Wednesday, November 16, 2011

ರೇಷ್ಮೆ ರೈತರಿಗೆ ನೋವಿನ ಕುಲುಮೆ

ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಗೂಡುಗಳ ಬೆಲೆ ತೀವೃವಾಗಿ ಕುಸಿತವಾದುದನ್ನು ಕಂಡು ರೊಚ್ಚಿಗೆದ್ದು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ಸುಮಾರು ೬ ಗಂಟೆಗಳ ಕಾಲ ಬಂದ್ ಮಾಡಿರುವುದು ಅಚ್ಚರಿಯ ಸಂಗತಿಯೂ ಅಲ್ಲ, ಇದು ನೊಂದ ರೈತರ ತಕ್ಷಣದ ಪ್ರತಿಕ್ರಿಯೆಯಂತೂ ಖಂಡಿತವಾಗಿಯೂ ಅಲ್ಲ. ಕಳೆದ ಫೆಬ್ರುವರಿಯಿಂದ ಸತತವಾಗಿ ತಾವು ಬೆಳೆದ ರೇಷ್ಮೆಯ ಬೆಲೆ ಪಾತಾಳಮುಖಿಯಾಗಿ ಸಾಗುತ್ತಿರುವುದನ್ನು ಹತಾಶರಾಗಿ ನೋಡುತ್ತಿದ್ದ, ಈ ಬೆಲೆ ಕುಸಿತವನ್ನು ಇನ್ನು ಸಹಿಸಿಕೊಳ್ಳಲಾಗದ ಹಂತಕ್ಕೆ ಬಂದ ರೈತರು ತಮ್ಮ ಆಕ್ರೋಶವನ್ನು ರಸ್ತೆ ತಡೆ ಮಾಡುವ ಮೂಲಕ ವ್ಯಕ್ತಪಡಿಸಿದ್ದರು.

ಈ ರೇಷ್ಮೆ ಬೆಲೆ ಕುಸಿತ ಈಗಾಗಲೇ ಎರಡು ಜೀವಗಳನ್ನು (ಸ್ವಾಮಿಗೌಡ ಮತ್ತು ಆತನ ಪತ್ನಿ ವಸಂತ) ಬಲಿ ತೆಗೆದುಕೊಂಡಿದೆ. ೨೦೦೯ರ ಏಪ್ರಿಲ್‌ನಲ್ಲಿ ಮಿಶ್ರ ತಳಿಯ ರೇಷ್ಮೆಗೆ ಕೆಜಿಗೆ ಸರಾಸರಿ ೧೫೬ರೂ ಗಳಿತ್ತು. ೨೦೧೦ರ ಏಪ್ರಿಲ್‌ನಲ್ಲಿ ಇದು ೧೯೫ ರೂಗಳನ್ನು ತಲುಪಿತ್ತು. ಅದೇ ೨೦೧೧ರಲ್ಲಿ ಒಂದು ಕೆಜಿ ರೇಷ್ಮೆಯ ಬೆಲೆ ಸರಾಸರಿ ೩೧೧ ರೂ ಇತ್ತು!

ಆದರೆ ರೇಷ್ಮೆ ಬೆಳೆಗಾರರ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ ಅಥವಾ ಉಳಿಯಲು ನಮ್ಮ ಘನ ಸರ್ಕಾರಗಳು ಬಿಡಲಿಲ್ಲ. ೨೦೧೧ರ ಮೇ ಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆಜಿಗೆ ಸರಾಸರಿ ೧೮೫ ರೂಗೆ ಇಳಿದಿತ್ತು. ರೇಷ್ಮೆ ಬೆಳೆಗಾರರ ಕತ್ತು ಹಿಸುಕುವ ಕೆಲಸವನ್ನು ಈ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್‌ನ ಮೂಲಕ ನೇರವಾಗಿಯೇ ಮಾಡಿತ್ತು. ಕೇಂದ್ರ ತನ್ನ ಬಜೆಟ್‌ನಲ್ಲಿ ರೇಷ್ಮೆ ಮೇಲೆ ಶೇ. ೩೦ ರಷ್ಟಿದ್ದ ಆಮದು ಸುಂಕವನ್ನು ಕೇವಲ ಶೇ. ೫ಕ್ಕೆ ಇಳಿಸಿತು. ಅದ್ದರಿಂದ ಈ ಬಾರಿಯ ಬಜೆಟ್ ರೇಷ್ಮೆ ಬೆಳೆಗಾರರಿಗೆ ಮರಣ ಶಾಸನವಾಯಿತು.

ಬೆಲೆ ಇಳಿಕೆಯನ್ನು ಅವಡುಗಚ್ಚಿ ಸಹಿಸಿಕೊಂಡಿದ್ದ ರೈತರಿಗೆ ರೇಷ್ಮೆ ಗೂಡಿನ ಬೆಲೆ ಎರಡಂಕಿಗೆ (೩೦-೫೦ರೂ) ಇಳಿದಾಗ ತೀವೃ ಅಘಾತಕ್ಕೀಡಾಗಿ ಹರಾಜು ಪ್ರಕ್ರಿಯೆಯಿಂದ ದೂರ ಸರಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ರೈತರ ಬಗ್ಗೆ ರಾಜ್ಯ ಸರ್ಕಾರದ
ನಿರ್ಲಕ್ಷ್ಯತನ, ದಲ್ಲಾಳಿಗಳು ಮತ್ತು ರೀಲರ್‌ಗಳ ವಿರುದ್ಧ ತಮಗಿದ್ದ ಅಸಹನೆಯನ್ನು ಅವರು ಈ ಮೂಲಕ ವ್ಯಕ್ತ ಪಡಿಸಬೇಕಾಯಿತು. ಕೊನೆಗೆ ಅರಣ್ಯ ಸಚಿವ ಸಿ ಪಿ ಯೋಗಿಶ್ವರ್‌ರ ಮಧ್ಯ ಪ್ರವೇಶದಿಂದ ಈ ಪ್ರತಿಭಟನೆ ಕೊನೆಗೊಂಡರು ಕೂಡ ಯೋಗಿಶ್ವರ್ ನೀಡಿದ ಭರವಸೆಯಂತೆ ಸರ್ಕಾರ ಪ್ರತಿ ಕೆಜಿಗೆ ೩೦ರೂ ಸಹಾಯ ಧನ ನೀಡುವ ಬಗ್ಗೆ ಮೀನ ಮೇಷ ಎಣಿಸುತ್ತಿರುವುದು ರೈತರಿಗೆ ಮಾಡಿದ ಅವಮಾನವೇ ಸರಿ. ಈ ಹಿಂದೆ ಈ ವರ್ಷದ ಫೆಬ್ರುವರಿಯಲ್ಲಿ ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂದೆ ರೈತರು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ೧೦ ಗಂಟೆಗಳ ಕಾಲ ಬಂದ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ಇದು ರೈತರ ದುರಂತ, ರೈತರಿಗೆ ೧ ಕೆಜಿ ರೇಷ್ಮೆ ಗೂಡಿಗೆ ೩೨೦ ರೂ ಖರ್ಚಾಗುತ್ತದೆ. ಭಾನುವಾರದ ಬೆಲೆಯನ್ನು (ಪ್ರತಿ ಕೆಜಿಗೆ ೩೦- ೫೦ ರೂ) ಹೊರತು ಪಡಿಸಿದರೂ ಕೂಡ ಮಾರುಕಟ್ಟೆ ದರ ೧೩೫ರಷ್ಟಿತ್ತು. ಮಾರುಕಟ್ಟೆಯಲ್ಲಿ ಕನಿಷ್ಟ ಬೆಲೆ ನಿಗದಿ ಪಡಿಸಲು ಯಾವುದೇ ಮಾನದಂಡವಿಲ್ಲ. ಅದ್ದರಿಂದಲೇ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ ೩೦ ರೂ ಹರಾಜು ಕೂಗುತ್ತಾರೆ. ಇದಕ್ಕಾಗಿ ಮಾರುಕಟ್ಟೆ ರಕ್ಷಣಾ ಕಾಯಿದೆಯನ್ನು ಸರ್ಕಾರ ಜಾರಿಗೆ ತರಬೇಕು, ಇಲ್ಲದೆ ಹೋದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ರೇಷ್ಮೆ ಬೆಲೆ ಕುಸಿತ ಕಾಣುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಿದೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರಬೇಕು ಹಾಗೆ ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು” ಎಂದು ಅಭಿಪ್ರಾಯ ಪಡುತ್ತಾರೆ.

ರಾಜ್ಯ ರೇಷ್ಮೆ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ೧,೪೦,೯೫೯ ರೇಷ್ಮೆ ಬೆಳೆಗಾರರು ಮತ್ತು ೭,೧೯೫ ರೇಷ್ಮೆ ರೀಲರ್‌ಗಳಿದ್ದಾರೆ. ರೇಷ್ಮೆ ಬೆಳೆ ರಾಜ್ಯದಲ್ಲಿ ಸುಮಾರು ೮ ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ನೀಡುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ೧೫,೬೧೦ ಟನ್ ಮಲ್ಬರಿ ರೇಷ್ಮೆಯಲ್ಲಿ ೭,೨೩೮ ಟನ್ ರೇಷ್ಮೆಯನ್ನು ಕರ್ನಾಟಕ ಉತ್ಪಾದಿಸುತ್ತದೆ. ಭಾರತ ಪ್ರತಿ ವರ್ಷ ೨೮,೦೦೦ ಟನ್ ರೇಷ್ಮೆಯನ್ನು ಬಳಸುತ್ತದೆ ಆದರೆ ನಮ್ಮಲ್ಲಿ ಉತ್ಪಾದನೆಯಾಗುವುದು ೧೯,೦೦೦ ಟನ್ ಮಾತ್ರ. ಅದ್ದರಿಂದ ದೇಶ ಸುಮಾರು ೫,೦೦೦ ಟನ್‌ನಷ್ಟು ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೇಷ್ಮೆ ಕೃಷಿಗೆ ನೆರವಿನ ಹಸ್ತ ಚಾಚ ಬೇಕಾದ ಸರ್ಕಾರಗಳೇ ರೈತರ ಬದುಕಿಗೆ ಕೊಡಲಿಯೇಟು ನೀಡುತ್ತಿರುವುದು ವಿಪರ್ಯಾಸ.

No comments: