Friday, August 2, 2013

ಕುಸಿದ ಅಥ್ಲೇಟಿಕ್ಸ್ ಗುಣಮಟ್ಟ, ಕಲಿಯಬಾರದೆ ಪಾಠ?

ಭಾರತ ಜಾಗತಿಕ ಕ್ರೀಡಾರಂಗದಲ್ಲಿ ಮಿಂಚಲಿದೆ, ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕಗಳು ಸೂರೆ ಹೊಡೆಯಲಿದೆ ಎಂದು ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದೆರಡು ಪದಕ ಗೆದ್ದ ಬಳಿಕ ನಮ್ಮ ಮುಂದೆ ಹಾರಿ ಬಿಡುವ ಬೆಲೂನು. ಮಾಧ್ಯಮಗಳಲ್ಲಿಯೂ ಕೂಡ ಗೆದ್ದವರ ಗುಣಗಾನ, ಸಂದರ್ಶನ, ವ್ಯಕ್ತಿತ್ವದ ಅನಾವರಣದ ಪ್ರಯತ್ನ. ಗೆದ್ದವರು ಅಭಿನಂದನೆಗೆ, ಪ್ರೇರಣೆಗೆ ಪಾತ್ರರು. ಆದರೆ ದೇಶ ಕ್ರೀಡಾಶಕ್ತಿಯಾಗಿ ಮೆರೆಯಬೇಕಾದರೆ ಗೆಲುವಿನ ಗುಣಮಟ್ಟ ಅತ್ಯಗತ್ಯ. ಗೆದ್ದೆತ್ತಿನ ಬಾಲ ಹಿಡಿಯಲು ಎದ್ದು ಬಿದ್ದು ಓಡುವವರ ಕಣ್ಣಿಗೆ ಗುಣಮಟ್ಟದ ಮೌಲ್ಯ ಅಗೋಚರ.

ಜುಲೈ ಮೊದಲ ವಾರ ಪುಣೆಯಲ್ಲಿ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ನಡೆದ ನೆನಪು ಮಸುಕುವ ಮುನ್ನ ಒಂದು ಕುತೂಹಲಕಾರಿ ಸಂಗತಿ ನಿಮ್ಮ ಮುಂದೆ. ಮಹಿಳೆಯರ ೪*೪೦೦ ಮೀ ರಿಲೇಯಲ್ಲಿ ಭಾರತಕ್ಕೆ ಚಿನ್ನ ಗೆದ್ದ ಸಂಭ್ರಮ. ರಿಲೇ ಓಟದ ಘಟಾನುಘಟಿಗಳ ಮೇಲೆ ನಿಷೇಧವಿದ್ದರಿಂದ ಭಾರತ ’ಬಿ’ ತಂಡವನ್ನು ಸ್ಪರ್ಧೆಗೆ ಇಳಿಸಿತ್ತು. ನಿರ್ಮಲಾ, ಅನು ಜೋಸ್, ಟಿಂಟು ಲುಕಾ ಮತ್ತು ಪೂವಮ್ಮರನ್ನು ಹೊಂದಿದ್ದ ಈ ತಂಡ ೩:೩೨:೨೬ ನಿಮಿಷಗಳಲ್ಲಿ ತಮ್ಮ ಗುರಿ ಮುಟ್ಟಿತ್ತು. ಇದರೊಂದಿಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ದಕ್ಕಿಸಿಕೊಂಡಿತು.

ಭಾರತೀಯರ ಗೆಲುವನ್ನು ಭಾರಿ ಸಡಗರದೊಂದಿಗೆ ಆಚರಿಸಲಾಯಿತು. ದೇಶದ ’ಬಿ’ ತಂಡಕ್ಕೂ  ಸರಿಸಾಟಿಯಾಗಿ ಏಷ್ಯಾದಲ್ಲಿ ಯಾರೂ ಇಲ್ಲ ಎಂಬುದು ಈ ಸಡಗರವನ್ನು ಇಮ್ಮಡಿಗೊಳಿಸಿತು! ಈ ಕ್ರೀಡಾಪಟುಗಳ ಬಗ್ಗೆ ಪ್ರತಿಭೆ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಆದರೆ ಒಟ್ಟಾರೆ ದೇಶದ ಅತ್ಲೀಟ್‌ಗಳ ಗುಣಮಟ್ಟದ ಬಗ್ಗೆ ಯೋಚಿಸಿದರೆ ವಿಷಾದದ ಹೊದಿಕೆ ಮೈದಾನವೆಲ್ಲ.
ಭಾರತೀಯ ರಿಲೇ ತಂಡ ೩:೩೩:೦೦ ನಿಮಿಷಗಳೊಳಗೆ ಗುರಿ ಮುಟ್ಟಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನೇನೋ ಪಡೆದುಕೊಂಡಿದೆ. ಆದರೆ ಮಾಸ್ಕೋದಲ್ಲಿ ಕತೆಯೇನು? ಈವರೆಗೆ ನಡೆದ ೨೦ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಈ ವಿಭಾಗದಡಿ ಭಾರತಕ್ಕೆ ದಕ್ಕಿದ ೯ನೇ ಚಿನ್ನದ ಪದಕವಿದು. ಅದೇ ವಿಶ್ವ ಮಟ್ಟದಲ್ಲಿ?

ಚೀನಾದ ಗುಂಗುಜೌವ್‌ನಲ್ಲಿ ೨೦೧೦ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ೪*೪೦೦ ಮೀ ರಿಲೇ ವಿಭಾಗದಲ್ಲಿ ಭಾರತೀಯ ಹುಡುಗಿಯರು ಚಿನ್ನದ ಪದಕ ಜಯಿಸಿದ್ದರು. ಆ ಸ್ಪರ್ಧೆಯಲ್ಲಿ ಮಂಜಿತ್ ಕೌರ್, ಸಿನಿ ಜೋಸ್, ಅಶ್ವಿನಿ ಅಕ್ಕುಂಜಿ ಮತ್ತು ಮಂದೀಪ್ ಕೌರ್ ಅವರಿದ್ದ ರಿಲೇ ತಂಡ ೩:೨೯:೦೨ ನಿಮಿಷಗಳಲ್ಲಿ ಗುರಿ ಮುಟ್ಟಿತ್ತು. ಒಟ್ಟಾರೆ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ೩:೩೧:೮೧ ನಿಮಿಷಗಳಲ್ಲಿ ತಮ್ಮ ಓಟ ಮುಗಿಸಿದ್ದವು. ಅಂದರೆ ಪುಣೆಯಲ್ಲಿ ಗೆದ್ದು ಬೀಗಿದ ರಿಲೇ ತಂಡದ ಪ್ರದರ್ಶನ ಏಷ್ಯನ್ ಗೇಮ್ಸ್‌ನಲ್ಲಿ ಬಂದಿದ್ದರೆ ಭಾರತ ಪದಕ ತಪ್ಪಿಸಿಕೊಳ್ಳುತ್ತಿತ್ತು.

ಈಗ ಭಾರತೀಯರ ಮನಸ್ಥಿತಿಗೆ ಬರೋಣ, ರಿಲೇ ಸ್ಪರ್ಧೆಯಲ್ಲಿ ಪ್ರಸಿದ್ಧ ಆಟಗಾರರ ಅನುಪಸ್ಥಿತಿಯಲ್ಲಿಯೂ ಭಾರತ ಪದಕ ಗೆದ್ದಿತು ಎಂದು ಭಾರತೀಯ ಅಥ್ಲೇಟಿಕ್ಸ್ ಫೆಡರೇಶನ್ ಕುಣಿದು ಕುಪ್ಪಳಿಸಿದೆ. ಖ್ಯಾತನಾಮರಿಲ್ಲದೆ ೩:೩೦ ನಿಮಿಷಗಳೊಳಗೆ ರಿಲೇ ತಂಡ ಗುರಿ ತಲುಪಿದ್ದೇ ಆಗಿದ್ದರೆ ಅದು ಮೆಚ್ಚುಗೆಗೆ ಪಾತ್ರ. ಆದರೆ ಈ ತಂಡ ಗುರಿ ಮುಟ್ಟಿದ್ದು ೩:೩೨ ನಿಮಿಷಗಳ ಬಳಿಕ. ಗುಂಗುಜೌವ್‌ನಲ್ಲಿ ಪದಕ ಗೆದ್ದ ಸಮಯದಿಂದ ಹೆಚ್ಚು ಕಡಿಮೆ ೨ ನಿಮಿಷಗಳ ನಂತರ. ಈ ಸ್ಪರ್ಧೆಯ ವಿಶ್ವದಾಖಲೆ ೩:೧೫:೧೭ ನಿಮಿಷ. ಈಗ ಹೇಳಿ, ಭಾರತದ ಅತ್ಲೀಟ್‌ಗಳ ಗುಣಮಟ್ಟ ಎತ್ತ ಸಾಗುತ್ತಿದೆ? ಕ್ಷಣಿಕ ಗೆಲುವಿಗೆ ಕೇಕೆ ಹಾಕಿ ಕುಣಿದು ಕುಪ್ಪಳಿಸಬೇಕೆ? ಅಥವಾ ವಿಶ್ವ ಮಟ್ಟದಲ್ಲಿನ ಪದಕದ ಕನಸಿನಿಂದ ನಿಧಾನವಾಗಿ ದೂರವಾಗುತ್ತಿರುವ ಓಟಗಾರರ ಬಗ್ಗೆ ವಿಷಾದ ಪಡಬೇಕೆ?

ಭಾರತೀಯ ಅತ್ಲೇಟಿಕ್ಸ್ ಲೋಕದ ಮಟ್ಟಿಗೆ ಒಲ್ಡ್ ಈಸ್ ಗೋಲ್ಡ್ ಅನ್ನುವುದು ಅಕ್ಷರಶಃ ಸತ್ಯ. ೧೯೫೧ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಗೆದ್ದ ಪದಕಗಳ ಸಂಖ್ಯೆ ೩೪. ೨೦೦೬ರಲ್ಲಿ ದೋಹಾದಲ್ಲಿ ನಡೆದ ಇದೇ ಕ್ರೀಡಾಕೂಟದಲ್ಲಿ ಕೇವಲ ೯ ಪದಕ ಗೆದ್ದಿದ್ದ ಅಥ್ಲೀಟ್‌ಗಳು ೨೦೧೦ರಲ್ಲಿ ೧೨ ಪದಕಗಳಿಗೆ ಕೊರಳೊಡ್ಡಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಪದಕ ಮಂಟಪದ ಹತ್ತಿರ ಸುಳಿಯುವ ಪ್ರದರ್ಶನ ಹೊಮ್ಮಿರುವುದೇ ಒಂದೆರಡು ಬಾರಿ. ಪೊಡಿಯಂ ಫಿನಿಶ್ ಇಲ್ಲವೇ ಇಲ್ಲ.

’ಹಾರುವ ಸಿಖ್’ ಬಿರುದಾಂಕಿತ ಮಿಲ್ಕಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ೪೫.೬ ಸೆಕೆಂಡ್‌ನಲ್ಲಿ ೪೦೦ ಮೀಟರ್ ಓಡಿ ಕೂದಲೆಳೆಯಲ್ಲಿ ಕಂಚಿನ ಪದಕ ವಂಚಿತರಾಗಿದ್ದರು. ಇದು ನಡೆದದ್ದು ೧೯೬೦ರಲ್ಲಿ. ಆ ಬಳಿಕದ ೫೩ ವರ್ಷಗಳ ಭಾರತೀಯ ಅತ್ಲೇಟಿಕ್ಸ್‌ನ ಇತಿಹಾಸದಲ್ಲಿ ಕೇವಲ ಇಬ್ಬರು ಮಾತ್ರ ೪೬ ಸೆಕೆಂಡ್‌ಗಳೊಳಗೆ ೪೦೦ ಮೀ. ಓಡಿದ್ದಾರೆ. ಅದೂ ೧೯೮೮ರಲ್ಲಿ ಪರಮ್ ಜಿತ್ ಸಿಂಗ್ ಮತ್ತು ೨೦೦೪ರಲ್ಲಿ ಕೆ ಎಮ್ ಬಿನು. ಬಿನು ೪೫.೪೮ ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದು ರಾಷ್ಟ್ರೀಯ ದಾಖಲೆ. ಪುಣೆ ಏಷ್ಯನ್ ಅಥ್ಲೇಟಿಕ್‌ನಲ್ಲಿ ೪೦೦ ಮೀ. ಓಡಿದ ಭಾರತದ ಪಿ ಕೆ ಮಹಮ್ಮದ್ ಗುರಿ ಮುಟ್ಟಿದ್ದು ೪೬.೭೧ ಸೆಕೆಂಡ್‌ನಲ್ಲಿ!
ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ೧೦೦ ಮೀಟರ್ ದೂರವನ್ನು ೯.೫೮ ಸೆಕೆಂಡ್‌ಗಳಲ್ಲೇ ಕ್ರಮಿಸಿದ್ದು ದಾಖಲೆ. ಈ ವರ್ಷ ಭಾರತ ಕಂಡ ಅತ್ಯಂತ ವೇಗದ ಓಟಗಾರ (ಅನಿರುದ್ಧ ಕೆ ಗುಜ್ಜರ್) ೧೦೦ ಮೀಟರ್ ಓಡಲು ತೆಗೆದುಕೊಂಡ ಸಮಯ ೧೦.೬೧ ಸೆಕೆಂಡ್. ಇತಿಹಾಸವನ್ನು ಗಮನಿಸಿದರೆ ಲೆವಿ ಪಿಂಟೋರ ಹೆಸರು ನಮ್ಮ ನಿರ್ಲಕ್ಷ್ಯದ ನಡುವೆಯೂ ಫಳಫಳನೆ ಹೊಳೆಯುತ್ತದೆ. ಲೆವಿ ಪಿಂಟೋ ೧೯೫೧ರ ಏಷ್ಯನ್ ಗೆಮ್ಸ್‌ನಲ್ಲಿ ೧೦೦ ಮೀ. ದೂರವನ್ನು ಕೇವಲ ೧೦.೮ ಸೆಕೆಂಡ್‌ನಲ್ಲಿಯೇ ಕ್ರಮಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಆಗ ಇದ್ದ ವಿಶ್ವದಾಖಲೆ ೧೦.೨ ಸೆಕೆಂಡ್‌ಗಳು. ಇದೇ ಕೂಟದಲ್ಲಿ ಪಿಂಟೋ ೨೦೦ ಮೀ. ದೂರವನ್ನು ೨೨ ಸೆಕೆಂಡ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಒಂದು ಆಶಾದಾಯಕ ಬೆಳವಣಿಗೆಯೆಂದರೆ ಈ ವರ್ಷ ಪ್ರತೀಕ್ ನಿನ್ನಾವೆ ೨೧.೬೫ ಸೆಕೆಂಡ್‌ನಲ್ಲಿ ಈ ಅಂತರವನ್ನು ಕ್ರಮಿಸಿದ್ದಾರೆ. ೨೦೦ ಮೀ.ನ ವೇಗದ ಓಟದ ದಾಖಲೆಯ ಅಧಿಪತಿ ಬೋಲ್ಟ್. ಅವರು ೧೯.೧೯ ಸೆಕೆಂಡ್‌ನಲ್ಲೇ ಈ ದೂರವನ್ನು ಪೂರೈಸಿದ್ದಾರೆ. ಒಟ್ಟಿನಲ್ಲಿ ೨೦ ಸೆಕೆಂಡ್‌ನಲ್ಲಿ ೨೦೦ ಮೀ. ಓಡಿಲ್ಲ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಗನ ಕುಸುಮ.

೮೦೦ ಮೀ. ಓಟದಲ್ಲಿ ಭಾರತ ಕಂಡ ವೇಗದ ಓಟಗಾರ ಶ್ರೀರಾಮ್ ಸಿಂಗ್. ಅವರು ೧೯೭೬ರಲ್ಲಿ ನಡೆದ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ನಿಗದಿತ ದೂರವನ್ನು ೧:೪೫:೭೭ ಸೆಕೆಂಡ್‌ನಲ್ಲಿ ಕ್ರಮಿಸಿ ಫೈನಲ್‌ನಲ್ಲಿ ೭ನೇ ಸ್ಥಾನ ಪಡೆದಿದ್ದರು. ಇದು ಆ ಕಾಲದ ಏಷ್ಯನ್ ದಾಖಲೆ. ದುರಂತವೆಂದರೆ ಭಾರತಕ್ಕೆ ಅದು ಇನ್ನೂ ರಾಷ್ಟ್ರೀಯ ದಾಖಲೆಯೇ! ಈ ವರ್ಷ ೮೦೦ ಮೀ ಓಡಲು ಸಾಜೀಶ್ ಜೋಸೆಫ್ ತೆಗೆದುಕೊಂಡ ಸಮಯ ೧:೪೯:೦೪.

೩೦೦೦ ಮೀನ ಕಥೆ ಕೂಡ ಭಿನ್ನವಾಗಿಲ್ಲ. ಇದರಲ್ಲಿನ ರಾಷ್ಟ್ರೀಯ ದಾಖಲೆ ಗೋಪಾಲ್ ಸೈನಿ ಹೆಸರಲ್ಲಿದೆ. ಅವರು ೧೯೮೧ರಲ್ಲಿ ೮:೩೦:೮೮ ನಿಮಿಷದಲ್ಲಿ ಗುರಿ ತಲುಪಿದ್ದರು. ಇದೆ ದೂರ ಕ್ರಮಿಸಲು ೮:೫೪:೪೨ ಸೆಕೆಂಡ್‌ಗಳನ್ನು ತೆಗೆದುಕೊಂಡ ಜೈವೀರ್ ಸಿಂಗ್ ಈ ವರ್ಷದ ವೇಗದ ಓಟಗಾರ!

ಮಹಿಳೆಯರ ಸಾಧನೆಯು ಕೂಡ ಹೆಚ್ಚು ಕಮ್ಮಿ ಇದೇ ಟ್ರ್ಯಾಕ್‌ನಲ್ಲಿ ಸಾಗಿದೆ. ೧೦೦ ಮೀ ಓಟದ ರಾಷ್ಟ್ರೀಯ ದಾಖಲೆ ನಿರ್ಮಾಣವಾಗಿದ್ದು ೨೦೦೦ದಲ್ಲಿ. ಅಂದು ರಚಿತಾ ಮಿಸ್ತ್ರಿ ೧೧:೩೮ ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು. ಈ ವರ್ಷ ೧೦೦ ಮೀ. ದೂರವನ್ನು ಅತ್ಯಂತ ವೇಗವಾಗಿ ಓಡಿದ ದಾಖಲೆ ಆಶಾ ರಾಯ್ ಅವರ ಹೆಸರಲ್ಲಿದ್ದು ೧೧:೮೬ ಸೆಕೆಂಡ್‌ನಲ್ಲಿ ಅವರು ಗುರಿ ಮುಟ್ಟಿದ್ದರು.

ಕನ್ನಡತಿ ಎಂ. ಆರ್. ಪೂವಮ್ಮ ೫೨.೮೫ ನಿಮಿಷದಲ್ಲಿ ೪೦೦ ಮೀ. ಓಡಿದ್ದೆ ಈ ವರ್ಷದ ನಮ್ಮ ದೊಡ್ಡ ಸಾಧನೆ. ಈ ವಿಭಾಗದಲ್ಲಿ ಮಂಜೀತ್ ಕೌರ್ ೨೦೦೪ರಲ್ಲಿ ೫೧.೦೫ ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದರು. ವಿಶ್ವದ ಪ್ರಮುಖ ಕ್ರೀಡಾಕೂಟದಲ್ಲಿ ಗೌರವಾರ್ಹವಾಗಿ ಓಟ ಮುಗಿಸಲು ೫೦ ನಿಮಿಷದೊಳಗೆ ನಿಗದಿಯ ಗುರಿ ಮುಟ್ಟಲೇ ಬೇಕು.
೪೦೦ ಮೀ. ಹರ್ಡಲ್ಸ್ ಎಂದರೆ ತಕ್ಷಣ ನೆನಪಾಗುವ ಹೆಸರು ಪಿ. ಟಿ. ಉಷಾ. ಅವರು ೧೯೮೪ರ ಲಾಸ್ ಎಂಜಲೀಸ್ ಒಲಿಂಪಿಕ್ಸ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿಯದೆ ಅವರಿಗೆ ಗೌರವ ಕೊಡಬೇಕು ಎಂದು ನಮ್ಮ ಓಟಗಾರ್ತಿಯರು ನಿರ್ಧರಿಸಿರುವ ಹಾಗಿದೆ! ಅವರು ತಮ್ಮ ಗುರಿಯನ್ನು ೫೫.೪೨ ಸೆಕೆಂಡ್‌ನಲ್ಲಿ ತಲುಪಿದ್ದರು. ಈ ದಾಖಲೆಗೆ ೩೦ವರ್ಷ. ಈ ದಾಖಲೆಯ ಬಳಿ ಸುಳಿಯುವ ಮತ್ತೊಬ್ಬ ಆಟಗಾರ್ತಿಯನ್ನು ದೇಶ ಕಾಣಲೇ ಇಲ್ಲ. ಈ ವರ್ಷ ಗುರಿ ತಲುಪಲು ಇಲವರಸಿ ಅವರು ತೆಗೆದುಕೊಂಡಿದ್ದ ಸಮಯ ಬರೋಬ್ಬರಿ ೧:೦೦:೭೦ ನಿಮಿಷಗಳು!

ಲಾಂಗ್ ಜಂಪ್‌ನಲ್ಲಿಯೂ ಕೂಡ ಅಂಜು ಬಾಬಿ ಜಾರ್ಜ್ ೨೦೦೪ರಲ್ಲಿ ನಿರ್ಮಿಸಿದ್ದ ೬:೮೩ ಮೀಟರ್ ದೂರ ಜಿಗಿತದ ಸಾಧನೆಯ ಸಮೀಪ ಸುಳಿಯುವ ಜಿಗಿತವು ಮತ್ತೆ ಮೂಡಿ ಬಂದಿಲ್ಲ. ಮಯೂಖಾ ಜಾನಿ ೬:೪೯ ಮೀಟರ್ ದೂರ ಹಾರಿದ್ದೆ ಈ ವರ್ಷದ ಮಟ್ಟಿಗೆ ನಮ್ಮ ದೊಡ್ಡ ಜಿಗಿತ!

ಟೆನ್ನಿಸ್, ಬ್ಯಾಡ್ಮಿಂಟನ್, ಶೂಟಿಂಗ್, ಬಾಕ್ಸಿಂಗ್, ಕುಸ್ತಿ, ಬಿಲ್ಗಾರಿಕೆ ಸ್ಪರ್ಧೆಗಳಲ್ಲಿ ಭಾರತ ಪ್ರವರ್ಧಮಾನ ಶಕ್ತಿಯಾಗಿ ಬೆಳೆಯುತ್ತಿದೆ. ಆದರೆ ಟ್ರ್ಯಾಕ್ ಅಂಡ್ ಫಿಲ್ಡ್‌ನಲ್ಲಿ ನಮ್ಮದು ಹಿಮ್ಮುಖ ಓಟ. ಒಮ್ಮೆ ಮುಗಿಲೆತ್ತರ ಹಾರಿದ್ದ ನಮ್ಮ ಕೀರ್ತಿ ಪತಾಕೆ; ಈಗ ನೆಲಕ್ಕುರಳಿ ಬಿದ್ದ ಅವಸ್ಥೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಾತಿಗಿಂತಲು ನಮ್ಮ ಓಟಗಾರರೇ ಹಾಕಿಕೊಟ್ಟಿರುವ ದಾಖಲೆಗಳ ಮೈಲಿಗಲ್ಲನ್ನು ದಶಕಗಳು ಉರಳಿದರು ಮುರಿಯಲಾಗದೆ, ಆ ದಾಖಲೆಗಳನ್ನು ಉತ್ತಮ ಪಡಿಸಲಾಗದೆ, ಜಾಗತಿಗ ಕ್ರೀಡಾಕೂಟಗಳಿಗೆ ಆರ್ಹತೆ ಪಡೆಯಲಾಗದಿದ್ದರು ಗೆದ್ದ ಭಾವದಿಂದ ಬೀಗುವ ಸರದಿ ಮುಂದುವರಿಯುತ್ತಲೇ ಇದೆ. ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಗದೆ ಅದು ಮೈಲಿಗಲ್ಲಾಗಿಯೇ ಉಳಿಯುತ್ತಿದೆ.