ಅದು ೧೯೬೦ನೇ ದಶಕದ ಕೊನೆಯ ಭಾಗ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವೆಂಬ ಪುಟ್ಟ ಪಟ್ಟಣದಲ್ಲಿ ಬೂಕನೆಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಎಂಬ ವ್ಯಕ್ತಿ ಒಂದು ಅಕ್ಕಿ ಮಿಲ್‌ನಲ್ಲಿ ಸಾಮಾನ್ಯ ಗುಮಾಸ್ತನಾಗಿ ತಿಂಗಳಿಗೆ ಕೇವಲ ೧೩೦ ರೂ ಸಂಬಳ ಪಡೆದುಕೊಂಡು ದಿನ ಸಾಗಿಸುತ್ತಿದ್ದ. ಅಷ್ಟರಲ್ಲೇ ಆ ವ್ಯಕ್ತಿ ಒಂಚೂರು ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತನಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕನಾಗಿ, ಜನಸಂಘದ ಮುಖಂಡನಾಗಿ, ಆ ಬಳಿಕ ಶಿಕಾರಿಪುರ ಪುರ ಸಭೆಯ ಸದಸ್ಯನಾಗಿ, ತುರ್ತು ಪರಿಸ್ಥಿತಿ ಘೋಷಿಸಿದ ಅದಕ್ಕೆ ಸಡ್ಡು ಹೊಡೆದ ಹೋರಾಟಗಾರನಾಗಿ, ರಾಜ್ಯದಲ್ಲಿ ಬಿಜೆಪಿಯ ಮುಖವಾಣಿಯಾಗಿ, ರೈತಾಪಿ ಜನರ ದನಿಯಾಗಿ, ರಾಜ್ಯದ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತ ಕತೆ ಈ ದೇಶದ ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಮುಕುಟ ಪ್ರಾಯವಾದದ್ದಾಗಿರಬೇಕಾಗಿತ್ತು. ಆದರೆ ಈ ನಾಡಿನ ದುರದೃಷ್ಟವೆಂದರೆ ಆ ವ್ಯಕ್ತಿ ಇಂದು ಈ ನಾಡು ಕಂಡು ಕೇಳರಿಯದ ರಾಕ್ಷಸ ರಾಜಕಾರಣದ ವಾರಸುದಾರನಾಗಿ ಬಿಟ್ಟಿದ್ದಾರೆ. ಪ್ರಜಾಪ್ರಭುತ್ವದ ಚೆಲುವನ್ನು ಹೀರಿದ ಬಂದಣಿಕೆಯಾಗಿ ಇತಿಹಾಸದ ಪುಟ ಸೇರಿದ್ದಾರೆ.
ಅಪನಂಬಿಕೆ, ಸ್ವಜನಪಕ್ಷಪಾತ, ಅಧಿಕಾರದ ಮೋಹ, ಇನ್ನೊಬ್ಬರ ಕಾಲೆಳೆಯುವ ಚಾಳಿ, ಭಟ್ಟಂಗಿಗಳ ಪಟಾಲಂ ಈ ಪಂಚ ಅನಿಷ್ಠ ಗುಣಗಳಲ್ಲಿ ಒಂದು ಗುಣವಿದ್ದರು ಕೂಡ ಒಬ್ಬ ವ್ಯಕ್ತಿಯ ಬದುಕು ಪಾತಳ ಮುಖಿ ಅಗುವುದರಲ್ಲಿ ಅನುಮಾನವಿಲ್ಲ. ಅಂತಹದ್ದರಲ್ಲಿ ಈ ಪಂಚ ಗುಣಗಳನ್ನೆ ತಮ್ಮ ನಡತೆಯಾಗಿಸಿಕೊಂಡಿವವರು ನಾಯಕರಾಗಿ ಬಿಟ್ಟರೆ ಅಥವಾ ನಾಯಕರೆಂದು ಕರೆಸಿಕೊಂಡರೆ ಅವರು ಮಾತ್ರವಲ್ಲ ಅವರಿರುವ ಸಮಾಜ ಅಥವಾ ಪರಿಸರ ಗಬ್ಬೆದ್ದು ಹೋಗುತ್ತದೆ ಎಂಬುದಕ್ಕೆ ಬಿ ಎಸ್ ಯಡಿಯೂರಪ್ಪ ಮತ್ತು ಕರ್ನಾಟಕದ ರಾಜ್ಯ ರಾಜಕೀಯವೇ ಸಾಕ್ಷಿ.
ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಒಂದಲ್ಲ ಒಂದು ಎಡವಟ್ಟನ್ನು ಮಾಡಿಕೊಂಡು ಬಂದಿದ್ದರು. ಆಗ ನಾಡಿನ ಪ್ರಾಜ್ಞರು, ಪತ್ರಿಕೆಗಳು ಅವರನ್ನು ಎಚ್ಚರಿಸುವ, ಬಡಿದೆಬ್ಬಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದವು. ಆದರೆ ಯಡಿಯೂರಪ್ಪನವರ ಅವರಿಗೆಯೇ ಮಂಕು ಬೂದಿ ಎರಚುವ ಪ್ರಯತ್ನವನ್ನು ಮಾಡಿದರೆ ಹೊರತು ತಾವು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿಲ್ಲ. ’ಮಾಡಿದ್ದುಣ್ಣೋ ಮಾರಾಯ’ ಎನ್ನುವಂತೆ ಈಗ ಅವರು ಮಾಡಿದ ತಪ್ಪುಗಳ ಫಲವನ್ನೇ ಉಣ್ಣುತ್ತಿದ್ದಾರೆ ಮತ್ತು ರಾಜ್ಯದ ಜನರಿಗೂ ಆ ಕಹಿಯನ್ನು ಉಣಿಸುವ ಪ್ರಯತ್ನ ಮಾಡುತ್ತಿದ್ದಾರೆ.
ತಮ್ಮದು ಕಂಡು ಕೇಳರಿಯದ ಸರ್ಕಾರವಾಗಲಿದೆ ಎಂದು ಹೇಳಿಕೊಂಡು ೨೦೦೮ರ ಮೇ ೩೧ರಂದು ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅನಂತರದ ೩೮ ತಿಂಗಳಲ್ಲಿ ದೇಶದ ಜನತೆ ಈ ವರೆಗೆ ’ಕಂಡು ಕೇಳರಿಯದ’ ತಪ್ಪು ಕಾರಣಗಳಿಂದಾಗಿಯೇ ಸುದ್ದಿಯಲ್ಲಿದ್ದಾರೆ.
ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ಇದು ಗುಂಡು ಹಾಕುವ ಸರ್ಕಾರ ಎಂಬ ಇಮೇಜ್‌ನ್ನು ಪಡೆದುಕೊಂಡಿತ್ತು. ಆ ಬಳಿಕ ಕೆಜಿಎಫ್ ಶಾಸಕ ವೈ ಸಂಪಂಗಿ ಲಂಚ ಪ್ರಕರಣ, ಭೂ ಹಗರಣಗಳ ಸರಣಿ, ಅಪರೇಷನ್ ಕಮಲ, ಭಿನ್ನಮತ, ಸಂಪುಟ ವಿಸ್ತರಣೆ ಕಸರತ್ತು, ರಾಜ್ಯಪಾಲರೊಂದಿಗಿನ ಗುದ್ದಾಟ, ಬಿಜೆಪಿ ಶಾಸಕರಾದ ಹಾಲಪ್ಪ ಮತ್ತು ರೇಣುಕಾಚಾರ್ಯ ನಡೆಸಿದ ಅನಾಚಾರ, ಮಠ ಮಂದಿರಗಳಿಗೆ ಹಣ, ಚರ್ಚ್ ದಾಳಿ, ಆಣೆ ಪ್ರಹಸನ, ಲೋಕಾಯುಕ್ತರ ರಾಜೀನಾಮೆ, ಲೋಕಾಯುಕ್ತರ ಅಕ್ರಮ ಗಣಿ ವರದಿ ಸೋರಿಕೆ, ಲೋಕಾಯುಕ್ತರ ದೂರವಾಣಿ ಕದ್ದಾಲಿಕೆ ಪ್ರಕರಣ... ಹೀಗೆ ಒಂದಲ್ಲ ಒಂದು ಕೆಟ್ಟ ಕಾರಣಗಳಿಂದಲೇ ಸರ್ಕಾರ ಮತ್ತು ರಾಜ್ಯ ಬಿಜೆಪಿ ಪತ್ರಿಕೆಗಳ ಮುಖಪುಟದಲ್ಲಿ ಅದ್ಯ ಸ್ಥಾನ ಪಡೆಯುತ್ತ ಸಾಗಿತ್ತು. ಇಷ್ಟೆಲ್ಲ ಸಮಸ್ಯೆಗಳು ಸುತ್ತಿಕೊಂಡಿರುವಾಗ ಅಭಿವೃದ್ಧಿ ಕೆಲಸ ನಡೆಸಲು ಪುರುಸೊತ್ತು ಇರಲು ಹೇಗೆ ಸಾಧ್ಯ?
ರಾಜ್ಯದ ಇಂದಿನ ದುಸ್ಥಿತಿಗೆ ಸರ್ಕಾರದ ಪಾಲು ಎಷ್ಟಿದೆಯೋ ಅಷ್ಟೆ ಪಾಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿವೆ. ಮೂರನ್ನು ಬಿಟ್ಟ ಈ ಮೂರು ಪಕ್ಷಗಳಿಂದಾಗಿ ರಾಜ್ಯದ ಹೆಸರಿಗೆ ರಾಷ್ಟ್ರ ಮಟ್ಟದಲ್ಲಿ ಭಾರಿ ಮಸಿಯೇ ಮೆತ್ತಿಕೊಂಡಿದೆ. ಬಳ್ಳಾರಿಯತ್ತ ಪಾದಯಾತ್ರೆ ಹೊರಟು ಬಳಲಿದ ಕಾಂಗ್ರೆಸಿಗರು ಮೊನ್ನೆ ಮೊನ್ನೆ ’ಹಳ್ಳಿ ಕಡೆಗೆ ನಮ್ಮ ನಡಿಗೆ’ಎಂದು ಹೇಳಿಕೊಂಡು ಹಳ್ಳ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಅತ್ತ ಕುಮಾರಸ್ವಾಮಿ ಮತ್ತವರ ತಂದೆ ದೇವೇ ಗೌಡರ ಜೆಡಿಎಸ್ ತನ್ನ ಹಾರಾಟವನ್ನೆ ಹೋರಾಟವೆಂದು ಭಾವಿಸಿಕೊಂಡಿದೆ. ರಾಜ್ಯದಲ್ಲಿ ಲಕ್ವ ಹೊಡಿಸಿಕೊಂಡಿರುವ ಈ ಪಕ್ಷಗಳಿಂದಾಗಿ ಬಿಜೆಪಿ ೨೦೦೯ರ ಲೋಕಸಭೆ ಚುನಾವಣೆ ನಡೆದಾಗ ೨೮ರಲ್ಲಿ ೧೯ ಸ್ಥಾನ, ೨೪ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ೧೯ ಸ್ಥಾನ ಗೆದ್ದುಕೊಳ್ಳುವಲ್ಲಿ ಶಕ್ತವಾಯಿತು. ಅದೇ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಮತ್ತು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿನ ಗೆಲುವು ಯಡಿಯೂರಪ್ಪರನ್ನು ಲಗಾಮಿಲ್ಲದ ಕುದುರೆಯನ್ನಾಗಿಸಿತ್ತು.
ಇದೆಲ್ಲದರ ಫಲವಾಗಿ ಮತ್ತು ಅನಂತ್ ಕುಮಾರ್‌ರ ಕುತಂತ್ರದ ಅರಿವಿದ್ದ ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪರ ಬೆಂಬಲಕ್ಕೆ ನಿಂತಿತು. ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಯಡಿಯೂರಪ್ಪರ ಬಗ್ಗೆ ಮೃದು ದೋರಣೆ ಹೊಂದಿದ್ದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯಂತು ಯಡಿಯೂರಪ್ಪರನ್ನು ಯಾವುದೇ ಲಜ್ಜೆಯಿಲ್ಲದೆ ಸಮರ್ಥಿಸಿ ಕೊಂಡರು. ಇತ್ತ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಸುಷ್ಮಾ ಸ್ವರಾಜ್ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಯಡಿಯೂರಪ್ಪರ ವಿರೋಧಿ ಪಾಳಯವಾಗಿದ್ದ ರೆಡ್ಡಿ ಬಣದ ಜೊತೆ ಗುರುತಿಸಿಕೊಂಡಿದ್ದರು. ಇವರಲ್ಲಿ ಯಾರು ಕೂಡ ಯಡಿಯೂರಪ್ಪರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಲಿಲ್ಲ. ಇದ್ದುದ್ದರಲ್ಲಿ ಎಲ್ ಕೆ ಅಡ್ವಾಣಿ ಒಬ್ಬರೇ ಯಡಿಯೂರಪ್ಪನವರ ಬಗ್ಗೆ ಖಡಕ್ ಆಗಿ ಮಾತನಾಡಿದ್ದರು. ಪಕ್ಷದ ದೊಡ್ಡವರ ಸಣ್ಣತನಗಳನ್ನು ಚೆನ್ನಾಗಿ ಅರಿತುಕೊಂಡ ಯಡಿಯೂರಪ್ಪ ಈಗ ಅವರನ್ನು ಥಕಥಕ ಕುಣಿಸುತ್ತಿದ್ದಾರೆ.
ಯಡಿಯೂರಪ್ಪ ಕೆಲವು ಕುತಂತ್ರಗಳನ್ನು ಅತ್ಯಂತ ಚಾಣಕ್ಷತೆಯಿಂದ ಹೆಣೆದಿದ್ದರು. ಆದರೆ ಕೆಲವು ಸಂದರ್ಭದಲ್ಲಿ ಉಗುರಿನಿಂದ ಹೋಗುವಂತದ್ದಕ್ಕೆ ಕೊಡಲಿ ಹಿಡಿದುಕೊಂಡರು. ದೇವೇ ಗೌಡರ ಕಡು ವಿರೋಧಿಯಾಗಿರುವ ಪುಟ್ಟ ಸ್ವಾಮಿ ಗೌಡರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡು ಆ ಕುಟುಂಬದ ಮತ್ತಷ್ಟು ದ್ವೇಷವನ್ನು ಕಟ್ಟಿಕೊಂಡರು. ಕುಮಾರಸ್ವಾಮಿಯವರಿಂದ ಹಣ್ಣು ಗಾಯಿ ನೀರು ಗಾಯಿಯಾಗುವಷ್ಟು ಹಗರಣಗಳ ಆರೋಪ ಎದುರಿಸಿದರು. ತಮ್ಮ ಅಪನಂಬಿಕೆಯಿಂದಾಗಿ ಪಕ್ಷದೊಳಗೆ ಮತ್ತಷ್ಟು ಶತ್ರುಗಳು ಹುಟ್ಟಿಕೊಳ್ಳುವಂತೆ ಮಾಡಿದರು. ಇಂದು ಯಡಿಯೂರಪ್ಪರ ಜೊತೆ ೬೦ಕ್ಕೂ ಮಿಕ್ಕು ಶಾಸಕರು, ೧೦ಕ್ಕೂ ಮಿಕ್ಕ ಸಂಸದರಿದ್ದಾರೆ ನಿಜ. ಆದರೆ ಅವರು ಎಲ್ಲಿ ತನಕ ಅವರ ಜೊತೆ ಇರುತ್ತಾರೆ ಎಂದು ಅವರಿಗೆಯೇ ಗೊತ್ತಿಲ್ಲ.
ಉದಾಹರಣೆಗೆ ವಿ ಎಸ್ ಆಚಾರ್ಯ, ಸದಾನಂದ ಗೌಡ ಮುಂತಾದವರು ಇಂದು ಯಡಿಯೂರಪ್ಪರ ಪ್ರಮುಖ ಸೇನಾನಿ ಸ್ಥಾನದಲ್ಲಿದ್ದಾರೆ. ಒಂದು ವೇಳೆ ಯಡಿಯೂರಪ್ಪರನ್ನು ಪಕ್ಷದಿಂದ ಉಚ್ಛಾಟಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದೇ ಆದರೆ ಆಗಲೂ ಇವರು ಯಡಿಯೂರಪ್ಪರ ಜೊತೆ ಇರುತ್ತಾರೆಯೇ ಎಂಬುದು ಸ್ವತಃ ಅವರಿಗೆಯೇ ಗೊತ್ತಿಲ್ಲ. ಏಕೆಂದರೆ ಈ ಇಬ್ಬರು ನಾಯಕರು ಕರಾವಳಿ ಕರ್ನಾಟಕಕ್ಕೆ ಸೇರಿದವರು. ಇವರಿಬ್ಬರಿಗೆ ಕರಾವಳಿ ರಾಜಕೀಯದಲ್ಲಿ ತಮ್ಮದೆ ಸ್ಥಾನವಿದ್ದರು ಕೂಡ ತಮ್ಮದೇ ಆದ ಅಸ್ತಿತ್ವವಿಲ್ಲ. ನಾಳೆ ಚುನಾವಣೆಯಲ್ಲಿ ಇವರು ಇಲ್ಲಿ ಬಿಜೆಪಿ ಹೊರತಾಗಿ ಬೇರೊಂದು ಪಕ್ಷದಿಂದ ಅಥವಾ ಪಕ್ಷೇತರವಾಗಿ ಸ್ಪರ್ಧಿಸಿದರೆ ಸೋಲುವುದು ಖಂಡಿತ. ಇಂದು ಯಡಿಯೂರಪ್ಪರ ಜೊತೆ ಇರುವ ನಾಯಕರೆಲ್ಲ ಕೋತಿ ಮತ್ತು ಮರಿ ಕೋತಿಯ ಕಥೆಯಲ್ಲಿ ಬರುವ ತಾಯಿ ಕೋತಿಯ ರೀತಿ ಇರುವವರು. ಒಂದು ವೇಳೆ ಭುಜ ದಾಟಿ ಮೇಲೆ ನೀರು ಬರುತ್ತದೆ ಎಂದಾದರೆ ತಮ್ಮ ಬಣ್ಣ ಮತ್ತು ತಾಣ ಬದಲಾಯಿಸುವ ಸಮಯ ಸಾಧಕರು. ಒಂದೊಮ್ಮೆ ಯಡಿಯೂರಪ್ಪನವರದ್ದೆ ಬೆನ್ನಿಗೆ ಚೂರಿ ಹಾಕಿದವರು. ಪಾಪ, ಇದು ಯಡಿಯೂರಪ್ಪರಿಗೆ ಇನ್ನೂ ಆರ್ಥ ವಾಗದೇ ಹೋಗಿರುವುದು ಅವರ ತುಕ್ಕು ಹಿಡಿದ ಬುದ್ಧಿಯನ್ನು ಸೂಚಿಸುತ್ತದೆ.
೨೦೦೯ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದಿಂದ ತಮ್ಮ ಮಗನನ್ನು ಲೋಕಸಭೆಯ ಅಭ್ಯರ್ಥಿಯನ್ನಾಗಿಸಲು ಯಡಿಯೂರಪ್ಪನವರು ಸಾಕಷ್ಟು ನಾಟಕ ಮಾಡಿದ್ದು ಎಲ್ಲರಿಗೂ ನೆನಪಿದೆ. ಬಿಜೆಪಿ ತಾನು ವಂಶಾಡಳಿತ, ಕುಟುಂಬ ರಜಕಾರಣದ ವಿರೋಧಿ ಎಂದು ಹೇಳಿಕೊಂಡರು ಕೂಡ ತಾನೇ ವಂಶಾಡಳಿತಕ್ಕೆ ಮಣೆ ಹಾಕಿದ ಸಾಕಷ್ಟು ಉದಾಹರಣೆಗಳಿವೆ. ಬಿಜೆಪಿಯ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಳಿಯ ರಂಜನ್ ಭಟ್ಟಾಚಾರ್ಯರನ್ನು ಅಧಿಕಾರದ ಪಡಸಾಲೆಯಲ್ಲಿ ಬಿಟ್ಟುಕೊಂಡಿದ್ದರು. ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್‌ರ ಪುತ್ರ ಮಾನ್ವೆಂದ್ರ ಸಿಂಗ್, ವಸುಂಧರಾ ರಾಜೆಯ ಪುತ್ರ ದುಷ್ಯಂತ ಸಿಂಗ್, ಆಖಿಲ ಭಾರತ ಜನತಾ ಯುವ ಮೋರ್ಚಾದ ಅಧ್ಯಕ್ಷರಾಗಿರುವ ಅನುರಾಗ್ ಸಿಂಗ್ ಠಾಕೂರ್ ಪ್ರಸಕ್ತ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್‌ರ ಪುತ್ರರಾಗಿದ್ದಾರೆ. ಆದರೆ ಅವರೆಲ್ಲ ಬಹಳ ’ಘನತೆ’ಯಿಂದ ತಮ್ಮ ಕುಟುಂಬ ಸದಸ್ಯರಿಗೆ ರಾಜಕೀಯದಲ್ಲಿ ಒಂದು ಸ್ಥಾನ ಒದಗಿಸಿದ್ದರೆ ಯಡಿಯೂರಪ್ಪನವರು ತಮ್ಮ ಪುತ್ರನಿಗಾಗಿ ಅತ್ತು ಕರೆಯಬೇಕಾಯಿತು.
ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯ ನಡುವಿನ ೨೦-೨೦ ಸರ್ಕಾರದ ಒಪ್ಪಂದ ಮುರಿದು ಬಿದ್ದು ೨೦೦೮ರಲ್ಲಿ ಚುನಾವಣೆ ಎದುರಿಸುವಂತಾದಾಗ ಉತ್ತರ ಕರ್ನಾಟಕದ ಜನರ ಮುಂದೆ ಒಕ್ಕಲಿಗ ನಾಯಕ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದೇ ಅಲವತ್ತುಕೊಂಡು ಯಡಿಯೂರಪ್ಪ ಲಕ್ಷ ಲಕ್ಷ ವೋಟ್‌ಗಳನ್ನು ತಮ್ಮ ಬೆಂಬಲಿಗರ ಜೋಳಿಗೆಗೆ ಬೀಳುವಂತೆ ಮಾಡಿದ್ದರು. ಆದರೆ ಇಂದು ಅವರೇ ಮತ್ತೊಬ್ಬ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್‌ರ ಮುಖ್ಯಮಂತ್ರಿಯ ಹಾದಿಗೆ ಬಂಡೆಕಲ್ಲಾಗಿ ಬಿಟ್ಟಿದ್ದಾರೆ!
ಇದೀಗ ಯಡಿಯೂರಪ್ಪನವರ ಪಡಸಾಲೆಯಲ್ಲಿ ಕೆಲ ಖಾಲಿ ತಲೆಯ ನಾಯಕರು ಯಡಿಯೂರಪ್ಪನವರಿ ಹೊಸ ಪಕ್ಷ ಕಟ್ಟುತ್ತಾರೆ ಎಂದು ಹೇಳುತ್ತಿದ್ದಾರೆ. ಕರ್ನಾಟಕ ಎಂದಿಗೂ ಪ್ರಾದೇಶಿಕ ಪಕ್ಷಗಳಿಗೆ ಫಲವತ್ತಾದ ಭೂಮಿಯಾಗಿಲ್ಲ. ಆದರೆ ಯಡಿಯೂರಪ್ಪನವರಿಗೆ ಕೇವಲ ಮೂರು ವರ್ಷಗಳ ಹಿಂದೆ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟುವ ಸಾಮರ್ಥ್ಯವಿತ್ತು. ಆದರೆ ಈಗ ಅವರು ತಮ್ಮ ಕೈಯಾರೆ ಆ ಶಕ್ತಿಯನ್ನು ಪೋಲು ಮಾಡಿ ಕೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮವಾಗಿರುವ ‘ಅಹಿಂದ’ದ ನಾಯಕ ಸಿದ್ಧರಾಮಯ್ಯ ಯಡಿಯೂರಪ್ಪರ ಜೊತೆ ಸೇರಿಕೊಂಡರೆ ಹೊಸ ಪ್ರಾದೇಶಿಕ ಪಕ್ಷ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಮುಳುಗು ನೀರು ಆಗಬಹುದು. ಮುಂದಿನ ಚುನಾವಣೆ ಮತ್ತು ಸರ್ಕಾರ ರಚನೆ ಸಂದರ್ಭದಲ್ಲಿ ಆ ಪಕ್ಷ ನಿರ್ಣಾಯಕ ಪಾತ್ರ ವಹಿಸಲೂ ಬಹುದು. ಆದರೆ ದೇವೇ ಗೌಡರಿಂದ ಸಾಲು ಸಾಲು ಹೊಡೆತ ತಿಂದಿರುವ ಸಿದ್ಧರಾಮಯ್ಯ ಗೌಡರಿಗಿಂತ ಖತರ್‌ನಾಕ್ ಆಗಿ ರೂಪುಗೊಂಡಿರುವ ಯಡಿಯೂರಪ್ಪರ ಜೊತೆ ಕೈ ಜೋಡಿಸುವುದು ಅನುಮಾನ.
ಇನ್ನು ಬಿಜೆಪಿಯಿಂದ ಹೊರಬಂದು ಪ್ರಾದೇಶಿಕ ಪಕ್ಷ ಕಟ್ಟಲು ಹೋಗಿ ಮಧ್ಯ ಪ್ರದೇಶದಲ್ಲಿ ಉಮಾಭಾರತಿ ಮತ್ತು ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಕೈ ಸಿಟ್ಟುಕೊಂಡಿದ್ದಾರೆ. ಅಲ್ಲಿ ನಾವು ಇನ್ನೊಂದು ವಿಷಯವನ್ನು ಗಮನಿಸಬೇಕಾಗುತ್ತದೆ. ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಟ್ಟಿಗೆ ಅಸ್ಪಶ್ಯರಾದ ಬಳಿಕ ಅಲ್ಲಿ ಬಿಜೆಪಿ ಮತ್ತೆ ಒಮ್ಮೆಯೂ ಗೆಲ್ಲಲಿಲ್ಲ. ಅದೇ ರೀತಿ ರಾಜಸ್ಥಾನದಲ್ಲಿ ವಸುಂಧರಾ ರಾಜೆಯವರಿಗೆ ಬುದ್ಧಿ ಕಲಿಸಲು ಹೋಗಿ ಅಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಆದರೆ ಮಧ್ಯ ಪ್ರದೇಶದಲ್ಲಿ ಅಧಿಕಾರವಧಿಯ ಮಧ್ಯದಲ್ಲೆ ಬಿಜೆಪಿಯ ಬೆಂಕಿ ಚೆಂಡು ಉಮಾಭಾರತಿಯವರನ್ನು ಮುಖ್ಯಮಂತ್ರಿ ಹುದ್ದೆಯುಂದ ಕೆಳಗಿಳಿಸಿ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಮುಖ್ಯಮಂತ್ರಿಯಾಗಿಸಿತ್ತು. ಇದರಿಂದ ಬಿಜೆಪಿಗೆ ಯಾವುದೇ ಹಾನಿಯಾಗದೇ ಅದು ಮುಂದಿನ ವಿಧಾನ ಸಭೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿತ್ತು. ಅದೇ ರೀತಿ ಗುಜತಾತ್‌ನಲ್ಲಿ ಪ್ರಬಲ ಪಟೇಲ್ ಸಮುದಾಯದ ಬಲಿಷ್ಠ ನಾಯಕರಾಗಿದ್ದ ಕೇಶುಭಾಯ್ ಪಟೇಲ್‌ರನ್ನು ಅವರ ಆಡಳಿತಾವಧಿಯ ಮಧ್ಯದಲ್ಲೇ ಬದಲಾಯಿಸಿದ ಬಿಜೆಪಿ ಅತ್ಯಂತ ಸಣ್ಣ ಸಮುದಾಯಕ್ಕೆ ಸೇರಿದ್ದ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿಯನ್ನಾಗಿಸಿ ಅಲ್ಲಿಯೂ ಯಶ ಕಂಡಿದೆ. ಇದನ್ನು ಗಮನಿಸಿದಾಗ ಬಿಜೆಪಿ ಉಚ್ಛಾಟನೆ, ಮುಖ್ಯಮಂತ್ರಿ ಬದಲಾವಣೆಗಳು ಮುಂತಾದವುಗಳಿಂದ ಮಿಶ್ರ ಫಲ ಅನುಭವಿಸಿದೆ.
ರಾಜ್ಯದ ಮಟ್ಟಿಗೆ ಅಲ್ಪಾವಧಿ ಸರ್ಕಾರ, ಮುಖ್ಯಮಂತ್ರಿಗಳು ಹೊಸದೇನಲ್ಲ. ನಮ್ಮಲ್ಲಿ ಕಡಿಮೆ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿಗಳು, ರಾಜಕೀಯ ತಂತ್ರಗಾರಿಕೆಯ ರೌದ್ರ ನರ್ತನಕ್ಕೆ ಸಿಳುಕಿ ಅಧಿಕಾರ ಕಳೆದಿಕೊಂಡವರ ದೊಡ್ಡ ಪರಂಪರೆಯೇ ಇದೆ. ಆದರೆ ಯಡಿಯೂರಪ್ಪರಷ್ಟು ಬೀದಿ ರಂಪ ಮಾಡಿಕೊಂಡು ಹುದ್ದೆ ತ್ಯಜಿಸಿದ ಮುಖ್ಯಮಂತ್ರಿ ರಾಜ್ಯ ಬಿಡಿ ದೇಶದಲ್ಲಿಯೇ ಮತ್ತೊಬ್ಬರಿಲ್ಲ. ಆಗುವುದೆಲ್ಲ ಆಗಿ ಹೋಗಿದೆ ಆದರೂ ಯಡಿಯೂರಪ್ಪನವರು ಪಾಠ ಕಲಿತಿಲ್ಲ. ಆದರೆ ಅವರ ರಾಜಕೀಯ ಅವನತಿ ಮುಂದಿನ ರಾಜಕಾರಣಿಗಳಿಗೆ ಒಂದು ಪಾಠವಾಗಲಿ ಎಂಬುದಷ್ಟೆ ಈಗ ಉಳಿದಿರುವ ಆಶಯ.
1 comment:
ಅಪನಂಬಿಕೆ, ಸ್ವಜನಪಕ್ಷಪಾತ, ಅಧಿಕಾರದ ಮೋಹ, ಇನ್ನೊಬ್ಬರ ಕಾಲೆಳೆಯುವ ಚಾಳಿ, ಭಟ್ಟಂಗಿಗಳ ಪಟಾಲಂ - ಈ ಎಲ್ಲಾ ಗುಣಗಳನ್ನೇ ಹೊತ್ತು ನಿಂತಿದ್ದಾರೆ ಯೆಡ್ಡಿ.
ಯೆಡಿಯುರಪ್ಪ ನಿಂದ ಇಡೀ ಪಕ್ಷದ ಹೆಸರು ಹಾಳಾಯಿತು. ಬದಲಾವಣೆಗೆ ಸದಾ ಪ್ರೋತ್ಸಾಹಿಸುವ ನಾವು ಇಂದು " Sympathy vote " ಕೊಟ್ಟು ಪರಿತಪಿಸಬೇಕಾಗಿದೆ.
ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಯ ಮುಂಚೂಣಿಯಲ್ಲಿರುವ ನಾಯಕರು ಗೆಲ್ಲೋದೆ ಕಷ್ಟ ಅನ್ನೋ ಪರಿಸ್ಥಿತಿ ಇದೆ.
ಆದ್ರೆ ಈಗ ನಮ್ಮೆಲ್ಲರ ಮುಂದಿರೋ ಪ್ರಶ್ನೆ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕೋದು?
Post a Comment