Thursday, July 7, 2011

ನನ್ನ 'ಆಟೋ'ಬಯೋಗ್ರಾಫಿ...

  1. ಭಾಗ 1
ಹುಂ... ಯಾವುದರಲ್ಲಿ ಕೂರೋದು ಅಂತ ಗೊತ್ತಾಗುತ್ತಿಲ್ಲ. ಯಾರು ಬೇಗ ಹೋಗುತ್ತಾನೋ ಅವನದರಲ್ಲಿ ಕೂರಬೇಕು... ಅದೇ ಗೊತ್ತಾಗುತ್ತಿಲ್ಲವೇ?... ಸಾಯಲಿ, ಯಾವುದರಲ್ಲಾದರೂ ಒಂದರಲ್ಲಿ ಕೂರೋಣ... ಸರಿ, ಇದರಲ್ಲೇ ಕೂರುತ್ತೇನೆ.... ಇನ್ನು ಇವನು ಹೊರಡಬೇಕಾದರೆ ನಾಲ್ಕೈದು ಮಂದಿ ಆದರೂ ಆಗಬೇಕು... ಅವಳು ಕೂಡ ನಮ್ಮತ್ತ ಹೋಗುವವಳೋ.... ದೇವರೇ ನನ್ನ ಪಕ್ಕನೇ ಕೂರಲಿ.... ಛೇ... ಅ ಗಾಡಿ ಹೋಯಿತು... ನಾನು ಅದರಲ್ಲಾದರೂ ಕೂರುತ್ತಿದ್ದೆ. ಇನ್ನು ಮೊಬೈಲ್‌ನಲ್ಲಿ ಮೇಲ್ ಆದ್ರೂ ಚೆಕ್ ಮಾಡುತ್ತೇನೆ... ಇವತ್ತು ಸಂಜೆ ಗುಲಾಬ್ ಜಾಮೂನ್ ತಿನ್ನಬೇಕು... ಆವತ್ತು ಆಂಟಿ ಬಂದಿದ್ದಾಗ ತಿಂದದ್ದು.... ಅಯ್ಯೋ ಈ ಹುಡುಗಿಗೆ ಫೋನ್ ಮಾಡದೇ ತುಂಬ ದಿನ ಆಯಿತಲ್ಲ.... ಸಂಜೆ ಮಳೆ ಬರೋದು ಗ್ಯಾರಂಟಿ... ಈ ಮುದುಕಪ್ಪ ಏಕೆ ಇಲ್ಲಿ ಬಂದು ಕುಳಿತ... ಛೇ... ಇವತ್ತಾದರೂ ಆಫೀಸ್‌ಗೆ ಬೇಗ ಹೋಗಿ ಸಂಜೆ ಬೇಗ ಬರಬೇಕು ಅಂತಿದ್ದೆ... ಹೋ... ಬಚಾವ್ ಹೊರಟೇ ಬಿಟ್ಟ... ಅದು ಸರಿ, ನಾನು ಬಚಾವ್ ಅಂತ ಹೇಳಲು ಶುರು ಮಾಡಿದ್ದು ಯಾವಾಗ? ಅದೇ ನಮ್ಮ ಮನೆಗೆ ಬರುತ್ತಿದ್ದ ಮನ್ಮಥ ಡ್ರೈವರ್‌ನಿಂದ ಅಲ್ವಾ ನನಗೆ ಈ ಪದ ಸಿಕ್ಕಿದ್ದು.... ನಮಗೆ ಯಾರು ಯಾರು ಏನೇನು ಕೊಟ್ಟು ಹೋಗುತ್ತಾರೋ... ಲೈಫ್ ಅನ್ನೋದೆ ಇಷ್ಟು.... ಯಾರ‍್ಯಾರೋ ಕೊಟ್ಟದ್ದೆ ನಮ್ಮ ಜೊತೆ... ಪುನಃ ಇಲ್ಲಿ ನಿಲ್ಲಿಸುತ್ತಿದ್ದಾನೆ... ಛೇ ಯಾಕಪ್ಪ... ನಾನು ಈ ಗಾಡಿಯಲ್ಲಿ ಕೂತೆ... ಎಂತಹ ಬಿಸಿಲು... ೪೭ ಡಿಗ್ರಿ ಸೆಲ್ಸಿಯಸ್ ಅಂತೆ... ಆದರೂ ನಾನು ನಿರೀಕ್ಷಿದಷ್ಟು ಧಗೆ ಇಲ್ಲ... ಏನೇ ಆಗಲಿ ಒಂದು ಒಳ್ಳೆ ಎಕ್ಸ್‌ಪಿರಿಯೆನ್ಸ್... ಆಯ್ಯೋ ಇವತ್ತು ಕೃತಿಕಾಳ ಬರ್ತ್ ಡೇ ಅಲ್ವಾ? ಹಮ್, ಹೌದು... ಇನ್ನೂ ವಿಶ್ ಮಾಡಿಲ್ಲ... ಈಗ್ಲೇ ಮೆಸೆಜ್ ಮಾಡುತ್ತೇನೆ... ಬೇಡ ಬೇಡ ಅವಳಿಗೆ ಮೆಸೆಜ್ ಮಾಡೊದಕ್ಕಿಂತ ಕಾಲ್ ಮಾಡೋದೆ ಬೆಟರ್... ಆ ಹುಡುಗಿ ನೋಡು ಸಖತ್ತಾಗಿದ್ದಾಳೆ... ಆದರೂ ಸ್ವಲ್ಪ ಬಿಳಿ ಜಾಸ್ತಿ ಆಯಿತು ಅಂತ ಅನ್ನಿಸುತ್ತೆ... ನಾನ್ಯಾಕೆ ಈಗ ಹುಡುಗಿಯರ ಬಗ್ಗೆ ಸಿಕ್ಕಾಪಟ್ಟೆ ಯೋಚಿಸುತ್ತೇನೆ... ಮೊನ್ನೆ ಆನಿಲ್ ನಾನು ಹುಡುಗಿ ಹುಡುಕುತ್ತಿದ್ದೇನೆ ಆಂದ ಬಳಿಕ ತಾನೇ? ಇಲ್ಲ, ಇಲ್ಲ ಹಾಗೇನು ಇಲ್ಲ. ನಾನು ಮೊದಲು ಕೂಡ ಹೀಗೆಯೇ ಇದ್ದೆ. ಹುಂ. ಆದರೆ ನಾನು ಆಗ ಈ ರೀತಿಯೆಲ್ಲ ಯೋಚಿಸುತ್ತಿರಲಿಲ್ಲ... ಮದುವೆ ಅಂತೆ... ಮದುವೆ.... ಸುಮ್ಮನೆ ಸ್ಮಶಾನ ವಾಸಿ ಆಗೋದು ಒಳ್ಳೆಯದು... ಅದನ್ನು ಬಿಟ್ಟಾಕು... ಆವತ್ತು ಅವಳು ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಂಡು ಬಿಟ್ಟಿದ್ರೆ... ಹೌದು ಒಪ್ಕೋಬಹುದಿತ್ತೇನೋ... ಆದರೂ ನನಗೆ ನನ್ನದೆ ಆದ ಕೆಲವು ಚಿಂತನೆಗಳಿವೆ... ನಾವಿಬ್ಬರು ಅದ್ಭುತ ಕೆಮಿಸ್ಟ್ರಿ ಹೊಂದಿದ್ವಿ ನಿಜ... ಆವಳಿಗೆ ಶೀತ ಆದರೂ ೩೦೦೦ ಕಿಮೀ ದೂರ ಇದ್ದ ನನಗೆ ಸಿಕ್ಸ್ತ್ ಸೆನ್ಸ್ ಮೂಲಕ ಗೊತ್ತಾಗುತ್ತಿತ್ತಲ್ಲ... ತಕ್ಷಣ ಆರ್ ಯೂ ಫೈನ್? ಅಂತ ಮೆಸೆಜ್ ಮಾಡುತ್ತಿದ್ದೇನಲ್ಲ... ಅಬ್ಬಾ... ನಾಳೆ ಇನ್ಯಾರನ್ನೋ ಕಟ್ಟಿಕೊಳ್ಳಬಹುದು... ಅವಳ ಜೊತೆ ಇಂತಹ ಕೆಮಿಸ್ಟ್ರಿ ಹುಟ್ಟಿಕೊಳ್ಳಬಹುದಾ? ಕೆಮಿಸ್ಟ್ರಿಗೆ ಮಣ್ಣು ಬಿತ್ತು... ಬಯೋಲಾಜಿ ಮುಖ್ಯ ಸೋ ಮಕ್ಕಳಂತು ಹುಟ್ಟುತ್ತವೆ... ಎಲ್ಲರೂ ಆದರ್ಶ ದಂಪತಿಗಳು ಅಂತಾರೆ... ಸಾವು... ಏನು ಆದರ್ಶನೋ... ಈ ಆದರ್ಶ ಅನ್ನೋದೆ ಒಂದು ಕಟ್ಟುಪಾಡು... ಈ ಮನುಷ್ಯ ಭಾರಿ ಸ್ಪೀಡ್ ಆಗಿ ಡ್ರೈವ್ ಮಾಡುತ್ತಾನೆ... ತೊಂದರೆಯಿಲ್ಲ... ಆಫೀಸ್‌ನಲ್ಲಿ ಸಿಸ್ಟಮ್ ತುಂಬಾ ಸ್ಲೋ ಇದೆ... ಸಾವಿದ್ದು... ನನಗೆ ಸಿಸ್ಟಮ್ ಸ್ಲೋ ಇದೆ ಅಂದರೆ ತುಂಬಾ ಕೋಪ ಬರುತ್ತೆ... ಅದೆಲ್ಲ ಹೌದು... ಜೀವನ ಹೀಗೆ ಸಾಗಿದ್ರೆ... ನನ್ನ ಗುರಿ ತಲುಪಲಿಕ್ಕೆ ಆಗುತ್ತಾ... ಇಲ್ಲ... ಇಲ್ಲ... ಆದ್ರೆ ನನ್ನ ಸದ್ಯದ ಗುರಿಯಾದ್ರೂ ಏನೂ... ಆಯ್ಯೋ... ಇಲ್ಲಿಂದ್ಲೇ ಟ್ರಾಫಿಕ್ ಜಾಮ್... ನಾನು ಬೆಂಗಳೂರಿಗೆ ಬೈಯುತ್ತಿದ್ದೆ... ಇಲ್ಲೂ ಹಾಗೇ ಆಗುತ್ತಿದೆ... ಹುಂ... ಆದರೂ ಬೆಂಗಳೂರಿಗಿಂತ ಈ ಟ್ರಾಫಿಕ್ ಎಷ್ಟೋ ಪಾಲು ವಾಸಿ....ಈ ರಿಕ್ಷಾ ಡ್ರೈವರ್‌ಗಳು ನಿಜವಾಗಿಯೂ ಬಡವರಾ? ಮೊನ್ನೆ ತಾನೇ ಒಬ್ಬ ನಾವು ದಿನಕ್ಕೆ ೧,೫೦೦ ರೂ ದುಡಿಯುತ್ತೇವೆ ಅಂದ್ನಲ್ಲ... ಇನ್ನು ಇವರನ್ನು ನಾವು ಹೇಗೆ ಬಡವರು ಅನ್ನುವುದು? ಅವರಿಗಿಂತ ನಾನೇ ಬಡವ... ದಿನಕ್ಕೆ ಸಾವಿರ ಅಂದರೂ ೩೦,೦೦೦ ಆಯಿತು... ಮತ್ತೇ... ಬಿಡಿ ೨೦,೦೦೦ ಆಂದ್ರೂ ಸಾಕಲ್ವ... ಹಾಗಾದರೆ ಹಣಕ್ಕೆ ಬಾಯಿ ಬಾಯಿ ಬಿಡುವ ಹುಡುಗಿಯರು ಏಕೆ ಇವರನ್ನು ಮದುವೆ ಆಗೋದಿಲ್ಲ... ಹೋ... ಅವರಿಗೆ ಗೌರವ ಇರೋದಿಲ್ಲ... ಅದಕ್ಕಿರಬಹುದು... ಆದ್ರೂ ಹಣಕ್ಕೆ ಬಾಯಿ ಬಿಟ್ಟುಕೊಂಡು ಮದುವೆ ಆಗೋರಿಗಿಂತ ಈ ಆಟೋದವರೇ ಗೌರವಾನ್ವಿತರು... ಅಲ್ಲ ಈ ಮನುಷ್ಯ ಜಾತಿ, ಹಣ, ಆಂತಸ್ತು, ಶಿಕ್ಷಣ ಅಂತ ಏಕೆ ಹಾಳಗುತ್ತಿದ್ದಾನೋ... ನಾ ಮೊನ್ನೆ ಅಲ್ಲೇ ರೂಮಿನ ಪಕ್ಕ ನೋಡಿದ ಗುಡಿಸಲಿನವರು ಅದೆಷ್ಟು ಸಂತಸದಿಂದಿದ್ರು... ಇಲ್ಲ, ಇಲ್ಲ ಅವರಿಗೂ ನಮ್ಮ ಹಾಗೇ ಆಗೋ ಆಸೆ ಇರಬೇಕು... ಅವರು ಅವರ ಮಗನನ್ನು ಶಾಲೆಗೆ ಕಳುಹಿಸುವುದರ ಬಗ್ಗೆ ಮಾತನಾಡುತ್ತಿದ್ದರು...? ಅಡಿಗರು ಹೇಳಿದ್ದು ನಿಜ... “ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೆ ತುಡಿಯುವುದೇ ಜೀವ”... ಅಲ್ಲ, ನನ್ನನ್ನು ಎಲ್ಲರೂ ಏಕೆ ನೀನು ತುಂಬಾ ಫಿಲಾಸಫಿಕಲ್ ಆಗಿ ಮಾತನಾಡುತ್ತಿಯಾ ಅನ್ನುತ್ತಾರೆ... ಏನು ಫಿಲಾಸಫಿಯ ಏನೋ... ನಮ್ಮ ಅನುಭವಗಳು ಜಾಸ್ತಿ ಆಗುತ್ತಾ ಹೋದ ಹಾಗೆ ನಮ್ಮಲ್ಲಿರುವ ಮಗುತನವನ್ನು ಕೊಲೆ ಮಾಡಿಕೊಂಡು ಸಾಗುತ್ತೇವೆ... ಮೊಸ್ಟ್‌ಲೀ ನನ್ನ ಜೀವನದಲ್ಲೂ ಇದೇ ಆಗಿರಬೇಕು... ಆದರೂ ಮಗುವಾಗುವ ಚಪಲ ಇನ್ನೂ ಬಿಟ್ಟಿಲ್ಲ... ಬಾಬಾ ರಾಮ್‌ದೇವ್‌ರ ಕತೆಯೇನು...? ಬಾಬಾರ ಸರಿ ತಪ್ಪು ಏನೇ ಇರಲಿ... ಈ ಕಾಂಗ್ರೆಸ್‌ನವರದ್ದು ತೀರಾ ಕಚಡಾ ರಾಜಕಾರಣವಾಯಿತು... ಏನು ಅಯ್ಯೋ... ಬಿಡಿ ರಾಜಕೀಯ... ಈ ಸಿದ್ಧಾಂತಗಳಿಗೆ ಮಣ್ಣು ಬಿತ್ತು... ಎಲ್ಲಾ ಹೊಟ್ಟೆ ತುಂಬಿದ ಮೇಲೆ... ಈ ನಮ್ಮ ಎಡಪಂಥೀಯರು, ಬಲ ಬಲಪಂಥೀಯರು ಅನ್ನೋರಿಗೆ... ಒಬ್ಬ ಹಸಿದ ಮನುಷ್ಯನಿಗೆ ಅನ್ನ ಹಾಕುವ ಮನಸ್ಸಿಲ್ಲ... ಸುಮ್‌ಸುಮ್ನೆ ಬಾಯಲ್ಲಿ ಸಿದ್ಧಾಂತದ ತೇಗು ಬಿಡುತ್ತಾರೆ... ಆದರೂ ಈ ಸಿದ್ಧಾಂತಗಳು ಬೇಕು ಅಲ್ವಾ? ಎನ್ ಕರ್ಮ... ಏಕೆ ಹೀಗೆ ಹಾರ್ನ್ ಹಾಕುತ್ತಾರೆ ಅಂತ ಗೊತ್ತಾಗುವುದಿಲ್ಲ ಮಂಡೆ ಸಮ ಇಲ್ಲದ್ದು... ಬರೀ ಲೋಫರ್‌ಗಳು... ಅಲ್ಲ ನಾನ್ಯಾಕೆ ಕಾರ್ ತಗೋಬಾರದು... ತಗೊಂಡು ಈ ಟ್ರಾಫಿಕ್‌ಗೆ ನಾನೂ ನನ್ನದೇ ಕೊಡುಗೆ ನೀಡಬಹುದಲ್ಲ... ಹುಂ... ಎಲ್ಲವನ್ನೂ ಆ ರೀತಿ ಯೋಚನೆ ಮಾಡ್ಲಿಕ್ಕಾಗೋದಿಲ್ಲ... ನಾನು ತಗೋತ್ತೇನೆ ಕಾರು ಆದ್ರೆ.. ಈ ಚಿಕ್ಕ ಕಾರುಗಳೆಲ್ಲ ಬೇಡ... ದೊಡ್ಡ ಕಾರೇ ಆಗಬೇಕು... ಬಿಎಮ್‌ಡಬ್ಲು, ಆಡಿ ಆಗಬಹುದು... ಅದು ಆದ್ರೆ ಈಗ ತಗೋಳ್ಳಿಕ್ಕೆ ಆಗೋದಿಲ್ಲ... ಸರಿ, ಕಾಯೋಣ... ಲೈಫ್ ಇಂದಿಗೆ ಇವತ್ತಿಗೆ ಮುಗಿಯೋದಿಲ್ಲ... ಆದರೆ ಪ್ರತಿ ಕ್ಷಣವನ್ನು ಗಮ್ಮತ್ತು ಮಾಡಬೇಕು... ಈ ಭಿಕ್ಷೆ ಬೇಡುವವರು ಏಕೆ ಬರುತ್ತಾರೋ.... ನಾನು ಇವರಿಗೆ ಭಿಕ್ಷೆ ನೀಡದೆ ಎಷ್ಟು ಸಮಯ ಆಯಿತು.. ಭಿಕ್ಷೆ ನೀಡುವುದೇ ಮಹಾಪಾಪ... ಈ ಟ್ರಾಫಿಕ್ ಬೇಗ ಕ್ಲೀಯರ್ ಆಗುತ್ತೆ... ಇನ್ನು ಅಲ್ಲಿ ಹೋಗಿ ಇಳಿಬೇಕು.. ಅಲ್ಲಿಂದ ೭ ನಿಮಿಷದ ದಾರಿ... ಅದೇ ನಾವು ಶಾರ್ಟ್ ಕಟ್ ಆಗಿ ಜೋಪಡಿಯ ಮಧ್ಯೆ ಹೋಗುತ್ತಿದ್ದೆವು? ಆ ಜೋಪಡಿಗಳನ್ನು ಈಗ ನೆಲಸಮ ಮಾಡಿದ್ದಾರೆ... ಇನ್ನು ಅಲ್ಲಿ ದೊಡ್ಡ ಬಿಲ್ಡಿಂಗ್ ಮಾಡುತ್ತಾರಂತೆ... ಸೋ ಆಫೀಸ್‌ಗೆ ನಾನು ಮಾರ್ಗದ ಮೂಲಕವೇ ಹೋಗಬೇಕು... ಎಕ್ಸ್ಟ್ರಾ ೩ ನಿಮಿಷ ಬೇಕು... ಅಲ್ಲಾ ಇನ್ನು ಅಲ್ಲಿ ದೊಡ್ಡವರು ದೊಡ್ಡ ಕಟ್ಟಡ ಕಟ್ಟುತ್ತಾರೆ... ಅಮೇಲೆ ನಾವು ಅತ್ತ ಹೋಗುವಂತಿಲ್ಲ... ಬಡವರು ನಮ್ಮನ್ನು ಅವರ ನಡುವೆ ಬಿಟ್ಟು ಕೊಡುತ್ತಾರೆ...ಅದರೆ ಈ ಶ್ರೀಮಂತರು ಅವರ ಹತ್ತಿರವು ನಮ್ಮನ್ನು ಸುಳಿಯ ಬಿಡುವುದಿಲ್ಲ... ನಾನು ಶೆಟ್ರು ಬಾರ್‌ಕ್ಲೇಸ್‌ಗೆ ಸುಧೀರ್ ಹೆಸರು ಹೇಳಿ ನುಗ್ಗಿದ್ದು... ಅಬ್ಬಾ... ನಾವು ಹಾಗೇ ೨-೩ ಸಲ ಹೋಗಿದ್ವಿ ಅಲ್ಲ... ಈಗ ಹೋಗುವ ಮನಸ್ಸಿಲ್ಲ... ಆದರೂ ಆಕಾಂಕ್ಷ ಆ ರೀತಿಯಿಲ್ಲ... ನಮ್ಮ ಜೊತೆ ನಮ್ಮ ರೀತಿಯಲ್ಲೇ ಇರುತ್ತಾಳೆ.... ಹೌದು ಯಾವುದನ್ನೂ, ಯಾರನ್ನೂ ಸಾರ್ವತ್ರಿಕರಣ ಮಾಡಬಾರದು... ನಾವು ಅವತ್ತೊಮ್ಮೆ ಹುಂ ಮೆಲ್ವೀನ್ ಕೂಡ ಇದ್ರೂ... ಊಟ ಮಾಡುತ್ತಿದ್ದಾಗ ಒಬ್ಬಳು ಶ್ರಿಮಂತರ ಮನೆ ಹುಡುಗಿ ಬಡ ಮಕ್ಕಳ ಜೊತೆ ಅದೆಷ್ಟು ಚೆನ್ನಾಗಿ ಆಡುತ್ತಿದ್ದಳು ಅಲ್ವಾ... ಅಗ್ಲೇ ತಾನೇ ಅವಳು ಎಷ್ಟು ಒಳ್ಳೆ ಹುಡುಗಿ ಅಂತ ನನಗನಿಸಿದ್ದು... ಅವಳನ್ನು ಮದುವೆ ಆಗೋ ಹುಡುಗ ಅದೃಷ್ಟ ಮಾಡಿರಬೇಕು... ಅಮೇಲೆ ನಾನೇ ಏಕೆ ಆ ಆದೃಷ್ಟ ಮಾಡಿರಬಾರದು... ಅಮೇಲೆ.... ಹಾ... ಸ್ಟಾಪ್ ಬಂತು... ಬೇರೆ ಯಾರೂ ಇಳಿಲಿಕ್ಕಿಲ್ಲ... ಸೋ ನಾನೇ ನಿಲ್ಲಿಸಲು ಹೇಳಬೇಕು... ಹಣ ಪರ್ಸ್‌ಲ್ಲಿ ಇದೆಯಾ ಕಿಸೆಯಲ್ಲ... ಶರ್ಟ್‌ನ ಕಿಸೆಯಲ್ಲಿದೆ... ಇಳಿದ ಮೇಲೆ ಕೊಡುವುದಾ? ಅಲ್ಲ... ಸರಿ ಬೈಯ್ಯಾ ಉದರ್ ರೋಕ್ ದಿಜಿಯೆ..

No comments: