Tuesday, June 6, 2017

ಕ್ಷಣ ಕ್ಷಣ, ಪ್ರತಿ ಕ್ಷಣ, ಮರು ಕ್ಷಣ, ಒಂದು ಕ್ಷಣ, ಈ ಕ್ಷಣವೇ ಓದಿ ಬಿಡಿ

 ಒಂದು ಕ್ಷಣ…

ಕ್ಷಣ ಕ್ಷಣ ನೆನಪಾಗುತ್ತಿದ್ದ ಕ್ಷಣಗಳೆಲ್ಲ ನಿಧಾನವಾಗಿ ಮರೆಯಾಗುತಿದೆಯಲ್ಲ ಎಂಬ ಯೋಚನೆ ನುಸುಳಿತ್ತು. ಹೌದಲ್ಲ, ಎಂದು ಅನಿಸಿಯೂ ಬಿಟ್ಟಿತ್ತು. ಆದರೂ ಮರೆಯಲೇ ಬಾರದ ಸಂಗತಿಗಳೆಲ್ಲ ಇನ್ನೂ ನೆನಪಿದೆಯೇ ಎಂದು ಒಮ್ಮೆ ಪರೀಕ್ಷಿಸಿಕೊಂಡೆ. ಎಂದಿಗೂ ಮರೆಯಲಾರೆ ಎಂದು ಕೊಂಡಿದ್ದರಲ್ಲಿ ಕೆಲವು ಆ ಒಂದು ಕ್ಷಣ ನೆನಪಾಗಲೇ ಇಲ್ಲ. ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ ಎಂದೇ ನೆನಪಿನಲ್ಲಿ ಇರದ ಕೆಲವು ನೆನಪಾಗಿ ಬಿಟ್ಟವು…

ಮರು ಕ್ಷಣ...

ಟೆರೇಸ್ ನ ಮೇಲೆ ನಿಂತುಕೊಂಡಿದ್ದ ನಾನು ಮೇಲಿನ ಆಕಾಶವನ್ನೊಮ್ಮೆ ನೋಡಿದೆ. ಬೂದಿ ಎರಚಿದಂತಿತ್ತು ಆಕಾಶ. ನೀಲಿ, ಹಸಿರು, ತಿಳಿ ಹಳದಿಗಳೇ ಸ್ಥಾಯಿ ಭಾವವಾಗಿದ್ದ ನನ್ನಂತಹ ಮಲೆನಾಡ, ಕಡಲ ನಾಡ ಹುಡುಗರಿಗೆ ಈ ಆಕಾಶ ಒಗ್ಗುವುದಿಲ್ಲ. ತಲೆ ಎತ್ತಿ ನೋಡಿದರೆ ನಮಗೆ ನಮ್ಮದಲ್ಲದ ಆಕಾಶ ಕಾಣುತ್ತದೆ, ನಾವು ಪೇಟೆ ಸೇರಿದ ಮೇಲೆ ತಲೆ ತಗ್ಗಿಸಿದರೆ ಮಾತ್ರ ಅವಕಾಶ ಕಾಣಬಹುದೇನೋ? ನೀನು ನೀನಾಗಿರ ಬೇಡ, ಬಣ್ಣ ಬದಲಾಯಿಸಿಕೋ ಎಂದು ನನಗೆ ಅದು ನೀತಿ ಪಾಠ ಮಾಡುತ್ತಿದೆಯೇ ಅಂದು ಕೊಂಡೆ. ನೋಡು ನಾನು ಆಕಾಶ. ಜಗಕ್ಕೆಲ್ಲ ಒಂದೇ ಆಕಾಶ. ಆದರೂ ನಾನು ನಿಮ್ಮ ಹಳ್ಳಿಯಲ್ಲಿ ನೀಲಿ, ನಿನ್ನ ನಗರದಲ್ಲಿ ಬೂದು. ಊರಿಗೆ ತಕ್ಕ ಕೋಲ ನನ್ನದು ಎಂದು ನನಗೆ ಹೇಳುತ್ತಿದೆಯೇ ಆಕಾಶ?

ಈ ಕ್ಷಣ...

ಒಂದು ದಾರಿಯನ್ನು ಆಯ್ದು ಕೊಂಡು ನಡೆಯಲು ಶುರು ಮಾಡಿದ್ದೇವೆ. ಈ ದಾರಿಗಳು ಯಾವುವು? ನನ್ನ ಒಟ್ಟಿಗೆ ಅಂಗನವಾಡಿಯಲ್ಲಿ ಇದ್ದವರು ಈಗೆಲ್ಲಿದ್ದಾರೆ? ನಾಲ್ಕನೇ ಕ್ಲಾಸ್ ಲ್ಲಿ ಒಟ್ಟಿಗೆ ಓದಿದವರು? ಏಳನೇ ಕ್ಲಾಸ್ ಲ್ಲಿ ಇದ್ದವರು? ಹತ್ತನೇ ಕ್ಲಾಸ್ ನಲ್ಲಿ ಇದ್ದವರು? ಒಟ್ಟಿಗೆ ಪಿಯುಸಿ ಮೆಟ್ಟಿಲು ಹತ್ತಿದವರು? ಡಿಗ್ರಿ ಮುಗಿಸಿದವರು, ಪಿಜಿ ಮುಗಿಸಿದವರು? ಅದೇಷ್ಟೋ ಜನ ಎಲ್ಲಿದ್ದಾರೆ ಎಂದೇ ನನಗೆ ಗೊತ್ತಿಲ್ಲ. ಒಬ್ಬರ ಜೊತೆ ಒಂದು ವರ್ಷ ಓದಿದ್ದೇನೆ ಅಂದರೂ ಅವರೊಂದಿಗೆ 200 ದಿನಗಳಷ್ಟು ಕಾಲ ಒಂದೇ ಕೋಣೆಯಲ್ಲಿ ಇದ್ದೇ ಇರುತ್ತೇವೆ. ಆದರೆ ಈಗ ಎಲ್ಲಿ ಅವರು? ಎಷ್ಟೋ ಜನಗಳ ನೆನಪೇ ಇಲ್ಲ, ಮರೆತು ಬಿಟ್ಟೆ ನಾ ಅವರನ್ನು. ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನನಗೆ ಏಕೆ ಸಾಧ್ಯವಾಗಿಲ್ಲ? ಅಲ್ಲಾ, ಶಾಲೆ ಕಾಲೇಜು ಓದಲು ಬೇರೆ ಬೇರೆ ಕಾರಣಗಳನ್ನು ಇಟ್ಟುಕೊಂಡು ಬಂದಿರುತ್ತೇವೆ. ಅಕ್ಷರ ಕಲಿಯುವ ನಾವು ನಂತರ ಬದುಕನ್ನು ಕಲಿತ ಅಕ್ಷರಗಳ ಆಸರೆ ಪಡೆದು ರೂಪಿಸಿಕೊಳ್ಳುತ್ತೇವೆ. ಅದರ ಮಧ್ಯೆ ಸ್ನೇಹ, ಪ್ರೇಮ, ಜಗಳ, ಕೋಪ, ಭಾವ ರಾಹಿತ್ಯ ಇನ್ನು ಏನೇನೊ ಮಣ್ಣು ಮಸಿ. ಒಂದು ಹಂತದ ಶಿಕ್ಷಣ ಮುಗಿದ ಮೇಲೆ ಒಂದಿಷ್ಟು ಜನ ಅವರೇ ಆಯ್ದು ಕೊಂಡ, ಇನ್ನೊಂದಷ್ಟು ಜನ ಇನ್ಯಾರೋ ತೋರಿಸಿದ ದಾರಿಯಲ್ಲಿ ಎಲ್ಲೆಲ್ಲೋ ಸೇರಿಕೊಂಡು ಬಿಡುತ್ತಾರೆ. ಇವರಲ್ಲಿ ಯಾರು ನೆಮ್ಮದಿ ಯಿಂದ ಇದ್ದಾರೆ? ನೆಮ್ಮದಿ ಎಂಬುದು ತೀರಾ ವೈಯಕ್ತಿಕ. ಕೇಳಲು ಹೋದರೆ ಎಲ್ಲರೂ ಚೆನ್ನಾಗಿ ಇದ್ದೇವೆ ಎಂದೇ ಹೇಳುತ್ತಾರೆ, ಕೆದಕಲು ಹೋದರೆ ಎಲ್ಲವು ಬಯಲಾಗುತ್ತದೆ. ಸಾಕು ಸಾಕಾಗಿದೆ ನನಗೆ. ಬೇಡದ ಉಸಾಬರಿ. ಅವರು ಹೇಗಿದ್ದಾರೋ ಹಾಗೆಯೇ ಇರಲಿ, ನನಗೆ ಅದರ ಸಹವಾಸವೇ ಬೇಡ. ಆದರೂ ಎಲ್ಲರೂ ಚೆನ್ನಾಗಿರಲಿ; ಇಲ್ಲ ಹಾಗೆ ಆಗೊಲ್ಲ, ಜೀವನ ಹಾಗೇ ಇರುವುದಿಲ್ಲ. ಒಂದು ಹೊತ್ತಿನಲ್ಲಿ ಸರಿಯಾಗಿದೆ ಎಂದು ಅನಿಸಿದ್ದು ಮತ್ತೊಂದು ಹೊತ್ತಿಗೆ ತೀರಾ ತಪ್ಪು ಅನಿಸಿದ್ದ ನಿದರ್ಶನ ಅದೇಷ್ಟು ಇದೆ. ಎಲ್ಲವೂ ಸಮಯದ ವಲಯ! 

ನಮ್ಮೊಂದಿಗೆ ಇದ್ದವರು ಅದೇಷ್ಟು ದೂರ ಸರಿದು ಬಿಡುತ್ತಾರೆ. ಒಂದಿಷ್ಟು ಸುಳಿವು ನೀಡದೆ. ಕೆಲವರು ನಿಧಾನವಾಗಿ, ಇನ್ನು ಕೆಲವರು ಕ್ಷಿಪ್ರವಾಗಿ.    

ಪ್ರತಿ ಕ್ಷಣ...

ಸಾಗಿದ ದಾರಿಯಲ್ಲಿ ಕಂಡ, ಕಾಣುವ ಮುಖಗಳು, ಘಟನೆಗಳು, ಸಂದರ್ಭಗಳು. ಇದು ಎಲ್ಲೋ ಹಿಂದಿನದ್ದಕ್ಕೋ, ಮುಂದಿನದಕ್ಕೋ ಕೊಂಡಿಯಂತೆ ಭಾಸವಾಗಿ ಬಿಡುತ್ತದೆ. ಆದೇ ಚೆನ್ನಾಗಿತ್ತು. ಅಲ್ಲಿಯೇ ಚಂದವಾಗಿತ್ತು. ಹಾಗೇ, ಹೀಗೆ ಇತ್ತು. ಮುದವಿತ್ತು, ಮುಗ್ದತೆಯಿತ್ತು. ಈಗಲೂ ಹಾಗೆಯೇ ಇರಬಹುದಾ? ಇದ್ದರೆ ಒಳ್ಳೆಯದಿತ್ತು. ಇಲ್ಲಿ ಹೀಗೆ ಒದ್ದಾಡುವುದಕ್ಕಿಂತ ಅಲ್ಲಿ ಹಾಗೆ ಹಾರಾಡುವುದು ಒಳ್ಳೆಯದಲ್ಲವೇ? ಹುಂ, ನಿಜ. ಆದರೆ ಅಲ್ಲಿ ಹಾಗೆ ಇಲ್ಲ. ಇಲ್ಲಿ ನಿಂತು ಅಲ್ಲಿಯ ಬಗ್ಗೆ ರಮ್ಯ ಕಲ್ಪನೆ ಇಟ್ಟುಕೊಳ್ಳಬಹುದು. ಆದರೆ ಹಾಗೆ ಇಲ್ಲ ಸ್ಥಿತಿ, ಪರಿಸ್ಥಿತಿ. ಅಲ್ಲಿ ಹೋಗಿ ಕಾದಾಡಲು ಬೇಕಾದ ಶಸ್ತ್ರಾಸ್ತ್ರಗಳು ನನ್ನಲ್ಲಿ ಇಲ್ಲ, ಅಲ್ಲಿನ ಯುದ್ಧ ತಂತ್ರಗಳು ನನಗೆ ಗೊತ್ತಿಲ್ಲ. ಆದರೆ ಇಲ್ಲಿ ನಾನು ಹೋರಾಡಬಲ್ಲೆ, ಇಲ್ಲಿ ಬದುಕದಿದ್ದರೂ ಸಾಯಲಾರೆ. ಆಯ್ಯೋ ಈಗಲೇ ಹೋಗಿ ಕಲಿತುಕೋ ಯುದ್ಧ ತಂತ್ರ, ಮುಂದೆ ನಿನಗೆ ಕಲಿಸುವವರೇ ಇರಲಾರರು. ನೀನು ಒಬ್ಬಂಟಿ ಆಗುತ್ತಿ. ಕಾಲದ ಹರಿವು ಈಗ ಬರಿ ಹರಿವಾಗಿ ಉಳಿದಿಲ್ಲ… ಅದು ಪ್ರವಾಹವಾಗಿ ಬಿಟ್ಟಿದೆ.
  
ಕ್ಷಣ ಕ್ಷಣ...

ನಾ ಅಲ್ಲಿ ಇರಲಾರೆ, ಇಲ್ಲಿ ಬದುಕಲಾರೆ. ನಾ ಅಲ್ಲಿಗೆ ಹೋಗಲಾರೆ, ಇಲ್ಲಿಗೆ ಸೇರಲಾರೆ. ನಾ ಅಲ್ಲಿ ಈಜಲಾರೆ, ಇಲ್ಲಿ ಹಾರಲಾರೆ. ನಾ ಅಲ್ಲಿ ಬೆಳೆಯಲಾರೆ, ಇಲ್ಲಿ ಮಣ್ಣಾಗಲಾರೆ. ನಾ ಅಲ್ಲಿ ಮಿನುಗಲಾರೆ, ಇಲ್ಲಿ ಬೆಳಕಾಗಲಾರೆ. ನಾ ಅಲ್ಲಿ ಬೇಲಿಯಾಗಲಾರೆ, ಇಲ್ಲಿ ಹೊಲವೂ ಆಗಲಾರೆ…

ನೋಡಿದರೆ ಕೋಟಿ ಕೋಟಿ ತಾರೆಗಳು. ಹತ್ತಿರದ ಸೂರ್ಯ ಬೆಳಕಿನ ಮೊತ್ತ, ಶಾಖದ ಮೂಟೆ. ಎಲ್ಲರಿಗೂ ಸೂರ್ಯನಾಗುವ ಧಾವಂತ. ಸೂರ್ಯನೊಬ್ಬನೇ ಇದ್ದರೆ ಚೆನ್ನ. ಹತ್ತಾರು ಸೂರ್ಯರಿದ್ದರೆ ಬದುಕು ಉಂಟೇ? ಜೀವ, ಜೀವನ ಉಂಟೆ? ಆದರೂ ‘ಅವರು’ ಸೂರ್ಯನನ್ನು ತೋರಿಸುವುದು ಬಿಟ್ಟಿಲ್ಲ, ನಾನು ಸೂರ್ಯನಾಗುವ ಆಸೆ ಬಿಟ್ಟಿಲ್ಲ!


Friday, February 20, 2015

ದೂರದರ್ಶನ... ರಾಜಕಾರಣ... ಕ್ರಿಕೆಟ್ಟು... ದಿಕ್ಕೆಟ್ಟು

ಒಡಿಸ್ಸಾದ ಆದಿವಾಸಿಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಬಂದಂತೆ ಗ್ರಾಮ ಭಾರತದ ಕ್ರಿಕೆಟ್ ವೀಕ್ಷಕರ ರಕ್ಷಣೆಗೆ ಸುಪ್ರೀಂ ಕೋರ್ಟ್ ಬಂದಿದೆ... ಮತ್ತೆ ಇತಿಹಾಸ ಮರುಕಳಿಸಿದೆ...!

ಭಾರತ ಹಳ್ಳಿಗಳ ದೇಶದಿಂದ ಕಾರ್ಪೋರೇಟ್ ಗಳ  ದೇಶವಾಗುವತ್ತ ವೇಗವಾಗಿ, ಸುಗಮವಾಗಿ ಸಾಗುತ್ತಿದೆ. ಇದಕ್ಕೆ ರಾಜಕಾರಣಿಗಳೇ ಪೌರೋಹಿತ್ಯ ವಹಿಸಿಕೊಂಡಿದ್ದಾರೆ ಎಂಬುದಕ್ಕೊಂದು ನಿದರ್ಶನ ಇಲ್ಲಿದೆ.

ಇಂದು ಕ್ರಿಕೆಟ್ ನೂರಾರು ಕೋಟಿ ರೂಗಳ ವಹಿವಾಟಿನ ಆಟ. ಭಾರತದಲ್ಲಂತೂ ಅದೇ ಒಂದು ಧರ್ಮವಂತೆ, ಕ್ರಿಕೆಟ್ ಅಟಗಾರನೇ ದೇವರಂತೆ. ನಿಜ ಧರ್ಮ, ದೇವರನ್ನೇ ಬಂಡವಾಳವಾಗಿಸಿ ಹಣ ಮಾಡುವುದೇ ಈಗಿನ ದಿನಮಾನದ ಮಹಿಮೆ. ಧರ್ಮ ಮತ್ತು ದೇವರೇ ಆಟ, ಕೂಟದ ವಸ್ತುವಾಗಿರುವಾಗ ಆಟವೇ ಧರ್ಮವಾಗುವ, ಆಟಗಾರನೇ ದೇವರಾಗುವ ವಿದ್ಯಮಾನಗಳು ಕಾರ್ಪೋರೇಟ್ ಕೃಪಾಪೋಷಿತ ಉತ್ಪನ್ನ ಮತ್ತು ಉಪ ಉತ್ಪನ್ನ.
 
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ೧೯೦೦ರ ಅಸುಪಾಸಿನಲ್ಲಿ ಬ್ರಿಟೀಷರು ಮತ್ತು ರಾಜ ಮಹಾರಾಜರು ದೇಶದಲ್ಲಿ ಕ್ರಿಕೆಟ್ಟು ಸಸಿಯನ್ನು ನೆಟ್ಟು ನೀರೆರುದು ಪೋಷಿಸಿದ್ದರು. ೧೯೮೩ರಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು, ದೇಶಕ್ಕೆ ಕ್ರಿಕೆಟ್ ಹುಚ್ಚು ಹಿಡಿಯಿತು. ಮತ್ತೆ ೨೦೦೦ದ ಹೊತ್ತಿಗೆ ಆಧುನಿಕ ಬ್ರಿಟೀಷರು, ವಸಾಹತುಶಾಹಿಗಳ ರೂಪ ತಾಳಿ ಬಂಡವಾಳಶಾಹಿಗಳಾಗಿ ಕ್ರಿಕೆಟ್ ಫಲ ತಿನ್ನಲು ಪ್ರಾರಂಭಿಸಿದ್ದರು. ದೇಶದ ಪ್ರಜಾಪ್ರಭುತ್ವದ ದೊರೆಗಳೇ ಗೂಟ ರಕ್ಷಕರಾದರು.


ದೇಶವ್ಯಾಪಿ ಕ್ರಿಕೆಟ್ ಪ್ರೀತಿ ಬೆಳೆಯಲು ಆಕಾಶವಾಣಿ ಮತ್ತು ದೂರದರ್ಶನ ವಹಿಸಿದ್ದ ಪಾತ್ರ ಅನನ್ಯ. ಈ ಶೃವ್ಯ ಮತ್ತು ದೃಶ್ಯ ಮಾಧ್ಯಮ ಇರದಿದ್ದರೆ ಕ್ರಿಕೆಟ್ ಇಂದು ಚಿನ್ನದ ಮೊಟ್ಟೆ ಇಡುವ ’ಡಕ್’ ಆಗುತ್ತಿರಲಿಲ್ಲ.

ದೇಶದ ಲಕ್ಷಾಂತರ ಹಳ್ಳಿಗಳಿಗೆ ಕ್ರಿಕೆಟ್ ತಲುಪಿಸಿದ ಹೆಗ್ಗಳಿಕೆ ದೂರದರ್ಶನದ್ದು. ದೂರದರ್ಶನದಲ್ಲಿ ಕ್ರಿಕೆಟ್ ಪ್ರಸಾರ ಇರದಿದ್ದರೆ ಇವತ್ತು ಕ್ರಿಕೆಟ್ ಪ್ರಸಾರಕ್ಕಾಗಿ ಸ್ಟಾರ್, ಇಎಸ್ಪಿಎನ್, ಟೆನ್ ಸ್ಪೋರ್ಟ್ಸ್, ಸೋನಿ ಮುಂತಾದ ವಾಹಿನಿಗಳು ಪೈಪೋಟಿ ನಡೆಸುವ ಪ್ರಸಂಗವೇ ಬರುತ್ತಿರಲಿಲ್ಲ. ಆದರೆ ಇಂದು ಕ್ರಿಕೆಟ್ ಗೆ ದೂರದರ್ಶನವೇ ಪರಿತ್ಯಕ್ತ. ಕ್ರಿಕೆಟ್ ಶಿಶುವನ್ನು ಪೋಷಿಸಿ ಬೆಳೆಸಿದ್ದ ದೂರದರ್ಶನಕ್ಕೆ ಇಂದು ತುಂಬು ಜವ್ವನದ ಕ್ರಿಕೆಟ್ ನ  ಆಶ್ರಯವಿಲ್ಲ. ಕ್ರಿಕೆಟ್ ಗೆ, ದೂರದರ್ಶನ ಈ ಕಾಲದ ತಂದೆ ತಾಯಿಗಳಂತೆ!

೧೯೯೦ರ ದಶಕದಲ್ಲಿ, ಈ ಶತಮಾನದ ಮೊದಲ ದಶಕದ ಆರಂಭದ ವರ್ಷಗಳಲ್ಲಿ ಅಥವಾ ಡಿಟಿಎಚ್ ಯುಗ ಆರಂಭವಾಗುವ ಮೊದಲು ದೂರದರ್ಶನವೇ ಕ್ರಿಕೆಟ್ ರಸದೌತಣ ನೀಡುತ್ತಿದ್ದದ್ದು. ಊರಲ್ಲಿ ಟಿವಿ ಇದ್ದ ಮನೆಗೆ ಮ್ಯಾಚ್ ನೋಡಲಿಕ್ಕಾಗಿ ಮೈಲಿಗಟ್ಟಳೆ ನಡೆಯುತ್ತಿದ್ದರು. ಹಗಲು-ಇರುಳ ಪಂದ್ಯವಾದರೆ ಆ ಕತ್ತಲಲ್ಲೆ ಮತ್ತೆ ನಡೆದು ಮನೆ ಸೇರುತ್ತಿದ್ದರು. ಅಲ್ಲೋ ಹತ್ತಾರು ಜನ ನೆರೆದು, ಕೂರಲು ಜಾಗವಿಲ್ಲದೆ, ನಿಂತುಕೊಂಡೇ ಕ್ರಿಕೆಟ್ ವೀಕ್ಷಣೆ. ವಿದ್ಯುತ್ ಕೈ ಕೊಡುವುದು ಹಿಡಿಶಾಪ ಹಾಕುವುದು ಎಲ್ಲವೂ  ಮಾಮೂಲಿ. ಆಟವೊಂದನ್ನು ಎಷ್ಟು ಪ್ರೀತಿಸಬೇಕೋ ಅದಕ್ಕಿಂತ ಹೆಚ್ಚು, ಐ ಮೀನ್... ತಮ್ಮ ಮನೆಯವರನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚು ಆಟವೊಂದನ್ನು ಪ್ರೀತಿಸಿದ್ದರು ಭಾರತೀಯರು. ದೇವರಿಗಿಂತಲೂ ಹೆಚ್ಚು ಆಟಗಾರರನ್ನು ಆರಾಧಿಸಿದ್ದರು ನಮ್ಮ ಜನ.

ಕಪ್ಪು ಮೋಡ ಮಳೆ ಸುರಿಸುತ್ತೇ ಎಂಬುದಕ್ಕಿಂತ ದೊಡ್ಡದಿತ್ತು ದ್ರಾವಿಡ್ ಪಂದ್ಯವನ್ನು ಉಳಿಸುತ್ತಾನೆ ಎಂಬ ನಿರೀಕ್ಷೆ! ತಾನು ಮೂವತ್ತೈದು ಅಂಕ ಪಡೆದು ಪಾಸ್ ಆಗುವುದಕ್ಕಿಂತ ಸಚಿನ್ ೧೦೦ ಬಾರಿಸಿಯೇ ಬಾರಿಸುತ್ತಾನೆ ಎಂಬ ವಿಶ್ವಾಸವೇ ಗಟ್ಟಿ! ಗಂಗೂಲಿ ಬೀಡು ಬೀಸಾದ ಹೊಡೆತಗಳ ಮುಂದೆ ಹಟ್ಟಿ ಸೇರದ ದನ ಕರುಗಳ ನೆನಪೇ ಇಲ್ಲ! ಕುಂಬ್ಳೆ ಸ್ಪೀನ್ ಮೋಡಿಗೆ ಮರುಳಾಗಿ ದಿನದ ಸಂಜೆಯ ಸಾರಾಯಿಯ ನೆನಪೇ ಮಾಯ!

ಆದರೆ ಇಂದಿನ ಕ್ರಿಕೆಟ್ ಅಧಿಪತಿಗಳಿಗೆ ಈ ಅಭಿಮಾನಿಗಳ ನೆನಪೇ ಇಲ್ಲ. ಅವರಿಗೆ ಅಮಿತಾಬ್, ಶಾರೂಖ್, ಪ್ರೀತಿ, ಶಿಲ್ಪಾ, ಅಂಬಾನಿ, ಮಲ್ಯ ಮುಂತಾದ ತಾರೆಗಳು ಮಾತ್ರ ಕ್ರಿಕೆಟ್ ಅಭಿಮಾನಿಗಳು! ಐಪಿಎಲ್ ತಂಡಗಳ ಮಾಲೀಕರಾಗುವ ಮೊದಲು ಅವರು ಒಂದೇ ಒಂದು ಕ್ರಿಕೆಟ್ ಪಂದ್ಯವನ್ನು ಪೂರ್ಣವಾಗಿ ನೋಡಿದ್ದರೋ ಇಲ್ಲವೋ. ನಿಮಿಷಕ್ಕಿಷ್ಟು ಹಣ ಎಂದು ಲೆಕ್ಕ ಹಾಕುವ ಜನರ ಮುಂದೆ, ಕೂಲಿ ತಪ್ಪಿದರೆ ಉಪವಾಸ, ಪರೀಕ್ಷೆ ಫೈಲ್ ಆದರೆ ವನವಾಸ ಎಂದು ಗೊತ್ತಿದ್ದರೂ ಕ್ರಿಕೆಟ್ನ್ನು ಹುಚ್ಚರಂತೆ ಪ್ರೇಮಿಸಿದ ಕ್ರಿಕೆಟ್ ಪ್ರೇಮಿಗಳು ಲೆಕ್ಕಕ್ಕಿಲ್ಲ. ನಿಜ ಪ್ರೇಮಿಗಳಿಗಿಂತಲೂ ಕಾಮಿಗಳಿಗೆ ಮಣೆ. ದುರ್ದೈವ!

೨೦೧೫ರ ವಿಶ್ವಕಪ್ ಪಂದ್ಯದ ಪ್ರಸಾರದ ಹಕ್ಕು ಸ್ಟಾರ್ ಸ್ಪೊರ್ಟ್ಸ್ನದ್ದು. ಆದರೆ ದೇಶದ ಆಸಕ್ತಿ ಇರುವ ಪಂದ್ಯಗಳನ್ನು ತಾನು ಪ್ರಸಾರ ಮಾಡುತ್ತೇನೆ ಎಂಬುದು ಪ್ರಸಾರ ಭಾರತಿಯ ವಾದ. ಡಿಟಿಎಚ್ ಯುಗದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಳ್ಳಿಗಳ ಮನೆಗೂ ಲಗ್ಗೆ ಇಟ್ಟಿದೆ. ಆದರೆ ಇಂದಿಗೂ ದೇಶದಲ್ಲಿ ಡಿಟಿಎಚ್ ಡಿಶ್ಗಳನ್ನು ಬಳಸದ ಮನೆಗಳ ಪ್ರಮಾಣವೂ ದೊಡ್ಡದಿದೆ. ಡಿಟಿಎಚ್ ಡಿಶ್ ಬಳಸಿದ್ದರೂ ಕೂಡ ಈ ಚಾನೆಲ್ ಗಳು ಉಚಿತವಾಗಿ ಸಿಗುತ್ತಿಲ್ಲ. ಅದಕ್ಕೆ ಒಂದಿಷ್ಟು ಹಣ ನೀಡಬೇಕು. ಕ್ರಿಕೆಟ್ ವೀಕ್ಷಣೆ ಮಧ್ಯಮ, ಶ್ರೀಮಂತ, ನಗರ, ಪಟ್ಟಣ, ಅರೆ ಪಟ್ಟಣಗಳಿಗಷ್ಟೇ ಸೀಮಿತವಾಗಿರಲಿ. ಕ್ರಿಕೆಟ್ ಅಭಿಮಾನಿಗಿಂತಲೂ, ಕ್ರಿಕೆಟ್ಗಿಂತಲೂ ಪ್ರಸಾರದ ಹಕ್ಕು ಪಡೆದವರು ಸಮೃದ್ಧಿ ಹೊಂದಿರಲಿ!

ಕ್ರಿಕೆಟ್ ನೋಡದಿದ್ದರೆ ದೇಶ ದಿಕ್ಕೆಟ್ಟು ಹೋಗುವುದಿಲ್ಲ! ಆದರೆ ಬಡ, ಗಾಮೀಣ ಭಾರತೀಯನನ್ನು ಕ್ರಿಕೆಟ್ ವೀಕ್ಷಣೆಯಿಂದ ವಂಚಿತರಾಗಿಸುವ ಪ್ರಯತ್ನಕ್ಕಿಂತಲೂ ಆಘಾತಕಾರಿಯಾದ ಸಂಗತಿ ಇನ್ನೊಂದಿದೆ.

ದೂರದರ್ಶನಕ್ಕೆ ವಿಶ್ವಕಪ್ನ ಭಾರತ ಆಡುವ ಪಂದ್ಯಗಳ ನೇರ ಪ್ರಸಾರ ನಡೆಸಲು ಅವಕಾಶ ನೀಡಬಾರದು ಎಂಬ ಮಾಧ್ಯಮ ಹಕ್ಕು ಪಡೆದವರ ನಿಲುವನ್ನು ಸಮರ್ಥಿಸಿಕೊಂಡವರು ಕಪಿಲ್ ಸಿಬಲ್, ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್ ಮತ್ತು ಅಭಿಷೇಕ್ ಮನು ಸಿಂಘ್ವಿ. ಈ ಹಿಂದಿನ ಕೇಂದ್ರ ಸರ್ಕಾರದಲ್ಲಿ ಕ್ರಮವಾಗಿ ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ, ಗೃಹ ಮತ್ತು ಹಣಕಾಸು, ವಿದೇಶಾಂಗ, ಕಾನೂನು, ಮಾಹಿತಿ ಮತ್ತು ಪ್ರಸಾರದಂತಹ ಅತ್ಯಂತ ಪ್ರಮುಖ ಖಾತೆಗಳನ್ನು ಹೊಂದಿದ್ದ ಮಂತ್ರಿಗಳು.

ವಕೀಲರಿಗೆ ಕೇಸ್ ಮುಖ್ಯ. ಅವರು ಯಾವ ಕೇಸ್ ತೆಗೆದುಕೊಂಡಿದ್ದಾರೆ ಎಂಬ ಆಧಾರದಲ್ಲಿ ಅವರನ್ನು ಅಳೆಯಲಾಗದು. ಚಿಕಿತ್ಸೆಗಾಗಿ ಬಂದ ಶತ್ರುವಿಗೂ ಔಷಧಿ ನೀಡಬೇಕು ಎಂಬ ವೈದ್ಯರ ಸೂತ್ರದಂತೆಯೇ ತನ್ನನ್ನು ಸಂಪರ್ಕಿಸಿದ ಯಾವುದೆ ವ್ಯಕ್ತಿಗೆ ಕಾನೂನಿನ ನೆರವು ನೀಡುವುದು ವಕೀಲರ ಕರ್ತವ್ಯ. ಆದರೆ ದೂರದರ್ಶನದಲ್ಲಿ ಕ್ರಿಕೆಟ್ ಪ್ರಸಾರ ನಡೆಸಬಾರದು ಎಂದು ವಾದಿಸುತ್ತಿರುವ ವಕೀಲರು (ಸಿಂಘ್ವಿ ಹೊರತು ಪಡಿಸಿ) ಕೇವಲ ೧೦ ತಿಂಗಳ ಹಿಂದೆ ಅಧಿಕಾರ ಕಳೆದುಕೊಂಡ ಸರ್ಕಾರದ ಆಧಾರ ಸ್ತಂಭವಾಗಿದ್ದರು ಎಂದು ಹೊಳೆದಂತೆ ಮನಸ್ಸು ಕುಸಿಯುತ್ತದೆ.

ದೇಶದ ಲಕ್ಷಾಂತರ ಜನರಿಗೆ ಸಿಗಬೇಕಾದ ಸವಲತ್ತಿಗೆ ಕುತ್ತು ತರಲು ಹೊರಟಿದ್ದಾರೆ ಈ ಮಹಾಶಯರು. ಒಂದು ಉದ್ಯಮ ಸಂಸ್ಥೆಗೆ ಆಗುವ ನಷ್ಟವೇ ಈ ಮಾಜಿ ಮಂತ್ರಿಗಳಿಗೆ ಮುಖ್ಯ. ವಾಣಿಜ್ಯ ಒಪ್ಪಂದದ ವ್ಯಾಜ್ಯದ ಮುಂದೆ ಗ್ರಾಮ ಭಾರತದ ನೋವು ನಲಿವುಗಳು ನಗಣ್ಯ. ವಾಣಿಜ್ಯ ಕಾಯ್ದೆಯ ರಕ್ಷಣೆಯಲ್ಲಿ ದೇಶದ ಸಂವಿಧಾನದ ಆಶಯಕ್ಕೆ ಭಂಗವಾದರೂ ಪರವಾಗಿಲ್ಲ ಎಂಬ ನಿಲುವು ಕಾನೂನು ರಂಗದ ಅತಿರಥರದ್ದು. ಮಾಜಿ ಮಂತ್ರಿಗಳದ್ದು. ಇನ್ನು ಗ್ರಾಮ ಭಾರತವನ್ನು ಸ್ಪರ್ಶಿಸುವ ಸಂವೇದನೆ ಇವರಿಗೆ ಇದ್ದಿರಲು ಸಾಧ್ಯವೇ? ಇಂದು ಸ್ಟಾರ್ ನ ‘ಸ್ಟಾರ್’ ರಕ್ಷಣೆಗೆ ಕಂಕಣ ತೊಟ್ಟಿರುವಾಗ ಅಂದು ಒಡಿಸ್ಸಾದ ಆದಿವಾಸಿಗಳ ಆಕ್ರಂದನ ಇವರಿಗೆ ಕೇಳಿಸಿರಬಹುದೇ? ಆಲದ ಮರದಂತೆ ಪ್ರಶ್ನೆ ಬೆಳೆಯುತ್ತಿದೆ.

ಚೆಂಡು ವಿಕೆಟ್ ಗೆ ಬಡಿದಂತೆ ಈಗ ಲೈಟ್ ಪ್ರಕಾಶಿಸುತ್ತಿದೆ. ಆಧುನಿಕತೆ ಮೆರೆಯುತ್ತಿದೆ. ಆದರೆ ಕ್ರಿಕೆಟ್ ನಲ್ಲಿದ್ದ ಲೈಟ್ ನಿಧಾನವಾಗಿ ಮಂಕಾಗುತ್ತಿದೆ. ನೈಜ ಕ್ರಿಕೆಟ್ ಪ್ರೇಮ ಮರೆಯಾಗುತ್ತಿದೆ. ಕಾಪೋರೇಟ್ ಗಳ ರೇಟ್ ಮುಂದೆ ಹಾರ್ಟ್ ಬೀಟ್ ಗಳ ವಿಕೆಟ್ ಉರುಳುತ್ತಿದೆ.

ಕ್ರೀಡೆ ಬೇರೆಯಲ್ಲ, ವ್ಯವಸ್ಥೆ ಬೇರೆಯಲ್ಲ. ಪೌರೋಹಿತ್ಯರು ಮಾತ್ರ ಅವರೇ! ಐ ಮೀನ್ ಸಿಬಲ್, ಚಿದು, ಸಿಂಘ್ವಿ, ಖುರ್ಷಿದ್, ಟ್ಲಿ, ಶಾ, ಠಾಕೂರ್, ಪವಾರ್, ಶುಕ್ಲಾ ... ಇತಿಹಾಸ ಮರಳುತ್ತದೆ, ಹೆಸರು ಬದಲಾಗಬಹುದು. ಕೊಹ್ಲಿಯನ್ನು ಇಂದಿನ ಸಚಿನ್ ಅಂದ ಹಾಗೆ, ರಹಾನೆಯನ್ನು ದ್ರಾವಿಡ್ ಅಂದ ಹಾಗೆ, ಪಠಾಣ್, ಕಪಿಲ್ ದೇವ್ ಆದಂತೆ. ಸಚಿನ್  ನನ್ನು ಗವಾಸ್ಕರ್ ಅಂದಂತೆ...

ಅದೇ ರನೌಟ್, ಬೌಲ್ಡ್, ಕ್ಯಾಚ್ ಗಳು ನಿಯಮ ಬದಲಾದಂತೆ ಕಾಣುವುದಿಲ್ಲ. ಆದರೆ ಚೆಂಡು, ಫಿಲ್ಡರ್, ಬೌಂಡರಿಗಳು ಲಾಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ... ಅರುಣಾಚಲ ಪ್ರದೇಶದ ಗುಡ್ಡದ ಮೇಲೆ, ಉಡುಪಿಯ ಕಾಡೊಳಗೆ ಇರುವಾತ ಕ್ರಿಕೆಟ್ ನೋಡದಿದ್ದರೆ ಏನಂತೆ... ಅಂಬಾನಿ, ಶ್ರೀನಿವಾಸನ್, ಮಲ್ಯರು ಕೋಟಿ ಸುರಿದು, ಕೋಟಿ ಕೋಟಿ ದೋಚಿದರೆ ಸಾಕಂತೆ!  Thursday, February 20, 2014

ಕೊನೆಯ ಉಸಿರಿನ ತನಕ... ಕಲರ್ ಕಲರ್ ಪ್ರೀತಿ ಮತ್ತು ಕಪ್ಪು ಬಿಳುಪು ಬದುಕು

ನಡೆದ ಹಾದಿ, ಮುಗಿಯದ ಬೇಗುದಿ, ಹತಾಶೆಯ ಸುಳಿಯೊಳಗೆಯೇ ಸೆಳೆಯುವ ಸೆಳೆತಗಳು, ನಿರೀಕ್ಷೆಗಳೇ ಹುಟ್ಟಿಸದ ಗುಳಿಗೆ, ಕನಸ್ಸಿಗೆ ಕೊಳ್ಳಿ ಇಡುವ ಇರುಳುಗಳು, ಶ್ರಮದ ಫಲಿತಾಂಶಗಳ ಹಗಲು ದರೋಡೆ, ನಾಳೆಗೆ ಚಿಗುರೊಡೆಯಬಹುದು ಎಂದು ನೆನೆಸಿಟ್ಟ ಕಾಳುಗಳಿಗಾದ ಗರ್ಭಪಾತ. ಒಂದೇ... ಎರಡೇ.. ಬದುಕಿ ಲಾಭವಿಲ್ಲ, ನಷ್ಟವೇ. ನಷ್ಟಕ್ಕೂ ಮಿಗಿಲಾಗಿ ಸಾಲಸೋಲ, ಋಣಗಳು!

ದಶಕದ ಹಿಂದೆ ಮೈಮರೆತ ಒಂದು ಕ್ಷಣ ಮತ್ತು ಆ ಮೇಲೆ ಕಲೆತ ನೂರಾರು ದಿನಗಳು... ಹೀಗೆ ನನ್ನನ್ನು ಅಬ್ಬೇಪಾರಿಯಾಗಿಸಿ ಬಿಡಬಹುದು ಎಂದು ಅಂದು ಕೊಂಡೇ ಇರಲಿಲ್ಲ. ಅಂದು ಕೊಳ್ಳುವ ಲೆಕ್ಕಾಚಾರಗಳು ಪ್ರೀತಿಯ ಅಡಿಪಾಯವಲ್ಲ ತಾನೇ? ಪ್ರೀತಿಗೆ ಲೆಕ್ಕಾಚಾರಗಳ ಹಂಗಿಲ್ಲ... ಬರೀ ಕನಸು, ಭವ್ಯತೆಯದ್ದೆ ಗುಂಗು, ರಂಗು. ಅಡಿಪಾಯವು ಬೇಕಿಲ್ಲ, ಬರೀ ಆಶಾಗೋಪುರ, ಗಾಳಿಗೋಪುರ.

ಮುಗ್ಧ... ಪೇಟೆ ಪಟ್ಟಣಗಳ ಕಲರ್ ಗೊತ್ತಿಲ್ಲದ ಹುಡುಗ, ಸುಮ್ಮನೆ ತನ್ನ ಪಾಡಿಗೆ ತಾನು. ರಗಳೆ, ಬೊಗಳೆಗಳು ಸಾಧ್ಯವಿಲ್ಲದ ಸಾಹಸ. ತುಂಟತನ, ಆಪ್ತ ವಲಯದೊಳಗಿನ ಕಸರತ್ತು. ಹೊರ ವಲಯದಲ್ಲಿ ಮುಟ್ಟಿದರೆ ಮುನಿ. ಆದರೂ ಆಸೆ, ಆಕಾಂಕ್ಷೆಗಳಿಗೆ ಇಲ್ಲದ, ಸಲ್ಲದ ಬೇಲಿ.
 
ಅದೇ ಕ್ಯಾಂಟೀನ್. ಹರಕು ಮುರುಕು ಕುರ್ಚಿಗಳು, ತುಕ್ಕು ಹಿಡಿದ ಟೇಬಲ್‌ಗಳು. ಕಪ್ಪಾದ  ಸ್ಟೀಲ್ ಗ್ಲಾಸ್‌ನಲ್ಲಿನ ಚಹಾ, ಜೊತೆಗೊಂದು ಬನ್ಸ್. ಸ್ವರ್ಗಾದಪಿ ಗರಿಯಸಿ... ಅರಳುವುದು, ಕೆರಳುವುದು ಮಾತ್ರ ಗೊತ್ತಿದ್ದ ವಿಷಯ. ನರಳುವುದು, ಸಾಯುವುದು ಇನ್ನೊಬ್ಬರ ಹಣೆ ಬರಹ ಅನ್ನುತ್ತಿತ್ತು ವಯಸ್ಸು.

ಎದೆಗವಚಿಕೊಂಡು ಪುಸ್ತಕ, ಕ್ಯಾಂಟೀನ್‌ನೊಳಗೆ ಬಿಗುಮಾನವಿಲ್ಲದೆ ಬರುತ್ತಿದ್ದ ಹುಡುಗಿಯರು. ಗುರುತಿದ್ದರೆ ನಸುನಕ್ಕು, ಮುಗಳ್ನಕ್ಕು, ಮುಕ್ಕುವುದರಲ್ಲೆ ಲೀನವೇ ಹೊರತು ಕಣ್ಣೆತ್ತಿ ನೋಡಲು ಬಿಡದ ಪುಕ್ಕಲುತನ. ಕದ್ದು ಮುಚ್ಚಿ ಅಥವಾ ಮುಚ್ಚಿದ್ದನ್ನು ಕದ್ದು ನೋಡುವ ಹಂಬಲಕ್ಕೆ ಪುಕ್ಕುಲತನವನ್ನು ಮೀರಿದ ಗುರುತ್ವಾಕರ್ಷಣೆ.

ಅಕ್ಸಿಡೆಂಟ್‌ಗಳು ಹೇಗಾಗುತ್ತವೆ? ನಮ್ಮ ಅಜಾಗರೂಕತೆಯಿಂದ, ಇನ್ನೊಬ್ಬರ ಅಜಾಗರೂಕತೆಯಿಂದ... ಆಗುವ ಹಾನಿ ಮಾತ್ರ ನಮಗೊ, ಅವರಿಗೋ ಅಥವಾ ಮತ್ತೊಬ್ಬರ ಪಾಲಿಗೋ. ಕೆಲವೊಮ್ಮೆ ಅಕ್ಸಿಡೆಂಟ್ ಆಗಬಾರದು ಎಂದುಕೊಳ್ಳುವ ಅತಿ ಜಾಗರೂಕತೆ ಕೂಡ ಮತ್ತೊಂದು ಅಪಘಾತಕ್ಕೆ ಕಾರಣ. ಇತ್ತೀಚೆಗೆ ಸತ್ಯಶೋಧನೆಯಲ್ಲಿಯೇ ನಾವು ವ್ಯಸ್ತರು. ಈ ವೇದನೆಗಳ ಮೂಲಕವಾದರು ನಿನ್ನ ನೆನಪು ಚಿರಂತನ ಸತ್ಯ ಎಂಬ ಶೋಧನೆಯಾಗಿದೆ. ಅದನ್ನು ಮೀರಿ ಹಾರುವ ರೆಕ್ಕೆಗಳಾಗಲಿ, ಶಕ್ತಿಯಾಗಲಿ ನನಗಿಲ್ಲ. ಏಕೆಂದರೆ ನಾನು ನೀನಲ್ಲ!

ಈ ಜಾಗರೂಕ ಅಪಘಾತ ಸಂಭವಿಸಿದ್ದಾದರೂ ಹೇಗೆ? ಮೂಲೆಯಲ್ಲಿ ಜಿಟುಗು ಮಳೆಗೆ ಒಗಟು ಕಟ್ಟುತ್ತ ಕೂತಿದ್ದ ಕವಿ ಮನಸ್ಸು... ತುಂಬಿದ ಟೇಬಲ್‌ಗಳ ಪ್ರದರ್ಶನ ಆ ಮುರುಕು ಕ್ಯಾಂಟೀನ್‌ನಲ್ಲಿ. ಮಳೆಗೆ ನೆನೆಯದ ಆಶ್ರಯ ಪಡೆಯಲು ಬಂದವರೇ ಹೆಚ್ಚು. ಆ ನೆಪದಲ್ಲಿಯಾದರೂ ಕ್ಯಾಂಟೀನ್‌ಗೆ ಫುಲ್ ಆಗುವ ಯೋಗ, ಒಂದು ಸಾರ್ಥಕತೆ.  ಟೇಬಲ್‌ಗಳು ಫುಲ್ ಆಗುತ್ತ ಬರುತ್ತಿದ್ದರೆ ನನಗೆ ನನ್ನ ಟೇಬಲ್‌ನ ಉಳಿದ ಮೂರು ಕುರ್ಚಿಗಳಲ್ಲಿ ಯಾರು ಕುಂಡೆ ಊರುವರು ಎಂಬ ಕುತೂಹಲ. ಆದರೂ.
ಊರಿಗೆ ಬಂದವಳು ನೀರಿಗೆ ಬಾರದೆ ಇರುವಳೆ ಎಂಬಂತೆ ಎಲ್ಲ ಕುರ್ಚಿ ತುಂಬಿದ ಬಳಿಕ ಯಾರಾದರೂ ನನ್ನ ಬಳಿ ಬಂದು ಕೂರಲೇ ಬೇಕು ಎಂಬುದು ಸರಳ ಲೆಕ್ಕಾಚಾರ. ಆಗಿನ ದಿನಗಳಿಗೆ ಇಂತಹ ತಪ್ಪಾಗದ ಲೆಕ್ಕಾಚಾರಗಳೆ ಬುದ್ದಿವಂತಿಕೆಯ ಮಾನದಂಡಗಳು! ಆಗ ತಪ್ಪು ನಿರ್ಧಾರಕ್ಕೂ, ತಪ್ಪು ಲೆಕ್ಕಾಚಾರಕ್ಕೂ ಇರುವ ವ್ಯತ್ಯಾಸಗಳು ಅರಿವಿನ ವ್ಯಾಪ್ತಿಗೆ ನಿಲುಕಿರಲಿಲ್ಲ.
ಆಸನ ಬಿಟ್ಟು ಕೊಡು ಎಂದು ಕ್ಯಾಂಟೀನ್‌ನವರು ಹೇಳುವುದಿಲ್ಲ ಎಂದು ಗೊತ್ತಿತ್ತು. ಬಂದೇ ಬಿಟ್ಟರು ನಾಲ್ವರು ಲಲನೆಯರು. ಅತ್ತಿತ್ತ ಕಣ್ಣಾಡಿಸಿ, ಅನಿವಾರ್ಯ ಕರ್ಮ ಎಂಬಂತೆ ನಾನು ಕೂತ ಕುರ್ಚಿಯತ್ತ ನಿಧಾನವಾಗಿ ಹೆಜ್ಜೆ ಊರಿದರು. ಇದು ನನ್ನ ಮುಂದೆಯೇ ಬಂದು ಕೂರುವ ಗಿರಾಕಿಗಳು ಎಂದು ಅರ್ಥವಾಗಿತ್ತು ನನಗೆ. ಈ ಶನಿಯೊಬ್ಬ ಅಲ್ಲಿ ಕೂತಿದ್ದಾನೆ,   ಎಂದು ನನಗೆ ಅವರು ಬೈಯ್ಯುತ್ತಿರುತ್ತಾರೆ, ನಾನು ಇಲ್ಲಿ ಕೂತಿದ್ದರಿಂದಲೇ ಅವರಿಗೆ ಆ ಸೀಟ್ ಉಳಿದಿದೆ ಎಂದು ಅವರಿಗೆ ಅನಿಸೋದಿಲ್ಲ ಎಂದೆಲ್ಲ ಆ ಕ್ಷಣದಲ್ಲಿ ನಾನು ಅಂದುಕೊಂಡಿರಬೇಕು.
 
ಜಾಗವಂತು ಸಿಕ್ಕಿತ್ತು... ಅವರ ಸಮಸ್ಯೆ ಮುಗಿದಿರಲಿಲ್ಲ. ಇರುವುದು ಮೂರು ಕುರ್ಚಿ. ನಾಲ್ಕು ಜನ ಕೂರಬೇಕು... ಎಲ್ಲರಿಗೂ ತ್ಯಾಗಮಯಿಗಳಾಗುವ ಚಪಲ... ನೀನು ಕೂರು, ನೀನು ಕೂರು, ನಾನು ನಿಲ್ಲುವೆ ಎಂದು ಚೆಲುವೆಯರು ತ್ಯಾಗದ ರಬ್ಬರ್ ಬ್ಯಾಂಡ್ ಎಳೆದದ್ದೆ ಎಳೆದದ್ದು. ನಾನು ಕದಲಲಿಲ್ಲ. ಯಾವುದೋ ಒಂದು ಸಮಸ್ಯೆಗೆ ಸಿಕ್ಕು ಒದ್ದಾಡುತ್ತಿರುತ್ತೇವೆ. ಅದಕ್ಕೊಂದು ಪರಿಹಾರ ಸಿಕ್ಕಿದೆ ಎಂದಾಗ ನಾವು ಮತ್ತೊಂದು ಸಮಸ್ಯೆಯಲ್ಲಿ ಬಿದ್ದು ಒದ್ದಾಡುತ್ತಿರುತ್ತೇವೆ... ತ್ಯಾಗ, ದಾನ, ಸಹನೆ ಎಂದು ಕೊಚ್ಚಿಕೊಂಡರು ಒಳಗಡೆ ಹಲುಬುತ್ತಿರುತ್ತೇವೆ... ಒಂಚೂರು ಹೊಂದಾಣಿಕೆ ಮಾಡಿಕೊಂಡರು ಅದು ಸಮಸ್ಯೆಗೊಂದು ಶಾಶ್ವತ ಪರಿಹಾರವಾಗದೆ ಸಮಸ್ಯೆಯ ಹಂಚುವಿಕೆ ಆಗಿರುತ್ತದೆ. ಸಮಸ್ಯೆಯನ್ನು ಸಮಾನವಾಗಿ ಹಂಚಿ ಎಂದು ದೊಡ್ಡ ದೊಡ್ಡ ಮೇಧಾವಿಗಳು ಹೇಳುತ್ತಾರೆ, ಸಮಸ್ಯೆಯನ್ನು ಎದುರಿಸುವ ಅಥವಾ ಹೊಂದಿರುವ ಮನಸ್ಸು ಹೇಗಿದೆ ಎಂಬುದರ ಮೇಲೆ ಸಮಸ್ಯೆಯ ಪರಿಣಾಮದ ಆಳ, ಅಗಲದ ಅಚ್ಚು ಬೀಳುವುದು ಎಂದು ನಾನು ಆ ಕ್ಷಣಗಳ ಬಗ್ಗೆ ಈ ಕ್ಷಣ  ಯೋಚಿಸಿದರೆ ಹೊಳೆಯುವ ಮ್ಯಾನೇಜ್‌ಮೆಂಟ್ ಪಾಠ!

ಕೆಕ್ಕರಿಸಿ ನೋಡುವ ಅಷ್ಟ ಕಣ್ಣುಗಳಿಂದ ನನ್ನ ಹಾವಭಾವ ಮುಚ್ಚಿಡುವುದು ಕಷ್ಟ. ಎಂತಹ ಹುಡುಗನೇ ಇರಲಿ, ಹುಡುಗಿಯರ ಮಧ್ಯೆ ಏಕಾಂಗಿಯಾಗಿದ್ದರೆ ಆತನ ಆತ್ಮ ಚಡಪಡಿಸಲು ಶುರುವಿಕ್ಕುತ್ತದೆ. ಮೋಕ್ಷಕ್ಕಾಗಿ ಹಾತೊರೆಯುತ್ತದೆ. ಅಲ್ಲಿ ನಿಂತವಳಿಗಿಂತಲು, ಕುಂತವರಿಗಿಂತಲೂ ಹೆಚ್ಚಿನ ಹೊಯ್ದಾಟವಾಗಿದ್ದು ನನಗೆ. ಸುತ್ತಮುತ್ತ ನಮ್ಮವರಲ್ಲದವರು ಇದ್ದಾಗ ಕಾಡುವ ಅಸುರಕ್ಷಿತ ಭಾವ ಸರ್ವವ್ಯಾಪಿ, ಸರ್ವರೀತಿ. ಇದೇ ಕುಟುಂಬ, ಜಾತಿ, ಊರು, ರಾಜ್ಯ, ಭಾಷೆ, ದೇಶ ಹೀಗೆ ಹಿಗ್ಗುತ್ತ ಹೋಗುತ್ತದೆ. ಒಂದು ಹಂತದ ಬಳಿಕ ಅಸುರಕ್ಷಿತ ಭಾವವೇ ಸಂಕುಚಿತವಾಗಿ ದ್ವೇಷ, ಅಸೂಯೆ, ಸಾವು, ನೋವು, ಅನುಮಾನಗಳಲ್ಲಿ ಪರ್ಯಾವಸನ ಗೊಳ್ಳುತ್ತದೆ ಎನ್ನುವುದು ಲೋಕ ಕಂಡವರ ಅನುಭವ.
 
ಆಯ್ಕೆಗಳೇ ಇಲ್ಲವೆಂದ ಮೇಲೆ ಸಿಕ್ಕಿದ್ದೆ ಪಂಚಾಮೃತ. ಹುಡುಗಿಯರ ಹರಟೆ ರಂಗೇರುತ್ತಿತ್ತು. ಹುಡುಗಿಯರು ಮಾತನಾಡುವುದಕ್ಕಿಂತ ನಗುವುದೇ ಹೆಚ್ಚು ಎಂದು ಅಂದುಕೊಳ್ಳುತ್ತಿದೆ. ಮುಂದಿನ ಸೀಟ್‌ನಲ್ಲಿ ಕೂತವರನ್ನು ನೋಡುವುದು ಶ್ರಮವಿಲ್ಲದ, ಸಹಜ ಕಾರ್ಯ. ಆದರೆ ಪಕ್ಕದಲ್ಲಿ ಕೂತವಳನ್ನು, ನಿಂತವಳನ್ನು ನೋಡುವುದಕ್ಕೆ ಪ್ರಯತ್ನ ಬೇಕಿತ್ತು. ಆದರೂ ಮುಖ ನೋಡುವುದರಲ್ಲಿ ಏನಿದೆ ಎಂದು ನೋಡಿ ಬಿಟ್ಟೆ.

ಪಕ್ಕದವಳಿಂದ, ನಿಂತವಳತ್ತ ದೃಷ್ಟಿ ಹಾಯಿಸಿದೆ. ಇಬ್ಬರ ಮುಖದಲ್ಲಿಯೂ ಮುಗಳ್ನಗುವಿನ ಸ್ಟ್ಯಾಂಪ್. ಸುಮ್ಮನಾದೆ, ಪಕ್ಕದ ಕ್ಲಾಸ್ ಅಲ್ಲವೇ ಇವರು ಎಂದು ... ಮತ್ತೊಮ್ಮೆ ನೋಡಿದೆ. ಏನ್ರಿ ಮಳೆಗೆ ಭಾರಿ ಬಾರಿಸುತ್ತಿದ್ದೀರಿ ಎಂದು ಪಕ್ಕ ಕೂತವಳು ಕೇಳಿಯೇ ಬಿಟ್ಟಳು. ನಾನು ಹೀಗೆ ಸುಮ್ಮನೆ ನೋಡಿ ಅಂದರೆ ಶೂನ್ಯ ದೃಷ್ಟಿಯಂತು ಅಲ್ಲ. ಹಾ... ಇದು ಮಾಮೂಲಿ ಎಂದು ಬಿಟ್ಟೆ. ನಿಮ್ಮದು ಕ್ಲಾಸ್ ಬೇಗ ಬಿಡ್ತಾ? ಎಂದಳು... ತಕ್ಷಣವೇ ಇವಳಿಗೆ ನನ್ನ ಪರಿಚಯವಿದೆ, ಕನಿಷ್ಠ ನಾನು ಯಾವ ಕ್ಲಾಸ್ ಎಂಬುದು ಗೊತ್ತಿದೆ ಎಂದು ಕೊಂಡು... ಹಾ ಇವತ್ತು ಲಾಸ್ಟ್ ಹವರ್ ಇಲ್ಲ ಎಂದೆ. ಆದರೂ ನನ್ನ ಮನಸ್ಸೊಳಗೆ ಇನ್ನೇನೋ ಪಗಡೆಯಾಟ. ಎಂದಿನಂತೆ ಅಥವಾ ಪ್ರತಿ ಎರಡು ನಿಮಿಷಕ್ಕೊಮ್ಮೆ ಮಾಡುವ ಪ್ರಕ್ರಿಯೆಯಂತೆ ಪಕ್ಕದವಳು, ನಿಂತವಳು ಜಾರಿದ್ದ ದುಪ್ಪಟ್ಟವನ್ನು ಎತ್ತಿ ಹೊದ್ದುಕೊಂಡರು. ಆಗ ಈ ಕೆಲಸಕ್ಕಿದ್ದ ಸೂಕ್ಷ್ಮತೆ, ರಹಸ್ಯ, ಉದ್ದೇಶಗಳು ತಲೆಗೆ ಹೊಕ್ಕಿರಲಿಲ್ಲ.
ನಂತರ ಅವರಿಬ್ಬರು ನನ್ನ ಜೊತೆ ಮಾತನಾಡುವ ಗೋಜಿಗೆ ಹೋಗಲಿಲ್ಲ... ಅವರದ್ದೆ ಪಟ್ಟಾಂಗ. ನಾನು ತರಿಸಿದ್ದ ಬನ್ಸ್ ಮುಗಿಯಿತು ಎಂದು ನನಗೆ ಗೊತ್ತಾಗುವ ಮೊದಲೇ ನಿಂತಿದ್ದವಳ ಕಣ್ಣು ಅದನ್ನು ಹೇಳುತ್ತಿತ್ತು, ಸಂಭ್ರಮಿಸುತ್ತಿತ್ತು! ನೋಡುವಾಗಲೇ ಹೀಗೆ ನಕ್ಕಳು... ಸರಿ, ಇನ್ನು ಹೊರಡೋದೆ ಲೇಸು ಇಲ್ಲದಿದ್ದರೆ ತಪ್ಪ್ಪಬಹುದು ಬಸ್ಸು ಎಂದು ಕೊಂಡು ಹೊರಟೆ. ನಾನು ನಿಲ್ಲುತ್ತಲೇ ಪಕ್ಕ ಕೂಂತವಳು ನಿಂತು ಸರಿದು, ನಿಂತವಳು ಅತ್ತ ಸರಿದು ರಾಜ ಮಾರ್ಯಾದೆಯಿಂದ ಬಿಟ್ಟು ಕೊಡುವ ತಯಾರಿ ನಡೆಸಿದರು. ನಾನು ಪಕ್ಕದವಳಿಗೊಂದು ಬೈ ಹೇಳಿ... ಕ್ಯಾಂಟೀನ್‌ನವನಿಗೆ ದುಡ್ಡು ಕೊಟ್ಟು ಹೊರಟೆ. ಒಂದು ಸಂದಿಗ್ಧ. ತಿರುಗಿ ಒಮ್ಮೆ ಅವರನ್ನು ನೋಡಲೇ, ಬೇಡವೇ ಎಂಬುದು. ಹೊಟೆಲ್‌ನ ರಶ್ ಹಾಗೆಯೇ ಇತ್ತು. ತಿರುಗಿ ನೋಡಿದೆ. ಅವರು ಅವರ ಪಾಡಿಗೆ ಇದ್ದರು. ನಾನು ಅಲ್ಲಿಂದ ಹೊರಬಿದ್ದೆ.

ನನ್ನ ದಿನಚರಿಗಳಲ್ಲಿ ಮನಸ್ಸಿನ ಏರಿಳಿತಗಳಲ್ಲಿ ಏನೇನು ಬದಲಾಗಿರಲಿಲ್ಲ. ಲವ್ ಅಟ್ ಫಸ್ಟ್ ಸೈಟ್ ಅಥವಾ ಇಂಪ್ರಶನ್‌ಗಳು ಆದಾದಕ್ಕೆ ಯಾವ ದಿಕ್ಕಿನಲ್ಲಿ ಯೋಚಿಸಿದರು ಇನ್‌ಫಾರ್ಮೇಶನ್ ಸಿಗುತ್ತಿಲ್ಲ ಎಂಬುದು ಆ ದಿನದ ನನ್ನ ಡೈರಿ ಸಾರುವ ಸತ್ಯ. ಇದೊಂದು ಸಿನಿಮೀಯ ಸನ್ನಿವೇಶವಾಗಿದ್ದರು ಘಟನೆಯಾಗಿಯೇ ನಮೂದಾಗಿದೆ. ಸರಿ, ಆ ಬಳಿಕ ಕ್ಯಾಂಟೀನ್ ಪಕ್ಕ ಕೂತವಳು ಅನೇಕ ಬಾರಿ ಕಾಲೇಜ್ ಕಾರಿಡಾರಿನಲ್ಲಿ ಸಿಕ್ಕಿದ್ದಿದೆ. ಒಂದು ಅಂಕದ ಪ್ರಶ್ನೆಗಳಾದ ಊಟ ಆಯಿತಾ? ಕ್ಲಾಸ್ ಇಲ್ಲವಾ? ಯಾರು ಲೆಕ್ಚರರ್? ಮುಂತಾದವುಗಳ ವಿನಿಮಯವಾಗಿದೆ, ಇಂತಹ ಪ್ರಶ್ನೆಗಳಿಗೆ ಉತ್ತರವು ಸಿಕ್ಕಿದೆ, ದಿನಗಳು ಉರುಳಿದೆ.
ಕಾರಿಡಾರಿನಲ್ಲಿ ಒಂದು ದಿನ ನಿಂತುಕೊಂಡಿದ್ದಾಗ ಆಕೆ ಬಂದು ಮಾತನಾಡಿಸಿದ್ದಿದೆ. ಅಷ್ಟರಲ್ಲಿ ಅವಳ ಹೆಸರು ತಿಳಿದುಕೊಂಡಿದ್ದೆ. ವಯಸ್ಸಿಗೆ ಸಹಜವಾದ ಆದರೆ ಅಸಹಜ ಸೆಳೆತವೊಂದರ ಸುಳಿ ಹುಟ್ಟಲು ಆ ಕ್ಷಣಗಳು ಹೇತುವಾಗಿದೆ. ಈಗ ಇಂತಹದ್ದನ್ನು ವ್ಯಾಖ್ಯಾನಿಸಲು ’ಕ್ರಶ್’ ಎಂಬ ಅಂಗ್ಲ ಪದ ನನ್ನ ಪದ ಬತ್ತಳಿಕೆಗೆ ಸೇರಿದೆ.

ಹುಟ್ಟಿದ್ದ ಸೆಳೆತ, ಮಿಡಿತದ ಮಾತು ಓರೆಕೋರೆ ದಾರಿಗಳಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ಒಂದು ದಿನ ಅವಳ ’ನಿಂತುಕೊಂಡಿದ್ದ’ ಗೆಳತಿಯೂ ಅಲ್ಲಿಗೆ ಆಗಮಿಸಿದ್ದಳು. ಅವಳು ಹಾಯ್ ಎಂದು ಹೇಳಿ ನನಗೆ ಹಾಯನಿಸಿದಳು. ಅವರಿಬ್ಬರು ಮತ್ತು ನಾನು ಸುಮಾರು ೧೫ ನಿಮಿಷ ಮಾತನಾಡಿರಬಹುದು! ನಂತರ ಇದು ೩-೪ ದಿನಗಳಲ್ಲಿ ಮತ್ತೊಮ್ಮೆ ಪುನರಾವರ್ತನೆ. ಪ್ರೇಮದ ಕಿಡಿ ಹೊತ್ತಿದೆ ಎಂದು ಹೊಗೆ ಕಂಡ ನಮ್ಮ ಸ್ನೇಹಿತರು ಪುಕಾರು ಎಬ್ಬಿಸಿಯೇ ಬಿಟ್ಟಿದ್ದರು. ಅವರಿಬ್ಬರಲ್ಲಿ ಯಾರು ನಿನ್ನವಳು ಎಂದು ಪ್ರಶ್ನೆ ಕೇಳುತ್ತಾ, ತನಿಖೆ ಮಾಡುತ್ತ ಅವರ ಸಮಯವೂ ಸುರುಳಿ ಸುತ್ತುತ್ತಿತ್ತು.
 
ಬಳಿಕದ ದಿನಗಳಲ್ಲಿ... ಅಂಕಿತಾ (ಕ್ಯಾಂಟಿನ್‌ನಲ್ಲಿ ನಿಂತುಕೊಂಡಿದ್ದ ಹುಡುಗಿ) ಕ್ಲಾಸ್‌ನಲ್ಲಿ ಕೂತಿದ್ದ ನನ್ನನ್ನು ಕಿಟಕಿಯಿಂದಲೇ ಕೈಸನ್ನೆ ಮಾಡಿ ಕರೆದು ಕಾರಿಡಾರಿನಲ್ಲಿ ಮಾತನಾಡಲು ಶುರುವಿಡುತ್ತಿದ್ದಳು. ಇಂತಹ ಒಂದು ದಿನ, ಅದು, ಇದು ಎಲ್ಲ ಆದ ಮೇಲೆ ಎಲ್ಲಿ ಅಮೃತಾ ಎಂದು ಕೇಳಿದ್ದೆ. ಅವಳು ಬಂದಿಲ್ಲ... ಎಂದಳು. ಏಕೆ ಎಂಬ ನನ್ನ ಪ್ರಶ್ನೆಗೆ ಏನೋ ಮನೆಯ ಪ್ರಾಬ್ಲಮ್ ಎಂಬ ಉತ್ತರ ಸಿಕ್ಕಿತ್ತು. ಸರಿ ಎಂದು ಹೇಳಿದ್ದೆ.

ಮತ್ತೆ ಮೂರ್‍ನಾಲ್ಕು ದಿನ ಅಂಕಿತಾಳ ಜೊತೆ ಮಧ್ಯಾಹ್ನದ ಸಂಭಾಷಣೆ. ಅಮೃತಾ ಎರಡು ದಿನ ಬಿಟ್ಟು ಕಾಲೇಜ್‌ಗೆ ಬರುತ್ತಿದ್ದಾಳೆ ಎಂದು ಅಂಕಿತಾ ಮಾತಿನ ಮಧ್ಯೆ ಎಲ್ಲೋ ಹೀಗೇ ಹೇಳಿದ್ದಳು. ಆ ಎರಡು ದಿನ ಬಿಟ್ಟು ಅಮೃತಾ ಕಾಲೇಜ್‌ಗೆ ಬಂದಿದ್ದಳು. ನಾನು ಗಮನಿಸಿದ್ದೆ. ಆ ಬಳಿಕ ಎರಡು ಮೂರು ದಿನ ಸರಿದು ಹೋಗಿರಬೇಕು. ಅಂದು ಅಂಕಿತಾ ಬಂದಿರಲಿಲ್ಲ. ಹಿಂದಿನ ದಿನವೇ ಈ ಸಮಾಚಾರ ಸಿಕ್ಕಿತ್ತು. ಮಧ್ಯಾಹ್ನ ಕಾರಿಡಾರ್‌ನಲ್ಲಿ ನಿಂತಿದ್ದೆ, ಅಂಕಿತಾ ಆಗಮನಕ್ಕಾಗಿ ಎಂಬುದು ವಾತಾವರಣದ ಪರಿಚಯ ಇದ್ದವರು ಪ್ರಚುರ ಪಡಿಸಿದ ಸಮಾಚಾರ.
ನಿಂತಿದ್ದವನ ಬಳಿ ಬಂದದ್ದು ಅಮೃತಾ..
ನಾನು: ಏನು ಮೇಡಂ? ಆಯಿತಾ ಊಟ?
ಅಮೃತಾ: ಹಾ ಸರ್, ನಿಂದು?
ನಾನು: ಹೋ
ಅಮೃತಾ: ಅಂಕಿತಾಳಿಗೆ ಕಾಯ್ತಾ ಇದ್ದೀಯಾ?
ನಾನು: (ಮುಗುಳ್ನಗು)
ಅಮೃತಾ: ಅವಳು ಇವತ್ತು ಬರೊಲ್ಲ
ನಾನು: ಹಾ.. ನಿನ್ನೆ ಹೇಳಿದ್ದಳು, ಏನು ಕೆಲವು ದಿನ ರಜೆ ಹಾಕಿದ್ದೀರಿ ಅಲ್ವಾ?
ಅಮೃತಾ: ಹಾ, ಹೌದು. (ಮುಗುಳ್ನಗು, ಸಂತಸದ್ದು ಅಲ್ಲ), ನಿಮ್ಮ ಜೊತೆ ಮಾತನಾಡಬಹುದಾ?
ನಾನು: ಈಗೇನು ಮಾಡುತ್ತಿರುವುದು?
ಅಮೃತಾ: ಇಲ್ಲಿ ಅಲ್ಲ, ಬನ್ನಿ ನಮ್ಮ ಕ್ಲಾಸ್‌ಗೆ,
ನಾನು: (ಅರೆ ಕ್ಷಣ ತಬ್ಬಿಬ್ಬು, ಮತ್ತೆ ಹಿಂಬಾಲಿಸಿದ್ದೆ)

ನಾವಿಬ್ಬರು ಒಂದು ಬೆಂಚಿನಲ್ಲಿ, ಕುಳಿತು ಮಾತುಕತೆ, ಕಣ್ಣೀರು, ಸಂತಾಪ, ನೋವು, ವಿಷಾದ, ಸಾಂತ್ವನ ಮುಂತಾದವುಗಳಿಂದ ತುಂಬಿದ್ದ ಮಹತ್ವದ ಮಾತುಕತೆ... ಅಲ್ಲಿ ತನಕ ನಮ್ಮ ನಡುವೆ ಇದ್ದ ಭಾವನೆ, ಸಂಬಂಧಕ್ಕೆ ಭಾರಿ ತಿರುವು.
   
ಅರೆ ಘಂಟೆಯಲ್ಲಿ ಅಮೃತಾ ಎಲ್ಲೋ ಕಳೆದು ಹೋಗಿದ್ದಳು, ಅಮೃತಾಳಿಗೆ ಅಮೃತಾಳೆಂಬ ಅಸ್ತಿತ್ವ ನನ್ನಲ್ಲಿ ಮತ್ತೆ ಸೃಷ್ಟಿಯಾಗಲೇ ಇಲ್ಲ. ಅಮೃತಾ ಉರಿದು ಹೋದಳೋ, ಬೆಳಕಾಗಿ ಬೆಳಗಿದಳೋ. ಬಳಿಕ ನನ್ನ ಕ್ಷಣಕ್ಷಣದ ಕಣಕಣದ ಪ್ರಾಣವಾಗಿ ಆಕೆ ನನ್ನೊಳಗೆ ತನ್ನ ಪ್ರಾಣ ಬಿಟ್ಟಿದ್ದಳು, ನನ್ನ ಪ್ರಾಣವಾಗಿದ್ದಳು ಕೊನೆಗೊಂದು ದಿನ ನನ್ನ ಪ್ರಾಣವನ್ನೂ ತೆಗೆದಿದ್ದಳು!
 
ಊಟದ ವಿರಾಮದ ಮುಕ್ತಾಯ, ಮುಂದಿನ ತರಗತಿಯ ಆರಂಭಕ್ಕೆಂದು ಬಾರಿಸಿದ್ದ ಬೆಲ್‌ನಿಂದಾಗಿ ನಾನು ಅಮೃತಾಳನ್ನು ಬಿಟ್ಟು ಹೋಗಲೇ ಬೇಕಿತ್ತು. ಹೌದು, ಅಮೃತಾಳನ್ನು ಅಲ್ಲೆ ಬಿಟ್ಟು ಹೋಗಿದ್ದೆ... ಅಮ್ಮುಳನ್ನು ಕರೆದುಕೊಂಡು ಬಂದಿದ್ದೆ, ನನ್ನ ಜೊತೆಗೆ, ಮುಂದಿನ ತರಗತಿಗೆ ಮುಗಿಯುವರೆಗೆ ಮಾತ್ರವಲ್ಲ, ನನ್ನ ಬದುಕಿನ ಗತಿ, ಪ್ರಗತಿ, ಸದ್ಗತಿ ಮತ್ತು ದುರ್ಗತಿವರೆಗೆ.
ಪ್ರೀತಿ ವಿಫಲವಾಗಿದೆ ಎಂದು ಬೊಬ್ಬಿಡುವುದು, ನೊಂದುಕೊಳ್ಳುವುದು, ಬೈಯ್ಯುವುದು, ಶಾಪ ಹಾಕುವುದು ತಪ್ಪು. ಆ ರೀತಿ ಮಾಡಬಾರದು, ಜೀವನ ದೊಡ್ಡದಿದೆ ಎಂಬುದು ಪುಸ್ತಕಗಳ ಸರಕು. ಮಸ್ತಕದಲ್ಲಿಯೂ ಅದು ಇರುತ್ತದೆ. ಆದರೆ ಇದರ ಪಾಲನೆ ಕಬ್ಬಿಣದ ಕಡಲೆ. ವಾಸ್ತವವಾಗಿ ಪ್ರೀತಿ ವಿಫಲ ಎಂಬುದರ ವ್ಯಾಖ್ಯಾನವು ಅಸ್ಪಷ್ಟ. ನಾವು ಸಾಮಾನ್ಯವಾಗಿ ಹುಡುಗ/ಹುಡುಗಿ ಬೇರೆ ಒಬ್ಬರನ್ನು ಮದುವೆಯಾದರೆ ಅಥವಾ ನಿನ್ನ ಸಹವಾಸ ಸಾಕಪ್ಪ ಎಂದು ಬಿಟ್ಟರೆ ಅದನ್ನು ಪ್ರೀತಿಯ ವೈಫಲ್ಯ ಎಂದು ಕೊಳ್ಳುತ್ತೇವೆ. ನಂತರ ಅವನು/ಅವಳು ಈಗ ನನ್ನ ಜೊತೆ ಇದ್ದರೆ, ಅವನು/ಅವಳು ಈಗ ಏನು ಮಾಡುತ್ತಿರಬಹುದು, ನಾನು ಮೋಸ ಹೋದೆ ಎಂದೆಲ್ಲ ಪರಿತಾಪಿಸುತ್ತ ಕಳೆದುಹೋದವರನ್ನು ಮತ್ತೂ ಕಳೆದುಕೊಳ್ಳುತ್ತಾ, ಮಿಸ್ ಮಾಡಿಕೊಳ್ಳುತ್ತಾ ಪ್ರೀತಿಯ ವಿರಹ ಎಂದುಕೊಳ್ಳುತ್ತಿರುತ್ತೇವೆ. ಈ ಲೋಕರೂಢಿಯ ವ್ಯಾಖ್ಯಾನದ ಮಟ್ಟಿಗೆ ಸಫಲ ಪ್ರೀತಿ ಎಂದು ಕರೆಯುವ ಮದುವೆಯಾದವರು ಕೂಡ, ನೆಮ್ಮದಿಯ ಬದುಕು ಸಾಗಿಸಬಹುದು ಎಂಬುದಕ್ಕೆ ಖಾತ್ರಿ ಕೊಡುವುದು ಕಷ್ಟ.

ಯಾವ ಪ್ರೀತಿ ಕೂಡ ಸಫಲ ಅಥವಾ ವಿಫಲ ಆಗುವುದು ಪ್ರೀತಿಯಲ್ಲಿ ತೊಡಗಿಕೊಂಡವರ ಫಲಿತಾಂಶದ ನಿರೀಕ್ಷೆ ಏನಿದೆ ಎಂಬುದರ ಮೇಲೆ. ಕೆಲವರಿಗೆ ಸಮಯ ಸಾಗಿಸುವ ಅಥವಾ ಸಮಯ ಕೊಲ್ಲುವ ಸಾಧನ ಪ್ರೀತಿ ಎಂದಾದರೆ ಅವರು ಪರಸ್ಪರ ಪ್ರೀತಿಯಲ್ಲಿ ತೊಡಗಿಕೊಂಡಾಗ ಎಷ್ಟು ಸಮಯ ಕೊಂದಿದ್ದಾರೆ, ಸಾಗಿಸಿದ್ದಾರೆ ಎಂಬುದರ ಮೇಲೆ ಅವರ ಪ್ರೀತಿಯ ಯಶಸ್ಸನ್ನು ಅಳೆಯಬೇಕು. ಅವರು ಬೇರೆಯಾದ ಬಳಿಕ  ಪರಸ್ಪರರನ್ನು ನೆನಪಿಸಿಕೊಳ್ಳುತ್ತ ಕೊಲ್ಲುವ ಸಮಯ ಕೂಡ ಈ ಪ್ರೀತಿಯ ಉಳಿತಾಯ/ಸಾಲದ ಖಾತೆಗೆ ಜಮಾ ಆಗುವಂತಹದ್ದೆ.

ಇನ್ನು ಸಫಲ ಪ್ರೀತಿ ಎಂದು ಮದುವೆಯಾದವರು ಬಳಿಕ ಕಿತ್ತಾಡಿಕೊಂಡರೆ ಅದನ್ನು ಯಶ ಕಂಡ ಪ್ರೀತಿ ಎನ್ನಬಹುದೇ? ಕಿತ್ತಾಡಿಕೊಳ್ಳದಿದ್ದರು, ಡೈವೋರ್ಸ್ ಪಡೆಯದಿದ್ದರು ಕೂಡ ಸಾಂಸಾರಿಕ ಸಮಸ್ಯೆಗಳು ಹುಟ್ಟಿಕೊಂಡು ಅದನ್ನು ಸಹಮತದಲ್ಲಿ ಪರಿಹರಿಸಲಾಗದೆ ಒಬ್ಬರ ದರ್ಪ, ಯಾಜಮಾನಿಕೆ, ವೈವಾಹಿಕ ಬಂಧನದ ಕಟ್ಟುಪಾಡುಗಳ ಕಾರಣದಿಂದಾಗಿ ಒಬ್ಬರು ತಮ್ಮ ನೋವನ್ನು ನುಂಗಿಕೊಂಡಿದ್ದರೆ ಅದು ಯಾವ ಪ್ರೀತಿ? ಯಾವುದೋ ಒಂದು ಕಾರಣಕ್ಕೆ ಹತ್ತಿರವಾಗಿ ಒಂದಿಷ್ಟು ಸಮಯ ಒಟ್ಟಿಗೆ ಕಳೆದು ಬಳಿಕ ಇನ್ನೂ ಹೆಚ್ಚಿನ ಸಮಯ ಅಥವಾ ಮುಂದಿನ ದಿನಮಾನದಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಬೇರೆಯಾದರೆ ಅದು ವಿಫಲ ಪ್ರೀತಿಯೇ?

ಸಾಮಾನ್ಯವಾಗಿ ನಮ್ಮ ತಂದೆ ತಾಯಿಗಳು ನಾವು ಹುಟ್ಟಿದಾಗ ನಮ್ಮ ಜೊತೆಗೆ ಇರುತ್ತಾರೆ. ತಮ್ಮ ವಾತ್ಸಲ್ಯ ಧಾರೆ ಎರೆಯುತ್ತಾರೆ. ಆದರೆ ನಮ್ಮ ಜೀವನದ ಯಾವುದೋ ಹಂತದಲ್ಲಿ ನಮ್ನನ್ನು ಬಿಟ್ಟು ಹೋಗುತ್ತಾರೆ. ಆದೇ ರೀತಿ ಹೆಂಡತಿ ಮಕ್ಕಳು, ಮರಿ ಮಕ್ಕಳು ನಾವು ಹುಟ್ಟಿದ ಅದೇಷ್ಟೂ ಸಮಯದ ಬಳಿಕ ನಮ್ಮ ಜೊತೆ ಇದ್ದು ಹೋಗಲು ಬರುವವರು. ಮಾನವ ಜಗತ್ತಿನ ಯಾವುದೇ ಸಂಬಂಧಗಳ ದೈಹಿಕ ಸಾಮಿಪ್ಯ ಶಾಶ್ವತವಲ್ಲ. ಇಂತಹ ಸಂದರ್ಭದಲ್ಲಿ ತಂದೆ, ತಾಯಿಗಳ ವಾತ್ಸಲ್ಯದ ಯಶಸ್ಸನ್ನು ಅಳೆಯುವ ಮಾನದಂಡಗಳು ಏನು? ತಂದೆ ತಾಯಿಗಳು ನಮ್ಮನ್ನು ಹುಟ್ಟಿಸಿದ ಮಾತ್ರಕ್ಕೆ ಯಶಸ್ವಿ ಪೋಷಕರಾಗುತ್ತಾರೆಯೇ? ಮಕ್ಕಳಿಗೆ ನೀಡಿದ ಸಂಸ್ಕಾರ ಮತ್ತು ಅವರ ಜವಾಬ್ದಾರಿಗಳ ನಿರ್ವಹಣೆಯನ್ನು ಆಧಾರಿಸಿ ಪೋಷಕರು ಯಶಸ್ಸನ್ನು ಅಳೆಯಬಹುದು. ಈ ನಿದರ್ಶನದ ಆಧಾರದಲ್ಲಿ ಹೇಳುವುದಾದರೆ ಪ್ರೀತಿಯ ಯಶಸ್ಸು ಜೋಡಿಗಳು ಒಟ್ಟಿಗೆ ಇದ್ದಾಗ, ಆಥವಾ ದೂರದಲ್ಲಿ ಇದ್ದಾಗ ಅನುಭವಿಸಿದ ಗುಣಮಟ್ಟದ ಸಮಯದ ಆಧಾರದ ಮೇಲೆಯೇ ಅಳೆಯಬೇಕು. ಕೋಪತಾಪ, ಕಣ್ಣೀರು, ವಿಷಾದ, ನೋವು, ವಿರಹ, ಸತಾಯಿಸುವುದು, ಕಿಚಾಯಿಸುವುದು, ಮಾತು ಬಿಡುವುದು, ಮಾತು ಕೊಡುವುದು ಎಲ್ಲವು ನಲಿವು, ಸಂತಸ, ಸರಸ, ಸನಿಹ, ಖುಷಿಯಷ್ಟೆ ಅಗತ್ಯ. ಎರಡು-ಮೂರು ದಿನ ಮಾತು ಬಿಟ್ಟಾಕ್ಷಣ ಪ್ರೀತಿಯಲ್ಲಿ ಕೊರತೆ ಕಾಣದೆ, ದೂರದಲ್ಲಿ ಇದ್ದಾಗಲು ಸಾಮಿಪ್ಯದ ಕಾತರತೆ ಇದ್ದಾಗ ಅದನ್ನು ಪ್ರೀತಿಯ ಯಶಸ್ಸು ಎಂದು ಸಾರಬಹುದೇನೋ.

ಇದೆಲ್ಲ ವ್ಯಾಖ್ಯಾನ, ನಿರೂಪಣೆಗಳ ಮಾತಾಯಿತು. ಆದರೆ ಜೀವನ? ಈಗ ಅಮೃತಾ ಯಾನೆ ಅಮ್ಮುನ ದೇಹದ ಸಾಮೀಪ್ಯ ನನ್ನ ಜೊತೆಗಿಲ್ಲ, ಮನಸ್ಸಿನ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅವಳ ಮನಸ್ಸು ನನ್ನ ಬಗ್ಗೆ ಕಾತರಿಸುತ್ತಿರುವುದಾಗಿದ್ದರೆ ಅವಳ ದೇಹ ಯಾರ ಜೊತೆಗಿದೆಯೋ ಅವರ ಜೊತೆ ನೆಮ್ಮದಿಯಾಗಿಲ್ಲ. ಇಲ್ಲ, ಅವಳ ಮನಸ್ಸು, ದೇಹ ಎರಡೂ ಒಂದೇ ಕಡೆ ಇದ್ದು ನನಗೆ ಒಳಿತಾಗಲಿ, ಕೆಡುಕಾಗಲಿ ಎಂದು ದಿನದ ಕೆಲವು ನಿಟ್ಟುಸಿರುಗಳ ಎಡೆಯಲ್ಲಿ ಅಥವಾ ಹೀಗೆ ಏನೋ ಆಕೆಗೆ ನೆನಪಾದಾಗ ಭಾವಿಸುತ್ತಿದ್ದರೆ? ಎಲ್ಲ ಬಿಟ್ಟು, ನಮ್ಮ ಮೊದಲ ಭೇಟಿಯ, ಆ ಬಳಿಕದ ಅನೇಕ ಭೇಟಿಗಳ ಕ್ಯಾಂಟಿನ್‌ಗೆ ಅವಳು ಹೋದಾಗ ನನ್ನ ನೆನಪಾಗಿ ಅವನ ಜೊತೆ ಇರುವಾಗ ಎಷ್ಟು ಖುಷಿಯಾಗಿದ್ದೆ ಎಂದೋ ಅಥವಾ ಈಗ ಎಷ್ಟು ನೆಮ್ಮದಿಯಾಗಿದ್ದೇನೆ ಎಂದು ಆಕೆ ಅಂದು ಕೊಂಡರೆ ಆಗಲೂ ಪ್ರೀತಿ ತಕ್ಕಡಿಗೆ ಬೀಳುತ್ತದೆ.

ಹುಲು ಮಾನವನ ಮನಸ್ಸಿಗೆ ಸಂಬಂಧಿಸಿದಂತೆ ಯಾವೂದೂ ಪೂರ್ಣವಲ್ಲ. ಅಮ್ಮು ಈಗ ನನ್ನ ಜೊತೆಗಿಲ್ಲದನ್ನು ಕ್ರಿಕೆಟ್‌ನಲ್ಲಿ ಹತ್ತನೇ ವಿಕೆಟ್ ಪತನದೊಂದಿಗೆ ಇನಿಂಗ್ಸ್‌ಗೆ ಮಂಗಳ ಹಾಡುವುದಕ್ಕೆ ಹೋಲಿಸಿಬಿಡಬಹುದು. ನೀವು ಒಂದು ತುದಿಯಲ್ಲಿ ತ್ರಿಬಲ್ ಸೆಂಚುರಿ ಹೊಡೆದು ಆಡುತ್ತಿದ್ದರು ಕೂಡ ಹನ್ನೊಂದನೆ ಆಟಗಾರ ಯಾವ ರೀತಿ ಔಟ್ ಆದರೂ ಪೆವಿಲಿಯನ್ ಸೇರಲೇಬೇಕು.  ಅದು ನಿಯಮ. ನನ್ನ ಅಮ್ಮುನ ಜೊತೆಯಾಟದಲ್ಲಿ ವಿಧಿಯೆಂಬ ಅಂಪೈರ್ ನೀಡಿದ ತೀರ್ಪಿನಿಂದಾಗಿ ಅಮ್ಮು ಔಟ್ ಆಗಿದ್ದಾಳೆ. ಜೊತೆಯಾಟ ಮುರಿದಿದೆ, ನಮ್ಮ ಸಂಬಂಧದ ಇನ್ನಿಂಗ್ಸ್ ಮುಗಿದಿದೆ. ಆಕೆ ಹೊಸ ಇನ್ನಿಂಗ್ಸ್‌ನಲ್ಲಿ ಹೊಸ ಜೊತೆಯಾಟದಲ್ಲಿ ಭಾಗಿಯಾಗಿದ್ದಾಳೆ.
 
ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿಲ್ಲ. ಮನಸ್ಸು ತಯಾರಾದರೂ ಒಳ ಮನಸ್ಸು ಬಿಡುವುದಿಲ್ಲ, ಒಳ ಮನಸ್ಸು ಒಪ್ಪಿಕೊಂಡರು, ಸುಪ್ತ ಮನಸ್ಸು ಸುಮ್ಮನಿರುವುದಿಲ್ಲ. ನಾವು ಯಶಸ್ಸಿ ಇನ್ನಿಂಗ್ಸ್ ಆಡಿದ್ದೇವೆ, ನಾವು ಉತ್ತಮ ಜೊತೆಯಾಟ ಆಡಿದ್ದೇವೆ, ಅವಳ ಸಹಾಯದಿಂದ ನನಗೆ ಉತ್ತಮ ಸ್ಕೋರ್ ಮಾಡಲು ಸಾಧ್ಯವಾಗಿದೆ ಎಂಬುದು ಗೊತ್ತಿದೆ. ಅವಳು ಕಟ್ಟುಪಾಡುಗಳನ್ನು ಮೀರಿ ಇನ್ನಿಂಗ್ಸ್ ಬೆಳೆಸಿದ್ದಾಳೆ, ಔಟ್ ಆಗಲು ಅಂಪೈರ್ ನೀಡಿದ ಕೆಟ್ಟ ತೀರ್ಪು ಕಾರಣ ಎಂಬ ಅರಿವಿದೆ, ನಿಯಮ ಮೀರುವ ಮನಸ್ಸು ಅವಳದಲ್ಲ ಎಂದು ಗೊತ್ತಿದೆ. ಆದರೂ ಮನಸ್ಸು ಕೆರಳಿದ ಮುಳ್ಳು ಹಂದಿ. ಇಲ್ಲ, ಅವಳು ಉದ್ದೇಶಪೂರ್ವಕವಾಗಿ ಔಟ್ ಆಗಿದ್ದಾಳೆ ಎಂಬ ಸಂಶಯದ ನರ್ತನ.

ನಮಗೆ ಗ್ಯಾಂಗ್ರಿನ್ ಆಗುತ್ತದೆ. ಕಾಲು ಕಟ್ ಮಾಡಬೇಕು ಎನ್ನುತ್ತಾರೆ ಡಾಕ್ಟರ್. ಅವರು ಅಪರೇಷನ್ ಮಾಡಿ ಕಾಲು ತೆಗೆಯುತ್ತಾರೆ. ಯಾವುದೇ ವೈದ್ಯಕೀಯ ನೆರವಿನ ಸಹಾಯವಿಲ್ಲದೆ ಅದೇ ಕಾಲನ್ನು ಒಂದು ಮಚ್ಚಿನಿಂದ ಕಡಿದು ಕೂಡ ಕಟ್ ಮಾಡಬಹುದು. ಎರಡು ಕ್ರಿಯೆಯಲ್ಲಿಯೂ ಕಾಲು ಕಟ್ ಆಗುತ್ತದೆ. ಆದರೆ ಉಂಟಾಗುವ ತಲ್ಲಣ? ಅಮೃತಾ ಮಚ್ಚಿನಿಂದ ಹೊಡೆದು ಕಾಲು ಕಟ್ ಮಾಡಿದಂತೆ ನಮ್ಮ ಸಂಬಂಧವನ್ನು ಕಟ್ ಮಾಡಿದಳು. ಒಂದು ಸಂಬಂಧವನ್ನು ಮನಸ್ಸಿಗೆ ಮುಜುಗರವಾದರು ಮುಂದುವರಿಸಬೇಕು ಎಂಬುದು ಬಾಲಿಶತನ. ಇಂತಹ ನಡಾವಳಿಕೆ ಇರುವ, ಬೇಡುವ ಸಂಬಂಧಗಳು ನೆಮ್ಮದಿಯ ನಾಳೆಗಳನ್ನು ಕಾಣುವುದಿಲ್ಲ. ಒಂದು ಸಂಬಂಧದಲ್ಲಿ ಹುಳುಕು ಕಂಡು ಬಂದರೆ, ಹುಳುಕುಗಳೆ ದೊಡ್ಡದಾಗಿ ನಾಳೆ ನಮ್ಮನ್ನು ಲಗಾಡಿ ತೆಗೆಯುತ್ತವೆ ಎಂದು ಅನಿಸಿದೊಡನೆ ಆ ಸಂಬಂಧದಿಂದ ಹೊರಗಡೆ ಬರಬೇಕು. ಆದರೆ ಹೇಗೆ ಹೊರಗಡೆ ಬರುತ್ತೇವೆ ಎಂಬುದರ ಮೇಲೆ ಸಂಬಂಧಗಳಲ್ಲಿ ಭಾಗಿಯಾದವರ ನಾಳೆಯ ನೆಮ್ಮದಿಯ ದಿನಗಳ ಹೊದಿಕೆ ಇರುತ್ತದೆ. ಇಬ್ಬರಿಗೂ ನೋವಾಗದಂತೆ ಒಂದು ಸೌಹಾರ್ದ ಮಾತುಕತೆಯೊಂದಿಗೆ ಪರಸ್ಪರ ಅಗಲಿಕೆಯ ಅನಿವಾರ್ಯತೆಯನ್ನು ತೆರೆದಿಟ್ಟು ಬೇರೆಯಾಗುವುದು ಪ್ರಬುದ್ಧತೆಯ ಲಕ್ಷಣ. ಇದರಿಂದ ಮುಂದೆ ಸಮಸ್ಯೆಗಳೇ ಇರಲಾರದು ಎನ್ನಲಾಗದಿದ್ದರು ಕೂಡ ಗೊಂದಲ, ಗೋಜಲುಗಳಿಗೆ ಅಸ್ಪದ ಸಿಗುವುದು ಕಡಿಮೆ. ಇಬ್ಬರಲ್ಲಿಯೂ ಏನೋ ಒಂದು ಸ್ಪಷ್ಟತೆಯ ಬೆಳಕು ಮೂಡಿರುತ್ತದೆ.

ಆದರೆ ಅಮೃತಾ? ಅಲ್ ಅಫ್ ಸಡನ್. ಫೋನ್ ರಿಸೀವ್ ಮಾಡುವುದು ನಿಲ್ಲಿಸಿದ್ದಳು.  ಮೆಸೆಜ್‌ಗಳಿಗೆ ರಿಪ್ಲೈ ಇಲ್ಲ. ಸಿಮ್ ಬ್ಲಾಕ್ ಮಾಡುವ ಪ್ರಯತ್ನ. ಇಲ್ಲ, ನಿನ್ನೊಂದಿಗೆ ಇರಲಾಗದು ಎಂದು ಯಾರೋ ಗೆಳತಿಯ ಜೊತೆಗೆ ಹೇಳಿ ಕಳುಹಿಸುವ ಪ್ರಯತ್ನ, ನನಗೆ ಬೇರೆ ಹುಡುಗ ನೋಡುತ್ತಿದ್ದಾರೆ, ನಮ್ಮ ಜಾತಿ ಬೇರೆ, ಅಂತಸ್ತು ಜಾಸ್ತಿ, ಇಂಜಿನಿಯರ್ ಹುಡುಗ ಬೇಕು, ಅಮೆರಿಕಕ್ಕೆ ಹಾರಬೇಕು, ನಿನ್ನ ನಡೆ ಸರಿ ಇಲ್ಲ, ನಿನ್ನ ಜೊತೆ ನೆಮ್ಮದಿಯಾಗಿರಲು ನನ್ನಿಂದ ಸಾಧ್ಯವಿಲ್ಲ ಎಂಬತಹ ಕಾರಣ ಕೊಡಲೆಂದೇ ಸೃಷ್ಟಿಸಿರುವ ನೆಪಗಳ ಚೀಲವನ್ನು ಎಸೆದಿದ್ದಳು. ಇಂತಹ ಚೀಲವನ್ನು ಹೆಕ್ಕಿ, ಅದರಲ್ಲಿನ ಕಾರಣವನ್ನು ಜೋಪಾನವಾಗಿ ಕಾದಿರಿಸಿಕೊಂಡು ನಂಬುವ ಮೂರ್ಖತನ ನನ್ನಲ್ಲಿ ಇಲ್ಲದಿರುವುದು ನನ್ನ ದುರದೃಷ್ಟ.
ಅದರೆ ನಾನು ಹೋರಾಡುತ್ತೇನೆ ಅಮೃತಾ ಅಲಿಯಾಸ್ ಅಮ್ಮು...

ನೀನು ನನ್ನ ಉಸಿರಾಗಬಾರದು ಎಂದು ನನ್ನ ಕೊನೆಯ ಉಸಿರಿರುವರೆಗೆ...

Friday, August 2, 2013

ಕುಸಿದ ಅಥ್ಲೇಟಿಕ್ಸ್ ಗುಣಮಟ್ಟ, ಕಲಿಯಬಾರದೆ ಪಾಠ?

ಭಾರತ ಜಾಗತಿಕ ಕ್ರೀಡಾರಂಗದಲ್ಲಿ ಮಿಂಚಲಿದೆ, ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕಗಳು ಸೂರೆ ಹೊಡೆಯಲಿದೆ ಎಂದು ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದೆರಡು ಪದಕ ಗೆದ್ದ ಬಳಿಕ ನಮ್ಮ ಮುಂದೆ ಹಾರಿ ಬಿಡುವ ಬೆಲೂನು. ಮಾಧ್ಯಮಗಳಲ್ಲಿಯೂ ಕೂಡ ಗೆದ್ದವರ ಗುಣಗಾನ, ಸಂದರ್ಶನ, ವ್ಯಕ್ತಿತ್ವದ ಅನಾವರಣದ ಪ್ರಯತ್ನ. ಗೆದ್ದವರು ಅಭಿನಂದನೆಗೆ, ಪ್ರೇರಣೆಗೆ ಪಾತ್ರರು. ಆದರೆ ದೇಶ ಕ್ರೀಡಾಶಕ್ತಿಯಾಗಿ ಮೆರೆಯಬೇಕಾದರೆ ಗೆಲುವಿನ ಗುಣಮಟ್ಟ ಅತ್ಯಗತ್ಯ. ಗೆದ್ದೆತ್ತಿನ ಬಾಲ ಹಿಡಿಯಲು ಎದ್ದು ಬಿದ್ದು ಓಡುವವರ ಕಣ್ಣಿಗೆ ಗುಣಮಟ್ಟದ ಮೌಲ್ಯ ಅಗೋಚರ.

ಜುಲೈ ಮೊದಲ ವಾರ ಪುಣೆಯಲ್ಲಿ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ನಡೆದ ನೆನಪು ಮಸುಕುವ ಮುನ್ನ ಒಂದು ಕುತೂಹಲಕಾರಿ ಸಂಗತಿ ನಿಮ್ಮ ಮುಂದೆ. ಮಹಿಳೆಯರ ೪*೪೦೦ ಮೀ ರಿಲೇಯಲ್ಲಿ ಭಾರತಕ್ಕೆ ಚಿನ್ನ ಗೆದ್ದ ಸಂಭ್ರಮ. ರಿಲೇ ಓಟದ ಘಟಾನುಘಟಿಗಳ ಮೇಲೆ ನಿಷೇಧವಿದ್ದರಿಂದ ಭಾರತ ’ಬಿ’ ತಂಡವನ್ನು ಸ್ಪರ್ಧೆಗೆ ಇಳಿಸಿತ್ತು. ನಿರ್ಮಲಾ, ಅನು ಜೋಸ್, ಟಿಂಟು ಲುಕಾ ಮತ್ತು ಪೂವಮ್ಮರನ್ನು ಹೊಂದಿದ್ದ ಈ ತಂಡ ೩:೩೨:೨೬ ನಿಮಿಷಗಳಲ್ಲಿ ತಮ್ಮ ಗುರಿ ಮುಟ್ಟಿತ್ತು. ಇದರೊಂದಿಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ದಕ್ಕಿಸಿಕೊಂಡಿತು.

ಭಾರತೀಯರ ಗೆಲುವನ್ನು ಭಾರಿ ಸಡಗರದೊಂದಿಗೆ ಆಚರಿಸಲಾಯಿತು. ದೇಶದ ’ಬಿ’ ತಂಡಕ್ಕೂ  ಸರಿಸಾಟಿಯಾಗಿ ಏಷ್ಯಾದಲ್ಲಿ ಯಾರೂ ಇಲ್ಲ ಎಂಬುದು ಈ ಸಡಗರವನ್ನು ಇಮ್ಮಡಿಗೊಳಿಸಿತು! ಈ ಕ್ರೀಡಾಪಟುಗಳ ಬಗ್ಗೆ ಪ್ರತಿಭೆ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಆದರೆ ಒಟ್ಟಾರೆ ದೇಶದ ಅತ್ಲೀಟ್‌ಗಳ ಗುಣಮಟ್ಟದ ಬಗ್ಗೆ ಯೋಚಿಸಿದರೆ ವಿಷಾದದ ಹೊದಿಕೆ ಮೈದಾನವೆಲ್ಲ.
ಭಾರತೀಯ ರಿಲೇ ತಂಡ ೩:೩೩:೦೦ ನಿಮಿಷಗಳೊಳಗೆ ಗುರಿ ಮುಟ್ಟಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನೇನೋ ಪಡೆದುಕೊಂಡಿದೆ. ಆದರೆ ಮಾಸ್ಕೋದಲ್ಲಿ ಕತೆಯೇನು? ಈವರೆಗೆ ನಡೆದ ೨೦ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಈ ವಿಭಾಗದಡಿ ಭಾರತಕ್ಕೆ ದಕ್ಕಿದ ೯ನೇ ಚಿನ್ನದ ಪದಕವಿದು. ಅದೇ ವಿಶ್ವ ಮಟ್ಟದಲ್ಲಿ?

ಚೀನಾದ ಗುಂಗುಜೌವ್‌ನಲ್ಲಿ ೨೦೧೦ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ೪*೪೦೦ ಮೀ ರಿಲೇ ವಿಭಾಗದಲ್ಲಿ ಭಾರತೀಯ ಹುಡುಗಿಯರು ಚಿನ್ನದ ಪದಕ ಜಯಿಸಿದ್ದರು. ಆ ಸ್ಪರ್ಧೆಯಲ್ಲಿ ಮಂಜಿತ್ ಕೌರ್, ಸಿನಿ ಜೋಸ್, ಅಶ್ವಿನಿ ಅಕ್ಕುಂಜಿ ಮತ್ತು ಮಂದೀಪ್ ಕೌರ್ ಅವರಿದ್ದ ರಿಲೇ ತಂಡ ೩:೨೯:೦೨ ನಿಮಿಷಗಳಲ್ಲಿ ಗುರಿ ಮುಟ್ಟಿತ್ತು. ಒಟ್ಟಾರೆ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ೩:೩೧:೮೧ ನಿಮಿಷಗಳಲ್ಲಿ ತಮ್ಮ ಓಟ ಮುಗಿಸಿದ್ದವು. ಅಂದರೆ ಪುಣೆಯಲ್ಲಿ ಗೆದ್ದು ಬೀಗಿದ ರಿಲೇ ತಂಡದ ಪ್ರದರ್ಶನ ಏಷ್ಯನ್ ಗೇಮ್ಸ್‌ನಲ್ಲಿ ಬಂದಿದ್ದರೆ ಭಾರತ ಪದಕ ತಪ್ಪಿಸಿಕೊಳ್ಳುತ್ತಿತ್ತು.

ಈಗ ಭಾರತೀಯರ ಮನಸ್ಥಿತಿಗೆ ಬರೋಣ, ರಿಲೇ ಸ್ಪರ್ಧೆಯಲ್ಲಿ ಪ್ರಸಿದ್ಧ ಆಟಗಾರರ ಅನುಪಸ್ಥಿತಿಯಲ್ಲಿಯೂ ಭಾರತ ಪದಕ ಗೆದ್ದಿತು ಎಂದು ಭಾರತೀಯ ಅಥ್ಲೇಟಿಕ್ಸ್ ಫೆಡರೇಶನ್ ಕುಣಿದು ಕುಪ್ಪಳಿಸಿದೆ. ಖ್ಯಾತನಾಮರಿಲ್ಲದೆ ೩:೩೦ ನಿಮಿಷಗಳೊಳಗೆ ರಿಲೇ ತಂಡ ಗುರಿ ತಲುಪಿದ್ದೇ ಆಗಿದ್ದರೆ ಅದು ಮೆಚ್ಚುಗೆಗೆ ಪಾತ್ರ. ಆದರೆ ಈ ತಂಡ ಗುರಿ ಮುಟ್ಟಿದ್ದು ೩:೩೨ ನಿಮಿಷಗಳ ಬಳಿಕ. ಗುಂಗುಜೌವ್‌ನಲ್ಲಿ ಪದಕ ಗೆದ್ದ ಸಮಯದಿಂದ ಹೆಚ್ಚು ಕಡಿಮೆ ೨ ನಿಮಿಷಗಳ ನಂತರ. ಈ ಸ್ಪರ್ಧೆಯ ವಿಶ್ವದಾಖಲೆ ೩:೧೫:೧೭ ನಿಮಿಷ. ಈಗ ಹೇಳಿ, ಭಾರತದ ಅತ್ಲೀಟ್‌ಗಳ ಗುಣಮಟ್ಟ ಎತ್ತ ಸಾಗುತ್ತಿದೆ? ಕ್ಷಣಿಕ ಗೆಲುವಿಗೆ ಕೇಕೆ ಹಾಕಿ ಕುಣಿದು ಕುಪ್ಪಳಿಸಬೇಕೆ? ಅಥವಾ ವಿಶ್ವ ಮಟ್ಟದಲ್ಲಿನ ಪದಕದ ಕನಸಿನಿಂದ ನಿಧಾನವಾಗಿ ದೂರವಾಗುತ್ತಿರುವ ಓಟಗಾರರ ಬಗ್ಗೆ ವಿಷಾದ ಪಡಬೇಕೆ?

ಭಾರತೀಯ ಅತ್ಲೇಟಿಕ್ಸ್ ಲೋಕದ ಮಟ್ಟಿಗೆ ಒಲ್ಡ್ ಈಸ್ ಗೋಲ್ಡ್ ಅನ್ನುವುದು ಅಕ್ಷರಶಃ ಸತ್ಯ. ೧೯೫೧ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಗೆದ್ದ ಪದಕಗಳ ಸಂಖ್ಯೆ ೩೪. ೨೦೦೬ರಲ್ಲಿ ದೋಹಾದಲ್ಲಿ ನಡೆದ ಇದೇ ಕ್ರೀಡಾಕೂಟದಲ್ಲಿ ಕೇವಲ ೯ ಪದಕ ಗೆದ್ದಿದ್ದ ಅಥ್ಲೀಟ್‌ಗಳು ೨೦೧೦ರಲ್ಲಿ ೧೨ ಪದಕಗಳಿಗೆ ಕೊರಳೊಡ್ಡಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಪದಕ ಮಂಟಪದ ಹತ್ತಿರ ಸುಳಿಯುವ ಪ್ರದರ್ಶನ ಹೊಮ್ಮಿರುವುದೇ ಒಂದೆರಡು ಬಾರಿ. ಪೊಡಿಯಂ ಫಿನಿಶ್ ಇಲ್ಲವೇ ಇಲ್ಲ.

’ಹಾರುವ ಸಿಖ್’ ಬಿರುದಾಂಕಿತ ಮಿಲ್ಕಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ೪೫.೬ ಸೆಕೆಂಡ್‌ನಲ್ಲಿ ೪೦೦ ಮೀಟರ್ ಓಡಿ ಕೂದಲೆಳೆಯಲ್ಲಿ ಕಂಚಿನ ಪದಕ ವಂಚಿತರಾಗಿದ್ದರು. ಇದು ನಡೆದದ್ದು ೧೯೬೦ರಲ್ಲಿ. ಆ ಬಳಿಕದ ೫೩ ವರ್ಷಗಳ ಭಾರತೀಯ ಅತ್ಲೇಟಿಕ್ಸ್‌ನ ಇತಿಹಾಸದಲ್ಲಿ ಕೇವಲ ಇಬ್ಬರು ಮಾತ್ರ ೪೬ ಸೆಕೆಂಡ್‌ಗಳೊಳಗೆ ೪೦೦ ಮೀ. ಓಡಿದ್ದಾರೆ. ಅದೂ ೧೯೮೮ರಲ್ಲಿ ಪರಮ್ ಜಿತ್ ಸಿಂಗ್ ಮತ್ತು ೨೦೦೪ರಲ್ಲಿ ಕೆ ಎಮ್ ಬಿನು. ಬಿನು ೪೫.೪೮ ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದು ರಾಷ್ಟ್ರೀಯ ದಾಖಲೆ. ಪುಣೆ ಏಷ್ಯನ್ ಅಥ್ಲೇಟಿಕ್‌ನಲ್ಲಿ ೪೦೦ ಮೀ. ಓಡಿದ ಭಾರತದ ಪಿ ಕೆ ಮಹಮ್ಮದ್ ಗುರಿ ಮುಟ್ಟಿದ್ದು ೪೬.೭೧ ಸೆಕೆಂಡ್‌ನಲ್ಲಿ!
ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ೧೦೦ ಮೀಟರ್ ದೂರವನ್ನು ೯.೫೮ ಸೆಕೆಂಡ್‌ಗಳಲ್ಲೇ ಕ್ರಮಿಸಿದ್ದು ದಾಖಲೆ. ಈ ವರ್ಷ ಭಾರತ ಕಂಡ ಅತ್ಯಂತ ವೇಗದ ಓಟಗಾರ (ಅನಿರುದ್ಧ ಕೆ ಗುಜ್ಜರ್) ೧೦೦ ಮೀಟರ್ ಓಡಲು ತೆಗೆದುಕೊಂಡ ಸಮಯ ೧೦.೬೧ ಸೆಕೆಂಡ್. ಇತಿಹಾಸವನ್ನು ಗಮನಿಸಿದರೆ ಲೆವಿ ಪಿಂಟೋರ ಹೆಸರು ನಮ್ಮ ನಿರ್ಲಕ್ಷ್ಯದ ನಡುವೆಯೂ ಫಳಫಳನೆ ಹೊಳೆಯುತ್ತದೆ. ಲೆವಿ ಪಿಂಟೋ ೧೯೫೧ರ ಏಷ್ಯನ್ ಗೆಮ್ಸ್‌ನಲ್ಲಿ ೧೦೦ ಮೀ. ದೂರವನ್ನು ಕೇವಲ ೧೦.೮ ಸೆಕೆಂಡ್‌ನಲ್ಲಿಯೇ ಕ್ರಮಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಆಗ ಇದ್ದ ವಿಶ್ವದಾಖಲೆ ೧೦.೨ ಸೆಕೆಂಡ್‌ಗಳು. ಇದೇ ಕೂಟದಲ್ಲಿ ಪಿಂಟೋ ೨೦೦ ಮೀ. ದೂರವನ್ನು ೨೨ ಸೆಕೆಂಡ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಒಂದು ಆಶಾದಾಯಕ ಬೆಳವಣಿಗೆಯೆಂದರೆ ಈ ವರ್ಷ ಪ್ರತೀಕ್ ನಿನ್ನಾವೆ ೨೧.೬೫ ಸೆಕೆಂಡ್‌ನಲ್ಲಿ ಈ ಅಂತರವನ್ನು ಕ್ರಮಿಸಿದ್ದಾರೆ. ೨೦೦ ಮೀ.ನ ವೇಗದ ಓಟದ ದಾಖಲೆಯ ಅಧಿಪತಿ ಬೋಲ್ಟ್. ಅವರು ೧೯.೧೯ ಸೆಕೆಂಡ್‌ನಲ್ಲೇ ಈ ದೂರವನ್ನು ಪೂರೈಸಿದ್ದಾರೆ. ಒಟ್ಟಿನಲ್ಲಿ ೨೦ ಸೆಕೆಂಡ್‌ನಲ್ಲಿ ೨೦೦ ಮೀ. ಓಡಿಲ್ಲ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಗನ ಕುಸುಮ.

೮೦೦ ಮೀ. ಓಟದಲ್ಲಿ ಭಾರತ ಕಂಡ ವೇಗದ ಓಟಗಾರ ಶ್ರೀರಾಮ್ ಸಿಂಗ್. ಅವರು ೧೯೭೬ರಲ್ಲಿ ನಡೆದ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ನಿಗದಿತ ದೂರವನ್ನು ೧:೪೫:೭೭ ಸೆಕೆಂಡ್‌ನಲ್ಲಿ ಕ್ರಮಿಸಿ ಫೈನಲ್‌ನಲ್ಲಿ ೭ನೇ ಸ್ಥಾನ ಪಡೆದಿದ್ದರು. ಇದು ಆ ಕಾಲದ ಏಷ್ಯನ್ ದಾಖಲೆ. ದುರಂತವೆಂದರೆ ಭಾರತಕ್ಕೆ ಅದು ಇನ್ನೂ ರಾಷ್ಟ್ರೀಯ ದಾಖಲೆಯೇ! ಈ ವರ್ಷ ೮೦೦ ಮೀ ಓಡಲು ಸಾಜೀಶ್ ಜೋಸೆಫ್ ತೆಗೆದುಕೊಂಡ ಸಮಯ ೧:೪೯:೦೪.

೩೦೦೦ ಮೀನ ಕಥೆ ಕೂಡ ಭಿನ್ನವಾಗಿಲ್ಲ. ಇದರಲ್ಲಿನ ರಾಷ್ಟ್ರೀಯ ದಾಖಲೆ ಗೋಪಾಲ್ ಸೈನಿ ಹೆಸರಲ್ಲಿದೆ. ಅವರು ೧೯೮೧ರಲ್ಲಿ ೮:೩೦:೮೮ ನಿಮಿಷದಲ್ಲಿ ಗುರಿ ತಲುಪಿದ್ದರು. ಇದೆ ದೂರ ಕ್ರಮಿಸಲು ೮:೫೪:೪೨ ಸೆಕೆಂಡ್‌ಗಳನ್ನು ತೆಗೆದುಕೊಂಡ ಜೈವೀರ್ ಸಿಂಗ್ ಈ ವರ್ಷದ ವೇಗದ ಓಟಗಾರ!

ಮಹಿಳೆಯರ ಸಾಧನೆಯು ಕೂಡ ಹೆಚ್ಚು ಕಮ್ಮಿ ಇದೇ ಟ್ರ್ಯಾಕ್‌ನಲ್ಲಿ ಸಾಗಿದೆ. ೧೦೦ ಮೀ ಓಟದ ರಾಷ್ಟ್ರೀಯ ದಾಖಲೆ ನಿರ್ಮಾಣವಾಗಿದ್ದು ೨೦೦೦ದಲ್ಲಿ. ಅಂದು ರಚಿತಾ ಮಿಸ್ತ್ರಿ ೧೧:೩೮ ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು. ಈ ವರ್ಷ ೧೦೦ ಮೀ. ದೂರವನ್ನು ಅತ್ಯಂತ ವೇಗವಾಗಿ ಓಡಿದ ದಾಖಲೆ ಆಶಾ ರಾಯ್ ಅವರ ಹೆಸರಲ್ಲಿದ್ದು ೧೧:೮೬ ಸೆಕೆಂಡ್‌ನಲ್ಲಿ ಅವರು ಗುರಿ ಮುಟ್ಟಿದ್ದರು.

ಕನ್ನಡತಿ ಎಂ. ಆರ್. ಪೂವಮ್ಮ ೫೨.೮೫ ನಿಮಿಷದಲ್ಲಿ ೪೦೦ ಮೀ. ಓಡಿದ್ದೆ ಈ ವರ್ಷದ ನಮ್ಮ ದೊಡ್ಡ ಸಾಧನೆ. ಈ ವಿಭಾಗದಲ್ಲಿ ಮಂಜೀತ್ ಕೌರ್ ೨೦೦೪ರಲ್ಲಿ ೫೧.೦೫ ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದರು. ವಿಶ್ವದ ಪ್ರಮುಖ ಕ್ರೀಡಾಕೂಟದಲ್ಲಿ ಗೌರವಾರ್ಹವಾಗಿ ಓಟ ಮುಗಿಸಲು ೫೦ ನಿಮಿಷದೊಳಗೆ ನಿಗದಿಯ ಗುರಿ ಮುಟ್ಟಲೇ ಬೇಕು.
೪೦೦ ಮೀ. ಹರ್ಡಲ್ಸ್ ಎಂದರೆ ತಕ್ಷಣ ನೆನಪಾಗುವ ಹೆಸರು ಪಿ. ಟಿ. ಉಷಾ. ಅವರು ೧೯೮೪ರ ಲಾಸ್ ಎಂಜಲೀಸ್ ಒಲಿಂಪಿಕ್ಸ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿಯದೆ ಅವರಿಗೆ ಗೌರವ ಕೊಡಬೇಕು ಎಂದು ನಮ್ಮ ಓಟಗಾರ್ತಿಯರು ನಿರ್ಧರಿಸಿರುವ ಹಾಗಿದೆ! ಅವರು ತಮ್ಮ ಗುರಿಯನ್ನು ೫೫.೪೨ ಸೆಕೆಂಡ್‌ನಲ್ಲಿ ತಲುಪಿದ್ದರು. ಈ ದಾಖಲೆಗೆ ೩೦ವರ್ಷ. ಈ ದಾಖಲೆಯ ಬಳಿ ಸುಳಿಯುವ ಮತ್ತೊಬ್ಬ ಆಟಗಾರ್ತಿಯನ್ನು ದೇಶ ಕಾಣಲೇ ಇಲ್ಲ. ಈ ವರ್ಷ ಗುರಿ ತಲುಪಲು ಇಲವರಸಿ ಅವರು ತೆಗೆದುಕೊಂಡಿದ್ದ ಸಮಯ ಬರೋಬ್ಬರಿ ೧:೦೦:೭೦ ನಿಮಿಷಗಳು!

ಲಾಂಗ್ ಜಂಪ್‌ನಲ್ಲಿಯೂ ಕೂಡ ಅಂಜು ಬಾಬಿ ಜಾರ್ಜ್ ೨೦೦೪ರಲ್ಲಿ ನಿರ್ಮಿಸಿದ್ದ ೬:೮೩ ಮೀಟರ್ ದೂರ ಜಿಗಿತದ ಸಾಧನೆಯ ಸಮೀಪ ಸುಳಿಯುವ ಜಿಗಿತವು ಮತ್ತೆ ಮೂಡಿ ಬಂದಿಲ್ಲ. ಮಯೂಖಾ ಜಾನಿ ೬:೪೯ ಮೀಟರ್ ದೂರ ಹಾರಿದ್ದೆ ಈ ವರ್ಷದ ಮಟ್ಟಿಗೆ ನಮ್ಮ ದೊಡ್ಡ ಜಿಗಿತ!

ಟೆನ್ನಿಸ್, ಬ್ಯಾಡ್ಮಿಂಟನ್, ಶೂಟಿಂಗ್, ಬಾಕ್ಸಿಂಗ್, ಕುಸ್ತಿ, ಬಿಲ್ಗಾರಿಕೆ ಸ್ಪರ್ಧೆಗಳಲ್ಲಿ ಭಾರತ ಪ್ರವರ್ಧಮಾನ ಶಕ್ತಿಯಾಗಿ ಬೆಳೆಯುತ್ತಿದೆ. ಆದರೆ ಟ್ರ್ಯಾಕ್ ಅಂಡ್ ಫಿಲ್ಡ್‌ನಲ್ಲಿ ನಮ್ಮದು ಹಿಮ್ಮುಖ ಓಟ. ಒಮ್ಮೆ ಮುಗಿಲೆತ್ತರ ಹಾರಿದ್ದ ನಮ್ಮ ಕೀರ್ತಿ ಪತಾಕೆ; ಈಗ ನೆಲಕ್ಕುರಳಿ ಬಿದ್ದ ಅವಸ್ಥೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಾತಿಗಿಂತಲು ನಮ್ಮ ಓಟಗಾರರೇ ಹಾಕಿಕೊಟ್ಟಿರುವ ದಾಖಲೆಗಳ ಮೈಲಿಗಲ್ಲನ್ನು ದಶಕಗಳು ಉರಳಿದರು ಮುರಿಯಲಾಗದೆ, ಆ ದಾಖಲೆಗಳನ್ನು ಉತ್ತಮ ಪಡಿಸಲಾಗದೆ, ಜಾಗತಿಗ ಕ್ರೀಡಾಕೂಟಗಳಿಗೆ ಆರ್ಹತೆ ಪಡೆಯಲಾಗದಿದ್ದರು ಗೆದ್ದ ಭಾವದಿಂದ ಬೀಗುವ ಸರದಿ ಮುಂದುವರಿಯುತ್ತಲೇ ಇದೆ. ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಗದೆ ಅದು ಮೈಲಿಗಲ್ಲಾಗಿಯೇ ಉಳಿಯುತ್ತಿದೆ.

Tuesday, June 11, 2013

ಸರ್ವ ರೋಗಕ್ಕೂ ಮೋದಿಯೇ ಮದ್ದಲ್ಲ

ಅಡಾಲ್ಫ್ ಹಿಟ್ಲರ್, ಆಧುನಿಕ ಜಗತ್ತು ಕಂಡ ಮಹಾನ್ ನರ ಹಂತಕ; ಆದರೂ ೧೯೩೦ರ ದಶಕದಲ್ಲಿ ಜರ್ಮನಿಗೆ ಹೊಸ ಚೈತನ್ಯ ತುಂಬಿದ್ದ. ಮಾವೋ ತ್ಸೆ ತುಂಗ್, ಲಕ್ಷ ಗಟ್ಟಲೆ ಹೆಣಗಳ ರಾಶಿ ಹಾಕಿ ಅದರ ಸಮಾಧಿಯ ಮೇಲೆ ಚೀನಾದ ಪ್ರಗತಿ ಪಥ ರೂಪಿಸಿದ್ದ. ಜೋಸೆಫ್ ಸ್ಟಾಲೀನ್, ಕೈಗಾರಿಕೀಕರಣದ ದೊಂದಿ ಹಿಡಿದು ರಷ್ಯಾ ಸಾಮ್ಯಾಜ್ಯದ ಕತ್ತಲನ್ನು ಒದ್ದೋಡಿಸುವುದಾಗಿ ಲೆಕ್ಕವಿಲ್ಲದಷ್ಟು ಪ್ರಜೆಗಳನ್ನು ಕಾಣದ ಲೋಕಕ್ಕೆ ಕಳುಹಿಸಿದ್ದ.

ಪ್ರಗತಿ, ಅಭಿವೃದ್ಧಿ, ವಿಕಾಸ, ರಕ್ಷಣೆ ಮುಂತಾದ ಪದ ಮತ್ತು ಇದರ ತಪ್ಪು ವ್ಯಾಖ್ಯಾನ ತೆಗೆದಷ್ಟು  ಜೀವ, ಮಾಡಿದಷ್ಟು ಉತ್ಪಾತಗಳನ್ನು ಬಡತನ, ದಾರಿದ್ರ್ಯಗಳು ಕೂಡ ತೆಗೆದಿಲ್ಲ, ಮಾಡಿಲ್ಲ. ವಿಶ್ವ ವಿಖ್ಯಾತ ಚಿಂತಕ ಲಿಯೋ ಟಾಲ್‌ಸ್ಟಾಯ್‌ನ ಪ್ರಸಿದ್ಧ ಕೃತಿ ಅನ್ನಾ ಕಾರ್ನಿನಾದ ಮೊದಲ  ಸಾಲಿನಲ್ಲೆ, ಸುಖಿ ಕುಟುಂಬಗಳೆಲ್ಲ ಒಂದೇ ರೀತಿ, ಆದರೆ ಪ್ರತಿ ದುಃಖಿ ಕುಟುಂಬ ಕೂಡ ತನ್ನ ದುಃಖಕ್ಕೆ ತನ್ನದೆ ಆದ ಸಂಗತಿಗಳನ್ನು ಹೊಂದಿರುತ್ತದೆ ಎಂದು ಹೇಳಿದ ಮಾತು ಅಭಿವೃದ್ಧಿಯ ವ್ಯಾಖ್ಯಾನ ಮತ್ತು ಲೆಕ್ಕಾಚಾರದ ಸಮಯದಲ್ಲಿ ನೆನಪು ಮಾಡಿಕೊಳ್ಳಲೇ ಬೇಕು.

ರೋಗಗ್ರಸ್ತ ದೇಶಗಳಾಗಿದ್ದ ಜರ್ಮನಿ, ಚೀನಾ, ರಷ್ಯಾಗಳಿಗೆ ಹೊಸ ಕಸುವು, ಕನಸು ಮತ್ತು ಹೊಸ ದಾರಿ ತೋರಿದ್ದ ಈ ಮಹಾನ್ ಸರ್ವಾಧಿಕಾರಿಗಳು ಇದಕ್ಕಾಗಿ ಜೀವಗಳ ಲೆಕ್ಕದಲ್ಲಿ ಕಟ್ಟಿದ್ದ ಕಂದಾಯವನ್ನು ಈ ಜಗತ್ತು ಮರೆಯಲು ಸಾಧ್ಯವೇ? ಈ ರಾಷ್ಟ್ರಗಳು ಒಂದೆರಡು ದಶಕಗಳ ಕಾಲ ಅಭಿವೃದ್ಧಿಯ ಅಲೆಯ ಮೇಲೆ ತೇಲಾಡಿದರೂ ಕೂಡ ದೇಶದ ಸರ್ವ ಸಮಸ್ಯೆಗಳಿಗೆ ಮದ್ದು ಅರೆಯಲು ಅವರಿಂದ ಸಾಧ್ಯವಾಯಿತೇ? ಇತ್ತ ಕಮ್ಯುನಿಸಂ, ಸಮಾಜವಾದಿ, ಪ್ರಜಾ ಪ್ರಭುತ್ವ ಮುಂತಾದ ತತ್ವ ಸಿದ್ದಾಂತಗಳ ಮೂಸೆಯಲ್ಲಿ ಅರಳಿದ ವಿಶ್ವದ ಬಹುತೇಕ ದೇಶಗಳು ಸಮಸ್ಯೆ ಮುಕ್ತವಾಗಿವೆಯೇ? ವಿನ್‌ಸ್ಟನ್ ಚರ್ಚಿಲ್, ಅಬ್ರ್ರಾಹಂ ಲಿಂಕನ್, ಜಾನ್ ಎಫ್ ಕೆನಡಿ, ಜವಹಾರ್ ಲಾಲ್ ನೆಹರೂ, ನೆಲ್ಸಾನ್ ಮಂಡೇಲಾ, ಫಿಡೆಲ್ ಕ್ಯಾಸ್ಟ್ರೋ ಮುಂತಾದ ವಿಭಿನ್ನ ಹಿನ್ನೆಲೆಯ ಸಾಲು ಸಾಲು ನಾಯಕರನ್ನು ಕಂಡ ಜಗತ್ತು ಇಂದಿಗೆ ಸಮಸ್ಯೆ ಮುಕ್ತವೇ ಆಗಿರಬೇಕಿತ್ತು, ಆದರೆ ಆಗಿಲ್ಲ. ಇನ್ನೂ ಕೂಡ ದೇಶಗಳು ತಮ್ಮ ’ನಿರ್ಮಾಣ ಕಾಮಗಾರಿ’ಯನ್ನು ಮುಂದುವರಿಸುತ್ತಲೇ ಇವೆ.

ಜಗತ್ತಿನ ಎಲ್ಲ ಸಮಸ್ಯೆಗಳು ಪರಿಹಾರ ಕಂಡಿದ್ದು ’ರಾಮರಾಜ್ಯ’ದ ಕಾಲದಲ್ಲಿ ಮಾತ್ರವೇ ಇರಬೇಕು!

ಕಾಲದ ಹರಿವಿನ ಜೊತೆಗೆ ತೇಲು ತೇಲುತ್ತಲೇ ಬರುವುದು ಬಡತನ, ನಿರುದ್ಯೋಗ, ಅಪೌಷ್ಠಿಕತೆ, ಸಂಪತ್ತಿನ ಅಸಮಾನ ಹಂಚಿಕೆ ಮುಂತಾದ ಸಮಸ್ಯೆಗಳು. ಈ ಸಮಸ್ಯೆಗಳಿಂದ ಮುಕ್ತವಾಗುವುದು ಎಲ್ಲ ಕಾಲದಲ್ಲಿಯೂ ಯಾವುದೇ ರೀತಿಯ, ಯಾರದ್ದೆ ಸರ್ಕಾರವಿದ್ದರೂ  ಅದಕ್ಕೊಂದು ಸವಾಲು. ಅದೇ ರೀತಿ ಸರ್ಕಾರಗಳು ಕೂಡ ಇದನ್ನು ನಿರ್ಮೂಲನೆ ಮಾಡುವ ತಮ್ಮ ಬದ್ಧತೆಯ ಬಗ್ಗೆ ನಿರಂತರವಾಗಿ ಹೇಳಿಕೆ ನೀಡುತ್ತಲೇ ಇರುತ್ತವೆ. ಆದರೆ ಸಮಸ್ಯೆಗಳೇ ರಾಜಕೀಯದ ಒಲೆ ಉರಿಯಲು ಬೇಕಾದ ಕಟ್ಟಿಗೆ ಆಗಿರುವುದರಿಂದ ಈ ಕಟ್ಟಿಗೆ ಸಿಗದಂತೆ ಮಾಡುವ ಪ್ರಯತ್ನಕ್ಕೆ ಬಹುತೇಕ ಸರ್ಕಾರಗಳು ಗಂಭೀರವಾಗಿ ಯತ್ನಿಸುವುದೇ ಇಲ್ಲ. ಸರ್ಕಾರಗಳಿಗೆ ಅಡುಗೆಗೂ ಈ ಕಟ್ಟಿಗೆ ಬೇಕು, ಚಳಿ ಕಾಯಿಸಲು ಕೂಡ ಆಗಬೇಕು ಅನ್ನುವ ದುಸ್ತರ ಕಾಲಬಿಂದುವಿನಲ್ಲಿ ನಾವು ನಿಂತಿದ್ದೇವೆ.

ಇದೆಲ್ಲವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿಯ ಭಕ್ತರಿಗೆ, ಆರಾಧಕರಿಗೆ ಹೇಳುವವರು ಯಾರು? ಇಂದು ದೇಶದ ಬಗಲಲ್ಲಿ ನಿಗಿನಿಗಿ ಕೆಂಡವಾಗಿರುವ ನೂರಾರು ಸಮಸ್ಯೆಗಳ ಹೆಸರು ಹೇಳಿ, ತಕ್ಷಣವೇ ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗುತ್ತಲೇ ಇದೆಲ್ಲ ಮಂಗಮಾಯ ಅನ್ನುತ್ತಾರೆ ಈ ಭಕ್ತ ಮಹಾಶಯರು!

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿ ಎಂದು ದೇಶದ ಪ್ರಜೆಗಳು ನಿರ್ಧಾರ ಕೈಗೊಂಡಿದ್ದೇ ಆದರೆ ಅದು ತಪ್ಪು ಎಂದು ಹೇಳಲಾಗದು. ಕಾಂಗ್ರೆಸ್‌ನ ನಿಂತ ನೀರಿನಂತ ನಾಯಕತ್ವ ಕಂಡ ದೇಶಕ್ಕೆ ಮೋದಿ ಒಂದಿಷ್ಟು ಚಲನ ಶೀಲ ನಾಯಕತ್ವ ನೀಡಬಹುದು ಎಂಬುದರ ಸೂಚನೆಗಳೇನೋ ಇವೆ.

ದೇಶದ ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಎಂಬ ತಳ ಒಡೆದ ಪಕ್ಷಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಮೋದಿಗೆ ಪೂರಕ. ಆದರೆ ಇದು ಯಾವ ರಾಜ್ಯದಲ್ಲಿ ಬಿಜೆಪಿಗೆ ಹೇಗೆ ಲಾಭ ತರಲಿದೆ ಎಂದು ಕೇಳಿದರೆ ಮೇಲೆ ಕೆಳಗೆ ನೋಡುತ್ತಾರೆ ಈ ಮೋದಿವಾದಿಗಳು.

ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟಿಕೊಂಡಿದೆ. ಆದರೆ ಬಿಜೆಪಿಗೆ ಕನಿಷ್ಠ ಪಕ್ಷ ೨೦೦ ಲೋಕಸಭಾ ಸ್ಥಾನದಲ್ಲಿ ಗೆಲುವಿನ ದಡ ತಲುಪಬೇಕಾದರೆ ಕಾಂಗ್ರೆಸ್ ವಿರೋಧಿ ಸುನಾಮಿಯೇ ಹುಟ್ಟಿಕೊಳ್ಳಬೇಕು. ಆದರೆ ಬಿಜೆಪಿ ತನ್ನ ಒಡಲಲ್ಲೆ ಹುಟ್ಟಿರುವ ಸುಳಿಗಳಿಂದ ಬಸವಳಿದು ಕುಳಿತಿದೆ.

ಯಾವುದೆ ಚಿಂತನೆ, ವ್ಯಕ್ತಿಯ ಸಮಯ ಬಂದಾಗ ಕಟ್ಟಿ ಹಾಕಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಹಿರಿಯರು. ಆ ಹಿನ್ನೆಲೆಯಲ್ಲಿ ಇದೀಗ ಮೋದಿಯ ಕಾಲ ಬಂದಿದೆ ಎಂಬುವುದು ಮೋದಿ ಭಕ್ತರ ನಂಬಿಕೆ. ಮೋದಿಯ ಕಾಲ ಬಂದಿರುವುದು ನಿಜ, ಆದರೆ ಇದು ನವಮಾಸ ತುಂಬಿಯಾದ ಸಹಜ ಹೆರಿಗೆಯೋ ಅಲ್ಲ ಸಿಜೇರಿಯನ್ ಹೆರಿಗೆಯೋ ಎಂದು ಹೇಳಲು ಇನ್ನು ಕಾಲ ಪಕ್ವವಾಗಿಲ್ಲ. ಈ ವರ್ಷದ ಅಂಚಿನ ಅಸುಪಾಸಿನಲ್ಲಿ ನಡೆಯುವ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಈ ಬಗ್ಗೆಗಿನ ಸುಳಿವು ಸಿಗಬಹುದು.

ಮೋದಿ ಮತ್ತು ಅವರ ಭಕ್ತರು ಪ್ರತಿಪಾದಿಸುವ ’ಗುಜರಾತ್ ಮಾದರಿ’ಯ ಆಡಳಿತದ ಘಮಘಮ ದೇಶದಾದ್ಯಂತ ಹರಡಬೇಕು. ಗುಜರಾತ್‌ನಂತೆಯೇ ದೇಶದ ಎಲ್ಲ ರಾಜ್ಯಗಳು, ಪ್ರದೇಶಗಳು ಅಭಿವೃದ್ಧಿಯಾಗಬೇಕು. ಆದರೆ ಸಂಪಿಗೆ, ಮಲ್ಲಿಗೆಯ ಪರಿಮಳ ಕೂಡ ಕೆಲವರಿಗೆ ತಲೆ ನೋವು ತರುತ್ತದೆ ಎಂಬ ಅರಿವನ್ನು ಕಳೆದುಕೊಳ್ಳಲಾಗದು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರೇ ಗೆದ್ದರು, ಯಾರೇ ಪ್ರಧಾನಿಯಾದರೂ ದೇಶವಂತೂ ಸಮಸ್ಯೆ ರಹಿತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈಗ ಮುನ್ನೆಲೆಯಲ್ಲಿರುವ ನಾಯಕರಲ್ಲಿ ದೇಶದ ಬಗೆಗಿನ ತಳಸ್ಪರ್ಶಿ ಅರಿವು, ದೂರದೃಷ್ಟಿಯ ನಿಲುವು ನಾಪತ್ತೆಯಾಗಿದೆ. ಗೆದ್ದಲ ಗೂಡಗಿರುವ ಕಾಂಗ್ರೆಸ್, ಗೊಂದಲಗಳ ಬುಟ್ಟಿಯಾಗಿರುವ ಬಿಜೆಪಿ ಎರಡೂ ದೇಶಕ್ಕೆ ಸಮರ್ಥ ದಿಕ್ಕು ದೆಸೆ ನೀಡಬಹುದು ಎಂದು ಭಾವಿಸುವ ಸ್ಥಿತಿಯಲ್ಲಿ ಪ್ರಜ್ಞಾವಂತ ನಾಗರಿಕರಿಲ್ಲ.

ಅದ್ದರಿಂದ ಮೋದಿಯ ಪೂಜಾರಿಗಳು ಇನ್ನಾದರೂ ಕಲ್ಪನಾ ಲೋಕದಲ್ಲಿ ವಿಹರಿಸುವುದನ್ನು ಬಿಟ್ಟು ವಾಸ್ತವದ ಕಣ್ಣಲ್ಲಿ ಮೋದಿಯನ್ನು ನೋಡುವ ಪ್ರಯತ್ನ ಮಾಡಿದ್ದೇ ಆದರೆ ದೇಶದ ಆರೋಗ್ಯಕ್ಕೆ ಒಳ್ಳೆಯದು.

ನರೇಂದ್ರ ಮೋದಿ ದೇಶದ ಸರ್ವ ರೋಗಕ್ಕೂ ಮದ್ದಾಗಲಾರರು, ಆದರೆ ಕಾಂಗ್ರೆಸ್ ಎಂಬ ಕಾಯಿಲೆಗೆ ಮದ್ದಾಗಲು ಬಹುದೇನೋ!

ಹೇಳಲೇ ಬೇಕಾಗಿದ್ದು: 

ಮೇ ೮: ಕರ್ನಾಟಕ ವಿಧಾನ ಸಭಾ ಫಲಿತಾಂಶ ಪ್ರಕಟವಾಗಿ ಬಿಜೆಪಿ ಸೋತಿದ್ದ ದಿನ. ಮುಸ್ಸಂಜೆಯ ಹೊತ್ತು. ಆಶೋಕ ರಸ್ತೆಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯ ಆವರಣ. ವೆಂಕಯ್ಯ ನಾಯ್ಡು ಕರೆದಿದ್ದ ಪತ್ರಿಕಾಗೋಷ್ಠಿ. ಗೋಷ್ಠಿ ಮುಗಿದ ಬಳಿಕ ರಾಜ್ಯದಲ್ಲಿ ಬಿಜೆಪಿಯ ಆಗುಹೋಗುಗಳ ಬಗ್ಗೆ ಹತ್ತಿರದ ಅಂದಾಜಿದ್ದ ’ಪ್ರಧಾನ’ ನಾಯಕರೊಬ್ಬರು ಅಂಗ್ಲ-ಹಿಂದಿ ಮಾಧ್ಯಮಗಳ ಪತ್ರಕರ್ತರ ಜೊತೆ ಹೊಡೆಯುತ್ತಿದ್ದ ಹರಟೆಯಲ್ಲಿ ಆ ನಾಯಕ ಹೊರಡಿಸಿದ್ದ ಅಣಿಮುತ್ತು.

"ನಾವು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದೆವು. ಆದರೆ ಯಡಿಯೂರಪ್ಪರನ್ನು ಉಳಿಸಿಕೊಳ್ಳಲು ಅವರ ಜೊತೆ ರಾಜಿಯಾಗಲು ಮುದುಕ (ಎಲ್. ಕೆ. ಅಡ್ವಾಣಿ) ಒಪ್ಪಿಕೊಳ್ಳಲಿಲ್ಲ"

ಅಡ್ವಾಣಿಯ ಬಗೆಗಿನ ಅಸಹನೆ ಪಕ್ಷದ ಒಂದು ವಲಯದಲ್ಲಿ ಹೆಪ್ಪುಗಟ್ಟಿರುವುದು ಆ ನಾಯಕನ  ಮಾತುಗಳಲ್ಲಿ ಜಿನುಗುತ್ತಿತ್ತು. ಇದು ಬಿಜೆಪಿಯ ಅನೇಕ ನಾಯಕರ ಮನಸ್ಸಿಗೆ ಹಿಡಿದಿದ್ದ ಕನ್ನಡಿ ಎಂದೇ ಬಿಜೆಪಿಯನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಇಂತಹ ಒಡೆದ ಮನಸ್ಸುಗಳ, ನಿರ್ಲಜ್ಜ ನಡೆಯ ನೇತಾರರ ಹೊಸ ದಂಡು ಕಟ್ಟಿ ಬಿಜೆಪಿ ಭವಿಷ್ಯದಲ್ಲಿ ಬರ್ಕತ್ ಆಗಬಹುದೇ?  

Monday, January 7, 2013

ಅವಸರವಿಲ್ಲ ನನಗೆ


ಅವಸರವಿಲ್ಲ ನನಗೆ
ಮೆಲ್ಲನೆ, ಮೆಲ್ಲ ಮೆಲ್ಲನೆ
ಮೆಲ್ಲುವ ಸವಿ ಉಂಡೆಯಲಿ
ಮೆಲ್ಲನೆ, ನರ ನರಳುವ
ವಿಷವಿಕ್ಕಿ ಕೊಲ್ಲಬಹುದು ನೀನು

ಇರುಳು ಸರಿದು ಹಗಲಾಗಿ
ಹಗಲು, ಕರಿ ಚಾದರ ಹೊದ್ದು ಮಲಗುವ ಮುನ್ನ
ನೀನು-ನಾನು ಒಂದಾಗಬೇಕು, ನಾನು-ನೀನು ಬೇರೆಯಾಗಬೇಕು
ಎಂಬೆಲ್ಲ ಅವಸರವಿಲ್ಲ ನನಗೆ
ಮೆಲ್ಲನೆ... ಮೆಲ್ಲನೆ, ಕ್ಷಣ, ದಿನ, ವರುಷ
ಕಾಯಿಸಿ, ಕಾಯಿಸಿಯೇ ನನ್ನ ಇಲ್ಲವಾಗಿಸಬಹುದು

ಅವಸರವಿಲ್ಲ ನನಗೆ
ಬಿಟ್ಟು ಹೋದ ನಿನ್ನ
ಬಿಡದ ನೆನಪುಗಳ ನನ್ನ
ಆ ಕ್ಷಣವೇ
ಸತ್ತೇ ಬಿಡೋಣ ಅನ್ನಲು
ಸರಿಯಬಹುದು ನೀನು, ಮೆಲ್ಲ...ಮೆಲ್ಲನೆ
ನಿಧಾನವಾಗಿ... ದೂರ... ದೂರ
ನಭದಲಿ ತಾರೆ ಸರಿದಂತೆ, ಮಣ್ಣೊಳಗೆ ಹೆಣ
ಲೀನವಾದಂತೆ

ಅವಸರವಿಲ್ಲ ನನಗೆ
ಒಮ್ಮೆಲೆ ಸತ್ತು ಹೋಗಲು...
ಸಿದ್ದ ನಾ
ಸಾಯಲು, ಬೇಯಲು
ಕಾದು, ಕಾದು, ಮೆಲ್ಲ ಮೆಲ್ಲನೆ
ದಿನ ದಿನ, ಕ್ಷಣ ಕ್ಷಣ ಸಾಯಲು

ಕೊಲಬಹುದು ನೀನು
ನನ್ನ ಕೊಂದೆ ಬಿಡಬಹುದು ನೀನು
ಈಟಿ, ಭರ್ಜಿ, ಚಾಕು, ಚೂರಿ ಹಾಕದೆ
ಗುಂಡು, ಪಾಶನ ಇಕ್ಕದೆ
ಬಲು ಸುಲಭ ನಿನಗೆ,
ಹುಡುಕೊಂದು ನೆವ, ಪ್ರೀತಿ ತುಂಡರಿಸಲು
ನಿಧಾನ ವಿಷವೇರಿ
ಅವಸರವವಿಲ್ಲದೆ ನನ್ನ ಸಾಯಿಸಲು...!

Friday, November 23, 2012

'ನವೀನ’ರೂಪಿ ಬ್ರಹ್ಮಾಂಡ ಭ್ರಷ್ಟಾಚಾರ


೨೦೦೧ರ ಜುಲೈ. ಹೊಸ ಸರ್ಕಾರಕ್ಕೆ ವರ್ಷ ತುಂಬುವ ಸಂಭ್ರಮ. ಅದೇ ಸಂದರ್ಭದಲ್ಲಿ ಮೂವರು ಘಟಾನುಘಟಿ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ. ಕ್ಷಣಾರ್ಧದಲ್ಲೇ ಆ ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚನೆ. ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಅದಕ್ಷತೆ, ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದ ೧೨ ಸಚಿವರಿಗೆ ಗೇಟ್‌ಪಾಸ್. ತನ್ನ ಸಹೋದ್ಯೋಗಿಯೇ ಆಗಲಿ ಆಧಿಕಾರಶಾಹಿಯೇ ಆಗಲಿ ಯಾವುದೆ ಹಗರಣದ ಆರೋಪ ಕೇಳಿ ಬಂದದ್ದೆ ಆದರೆ ಆತನನ್ನು ಮನೆಗೆ ಕಳುಹಿಸಲು ಹಿಂದೆ ಮುಂದೆ ನೋಡದ ಒಬ್ಬ ವ್ಯಕ್ತಿ ಇಂದಿನ ರಾಜಕೀಯ ಕ್ಷೇತ್ರವನ್ನು ಆಳುತ್ತಿದ್ದಾನೆ, ಆತ ೧೨ ವರ್ಷದಿಂದ ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರೆ ನಂಬುವವರು ಯಾರು? ಅಂತಹ ಒಂದು ಆಶಾಕಿರಣವನ್ನು ಕೂಡ ಭ್ರಷ್ಟ್ಟಾಚಾರದ ಪ್ರಖರ ಪ್ರಭೆ ಇದೀಗ ಮಂಕಾಗಿಸಿದೆ.

ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗಿದ್ದ ಕ್ಲೀನ್ ಇಮೇಜ್‌ನ ದಂತ ಗೋಪುರ ಕುಸಿದು ಬಿದ್ದಿದೆ. ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಸಾಲಿಗೆ ಒಡಿಶಾ ಭರ್ಜರಿಯಾಗಿ ಎಂಟ್ರಿ ಮಾಡಿದ್ದು ಅಷ್ಟರಮಟ್ಟಿಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನವೀನ್ ಕಳೆದ ೧೨ ವರ್ಷಗಳಲ್ಲಿ ತನ್ನವರನ್ನು ಬಲಿಕೊಟ್ಟು ಕಾಪಾಡಿಕೊಂಡು ಬಂದಿದ್ದ ’ಭ್ರಷ್ಟತೆಯ ಅಸಹಿಷ್ಣು’ ಎಂಬ ಬಿರುದಿನ ಗುಳ್ಳೆ ಒಡೆದು ಕೀವುಗಳು ಹೊರಬರುತ್ತಿದೆ.
ಜೂನಿಯರ್ ಪಾಟ್ನಯಕ್ ೨೦೦೦ನೇ ಇಸವಿಯಿಂದಲೂ ಒಡಿಶಾದ ಮುಖ್ಯಮಂತ್ರಿ. ಈ ಬಾರಿಯದ್ದು ಅವರದ್ದು ಮೂರನೆ ಸರದಿ. ಕಳೆದ ಚುನಾವಣೆ (೨೦೦೯) ಅವರಿಗೆ ಅತ್ಯಂತ ಮಹತ್ವದಾಗಿತ್ತು. ಕಾರಣ ಅಂದು ಅವರ ಬಿಜು ಜನತಾದಳ ವಿಧಾನಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಾಗಲಷ್ಟೆ ತನ್ನ ಬಹುಕಾಲದ ಗೆಳೆಯ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತ್ತು. ಆದರೂ ಚುನಾವಣೆಯಲ್ಲಿ ನಿರಾಯಾಸ (೧೪೭ರಲ್ಲಿ ೧೦೩ ಸ್ಥಾನ ಗೆದ್ದು) ವಾಗಿ ಬಹುಮತ ಪಡೆದು ಮೂರನೇ ಬಾರಿಗೆ ಸಿಎಂ ಆಗಿದ್ದರು.

ಬಿಜೆಪಿ - ಬಿಜೆಡಿಯ ಮೈತ್ರಿ ಮುರಿದುಬೀಳಲು ಪ್ರಮುಖ ಕಾರಣ ಬಿಜೆಪಿಯೂ ಸರ್ಕಾರದ ಮೇಲೆ ಗಣಿ ಅಕ್ರಮ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ನವೀನ್ ಪಾಟ್ನಾಯಕ್ ತನಗೆ ಮೋಸ ಮಾಡಿದರು ಎಂಬುದು ಬಿಜೆಪಿಯ ಅಧಿಕೃತ ಹೇಳಿಕೆ. ಇದೀಗ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಶ್ರೀಕಾಂತ್ ಜೆನಾ ನವೀನ್‌ರ ಮೇಲೆ ಆರೋಪ ಹೊರಿಸಿದ್ದು ಮಾತ್ರವಲ್ಲದೆ  ಅವರ ರಾಜೀನಾಮೆ ಕೇಳಿದ್ದಾರೆ. ನವೀನ್‌ರ ತಪ್ಪು ನೀತಿಗಳಿಂದಾಗಿ ಬೊಕ್ಕಸಕ್ಕೆ ೪ ಲಕ್ಷ ಕೋಟಿ ನಷ್ಟವಾಗಿದೆ, ಒಡಿಶಾ ಗಣಿ ಅಕ್ರಮಕ್ಕೆ ಕುಪ್ರಸಿದ್ಧವಾಗಿರುವ ಕರ್ನಾಟಕ ಮತ್ತು ಗೋವಾವನ್ನು ಮೀರಿಸಿದೆ ಎಂಬುದು ಅವರ ಆರೋಪ. ಕೇಂದ್ರದ ಸಚಿವರೊಬ್ಬರು ಈ ರೀತಿಯ ಆರೋಪ ಮಾಡಿರುವುದರಿಂದ ನವೀನ್ ಫಜೀತಿಗೆ ಸಿಲುಕಿಕೊಂಡಿದ್ದಾರೆ.

ನವೀನ್ ಗಣಿ ಅಕ್ರಮದಲ್ಲಿ ಭಾಗಿಯಾಗಿ ದೇಶದ ಬೊಕ್ಕಸಕ್ಕೆ ೭,೦೦೦ ಕೋಟಿ ರೂ ನಷ್ಟ ತಂದಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಆಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಬೇಳೆ ಹಗರಣಕ್ಕೆ ನವೀನ್ ತನ್ನ ಸಚಿವ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಪ್ರಮೀಳಾ ಮಲ್ಲಿಕ್‌ರಿಂದ ರಾಜೀನಾಮೆ ಪಡೆಯಬೇಕಾಯಿತು.

ಕಲ್ಲಿದ್ದಲು ಹಗರಣದ ಕೋಲಾಹಲ ಮೊದಲು ಕೇಳಿಸಿದ್ದೆ ಒಡಿಶಾದಿಂದ. ಈ ಹಗರಣದಿಂದ ಉನ್ನತ ಶಿಕ್ಷಣ ಸಚಿವರಾಗಿದ್ದ ಬದ್ರಿ ನಾರಯಣ ಪಾತ್ರ ಮತ್ತು ಸಾರ್ವಜನಿಕ ಶಿಕ್ಷಣ ಸಚಿವ ಪ್ರತಾಪ್ ಜೆನಾ ಸಚಿವ ಸಂಪುಟದಿಂದ ಹೊರ ನಡೆಯಬೇಕಾಯಿತು. ಕಳೆದ ೯ ವರ್ಷಗಳಲ್ಲಿ ನವೀನ್ ಸರ್ಕಾರ ೫,೦೦೦ ಹೆಕ್ಟೇರ್ ಗಣಿ ಗುತ್ತಿಗೆ ನೀಡಿದೆ. ಕಲ್ಲಿದ್ದಲು ಹಗರಣದಿಂದ ಬೊಕ್ಕಸಕ್ಕೆ ೧೨೫ ಬಿಲಿಯನ್ ನಷ್ಟ ಎಂದು ಅಂದಾಜಿಸಲಾಗಿದೆ.  

ನಿಯಮಗಿರಿಯಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ವೇದಾಂತಕ್ಕೆ ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಸೆ. ಆದರೆ ಕೇಂದ್ರ ಪರಿಸರ ಇಲಾಖೆಯಿಂದ ಅಸಮ್ಮತಿ. ಆ ಬಳಿಕ ವೇದಾಂತ ವಿಶ್ವವಿದ್ಯಾಲಯದ ರಾದ್ಧಾಂತ! ಪೋಸ್ಕೋ ಎಂಬ ಮತ್ತೊಂದು ದೈತ್ಯ ಉಕ್ಕು ಕಂಪೆನಿಗೆ ತನ್ನ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡಲು ಪ್ರಯತ್ನಿಸಿದ ನವೀನ್‌ಗೆ ಜನರಿಂದ ತೀವ್ರ ವಿರೋಧ. ಕಳೆದ ವರ್ಷದ ಜೂನ್‌ನಲ್ಲಿ ನಡೆದ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ಸಚಿವರಿಬ್ಬರು ಕಾಂಗ್ರೆಸ್ ಶಾಸಕನೊಬ್ಬನ ಜೊತೆ ಕುದುರೆ ವ್ಯಾಪಾರಕ್ಕೆ ಇಳಿದದ್ದು ಜಗ ಜಾಹೀರಾಗುತ್ತಲೆ ನವೀನ್‌ಗೆ ಮತ್ತೊಂದು ಸಂಕಟ. ಹೀಗೆ ನವೀನ್‌ರ ಮೂರನೆ ಪಾಳಿ ಅನೇಕ ಗೊಂದಲಗಳ ಗೂಡು.

ಆದರೆ ಇಂತಹದ್ದೆಲ್ಲ ಕಠಿಣ ಸಮಯದಲ್ಲಿ ನವೀನ್ ’ಹರಕೆಯ ಕುರಿ’ ಹುಡುಕಿ ಬಚಾವ್ ಆಗುತ್ತಿದ್ದರು. ತಮ್ಮ ಕ್ಲೀನ್ ಇಮೇಜ್‌ನ್ನು ಮತ್ತಷ್ಟು ಎತ್ತರಕ್ಕೆ ಏರಿಸಿಕೊಳ್ಳುತ್ತಿದ್ದರು. ಆದರೆ ರಾಜ್ಯದಲ್ಲಿ ಇಷ್ಟೆಲ್ಲ ಅಕ್ರಮಗಳು ಮುಖ್ಯಮಂತ್ರಿಯ ಅರಿವಿಗೆ ನಿಲುಕದೆ ನಡೆದಿತ್ತು ಎಂಬುದನ್ನು ನಂಬುವುದು ಪರಮ ಕಷ್ಟ. ತನ್ನ ರಾಜಕೀಯ ಮಾರ್ಗದರ್ಶಕ ಪ್ಯಾರಿಲಾಲ್ ಮಹಾಪಾತ್ರ ತನ್ನ ವಿರುದ್ಧವೇ ದಂಗೆ ಎದ್ದು ತನ್ನ ಪದಚ್ಯುತಿಯ ಎಣಿಕೆ ಹಾಕಿದ್ದಾರೆ ಎಂಬ ವರದಿ ವಿದೇಶ ಪ್ರವಾಸದಲ್ಲಿದ್ದ ನವೀನ್‌ಗೆ ಸುಲಭವಾಗಿ ದಕ್ಕುತ್ತದೆ. ಆದರೆ ತನ್ನ ಕೈಗೆಳಗೆಯೇ ಒರಿಸ್ಸಾದ ದಟ್ಟ ಕಾಡುಗಳು ಅಕ್ರಮ ಗಣಿಗಾರಿಕೆಯ ಅಟ್ಟಹಾಸಕ್ಕೆ ನಲುಗುತ್ತಿರುವುದು ಗೊತ್ತಾಗಿಲ್ಲ ಎಂಬುದನ್ನು ಹೇಗೆ ತಾನೇ ನಂಬುವುದು?

ಗೋವಾದಲ್ಲಿ ನಡೆದಿದ್ದ ಗಣಿ ಅಕ್ರಮದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕಾರಣವಾಗಿದ್ದ ನ್ಯಾ. ಎಮ್ ಬಿ ಷಾ ನೇತೃತ್ವದ ಆಯೋಗ ಇದೀಗ ಒರಿಸ್ಸಾದ ಗಣಿ ಹುಳುಕು, ಕೊಳಕುಗಳ ಬಗ್ಗೆ ವರದಿ ತಯಾರಿಸುತ್ತಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಗಣಿ ಲೂಟಿಕೋರರಿಗೆ ದುಃಸ್ವಪ್ನವಾಗಿದ್ದ ಅರಣ್ಯಾಧಿಕಾರಿ ಯು. ವಿ. ಸಿಂಗ್ ಕೂಡ ಇದ್ದಾರೆ.

ಗಣಿ ಲೂಟಿಯ ಸುಗ್ಗಿ ಪ್ರಾರಂಭವಾದ ಅನೇಕ ವರ್ಷಗಳ ಬಳಿಕ ಇತ್ತೀಚೆಗಷ್ಟೆ ನವೀನ್ ತನ್ನ ಇಮೇಜ್ ರಕ್ಷಣೆಗಾಗಿ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ೨೭ ಗಣಿ ಕಂಪೆನಿಗಳಿಗೆ ೫೮ ಸಾವಿರ ಕೋಟಿ ದಂಡ ವಿಧಿಸಿದ್ದಾರೆ. ಯಾಕೋ ಗಣಿ ಅಕ್ರಮ ತನ್ನೆಲ್ಲ ಸೀಮೆಯನ್ನು ಮೀರಿದ ಬಳಿಕ ಕರ್ನಾಟಕದ ಆಗಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ೨೦೧೦ರಲ್ಲಿ ಅದಿರು ರಫ್ತಿಗೆ ನಿಷೇಧ ಹೇರಿ ’ಕುರ್ಚಿ ಮತ್ತು ಇಮೇಜ್’ನ್ನು ರಕ್ಷಣೆ ಮಾಡಿಕೊಳ್ಳುವ ಅಂತಿಮ ಪ್ರಯತ್ನ ನಡೆಸಿದ್ದರು. ಇದೀಗ ಎಮ್ ಬಿ ಷಾ ಆಯೋಗ ತನ್ನ ವರದಿ ನೀಡುವ ಮುಂಚಿತವಾಗಿ ದಂಡ ವಿಧಿಸಿ ತನ್ನನ್ನು ಬಚಾವ್ ಮಾಡಿಕೊಳ್ಳುವ ಪ್ರಯತ್ನವನ್ನು ನವೀನ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಅವರ ಕ್ರಮವನ್ನು ಬಣ್ಣಿಸಲಾಗುತ್ತಿದೆ. ಆದರೆ ಯಡಿಯೂರಪ್ಪ ಗಣಿ ಉರುಳಿಗೆ ಕೊರಳು ಕೊಡಲೇ ಬೇಕಾಯಿತು. ನವೀನ್‌ರ ಕೊರಳಿಗೆ ಗಣಿ ಉರುಳಾಗಬಹುದೇ ಅಥವಾ ಹರಕೆಯ ಕುರಿಗಳ ಕೊರಳಿಗೆ ಈ ಉರುಳು ಬೀಳಬಹುದೇ ಎಂಬ ಕುತೂಹಲ ಈಗಾಗಲೇ ಗರಿಗೆದರಿದೆ.

ನವೀನ್‌ರ ತಂದೆ ಬಿಜು ಪಾಟ್ನಾಯಕ್ ದೇಶದ ಜನಪ್ರಿಯ ಮತ್ತು ದೂರದರ್ಶಿತ್ವ ಹೊಂದಿದ್ದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ’ಭ್ರಷ್ಟರನ್ನು ಹಿಡಿದು ಥಳಿಸಿ’ ಎಂದು ಹೇಳುವಷ್ಟು ಭ್ರಷ್ಟತೆಯನ್ನು ವಿರೋಧಿಸಿದ್ದ ವ್ಯಕ್ತಿ ಅವರು. ಅವರ ಸುಪುತ್ರ ನವೀನ್‌ರ ಸನಿಹದಲ್ಲೆ ಕಳಂಕದ ಸುಳಿ ಸುತ್ತುತ್ತಿದೆ. ಇದು ಅವರ ಕ್ಲೀನ್ ಇಮೇಜ್‌ಗೆ ಧಕ್ಕೆ ತಂದಿರುವುದು ನಿಜ, ಆದರೆ ಅವರ ರಾಜಕೀಯ ಭವಿಷ್ಯವನ್ನು ಆಹುತಿ ತೆಗೆದುಕೊಳ್ಳಲಿದೆಯೇ ಎಂಬುದು ಸ್ಪಷ್ಟವಾಗುವ ದಿನ ಸನಿಹದಲ್ಲೇ ಇದೆ.