿಯೆಯಿಂದ ದೂರ ಸರಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ರೈತರ ಬಗ್ಗೆ ರಾಜ್ಯ ಸರ್ಕಾರದ
ನಿರ್ಲಕ್ಷ್ಯತನ, ದಲ್ಲಾಳಿಗಳು ಮತ್ತು ರೀಲರ್‌ಗಳ ವಿರುದ್ಧ ತಮಗಿದ್ದ ಅಸಹನೆಯನ್ನು ಅವರು ಈ ಮೂಲಕ ವ್ಯಕ್ತ ಪಡಿಸಬೇಕಾಯಿತು. ಕೊನೆಗೆ ಅರಣ್ಯ ಸಚಿವ ಸಿ ಪಿ ಯೋಗಿಶ್ವರ್‌ರ ಮಧ್ಯ ಪ್ರವೇಶದಿಂದ ಈ ಪ್ರತಿಭಟನೆ ಕೊನೆಗೊಂಡರು ಕೂಡ ಯೋಗಿಶ್ವರ್ ನೀಡಿದ ಭರವಸೆಯಂತೆ ಸರ್ಕಾರ ಪ್ರತಿ ಕೆಜಿಗೆ ೩೦ರೂ ಸಹಾಯ ಧನ ನೀಡುವ ಬಗ್ಗೆ ಮೀನ ಮೇಷ ಎಣಿಸುತ್ತಿರುವುದು ರೈತರಿಗೆ ಮಾಡಿದ ಅವಮಾನವೇ ಸರಿ. ಈ ಹಿಂದೆ ಈ ವರ್ಷದ ಫೆಬ್ರುವರಿಯಲ್ಲಿ ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂದೆ ರೈತರು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ೧೦ ಗಂಟೆಗಳ ಕಾಲ ಬಂದ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ಇದು ರೈತರ ದುರಂತ, ರೈತರಿಗೆ ೧ ಕೆಜಿ ರೇಷ್ಮೆ ಗೂಡಿಗೆ ೩೨೦ ರೂ ಖರ್ಚಾಗುತ್ತದೆ. ಭಾನುವಾರದ ಬೆಲೆಯನ್ನು (ಪ್ರತಿ ಕೆಜಿಗೆ ೩೦- ೫೦ ರೂ) ಹೊರತು ಪಡಿಸಿದರೂ ಕೂಡ ಮಾರುಕಟ್ಟೆ ದರ ೧೩೫ರಷ್ಟಿತ್ತು. ಮಾರುಕಟ್ಟೆಯಲ್ಲಿ ಕನಿಷ್ಟ ಬೆಲೆ ನಿಗದಿ ಪಡಿಸಲು ಯಾವುದೇ ಮಾನದಂಡವಿಲ್ಲ. ಅದ್ದರಿಂದಲೇ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ ೩೦ ರೂ ಹರಾಜು ಕೂಗುತ್ತಾರೆ. ಇದಕ್ಕಾಗಿ ಮಾರುಕಟ್ಟೆ ರಕ್ಷಣಾ ಕಾಯಿದೆಯನ್ನು ಸರ್ಕಾರ ಜಾರಿಗೆ ತರಬೇಕು, ಇಲ್ಲದೆ ಹೋದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ರೇಷ್ಮೆ ಬೆಲೆ ಕುಸಿತ ಕಾಣುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಿದೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರಬೇಕು ಹಾಗೆ ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು” ಎಂದು ಅಭಿಪ್ರಾಯ ಪಡುತ್ತಾರೆ.

ರಾಜ್ಯ ರೇಷ್ಮೆ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ೧,೪೦,೯೫೯ ರೇಷ್ಮೆ ಬೆಳೆಗಾರರು ಮತ್ತು ೭,೧೯೫ ರೇಷ್ಮೆ ರೀಲರ್‌ಗಳಿದ್ದಾರೆ. ರೇಷ್ಮೆ ಬೆಳೆ ರಾಜ್ಯದಲ್ಲಿ ಸುಮಾರು ೮ ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ನೀಡುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ೧೫,೬೧೦ ಟನ್ ಮಲ್ಬರಿ ರೇಷ್ಮೆಯಲ್ಲಿ ೭,೨೩೮ ಟನ್ ರೇಷ್ಮೆಯನ್ನು ಕರ್ನಾಟಕ ಉತ್ಪಾದಿಸುತ್ತದೆ. ಭಾರತ ಪ್ರತಿ ವರ್ಷ ೨೮,೦೦೦ ಟನ್ ರೇಷ್ಮೆಯನ್ನು ಬಳಸುತ್ತದೆ ಆದರೆ ನಮ್ಮಲ್ಲಿ ಉತ್ಪಾದನೆಯಾಗುವುದು ೧೯,೦೦೦ ಟನ್ ಮಾತ್ರ. ಅದ್ದರಿಂದ ದೇಶ ಸುಮಾರು ೫,೦೦೦ ಟನ್‌ನಷ್ಟು ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೇಷ್ಮೆ ಕೃಷಿಗೆ ನೆರವಿನ ಹಸ್ತ ಚಾಚ ಬೇಕಾದ ಸರ್ಕಾರಗಳೇ ರೈತರ ಬದುಕಿಗೆ ಕೊಡಲಿಯೇಟು ನೀಡುತ್ತಿರುವುದು ವಿಪರ್ಯಾಸ.

Saturday, October 29, 2011

ಅನಿವಾರ್ಯವಾಗಿರುವ ಹೊತ್ತಲ್ಲಿ ಚೂಸಿ ಆಗಿರೋಕ್ಕೆ ಸಾಧ್ಯನಾ...?

ಇವತ್ತು ಒಂಚೂರು ತಡವಾಗಿದೆ... ಆದ್ರೆ ರಿಕ್ಷಾಗಳಿಗೆ ಬರ ಬೀಳುವಷ್ಟು ತಡ ಆಗಿಲ್ಲ... ನೊಡೋಣ, ಯಾವ ಗಾಡಿ ಹತ್ತೋದು ... ಅದ್ರಲ್ಲಿ ನೋಡೊದು ಎಂತ... ಯಾವುದು ಬರುತ್ತೆ ಅದನ್ನು ಹತ್ತುವುದು... ಅನಿವಾರ್ಯವಾಗಿರುವ ಹೊತ್ತಲ್ಲಿ ಚೂಸಿ ಆಗಿರೋಕ್ಕೆ ಸಾಧ್ಯನಾ...? ಅಲ್ಲ, ಈ ಸೂಸೈಡ್ ಮಾಡುವವರು ನಾವು ಯಾವ ರೀತಿ ಸೂಸೈಡ್ ಮಾಡ್ಕೋಬೇಕು ಅನ್ನುವ ವಿಷಯದಲ್ಲಿ ಥಿಂಕ್ ಮಾಡ್ತಾರಾ... ಹಗ್ಗ... ಅದು ಫ್ಯಾನ್‌ಗೋ.. ಮರಕ್ಕೋ... ವಿಷ... ಅದ್ರಲ್ಲಿ ಯಾವ ವಿಷ... ಬೆಟ್ಟದಿಂದ ಹಾರುವುದೋ.. ನೀರಿಗೆ ಧುಮುಕುವುದೋ ಅಲ್ಲ... ರೈಲು... ಆತ್ಯಹತ್ಯೆ ಆ ಕ್ಷಣದ ಯೋಚನೆ ಆಗಿರುತ್ತದೆಯೋ... ಅಲ್ಲ, ಕೆಲವರು ತುಂಬ ದಿನದಿಂದ ಯೋಚನೆ ಮಾಡಿ ಈ ಹಲ್ಕ ಕೆಲಸ ಮಾಡ್ತಾರೆ... ಹುಂ ಅವರು ಪಕ್ಕಾ ಡಿಸೈಡ್ ಮಾಡಿರಬಹುದು... ರಿಕ್ಷಾ ಬಂತು... ಈ ಮಂಗ ಮುಂದೆ ಹೋಗಿ ನಿಲ್ಲಿಸಿದ... ಸರಿ, ಒಂಚೂರು ವ್ಯಾಯಾಮ ಆಗುತ್ತೆ... ಈ ನೆಲ ಹತ್ತು ವರ್ಷದ ಹಿಂದೆ ಹೇಗೆ ಇದ್ದಿರಬಹುದಾ... ಹೊಲ ಹೊಲ... ಈಗ ಕಟ್ಟಡ... ಕಟ್ಟಡ... ಹೌದು ನಾನು ಕೃಷಿ ಬಗ್ಗೆ ಯಾವ ನಾಲಗೆ ಇಟ್ಟುಕೊಂಡು ಮಾತನಾಡಲಿ... ಮನೆಯಲ್ಲಿ ಅಷ್ಟು ಕೃಷಿ ಭೂಮಿ ಇದ್ದು ಇಲ್ಲಿ ಬಂದು? ಕೃಷಿಕನೆಂದರೆ ಭೂಮಿ ಪುತ್ರ, ಆ ವೃತ್ತಿ ಶ್ರೇಷ್ಠ ಹಾಗೇ ಹೀಗೆ ಎಂದು ಹೇಳುವ ಒಂದು ಪೈಸೆಯ ನೈತಿಕತೆ ನನಗಿದೆಯೇ...? ಆದ್ರೂ ಜೀವನ ಇಲ್ಲಿಗೆ, ಇಂದಿಗೆ ಇಲ್ಲಿಯೇ ಕೊನೆಗೊಳ್ಳುತ್ತಾ? ನಾಳೆ ನಾನು ಎಲ್ಲೋ ಇರಬಹುದು... ನಮ್ಮ ಮನೆಯಲ್ಲೂ...! ಹುಂ ಅನಿಶ್ಚಿತ ಭವಿಷ್ಯ... ಹೇಕ್... ಇವನು ಏಕೆ ಇಷ್ಟು ಸೈಡ್‌ಲ್ಲಿ ಹೋಗುತ್ತಿದ್ದಾನೆ... ಮಾರ್ಗದ ಮಧ್ಯೆ ಹೋಗಲು ಆಗುವುದಿಲ್ವಾ... ಭಾಷೆ ಇಲ್ಲದ್ದು... ಹೋ ಅವಳು ಈ ರಿಕ್ಷಾ ಹತ್ತುತ್ತಾಳ... ಹುಂ ಚೆನ್ನಾ... ಸಖತ್ ಆಗಿದ್ದಾಳೆ... ಇಲ್ಲ ಅವಳು ಹತ್ತುವುದಿಲ್ಲ... ಸರಿ... ಲೈಟ್ ಕಂಬ... ಇಲ್ಲಿ ತಡೆಬೇಲಿಗಳೇ ವಿಚಿತ್ರವಾಗಿದೆ... ಹೇ... ಆ ಮುಂದಿನ ಗಾಡಿಯ ನಂಬರ್ ಎಷ್ಟು ಚೆನ್ನಾಗಿದೆ... ಈ ಗಾಡಿಗಳ ನಂಬರ್‌ನಲ್ಲಿ ಆಟ ಆಡೋದೆ ಮಜಾ... ಒಳ್ಳೆ  ಗಮ್ಮತ್ತು... ಆ ಕಾರಿನ ನಂಬರ್ ವಿಚಿತ್ರವಾಗಿದೆ... ಇದು ಸರಿಯಿಲ್ಲ... ಈ ನಂಬರ್ ತುಂಬ ಕೆಟ್ಟದಾಗಿದೆ... ಅದು ನಂಬರ್ ಚೆನ್ನಾಗಿದೆ... ಹೇ ಅದು ಅಂಧ್ರದ ರಿಜಿಸ್ಟ್ರೇಷನ್... ನಾನು ಕರ್ನಾಟಕದ ೭-೮ ಗಾಡಿ ನೋಡಿದ್ದೇನೆ ಇಲ್ಲಿ... ಗಾಡಿಯಲ್ಲಿ ನಂಬರ್ ಪ್ಲೇಟ್ ನೋಡಿ ಎಲ್ಲಿಯ ಗಾಡಿ ಅಂತ ಹೇಳೋದು ಸುಲಭ... ಆದ್ರೆ ಅದಕ್ಕಿಂತ ಮುಖ, ಕೂದಲು ನೋಡಿ ಇವರೆಲ್ಲಿಯವರು ಅಂತ ಗುರುತಿಸುವುದು... ಈ ವಿಷಯದಲ್ಲಿ ಶೆಟ್ರು ಹುಷಾರಿದ್ದಾರೆ... ಒಳ್ಳೆ ಸ್ಪೀಡ್ ಪಿಕ್ ಅಪ್ ಮಾಡ್ಕೊಂಡ... ಹುಷಾರಿದ್ದಾನೆ... ಹಾಡು ಕೂಡ ಹಾಡುತ್ತಿದ್ದಾನೆ... ಜಾಲಿ ಬಾಯ್ ಅನ್ನಬಹುದು... ಹೋ ಅವನ್ಯಾಕೆ ಹೀಗೆ ಮಾರ್ಗ ದಾಟುತ್ತಿದ್ದಾನೆ... ಹುಚ್ಚ... ಸೆನ್ಸ್ ಇಲ್ಲ... ಅಲ್ಲ, ನಾವು ಹೇಳುತ್ತಿರುತ್ತೇವೆ... ಅದರಲ್ಲೂ ನಾನು... ನಾನ್ಯಾರನ್ನು ನಂಬುವುದಿಲ್ಲ... ಹಾಗೇ ಹೀಗೆ ಎಂತ... ಆದ್ರೆ ಅದು ಬೊಗಸ್... ನಾವು ರಸ್ತೆ ದಾಟುವಾಗ ಮುಂದಿನಿಂದ, ಅತ್ತಲಿಂದ, ಇತ್ತಲಿಂದ ಬರುವ ವಾಹನ ಚಾಲಕರನ್ನು ನಂಬಿಯೇ ದಾಟಿರುತ್ತೇವೆ... ನಾವು ಹೋಟೆಲ್‌ಗೆ ಹೋಗಿ ತಿನ್ನುವುದು, ಮಾರುಕಟ್ಟೆಗೆ ಹೋಗಿ ತರಕಾರಿ ತೆಗೆದುಕೊಳ್ಳುವುದು, ಇನ್ನೊಬ್ಬರ ಮನೆಗೆ ಹೋಗಿ ಊಟ ಮಾಡುವುದು, ಈ ರಿಕ್ಷಾದಲ್ಲಿ ಕುಳಿತದ್ದು... ಎಲ್ಲ ನಂಬಿಕೆಯ ಮೇಲೆ ತಾನೆ... ನಮ್ಮನ್ನು ಯಾರಿಗೂ ಏನೂ ಬೇಕಾದರೂ ಮಾಡಬಹುದು... ಆದ್ರೂ ಮಾಡಲಿಕ್ಕಿಲ್ಲ...ಅನ್ನುವ ನಂಬಿಕೆ... ಮತ್ತೇ ಹೇಳುತ್ತೇನೆ ಯಾರನ್ನೂ ನಂಬೋದಿಲ್ಲ ಅಂತ... ಅಲ್ಲ, ಈ ರಸ್ತೆ ದಾಟುವುದು ನಿಜಕ್ಕೂ ಅದ್ಭುತ ಪ್ರತಿಕ್ರಿಯೆ... ನಮಗೆ ನಾವು ಎಷ್ಟು ಸ್ಪೀಡ್ ದಾಟಬಹುದು ಅಂತ ಗೊತ್ತಿರಬೇಕು... ಇನ್ನು ಅವನು ಗಾಡಿ ಎಷ್ಟು ಫಾಸ್ಟ್ ಆಗಿ ಓಡಿಸುತ್ತಿದ್ದಾನೆ ಎಂದು ಲೆಕ್ಕ ಹಾಕಬೇಕು... ಆ ಗಾಡಿ ಯಾವುದು ಎಂದು ಗಮನಿಸ್ಕೋಬೇಕು... ಅಕ್ಕ ಪಕ್ಕ ಬೇರೆ ಯಾವುದಾದರೂ ಗಾಡಿ ಬರುತ್ತಿದೆಯಾ ಎಂದು ನೋಡ್ಕೊಬೇಕು... ಮತ್ತೇ... ಈ ಬಸ್‌ನವ ಏಕೆ ಹೀಗೆ ಹಾರ್ನ್ ಹಾಕುತ್ತಿದ್ದಾನೆ... ಇಲ್ಲೇ ನಿಲ್ಲಿಸಿಬಿಟ್ಟ... ಸರಿ ಹಣ ಕೋಡಬೇಕಲ್ಲ... 

ನೋಡೋಣ... ಮೊನ್ನೆ ಸಂಜನಾ ಹೀಗೆ ಮಾತನಾಡುತ್ತಿದ್ದಾಗ... ಡಿಸೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಏಪ್ರಿಲ್‌ನಲ್ಲಿ ಮದುವೆ... ಬೇಡ ಬೇಡ ಏಪ್ರಿಲ್‌ನಲ್ಲಿ ಇಲ್ಲಿ ಸೆಖೆ ಶುರುವಾಗುತ್ತೆ ಅಡ್ಜಸ್ಟ್ ಆಗೋಕ್ಕೆ ಕಷ್ಟ ಆಗುತ್ತೆ ಅಂದೆ... ಅಷ್ಟರಲ್ಲಿ ಎಂಗೇಜ್‌ಮೆಂಟ್‌ಗೂ ಮದುವೆಗೂ ಏಕೆ ಮೂರು ತಿಂಗಳು ಗ್ಯಾಪ್ ಅಂತ ಕೇಳಿದಾಗ ಅರ್ಥ ಮಾಡಿಕೊಳ್ಳಲು ಅನ್ನುತ್ತಾಳೆ... ಹುಂ ಅರ್ಥ ಮಾಡಿಕೊಳ್ಳುವುದು ಅನ್ನುವುದರ ಬದಲು ಕಂಪ್ರಾಮೈಸ್ ಮಾಡಿಕೊಳ್ಳಲು, ಅರ್ಥಾತ್ ಹೊಂದಾಣಿಕೆ ಮಾಡಿಕೊಳ್ಳಲು ಅಂದರೆ ನಿಜ ವ್ಯಕ್ತಿತ್ವ ಕಳೆದುಕೊಳ್ಳಲು ಇರುವ ಸಮಯ ಅದು ಎಂದು ನಾನು ಅವಳ ಜೊತೆ ಚರ್ಚೆ ಮಾಡಿದ್ದೆ... ಆಕೆಗೆ ಏನೂ ತೋಚಿತ್ತೋ... ದೇವರಿಗೆ ಗೊತ್ತು... ಅಷ್ಟಕ್ಕೂ ವ್ಯಕ್ತಿತ್ವ ಎಂದರೆ ಏನು ಮೊನ್ನೆ ತಾನೇ ಒಬ್ಬನಿಗೆ ಒಂದು ವ್ಯಕ್ತಿತ್ವ ಪ್ರಾಪ್ತಿ ಆಗುವುದು ನಾಲ್ವತ್ತು ದಾಟಿದ ಮೇಲೆ ಎಂದು ಓದಿದ್ದೆ... ಹಾಗಾದ್ರೆ ಈಗ ನಮಗೆ ಪರ್ಸನಾಲಿಟಿ ಅನ್ನುವುದು ಇಲ್ವಾ... ಈಗ ಈ ಪ್ರಾಯದಲ್ಲಿ ಇರುವುದು ಪರ್ಸನಾಲಿಟಿ ಅಲ್ಲ ಕ್ಯಾರೆಕ್ಟರ್... ಅಂದರೆ ಗುಣ... ಹುಂ ಕೆಲವರ ಜೊತೆ ಮಾತನಾಡುವುದು ಎಂದರೆ ತುಂಬಾ ಖುಷಿ... ಸೀಮಾಳ ವಾಯ್ಸ್ ನಿಜಕ್ಕೂ ಜೇನು... ಅದೂ ಫೋನ್‌ನಲ್ಲಿ... ಇನ್ನು ಕೆಲವರ ಜೊತೆ ಮಾತನಾಡುವುದೆಂದರೆ ಬೋರೋ ಬೋರು... ಹುಂ ಅಂಕಿತಾ ನನ್ನ ಬಗ್ಗೆ ಹೀಗೆ ಹೇಳಿದ್ದಳು... ಪಾಪಾ ನನಗೆ ಅದು ಗೊತ್ತಾಗಿಲ್ಲ ಎಂದು ತಿಳಿದುಕೊಂಡಿರಬೇಕು... ಪಾಪಾ ಮಗು... ಇಲ್ಲ, ನಾನು ನನ್ನ ಜೊತೆ ಹೇಗಿರುತ್ತಾರೋ ಹಾಗೇ ಅವರ ಜೊತೆಗೂ ಇರುತ್ತೇನೆ... ಅವಳೋ ಪಕ್ಕಾ ಕ್ಯಾಲ್ಕುಲೇಟೆಡ್... ಅಂತವರ ಜೊತೆ ಹಾಗೇ ವ್ಯವಹರಿಸುವುದು ನನ್ನ ಗುಣ... ಹೃದಯದಿಂದ ವ್ಯವಹರಿಸುವವರ ಜೊತೆಗೆ ಹಾಗೆಯೇ ವ್ಯವಹರಿಸಬೇಕು... ಈ ಮಟ್ಟಿಗೆ ಅನುರಾಧ ನಿಜಕ್ಕೂ ಗ್ರೇಟ್... ರೇರ್... ಹುಂ ಮೆಸೇಜ್ ಬಂತು.. ವಾರೆ ...ವಾಹ್ ಇದು ಅವಳೇ ಮೆಸೆಜ್ ಮಾಡಿದ್ದಾಳೆ... ಹೀಗೆ ಎಷ್ಟು ಸಲ ಅಗಿಲ್ಲ... ಯಾರನ್ನಾದರೂ ನೆನಪಿಸಿಕೊಳ್ಳುವಾಗ ಅವರೇ ಮೆಸೆಜ್ ಮಾಡುವುದು, ಕಾಲ್ ಮಾಡುವುದು... ಅದ್ಭುತ... ಕೆಲವೊಂದು ಸಲ ಸೆಟ್ ಕೈಗೆತ್ತಿಕೊಂಡಾಗ ಮೆಸೆಜ್ ಮಾಡುವುದೆಲ್ಲ ಒಂಥಾರ ವಿಚಿತ್ರ... ಹುಂ... ಡಿಗ್ರಿಯಲ್ಲಿ ನನಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರಲ್ವಾ... ಈಗ ನಾನು ಈಗ ಅವರಿಗೆ ಕಾಲ್ ಮಾಡುವಾಗ.... ಬಹಳ ನಿಧಾನವಾಗಿ... ಇವನ್ಯಾಕೆ ಕಾಲ್ ಮಾಡಿದ ಎಂದೇ ಮಾತನಾಡಿಸುತ್ತಾರೆ... ಸರಿ, ಇಡುತ್ತೇನೆ...ಎಂದಾಗ... ಗಟ್ಟಿ ...ಓಕೆ... ಬಾಯ್....ಸ್ವೀಟ್ ಡ್ರೀಮ್ಸ್.. ಮಣ್ಣು ಮಸಿ ಅಂತ ಜೋರಾಗಿ ಹೇಳುತ್ತಾರೆ... ಅಂದರೆ ಇವನ್ಯಾವಗ ಇಡುತ್ತಾನೆ ಎಂದೇ ಅವರು ಕಾಯುತ್ತಿರುತ್ತಾರೆ... ಇಂತವರಿಗೆ ಮತ್ತೇ ಕಾಲ್ ಮಾಡಬೇಕಾ...? ನಾನು ಹೆಚ್ಚಾಗಿ ಮೂರು ಸಲದ ಸೂತ್ರ ಅನುಸರಿಸುತ್ತಿರುವುದರಿಂದ ಕೆಲವರ ನಂಬರ್ ಇನ್ನೂ ಉಳಿದಿದೆ...

Saturday, October 15, 2011

ಬರೆಯಲಾಗಲಿಲ್ಲ ನನಗೆ ಕವಿತೆ

ಮನದಾಳದ ನೋವು
ಮುಗಿಲೆತ್ತರದ ಈಡೇರದ ಕನಸು
ಎದೆ ತುಂಬ ಕೆಸರು
ಕಣ್ಣತುಂಬ ನೀರು
ಬರೆಯಲಾಗಲಿಲ್ಲ ನನಗೆ ಕವಿತೆ.


ನಗುವೆಂದರೆ ಬೆಟ್ಟದಂಚಿನಿಂದ ಧುಮ್ಮಿಕ್ಕುವ ಝರಿ
ಮಾತೆಂದರೆ ಮಲೆನಾಡಿನ ತುಂತುರು ಹನಿ
ಮೊಗ ತುಂಬ ಸ್ಪೂರ್ತಿಯ ಚಿಲುಮೆ
ಬೊಗಸೆ ತುಂಬ ಬಾಳಸಾಗಿಸುವ ಒಲುಮೆ
ಅದ ಕಂಡಾಗಲೆಲ್ಲ ಮನ ತುಂಬ ಏನೋ ನೀರವತೆ
ಆದರೂ ಬರೆಯಲಾಗಲಿಲ್ಲ ನನಗೆ ಕವಿತೆ


ಕವಿತೆ,
ನಿನ್ನಿರವ ಹೇಳುವ ಗೆರೆಯ ಮೇಲೆ
ಓಡುತ್ತಿಲ್ಲ ಪೆನ್ನು
ಬೆಚ್ಚಿ ಬೀಳುವುದು ಕಾಗದ, ಕಂಡವನಂತೆ ಗನ್ನು!
ಆದರೂ ನನಗೇನೋ ಹಟ
ಕವಿತೆ ಬರೆಯಲೇಬೆಕೆಂದು
ಪಕ್ಕದಲಿದ್ದ ಅಜ್ಜನ ಹೂವು ಹಾಕಿದ ಪೋಟೊ ಗುಣುಗುತ್ತಿತ್ತು
ಎಲೇ ಮಂಕೆ,
ಬರೆಯದಿದ್ದರೂ ಕವಿತೆ ಕವಿತೆಯಾಗುವುದಿಲ್ಲವೇ?
ಥೇಟ್ ನಮ್ಮಂತೆ!

Tuesday, October 4, 2011

ದ್ರಾವಿಡ್ ಏಕದಿನ ಪಂದ್ಯಗಳಿಂದ ನಿವೃತ್ತರಾಗುತ್ತಿದ್ದಂತೆ ಇದೆಲ್ಲ ನೆನಪಾಯಿತು...

ನಾನು ಕ್ರಿಕೆಟ್ ಕಲಿತದ್ದೆ ಗೋಡೆಗೆ ಚೆಂಡು ಹೊಡೆದು, ನಾನು ಕ್ರಿಕೆಟ್‌ನಲ್ಲಿ ಬೆಳೆದದ್ದು ಗೋಡೆಯನ್ನು ನೋಡುತ್ತ...

ರಾಹುಲ್ ದ್ರಾವಿಡ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ ಮನಸ್ಸಲ್ಲಿ ಕಳವಳ, ನೋವು ಮತ್ತು ನೆನಪುಗಳ ಮಳೆಯೇ ಸುರಿಯುತ್ತಿತ್ತು.

ನನಗೆ ಬಾಲ್ಯದಲ್ಲಿ ಕ್ರಿಕೆಟ್ ಎಂಬ ಒಂದು ಕ್ರೀಡೆಯಿದೆ ಅನ್ನುವುದೇ ಗೊತ್ತಿರಲ್ಲಿಲ್ಲ! ನನಗೆ ಆಡುವುದೆಂದರೆ ಕಣ್ಣಾ ಮುಚ್ಚಾಳೆ, ಮರಕೋತಿಯಾಟ, ಕಳ್ಳ ಪೊಲೀಸ್, ಗಾಡಿ ಬಿಡುವುದು ಹೀಗೆ. ನಾನು ಒಂದರಿಂದ ನಾಲ್ಕನೇ ತರಗತಿ ತನಕ ಓದಿದ್ದು ನಮ್ಮ ಮನೆಯ ಪಕ್ಕದಲ್ಲಿದ್ದ ನಡುಜಾರು, ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ನಾವು ಆಡುತ್ತಿದ್ದದ್ದು ಈ ಮೇಲೆ ಹೇಳಿದ ಆಟಗಳನ್ನು ಮಾತ್ರ. ಆದರೆ ಹಿರಿಯ ಪ್ರಾಥಮಿಕ ಶಿಕ್ಷಣ ಆ ಶಾಲೆಯಲ್ಲಿ ಇಲ್ಲದ ಕಾರಣ ನಾನು ಮುಂದಿನ ಶಿಕ್ಷಣಕ್ಕಾಗಿ ನೆರಿಯದ ಅಣಿಯೂರಿನಲ್ಲಿದ್ದ ಮಾವನ ಮನೆಗೆ ಬರಬೇಕಾಯಿತು. ಅಲ್ಲಿಂದ ನಾನು ಹಿರಿಯ ಪ್ರಾಥಮಿಕ ಶಾಲೆ ಬಯಲು ಇಲ್ಲಿಗೆ ಹಿರಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಹೋಗಲು ಶುರು ಮಾಡಿದೆ. ಅಲ್ಲಿ ನನ್ನ ಸ್ನೇಹಿತರೆಲ್ಲ ಕ್ರಿಕೆಟ್ ಆಡುತ್ತಿದ್ದರು.

ಮೊದಲಿಗೆ ನನಗೆ ಕ್ರಿಕೆಟ್ ಬ್ಯಾಟ್ ಎಂದರೆ ಹನುಮಂತನ ಗದೆ ರೀತಿಯೇ ಕಾಣಿಸುತ್ತಿತ್ತು! ನನ್ನ ಸ್ನೇಹಿತರು ಅದನ್ನು ಗದೆಯ ರೀತಿಯೂ ಬಳಸುತ್ತಿದ್ದರು! ಕೆಲ ಸಂದರ್ಭದಲ್ಲಿ ಸ್ಟಂಪ್ಸ್ ತ್ರಿಶೂಲವೂ ಆಗುತ್ತಿತ್ತು! ನನಗೆ ೫ನೇ ತರಗತಿಯಲ್ಲಿ ಕ್ರಿಕೆಟ್ ಜೊತೆ ಅಷ್ಟು ತಾಳಮೇಳ ಕೂಡಲಿಲ್ಲ. ನಾನು ಬ್ಯಾಟ್ ಎತ್ತುವ ಮೊದಲೇ ಚೆಂಡು ಕೀಪರ್‌ನ ಬೊಗಸೆಗೋ, ಸ್ಟಂಪ್ಸ್‌ಗೋ ಹೋಗಿ ಬೀಳುತ್ತಿದ್ದು. ಅಕಸ್ಮಾತ್ ಬ್ಯಾಟ್‌ಗೆ ತಾಕಿದರೂ ಅದು ಫಿಲ್ಡರ್‌ನ ಕೈಗೇ. ನಾ ಹೊಡೆದ ಹೊಡೆತಗಳಿಗೂ ಬಲ ಇಲ್ಲದಿರುತ್ತಿದ್ದುದನ್ನು ಗಮನಿಸಿದ್ದ ನನ್ನ ಓರಗೆಯ ಅನುಭವಿ ಆಟಗಾರರು ಎಲ್ಲ ಫಿಲ್ಡರ್‌ಗಳನ್ನು ನನ್ನ ಸುತ್ತ ಮುತ್ತ ನಿಲ್ಲಿಸುತ್ತಿದ್ದರು. ನನಗೆ ಗೋವುಗಳಿಗೆ ಇಂಜೆಕ್ಷನ್ ಅಥವಾ ಚಿಕಿತ್ಸೆ ಕೊಡಲು ಹೆಚ್ಚೆಂದರೆ ೩ ಅಡಿ ಅಗಲ ಮಾತ್ರವಿರುವ ಮೂರು ದಿಕ್ಕಿನಿಂದಲೂ ಕಬ್ಬಿಣದ ರಾಡ್‌ನಿಂದ ಮಾಡಲ್ಪಟ್ಟ ಬೇಲಿ (ಣಡಿives)ಯೊಳಗೆ ನಿಂತ ಗೋವಿನಂತೆ ಅಗುತ್ತಿತ್ತು. ಅದೇಷ್ಟೋ ಬಾರಿ ನಾನು ಬೇಕು ಬೇಕೆಂದೆ ಔಟ್ ಆಗುತ್ತಿದ್ದೆ. ಆಗ ನಾನು ಔಟ್ ಆಗಲು ಕೂಡ ಕಷ್ಟ ಪಡಬೇಕಿತ್ತು! ಏಕೆಂದರೆ ಬ್ಯಾಟ್ ಬಾಲ್‌ಗೆ ತಗೋದೆ ಇಲ್ಲ ಅಂದರೆ ಕ್ಯಾಚ್ ಆದರೂ ಹೋಗೋದು ಹೇಗೆ? ಆಗ ನನಗಿದ್ದ ಒಂದೇ ಒಂದು ಅಪ್ಷನ್ ಎಂದರೆ ಬೌಲ್ಡ್ ಆಗೋದು! ಬೌಲರ್ ಹಾಕಿದ ಬಾಲ್ ಸ್ಟಂಪ್‌ಗೆ ತಾಗುವ ತನಕ ನಾನು ಅನಿವಾರ್ಯವಾಗಿ ಆ ಚಕ್ರವ್ಯೂಹದಲ್ಲೇ ಒದ್ದಾಡಬೇಕಿತ್ತು. ಆಗ ನಾವು ಆಡುತ್ತಿದ್ದದ್ದು ಅಂಡರ್ ಅರ್ಮ್ ಕ್ರಿಕೆಟ್. ನಾನು ಬ್ಯಾಟ್ ಹಿಡಿಯುವಾಗ ಬ್ಯಾಟನ್ನು ನೆಲಕ್ಕೆ ಗಟ್ಟಿ ಒತ್ತಿ ಹಿಡಿಯುತ್ತಿದ್ದೆ. ಈಗ ಬಾಲ್ ಬರುತ್ತಿದೆ ಅದಕ್ಕೆ ಹೊಡೆಯಬೇಕು ಎಂದು ಬ್ಯಾಟ್ ಎತ್ತೋಣ ಎಂದರೆ ಬಾಲ್ ಕೀಪರ್‌ನ ಕೈ ಸೇರುವ ಹೊತ್ತಿಗೆ ನನ್ನ ಬ್ಯಾಟ್ ನೆಲದಿಂದ ಒಂದೋ ಎರಡೋ ಇಂಚು ಮೇಲಿರುತ್ತಿತ್ತು ಅಷ್ಟೆ! ಇನ್ನು ಫಿಲ್ಡಿಂಗ್ ಮಾಡಲು ನಿಂತರೆ ನನ್ನ ಕೈಗೇ ಸಿಗದೇ ಅಥವಾ ಸಿಕ್ಕರೂ ತಪ್ಪಿಸಿಕೊಂಡು ಹೋಗುತ್ತಿದ್ದ ಚೆಂಡುಗಳನ್ನು ಹಿಡಿಯಲು ಮತ್ತೆ ೩-೪ ಫಿಲ್ಡರ‍್ಸ್‌ಗಳು ಬೇಕಿತ್ತು! ಸ್ನೇಹಿತರು ನಾಳೆ ಶಾಲೆಗೆ ಬರುವಾಗ ಮಕ್ಕೇರಿ ಹಿಡಿದುಕೊಂಡು ಬಾ ಅಥವಾ ತೂಂಬು ಎಂದೇ ತಮಾಷೆ ಮಾಡುತ್ತಿದ್ದರು.

ನಾನು ಫಿಲ್ಡಿಂಗ್‌ಗೆ ಒಂದೋ ಬೌಂಡರಿ ಪಕ್ಕ ನಿಲ್ಲುತ್ತಿದ್ದೆ ಇಲ್ಲ ಬ್ಯಾಟ್ಸ್‌ಮನ್‌ನ ಪಕ್ಕ. ಬ್ಯಾಟ್ಸ್‌ಮೆನ್‌ನ ಪಕ್ಕ ನಿಲ್ಲುವುದೆಂದರೆ ನಾನು ಹೆದರಿ ಸಾಯುತ್ತಿದ್ದೆ... ‘ದೇವರೇ ಕಾಪಾಡಪ್ಪ’ ಅನ್ನೋದೆ ನನ್ನ ಪ್ರತಿಕ್ಷಣದ ಪ್ರಾರ್ಥನೆಯಾಗಿತ್ತು. ಕೈಯಲ್ಲಿ ಚೆಂಡು ಹಿಡಿಯುವುದರ ಬದಲು ನನ್ನ ಪ್ರಾಣವನ್ನೇ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕಿತ್ತು ನಾನು! ಅದರಲ್ಲೂ ನಾವಾಗ ಕ್ರಿಕೆಟ್ ಆಡುತ್ತಿದ್ದದ್ದು ಟೆನ್ನಿಸ್ ಬಾಲ್‌ನಲ್ಲಿ ಅಲ್ಲ ರಬ್ಬರ್ ಬಾಲ್‌ನಲ್ಲಿ! ನಾವು ಟೆನ್ನಿಸ್ ಬಾಲ್‌ಗೆ ಕವರಿಂಗ್ ಬಾಲ್ ಎಂದು ರಬ್ಬರ್ ಬಾಲ್‌ಗೆ ಹಾರ್ಡ್ ಬಾಲ್ ಎಂದು ಹೇಳುತ್ತಿದ್ದೆವು.

ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವಾಗ ನಾನು ನಮ್ಮ ಶಾಲೆಯ ಮೈದಾನದಲ್ಲಿ ಅಂಬೆಗಾಲಿಡುತ್ತಿದ್ದೆ! ಐದನೇ ತರಗತಿ ಮುಗಿಯುತ್ತ ಬಂದಂತೆ ಅದು ಹೇಗೋ ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಕುದುರಿತು. ಸಂಜೆ ಶಾಲೆ ಬಿಟ್ಟು ಬಂದು ಕೊಟ್ಟಿಗೆಯ ಗೋಡೆಗೆ ಚೆಂಡನ್ನು ಬಡಿದು ಬ್ಯಾಟಿಂಗ್, ಫಿಲ್ಡಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ನಮ್ಮ ಮನೆಯ ಪಕ್ಕ ನಮಗೆ ಸೇರಿದ ದೊಡ್ಡ ಮೈದಾನವಿತ್ತು. ಆದರೆ ಆ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದಗಳಿದ್ದರಿಂದ ಅಲ್ಲಿ ಆಡುವಂತಿರಲಿಲ್ಲ. ನನಗೆ ಆಗ ಓವರ್‌ಆರ್ಮ್ ಬೌಲಿಂಗ್ ಅನ್ನುವುದು ಇದೆ ಎಂದೇ ಗೊತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ಕೂಡ ಕೆಲವರಿಗೆ ಮಾತ್ರ ಓವರ್‌ಆರ್ಮ್ ಬೌಲಿಂಗ್‌ನ ಕಲೆ ಸಿದ್ಧಿಸಿತ್ತು. ಅವರು ಓವರ್‌ಆರ್ಮ್ ಕ್ರಿಕೆಟ್ ಆಡೋಣ ಅಂತ ವಾದಿಸಿದರೆ ಉಳಿದವರು ಬೇಡ ಅಂಡರ್‌ಅರ್ಮ್ ಕ್ರಿಕೆಟ್ ಆಡೋಣ ಅಂತ. ನಂತರ ನಾನು ಅದು ಹೇಗೋ ಓವರ್‌ಅರ್ಮ್‌ನ ಬಗ್ಗೆ ತಿಳಿದುಕೊಂಡು ಓವರ್‌ಅರ್ಮ್ ಬೌಲಿಂಗ್ ಕಲಿತೆ...

ನಾನು ಆರನೇ ತರಗತಿಯಲ್ಲಿ ಇದ್ದೆ... ಮನೆಗೆ ಟಿವಿ ಬಂತು... ಅದರಲ್ಲಿ ಅಗಾಗ ಕ್ರಿಕೆಟ್ ಬರುತ್ತಿತ್ತು, ನನ್ನ ಅಜ್ಜನಿಗೂ ಕ್ರಿಕೆಟ್ ಮೇಲಿನ ಪ್ರೀತಿ... ಮಳೆಗಾಲವಾದ್ದರಿಂದ ಶಾಲೆಯಲ್ಲಿ ಆಡಲು ಬಿಡುತ್ತಿರಲಿಲ್ಲ. ಆದರೆ ಮನೆಯಲ್ಲಿ ನಾನು ಏಕಲವ್ಯನ ರೀತಿ ಹೆಚ್ಚಿನ ದಿನ ಬೌಲಿಂಗ್, ಫಿಲ್ಡಿಂಗ್ ಮತ್ತು ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ನನ್ನ ಪ್ರ್ಯಾಕ್ಟೀಸ್‌ಗೆ ಸಿಕ್ಕ ಮನೆ ಮತ್ತು ಕೊಟ್ಟಿಗೆಯ ಗೋಡೆಯ ತುಂಬ ಚೆಂಡಿನ ತರಹೇವಾರಿ ಗುರುತುಗಳು! (ನನ್ನದು ನೆಟ್ ಪ್ರ್ಯಾಕ್ಟೀಸ್ ಅಲ್ಲ ಗೋಡೆ ಪ್ರ್ಯಾಕ್ಟೀಸ್!)ನನಗೆ ಬೈಗುಳದ ಸುರಿಮಳೆ.

ಆರನೇ ತರಗತಿಯಲ್ಲಿ ಚಿಕ್ಕ ರಜೆ ಅಂದರೆ ದಸರಾ ರಜೆಯ ಬಳಿಕ ಶಾಲೆಯಲ್ಲಿ ನಮ್ನನ್ನು ಆಡಲು ಬಿಡುತ್ತಿದ್ದರು. ಆಗ ಟೀಮ್‌ನ್ನು ನಾವು ಒಂದೋ ಮೈದಾನದಲ್ಲಿ ಅಥವಾ ಕ್ಲಾಸ್‌ನಲ್ಲಿಯೇ ಮಾಡುತ್ತಿದ್ದೆವು. ಆಗ ಇಬ್ಬರು ನಾಯಕರನ್ನು ಮೊದಲು ಆಯ್ಕೆ ಮಾಡಿ ನಂತರ ಕ್ರಿಕೆಟ್ ಆಡಲು ಆಸಕ್ತಿ ಇರುವ ಮಕ್ಕಳಲ್ಲಿ ಅವರು ಅವರಿಗೆ ಇಷ್ಟವಾದವರನ್ನು ಆ ನಾಯಕರು ಒಬ್ಬರ ನಂತರ ಒಬ್ಬರಂತೆ ಕರೆಯುತ್ತಿದ್ದರು. ಇದರಲ್ಲಿ ಮೊದ ಮೊದಲು ಒಳ್ಳೆ ಆಟಗಾರರು ಯಾವುದಾದರೂ ಒಂದು ತಂಡ ಸೇರುತ್ತಿದ್ದರು... ಕೊನೆಗೆ ಅನಿವಾರ್ಯವಾಗಿ ನನ್ನನ್ನು ಸೇರಿಸಿಕೊಳ್ಳುತ್ತಿದ್ದರು. ಅಗ ನಾನು ತಂಡಕ್ಕೆ ಹೊರೆಯಾಗಿಯೇ ಇರುತ್ತಿದ್ದೆ! ನನ್ನನ್ನು ಲೆಕ್ಕ ಭರ್ತಿಗೆ ಎಂದು ಕೂಡ ಹೇಳುವಂತಿರಲಿಲ್ಲ ಹಾಗಿತ್ತು ನನ್ನ ಸ್ಥಿತಿ. ಆದರೆ ನಾನು ಏನು ಎಂದು ಗೊತ್ತು ಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ದಿನ ನಾನು ಲಾಂಗ್ ಅಫ್‌ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದೆ. ಒಬ್ಬ ಆಟಗಾರ (ಬಹುಶಃ ದಾಮೋದರ) ಹೊಡೆದ ಚೆಂಡು ಆಕಾಶದೆತ್ತರ ಚಿಮ್ಮಿತ್ತು. ಎಲ್ಲರೂ ಅದನ್ನು ಫೋರ್ ಅಥವಾ ಸಿಕ್ಸ್ ಎಂದೇ ಭಾವಿಸಿದ್ದರು ಆದರೆ ನಾನದನ್ನು ಕ್ಯಾಚ್ ಆಗಿ ಪರಿವರ್ತಿಸಿದ್ದೆ! ಆ ಬಳಿಕ ಇಂತಹದ್ದೆ ಎರಡು ಮೂರು ಕ್ಯಾಚ್‌ಗಳನ್ನು ಪಡೆದೆ. ಆಗ ನನ್ನ ಫಿಲ್ಡಿಂಗ್ ಸಾಮರ್ಥ್ಯ ಬೆಳಕಿಗೆ ಬಂದಿತ್ತು. ನಾನು ನನ್ನ ಫಿಲ್ಡಿಂಗ್‌ಗಾಗಿಯೇ ತಂಡಗಳಿಗೆ ಐದರಿಂದ ಆರನೇ ಸ್ಥಾನದಲ್ಲಿ ಸೇರ್ಪಡೆಯಾಗುತ್ತಿದ್ದೆ. ಎಲ್ಲಿ ಅಗತ್ಯವೋ ಅಲ್ಲಿ ಫಿಲ್ಡಿಂಗ್ ಮಾಡುತ್ತಿದ್ದೆ. ನನಗೋ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅಥವಾ ತಂಡಗಳಲ್ಲಿ ಸ್ಥಾನ ಪಡೆಯಲು ಇದ್ದ ಏಕೈಕ ಕ್ಷೇತ್ರವೆಂದರೆ ನನ್ನ ಫಿಲ್ಡಿಂಗ್. ನನಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗುತ್ತಿರಲಿಲ್ಲ. ಸಿಕ್ಕರು ಒಂದೆರಡು ಎಸೆತಗಳು ಅಷ್ಟೆ.

ಆ ಬಳಿಕ ನಮ್ಮಲ್ಲಿ ಓವರ್‌ಅರ್ಮ್ ಕ್ರಿಕೆಟ್ ಆಡೋಣ ಎಂಬ ನಿರ್ಧಾರವಾಯಿತು. ಅದರೆ ಸಮಸ್ಯೆ (ನನಗೆ ವರ) ಎಂದರೆ ನಮ್ಮಲ್ಲಿ ಓವರ್‌ಆರ್ಮ್ ಬೌಲಿಂಗ್ ಮಾಡುವ ಬೌಲರ್‌ಗಳು ಹೆಚ್ಚಿರಲ್ಲಿಲ್ಲ. ಬಹುಶಃ ಒಟ್ಟು ೪ ಮಂದಿ ಇದ್ದಿದ್ದಿರಬೇಕು. ಆದರೆ ಅವರು ಸ್ವಲ್ಪ ’ದೊಡ್ಡ ಜನಗಳು’ ಆಗಿದ್ದರಿಂದ ಉಳಿದವರು ಕೂಡ ಓವರ್ ಆರ್ಮ್ ಕ್ರಿಕೆಟ್ ಆಡಲು ಒಪ್ಪಿಕೊಂಡರು. ಆದರೆ ನನಗೆ ಬೌಲಿಂಗ್ ಮಾಡಲು ಬರುತ್ತದೆ ಎಂದು ಹೇಳಲು ಭಯ. ಏಕೆಂದರೆ ನಮ್ಮ ತಂಡದ ಸೋಲಿಗೆ ನಾನೇ ಕಾರಣವಾದರೆ ಎಂಬುದು! ಮತ್ತೇ ಯಾವುದೋ ಒಂದು ದಿನ ಅಚಾನಕ್ ಆಗಿ ನನಗೆ ಬೌಲಿಂಗ್ ಅವಕಾಶ ಸಿಕ್ಕಿತು. ಆದರೆ ನನ್ನ ಬೌಲಿಂಗ್ ಸಾಮರ್ಥ್ಯ ಇನ್ನು ಹೊರ ಬಂದಿರಲಿಲ್ಲ. ಇದೇ ಸಂದರ್ಭದಲ್ಲಿ ನಮ್ಮಲ್ಲಿ ಮತ್ತೊಂದು ನಿಯಮ ಜಾರಿಗೆ ತಂದೆವು. ಅದೇನೆಂದರೆ ಬೌಲಿಂಗ್ ಮಾಡಲಾರದವರನ್ನು ಬ್ಯಾಟಿಂಗ್‌ಗೆ ಮೊದಲು ಕಲಿಸುವುದು ಎಂದು. ಇದೆಲ್ಲ ’ದೊಡ್ಡ ಜನಗಳ’ ಓಲೈಕೆ ತಂತ್ರಗಳಾಗಿದ್ದವು. ಇಲ್ಲ ಎಂದರೆ ಅವರು ಕ್ರಿಕೆಟ್ ಆಡಲೇ ಬರುತ್ತಿರಲಿಲ್ಲ. ಇದರಿಂದ ನನಗೆ ಬ್ಯಾಟಿಂಗ್ ಮಾಡುವ ಅವಕಾಶ ಕೂಡ ಸಿಗಲು ಆರಂಭಿಸಿದವು. ನಾನು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಆರಂಭಿಸಿದೆ. ಬೌಲಿಂಗ್‌ನಲ್ಲಿಯೂ ಕೂಡ ಮಿಂಚುತ್ತಿದ್ದೆ. ಕವರಿಂಗ್ ಬೌಲಿಂಗ್‌ನ್ನು ಕೂಡ ಎರಡು ಕಡೆಗೂ ಸ್ವಿಂಗ್ ಮಾಡುವುದನ್ನು ಕಲಿತೆ. ಇದರಿಂದ ನಾನು ತಂಡಗಳಿಗೆ ಮೂರನೇ ಹೆಸರಾಗಿ ಸೇರುತ್ತಿದ್ದೆ. ಲೆಕ್ಕಕ್ಕೂ ಸಿಗದ ಆಟಗಾರನಾಗಿದ್ದ ನಾನು ಲೆಕ್ಕ ಚುಕ್ತ ಮಾಡುವ ಆಟಗಾರನಾದೆ.

ಇತ್ತ ಮನೆಯಲ್ಲಿಯೂ ಕ್ರಿಕೆಟ್ ಆಡಲು ಶುರು ಮಾಡಿದೆವು. ಮಾವ, ನಾನು, ಸುರೇಶ, ಹೇಮಂತ್, ಇಲಿಯಾರ್ಸ್, ಇಕ್ಬಾಲ್ ಹೀಗೆ. ಕ್ರಿಕೆಟ್ ಕೂಡ ನೋಡುತ್ತಿದ್ದೆವು, ಇದೇ ವೇಳೆ ಊರಲ್ಲಿ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇದ್ದುದ್ದರಿಂದ ನಮ್ಮ ಮನೆಗೆ ಕ್ರಿಕೆಟ್ ಮ್ಯಾಚ್ ನೋಡಲು ಕನಿಷ್ಠ ಪಕ್ಷ ೧೫-೨೦ ಜನ ಬರುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳು ನನಗೆ ತುಂಬಾ ಸಹಾಯ ಮಾಡುತ್ತಿದ್ದವು. ನಾನು ಟಿವಿಗಿಂತ ೩ ಅಡಿ ದೂರದಲ್ಲಿಯೇ ಕುರ್ಚಿಯಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದೆ. ಈ ಕುರ್ಚಿಗಾಗಿ ನನಗೂ ನನ್ನ ಅಜ್ಜನಿಗೂ ಕುರ್ಚಿ ಕದನವೇ ನಡೆಯುತ್ತಿತ್ತು!

ಏಳನೇ ತರಗತಿ ಬಳಿಕ ನನ್ನ ಕ್ರಿಕೆಟ್ ಸುವರ್ಣಯುಗವೇ ಪ್ರಾರಂಭವಾಯಿತು. ನಾನೇ ಅನೇಕ ಸಂದರ್ಭಗಳಲ್ಲಿ ತಂಡದ ನಾಯಕನಾಗುತ್ತಿದ್ದೆ. ಮನೆಯಲ್ಲಿಯೂ ದಿನಲೂ ಕ್ರಿಕೆಟ್ ಆಡುತ್ತಿದ್ದೆ. ಹೊರಗೆ ಬೇರೆ ಬೇರೆ ಕ್ಲಬ್‌ಗಳ ಪರವಾಗಿ ಆಡಲು ಶುರುಮಾಡಿದೆ. ಒಪನಿಂಗ್ ಬ್ಯಾಟ್ಸ್‌ಮೆನ್, ಒಪನಿಂಗ್ ಬೌಲರ್ ಆಗಿ ರೂಪುಗೊಂಡೆ. ಈ ಮಧ್ಯೆ ನಾನು ದ್ರಾವಿಡ್‌ನ ಪ್ರಭಾವಕ್ಕೆ ತುತ್ತಾದೆ. ನಾನು ಆರಂಭಿಕ ಆಟಗಾರನಾಗುವುದನ್ನು ನನ್ನ ಸ್ನೇಹಿತರು ವಿರೋಧಿಸಲಾರಂಭಿಸಿದರು! ಏಕೆಂದರೆ ನಾನು ಔಟ್ ಆಗುತ್ತಿರಲಿಲ್ಲ! ಇದರಿಂದ ಅವರಿಗೆ ಬ್ಯಾಟಿಂಗ್ ಸಿಗುತ್ತಿರಲಿಲ್ಲ. ಇತ್ತ ಮನೆಯಲ್ಲಿಯೂ ಕ್ರಿಕೆಟ್ ಆಡುವುದು ದಿನಚರಿಯ ಭಾಗವೇ ಆಗಿ ಹೋಯಿತು. ನಮ್ಮ ಅಂಗಳದಲ್ಲಿ ಎರಡು ಪಿಚ್‌ಗಳಿದ್ದವು. ನಮ್ಮ ದೊಡ್ಡ ಅಂಗಳಕ್ಕೆ ಮಳೆಗಾಲದಲ್ಲಿ ತೆಂಗಿನ ಕೊತ್ತಲಿಗೆ, ಅಡಿಕೆ ಸೋಗೆ ಹಾಕುತ್ತಿದ್ದರಿಂದ ಮತ್ತೊಂದು ಸಣ್ಣ ಅಂಗಳದಲ್ಲಿ ನಾವು ಅನಿವಾರ್ಯವಾಗಿ ಆಡುತ್ತಿದ್ದೆವು. ಆದರೆ ನನಗೆ ಕೋಪ ಬರುತ್ತಿದ್ದದ್ದು ಬೇಸಿಗೆಯಲ್ಲಿ! ಏಕೆಂದರೆ ಆಗ ನಮ್ಮ ದೊಡ್ಡ ಅಂಗಳದಲ್ಲಿ ಪೂರ್ತಿ ಅಡಿಕೆ ಇರುತ್ತಿತ್ತು. ಆಗ ನಾವು ಪುನಃ ಒಲ್ಲದ ಮನಸ್ಸಿನಿಂದ ಸಣ್ಣ ಅಂಗಳಕ್ಕೆ ನಮ್ಮ ಮೈದಾನವನ್ನು ಸ್ಥಳಾಂತರಿಸಬೇಕಿತ್ತು. ಯಾಕಾದ್ರೂ ಇಷ್ಟು ಅಡಿಕೆ ಆಗುತ್ತದೆ ಎಂದು ನಾನು ಆಗ ಶಾಪ ಹಾಕುತ್ತಿದ್ದೆ!

ನಮ್ಮ ಕ್ರಿಕೆಟ್ ಆಟದ ಹುಚ್ಚು ಜಾಸ್ತಿ ಆಗುತ್ತಿದ್ದಂತೆ ಒಂದು ದಿನ ನಮ್ಮ ಅಜ್ಜಿ ನಮ್ಮ ವಿಕೆಟ್‌ಗಳನ್ನು ಒಲೆಗೆ ಹಾಕಿದ್ರು. ಆ ವಿಷಯ ಗೊತ್ತಾಗುತ್ತಲೆ ನಾವು ಕುಟ್ಟಿ ದೊಣ್ಣೆ, ಲಗೋರಿ ಆಡಲು ಶುರು ಮಾಡಿದೆವು. ಒಂದೆರಡು ದಿನಗಳ ಕಾಲ ನಮ್ಮ ಈ ಹೋರಾಟ ಚಾಲ್ತಿಯಲ್ಲಿತ್ತು ಆದ್ರೆ ಕೊನೆಗೂ ನಮಗೆ ಕ್ರಿಕೆಟ್ ಹೊರತಾದ ಮತ್ತೊಂದು ಆಟದಲ್ಲಿ ಮಜಾ ಬರುತ್ತಿರಲಿಲ್ಲ. ಮತ್ತೆ ಸ್ಟಂಪ್ಸ್ ಮಾಡಿ ಕ್ರಿಕೆಟ್ ಆಡ ತೊಡಗಿದೆವು.

ನಮ್ಮ ಮನೆಯ ಅಂಗಳಕ್ಕೆ ತಾಕಿಕೊಂಡು ಪೊದರೆಗಳು ಇದ್ದ ಕಾರಣ ಚೆಂಡು ಅಲ್ಲಿ ಬಿದ್ದು ಕಾಣದಾಗುತ್ತಿತ್ತು. ಆಗ ಚೆಂಡು ಹುಡುಕುವ ಕಾರ್ಯಕ್ರಮ! ಕೆಲವು ಬಾರಿ ಇದು ದಿನಗಟ್ಟಲೆ ಸಾಗುತ್ತಿತ್ತು. ನನ್ನ ಕೆಲವು ಸ್ನೇಹಿತರು ಚೆಂಡು ಬಿಸಾಕಿ ಹೋಗುವ ತನಕ ನಮ್ಮ ಜೊತೆ ಇದ್ದು ಆ ಬಳಿಕ ಏನೇನೋ ಸಾಬೂಬು ನೀಡಿ ಅಲ್ಲಿಂದ ಪರಾರಿಯಾಗುತ್ತಿದ್ದರು. ನಾವು ಉಳಿದವರು ಎಲ್ಲ ದೇವರ ಹೆಸರನ್ನು ಸ್ಮರಿಸಿ, ಅಜ್ಜನಿಗೆ ಎಲೆ ಅಡಿಕೆ ಇಡುತ್ತೇವೆ ಎಂದು ಹರಕೆ ಹೊರುತ್ತಾ ಚೆಂಡು ಹುಡುಕುತ್ತಿದ್ದೆವು. ಚೆಂಡು ಸಾಗಿದ ದಿಕ್ಕು, ಅದು ಯಾವ ಕಡೆ ಹಾರಿರಬಹುದು ಎಂಬ ನಮ್ಮ ಲೆಕ್ಕಾಚಾರಗಳು ಈಗ ನೆನಪಿಸಿಕೊಂಡಾಗ ನಗು ಉಕ್ಕಿಸುತ್ತವೆ. ಅದೇಷ್ಟೋ ಬಾರಿ ಕಾಲ ಬುಡದಲ್ಲೆ ಚೆಂಡಿದ್ದರು ಕೂಡ ಇಡೀ ಪೊದರೆಯನ್ನೇ ಚೆಂಡಾಡಿದ ಬಳಿಕವೇ ಆ ಚೆಂಡು ಸಿಗುತ್ತಿತ್ತು! ಚೆಂಡು ಸಿಕ್ಕಾಗ ಅಜ್ಜನ ನೆನಪೇ ಇಲ್ಲ... ಮತ್ತೇ ಪುನಃ ಅಂದು ಚೆಂಡು ಬಿಸಾಕಿ ಹೋದರೆ ಮತ್ತೇ ಅಜ್ಜನ ನೆನಪಾಗಿ ಹರಕೆ ತೀರಿಸಿ ಮತ್ತೇ ಅಜ್ಜನಿಗೆ ಹರಕೆ...

ನಾನು ಆರಂಭದಲ್ಲಿ ಹೆಚ್ಚು ಕ್ರಿಕೆಟ್ ಆಡುತ್ತಿದ್ದದ್ದು ಮಾವ ಮತ್ತು ಸುರೇಶನ ಜೊತೆ. ಸುರೇಶ ಸ್ವಲ್ಪ ದಪ್ಪನೇ ಇದ್ದ. ನಾನು ಒಮ್ಮೆ ಹೊಡೆದ ಚೆಂಡು ಅವನ ಕಣ್ಣಿಗೆ ಬಡಿದು ಅವನು ನಂತರ ಕ್ರಿಕೆಟ್ ಆಡಲು ಬರುತ್ತಲೇ ಇರಲಿಲ್ಲ. ಇಷ್ಟರಲ್ಲಿ ನನ್ನ ಮೇಲೆ ಮತ್ತೊಂದು ಆರೋಪ ಬಂದಿತ್ತು... ಅದೇ ಕೆಲಸದವರನ್ನು ಕ್ರಿಕೆಟ್ ಆಡಿಸಿ ನಾನು ಹಾಳು ಮಾಡುತ್ತಿದ್ದೇನೆ ಎಂದು...!

ಹೈಸ್ಕೂಲ್‌ನಲ್ಲಿ ಇನ್ನು ಮಜಬೂತದ ಪ್ರಸಂಗಗಳು ನಡೆಯುತ್ತಿದ್ದವು. ಅಲ್ಲಿ ನಮ್ಮ ಪಿಟಿ ಮಾಸ್ಟ್ರಿಗೆ ಕ್ರಿಕೆಟ್ ಅಂದರೆ ಅಷ್ಟಕಷ್ಟೆ. ಅವರು ನಮಗೆ ಬ್ಯಾ ಟ್, ಸ್ಟಂಪ್ ಕೊಡುತ್ತಿರಲಿಲ್ಲ. "ಹೋಗಿ ವಾಲಿಬಾಲ್ ಆಡಿ" ಅನ್ನುತ್ತಿದ್ದರು. ನಮಗೆ ಆಗ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು ಆದರೆ ಏನು ಮಾಡಲು ಆಗುತ್ತಿರಲ್ಲಿಲ್ಲ. ಆಗ ನಾವು ಹೆಚ್‌ಎಮ್‌ನ್ನು ಭೇಟಿಯಾಗಿ ಅವರ ಮನ ಒಲಿಸಲು ಏನೆಲ್ಲ ಮಾಡಬೇಕೋ ಅದೆಲ್ಲ ಮಾಡಿ ಸ್ಟಂಪ್ಸ್, ಬ್ಯಾಟ್ ತೆಗೆದುಕೊಳ್ಳುತ್ತಿದ್ದೆವು. ಇನ್ನು ಚೆಂಡು ಮೊದಲಿನಿಂದಲೂ ನಾವೇ ಹಣ ಹಾಕಿ ತೆಗೆದುಕೊಳ್ಳುತ್ತಿದ್ದೆವು. ಈ ವಿಷಯದಲ್ಲಿ ನಮ್ಮದು ಸಹಕಾರಿ ಬ್ಯಾಂಕ್ ತತ್ವ.

ನಮ್ಮ ತಂಡ ಅದೇಷ್ಟು ಬಲಿಷ್ಠವಾಗಿತ್ತೆಂದರೆ ನಾವು ೮ನೇ ತರಗತಿಯಲ್ಲಿ ಇರುವಾಗ ೧೦ನೇ ತರಗತಿಯವರಿಗೂ ನಮ್ಮನ್ನು ಸೋಲಿಸಲಾಗುತ್ತಿರಲಿಲ್ಲ! ಈ ಸಂದರ್ಭದಲ್ಲಿ ಬಹುತೇಕ ನಾನು ಆರಂಭಿಕ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ಒವರ್‌ಗಳ ಸಂಖ್ಯೆ ಒಂದು ಅಥವಾ ಎರಡು ಇದ್ದರೆ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ ಬೇಕಿತ್ತು. ಇದಕ್ಕೆ ಕಾರಣ ನನಗೆ ಆಗ ಗೊತ್ತಿರಲಿಲ್ಲ ಆದರೆ ಈಗ ಗೊತ್ತಾಗಿದೆ. ಟೆನ್ನಿಸ್ ಬಾಲ್‌ನ ಬ್ಯಾಟಿಂಗ್ ನಿಂತಿರುವುದೇ ಪವರ್ ಸ್ಟ್ರೋಕ್‌ನ ಮೇಲೆ. ನಾನು ಶಕ್ತಿಶಾಲಿ ಹೊಡೆತಗಳ ಆಟಗಾರನಾಗಿರಲಿಲ್ಲ. ನನ್ನದೇನಿದ್ದರು ಟೆಕ್ನಿಕ್ ಅಷ್ಟೆ. ನನ್ನ ಸ್ವೀಪ್ ಮಾತ್ರ ಬಲಿಷ್ಠ ಹೊಡೆತವಾಗಿರುತ್ತಿತ್ತು. ಆದರೆ ನಮ್ಮ ಹೈಸ್ಕೂಲಿನಲ್ಲಿ ಲೆಗ್ ಸೈಡ್‌ನ ಬೌಂಡರಿ ಗೆರೆ ತುಂಬ ದೂರದಲ್ಲಿತ್ತು. ಆಲ್ಲಿ ಹೆಚ್ಚಿನ ಫಿಲ್ಡರ‍್ಸ್‌ಗಳು ಇರುತ್ತಿದ್ದರು. ಅದ್ದರಿಂದ ನನಗೆ ಕಟ್ಟಿ ಹಾಕಿದಂತಾಗುತ್ತಿತ್ತು. ಆಗ ನಾನು ಥೇಟ್ ದ್ರಾವಿಡ್ ಶೈಲಿಯಲ್ಲೆ ಮುಂದೆ ಬಂದು ಗಲ್ಲ ಕಚ್ಚಿ ಬಾಲ್‌ನ್ನು ಕವರ್‌ಡ್ರೈವ್ ಮಾಡುತ್ತಿದ್ದೆ. ಒಂದೆರಡು ರನ್ ಆಗ ಗ್ಯಾರಂಟಿ ಸಿಗುತ್ತಿತ್ತು. ಮಳೆಗಾಲದಲ್ಲಿ ಅದು ಮೂರು ರನ್ ಆಗುತ್ತಿತ್ತು! ಏಕೆಂದರೆ ನಮ್ಮ ಹೈಸ್ಕೂಲ್‌ನ ಕವರ‍್ಸ್ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿತ್ತು ಮತ್ತು ಅಲ್ಲಿ ಜಾರುತ್ತಿತ್ತು ಅದ್ದರಿಂದ ಫಿಲ್ಡಿಂಗ್ ಮಾಡಲು ಕಷ್ಟವಾಗುತ್ತಿತ್ತು!

ನಾವು ೯ನೇ ತರಗತಿಗೆ ಬಂದ ಬಳಿಕ ಟೆಸ್ಟ್ ಆಡಲು ಶುರು ಮಾಡಿದೆವು. ಒಂದು ಪಂದ್ಯದಲ್ಲಿ ನಾನು ಮೂರನೇ ಕ್ರಮಾಂಕದಲ್ಲಿ ಇಳಿದಿದ್ದೆ. ನಾವು ಪಂದ್ಯ ಗೆಲ್ಲಬೇಕು ಅಂದರೆ ೧೩೬ ರನ್ ಮಾಡಬೇಕಿತ್ತು. ನಮ್ಮ ತಂಡ ೨೯ ರನ್ನಿಗೆ ೯ ವಿಕೆಟ್ ಕಳೆದುಕೊಂಡಿತ್ತು. ನಾನು ಆ ಪಂದ್ಯವನ್ನು ಗೆಲ್ಲಿಸಿದ್ದೆ ಎಂದರೆ ಇಂದಿಗೂ ನಂಬಲಾಗುತ್ತಿಲ್ಲ...! ಅಂದು ನಾನು ಆಡಿದ್ದು ಎರಡೇ ಕಡೆಗೆ ಒಂದು ಪೈನ್ ಲೆಗ್‌ನತ್ತ ಮತ್ತೊಂದು ಕವರ‍್ಸ್‌ನತ್ತ... ನಮ್ಮಲ್ಲಿ ಫೈನ್ ಲೆಗ್‌ನ ಕಡೆ ಹೈಸ್ಕೂಲ್‌ನ ಕಟ್ಟಡವಿದ್ದುದ್ದರಿಂದ ಅತ್ತ ಚೆಂಡು ಹೋದರೆ ೨ ರನ್ ಓಡದಿದ್ದರೂ ಸಿಗುತ್ತಿತ್ತು ಹಾಗೆ ಕವರ‍್ಸ್‌ನ ಕತೆ ನಾನು ನಿಮಗೆ ಮೊದಲೇ ಹೇಳಿದ್ದೇನೆ. ಕೊನೆಯ ಎಸೆತ ಸಿಂಗಲ್ಸ್ ತೆಗೆಯುತ್ತಿದ್ದೆ. ಕೆಲ ಸಂದರ್ಭದಲ್ಲಿ ಅದು ಅಗುತ್ತಿರಲ್ಲಿಲ್ಲ. ಆದರೂ ನಾವು ಗೆದ್ದೆವು...

ನಮ್ಮ ಮನೆಗೆ ಮ್ಯಾಚ್ ನೋಡಲು ಬರುತ್ತಿದ್ದವರಲ್ಲಿ ದ್ರಾವಿಡ್‌ರನ್ನು ಇಷ್ಟ ಪಡುತ್ತಿದ್ದವರು ತುಂಬ ಕಡಿಮೆ. ‘ಅವನೇನು ಕುಟ್ಟುತ್ತಾನೆ’ ಎಂಬುದೇ ಅವರ ಭಾವನೆ. ಕೆಲವೊಮ್ಮೆ ನನಗೂ ಹಾಗೆ ಅನಿಸುತ್ತಿತ್ತು. ಆದರೆ ಆ ಬಳಿಕ ಕ್ರಿಕೆಟ್ ಆಡುತ್ತಾ ಹೋದಂತೆ ನನಗನಿಸಿದ್ದು ಕೆಂಡದ ಮೇಲೆ ನಡೆಯುವುದಕ್ಕಿಂತ ಓಡುವುದು ಸುಲಭ ಅಂದರೆ ೧೫ ಎಸೆತದಲ್ಲಿ ೩೦ ರನ್ ಮಾಡುವುದಕ್ಕಿಂತ ೩೦ ಎಸೆತದಲ್ಲಿ ೧೫ ರನ್ ಮಾಡುವುದು ಕಷ್ಟ ಎಂದು ಗೊತ್ತಾಯಿತು. ಆದರೆ ಇದು ಏಕದಿನ ಪಂದ್ಯಗಳಿಗೆ ಹೇಳಿ ಮಾಡಿಸಿದ್ದಲ್ಲ ನಿಜ. ಆದರೆ ದ್ರಾವಿಡ್ ಒಮ್ಮೆ ಸೆಟ್ ಆದರೆ ಆ ಬಳಿಕ ಈ ಬಾಲ್ ಮತ್ತು ರನ್‌ನ ನಡುವಿರುತ್ತಿದ್ದ ಅಂತರ ಕಡಿಮೆ ಆಗಿರುತ್ತಿತ್ತು. ಈ ಸಿದ್ಧಾಂತ ಮುಂದೆ ನನ್ನನ್ನು ತುಂಬ ಪ್ರಭಾವಿಸಿತು. ಏನೇ ಆಗಲಿ ಮೊದಲು ನಿಲ್ಲು, ಅಮೇಲಿನದ್ದು ಅಮೇಲೆಗೆ ಅನ್ನುವುದನ್ನು ಕಲಿತೆ. ಒಂದಲ್ಲ ಒಂದು ಕೆಟ್ಟ ಎಸೆತ ಬಂದೆ ಬರುತ್ತೆ ಆಗ ನೀನು ರನ್ ಮಾಡಬಹುದು ಹಾಗೆಯೇ ನೀನು ಒಮ್ಮೆ ಸೆಟ್ ಆದರೆ ಆ ಬಳಿಕ ಕೆಟ್ಟ ಎಸೆತವನ್ನು ಕೂಡ ನಿನ್ನ ಒಳ್ಳೆದಕ್ಕೆ ಬಳಸಿಕೊಳ್ಳಬಹುದು.

ನಾನು ನನ್ನ ಕ್ಲಬ್‌ಗೆ ಆಡಿದ ಪ್ರಥಮ ಪಂದ್ಯದಲ್ಲೆ ಮ್ಯಾನ್ ಅಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡೆ. ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನೆ ನೀಡಿದೆ.

ಆದರೆ ನನ್ನ ಹೈಸ್ಕೂಲ್ ಶಿಕ್ಷಣ ಮುಗಿದ ಬಳಿಕ ನನಗೆ ಕ್ರಿಕೆಟ್ ಆಡುವ ಅವಕಾಶ ಸಿಗುತ್ತಿರಲಿಲ್ಲ. ಕಾಲೇಜ್ ಬಿಟ್ಟು ಬರುವಾಗ ತಡವಾಗಿರುತ್ತಿತ್ತು. ಆದರೆ ಮನೆಯಲ್ಲಿ ಆಡುತ್ತಿದ್ದೆವು. ಆದರೆ ನನಗೆ ಅದು ಸಾಕಾಗುತ್ತಿರಲಿಲ್ಲ. ಡಿಗ್ರಿಗೆ ಬಂದ ಬಳಿಕವಂತೂ ಕ್ರಿಕೆಟ್ ಆಡುವುದು ಅಪರೂಪವಾಯಿತು. ಪಿಜಿಗೆ ಬಂದ ಬಳಿಕವಂತೂ ನಿಂತೇ ಹೋಯಿತು.

ಇವತ್ತು ಚೆಂಡು ಬ್ಯಾಟ್‌ಗೆ ಕನೆಕ್ಟ್ ಮಾಡಲೇ ಪರದಾಡಬೇಕಿದೆ. ಕ್ಯಾಚ್ ಹಿಡಿಯವಾಗ, ಫಿಲ್ಡ್ ಮಾಡುವಾಗ ಮೊದಲಿನ ಆತ್ಮವಿಶ್ವಾಸವಿಲ್ಲ, ಬೌಲಿಂಗ್‌ನಲ್ಲೂ ಮೊದಲಿನ ಹಿಡಿತವು ಇಲ್ಲ. ಕಳೆದ ಫೆಬ್ರ್ರುವರಿಯಲ್ಲಿ ಕನ್ನಡ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯ ಆಯೋಜಿಸಿದಾಗ ನಾನು ಆಡಲು ತುಂಬ ಕಷ್ಟ ಪಟ್ಟಿದ್ದೆ.

Tuesday, September 6, 2011

ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... !

ಇವತ್ತು ಎಲ್ಲಿಂದ ರಿಕ್ಷಾ ಹತ್ತೋದು... ನಮ್ಮೂರಿನ ರಿಕ್ಷಾಕ್ಕೂ ಇಲ್ಲಿನ ರಿಕ್ಷಾಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮೂರಲ್ಲಿ ಜೀಪಲ್ಲಿ ೧೦ ರಿಂದ ೧೫ ಜನ ಕೂತರೆ ಇಲ್ಲಿ ರಿಕ್ಷಾದಲ್ಲೇ ೧೫ ಜನ ಆರಾಮವಾಗಿ ಕೂತುಕೊಳ್ಳುತ್ತಾರೆ... ಇಲ್ಲಿಗೂ ಜೀಪ್ ಬಂದಿದ್ರೆ ಒಳ್ಳೇದಿತ್ತಲ್ಲ... ಹುಂ ಆದ್ರೆ ಇದು ಮೈದಾನ ಪ್ರದೇಶ... ಸಮತಟ್ಟಾದ ನೆಲ... ನಮ್ಮೂರು ಹೀಗೆ ಸಮತಟ್ಟಾದ ನೆಲವಲ್ಲ... ಇಲ್ಲೇ ಮಹಾಭಾರತ ನಡೆದದ್ದು... ಇಲ್ಲಿಗೆ ಕೃಷ್ಣ ಬಂದಿದ್ನಾ... ಯಾವ ರಿಕ್ಷಾ ಹತ್ತೋದು... ಇವತ್ತು ಸಂಜೆ ಕೂದಲು ತೆಗಿಬೇಕು... ಮುಂದೆ ಹೋಗಿ ಹತ್ತೋದ ಅಥವಾ ಇಲ್ಲೆ... ನೋಡುವ... ಇದೇ ರಿಕ್ಷಾ... ಅವನೇ ನಿಲ್ಲಿಸಿದ... ಸೈಡ್‌ಗೆ ಕೂರೋಕ್ಕೆ ಇವನು ಬಿಡ್ತಾ ಇಲ್ವೇ... ತೊಂದ್ರೆಯಿಲ್ಲ... ನಡುವಲ್ಲೇ ಕೂರೋಣ... ಹುಂ.. ಐದು ನಿಮಿಷ ಕೂರುವ ಸೀಟಿಗೆ ನಮ್ಮದು ಇಷ್ಟು ತಾಕಲಾಟ... ಹಾಗಾದ್ರೆ ನಾವು ರಾಜಕೀಯದವರಿಗೆ ಬೈಯ್ಯೋದು... ಇವನು ಎಡೆಯಲ್ಲಿ ಇಳಿತಾನೋ ಏನೋ... ಈ ನೋಯ್ಡಾ ಪ್ಲ್ಯಾನ್ಡ್ ಸಿಟಿ ಅಂತಾರೆ... ಆದರೂ ಇಲ್ಲಿ ಒಂದು ಕಡೆಯೂ ಚರಂಡಿ ಇಲ್ಲ.. ಮಳೆ ಬಂದಾಗ ರಂಬಾರೊಟ್ಟಿ ಆಗುತ್ತೆ... ಲಾಸ್ಟ್ ಟೈಮ್ ಆಗಿತ್ತು... ಹುಂ ಇಲ್ಲಿ ಅದೇ ಭಾರಿ ಮಳೆಯಂತೆ... ನನಗೆ ಅದು ಒಂದು ಚಮಚಾದಷ್ಟು ಮಳೆ ಅನಿಸಿತ್ತಲ್ಲಾ.... ಅದು ಬೇರೆ... ಇದು ಬೇರೆ... ನಮ್ಮೂರಿನ ರೀತಿಯೇ ಇಲ್ಲೂ ಇರೋದಾದ್ರೆ... ಇದನ್ನು ನೋಯ್ಡಾ ಎಂದು ಏಕೆ ಕರಿಬೇಕು? ಆದ್ರೂ ಇಲ್ಲಿ ಮಾರ್ಗದ ಬದಿಯೆಲ್ಲ ಗಿಡ ನೆಟ್ಟಿದ್ದಾರೆ... ಕೆಲ ಗಿಡಗಳು ಮರ ಆಗಿವೆ... ಸುಮಾರು ೪ ವರ್ಷದ ಹಿಂದೆ ನೆಟ್ಟಿರಬೇಕು... ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಮರ ಕಡಿಯುತ್ತಾರೆ... ಇಲ್ಲಿ ಗಿಡ ನೆಟ್ಟಿದ್ದಾರೆ.... ಒಂದು ಹಳೆ ನಗರವನ್ನು ಯೋಜಿತವಾಗಿ ಅಭಿವೃದ್ಧಿ ಮಾಡೋದು ಕಷ್ಟ... ಆದೇ ಹೊಸ ನಗರ ಕಟ್ಟೋದು ಎಷ್ಟು ಸುಲಭ... ಹುಂ... ಮಾಯಾವತಿ ನಿಜಕ್ಕೂ ಗ್ರೇಟ್... ತನ್ನ ಮೂರ್ತಿ ಹಾಕಲಾದರೂ ಚಂದ ಚಂದದ ಗಾರ್ಡನ್ ಮಾಡ್ತಾಳೆ... ನಮ್ಮ ಆಫೀಸ್ ಪಕ್ಕದ ಗಾರ್ಡನ್ ಎಷ್ಟು ಚಂದ ಇದೆ... ಅಲ್ಲಿ ಸೂರ್ಯ ಮುಳುಗೋದು ನೋಡೋದು ಎಷ್ಟು ಚಂದ... ಹೌದು... ನಾನು ಯೋಚನೆ ಮಾಡೋದು ಯಾವ ಭಾಷೆಯಲ್ಲಿ ಕನ್ನಡದಲ್ಲಾ... ಅಲ್ಲಾ ತುಳುವಿನಲ್ಲ... ಎರಡರಲ್ಲೂ ಮಾಡುತ್ತೇನೆ... ಇಲ್ಲ... ನನಗೆ ಹಾಗಾದ್ರೆ ಎರಡು ಮಾತೃಭಾಷೆ... ತಾಯಿ ಎಷ್ಟು ಬೇಕಾದರೂ ಇರಲಿ... ತುಂಬ ಇದ್ರೆ ತುಂಬಾ ಒಳ್ಳೆಯದು... ಆದ್ರೆ... ತಂದೆ ಒಬ್ಬನೇ ಇರಬೇಕು... ನನಗೆ ಯಾರದರೂ ಇವನು ನನ್ನ ಮಗನ ಸಮಾನ ಅಂದಾಗ ಎಷ್ಟು ಕೋಪ ಬರುತ್ತೆ... ಹಾಗೇ ಹೇಳುವವರು ಹೆಚ್ಚಾಗಿ ದೊಡ್ಡ ಲೋಫರ್‌ಗಳಾಗಿರುತ್ತಾರೆ... ಅದೇ ಅವತ್ತು ಕೃಷ್ಣಪ್ಪಣ್ಣ ಆಂದಾಗ ಎದ್ದು ಜಾಡಿಸಿ ಒದೆಯುವಷ್ಟು ಕೋಪ ಬಂದು ಸರಿ ಬೈಯ್ದಿದ್ದೆ... ನಾನು ಬೈಯ್ಯೋದು ಕಡಿಮೆ... ಆದ್ರೂ ಅವತ್ತು ಅಷ್ಟೂ.... ಇನ್ನೂ ಕೆಲ ಹುಡುಗೀರೂ ಅಣ್ಣಾ ಎಂದು ಕರೆಯುತ್ತಾರೆ.... ಅವರು ನನಗೆ ಯಾವತ್ತೂ ತಂಗಿಯರ ರೀತಿ ಕಂಡಿಲ್ಲ... ಇನ್ನೂ ನಾನು ಕೂಡ ಅವರಿಗೆ ಅಣ್ಣನ ರೀತಿಯಿಲ್ಲ ಅನ್ನೋದು ಗೊತ್ತು... ಆದ್ರೂ ನಾಟ್ಕ ಮಾಡುತ್ತಾರೆ...ಬದ್ಮಾಶ್‌ಗಳು... ನಾನು ಸಂಬಂಧಿಕರನ್ನು ಬಿಟ್ಟು ಬೇರೆ ಯಾರನ್ನೂ ಸಂಬಂಧದ ಹೆಸರಲ್ಲಿ ಕರೆದಿಲ್ಲ... ನಾನು ಅಕ್ಕ ಎಂದು ಕರೆದದ್ದು ಸಂಧ್ಯಾ, ರಶ್ಮಿ, ವಿದ್ಯಾ ಮತ್ತು ಪ್ರಸೀನಾರನ್ನು ಮಾತ್ರ... ಹೌದು... ಆ ಟೈಮ್ ನಿಜಕ್ಕೂ ನನ್ನ ಸುವರ್ಣ ಯುಗ... ನಂ ಬಸ್... ಈ ರಿಕ್ಷಾದಲ್ಲಿ ಮಳೆಯನ್ನು ಎನ್‌ಜಾಯ್ ಮಾಡೋಕ್ಕೂ ಆಗೋದಿಲ್ಲ... ಅದೇ ನಮ್ಮೂರಲ್ಲಿ ಆ ಬಸ್‌ನಲ್ಲಿ... ಕಿಟಕಿ ಬಾಗಿಲು ತೆರೆದು ಅದು ಎಂತಹ ಮಳೆ ಬಂದ್ರೂ... ಹನಿ ಹನಿ ನೀರು ಮುಖಕ್ಕೆ ಬಡಿಯುತ್ತಿದ್ದದ್ದು... ಆಗಲೇ ತಾನೇ ನನಗೂ ಅವಳಿಗೂ ಶುರುವಾಗಿದ್ದು... ನಮ್ಮೂರಿನ ಮಳೆಗೆ ಏನೋ ಚೆಲುವಿದೆ.... ಈ ಬಸ್‌ನಿಂದಾಗಿ ನನ್ನರೆಡು ಶರ್ಟ್ ಬಿಸಾಕುವ ಹಾಗೇ ಅಗಲಿಲ್ವಾ... ಆಯಿಲ್... ಹುಂ... ಆದೂ ಬ್ರ್ಯಾಂಡೆಡ್... ನನ್ನ ಮಾವನಿಗೆ ಬ್ರ್ಯಾಂಡೆಡ್ ಡ್ರೆಸ್ ಆಗಬೇಕು... ಇಲ್ಲ ಅಂದ್ರೆ ಬಿಸಾಕುತ್ತಾರೆ... ನಾನು ಸಧ್ಯ ಬ್ರ್ಯಾಂಡೇಡ್ ಡ್ರೆಸ್ ತೆಗೆದುಕೊಂಡಿಲ್ಲ... ಇನ್ನೂ ತೆಗೆದುಕೊಳ್ಳುವುದಾದರೆ ಬ್ರ್ಯಾಂಡೇಡ್ ತಗೋಬೇಕು...ಹೋ ಅವಳು ಚಂದ ಇದ್ದಾಳೆ... ನಮ್ಮ ಗಾಡಿಯೇ ಹತ್ತುತ್ತಾಳೆ... ನನ್ನ ಪಕ್ಕನೇ ಕೂ... ನೋಡು ಹುಡುಗಿಗೇ ಹೇಗೆ ಜಾಗ ಮಾಡಿಕೊಟ್ಟ... ಲೋಫರ್... ಅವಳನ್ನು ಮಧ್ಯ ಕೂರಿಸಿರುತ್ತಿದ್ದರೆ ಅವನಿಗೆ ಏನಾಗುತ್ತಿತ್ತು.... ಅವಳೇನೋ ರೆಡಿ ಇದ್ದಳು... ಇವನೇ ಮಂಗ... ಈ ಹುಡುಗೀರ ನೆರಳು ಕಂಡ್ರೇ ಸಾಕು ಹುಡುಗರು ಸ್ವಾರ್ಥಿಗಳಾಗುತ್ತಾರೆ... ಇವರ ಜನ್ಮಕ್ಕಿಷ್ಟು... ಹೊಸದು ಗಾಗಲ್ ತಗೋಬೇಕು... ಏನಿವತ್ತು ರಾಮಕೃಷ್ಣ ಮೆಸೆಜ್ ಮಾಡಿಲ್ಲ.... ಹೆಚ್ಚಾಗಿ ಆತ ಬೆಳಿಗ್ಗೆ ೬ ಗಂಟೆಗೆ ಮೆಸೆಜ್ ಮಾಡೋನು... ಏನೋ ಬ್ಯುಸಿ ಇರಬೇಕು... ಹುಂ... ಎಲ್ಲರೂ ಬ್ಯುಸಿ ಆಗುತ್ತಿದ್ದಾರೆ... ಆದ್ರೆ ನಾನು.... ಇಲ್ಲ, ಯಾರೂ ಬ್ಯುಸಿ ಆಗೋದಿಲ್ಲ... ಬ್ಯುಸಿ ಆಗೀರೋರ್ ತರ ತೋರಿಸಿಕೊಳ್ಳುತ್ತಾರೆ... ನಾನು ಮೆಸೇಸ್ ಮಾಡೋದು ಕಡಿಮೆ ಆಗಿದೆ... ಅದು ನಾನು ಬ್ಯುಸಿ ಅಂತೇನು ಅಲ್ಲ... ನಾನು ಅದೇಷ್ಟು ಬ್ಯುಸಿ ಇದ್ದರು ಪ್ರೀತಿ ಇರೋರಿಗೆ ಮೆಸೆಜ್ ಮಾಡಿಯೇ ಮಾಡುತ್ತೇನೆ.... ಬೇಕಾದ್ರೆ ನನ್ನ ಪ್ರೀತಿ ಕಡಿಮೆ ಆಗಿದೆ ಅಂದ್ರೆ ಒಪ್ಪಿಕೊಳ್ಳುತ್ತೇನೆ... ಆದ್ರೆ ಕೊಡಲು ಸಮಯವಿಲ್ಲ... ಬ್ಯುಸಿ ಅನ್ನೋ ಕಾರಣ ನಾ ಕೊಡೋದೆ ಇಲ್ಲ... ಜಸ್ಟ್ ಲವ್ ಮ್ಯಾಟರ‍್ಸ್ ಡೀಯರ‍್ಸ್... ಅಲ್ಲ ಈ ಮನುಷ್ಯರಿಗೆ ಪ್ರೀತಿ, ಗೆಳೆತನ ಮತ್ತು ಗಂಡ ಹೆಂಡ್ತಿ ಸಂಬಂಧಕ್ಕಿರುವ ವ್ಯತ್ಯಾಸವೇ ಗೊತ್ತಿಲ್ಲ... ಒಬ್ಳು ಒಳ್ಳೆ ಫ್ರೇಂಡ್ ಅಂದರೆ ಅವಳನ್ನೇ ಲವರ್ ಅಂತ ಅಂದ್ಕೋತಾರೆ ಅನಂತರ ಮದುವೆ ಆಗ್ಬೇಕು ಅಂತ ಬಯಸ್ತಾರೆ... ಕೆಲವರು ಆಗುತ್ತಾರೆ ಕೂಡ... ಅದು ಹೇಗೆ ಸಾಧ್ಯ... ಫ್ರೇಂಡ್, ಲವರ್ ಮತ್ತು ಹೆಂಡ್ತಿ ಮಧ್ಯೆ ವ್ಯತ್ಯಾಸವಿಲ್ವಾ...? A = B, B=C THERE FOR A=C ಆಗುವುದು ಮ್ಯಾತ್ಸ್‌ನಲ್ಲಿ ಮಾತ್ರ. ಭಾವನೆ, ಸಂಬಂಧಗಳ ವಿಷಯದಲ್ಲಿ ೨+ ೨=೪ ಅಂತ ಸ್ಪಷ್ಟವಾಗಿ ಕೈ ತೋರಿಸಿ ಹೇಳಲಿಕ್ಕಾಗುತ್ತಾ? ಆದರೂ ಈ ಜನಗಳು ಸಂಬಂಧಗಳನ್ನು ಕಲಸುಮೆಲೋಗರ ಮಾಡಿಕೊಂಡು ಕೊನೆಗೊಂದು ದಿನ ಪರಿತಪಿಸುತ್ತಿರುತ್ತಾರೆ... ಕರ್ಮದವರು.... ಗೆಳತಿ=ಹೆಂಡ್ತಿ .... ಎಂತಹ ಡೆಡ್ಲಿ ಕಾಂಬಿನೇಷನ್! ಈ ಕುಂಬ್ಳೆ ಬಗ್ಗೆ ನನಗೆ ಮೊದಲು ಗೌರವವಿತ್ತು... ಆದ್ರೆ ಈಗ ಎಲ್ಲ ಕಳ್ಕೊಂಡು ಬಿಟ್ಟ... ಸುಮ್ಮನಿದ್ದರೆ ಅವನ ಹುಳುಕುಗಳು ಅಲ್ಲಿಂದಲ್ಲಿಗೆ ಮುಚ್ಚಿ ಹೋಗುತ್ತಿತ್ತು... ಆದ್ರೆ ಬೇಡದಕ್ಕೆ ಕೈ ಹಾಕಲು ಹೋಗಿ ಅವನೇ ಬೇಡದವನು ಆಗುತ್ತಿದ್ದಾನೆ...ಕರ್ಮ ಕರಗುತ್ತಿದೆ ಕನಸಿನ ಬಣ್ಣ... ಈ ಸೆಟ್‌ನಲ್ಲಿ ತುಂಬ ಬೇಡದ ನಂಬರ್ ಸೇರಿಕೊಂಡಿವೆ... ಎಲ್ಲ ತೆಗಿಬೇಕು... ಆಗ ಒಂಚೂರು ಸುಲಭವಾಗುತ್ತೆ... ಮೊನ್ನೆಯಷ್ಟೆ ಒಂದಷ್ಟು ಹೆಸರನ್ನು ಡಿಲಿಟ್ ಮಾಡಿದ್ದೆ....ಹತ್ತಿರ ಹತ್ತಿರ ೯೦೦ ನಂಬರ್‌ಗಳಿದ್ದವು... ಇನ್ನೀಗ ಕೆಲವು ಇವೆ.... ಈ ಮನುಷ್ಯರ ಹಣೆ ಬರಹ ಗೊತ್ತಾಗುವುದು ಸಾವಿನಲ್ಲಿ... ಇದರಲ್ಲಿ ಈಗ ಏಳೆಂಟು ಅಕ್ಷತಾನವರ ನಂಬರ್ ಇದೆ... ನಾನು ರೆಗ್ಯುಲರ್ ಆಗಿ ಕಾಂಟ್ಯಾಕ್ಟ್ ಇಟ್ಟುಕೊಂಡಿರುವುದು ಇಬ್ಬರಲ್ಲಿ ಮಾತ್ರ... ಸೋ ಉಳಿದ ನಂಬರ್‌ಗಳು ಯಾಕೆ.... ಡಿಲೀಟ್ ಮಾಡೋದೆ.... ಹೌದು ಇಲ್ಲ ಅಂದರೆ ಕೆಲವು ಸಲ ತಪ್ಪಿ ಮೆಸೇಜ್ ಹೋಗುತ್ತೆ... ಆ ರೀತಿ ಆಗಬಾರದು... ಅಯ್ಯೋ ಇನ್ನು ಇಲ್ಲಿ ಇಳಿಬೇಕಾ.... ಹುಂ ನೆಕ್ಸ್ಟ್ ಎಲ್ಲಿ ರಿಕ್ಷಾ ಹತ್ತುವುದು... ಕ್ರಾಸ್‌ನಲ್ಲಿಯಾ ಅಥವಾ ಸ್ಟ್ಯಾಂಡ್‌ನಲ್ಲಿಯಾ... ನೋಡೋಣ.... ಅಲ್ಲಿಗೆ ಹೋಗಿ... ಹೋ ಕ್ರಾಸ್‌ನಲ್ಲೇ ರಿಕ್ಷಾ ರೆಡಿ ಇದೆ... ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... ನಾನು ಎಷ್ಟೇ ಕೆಟ್ಟವನಾದರೂ ಕೂಡ ವರ್ಷಗಟ್ಟಳೆ ಶಿಕ್ಷೆ ಪಡೆಯುವ ಯಾವ ಕೆಲಸ ಕೂಡ ಮಾಡುತ್ತಿರಲಿಲ್ಲ... ಅದು ಗ್ಯಾರಂಟಿ... ಆದರೆ ಒಳ್ಳೆ ಹುಡುಗ ಎಂದು ಕರೆಸಿಕೊಂಡು ೪ ವರ್ಷಗಳ ಕಾಲ ಅದೇಷ್ಟು ಹಿಂಸೆ ಪಟ್ಟಿಲ್ಲ... ಆದರೂ ನಾನು ಅದರಿಂದ ತುಂಬ ಗಟ್ಟಿಯಾದೆ ಎಂದೆನಿಸುವುದಿಲ್ವಾ.... ಹುಂ ಗಟ್ಟಿಯೇನೋ ಆದೆ... ಆದರೆ ಕಳಕೊಂಡದ್ದು... ನಾನು ಆಪಾತ್ರರಿಗೆ ಒಂದು ಪೈಸೆಯೂ ಕೊಡಬಾರದು ಎಂದೆ ನಿರ್ಧರಿಸಿಕೊಂಡವನು... ಈಗ ಯಾವೊಂದು ಚಿಂತೆಯಿಲ್ಲದೆ... ಆಬ್ಬಾ ಆರಾಮ... ಹೇ... ಇದರರ್ಥ ನಾನು ಈ ಹಿಂದೆ ಚಿಂತೆ ಮಾಡುತ್ತಿದ್ದೆ ಅಂತ ಆಗುತ್ತಾ...? ಇಲ್ಲ ನನಗೆ ಸ್ಪಷ್ಟವಾಗಿ ಗೊತ್ತಿರುತ್ತೆ... ಯಾವ ಸಂಬಂಧ ಎಲ್ಲಿ ತನಕ ಅಂತ... ನಾನು ಪ್ರವಾದಿ ರೀತಿಯಲ್ಲಿ ಈ ೮ ತಿಂಗಳ ಹಿಂದೆಯೇ ಅವಳ ಜೊತೆ ಏಪ್ರಿಲ್‌ನಲ್ಲಿ ನಮ್ಮ ಸಂಬಂಧ ಮುರಿದು ಬೀಳುತ್ತೆ ಅಂತ ಹೇಳಿರಲಿಲ್ವಾ... ಹಾಗೆಯೇ ಆಯಿತಲ್ವಾ? ಈ ಕಾರಣಕ್ಕೆ ಮತ್ತು ಈ ಧೈರ್ಯದಿಂದಲೇ ಇರಬೇಕು ನಾನು ಸಿಕ್ಕಾಪಟ್ಟೆ ಫ್ಲರ್ಟ್ ಮಾಡುವುದು... ವೇದದ ಸಾಲಿರಬೇಕು... ಯಾವುದಕ್ಕೂ ಅಂಟಿಕೊಳ್ಳಬಾರದು... ಅಂಟಿಕೊಳ್ಳುವಿಕೆಯೇ ದುಃಖಕ್ಕೆ ಕಾರಣ ಅಂತ... ಅದನ್ನೇ ಶಿರಸಾ ವಹಿಸಿ ಪಾಲಿಸಿಕೊಂಡು ಬರುತ್ತಿದ್ದೇನೆ... ಇವತ್ತು ನನ್ನಿಂದ ಯಾರು ದೂರವಾದರೆ ನನಗೆ ನೋವಗಬಹುದು.... ಯಾರಿಲ್ಲ... ಆದರೆ ಎಲ್ಲರೂ ದೂರವಾದರೆ ಖಂಡಿತಾ ನೋವಾಗುತ್ತದೆ... ನನ್ನ ಪರ್ಯಾಯ ಮೂಲಗಳು ಗಟ್ಟಿಯಾಗಿವೆ... ಆದ್ದರಿಂದ ಡೊಂಟ್ ವರಿ... ಈಗ ಏನೇ ಆಗಲಿ ಹುಚ್ಚು ಹಿಡಿದವರ ರೀತಿ ಓದುತ್ತಿದ್ದೇನೆ... ಓದುವುದಂತೂ ನಾನು ತುಂಬ ಮಾಡುತ್ತಿದ್ದೇನೆ ಆದರೆ ಆಧ್ಯಯನ... ಇಲ್ಲವೇ ಇಲ್ಲ... ಇದು ಬದಲಾಗಬೇಕು... ಅಲ್ಲ ಹುಡುಗಿಯರ ಎಫ್‌ಬಿ ಸ್ಟೇಟಸ್ ಮೆಸೆಜ್, ಪೊಟೋಗಳಿಗೆ ಯಾಕೆ ಅಷ್ಟು ಕಾಮೆಂಟ್, ಲೈಕ್ಸ್ ಬರುತ್ತೆ... ಹುಂ ನಾನು ಆ ಮಟ್ಟಿಗೆ ಇಂದಿಗೂ ಪ್ರಾಮಾಣಿಕತೆ ಉಳಿಸಿಕೊಂಡಿದ್ದೇನೆ... ನನಗೆ ಖುಷಿ ಅದ್ರೆ ಮಾತ್ರ ಕಾಮೆಂಟ್ ಹಾಕುತ್ತೇನೆ... ಇಲ್ಲ ಅಂದ್ರೆ ಸುಮ್ಮನಿರುತ್ತೇನೆ... ಟೀಕೆ ಅಥವಾ ಸಲಹೆ ಯಾರಿಗೂ ಬೇಡ... ಅಲ್ಲ... ನಾವು ನಮ್ಮ ಅಭಿಪ್ರಾಯ ಅಥವಾ ಪೊಟೋ ವನ್ನು ೪ ಜನರ ಮುಂದೆ ಇಟ್ಟ ಮೇಲೆ ಪ್ರತಿಯೊಂದಕ್ಕೂ ನಾವು ಸಿದ್ಧರಿರಬೇಕು... ಅದು ಬಿಟ್ಟು ಎಲ್ಲರೂ ನಮ್ಮನ್ನು ಹೊಗಳಲೇ ಬೇಕು, ನಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಬಯಸುವುದು ಎಷ್ಟು ಸರಿ? ಅಂತವರು ಸೊಷಿಯಲ್ ನೆಟ್‌ವರ್ಕ್‌ಗಳಲ್ಲಿ ಏನನ್ನೂ ಅಪ್‌ಲೋಡ್ ಮಾಡುವ ಉಸಾಬರಿಗೆ ಹೋಗಬಾರದು... ನಾನ್‌ಸೆನ್ಸ್... ಈ ರಿಕ್ಷಾದವ ತುಂಬಾ ಫಾಸ್ಟ್ ಆಗಿ ಹೋಗುತ್ತಿದ್ದಾನೆ... ಆದರೆ ಒಳ್ಳೆ ಡ್ರೈವಿಂಗ್... ಹೋಯ್ ನಾವು ಇಳಿಯೋ ಪ್ಲೇಸ್ ಬಂತಲ್ಲ... ಚಿಲ್ಲರೇ ಕೈಯಲ್ಲೇ ಇದೆ..

Saturday, August 20, 2011

Rakesh... rest in peace...!

ಕಾಡುವ ಬೆಟ್ಟಗಳು... ಕಾಡುತ್ತಲೆ ಎದೆಯ ಗರ್ಭದೊಳಗೆ ಭಾವ ಚಿತ್ತಾರ ಹೆಣೆಯುವ ಕಣಿವೆಗಳು... ಯಾಕೋ... ಬೇಡ್ವೇ ಬೇಡ... ಈ ಜಗತ್ತು... ಬಾ ನನ್ನೊಳಗೆ... ನನ್ನವನಾಗಿ ಬಿಡು... ನೀನು ನನ್ನೊಳಗೆ ಸೇರಿಕೊಂಡು ಬಿಡು... ಎಂದು ಈಗಲು ಪಿಸುಗುಡುತ್ತಿರುವ ಆ ಹೂವು... ಹರಿದು ಹೋಗಲಿ ನಿನ್ನೊಳಗಿನ ಆ ಕಲ್ಮಶ... ಆಗು ನೀ ನನ್ನ ವಶ... ನನ್ನಂತೆ ಶುದ್ಧ .. ಪರಿಶುದ್ಧ... ಪರಿಶುಭ್ರ.. ಎಂದು ಜುಳು ಜುಳು ನಾದಗೈಯುತ್ತ ಮನವ ತೋಯಿಸಿದ್ದ ಸಲಿಲ ದಾರಿ, ಹೆದ್ದಾರಿಗಳು... ಹಸಿರು, ಬರಡು... ಒಂದು ಗೊತ್ತಾಗುತ್ತಿಲ್ಲ... ಗೊತ್ತಾಗುವುದು ಬೇಡ... ಹೀಗೇನೆ ಆ ನಶೆ ನನ್ನೊಳಗೆ ಇಂಗಿ ಇಂಗಿ... ಈಗಲೂ ನೆನಪಿಸಿಕೊಂಡಾಗ, ನೆನಪಿಸಿಕೊಳ್ಳುತ್ತಿರುವಾಗ ಬದುಕು ಸಂಭ್ರಮ... ಬದುಕೇ ಸಂಭ್ರಮ...!

ನೆನಪಿದೆ, ನದಿಗುಂಟ ನಡೆದ ಹೆಜ್ಜೆ, ಜೊತೆಗಿದ್ದ ಕನಸು, ನಾ ಜೊತೆ ಬರಬೇಡ ಎಂದಾಗ ತುಂಬಿಬಂದಿದ್ದ ಆ ಕಣ್ಣಾಲಿ... ಮೊನ್ನೆ ದೆಹಲಿಯ ಘಾಟು ವಾಸನೆ ನನ್ನ ಸುತ್ತ ಸುತ್ತುತ್ತ ನನ್ನೊಳಗೆ ಇಳಿಯುತ್ತಿರುವಾಗ ಕರೆ ಮಾಡಿದ್ದ ಆತ್ಮೀಯ ಗೆಳತಿಯೊಬ್ಬಳ ಮಾತು.. "ರಾಕೇಶ್, ಇದು ನನ್ನ ಕೊನೆಯ ಕರೆ, ಪ್ಲೀಸ್... ನನಗೆ ಮದುವೆ ಫಿಕ್ಸ್ ಆಗಿದೆ... ನನ್ನ ಹುಡುಗ ತುಂಬ ಸ್ಟ್ರೀಕ್ಟ್... ನಾನು ನನ್ನ ಹುಡುಗನಿಂದ ಏನು ಪಡೆದುಕೊಂಡರು ಅದು ನಾ ಕಳೆದುಕೊಳ್ಳುವ ನಿನಗೆ ಸಮನಾಗಲಾರದು" What a dialogue...! ಎಂದು ಮನಸ್ಸೊಳಗೆ ಅಂದು ಕೊಂಡೆ... ಯಾಕೋ ಇಂತಹ ಮಾತುಗಳು ಈಗೀಗ ಮನಸ್ಸಿಗೆ ನಾಟುತ್ತಿಲ್ಲ... ಮತ್ತೇ ಮತ್ತೇ Terrible beauty... ಲೇಹ್ ಮನಸ್ಸ ಪರದೆಯ ಮೇಲೆ ಮಂಜಾಗಿ ಕೂರುತ್ತದೆ... ಇಬ್ಬನಿಯಾಗಿ.... ಜಿಟಿಜಿಟಿ ಹನಿಯಾಗಿ... ಸೋನೆಯ ಮಳೆಯಾಗಿ ಮತ್ತು ರುದ್ರ ಭಯಂಕರ ಗುಡುಗು ಸಿಡಿಲಾಗಿ.... ಅಲ್ಲಿನ ಪೃಕ್ರತಿಯದ್ದು ತಾಯಿ ಪ್ರೀತಿ... ಒಡಲು ಬರಡಾಗಿದ್ದರು ಪ್ರೀತಿ ಬಯಸುವ ಮನಸ್ಸಿಗೆ ಅದು ನಿತ್ಯ ನೂತನ ತೋರಣ... ಕಾರ್ಮೋಡದ ಅಂಚಿನಿಂದ ನುಸುಳಿ ಬೆಳಕೀಯುವ ಹೊಂಗಿರಣ....

ಮನುಷ್ಯನ ಆರೋಗ್ಯಕ್ಕೆ ಆಹಾರ, ನಿದ್ದೆ ಬಹಳ ಮುಖ್ಯ... ಇವೆರಡರಲ್ಲಿ ಒಂದು ಹೆಚ್ಚು ಕಡಿಮೆ ಆದರೂ ಒಂದಿಲ್ಲೊಂದು ಎಡವಟ್ಟು ಶತಸಿದ್ಧ.... ನಿಮಗೆ ಗೊತ್ತಿರಲಿ, ನಾವು ಮನಾಲಿಯಲ್ಲಿ ಶುಕ್ರವಾರ ಮುಂಜಾನೆ ಒಂಭತ್ತು ಗಂಟೆಗೆ ಇಳಿದಾಗ ಸರಿಯಾಗಿ ನಿದ್ದೆ ಮತ್ತು ಆಹಾರವಿಲ್ಲದೆ ಹೆಚ್ಚು ಕಡಿಮೆ 48 ಗಂಟೆ ಆಗಿತ್ತು...! ಆದರೂ ಶನಿವಾರ ಮುಂಜಾನೆ 2 ಗಂಟೆ ತನಕ ಸುಸ್ತು, ನಿದ್ದೆ ಅನ್ನುವುದು ನಮ್ಮ ಬಳಿಯೂ ಸುಳಿದಿರಲಿಲ್ಲ... ಅದೂ ಶುಕ್ರವಾರ ಹಗಲು ಸುಮಾರು 10 ಕಿ ಮೀನಷ್ಟು ನಡೆದಿದ್ದರು... ಇಂತಹ ರಮಣೀಯತೆಯನ್ನು, ಉಲ್ಲಾಸವನ್ನು ಪೃಕೃತಿಯ ಸೌಂದರ್ಯ ಎಂದು ಕರೆಯುವುದು ನನಗೆ ಉಚಿತವಾಗಿ ಕಾಣಿಸುವುದಿಲ್ಲ... ಅದ್ದರಿಂದ ಇದು ಪೃಕೃತಿ ಪ್ರೀತಿ... ಮೊಗೆದಷ್ಟು ಬತ್ತದ, ಬೇಕಾಗುವ ಜೀವ ಗಂಗೆ...!



ಈಗ... ಈಗ... ಈ ಕ್ಷಣವೇ ಮತ್ತೆ ಅಲ್ಲಿಗೆ ಹೋಗಬೇಕು ಎಂದೆನ್ನಿಸುತ್ತದೆ.... ಹೊರಟೇ ಬಿಡೋಣ ಎಂದೆನ್ನಿಸುತ್ತದೆ... ನಾ ಹೊರಟೇ ಬಿಟ್ಟರೆ... ಬಂಧ ಮುಕ್ತನಾಗುತ್ತೇನೆ... ಬಂಧ ಮುಕ್ತನಾಗುವುದೆಂದರೇ ಏನು... ಪಲಾಯನವಾದವೇ ಅಲ್ಲ ಜೀವನದ ಅಂತಿಮ ಗುರಿಯೇ? ಒಂದು ಗೊತ್ತಾಗುತ್ತಿಲ್ಲ... ಇಲ್ಲ ನಾನು ಪಲಾಯನವಾದಿಯಲ್ಲ... ಜೀವನದ ಅಂತಿಮ ಆಸೆ ಗುರಿ ಈಡೇರಿಸಿಕೊಂಡದ್ದೆ ಆದರೆ ಮುಂದಿನ ದಿನಗಳಿಗೆ ನಾ ಅರ್ಥ ನೀಡುವುದಾದರು ಹೇಗೆ... ನಾಗರಿಕ ಪ್ರಪಂಚದ ಜೇಡರ ಹುಳ ಸೊಗಸಾಗಿ ನೇಯ್ದ ಬಲೆಯೊಳಗೆ ಸಿಳುಕಿ ಒದ್ದಾಡುತ್ತಿದ್ದೇನೆ... ಅ ಒದ್ದಾಟವನ್ನೇ ನಾ ಬದುಕುವುದು, ಹೋರಾಡುವುದು, ಕೆರಿಯರ್ ಅಂತ ಅಂದುಕೊಂಡಿದ್ದೇನೆ... Rakesh... rest in peace...!

Wednesday, August 3, 2011

ಈ ಕಥೆ ಮುಂದಿನ ರಾಜಕಾರಣಿಗಳಿಗೆ ಒಂದು ಪಾಠವಾಗಲಿ ಎಂಬುದಷ್ಟೆ ಈಗ ಉಳಿದಿರುವ ಆಶಯ

ಅದು ೧೯೬೦ನೇ ದಶಕದ ಕೊನೆಯ ಭಾಗ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವೆಂಬ ಪುಟ್ಟ ಪಟ್ಟಣದಲ್ಲಿ ಬೂಕನೆಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಎಂಬ ವ್ಯಕ್ತಿ ಒಂದು ಅಕ್ಕಿ ಮಿಲ್‌ನಲ್ಲಿ ಸಾಮಾನ್ಯ ಗುಮಾಸ್ತನಾಗಿ ತಿಂಗಳಿಗೆ ಕೇವಲ ೧೩೦ ರೂ ಸಂಬಳ ಪಡೆದುಕೊಂಡು ದಿನ ಸಾಗಿಸುತ್ತಿದ್ದ. ಅಷ್ಟರಲ್ಲೇ ಆ ವ್ಯಕ್ತಿ ಒಂಚೂರು ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತನಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕನಾಗಿ, ಜನಸಂಘದ ಮುಖಂಡನಾಗಿ, ಆ ಬಳಿಕ ಶಿಕಾರಿಪುರ ಪುರ ಸಭೆಯ ಸದಸ್ಯನಾಗಿ, ತುರ್ತು ಪರಿಸ್ಥಿತಿ ಘೋಷಿಸಿದ ಅದಕ್ಕೆ ಸಡ್ಡು ಹೊಡೆದ ಹೋರಾಟಗಾರನಾಗಿ, ರಾಜ್ಯದಲ್ಲಿ ಬಿಜೆಪಿಯ ಮುಖವಾಣಿಯಾಗಿ, ರೈತಾಪಿ ಜನರ ದನಿಯಾಗಿ, ರಾಜ್ಯದ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತ ಕತೆ ಈ ದೇಶದ ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಮುಕುಟ ಪ್ರಾಯವಾದದ್ದಾಗಿರಬೇಕಾಗಿತ್ತು. ಆದರೆ ಈ ನಾಡಿನ ದುರದೃಷ್ಟವೆಂದರೆ ಆ ವ್ಯಕ್ತಿ ಇಂದು ಈ ನಾಡು ಕಂಡು ಕೇಳರಿಯದ ರಾಕ್ಷಸ ರಾಜಕಾರಣದ ವಾರಸುದಾರನಾಗಿ ಬಿಟ್ಟಿದ್ದಾರೆ. ಪ್ರಜಾಪ್ರಭುತ್ವದ ಚೆಲುವನ್ನು ಹೀರಿದ ಬಂದಣಿಕೆಯಾಗಿ ಇತಿಹಾಸದ ಪುಟ ಸೇರಿದ್ದಾರೆ.

ಅಪನಂಬಿಕೆ, ಸ್ವಜನಪಕ್ಷಪಾತ, ಅಧಿಕಾರದ ಮೋಹ, ಇನ್ನೊಬ್ಬರ ಕಾಲೆಳೆಯುವ ಚಾಳಿ, ಭಟ್ಟಂಗಿಗಳ ಪಟಾಲಂ ಈ ಪಂಚ ಅನಿಷ್ಠ ಗುಣಗಳಲ್ಲಿ ಒಂದು ಗುಣವಿದ್ದರು ಕೂಡ ಒಬ್ಬ ವ್ಯಕ್ತಿಯ ಬದುಕು ಪಾತಳ ಮುಖಿ ಅಗುವುದರಲ್ಲಿ ಅನುಮಾನವಿಲ್ಲ. ಅಂತಹದ್ದರಲ್ಲಿ ಈ ಪಂಚ ಗುಣಗಳನ್ನೆ ತಮ್ಮ ನಡತೆಯಾಗಿಸಿಕೊಂಡಿವವರು ನಾಯಕರಾಗಿ ಬಿಟ್ಟರೆ ಅಥವಾ ನಾಯಕರೆಂದು ಕರೆಸಿಕೊಂಡರೆ ಅವರು ಮಾತ್ರವಲ್ಲ ಅವರಿರುವ ಸಮಾಜ ಅಥವಾ ಪರಿಸರ ಗಬ್ಬೆದ್ದು ಹೋಗುತ್ತದೆ ಎಂಬುದಕ್ಕೆ ಬಿ ಎಸ್ ಯಡಿಯೂರಪ್ಪ ಮತ್ತು ಕರ್ನಾಟಕದ ರಾಜ್ಯ ರಾಜಕೀಯವೇ ಸಾಕ್ಷಿ.

ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಒಂದಲ್ಲ ಒಂದು ಎಡವಟ್ಟನ್ನು ಮಾಡಿಕೊಂಡು ಬಂದಿದ್ದರು. ಆಗ ನಾಡಿನ ಪ್ರಾಜ್ಞರು, ಪತ್ರಿಕೆಗಳು ಅವರನ್ನು ಎಚ್ಚರಿಸುವ, ಬಡಿದೆಬ್ಬಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದವು. ಆದರೆ ಯಡಿಯೂರಪ್ಪನವರ ಅವರಿಗೆಯೇ ಮಂಕು ಬೂದಿ ಎರಚುವ ಪ್ರಯತ್ನವನ್ನು ಮಾಡಿದರೆ ಹೊರತು ತಾವು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿಲ್ಲ. ’ಮಾಡಿದ್ದುಣ್ಣೋ ಮಾರಾಯ’ ಎನ್ನುವಂತೆ ಈಗ ಅವರು ಮಾಡಿದ ತಪ್ಪುಗಳ ಫಲವನ್ನೇ ಉಣ್ಣುತ್ತಿದ್ದಾರೆ ಮತ್ತು ರಾಜ್ಯದ ಜನರಿಗೂ ಆ ಕಹಿಯನ್ನು ಉಣಿಸುವ ಪ್ರಯತ್ನ ಮಾಡುತ್ತಿದ್ದಾರೆ.

ತಮ್ಮದು ಕಂಡು ಕೇಳರಿಯದ ಸರ್ಕಾರವಾಗಲಿದೆ ಎಂದು ಹೇಳಿಕೊಂಡು ೨೦೦೮ರ ಮೇ ೩೧ರಂದು ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅನಂತರದ ೩೮ ತಿಂಗಳಲ್ಲಿ ದೇಶದ ಜನತೆ ಈ ವರೆಗೆ ’ಕಂಡು ಕೇಳರಿಯದ’ ತಪ್ಪು ಕಾರಣಗಳಿಂದಾಗಿಯೇ ಸುದ್ದಿಯಲ್ಲಿದ್ದಾರೆ.

ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ಇದು ಗುಂಡು ಹಾಕುವ ಸರ್ಕಾರ ಎಂಬ ಇಮೇಜ್‌ನ್ನು ಪಡೆದುಕೊಂಡಿತ್ತು. ಆ ಬಳಿಕ ಕೆಜಿಎಫ್ ಶಾಸಕ ವೈ ಸಂಪಂಗಿ ಲಂಚ ಪ್ರಕರಣ, ಭೂ ಹಗರಣಗಳ ಸರಣಿ, ಅಪರೇಷನ್ ಕಮಲ, ಭಿನ್ನಮತ, ಸಂಪುಟ ವಿಸ್ತರಣೆ ಕಸರತ್ತು, ರಾಜ್ಯಪಾಲರೊಂದಿಗಿನ ಗುದ್ದಾಟ, ಬಿಜೆಪಿ ಶಾಸಕರಾದ ಹಾಲಪ್ಪ ಮತ್ತು ರೇಣುಕಾಚಾರ್ಯ ನಡೆಸಿದ ಅನಾಚಾರ, ಮಠ ಮಂದಿರಗಳಿಗೆ ಹಣ, ಚರ್ಚ್ ದಾಳಿ, ಆಣೆ ಪ್ರಹಸನ, ಲೋಕಾಯುಕ್ತರ ರಾಜೀನಾಮೆ, ಲೋಕಾಯುಕ್ತರ ಅಕ್ರಮ ಗಣಿ ವರದಿ ಸೋರಿಕೆ, ಲೋಕಾಯುಕ್ತರ ದೂರವಾಣಿ ಕದ್ದಾಲಿಕೆ ಪ್ರಕರಣ... ಹೀಗೆ ಒಂದಲ್ಲ ಒಂದು ಕೆಟ್ಟ ಕಾರಣಗಳಿಂದಲೇ ಸರ್ಕಾರ ಮತ್ತು ರಾಜ್ಯ ಬಿಜೆಪಿ ಪತ್ರಿಕೆಗಳ ಮುಖಪುಟದಲ್ಲಿ ಅದ್ಯ ಸ್ಥಾನ ಪಡೆಯುತ್ತ ಸಾಗಿತ್ತು. ಇಷ್ಟೆಲ್ಲ ಸಮಸ್ಯೆಗಳು ಸುತ್ತಿಕೊಂಡಿರುವಾಗ ಅಭಿವೃದ್ಧಿ ಕೆಲಸ ನಡೆಸಲು ಪುರುಸೊತ್ತು ಇರಲು ಹೇಗೆ ಸಾಧ್ಯ?

ರಾಜ್ಯದ ಇಂದಿನ ದುಸ್ಥಿತಿಗೆ ಸರ್ಕಾರದ ಪಾಲು ಎಷ್ಟಿದೆಯೋ ಅಷ್ಟೆ ಪಾಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿವೆ. ಮೂರನ್ನು ಬಿಟ್ಟ ಈ ಮೂರು ಪಕ್ಷಗಳಿಂದಾಗಿ ರಾಜ್ಯದ ಹೆಸರಿಗೆ ರಾಷ್ಟ್ರ ಮಟ್ಟದಲ್ಲಿ ಭಾರಿ ಮಸಿಯೇ ಮೆತ್ತಿಕೊಂಡಿದೆ. ಬಳ್ಳಾರಿಯತ್ತ ಪಾದಯಾತ್ರೆ ಹೊರಟು ಬಳಲಿದ ಕಾಂಗ್ರೆಸಿಗರು ಮೊನ್ನೆ ಮೊನ್ನೆ ’ಹಳ್ಳಿ ಕಡೆಗೆ ನಮ್ಮ ನಡಿಗೆ’ಎಂದು ಹೇಳಿಕೊಂಡು ಹಳ್ಳ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಅತ್ತ ಕುಮಾರಸ್ವಾಮಿ ಮತ್ತವರ ತಂದೆ ದೇವೇ ಗೌಡರ ಜೆಡಿಎಸ್ ತನ್ನ ಹಾರಾಟವನ್ನೆ ಹೋರಾಟವೆಂದು ಭಾವಿಸಿಕೊಂಡಿದೆ. ರಾಜ್ಯದಲ್ಲಿ ಲಕ್ವ ಹೊಡಿಸಿಕೊಂಡಿರುವ ಈ ಪಕ್ಷಗಳಿಂದಾಗಿ ಬಿಜೆಪಿ ೨೦೦೯ರ ಲೋಕಸಭೆ ಚುನಾವಣೆ ನಡೆದಾಗ ೨೮ರಲ್ಲಿ ೧೯ ಸ್ಥಾನ, ೨೪ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ೧೯ ಸ್ಥಾನ ಗೆದ್ದುಕೊಳ್ಳುವಲ್ಲಿ ಶಕ್ತವಾಯಿತು. ಅದೇ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಮತ್ತು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿನ ಗೆಲುವು ಯಡಿಯೂರಪ್ಪರನ್ನು ಲಗಾಮಿಲ್ಲದ ಕುದುರೆಯನ್ನಾಗಿಸಿತ್ತು.

ಇದೆಲ್ಲದರ ಫಲವಾಗಿ ಮತ್ತು ಅನಂತ್ ಕುಮಾರ್‌ರ ಕುತಂತ್ರದ ಅರಿವಿದ್ದ ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪರ ಬೆಂಬಲಕ್ಕೆ ನಿಂತಿತು. ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಯಡಿಯೂರಪ್ಪರ ಬಗ್ಗೆ ಮೃದು ದೋರಣೆ ಹೊಂದಿದ್ದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯಂತು ಯಡಿಯೂರಪ್ಪರನ್ನು ಯಾವುದೇ ಲಜ್ಜೆಯಿಲ್ಲದೆ ಸಮರ್ಥಿಸಿ ಕೊಂಡರು. ಇತ್ತ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಸುಷ್ಮಾ ಸ್ವರಾಜ್ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಯಡಿಯೂರಪ್ಪರ ವಿರೋಧಿ ಪಾಳಯವಾಗಿದ್ದ ರೆಡ್ಡಿ ಬಣದ ಜೊತೆ ಗುರುತಿಸಿಕೊಂಡಿದ್ದರು. ಇವರಲ್ಲಿ ಯಾರು ಕೂಡ ಯಡಿಯೂರಪ್ಪರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಲಿಲ್ಲ. ಇದ್ದುದ್ದರಲ್ಲಿ ಎಲ್ ಕೆ ಅಡ್ವಾಣಿ ಒಬ್ಬರೇ ಯಡಿಯೂರಪ್ಪನವರ ಬಗ್ಗೆ ಖಡಕ್ ಆಗಿ ಮಾತನಾಡಿದ್ದರು. ಪಕ್ಷದ ದೊಡ್ಡವರ ಸಣ್ಣತನಗಳನ್ನು ಚೆನ್ನಾಗಿ ಅರಿತುಕೊಂಡ ಯಡಿಯೂರಪ್ಪ ಈಗ ಅವರನ್ನು ಥಕಥಕ ಕುಣಿಸುತ್ತಿದ್ದಾರೆ.

ಯಡಿಯೂರಪ್ಪ ಕೆಲವು ಕುತಂತ್ರಗಳನ್ನು ಅತ್ಯಂತ ಚಾಣಕ್ಷತೆಯಿಂದ ಹೆಣೆದಿದ್ದರು. ಆದರೆ ಕೆಲವು ಸಂದರ್ಭದಲ್ಲಿ ಉಗುರಿನಿಂದ ಹೋಗುವಂತದ್ದಕ್ಕೆ ಕೊಡಲಿ ಹಿಡಿದುಕೊಂಡರು. ದೇವೇ ಗೌಡರ ಕಡು ವಿರೋಧಿಯಾಗಿರುವ ಪುಟ್ಟ ಸ್ವಾಮಿ ಗೌಡರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡು ಆ ಕುಟುಂಬದ ಮತ್ತಷ್ಟು ದ್ವೇಷವನ್ನು ಕಟ್ಟಿಕೊಂಡರು. ಕುಮಾರಸ್ವಾಮಿಯವರಿಂದ ಹಣ್ಣು ಗಾಯಿ ನೀರು ಗಾಯಿಯಾಗುವಷ್ಟು ಹಗರಣಗಳ ಆರೋಪ ಎದುರಿಸಿದರು. ತಮ್ಮ ಅಪನಂಬಿಕೆಯಿಂದಾಗಿ ಪಕ್ಷದೊಳಗೆ ಮತ್ತಷ್ಟು ಶತ್ರುಗಳು ಹುಟ್ಟಿಕೊಳ್ಳುವಂತೆ ಮಾಡಿದರು. ಇಂದು ಯಡಿಯೂರಪ್ಪರ ಜೊತೆ ೬೦ಕ್ಕೂ ಮಿಕ್ಕು ಶಾಸಕರು, ೧೦ಕ್ಕೂ ಮಿಕ್ಕ ಸಂಸದರಿದ್ದಾರೆ ನಿಜ. ಆದರೆ ಅವರು ಎಲ್ಲಿ ತನಕ ಅವರ ಜೊತೆ ಇರುತ್ತಾರೆ ಎಂದು ಅವರಿಗೆಯೇ ಗೊತ್ತಿಲ್ಲ.

ಉದಾಹರಣೆಗೆ ವಿ ಎಸ್ ಆಚಾರ್ಯ, ಸದಾನಂದ ಗೌಡ ಮುಂತಾದವರು ಇಂದು ಯಡಿಯೂರಪ್ಪರ ಪ್ರಮುಖ ಸೇನಾನಿ ಸ್ಥಾನದಲ್ಲಿದ್ದಾರೆ. ಒಂದು ವೇಳೆ ಯಡಿಯೂರಪ್ಪರನ್ನು ಪಕ್ಷದಿಂದ ಉಚ್ಛಾಟಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದೇ ಆದರೆ ಆಗಲೂ ಇವರು ಯಡಿಯೂರಪ್ಪರ ಜೊತೆ ಇರುತ್ತಾರೆಯೇ ಎಂಬುದು ಸ್ವತಃ ಅವರಿಗೆಯೇ ಗೊತ್ತಿಲ್ಲ. ಏಕೆಂದರೆ ಈ ಇಬ್ಬರು ನಾಯಕರು ಕರಾವಳಿ ಕರ್ನಾಟಕಕ್ಕೆ ಸೇರಿದವರು. ಇವರಿಬ್ಬರಿಗೆ ಕರಾವಳಿ ರಾಜಕೀಯದಲ್ಲಿ ತಮ್ಮದೆ ಸ್ಥಾನವಿದ್ದರು ಕೂಡ ತಮ್ಮದೇ ಆದ ಅಸ್ತಿತ್ವವಿಲ್ಲ. ನಾಳೆ ಚುನಾವಣೆಯಲ್ಲಿ ಇವರು ಇಲ್ಲಿ ಬಿಜೆಪಿ ಹೊರತಾಗಿ ಬೇರೊಂದು ಪಕ್ಷದಿಂದ ಅಥವಾ ಪಕ್ಷೇತರವಾಗಿ ಸ್ಪರ್ಧಿಸಿದರೆ ಸೋಲುವುದು ಖಂಡಿತ. ಇಂದು ಯಡಿಯೂರಪ್ಪರ ಜೊತೆ ಇರುವ ನಾಯಕರೆಲ್ಲ ಕೋತಿ ಮತ್ತು ಮರಿ ಕೋತಿಯ ಕಥೆಯಲ್ಲಿ ಬರುವ ತಾಯಿ ಕೋತಿಯ ರೀತಿ ಇರುವವರು. ಒಂದು ವೇಳೆ ಭುಜ ದಾಟಿ ಮೇಲೆ ನೀರು ಬರುತ್ತದೆ ಎಂದಾದರೆ ತಮ್ಮ ಬಣ್ಣ ಮತ್ತು ತಾಣ ಬದಲಾಯಿಸುವ ಸಮಯ ಸಾಧಕರು. ಒಂದೊಮ್ಮೆ ಯಡಿಯೂರಪ್ಪನವರದ್ದೆ ಬೆನ್ನಿಗೆ ಚೂರಿ ಹಾಕಿದವರು. ಪಾಪ, ಇದು ಯಡಿಯೂರಪ್ಪರಿಗೆ ಇನ್ನೂ ಆರ್ಥ ವಾಗದೇ ಹೋಗಿರುವುದು ಅವರ ತುಕ್ಕು ಹಿಡಿದ ಬುದ್ಧಿಯನ್ನು ಸೂಚಿಸುತ್ತದೆ.

೨೦೦೯ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದಿಂದ ತಮ್ಮ ಮಗನನ್ನು ಲೋಕಸಭೆಯ ಅಭ್ಯರ್ಥಿಯನ್ನಾಗಿಸಲು ಯಡಿಯೂರಪ್ಪನವರು ಸಾಕಷ್ಟು ನಾಟಕ ಮಾಡಿದ್ದು ಎಲ್ಲರಿಗೂ ನೆನಪಿದೆ. ಬಿಜೆಪಿ ತಾನು ವಂಶಾಡಳಿತ, ಕುಟುಂಬ ರಜಕಾರಣದ ವಿರೋಧಿ ಎಂದು ಹೇಳಿಕೊಂಡರು ಕೂಡ ತಾನೇ ವಂಶಾಡಳಿತಕ್ಕೆ ಮಣೆ ಹಾಕಿದ ಸಾಕಷ್ಟು ಉದಾಹರಣೆಗಳಿವೆ. ಬಿಜೆಪಿಯ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಳಿಯ ರಂಜನ್ ಭಟ್ಟಾಚಾರ್ಯರನ್ನು ಅಧಿಕಾರದ ಪಡಸಾಲೆಯಲ್ಲಿ ಬಿಟ್ಟುಕೊಂಡಿದ್ದರು. ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್‌ರ ಪುತ್ರ ಮಾನ್ವೆಂದ್ರ ಸಿಂಗ್, ವಸುಂಧರಾ ರಾಜೆಯ ಪುತ್ರ ದುಷ್ಯಂತ ಸಿಂಗ್, ಆಖಿಲ ಭಾರತ ಜನತಾ ಯುವ ಮೋರ್ಚಾದ ಅಧ್ಯಕ್ಷರಾಗಿರುವ ಅನುರಾಗ್ ಸಿಂಗ್ ಠಾಕೂರ್ ಪ್ರಸಕ್ತ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್‌ರ ಪುತ್ರರಾಗಿದ್ದಾರೆ. ಆದರೆ ಅವರೆಲ್ಲ ಬಹಳ ’ಘನತೆ’ಯಿಂದ ತಮ್ಮ ಕುಟುಂಬ ಸದಸ್ಯರಿಗೆ ರಾಜಕೀಯದಲ್ಲಿ ಒಂದು ಸ್ಥಾನ ಒದಗಿಸಿದ್ದರೆ ಯಡಿಯೂರಪ್ಪನವರು ತಮ್ಮ ಪುತ್ರನಿಗಾಗಿ ಅತ್ತು ಕರೆಯಬೇಕಾಯಿತು.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯ ನಡುವಿನ ೨೦-೨೦ ಸರ್ಕಾರದ ಒಪ್ಪಂದ ಮುರಿದು ಬಿದ್ದು ೨೦೦೮ರಲ್ಲಿ ಚುನಾವಣೆ ಎದುರಿಸುವಂತಾದಾಗ ಉತ್ತರ ಕರ್ನಾಟಕದ ಜನರ ಮುಂದೆ ಒಕ್ಕಲಿಗ ನಾಯಕ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದೇ ಅಲವತ್ತುಕೊಂಡು ಯಡಿಯೂರಪ್ಪ ಲಕ್ಷ ಲಕ್ಷ ವೋಟ್‌ಗಳನ್ನು ತಮ್ಮ ಬೆಂಬಲಿಗರ ಜೋಳಿಗೆಗೆ ಬೀಳುವಂತೆ ಮಾಡಿದ್ದರು. ಆದರೆ ಇಂದು ಅವರೇ ಮತ್ತೊಬ್ಬ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್‌ರ ಮುಖ್ಯಮಂತ್ರಿಯ ಹಾದಿಗೆ ಬಂಡೆಕಲ್ಲಾಗಿ ಬಿಟ್ಟಿದ್ದಾರೆ!

ಇದೀಗ ಯಡಿಯೂರಪ್ಪನವರ ಪಡಸಾಲೆಯಲ್ಲಿ ಕೆಲ ಖಾಲಿ ತಲೆಯ ನಾಯಕರು ಯಡಿಯೂರಪ್ಪನವರಿ ಹೊಸ ಪಕ್ಷ ಕಟ್ಟುತ್ತಾರೆ ಎಂದು ಹೇಳುತ್ತಿದ್ದಾರೆ. ಕರ್ನಾಟಕ ಎಂದಿಗೂ ಪ್ರಾದೇಶಿಕ ಪಕ್ಷಗಳಿಗೆ ಫಲವತ್ತಾದ ಭೂಮಿಯಾಗಿಲ್ಲ. ಆದರೆ ಯಡಿಯೂರಪ್ಪನವರಿಗೆ ಕೇವಲ ಮೂರು ವರ್ಷಗಳ ಹಿಂದೆ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟುವ ಸಾಮರ್ಥ್ಯವಿತ್ತು. ಆದರೆ ಈಗ ಅವರು ತಮ್ಮ ಕೈಯಾರೆ ಆ ಶಕ್ತಿಯನ್ನು ಪೋಲು ಮಾಡಿ ಕೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮವಾಗಿರುವ ‘ಅಹಿಂದ’ದ ನಾಯಕ ಸಿದ್ಧರಾಮಯ್ಯ ಯಡಿಯೂರಪ್ಪರ ಜೊತೆ ಸೇರಿಕೊಂಡರೆ ಹೊಸ ಪ್ರಾದೇಶಿಕ ಪಕ್ಷ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಮುಳುಗು ನೀರು ಆಗಬಹುದು. ಮುಂದಿನ ಚುನಾವಣೆ ಮತ್ತು ಸರ್ಕಾರ ರಚನೆ ಸಂದರ್ಭದಲ್ಲಿ ಆ ಪಕ್ಷ ನಿರ್ಣಾಯಕ ಪಾತ್ರ ವಹಿಸಲೂ ಬಹುದು. ಆದರೆ ದೇವೇ ಗೌಡರಿಂದ ಸಾಲು ಸಾಲು ಹೊಡೆತ ತಿಂದಿರುವ ಸಿದ್ಧರಾಮಯ್ಯ ಗೌಡರಿಗಿಂತ ಖತರ್‌ನಾಕ್ ಆಗಿ ರೂಪುಗೊಂಡಿರುವ ಯಡಿಯೂರಪ್ಪರ ಜೊತೆ ಕೈ ಜೋಡಿಸುವುದು ಅನುಮಾನ.

ಇನ್ನು ಬಿಜೆಪಿಯಿಂದ ಹೊರಬಂದು ಪ್ರಾದೇಶಿಕ ಪಕ್ಷ ಕಟ್ಟಲು ಹೋಗಿ ಮಧ್ಯ ಪ್ರದೇಶದಲ್ಲಿ ಉಮಾಭಾರತಿ ಮತ್ತು ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಕೈ ಸಿಟ್ಟುಕೊಂಡಿದ್ದಾರೆ. ಅಲ್ಲಿ ನಾವು ಇನ್ನೊಂದು ವಿಷಯವನ್ನು ಗಮನಿಸಬೇಕಾಗುತ್ತದೆ. ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಟ್ಟಿಗೆ ಅಸ್ಪಶ್ಯರಾದ ಬಳಿಕ ಅಲ್ಲಿ ಬಿಜೆಪಿ ಮತ್ತೆ ಒಮ್ಮೆಯೂ ಗೆಲ್ಲಲಿಲ್ಲ. ಅದೇ ರೀತಿ ರಾಜಸ್ಥಾನದಲ್ಲಿ ವಸುಂಧರಾ ರಾಜೆಯವರಿಗೆ ಬುದ್ಧಿ ಕಲಿಸಲು ಹೋಗಿ ಅಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಆದರೆ ಮಧ್ಯ ಪ್ರದೇಶದಲ್ಲಿ ಅಧಿಕಾರವಧಿಯ ಮಧ್ಯದಲ್ಲೆ ಬಿಜೆಪಿಯ ಬೆಂಕಿ ಚೆಂಡು ಉಮಾಭಾರತಿಯವರನ್ನು ಮುಖ್ಯಮಂತ್ರಿ ಹುದ್ದೆಯುಂದ ಕೆಳಗಿಳಿಸಿ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಮುಖ್ಯಮಂತ್ರಿಯಾಗಿಸಿತ್ತು. ಇದರಿಂದ ಬಿಜೆಪಿಗೆ ಯಾವುದೇ ಹಾನಿಯಾಗದೇ ಅದು ಮುಂದಿನ ವಿಧಾನ ಸಭೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿತ್ತು. ಅದೇ ರೀತಿ ಗುಜತಾತ್‌ನಲ್ಲಿ ಪ್ರಬಲ ಪಟೇಲ್ ಸಮುದಾಯದ ಬಲಿಷ್ಠ ನಾಯಕರಾಗಿದ್ದ ಕೇಶುಭಾಯ್ ಪಟೇಲ್‌ರನ್ನು ಅವರ ಆಡಳಿತಾವಧಿಯ ಮಧ್ಯದಲ್ಲೇ ಬದಲಾಯಿಸಿದ ಬಿಜೆಪಿ ಅತ್ಯಂತ ಸಣ್ಣ ಸಮುದಾಯಕ್ಕೆ ಸೇರಿದ್ದ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿಯನ್ನಾಗಿಸಿ ಅಲ್ಲಿಯೂ ಯಶ ಕಂಡಿದೆ. ಇದನ್ನು ಗಮನಿಸಿದಾಗ ಬಿಜೆಪಿ ಉಚ್ಛಾಟನೆ, ಮುಖ್ಯಮಂತ್ರಿ ಬದಲಾವಣೆಗಳು ಮುಂತಾದವುಗಳಿಂದ ಮಿಶ್ರ ಫಲ ಅನುಭವಿಸಿದೆ.

ರಾಜ್ಯದ ಮಟ್ಟಿಗೆ ಅಲ್ಪಾವಧಿ ಸರ್ಕಾರ, ಮುಖ್ಯಮಂತ್ರಿಗಳು ಹೊಸದೇನಲ್ಲ. ನಮ್ಮಲ್ಲಿ ಕಡಿಮೆ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿಗಳು, ರಾಜಕೀಯ ತಂತ್ರಗಾರಿಕೆಯ ರೌದ್ರ ನರ್ತನಕ್ಕೆ ಸಿಳುಕಿ ಅಧಿಕಾರ ಕಳೆದಿಕೊಂಡವರ ದೊಡ್ಡ ಪರಂಪರೆಯೇ ಇದೆ. ಆದರೆ ಯಡಿಯೂರಪ್ಪರಷ್ಟು ಬೀದಿ ರಂಪ ಮಾಡಿಕೊಂಡು ಹುದ್ದೆ ತ್ಯಜಿಸಿದ ಮುಖ್ಯಮಂತ್ರಿ ರಾಜ್ಯ ಬಿಡಿ ದೇಶದಲ್ಲಿಯೇ ಮತ್ತೊಬ್ಬರಿಲ್ಲ. ಆಗುವುದೆಲ್ಲ ಆಗಿ ಹೋಗಿದೆ ಆದರೂ ಯಡಿಯೂರಪ್ಪನವರು ಪಾಠ ಕಲಿತಿಲ್ಲ. ಆದರೆ ಅವರ ರಾಜಕೀಯ ಅವನತಿ ಮುಂದಿನ ರಾಜಕಾರಣಿಗಳಿಗೆ ಒಂದು ಪಾಠವಾಗಲಿ ಎಂಬುದಷ್ಟೆ ಈಗ ಉಳಿದಿರುವ ಆಶಯ.

Tuesday, July 26, 2011

"ಗೌರವದ ಸಂಖ್ಯೆ ಮುಟ್ಟಲೇಬೇಕು"

ಈ ಬರಹ ಈ ಮಣ್ಣಿನ ಹೆಮ್ಮೆಯ ಮತ್ತು ಅತ್ಯಂತ ಪುಣ್ಯವಂತ ಮಕ್ಕಳಾದ ಸೈನಿಕರಿಗೆ ಮತ್ತವರ ತ್ಯಾಗ, ಬಲಿದಾನಗಳಿಗೆ ಸಮರ್ಪಿತ...

’ಅಯ್ಯೋ ನಿಮಗೆ ಗೊತ್ತಿಲ್ಲವೆ? ನಾನು 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದೆ. ನಂತರ 1858ರಲ್ಲೇ ಪುನಃ ಹುಟ್ಟಿ ಬಂದೆ. ಮತ್ತೆ ಹೋರಾಡುವುದಕ್ಕಾಗಿ, ಆಗ ಅವಸರದಲ್ಲಿ ಬಲಗೈ ಮರೆತು ಹೋಯಿತು!" ಇಂತಹ ವಜ್ರಸದೃಶ ಮಾತು ಚಿಮ್ಮಿ ಬರಬೇಕಾದರೆ ಆ ಒಂಟಿಗೈಗಳ ಕ್ರಾಂತಿಕಾರಿ ಸೂಫಿ ಅಂಬಾಪ್ರಸಾದ್ ಈ ಮಣ್ಣನ್ನು ಅದೆಷ್ಟು ಪ್ರೀತಿಸಿರಬೇಕು? ಈ ಭೂಮಾತೆ ಆತನಿಗೆಷ್ಟು ಅಪ್ಯಾಯಾಮಾನ ಎನಿಸಿರಬೇಕು? ಆ ಸಂದರ್ಭದಲ್ಲಿ ಬ್ರಿಟಿಷರ ರಾಕ್ಷಸಿತನ ಯಾವ ಸೀಮೆ ತಲುಪಿರಬಹುದು?

ಸುಮಾರು ೧೫೦ ವರ್ಷಗಳ ಹಿಂದೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜ್ವಾಲಾಮುಖಿಯಂತೆ ಅವಿರ್ಭಾವಿಸಿದ್ದ ಭಾರತೀಯರ ಆಕ್ರೋಶ, ಸ್ವಾತಂತ್ರ್ಯಕ್ಕಾಗಿನ ಹಪಹಪಿಕೆ ನನ್ನ(ಮ್ಮ) ದೇಶ ಎಂಬ ಒಕ್ಕೊರಲ ಮಾರ್ದನಿ ಅದು ಅನೂಹ್ಯ ವೇಗದಲ್ಲಿ ದೇಶಾದಾದ್ಯಂತ ಬಿತ್ತರಿಸಿ ಬ್ರಿಟಿಷರನ್ನು ಒದ್ದೊಡಿಸಿದ್ದು ಎಲ್ಲರಿಗೂ ಗೊತ್ತಿರುವಂತದ್ದೆ! ಅದನ್ನು ಪುನರ್ ನೆನಪಿಸುವ ಅವಶ್ಯಕತೆ ಇಲ್ಲ.

ಅದೇನೆ ಇರಲಿ, ಎಷ್ಟೋ ಆದರ್ಶಗಳು ಅನಿವಾರ್ಯತೆಗಳ ಸಂದುಗೊಂದಿಗೆ ಸಿಲುಕಿ ತನ್ನ ರೂಪ ಬದಲಿಸಿಕೊಂಡು ವಿರೂಪವಾಗುವುದು ಅಥವಾ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವುದು ಮಾನವ ಇತಿಹಾಸದಲ್ಲಿ ಸಹಜ. ಇದರ ಫಲಿತಾಂಶ ಕೆಲವೊಮ್ಮೆ ಸಕಾರಾತ್ಮಕವಾಗಿರಬಹುದು, ಇನ್ನು ಕೆಲವೊಮ್ಮೆ ನಕಾರಾತ್ಮಕವಾಗಿರಬಹುದು. ಇಂತಹ ಗುಣಗಳಲ್ಲಿ ರಾಷ್ಟ್ರ ಪ್ರೇಮವೂ ಒಂದು.

ಜಾಗತೀಕರಣದ ಕನ್ನಡಕವಿಟ್ಟು ನೋಡಿದರೆ ದೇಶ ಪ್ರೇಮಕ್ಕೆ ಅರ್ಥವೇ ಇಲ್ಲ. ಅದು ವಿಶ್ವಪ್ರೇಮವೆಂಬ ಅಳವಿಲ್ಲದ ವಿಶಾಲತೆಯನ್ನು ಪಡೆದುಕೊಳ್ಳುತ್ತದೆ ಅಷ್ಟೆ.

ಭಾರತೀಯರಿಗೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಆರಂಭದಲ್ಲಿ ’ದೇಶಪ್ರೇಮ’ ಎಂಬ ಪದ ಮತ್ತು ಭಾವನೆಯ ಸ್ಥಿತ್ಯಂತರವೇ ಆಗಿತ್ತು. ೧೯೪೭ರ ವರೆಗೆ ಸ್ವಾತಂತ್ರ್ಯಗಳಿಸಲು ಹೋರಾಟ ನಡೆಸಿದವರು ದೇಶಪ್ರೇಮಿಗಳೆಂದು ಕರೆಸಿಕೊಂಡರೆ ತದನಂತರ ಆ ಸ್ವಾತಂತ್ರ್ಯವನ್ನು ಉಳಿಸಲು ಹೋರಾಡಿದ ಮಹನೀಯರು ಹೀರೊಗಳಾದರು. ಅಂತಹ ಒಬ್ಬ ಹೀರೋನ ಕಥೆ ಈಗ ನಿಮ್ಮ ಮುಂದಿಡುತ್ತಿದ್ದೇನೆ.

ಅದು ೧೯೬೨ನೇ ಇಸವಿ. ಚೀನಾ ಭಾರತದ ಮೇಲೆ ಮುಗಿ ಬಿದ್ದ ಸಂದರ್ಭ. ಕಾಶ್ಮೀರದ ಬೊವ್ಡಿಲಾದ ಬೆಟ್ಟಗಳು ನಿರ್ಲಿಪ್ತವಾಗಿ ನಿಂತಿದ್ದವು. ಅವಕ್ಕೇನು ಅಲ್ಲವೇ? ಆದರೆ ಅದನ್ನು ಕಾಯ ನಿಂತಿದ್ದ ಭಾರತೀಯ ಸೈನಿಕರಿಗೆ ಸ್ವಾಭಿಮಾನದ ಪ್ರಶ್ನೆ. ಒಂಚೂರು ಮೈಮರೆತರೆ ತೆರೆಯಂತೆ ಬಂದಪ್ಪಳಿಸುವ ಚೀನಿ ಸೈನಿಕರು. ಸಾಹಸಿ ದೇಶಪ್ರೇಮಿ ಸೈನಿಕರ ಪಾಲಿಗೆ ದೊರೆತ ಸುವರ್ಣ ಘಳಿಗೆ.

ಭಾರತದ ಮುಂಚೂಣಿ ನೆಲೆಯಲ್ಲಿದ್ದ ಶಾರ್ದೂಲ್ ಸಿಂಗ್‌ಗೆ ನಮಗೂ ಅವರಿಗೂ ಕುಸ್ತಿ ನಡೆದಿದ್ದರೆ ಚೆನ್ನ ಎಂಬ ಭಾವ. ಈ ಭಾವನೆ ಅವನಲ್ಲಿ ಏಕೆ ಹುಟ್ಟಿಕೊಂಡಿತ್ತೋ ಗೊತ್ತಿಲ್ಲ. ಒಂದೀ ಚೀನಿಯರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಎದುರಾಗಿ ಅವನಲ್ಲಿದ್ದ ಅತೀ ಸಾಮಾನ್ಯ ಬಂದೂಕನ್ನು ಕಂಡಿರಬಹುದು ಅಥವಾ ಅವನ ವ್ಯಕ್ತಿತ್ವವೇ ಅಂತದ್ದಿರಬಹುದು.

ಚೀನಿ ಪಡೆ ಹತ್ತಿರ ಹತ್ತಿರ ಬರುತ್ತಿತ್ತು. ಅಗಳಿನಲ್ಲಿ ನಿಂತಿದ್ದ ಭಾರತೀಯ ಯೋಧರು ಕೈಕಟ್ಟಿ ಕೂರಲಿಲ್ಲ. ಚಪ್ಪಟೆ ಮೂಗಿನ ಸೈನಿಕರನ್ನು ಅಪ್ಪಚಿ ಮಾಡಲು ಗುಂಡಿನ ಸುರಿಮಳೆಯನ್ನೆ ಸುರಿಸಿದರು.

ಭಾರತೀಯ ಪುಟ್ಟ ಪಡೆ ದಿಟ್ಟವಾಗಿ ಹೋರಾಡಿ ಚೀನಿಯರ ಬೃಹತ್ ಸೈನ್ಯವನ್ನು ಕದಡಿ ಹಾಕಿತ್ತು. ಅಷ್ಟರಲ್ಲೆ ಗುಂಡಿನ ಪೆಟ್ಟಿಗೆ ಖಾಲಿಯಾಗುತ್ತ ಬಂದಿತ್ತು. ಆದರೆ ಶಾರ್ದೂಲ ಸಿಂಗ್‌ನ ಗುಂಡಿಗೆಯಲ್ಲಿ ಹೆಪ್ಪುಗಟ್ಟಿದ್ದ ಶೌರ್ಯ, ಮಾತೃಭೂಮಿಗಾಗಿನ ತುಡಿತ, ಕೆಚ್ಚು, ಒಂದು ಹೆಜ್ಜೆಯೂ ಹಿಂದೆ ಸರಿಯಲಾರೆ ಎಂಬ ದೃಢ ಸಂಕಲ್ಪ ಒಂದಿನಿತು ಖಾಲಿಯಾಗಿರಲಿಲ್ಲ. ಬದಲು ಅದು ಪ್ರತಿಕ್ಷಣ ಹೆಚ್ಚಾಗುತ್ತಿತ್ತು.

ಶಾರ್ದೂಲ ಸಿಂಗ್ ತನ್ನ ಮೇಲಾಧಿಕಾರಿಗೆ ಆಗ, "ಚಿಂತೆಬೇಡ ಕ್ಯಾಪ್ಟನ್, ಗುಂಡು ಮುಗಿದರೆ ಕೈ ಕೈ ಮಿಲಾಯಿಸೋಣ ನನ್ನ ಬಂದೂಕಿನ ಹಿಡಿಯಿಂದ ಹತ್ತು ತಲೆಗಳನ್ನಾದರೂ ಪುಡಿ ಪುಡಿ ಮಾಡುತ್ತೇನೆ" ಎಂದು ಹೇಳಿದ. ಯಾವುದೋ ಸಿನೆಮಾದಲ್ಲಿ ಕೇಳಿದಂತೆ ಇದೆಯೇ? ಜಗತ್ತಿನಲ್ಲಿ ಸಿನೆಮಾಗಳಲ್ಲಿನ ಸಾಹಸಗಳನ್ನು ಮೀರಿದ ಸಾಹಸ ಮಾಡಿದವರು ಎಷ್ಟು ಮಂದಿ ಇಲ್ಲ? ಅಂತವರ ಪಟ್ಟಿಗೆ ಶಾರ್ದೂಲ್ ಸಿಂಗ್ ತನ್ನ ಹೆಸರು ನೊಂದಾಯಿಸಿಕೊಂಡು ಬಿಟ್ಟ.

ಶಾರ್ದೂಲ ಎಂದರೆ ಹುಲಿ. ಅವನಿಗೆ ಹೆಸರೇ ಅನ್ವರ್ಥ. ಐದೇ ನಿಮಿಷದಲ್ಲಿ ಗುಂಡುಗಳ ಪೆಟ್ಟಿಗೆ ಬರಿದು. "ವಾಪಸಾಗಲು ಸಿದ್ಧರಾಗಿ" ಎಂಬ ಕ್ಯಾಪ್ಟನ್‌ನ ಆಜ್ಞೆ. ಅಷ್ಟರಲ್ಲಿ ೮ ಮಂದಿ ಚೀನಿ ಸೈನಿಕರು ಕಂದಕದೊಳಗೆ ಧುಮುಕಿಯಾಗಿತ್ತು. ಕ್ಯಾಪ್ಟನ್ "ಹಿಂತಿರುಗಿ" ಎಂಬ ಆದೇಶ ಶಾರ್ದೂಲ "ಸಿಂಹ"ನಿಗೆ ಎಲ್ಲಿ ಕೇಳಿಸಿರಬಹುದು? ಕೇಳಿಸಿದರು, ಆ ಕಾಲುಗಳು ಹಿಂದೆ ಸರಿಯುವಂತವೇ?

ಕ್ಷಣ ಮಾತ್ರದಲ್ಲಿ ಕಂದಕದಿಂದ ಚಿಗರೆಯಂತೆ ಮೇಲಕ್ಕೆ ಹಾರಿದ ಶಾರ್ದೂಲ ತನ್ನ ಬದುಕನ್ನೆ ಶತ್ರುವಿನ ಅಂಗೈಯಲ್ಲಿಟ್ಟು ಬಂದೂಕನ್ನು ಪಟಪಟನೆ ಬೀಸಲಾರಂಭಿಸಿದ.

ಈ ಸಾಹಸಿ ಸೂರ್ಯ ಕಣ್ಣು ತೆರೆದಾಗ ತೇಜಪುರದ ಆಸ್ಪತ್ರೆಯೊಂದರಲ್ಲಿ ಮಲಗಿದ್ದ. ಕ್ಯಾಪ್ಟನ್ ಹೆಮ್ಮೆಯಿಂದ "ಶಾರ್ದೂಲ ಎಂಟು ಬರುಡೆಗಳನ್ನು ಚಿಂದಿ ಉಡಾಯಿಸಿದ್ದಿ" ಎಂದ.

ಈ ಶೌರ್ಯದ ಕಿಡಿ ವೈದ್ಯರ ಕಡೆಗೆ ಬೀರಿದ್ದು ನಿಶ್ಯಕ್ತ ನೋಟ. ಆದರೆ ಹೇಳಿದ್ದು "ಡಾಕ್ಟರ್ ನಾನು ಬೇಗ ಹುಷಾರಾಗಬೇಕು...!" "ಆಗುತ್ತಿ" ಎಂದರು ಡಾಕ್ಟರ್.

ಆದರೆ ಈ ಪರಾಕ್ರಮದ ಖಜಾನೆಗೆ ಹುಷಾರಾಗಿ ಮನೆಗೆ ಹೋಗಬೇಕು ಎಂಬ ಯಾವುದೇ ಇರಾದೆಯಿರಲಿಲ್ಲ. ಅವನಿಗಿದ್ದದ್ದು ಭಾರತವನ್ನು ಆವರಿಸಿದ್ದ ಚೀನಿ ಪರದೆಯನ್ನು ಚಿಂದಿ ಮಾಡಬೇಕೆಂಬ ಏಕಮಾತ್ರ ಗುರಿ.

ಶಾರ್ದುಲ ಮಾತು ಮುಂದುವರಿಸಿ, "ಡಾಕ್ಟರ್, ಬೇಗ ಹೋಗಬೇಕು ೮ ಜನರನ್ನು ಮುಗಿಸಿದ್ದೇನೆ... ಅಯ್ಯೋ! ಕೇವಲ ಎಂಟು! ರಣರಂಗಕ್ಕೆ ಹಿಂತಿರುಗಿ ಹೋಗಬೇಕು. ತೀರ ಕಡಿಮೆಯಾಯಿತು! ಗೌರವ ಬರುವಷ್ಟಾದರೂ ಅಂಕಿಯನ್ನು ಹೆಚ್ಚಿಸಬೇಕು. ಗೌರವದ ಸಂಖ್ಯೆ ಮುಟ್ಟಲೇಬೇಕು".


ಆದರೆ ಭ್ರಮೆಯ ಪೊರೆಯೊಳಗಿದ್ದ ಆಗಿನ ಸರ್ಕಾರದಿಂದಾಗಿ ನಮ್ಮ ಪ್ರತಿಷ್ಠೆ ಮಣ್ಣು ಪಾಲಾಯಿತು. ಸ್ವಾತಂತ್ರ್ಯನಂತರದ ಏಕಮಾತ್ರ ಸೋಲು ನಮ್ಮನ್ನು ಬೇಡ ಬೇಡವೆಂದರೂ ನಮ್ಮನ್ನು ಅಪ್ಪಿಕೊಂಡಿತು.

ಅತ್ತ ಮನಸ್ಸಿಲ್ಲದ ಮನಸ್ಸಿನಿಂದ ಶಾರ್ದೂಲ ಸಿಂಗ್‌ನ ಜೀವದೀಪವೂ ಆರಿಹೋಯಿತು.

Saturday, July 23, 2011

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?

ಲೋಕಾಯುಕ್ತ ವರದಿ ಸೋರಿಕೆಯಾಗುತ್ತಲೆ ಯಡಿಯೂರಪ್ಪ, ರೆಡ್ಡಿ ಸೋದರರು, ಕುಮಾರಸ್ವಾಮಿ, ಅನಿಲ್ ಲಾಡ್ ಸೇರಿದಂತೆ ರಾಜ್ಯದ ಅನೇಕ ಅತಿರಥ ಮಹಾರಥಿಗಳು ಮತ್ತು ಸುಮಾರು ೫೦೦ಕ್ಕೂ ಮಿಕ್ಕ ಅಧಿಕಾರಿಗಳ ಮೇಲಿದ್ದ ಊಹಾಪೋಹ ಆಧಾರಿತ ಆರೋಪಗಳು ಇದೀಗ ತಾತ್ವಿಕ ಮತ್ತು ಸಾಂವಿಧಾನಿಕ ನೆಲಗಟ್ಟಿನ ಮೇಲೆ ನಿಂತ ಆರೋಪಗಳಾಗಿ ಪರಿವರ್ತನೆ ಗೊಂಡಿದೆ.

ಯಡಿಯೂರಪ್ಪ ಸಕಲ ಭ್ರಷ್ಟಾಚಾರ ಕಲಾ ವಲ್ಲಭ ಎಂಬುದನ್ನು ಸಾಬೀತು ಮಾಡಲು ದೇಶದ ಜನರಿಗೆ ಯಾವುದೇ ವರದಿಯ ಅಗತ್ಯವಿರಲಿಲ್ಲ. ಆದರೆ ತಾನು ಭ್ರಷ್ಟಾಚಾರಿ ಎಂದು ಅವರನ್ನು ಅರ್ಥ ಮಾಡಿಕೊಳ್ಳಲು ಮತ್ತು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿಗೆ ಇದು ಗೊತ್ತಾಗಲು ಇಂತಹವೊಂದು ವರದಿ ಅಗತ್ಯವಾಗಿತ್ತು. ಆ ಕೆಲಸವನ್ನು ನ್ಯಾ. ಸಂತೋಷ್ ಹೆಗ್ಗಡೆ ಮಾಡಿ ಮುಗಿಸಿದ್ದಾರೆ.

ಯಡಿಯೂರಪ್ಪ ಕರ್ನಾಟಕದ ಸಂಪತ್ತನ್ನು ಸುಮಾರು ೫ ವರ್ಷಗಳಿಂದ ಹುಲುಸಾಗಿ ಮೇಯುತ್ತಿದ್ದಾರೆ, ಕಳೆದ ಮೂರು ವರ್ಷಗಳಲ್ಲಿ ಅದು ಮಿತಿ ಮೀರಿದೆ. ಪ್ರತಿಯೊಂದಕ್ಕೂ ಕೊನೆ ಎಂಬುದು ಇದ್ದೆ ಇರುತ್ತದೆ. ಅದೇ ರೀತಿ ಯಡಿಯೂರಪ್ಪರ ಭ್ರಷ್ಟ ಆಡಳಿತಕ್ಕೆ ಕೊನೆಯ ಷರಾವನ್ನು ಲೋಕಾಯುಕ್ತದ ಈ ವರದಿ ಬರೆಯುತ್ತದೆಯೋ? ಇಲ್ಲ, ೨ ವರ್ಷಗಳ ಬಳಿಕ ಕರ್ನಾಟಕದ ಪ್ರಜ್ಙಾವಂತ ಜನರೇ ಬರೆಯಬೇಕಾಗುತ್ತದೆಯೇ? ಎಂಬುದು ಈಗಿರುವ ಪ್ರಶ್ನೆ...

ಬಹುಶಃ ಯಡಿಯೂರಪ್ಪರಿಗೆ ಅಧಿಕಾರ ಹಸ್ತಾಂತರ ಮಾಡಲು ಇದಕ್ಕಿಂತ ಸುಸಂದರ್ಭ ಮುಂದೆ ಬರುವುದು ಅನುಮಾನ, ಅದೇ ರೀತಿ ಯಡಿಯೂರಪ್ಪರಿಂದ ರಾಜೀನಾಮೆ ಕೇಳಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯನ್ನು ಅನುಸ್ಥಾಪಿಸಲು ಬಿಜೆಪಿ ಹೌಕಮಾಂಡ್‌ಗೂ ಇದು ಸುವರ್ಣವಕಾಶ. ಆದರೆ ಯಡಿಯೂರಪ್ಪ ತಮ್ಮ ಹಠವನ್ನು ಬಿಡುವರೇ ಅಥವಾ ಮತ್ತೇ ತನ್ನ ಲಿಂಗಾಯತ ಆಸ್ತ್ರವನ್ನು ಬಿಟ್ಟು ಹೈಕಮಾಂಡ್ ಅನ್ನು ನಿಶ್ಯಸ್ತ್ರಗೊಳಿಸವರೇ ಎಂಬುದು ಈ ಸಮಯದ ಕುತುಹಲ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಒಪ್ಪಿದರೆ ಬಿಜೆಪಿ ಶೋಭಾ ಕರಂದ್ಲಾಜೆ, ಆರ್. ಅಶೋಕ್, ವಿ ಎಸ್ ಅಚಾರ್ಯ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಸುರೇಶ್ ಕುಮಾರ್ ಅಥವಾ ಅನಂತ್ ಕುಮಾರ್‌ರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿಸುವ ಸಾಧ್ಯತೆಯಿದೆ. ಇನ್ನು ಕಪ್ಪು ಕುದುರೆಗಳು ಕೂಡ ಅಚಾನಕ್ ಆಗಿ ರಂಗ ಪ್ರವೇಶಿಸಿ ರೇಸ್‌ಗೆಲ್ಲಲು ಬಹುದು. ಈ ರಾಜಕೀಯದಲ್ಲಿ ಎಲ್ಲವೂ ಸಾಧ್ಯ!

ಇಲ್ಲಿ ಸದಾನಂದ ಗೌಡ ಮತ್ತು ಅನಂತ್ ಕುಮಾರ್ ಲೋಕಸಭೆ ಸದಸ್ಯರು. ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಂದರೆ ಇಂದಲ್ಲ ನಾಳೆ ತಮ್ಮ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಸಭೆ ಪ್ರವೇಶಿಸಬೇಕಾಗುತ್ತದೆ. ಆದರೆ ಇದನ್ನು ಪಕ್ಷದ ಹೈಕಮಾಂಡ್ ಒಪ್ಪುವುದು ಅನುಮಾನ. ಅದರಲ್ಲೂ ಯಡಿಯೂರಪ್ಪ ಈಗ ಅನಂತ್ ಕುಮಾರ್‌ರ ನೆರಳು ಕಂಡರು ಕತ್ತಿ ಝಳಪಿಸುತ್ತಿದ್ದಾರೆ. ಅದೇ ರೀತಿ ಅನಂತ್ ಕುಮಾರ್ ಕೂಡ ಒಂದೆರಡು ಬಾರಿ ಯಡಿಯೂರಪ್ಪರ ಪದಚ್ಯುತಿಗಾಗಿ ತಿಪ್ಪರಲಾಗ ಹಾಕಿದ್ದರು. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಹುಬ್ಬಳಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅನಂತ್‌ರ ಹಾಜರಾತಿಯೇ ಇರಲಿಲ್ಲ. ಒಂದು ವೇಳೆ ಅನಂತ್‌ಗೆ ಪಟ್ಟ ನೀಡಿದರೆ ಯಡಿಯೂರಪ್ಪ ಮತ್ತವರ ಪಡೆ ಪಕ್ಷ ತೊರೆಯುವುದು ನಿಶ್ಚಿತ, ಆ ಕಾರಣದಿಂದ ಬಿಜೆಪಿ ಸರ್ಕಾರವೇ ಪತನವಾಗಬಹುದು. ರಾಜ್ಯ ಮತ್ತೆ ಚುನಾವಣೆ ಎದುರಿಸಬೇಕಾಗಬಹುದು. ಈಗ ಚುನಾವಣೆ ನಡೆದರೆ ಬಿಜೆಪಿ ಕಾರ್ಯಕರ್ತ ಯಡಿಯೂರಪ್ಪರ ಯಾವ ಘನಂದಾರಿ ಕೆಲಸವನ್ನು ಹಿಡಿದು ಕೊಂಡು ಜನರಲ್ಲಿ ಮತ ಯಾಚಿಸಬಲ್ಲ? ಯಡಿಯೂರಪ್ಪರಿಗೆ ಮಾನ ಮಾರ್ಯದೆ ಇಲ್ಲವೆಂದು ಆ ಕಾರ್ಯಕರ್ತನಿಗೂ ಇಲ್ಲವೇ? ಇಲ್ಲಿ ಮತ್ತೊಂದು ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ... ಯಾರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದು ಎಂಬ ದೊಡ್ಡ ಪ್ರಶ್ನೆಯದು. ಆಗ ಬಿಜೆಪಿ ಮತ್ತೇ ಗೊಂದಲಕ್ಕೆ ಸಿಳುಕಿ ಕೊಳ್ಳಲಿದೆ. ಇಲ್ಲಿ ಯಾರನ್ನು ಬಿಂಬಿಸಿದರೂ ಜಾತಿಯ ಪ್ರಶ್ನೆ ಅದರ ಕಾಲಿಗೆ, ಮೈಗೆ ಎಲ್ಲ ತೊಡರಿಕ್ಕೊಳ್ಳುತ್ತದೆ. ಅದಕ್ಕಾಗಿ ಸುರಕ್ಷಿತವಾಗಿರೋಣ ಎಂದು ಆದು ಸಮೂಹ ನಾಯಕತ್ವದ ಮೊರೆ ಹೋಗಬಹುದು. ಆದರೆ ಇಲ್ಲಿ ಮತ್ತೇ ಬಣ ಸಂಸ್ಕೃತಿ ಹುಟ್ಟಿಕೊಂಡು (ಇದರರ್ಥ ಈಗ ಇಲ್ಲ ಎಂದಲ್ಲ) ಪಕ್ಷವನ್ನು ರಾಜ್ಯದಲ್ಲಿ ಹೇಳ ಹೆಸರಿಲ್ಲದ ಹಾಗೆ ಮಾಡುವುದು ನಿಶ್ಚಿತ. ಅದ್ದರಿಂದ ಅನಂತ್ ಕುಮಾರ್‌ಗೆ ಹೋಲಿಸಿದರೆ ಸದಾನಂದ ಗೌಡ ಉತ್ತಮ ಆಯ್ಕೆ ಎಂದು ಬಿಜೆಪಿ ಹೈಕಮಾಂಡ್ ಭಾವಿಸಬಹುದು. ಬಿಜೆಪಿ ಅಧಿಕಾರಕ್ಕೆ ಬಂದಾಗ ಸದಾನಂದ ಗೌಡ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನಿಯ. ಅವರು ಯಡಿಯೂರಪ್ಪರ ಆಪ್ತ ವಲಯದಲ್ಲಿರುವುದರಿಂದ ಅವರಿಗೆ ಯಡಿಯೂರಪ್ಪರಿಂದ ಅಡ್ಡಿಯಾಗಲಾರದು. ಆದರೆ ಹಸನ್ಮುಖಿ ಸದಾನಂದ ಗೌಡರು ಒಕ್ಕಲಿಗ ವರ್ಗದವರಾಗಿರುವುದರಿಂದ ಶೋಭಾ ಕರಂದ್ಲಾಜೆ ಮತ್ತು ಆರ್ ಆಶೋಕ್ ಅವರ ಆಯ್ಕೆಗೆ ಅಡ್ಡಗಾಲು ಹಾಕಬಹುದು. ಅದೇನೆ ಇದ್ದರು ಸದಾನಂದ ಗೌಡರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಉಳಿದವರಿಗಿಂತ ಹೆಚ್ಚಿದೆ. ಆದರಲ್ಲೂ ಶೋಭಾರಿಗೆ ಬೇಸರವಾದರೆ ಯಡಿಯೂರಪ್ಪ ಸುಮ್ಮನಿರುತ್ತಾರೆಯೇ? ಅದ್ದರಿಂದ ಇವರಿಬ್ಬರು ನೇರವಾಗಿ ತಾವೇ ಮುಖ್ಯಮಂತ್ರಿ ಆಗುವ ಪ್ರಯತ್ನ ಮಾಡುವುದು ಬಿಟ್ಟು ತಮ್ಮವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ಶ್ರಮಿಸುವ ಸಾಧ್ಯತೆಯೇ ಹೆಚ್ಚು.

ಇನ್ನು ರೆಡ್ಡಿ ಸೋದರರು ಮುಖ್ಯಮಂತ್ರಿ ಬಿಡಿ ಮಂತ್ರಿ ಸ್ಥಾನ ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಬಹುಶಃ ಅವರ ಕೈಯಿಂದ ಮಂತ್ರಿ ಹುದ್ದೆ ಕಿತ್ತುಕೊಳ್ಳುವುದು ನಿಶ್ಚಿತ. ಆದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಜಗದೀಶ್ ಶೆಟ್ಟರ್‌ನ್ನು ಕೂರಿಸಲು ತೆರೆ ಮರೆಯ ಪ್ರಯತ್ನ ಮಾಡುವುದು ಖಂಡಿತ. ಆದರೆ ಅವರ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕುವುದು ಅನುಮಾನ ಅಥವಾ ಅವರ ಪ್ರಯತ್ನವೇ ಶೆಟ್ಟರ್‌ರ ಆಸೆಗೆ ತಣ್ಣೀರಾಗಲು ಬಹುದು. ಶೆಟ್ಟರ್ ಆಯ್ಕೆಯನ್ನು ಯಡಿಯೂರಪ್ಪ ಸುತಾರಾಂ ಒಪ್ಪುವುದಿಲ್ಲ. ಎಲ್ಲಿಯಾದರೂ ಬಿಜೆಪಿ ಶೆಟ್ಟರ್‌ನ್ನು ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿದರೆ ಯಡಿಯೂರಪ್ಪ ಇದು ತನಗೆ ಮುಳುಗು ನೀರು ಎಂದೆ ಭಾವಿಸುತ್ತಾರೆ ಮತ್ತು ಅವರು ಪಕ್ಷದಿಂದ ಹೊರ ಹೋಗುವ ಸಾಧ್ಯತೆಯೇ ಹೆಚ್ಚು. ಯಡಿಯೂರಪ್ಪ ತಾವು ಮುಖ್ಯಮಂತ್ರಿಯಗುವ ಮುಂಚೆಯೆ ಬಿ ಬಿ ಶಿವಪ್ಪ, ಬಸವರಾಜ್ ಪಾಟೀಲ್ ಸೆಡಂ ಮುಂತಾದವರ ರಾಜಕೀಯ ಭವಿಷ್ಯವನ್ನೇ ನುಂಗಿ ನೀರು ಕುಡಿದವರು. ಅದೇ ಬುದ್ಧಿಯನ್ನು ಮತ್ತೂ ಮುಂದುವರಿಸಿ ಬಸನಗೌಡ ಪಾಟೀಲ್ ಯತ್ನಾಲ್‌ರನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿದ್ದರು. ಇದೇ ರೀತಿ ಶೆಟ್ಟರ್ ಕೊರಳಿಗೆ ಉರುಳಾಗುವ ಅನೇಕ ದಾಳಗಳನ್ನ ಎಸೆದು ಅವರನ್ನು ರಾಜಕೀಯವಾಗಿ ಇಲ್ಲವಾಗಿಸಲು ಸಾಕಷ್ಟು ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇಲ್ಲೇ ಯಡಿಯೂರಪ್ಪರ ಸೋಗಲಾಡಿತ ಬಟಾ ಬಯಲಾಗುತ್ತದೆ. ಅವರು ನಿಜವಾಗಿಯೂ ಲಿಂಗಾಯತರ ಹಿತ ಚಿಂತನೆ ಮಾಡುವವರೇ ಆದರೆ "ನಾನು ಹೋದರೆ ಹೋಗಲಿ ಮತ್ತೊಬ್ಬ ಲಿಂಗಾಯತ ರಾಜ್ಯದ ಮುಖ್ಯಮಂತ್ರಿ ಅಗುತ್ತಾನೆ, ಆಗಲಿ ಬಿಡಿ ನಮ್ಮ ಸಮುದಾಯಕ್ಕೆ ಒಳ್ಳೆದಾಗಲಿ" ಎಂದು ಶೆಟ್ಟರ್‌ಗೆ ಅವಕಾಶ ಮಾಡಿಕೊಡುತ್ತಿದ್ದರು. ಆದರೆ ಅವರಿಗೆ ಇಡೀ ಲಿಂಗಾಯತ ಸಮುದಾಯಕ್ಕೆ ತಾನೊಬ್ಬನೆ ಏಕಚಕ್ರಾಧಿಪತಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಸ್ವಾರ್ಥ ಮುಖ್ಯವೇ ಹೊರತು ಆ ಸಮುದಾಯದ ಒಳಿತಲ್ಲ. ಲೋಕಾಯುಕ್ತ ವರದಿಯ ಬಳಿಕವು ಲಿಂಗಾಯತ ಸಮುದಾಯ ಯಡಿಯೂರಪ್ಪರ ಹಿಂದೆ ಮೊದಲಿನಂತೆ ನಿಲ್ಲುತ್ತದೆ ಎಂದು ಭಾವಿಸುವ ಹಾಗಿಲ್ಲ. ಭ್ರಷ್ಟರ ರಕ್ಷಣೆಗೆ ನಿಲ್ಲುವಷ್ಟು ನಮ್ಮ ಯಾವುದೇ ಮಠ ಮಾನ್ಯಗಳು, ಸಮುದಾಯಗಳು ಕೆಟ್ಟು ಹೋಗಿಲ್ಲ ಎಂದೆ ನಾನು ಭಾವಿಸುತ್ತೇನೆ. ಇಲ್ಲಿ ಶೆಟ್ಟರ್‌ರನ್ನು ಆಯ್ಕೆ ಮಾಡುವ ರಿಸ್ಕ್‌ನ್ನು ಹೈಕಮಾಂಡ್ ತೆಗೆದುಕೊಳ್ಳಹುದು. ಆದರೆ ಅದು ಯಡಿಯೂರಪ್ಪ ಪಕ್ಷ ತೊರೆಯುತ್ತಾರೆ ಎಂದರೆ ಅವರ ಹಿಂದೆ ಎಷ್ಟು ಜನ ಶಾಸಕರು ಹೋಗುತ್ತಾರೆ ಎಂದು ಲೆಕ್ಕ ಹಾಕಿಕೊಂಡ ಬಳಿಕವೇ ತೆಗೆದುಕೊಳ್ಳಬಹುದಾದ ಕ್ಯಾಲ್ಕುಲೇಟೆಡ್ ರಿಸ್ಕ್.

ಇಂದು ಕಾಂಗ್ರೆಸ್‌ನಲ್ಲಾಗಲಿ, ಜಾತ್ಯತೀತ ಜನತಾದಳದಲ್ಲಾಗಲಿ ಪ್ರಬಲ ಲಿಂಗಾಯತ ನಾಯಕರುಗಳಿಲ್ಲ. ಜನತಾದಳ ಎಂದರೆ ನೆನಪಾಗುವುದು ಗೌಡ ಫ್ಯಾಮಿಲಿ. ಯತ್ನಾಲ್ ಲಿಂಗಾಯತ ಸಮುದಾಯದವರಾಸರು ಪ್ರಭಾವಿ ಮಟ್ಟಕ್ಕೆ ಇನ್ನೂ ಏರಿಲ್ಲ. ಇನ್ನು ಕಾಂಗ್ರೆಸ್‌ನ ನಾಯಕರ ಪಟ್ಟಿ ತೆಗೆದರೆ ಅಲ್ಲಿ ನೆನಪಾಗುವ ಹೆಸರುಗಳನ್ನೊಮ್ಮೆ ನೋಡಿ ಪರಮೇಶ್ವರ್, ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್, ಎಚ್ ವಿಶ್ವನಾಥ್, ವೀರಪ್ಪ ಮೊಯಿಲಿ, ಎಸ್ ಎಮ್ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಆರ್ ವಿ ದೇಶಪಾಂಡೆ ಇವರಲ್ಲಿ ಯಾರು ಲಿಂಗಾಯತರಿಲ್ಲ. ಆದರೆ ಬಿಜೆಪಿಯಲ್ಲಿ ಯಡ್ಡಿ ಬಿಟ್ಟರೆ ಶೆಟ್ಟರ್ ಇದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬಸವರಾಜ ಬೊಮ್ಮಾಯಿ ಇದ್ದಾರೆ. ಆದ್ದರಿಂದ ಯಡಿಯೂರಪ್ಪ ಪಕ್ಷ ತೊರೆದರೆ ಅಥವಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಇಡೀ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬಹಿಷ್ಕರಿಸಿ ಬೇರೆ ಪಕ್ಷಗಳ ಹಿಂದೆ ಹೋಗುತ್ತಾರೆ ಎಂದು ನಂಬುವುದೇ ಮೂರ್ಖತನ. ಇದೆಲ್ಲ ಯಡಿಯೂರಪ್ಪ ಸೃಷ್ಟಿಸಿರುವ ಭ್ರಮೆಗಳಷ್ಟೆ.

ಇನ್ನು ಯಡಿಯೂರಪ್ಪ ತಮ್ಮ ಪರಮಾಪ್ತೆ ಶೋಭಾ ಕರಂದ್ಲಾಜೆಯವರನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸುವ ಸಾಧ್ಯತೆ ನಿಚ್ಛಳ. ಕರಂದ್ಲಾಜೆಯ ಕೆಲಸದ ಹಸಿವು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಅವರ ಆಯ್ಕೆಯನ್ನು ವಿರೋಧಿಸುವ ಪ್ರಬಲ ಗುಂಪು ಪಕ್ಷದೊಳಗೆ ಇದೆ. ಇನ್ನೊಂದು ನಿಟ್ಟಿನಲ್ಲಿ ಹೇಳುವುದಾದರೆ ಯಡಿಯೂರಪ್ಪ ಹಗರಣಗಳ ಕಿರಿಕಿರಿಯಿಂದಾಗಿ ಪದಚ್ಯುತರಾದರೆ ಅಕಾಲ ರಾಜಕೀಯ ಮುಸ್ಸಂಜೆ ತಲುಪಿದಂತೆ. ಆ ಬಳಿಕ ಶೋಭಾ ಬಿಜೆಪಿಯಲ್ಲಿ ತನ್ನ ದಾರಿಯನ್ನು ತಾನೆ ಕಂಡುಕೊಳ್ಳಬೇಕಾಗುತ್ತದೆ. ಇಲ್ಲಿ ಆಕೆ ಲಿಂಗಾಯತ ನಾಯಕರಾದ ಶೆಟ್ಟರ್, ಕೇಂದ್ರದಲ್ಲಿ ಪ್ರಭಾವಿಯಾಗಿರುವ ಅನಂತ್ ಕುಮಾರ್ ಮತ್ತು ತನ್ನದೇ ಒಕ್ಕಲಿಗ ಸಮುದಾಯದ ಆರ್. ಆಶೋಕ್‌ರ ಪ್ರಬಲ ರಾಜಕೀಯ ನಡೆಗಳನ್ನು ಎದುರಿಸಿ ತನ್ನ ಭವಿಷ್ಯವನ್ನು ಕಂಡುಕೊಳ್ಳುವುದು ನಿಜಕ್ಕೂ ಕಠಿಣ. ಅದರ ಬದಲು ತಾನು ಯಡಿಯೂರಪ್ಪರ ನೆರಳಿನಿಂದ ಹೊರ ಬಂದು, ಬಿಜೆಪಿಯಲ್ಲಿ ತನ್ನದೆ ಆದ ಅಸ್ತಿತ್ವವನ್ನು ಕಾಣುವವರೆಗೆ ಆಕೆ ಕಾಯುವುದೇ ಒಳಿತು. ಒಂದು ವೇಳೆ ಶೋಭಾ ಆಯ್ಕೆಗೆ ನಿರೀಕ್ಷಿತ ವಿರೋಧ ವ್ಯಕ್ತವಾಗದೇ ಹೋದರೆ ಆಕೆ ಚಿಕ್ಕ ಪುಟ್ಟ ವಿರೋಧವನ್ನು ಲೆಕ್ಕಿಸದೇ ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವುದೇ ಉತ್ತಮ. ಶೋಭಾರನ್ನು ಸಿಎಮ್ ಮಾಡಿದರೆ ಯಡಿಯೂರಪ್ಪರ ತಾನು ಲಿಂಗಾಯತ ಸಮುದಾಯದ ಹಿತ ರಕ್ಷಕ ಎಂಬ ಸ್ವ ಘೋಷಿತ ಇಮೇಜ್‌ಗೆ ಧಕ್ಕೆ ಉಂಟು ಮಾಡಬಹುದು. ಆದರೆ ನ್ಯಾ. ಸಂತೋಷ್ ಹೆಗ್ಗಡೆಯವರ ಮಾತಿನಲ್ಲೆ ಹೇಳುವುದಾದರೆ ಒಂದು ತಪ್ಪಿನಲ್ಲಿ ಶೆ. ೫೦ ಭಾಗ ಪಾಪ(ಶಿಕ್ಷೆ) ತಪ್ಪು ಮಾಡಿದವನದ್ದು, ಶೇ. ೨೫ ಭಾಗ ಪಾಪ (ಶಿಕ್ಷೆ) ಅದಕ್ಕೆ ಪ್ರೋತ್ಸಾಹ ನೀಡಿದವನದ್ದು ಹಾಗೂ ಶೇ. ೨೫ ಭಾಗ ಪಾಪ (ಶಿಕ್ಷೆ) ಆ ತಪ್ಪನ್ನು ನೋಡಿಯೂ ಸುಮ್ಮನಿದ್ದವನದ್ದು. ಅಂದರೆ ಕರಂದ್ಲಾಜೆ ಈಗಾಗಲೇ ಶೇ ೫೦ರಷ್ಟು ಪಾಪ ಮಾಡಿದ್ದಾರೆ. ಇದನ್ನೆ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಅವರು ಯಡಿಯೂರಪ್ಪ ಮಾಡಿದ ತಪ್ಪಿಗೆ  ಶೇ. ೫೦ರಷ್ಟು ಶಿಕ್ಷೆ ಪಡೆಯಲು ಆರ್ಹರು. ಯಡ್ಡಿಯ ಆಖಿಲಾಂಡ ಕೋಟಿ ಭ್ರಷ್ಟಾಚಾರದ ಬಗ್ಗೆ ಆಕೆಗೆ ಗೊತ್ತೇ ಇರಲಿಲ್ಲವೆಂದರೆ ಆಕೆ ಯಡ್ಡಿಯ ಪರಮಾಪ್ತೆ ಎಂಬುದಕ್ಕೆ ಆರ್ಥವೇ ಇಲ್ಲ. ಇನ್ನೊಂದು ಅಂಶವೆಂದರೆ ಯಡಿಯೂರಪ್ಪ ಶೋಭಾರನ್ನು ಮುಖ್ಯಮಂತ್ರಿಯನ್ನಾಗಿಸಲು ಪ್ರಯತ್ನಿಸುತ್ತಿರುವುದು ಪರೋಕ್ಷವಾಗಿ ತಾನು ರಾಜ್ಯವನ್ನು ಮುನ್ನಡೆಸಬೇಕು ಎಂಬ ಉದ್ದೇಶ ಮತ್ತು ತನ್ನವರೇ ಸಿಎಮ್ ಆಗಿದ್ದರೆ ಸರ್ಕಾರವನ್ನು ತನ್ನ ಮೇಲಿರುವ ಆರೋಪಗಳಿಗೆ ಗುರಾಣಿ ಯನ್ನಾಗಿಸಬಹುದು ಎಂಬ ಕಾರಣಕ್ಕಾಗಿ. ಅದ್ದರಿಂದ ಶೋಭಾ ಕರಂದ್ಲಾಜೆ ತನ್ನ ಸುದೀರ್ಘ ರಾಜಕೀಯ ಭವಿಷ್ಯದ ಒಳಿತಿಗಾಗಿ ಈ ಕೊಡುಗೆಯನ್ನು ತಿರಸ್ಕರಿಸುವುದೇ ಕ್ಷೇಮ.

ಆರ್ ಆಶೋಕ್ ಮೊದಲು ಅನಂತ್ ಕುಮಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದವರು. ಆ ಬಳಿಕ ತಮ್ಮ ಬಣ ನಿಷ್ಠೆಯನ್ನು ಯಡಿಯೂರಪ್ಪ ಕ್ಯಾಂಪ್‌ಗೆ ಬದಲಿಸಿ ಮಹತ್ವದ ಗೃಹ ಮತ್ತು ಸಾರಿಗೆ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆರಡು ಹಗರಣಗಳ ಕಲೆ ಮೈಮೇಲೆ ಮೆತ್ತಿಕೊಂಡಿವೆ. ಬಿಜೆಪಿಯಲ್ಲಿನ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿರುವ ಬಣಗಳನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿ ಮಾತನಾಡಿದರೆ ಆರ್ ಆಶೋಕ್‌ರ ಉಮೇದುದಾರಿಕೆಯನ್ನು ಎರಡು ಬಣಗಳು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಎಲ್ಲಾದರೂ ವಿರೋಧ ವ್ಯಕ್ತ ಪಡಿಸಿದರೆ ಅದು ಯಡಿಯೂರಪ್ಪ ಬಣವಾಗಿರುವ ಸಾಧ್ಯತೆ ಸಂಭವ ಇದೆ. ಕಾರಣ ಶೋಭಾ ಫ್ಯಾಕ್ಟರ್!

ಇನ್ನು ಸುರೇಶ್ ಕುಮಾರ್ ಮತ್ತು ವಿ ಎಸ್ ಆಚಾರ್ಯ ಇಬ್ಬರು ಕೂಡ ಮುಖ್ಯಮಂತ್ರಿ ಸ್ಥಾನದ ಪೈಪೋಟಿಗೆ ಅನಿವಾರ್ಯವಾಗಿ ಬಿದ್ದಿದ್ದಾರೆ. ಇಬ್ಬರಿಗೂ ಪ್ರಾಮಾಣಿಕತೆಯೇ ಆಸ್ತಿ. ಇಲ್ಲಿ ವಿ ಎಸ್ ಆಚಾರ್ಯ ಯಡಿಯೂರಪ್ಪ ಕೃಪಾಪೋಷಿತ ಬಂಡಾಯ ಮತ್ತು ಸಮಾಧಾನ ಮಂಡಳಿಯ ಖಾಯಂ ಸದಸ್ಯ. ಆಚಾರ್ಯರಿಗೆ ಯಡಿಯೂರಪ್ಪರ ಪೂರ್ಣ ರಕ್ಷೆಯಿದೆ. ಹಾಗೆಂದು ಅವರನ್ನು ವಿರೋಧಿಸುವರು ಆಚಾರ್ಯ ಯಡ್ಡಿ ಬಣಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕಾಗಿಯೇ ಇವರನ್ನು ವಿರೋಧಿಸಬೇಕು ಅನ್ನುವುದನ್ನು ಬಿಟ್ಟು ಬೇರೆ ಕಾರಣಗಳಿಲ್ಲ. ಇನ್ನು ಸುರೇಶ್ ಕುಮಾರ್‌ರ ಪ್ರಮಾಣಿಕತೆ, ಸಂವೇದನಶೀಲತೆ ಬಗ್ಗೆ ಎರಡು ಮಾತಿಲ್ಲ. ಆವರ ಆಯ್ಕೆಯನ್ನು ಯಾವ ಬಣಗಳು ಕೂಡ ನೇರವಾಗಿ ವಿರೋಧಿಸಲಾರವು. ಆದರೆ ಸುರೇಶ್ ಕುಮಾರ್‌ರ ಪ್ರಾಮಾಣಿಕತೆಯ ಜೊತೆ ಹೆಜ್ಜೆ ಹಾಕಲಾಗದ ಕೆಲವು ಶಕ್ತಿಗಳು ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ. ಇವರಿಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಜಾತಿಯ ಪ್ರಾಬಲ್ಯತೆಯೆ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಮಾನದಂಡವಾಗುವುದಾದರೆ ಇವರಿಬ್ಬರ ಉಮೇದುದಾರಿಕೆಯೂ ಮೂಲೆ ಗುಂಪಾಗುತ್ತದೆ.

ವಾಸ್ತವವಾಗಿ ಜಾತಿಯನ್ನೇ ಮಾನದಂಡವಾಗಿಸಿ ಮತದಾರ ಮತದಾನ ಮಾಡುತ್ತಾನೆ ಎಂದಾದರೆ ಗುಜರಾತ್‌ನಲ್ಲಿ ನರೇಂದ್ರ ಮೋದಿ, ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ. ಅದು ಎರಡೆರಡು ಬಾರಿಗೆ! ಖ್ಯಾತ ನಟಿ ಕತ್ರಿನಾ ಕೈಫ್‌ರ ಮಾತಿನಲ್ಲೇ ಹೇಳುವುದಾದರೆ ಅರ್ಧ ಭಾರತೀಯನಾಗಿರುವ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅದು ಹೇಗೆ ತನ್ನ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತದೆ? ಅವರಿಗೆ ಮತ ಹಾಕಬಹುದಾದ ಅರ್ಧ ಭಾರತೀಯರು ದೇಶದಲ್ಲಿ ಎಷ್ಟು ಜನ ಇದ್ದಾರೆ? ಜಾತಿಯ ಹೆಸರು ಹೇಳಿ ರಾಜಕೀಯ ಮಾಡುವುದು ದುರ್ಬಲತೆಯ ಲಕ್ಷಣ. ಆ ಜಾತಿಯ ಮಂತ್ರಕ್ಕೆ ಬೆದರಿ ಕೂರುವುದು ಪುಕ್ಕಲುತನದ ಪರಮಾವಧಿ.

ಇನ್ನು ಯಡಿಯೂರಪ್ಪರ ಮೇಲೆ ಸಾಲು ಸಾಲು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಿಇಸಿ ಸುಪ್ರಿಂ ಕೋರ್ಟ್‌ಗೆ ತನ್ನ ಪೂರ್ಣ ವರದಿ ನೀಡಲು ಬಾಕಿಯಿದೆ.ಅದ್ದರಿಂದ ಅವರು ರಾಜೀನಾಮೆ ನೀಡಿದರೆ ಇಲ್ಲಿಗೆ ಎಲ್ಲವೂ ಮುಕ್ತಾಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲೇ ಉಳಿದರೆ ಆ ಪ್ರಕರಣಗಳು, ಅದರ ವಿಚಾರಣೆ ಸರ್ಕಾರ ಮತ್ತು ಬಿಜೆಪಿಗೆ ಕೆಟ್ಟ ಹೆಸರು ಮತ್ತು ಆಗಾಗ ತಲೆ ನೋವು ತರಲಿದೆ. ಅದ್ದರಿಂದ ಒಮ್ಮೆಲೆ ಯಡ್ಡಿ ಮತ್ತು ಸರ್ಕಾರಕ್ಕಿರುವ ಸಂಬಂಧವನ್ನು ಕಡಿದು ಹಾಕಿ ಅವರನ್ನು ಆಡಳಿತ ಪಕ್ಷದ ಶಾಸಕ ಸ್ಥಾನದಲ್ಲಿ ಕೂರಿಸಿ ಬಿಟ್ಟರೆ, ಬೀಸೋ ದೊಣ್ಣೆ ತಪ್ಪಿದಂತೆ. ನಂತರ ಅವರಾಯಿತು ಅವರ ಪ್ರಕರಣಗಳಾಯಿತು ಅಂತ ಸುಮ್ಮನಿರಬಹುದು.

ಹಾಗೇ ಮುಂದೆ ಮುಖ್ಯಮಂತ್ರಿ ಆಗುವಾತ, ಆದಷ್ಟು ಪಕ್ಷದಲ್ಲಿ ಗುಂಪುಗಾರಿಕೆ ಹುಟ್ಟಿಕೊಳ್ಳದಂತೆ ನೋಟಿಕೊಳ್ಳಬೇಕಿದೆ. ಯಡ್ಡಿ ಜೊತೆ ಗುರುತಿಸಿಕೊಳ್ಳುವವರನ್ನು ಆದಷ್ಟು ಮುಖ್ಯ ವಾಹಿನಿಗೆ ಎಳೆಯುವ ಕಠಿಣ ಕೆಲಸ ಮಾಡಬೇಕಿದೆ. ಏಕೆಂದರೆ ಯಡ್ಡಿ ಯಾವುದೇ ಕ್ಷಣದಲ್ಲಿ ಬಗಲ ಮುಳ್ಳಾಗಬಹುದು.  

ರಾಜ್ಯದ ಬಿಜೆಪಿ ಶಾಸಕರುಗಳೇ ನಿಮಗೆ ಮಾನ, ಮಾರ್ಯಾದೆ, ನಾಚಿಕೆ ಇತ್ಯಾದಿ ಇದೆ ಎಂದಾದರೆ ದಯಮಾಡಿ ಯಡಿಯೂರಪ್ಪರನ್ನು ಸಿಎಮ್ ಸ್ಥಾನದಿಂದ  ಕೆಳಗಿಳಿಸುವ ಪ್ರಯತ್ನ ಮಾಡಿ. ಇಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ನೀವು ಗಂಟು ಮೂಟೆ ಕಟ್ಟುವ ಹಾಗೆ ಮತದಾರರಾದ ನಾವು ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಯಡಿಯೂರಪ್ಪ ಕಳೆದ 3 ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಎಚ್ಚರ!

Wednesday, July 20, 2011

ನಾಳೆ ಮದುವೆ ಆದ ಮೇಲೂ ನಾನು ತರಕಾರಿ ಕೊಂಡು ಹೋಗ್ಬೇಕಾಗುತ್ತಾ?

’ಆಟೋ’ಬಯೋಗ್ರಾಫಿ - ಭಾಗ ೨

ಯಾವುದಕ್ಕೆ ಕೈ ಹಿಡಿಯೋದು... ಜನ ಕಡಿಮೆ ಇರುವುದಕ್ಕಾ? ಹುಡುಗಿಯರು ಇರುವುದಕ್ಕಾ? ಅಲ್ಲಾ ಉದ್ದನೆದಕ್ಕಾ...? ನೋಡುವ ಯಾವುದಾದರೆ ಏನು? ಹಣೆಯಲ್ಲಿ ಬರೆದದ್ದು.... ಹೋ... ದೇವರು ಇದನ್ನು ಕೂಡ ಹಣೆಯಲ್ಲಿ ಬರೆದಿರುತ್ತಾನಾ? ಇಲ್ಲ... ಇದೆಲ್ಲಾ ಬರೆದಿರಲಿಕ್ಕಿಲ್ಲ... ಅಲ್ಲಾ ನಾನು ಹೋಗುವಾಗ ಎಲ್ಲಾದರೂ ಆಕ್ಸಿಡೆಂಟ್ ಆದರೆ... ಹೌದಲ್ಲ... ಇಲ್ಲ ಅವನು ಆಕ್ಸಿಡೆಂಟ್ ಆಗುವಂತದನ್ನು ಮಾತ್ರ ಬರೆದಿರಬಹುದು... ಇರಬಹುದೇನೋ... ಈ ಕಳ್ಳ ಜ್ಯೋತಿಷಿಗಳು ನಮ್ಮ ದೇವರ ಕಲ್ಪನೆಯನ್ನೇ ಹಾಳು ಮಾಡುತ್ತಿದ್ದಾರೆ... ನಾಯಿ ಮಕ್ಕಳು... ಇಲ್ಲ ನಾನು ಆವತ್ತು ಭೇಟಿ ಆದ ಜ್ಯೋತಿಷಿ ನನ್ನ ಬಗ್ಗೆ ಅದೆಷ್ಟು ನಿಖರವಾಗಿ ಹೇಳಿದ್ನಲ್ಲ... ಹುಂ ಜ್ಯೋತಿಷ್ಯ ಸತ್ಯ... ಆದರೆ ಈ ಟಿವಿಯಲ್ಲಿ ಬರೋ ಜ್ಯೋತಿಷಿಗಳಲ್ಲ... ಅವರು ಕಳ್ ನನ್ ಮಕ್ಕಳು... ಏನನ್ನು ಸಾರ್ವತ್ರಿಕರಣ ಮಾಡಬಾರದು... ಹೌದು ನಾನು ಕೂಡ ಅದೆಷ್ಟೋ ಬಾರಿ ಹಾಗೆ ಅಂದ್ಕೊಳ್ಳುತ್ತೇನೆ... ಆದರೂ ಮಾಡಿಯೇ ಬಿಡುತ್ತೇನೆ... ಹೋ... ಇಲ್ಲ ಆ ತರಹ ನಾನು ಮಾಡೋದಿಲ್ಲ... ಮೊದಲಿಗೆ ಹಾಗೇ ಭಾವಿಸಿಕೊಂಡ್ರು ಕೊನೆಗೆ ಪರ್ಟಿಕ್ಯುಲರ್ ಆಗಿರುತ್ತೀನಿ... ಇವತ್ತೇನು ಎಲ್ಲ ರಿಕ್ಷಾಗಳು ಬಸುರಿಯಾಗಿವೆ... ನೋಡೋಣ ರೂಮ್‌ಗೆ ಹೋಗಿ ಕಡಿದು ಕಟ್ಟೆ ಹಾಕೋದು ಏನಿದೆ... 'ಪರ್ವ' ಓದೋಕ್ಕಿದೆ... ನೆಕ್ಸ್ಟ್ ಬರೋ ಗಾಡಿ ಹತ್ತೋದೆ... ಏನು ಬೇಕಾದರೂ ಆಗಲಿ... ಹೋ ಅದು ಖಾಲಿ ಇದೆ... ಕೈ ಹಿಡಿಬೇಕಾ... ಬೇಡ ಅವನೇ ಸ್ಲೋ ಆದ... ಅವನಿಗೆ ಅರ್ಥ ವಾಯಿತು... ಮುಂದೆ ಕೂರೋದ ಅಲ್ಲ... ಹಿಂದೆನಾ... ಹಿಂದೆನೇ ಕೂರೋಣ... ಬೈಯ್ಯಾ ಬಾಸಠ್... ಇವತ್ತು ತರಕಾರಿ ಅಗಬೇಕಲ್ಲ... ಹುಂ... ಏನು ತಗೊಳ್ಳೋದು... ಮಾರ್ಕೆಟ್‌ಗೆ ಹೋಗಿ ನೊಡೋಣ... ತರಕಾರಿ ಜೊತೆ ಏನು ಆಗ್ಬೇಕು... ಸದ್ಯ ಏನು ಬೇಡ ಅನ್ನಿಸುತ್ತೆ.... ಬೇಕು ಅಂದ್ರೆ ಶೆಟ್ರು ಹೇಳ್ತಾರೆ... ಸರಿ ಇವತ್ತು ಜ್ಯೂಸ್... ಕಲ್ಲಂಗಡಿದ್ದೇ ಮಾಡೋಣ... ರೂಂ ಕೀ... ಕಿಸೆಯಲ್ಲೇ ಇದೇ ತಾನೇ... ಮನೆಯಲ್ಲಿ ಅಜ್ಜಿ, ಅಮ್ಮ ಎಲ್ಲ ಅಡಿಗೆ ಮಾಡೋದನ್ನು ದೊಡ್ಡ ಕುಂಬಳಕಾಯಿ ಕೆಲಸದ ಹಾಗೆ ಮಾಡುತ್ತಿದ್ದರು... ಆದರೆ ಇದು ಎಷ್ಟು ಸುಲಭ... ಹುಂ ಎಲ್ಲರಿಗೂ ಅಷ್ಟೆ ಅವರವರ ಕೆಲಸವೇ ದೊಡ್ಡದು... ನಾಳೆ ಮದುವೆ ಆದ ಮೇಲೂ ನಾನು ತರಕಾರಿ ಕೊಂಡು ಹೋಗ್ಬೇಕಾಗುತ್ತಾ? ಯಾರಿಗೆ ಗೊತ್ತು... ಹಣೆಯಲ್ಲಿ ಏನೂ ಬರೆದಿದೆ ಅಂತ... ನಾಲ್ಕು ಜನರ ಮಧ್ಯೆ ರಿಕ್ಷಾ ನಿಲ್ಲಿಸುತ್ತಾನೆ... ತಲೆ ಸರಿಯಿಲ್ವಾ ಇವನಿಗೆ.... ಇವನಲ್ಲ... ಎಲ್ಲ ರಿಕ್ಷಾದವರು ಹೀಗೆಯೇ... ಇಲ್ಲ, ಈಗ ಜನ ಆಗೋದಿಲ್ಲ ಅದರೂ... ಬಾಸಠ್, ವಿಜಯ ನಗರ ಅಂತ ಕರೆಯುತ್ತಾನೆ... ಹೋ ಅವರು ಒಂದು ಈ ರಿಕ್ಷಾ ಹತ್ತದಿದ್ದರೆ ಸಾಕು... ಇಲ್ಲಿನ ಬಸ್ಸಿನವರಿಗೆ ಭಾಷೆ ಅನ್ನುವುದೇ ಇಲ್ಲ... ಮೆಸೆಜ್ ಬಂತಾ ಅಂತ... ಇವನು ಫಾರ್ವರ್ಡ್ ಮೆಸೆಜ್ ಮಾಡಿದ್ದಾನೆ... ಇವರ‍್ಯಾಕೆ ಇಂತಹ ಫಾರ್ವರ್ಡ್ ಮೆಸೆಜ್ ಮಾಡುತ್ತಾರೆ... ಉಪದೇಶ ಕೊಡುತ್ತಾ, ಲವ್ ಅಂದ್ರೆ ಹಾಗೇ, ಫ್ರೆಂಡ್‌ಶಿಪ್ ಅಂದ್ರೆ ಹೀಗೆ ಅಂತ... ಅದ್ರ ಬದಲು ಫನ್ನಿ ಅಗಿರೋ ಮೆಸೆಜ್ ಮಾಡೋಕ್ಕೆ ಆಗೋದಿಲ್ವಾ? ಎಲ್ಲರೂ ಉಪದೇಶ ಕೊಡುವವರೇ ಅಯಿತು... ಅಪ್ಪ, ಅಮ್ಮನಿಂದ ಹಿಡಿದು.... ಇವನ ತನಕ... ನನಗೆ ಬ್ಲ್ಯಾಕ್ ಬೆರಿ ಸೆಟ್ ತಗೋಬೇಕು ಅಂತ ಇತ್ತು... ತಪ್ಪಿದ್ರೆ ಗ್ಯಾಲಕ್ಸಿ... ಕರ್ಮ ಅವೆರಡರಲ್ಲೂ ಡ್ಯೂಯಲ್ ಸಿಮ್ ಇಲ್ಲ... ಸುಧೀರ್ ಜೊತೆ ಬ್ಲ್ಯಾಕ್ ಬೆರಿಯಲ್ಲೂ ಡ್ಯೂಯಲ್ ಸಿಮ್ ಹಾಕಿಸ್ಲಿಕ್ಕೆ ಹೇಳಬೇಕು... ಅವರು ಎನು ಹೇಳ್ತಾರೆ... ನಗ್ತಾರೆ ಅಷ್ಟೆ... ಈ ನೊಯ್ಡಾ ಮುಂದೊಂದು ದಿನ ಇನ್ನು ನಾಲ್ಕೈದು ವರ್ಷದಲ್ಲೇ ಭಾರತದ ನ್ಯೂಯಾರ್ಕ್ ಆಗುತ್ತೆ... ನಾನು ಅದೆಷ್ಟು ಲಕ್ಕಿ... ಮಾಯಾವತಿ ಇಲ್ಲಿ ಒಳ್ಳೆ ಕೆಲಸ ಮಾಡ್ತಾ ಇದ್ದಾಳೆ... ಈ ಫೋರ್ಟಿಸ್ ಪಕ್ಕ ಜಾಮ್ ಆಯಿತಾ... ಈ ಅಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ತುಂಬ ಕೊಸ್ಟ್‌ಲೀ ಅಂತೆ... ಈ ಹಾಸ್ಟಿಟಲ್ ಪಕ್ಕನೂ ಒಂದು ಸಿಗ್ನಲ್ ಲೈಟ್... ಇಲ್ಲೂ ಗಾಡಿ ನಿಲ್ಲಬೇಕು... ನಮ್ಮ ಲೈಫ್‌ಗೂ ಈ ಸಿಗ್ನಲ್‌ಗೂ ಏನೋ ಸಂಬಂಧವಿದೆ... ಹೌದು ನಾವು ಕೂಡ ಅಸ್ಪತ್ರೆಯಲ್ಲಿ ಇರುವಾಗ ವಿಶ್ರಾಂತಿ ಪಡಿತೇವೆ... ಇಲ್ಲೂ ಗಾಡಿ ಪಡೆಯುತ್ತಾ ಇದೆ... ಆದ್ರೆ... ಈ ಸಿಗ್ನಲ್‌ಗೆ ನಮ್ಮ ಗಾಡಿಯವ ಸ್ಪಂದಿಸದಿದ್ದರೆ... ಅದೇ ರೀತಿ ಅಸ್ಪತ್ರೆಯಲ್ಲಿ ಡಾಕ್ಟರ್‌ಗಳ ಮದ್ದಿಗೆ ನಾವು ಸ್ಪಂದಿಸದಿದ್ದರೆ... ಹೋಗೋದು ಯಮಪುರಿಗೆ... ಹೀಗೆ ಸುಮ್ಮನೆ ಕೂತ್ಕೊಂಡಿದ್ದಾಗ ಎಷ್ಟೆಲ್ಲ ಯೋಚನೆ ಬರುತ್ತೆ... ಇದನ್ನು ಬರೆದು ಇಟ್ಕೊಬೇಕು... ಅದೆಲ್ಲಾ ಅಗಿ ಹೋಗೋದು ಅಲ್ಲಾ... ನಾನು ಬರೆದದ್ದೆಲ್ಲವನ್ನು ಇನ್ನೂ ಟೈಪ್ ಮಾಡಿಲ್ಲ... ಇನ್ನೂ ಹೊಸದಾಗಿ ಬರೆಯೋದು... ಅಷ್ಟರಲ್ಲೇ ಇದೆ... ಸಿಗ್ಮಲ್ ಪಾಸ್ ಆಯಿತು ಬಚಾವ್... ಹೋ ಈ ಅಂಟಿ ಹತ್ತುತ್ತಾರ... ಒಳ್ಳೆ ಮಾಂಸ ಪರ್ವತ... ಇವರು ರಮ್ಯನ ತರಹ ಇದ್ದಾರಲ್ಲ... ಹುಂ... ರಮ್ಯನು ೪೦ ವರ್ಷ ಅದಾಗ ಇದೇ ರೀತಿ ಆಗಬಹುದಾ? ಇಲ್ಲ... ಇಲ್ಲ... ಅವಳು ಅಷ್ಟೆ ದಪ್ಪ... ಅದಕ್ಕಿಂತ ದಪ್ಪ ಆಗ್ಲಿಕ್ಕಿಲ್ಲ... ಅದೇ ಮ್ಯಾಕ್ಸಿಮಮ್...ಇನ್ನೂ ದಪ್ಪ ಆದ್ರೆ... ಅವಳದ್ದು ಅವಳ ಅಮ್ಮನ ರೀತಿಯ ಶರೀರ... ಮತ್ತೇ ಹುಡುಗಿಯರನ್ನು ಹೇಳಲು ಆಗುತ್ತಾ... ಎಲ್ಲರೂ ಹುಡುಗಿಯರ ಮನಸ್ಸು ಚಂಚಲ ಅಂತಾರೆ...ಅವರೇನು ಯೋಚಿಸ್ತಾರೆ ಅನ್ನೋದೆ ಗೊತ್ತಾಗುವುದಿಲ್ಲ ಅಂತಾರೆ... ನನ್ನ ಜೊತೆ ಕೇಳಿದ್ರೆ ಅವರ ಮನಸ್ಸು ಮಾತ್ರವಲ್ಲ ದೇಹನೂ ಚಂಚಲ ಅಂತಾ ಹೇಳ್ತೇನೆ...ಯಾವಾಗ ಹೇಗೆ ಆಗುತ್ತೋ... ಆ ಹುಡುಗಿ ಈ ಬಾರಿ ನನಗೆ ಬರ್ತ್ ಡೇ ವಿಶ್ ಮಾಡಿಲ್ಲ ಅಲ್ವಾ... ನಾಲ್ಕು ವರ್ಷದಿಂದ ತಪ್ಪದೇ ವಿಶ್ ಮಾಡುತ್ತಿದ್ದಳು... ಬಿಡು... ಅದೆಲ್ಲ ಯೋಚಿಸುತ್ತ ಇರ‍್ಲಿಕ್ಕಾಗುತ್ತಾ... ಅವಳೇನು ನನಗೆ ಲೈಫ್ ಲಾಂಗ್ ವಿಶ್ ಮಾಡುತ್ತಿರುತ್ತೇನೆ ಅಂದಿದ್ಲಾ... ಇಲ್ಲ ತಾನೇ? ಮತ್ತೇ? ಅವಳ ಜೊತೆ... ನನ್ನ ಫ್ರೆಂಡ್ಸ್ ಅಂದ್ರೆ ಪಿಯುಸಿಯಲ್ಲಿ ಇದ್ದವರು... ಅಬ್ಬಾ... ಏನು ಗಮ್ಮತ್ತು... ಆಗ ಅದೆಷ್ಟು ಕಾರುಬಾರು ಮಾಡಿದ್ವಿ... ಯಾರಿಗೂ ಕ್ಯಾರ್ ಮಾಡುತ್ತಿರಲಿಲ್ಲ... ಪ್ರವೀಣ್‌ಗೆ ಹೊಡೆಯಲು ಹೋದದ್ದು... ಇಲ್ಲ, ನಾನು ಹೊಡಿಯಲು ಹೋಗಿರಲಿಲ್ಲ... ನನ್ನ ಐಡಿ ಸೀಜ್ ಆಗಿದ್ದು... ಹುಂ... ಪುಷ್ಟ, ವಚನ್ ಎಲ್ಲ ಹೊಡಿಯಲು ಹೋಗಿದ್ದು... ನಾನು ಆಗ ಇವರನ್ನೆಲ್ಲ ಬಚಾವ್ ಮಾಡಿದ್ದು... ಆ ಪ್ಲ್ಯಾನ್ ಅಬ್ಬಾ... ಅರ್ಧ ಗಂಟೆಯಲ್ಲಿ ಐಡಿ ನಮ್ಮ ಕೈಯಲ್ಲಿ... ಅಬ್ಬಾ... ಆ ಮಟ್ಟಿಗೆ ಹೋಲಿಸಿದ್ರೆ ಡಿಗ್ರಿ ಬುರ್ನಾಸ್... ಬಿಂಗ್ರಿ ಬರೋದೆ ಆಯಿತು... ಎಲ್ಲ ಫ್ರೆಂಡ್ಸ್ ಹುಡುಗಿಯರ ಹಿಂದೆ ಬಿದ್ದು ಹಾಳಾಗಿ ಹೋದ್ರೂ... ನಾನು... ನಾನೇನು ಡಿಗ್ರಿ ಫೈನಲ್ ಇಯರ್ ತನಕ ಸರಿ ಇದ್ದೆಯಲ್ಲ... ಅಮೇಲೆ... ಹಾಳದ್ನಾ... ಉಮ್ಮಾ... ಇಲ್ಲ... ನಾನು ಹಾಳಗಿಲ್ಲ... ನನ್ನ ಫ್ರೆಂಡ್ಸ್... ಅವರೂ ಹಾಳಗಿಲ್ಲ... ಪಿಯುವಲ್ಲಿ ಐಶ್ವರ್ಯಾ... ಹುಂ ಹೌದು... ಏನೆಲ್ಲ ಸುದ್ದಿ ನಮ್ಮ ಬಗ್ಗೆ... ಆದರೆ ನಿಜ ಗೊತ್ತಿದದ್ದು ನನಗೂ ಅಭಿಗೂ ಮಾತ್ರ... ಇಂದಿಗೂ ಐಶ್ವರ್ಯಾ ಐಶ್ವರ್ಯಾನೇ...

ಅಮೇಲೆ ಲಕ್ಷ್ಮೀ... ನಾನು ಈ ಸಂಪತ್ತನನ್ನು ಸೂಚಿಸುವ ಹೆಸರಿನ ಹುಡುಗಿಯರಿಗೆ ಅದು ಹೇಗೆ ಅಂಟಿಕೊಳ್ಳುತ್ತೇನೋ... ಅವಳು ಆಗ ಹೈಸ್ಕೂಲ್ ಹುಡುಗಿ ತಾನೇ... ಹುಡುಗಿಯರ ಮನಸ್ಸನ್ನು ಹಠದಿಂದ ಗೆಲ್ಲಲಾಗುವುದಿಲ್ಲ ಅಂತಾರಲ್ಲ... ಅದನ್ನು ಸುಳ್ಳು ಎಂದು ನಾನು ಆಗಲೇ ಸಾಬೀತು ಮಾಡಿರಲಿಲ್ವಾ... ಹಠ ಎಂದರೆ ಎಂತಹ ಹಠ... ಅದನ್ನು ನಾನು ಒಳ್ಳೆದಕ್ಕೆ ಬಳಸಿಕೊಂಡಿದ್ದರೆ ಏನೋ ಆಗಿ ಹೋಗುತ್ತಿದೆ... ಆದರೆ ಅವಳು ಇನ್ನೇನೂ ಪ್ರಪೋಸ್ ಮಾಡುತ್ತಾಳೆ ಅಂದಾಗ... ಅದು ಹೇಗೆ ಜಾರಿ ಕೊಂಡು ಬಿಟ್ಟೆ... ನನ್ನದು ಥರ್ಡ್ ಕ್ಲಾಸ್ ಜೀವನ... ನಾನು ಆಗ ಹಾಗೆ ಏಕೆ ಮಾಡಿದೆ...? ಕಾರಣವಿತ್ತು... ಸ್ಪಷ್ಟ ಕಾರಣವಿತ್ತು... ಮೊನ್ನೆ ಅವಳು ಸಿಕ್ಕಾಗ ಹೇಳಿದ್ನಲ್ಲ... ಅವಳ ಎದೆಯಲ್ಲಿ ಇನ್ನೂ ಪ್ರೀತಿ ಸತ್ತಿರಲಿಲ್ಲ... ಮೊದಲ ಪ್ರೀತಿನೇ ಹಾಗೆ... ನಾ ಹೇಳಿ ಮುಗಿಸಿದಾಗ ಅವಳ ಕಣ್ಣಲ್ಲಿ ನೀರು... ನಾನು ಅದೆಷ್ಟು ಹುಡುಗಿಯರ ಕಣ್ಣೀರು ನೋಡಿಲ್ಲ... ಅವರನ್ನು ಸಮಾಧಾನ ಮಾಡುವುದೇ ಒಂದು ಕಲೆ... ನನ್ನ ಕಾರಣ ಕೇಳಿ... ಅವಳಿಗೆ ನನ್ನ ಮೇಲಿದ್ದ ಪ್ರೀತಿ ಮತ್ತೂ ಹೆಚ್ಚಾಗಿದೆ... ನನ್ನದು ಬಿಕ್ನಾಸಿ ಲೈಫ್... ನಾ ಹೇಳಲೇ ಬಾರದಿತ್ತು... ಅಬ್ಬಾ ಈ ರೇಖಾ ನನ್ನನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು... ಅದಕ್ಕೆ ಅವಳು ಬರೆದ ಅಟೋಗ್ರಾಫ್ ಸಾಕ್ಷಿ... ನಿಜಕ್ಕೂ... ನಾನು ಇವತ್ತಿಗೂ ಅಟೋಗ್ರಾಫ್ ತೆಗೆದಿಟ್ಟುಕೊಂಡಿದ್ದೇನೆ ಅಂದರೆ ಅದಕ್ಕೆ ಅವಳು ಬರೆದದ್ದು ಕಾರಣ ಆಗಿರಬಹುದು... ಆದರೆ ಅರ್ಥ ಮಾಡಿಕೊಳ್ಳುವುದು ಅಂದರೆ ಏನು... ಅನ್ನೋದೆ ನನ್ನನ್ನು ಕಾಡೋದು... ನಾನು ಹೇಳೋದೆ ಬೇರೆ... ಮನುಷ್ಯ ಅಂದರೆ ಒಂದು ಕಲಾಕೃತಿ ರೀತಿ... ನೀವು ಅವನನ್ನು ಹೇಗೆ ನೋಡುತ್ತೀರೋ ಅವನು ಕೂಡ ನಿಮಗೆ ಹಾಗೆ ಕಾಣುತ್ತಾನೆ... ನಾ ರೇಖಾನಿಗೆ ಕಂಡ ರೀತಿ ಸೌಮ್ಯಳಿಗೋ, ಅನುರಾಧಳಿಗೋ, ಶಂಶೀರ್‌ಗೋ, ಅವಿಲ್‌ಗೋ, ಶ್ರೀಜಾಳಿಗೋ ಕಾಣಿಸಿಕೊಳ್ಳಬೇಕಿಲ್ಲ... ಮತ್ತೇ... ಅದ್ದರಿಂದ ಒಬ್ಬರನ್ನು ಅರ್ಥ ಮಾಡಿಕೊಂಡಿದ್ದೇನೆ ಅನ್ನುವುದೇ ಅರ್ಥವಿಲ್ಲದ ಮಾತು... ಆದ್ರೂ... ಈ ರಿಕ್ಷಾದವ ಎಲ್ಲಿ ನಿಲ್ಲಿಸುತ್ತಾನೋ... ಈ ಬದಿಯೋ... ಆ ಬದಿಯೋ... ಯಾವ ಬದಿ ಆದರೂ ನಮ್ಮತ್ತ ಹೋಗೋ ರೀಕ್ಷಾ ಏರಬೇಕು ಅಂದರೆ ರಸ್ತೆ ದಾಟಬೇಕು... ಅದಕ್ಕೆ ಮತ್ತೆ ಐದು ನಿಮಿಷ...ಆನಂದ್ ವಿಹಾರ್‌ಗೆ ಹೋಗೋ ಯಾವ ರಿಕ್ಷಾ ಏರೋದು... ಖೋಡದ ಮೂಲಕ ಹೋಗೋದೋ... ವೈಶಾಲಿ ಮೂಲಕ ಹೋಗೋದೋ... ಯಾವುದಾದರೇ ಏನು... ಎರಡು ಒಂದೇ... ಸರಿ... ಇದರಲ್ಲೇ ಕೂರೋಣವಂತೆ... ಅಡ್ಡ ಸೀಟಲ್ಲೇ ಕೂರೋಣ... ಇದರಲ್ಲೂ ಹುಡುಗಿಯರು ಇಲ್ಲ... ಈ ಹುಡುಗಿಯರು ಅಂದರೆ ಮಳೆಯಂತೆ... ಮಳೆಗಾಲದಲ್ಲಿ ಬೇಡ ಬೇಡ ಅಂದರೂ ಬರ‍್ತಾರೆ... ಬೇಸಿಗೆಯಲ್ಲಿ ಬೇಕು ಬೇಕು ಅಂದರೂ ಬರೋದಿಲ್ಲ... ಸುಡುಗಾಡು...ಇವತ್ತು ಸೌಮ್ಯಳಿಗೆ ಕಾಲ್ ಮಾಡಬೇಕು... ಹುಂ... ಸ್ಮೀತಾ ಅದೇಷ್ಟು ಒಳ್ಳೆಯವಳು... ಸುಮ್ಮನೆ ಬೆಟ್ ಕಟ್ಟಿದ್ದು... ಆದರೂ ಕಟ್ಲೀಸ್ ಕಳುಹಿಸಿದಳು... ಎಲ್ಲಾದರೂ ನಾನು ಸೋತಿದ್ರೆ ಕಳುಹಿಸುತ್ತಿದ್ನಾ? ಇಲ್ಲ... ಮೋಸ್ಟ್‌ಲಿ ಇಲ್ಲ... ಹೋ ಅವಳಲ್ಲಿ ಈ ಹಾಡು ಯಾವ ಸಿನೆಮಾದ್ದು ಅಂತ ಕೇಳಿದ್ರೆ ಹೇಳಬಹುದು... ಅವಳಿಗೆ ಗೊತ್ತಿರುತ್ತೆ... ಇಲ್ಲ ಅಂದ್ರೆ ಸುಪ್ರಭಾನಿಗೆ ಗೊತ್ತಿರಬಹುದು... ಹುಂ ಹಾಡು ಕೇಳದೆ, ಸಿನೆಮಾ ನೋಡದೇ ಎಷ್ಟು ದಿನ ಆಯಿತು... ಹಾಡು ಆದ್ರೂ ಕೇಳಬಹುದು... ಸಿನೆಮಾ ನೋಡುವಷ್ಟು ಟೈಮ್ ಇರೋದಿಲ್ಲ... ಏನೂ ಟೈಮ್ ಇರೋದಿಲ್ಲ... ಅಷ್ಟು ಟೈಮ್ ಇರುತ್ತೆ... ಟೈಮ್ ಮ್ಯಾನೇಜ್‌ಮೆಂಟ್ ಗೊತ್ತಿಲ್ಲ... ಇಲ್ಲ ನನ್ನಲ್ಲಿರುವ ಸಿನೆಮಾಗಳನ್ನು ನೋಡಲು ತುಂಬ ತಾಳ್ಮೆ ಬೇಕು...ಹೌದೌದು... ಈಗ ಕ್ರಿಕೆಟ್ ನೋಡಲು ಕೂಡ ಮೊದಲಿನಷ್ಟು ಆಸಕ್ತಿ ಇಲ್ಲ... ಏನು ಆಯಿತು... ಮೊದಲಿಗೆ ಕ್ರಿಕೆಟ್ ಮ್ಯಾಚ್ ಇದೆ ಎಂದಾಗ ತಪಸ್ಸಿಗೆ ಕುಳಿತ ಹಾಗೇ ಕೂರುತ್ತಿದ್ದೆ... ಇವತ್ತು ಟ್ರಾಫಿಕ್ ತುಂಬ ಕ್ಲೀಯರ್ ಇದೆ... ಈ ಮನುಷ್ಯ ಏಕೆ ಹೀಗೆ ಒದ್ದಾಡುತ್ತಿದ್ದಾನೆ... ಇರುವೆ ಬಿಟ್ಟು ಕೊಂಡಿದ್ದಾನೆ... ಎಲ್ಲದರೂ ನನ್ನ ಪಕ್ಕ ಚಂದದ ಹುಡುಗಿ ಕೂತುಕೊಂಡು ಹೀಗೆ ಒದ್ದಾಡಿದ್ದೆ ಆಗಿದ್ರೆ ನಾನು ಈ ರೀತಿ ಹೇಳ್ತಾ ಇದ್ನಾ... ಹುಡುಗಿಯರು ಈ ರೀತಿ ಒದ್ದಾಡೋದಿಲ್ಲ... ಯಾರೂ ಹೇಳಿದ್ದು... ನಮ್ಮೂರಿನ ಹುಡುಗಿಯರು ಒದ್ದಾಡೋದಿಲ್ಲ ನಿಜ... ಇವರು ದೆಹಲಿ ಹುಡುಗಿಯರು ತಾನೇ... ಬೋಲ್ಡ್ ಆಂಡ್... ಇಲ್ಲಿ ಮಾರ್ಗದ ಬದಿ ಅದೇಷ್ಟು ಚೆನ್ನಾಗಿ ಗಿಡ ನೆಟ್ಟಿದ್ದಾರೆ... ನಮ್ಮೂರಲ್ಲಿ ಎಲ್ಲ ರಸ್ತೆಗಾಗಿ ಮರ ಕಡಿತಾರೆ... ಮುಂದೊಂದು ದಿನ ಇದು ಉದ್ಯಾನ ನಗರಿ ಆಗುತ್ತೆ... ಬೆಂಗಳೂರು ಬರಡು ನಗರಿ ಆಗುತ್ತೆ... ಹಾಗೇ ಆಗ್ಬೇಕು...ಇಲ್ಲ ಅಂದ್ರೆ ಜನರಿಗೆ ಬುದ್ದಿ ಬರೋದಿಲ್ಲ... ಈ ಮನುಷ್ಯನನ್ನು ಈಗ ರೀಕ್ಷಾದಿಂದ ಕೆಳಗೆ ಹಾಕಬೇಕು... ಒಂಚೂರು ಮ್ಯಾನರ್ಸ್ ಇಲ್ಲ ಇವನಿಗೆ... ಇನ್ನೂ ಗಾಡಿ ನಿಲ್ಲಿಸಲು ಹೇಳಬೇಕು... ಮುಂದೆ ಇಳಿಯುವವರು ಇದ್ದಾರೆ... ಅವರು ಇಳಿದಾಗ ಇಳಿದ್ರೆ ಆಯಿತು...

Thursday, July 7, 2011

ನನ್ನ 'ಆಟೋ'ಬಯೋಗ್ರಾಫಿ...

  1. ಭಾಗ 1
ಹುಂ... ಯಾವುದರಲ್ಲಿ ಕೂರೋದು ಅಂತ ಗೊತ್ತಾಗುತ್ತಿಲ್ಲ. ಯಾರು ಬೇಗ ಹೋಗುತ್ತಾನೋ ಅವನದರಲ್ಲಿ ಕೂರಬೇಕು... ಅದೇ ಗೊತ್ತಾಗುತ್ತಿಲ್ಲವೇ?... ಸಾಯಲಿ, ಯಾವುದರಲ್ಲಾದರೂ ಒಂದರಲ್ಲಿ ಕೂರೋಣ... ಸರಿ, ಇದರಲ್ಲೇ ಕೂರುತ್ತೇನೆ.... ಇನ್ನು ಇವನು ಹೊರಡಬೇಕಾದರೆ ನಾಲ್ಕೈದು ಮಂದಿ ಆದರೂ ಆಗಬೇಕು... ಅವಳು ಕೂಡ ನಮ್ಮತ್ತ ಹೋಗುವವಳೋ.... ದೇವರೇ ನನ್ನ ಪಕ್ಕನೇ ಕೂರಲಿ.... ಛೇ... ಅ ಗಾಡಿ ಹೋಯಿತು... ನಾನು ಅದರಲ್ಲಾದರೂ ಕೂರುತ್ತಿದ್ದೆ. ಇನ್ನು ಮೊಬೈಲ್‌ನಲ್ಲಿ ಮೇಲ್ ಆದ್ರೂ ಚೆಕ್ ಮಾಡುತ್ತೇನೆ... ಇವತ್ತು ಸಂಜೆ ಗುಲಾಬ್ ಜಾಮೂನ್ ತಿನ್ನಬೇಕು... ಆವತ್ತು ಆಂಟಿ ಬಂದಿದ್ದಾಗ ತಿಂದದ್ದು.... ಅಯ್ಯೋ ಈ ಹುಡುಗಿಗೆ ಫೋನ್ ಮಾಡದೇ ತುಂಬ ದಿನ ಆಯಿತಲ್ಲ.... ಸಂಜೆ ಮಳೆ ಬರೋದು ಗ್ಯಾರಂಟಿ... ಈ ಮುದುಕಪ್ಪ ಏಕೆ ಇಲ್ಲಿ ಬಂದು ಕುಳಿತ... ಛೇ... ಇವತ್ತಾದರೂ ಆಫೀಸ್‌ಗೆ ಬೇಗ ಹೋಗಿ ಸಂಜೆ ಬೇಗ ಬರಬೇಕು ಅಂತಿದ್ದೆ... ಹೋ... ಬಚಾವ್ ಹೊರಟೇ ಬಿಟ್ಟ... ಅದು ಸರಿ, ನಾನು ಬಚಾವ್ ಅಂತ ಹೇಳಲು ಶುರು ಮಾಡಿದ್ದು ಯಾವಾಗ? ಅದೇ ನಮ್ಮ ಮನೆಗೆ ಬರುತ್ತಿದ್ದ ಮನ್ಮಥ ಡ್ರೈವರ್‌ನಿಂದ ಅಲ್ವಾ ನನಗೆ ಈ ಪದ ಸಿಕ್ಕಿದ್ದು.... ನಮಗೆ ಯಾರು ಯಾರು ಏನೇನು ಕೊಟ್ಟು ಹೋಗುತ್ತಾರೋ... ಲೈಫ್ ಅನ್ನೋದೆ ಇಷ್ಟು.... ಯಾರ‍್ಯಾರೋ ಕೊಟ್ಟದ್ದೆ ನಮ್ಮ ಜೊತೆ... ಪುನಃ ಇಲ್ಲಿ ನಿಲ್ಲಿಸುತ್ತಿದ್ದಾನೆ... ಛೇ ಯಾಕಪ್ಪ... ನಾನು ಈ ಗಾಡಿಯಲ್ಲಿ ಕೂತೆ... ಎಂತಹ ಬಿಸಿಲು... ೪೭ ಡಿಗ್ರಿ ಸೆಲ್ಸಿಯಸ್ ಅಂತೆ... ಆದರೂ ನಾನು ನಿರೀಕ್ಷಿದಷ್ಟು ಧಗೆ ಇಲ್ಲ... ಏನೇ ಆಗಲಿ ಒಂದು ಒಳ್ಳೆ ಎಕ್ಸ್‌ಪಿರಿಯೆನ್ಸ್... ಆಯ್ಯೋ ಇವತ್ತು ಕೃತಿಕಾಳ ಬರ್ತ್ ಡೇ ಅಲ್ವಾ? ಹಮ್, ಹೌದು... ಇನ್ನೂ ವಿಶ್ ಮಾಡಿಲ್ಲ... ಈಗ್ಲೇ ಮೆಸೆಜ್ ಮಾಡುತ್ತೇನೆ... ಬೇಡ ಬೇಡ ಅವಳಿಗೆ ಮೆಸೆಜ್ ಮಾಡೊದಕ್ಕಿಂತ ಕಾಲ್ ಮಾಡೋದೆ ಬೆಟರ್... ಆ ಹುಡುಗಿ ನೋಡು ಸಖತ್ತಾಗಿದ್ದಾಳೆ... ಆದರೂ ಸ್ವಲ್ಪ ಬಿಳಿ ಜಾಸ್ತಿ ಆಯಿತು ಅಂತ ಅನ್ನಿಸುತ್ತೆ... ನಾನ್ಯಾಕೆ ಈಗ ಹುಡುಗಿಯರ ಬಗ್ಗೆ ಸಿಕ್ಕಾಪಟ್ಟೆ ಯೋಚಿಸುತ್ತೇನೆ... ಮೊನ್ನೆ ಆನಿಲ್ ನಾನು ಹುಡುಗಿ ಹುಡುಕುತ್ತಿದ್ದೇನೆ ಆಂದ ಬಳಿಕ ತಾನೇ? ಇಲ್ಲ, ಇಲ್ಲ ಹಾಗೇನು ಇಲ್ಲ. ನಾನು ಮೊದಲು ಕೂಡ ಹೀಗೆಯೇ ಇದ್ದೆ. ಹುಂ. ಆದರೆ ನಾನು ಆಗ ಈ ರೀತಿಯೆಲ್ಲ ಯೋಚಿಸುತ್ತಿರಲಿಲ್ಲ... ಮದುವೆ ಅಂತೆ... ಮದುವೆ.... ಸುಮ್ಮನೆ ಸ್ಮಶಾನ ವಾಸಿ ಆಗೋದು ಒಳ್ಳೆಯದು... ಅದನ್ನು ಬಿಟ್ಟಾಕು... ಆವತ್ತು ಅವಳು ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಂಡು ಬಿಟ್ಟಿದ್ರೆ... ಹೌದು ಒಪ್ಕೋಬಹುದಿತ್ತೇನೋ... ಆದರೂ ನನಗೆ ನನ್ನದೆ ಆದ ಕೆಲವು ಚಿಂತನೆಗಳಿವೆ... ನಾವಿಬ್ಬರು ಅದ್ಭುತ ಕೆಮಿಸ್ಟ್ರಿ ಹೊಂದಿದ್ವಿ ನಿಜ... ಆವಳಿಗೆ ಶೀತ ಆದರೂ ೩೦೦೦ ಕಿಮೀ ದೂರ ಇದ್ದ ನನಗೆ ಸಿಕ್ಸ್ತ್ ಸೆನ್ಸ್ ಮೂಲಕ ಗೊತ್ತಾಗುತ್ತಿತ್ತಲ್ಲ... ತಕ್ಷಣ ಆರ್ ಯೂ ಫೈನ್? ಅಂತ ಮೆಸೆಜ್ ಮಾಡುತ್ತಿದ್ದೇನಲ್ಲ... ಅಬ್ಬಾ... ನಾಳೆ ಇನ್ಯಾರನ್ನೋ ಕಟ್ಟಿಕೊಳ್ಳಬಹುದು... ಅವಳ ಜೊತೆ ಇಂತಹ ಕೆಮಿಸ್ಟ್ರಿ ಹುಟ್ಟಿಕೊಳ್ಳಬಹುದಾ? ಕೆಮಿಸ್ಟ್ರಿಗೆ ಮಣ್ಣು ಬಿತ್ತು... ಬಯೋಲಾಜಿ ಮುಖ್ಯ ಸೋ ಮಕ್ಕಳಂತು ಹುಟ್ಟುತ್ತವೆ... ಎಲ್ಲರೂ ಆದರ್ಶ ದಂಪತಿಗಳು ಅಂತಾರೆ... ಸಾವು... ಏನು ಆದರ್ಶನೋ... ಈ ಆದರ್ಶ ಅನ್ನೋದೆ ಒಂದು ಕಟ್ಟುಪಾಡು... ಈ ಮನುಷ್ಯ ಭಾರಿ ಸ್ಪೀಡ್ ಆಗಿ ಡ್ರೈವ್ ಮಾಡುತ್ತಾನೆ... ತೊಂದರೆಯಿಲ್ಲ... ಆಫೀಸ್‌ನಲ್ಲಿ ಸಿಸ್ಟಮ್ ತುಂಬಾ ಸ್ಲೋ ಇದೆ... ಸಾವಿದ್ದು... ನನಗೆ ಸಿಸ್ಟಮ್ ಸ್ಲೋ ಇದೆ ಅಂದರೆ ತುಂಬಾ ಕೋಪ ಬರುತ್ತೆ... ಅದೆಲ್ಲ ಹೌದು... ಜೀವನ ಹೀಗೆ ಸಾಗಿದ್ರೆ... ನನ್ನ ಗುರಿ ತಲುಪಲಿಕ್ಕೆ ಆಗುತ್ತಾ... ಇಲ್ಲ... ಇಲ್ಲ... ಆದ್ರೆ ನನ್ನ ಸದ್ಯದ ಗುರಿಯಾದ್ರೂ ಏನೂ... ಆಯ್ಯೋ... ಇಲ್ಲಿಂದ್ಲೇ ಟ್ರಾಫಿಕ್ ಜಾಮ್... ನಾನು ಬೆಂಗಳೂರಿಗೆ ಬೈಯುತ್ತಿದ್ದೆ... ಇಲ್ಲೂ ಹಾಗೇ ಆಗುತ್ತಿದೆ... ಹುಂ... ಆದರೂ ಬೆಂಗಳೂರಿಗಿಂತ ಈ ಟ್ರಾಫಿಕ್ ಎಷ್ಟೋ ಪಾಲು ವಾಸಿ....ಈ ರಿಕ್ಷಾ ಡ್ರೈವರ್‌ಗಳು ನಿಜವಾಗಿಯೂ ಬಡವರಾ? ಮೊನ್ನೆ ತಾನೇ ಒಬ್ಬ ನಾವು ದಿನಕ್ಕೆ ೧,೫೦೦ ರೂ ದುಡಿಯುತ್ತೇವೆ ಅಂದ್ನಲ್ಲ... ಇನ್ನು ಇವರನ್ನು ನಾವು ಹೇಗೆ ಬಡವರು ಅನ್ನುವುದು? ಅವರಿಗಿಂತ ನಾನೇ ಬಡವ... ದಿನಕ್ಕೆ ಸಾವಿರ ಅಂದರೂ ೩೦,೦೦೦ ಆಯಿತು... ಮತ್ತೇ... ಬಿಡಿ ೨೦,೦೦೦ ಆಂದ್ರೂ ಸಾಕಲ್ವ... ಹಾಗಾದರೆ ಹಣಕ್ಕೆ ಬಾಯಿ ಬಾಯಿ ಬಿಡುವ ಹುಡುಗಿಯರು ಏಕೆ ಇವರನ್ನು ಮದುವೆ ಆಗೋದಿಲ್ಲ... ಹೋ... ಅವರಿಗೆ ಗೌರವ ಇರೋದಿಲ್ಲ... ಅದಕ್ಕಿರಬಹುದು... ಆದ್ರೂ ಹಣಕ್ಕೆ ಬಾಯಿ ಬಿಟ್ಟುಕೊಂಡು ಮದುವೆ ಆಗೋರಿಗಿಂತ ಈ ಆಟೋದವರೇ ಗೌರವಾನ್ವಿತರು... ಅಲ್ಲ ಈ ಮನುಷ್ಯ ಜಾತಿ, ಹಣ, ಆಂತಸ್ತು, ಶಿಕ್ಷಣ ಅಂತ ಏಕೆ ಹಾಳಗುತ್ತಿದ್ದಾನೋ... ನಾ ಮೊನ್ನೆ ಅಲ್ಲೇ ರೂಮಿನ ಪಕ್ಕ ನೋಡಿದ ಗುಡಿಸಲಿನವರು ಅದೆಷ್ಟು ಸಂತಸದಿಂದಿದ್ರು... ಇಲ್ಲ, ಇಲ್ಲ ಅವರಿಗೂ ನಮ್ಮ ಹಾಗೇ ಆಗೋ ಆಸೆ ಇರಬೇಕು... ಅವರು ಅವರ ಮಗನನ್ನು ಶಾಲೆಗೆ ಕಳುಹಿಸುವುದರ ಬಗ್ಗೆ ಮಾತನಾಡುತ್ತಿದ್ದರು...? ಅಡಿಗರು ಹೇಳಿದ್ದು ನಿಜ... “ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೆ ತುಡಿಯುವುದೇ ಜೀವ”... ಅಲ್ಲ, ನನ್ನನ್ನು ಎಲ್ಲರೂ ಏಕೆ ನೀನು ತುಂಬಾ ಫಿಲಾಸಫಿಕಲ್ ಆಗಿ ಮಾತನಾಡುತ್ತಿಯಾ ಅನ್ನುತ್ತಾರೆ... ಏನು ಫಿಲಾಸಫಿಯ ಏನೋ... ನಮ್ಮ ಅನುಭವಗಳು ಜಾಸ್ತಿ ಆಗುತ್ತಾ ಹೋದ ಹಾಗೆ ನಮ್ಮಲ್ಲಿರುವ ಮಗುತನವನ್ನು ಕೊಲೆ ಮಾಡಿಕೊಂಡು ಸಾಗುತ್ತೇವೆ... ಮೊಸ್ಟ್‌ಲೀ ನನ್ನ ಜೀವನದಲ್ಲೂ ಇದೇ ಆಗಿರಬೇಕು... ಆದರೂ ಮಗುವಾಗುವ ಚಪಲ ಇನ್ನೂ ಬಿಟ್ಟಿಲ್ಲ... ಬಾಬಾ ರಾಮ್‌ದೇವ್‌ರ ಕತೆಯೇನು...? ಬಾಬಾರ ಸರಿ ತಪ್ಪು ಏನೇ ಇರಲಿ... ಈ ಕಾಂಗ್ರೆಸ್‌ನವರದ್ದು ತೀರಾ ಕಚಡಾ ರಾಜಕಾರಣವಾಯಿತು... ಏನು ಅಯ್ಯೋ... ಬಿಡಿ ರಾಜಕೀಯ... ಈ ಸಿದ್ಧಾಂತಗಳಿಗೆ ಮಣ್ಣು ಬಿತ್ತು... ಎಲ್ಲಾ ಹೊಟ್ಟೆ ತುಂಬಿದ ಮೇಲೆ... ಈ ನಮ್ಮ ಎಡಪಂಥೀಯರು, ಬಲ ಬಲಪಂಥೀಯರು ಅನ್ನೋರಿಗೆ... ಒಬ್ಬ ಹಸಿದ ಮನುಷ್ಯನಿಗೆ ಅನ್ನ ಹಾಕುವ ಮನಸ್ಸಿಲ್ಲ... ಸುಮ್‌ಸುಮ್ನೆ ಬಾಯಲ್ಲಿ ಸಿದ್ಧಾಂತದ ತೇಗು ಬಿಡುತ್ತಾರೆ... ಆದರೂ ಈ ಸಿದ್ಧಾಂತಗಳು ಬೇಕು ಅಲ್ವಾ? ಎನ್ ಕರ್ಮ... ಏಕೆ ಹೀಗೆ ಹಾರ್ನ್ ಹಾಕುತ್ತಾರೆ ಅಂತ ಗೊತ್ತಾಗುವುದಿಲ್ಲ ಮಂಡೆ ಸಮ ಇಲ್ಲದ್ದು... ಬರೀ ಲೋಫರ್‌ಗಳು... ಅಲ್ಲ ನಾನ್ಯಾಕೆ ಕಾರ್ ತಗೋಬಾರದು... ತಗೊಂಡು ಈ ಟ್ರಾಫಿಕ್‌ಗೆ ನಾನೂ ನನ್ನದೇ ಕೊಡುಗೆ ನೀಡಬಹುದಲ್ಲ... ಹುಂ... ಎಲ್ಲವನ್ನೂ ಆ ರೀತಿ ಯೋಚನೆ ಮಾಡ್ಲಿಕ್ಕಾಗೋದಿಲ್ಲ... ನಾನು ತಗೋತ್ತೇನೆ ಕಾರು ಆದ್ರೆ.. ಈ ಚಿಕ್ಕ ಕಾರುಗಳೆಲ್ಲ ಬೇಡ... ದೊಡ್ಡ ಕಾರೇ ಆಗಬೇಕು... ಬಿಎಮ್‌ಡಬ್ಲು, ಆಡಿ ಆಗಬಹುದು... ಅದು ಆದ್ರೆ ಈಗ ತಗೋಳ್ಳಿಕ್ಕೆ ಆಗೋದಿಲ್ಲ... ಸರಿ, ಕಾಯೋಣ... ಲೈಫ್ ಇಂದಿಗೆ ಇವತ್ತಿಗೆ ಮುಗಿಯೋದಿಲ್ಲ... ಆದರೆ ಪ್ರತಿ ಕ್ಷಣವನ್ನು ಗಮ್ಮತ್ತು ಮಾಡಬೇಕು... ಈ ಭಿಕ್ಷೆ ಬೇಡುವವರು ಏಕೆ ಬರುತ್ತಾರೋ.... ನಾನು ಇವರಿಗೆ ಭಿಕ್ಷೆ ನೀಡದೆ ಎಷ್ಟು ಸಮಯ ಆಯಿತು.. ಭಿಕ್ಷೆ ನೀಡುವುದೇ ಮಹಾಪಾಪ... ಈ ಟ್ರಾಫಿಕ್ ಬೇಗ ಕ್ಲೀಯರ್ ಆಗುತ್ತೆ... ಇನ್ನು ಅಲ್ಲಿ ಹೋಗಿ ಇಳಿಬೇಕು.. ಅಲ್ಲಿಂದ ೭ ನಿಮಿಷದ ದಾರಿ... ಅದೇ ನಾವು ಶಾರ್ಟ್ ಕಟ್ ಆಗಿ ಜೋಪಡಿಯ ಮಧ್ಯೆ ಹೋಗುತ್ತಿದ್ದೆವು? ಆ ಜೋಪಡಿಗಳನ್ನು ಈಗ ನೆಲಸಮ ಮಾಡಿದ್ದಾರೆ... ಇನ್ನು ಅಲ್ಲಿ ದೊಡ್ಡ ಬಿಲ್ಡಿಂಗ್ ಮಾಡುತ್ತಾರಂತೆ... ಸೋ ಆಫೀಸ್‌ಗೆ ನಾನು ಮಾರ್ಗದ ಮೂಲಕವೇ ಹೋಗಬೇಕು... ಎಕ್ಸ್ಟ್ರಾ ೩ ನಿಮಿಷ ಬೇಕು... ಅಲ್ಲಾ ಇನ್ನು ಅಲ್ಲಿ ದೊಡ್ಡವರು ದೊಡ್ಡ ಕಟ್ಟಡ ಕಟ್ಟುತ್ತಾರೆ... ಅಮೇಲೆ ನಾವು ಅತ್ತ ಹೋಗುವಂತಿಲ್ಲ... ಬಡವರು ನಮ್ಮನ್ನು ಅವರ ನಡುವೆ ಬಿಟ್ಟು ಕೊಡುತ್ತಾರೆ...ಅದರೆ ಈ ಶ್ರೀಮಂತರು ಅವರ ಹತ್ತಿರವು ನಮ್ಮನ್ನು ಸುಳಿಯ ಬಿಡುವುದಿಲ್ಲ... ನಾನು ಶೆಟ್ರು ಬಾರ್‌ಕ್ಲೇಸ್‌ಗೆ ಸುಧೀರ್ ಹೆಸರು ಹೇಳಿ ನುಗ್ಗಿದ್ದು... ಅಬ್ಬಾ... ನಾವು ಹಾಗೇ ೨-೩ ಸಲ ಹೋಗಿದ್ವಿ ಅಲ್ಲ... ಈಗ ಹೋಗುವ ಮನಸ್ಸಿಲ್ಲ... ಆದರೂ ಆಕಾಂಕ್ಷ ಆ ರೀತಿಯಿಲ್ಲ... ನಮ್ಮ ಜೊತೆ ನಮ್ಮ ರೀತಿಯಲ್ಲೇ ಇರುತ್ತಾಳೆ.... ಹೌದು ಯಾವುದನ್ನೂ, ಯಾರನ್ನೂ ಸಾರ್ವತ್ರಿಕರಣ ಮಾಡಬಾರದು... ನಾವು ಅವತ್ತೊಮ್ಮೆ ಹುಂ ಮೆಲ್ವೀನ್ ಕೂಡ ಇದ್ರೂ... ಊಟ ಮಾಡುತ್ತಿದ್ದಾಗ ಒಬ್ಬಳು ಶ್ರಿಮಂತರ ಮನೆ ಹುಡುಗಿ ಬಡ ಮಕ್ಕಳ ಜೊತೆ ಅದೆಷ್ಟು ಚೆನ್ನಾಗಿ ಆಡುತ್ತಿದ್ದಳು ಅಲ್ವಾ... ಅಗ್ಲೇ ತಾನೇ ಅವಳು ಎಷ್ಟು ಒಳ್ಳೆ ಹುಡುಗಿ ಅಂತ ನನಗನಿಸಿದ್ದು... ಅವಳನ್ನು ಮದುವೆ ಆಗೋ ಹುಡುಗ ಅದೃಷ್ಟ ಮಾಡಿರಬೇಕು... ಅಮೇಲೆ ನಾನೇ ಏಕೆ ಆ ಆದೃಷ್ಟ ಮಾಡಿರಬಾರದು... ಅಮೇಲೆ.... ಹಾ... ಸ್ಟಾಪ್ ಬಂತು... ಬೇರೆ ಯಾರೂ ಇಳಿಲಿಕ್ಕಿಲ್ಲ... ಸೋ ನಾನೇ ನಿಲ್ಲಿಸಲು ಹೇಳಬೇಕು... ಹಣ ಪರ್ಸ್‌ಲ್ಲಿ ಇದೆಯಾ ಕಿಸೆಯಲ್ಲ... ಶರ್ಟ್‌ನ ಕಿಸೆಯಲ್ಲಿದೆ... ಇಳಿದ ಮೇಲೆ ಕೊಡುವುದಾ? ಅಲ್ಲ... ಸರಿ ಬೈಯ್ಯಾ ಉದರ್ ರೋಕ್ ದಿಜಿಯೆ..

Thursday, June 30, 2011

ಒಂಚೂರು ಕಾಯಿರಿ... ಬರ್ತಾ ಇದೆ...

ಸಾಕಷ್ಟು ಗೆಳೆಯ/ಗೆಳತಿಯರು ನನ್ನ ’ಅಟೋ’ಬಯೋಗ್ರಾಫಿ ಯಾವಾಗ ಬರುತ್ತೆ ಅಂತ ಮೆಸೇಜ್‌ಗಳ ಮೇಲೆ ಮೆಸೇಜ್ ಮಾಡಿ ಕೇಳುತ್ತಿದ್ದಾರೆ... ಅವರಿಗೆ ಸ್ವಲ್ಪ ದಿನದಲ್ಲಿ, ಇನ್ನೇನು ಬಂದೆ ಬಿಟ್ಟಿತು, ಒಂಚೂರು ಕಾಯಿರಿ ಎಂದು ಟೈಪಿಸಿ ಟೈಪಿಸಿ ನನಗೂ ಸುಸ್ತಾಗಿದೆ. ಆದರೂ ನಿಮ್ಮ ಪ್ರೀತಿಗೆ ನಾನು ಶರಣು ಹೇಳಲೇ ಬೇಕು. ನಿಮ್ಮ ಈ ಪ್ರೀತಿ ತಾನೆ ನನ್ನ ಪೆನ್ನನ್ನು, ಬರೆಯುವ ಮನಸ್ಸನ್ನು ಜೀವಂತವಾಗಿಟ್ಟಿರುವುದು! ಇನ್ನು ಕೆಲವರು ದಯಮಾಡಿ ನನ್ನ ಹೆಸರನ್ನು ಅಥವಾ ನಮ್ಮ ಬಗ್ಗೆ ಎಲ್ಲೂ ಬರೆಯಬೇಡ ಪ್ಲೀಸ್ ಎಂದಿದ್ದೀರಿ. ನನಗೆ ನಿಮ್ಮ ಸ್ಥಿತಿ ಅರ್ಥ ಆಗುತ್ತದೆ... ನಾನು ನನ್ನ ಹುಡುಗಿಯಷ್ಟು ಕಟುಕನ್ನಲ್ಲ! ನಾನು ಈ ಬರಹದಲ್ಲಿ ‘ಆದಷ್ಟು’ ಪ್ರಾಮಾಣಿಕವಾಗಿ  ನನಗನಿಸಿದ್ದನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ. ಮಾಡುತ್ತಿದ್ದೇನೆ. ಇದರರ್ಥ ನನ್ನ ಹಿಂದಿನ ಯಾವುದೇ ಬರಹಗಳಲ್ಲಿ ನಾನು ಪ್ರಾಮಾಣಿಕವಾಗಿರಲಿಲ್ಲ ಎಂದಲ್ಲ. ಇಲ್ಲಿನ ನನ್ನ ಅಭಿಪ್ರಾಯ ನೇರವಾಗಿ ನನ್ನ ಹೃದಯದಿಂದ ಬಂದಿರುವಂತದ್ದು... ಅದೇ ರೀತಿ ಇಲ್ಲಿ ನಾನು ಹೇಳುವ ಅಭಿಪ್ರಾಯಗಳೇ ನನ್ನ ನಿಲುವು, ಯೋಚನೆ ಮತ್ತು ಚಿಂತನೆಗಳ ಅಂತಿಮ ನಿಲ್ದಾಣವಲ್ಲ...



ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... ನಾನು ಎಷ್ಟೇ ಕೆಟ್ಟವನಾದರೂ ಕೂಡ ವರ್ಷಗಟ್ಟಳೆ ಶಿಕ್ಷೆ ಪಡೆಯುವ ಯಾವ ಕೆಲಸ ಕೂಡ ಮಾಡುತ್ತಿರಲಿಲ್ಲ... ಅದು ಗ್ಯಾರಂಟಿ... ಆದರೆ ಒಳ್ಳೆ ಹುಡುಗ ಎಂದು ಕರೆಸಿಕೊಂಡು 4 ವರ್ಷಗಳ ಕಾಲ ಅದೇಷ್ಟು ಹಿಂಸೆ ಪಟ್ಟಿಲ್ಲ... 


‘ಆಟೋ’ಬಯೋಗ್ರಾಫಿ... 


ಬರುತ್ತಿದೆ...


ಬರುತ್ತಲಿದೆ...



ಬಂದೇ ಬಿಟ್ಟಿತು...




ನೋಡ್ತಾ ಇರಿ ಏನೇನು ಬರೀತಿನಿಂತ...!

Saturday, June 25, 2011

ಜಾತಿ ಸೂಚಕ ಹೆಸರಿಗೆ ನಿರ್ಬಂಧ, ಹಿಮಾಚಲ ಪೊಲೀಸರ ಮಾದರಿ ನೀತಿ

ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ಅತ್ಯುತ್ತಮ ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ತನ್ನ ಪೊಲೀಸರ ಪೂರ್ಣ ಹೆಸರಿನ ಜೊತೆ ಸಾಮಾನ್ಯವಾಗಿ ಒಂದು ಭಾಗವಾಗಿರುವ ಜಾತಿ ಸೂಚಕ ಹೆಸರನ್ನು ಕಿತ್ತು ಹಾಕುವ ವಿಶಿಷ್ಟ ಯೋಜನೆಯನ್ನು ಅದು ಹಾಕಿಕೊಂಡಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಜೂನ್ ೨೪ರ ನವದೆಹಲಿ ಆವೃತ್ತಿಯ ಮುಖಪುಟದಲ್ಲಿನ ವರದಿಯೊಂದು ಹೇಳುತ್ತಿತ್ತು.

ಇಂದು ಜಾತಿ ಈ ಹಿಂದಿಗಿಂತಲೂ ಹೆಚ್ಚು ಬಲಿಷ್ಠವಾಗಿ ತನ್ನ ಕಬಂಧ ಬಾಹುವನ್ನು ಚಾಚುತ್ತಿರುವುದು ಅಧುನಿಕತೆಯ ಮುಖವಾಡ ಹಾಕಿಕೊಂಡಿರುವ ನಮಗೆಲ್ಲ ನಾಚಿಕೆಗೇಡಿನ ಸಂಗತಿ. ಆದರೂ ವೈಯುಕ್ತಿಕ ಜೀವನದಲ್ಲಿ ‘ಜಾತೀಯ ಭಾವನೆ’ ಹೊಂದಿದ್ದೇ ಆದರೆ ಅದನ್ನು ಸುಮ್ಮನೆ ಬಿಟ್ಟು ಬಿಡಬಹುದು. ಆದರೆ ಸಾರ್ವಜನಿಕ ಜೀವನ ನಡೆಸುವ ಜನರು ಕೂಡ ಜಾತಿಯ ಹೊಲಸನ್ನು ಮೈಮೇಲೆ ಹಾಕಿಕೊಂಡು ವ್ಯವಹಾರ ನಡೆಸುತ್ತಿರುವುದು ನಿಜವಾದ ದುರಂತ. ರಾಜಕಾರಣಿಗಳಲ್ಲಿ, ಸರ್ಕಾರಿ ಅಧಿಕಾರಿಗಳಲ್ಲಿ (ಪತ್ರಕರ್ತರಲ್ಲೂ ಇದು ಹೆಚ್ಚಿನ ಪ್ರಮಾಣದಲ್ಲಿ ಇದೆ) ಜಾತಿಯ ಭಾವನೆ ಇರುವುದು ಮತ್ತು ಅದು ಅವರ ವ್ಯವಹಾರದಲ್ಲಿ ಪ್ರತಿಫಲಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ. ಇಂತಹ ಸಂದರ್ಭದಲ್ಲಿ ಹಿಮಾಚಲ ಪೊಲೀಸರ ಈ ನಿರ್ಧಾರ ನಮ್ಮ ಕಣ್ಣು ತೆರೆಸುವಂತದ್ದಾಗಿದೆ.

ಇಂದು ಅದೇಷ್ಟೋ ಸರ್ಕಾರಿ ನೌಕರರಿಗೆ ತಮ್ಮ ಜಾತಿಯ ಜನರೆಂದರೆ ವಿಶಿಷ್ಟ ಒಲವು ಮತ್ತು ಬಲ. ತಮ್ಮ ಜಾತಿ ಬಾಂಧವರ ಬೇಕು ಬೇಡಗಳಿಗೆ ವಿಶೇಷವಾಗಿ ಸ್ಪಂದಿಸಿ ಉಳಿದ ಜಾತಿಯ ಜನರನ್ನು ಬೇರೆಯೇ ರೀತಿಯಲ್ಲಿ ನೋಡುವ ಗುಣವನ್ನು ಈ ನೌಕರರು ಹೊಂದಿದ್ದಾರೆ. ಇಂದು ಸರ್ಕಾರಿ ಅಧಿಕಾರಿಗಳಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ಉಳಿದಿರುವ ಎರಡೇ ಅಸ್ತ್ರ ಅಂದರೆ ಅವರಿಗೆ ಲಂಚ ಅಥವಾ ಜಾತಿಯ ಬಿಸ್ಕೇಟ್ ಬಿಸಾಕುವುದು. ಇದೆರಡಕ್ಕೂ ಬಗ್ಗದ ಅಧಿಕಾರಿಗಳು ನಮ್ಮಲ್ಲಿರುವುದು ವಿರಳ.

ಇನ್ನೂ ಒಬ್ಬ ಮಂತ್ರಿ ಕೂಡ ಹೆಚ್ಚಾಗಿ ತನ್ನ ಜಾತಿಯವರನ್ನೇ ತನ್ನ ಸುಪರ್ದಿಯಲ್ಲಿರುವ ಪ್ರಮುಖ ಮತ್ತು ಆಯಾಕಟ್ಟಿನ ಹುದ್ದೆಗಳಿಗೆ ಆಯ್ಕೆ ಮಾಡುವುದು, ಅವರಿಗೆ ವಿಶೇಷ ಸ್ಥಾನಮಾನ ನೀಡುವುದು ಅನಾಚೂನವಾಗಿ ನಡೆದು ಬಂದಿರುವ ಸಂಪ್ರದಾಯ. ರಾಜ್ಯದ ಪ್ರಸಕ್ತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದಕ್ಕೆ ‘ಮೇರು’ ಉದಾಹರಣೆ. ಹೀಗೆ ಸರ್ಕಾರಿ ವ್ಯವಹಾರದಲ್ಲಿ ಜಾತಿ ಸಾಮ್ರಾಜ್ಯದ ಹಿಡಿತ ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.

ಇಂತಹ ಸಂದರ್ಭದಲ್ಲಿ ಜಾತಿ ಮುಕ್ತ ಸಮಾಜ ನಿರ್ಮಾಣವಾಗುವ ಕನಸು ಸಧ್ಯದಲ್ಲೇ ನನಸಾಗುತ್ತದೆ ಎಂದು ಹೇಳುವಂತಿಲ್ಲ. ಅದ್ದರಿಂದ ಜಾತಿ ಮುಕ್ತ ಸಮಾಜ ನಿರ್ಮಾಣವಾಗುವ ಮುಂಚಿತವಾಗಿ ಜಾತಿ ಮುಕ್ತ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಜರೂರತ್ತಿದೆ. ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಆ ನಿಟ್ಟನಲ್ಲಿ ಅತ್ಯಂತ ಮಹತ್ವಪೂರ್ಣ ಮತ್ತು ಒಂದು ಮೈಲಿಗಲ್ಲು.

ಈ ನಿರ್ಧಾರದಿಂದ ಸರ್ಕಾರಿ ಅಧಿಕಾರಿಗಳ ಮನಸ್ಸಲ್ಲಿರುವ ಜಾತೀಯ ಭಾವನೆ ಕಡಿಮೆ ಆಗುತ್ತದೆ ಎಂದು ನಂಬುವಷ್ಟು ಮೂರ್ಖ ನಾನಲ್ಲ. ಜಾತಿ ಸೂಚಕ ಹೆಸರಿನ ಅಧಿಕಾರಿಯೊಬ್ಬನ ಬಳಿ ಯಾವುದಾದರೂ ಕೆಲಸಕ್ಕಾಗಿ ಬರುವಾತನ ಮೇಲೆ ಆತನ ಜಾತಿ ಬೀರುವ ತಕ್ಷಣದ ಪರಿಣಾಮ ಕಡಿಮೆ ಆಗುತ್ತದೆ ಎಂಬುದು ಮಾತ್ರ ದಿಟ.

ನನ್ನ ಜೊತೆ ಕೇಳಿದರೆ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಒಬ್ಬ ವ್ಯಕ್ತಿಯ ಜಾತಿಯನ್ನು ಸೂಚಿಸಲೇ ಬಾರದು ಎಂದು ಹೇಳುತ್ತೇನೆ. ಇಂದು ಶಾಲೆಯ ಪ್ರವೇಶ ಪತ್ರಗಳಲ್ಲೂ ಜಾತಿಯನ್ನು ಸೂಚಿಸುವ ಬಾಕ್ಸ್‌ಗಳಿರುವುದು ಖೇದನೀಯ. ಏನಿದ್ದರೂ ಕೂಡ ಜಾತಿ ಸೂಚಕ ಸಂಖ್ಯೆ, ಅಕ್ಷರಗಳಲ್ಲಿ ಈ ಕೆಲಸವನ್ನು ಮುಗಿಸಿಬಿಡಬೇಕು (ಅದೂ ನಮ್ಮಲಿ ಮೀಸಲಾತಿ ವ್ಯವಸ್ಥೆ ಇರುವುದರಿಂದ, ಇಲ್ಲದಿದ್ದಲ್ಲಿ ಅದು ಬೇಕಾಗಿರಲಿಲ್ಲ.)

ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯ ನಿರ್ಧಾರ ನಮ್ಮ ಕೇಂದ್ರ, ರಾಜ್ಯ ಸರ್ಕಾರಗಳಿಗೂ ಒಂದು ಮಾದರಿಯಾಗಲಿ ಎಂಬ ಆಶಯ ನನ್ನದು. ಭಟ್, ಗೌಡ, ಶೆಟ್ಟಿ, ರಾವ್, ಮೂರ್ತಿ, ನಾಯಕ್, ಪ್ರಭು, ಪೂಜಾರಿ... ಇತ್ಯಾದಿ ಇತ್ಯಾದಿ ಅಸಂಖ್ಯಾತ ಜಾತಿ ಸೂಚಕ ಪದಗಳು ನಮ್ಮ ನಮ್ಮ ಹೆಸರಿನಿಂದ ಮರೆಯಾಗಲಿ ಎಂಬ ಆಶಯ ನನ್ನದು. ಆದೂ ಪ್ರಸಕ್ತ ಸ್ಥಿತಿಯಲ್ಲಿ ಕಷ್ಟ ಸಾಧ್ಯ... ಆದರೆ ಸರ್ಕಾರಿ ನೌಕರರ ಮಟ್ಟಿಗಾದರೂ ಈ ಆಶಯ ನಿಜವಾಗಲಿ...