Friday, November 23, 2012

'ನವೀನ’ರೂಪಿ ಬ್ರಹ್ಮಾಂಡ ಭ್ರಷ್ಟಾಚಾರ


೨೦೦೧ರ ಜುಲೈ. ಹೊಸ ಸರ್ಕಾರಕ್ಕೆ ವರ್ಷ ತುಂಬುವ ಸಂಭ್ರಮ. ಅದೇ ಸಂದರ್ಭದಲ್ಲಿ ಮೂವರು ಘಟಾನುಘಟಿ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ. ಕ್ಷಣಾರ್ಧದಲ್ಲೇ ಆ ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚನೆ. ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಅದಕ್ಷತೆ, ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದ ೧೨ ಸಚಿವರಿಗೆ ಗೇಟ್‌ಪಾಸ್. ತನ್ನ ಸಹೋದ್ಯೋಗಿಯೇ ಆಗಲಿ ಆಧಿಕಾರಶಾಹಿಯೇ ಆಗಲಿ ಯಾವುದೆ ಹಗರಣದ ಆರೋಪ ಕೇಳಿ ಬಂದದ್ದೆ ಆದರೆ ಆತನನ್ನು ಮನೆಗೆ ಕಳುಹಿಸಲು ಹಿಂದೆ ಮುಂದೆ ನೋಡದ ಒಬ್ಬ ವ್ಯಕ್ತಿ ಇಂದಿನ ರಾಜಕೀಯ ಕ್ಷೇತ್ರವನ್ನು ಆಳುತ್ತಿದ್ದಾನೆ, ಆತ ೧೨ ವರ್ಷದಿಂದ ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರೆ ನಂಬುವವರು ಯಾರು? ಅಂತಹ ಒಂದು ಆಶಾಕಿರಣವನ್ನು ಕೂಡ ಭ್ರಷ್ಟ್ಟಾಚಾರದ ಪ್ರಖರ ಪ್ರಭೆ ಇದೀಗ ಮಂಕಾಗಿಸಿದೆ.

ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗಿದ್ದ ಕ್ಲೀನ್ ಇಮೇಜ್‌ನ ದಂತ ಗೋಪುರ ಕುಸಿದು ಬಿದ್ದಿದೆ. ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಸಾಲಿಗೆ ಒಡಿಶಾ ಭರ್ಜರಿಯಾಗಿ ಎಂಟ್ರಿ ಮಾಡಿದ್ದು ಅಷ್ಟರಮಟ್ಟಿಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನವೀನ್ ಕಳೆದ ೧೨ ವರ್ಷಗಳಲ್ಲಿ ತನ್ನವರನ್ನು ಬಲಿಕೊಟ್ಟು ಕಾಪಾಡಿಕೊಂಡು ಬಂದಿದ್ದ ’ಭ್ರಷ್ಟತೆಯ ಅಸಹಿಷ್ಣು’ ಎಂಬ ಬಿರುದಿನ ಗುಳ್ಳೆ ಒಡೆದು ಕೀವುಗಳು ಹೊರಬರುತ್ತಿದೆ.
ಜೂನಿಯರ್ ಪಾಟ್ನಯಕ್ ೨೦೦೦ನೇ ಇಸವಿಯಿಂದಲೂ ಒಡಿಶಾದ ಮುಖ್ಯಮಂತ್ರಿ. ಈ ಬಾರಿಯದ್ದು ಅವರದ್ದು ಮೂರನೆ ಸರದಿ. ಕಳೆದ ಚುನಾವಣೆ (೨೦೦೯) ಅವರಿಗೆ ಅತ್ಯಂತ ಮಹತ್ವದಾಗಿತ್ತು. ಕಾರಣ ಅಂದು ಅವರ ಬಿಜು ಜನತಾದಳ ವಿಧಾನಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಾಗಲಷ್ಟೆ ತನ್ನ ಬಹುಕಾಲದ ಗೆಳೆಯ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತ್ತು. ಆದರೂ ಚುನಾವಣೆಯಲ್ಲಿ ನಿರಾಯಾಸ (೧೪೭ರಲ್ಲಿ ೧೦೩ ಸ್ಥಾನ ಗೆದ್ದು) ವಾಗಿ ಬಹುಮತ ಪಡೆದು ಮೂರನೇ ಬಾರಿಗೆ ಸಿಎಂ ಆಗಿದ್ದರು.

ಬಿಜೆಪಿ - ಬಿಜೆಡಿಯ ಮೈತ್ರಿ ಮುರಿದುಬೀಳಲು ಪ್ರಮುಖ ಕಾರಣ ಬಿಜೆಪಿಯೂ ಸರ್ಕಾರದ ಮೇಲೆ ಗಣಿ ಅಕ್ರಮ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ನವೀನ್ ಪಾಟ್ನಾಯಕ್ ತನಗೆ ಮೋಸ ಮಾಡಿದರು ಎಂಬುದು ಬಿಜೆಪಿಯ ಅಧಿಕೃತ ಹೇಳಿಕೆ. ಇದೀಗ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಶ್ರೀಕಾಂತ್ ಜೆನಾ ನವೀನ್‌ರ ಮೇಲೆ ಆರೋಪ ಹೊರಿಸಿದ್ದು ಮಾತ್ರವಲ್ಲದೆ  ಅವರ ರಾಜೀನಾಮೆ ಕೇಳಿದ್ದಾರೆ. ನವೀನ್‌ರ ತಪ್ಪು ನೀತಿಗಳಿಂದಾಗಿ ಬೊಕ್ಕಸಕ್ಕೆ ೪ ಲಕ್ಷ ಕೋಟಿ ನಷ್ಟವಾಗಿದೆ, ಒಡಿಶಾ ಗಣಿ ಅಕ್ರಮಕ್ಕೆ ಕುಪ್ರಸಿದ್ಧವಾಗಿರುವ ಕರ್ನಾಟಕ ಮತ್ತು ಗೋವಾವನ್ನು ಮೀರಿಸಿದೆ ಎಂಬುದು ಅವರ ಆರೋಪ. ಕೇಂದ್ರದ ಸಚಿವರೊಬ್ಬರು ಈ ರೀತಿಯ ಆರೋಪ ಮಾಡಿರುವುದರಿಂದ ನವೀನ್ ಫಜೀತಿಗೆ ಸಿಲುಕಿಕೊಂಡಿದ್ದಾರೆ.

ನವೀನ್ ಗಣಿ ಅಕ್ರಮದಲ್ಲಿ ಭಾಗಿಯಾಗಿ ದೇಶದ ಬೊಕ್ಕಸಕ್ಕೆ ೭,೦೦೦ ಕೋಟಿ ರೂ ನಷ್ಟ ತಂದಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಆಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಬೇಳೆ ಹಗರಣಕ್ಕೆ ನವೀನ್ ತನ್ನ ಸಚಿವ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಪ್ರಮೀಳಾ ಮಲ್ಲಿಕ್‌ರಿಂದ ರಾಜೀನಾಮೆ ಪಡೆಯಬೇಕಾಯಿತು.

ಕಲ್ಲಿದ್ದಲು ಹಗರಣದ ಕೋಲಾಹಲ ಮೊದಲು ಕೇಳಿಸಿದ್ದೆ ಒಡಿಶಾದಿಂದ. ಈ ಹಗರಣದಿಂದ ಉನ್ನತ ಶಿಕ್ಷಣ ಸಚಿವರಾಗಿದ್ದ ಬದ್ರಿ ನಾರಯಣ ಪಾತ್ರ ಮತ್ತು ಸಾರ್ವಜನಿಕ ಶಿಕ್ಷಣ ಸಚಿವ ಪ್ರತಾಪ್ ಜೆನಾ ಸಚಿವ ಸಂಪುಟದಿಂದ ಹೊರ ನಡೆಯಬೇಕಾಯಿತು. ಕಳೆದ ೯ ವರ್ಷಗಳಲ್ಲಿ ನವೀನ್ ಸರ್ಕಾರ ೫,೦೦೦ ಹೆಕ್ಟೇರ್ ಗಣಿ ಗುತ್ತಿಗೆ ನೀಡಿದೆ. ಕಲ್ಲಿದ್ದಲು ಹಗರಣದಿಂದ ಬೊಕ್ಕಸಕ್ಕೆ ೧೨೫ ಬಿಲಿಯನ್ ನಷ್ಟ ಎಂದು ಅಂದಾಜಿಸಲಾಗಿದೆ.  

ನಿಯಮಗಿರಿಯಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ವೇದಾಂತಕ್ಕೆ ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಸೆ. ಆದರೆ ಕೇಂದ್ರ ಪರಿಸರ ಇಲಾಖೆಯಿಂದ ಅಸಮ್ಮತಿ. ಆ ಬಳಿಕ ವೇದಾಂತ ವಿಶ್ವವಿದ್ಯಾಲಯದ ರಾದ್ಧಾಂತ! ಪೋಸ್ಕೋ ಎಂಬ ಮತ್ತೊಂದು ದೈತ್ಯ ಉಕ್ಕು ಕಂಪೆನಿಗೆ ತನ್ನ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡಲು ಪ್ರಯತ್ನಿಸಿದ ನವೀನ್‌ಗೆ ಜನರಿಂದ ತೀವ್ರ ವಿರೋಧ. ಕಳೆದ ವರ್ಷದ ಜೂನ್‌ನಲ್ಲಿ ನಡೆದ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ಸಚಿವರಿಬ್ಬರು ಕಾಂಗ್ರೆಸ್ ಶಾಸಕನೊಬ್ಬನ ಜೊತೆ ಕುದುರೆ ವ್ಯಾಪಾರಕ್ಕೆ ಇಳಿದದ್ದು ಜಗ ಜಾಹೀರಾಗುತ್ತಲೆ ನವೀನ್‌ಗೆ ಮತ್ತೊಂದು ಸಂಕಟ. ಹೀಗೆ ನವೀನ್‌ರ ಮೂರನೆ ಪಾಳಿ ಅನೇಕ ಗೊಂದಲಗಳ ಗೂಡು.

ಆದರೆ ಇಂತಹದ್ದೆಲ್ಲ ಕಠಿಣ ಸಮಯದಲ್ಲಿ ನವೀನ್ ’ಹರಕೆಯ ಕುರಿ’ ಹುಡುಕಿ ಬಚಾವ್ ಆಗುತ್ತಿದ್ದರು. ತಮ್ಮ ಕ್ಲೀನ್ ಇಮೇಜ್‌ನ್ನು ಮತ್ತಷ್ಟು ಎತ್ತರಕ್ಕೆ ಏರಿಸಿಕೊಳ್ಳುತ್ತಿದ್ದರು. ಆದರೆ ರಾಜ್ಯದಲ್ಲಿ ಇಷ್ಟೆಲ್ಲ ಅಕ್ರಮಗಳು ಮುಖ್ಯಮಂತ್ರಿಯ ಅರಿವಿಗೆ ನಿಲುಕದೆ ನಡೆದಿತ್ತು ಎಂಬುದನ್ನು ನಂಬುವುದು ಪರಮ ಕಷ್ಟ. ತನ್ನ ರಾಜಕೀಯ ಮಾರ್ಗದರ್ಶಕ ಪ್ಯಾರಿಲಾಲ್ ಮಹಾಪಾತ್ರ ತನ್ನ ವಿರುದ್ಧವೇ ದಂಗೆ ಎದ್ದು ತನ್ನ ಪದಚ್ಯುತಿಯ ಎಣಿಕೆ ಹಾಕಿದ್ದಾರೆ ಎಂಬ ವರದಿ ವಿದೇಶ ಪ್ರವಾಸದಲ್ಲಿದ್ದ ನವೀನ್‌ಗೆ ಸುಲಭವಾಗಿ ದಕ್ಕುತ್ತದೆ. ಆದರೆ ತನ್ನ ಕೈಗೆಳಗೆಯೇ ಒರಿಸ್ಸಾದ ದಟ್ಟ ಕಾಡುಗಳು ಅಕ್ರಮ ಗಣಿಗಾರಿಕೆಯ ಅಟ್ಟಹಾಸಕ್ಕೆ ನಲುಗುತ್ತಿರುವುದು ಗೊತ್ತಾಗಿಲ್ಲ ಎಂಬುದನ್ನು ಹೇಗೆ ತಾನೇ ನಂಬುವುದು?

ಗೋವಾದಲ್ಲಿ ನಡೆದಿದ್ದ ಗಣಿ ಅಕ್ರಮದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕಾರಣವಾಗಿದ್ದ ನ್ಯಾ. ಎಮ್ ಬಿ ಷಾ ನೇತೃತ್ವದ ಆಯೋಗ ಇದೀಗ ಒರಿಸ್ಸಾದ ಗಣಿ ಹುಳುಕು, ಕೊಳಕುಗಳ ಬಗ್ಗೆ ವರದಿ ತಯಾರಿಸುತ್ತಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಗಣಿ ಲೂಟಿಕೋರರಿಗೆ ದುಃಸ್ವಪ್ನವಾಗಿದ್ದ ಅರಣ್ಯಾಧಿಕಾರಿ ಯು. ವಿ. ಸಿಂಗ್ ಕೂಡ ಇದ್ದಾರೆ.

ಗಣಿ ಲೂಟಿಯ ಸುಗ್ಗಿ ಪ್ರಾರಂಭವಾದ ಅನೇಕ ವರ್ಷಗಳ ಬಳಿಕ ಇತ್ತೀಚೆಗಷ್ಟೆ ನವೀನ್ ತನ್ನ ಇಮೇಜ್ ರಕ್ಷಣೆಗಾಗಿ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ೨೭ ಗಣಿ ಕಂಪೆನಿಗಳಿಗೆ ೫೮ ಸಾವಿರ ಕೋಟಿ ದಂಡ ವಿಧಿಸಿದ್ದಾರೆ. ಯಾಕೋ ಗಣಿ ಅಕ್ರಮ ತನ್ನೆಲ್ಲ ಸೀಮೆಯನ್ನು ಮೀರಿದ ಬಳಿಕ ಕರ್ನಾಟಕದ ಆಗಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ೨೦೧೦ರಲ್ಲಿ ಅದಿರು ರಫ್ತಿಗೆ ನಿಷೇಧ ಹೇರಿ ’ಕುರ್ಚಿ ಮತ್ತು ಇಮೇಜ್’ನ್ನು ರಕ್ಷಣೆ ಮಾಡಿಕೊಳ್ಳುವ ಅಂತಿಮ ಪ್ರಯತ್ನ ನಡೆಸಿದ್ದರು. ಇದೀಗ ಎಮ್ ಬಿ ಷಾ ಆಯೋಗ ತನ್ನ ವರದಿ ನೀಡುವ ಮುಂಚಿತವಾಗಿ ದಂಡ ವಿಧಿಸಿ ತನ್ನನ್ನು ಬಚಾವ್ ಮಾಡಿಕೊಳ್ಳುವ ಪ್ರಯತ್ನವನ್ನು ನವೀನ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಅವರ ಕ್ರಮವನ್ನು ಬಣ್ಣಿಸಲಾಗುತ್ತಿದೆ. ಆದರೆ ಯಡಿಯೂರಪ್ಪ ಗಣಿ ಉರುಳಿಗೆ ಕೊರಳು ಕೊಡಲೇ ಬೇಕಾಯಿತು. ನವೀನ್‌ರ ಕೊರಳಿಗೆ ಗಣಿ ಉರುಳಾಗಬಹುದೇ ಅಥವಾ ಹರಕೆಯ ಕುರಿಗಳ ಕೊರಳಿಗೆ ಈ ಉರುಳು ಬೀಳಬಹುದೇ ಎಂಬ ಕುತೂಹಲ ಈಗಾಗಲೇ ಗರಿಗೆದರಿದೆ.

ನವೀನ್‌ರ ತಂದೆ ಬಿಜು ಪಾಟ್ನಾಯಕ್ ದೇಶದ ಜನಪ್ರಿಯ ಮತ್ತು ದೂರದರ್ಶಿತ್ವ ಹೊಂದಿದ್ದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ’ಭ್ರಷ್ಟರನ್ನು ಹಿಡಿದು ಥಳಿಸಿ’ ಎಂದು ಹೇಳುವಷ್ಟು ಭ್ರಷ್ಟತೆಯನ್ನು ವಿರೋಧಿಸಿದ್ದ ವ್ಯಕ್ತಿ ಅವರು. ಅವರ ಸುಪುತ್ರ ನವೀನ್‌ರ ಸನಿಹದಲ್ಲೆ ಕಳಂಕದ ಸುಳಿ ಸುತ್ತುತ್ತಿದೆ. ಇದು ಅವರ ಕ್ಲೀನ್ ಇಮೇಜ್‌ಗೆ ಧಕ್ಕೆ ತಂದಿರುವುದು ನಿಜ, ಆದರೆ ಅವರ ರಾಜಕೀಯ ಭವಿಷ್ಯವನ್ನು ಆಹುತಿ ತೆಗೆದುಕೊಳ್ಳಲಿದೆಯೇ ಎಂಬುದು ಸ್ಪಷ್ಟವಾಗುವ ದಿನ ಸನಿಹದಲ್ಲೇ ಇದೆ.

Monday, November 19, 2012

ಚೀನಾಕ್ಕೆ ಹೊಸ ನೇತಾರ, ಸವಾಲುಗಳ ಮಹಾಪೂರ


ನವೆಂಬರ ತಿಂಗಳಿನ ಮೊದಲ ಅಷ್ಟ ದಿನಗಳು ನಾನಾ ಸಂಕಷ್ಟದೊಳಗೆ ಸಿಳುಕಿರುವ ಜಗತ್ತಿನ ಮುಂದಿನ ರೂಪುರೇಷೆಗಳ ದಿಕ್ಸೂಚಕ. ವಿಶ್ವದ ನಂಬರ್ ೧ ಆರ್ಥಿಕತೆ ಎಂದು ಕರೆಸಿಕೊಳ್ಳುವ ಅಮೆರಿಕಕ್ಕೆ ಮತ್ತೆ ನಾಲ್ಕು ವರ್ಷಗಳ ಕಾಲ ಬರಾಕ್ ಒಬಾಮಾರೇ ಅಧ್ಯಕ್ಷರು ಎಂಬುದು ಅಖೈರಾಗಿದೆ. ಇದೀಗ ವಿಶ್ವದ ನಂಬರ್ ೨ ಅರ್ಥ ವ್ಯವಸ್ಥೆ ಎಂದು ಕರೆಸಿಕೊಳ್ಳುವ ಚೀನಾವನ್ನು ಮುಂದಿನ ದಶ ವರ್ಷಗಳ ಕಾಲ ನೂತನ ಅಧ್ಯಕ್ಷ ಕ್ಷಿ ಜಿಂಪಿಂಗ್ ಮುನ್ನಡೆಸುವುದು ಸ್ಪಷ್ಟ. ಅವರಿಗೆ ಪ್ರಧಾನಮಂತ್ರಿಯಾಗಿ ಲೀ ಕ್ವಿಗಿಂಗ್ ಸಾಥ್ ನೀಡಲಿದ್ದಾರೆ.

ಇಳಿಜಾರಿನ ಹಾದಿಯಲ್ಲಿ ಪಾತಾಳ ಮುಖಿಯಾಗಿ ಸಾಗುತ್ತಿರುವ ಈ ಎರಡು ’ದೈತ್ಯ ಶಕ್ತಿಗಳು’ ತಾವು ಮುಳುಗುವುದರೊಂದಿಗೆ ಇಡೀ ಜಗತ್ತಿನ ಅರ್ಥ ವ್ಯವಸ್ಥೆಯನ್ನೇ ವಿಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಈ ದೇಶಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ವಿಶ್ವ ಅರ್ಥಿಕತೆಯನ್ನೆ ಪಲ್ಲಟ ಮಾಡುವ ಪ್ರಚ್ಛನ್ನ ಶಕ್ತಿ ಹೊಂದಿದೆ.

ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರ. ಅಲ್ಲಿ ಮುಕ್ತತೆ ಸೀಮಾತೀತ. ಅದ್ದರಿಂದ ಅಮೆರಿಕದ ತಪ್ಪು ಒಪ್ಪುಗಳ  ವಿಮರ್ಶೆ, ಟೀಕೆ ಟಿಪ್ಪಣಿ ನಡೆಸುವುದು ಸುಲಭ ಮತ್ತು ಸರಳ. ಆದರೆ ಚೀನಾ ಆಗಲ್ಲ. ಅಲ್ಲಿನ ಪ್ರಜೆಗಳು ಬಾಯಿಗೆ ಬೀಗ, ಲೇಖನಿಗೆ ನಿರ್ಬಂಧ ಹಾಕಿಕೊಂಡೆ ಬದುಕಬೇಕು. ಅದು ಅಪ್ಪಟ ಕಮ್ಯುನಿಷ್ಟ್ ಮಾದರಿಯ ಆಡಳಿತ ಹೊಂದಿರುವ ಬಂಡವಾಳಶಾಹಿ ಆರ್ಥಿಕತೆಯನ್ನು ಒಪ್ಪಿಕೊಂಡಿರುವ ರಾಷ್ಟ್ರ. ಇಂತಹ ರಾಷ್ಟ್ರವೊಂದು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿರುವ ಅಭಿವೃದ್ಧಿಗೆ, ವ್ಯವಸ್ಥೆಗೆ ಇದೀಗ ಆಪತ್ತು ಎದುರಾಗಿದೆ. ಇಂತಹ ಇಳಿ ಸಮಯದಲ್ಲಿ ಚೀನಾದ ಚುಕ್ಕಾಣಿಯನ್ನು ಕ್ಷಿ ಜಿಂಪಿಂಗ್ ವಹಿಸಿಕೊಳ್ಳಲಿದ್ದಾರೆ.

ಗುಪ್ತತೆಯ ಮೈವೆತ್ತ ರೂಪವಾಗಿರುವ ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಕ್ಷಿ ಜಿಂಪಿಂಗ್ ಅವರ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವುದು ಮೀನಿನ ಹೆಜ್ಜೆಯನ್ನು ಪತ್ತೆ ಹಚ್ಚಿದಂತಹ ಸಾಹಸ.

ಆದರೂ ಕ್ಷಿ ಜಿಂಪಿಂಗ್ ಅವರನ್ನು ಕಮ್ಯುನಿಷ್ಟ್ ಚೀನಾದ ೫ನೇ ಪೀಳಿಗೆ ನಾಯಕ. ಅವರಿಗೆ ಈಗ ೫೯ರ ಹರೆಯ. ಅವರು ಹಿರಿಯ ಕಮ್ಯುನಿಷ್ಟ್ ನಾಯಕ ಕ್ಷಿ ಝಾಕ್ಷನ್ ಅವರ ಪುತ್ರ. ಕೆಮಿಕಲ್ ಇಂಜಿನಿಯರಿಂಗ್ ಮತ್ತು ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಅವರು ೨೦೦೭ರಲ್ಲಿ ಶಾಂಘೈಯಲ್ಲಿ ಪಕ್ಷದ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಲೆ ಚೀನಾದ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಸಂಕೇತ ರವಾನೆಯಾಗಿತ್ತು.

ಆ ಬಳಿಕ ನವ ಸದಸ್ಯರ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾಗಿ ಅವರನ್ನು ನೇಮಿಸಲಾಗುತ್ತದೆ.  ಬಳಿಕ ಕೇಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ನಂತರ ಚೀನಾದ ಉಪ ಅಧ್ಯಕ್ಷರಾಗಿ ಪದೋನ್ನತಿ ಹೊಂದುತ್ತಾರೆ.
ಯಾವುದೆ ಹಗರಣಗಳ ಸುಳಿಗೆ ಸಿಲುಕಿಕೊಳ್ಳದಿರುವುದು ಮತ್ತು ಅಜಾತ ಶತ್ರು ಎಂಬ ಇಮೇಜ್‌ಗಳು ಕ್ಷಿ ಜಿಂಪಿಂಗ್‌ರ ಯಶಸ್ಸಿನ ಹಾದಿಗೆ ಉರುಗೋಲಾಗಿದೆ. ಆದರೆ ೨೦೦೮ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ ಅಭೂತಪೂರ್ವ ಯಶಸ್ಸು ಕ್ಷಿ ಜಿಂಪಿಂಗ್‌ರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಅವರು ಈ ಕ್ರೀಡಾಕೂಟದ ಉಸ್ತುವಾರಿ ವಹಿಸಿಕೊಂಡಿದ್ದರು.

ಆದರೆ ಕ್ಷಿ ಜಿಂಪಿಂಗ್‌ರ ಸವಾಲಿನ ದಿನಗಳು ಇನ್ನಷ್ಟೆ ಶುರುವಾಗಲಿದೆ. ಏಕೆಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಪ್ರಗತಿ ಪಥದಲ್ಲಿ ಶರವೇಗದಲ್ಲಿ ದೌಡಾಯಿಸುತ್ತಿದ್ದ ಚೀನಾ ಕಳೆದೊಂದು ವರ್ಷದಿಂದ ಬಸವಳಿದಿದೆ. ಇಂತಹ ಸಂಕ್ರಾಂತಿ ಸಮಯದಲ್ಲಿ ಚೀನಾದ ಹೊಣೆ ಹೊರುವ ಜವಾಬ್ದಾರಿ ಜಿಂಪಿಂಗ್‌ರದ್ದು. ಚೀನಾದ ಅಭಿವೃದ್ಧಿಯ ವ್ಯಾಖ್ಯೆಗೆ ಹೊಸ ಭಾಷ್ಯ ಬರೆಯುವುದೇ ಅಥವಾ ಚೀನಾಕ್ಕೆ ಹೊಸ ಅಭಿವೃದ್ಧಿ ಮಂತ್ರವನ್ನು ನೀಡಬೇಕೆ ಎಂಬ ಸಂದಿಗ್ಧತೆಯನ್ನು ಹೊತ್ತುಕೊಂಡೆ ಅವರು ಪಟ್ಟವೇರುತ್ತಿದ್ದಾರೆ.
ವಿಶ್ವದ ಅತ್ಯಂತ ದೊಡ್ಡ ಕಮ್ಯುನಿಷ್ಟ್ ರಾಷ್ಟ್ರ ಚೀನಾ. ಇಲ್ಲಿ ಏಕಪಕ್ಷೀಯ ಆಡಳಿತ ವ್ಯವಸ್ಥೆ ಇರುವುದರಿಂದ ಪ್ರತಿಪಕ್ಷಗಳ ಕಾಟ ಇಲ್ಲ. ಅಲ್ಲಿ ಒಮ್ಮೆ ಬಂದ ಅಧಿಕಾರ ಕಳೆದುಕೊಳ್ಳಬೇಕಾದರೆ ಸ್ವಯಂಕೃತ ಅಪರಾಧ ಅಥವಾ ಅಂತರಿಕ ಕಚ್ಚಾಟಗಳೇ ಕಾರಣವಾಗಬೇಕು. ಹೊಸ ಪೀಳಿಗೆಯ ಕಮ್ಯುನಿಷ್ಟ್ ನಾಯಕರಲ್ಲಿ ಹುಟ್ಟಿಕೊಂಡಿರುವ ಅಧಿಕಾರ ಮೋಹ ಕ್ಷಿ ಜಿಂಪಿಂಗ್‌ರಿಗೆ ಕಿರಿಕಿರಿ ತರುವ ಸಾಧ್ಯತೆ ಇದೆ. ಕ್ಷಿ ಜಿಂಪಿಂಗ್ ಸದ್ಯ ಕ್ಲೀನ್ ಇಮೇಜ್ ಹೊಂದಿರುವುದು ನಿಜ. ಆದರೆ ಅವರ ಕುಟುಂಬ ಸದಸ್ಯರು ಅನೇಕ ಪ್ರಸಿದ್ಧ ಉದ್ಯಮಿಗಳ ಮತ್ತು ಉದ್ದಿಮೆಗಳ ಜೊತೆ ಸಂಪರ್ಕ ಹೊಂದಿರುವುದು ಈಗಾಗಲೇ ಅನೇಕರ ಕಣ್ಣು ಕೆಂಪಾಗಿಸಿದೆ.

ಸದ್ಯ ಚೀನಾದ ಮುಂದಿರುವ ಅತ್ಯಂತ ದೊಡ್ಡ ಸವಾಲೆಂದರೆ ಅಸಮಾನತೆ. ಒಂದು ಕಡೆ ಕೋಟಿ ಕೋಟಿ ಕೊಪ್ಪರಿಗೆ ಮೇಲೆ ಉಂಡಾಡುವ ಕೋಟ್ಯಾಧೀಶರಿದ್ದರೆ ಮತ್ತೊಂದು ಕಡೆ ತುತ್ತು ಅನ್ನಕ್ಕಾಗಿ ಪರದಾಡುವ ಗತಿ ಹೀನರು, ನಿರ್ಗತಿಕರು. ಈ ಸಮಸ್ಯೆ ವಿಶ್ವದಾದ್ಯಂತ ಇದ್ದರು ಕೂಡ ಚೀನಾದಲ್ಲಿ ಮಾತ್ರ ಮಿತಿ ಮೀರಿದೆ. ವಿಶ್ವದ ಅತ್ಯಂತ ದೊಡ್ಡ ರಫ್ತುದಾರ, ವಾರ್ಷಿಕ ೯.೩೧ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಚೀನಾದಲ್ಲಿ ಸುಮಾರು ೨ ಕೋಟಿಯಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಇಷ್ಟೆ ಅಲ್ಲದೆ ನಗರ ಮತ್ತು ಹಳ್ಳಿಗಳ ಜನರ ನಡುವಿನ ತಲಾ ಅದಾಯ ಪ್ರಮಾಣದಲ್ಲಿ ಭಾರಿ ಅಂತರ ಸೃಷ್ಟಿಯಾಗಿದೆ.
ಭಾರತದಂತೆ ಚೀನಾದಲ್ಲಿಯೂ ಈಗ ಭ್ರಷ್ಟಾಚಾರ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು ನಡೆಸಿದ ಭ್ರಷ್ಟ ಚಟುವಟಿಕೆಗಳು ಒಂದೊಂದಾಗಿ ಹೊರ ಬರುತ್ತಿರುವಂತೆ ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಳೆದ ವಾರವಷ್ಟೆ ಚೀನಾದ ಅಧಿಕಾರಿಯೊಬ್ಬ ಇಡೀ ಚೀನಾದ ಇತಿಹಾಸದಲ್ಲೆ ಮೊತ್ತ ಮೊದಲ ಬಾರಿಗೆ ತನ್ನ ಆಸ್ತಿ ವಿವರವನ್ನು ಅಂತರ್ಜಾಲದಲ್ಲಿ ಸ್ವಘೋಷಿಸಿಕೊಂಡು ಉಳಿದವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾನೆ. ಆತನ ಮಾದರಿಯ ಅನುಕರಣೆಯಾಗಬೇಕು ಎಂದು ಪ್ರತಿಭಟನೆಗಳ ಕಿಡಿ ಹುಟ್ಟಿಕೊಂಡಿದೆ. ಪಕ್ಷ ಮತ್ತು ಸರ್ಕಾರದ ಅಧಿಕಾರಿಗಳ ಆಸ್ತಿ, ಆದಾಯ ವಿವರವನ್ನು ಬಹಿರಂಗ ಪಡಿಸುವ ಕಾಯ್ದೆಯೊಂದು ೧೯೯೪ರಿಂದಲೂ ಚೀನಾದಲ್ಲಿ ಧೂಳು ತಿನ್ನುತ್ತಿದೆ. ಈ ಕಾಯ್ದೆ ಬೆಳಕು ಕಾಣವುದೇ ಅನ್ನುವ ಪ್ರಶ್ನೆ ಕ್ಷಿ ಜಿಂಪಿಂಗ್‌ರ ಅಧಿಕಾರರೋಹಣ ದೊಂದಿಗೆ ಮತ್ತೆ ತಲೆ ಎತ್ತಿದೆ.

ಕಳೆದ ಕೆಲ ವರ್ಷಗಳಲ್ಲಿ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಸಾಲು ಸಾಲಾಗಿ ಹೊರ ಬರುತ್ತಿವೆ. ಹಿರಿಯ ಕಮ್ಯುನಿಷ್ಟ್ ನಾಯಕ ಬೋ ಕ್ಷಿಲಾಯಿ ಲಂಚ ಸ್ವೀಕರಿಸುತ್ತಿರುವುದನ್ನು ಅಮೆರಿಕದ ನ್ಯೂಯಾರ್ಕ್ ಅಫ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಆದೇ ರೀತಿ ಚೀನಾದ ಪ್ರಧಾನಿ ವೆನ್ ಜಿಬಾಬೊ ಅವರ ಕುಟುಂಬ ಅಪಾರ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವುದು ಕೂಡ ಇದೀಗ ಬಯಲಾಗಿರುವ ಸತ್ಯ. ಅದ್ದರಿಂದ ಚೀನಾದ ಜನರು ತಮ್ಮ ಆಡಳಿತ ವ್ಯವಸ್ಥೆ ಬಗ್ಗೆ ಭ್ರಮನಿರಶನ ಹೊಂದಿದ್ದಾರೆ. ಈ ಹುಳುಕುಗಳನ್ನು ಮರೆಮಾಡಿ ಚೀನಿಯರಿಗೆ ’ಹೊಸ ಬೆಳಕು’ ತೋರಿಸುವ ಹೊಣೆಯನ್ನು ಕ್ಷಿ ಜಿಂಪಿಂಗ್ ಹೊರಬೇಕಾಗಿದೆ.
ಚೀನಾ ಅಕಾಡೆಮಿ ಅಫ್ ಸೋಷಿಯಲ್ ಸೈನ್ಸ್‌ನ ಒಂದು ವರದಿ ಪ್ರಕಾರ ೨೦೧೦ರಲ್ಲಿ ಚೀನಾದದ್ಯಂತ ೧,೮೦,೦೦ ಭ್ರಷ್ಟಾಚಾರ ವಿರೋಧಿ ಹೋರಾಟಗಳು ನಡೆದಿದ್ದವಂತೆ. ಈ ಕಾರಣಕ್ಕಾಗಿಯೇ ನಿಕಟಪೂರ್ವ ಅಧ್ಯಕ್ಷ ಹೂ ಜಿಂಟಾವೋ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಚೀನಾದ ಅಳಿವು ಉಳಿವಿನ ಪ್ರಶ್ನೆ ಅಡಗಿದೆ ಎಂದು ಹೇಳುತ್ತಲೇ ಇದ್ದಾರೆ. ’ಭಾರತೀಯ ಮಾದರಿ ಭ್ರಷ್ಟಾಚಾರ’ (ರಾಜಕಾರಣಿಗಳ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗುವುದು) ಚೀನಾದಲ್ಲಿ ಮುಗಿಲಿಗಿಂತಲು ಮಿಗಿಲಾಗಿ ಬೆಳೆದಿದೆ.

ಅವೈಜ್ಞಾನಿಕ ರೀತಿಯಲ್ಲಿ ಸರ್ಕಾರ ಜನರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದರಿಂದ ಜನರು ಸರ್ಕಾರದ ವಿರುದ್ಧ ಕ್ರುದ್ಧರಾಗಿದ್ದಾರೆ. ಇದು ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ. ಪ್ರತಿವರ್ಷ ಸುಮಾರು ೪೦ ಲಕ್ಷ ಜನ ತಮ್ಮ ಕೃಷಿ ಭೂಮಿಯನ್ನು ಕಾರ್ಖಾನೆ, ರಿಯಲ್ ಎಸ್ಟೇಟ್ ಮುಂತಾದ ಚಟುವಟಿಕೆಗಳಿಗೆ ಕಳೆದುಕೊಳ್ಳುತ್ತಿದ್ದಾರೆ. ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲೇ ಬೇಕಾದ ಜವಾಬ್ದಾರಿ ಜಿಂಪಿಂಗ್‌ರದ್ದು.

ಈ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಿ ಹೊರ ಜಗತ್ತಿನ ಮುಂದೆ ರಹಸ್ಯ ಕಾಪಾಡುವ ಹಾದಿ ಬಹು ಸುಲಭವಿತ್ತು. ಆದರೆ ಇದೀಗ ಸಾಮಾಜಿಕ ತಾಣಗಳ ಕ್ರಾಂತಿಯಿಂದಾಗಿ ಪ್ರತಿಯೊಂದು ಸಂಗತಿಯೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ಹೊರ ಜಗತ್ತಿಗೆ ಗೊತ್ತಾಗುತ್ತಿದೆ. ಚೀನಾ ತನ್ನ ನೋವು ತನಗಿರಲಿ, ಅದು ಬಹಿರಂಗಗೊಳ್ಳದಿರಲಿ ಎಂದು ಅಸಂಖ್ಯಾತ ವೆಬ್ ತಾಣಗಳಿಗೆ ನಿರ್ಬಂಧ ಹಾಕಿದೆ, ತನ್ನದೇ ಶೋಧನಾ ಇಂಜಿನ್ ಸ್ಥಾಪಿಸಿದೆ. ಆದರೆ ಚೀನಾದಲ್ಲಿನ ಹೊಸ ಪ್ರತಿಭಟನೆಗಳು ಅಂತರ್ಜಾಲದ ನೆರವಿನಿಂದಲೆ ಚಿಗಿತುಕೊಳ್ಳುತ್ತಿರುವುದು ಗಮನಿಸತಕ್ಕ ಅಂಶ. ಅದ್ದರಿಂದ ಕ್ಷಿ ಜಿಂಪಿಂಗ್ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ತೆಗೆದುಕೊಳ್ಳುವ ನಿಲುವಿನ ಬಗ್ಗೆ ಇಡೀ ಜಗತ್ತೆ ಕಾತರಿಸುತ್ತಿದೆ.

ಕ್ಷಿ ಜಿಂಪಿಂಗ್ ಉದ್ಯಮ ಕೇಂದ್ರಿತ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಅಮೆರಿಕದ ಪಾರುಪತ್ಯವನ್ನು ಮುರಿಯವ ದಿಕ್ಕಿನಲ್ಲಿ ಅವರು ಸಾಗಬಹುದು, ಆದರೆ ಅಮೆರಿಕದ ಜೊತೆ ತಿಕ್ಕಾಟ ನಡೆಸುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತ ನೆರೆಯ ಭಾರತದ ಜೊತೆಗೂ ಸ್ನೇಹ ಸಂಬಂಧವನ್ನು ಕಾದು ಕೊಂಡು ಹೋಗಲು ಅವರು ಉತ್ಸುಕರಾಗಿದ್ದಾರೆ. ಭಾರತ ಮತ್ತು ಚೀನಾದ ಮಧ್ಯೆ ಇರುವ ಗಡಿ ವಿವಾದ ಮತ್ತು ವ್ಯಾಪಾರ ವಹಿವಾಟಿನ ಪ್ರಮಾಣದಲ್ಲಿರುವ ಅಗಾಧ ಅಂತರ ಉಭಯ ದೇಶಗಳ ತಕ್ಷಣದ ಕಾಳಜಿಯ ವಿಷಯಗಳು.

ಅಸಮತೋಲಿತ, ಅಸಂಘಟಿತ ಅಭಿವೃದ್ಧಿಯ ಸವಾಲನ್ನು ನಿಭಾಯಿಸಿಕೊಂಡು ಕಳೆದ ೯ ತಿಂಗಳಿನಿಂದ ದಾಖಲಿಸಿರುವ ಶೇ ೭.೭ರ ಜಿಡಿಪಿ ಅಭಿವೃದ್ಧಿ ದರವನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆ ಜಿಂಪಿಂಗ್‌ಗಿದೆ.

ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸವಾಲಿನ ಪರ್ವತವನ್ನು ಜಿಂಪಿಂಗ್ ಯಾವ ರೀತಿ ’ಜಂಪ್’ ಮಾಡುತ್ತಾರೆ ಎಂಬ ಕುತೂಹಲ ಚೀನಾಕ್ಕೆ ಮಾತ್ರ ಸೀಮಿತವಾದುದಲ್ಲ. ಜಿಂಪಿಂಗ್ ತನ್ನ ಕೈಂಕರ್ಯದಲ್ಲಿ ಗೆದ್ದರೆ ಜಗತ್ತಿನ ಬಹುದೊಡ್ಡ ರಾಷ್ಟವೊಂದರಲ್ಲಿ ಕಮ್ಯುನಿಸಂ ಉಳಿಯಬಹುದು, ಒಂದು ವೇಳೆ ವಿಫಲರಾದರೆ ವಿಶ್ವ ಭೂಪಟದಲ್ಲಿ ಕಮ್ಯುನಿಸಂ ಕಳೆದೇ ಹೋಗಬಹುದೇನೋ...!?

ಕಾದು ನೋಡೋಣ, ಫಲಿತಾಂಶದ ಹಾದಿ ದೂರವಿಲ್ಲ.

Monday, November 5, 2012

ಒಂದು ಸೋಲಿನ ವೃತ್ತಾಂತ; ಪಾಠ ಕಲಿಯದ ದುರಂತ


ಸೋಲು... ಸೋಲು... ಸೋಲು
ಸೋಲು ಅಕ್ಷ್ಯಮ್ಯ, ಅದರಲ್ಲಿಯೂ ಯುದ್ಧಭೂಮಿಯಲ್ಲಿನ ಅಪಜಯಕ್ಕೆ ಕ್ಷಮೆಯೇ ಇಲ್ಲ ಎಂದು ಕೊಂಡಿರುವ ಪರಂಪರೆ ನಮ್ಮದು. ಸೋತವ ಎಂಬ ಹಣೆಪಟ್ಟಿ ಯಾರಿಗೂ ಬೇಡ, ಸೋಲು ಎಂದಿಗೂ ತಬ್ಬಲಿ.
 
ಸರಿಯಾಗಿ ೫೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಹಿಮಾಲಯದ ಧವಳಗಿರಿಗಳ ಮಧ್ಯೆ ಭಾರತೀಯರನ್ನು ಅಪ್ಪಿಕೊಳ್ಳಲು ಇಂತಹದ್ದೆ ಒಂದು ಸೋಲು ಹೊಂಚು ಹಾಕಿ ಕುಳಿತಿತ್ತು. ಚೀನಾದ ಕೆಂಪು ಪಡೆ ಹೆದ್ದೆರೆಯೋಪಾದಿಯಲ್ಲಿ ನಡೆಸಿದ ದಾಳಿಗೆ ಗಣತಂತ್ರ ಸ್ವತಂತ್ರ ಭಾರತ ಬೆರಗಾಗಿತ್ತು, ಬೆನ್ನು ಬಾಗಿಸಿ ವಂದಿಸಿ ಸೋತು ಹೋಗಿತ್ತು.

ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆಗಳ ತವರೂರು. ಹಾಗೆಯೆ ಜಾಗತಿಕರಣಗೊಂಡ ಜಗತ್ತನ್ನು ಹೊತ್ತು ಸಾಗಿಸುವ ಗಾಲಿಗಳು. ಈ ಎರಡು ದೇಶಗಳಿಗೆ ಭೂತ ಮತ್ತು ಭವಿಷ್ಯದಲ್ಲಿರುವ ಪ್ರಾಮುಖ್ಯತೆ ಆಪಾರ. ಆದರೆ ಭಾರತ ಮತ್ತು ಚೀನಾದ ಮಧ್ಯೆ ಹುಟ್ಟಿಕೊಂಡ ಸಂಘರ್ಷದ ಕಾಲಘಟ್ಟ ಬಹಳ ವಿಚಿತ್ರವಾದದ್ದು.

೧೯೫೦ರ ದಶಕದಲ್ಲಿ ಚೀನಾವು ಮಾವೋ ತ್ಸೆತುಂಗ್‌ನ ತೆಕ್ಕೆಯಲ್ಲಿ ಅಪರಿಮಿತ ವೇಗದ ಅಭಿವೃದ್ಧಿಯ ಕನಸನ್ನು ಹೊಸೆಯುತ್ತಿದ್ದರೆ, ಭಾರತ ಬ್ರಿಟಿಷರಿಂದ ಮುಕ್ತವಾಗಿ ಪ್ರಜಾರಾಜ್ಯದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದ ಸಮಯ, ಸಂದರ್ಭವದು. ಆಗ ಈ ಎರಡು ದೇಶಗಳಿಗೆ ಯುದ್ಧವೆಂಬ ಹೊರೆ ಬೇಕಾಗಿರಲಿಲ್ಲ.

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ’ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಉದ್ಘೋಷವನ್ನು ೧೯೫೦ರ ದಶಕದಲ್ಲಿ ಮುನ್ನೆಲೆಗೆ ತಂದಿದ್ದರು. ತೈವಾನ್ ವಿವಾದದಿಂದಾಗಿ ವಿಶ್ವ ಗುಂಪಿನಲ್ಲಿ ಚೀನಾ ಮೂಲೆಗುಂಪಾದ ಸಂದರ್ಭದಲ್ಲಿ ಅದನ್ನು ಒಂದು ದೇಶವೆಂದು ಪರಿಭಾವಿಸಿ ಅದರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ದೇಶಗಳಲ್ಲಿ ಭಾರತವು ಒಂದು. ಇಂತಹ ಮಧುರ ಸಂಬಂಧ ಉತ್ತುಂಗಕ್ಕೇರುತ್ತಲೇ ಪರಸ್ಪರ ಅನುಮಾನದ ಪಾತಳಕ್ಕೆ ಕುಸಿದದ್ದು ಚರಿತ್ರೆಯ ವೈಚಿತ್ರ.
ಕಮ್ಯುನಿಷ್ಟ್ ನಾಯಕ ಮಾವೋ ಚೀನಾದ ಮೇಲೆ ಹಿಡಿತ ಸಂಪಾದಿಸಿದ್ದು ೧೯೪೯ರಲ್ಲಿ. ಬ್ರಿಟೀಷ್‌ರಿಂದ ಭಾರತ ಸ್ವಾತಂತ್ರ್ಯ ಪಡೆದದ್ದು ೧೯೪೭ರಲ್ಲಿ. ಮಾವೋ ಚೀನಾದ ಚುಕ್ಕಾಣಿ ಹಿಡಿಯಲು ಶೀತಲ ಸಮರದ ಮೂಲಕ ಅಲ್ಲಿನ ರಾಷ್ಟ್ರೀಯ ಪಕ್ಷವನ್ನು ಸೋಲಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರೂವಾರಿಯಾದ. ಚೀನಾ ಕಮ್ಯುನಿಷ್ಟ್ ಮಾದರಿಯ ಆಡಳಿತವನ್ನು ಅಪ್ಪಿಕೊಂಡರೆ ಭಾರತ ಪ್ರಜಾತಂತ್ರ ರಾಷ್ಟ್ರವಾಗಿ ರೂಪುಗೊಂಡಿತು. ಈ ಎರಡು ರಾಷ್ಟ್ರಗಳು ಹೊಸ ವ್ಯವಸ್ಥೆಯೊಂದಿಗೆ, ಆಶಯದೊಂದಿಗೆ ಪ್ರಜಾ ಕಲ್ಯಾಣದ ಕಂಕಣವನ್ನು ಒಂದೆ ಕಾಲದಲ್ಲಿ ಹೊತ್ತಿದ್ದವು.

ಜಮ್ಮು ರಾಜರ ತೆಕ್ಕೆಯಲ್ಲಿದ್ದ ಲಡಾಖ್‌ನ್ನು ಭಾರತೀಯ ಸಿಖ್ ಪಡೆ ೧೮೩೪ರಲ್ಲಿ ವಶಪಡಿಸಿಕೊಂಡಿತು. ಆ ಬಳಿಕ ಟಿಬೆಟ್‌ನ ಮೇಲೆ ದಾಳಿ ನಡೆಸಿದ ಈ ಪಡೆ ಪಶ್ಚಿಮ ಟಿಬೆಟ್‌ನ್ನು ವಶ ಪಡಿಸಿಕೊಳ್ಳುವ ಪ್ರಯತ್ನ ನಡೆಸಿತು. ಆದರೆ ಚೀನಿಯರು ಈ ಪ್ರಯತ್ನವನ್ನು ಹಿಮ್ಟೆಟ್ಟಿಸಿದರು. ಆದರೆ ಲಡಾಖ್ ಪ್ರಾಂತ್ಯವನ್ನು ಉಳಿಸಿಕೊಳ್ಳುವಲ್ಲಿ ಸಿಖ್‌ರು ಯಶ ಪಡೆದರು. ಇದೇ ಸಂದರ್ಭದಲ್ಲಿ ಭಾರತದಲ್ಲಿ ಮೊದಲ ಆಂಗ್ಲೋ-ಸಿಖ್ ಯುದ್ಧ ಪ್ರಾರಂಭವಾಗಿದ್ದರೆ, ಅತ್ತ ಚೀನಾದಲ್ಲಿ ಮೊದಲ ಅಪಿಮ್ ಯುದ್ಧ ನಡೆಯುತ್ತಿತ್ತು. ಇಲ್ಲೂ ಸಾಮ್ಯತೆ! ಸದ್ಯ ನಾವು ನಮ್ಮೊಳಗೆ ಕಾದಾಡುವುದು ಬೇಡ ಎಂದು ಭಾವಿಸಿದ ಉಭಯ ದೇಶಗಳು ಪರಸ್ಪರ ಆಕ್ರಮಣ ಮಾಡಿಕೊಳ್ಳದ ಒಪ್ಪಂದಕ್ಕೆ ಸಹಿ ಹಾಕಿದವು.

ಮಾವೋ ಮುಂದಾಳತ್ವದ ಚೀನಾಕ್ಕೆ ಟಿಬೆಟ್ ಅದರ ಅವಿಭಾಜ್ಯ ಅಂಗ ಎಂಬ ಭಾವನೆ. ಭಾರತಕ್ಕೆ ಇದು ಒಪ್ಪತಕ್ಕ ಮಾತಲ್ಲ. ಆದರೂ ಉಭಯ ದೇಶಗಳಿಂದ ಶಾಂತಿ ಮಂತ್ರ ಪಠಣದ ಮುಂದುವರಿಕೆ. ಈ ಮಧ್ಯೆ ಭಾರತ ಆಕ್ರಮಣಕಾರಿ ಮನೋಭಾವ ತೋರುತ್ತಿರುವ ಸಂಶಯ ಚೀನಾಕ್ಕೆ.

ಅಭಿವೃದ್ಧಿಯ ಮಾನದಂಡಗಳ ಆಧಾರದಲ್ಲಿ ೧೫ ವರ್ಷಗಳಲ್ಲಿ ಬ್ರಿಟನ್‌ನನ್ನು ಹಿಂದಿಕ್ಕಬೇಕು ಎಂಬ ಮಾವೋನ ಮಹಾತ್ವಕಾಂಕ್ಷೆಯ ಈಡೇರಿಕೆಗಾಗಿ ೧೯೫೮ರಲ್ಲಿ ಚೀನಾ ಮುನ್ನಡೆಯ ಮಹಾ ಹೆಜ್ಜೆಯನ್ನು ಇಟ್ಟಿತು. ಶೀತಲ ಸಮರದ ಕಾಲದಲ್ಲಿ ಕಮ್ಯುನಿಷ್ಟ್ ರಾಷ್ಟ್ರಗಳ ನಾಯಕನಾಗಿದ್ದ ರಷ್ಯಾ ಮತ್ತು ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಚೀನಾದ ಮಧ್ಯೆ ೧೯೫೮-೫೯ರ ಮಧ್ಯೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಹಿವಾಟು ನಡೆಯುತ್ತದೆ. ಈ ವಹಿವಾಟಿನ ಹಣಕಾಸು ಪ್ರಮಾಣ ಮತ್ತು ಒಳಗೊಂಡಿದ್ದ ಶಸ್ತ್ರಾಸ್ತ್ರಗಳ ಬಗೆಗಿನ ಸಂಪೂರ್ಣ ಮಾಹಿತಿ ಇಂದಿಗೂ ಲಭ್ಯವಾಗಿಲ್ಲ. ಅದೇ ರೀತಿ ಈ ವಹಿವಾಟು ನಡೆಯುವ ಸಂದರ್ಭದಲ್ಲಿ ಮಾವೋನ ಲಕ್ಷ್ಯದಲ್ಲಿ ಭಾರತವಿತ್ತೇ ಅನ್ನುವುದು ಕೂಡ ನಿಗೂಢ ಸಂಗತಿ. ಏಕೆಂದರೆ ಆ ಸಂದರ್ಭದಲ್ಲಿ ಚೀನಾಕ್ಕೆ ಬೇರೆಯೇ ಶತ್ರುಗಳಿದ್ದರು. ಅದು ರಷ್ಯಾದ ಸ್ಥಾನಕ್ಕೆ ಕೊಕ್ ಕೊಡುವ ಒಳ ಉದ್ದೇಶದಿಂದ ಕಾರ್ಯತತ್ಪರವಾಗಿತ್ತು.
ಭಾರತ ೧೯೫೪ ಬಿಡುಗಡೆ ಮಾಡಿದ ನಕಾಶೆಯೊಂದರಲ್ಲಿ ಅಕ್ಷಯ್ ಚೀನಾವನ್ನು ತನ್ನ ಸೀಮೆಯ ಪರಿಧಿಯೊಳಗೆ ತಂದಿತ್ತು. ಹಾಗೆಯೆ ಚೀನಾದ ವಿಶ್ವಾಸರ್ಹತೆಯ ಬಗ್ಗೆ ನೆಹರುವಿಗೆ ಸಂಶಯವಿದೆ ಎಂಬ ಅಂಶ ಕೂಡ ಬಹಿರಂಗವಾಗಿತ್ತು. ಇದೆಲ್ಲವು ಚೀನಾದ ಕಣ್ಣು ಕೆಂಪಾಗಲು ಕಾರಣವಾಯಿತು. ಆದರೆ ೧೯೫೦ರ ದಶಕದಲ್ಲಿ ನಡೆದಿತ್ತು ಎಂಬ ಈ ಘಟನೆ ಈ ವಾದಕ್ಕೆ ತದ್ವಿರುದ್ಧವಾಗಿದೆ. ಆಗ ಭೂದಳದ ಜನರಲ್ ಆಗಿದ್ದ ಕಾರಿಯಪ್ಪ ಅವರು ಭಾರತ-ಚೀನಾದ ಗಡಿ ರೇಖೆಯ ಸುರಕ್ಷತೆಯ ಬಗ್ಗೆ ಅದರಲ್ಲಿಯೂ ಅರುಣಾಚಲ ಪ್ರದೇಶದಲ್ಲಿನ ಆತಂಕದ ಬಗ್ಗೆ ನೆಹರುರವರ ಗಮನಕ್ಕೆ ತಂದಿದ್ದರು. ಆಗ ನೆಹರು ನಮ್ಮ ಮೇಲೆ ಯಾರು ದಾಳಿ ಮಾಡಬಹುದು ಎಂದು ಪ್ರಧಾನಮಂತ್ರಿಗೆ ಹೇಳುವುದು ಜನರಲ್‌ನ ಕೆಲಸವಲ್ಲ. ವಾಸ್ತವವಾಗಿ ಚೀನಿಯರು ನಮ್ಮ ಈಶಾನ್ಯ ಗಡಿಯನ್ನು ಕಾಯುತ್ತಿದ್ದಾರೆ. ಕಾಶ್ಮೀರ ಮತ್ತು ಪಾಕಿಸ್ತಾನ ಮಾತ್ರ ನಿಮ್ಮ ಗಮನದಲ್ಲಿರಲಿ ಎಂದು ಹೇಳಿದ್ದರಂತೆ.

ಚೀನಾದ ವಿರುದ್ಧ ನಡೆಸಿದ ಟಿಬೆಟ್ ದಂಗೆ ವಿಫಲವಾದ ಬಳಿಕ ಟಿಬೆಟಿಯನ್ನರ ಧರ್ಮಗುರು ದಲಾಯಿ ಲಾಮಾ ತನ್ನ ಸಾವಿರಾರು ಅನುಯಾಯಿಗಳ ಜೊತೆ ಭಾರತದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟದ್ದು ಚೀನಾವನ್ನು ಕೆರಳಿಸಿತು. ಈ ಘಟನೆ ಉಭಯ ದೇಶಗಳ ಸಂಬಂಧವನ್ನು ಅಧಿಕೃತವಾಗಿ ದುರ್ಗಮ ಗೊಳಿಸಿತು. ಇದೇ ಸಂದರ್ಭದಲ್ಲಿ ಟಿಬೆಟ್ ಬಗ್ಗೆ ಭಾರತದ ನಿಲುವನ್ನು ರಷ್ಯಾ ಬೆಂಬಲಿಸುತ್ತದೆ. ಇದು ಮಾವೋನಲ್ಲಿ ತಳಮಳ ಹುಟ್ಟಿಸುತ್ತದೆ. ರಷ್ಯಾ, ಅಮೆರಿಕ ಮತ್ತು ಭಾರತ ಒಂದೇ, ಇವುಗಳು ಒಟ್ಟು ಸೇರಿ ಯಾವುದೇ ಕ್ಷಣದಲ್ಲಿ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯ ಚೀನಾಕ್ಕೆ ಶುರುವಾಗುತ್ತದೆ.
ಈ ಮಧ್ಯೆ ಅರುಣಾಚಲ ಪ್ರದೇಶವನ್ನು ತೆಗೆದುಕೊಳ್ಳಿ ಆದರೆ ಅಕ್ಷಯ್ ಚಿನ್‌ದ ತಂಟೆಗೆ ಬರಬೇಡಿ ಎಂಬ ಪ್ರಸ್ತಾಪವನ್ನು ಚೀನಾ ಭಾರತದ ಮುಂದಿಡುತ್ತದೆ. ಆದರೆ ಇದಕ್ಕೆ ಭಾರತ ತನ್ನ ಒಪ್ಪಿಗೆ ನೀಡುವುದಿಲ್ಲ.

ಸೈನ್ಯದ ಆಯಕಟ್ಟಿನ ಹುದ್ದೆಗಳಲ್ಲಿ ಆಗಿನ ರಕ್ಷಣಾ ಮಂತ್ರಿ ಕೃಷ್ಣ ಮೆನನ್ (ಈಗ ರಾಜಧಾನಿಯಲ್ಲಿರುವ ಸೇನಾ ಭವನಕ್ಕೆ ಹೋಗುವ ರಸ್ತೆಗೆ ಅವರದ್ದೆ ಹೆಸರಿದೆ!) ಅವರ ಪರಮಾಪ್ತರೇ ತುಂಬಿದ್ದರು. ಈ ಬಗ್ಗೆ ಜನರಲ್ ತಿಮ್ಮಯ್ಯ ತಮ್ಮ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದು ಆ ಬಳಿಕ ಜವಾಹರ್ ಲಾಲ್ ನೆಹರು ಮಧ್ಯಪ್ರವೇಶದಿಂದಾಗಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದದ್ದು ಇತಿಹಾಸ. ಇದು ಯುದ್ಧ ಆರಂಭದಲ್ಲೆ ಭಾರತೀಯ ಸೈನ್ಯದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ.

ಅರುಣಾಚಲ ಪ್ರದೇಶದ ಝಿಮ್ತಾಂಗ್ ಕಣಿವೆಯ ಥಾಗ್ಲಾ ಬೆಟ್ಟದ ಅಂಚಿನ ನಾಮ್ ಕಾ ಚು ನದಿ ದಂಡೆಯಲ್ಲಿ  ಭಾರತೀಯ ಸೈನಿಕರ ಮೇಲೆ ಚೀನಿಯರು ದಾಳಿ ನಡೆಸುವುದರೊಂದಿಗೆ ಇಂಡೋ-ಚೀನಾ ಯುದ್ಧ ಸ್ಪೋಟಗೊಳ್ಳುತ್ತದೆ.

ಪರಸ್ಪರ ಅಪನಂಬಿಕೆ, ಅಸಮಾಧಾನಗಳ ಲಾವಾರಸ ೧೯೬೨ರ ಅಕ್ಟೋಬರ್ ೧೯ರ ಕತ್ತಲಲ್ಲಿ ಜ್ವಾಲಾಮುಖಿಯಾಗಿ ಹಿಮ ಕಣಿವೆಯ ದಿವ್ಯ ಮೌನವನ್ನು ಬಂದೂಕು, ಫಿರಂಗಿಗಳ ಭೊರ್ಗರೆತ ನುಂಗಿ ಹಾಕುತ್ತದೆ. ಬಳಿಕದ ಸುಮಾರು ಒಂದು ತಿಂಗಳ ಕಾಲ ಉತ್ತುಂಗ ಹಿಮ ಶಿಖರಗಳ ಅಪಾದ ಮಸ್ತಕಕ್ಕೆ ಕೆಂಪು ರಕುತದ ನಿರಂತರ ಅಭಿಷೇಕ.

’ಅಭೇದ್ಯ ಹಿಮಾಲಯ’ ಎಂದು ಭಾವಿಸಿದ್ದ ಭಾರತೀಯ ಮನಸ್ಥಿತಿ ಅಂದು ಚೆಲ್ಲಾಪಿಲ್ಲಿಯಾಗಿ ಹೋಗಿತ್ತು. ಅನೇಕ ಸೈನಿಕರು ಅಪ್ರತಿಮ ಸಾಹಸ ಪ್ರದರ್ಶಿಸಿದರು ಕೂಡ ಅದು ವಿಜಯದ ಲೆಕ್ಕಕ್ಕೆ ಸಾಕಾಗಲೇ ಇಲ್ಲ. ಗಡಿ ರೇಖೆಗೆ ಎದೆ ಕೊಟ್ಟು ನಿಂತಿದ್ದ ಸೈನಿಕರನ್ನು ಹಿಂದೆ ಕರೆಸಿಕೊಳ್ಳಲಾಯಿತು. ಹಿಮ್ಮೆಟಲು ಒಪ್ಪದ ಸೈನಿಕರು ತಮ್ಮಲ್ಲಿ ಸೀಮಿತ ಪ್ರಮಾಣದಲ್ಲಿ ದಾಸ್ತಾನಿದ್ದ ಮದ್ದುಗುಂಡು ಖಾಲಿಯಾದ ಬಳಿಕ ಚೀನಿ ಸೈನಿಕರ ಜೊತೆ ಕೈ ಕೈ ಮಿಲಾಯಿಸಿ ಹುತಾತ್ಮರಾದ ಅನೇಕ ಪ್ರಸಂಗಗಳು ನಡೆದವು. ಸಿಪಾಯಿ ಕೇವಲ್ ಸಿಂಗ್, ಸಿಪಾಯ್ ಪ್ಯಾರಾ ಸಿಂಗ್, ಲೆಪ್ಟೆನೆಂಟ್ ಸುಭಾಶ್ ಚಂದೇರ್, ಮೇಜರ್ ಬಿ. ಕೆ. ಪಂತ್ ಮುಂತಾದ ವೀರ ಸೈನಿಕರು ತಮ್ಮ ಸಾಹಸಗಳಿಂದ ಅಜರಾಮರರಾದರು.

೧೯೬೨ರ ನವೆಂಬರ್ ೨೦ರಂದು ಚೀನಾ ಯುದ್ಧ ವಿರಾಮ ಘೋಷಿಸುವುದರೊಂದಿಗೆ ಈ ಯುದ್ಧ ಕೊನೆಗೊಳ್ಳುತ್ತದೆ. ಆದರೆ ಈ ಯುದ್ಧ ಕಲಿಸಿದ ಪಾಠವು ಅಲ್ಲಿಗೆ ಕೊನೆಯಾಗಿರುವುದು ಮುಂದೊಂದು ದಿನ ಮತ್ತೇ ಇಂತಹದ್ದೆ ಯುದ್ಧ ನಡೆದದ್ದೆ ಆದರೆ ಇತಿಹಾಸದ ಪುನರಾವರ್ತನೆಯಾಗಲಿರುವ ಮುನ್ಸೂಚನೆ.

ಭಾರತೀಯ ಮನಸ್ಸುಗಳು ತಮಗೆ ಪಾಕಿಸ್ತಾನವನ್ನು ಹೊರತಾಗಿ ಬೇರೆಯೂ ಬಲಿಷ್ಠ ಶತ್ರುಗಳಿದ್ದರೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿವೆ. ವಾಸ್ತವವಾಗಿ ಪಾಕಿಸ್ತಾನವು ಭಾರತಕ್ಕೆ ಶತ್ರು ರಾಷ್ಟ್ರವೇ ಅಲ್ಲ. ಇದಕ್ಕೆ ಪಾಕ್ ಜೊತೆ ನಡೆದ ನಾಲ್ಕು ಯುದ್ಧಗಳಲ್ಲಿ ಅದು ಮಣ್ಣು ಮುಕ್ಕಿದ ರೀತಿಯೇ ಸಾಕ್ಷಿ. ಆದರೆ ಪಾಕ್ ಏನು ಮಾಡಿದೆ, ಮಾಡುತ್ತಿದೆ, ಅದನ್ನು ಹೇಗೆ ಹಣಿಯುವುದು ಎಂಬುದಷ್ಟೆ ನಮ್ಮ ಚಿಂತೆ. ನಮ್ಮ ರಾಜಕೀಯ ಮುತ್ಸದಿಗಳಿಗೂ ಕೂಡ ಪಾಕ್ ವಿರುದ್ಧದ ದ್ವೇಷ ಕಾರಿ ಮತ ಕೊಯ್ಲು ಮಾಡುವ ವಿದ್ಯೆ ಚೆನ್ನಾಗಿ ಕರಗತವಾಗಿದೆ.

ಚೀನಾವನ್ನು ಭಾರತದ ಶತ್ರು ರಾಷ್ಟ್ರವೆಂದು ಒಪ್ಪುವುದು, ಬಿಡುವುದು ವ್ಯಕ್ತಿಯೊಬ್ಬನ ವಿವೇಚನೆಗೆ ಬಿಟ್ಟಿರುವುದು. ಆದರೆ ಇಂದು ಭಾರತಕ್ಕೆ ಮಿಲಿಟರಿ ಆತಂಕವಿರುವುದೇ ಆಗಿದ್ದರೆ ಅದು ಚೀನಾದಿಂದ ಮಾತ್ರ.

ಚೀನಾ ಎಲ್ಲ ರಂಗದಲ್ಲಿಯೂ ಭಾರತವನ್ನು ಹಿಂದಿಕ್ಕಿ ಸಾಗಿದೆ, ಸಾಗುತ್ತಿದೆ. ಭಾರತಕ್ಕಿಂತ ಮೂರು ಪಟ್ಟು ದೊಡ್ಡದಿರುವ ಚೀನಾದಲ್ಲಿ ನಮಗಿಂತ ೩ ಪಟ್ಟು ಕಡಿಮೆ ಜನಸಾಂದ್ರತೆ ಇದೆ. ನಮ್ಮಲ್ಲಿ ತಲಾ ಜಿಡಿಪಿ ೧,೩೮೯ ಅಮೆರಿಕನ್ ಡಾಲರ್ ಇದ್ದರೆ, ಚೀನಾದ್ದು ೫೫,೪೧೩ ಅಮೆರಿಕನ್ ಡಾಲರ್ ಇದೆ. ನಮ್ಮ ವಿದೇಶಿ ವಿನಿಮಯ ಮೀಸಲು ೨೯ ಮಿಲಿಯನ್ ಅಮೆರಿಕನ್ ಡಾಲರ್ ಇದ್ದರೆ ಚೀನಾದ್ದು ೩೧ ಕೋಟಿ ಅಮೆರಿಕನ್ ಡಾಲರ್ ಇದೆ. ನಾವು ನಮ್ಮ ರಕ್ಷಣೆಗಾಗಿ ೪೬.೮ ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಿದರೆ ಚೀನಾ ೧.೪ ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಖರ್ಚು ಮಾಡುತ್ತದೆ. ನಮ್ಮಲ್ಲಿ ೧೫ ಲಕ್ಷದಷ್ಟು ಸೈನಿಕರಿದ್ದರೆ ಚೀನಾದ ಬಳಿ ಒಂದು ಕೋಟಿ ಸೈನಿಕರಿದ್ದಾರೆ. ಒಂದು ವೇಳೆ ಭಾರತವನ್ನು ಪಾಕಿಸ್ತಾನದ ಜೊತೆ ಹೋಲಿಸಿದ್ದೇ ಆದರೆ ಮೇಲಿನ ಹೋಲಿಕೆಯಲ್ಲಿ ಚೀನಾ ಪಡೆದಿರುವ ಸ್ಥಾನವನ್ನು ಭಾರತ ಹೊಂದಿದೆ. ಪಾಕಿಸ್ತಾನ ಭಾರತದ ಸ್ಥಾನವನ್ನು ಪಡೆದಿದೆ. ಅಂದರೆ ಭಾರತಕ್ಕೆ ಪಾಕ್ ಹೇಗೆಯೋ ಹಾಗೆಯೇ ಚೀನಾಕ್ಕೆ ಭಾರತ!

ಅಭಿವೃದ್ಧಿ ಅಂಕಿಅಂಶಗಳ ವ್ಯಾಖ್ಯಾನದಲ್ಲಿ ಭಾರತ ಸೋತಿರುವುದು ನಿಜ. ಹಾಗೆಂದು ಚೀನಾ ಎಂದರೆ ಸ್ವರ್ಗ ಎಂದು ಭಾವಿಸಬೇಕಿಲ್ಲ. ಭಾರತ ಮಾನವ ಹಕ್ಕುಗಳಿಗೆ ಮಾರ್ಯಾದೆ ಕೊಟ್ಟು ಬೆಳೆಯುತ್ತಿದ್ದರೆ, ಚೀನಾ ಮಾನವಿಯತೆಯ ಸಮಾಧಿಯ ಮೇಲೆ ಅಭಿವೃದ್ಧಿಯ ಲಾಂಗ್ ಮಾರ್ಚ್ ಮಾಡುತ್ತಿದೆ, ತನ್ನ ಕೆಂಬಾವುಟವನ್ನು ಪಟಪಟಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ತುಣುಕು ಸಿಗದ, ೪೫ ಮಿಲಿಯನ್ ಜನರ ಹೆಣದ ಮೇಲೆ ಇಟ್ಟ ಮಹಾ ಹೆಜ್ಜೆಯಿಂದ, ಹಸಿವಿನಿಂದ ದೇಶದ ಅರ್ಧ ಜನರು ಸತ್ತರೆ, ಉಳಿದರ್ಧ ಜನರ ಹೊಟ್ಟೆ ತುಂಬಬಹುದು ಎಂಬ ಮಾವೋ ಪ್ರಣೀತ ಚಿಂತನೆಯಿಂದ ಕಟ್ಟಿದ ಮಹಾನ್ ಚೀನಾಕ್ಕಿಂತ ಮೇರಾ ಭಾರತ ಅದೇಷ್ಟೋ ವಾಸಿ.

ಚೀನಾದ ಮಧ್ಯೆ ಸ್ನೇಹ ಸಂಬಂಧವನ್ನು ಶಾಶ್ವತವಾಗಿಡಲು ಹೆಚ್ಚಿನ ಸಾಧ್ಯತೆಗಳನ್ನು ಹುಡುಕಬೇಕು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ನಿಜ. ಆದರೆ ಆಧುನಿಕ ಚೀನಾ ನಂಬಿಕೆಗೆ ಅದೇಷ್ಟು ಅರ್ಹ ಎಂಬುದೇ ಈಗಿನ ಪ್ರಶ್ನೆ. ಏಕೆಂದರೆ ೧೯೫೦ರ ದಶಕದಲ್ಲಿ ಚೀನಾವು ಭಾರತದ ಜೊತೆ ಯಾವುದೆ ಗಡಿ ತಕರಾರಿಲ್ಲ ಎದು ಪದೇ ಪದೇ ಹೇಳುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆಗಳ ಬಗ್ಗೆ ಜಾಗೃತೆ ವಹಿಸುವಂತೆ ಬರ್ಮಾದ ಆಗಿನ ಆಧ್ಯಕ್ಷರಾಗಿದ್ದ ಬಾ ಸ್ವೇ ನೆಹರುರಲ್ಲಿ ಹೇಳಿದ್ದರು ಎಂಬ ಗುಟ್ಟು ಇದೀಗ ಬಹಿರಂಗವಾಗಿದೆ. ಅದ್ದರಿಂದ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ ಎಂಬ ರೀತಿಯಲ್ಲಿಯೇ ಭಾರತ ಮತ್ತು ಚೀನಾದ ಸಂಬಂಧ ಆರಳಬೇಕಿದೆ.

ಇಂಡೋ-ಚೀನಾ ಯುದ್ಧ ಸಂಭವಿಸಿ ೫೦ ವರ್ಷಗಳು ಉರುಳಿದರು ಕೂಡ ಭಾರತ ಅದರಿಂದ ಕಲಿತ ಪಾಠವೇನು? ಇಂದಿಗೂ ದೇಶದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡಯುತ್ತಿರುವುದು ಸೇನೆಯಲ್ಲೇ ಎಂಬ ಮಾತು ಚಾಲ್ತಿಯಲ್ಲಿದೆ, ಈಗಾಲೇ ಅನೇಕ ಆರೋಪಗಳ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ದೇಶದ ಗಡಿಯಂಚಿನಲ್ಲಿರುವ ಸೈನಿಕನಲ್ಲಿ ಆಧುನಿಕ ಯುದ್ಧೋಪಕರಣವೇ ಇಲ್ಲ ಎಂಬ ಸಾಕಷ್ಟು ವರದಿಗಳಿವೆ. ಪ್ರತಿ ಬಜೆಟ್‌ನಲ್ಲಿಯೂ ಸೈನ್ಯದ ಆಧುನೀಕರಣಕ್ಕೆ ಎಂದು ನೀಡುವ ಹಣ ಎತ್ತ ಹೋಗುತ್ತಿದ್ದೆ, ಎಷ್ಟು ಆಧುನಿಕರಣ ಗೊಂಡಿದೆ ಎಂಬ ಸುಳಿವು ಕೂಡ ಸಿಗುತ್ತಿಲ್ಲ. ಮೇಲಾಧಿಕಾರಿಗಳ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ, ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸುತ್ತಿರುವ, ಸೈನಿಕರು ದಂಗೆ ಏಳುತ್ತಿರುವ ಸಾಕಷ್ಟು ನಿದರ್ಶನಗಳು ಕಾಣುತ್ತಿದ್ದೇವೆ.

ಅತ್ತ ಚೀನಾ ತನ್ನ ಗಡಿ ಪ್ರದೇಶಗಳಿಗೆ ರಸ್ತೆ, ರೈಲು ಸಂಪರ್ಕವನ್ನು ಲೀಲಾಜಾಲವಾಗಿ ನಿರ್ಮಿಸಿ, ಗಡಿಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದರೆ, ಭಾರತ ಮಾತ್ರ ತಾನು ಅಂತಹ ಕ್ರಮ ಕೈಗೊಂಡರೆ ಚೀನಾ ಏನು ಹೇಳಬಹುದು ಎಂಬ ಆತಂಕದಲ್ಲಿಯೇ ದಿನ ದೂಡುತ್ತಿದೆ.

೧೯೬೨ರ ಯುದ್ಧದ ಬಗ್ಗೆ ಸಿದ್ಧಪಡಿಸಲಾದ ಇಂದಿಗೂ ಅತ್ಯಂತ ರಹಸ್ಯವಾಗಿರುವ ಹೆಂಡರ್ಸನ್ ಬ್ರೂಕ್ಸ್-ಭಗತ್ ವರದಿಯಲ್ಲಿ ಭಾರತ ಈ ಯುದ್ಧದಲ್ಲಿ ಸೊಲೊಪ್ಪಲು ಶಸ್ತ್ರಾಸ್ತ್ರಗಳ ಕೊರತೆ ಪ್ರಮುಖ ಕಾರಣವಲ್ಲ ಬದಲಾಗಿ ಕೆಟ್ಟ ನಾಯಕತ್ವವೇ ಕಾರಣ ಎಂದು ಹೇಳಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಇರಬಹುದು, ಅಂದು ಒಬ್ಬರು ಕೃಷ್ಣ ಮೆನನ್ ಇದ್ದರು. ಅವರು ಆಗ ದೇಶದ ರಕ್ಷಣಾ ಸಚಿವರಾಗಿದ್ದರು. ದೇಶದ ಸೈನ್ಯದ ಪ್ರಧಾನ ಕಚೇರಿ ಸೇನಾ ಭವನಕ್ಕೆ ಹೋಗುವ ರಸ್ತೆಗೆ ಅವರ ಹೆಸರನ್ನಿಟ್ಟು ೧೯೬೨ರಲ್ಲಿ ದೇಶವನ್ನು ಸೋಲಿಸಿದಕ್ಕಾಗಿ ಅವರಿಗೆ ಗೌರವ ಸಲ್ಲಿಸಲಾಗಿದೆ! ಆದರೆ ಇಂದು ಎಲ್ಲೆಲ್ಲೂ ಅಂತಹವರೇ ತುಂಬಿ ತುಳುಕುತ್ತಿದ್ದಾರೆ. ಹಾಗಿರುವಾಗ ಮತ್ತೆ ಚೀನಾ ನಮ್ಮ ಮೇಲೆ ದಂಡೆತ್ತಿ ಬಂದದ್ದೆ ಆದರೆ...

ಬಹುಶಃ ಇತಿಹಾಸದಿಂದ ಮತ್ತು ತನ್ನ ತಪ್ಪುಗಳಿಂದ ಪಾಠ ಕಲಿಯದಿರುವುದಕ್ಕಿಂತ ನಾಚಿಕೆಗೇಡು ಬೇರೆನು ಇರಲಾರದು.