Tuesday, July 26, 2011

"ಗೌರವದ ಸಂಖ್ಯೆ ಮುಟ್ಟಲೇಬೇಕು"

ಈ ಬರಹ ಈ ಮಣ್ಣಿನ ಹೆಮ್ಮೆಯ ಮತ್ತು ಅತ್ಯಂತ ಪುಣ್ಯವಂತ ಮಕ್ಕಳಾದ ಸೈನಿಕರಿಗೆ ಮತ್ತವರ ತ್ಯಾಗ, ಬಲಿದಾನಗಳಿಗೆ ಸಮರ್ಪಿತ...

’ಅಯ್ಯೋ ನಿಮಗೆ ಗೊತ್ತಿಲ್ಲವೆ? ನಾನು 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದೆ. ನಂತರ 1858ರಲ್ಲೇ ಪುನಃ ಹುಟ್ಟಿ ಬಂದೆ. ಮತ್ತೆ ಹೋರಾಡುವುದಕ್ಕಾಗಿ, ಆಗ ಅವಸರದಲ್ಲಿ ಬಲಗೈ ಮರೆತು ಹೋಯಿತು!" ಇಂತಹ ವಜ್ರಸದೃಶ ಮಾತು ಚಿಮ್ಮಿ ಬರಬೇಕಾದರೆ ಆ ಒಂಟಿಗೈಗಳ ಕ್ರಾಂತಿಕಾರಿ ಸೂಫಿ ಅಂಬಾಪ್ರಸಾದ್ ಈ ಮಣ್ಣನ್ನು ಅದೆಷ್ಟು ಪ್ರೀತಿಸಿರಬೇಕು? ಈ ಭೂಮಾತೆ ಆತನಿಗೆಷ್ಟು ಅಪ್ಯಾಯಾಮಾನ ಎನಿಸಿರಬೇಕು? ಆ ಸಂದರ್ಭದಲ್ಲಿ ಬ್ರಿಟಿಷರ ರಾಕ್ಷಸಿತನ ಯಾವ ಸೀಮೆ ತಲುಪಿರಬಹುದು?

ಸುಮಾರು ೧೫೦ ವರ್ಷಗಳ ಹಿಂದೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜ್ವಾಲಾಮುಖಿಯಂತೆ ಅವಿರ್ಭಾವಿಸಿದ್ದ ಭಾರತೀಯರ ಆಕ್ರೋಶ, ಸ್ವಾತಂತ್ರ್ಯಕ್ಕಾಗಿನ ಹಪಹಪಿಕೆ ನನ್ನ(ಮ್ಮ) ದೇಶ ಎಂಬ ಒಕ್ಕೊರಲ ಮಾರ್ದನಿ ಅದು ಅನೂಹ್ಯ ವೇಗದಲ್ಲಿ ದೇಶಾದಾದ್ಯಂತ ಬಿತ್ತರಿಸಿ ಬ್ರಿಟಿಷರನ್ನು ಒದ್ದೊಡಿಸಿದ್ದು ಎಲ್ಲರಿಗೂ ಗೊತ್ತಿರುವಂತದ್ದೆ! ಅದನ್ನು ಪುನರ್ ನೆನಪಿಸುವ ಅವಶ್ಯಕತೆ ಇಲ್ಲ.

ಅದೇನೆ ಇರಲಿ, ಎಷ್ಟೋ ಆದರ್ಶಗಳು ಅನಿವಾರ್ಯತೆಗಳ ಸಂದುಗೊಂದಿಗೆ ಸಿಲುಕಿ ತನ್ನ ರೂಪ ಬದಲಿಸಿಕೊಂಡು ವಿರೂಪವಾಗುವುದು ಅಥವಾ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವುದು ಮಾನವ ಇತಿಹಾಸದಲ್ಲಿ ಸಹಜ. ಇದರ ಫಲಿತಾಂಶ ಕೆಲವೊಮ್ಮೆ ಸಕಾರಾತ್ಮಕವಾಗಿರಬಹುದು, ಇನ್ನು ಕೆಲವೊಮ್ಮೆ ನಕಾರಾತ್ಮಕವಾಗಿರಬಹುದು. ಇಂತಹ ಗುಣಗಳಲ್ಲಿ ರಾಷ್ಟ್ರ ಪ್ರೇಮವೂ ಒಂದು.

ಜಾಗತೀಕರಣದ ಕನ್ನಡಕವಿಟ್ಟು ನೋಡಿದರೆ ದೇಶ ಪ್ರೇಮಕ್ಕೆ ಅರ್ಥವೇ ಇಲ್ಲ. ಅದು ವಿಶ್ವಪ್ರೇಮವೆಂಬ ಅಳವಿಲ್ಲದ ವಿಶಾಲತೆಯನ್ನು ಪಡೆದುಕೊಳ್ಳುತ್ತದೆ ಅಷ್ಟೆ.

ಭಾರತೀಯರಿಗೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಆರಂಭದಲ್ಲಿ ’ದೇಶಪ್ರೇಮ’ ಎಂಬ ಪದ ಮತ್ತು ಭಾವನೆಯ ಸ್ಥಿತ್ಯಂತರವೇ ಆಗಿತ್ತು. ೧೯೪೭ರ ವರೆಗೆ ಸ್ವಾತಂತ್ರ್ಯಗಳಿಸಲು ಹೋರಾಟ ನಡೆಸಿದವರು ದೇಶಪ್ರೇಮಿಗಳೆಂದು ಕರೆಸಿಕೊಂಡರೆ ತದನಂತರ ಆ ಸ್ವಾತಂತ್ರ್ಯವನ್ನು ಉಳಿಸಲು ಹೋರಾಡಿದ ಮಹನೀಯರು ಹೀರೊಗಳಾದರು. ಅಂತಹ ಒಬ್ಬ ಹೀರೋನ ಕಥೆ ಈಗ ನಿಮ್ಮ ಮುಂದಿಡುತ್ತಿದ್ದೇನೆ.

ಅದು ೧೯೬೨ನೇ ಇಸವಿ. ಚೀನಾ ಭಾರತದ ಮೇಲೆ ಮುಗಿ ಬಿದ್ದ ಸಂದರ್ಭ. ಕಾಶ್ಮೀರದ ಬೊವ್ಡಿಲಾದ ಬೆಟ್ಟಗಳು ನಿರ್ಲಿಪ್ತವಾಗಿ ನಿಂತಿದ್ದವು. ಅವಕ್ಕೇನು ಅಲ್ಲವೇ? ಆದರೆ ಅದನ್ನು ಕಾಯ ನಿಂತಿದ್ದ ಭಾರತೀಯ ಸೈನಿಕರಿಗೆ ಸ್ವಾಭಿಮಾನದ ಪ್ರಶ್ನೆ. ಒಂಚೂರು ಮೈಮರೆತರೆ ತೆರೆಯಂತೆ ಬಂದಪ್ಪಳಿಸುವ ಚೀನಿ ಸೈನಿಕರು. ಸಾಹಸಿ ದೇಶಪ್ರೇಮಿ ಸೈನಿಕರ ಪಾಲಿಗೆ ದೊರೆತ ಸುವರ್ಣ ಘಳಿಗೆ.

ಭಾರತದ ಮುಂಚೂಣಿ ನೆಲೆಯಲ್ಲಿದ್ದ ಶಾರ್ದೂಲ್ ಸಿಂಗ್‌ಗೆ ನಮಗೂ ಅವರಿಗೂ ಕುಸ್ತಿ ನಡೆದಿದ್ದರೆ ಚೆನ್ನ ಎಂಬ ಭಾವ. ಈ ಭಾವನೆ ಅವನಲ್ಲಿ ಏಕೆ ಹುಟ್ಟಿಕೊಂಡಿತ್ತೋ ಗೊತ್ತಿಲ್ಲ. ಒಂದೀ ಚೀನಿಯರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಎದುರಾಗಿ ಅವನಲ್ಲಿದ್ದ ಅತೀ ಸಾಮಾನ್ಯ ಬಂದೂಕನ್ನು ಕಂಡಿರಬಹುದು ಅಥವಾ ಅವನ ವ್ಯಕ್ತಿತ್ವವೇ ಅಂತದ್ದಿರಬಹುದು.

ಚೀನಿ ಪಡೆ ಹತ್ತಿರ ಹತ್ತಿರ ಬರುತ್ತಿತ್ತು. ಅಗಳಿನಲ್ಲಿ ನಿಂತಿದ್ದ ಭಾರತೀಯ ಯೋಧರು ಕೈಕಟ್ಟಿ ಕೂರಲಿಲ್ಲ. ಚಪ್ಪಟೆ ಮೂಗಿನ ಸೈನಿಕರನ್ನು ಅಪ್ಪಚಿ ಮಾಡಲು ಗುಂಡಿನ ಸುರಿಮಳೆಯನ್ನೆ ಸುರಿಸಿದರು.

ಭಾರತೀಯ ಪುಟ್ಟ ಪಡೆ ದಿಟ್ಟವಾಗಿ ಹೋರಾಡಿ ಚೀನಿಯರ ಬೃಹತ್ ಸೈನ್ಯವನ್ನು ಕದಡಿ ಹಾಕಿತ್ತು. ಅಷ್ಟರಲ್ಲೆ ಗುಂಡಿನ ಪೆಟ್ಟಿಗೆ ಖಾಲಿಯಾಗುತ್ತ ಬಂದಿತ್ತು. ಆದರೆ ಶಾರ್ದೂಲ ಸಿಂಗ್‌ನ ಗುಂಡಿಗೆಯಲ್ಲಿ ಹೆಪ್ಪುಗಟ್ಟಿದ್ದ ಶೌರ್ಯ, ಮಾತೃಭೂಮಿಗಾಗಿನ ತುಡಿತ, ಕೆಚ್ಚು, ಒಂದು ಹೆಜ್ಜೆಯೂ ಹಿಂದೆ ಸರಿಯಲಾರೆ ಎಂಬ ದೃಢ ಸಂಕಲ್ಪ ಒಂದಿನಿತು ಖಾಲಿಯಾಗಿರಲಿಲ್ಲ. ಬದಲು ಅದು ಪ್ರತಿಕ್ಷಣ ಹೆಚ್ಚಾಗುತ್ತಿತ್ತು.

ಶಾರ್ದೂಲ ಸಿಂಗ್ ತನ್ನ ಮೇಲಾಧಿಕಾರಿಗೆ ಆಗ, "ಚಿಂತೆಬೇಡ ಕ್ಯಾಪ್ಟನ್, ಗುಂಡು ಮುಗಿದರೆ ಕೈ ಕೈ ಮಿಲಾಯಿಸೋಣ ನನ್ನ ಬಂದೂಕಿನ ಹಿಡಿಯಿಂದ ಹತ್ತು ತಲೆಗಳನ್ನಾದರೂ ಪುಡಿ ಪುಡಿ ಮಾಡುತ್ತೇನೆ" ಎಂದು ಹೇಳಿದ. ಯಾವುದೋ ಸಿನೆಮಾದಲ್ಲಿ ಕೇಳಿದಂತೆ ಇದೆಯೇ? ಜಗತ್ತಿನಲ್ಲಿ ಸಿನೆಮಾಗಳಲ್ಲಿನ ಸಾಹಸಗಳನ್ನು ಮೀರಿದ ಸಾಹಸ ಮಾಡಿದವರು ಎಷ್ಟು ಮಂದಿ ಇಲ್ಲ? ಅಂತವರ ಪಟ್ಟಿಗೆ ಶಾರ್ದೂಲ್ ಸಿಂಗ್ ತನ್ನ ಹೆಸರು ನೊಂದಾಯಿಸಿಕೊಂಡು ಬಿಟ್ಟ.

ಶಾರ್ದೂಲ ಎಂದರೆ ಹುಲಿ. ಅವನಿಗೆ ಹೆಸರೇ ಅನ್ವರ್ಥ. ಐದೇ ನಿಮಿಷದಲ್ಲಿ ಗುಂಡುಗಳ ಪೆಟ್ಟಿಗೆ ಬರಿದು. "ವಾಪಸಾಗಲು ಸಿದ್ಧರಾಗಿ" ಎಂಬ ಕ್ಯಾಪ್ಟನ್‌ನ ಆಜ್ಞೆ. ಅಷ್ಟರಲ್ಲಿ ೮ ಮಂದಿ ಚೀನಿ ಸೈನಿಕರು ಕಂದಕದೊಳಗೆ ಧುಮುಕಿಯಾಗಿತ್ತು. ಕ್ಯಾಪ್ಟನ್ "ಹಿಂತಿರುಗಿ" ಎಂಬ ಆದೇಶ ಶಾರ್ದೂಲ "ಸಿಂಹ"ನಿಗೆ ಎಲ್ಲಿ ಕೇಳಿಸಿರಬಹುದು? ಕೇಳಿಸಿದರು, ಆ ಕಾಲುಗಳು ಹಿಂದೆ ಸರಿಯುವಂತವೇ?

ಕ್ಷಣ ಮಾತ್ರದಲ್ಲಿ ಕಂದಕದಿಂದ ಚಿಗರೆಯಂತೆ ಮೇಲಕ್ಕೆ ಹಾರಿದ ಶಾರ್ದೂಲ ತನ್ನ ಬದುಕನ್ನೆ ಶತ್ರುವಿನ ಅಂಗೈಯಲ್ಲಿಟ್ಟು ಬಂದೂಕನ್ನು ಪಟಪಟನೆ ಬೀಸಲಾರಂಭಿಸಿದ.

ಈ ಸಾಹಸಿ ಸೂರ್ಯ ಕಣ್ಣು ತೆರೆದಾಗ ತೇಜಪುರದ ಆಸ್ಪತ್ರೆಯೊಂದರಲ್ಲಿ ಮಲಗಿದ್ದ. ಕ್ಯಾಪ್ಟನ್ ಹೆಮ್ಮೆಯಿಂದ "ಶಾರ್ದೂಲ ಎಂಟು ಬರುಡೆಗಳನ್ನು ಚಿಂದಿ ಉಡಾಯಿಸಿದ್ದಿ" ಎಂದ.

ಈ ಶೌರ್ಯದ ಕಿಡಿ ವೈದ್ಯರ ಕಡೆಗೆ ಬೀರಿದ್ದು ನಿಶ್ಯಕ್ತ ನೋಟ. ಆದರೆ ಹೇಳಿದ್ದು "ಡಾಕ್ಟರ್ ನಾನು ಬೇಗ ಹುಷಾರಾಗಬೇಕು...!" "ಆಗುತ್ತಿ" ಎಂದರು ಡಾಕ್ಟರ್.

ಆದರೆ ಈ ಪರಾಕ್ರಮದ ಖಜಾನೆಗೆ ಹುಷಾರಾಗಿ ಮನೆಗೆ ಹೋಗಬೇಕು ಎಂಬ ಯಾವುದೇ ಇರಾದೆಯಿರಲಿಲ್ಲ. ಅವನಿಗಿದ್ದದ್ದು ಭಾರತವನ್ನು ಆವರಿಸಿದ್ದ ಚೀನಿ ಪರದೆಯನ್ನು ಚಿಂದಿ ಮಾಡಬೇಕೆಂಬ ಏಕಮಾತ್ರ ಗುರಿ.

ಶಾರ್ದುಲ ಮಾತು ಮುಂದುವರಿಸಿ, "ಡಾಕ್ಟರ್, ಬೇಗ ಹೋಗಬೇಕು ೮ ಜನರನ್ನು ಮುಗಿಸಿದ್ದೇನೆ... ಅಯ್ಯೋ! ಕೇವಲ ಎಂಟು! ರಣರಂಗಕ್ಕೆ ಹಿಂತಿರುಗಿ ಹೋಗಬೇಕು. ತೀರ ಕಡಿಮೆಯಾಯಿತು! ಗೌರವ ಬರುವಷ್ಟಾದರೂ ಅಂಕಿಯನ್ನು ಹೆಚ್ಚಿಸಬೇಕು. ಗೌರವದ ಸಂಖ್ಯೆ ಮುಟ್ಟಲೇಬೇಕು".


ಆದರೆ ಭ್ರಮೆಯ ಪೊರೆಯೊಳಗಿದ್ದ ಆಗಿನ ಸರ್ಕಾರದಿಂದಾಗಿ ನಮ್ಮ ಪ್ರತಿಷ್ಠೆ ಮಣ್ಣು ಪಾಲಾಯಿತು. ಸ್ವಾತಂತ್ರ್ಯನಂತರದ ಏಕಮಾತ್ರ ಸೋಲು ನಮ್ಮನ್ನು ಬೇಡ ಬೇಡವೆಂದರೂ ನಮ್ಮನ್ನು ಅಪ್ಪಿಕೊಂಡಿತು.

ಅತ್ತ ಮನಸ್ಸಿಲ್ಲದ ಮನಸ್ಸಿನಿಂದ ಶಾರ್ದೂಲ ಸಿಂಗ್‌ನ ಜೀವದೀಪವೂ ಆರಿಹೋಯಿತು.

No comments: