Saturday, October 15, 2011

ಬರೆಯಲಾಗಲಿಲ್ಲ ನನಗೆ ಕವಿತೆ

ಮನದಾಳದ ನೋವು
ಮುಗಿಲೆತ್ತರದ ಈಡೇರದ ಕನಸು
ಎದೆ ತುಂಬ ಕೆಸರು
ಕಣ್ಣತುಂಬ ನೀರು
ಬರೆಯಲಾಗಲಿಲ್ಲ ನನಗೆ ಕವಿತೆ.


ನಗುವೆಂದರೆ ಬೆಟ್ಟದಂಚಿನಿಂದ ಧುಮ್ಮಿಕ್ಕುವ ಝರಿ
ಮಾತೆಂದರೆ ಮಲೆನಾಡಿನ ತುಂತುರು ಹನಿ
ಮೊಗ ತುಂಬ ಸ್ಪೂರ್ತಿಯ ಚಿಲುಮೆ
ಬೊಗಸೆ ತುಂಬ ಬಾಳಸಾಗಿಸುವ ಒಲುಮೆ
ಅದ ಕಂಡಾಗಲೆಲ್ಲ ಮನ ತುಂಬ ಏನೋ ನೀರವತೆ
ಆದರೂ ಬರೆಯಲಾಗಲಿಲ್ಲ ನನಗೆ ಕವಿತೆ


ಕವಿತೆ,
ನಿನ್ನಿರವ ಹೇಳುವ ಗೆರೆಯ ಮೇಲೆ
ಓಡುತ್ತಿಲ್ಲ ಪೆನ್ನು
ಬೆಚ್ಚಿ ಬೀಳುವುದು ಕಾಗದ, ಕಂಡವನಂತೆ ಗನ್ನು!
ಆದರೂ ನನಗೇನೋ ಹಟ
ಕವಿತೆ ಬರೆಯಲೇಬೆಕೆಂದು
ಪಕ್ಕದಲಿದ್ದ ಅಜ್ಜನ ಹೂವು ಹಾಕಿದ ಪೋಟೊ ಗುಣುಗುತ್ತಿತ್ತು
ಎಲೇ ಮಂಕೆ,
ಬರೆಯದಿದ್ದರೂ ಕವಿತೆ ಕವಿತೆಯಾಗುವುದಿಲ್ಲವೇ?
ಥೇಟ್ ನಮ್ಮಂತೆ!

1 comment:

Prakash Shetty said...

ನೀ ಬರೆಯದಿದ್ದರೂ ಕವನ..
ನಾ ಓದಿದೆ ಅದನ್ನು
ಲಯಬದ್ದವಾದ ಮಧುರ
ರಸ ನಿಮಿಷಗಳಂತೆ..