Monday, May 31, 2010

ಮತ್ತೇ ಹೊರಟಿದ್ದೇನೆ.....

ಮತ್ತೇ ಹೊರಟಿದ್ದೇನೆ... ಕಾರಣವಿಷ್ಟೇ ಹೊರಡಲೇ ಬೇಕಾಗಿದೆ ಮತ್ತು ಹೋರಾಡಲೇ ಬೇಕಾಗಿದೆ! ನಿಜ, ನಾನು ಈ ಕ್ಷಣಕ್ಕಾಗಿ ಕಾತರಿಸಿ ಕುಳಿತಿದೆ .... ಇಲ್ಲ, ಇಲ್ಲ, ಓಡೋಡಿ ಬರುತ್ತಿದ್ದೆ. ಆದರೂ ಎಲ್ಲೋ ಒಂದು ಕಡೆ ಮನಸ್ಸು ರಿವರ್ಸ್ ಗೇರ್ ಹಾಕಿ ಹಿಂದೆ ಹಿಂದೆ ಓಡುತ್ತಿದೆ. ಅದು ಎಂದೋ ಈ ಕ್ಷಣಕ್ಕಾಗಿ ತಯಾರಾಗಿದ್ದರೂ ಕೂಡ ಈಗ ಅದು ಅದೇನೋ ನೆನಪುಗಳ ವೇಗ ನಿಯಂತ್ರಕದ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ.

ಕಾಲೇಜು ಜೀವನ ಮುಗಿದ ಬಳಿಕ ಎಲ್ಲರೂ ಸಾಮಾನ್ಯವಾಗಿ ಅಥವಾ ಬಹುತೇಕರು ಹೇಳುವ ಮಾತೊಂದಿದೆ... ಅದರಲ್ಲಿ ಎಷ್ಟು ಸತ್ಯ? ಎಷ್ಟು ಸುಳ್ಳು? ಅವರಿಗೂ ಗೊತ್ತಿರಲಿಕ್ಕಿಲ್ಲ... ಅಥವಾ ಗೊತ್ತು ಮಾಡಿಕೊಳ್ಳಲಿ ಎಂದು ನಾನು ಹೇಳುವುದೂ ಇಲ್ಲ... ಅದಕ್ಕಿಂತ ಹೆಚ್ಚಾಗಿ ನಾವದನ್ನು ಗೊತ್ತು ಮಾಡಿಕೊಂಡು ಮಹಾನ್ ತನಿಖಾ ಅಧಿಕಾರಿಗಳು ಎಂದು ಕೊಂಬು ಬರಿಸಿಕೊಳ್ಳುವ ಅಗತ್ಯವೂ ಇಲ್ಲ. ಯಾಕೆಂದರೆ ಆ ಮಾತು ಕೊಡುವ ತರುವ ಖುಷಿ, ತೃಪ್ತಿ ಮತ್ತು ತಾವೇನೋ ಅಂದು ಸಾಧಿಸಿದ್ದೇವು ಎಂಬ ಭಾವದ ಮುಂದೆ ಉಳಿದೆಲ್ಲವೂ ನಗಣ್ಯ! ಅದೇ ನಾವು ಕಾಲೇಜ್ ಲೈಫ್ ಎಂಜಾಯ್ ಮಾಡಿದಷ್ಟು ಬೇರೆ ಯಾರೂ ಮಾಡಿರಲಿಕ್ಕಿಲ್ಲ, ಎಂಥಾ ಗಮ್ಮತ್ ಮಾರಾಯ ನಮ್ಮದು!

ಹೌದು, ನನ್ನದು ಕಾಲೇಜಿನ ಅಥವಾ ಒಟ್ಟಿನಲ್ಲಿ ವಿದ್ಯಾರ್ಥಿ ಜೀವನದ ಆಧ್ಯಾಯದಲ್ಲಿ ಇನ್ನೂ ಮುಂದೆ ಐತಿಹಾಸಿಕ ಪಾತ್ರ. ನನಗೂ ಅಷ್ಟೇ ಅದು ಹಸಿ ಹಸಿ ಚರಿತ್ರೆ... ಬಿಸಿ ಬಿಸಿ ಹಬೆಯಾಡುವ ಕೇಸರಿ ಬಾತ್!

ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ತನಕ ಕಲಿತದ್ದು ನಮ್ಮ ಮನೆಯ ಪಕ್ಕದಲ್ಲೇ ಇರುವ ಅಂದರೆ ಏನೋ ಒಂದಷ್ಟು ದೂರ ಎಂದು ಹೇಳಿದಂತಾಗುತ್ತದೆ. ನಮ್ಮ ಕೃಷಿ ಭೂಮಿಗೆ ಒತ್ತಿಯೇ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಡುಜಾರಿನಲ್ಲಿ. ಅದಕ್ಕಿಂತ ಮೊದಲಿನ ಅಂಗನವಾಡಿ ಶಿಕ್ಷಣ ಇದೇ ಶಾಲೆಯಲ್ಲಿ ಮತ್ತು ಕರಾಯದಲ್ಲಿ ಆಗಿತ್ತು. ಅನಂತರ ಹಿರಿಯ ಪ್ರಾಥಮಿಕ ಶಾಲೆಗೆ ಸೇರಲು ಬಂದದ್ದು ಮಾವನ ಮನೆಗೆ. ಅಂದರೆ ಅಲ್ಲಿಂದ ನಂತರ ಅಖಂಡ ೧೨ ವರ್ಷ ನಾನು ಶಾಲೆಗೆ ಹೋದದ್ದು ಅಲ್ಲಿಂದಲೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಯಲು ಇಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ ಸಂತ ತೋಮಸರ ಪ್ರೌಢ ಶಾಲೆ, ಗಂಡಿ ಬಾಗಿಲು ಇಲ್ಲಿ ನನ್ನ ಹೈಸ್ಕೂಲ್ ಶಿಕ್ಷಣ ಮುಂದುವರಿಸಿದೆ.

ಎಂಟು ವರ್ಷಗಳ ಹಿಂದೆ ಎಸ್. ಡಿ. ಎಮ್. ಕಾಲೇಜು ಪ್ರವೇಶಿಸಿದೆ. ಇದು ನನ್ನ ಶೈಕ್ಷಣಿಕ ಹಾದಿ ಸಾಗಿದ ಪರಿ.

ಇಲ್ಲಿನ ಪ್ರತಿಯೊಂದು ಘಟ್ಟದಲ್ಲೂ ನೆನಪುಗಳ ಹಿಮಾಲಯವಿದೆ. ಮುಟ್ಟಿದರೆ ತಂಪು ತಂಪು, ಏರಿಯೇ ಬಿಡುವ ಎಂದರೆ ಏರಿದಷ್ಟೂ ಏರುವ, ಮುಗಿಯದ, ಸಿಲುಕದ ಕೊನೆ!

ಕಾಲೇಜ್ಗೆ ಬರುವ ಬಸ್ನಿಂದ ಹಿಡಿದು, ದೂರದ ರಾಮೇಶ್ವರದ ತನಕ ನನ್ನ ಅನುಭವಗಳ, ನೆನಪುಗಳ ಮೆರವಣಿಗೆ ಸಾಗಿದೆ.

ಅದೇ ನಿನ್ನೆ ಕಾಲೇಜ್ಗೆ ಹೋಗುವಾಗ ಅದೇ ಕಾರಿಡಾರಿನಲ್ಲಿ ನಡೆದಾಡುವಾಗ ಕಾಲು ಕಿತ್ತಿಡಲಾಗದಷ್ಟು ಭಾರವಾಗಿತ್ತು. ಮನಸ್ಸು ಅದಕ್ಕಿಂತ ಒಂದು ಹಿಡಿ ಹೆಚ್ಚು ತೂಗುತ್ತಿತ್ತು.

ಈಗೊಂದು ಪ್ಲ್ಯಾಶ್ ಬ್ಯಾಕ್ ಇರಲಿ, ನನ್ನ ಅಜ್ಜ ತೀರಿಕೊಂಡಾಗ ಅವರ ಶವವನ್ನು ಮನೆಯ ಜಗುಲಿಯಲ್ಲಿ ಮಲಗಿಸಿದ್ದರು, ನಾನು ವಿಷಯ ತಿಳಿದು ಕಾಲೇಜ್ನಿಂದ ಮನೆಗೆ ಜೀಪ್ ಮಾಡಿಕೊಂಡು ಹೋದೆ. ಆದರೆ ಜೀಪ್ ಅನ್ನು ಆಗ ಅಂಗಳದಿಂದ ಹೊರಗಡೆ ನಿಲ್ಲಿಸಿದರು. ನಾ ಕಳೆದ ೨೦ ವರ್ಷಗಳಿಂದ ಆಡುತ್ತಿದ್ದ ಆಂಗಳವದು.... ಯಾವತ್ತೂ ಆ ಅಂಗಳ ಅಷ್ಟು ದೊಡ್ಡದಿದೆ ಎಂದು ನನಗನಿಸಿರಲಿಲ್ಲ. ಆದರೆ ಅಂದು ಮಾತ್ರ ನಡೆದಷ್ಟು ನಾ ಮನೆಯ ಜಗಲಿ ತಲುಪಿರಲಿಲ್ಲ.... ಅರ್ಥಾತ್ ನನಗೆ ನಿನ್ನೆ ಮತ್ತದೇ ಅನುಭವ.... ಅಲ್ಲಿ ನನ್ನ ಅಜ್ಜ ಹೆಣವಾಗಿದ್ದರು ಇಲ್ಲಿ ನನ್ನ ಕಾಲೇಜ್ ಲೈಫ್ ಹೆಣವಾಗಿತ್ತು!

ಕಾಲೇಜಿನಲ್ಲಿ ಯಾರೂ ಪಡೆಯದ ಅನುಭವ ನಾ ಪಡೆದೆ, ಆಥವಾ ಈ ಕಾಲೇಜ್ ಅದ್ಬುತವಾಗಿತ್ತು ಎಂದು ಹೇಳುವುದಿಲ್ಲ. ಪ್ರತಿ ಕಾಲೇಜ್ಗೆ ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಅ(ದ)ವರದ್ದೆ ಆದ ಗುಣ ವಿಶೇಷಗಳಿರುತ್ತವೆ. ಅದಕ್ಕನುಗುಣವಾಗಿ ಅಲ್ಲಿನ ಮೋಜು ಮಸ್ತಿ, ಸಾಧನೆ, ವೇದನೆ ಎಲ್ಲವೂ ರೂಪುಗೊಳ್ಳುತ್ತವೆ, ಎರಕ ಹೊಯ್ಯಲ್ಪಡುತ್ತದೆ... ಹಾಗೆಯೇ ನನಗೆ ಈ ಕಾಲೇಜು ಕೊಟ್ಟದ್ದೇನು? ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಳ್ಳುತ್ತಿದ್ದೇನೆ. ಉತ್ತರ.... ಒಂದಾ.... ಎರಡ.... ಹತ್ತ... ನೂರಾ... ಇಲ್ಲ... ಅದಕ್ಕೂ ಹೆಚ್ಚಿದೆ.... ಅದೆಲ್ಲವೂ ನನ್ನ ಬಳಿ ಇದೆ.... ಕೆಲವು ಇನ್ನು ಸುರಕ್ಷಿತವಾಗಿವೆ...ಇನ್ನು ಕೆಲವು ಬಳಸಿ ಬಳಸಿ ಮತ್ತಷ್ಟು ಚೂಪು, ನುಣುಪು, ಮೊಣಚು, ಹರಿತ ಆಗಿವೆ.....

ಇದೆಲ್ಲದರ ಬಗ್ಗೆ ಮುಂದೆ ನಾನು ವಿಸೃತ್ತವಾಗಿ ಬರೆಯಲಿಕ್ಕಿದ್ದೇನೆ.... ಆದರೆ ಇಲ್ಲಿ ನೆನಪಿಸಿಕೊಳ್ಳಬೇಕಾದ ಕೆಲವು ಹೆಸರುಗಳು ಇವೆ.... ಭಾಸ್ಕರ್ ಸರ್, ನಂದ ಗೋಪಾಲ್, ಸಚಿತಾ ಮ್ಯಾಮ್ (ಪತ್ರಿಕೋದ್ಯಮ ವಿಭಾಗ) ಶಿವಕುಮಾರ್, ದಿವ್ಯ ಮೆಡಂ, ಷಲೀಪಾ ಮ್ಯಾಮ್ (ರಾಜ್ಯ ಶಾಸ್ತ್ರ ವಿಭಾಗ), ಶಶಿಕಾಂತ್ ಕುರೂಡಿ, ಶಿಲ್ಪಾ ಭಟ್, ಸೋಜೋ ವರ್ಗಿಸ್, ಸೀಮಾ ಮ್ಯಾಮ್, ರಮ್ಯ ಮ್ಯಾಮ್, ಬಿನುತಾ ಮ್ಯಾಮ್ (ಇಂಗ್ಲೀಷ್ ವಿಭಾಗ), ಸಂಪತ್ ಸರ್, ಶುಭದಾಸ್ ಮ್ಯಾಮ್, ದಿವಾ ಸರ್ (ಕನ್ನಡ ವಿಭಾಗ), ಶ್ರೀ ಪ್ರಸಾದ್ ಸರ್, ನವೀನ್ ಸರ್ (ಎಕಾನಮಿಕ್ಸ್ ವಿಭಾಗ) ಮೇರಿ ಮ್ಯಾಮ್, ಪಟವರ್ಧನ್ ಸರ್ (ಸೈಕಾಲಜಿ ವಿಭಾಗ), ದಿ
ಅಭಯ್ ಸರ್, ಶೈಲೇಶ್ ಸರ್, ಸರೋಜಾ ಮ್ಯಾಮ್ (ಕಂಪ್ಯೂಟರ್ ವಿಭಾಗ), ಕೃಷ್ಣಮೂರ್ತಿ ಸರ್, ಕಾಕತ್ಕರ್ ಸರ್, (ಎನ್ಎಸ್ಎಸ್ ಅಧಿಕಾರಿಗಳು), ಅಜಿತ್ ಸರ್ (ಎಮ್ ಎಸ್ ಡಬ್ಲ್ಯು ವಿಭಾಗ) ದಿನೇಶಣ್ಣ, ಸಂದೀಪಣ್ಣ, ಸುರೇಂದ್ರಣ್ಣ, ರವಿ ಸರ್, ಅಕ್ಷತಾ ಮ್ಯಾಮ್, ಅಭಿಷೇಕ್ ಸರ್.... ಹೀಗೆ... ಪಟ್ಟಿ ಅಪೂರ್ಣವಾಗಿದೆ.

ಇನ್ನೊಂದು ದೊಡ್ಡ ಪಟ್ಟಿ ಜೊತೆ ಮತ್ತೇ ನನ್ನ ಅವರ ಸಂಬಂಧ ಹೇಗಿತ್ತು ಅನ್ನುವುದರ ಬಗ್ಗೆ ಬರೆಯುತ್ತೇನೆ. ಯಾಕೆಂದರೆ ಯಾರೂ ಏನೇ ಹೇಳಲಿ... ನೆನಪು ಶಾಶ್ವತವಲ್ಲ! ಈ ಎಲ್ಲ ಹೆಸರುಗಳನ್ನು ಕೃತಜ್ಜತೆಯಿಂದ ನೆನಪಿಸಿಕೊಂಡರೆ (ಕೆಲ ಹೆಸರುಗಳಿಗೆ ಎರಡು ಅಯಮಾಗಳೂ ಇವೆ) ಇನ್ನೊಂದು ಪಟ್ಟಿಯಿದೆ... ಅದು ನಾ ಇಲ್ಲೆ ಮರೆತು ಬಿಡಬೇಕಾದವರ ಪಟ್ಟಿ... ಅ ಪಟ್ಟಿ ಖಂಡಿತಾ ಇಷ್ಟು ಉದ್ದ ಇಲ್ಲ.... ಅದೇ ಎಸ್ ಡಿ ಎಮ್ನ ಹೆಚ್ಚುಗಾರಿಕೆ...

ಇನ್ನು ಸ್ನೇಹಿತರ, ಸ್ನೆಹಿತರ ತರಹ ಸೋಗು ಹಾಕಿದವರ ಬಗ್ಗೆ ಎಲ್ಲ ಮುಂದೆ ಬರೆಯುತ್ತೇನೆ....

ಅದೇನೇ ಇದ್ದರೂ ಜೀವನ ಪರಿಪೂರ್ಣವಾಗಲು ಎಲ್ಲವೂ ಇರಬೇಕು ಎಂಬುದು ನನ್ನ ಅನಿಸಿಕೆ...

ಇನ್ನೇನಿದ್ದರೂ ವೃತ್ತಿ ಬದುಕು... ನಿಜವಾದ ಬದುಕು!