Sunday, April 11, 2010

ಬೌಲಿಂಗ್ ಅಪಕ್ವ ಕ್ರಿಕೆಟ್‌ಗೆ ಹೊಡೆಯಿತೇ ಲಕ್ವ?

ಇದು ವಿಶ್ವದ ನಾನ ಕಡೆ ಮತ್ತು ಕ್ರಿಕೆಟ್‌ನ ಹುಚ್ಚಿನಿಂದ ಮುಕ್ತವಾಗುತ್ತಿರುವ ಅಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಅಫ್ರಿಕಾದಲ್ಲಿ ಮತ್ತೇ ಕ್ರಿಕೆಟ್‌ನ ಮತ್ತೇರಿಸಲು ವಿವಿಧ ತಂತ್ರಗಳನ್ನು ಹೆಣೆಯುತ್ತಿರುವ ಕಾಲ. ಇದಕ್ಕಾಗಿ ಕ್ರಿಕೆಟ್ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಕ್ರಿಕೆಟ್‌ಗೆ ಗ್ಲ್ಯಾಮರ್ ಸೇರಿಸಲಾಗುತ್ತಿದೆ. ಹೊಸ ಹೊಸ ತಂತ್ರಜ್ಞಾನವನ್ನು ಕ್ರಿಕೆಟ್‌ನೊಳಗೆ ತೂರಲಾಗುತ್ತಿದೆ. ಕ್ರಿಕೆಟ್ ತನ್ನ ಹೆಕ್ಕಿ ತೆಗೆಯಬಹುದಾದ ೫೦೦ ವರ್ಷಗಳ ಚರಿತ್ರೆಯಲ್ಲಿ ಇಂತಹ ಸಾಕಷ್ಟು ಬದಲಾವಣೆ, ಮಾರ್ಪಾಡುಗಳನ್ನು ಮಡಿಬಿಟ್ಟು ಮಾಡಿಕೊಂಡಿದ್ದರಿಂದಲೇ ಇಂದು ತಕ್ಕಮಟ್ಟಿನ ಪರಿಪಕ್ವತೆ ಪಡೆದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ.
ಕ್ರಿಕೆಟ್‌ನಲ್ಲಿನ ಬದಲಾವಣೆ ಅಂದಾಗ ಅದು ಕ್ರಿಕೆಟ್ ಆಡುವ ರೀತಿ, ನೀತಿ ನಿಯಮಗಳಲ್ಲಿ ಆದ ಬದಲಾವಣೆ ಮಾತ್ರವಲ್ಲದೇ ಅದರೊಂದಿಗೆ ಸೇರಿಕೊಂಡಿರುವ ಆಡಳಿತ, ವಾಣಿಜ್ಯ ಮತ್ತು ವ್ಯವಹಾರ ಸಂಬಂಧಿ ಬದಲಾವಣೆಗಳು ಕೂಡ ಮುಖ್ಯವಾಗುತ್ತದೆ.

ಕ್ರೀಡೆ ಇರುವುದು ಮನರಂಜನೆ, ಪ್ರತಿಷ್ಟೆ ಮೆರೆಯಲು ಎಂಬೆರಡು ಹಂತಗಳನ್ನು ದಾಟಿ ವ್ಯಾಪಾರಕ್ಕೆ ಅಥವಾ ವ್ಯಾಪಾರವಾಗಿ ಬಳಕೆಯಾಗುತ್ತಿದೆ. ಕ್ರಿಕೆಟ್ ಕೂಡ ಇದಕ್ಕೇ ಹೊರತಾಗಿಲ್ಲ. ಇದರಿಂದ ಕ್ರಿಕೆಟ್‌ನ ದೊಣ್ಣೆ ನಾಯಕರು, ಆಟಗಾರರು ಶ್ರಿಮಂತರಾಗುತ್ತಿದ್ದಾರೆ. ಆದರೆ, ಕ್ರಿಕೆಟ್ ಬಡವಾಗುತ್ತಿದೆ!

ಕಳೆದ ಶತಮಾನದಾದಿಯಿಂದ ೧೯೯೦ರ ತನಕ ಕೂಡ ಅನೇಕ ಶ್ರೇಷ್ಟ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳು ಜಾಗತಿಕ ಕ್ರಿಕೆಟ್‌ನ್ನು ಆಳಿದ್ದರು.

ಅವರೆಲ್ಲರನ್ನೂ ನೆನಪಿಸಿಕೊಳ್ಳುತ್ತ ಕಳೆದ ಸಹಸ್ರಮಾನದ ಕೊನೆಯ ದಶಕದತ್ತ ಒಮ್ಮೆ ಕಣ್ಣು ಹಾಯಿಸೋಣ. ಅಲ್ಲಿ ಸಾಲು ಸಾಲಾಗಿ ಘಟಾನುಘಾಟಿಗಳಿದ್ದಾರೆ. ಬ್ಯಾಂಟಿಗ್‌ನಲ್ಲಿ ತೆಂಡುಲ್ಕರ್, ದ್ರಾವಿಡ್, ಗಂಗೂಲಿ, ಅಜರುದ್ದೀನ್, ಪಾಂಟಿಂಗ್, ವೋ ಸಹೋದರರು, ಮಾರ್ಕ್ ಟೇಲರ್, ಬಾರ್ಡರ್, ಲಾರಾ, ರಣತುಂಗಾ, ಅರವಿಂದ ಡಿ ಸಿಲ್ವಾ, ಜಯಸೂರ್ಯ, ಅನ್ವರ್, ಇಂಜುಮಾಮ್ ಉಲ್ ಹಕ್, ಕ್ಯಾಲಿಸ್ ಇದ್ದಾರೆ. ಇವರಲ್ಲಿ ಕೆಲವರು ಈಗಲೂ ಆಡುತ್ತಿದ್ದಾರೆ. ಇವರೆಲ್ಲರನ್ನೂ ಕ್ರಿಕೆಟ್‌ನ ಹಾಲ್ ಅಫ್ ಫೇಮರ್ಗಳು ಎಂದು ಒಪ್ಪಿಕೊಳ್ಳಬಹುದೇನೋ. ಇವರು ರನ್ ರಾಶಿ ಹಾಕಲು ಎದುರಿಸಿದ್ದ ಬೌಲರ್‌ಗಳ ಪಟ್ಟಿಯನ್ನೊಮ್ಮೇ ನೋಡಿ ಮುರುಳೀಧರನ್, ವಾರ್ನ್, ಕುಂಬ್ಳೆ, ಶ್ರೀನಾಥ್, ಮೆಕ್‌ಗ್ರಾಥ್, ವಸಿಂ ಆಕ್ರಂ, ವಕಾರ್ ಯೂನಿಸ್, ವಾಸ್, ಶಾನ್ ಪೊಲಾಕ್, ಡೊನಾಲ್ಡ್, ವಾಲ್ಷ್, ಯಂಬ್ರೋಸ್, ಡ್ಯಾರೋನ್ ಗಾವ್ ಇತ್ಯಾದಿ. ಇವರೆಲ್ಲರು ವಿಶ್ವ ಕ್ರಿಕೆಟ್‌ನ ಬೌಲಿಂಗ್ ದಿಗ್ಗಜರ ಪಟ್ಟಿಯಲ್ಲಿ ಮೊದಲ ಪಂಕ್ತಿಯಲ್ಲಿ ಕೂರಬಲ್ಲವರು. ಈ ಶ್ರೇಷ್ಟರುಗಳ ಕದನದಲ್ಲಿ ಕ್ರಿಕೆಟ್‌ನ ಹಿರಿಮೆ ಹೆಚ್ಚಾಯಿತು ಮತ್ತು ಬ್ಯಾಂಟಿಗ್‌ನಲ್ಲಿ ಅಥವಾ ಬೌಲಿಂಗ್‌ನಲ್ಲಿ ಗಟ್ಟಿ ವಿಕೆಟ್‌ಗಳು ಮಾತ್ರ ಉಳಿದವು.

ಆನಂತರದ ಅಂದರೆ ೧೯೯೬ರಿಂದ ೨೦೦೦ದ ನಡುವೆ ಈಗಲೂ ಚಾಲ್ತಿಯಲ್ಲಿರುವ ಕೆಲ ಬೌಲರ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಶುರುವಿಟ್ಟುಕೊಂಡರು. ಅವರಲ್ಲಿ ಮುಖ್ಯವಾದವರು ಅಥವಾ ದಶಕಗಳ ಕಾಲ ಬಾಳಿಕೆ ಬಂದವರು ಎನ್‌ಟಿನಿ, ಹರ್ಭಜನ್ ಸಿಂಗ್, ವೆಟೊರಿ, ಬ್ರೆಟ್ ಲೀ ಮತ್ತು ಜಹೀರ್ ಖಾನ್. ಆದರೆ ಇವರಲ್ಲಿ ವೆಟೊರಿಯನ್ನು ಬಿಟ್ಟು ಯಾರಿಗೂ ತಮ್ಮ ಸೀನಿಯರ್ ಬೌಲರ್‌ಗಳಲ್ಲಿ ಇದ್ದ ಘಾತಕತನತನ, ಸ್ಥಿರತೆ ಮತ್ತು ಫಿಟ್‌ನೆಸ್ ಇಲ್ಲವೇ ಇಲ್ಲ.

ಆದರೆ ಈ ಅವಧಿಯಲ್ಲಿ ಮತ್ತು ಮುಂದಿನ ದಶಕದಲ್ಲಿ ಅನೇಕ ಬ್ಯಾಟಿಂಗ್ ತಾರೆಗಳು ಉದಯಿಸಿದರು. ಉದಾಹರಣೆಗೆ ಸೆಹವಾಗ್, ಗಿಲ್‌ಕ್ರೈಸ್ಟ್, ಧೋನಿ, ಸಂಗಕ್ಕಾರ, ಮಹೇಲಾ ಜಯವರ್ಧನೆ, ಮೈಕ್ ಹಸ್ಸಿ, ಮೈಕಲ್ ಕ್ಲಾರ್ಕ್, ಗೈಲ್, ಕೆವಿನ್ ಪಿಟರ್ಸನ್, ಗ್ರೇಮ್ ಸ್ಮಿತ್, ಮಹಮ್ಮದ್ ಯೂಸುಫ್, ಗಿಬ್ಸ್ ಇತ್ಯಾದಿ ಇತ್ಯಾದಿ.

ದುರಂತವೆಂದರೆ ಈ ಇಡಿ ದಶಕದಲ್ಲಿ ಮುಂದೆ ಲೆಜೆಂಡ್ ಎಂದು ಹೇಳಬಹುದಾದ ಒಬ್ಬನೇ ಒಬ್ಬ ಬೌಲರ್ ಕಾಣಿಸಿಕೊಳ್ಳಲೇ ಇಲ್ಲ. ನಿರೀಕ್ಷೆ ಹುಟ್ಟಿಸಿದ್ದವರು ಕೂಡ ಒಂದೆರಡು ಸಿರೀಸ್ ಆಗುವಷ್ಟರಲ್ಲೇ ಸಿರೀಯಸ್ ಆಗಿ ಸುಸ್ತಾಗಿಬಿಟ್ಟರು!

ಇವತ್ತು ಗಮನಿಸಬೇಕಾಗಿರುವ ಬೌಲರ್‌ಗಳೆಂದರೆ ಸ್ಟೈನ್, ಮಿಚೆಲ್ ಜಾನ್ಸನ್, ಮಹಮ್ಮದ್ ಅಸಿಫ್, ಬಾಂಡ್ ಅಷ್ಟೇ. ಆಜಂತಾ ಮೆಂಡಿಸ್, ಇಶಾಂತ್ ಶರ್ಮ, ಇರ್ಪಾನ್ ಪಠಾಣ್, ಮಾಲಿಂಗ, ಸ್ಟೀವ್ ಹಾರ್ಮಿಸನ್ ಅದೇನೋ ಮಾಡ್ತಾರೆ ಅಂತ ನಾವು ಅದ್ಕೊಂಡದ್ದೇ ಬಂತು! ಮಹಮ್ಮದ್ ಅಮೀರ್, ವೆಯ್ನ್ ಪಾರ್ನೆಲ್, ಶಾನ್ ಟೇಟ್, ವೆಲಗೆಡೆರಾ, ಕ್ಯಾಮರೋನ್ ರೋಷ್‌ರ ಮೇಲೆ ಸದ್ಯಕ್ಕೆ ಒಂದು ಕಣ್ಣಿಡಬಹುದು ಅಷ್ಟೇ.

ಕ್ರಿಕೆಟ್‌ನ ಬೌಲಿಂಗ್ ವಿಭಾಗ ಯಾಕೆ ಕಳೆಗುಂದಿತು? ದಶಕಗಳ ಹಿಂದೆ ಒಂದು ತಂಡದಲ್ಲೇ ಎರಡೆರಡು ಲೆಜೆಂಡ್ ಬೌಲರ್‌ಗಳಿರುತ್ತಿದ್ದರೆ ಇಂದು ಜಗವಿಡೀ ಹುಡುಕಿದರೂ ಒಬ್ಬನೇ ಒಬ್ಬ ಅಂತಹ ಬೌಲರ್ ಯಾಕೆ ಕಾಣ ಸಿಗುತ್ತಿಲ್ಲ? ಇದ್ದರೂ ಅವರ‍್ಯಾಕೆ ಸ್ಥಿರತೆ ಮತ್ತು ಫಿಟ್‌ನೆಸ್ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆ? ಸ್ಪಿನ್ ಬೌಲಿಂಗ್ ವಿಭಾಗವಂತೂ ಪಾರ್ಟ್ ಟೈಮ್ ಬೌಲರ್‌ಗಳ ಅಥವಾ ಬ್ಯಾಟಿಂಗ್ ಅಲ್‌ರೌಂಡರ್‌ಗಳ ವಿಭಾಗವೇ ಆಗಿ ಬಿಟ್ಟಿದೆ.

ಕ್ರಿಕೆಟ್‌ನಲ್ಲಿ ಇರುವುದು ಮೂರೇ ಸಂಗತಿಗಳು. ಬ್ಯಾಟಿಂಗ್, ಬೌಲಿಂಗ್ ಮತ್ತು ಫಿಲ್ಡಿಂಗ್. ಕ್ರಿಕೆಟ್‌ನಲ್ಲಿ ಅದೇನೇ ಬದಲಾವಣೆ ತಂದರೂ, ಅದೇಷ್ಟೇ ಮಾರ್ಪಾಡು ಮಾಡಿದರೂ ಈ ಮೂರೂ ಒಂದಕ್ಕೊಂದು ಜೊತೆಯಾಗಿ ನಿಲ್ಲದೆ ಒಳ್ಳೆಯ ಕ್ರಿಕೆಟ್ ಸಾಧ್ಯವೇ ಇಲ್ಲ. ಕ್ರಿಕೆಟ್‌ನಲ್ಲಿ ಯಾವುದೇ ತಂಡ ಅತ್ಯುತ್ತಮ ಎಂದೆನಿಸಿಕೊಳ್ಳಬೇಕಾದರೆ ಅದು ಈ ಮೂರರಲ್ಲೂ ಅತ್ಯುನ್ನತ್ತ ಪ್ರದರ್ಶನ ನೀಡಲೇಬೇಕು.

ಆದರೆ ಕ್ರಿಕೆಟ್ ತನ್ನ್ನಲ್ಲಿ ಬದಲಾವಣೆ ತಂದುಕೊಳ್ಳುಲು ತುಳಿದದ್ದು ಹೆಚ್ಚು ಹೆಚ್ಚು ಬ್ಯಾಟ್ಸ್‌ಮನ್‌ಗಳ ಪರವಾಗುವ ಹಾದಿಯನ್ನು. ಅದರಲ್ಲೂ ಕ್ರಿಕೆಟ್ ವ್ಯಾಪಾರದ ಮುಷ್ಟಿಯೊಳಗೆ ಸಿಳುಕಿಕೊಂಡ ಮೇಲಂತೂ ಬೌಲರ್‌ಗಳ ಮೇಲೆ ಅದೇನೋ ದ್ವೇಷ ಇಟ್ಟುಕೊಂಡೇ ನಿಯಮಗಳನ್ನೂ ರೂಪಿಸಲಾಗುತ್ತಿದೆ ಎಂಬಷ್ಟು ಏಕಮುಖ ನಿಯಮಗಳನ್ನು ತೂರಕಾಗುತ್ತಿದೆ. ಈ ಬೆಳವಣಿಗೆಯ ಫಲಿತಾಂಶ ಈ ದಶಕದಲ್ಲಿ ಕಾಲದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉಳಿಯಬಲ್ಲ ಒಬ್ಬನೇ ಒಬ್ಬ ಬೌಲರ್ ಯಾವ ಮೈದಾನದಲ್ಲೂ ಕಾಣಿಸಿಕೊಳ್ಳುತ್ತಲೇ ಇಲ್ಲ!

ಇತರ ಪ್ರಸಿದ್ಧ ತಂಡ ಆಟಗಳಾದ ಹಾಕಿ, ಫುಟ್ಬಾಲ್‌ನ್ನು ಗಮನಿಸಿ, ಅಲ್ಲಿ ಮುನ್ಪಡೆ, ರಕ್ಷಣ ಮತ್ತು ಸಂಪರ್ಕ ಆಟಗಾರರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದ್ದರೆ ಮಾತ್ರ ಆ ತಂಡ ಗೆಲ್ಲುತ್ತದೆ. ಕ್ರಿಕೆಟ್‌ನಲ್ಲಿ ಈ ಮೂರು ವಿಭಾಗಗಳ ಸ್ಥಾನವನ್ನು ಬ್ಯಾಟ್ಸ್‌ಮನ್, ಬೌಲರ್ ಮತ್ತು ಫಿಲ್ಡರ್‌ಗಳು ತುಂಬುತ್ತಾರೆ. ಕೀಪರ್‌ನ ಪಾತ್ರ ಈ ಮೂರು ಆಟದಲ್ಲೂ ಮಹತ್ವದ್ದೇ. ಹಾಕಿ, ಫುಟ್ಬಾಲ್‌ಗಳಲ್ಲಿ ಹೆಚ್ಚಾಗಿ ತಾರೆಗಳಾಗುವ ಭಾಗ್ಯ ಮುನ್ಪಡೆ ಆಟಗಾರರಿಗೆ ಹೆಚ್ಚು ಸಲೀಸಾಗಿ ಲಭ್ಯವಾದರೆ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಈ ಯೋಗ. ಈ ಬಗ್ಗೆ ನನ್ನ ತಕರಾರಿಲ್ಲ. ಇದು ಜನರ ಇಷ್ಟದ ಪ್ರಶ್ನೆ. ಆದರೆ ಜಾಗತಿಕ ಕ್ರಿಕೆಟ್‌ನ ಯೋಗಕ್ಷೇಮ ನೋಡಿಕೊಳ್ಳುವ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (Iಅಅ)ಗೆ ಏನಾಗಿದೆ? ಬೌಲರ್‌ಗಳ ಕೊರಳ್‌ಗೆ ಉರುಳು ಹಾಕುವುದೇ ಕ್ರಿಕೆಟ್‌ನ್ನು ಹೆಚ್ಚು ಜನಪ್ರಿಯಗೊಳಿಸುವ ಕ್ರಮ ಎಂದು ಅದಕ್ಕೆ ತೋಚಿದದಾರೂ ಹೇಗೆ?

ಬೌಲರ್‌ಗಳ ಅವನತಿಗೆ ಮುನ್ನುಡಿ ಬರೆಯ ಹೊರಟದ್ದು ಟೆಸ್ಟ್‌ನ ಅವನತಿ ಮತ್ತು ಏಕದಿನ ಪಂದ್ಯಗಳ ಹುಚ್ಚು. ಏಕದಿನ ಪಂದ್ಯಗಳಲ್ಲದರೂ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆ ಉಳಿಸಿಕೊಂಡಿದ್ದ ಬೌಲರ್‌ಗಳಿಗೆ ಟ್ವೆಂಟಿ - ಟ್ವೆಂಟಿಯ ಸುನಾಮಿ ವೇಗ ಮೈದಾನವನ್ನೇ ಸ್ಮಶಾನವನ್ನಾಗಿಸಿ ಬಿಟ್ಟಿದೆ.

ಬೌಲರ್‌ಗಳಿಗೆ ಮಾರಕವಾದ ಕೆಲ ಸಂಗತಿಗಳನ್ನೇ ತೆಗೆದುಕೊಳ್ಳಿ. ಏಕದಿನ ಮತ್ತು ಟ್ವೆಂಟಿ ಟ್ವೆಂಟಿ ಪಂದ್ಯಗಳಲ್ಲಿ ಬೌಲರ್ ಒಬ್ಬ ಓವರಿಗೆ ಒಂದೇ ಬೌನ್ಸರ್ ಹಾಕಬಹುದು ಆದರೆ ಬ್ಯಾಟ್ಸ್‌ಮನ್ ಆರು ಎಸೆತಗಳಿಗೂ ಸಿಕ್ಸ್‌ರ್ ಬಾರಿಸಬಹುದು! ನೋಬಾಲ್ ಹಾಕಿದರೆ ಮುಂದಿನ ಎಸೆತ ಫ್ರೀ ಹಿಟ್, ಬ್ಯಾಟ್ಸ್‌ಮೆನ್‌ಗೆ ಆಡಬಹುದಾದ ಜಾಗದಲ್ಲೇ ಅವನಿಗೆ ಆಡಲಾಗದ ರೀತಿಯಲ್ಲಿ ಬೌಲಿಂಗ್ ಮಾಡಬೇಕು ಮತ್ತು ನಿಗದಿತ ಸಂಖ್ಯೆಯ ಓವರ್‌ಗಳನ್ನು ಮಾತ್ರ ಎಸೆಯಬೇಕು ಇತ್ಯಾದಿ. ಟೆಸ್ಟ್‌ನಲ್ಲಿ ಇದಕ್ಕೆ ರಿಯಾಯಿತಿ ಇರಬಹುದು ಆದರೆ ಭವಿಷ್ಯದ ಕ್ರಿಕೆಟ್ ಟ್ವೆಂಟಿ ಟ್ವೆಂಟಿ ಸುತ್ತಲೇ ಗಿರಕಿ ಹೊಡಿಯುವ ಎಲ್ಲ ಸಾಧ್ಯತೆಗಳಿರುವುದರಿಂದ ಈ ನಿಯಮಗಳು ಭವಿಷ್ಯದ ಬೌಲರ್ ತಾನಗಬೇಕು ಎಂದು ಬಯಸುವ ಕ್ರಿಕೆಟಿಗ ಆ ಆಸೆಗೆ ತರ್ಪಣ ಬಿಟ್ಟು ಬ್ಯಾಟ್ ಹಿಡಿಯುವಂತೆ ಮಾಡುತ್ತದೆ.

ಇಂತಹ ಸಮಸ್ಯೆಗಳು ಉದ್ಭವಿಸಿದಾಗ ಸಾಮಾನ್ಯವಾಗಿ ಎಲ್ಲರೂ ಮುಗಿಬಿದ್ದು ಕೊಡುವ ಸಲಹೆ, ಅಕಾಡೆಮಿ ಸ್ಥಾಪಿಸಬೇಕು ಇದರಿಂದ ಯುವ ಮತ್ತು ಬಾಲ ಪ್ರತಿಭೆಗಳ ಸಾಮರ್ಥ್ಯಕ್ಕೆ ಪಾಲಿಶ್ ನೀಡಲಾಗುತ್ತದೆ ಎಂಬುದು. ಆದರೆ ಈ ಅಕಾಡೆಮಿಗಳು ಬೌಲರ್‌ಗಳಿಗೆ ಸಾಮರ್ಥ್ಯ ತುಂಬುವುದರ ಬದಲು ಅವರಲ್ಲಿ ಇರುವ ಸಾಮರ್ಥ್ಯವನ್ನೇ ಪಿನಿಶ್ ಮಾಡುತ್ತಿವೆಯೋ ಎಂದೆನಿಸುತ್ತದೆ. ಹಿಂದೆ ಆಡುತ್ತಿದ್ದದ್ದು ಬಹುತೇಕ ಕಚ್ಚಾ ಪ್ರತಿಭೆಗಳು. ಆದರೆ ಇಂದು ಎಲ್ಲ ರೀತಿಯ ತರಬೇತಿ ಪಡೆದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸುವ ಬೌಲರ್ ಒಬ್ಬ ಯಾವುದೇ ಜಾದೂ ಮಾಡಲು ವಿಫಲನಾಗುತ್ತಿದ್ದನೆ ಎಂದರೆ ಅದು ಅಕಾಡೆಮಿಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ.

ಎಲ್ಲ ಸ್ವರೂಪದ ಕ್ರಿಕೆಟ್ ಸರಣಿಗಳಲ್ಲೂ ಕನಿಷ್ಟ ಶೇ ೪೦ ಪಂದ್ಯಗಳದರೂ ಬೌಲಿಂಗ್ ಪಿಚ್‌ನಲ್ಲೇ ನಡೆಸಬೇಕು. ಹಾಂಕಾಂಗ್ ಸೂಪರ್ ಸಿಕ್ಸ್ ಕೂಟದಲ್ಲಿ ಬ್ಯಾಟ್ಸ್‌ಮನ್ ೩೦ ರನ್ ಮಾಡಿದೊಡನೆ ಪೆವಿಲಿಯನ್ ಸೇರಿಕೊಳ್ಳಬೇಕು ಅದೇ ರೀತಿಯ ನಿಯಮವನ್ನು ದೇಶಿಯ ಟ್ವೆಂಟಿ ಟ್ವೆಂಟಿ ಪಂದ್ಯಗಳಲ್ಲಿ ಜಾರಿಗೆ ತರಬಹುದು. ಪವರ್ ಪ್ಲೆಯ ಒವರ್‌ಗಳ ಸಂಖ್ಯೆಗೆ ಕಡಿವಾಣ ಹಾಕಬೇಕು. ಮತ್ತೆ ಬೌಲರ್ ಒಬ್ಬನಿಗೆ ತನಗೆ ಅನುಕೂಲಕರವಾದ ಫಿಲ್ಡಿಂಗ್ ವ್ಯೂಹವನ್ನು ರಚಿಸಲು ಮುಕ್ತ ಸ್ವಾತಂತ್ರ್ಯವಿರಬೇಕು. ಫ್ರೀ ಹಿಟ್‌ನಂತಹ ಸೌಲಭ್ಯವನ್ನು ಬೌಲರ್‌ನಿಂದ ಕಿತ್ತುಕೊಳ್ಳಬೇಕು. ಇಲ್ಲವೆಂದರೆ ಫ್ರೀ ಹಿಟ್‌ಗೆ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಬ್ಯಾಟ್ಸ್‌ಮನ್ ವಿಫಲನಾದರೆ ತಂಡದ ಅಥವಾ ಅವನ ಖಾತೆಯಿಂದ ಒಂದಿಷ್ಟು ರನ್ ಕಸಿಯಬೇಕು. ಹಳೆ ಚೆಂಡು, ಹೊಸ ಚೆಂಡು ಬಳಸುವುದರ ಬಗ್ಗೆ ಇಲ್ಲಸಲ್ಲದ ನಿಯಮಗಳನ್ನು ಮಾಡುವುದರ ಬದಲು ಬೌಲರ್‌ಗೆ ತನಗಿಷ್ಟದ ಬಾಲ್ ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಬೇಕು.

ಬೌಲಿಂಗ್‌ನ ಗುಣಮಟ್ಟ ಕುಸಿದರೆ ಅದು ಕ್ರಿಕಟ್‌ನ ಸಮಗ್ರತೆಗೆ ದೊಡ್ಡ ಹಾನಿಯುಂಟು ಮಾಡುತ್ತದೆ. ಅದ್ದರಿಂದ ಐಸಿಸಿ ಕ್ರಿಕೆಟ್‌ನ ಮೂರು ವಿಭಾಗಗಳ ನಡುವೆ ಸಮತೋಲನ ತರುವ ಬಗ್ಗೆ ಚಿಂತಿಸಬೇಕು. ಬೌಲರ್‌ಗಳಿಗೆ ಸಹಕಾರಿಸುವ ಒಂದಿಷ್ಟು ಕ್ರಮಗಳನ್ನು ಐಸಿಸಿ ತುರ್ತಾಗಿ ತೆಗೆದುಕೊಳ್ಳದಿದ್ದರೆ ಒಂದೆರಡು ದಶಕದೊಳಗೆ ಕ್ರಿಕೆಟ್‌ನಲ್ಲಿ ಬೌಲರ್‌ಗಳು ನೇಪಥ್ಯಕ್ಕೆ ಸೇರಬಹುದು ಮತ್ತು ಅವರ ಸ್ಥಾನವನ್ನು ಬೌಲಿಂಗ್ ಮೇಷಿನ್ ತುಂಬುವುದು ಖಂಡಿತ! ಹೀಗಾದಲ್ಲಿ ಕ್ರಿಕೆಟ್‌ಗೆ ಲಕ್ವ ಹೊಡೆದಂತೆ!

Friday, April 2, 2010

ಈ ಪತ್ರ ಓದಿ ಏನಾದರು ಮಾಡಿ, ಇಲ್ಲ, ನಾ ಸಾಯುತ್ತೇನೆ ಬಿಡಿ

ದೊಡ್ಡ ದೊಡ್ಡ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ಸರಕಾರಿ ಅಧಿಕಾರಿಗಳಿಗೆ, ಮಧ್ಯವರ್ತಿಗಳಿಗೆ, ವ್ಯಾಪಾರಿಗಳಿಗೆ ಮತ್ತು ವ್ಯವಸ್ಥೆ ರೂಪಿಸಿ ಅದನ್ನು ತಮಗನುಕೂಲಕರವಾಗಿ ಬಳಸಿಕೊಳ್ಳಲು ಶಕ್ತರಾಗಿರೋ ಎಲ್ಲರಿಗೂ ನನ್ನ ಶಿರ ಸಾಷ್ಟಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.
ನೀವು, ನಿಮ್ಮ ಮನೆಯವರು ಕ್ಷೇಮವಾಗಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೆ, ಅದನ್ನೇ ಪುನಃ ಪುನಃ ಕೇಳಿ ನಿಮಗೆ ಕಸಿನಿಸಿ ಉಂಟು ಮಾಡುವುದಿಲ್ಲ. ಅಕಸ್ಮಿಕವಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಕ್ಷೇಮವಾಗಿಲ್ಲ ಎಂದರೆ ಏನು ಮಾಡಲಾಗದ ಹತಭಾಗ್ಯ ನಾನು. ಇನ್ನು ನನ್ನ ಸ್ಥಿತಿ ನಿಮಗೆ ಗೊತ್ತಿರುವಂತದ್ದೇ. ಗೊತ್ತಿದ್ದು ಗೊತ್ತಿಲ್ಲದವರಂತೆ ನಟಿಸುತ್ತಿರುವ ಅಥವಾ ನನ್ನ ನೋವಿಗೆ ಸ್ಪರ್ಶ ಜ್ಙಾನವನ್ನೇ ಕಳೆದುಕೊಂಡವರಂತಿರುವ ನಿಮ್ಮ ಮುಂದೆ ಮಗದೊಮ್ಮೆ ವ್ಯರ್ಥಾಲಾಪ ಮಾಡುವುದು ನನಗೆ ಸುತಾರಾಂ ಇಷ್ಟವಿಲ್ಲ. ಅದರೂ ಕರಿ ಮುಗಿಲ ಅಂಚಿನಲ್ಲಿನ ಮೂಡೋ ಬೆಳ್ಳಿರೇಖೆಯಂತೆ ಯಾರೋ ಒಂದಿಷ್ಟು ಸಹೃದಯರು ನನ್ನ ಕಷ್ಟಕ್ಕೇ ಮರುಗಬಹುದು, ಕೊರಗಬಹುದು ಮತ್ತು ಪರಿಹಾರದ ದಾರಿ ತೋರಿಸಬಹುದು ಎಂಬ ದೂರದ ಆಸೆಯಿಂದ ನನ್ನ ಬೇಗುದಿಯನ್ನು ಈ ಪತ್ರದ ಮೂಲಕ ಮಗದೊಮ್ಮೆ ಕಾರುತ್ತಿದ್ದೇನೆ. ಎಷ್ಟಾದರೂ ನಾನು ಮನುಷ್ಯನೇ ತಾನೇ!

ನೀವೆಲ್ಲ ನನ್ನನ್ನು ಅನ್ನದಾತ, ನೇಗಿಲ ಯೋಗಿ, ದೇಶದ ಬೆನ್ನೆಲುಬು ಹೀಗೆ ನಾನ ಉಪಮಾನ, ಉಪಮೇಯ, ರೂಪಕಗಳಿಂದ ಕರೆದ್ರಿ. ಈಗಲೂ ಆಗಾಗ ಅಥವಾ ಹಿಂದಿನದಕ್ಕಿಂತ ಹೆಚ್ಚು ಬಾರಿ ಹೀಗೆ ಕರೆಯುತ್ತಿದ್ದೀರಿ. ನನ್ನ ಶ್ರಮದ ಮಹತ್ವ, ಉಪಯುಕ್ತತೆ ಮತ್ತು ದೇಶದ ಅಥವಾ ನಿಮ್ಮ ಅಭಿವೃದ್ಧಿಯಲ್ಲಿ ನನ್ನ ಅಗತ್ಯತೆಯ ಬಗ್ಗೆ ನೀವೆಲ್ಲ ಅದೆಷ್ಟು ಚೆನ್ನಾಗಿ ಮಾತನಾಡುತ್ತೀರಿ? ನಾನು ಅದನ್ನು ಕೇಳಿ, ನೋಡಿ ಮೂಕವಿಸ್ಮಿತನಾಗಿದ್ದು ಇದೆ, ಅದೇಷ್ಟೋ ಬಾರಿ ಕಣ್ಣಾಲಿಗಳು ತೊರೆಯಾದದ್ದೂ ಇದೆ. ಯಾಕ್ ಅಂತೀರಾ? ನನಗೆ ನಿಮ್ಮ ಮಾತಿನ ಪರದೆಯ ಹಿಂದಿನ ಸತ್ಯ ಗೊತ್ತು. ನಿಮ್ಮ ಮಾತಿನ ಗತ್ತು ತೂತಾದ ಗೆರಾಟೆಯಲ್ಲಿ ನೀರು ತುಂಬಿಸುವ ಸಾಹಸದಂತಾದ್ದು ಎಂಬುದೂ ನನಗೆ ಗೊತ್ತು. ಅದೆಲ್ಲದಕ್ಕಿಂತ ಹೆಚ್ಚಾಗಿ ಇಂತಹ ಮಾತು ಆಡಿ ಆಡಿ ನೀವು ಅದೇಷ್ಟು ಬಾರಿ ನನ್ನ ಕತ್ತು ಕೊಯ್ದಿಲ್ಲ? ಬೆನ್ನಿಗೆ ಚೂರಿ ಹಾಕಿಲ್ಲ? ಆದರೂ ನೀವು ಅದೇ ಮಂತ್ರವನ್ನು ಮತ್ತೇ ಮತ್ತೇ ಪಠಿಸುತ್ತಿದ್ದೀರಲ್ಲಾ ಇದೆಲ್ಲ ಪರಿಶುದ್ಧ ಬೊಗಸ್ ಅಂತ ಗೊತ್ತಿದ್ರು ನಾನು ಏನೂ ಮಾಡಲಾಗದನಾಗಿ ಹೋಗುವಂತಾಗುತ್ತಿದೆಯಲ್ಲ ಎಂಬ ಅಸಹಾಯಕತೆಯ ಪರಾಕಾಷ್ಟೇಯ ಕಣ್ಣೀರಿದು.

ನನ್ನದು ಬಹಳ ಬಹಳ ದೊಡ್ಡ ಕುಟುಂಬ. ದೇಶದ ೧೧೬ ಕೋಟಿ ಜನರಲ್ಲಿ ನನ್ನ ವೃತ್ತಿ ಬಾಂಧವರದ್ದೇ ಬಹುದೊಡ್ಡ ಪಾಲು. ಸುಮಾರು ೬೦ ಕೋಟಿ ಜನ ನನ್ನ ಸಹವರ್ತಿಗಳು ಎಂದು ಹೇಳಿಕೊಳಬಲ್ಲೆ. ಈ ಅಂಕಿ ಸಂಖ್ಯೆಗಳ ಜೊತೆಗೆ ನನ್ನ ಚಟುವಟಿಕೆಗಳಿಗೆ ಪೂರಕವಾದ ವೃತ್ತಿಯಲ್ಲಿ ಅದೇಷ್ಟೋ ಕೋಟಿ ಕೋಟಿ ಜನರಿದ್ದಾರೆ. ನಾನೀಗ ಅದೇಷ್ಟೋ ದೊಡ್ಡ ಪಾತಾಳಕ್ಕೆ ಬಿದ್ದು ತೆವಳುತ್ತಿದ್ದರೂ ಕೂಡ ದೇಶಕ್ಕೆ ಶಕ್ತಿ, ಸಮೃದ್ದಿ ಮತ್ತು ಸ್ವಾಭಿಮಾನ ತುಂಬುವವನು, ತರುವವನು ನಾನೇ. ಅದ್ದರಿಂದ ನನ್ನ ಬಗ್ಗೆ ನೀವೆಲ್ಲ ತೋರಿಕೆಯ ಕಾಳಜಿಯನ್ನಾದರೂ ತೋರಿಸಲೇ ಬೇಕು. ಅದನ್ನಂತು ನೀವೆಲ್ಲ ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದ್ದೀರಿ, ನಿಮ್ಮ ವಂಶಸ್ಥರಿಗೂ ಅದನ್ನೂ ಮುಂದುವರಿಸಿಕೊಂಡು ಹೋಗಲು ಹೇಳುತ್ತಿದ್ದೀರಿ. ನನ್ನ ಬಗ್ಗೆ ನಿಮಗಿರುವ ಕಪಟ ಗೌರವಕ್ಕೆ ನಾನು ಅಭಾರಿ. ನಿಮ್ಮ ಈ ಋಣವನ್ನು ನಾನು ಆಗಾಗ ತೀರಿಸುತ್ತಿದ್ದೇನೆ. ನಾನು ಇದನ್ನು ವ್ಯಂಗ್ಯವಾಗಿ ಹೇಳುತ್ತಿಲ್ಲ ಸ್ವಾಮಿ, ನಿಮಗೆ ಪ್ರತಿ ಚುನಾವಣೆ ಸಂದರ್ಭ ವೋಟು ಹಾಕುತ್ತೇನೆ, ನೀವು ಹೇಳಿದ ಎಲ್ಲ ತೆರಿಗೆಗಳನ್ನು ಚಾಚೂ ತಪ್ಪದೆ ಕಟ್ಟುತ್ಥೇನೆ, ನಿಮಗೆ ರಸ್ತೆ ಮಾಡಲು, ಪೈಪ್‌ಲೈನ್ ಹಾಕಲು, ಕಾರ್ಖಾನೆಗಳನ್ನು ಸ್ಥಾಪಿಸಲು ಎಕರೆಗಟ್ಟಲೆ ಜಾಗವನ್ನು ಕೊಡುತ್ತೇನೆ. ನನ್ನ ಕ್ಯೆಯಿಂದ ಒಂದಂಕಿ ಬೆಲೆಗೆ ಕೊಳ್ಳುವ ಉತ್ಪನ್ನಗಳನ್ನು ನೀವು ಮೂರಂಕಿ ಬೆಲೆಗೆ ಮಾರಿದ್ರೂ ನಾನು ಸೊಲ್ಲೆತ್ತುವುದಿಲ್ಲ, ನಿಮ್ಮ ಕೈಯಿಂದ ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ತೀರಿಸಲಾಗದಿದ್ದಾಗ ನನ್ನ ಪ್ರಾಣವನ್ನೇ ನಿಮ್ಮ ಹೆಸರು ಹೇಳಿ ತ್ಯಾಗ ಮಾಡಿದ್ದೇನೆ. ಈಗಲಾದರೂ ನನಗಿರುವ ಕೃತಜ್ಞತೆ ಅರ್ಪಿಸುವ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಬಂದಿರಬಹುದು ಎಂದು ನಂಬಿದ್ದೇನೆ.

ನನ್ನ ವೃತ್ತಿ ಬಗ್ಗೆ ನಿಮಗೆ ಒಂಚೂರು ಹೇಳುತ್ತೇನೆ. ನನ್ನನ್ನು ಕೃಷಿಕ, ರೈತ ಎಂದೇ ಎಲ್ಲರು ಕರೆಯುತ್ತಾರೆ. ಕೃಷಿ ಮಾಡುವುದರ ಮೂಲಕ ನಾನು ನನ್ನ ಮತ್ತು ನಿಮ್ಮ ಹೊಟ್ಟೆ ತುಂಬಿಸುತ್ತೇನೆ. ನನ್ನ ವೃತ್ತಿಯಲ್ಲಿರುವಷ್ಟು ವೈವಿಧ್ಯತೆ ಬೇರೆ ಯಾವುದೇ ಉದ್ಯೋಗದಲ್ಲಿರಲಿಕ್ಕಿಲ್ಲ. ನಿಜ ಹೇಳಬೇಕೆಂದರೆ ನನ್ನ ವೃತ್ತಿಯನ್ನು ಹಿಂದಿನವರು ಒಂದು ವೃತ್ತಿ ಅಥವಾ ಉದ್ಯೋಗ ಎಂದು ಪರಿಗಣಿಸದೇ ಒಂದು ಜೀವನ ವಿಧಾನ ಎಂದೇ ಹೇಳುತ್ತಿದ್ದರು. ಅದ್ದರಿಂದ ನನ್ನ ವೃತ್ತಿಯನ್ನು ದೂರವಿಟ್ಟು ಯಾವುದೇ ಸಂಸ್ಕ್ರತಿಯನ್ನು ವ್ಯಾಖ್ಯಾನಿಸಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ನನ್ನ ವೃತ್ತಿ ಸರ್ವವ್ಯಾಪಿ ಮತ್ತು ಚಲನಶೀಲ. ಭಾರತದ ಮಟ್ಟಿಗೆ ವೇದಗಳ ಕಾಲದಿಂದ ಕಳೆದ ಸಹಸ್ರಮಾನದ ಕೊನೆಯ ಶತಮಾನದಾದಿಯವರೆಗಿನ ಬಹಳ ವಿಸ್ತಾರವಾದ ಸುವರ್ಣ ಯುಗವನ್ನು ನಾನು ಕಂಡಿದ್ದೇನೆ. ಈ ನಡುವೆ ಬರ, ಪ್ರವಾಹ, ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳು, ಕೆಲ ರಾಜರುಗಳ ತೆರಿಗೆ ನೀತಿ, ದಬ್ಬಾಳಿಕೆಗಳು ನನ್ನ ವ್ವತ್ತಿಯಲ್ಲಿದ್ದವರ ಪಾಲಿಗೆ ಕಂಟಕ ತಂದಿರಬಹುದು. ಅದರೆ ಅದನ್ನೇಲ್ಲ ಮೀರಿ ನನ್ನ ವೃತ್ತಿ ಉಳಿದುಕೊಂಡಿತು, ಚಿಗಿತುಕೊಂಡಿತು.

ದೇಶದಲ್ಲಿ ದುರ್ಭಿಕ್ಷ ಇದ್ದಾಗ, ಹಸಿವಿನಿಂದ ಸತ್ತಾಗ, ಒಂದು ಹೊತ್ತಿನ ಊಟವೇ ಗತಿಯಾದಾಗಲೂ ಕೂಡ ನನ್ನ ಕ್ಷೇತ್ರ ಜೀವಂತಿಕೆ ಅಥವಾ ಯವ್ವನವನ್ನು ಉಳಿಸಿಕೊಂಡೇ ಬಂದಿತ್ತು. ಯಾರೂ ನನ್ನ ವೃತ್ತಿ ಬಗ್ಗೆ ಜಿಗುಪ್ಸೆ ತಾಳಿರಲಿಲ್ಲ. ಎಲ್ಲರು ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಬಂದರು. ಅದ್ದರಿಂದ ಬಡತನ ಮತ್ತು ಸಮೃದ್ದಿ ಕತ್ತಲು ಹಗಲಿನಂತೆ ಒಂದಾಕ್ಕೊಂದು ಅಂಟಿಕೊಂಡೇ ಬಂದವು. ಈ ಮಾತೂ ಕೇವಲ ನನ್ನ ವೃತ್ತಿಗೆ ಮಾತ್ರ ಅನ್ವಯವಾಗದೇ ನನ್ನ ವೃತ್ತಿ ಜತೆಗೆ ಪೂರಕವಾಗಿದ್ದ ಎಲ್ಲ ವೃತ್ತಿಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಅಕ್ಕಸಾಲಿಗ ಅಂದರೆ ಜನರ ಆಸೆಗಳನ್ನು ಪೂರೈಸುವ, ಕಮ್ಮಾರ ಕೃಷಿ ಉಪಕರಣ ಒದಗಿಸಿವುವವ ಇಬ್ಬರೂ ನೆಮ್ಮದಿಯಿಂದ ಮೂರು ಹೊತ್ತು ಉಣ್ಣಬೇಕು ಎಂದರೆ ನಾನೂ ಮೂರು ಹೊತ್ತು ಉಣ್ಣುವ ಸ್ಥಿತಿಯಲ್ಲಿರಬೇಕಿತ್ತು.

ನಾನು ಪೂರ್ವಜರ ಸುಖಕ್ಕೆ ಹಲುಬದೆ ನನ್ನ ಈಗೀನ ಸ್ಥಿತಿಯನ್ನು ನಿಮ್ಮ ಮುಂದೆ ಬೆತ್ತಲು ಮಾಡುತ್ತೇನೆ. ನನ್ನ ಈ ಪತ್ರದ ಉದ್ದೇಶ ಕೂಡ ಅದೇ. ಆದರೆ ನನ್ನ ಈಗೀನ ದುರ್ಗತಿ ಬಗ್ಗೆ ಮಾತನಾಡಬೇಕಾದರೆ ಕಳೆದ ಶತಮಾನದತ್ತ ಒಮ್ಮೆ ಇಣುಕಿ ನೋಡುವುದು ಅನಿವಾರ್ಯ. ನನ್ನ ದೇಶದ ಮಟ್ಟಿಗೆ ೧೯೦೦ ರಿಂದ ೨೦೦೦ದ ವರೆಗಿನ ಅವಧಿ ಅನೇಕ ಸ್ಥಿತ್ಯಂತರಗಳನ್ನು ತಂದಂತದ್ದು. ಇಲ್ಲಿ ಬಹುತೇಕ ಸಂದರ್ಭಗಳಲ್ಲಿ ನಗುವಿನ ಬಾಗಿಲಲ್ಲಿ ನೋವು, ಅಥವಾ ನೋವಿನ ಬಾಗಿಲಲ್ಲಿ ನಗು ಹೊಂಚು ಹಾಕಿ ಭಾರತೀಯರನ್ನು ಗಬಕ್ಕನೆ ಹಿಡಿದುಕೊಳ್ಳುತ್ತಿತ್ತು. ಆ ಕಾರಣಕ್ಕೆ ಅವನು ಅದೇಷ್ಟೋ ಬಾರಿ ತಬ್ಬಿಬ್ಬಾಗಿ ಹೋಗುತ್ತಿದ್ದ. ಇನ್ನು ಅನೇಕ ಬಾರಿ ಆರಂಭದಲ್ಲಿ ಸಿಹಿ ಎನಿಸಿದ ಸಂಗತಿ, ಘಟನೆ, ಯೋಜನೆ (ಸಿಹಿಯೆಂದು ತೋರಿಸಲ್ಪಟ್ಟದ್ದು ಎಂದು ಓದಿಕೊಂಡರು ಸರಿಯೇ) ಕಾಲಾನುಕ್ರಮದಲ್ಲಿ ಪರಮ ಕಹಿಯಾಗಿ ಅದರ ಫಲಾನುಭವಿಗಳಿಗೆ ಹಾಲಾಹಲವಾದ ಸಂದರ್ಭವೂ ಇದೆ. ನನ್ನ ವೃತ್ತಿ ಎರಡನೇ ರೀತಿಯ ಅಪಸವ್ಯಗಳ ನೇರ ಫಲಾನುಭವಿ. ಇಂತಹ ಎಡಬಿಡಂಗಿತನಗಳ ಜೊತೆಗೆ ಇನ್ನೂ ಅನೇಕ ತಪ್ಪು ನಿರ್ಧಾರಗಳು ನನ್ನ ಚೈತನ್ಯವನ್ನೇ ಉಡುಗಿಸಿತ್ತು.

ಕಳೆದ ಶತಮಾನದ ಅರಂಭದಲ್ಲಿದ್ದ ಬ್ರಿಟೀಷ್ ಆಡಳಿತಕ್ಕೆ ನನ್ನ ಬಗ್ಗೆ ಏನೇನೂ ಕಾಳಜಿ ಇರಲಿಲ್ಲ, ನಾನು ಅವರಿಂದ ಅದನ್ನು ನಿರೀಕ್ಷಿಸಿಯೂ ಇರಲಿಲ್ಲ. ನನ್ನ ವೃತ್ತಿಯೆಂದರೆ ಅವರಿಗೆ ಶತ್ರು ಪಾಳಯದಂತಿತ್ತು.

ಬ್ರಿಟೀಷರ ಕಾಲದಲ್ಲಿ ಕೈಗಾರಿಕೆಗಳ ಸ್ಥಾಪನೆ ಯಥೇಚ್ಚವಾಗಿ ಆಯಿತು. ಅದರ ಜೊತೆಗೆ ಸೇವಾವಲಯ ಕೂಡ ಕಣ್ಣು ಬಿಡಲು ಶುರುಮಾಡಿತ್ತು. ಹೊಸ ಹೊಸ ಕೆಲಸಗಳು ಸೇವಾವಲಯದಲ್ಲಿ ನಿರ್ಮಾಣಗೊಂಡವು. ಭಾರತೀಯರಿಗೆ ಮತ್ತೆರಡು ವಲಯಗಳಲ್ಲಿ ದುಡಿಯುವ ಅವಕಾಶ ಸಿಕ್ಕಿತು. ಇದು ಖಂಡಿತವಾಗಿಯೂ ನನ್ನ ವೃತ್ತಿಗೆ ಯಾವುದೇ ಹಾನಿ ತರಲಿಲ್ಲ. ನನ್ನ ವೃತ್ತಿಗೆ ದೇಶದ ಎಲ್ಲ ಜನರಿಗೆ ಉದ್ಯೋಗ ಕೊಡುವ ಸಾಮರ್ಥ್ಯ ಇಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ಆಗ ಜನಸಂಖ್ಯೆ ಪ್ರಮಾಣ ಒಂದೇ ಸಮನೆ ಏರಲು ಶುರುವಾಗಿತ್ತು. ಆದೇ ಪ್ರಮಾಣದಲ್ಲಿ ಕೃಷಿ ರಂಗದಲ್ಲಿ ಉದ್ಯೋಗ ಪ್ರಮಾಣವನ್ನು ಏರಿಸಲು ಸಾಧ್ಯವಿರಲಿಲ್ಲ. ಹಾಗೆಯೇ ಎಲ್ಲರೂ ಕೃಷಿ ಮಾಡಲು ಯೋಗ್ಯರು ಅಥವಾ ಮಾಡಬೇಕು ಎಂದು ಬಯಸುವಷ್ಟು ಕಠಿಣ ಹೃದಯಿ ನಾನಲ್ಲ. ಒಟ್ಟಿನಲ್ಲಿ ಅಧುನಿಕತೆಯನ್ನು ನನ್ನ ವೃತ್ತಿಯೊಳಗೆ ಬಿಟ್ಟುಕೊಳ್ಳಲು ಕಾಲ ಪಕ್ವವಾಗುತ್ತ ಬಂದಿತ್ತು. ಆದರೆ ಯಾವುದು ಅಧುನಿಕತೆ? ಅದರಲ್ಲಿ ನನಗೆ ಯಾವುದು ಒಳ್ಳೆಯದು ಮಾಡುತ್ತದೆ? ಯಾವುದು ಕೆಟ್ಟದು ಎಂದು ನಿರ್ಧರಿಸುವಲ್ಲಿ ನಾನು ಎಡವಿದೆ.

ಸರಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕೆ ಬಿಟ್ಟಿತ್ತು. ದೇಶವಾಸಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನೂ ಕುಣಿದು ಕುಪ್ಪಳಿಸಿದೆ. ಇನ್ನು ನಮ್ಮದೇ ಆಡಳಿತ, ನಮ್ಮವರೇ ನಮ್ಮನ್ನು ಪಾಲಿಸುವವರು ಅಂದಾಗ ನಮಗೆ ಕಾಣಿಸಿದ್ದು ಉಜ್ವಲ ಭವಿಷ್ಯ ಮಾತ್ರ. ಬಹುಪಾಲು ಆಡಳಿತಗಾರರು ನನ್ನ ವೃತ್ತಿಯ ಹಿನ್ನೆಲೆ ಇದ್ದವರು ಅಥವಾ ಆಗಿದ್ದ ನಾಯಕರುಗಳಿಗೆ ನನ್ನ ಕ್ಷೇತ್ರ ಎದುರಿಸುತ್ತಿದ್ದ ಸಮಸ್ಯೆಗಳ ಪೂರ್ಣ ಅರಿವಿತ್ತು. ಇನ್ನೇನೂ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಸ್ವರ್ಗವೇ ಬಾಳಾಗುತ್ತದೆ ಎಂದು ಭಾವಿಸಿದ್ದೆ. ಆದರೆ ಬರುವ ಸ್ವರ್ಗ ಬಿಡಿ ಇದ್ದ ಬಾಳು ಹಾಳಾಗಿ, ಸುಂದರ ಕನಸುಗಳೆಲ್ಲ ಹೋಳಾಗಿ ನರಕ ಸದೃಶ ಭವಿಷ್ಯ ಹೆಗಲೇರಿ ಕುಳಿತುಕೊಂಡು ಬಿಟ್ಟಿತು. ಆರವತ್ತರ ದಶಕದಲ್ಲೇ ನನ್ನ ಹೆಗಲ ಮೇಲೆ ಬಂದು ಕುಳಿತಿರುವ ಸಮಸ್ಯೆಗಳ ಮೂಟೆ ೫೦ ವರ್ಷವಾದರೂ ಇನ್ನೂ ಕೆಳಗಿಳಿದಿಲ್ಲ, ಪಕ್ಕ ಕೆಳಗಿಳಿಯುವ ಲಕ್ಷಣಗಳು ಇಲ್ಲ. ನನ್ನನ್ನು ಈ ಸಮಸ್ಯೆಗಳಿಂದ ಮುಕ್ತ ಮಾಡಬೇಕಿರುವ ನೀವುಗಳು ನನ್ನನ್ನು ಮತ್ತಷ್ಟು ಸಮಸ್ಯೆ ಹೊರುವಂತೆ ಮಾಡುತ್ತಿದ್ದೀರಿ. ನಕ್ಷತ್ರಿಕನ ಕೆಲಸ ನಿಮ್ಮದು!

ಸರಿ, ಅರವತ್ತರ ದಶಕದಲ್ಲಿ ಏನಾಯ್ತು ನೋಡೋಣ. ಜನಸಂಖ್ಯೆ ಅತಿ ವೇಗವಾಗಿ ಬೆಳೆಯಿತು. ಅವರ ಹಸಿವು ನೀಗಿಸುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡೇ ಬಿಟ್ಟಿತು. ಅಷ್ಟರಲ್ಲಿ ಎಲ್ಲೆಲ್ಲೂ ಅಹಾರಕ್ಕಾಗಿ ಹಾಹಾಕಾರ ಶುರುವಿಟ್ಟುಕೊಂಡಿತ್ತು. ಈ ಸಮಸ್ಯೆಯನ್ನು ಸರಕಾರ ಪರಿಹರಿಸಲೇ ಬೇಕಿತ್ತು. ಈ ಬಗ್ಗೆ ನನ್ನದೇನು ತಕರಾರಿಲ್ಲ. ನಾನಂತು ಕನಸು ಮನಸ್ಸಿನಲ್ಲೂ ಯಾರೊಬ್ಬರು ಹಸಿವಿನಿಂದ ಸಾಯೋದನ್ನು ಬಯಸಿಲ್ಲ, ಬಯೋಸೋದು ಇಲ್ಲ. ಆದರೆ ಅದಕ್ಕಾಗಿ ತೆಗೆದುಕೊಂಡ ಕ್ರಮಗಳಿವೆಯಲ್ಲ ಅದು ಮಾತ್ರ ನನ್ನ ಸಮಾಧಿಗೆ ಮಾಡಿದ ಶಂಕುಸ್ಥಾಪನೆ. ಅಲ್ಲಿಂದ ಹೊಡೆತ ತಿನ್ನಲು ಶುರು ಮಾಡಿದ ನಾನು ಇನ್ನೂ ಹೊಡೆತ ತಿನ್ನುತ್ತಲೇ ಇದ್ದೇನೆ. ಯಾವಾಗ ಅಂತಿಮ ಹೊಡೆತ ಬೀಳುತ್ತದೆಯೋ ಎಂದು ಕಾಯುತ್ತಿದ್ದೇನೆ. ಸರಿ, ಸರಕಾರ ಹಸಿರು ಕ್ರಾಂತಿ ಮಾಡ ಹೊರಟಿತು. ಅದರಿಂದ ಅನ್ನದ ಬಟ್ಟಲಿಗೆ ಸಿಕ್ಕಾಪಟ್ಟೆ ವಿಷ, ರಸಗೊಬ್ಬರ ಬಿಸಾಡಿದೆ, ಅಧುನಿಕ ಉಪಕರಣಗಳನ್ನು ಬಳಸಲಾರಂಭಿಸಿದೆ. ನಿಮ್ಮ ಹೊಟ್ಟೆ ತುಂಬಿಸಬೇಕಿತಲ್ಲಾ! ನೀವೆಲ್ಲ ಹೇಳುವ ಮತ್ತು ನಿರೀಕ್ಷಿಸಿದ್ದ ಅಧುನಿಕ ಕೃಷಿಕನಾದೆ. ಹಸಿರು ಕ್ರಾಂತಿಯಿಂದ ನನ್ನ ಮತ್ತು ದೇಶದ ಬಾಳು ಹಸನಾಯಿತು ಎಂಬ ಭ್ರಾಂತಿಯ ಖೆಡ್ಡಾಕ್ಕೆ ಬಿದ್ದೆ ಅಥವಾ ನೀವು ಬೀಳಿಸಿದ್ರಿ.

ಹಸಿರು ಕ್ರಾಂತಿಯ ದೆಸೆಯಿಂದ ನನ್ನೆಲ್ಲ ದೇಶವಾಸಿಗಳು ಹೊಟ್ಟೆ ತುಂಬ ಉಂಡರು. ತದನಂತರ ಬೇರೆ ದೇಶದ ಜನರಿಗೂ ಉಣಿಸಿದೇವು. ೧೯೫೧ರಲ್ಲಿ ೩,೦೦೦ ರೂಪಾಯಿಗಳಾಷ್ಟಿದ್ದ ತಲಾ ಆದಾಯ ೧೯೮೦ಕ್ಕೆ ಬಂದಾಗ ೭,೦೦೦ ರೂ. ಗಳಾಯಿತು. ಎಂಥಾ ಸಾಧನೆ ಅಲ್ವಾ? ಅದರೆ ಆ ಹೊತ್ತಿನಲ್ಲೂ ನನ್ನ ವೇದನೆ ಬೆಲೆ ಪಡೆದುಕೊಳ್ಳಲಿಲ್ಲ. ನೀವು ನನ್ನನ್ನು ಜನರ ಹೊಟ್ಟೆ ತಣಿಸುವ ಯಂತ್ರ ಎಂದು ಪರಿಗಣಿಸಿದ್ರಿ ಹೊರತು ನನ್ನ ಹೊಟ್ಟೆಯನ್ನು ತಣ್ಣಗೆ ಇಡುವ ಯಾವ ಕ್ರಮಗಳನ್ನು ಕೈಗೊಳ್ಳಲಿಲ್ಲ, ಕೈಗೊಂಡರು ಅದಕ್ಕೆ ತುದಿ ಬುಡವಿರಲಿಲ್ಲ. ಆದರೆ ನನ್ನ ಕೈಕಾಲ ಕತ್ತರಿಸಿ ತಣ್ಣನೆ ಕೊಲ್ಲವ ಅನೇಕ ಕ್ರಮಗಳನ್ನು ಕೈಗೊಂಡಿರಿ.

ಕೈಗಾರಿಕೀಕರಣಕ್ಕೆ ಇನ್ನಿಲ್ಲದ ಮಹತ್ವ ಕೊಟ್ರಿ. ಬೇಸರವಿಲ್ಲ. ಸೇವಾವಲಯವನ್ನು ತಲೆ ಮೇಲಿರಿಸಿಕೊಂಡ್ರಿ. ನನಗೆ ಅಸೂಯೆ ಇಲ್ಲ. ನನ್ನನ್ನು ಮಾತ್ರ ಜಾಡಿಸಿ ಒದ್ರಿ ಅದರ ನೋವು ಕೂಡ ಮಾಸಿ ಹೋಗುತ್ತಿತ್ತೋ ಏನೋ. ಆದರೆ ನನಗೆ ನೀವು ಯಾವುದೇ ಹೊಸ ಯೋಜನೆಯಲ್ಲೂ ಪಾಲು ಕೊಡದೇ ಹೋದ್ರಿ, ನನ್ನ ಹೆಸರು ಹೇಳಿ ಆಡಳಿತ ನಡೆಸಿದ್ರಿ, ಶಿಕ್ಷಣ ನೀತಿ, ಉದ್ಯೋಗ ನೀತಿ, ಆರ್ಥಿಕ ನೀತಿ ಎಲ್ಲ ನನಗೆ ಶತ್ರುವಾಗುವಂತೆ ರೂಪಿಸಿದಿ. ಅದರೊಟ್ಟಿಗೆ ನನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿದ್ರಿ.

ಅಂದು ಹಸಿರು ಕ್ರಾಂತಿಯೆಂದು ಅತ್ಯಧಿಕ ಇಳುವರಿ ನೀಡೋ ಬೆಳೆ ಬೆಳೆದ ನಾನು ಇಂದು ಅದರ ಪಾರ್ಶ್ವ ಪರಿಣಾಮದಿಂದ ತುತ್ತು ಅನ್ನಕ್ಕೂ ಪರದಾಡುತ್ತಿದ್ದೇನೆ. ನನ್ನ ಭೂತಾಯಿ ರಸಹೀನಳಾಗಿದ್ದಾಳೆ. ಹಿಂದೆ ಅದೇಷ್ಟು ರಸಗೊಬ್ಬರ ಹಾಕುತ್ತಿದ್ದೇನೋ ಅದರ ಮೂರು ಪಟ್ಟು ರಸಗೊಬ್ಬರ ಹಾಕಿದರೆ ಬೆಳೆ ಕೈ ತಲುಪೀತು. ಹಿಂದೆ ಗುಂಡಿ ತೋಡಿದರೆ ನೀರ ಸೆಲೆ ಇಂದು ೨೦೦ ಆಡಿ ಆಳ ಕೊರೆದು ಬೋರ್‌ವೆಲ್ ಹಾಕಿದರೂ ನೀರ ಪಸೆಯಿಲ್ಲ. ನೀವು ಸರಕಾರಿ ಉದ್ಯೋಗಿಯೊಬ್ಬ ಕರ್ತವ್ಯ ಸಂದರ್ಭದಲ್ಲಿ ಅಸುನೀಗಿದರೆ ಅವನಿಗೆ ಲಕ್ಷಗಳಲ್ಲಿ ಪರಿಹಾರ ಕೊಡುತ್ತೀರಿ, ಅವನಿಗೆ ಹತ್ತಿರದ ಸಂಬಂಧಿಯೊಬ್ಬರಿಗೆ ಸರಕಾರಿ ಕೆಲಸವನ್ನೇ ದಯಪಾಲಿಸುತ್ತೀರಿ. ಆದರೆ ನಿಮ್ಮ ಯೋಜನೆಗೆ ಕಿವಿಕೊಟ್ಟು ನೀವು ಹೇಳಿದಂತೆ ಕೇಳಿ ಇಂದು ಒಂದು ಹುಲ್ಲುಕಡ್ಡಿಯೂ ಬೆಳೆಯದಂತ ಮಣ್ಣಿಗೆ ಧಣಿಯಾಗಿರೋ ನನಗೇನು ಕೋಟ್ಟಿದ್ದೀರಿ? ನಾನೇನು ನಿಮ್ಮಿಂದ ಕೊಡಲಾಗದನ್ನು ಕೇಳುತ್ತಿಲ್ಲ. ನನಗೆ ನನ್ನ ಭೂಮಿ ಮತ್ತೇ ಫಲವತ್ತಾಗಬೇಕು. ನೀವು ಚಂದ್ರಯಾಣ ಎಂದು ಸಾವಿರಗಟ್ಟಲೆ ಕೋಟಿ ಸುರಿದ್ರಿ, ಚಂದ್ರನಲ್ಲಿ ನೀರು ಇದೆ ಅದನ್ನು ಕಂಡು ಹಿಡಿದ್ವಿ ಅಂತ ಕುಣಿದು ಕುಪ್ಪಳಿಸಿದ್ರಿ. ಅಲ್ಲಿ ನೀರು ಇದ್ರೆ ನೀವಲ್ಲಿ ಕೃಷಿ ಮಾಡುತ್ತೀರಾ? ಕೃಷಿ ಮಾಡಬೇಕಾದರೆ ಭೂತಾಯಿಯೇ ಆಗಬೇಕಲ್ವಾ? ಈಗ ನಿಮ್ಮಲ್ಲಿ ನಾನು ಕೇಳುತ್ತಿರೋದು ನನ್ನ ಭೂಮಿಯ ಆಳದಲ್ಲಿ ಅಲ್ಲೆಲ್ಲೋ ಅಡಗಿ ಕೂತಿರುವ ಸಲಿಲ ಸೆಲೆಯನ್ನು ಮತ್ತೆ ಮೇಲೆ ಬರುವ ಹಾಗೆ ಮಾಡಿ, ಬರಡಗಿರೋ ಭೂಮಾತೆಯನ್ನು ಮತ್ತೆ ನಳನಳಿಸುವಂತೆ ಮಾಡಿ ಅಷ್ಟು ಸಾಕು. ಇದು ನಿಮ್ಮಿಂದ ಸಾಧ್ಯವಿಲ್ಲವೆಂದರೆ ನೀವು ಸಾಧಿಸಿದ್ದೀರಿ ಎಂದು ಹೇಳುವ ವೈಜ್ಞಾನಿಕ ಪ್ರಗತಿಗೆ ನನ್ನ ಧಿಕ್ಕಾರ. ಯಾರದೋ ಮನೆಗೆ ಬೆಂಕಿ ಹಾಕಿ ಅದರಲ್ಲಿ ಬೇಡಿ ಸೇದೋ ನಿಮ್ಮ ಚಾಳಿಗೆ ನನ್ನ ಧಿಕ್ಕಾರ! ಧಿಕ್ಕಾರ!!

ಹಸಿರುಕ್ರಾಂತಿಯ ಅರಂಭದಿಂದ ಅಂದರೆ ೧೯೬೦ ರಿಂದ ಜಾಗತಿಕರಣ ಇನ್ನೇನು ದೇಶವನ್ನು ಪ್ರವೇಶಿಸಿತು ಎಂಬ ಸ್ಥಿತಿಯ ೧೯೯೦ರವರೆಗಿನದ್ದು ನಿಮ್ಮ ಲೆಕ್ಕದಲ್ಲಿ ನನ್ನ ವೃತ್ತಿಯ ಉಚ್ಚ್ರಾಯ ದಿನಗಳಿರಬಹುದು, ಆದರೆ ೯೦ರ ನಂತರದ್ದು ನನ್ನ ವೃತ್ತಿ ರಂಗ ಹಿಂದೆಂದೂ ಕಂಡು ಕೇಳರಿಯದ ನಿಕೃಷ್ಟ ದಿನಗಳು. ಇದನ್ನು ರಾಮನ ಲೆಕ್ಕವೂ ಅಲ್ಲಗಳೆಯಲಿಕ್ಕಿಲ್ಲ, ಕೃಷ್ಣನ ಲೆಕ್ಕವೂ ಅಲ್ಲಗಳೆಯಲಿಕ್ಕಿಲ್ಲ. ಈ ಕೇಡಿನ ಕಾಲದಲ್ಲೂ ನಾನು ಬದುಕಿ ಇದ್ದೇನಲ್ಲಾ ಎಂಬುದರ ಬಗ್ಗೆ ನನಗೆ ಹೆಮ್ಮೆ ಮತ್ತು ಅದಕ್ಕಿಂತ ಒಂದು ಹಿಡಿ ಹೆಚ್ಚೇ ಎಂದೆನಿಸುಷ್ಟು ನಾಚಿಕೆ ಇದೆ.

ಕಳೆದ ಶತಮಾನದ ಅಂತ್ಯ ಮತ್ತು ಈ ಶತಮಾನದ ಆರಂಭದ ನನ್ನ ಸ್ಥಿತಿ ಯಾರಿಗೂ ಬರಬಾರದು. ಅಭಿವೃದ್ಧಿಯ ಹೆಸರಲ್ಲಿ ನನ್ನ ಜೀವನವೇ ಬರ್ಬಾದ್ ಆದದ್ದು ಈ ಜೋಡಿ ದಶಕದಲ್ಲೇ. ಇಲ್ಲಿ ನನಗೆ ಪೂರಕವಾದದ್ದು ಎಂದು ಸರಕಾರದಿಂದ ಏನು ಬರಲಿಲ್ಲ. ಬಂದರೂ ಅದೆಲ್ಲವನ್ನು ನುಂಗಿ ಹಾಕಲು ಮತ್ತೇನೋ ಕಾದಿರುತ್ತಿತ್ತು. ಇದರಿಂದ ಬೇಸತ್ತು, ತೊಂದರೆಗಳ ಚಕ್ರವ್ಯೂಹದಿಂದ ಹೊರಬರಲಾಗದೆ ನನ್ನ ವೃತ್ತಿಯನ್ನೇ ಸರ್ವಸ್ವ ಎಂದು ಕೊಂಡಿದ್ದ ೧,೮೦,೦೦೦ ಜನ ೧೯೯೭ ರಿಂದ ೨೦೦೭ರ ಅವಧಿಯಲ್ಲಿ ಇಹ ಲೋಕಕ್ಕೆ ಅನಿವಾರ್ಯವಾಗಿ ಶರಣು ಎಂದರು. ಕಳೆದ ೬ ವರ್ಷಗಳಿಂದ ವರ್ಷಕ್ಕೆ ೧೭,೦೦೦ ಸಹವರ್ತಿಗಳನ್ನು ನಾನು ಕಳೆದುಕೊಳ್ಳುತ್ತಿದ್ದೇನೆ. ಅಂದರೆ ದೇಶದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವವಲ್ಲಿ ಶೇ. ೧೨ರಷ್ಟು ಮಂದಿ ನನ್ನವರೆ. ಇದೆಲ್ಲವೂ ಸರಕಾರದ್ದೇ ಲೆಕ್ಕ.

ಇದೆಲ್ಲಕ್ಕಿಂತ ಹೆಚ್ಚಾಗಿ ಅದೇಷ್ಟೋ ಲಕ್ಷ ಲಕ್ಷ ಜನ ಪ್ರತಿ ವರ್ಷ ನನ್ನ ವೃತ್ತಿ ಬಿಟ್ಟು ಬೇರೆ ವೃತ್ತಿಯತ್ತ ವಲಸೆ ಹೋಗುತ್ತಿದ್ದಾರೆ. ಅವರೆಂದು ಮತ್ತೇ ತಿರುಗಿ ಈತ್ತ ಬರುವುದಿಲ್ಲ. ಅವರು ಬೇರೆ ಕೆಲಸ ಮಾಡಿ ನೆಮ್ಮದಿಯ ಜೀವನ ಸಾಗಿಸಿದರೆ ಸಂತೋಷ. ಆದರೆ ನನ್ನ ವೃತ್ತಿಯಲ್ಲಿ ವೃದ್ದರೇ ಉಳಿಯುವಂತಾಗಿದೆ. ಅಂದರೆ ಇಲ್ಲಿ ಅನುಭವ ಇದೆ ಉತ್ಸಾಹ ಅಂದರೆ ಯುವಕರು ಇಲ್ಲ. ಇದು ತೀರಾ ತೀರಾ ಅಪಾಯಕಾರಿ ಬೆಳವಣಿಗೆ. ಅವರೆಲ್ಲರು ಪಟ್ಟಣ ಸೇರಿ ಯಾವುದೋ ಕೆಲಸ ಮಾಡುತ್ತಿದ್ದಾರೆ. ಅವರ ಒಂದೇ ಒಂದು ಅಜೆಂಡಾ ಅಥವಾ ಗುರಿ ಎಂದರೆ ಕೃಷಿ ಮಾಡಬಾರದು. ಮಾಡಿದರೆ ಅದು ಅವಮಾನ.

ನೋಡಿ, ನನ್ನ ಮಗ ಯಾವ ಕಾರಣಕ್ಕೂ ಮುಂದೆ ಕೃಷಿ ಮಾಡುವುದಿಲ್ಲ ಯಾಕೆಂದರೆ ಅವನಿಗೆ ಅವನು ಹೋಗುವ ಶಾಲೆಯಲ್ಲಿ ಕೃಷಿ ಎಂದರೆ ನೇಗಿಲ ಯೋಗಿ ಪದ್ಯ ಮತ್ತು ಸಮಾಜ ವಿಜ್ಞಾನ ಅಥವಾ ಅರ್ಥಶಾಸ್ತ್ರದಲ್ಲಿ ಬರುವ ಭಾರತ ಕೃಷಿ ಪ್ರಧಾನ ದೇಶ, ಕೃಷಿ ದೇಶದ ಶೇ. ೬೫ ಜನರಿಗೆ ಉದ್ಯೋಗ ಕೊಡುತ್ತದೆ ಎಂಬ ಸಾಲುಗಳಷ್ಟೇ.

ನನ್ನ ವೃತ್ತಿಯ ದುರಂತವೆಂದರೆ ದೇಶದ ಶೇ. ೩ ಜನರಿಗೆ ಉದ್ಯೋಗ ಕೊಡಬಹುದಾದ ವೈದ್ಯಕೀಯ, ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆಗಳು ಇಲ್ಲಿ ದಂಡಿಯಾಗಿವೆ ಮತ್ತು ಪೈಪೋಟಿಗೆ ಬಿದ್ದು ಇಂತಹ ಹೊಸ ಹೊಸ ಸಂಸ್ಥೆಗಳ ಸ್ಥಾಪನೆ ಕೂಡ ಮಾಡಲಾಗುತ್ತಿದೆ. ಆದರೆ ನನ್ನ ವ್ಥತ್ತಿಯ ಬಗ್ಗೆ ಹೇಳಿ ಕೊಡಲು ಎಷ್ಟು ಸಂಸ್ಥೆಗಳಿವೆ? ಆಥವಾ ಶಾಲೆಯಲ್ಲಿ ಎಷ್ಟು ಗಂಟೆ ಸಮಯವನ್ನು ನನ್ನ ವೃತ್ತಿಯ ಕಲಿಕೆಗಾಗಿ ಮೀಸಲಿಟ್ಟಿದ್ದೀರಿ?

ನನ್ನ ಮಗ, ಡಿಗ್ರಿ ಮುಗಿಸಿಕೊಂಡು ಹೊರ ಬಂದಾಗ ಅವನಿಗೆ ೨೧ ವರ್ಷ ವಯಸ್ಸಾಗಿರುತ್ತದೆ. ಆಗ ಆತನಿಗೆ ತಾನು ಆಯ್ದಕೊಂಡ ವಿಷಯಗಳ ಪ್ರಾಥಮಿಕ ಜ್ಞಾನವಿರುತ್ತದೆ. ಆತ ನನ್ನ ವೃತ್ತಿಯನ್ನೆ ಮಾಡಬೇಕು ಎಂದು ಆಸೆ ಪಟ್ಟದ್ದೇ ಆದರೆ ಆತನಿಗೆ ಇದರ ಬಗ್ಗೆ ಶುರುವಿನಿಂದಲೇ ಕಲಿತುಕೊಳ್ಳಬೇಕು. ಇಲ್ಲಿ ಛಿಟಚಿss ಡಿoom ಅಥವಾ ಣheoಡಿಥಿ bಚಿseಜ ಪಾಠ ಪ್ರಯೋಜನಕ್ಕೆ ಬಾರದು. ಏನಿದ್ದರೂ ಠಿಡಿಚಿಛಿಣiಛಿಚಿಟ ಜ್ಞಾನ ಬೇಕು. ಅದಕ್ಕಾಗಿ ಮತ್ತೇ ಒದ್ದಾಡಬೇಕಾಗುತ್ತದೆ. ನಾನು ಶಾಲೆಗೆ ಹೋಗುವಾಗ ನನಗೆ ಸಂಜೆ, ಬೆಳಿಗ್ಗೆ ಮತ್ತು ರಜಾ ದಿನಗಳಲ್ಲದರೂ ಕೃಷಿ ಚಟುವಟಿಕೆಗಳ ಪರಿಚಯವಾಗುತ್ತಿತ್ತು. ಈಗ ಆ ಹೊತ್ತಲ್ಲಿ ಟ್ಯೂಷನ್! ಇದ್ರ ಜೊತೆಗೆ ಅವನಿಗೆ ನಾನು ಪಡುತಿರುವ ಪಡಿಪಾಟಲಿನ ಅರಿವಿದೆ, ನನ್ನ ಶ್ರಮಕ್ಕೆ ಮಾರ್ಯಾದಿ, ಕಾಸೂ ಎರಡೂ ಇಲ್ಲ ಎಂಬುದು ಅವನಿಗೂ ಗೊತ್ತಾಗಿದೆ, ಇಂಜಿನಿಯರೋ, ಡಾಕ್ಟ್ರೋ ಆದರೆ ಸಿಗುವ ಎಲ್ಲಗಳು ಅವನಿಗೂ ಬೇಕಿದೆ. ಇದಕ್ಕಿಂತ ಹೆಚ್ಚಾಗಿ ಯಾವ ತಂದೆನೂ ತನ್ನ ಮಗ ಹಾಳಾಗಿ ಹೋಗಲಿ ಎಂದು ಬಯಸೋದಿಲ್ಲ, ಅದ್ದರಿಂದ ನಾನು ಅವನನ್ನು ನನ್ನ ವೃತ್ತಿಗೆ ಇಳಿಯಬಿಡೋದಿಲ್ಲ. ಈ ವೃತ್ತಿಯ ಚಿಂತೆಗಳು ನನ್ನೊಂದಿಗೆಯೇ ಚಿತೆ ಏರಲಿ, ಮಗನ ಬೆನ್ನೇರದಿರಲಿ!

ನನ್ನ ಮಗನ ಪೀಳಿಗೆಯವರು ಈ ರಂಗದತ್ತ ಆಕರ್ಷಿಸಲ್ಪಟ್ಟರೆ ದೇಶದ ನಿರುದ್ಯೋಗ, ಬಡತನ ಎಲ್ಲವೂ ಒಂದೇ ಏಟಿಗೆ ಪರಿಹಾರವಾಗುತ್ತದೆ. ಆದರೆ ಸರಕಾರ ಕೃಷಿ ರಂಗವನ್ನು ಲಾಭದಾಯಕ ವಾಗಿಸುವ ನಿಟ್ಟಿನ ಯೋಜನೆಗಳನ್ನು ರೂಪಿಸುವುದು ಮಾತ್ರ ಅನಿವಾರ್ಯ. ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ೫೦೦ ರೂ. ಕೊಡುತ್ತೇವೆ ಎಂಬ ಎಡಬಿಡಂಗಿ ಭರವಸೆ ನೀಡಿದ ರಾಜಕೀಯ ಪಕ್ಷ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಕೊಟ್ಯಾಂತರ ನಿರುದ್ಯೋಗಿಗಳಿಗೆ ನೀಡಬಹುದಾಗಿರುವ ಈ ಹಣವನ್ನು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಕ್ಷಿತ ಜನರಿಗೆ ನೀಡಿದ್ದೇ ಆದಲ್ಲಿ ಈ ರಂಗದತ್ತ ಯುವ ಪ್ರವಾಹ ಇತ್ತ ಹರಿಯಬಹುದೇನೋ.

ಇನ್ನು ನನ್ನಲ್ಲೂ ಕೆಲ ಸಮಸ್ಯೆಗಳಿವೆ. ದೇಶದ ಬಹುತೇಕ ಕೃಷಿಕರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ನಾವೆಲ್ಲ ಒಗ್ಗಟ್ಟಾಗಿ ನಿಂತು ನಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸಿಯೇ ಇಲ್ಲ. ನಮ್ಮ ಸಂಖ್ಯಾಬಲಕ್ಕೇ ಸರಕಾರ ಉರುಳಿಸೋದು ಬಿಡಿ ಇಡೀ ವ್ಯವಸ್ಥೆಯನ್ನೇ ಕಿತ್ತೆಸೆಯೋ ಸಾಮರ್ಥ್ಯವಿದೆ. ನಿಮ್ ಪುಣ್ಯ! ನಾವ್ಯಾವತ್ತು ಆ ಮಟ್ಟದ ಐಕ್ಯತೆ ತೋರಿಸಲೇ ಇಲ್ಲ. ನಮ್ ಆಕ್ರೋಶ, ಹತಾಶೆ ಬರಿ ನಿಟ್ಟುಸಿರು, ಗೊಣಗಾಟಗಳಲ್ಲೇ ತಳ ಕಂಡಿತು. ಇನ್ನು ನಾವು ಮಾಡಿದ ಹೋರಾಟಗಳ ಹೆಸರು ಹೇಳಿಕೊಂಡು, ಮೆರವಣಿಗೆ ಸಾಲಲ್ಲಿ ಮುಂದಿದ್ದವರು ನಮ್ಮ ಹೋರಾಟಕ್ಕೆ ಎಲ್ಲಿಂದಲೋ ಬಂದು ಸೇರಿಕೊಂಡವರು ಯಾರ‍್ದೊ ದುಡ್ಡು ಮಾತ್ರವಲ್ಲ ಶ್ರಮ, ಹೆಸರು, ನೋವು, ಸಂಕಷ್ಟದಲ್ಲಿ ತಮ್ಮ ತಮ್ಮ ಜಾತ್ರೆ ಮಾಡಿ, ಬೇಳೆ ಬೇಯಿಸಿ ಅಧಿಕಾರದ ಸವಿ ಅನುಭವಿಸಿದ್ದಾರೆ, ಅನುಭವಿಸುತ್ತಿದ್ದಾರೆ. ನಾವು ಅವರನ್ನು ಇನ್ನು ಹಾಗೇ ಬಿಟ್ಟಿದ್ದೇವೆ. ನಮ್ಮ ಕಾಲ ಮೇಲೆಯೇ ನಿಂತುಕೊಳ್ಳುವ ಚಳವಳಿಯನ್ನೂ ನಮಗಿನ್ನೂ ರೂಪಿಸಿಕೊಳ್ಳಲಾಗಿಲ್ಲ. ಮಗು ಆಳದೇ ತಾಯಿನೂ ಹಾಲು ಕುಡಿಸೋದಿಲ್ಲ ಎಂಬ ಸತ್ಯ ಗೊತ್ತಿದ್ದರೂ ನಾವೆಲ್ಲ ಒಟ್ಟಾಗಿ ಅಳುವ ಪ್ರಯತ್ನ ಮಾಡಿ ಆಳುವವರನ್ನು ಇನ್ನು ನಮ್ಮ ಸಮಸ್ಯೆಯನ್ನು ಪರಿಹಾರಿಸದೇ ಮುಂದೇ ಹೋಗುವಂತಿಲ್ಲ ಎಂಬ ಸ್ಥಿತಿಗೆ ನೂಕಲೇ ಇಲ್ಲ. ಬದಲಾಗಿ ಅಲ್ಲೇಲ್ಲೋ ಅಂತ ಪ್ರತಿಭಟನೆಯ ಪ್ರಯತ್ನಗಳಾದ ಸಂದರ್ಭದಲ್ಲಿ ನಾವೇ ಅವರ ಕಾಲೆಳೆದ ನಿದರ್ಶನಗಳಿವೆ.

ಇನ್ನು ನನ್ನನ್ನು ಆಳುವವರು ಎಷ್ಟು ನಿಷ್ಕರುಣಿಗಳು ಎಂಬುದಕ್ಕೆ ನಾನೊಂದು ಉದಾಹರಣೆ ಕೊಡುತ್ತೇನೆ. ನಿಮಗೆ ನಮ್ಮ ದೇಶದ ಕೃಷಿ ಮಂತ್ರಿ ಶರದ್ ಪವಾರ್ ಅಂತ ನೆನಪಿರಬಹುದು. ಯಾಕೆಂದರೆ ಅವರನ್ನು ಕೃಷಿ ಮಂತ್ರಿಯಾಗಿ ಕಂಡವರು ಭಾರಿ ಕಡಿಮೆ. ಅವರು ಹೆಚ್ಚಾಗಿ ಕ್ರಿಕೇಟ್ ಆಡಿಸೋದ್ರಲ್ಲಿ ಶಾಣೆ ಬ್ಯುಸಿಯಾಗಿರ‍್ತಾರೆ. ಅದ್ರೂ ಕೆಲವೊಮ್ಮೆ ಮೈಮೇಲೆ ದೆವ್ವ ಬಂದ ಹಾಗೆ ತಾನು ಕೃಷಿ ಸಚಿವ ಅಂತ ಅವರಿಗೆ ನೆನಪಾಗೋದು ಅಥವಾ ನೆನಪುಮಾಡೋದು ಇದೆ. ಆಗ ಅವರು ಕೆಲವು ಅಣಿಮುತ್ತುಗಳನ್ನು ಉದುರಿಸೋದಿದೆ. ಅಂತಹ ಅಣಿಮುತ್ತೊಂದನ್ನು ನಾನು ಇಲ್ಲಿ ಯಥಾವತ್ತಾಗಿ ಬಳಸಿಕೊಳ್ಳುತ್ತೇನೆ ನಾನು ಪಂಜಾಬ್, ಹರಿಯಾಣಗಳಿಂದ ಗೋಧಿ ಖರೀದಿಸಿ ದಕ್ಷಿಣ ಭಾರತಕ್ಕೆ ಅದನ್ನು ಮಾರೋದಾದರೆ ನನಗೆ ವಾರ್ಷಿಕ ದಾಸ್ತಾನು ಮತ್ತು ಸಾರಿಗೆ ಖರ್ಚು ಎಂದು ಕ್ವಿಂಟಾಲ್‌ಗೆ ೧,೧೫೦ ರಿಂದ ೧,೧೬೦ ರೂ ನಷ್ಟು ಖರ್ಚಾಗುತ್ತದೆ. ಅದೇ ಗೋಧಿಯನ್ನು ಅಸ್ಟ್ರೇಲಿಯಾದಿಂದ ಖರೀದಿಸೋದಾದ್ರೆ ನನ್ನ ಆಮದಿನ ಬಾಬತ್ತು ಕ್ವಿಂಟಾಲ್‌ಗೆ ಕೇವಲ ೯೫೦ ರೂ. ಗಳಾಗುತ್ತದೆ. ನನಗೆ ನನ್ನ ಗ್ರಾಹಕರ ಹಿತಾಸಕ್ತಿ ಕಾಯೋದು ಮುಖ್ಯ ಈಗ ಹೇಳಿ ನಾನು ಅದೆಂಥಾ ದೊಡ್ಡ ಅಬ್ಬೆಪಾರಿ ಅಂತ. ನನ್ನ ಯೋಗಕ್ಷೇಮ ನೋಡಿಕೋ ಎಂದು ಮಂತ್ರಿ ಮಾಡಿದರೆ ಇನ್ಯಾರದೋ ಪರ ವಕಾಲತ್ತು ವಹಿಸಿಕೊಳ್ಳಲು ಶುರಮಾಡುತ್ತೀರಿ.

ನೀವು ನಮ್ಮತ್ತ ತೋರಿರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆ ಕೊಡುತ್ತಿದ್ದೇನೆ. ೧೯೮೫- ೯೦ರ ಮಧ್ಯೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆಂದು ದೇಶದ ಉಆP ಯ ಶೇ. ೧೪.೫ರಷ್ಟನ್ನು ಮೀಸಲಿಟ್ಟದ್ರಿ. ಅದನ್ನೇ ೨೦೦೧ರಲ್ಲಿ ಶೇ. ೫.೯ಕ್ಕೆ ಇಳಿಸಿದ್ರಿ.. ಕೃಷಿ ಸಂಶೋಧನೆಗೆಂದು ನೀವು ನೀಡೋದು ಉಆPಯ ಶೇ. ೦.೩ರಷ್ಟನ್ನು ಮಾತ್ರ.

ಇಂತ ಅಂಕಿ ಅಂಶಗಳಿರುವಾಗ ನಮ್ಮ ಉದ್ದಾರಕ್ಕೆ ನೀವು ನಾವು ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂಬುದಕ್ಕೆ ಏನಾದರೂ ಅರ್ಥವಿದೆಯಾ? ದೇಶದಲ್ಲಿ ಹತ್ತಾರು ಬಗೆಯ ಕೃಷಿ ಮಾಡುವ ರೈತರಿದ್ದಾರೆ. ನೀವು ನಿಜವಾಗಿ ನಮಗೆ ಒಳ್ಳೆಯದಾಗಲಿ ಎಂದು ಏನಾದರೂ ಮಾಡಿದ್ದೇ ಆಗಿದ್ದರೆ ಅವರಲ್ಲಿ ಒಂದಷ್ಟು ಮಂದಿಯಾದರೂ ನಗುಮುಖದಿಂದ ಇರಬೇಕಿತಲ್ವಾ? ಆದರೆ ಎಲ್ಲರೂ ತಲೆ ಕೆಳಗೆ ಹಾಕಿರುವವರೇ. ನೀವು ರಸಗೊಬ್ಬರಕ್ಕೆ ಸಬ್ಸಿಡಿ, ಬೆಂಬಲ ಬೆಲೆ, ಬಡ್ಡಿ ಮನ್ನಾ ಹೀಗೆ ಅನುತ್ಪದಾಕ, ಉಪದ್ರಕಾರಿ ಕೊಡುಗೆಗಳನ್ನು ಕೊಡುತ್ತೀರಿ. ನಮಗೆ ಬೇಕಾಗಿರೋದು ಕೊಡುಗೆಗಳಲ್ಲ ಬೆಂಬಲ. ಅಂದರೆ ನೀವು ರಸಗೊಬ್ಬರಕ್ಕೆ ಸಬ್ಸಿಡಿ ಕೊಡುವ ಬದಲು ನನಗೆ ಮನೆಯಲ್ಲೆ ಅಥವಾ ನನ್ನ ಸಮುದಾಯದವರೊಂದಿಗೆ ಸೇರಿ ಸಾವಯವ ಗೊಬ್ಬರ ಘಟಕ ಸ್ಥಾಪಿಸಲು ಸಾಲ ಮತ್ತು ಅ ಬಗ್ಗೆ ಸೂಕ್ತ ತರಬೇತಿ, ಮಾಹಿತಿ ಕೊಟ್ಟದ್ದೇ ಆದರೆ ಮುಂದೆ ನಾನೆಂದೂ ನಿಮ್ಮ ಮುಂದೆ ಸಬ್ಸಿಡಿ ಕೊಡಿ ಎಂದು ಗೋಗರೆಯುವುದಿಲ್ಲ ಅದರೆ ನಿಮಗೆ ಅದು ಬೇಕಾಗಿಲ್ಲ.

ಇನ್ನು ನನ್ನ ಉಳಿವಿಗಾಗಿ ನೀವು ಕೈಗೊಳ್ಳಲೇ ಬೇಕಾದ ಕೆಲವು ಕ್ರಮಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಮಾಡಿ ಮಧ್ಯವರ್ತಿಗಳ ಕಾಟ ತಪ್ಪಿಸಬೇಕು. ಇದರಿಂದ ಬೆಂಬಲ ಬೆಲೆ ಕೊಡಿ ಎಂದು ಬಾವುಟ ಹಿಡಿಯುವ ಪರಿಸ್ಥಿತಿ ಬರುವುದಿಲ್ಲ. ವೈರುದ್ಯವೆಂದರೆ ಇಂದು ಆಹಾರೋತ್ಪನ್ನಗಳ ಬೆಲೆ ಗಗನಮುಖಿಯಾಗಿದೆ ಆದರೆ ನನ್ನ ಗತಿ ನರಕ ಮುಖಿಯಾಗಿದೆ. ಆ ಹೆಚ್ಚಾಗಿರುವ ಬೆಲೆಯಿಂದ ಬರುವ ಹಣ ರೈತನ ಕಿಸೆ ಸೇರಿಲ್ಲ ಎಂದರೆ ಎಲ್ಲಿಗೆ ಹೋಗುತ್ತಿದೆ? ಇದಕ್ಕಾಗಿ ಲಾಭದ ಸರಿಯಾದ ಹಂಚುವಿಕೆ ಆಗಲೇ ಬೇಕು. ಆಗ ಬೆಂಬಲ ಬೆಲೆಯ ಪ್ರಶ್ನೆ ಬರುವುದಿಲ್ಲ.

ಇನ್ನು ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಡದಿದ್ದರೂ ಪರವಾಗಿಲ್ಲ ದಿನವಿಡಿ ವಿದ್ಯುತ್ ಕೊಡಲೇಬೇಕು. ನಂತರ ಕೆಲ ಲಾಭದಾಯಕವೆನಿಸದ ಅಥವಾ ಸೀಮಿತ ಮಾರುಕಟ್ಟೆ ಇರುವ ಬೆಳೆಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ನನ್ನ ಸಹವರ್ತಿಗಳು ಬೆಳೆಯುವ ಹಾಗೇ ವ್ಯವಸ್ಥಿತವಾದ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಹಾಗಾಂತ ಅದು ಮಾರುಕಟ್ಟೆಯಲ್ಲಿ ಕೊರತೆಯಾಗಬಾರದು.

ಇನ್ನು ನನ್ನನ್ನು ಕೃಷಿಗೆ ಮಾತ್ರ ಬಳಸಿಕೊಳ್ಳುವ ಬದಲು ಬೇರೆ ಕೆಲವು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ತಯಾರಾಗುವಂತೆ ಉಪಕ್ರಮಗಳನ್ನು ಕೈಗೊಳ್ಳಬೇಕು. ಯಾಕೆಂದರೆ ನನ್ನ ವೃತ್ತಿಯವರಿಗೆ ವಿಶ್ರಾಂತಿ ಸಮಯ ಉಳಿದೆಲ್ಲ ಕ್ಷೇತ್ರಗಳಲ್ಲಿ ಇರುವವರಿಗಿಂತ ಹೆಚ್ಚಾಗಿ ಇರುತ್ತದೆ. ಅದನ್ನು ನಾನು ಈ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಮೂಕ ಸದುಪಯೋಗ ಪಡಿಸಿಕೊಳ್ಳುತ್ತೇನೆ.

ಮತ್ತೇ ಬೀಜ ಮಸೂದೆ, ಬಿಟಿ ಬೆಳೆಗಳು ಎಂದು ನನ್ನನ್ನು ಯಾರ‍್ಯಾರದ್ದೋ ಅದರಲ್ಲೂ ಪರದೇಶಿಗಳ ಕೈಗೊಂಬೆ ಮಾಡ ಹೊರಟಿರಿ ಎಂದರೆ ನಿಮಗಿದೆ ಮಾರಿ ಹಬ್ಬ.

ನಿಮ್ಮ ಜಾರಿಗೆ ತಂದ ಬೆಲೆ ವಿಮೆ ನಿಜವಾಗಿಯೂ ಒಂದು ಒಳ್ಳೆಯ ಯೋಜನೆ. ಆದರೆ ಅದನ್ನು ನೀವು ಎಷ್ಟು ಮಂದಿ ರೈತರಿಗೆ ವಿಸ್ತರಿಸಿದ್ದೀರಿ. ಹೆಚ್ಚೆಂದರೆ ಶೇ. ೧೦ ರೈತರು ಬೆಳೆ ವಿಮೆ ಹೊದಿದ್ದಾರೆ. ಉಳಿದವರ ಕಥೆಯೇನು?

ಇನ್ನು ಕೆಲ ದೀರ್ಘಾವಧಿ ಬೆಳೆಗಳಿರುತ್ತವೆ ಉದಾಹರಣೆಗೆ ಅಡಿಕೆ, ತೆಂಗು ಇತ್ಯಾದಿ. ಅವುಗಳನ್ನು ಬೆಳೆದ ಮೇಲೆ ನಾನು ಫಸಲಿಗಾಗಿ ತುಂಬ ಸಮಯ ಕಾಯಬೇಕಾಗುತ್ತದೆ ಜೊತೆಗೆ ಎಲ್ಲಾದರೂ ಕೆಲ ವರ್ಷಗಳ ಕಾಲ ಅದರ ಬೆಲೆ ಪಾತಳದಲ್ಲೇ ತೆವಳುತ್ತ ನಿಂತರೆ ನನಗೆ ಅತ್ಮಹತ್ಯೆ ಅಥವಾ ಉಪವಾಸವೇ ಗತಿ. ಅದ್ದರಿಂದ ನನ್ನ ಈ ಉತ್ಪನ್ನಗಳ ಪರ್ಯಾಯ ಉಪಯೋಗಗಳ ಬಗ್ಗೆ ಸಂಶೋಧನೆ ಮಾಡಿ ಅದರ ಬಳಕೆ ಮತ್ತಷ್ಟು ಹೆಚ್ಚುವ ಹಾಗೇ ನೋಡಿಕೊಳ್ಳಬೇಕು. ಇಲ್ಲ ಪರ್ಯಾಯ ಬಳಕೆ ಸಾಧ್ಯವೇ ಇಲ್ಲ ಈ ಮಿತಿಗಿಂತ ಹೆಚ್ಚು ನೀವು ಬೆಳೆದರೆ ಸೂಕ್ತ ಬೆಲೆಯಲ್ಲಿ ನಿಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಮಾಡಲು ಸಾಧ್ಯವೇ ಇಲ್ಲ ಎಂದಾದರೆ ಅನಂತರ ಹೊಸದಾಗಿ ಆ ಬೆಳೆ ಬೆಳೆಯುವುದಕ್ಕೆ ನಿಷೇಧ ಹೇರಿ. ಇದರಿಂದ ಈಗಾಗಲೇ ಬೆಳೆದ ರೈತರಿಗೆ ತನ್ನ ಉತ್ಪನ್ನಕ್ಕೆ ಯೋಗ್ಯ ಬೆಲೆ ದಕ್ಕುತ್ತದೆ. ಹಾಗೇ ಆ ಬೆಳೆಯನ್ನು ಬೆಳೆಯಲಾಗದ ನನ್ನ ಸೋದರನಿಗೆ ಒಮ್ಮೆ ವ್ಯವಸ್ಥೆಯ ಮೇಲೆ ಕೋಪ ಬಂದರು ಕೂಡ ಮಂದೆ ಆತ ಪಡುವ ಪಡಿಪಾಟಲಿನಿಂದ ತಪ್ಪಿಸಿಕೊಳ್ಳುತ್ತಾನೆ. ಹಾಗೇ ಅವನ ಭೂಮಿ ಹಾಳಾಗುವುದು ತಪ್ಪುವುದಲ್ಲದೇ ಅವನಿಗೆ ಬೇರೆ ಬೆಳೆ ಬೆಳೆಯಬಹುದು. ಹಾಗೆಯೇ ಆ ಬೆಳೆ ಬೆಳೆದವನಿಗೆ ತನ್ನ ಉತ್ಪನ್ನಕ್ಕೇ ಯೋಗ್ಯ ಬೆಲೆ ಸಿಗುವ ಸಂಭವನೀಯತೆ ಹೆಚ್ಚಿರುತ್ತದೆ.

ಇದರೊಂದಿಗೆ ಕೃಷಿ ಕೆಲಸಕ್ಕೆ ಮತ್ತು ಕೃಷಿಗೆ ಸಾಮಾಜಿಕ ಗೌರವ, ಮಾನ್ಯತೆ ಮತ್ತು ಹಳ್ಳಿಗಳ ಸಂಪರ್ಕ ವ್ಯವಸ್ಥೆ ಮತ್ತು ಜೀವನ ಮಟ್ಟ ಸುಧಾರಿಸುವ ಕ್ರಮಗಳನ್ನು ಸರಕಾರ ಕೈಗೊಳ್ಳುವುದು ಅನಿವಾರ್ಯ.

ಸರಕಾರದೆದುರು ಮತ್ತೇ ಮತ್ತೆ ಹೀಗೆ ಬೇಡಲು ನಿನಗೆ ನಾಚಿಕೆ ಆಗುವುದಿಲ್ವಾ? ಎಂದು ನೀವು ಕೇಳಬಹುದು. ಅದನ್ನು ಬಿಟ್ಟೆ ನಾನು ಕೇಳುತ್ತಿರುವುದು. ಯಾಕೆಂದರೆ ಇಲ್ಲಿ ನನ್ನ ಕೈಮೀರಿದ ಸಂಗತಿಗಳು ಅನೇಕ ಇದೆ. ಅದನ್ನೆಲ್ಲ ನನ್ನ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಅದಕ್ಕೆ ಸರಕಾರ ಅನಿವಾರ್ಯ. ಯಾಕೆಂದರೆ ನನಗೆ ಇನ್ನೊಬ್ಬರ ಹಕ್ಕುಗಳನ್ನು ಮೊಟಕುಗೊಳಿಸುವುದು ಅಥವಾ ಕಾನೂನನ್ನು ಕೈಗೆತ್ತಿಕೊಳ್ಳವುದು ಮನಸ್ಸಿಗೆ ಒಪ್ಪದ ಸಂಗತಿ. ಸರಕಾರ ಮನಸ್ಸು ಮಾಡಿದರೆ ನಾಜೂಕಾಗಿ ನನ್ನ ಸಮಸ್ಯೆಗಳನ್ನು ಪರಿಹರಿಸಬಲ್ಲದು ಎಂಬ ಆಸೆ.

ನಿಮ್ಮೆಲ್ಲರ ಹೊಟ್ಟೆ ತಣಿಸೋ ನಾನು ಅಲ್ಯುಮಿನಿಯಂ ತಟ್ಟೆ ಹಿಡಿದು ತುತ್ತು ಅನ್ನಕ್ಕಾಗಿ (ಹಿಂದೆ ಹಸಿವಾದಾಗ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಹಾಕಿಕೊಳ್ಳುತ್ತಿದ್ದರಂತೆ ಈಗ ನೀರಿಗೂ ತತ್ವಾರ) ಹಪಾಗಪಿಸೋ ಕರಾಳ ವರ್ತಮಾನದ ಹಸಿಹಸಿ ಸಾಕ್ಷಿಯನ್ನಾಗಿ ಮತ್ತು ಅನುಭವಿಯನ್ನಾಗಿ ನೀವು ಮಾಡಿದ್ದೀರಿ. ಆದರೂ ಅದನ್ನೆಲ್ಲ ಮನಸ್ಸಿನಿಂದ ತೆಗೆದು ಪಕ್ಕಕ್ಕಿಟ್ಟು ಈ ಪತ್ರ ಬರೆದಿದ್ದೇನೆ. ನೀವು ನನ್ನತ್ತ ಒಂಚೂರಾದರೂ ಜವಾಬ್ದಾರಿಯ ಕಣ್ಣುಗಳಿಂದ ನೋಡಿದರೆ ನೀವು ನನ್ನಿಂದ ಮತ್ತೊಂದು ಶುಭವಾರ್ತೆಯ ಪತ್ರ ನಿರೀಕ್ಷಿಸಬಹುದು. ಇಲ್ಲ, ನೀನು ರೈತ, ನಿನ್ನಿಂದ ಏನೂ ಕಿಸಿಯಲಿಕ್ಕಾಗುವುದಿಲ್ಲ, ನೀನಿರುವುದೇ ನೋವುಣ್ಣಲು ಎಂದ್ಕೊಂಡು ಬಿಟ್ರೆ ಇದನ್ನೇ ನನ್ನ ಅತ್ಮಹತ್ಯಾ ಪತ್ರ ಎಂದು ಪರಿಗಣಿಸಿ.

ಇಂತಿ ನಿಮ್ಮ

ಅನ್ನದಾತ

Saturday, February 20, 2010

ಮೂರ್ತಿಯೆಂಬ 'ನೆರಳು ಬೆಳಕ' ಸಾರಥಿ

"ಬಾಳು ಒಂದು ಬೆಳಕಿನಾಟ

ಆಸೆಯೊಂದು ಕತ್ತಲಾಟ

ಸಾಗಿದೆ ಇದರೊಡನೆ ಬೆಳಕು ಕತ್ತಲೋಟ..." ಇದು ಪ್ರಸಿದ್ಧ ಕವಿ ಸಾಲು. ಈ ಸಾಲ ನೂಲು ಹಿಡಿದು ಸಿನಿಮಾದತ್ತ ಇಣುಕಿದರೆ ಸಿನಿಮಾ ಮತ್ತೇನೂ ಅಲ್ಲ, ಅದೂ ನೆರಳು ಬೆಳಕಿನದ್ದೇ ಆಟ ಎಂಬುದು ನಮ್ಮ ಅನುಭವದ ತೆಕ್ಕೆಗೆ ಸಂದಿರುತ್ತದೆ.

ಬಾಳೆಂಬ ಸಿನಿಮಾದಲ್ಲಿ ಎಲ್ಲರೂ ಪಾತ್ರಧಾರಿಗಳೇ! ಸಿನಿಮಾವೆಂಬ ಬಾಳಲ್ಲಿ ಹಾಗಿಲ್ಲ! ಅಲ್ಲಿರೋದು ಕೆಲವೇ ಕೆಲವು ಪಾತ್ರಾಧಾರಿಗಳು. ಆ ಪಾತ್ರಗಳನ್ನು ಆಡಿಸಿ, ಬೀಳಿಸಿ ನೋಡೋ ಸೂತ್ರ(ಧಾರಿ)ಗಳ ಸಂಖ್ಯೆ ಹತ್ತಾರು. ಆ ಹತ್ತಾರು ಸೂತ್ರ(ಧಾರಿ)ಗಳನ್ನು ಒಟ್ಟಿಗೆ ಹೆಣೆದು ತನ್ನ ಆಣತಿಯಂತೆ ಕುಣಿಸುವವ ನಿರ್ದೇಶಕ. ಆದರೆ ನಿರ್ದೇಶಕನಿಗೆ ಎಲ್ಲವನ್ನೂ ತನಗೆ ಇಷ್ಟಬಂದ ಹಾಗೆ ಮಾಡಲಾಗುವುದಿಲ್ಲ. ಯಾಕೆಂದರೆ, ಅವನ ಇಷ್ಟ, ಕನಸು, ಚಿಂತನೆ, ಧೋರಣೆ ಹೀಗೆ ಅದೇನೇ ಹೇಳಿ ಅದು ಇರುವುದು ಅಮೂರ್ತ ರೂಪದಲ್ಲಿ. ಅದು ಜನರನ್ನು ತಲುಪಬೇಕಾದರೆ ಮೂರ್ತ ಆಥವಾ ಸಾಂಕೇತಿಕ ರೂಪ ಪಡೆಯಲೇಬೇಕು. ಅದಕ್ಕಾಗಿಯೇ ಅನೇಕ ತಂತ್ರಜ್ಞರು ಒಂದು ಸಿನಿಮಾ ರೂಪುಗೊಳ್ಳುವ ಪಕ್ರ್ರಿಯೆಯಲ್ಲಿ ಪಾಲುಪಡೆಯುತ್ತಾರೆ. ಅಂತಹ ತಂತ್ರಜ್ಞರಲ್ಲಿ ಅತ್ಯಂತ ಪ್ರಮುಖನಾದವನೇ ಸಿನಿಛಾಯಾಗ್ರಾಹಕ. ಅಂತಹ ಸಿನಿಛಾಯಾಗ್ರಾಹ(ಸಾಧ)ಕರಲ್ಲಿ ಭಾರತದ ಮಟ್ಟಿಗೆ ಮೇರು ಪ್ರತಿಭೆ ಎಂದು ಪರಿಗಣಿಸಬಹುದಾದ ವ್ಯಕ್ತಿ ೨೦೦೮ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ವಿ. ಕೆ. ಮೂರ್ತಿ!

ವಿ. ಕೆ. ಮೂರ್ತಿ ೧೯೨೩ರಲ್ಲಿ ಮೈಸೂರಿನಲ್ಲಿ ಜನಿಸಿ, ಚಿತ್ರ ನಗರಿ, ಮಾಯಾ ನಗರಿ ಮುಂಬೈಯಲ್ಲಿ ಕಾಗದದ ಹೂವು ಅರಳಿಸಿದವರು! ಹೌದು, ಮೂರ್ತಿಯವರ ಕಾಯಕ ಜೀವನ ನೆಲೆ ಕಂಡುಕೊಂಡದ್ದು ದೂರದ ಮುಂಬೈಯಲ್ಲಿ. ಅದರಲ್ಲೂ ಭಾರತದ ಚಲನಚಿತ್ರ ರಂಗ ಕಂಡ ಅದ್ವಿತೀಯ ನಿರ್ದೇಶಕ ಗುರುದತ್ತ್ರ ಜೊತೆಯಲ್ಲಿ.

ಒಳ್ಳೆಯ ನಿರ್ದೇಶಕ ಮತ್ತು ದಕ್ಷ ಸಿನಿಛಾಯಾಗ್ರಾಹಕರ ನಡುವೆ ಆದ್ಭುತವೆನಿಸುವ ಒಂದು ಕೆಮೆಸ್ಟ್ರಿ ಇರುತ್ತದೆ. ಅವರಿಬ್ಬರು ಒಂದು ರೀತಿಯಲ್ಲಿ ಆದರ್ಶ ಗಂಡಹೆಂಡತಿಯರಿದ್ದಂತೆ! ಉದಾಹರಣೆಗೆ ನಿರ್ದೇಶಕ ಸೆರ್ಗಿ ಐನ್ಸ್ಟೀನ್ ಮತ್ತು ಸಿನಿಮಾಟೊಗ್ರಾಫರ್ ಎಡ್ವರ್ಡ್ ಟಿಸ್, ಆರ್ಸನ್ ವೆಲ್ಸ್ ಮತ್ತು ಗ್ರೇಗ್ ಟೋಲೆಂಡ್, ಇಂಗ್ಮರ್ ಬರ್ಗ್ಮನ್ ಮತ್ತು ಸ್ಪೆನ್ ನಿಕ್ವಿಸ್ಟ್, ಸತ್ಯಜಿತ್ ರಾಯ್ ಮತ್ತು ಸುಬ್ರೊತೋ ಮಿತ್ರಾ ಹೀಗೇ. ಇಂತಹದ್ದೆ ಸಾಲಿಗೆ ಸೇರಿದ ಮತ್ತೊಂದು ಮೋಡಿ ಮಾಡಿದ ಜೋಡಿಯೆಂದರೆ ಅದು ಗುರುದತ್ತ್ ಮತ್ತು ವಿ. ಕೆ. ಮೂರ್ತಿಯದ್ದು.

ಯಾವ ಗುಟ್ಟನ್ನು ತೆರೆಯ ಮೇಲೆ ಹೇಳಬೇಕು, ಯಾವುದನ್ನು ಉಳಿಸಬೇಕು, ಎಲ್ಲಿ ಸಂಶಯ ಹುಟ್ಟಿಸಬೇಕು, ಎಲ್ಲಿ ಅದನ್ನು ಪರಿಹರಿಸಬೇಕು, ನಾವೀಗ ಏನನ್ನೂ ಹೇಳ್ತಾ ಇದ್ದೇವೆ, ಅದು ಯಾವ ಅರ್ಥ ನೀಡಬೇಕು, ಎಲ್ಲಿ, ಹೇಗೆ, ಎಷ್ಟು ಬೆಳಕಿರಲಿ ಅಥವಾ ನೆರಳಿರಲಿ ಹೀಗೆ ಇದ್ದರೆ ಅದು ಏನನ್ನು ಹೇಳುತ್ತದೆ, ಇದನ್ನೇ ಇನ್ನೊಂದು ರೀತಿಯಲ್ಲಿ ಹೇಗೆ ತೋರಿಸಬಹುದು ಯಾವುದು ಹೆಚ್ಚು ಪರಿಣಾಮಕಾರಿ ಹೀಗೆ ಎಲ್ಲವನ್ನು ಯೋಚಿಸಿ, ಚಿಂತಿಸಿ, ಮಥಿಸಿ ಅದನ್ನು ತನ್ನ ಕ್ಯಾಮೆರದಲ್ಲಿ ಸೆರೆ ಹಿಡಿದು, ನಿರ್ದೇಶಕನ ಆಶಯಗಳಿಗೆ ಚ್ಯುತಿ ತರದೆ ತೆರೆಯ ಮೇಲೆ ಮೆರೆಸುವುದು ಅಂದರೆ ಸಾಮಾನ್ಯ ಕೆಲಸವೇ? ಇಲ್ಲಿ ಕ್ಯಾಮೆರಾ ಮನುಷ್ಯನ ಕಣ್ಣಿನಂತೆ ಕೆಲಸ ಮಾಡಿದರೆ ಸಿನಿಛಾಯಾಗ್ರಾಹಕ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ, ಅದೂ ಎರಡು ಕಾಯಗಳದ್ದು! ಮೊದಲನೆಯದ್ದು ನಿರ್ದೇಶಕನದ್ದಾದರೆ ಎರಡನೇಯದ್ದು ಪ್ರೇಕ್ಷಕನದ್ದು.

ವಿ. ಕೆ ಮೂರ್ತಿಯವರಿಗೆ ಈ ಎರಡೂ ಕಲೆಗಳು ಸಿದ್ದಿಸಿತ್ತು. ಅದರಲ್ಲೂ ಗುರುದತ್ತ್ರ ಸಿನಿಮಾವೆಂದರೆ ಗುರುದತ್ತ್ರೇ ಇವರ ದೇಹ ಪ್ರವೇಶಿಸಿ ಕ್ಯಾಮೆರಾ ಕೆಲಸ ಮಾಡುತ್ತಿದ್ದರೇನೋ ಎಂಬಷ್ಟು ಪರಿಪಕ್ವತೆ. ಗುರುದತ್ತ್ರ ಜತೆ ಭಾರತದ ಮೊತ್ತಮೊದಲ ಸಿನಿಮಾಸ್ಕೋಪ್ ಚಿತ್ರ ಕಾಗಜ್ ಕಿ ಫೂಲ್, ಪ್ಯಾಸಾ, ಬಾಝಿ, ಸಾಹಿಬ್ ಬೀಬಿ ಔರ್ ಗುಲಾಮ್, ಆರ್ ಪಾರ್ ಮುಂತಾದ ದೇಶದ ಚಲನಚಿತ್ರ ರಂಗದ ಮೈಲುಗಲ್ಲು ಎಂದೆನಿಸುವ ಚಿತ್ರಗಳಿಗೆ ನೆರಳು ಬೆಳಕು ತುಂಬಿದರು. ಕಾಗಜ್ ಕಿ ಫೂಲ್ಗೆ ೧೯೫೯ರಲ್ಲಿ ಮತ್ತು ಸಾಹಿಬ್ ಬೀಬಿ ಔರ್ ಗುಲಾಮ್ಗೆ ೧೯೬೨ರಲ್ಲಿ ಫಿಲಂಫೇರ್ ಅವಾರ್ಡ್ ಜಯಿಸಿದ್ದರು.

ಮೂರ್ತಿ, ಗುರುದತ್ತ್ ಬದುಕಿರುವವರೆಗೂ ಬೇರೊಬ್ಬ ನಿರ್ದೇಶಕನ ಕೈಕೆಳಗೆ ಮುಖ್ಯ ಕ್ಯಾಮೆರಾಮೆನ್ ಆಗಿ ದುಡಿದಿರಲಿಲ್ಲ. ಆದರೆ ೧೯೬೪ರಲ್ಲಿ ಗುರುದತ್ತ್ರ ಆಕಸ್ಮಿಕ ಅಗಲುವಿಕೆ ನಂತರ ಕಮಲ್ ಅಮ್ರೋಹಿಯ ಶ್ರೇಷ್ಟ ಚಿತ್ರ ಕೀಜಾ ಮತ್ತು ರಝೀಯಾ ಸುಲ್ತಾನ್ಗೆ ಕ್ಯಾಮೆರಾ ಹಿಡಿದರು. ಅನಂತರ ಪ್ರಮೋದ್ ಚಕ್ರವರ್ತಿ,ಗೋವಿಂದ ನಿಹಲಾನಿ, ಶ್ಯಾಮ್ ಬೆನಗಲ್ ಮುಂತಾದವರ ಚಿತ್ರಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದರು.

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹೂವುಹಣ್ಣು ಇವರ ಕ್ಯಾಮರ ಕೈಚಳಕಕ್ಕೆ ಸಾಕ್ಷಿಯಾದ ಏಕಮಾತ್ರ ಕನ್ನಡ ಚಲನಚಿತ್ರ. ಏನ್ಸಾರ್, ಒಂದೇ ಕನ್ನಡ ಚಿತ್ರಕ್ಕೆ ಕೆಲಸ ಮಾಡಿದ್ದೀರಲ್ಲ ಬೇರೆ ಕನ್ನಡ ಚಿತ್ರಗಳಿಗೆ ಯಾಕೆ ಕೆಲಸ ಮಾಡಿಲ್ಲ? ಎಂದು ಕೇಳಿದರೆ, ನಿಮ್ಮ ನಿರ್ಮಾಪಕರನ್ನೇ ಕೇಳಿ ಅನ್ನುವುದು ಮೂರ್ತಿಯವರ ಉವಾಚ. ಅದರರ್ಥ ಅವರ ಸಾಮರ್ಥ್ಯವನ್ನು ತವರ ಚಲನಚಿತ್ರ ರಂಗ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ನೋವು ಅವರಲ್ಲಿ ಇದೆ ಎಂದಾಯಿತು. ಅಷ್ಟರ ಮಟ್ಟಿಗೆ ನಮ್ಮದು ದುರದೃಷ್ಟ! ನಮ್ಮಲ್ಲಿ ಬೆಳೆಯದಿದ್ದರೂ ಪರವಾಗಿಲ್ಲ ಅಲ್ಲೆಲ್ಲೋ ಬೆಳೆದು ಜಗತ್ತಿನ ಗಮನ ಸೆಳೆದರಲ್ಲ ಅದು ಕನ್ನಡಾಂಬೆಯ ಅದೃಷ್ಟ!

ಮೂರ್ತಿ ಸಾಬ್, ಒಬ್ಬ ಶ್ರೇಷ್ಟ ಸಿನಿಛಾಯಾಚಿತ್ರಗಾರನಾಗುವ ಮುಂಚೆ ಒಬ್ಬ ಸ್ವಾತಂತ್ರ್ಯ ಸೇನಾನಿಯಾಗಿದ್ದರು, ಪ್ರತಿಫಲವಾಗಿ ಜೈಲುವಾಸ ಅನುಭವಿಸಿದರು. ಅವರ ನೆನಪಿನ ಕೋಶದಲ್ಲಿರುವ ಅವರ ಹೋರಾಟಕ್ಕೆ ನಿದರ್ಶನವಾಗಿರುವ ಘಟನೆಯೊಂದು ಹೀಗಿದೆ. ಆಗ ಅವರು ಕಾಲೇಜಿನಲ್ಲಿ ಓದುತ್ತಿದ್ದರಂತೆ, ಗಾಂಧಿಜಿಯ ಭಾಷಣ ಕೇಳಿ ಸುಮಾರು ೧೫೦ ಮಂದಿ ಉತ್ಸಾಹಿ ವಿದ್ಯಾರ್ಥಿಗಳು ಬ್ರಿಟಿಷ್ರ ಅಳ್ವಿಕೆಯ ವಿರುದ್ಧ ಪ್ರತಿಭಟಿಸಲು ಸೈಕಲ್ ರ್ಯಾಲಿ ನಡೆಸ ಹೊರಟರಂತೆ. ಇವರಿಗೆಲ್ಲ ವಿ. ಕೆ ಮೂರ್ತಿಯೇ ಸಾರಥಿ. ಪ್ರತಿಭಟನೆ ಮೈಸೂರುನಗರದಿಂದ ಹೊರಟು ಪೊಲಿಸ್ ಚೌಕಿಯಲ್ಲಿ ಕೊನೆಗೊಳಿಸುವುದು ಎಂದು ನಿರ್ಧರಿಸಲಾಗಿತ್ತಂತೆ. ಅದರಂತೆ ಪ್ರತಿಭಟನೆ ಶುರುವಾಯಿತು, ಜೋರಾಯಿತು. ಪ್ರತಿಭಟನೆ ಚೌಕಿ ಬಳಿ ತಲುಪುತ್ತಲೇ ಪೊಲಿಸರು ಇವರನ್ನು ಬಂಧಿಸಲು ತಯಾರಾಗಿದ್ದರಂತೆ. ಮೂರ್ತಿಯವರು ಹಿಂತಿರುಗಿ ಒಮ್ಮೆ ತಮ್ಮ ಹಿಂಬಾಲಕರನ್ನು ನೊಡಲು ಅಲ್ಲಿದದ್ದು ಬರೀ ಏಳು ಮಂದಿಯಂತೆ!

ಮೂರ್ತಿಯವರಿಗೆ ನಟನಾಗುವ ಆಸೆಯೇ ಹೆಚ್ಚಿತಂತೆ. ಅದಕ್ಕಾಗಿ ಮುಂಬೈಗೆ ಓಡಿ ಹೋಗಿ ಅರೆ ಪ್ಯಾಂಟ್ನಲ್ಲೇ ಸ್ಟುಡಿಯೋದಿಂದ ಸ್ಟುಡಿಯೋಗೆ ಅಲೆದಾಡಿದರಂತೆ, ಅಲ್ಲಿ ಅವರ ಸಂಬಂಧಿಕರು ಆಶ್ರಯ ನೀಡಿದರಂತೆ ಅದರು ಅವಕಾಶ ದಕ್ಕಲಿಲ್ಲ ಇನ್ನು ಇಲ್ಲಿದ್ದು ಸಮಯ ಕೊಲ್ಲುವುದಕ್ಕಿಂತ ಊರಿಗೆ ಹಿಂತಿರುಗಿ ಶಿಕ್ಷಣವನ್ನು ಪೂರೈಸುವುದೇ ಒಳಿತು ಎಂದು ಭಾವಿಸಿ ಶಿಕ್ಷಣ ಪೂರೈಸಿದರಂತೆ.

ಇವರಿಗೆ ವಯಲಿನ್ ನುಡಿಸುವುದು ಕೂಡ ಕರಗತವಾಗಿತ್ತಂತೆ ತದನಂತರ ಇವರು ಸಿನಿಮಾಟೋಗ್ರಾಫಿಯನ್ನು ಕಲಿತದ್ದು.

ಜಯಂತ ದೇಸಾಯಿಯವರ ಮಹಾರಾಣ ಪ್ರತಾಪ್ ಇವರಿಗೆ ಬ್ರೇಕ್ ನೀಡಿತ್ತು. ಅದರಲ್ಲಿ ಅವರು ಸಿನಿಮಾಟೊಗ್ರಾಫರ್ ದ್ರೋಣಾಚಾರ್ಯರಿಗೆ ಸಹಾಯಕರಾಗಿ ದುಡಿದಿದ್ದರು. ಅನಂತರ ಇವರು ಅಮ್ರಪಾಲಿ ಎಂಬ ಸಿನಿಮಾ ನೋಡಿದಾಗ ಅದರಲ್ಲಿ ಸಿನಿಮಾಟೊಗ್ರಾಫರ್ ಫಾಲಿ ಮಿಸ್ತ್ರಿಯ ಚಮತ್ಕಾರಗಳನ್ನು ಕಂಡು ಮೂಕವಿಸ್ಮಿತರಾದರು. ಆಗ ಇವರು ಕೆಲ ಚಿತ್ರಗಳಲ್ಲಿ ವಯಲಿನ್ ವಾದಕರಾಗಿ ದುಡಿದಿದ್ದರು. ಮಿಸ್ತ್ರಿಯವರಿಗೆ ಸಹಾಯಕರಾಗಿ ದುಡಿದರು ಆ ಕಾಲದಲ್ಲಿ ಇವರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸಹಾಯಕ ಸಿನಿಮಾಟೊಗ್ರಾಫರ್ ಆಗಿದ್ದರು. ಅನಂತರದ್ದು ಇತಿಹಾಸ. ಅವರು ಸ್ವತಂತ್ರ ಸಿನಿಮಾಟೊಗ್ರಾಫರ್ ಆಗಿ ತೆರೆಯ ಮೇಲೆ ದೃಶ್ಯ ಕಾವ್ಯವನ್ನೇ ಬರೆದರು. ನೆರಳು ಬೆಳಕಿಗೂ ಭಾವ ತುಂಬಿ ಅದೂ ಏನನ್ನೋ ಹೇಳುವಂತೆ ಮಾಡಿದರು. ಅದನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿದರು. ಅದು ಒಂದು ಪಾತ್ರವಾಗುವಂತೆ ನೋಡಿಕೊಂಡರು.

ಅವರು ಸಿನಿಮಾಟೊಗ್ರಾಪರ್ ಆಗಿದ್ದ ಬಾಝಿ(೧೯೫೧), ಜಾಲ್(೧೯೫೨), ಮಿಸ್ಟರ್ & ಮಿಸಸ್(೧೯೫೫), ಸಿಐಡಿ(೧೯೫೬), ೧೨ ಓ ಕ್ಲಾಕ್(೧೯೫೮), ಚೌದಿನ್ ಕ ಚಾಂದ್(೧೯೬೦), ಜಿದ್ದಿ(೧೯೬೪), ಲವ್ ಇನ್ ಟೋಕಿಯೊ(೧೯೬೬), ಸೂರಾಜ್(೧೯೬೬), ನವ್ ಜವಾನ್(೧೯೭೧), ಜುಗ್ನು(೧೯೭೩), ನಸ್ತಿಕ್(೧೯೮೩), ಕಲಿಯುಗ್ ಔರ್ ರಾಮಾಯಣ್(೧೯೮೭), ಖುಲೆ ಅಮ್(೧೯೯೨), ದೀದಾರ್(೧೯೯೨) ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.

ಮೂರ್ತಿಯವರಿಗೆ ೨೦೦೫ರ ಅಮ್ಸ್ಟ್ಯಾರ್ಡ್ಯಾಮ್ IIಈಂ ಜೀವಮಾನದ ಸಾಧಕ ಪ್ರಶಸ್ತಿಗೂ ಭಾಜನರಾಗಿದ್ದರು. ಇದೀಗ ಬೆಂಗಳೂರಿನಲ್ಲಿ ತಮ್ಮ ಬಾಳ ಸಂಜೆ ಕಳೆಯುತ್ತಿರುವ ಮೂರ್ತಿಯವರನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಅರ್ಹವಾಗಿಯೇ ಹುಡುಕಿಕೊಂಡು ಬಂದಿದೆ.

Saturday, February 13, 2010

ಕತ್ತಲ ಕೋಣೆ ಸೇರಿದ ಛಾಯಾಚಿತ್ರ ಮಾರಾಟಗಾರರು!

   ಮಾನವ ಹೊಟ್ಟೆಪಾಡಿಗಾಗಿ ಹತ್ತಾರು ಕೆಲಸ ಅಥವಾ ಉದ್ಯೋಗ ಮಾಡುತ್ತಿರುತ್ತಾನೆ. ಅವುಗಳಲ್ಲಿ ಕೆಲವು ಸಾಂಪ್ರದಾಯಿಕ ಕೆಲಸಗಳಾಗಿದ್ದು ಅವುಗಳಿಗೆ ಸಾಂಸ್ಕ್ರತಿಕ ಮಹತ್ವ ಮತ್ತು ಗುರುತು ಇರುತ್ತದೆ.
  
   ಇನ್ನು ಕೆಲ ಉದ್ಯೋಗಗಳು ಅಧುನಿಕತೆಯ ಕೊಡುಗೆ ಎಂದು ಪರಿಗಣಿಸುವ ರೀತಿಯದ್ದು. ಈ ಕೆಲಸಗಳಿಗೆ ಹೆಚ್ಚು ಸಾಮಾಜಿಕ ಗೌರವ ಮತ್ತು ಅದಾಯ ಇರುತ್ತದೆ. ಆದರೆ ಈ ಎರಡರ ಮಧ್ಯೆ ಕೆಲ ಉದ್ಯೋಗಗಳಿರುತ್ತವೆ. ಅವುಗಳು ಅಧುನಿಕತೆಯ ಕೊಡುಗೆಗಳಾದರೂ ಅವಕ್ಕೆ ಸಮಾಜದಲ್ಲಿ ಗೌರವ ಮತ್ತು ನಿಶ್ಚಿತ ಅದಾಯ ಇರುವುದಿಲ್ಲ. ಇಂತಹ ಉದ್ಯೋಗಗಳಲ್ಲಿ ನಿರತರಾಗಿರುವವರಿಗೆ ಯಾವುದೇ ಭದ್ರತೆಗಳಿರುವುದಿಲ್ಲ. ಯಾಕೆಂದರೆ ಅಧುನಿಕತೆ ಎಂಬುದು ತುಂಬ ತುಂಬ ಚಲನಶೀಲ. ಅಲ್ಲಿ ನಿನ್ನೆಯ ಹೊಸತು ಇಂದಿನ ಹಳತು ಎಂಬ ಸ್ಥಿತಿ. ಅದಕ್ಕಿಂತ ಹೆಚ್ಚಾಗಿ ಇಂದು ಅಧುನಿಕತೆ ಎಂಬುದು ಒಬ್ಬ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿಸುವ ಆಥವಾ ಅವಲಂಬಿಸುವುದಾದರೆ ದೊಡ್ಡ ದೊಡ್ಡ ಕಂಪೆನಿಗಳನ್ನೇ ಅವಲಂಬಿಸುವಂತೆ ಮಾಡುವ ಗುಪ್ತ ಅಜೆಂಡಾ ಹೊಂದಿದೆ. ಅದ್ದರಿಂದ ಈ ಅಧುನಿಕತೆ ಕೊಡುಗೆಗಳನ್ನೇ ನಂಬಿ ಬದುಕು ಕಟ್ಟ ಹೊರಟ್ಟಿದ್ದ ಬಹಳಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಬೀಳುತ್ತಿದ್ದಾರೆ.

   ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಛಾಯಾಚಿತ್ರ ಮಾರಿ ಬದುಕ ಬಂಡಿ ಎಳೆಯುತ್ತಿದ್ದವರ ಕಥೆ.

   ಕೆಲ ವರ್ಷಗಳ ಹಿಂದೆ ನೀವು ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೂ ಇಂತವರು ದಂಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ’ಇಪ್ಪತ್ತು ರೂಪಾಯಿಗೆ ೧೦ ಪೋಟೋ’ ಎಂದು ಬೊಬ್ಬೆ ಹಾಕುತ್ತ, ’ನಿಮ್ಮ ಭೇಟಿಯ ನೆನಪಿಗೆ ಇರಲಿ’ ಎಂದು ಹೇಳುತ್ತ ಪೋಟೋ ಕೊಟ್ಟು ನಮ್ಮ ನೆನಪಿನ ಮತ್ತು ಅವರ ಅನ್ನದ ಬುತ್ತಿ ತುಂಬಿಸಿ ಕೊಳ್ಳುತ್ತಿದ್ದರು.

   ಅದರಲ್ಲೂ ಮೈಸೂರು, ನಂಜನ ಗೂಡು, ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್, ಬೇಲೂರು, ಹಳೆಬೀಡು, ಬಾದಾಮಿ, ಹಂಪಿಗಳಲ್ಲಿ ಇಂತಹವರ ಸಂಖ್ಯೆ ಬಹಳಷ್ಟಿತ್ತು.

   ಈಗ ಆ ನೆನಪಿನ ಪಳೆಯುಳಿಕೆಯೆಂಬಂತೆ ಕೆಲ ಮಂದಿ ಮಾತ್ರ ಈ ಕೆಲಸ ನಿರತರಾಗಿದ್ದಾರೆ. ಅದೂ ಒಲ್ಲದ ಮನಸ್ಸಿನಿಂದ!

   ಇದಕ್ಕೆಲ್ಲ ಕಾರಣ ಡಿಜಿಟಲ್ ಕ್ಯಾಮರಾ ತಂದಿಟ್ಟ ಪೋಟೊ ಕ್ರಾಂತಿ!

   ಮ್ಯೆಸೂರಿನ ಜಗದ್ವಿಖ್ಯಾತ ಚಾಮುಂಡೇಶ್ವರಿ ದೇಗುಲದ ಮುಂದೆ ಕಳೆದ ೧೫ ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡಿರುವ ಮಣಿಕಂಠರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, ಹಿಂದೆ ನಮಗೆ ದಿನಕ್ಕೆ ೩೦೦ ರೂಪಾಯಿಗಳಷ್ಟು ವ್ಯಾಪಾರವಾಗುತ್ತಿತ್ತು, ಈಗ ೧೦೦ ರೂ ಆದರೆ ಅದೇ ಹೆಚ್ಚು. ಈಗ ಜನರು ತಮಗೆ ಬೇಕಾದ ಚಿತ್ರಗಳನ್ನು ತಾವೇ ತೆಗೆದುಕೊಂಡು ಹೋಗುತ್ತಿದ್ದಾರೆ, ಇದರಿಂದ ನಮ್ಮ ಹೊಟ್ಟೆಗೆ ತಣ್ಣೀರೇ ಗತಿ ಎಂಬಂತಾಗಿದೆ

   ಇಂದು ಮೂರರ ಹರೆಯದ ಮಗುವಿನಿಂದ ಹಿಡಿದು ೯೦ರ ಮುದುಕನ ವರೆಗೆ ಎಲ್ಲರೂ ಡಿಜಿಟಲ್ ಕ್ಯಾಮೆರ ಬಳಸುತ್ತಿದ್ದಾರೆ. ಅಲ್ಲಿ ತಮಗೆ ಬೇಕಾದ ಪೋಟೋ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುತ್ತದೆ ಹಾಗೆಯೇ ಬೇಡದ ಪೋಟೋಗಳನ್ನು ನಿವಾಳಿಸಿಕೊಳ್ಳಬಹುದು. ಇದರಿಂದ ನಮಗೆ ವೈಯುಕ್ತಿಕವಾಗಿ ತುಂಬ ಲಾಭವಿದೆ. ಆದರೆ ಸಾಮಾಜಿಕವಾಗಿ ನೋಡಿದಾಗ ನೂರಾರು ಕುಟುಂಬಗಳು ಬೇರೊಂದು ಉದ್ಯೋಗವನ್ನರಸ ಬೇಕಾಗಿ ಬಂದಿದೆ. ಅಲ್ಲೊಂದು ಸ್ಥಿತ್ಯಂತರವೇ ನಡೆದು ಹೋಗಿದೆ.

   ಇದೇ ವೃತ್ತಿ ನಿರತ ಗೋವಿಂದ ರಾಜುವನ್ನು ಮಾತನಾಡಿಸಿದಾಗ, ನಮಗೆ ಬೇರೊಂದು ವೃತ್ತಿ ಮಾಡೋಣ ಎಂದರೆ ಅದು ಗೊತ್ತಿಲ್ಲ, ಈ ಕೆಲಸ ನಂಬಿದರೆ ಬದುಕು ಸಾಗೋದಿಲ್ಲ, ಒಟ್ಟಿನಲ್ಲಿ ನಮಗೆ ಏನೂ ಮಾಡಬೇಕೆಂದೇ ಗೊತ್ತಾಗುತ್ತಿಲ್ಲ.

   ಈ ಪೋಟೋ ಮಾರುತ್ತಿದ್ದ ಪರಂಪರೆ ಒಳ್ಳೆದು ಅಂತ ನಾನು ಹೇಳುತ್ತಿಲ್ಲ, ಇವರಿಂದ ಮೋಸ ಹೋದವರು ಮತ್ತು ಬೈಗುಳ ತಿನ್ನಬೇಕಾದ ಪ್ರಸಂಗ ಎದುರಿಸಿದ ಅನೇಕ ಸಂದರ್ಭಗಳು ಎದುರಾದದ್ದು ಇದೆ. ಆದೇನೇ ಆಗಿದ್ದರೂ ಕೂಡ ನಮ್ಮ ಹಿಂದಿನ ಎರಡು ಪೀಳಿಗೆಯ ಪ್ರವಾಸಕ್ಕೆ ಮತ್ತದರ ನೆನಪಿಗೆ ತಮ್ಮದೆ ಕೊಡುಗೆ ನೀಡಿದ್ದ ವೃತ್ತಿಯೊಂದು ನಮ್ಮ ಕಣ್ಣೇದುರೇ ಕಾಲಗರ್ಭ ಸೇರುತ್ತಿರುವುದು ಮಾತ್ರ ದಿಟ.

Sunday, January 24, 2010

ಕಾಲೇಜುಗಳಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿ

ಅದು ಬಾಲ್ಯ... ಅದು ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯೋತ್ಸವೇ ಆಗಿರಲಿ ಅಂದು ಇಡೀ ಶಾಲೆಯೇ ಆ ದಿನದ ಆಚರಣೆಯ ಸಂಭ್ರಮದಲ್ಲಿ ಮಿಂದು ತೋಯುವುತ್ತಿತ್ತು. ಇದು ನನ್ನ ಬಾಲ್ಯದ ಅಥವಾ ಶಾಲಾದಿನಗಳ ಕಥೆ ಮಾತ್ರವಲ್ಲ, ಬಹುಪಾಲು ಎಲ್ಲರದ್ದು. ಈಗ ಶಾಲೆಗೆ ಹೋಗುತಿರುವವರದ್ದು ಕೂಡ!

ಬಹುಶ: ಹತ್ತನೇ ತರಗತಿ ತನಕ ಸ್ವಾತಂತ್ರ್ಯ ದಿನಾಚರಣೆಯಲ್ಲಿನ ಪಾಲ್ಗೊಳ್ಳುವಿಕೆಯ ಸಂಭ್ರಮ ಅನಂತರ ಎಂದಿಗೂ ನಮಗೆ ದಕ್ಕುವುದಿಲ್ಲ. ಕಾಲೇಜುಗಳಿಗೆ ಬಂದರೆ, ರಾಷ್ಟ್ರೀಯ ಹಬ್ಬಗಳೆಂಬುದು ಕ್ಯಾಲೆಂಡರಿನಲ್ಲಿ ಕೆಂಪು ಅಂಕಿಯಲ್ಲಿ ಬರೆದಿಟ್ಟ ರಜಾದಿನವಾಗಿ ಬಿಡುತ್ತದೆ.

ಇಲ್ಲಿ ಇಂತಹ ದಿನಾಚರಣೆಗಳ ನಿರ್ವಹಣೆಯ ಜವಾಬ್ದಾರಿ ಎನ್ಎಸ್ಎಸ್, ಎನ್ಸಿಸಿ ಮುಂತಾದವುಗಳ ಕರ್ತವ್ಯ ಎಂಬ ಭಾವನೆ. ಅಥವಾ ಇದಕ್ಕೆಂದೇ ರಚಿಸಲ್ಪಟ್ಟಿರುವ ಸಮಿತಿ ಈ ಕಾರ್ಯ ನಿರ್ವಹಿಸುತ್ತದೆ. ಅಂದರೆ ವಿದ್ಯಾರ್ಥಿಗಳ ಸಾಮೂಹಿಕ ಪಾಲ್ಗೋಳ್ಳುವಿಕೆಯೇ ಇರುವುದಿಲ್ಲ! ಆ ಕಾರಣದಿಂದ ಇದು ಹತ್ತರ ಜತೆ ಹನ್ನೊಂದನೇ ರಜಾ ದಿನವಾಗುತ್ತದೆ. ಅದ್ದರಿಂದ ಕಾಲೇಜುಗಳಲ್ಲಿನ ಈ ದಿನದ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲೇಬೇಕು.

ಈ ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವಿಲ್ಲ ಎಂದರ್ಥವಲ್ಲ. ಈ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ದೇಶಪ್ರೇಮವನ್ನು ಪ್ರಕಟಿಸುವ ಒಂದು ವಿಧಾನವಷ್ಟೇ. ಈ ಸತ್ಯವನ್ನು ಒಪ್ಪಿಕೊಂಡು ನಾವು ಮುಂದುವರಿಯೋಣ.

ಶಾಲೆಗಳಲ್ಲಿ ತುಂಬು ಉತ್ಸಾಹದಿಂದ ಭಾಗವಹಿಸುವ ವಿದ್ಯಾರ್ಥಿಯೊಬ್ಬ ಕಾಲೇಜು ಮೆಟ್ಟಿಲೇರಿದೊಡನೇ ಈ ಅಚರಣೆಯಿಂದ ಯಾಕೆ ವಿಮುಖನಾಗುತ್ತಾನೆ? ಶಾಲೆಗಳಲ್ಲಿ ಕಡ್ಡಾಯ ಭಾಗವಹಿಸುವಿಕೆಯ ಒತ್ತಡವಿರಬಹುದು, ನಾನದನ್ನು ನಿರಾಕರಿಸುವುದಿಲ್ಲ. ಆದರೆ ಅವರಲ್ಲಿ ಈ ಕಡ್ಡಾಯದ ಕಟ್ಟಪ್ಪಣೆಯನ್ನು ಮೀರಿದ ಸಂಭ್ರಮವಿದ್ದೇ ಇರುತ್ತದೆ. ಇಲ್ಲದಿದ್ದಲ್ಲಿ ಅವರಲ್ಲಿ ಆ ಉತ್ಸಾಹ ಕಂಡು ಬರಲು ಸಾಧ್ಯವೇ ಇಲ್ಲ. ಮತ್ತು ಈ ಉತ್ಸಾಹ ಹುಟ್ಟಲು ಕೂಡ ಅನೇಕ ಕಾರಣ ಮತ್ತು ವಿಷಯಗಳಿರುತ್ತವೆ.

ಇದು ನಾವೆಲ್ಲ ಯೋಚನೆ ಮಾಡುವ ಕಾರಣಗಳಿಗಿಂತ ಭಿನ್ನ. ಉದಾಹರಣೆಗೆ ಒಂದನೇ ತರಗತಿಯ ಮಗುವಿಗೆ ಸ್ವಾತಂತ್ರ್ಯವೆಂದರೇನು? ಅದನ್ನು ಯಾರು ಕೊಟ್ಟರು? ಯಾಕೆ ಕೊಟ್ಟರು? ಅದು ಅಲ್ಲಿವರೆಗೆ ಎಲ್ಲಿತ್ತು? ಹೇಗಿತ್ತು? ಈಗ ಹೇಗಿದೆ? ಅದಿಲ್ಲದಿದ್ದರೇ ಏನಾಗುತ್ತ್ತಿತ್ತು? ಅದನ್ನು ಪಡೆಯಲು ಏನು ಮಾಡಿದರು? ಹೋರಾಟವೆಂದರೇನು? ಬ್ರಿಟಿಷರು ಎಂದರೆ ಯಾರು? ಅವರ್ಯಾಕೆ ಕೆಟ್ಟವರಾಗಿದ್ದರು? ಮುಂತಾದ ಅದರ ಮುಗ್ದ ಮನಸ್ಸಿನ ಪ್ರಶ್ನೆಗಳಿಗೆ ಆ ದಿನ ಉತ್ತರ ಸಿಗುತ್ತದೆ. ಅಥವಾ ಆ ದಿನ ಅ ಮಗುವಿನ ನೃತ್ಯ, ಭಾಷಣ, ನಾಟಕ ಅಥವಾ ಇನ್ನೀತರ ಕಾರ್ಯಕ್ರಮಗಳಿರಬಹುದು. ಇಲ್ಲ, ಎಲ್ಲರೂ ಈ ದಿನವನ್ನು ಆಚರಿಸುತ್ತಾರೆ, ನಾನೂ ಆಚರಿಸುತ್ತೇನೆ ಅದ್ದರಿಂದ ನಾನೂ ’ಆ ಎಲ್ಲರೊಂದಿಗೆ’ ಗುರುತಿಸಿಕೊಂಡಂತಾಗುತ್ತದೆ ಎಂಬ ಕಾರಣಕ್ಕಾಗಿ ಆ ಸಂಭ್ರಮ ಹುಟ್ಟಿಕೊಂಡಿರಲುಬಹುದು.

ಆದೇನೇ ಆದರೂ ಅ ಮಗು, ಈ ದಿನದ ಆಚರಣೆಯಲ್ಲಿ ಭಾಗಿಯಾಗಿ ಒಂದು ರಜೆ ಕಳೆದುಕೊಂಡರು ಅದಕ್ಕಿಂತ ಮಿಗಿಲಾದ ಇನ್ನೇನಾನ್ನೋ ಪಡೆದುಕೊಂಡಿರುತ್ತದೆ. ಆದರೆ ಕಾಲೇಜಿಗಳಲ್ಲಿನ ಸ್ವಾತಂತ್ರ್ಯದಿನ ಆಚರಣೆ ಇಲ್ಲೇ ಎಡವಿದೆ ಎಂದೇ ನನಗನಿಸುತ್ತಿದೆ. ಕಾಲೇಜುಗಳಲ್ಲಿನ ಸ್ವಾತಂತ್ರ್ಯದಿನದ ಕಾರ್ಯಕ್ರಮಗಳು ತೀರಾ ನೀರಸ.

ಅದ್ದರಿಂದ ಕಾಲೇಜುಗಳಲ್ಲಿನ ರಾಷ್ಟ್ರೀಯ ಆಚರಣೆಗಳನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಚಿಂತಿಸುವುದು ಅನಿವಾರ್ಯ. ಇಲ್ಲಿ ’ಅಕರ್ಷಕ’ ಅಂದರೆ ಮನರಂಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಅಂದು ಆಯೋಜಿಸುವುದು ಎಂದಲ್ಲ.

ಇಂದು ಕಾಲೇಜುಗಳಲ್ಲಿ ಸ್ವಾತಂತ್ರ್ಯದಿನದ ಕಾರ್ಯಕ್ರಮವೆಂದರೆ ಧ್ವಜಾರೋಹಣ, ಜನಗಣಮಣ, ವಂದೇ ಮಾತರಂ, ಸಾರೇ ಜಹಾಂಸೇ ಅಚ್ಚಾ, ಮುಂತಾದ ರಾಷ್ಟ್ರಗೀತೆ ಅಥವಾ ದೇಶಭಕ್ತಿ ಗೀತೆಗಳ ಹಾಡುವಿಕೆ ಮತ್ತು ತದನಂತರ ಒಂದು ಸಭಾ ಕಾರ್ಯಕ್ರಮ ಅಮೇಲೆ ಸಿಹಿತಿಂಡಿ ಹಂಚುವಿಕೆ ಇಷ್ಟಕ್ಕೆಯೇ ಮುಗಿದು ಹೋಗುತ್ತಿದೆ.

ಇಲ್ಲಿ ಧ್ವಜಾರೋಹಣ ಮತ್ತದಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳಲ್ಲಿ ನಮಗೆ ಒಂದಿನಿತೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಮತ್ತು ದಲಾವಣೆ ಸಾಧೂವೂ ಅಲ್ಲ. ಆದರೆ ಉಳಿದ ಕಾರ್ಯಕ್ರಮಗಳನ್ನು ರಂಗೇರಿಸಬಹುದಲ್ಲವೇ?

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ದೇಶದಲ್ಲಿ ಹತ್ತಾರು ಸಮಸ್ಯೆಗಳಿದ್ದವು, ಇಂದೂ ಅವೇ ಸಮಸ್ಯೆಗಳಿವೆ ಅದರೊಂದಿಗೆ ಹೆಚ್ಚುವರಿಯಾಗಿ ಇನ್ನೂ ಕೆಲ ಸಮಸ್ಯೆಗಳು ಸೇರಿಕೊಂಡಿವೆ. ಅದರೆ ಈ ಎಲ್ಲ ಸಮಸ್ಯೆಗಳ ನಡುವೆ ಬ್ರಿಟಿಷ್ ಆಳ್ವಿಕೆಯೇ ದೊಡ್ಡ ಸಮಸ್ಯೆಯಾಗಿ ಕಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಜನರೆಲ್ಲ ಸಂಘಟಿತರಾದರು ಮತ್ತದರಲ್ಲಿ ಯಶ ಪಡೆದರು. ಇಂದು ನಮ್ಮ ಶಿಕ್ಷಣ ಮಟ್ಟ, ಜೀವನ ಮಟ್ಟ, ಆರೋಗ್ಯ ಮಟ್ಟ ಎಲ್ಲವೂ ಹೆಚ್ಚಾಗಿದೆ. ಆದರೆ, ನಾವು ಯಾವುದೇ ಒಂದು ಕಾರಣಕ್ಕೇ ಸಂಘಟಿತರಾಗಿಯೇ ಇಲ್ಲ. ಆದೂ ಒಟ್ಟಾಗಲೂ ಹತ್ತಾರು ಕಾರಣಗಳಿದ್ದರು!

ಸ್ವಾತಂತ್ರ್ಯದಿನದ ಆಚರಣೆಯ ಮೂಲಕ ನಾವು ಸಂಘಟಿತರಾಗುವ ಪ್ರಕ್ರಿಯೆ ಶುರು ಮಾಡಬಹುದು. ಅದು ಹೇಗೆಂದರೆ...

ಕರ್ನಾಟಕ ಸರಕಾರ ಯುವಜನರಲ್ಲಿ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿಯುಂಟು ಮಾಡಲು ಕಳೆದ ವರ್ಷ ಇದೇ ಸಮಯದಲ್ಲಿ ರಾಜ್ಯಾದ್ಯಂತ ’ಭಯೋತ್ಪಾದನಾ ವಿರೋಧಿ ಜಾಗೃತಿ ಅಭಿಯಾನ’ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಆ ಕಾರ್ಯಕ್ರಮ ಯಶ ಕಂಡಿತು. ಕೆಲ ಮಂದಿ ರಾಜಕೀಯ ಕಾರಣಕ್ಕಾಗಿ ಈ ಅಭಿಯಾನವನ್ನು ವಿರೋಧಿಸಿದರೂ ಕೂಡ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಂಘಟಿತರಾಗಿಯೇ ಭಾಗವಹಿಸಿದರು. ಅಂದರೆ ಭಯೋತ್ಪಾದನೆ ಎಂಬ ರಕ್ಕಸನಿಗೆ ನಮ್ಮೆಲ್ಲರನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ ಎಂದಾಯಿತಲ್ಲವೇ? ಹಾಗೇ ಸರಕಾರ ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲದು ಎಂದೂ ಕೂಡ ಅಲ್ಲೇ ಸಾಬೀತಾಗಿದೆ.

ವಾಸ್ತವವಾಗಿ ನಮ್ಮನ್ನು ಈಗ ಕಾಡುತ್ತಿರುವ ಭಯೋತ್ಪಾದನಾ ಸಮಸ್ಯೆ ಬಹಳ ದೊಡ್ಡ ಇತಿಹಾಸವನ್ನು ಹೊಂದಿಲ್ಲ. ಮತ್ತು ಈ ಸಮಸ್ಯೆಯಿಂದ ದೇಶದ ಸಮಸ್ತರು ತೊಂದರೆಗೀಡಾಗಿದ್ದಾರೆ ಎಂದು ಹೇಳುವುದು ಕೂಡ ಸರಿಯಲ್ಲ. ಇಂದು ದೇಶದಲ್ಲಿ ಭಯೋತ್ಪಾದನೆಯ ಕಾರಣದಿಂದ ಸಾಯುವುದಕ್ಕಿಂತ ಹೆಚ್ಚಾಗಿ ಆತ್ಮಹತ್ಯೆ, ಅಪಘಾತ, ಸೂಕ್ತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಸಿಗದಿರುವುದು, ಮೂಡನಂಬಿಕೆ ಮುಂತಾದ ಕಾರಣಗಳಿಂದ ಸಾಯುತ್ತಾರೆ. ಹಾಗೆಯೇ ಜಾತಿಯತೆ, ಭ್ರಷ್ಟಾಚಾರ, ಪ್ರಾದೇಶಿಕತೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ವಿದೇಶಿ ವಸ್ತುಗಳ ಮೇಲಿನ ಮೋಹ, ದೇಶದ ಬಗೆಗಿನ ಅಸಡ್ಡೆ ಮುಂತಾದ ಅಪಾಯಕಾರಿ ಸಮಸ್ಯೆಗಳಿವೆ.

ಹಿಂದೆ ಬ್ರಿಟಿಷರನ್ನು ಓಡಿಸಿ ಒಂದು ಸಮಸ್ಯೆಗೆ ಮಂಗಳ ಹಾಡಿದ ನಾವು ಉಳಿದ ಸಮಸ್ಯೆಗಳ ಜೊತೆಜೊತೆಗೆ ಬದುಕುವ ಜೀವನವನ್ನೂ ರೂಢಿಸಿಕೊಂಡೆವು. ಇಂದು ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲೂ ಇದೇ ಮರುಕಳಿಸುತ್ತದೆ ಎಂದು ನನಗನಿಸುತ್ತಿದೆ. ಭಯೋತ್ಪಾದನೆ ನಾಶವಾಗಬಹುದು ಮತ್ತು ಆಗುತ್ತದೆ. ಆದೇ ಉಳಿದ ಸಮಸ್ಯೆಗಳು ಆಳಿಯದೇ ಉಳಿದು ಬಿಡುತ್ತವೆ. ಆಗ?

ಪ್ರತಿ ವರ್ಷ ರಾಷ್ಟ್ರೀಯ ದಿನಗಳಿಗೆ ರಾಷ್ಟ್ರವ್ಯಾಪಿ ಒಂದು ಗುರಿ, ಉದ್ದೇಶ ಅಥವಾ ಅಭಿಯಾನವನ್ನು ಸರಕಾರ ಇಟ್ಟುಕೊಳ್ಳಬೇಕು. ಎಲ್ಲ ರಾಷ್ಟ್ರಿಯ ಹಬ್ಬಗಳಿಗೆ ಇದು ಸಾಧ್ಯವಾಗದೇ ಹೋದರು ಯಾವುದಾದರೂ ಒಂದು ಹಬ್ಬಕ್ಕೆ ಖಂಡಿತವಾಗಿ ಮಾಡಬಹುದು. ಉದಾಹರಣೆಗೆ ಈ ವರ್ಷದ ಗಣರಾಜ್ಯೋತ್ಸವವನ್ನು ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನಾಗಿಸಿಕೊಂಡು ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ದೇಶಾದ್ಯಂತ ಮಾಡುತ್ತೇವೆ ಎಂದು ಕೇಂದ್ರ ಸರಕಾರವೇ ಘೋಷಿಸಬೇಕು. ಮತ್ತು ತಿಂಗಳ ಆರಂಭದಿಂದಲೇ ಆ ವರ್ಷದ ಗುರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇಶದ ಗಲ್ಲಿ ಗಲ್ಲಿಗೂ ಸಂದಿಗೊಂದಿಗೂ ಈ ಅಭಿಯಾನ ತಲುಪಬೇಕು. ಜನವರಿ ೨೬ಕ್ಕೇ ಈ ಅಭಿಯಾನದ ಸಮಾಪನಾ ಜರುಗುವಂತೆ ಯೋಜನೆ ಮಾಡಬೇಕು. ಇದಕ್ಕೆ ಕರ್ನಾಟಕ ಸರಕಾರದ ಭಯೋತ್ಪಾದನಾ ವಿರೋಧಿ ಅಭಿಯಾನದ ಮಾದರಿಯನ್ನೇ ತೆಗೆದುಕೊಳ್ಳಬಹುದು.

ಪ್ರತಿ ವರ್ಷ ಒಂದೊಂದು ಉದ್ದೇಶವಿಟ್ಟುಕೊಂಡಾಗ ಯುವ ಜನತೆಗೆ ದೇಶದ ಹಲವಾರು ಸಮಸ್ಯೆಗಳ ಪರಿಚಯವಾಗುತ್ತದೆ. ಅದಕ್ಕೇನು ಕಾರಣ? ಪರಿಹಾರವೇನು?ಆ ಸಮಸ್ಯೆಯಲ್ಲಿ ಮತ್ತದರ ಪರಿಹಾರದಲ್ಲಿ ತಮ್ಮ ಪಾತ್ರವೇನು ಮುಂತಾದ ಅಂಶಗಳು ಅವರಿಗೆ ತಿಳಿಯುತ್ತದೆ. ಇದರರ್ಥ ಅವರಿಗೆ ದೇಶದ ಜ್ವಲಂತ ಸಮಸ್ಯೆಗಳ ಆರಿವು ಇಲ್ಲವೆಂದಲ್ಲ. ಆರಿವಿದೆ, ಆದರೆ ಆ ಆರಿವು ಸಾಮೂಹಿಕವಾದಾಗ ಪ್ರಯತ್ನವೂ ಸಾರ್ವತ್ರಿಕವಾಗುತ್ತದೆ ಮತ್ತು ಕಣ್ಣಿಗೆ ಕಾಣಿಸುವ ಬದಲಾವಣೆ ಸಾಧ್ಯವಾಗುತ್ತದೆ. ಸಮಾನ ಮನಸ್ಕರು ಒಟ್ಟು ಸೇರಿ ಒಂದು ವ್ಯವಸ್ಥಿತ ಬದಲಾವಣೆ ಸಂಭವಿಸುತ್ತದೆ.

ಇದನ್ನು ಮನಗಂಡ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸುವುದನ್ನೇ ಒಂದು ಸಾಧನವನ್ನಾಗಿಸಿಕೊಂಡು ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ದದ ಹೋರಾಟಕ್ಕೇ ಅಣಿಗೊಳಿಸಿದ್ದು.

ನಾನು ಹೇಳುತ್ತಿರುವುದೂ ಅದೇ, ಈ ದಿನಾಚರಣೆಯ ನೆವದಲ್ಲಿ ನಾವೆಲ್ಲಾ ಒಂದಾಗಿ ನಮ್ಮನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಅರಿತು ಕೊಂಡು ಅದರ ವಿರುದ್ದ ಹೋರಾಡೋಣ. ಕನಿಷ್ಟ ಪಕ್ಷ ಈ ಸಮಸ್ಯೆಗಳು ಒಂದು ಸವಾಲಾಗಿಯಾದರೂ ಪರಿವರ್ತನೆಗೊಳ್ಳಬಹುದು.

ಉದಾಹರಣೆಗೆ ಬಹುಪಾಲು ರಸ್ತೆ ಅಪಘಾತಗಳು ಬೇಜವಾಬ್ದಾಯಿಂದಲೇ ಘಟಿಸುತ್ತವೇ ಎಂಬುದು ಸರ್ವವೇದ್ಯ. ಇದರ ಆರಿವು ಜನರಿಗೆ ತಮ್ಮ ಅನುಭವ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳಿಂದ ದಕ್ಕಿದೆ. ಆದರೆ ಅದನ್ನು ಓದಿದ ಬಹುಪಾಲು ಮಂದಿ ಹೆಚ್ಚೆಂದರೆ ಒಂದು ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತಾರೆ. ಆದರೆ ರಸ್ತೆ ನಿಯಮಗಳನ್ನು ಪಾಲಿಸುವುದು ಕೂಡ ದೇಶಪ್ರೇಮದ ಒಂದು ಭಾಗ ಅಥವಾ ಅಂಗವೆಂದಾದಾಗ ಜನರ ಚಿಂತನಕ್ರಮದಲ್ಲಿ ಬದಲಾವಣೆ ಸಾಧ್ಯವಾಗಬಹುದು.

ಯಾಕೆಂದರೆ ನಾವು ದೇಶಪ್ರೇಮವೆಂದರೆ ಪರಕೀಯರ ವಿರುದ್ಧ ಹೋರಾಡುವುದು, ಹೋರಾಡುವವರನ್ನು ಹುರಿದುಂಬಿಸುವುದು ಮತ್ತು ಅಗತ್ಯವಾದರೆ ತಾವೇ ಬಲಿದಾನ ಮಾಡುವುದು ಎಂಬುದಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದೇವೆ. ಮತ್ತೋಬ್ಬರ ಜೀವವನ್ನು ಅಥವಾ ಜೀವನವನ್ನು ರಕ್ಷಿಸುವುದು ಅಥವಾ ಗೌರವಿಸುವುದಕ್ಕೂ ದೇಶಪ್ರೇಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಮನೋಭಾವ ನಮ್ಮದು. ’ಇಲ್ಲ, ನೀನು ನಿನ್ನ ದೇಶಪ್ರೇಮವನ್ನು ಈ ಮೂಲಕ ಪ್ರಕಟಿಸಬಹುದು’ ಅಂದಾಗ ಮತು ಈ ಮನೋಭಾವ ಎಲ್ಲ ಕಡೆ ಒಮ್ಮೆಗೆ ಹಬ್ಬಿದಾಗ ಎಲ್ಲೋ ಒಂದು ಕಡೆ ರಸ್ತೆ ನಿಯಮಗಳನ್ನು ಪಾಲಿಸದಿರುವುದು ದೇಶದ್ರೋಹಕ್ಕೆ ಸಮಾನ ಎಂಬ ಭಾವ ನಮ್ಮ ಪ್ರಜ್ಞೆಯೊಳಗೆ ಸೇರಿಕೊಳ್ಳುತ್ತದೆ. ಅಷ್ಟಾದರೆ ಜನರಲ್ಲಿ ಜಾಗೃತಿ ಮೂಡಿದಂತೆಯೇ. ಇದಾಗಬೇಕಾದರೆ ಈ ಆರಿವು ಜನ ಮಾನಸಕ್ಕೇ ಸುನಾಮಿ ರೀತಿಯಲ್ಲಿ ಅಪ್ಪಳಿಸಬೇಕು. ಈ ಅಪ್ಪಳಿಸುವಿಕೆ ಸೃಷ್ಟಿಸಲು ಈ ರೀತಿ ಏಕಕಾಲದಲ್ಲಿ ದೇಶವ್ಯಾಪಿ ಜಾಗೃತಿ ಹುಟ್ಟಿಸುವ ಪ್ರಕ್ರಿಯೆ ಅನಿವಾರ್ಯ. ಆದಕ್ಕೇ ರಾಷ್ಟ್ರೀಯ ಹಬ್ಬಗಳಿಗಿಂತ ಮಜಬೂತಾದ ವೇದಿಕೆ ಮತ್ತು ಸಂದರ್ಭ ಬೇರ್ಯಾವುದಿದೆ?

ಇದೇ ಮಾತನ್ನು ಭ್ರಷ್ಟಾಚಾರಕ್ಕೂ ಅನ್ವಯಿಸಬಹುದು. ಭ್ರಷ್ಟ = ದೇಶದ್ರೋಹಿ ಎಂಬ ಸಮೀಕರಣ ಹುಟ್ಟಿಕೊಂಡದ್ದೇ ಆದರೆ ದೇಶಕ್ಕೇ ಬೇರೇನೂ ಬೇಕಾಗಿಲ್ಲ. ಇಲ್ಲಿ ಕೊಡುವವ ತೆಗೆದುಕೊಳ್ಳುವವ ಇಬ್ಬರೂ ಪರಮ ಪಾಪಿಗಳು ಎಂಬ ಮನೋಭಾವ ಸೃಷ್ಟಿಯಾದರೆ ಸಾಕು. ಭ್ರಷ್ಟರಿಗೆ ಸಾಮಾಜಿಕ ಬಹಿಷ್ಕಾರ ಕಟ್ಟಿಟ್ಟ ಬುತ್ತಿ. ಇದು ಖಂಡಿತ ತಿರುಕನ ಕನಸಲ್ಲ. ಸಮಾಜದ ಪಾಲ್ಗೊಳ್ಳುವಿಕೆ ಇದ್ದಲ್ಲಿ ಸುಲಭವಾಗಿ ನನಸಾಗಬಹುದಾದ ಕನಸು.

ನಾನ ಕಾರಣ, ಉದ್ದೇಶಗಳಿಂದ ನಾನ ಸ್ತರಗಳಲ್ಲಿ ಚದುರಿ ಹೋಗಿರುವ ದೇಶವಾಸಿಗಳನ್ನು ಕಂಗೆಡಿಸಿರುವ, ಕಂಗೆಡಿಸುತ್ತಿರುವ ಸಮಸ್ಯೆಗಳನ್ನೇ ದಾರವಾಗಿಸಿಕೊಂಡು ಅವರನ್ನು ಬೆಸೆಯುವ ಕೆಲಸ ಮಾಡಿದ್ದೆ ಆದಲ್ಲಿ ಈ ಸಮಸ್ಯೆಗಳು ನಮ್ಮ ನಿಯಂತ್ರಣಕ್ಕೆ ಬರುತ್ತವೆ. ಜನರಲ್ಲೂ ಪರಸ್ಪರ ವಿಶ್ವಾಸ ಮೂಡುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಯುವಜನತೆ ದೇಶದ ಮುಖ್ಯವಾಹಿನಿಗೆ ರಾಜಪಥದಲ್ಲೇ ತಲುಪಿದಂತಾಗುತ್ತದೆ.

ಇದರಿಂದ ಇಂತಹ ಮಹಾನ್ ದಿನಗಳ ಆಚರಣೆಗೂ ಒಂದು ಕಳೆ ಬರುತ್ತದೆ, ಸಾರ್ಥಕತೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಚಿವುದೇ?

Friday, January 1, 2010

ಎಲ್ಲ ಜವಾಬ್ದಾರಿಗಳು ಪತ್ರಕರ್ತನದ್ದೇಯಲ್ಲ !

ಹೀಗೊಂದು ನೈಜ ಮೆಸೆಜ್ ಸಂಭಾಷಣೆ.
ಇವತ್ತು ನೀವು ಸೂಪರ್ಬ್ ಆಗಿ ಕಾಣುತ್ತಿದ್ದೀರಿ...
ಥ್ಯಾಂಕ್ಯೂ, ಹು ಇಸ್ ದಿಸ್?
ನಾನು ನಿಮ್ಮ ಅಭಿಮಾನಿ...
ಅಭಿಮಾನಿಯಾ? ವೆರಿ ನೈಸ್. ನೀವ್ಯಾಕೆ ನನ್ನ ಅಭಿಮಾನಿ?
ನಿಮ್ಮ ಡ್ರೆಸ್ ಸೆನ್ಸ್, ಮಾತನಾಡೋ ಸ್ಟೈಲ್, ನಿಮ್ಮ ಕಣ್ಣು... ಅದ್ಬುತ ಅದಕ್ಕೆ...
ನೀವು ನನ್ನನ್ನು ಎಷ್ಟು ದಿನದಿಂದ ನೋಡುತ್ತಿದ್ದೀರಿ?
೧೫ ದಿನದಿಂದ...
ಹೌದಾ! ನಿಮ್ಮ ಹೆಸರು ಹೇಳಿ ಪ್ಲೀಸ್.
ಇಲ್ಲ, ನೀವೇ ಹುಡುಕಿ... ಹೀಗೆ ಮುಂದುವರಿದ ಈ ಮೆಸೆಜ್ ಅವಳು ತನ್ನ ಮನೆ ವಿಳಾಸ ಕೊಡುವ ತನಕ ತಲುಪಿತ್ತು. ನಂತರ ನಾವು ಭೇಟಿಯಾಗುವ ದಿನ, ಸ್ಥಳ ಎಲ್ಲ ನಿಗದಿಯಾಯಿತು ಕೂಡ.

ವಾಸ್ತವವಾಗಿ ಆ ಹುಡುಗಿ ನನಗೆ ಪರಿಚಿತಳು. ಅವಳಿಗೂ ನನ್ನ ಪರಿಚಯವಿದ್ದೆ ಇದೆ. ಆದರೆ ಇದು ನನ್ನ ನಂಬರ್ ಮತ್ತು ನಾನು ಈ ರೀತಿ ’ಆಟವಾಡಿಸುತ್ತಿದ್ದೇನೆ’ ಎಂದು ಅವಳಿಗೆ ಗೊತ್ತಿರಲಿಲ್ಲ.

ನೀವು ಅಂಗನವಾಡಿಯಲ್ಲಿ ಟೀಚರಾ? ಎಂಬ ಪ್ರಶ್ನೆಯೊಂದಿಗೆ ಮಾತು ಶುರುಮಾಡಿ, ಹುಡುಗಿಯರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಸೈನೈಡ್ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮೋಹನ್ ಕುಮಾರ್‌ನ ವಿದ್ಯೆಗೂ, ಈ ತಂತ್ರಕ್ಕೂ ಏನಾದರೂ ವ್ಯತ್ಯಾಸವಿದೆಯಾ? ಅದರೂ ನಮ್ಮ ಹುಡುಗಿಯರು ಬುದ್ದಿ ಕಲಿತಿಲ್ಲ! ಸಮಾಜ, ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಶಾಪ ಹಾಕುವುದನ್ನು ಬಿಟ್ಟಿಲ್ಲ!

ಮೇಲೆ ನಾ ಹೇಳಿದ ರೀತಿಯ ಮೊಬೈಲ್ ಚ್ಯಾಟ್‌ಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರೆ ಅದು ಒಂದು ಮಿತಿಯನ್ನು ದಾಟಿದರೆ ಮೋಹನ್ ಕುಮಾರ್ ನಂತವರು ಹುಟ್ಟಿಕೊಳ್ಳುತ್ತಾರೆ.

ಮೋಹನ್ ಕುಮಾರ್‌ನ ಪಾಶವೀ ಕೃತ್ಯ ಬೆಳಕಿಗೆ ಬರುತ್ತಲೇ ಆತನ ಪ್ರತಿ ಚಲನವಲನಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದವು. ಈ ನಡುವೆ ’ಲವ್ ಜಿಹಾದ್’ ಎಂಬ ಪಿಡುಗಿನ ಬಗೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನೂರಾರು ಯುವತಿಯರು ’ಲವ್ ಜಿಹಾದ್’ಗೆ ಈಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ವೇಶ್ಯಾವಟಿಕೆಗೆ ತಳ್ಳಿದ ಸಾಕಷ್ಟು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಷ್ಟೆಲ್ಲಾ ಅಗಬಾರದ ಅನಾಹುತಗಳಾಗುತ್ತಿದ್ದರೂ ಹುಡುಗಿಯರ ನಾಪತ್ತೆ ಮತ್ತು ಪರಾರಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ.

ಎಲ್ಲರಿಗೂ ಗೊತ್ತಿರುವಂತೆ ಮಾಧ್ಯಮಗಳ ಮುಖ್ಯ ಜವಾಬ್ದಾರಿ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡುವುದು. ಅದರಲ್ಲೂ ಮಾಧ್ಯಮಗಳು ಮಾಹಿತಿ ಮತ್ತು ಶಿಕ್ಷಣ ನೀಡಿದಾಗ ಜನರಲ್ಲಿ ’ಜಾಗ್ರತಿ’ ಮೂಡುತ್ತದೆ. ಈ ’ಜಾಗ್ರತಿ’ಯಿಂದ ಜನರು ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ. ಅದ್ದರಿಂದ ಮಾಧ್ಯಮಗಳಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನ.

ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ. ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ?

ಮೋಹನ್ ಕುಮಾರ್‌ನ ಪ್ರಕರಣದ ಎಳೆ ಎಳೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದರೂ ಕೂಡ ಓಡಿ ಸುಸ್ತಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಸಮಾಜವೇ ಕಾರಣ ಅಲ್ಲವೇ? ಈ ವಿಷಯದಲ್ಲಿ ಮಾಧ್ಯಮಗಳು ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸವನ್ನು ಮಾಡಿದವು. ಅದ್ದರಿಂದ ಇಂದು ಈ ಜಿಲ್ಲೆಯ ಬಹುತೇಕ ಎಲ್ಲರಿಗೂ ಮೋಹನ್ ಕುಮಾರ್‌ನ ಕುಕೃತ್ಯಗಳ ಪರಿಚಯವಿದೆ ಆ ಮೂಲಕ ತಾವೂ ಕೂಡ ಯಾವ ರೀತಿ ಮೋಸದ ಜಾಲಕ್ಕೆ ಸಿಲುಕಬಹುದು ಎಂಬರಿವಿದೆ. ಹಾಗೆಯೇ ತಾವು ಅನೈತಿಕ ದಂಧೆಯ ಪಾಲಾಗಬಹುದು ಎಂಬುದು ಕೂಡ ತಿಳಿದಿದೆ. ಆದರೇನು ಪ್ರಯೋಜನ? ಓಡಿ ಹೋಗುವವರು ನಿಲ್ಲುತ್ತಲೇ ಇಲ್ಲ!

ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು.

ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು.

ಮಾಧ್ಯಮಗಳಿಗೆ ರೈತರ ಅತ್ಮಹತ್ಯೆಗಳಿಗಿಂತ ಫ್ಯಾಶನ್ ಶೋಗಳು, ಸೆಲೆಬ್ರಿಟಿಗಳು ಮುಖ್ಯವಾಗಿದ್ದಾರೆ, ಮುಖ್ಯವಾಗುತ್ತಿದ್ದಾರೆ, ಈ ಮಾಧ್ಯಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹುಯಿಲೆಬ್ಬಿಸುವ ಕೆಲಸ ಒಂದು ಕಡೆ ನಡೆಯುತ್ತಿದೆ. ಹೌದು, ಮಾಧ್ಯಮಗಳು ರೈತನ ಅತ್ಮಹತ್ಯೆಗೆ ಎಲ್ಲೋ ಒಂದು ಮೂಲೆಯಲ್ಲಿ ಸ್ಥಾನ ಕೊಟ್ಟಿರಬಹುದು. ಆದರೆ ಇಂದು ದೇಶದ ಬಹುತೇಕ ವಿದ್ಯಾವಂತ ಜನರಿಗೆ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬರಿವು ಮಾಧ್ಯಮಗಳಿಂದ ದಕ್ಕಿದೆ. ಆದರೆ, ಎಷ್ಟು ಮಂದಿ ರ‍್ಯೆತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?

ಜನರಿಗೆ ವರ್ಷಕ್ಕೆ ಸಾವಿರಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುವಂತದ್ದು ಒಂದು ಸಾಮಾನ್ಯ ಸುದ್ದಿಯಾಗಿಯೇ ಉಳಿಯುವುದಾದರೆ, ಅದಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದಾದರೆ ಆ ಜಾಗವನ್ನು ಸೆಲೆಬ್ರಿಟಿಗಳ ಸುದ್ದಿ ಅಲಂಕರಿಸುವುದರಲ್ಲಿ ತಪ್ಪೇನಿದೆ?

ಇವತ್ತು ರೈತರ ಸಮಸ್ಯೆಗಳ ಅರಿವು ಇರುವವರು ಎಂದೆನಿಸಿಕೊಂಡವರು ಕೂಡ ಸಂತೆಗೆ ಹೋಗಿ ೧ ರೂಪಾಯಿಗೆ ೨ ಕೆಜಿ ಟೊಮೆಟೊ ಕೊಡು ಅನ್ನುತ್ತಾರೆ. ಅದೇ ಮಾಲ್‌ಗಳಿಗೆ ಹೋಗಿ ಅದೇ ಟೊಮೆಟೊಕ್ಕೆ ಕೆಜಿಗೆ ೩೦ ರೂಪಾಯಿ ಅಂದರೂ ತುಟಿ ಬಿಚ್ಚದೇ ನೋಟು ಬಿಚ್ಚುತ್ತಾನೆ. ಈಗ ಹೇಳಿ, ತಮ್ಮ ಜವಾಬ್ದಾರಿ ಮರೆತಿರುವುದು ಮಾಧ್ಯಮಗಳಾ? ಅಥವಾ ಸಮಾಜವಾ?
ಇಂದು ದೇಶದ ಬಹುತೇಕ ಎಲ್ಲ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ವ್ಯವಸ್ಥೆಯ ಗಮನಕ್ಕೆ ತಂದಿವೆ. ಆದರೆ ಎಲ್ಲೂ ಎಲ್ಲ ಕೃಷಿಕರನ್ನು ಒಂದೇ ಸೂರಿನಡಿಗೆ ತಂದು ಒಂದು ಹೋರಾಟ ಸಂಘಟಿಸಲು ಸಾಧ್ಯವಾಗಿಲ್ಲ, ಯಾಕೆ? ಜನರನ್ನು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಸಂಘಟಿಸಿ ಆಧಿಕಾರದ ರುಚಿ ಸವಿದವರಿದ್ದಾರೆ, ರೈತರ ಹೆಸರು ಹೇಳಿ ಅಧಿಕಾರದ ದಿಬ್ಬಣ ಏರಿದ ಹೆಗ್ಗಣಗಳ ಸಂಖ್ಯೆಗೂ ಮಿತಿಯಿಲ್ಲ. ಅದರೂ ಇಂದಿಗೂ ರೈತ ಅನಾಥ. ಈ ಬಗ್ಗೆ ಮಾಧ್ಯಮಗಳು ’ಜಾಗೃತಿ’ಯುಂಟು ಮಾಡುವ ಕೆಲಸ ಮಾಡಿಲ್ಲವೇ?

ಶೋಷಣೆ, ಭ್ರಷ್ಟಾಚಾರ, ಲಂಚಕೋರತನ, ದುಷ್ಟ ರಾಜಕೀಯದ ಬಗ್ಗೆ ಸಿನಿಮಾ ಸೇರಿದಂತೆ ಎಲ್ಲ ಮಾಧ್ಯಮಗಳು ಜನರೇ ಜಾಗ್ರತರಾಗಿ, ಈ ದುಷ್ಟಕೂಟದಿಂದ ಯಾವ ರೀತಿ ಹೊರಬರಬಹುದು ಎಂದು ಬಾಯಿ ಬಾಯಿ ಬಡಿದುಕೊಂಡಿವೆ ಅದರೂ ಈ ಪಿಡುಗು ಕಿಂಚಿತ್ ಕಡಿಮೆಯಾಗಿಲ್ಲ. ಹೋಗಲಿ, ನಮ್ಮ ಲೋಕಾಯುಕ್ತವಂತೂ ಭ್ರಷ್ಟ ಖದೀಮರ ವಿರುದ್ದ ಸಾರಿರುವ ಸಮರಕ್ಕೆ ಎಲ್ಲ ಮಾಧ್ಯಮಗಳು ತುಂಬು ಪ್ರಚಾರ ನೀಡುತ್ತಿವೆ. ಆದರೂ ಜನ ತಮ್ಮ ಕೆಲಸ ಮಾಡಿ ಕೊಡಲು ಅಧಿಕಾರಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಹಣ ಕೇಳುವ ಅಧಿಕಾರಿಗಳ ವಿರುದ್ದ ದೂರು ಕೂಡ ಕೊಡುತ್ತಿಲ್ಲ. ಕೊಟ್ಟರು ಅಂಥವರ ಪ್ರಮಾಣ ತೀರಾ ಕಡಿಮೆ. ಎಲ್ಲವನ್ನೂ ಮಾಧ್ಯಮಗಳ ತನಿಖಾ ವರದಿ ಅಥವಾ ಕುಟುಕು ಕಾರ್ಯಾಚರಣೆಯೇ ಮಾಡಲಿ, ಇಂತಹ ಪಿಡುಗುಗಳ ವಿರುದ್ದ ಹೋರಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಕರ್ತವ್ಯ ಮತ್ತು ಜವಾಬ್ದಾರಿ ಎಂಬ ಮನೋಭಾವ ಸಮಾಜದಲ್ಲಿ ಈಗಾಗಲೇ ಬಲವಾಗಿ ಬೇರುಬಿಟ್ಟಿದೆ.

ಇದು ಮಾಧ್ಯಮಗಳ ಮಹಿಮೆ, ಸಾಮರ್ಥ್ಯ, ಮತ್ತು ಶಕ್ತಿಯನ್ನು ಪರಿಗಣಿಸಿ ಸಮಾಜ ನೀಡಿದ ಗೌರವ ಎಂದು ಭಾವಿಸುವ ಸಂಗತಿಯಾಗಿ ಉಳಿದಿದ್ದರೆ ಖಂಡಿತವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ ಬಹು ಹೆಮ್ಮ ಪಡಬೇಕಾದ ವಿಷಯವಾಗಿರುತ್ತಿತ್ತು. ಅಥವಾ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ವ್ಯವಸ್ಥೆ ಮತ್ತು ಸಮಾಜ ಅದಕ್ಕೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದರ ಹಿಂದೆ ಇದ್ದಿದ್ದರೂ ಕೂಡ ಅದು ಮಾಧ್ಯಮಗಳ ಹಿರಿಮೆಯೆನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಇಂದಿನ ಮಾಧ್ಯಮಗಳ ಮೇಲಿನ ಸಮಾಜದ ನಿರೀಕ್ಷೆಯ ಹಿಂದಿರುವುದು ಅದರ ಪಲಾಯಾನವಾದ.
ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಪತ್ರಿಕೋದ್ಯಮವಿತ್ತು ಈಗ ಇಲ್ಲ ಎಂದು ಕನವರಿಸುವವರು ಆಗೀನ ಸಮಾಜ ಹೇಗಿತ್ತು? ಅದು ಸಮಸ್ಯೆಗಳಿಗೆ, ಹೋರಾಟಗಳಿಗೆ ಯಾವ ರೀತಿ ಸ್ಪಂದಿಸುತ್ತಿತ್ತು ಎಂಬುದನ್ನು ಮೊದಲು ಗಮನಿಸಬೇಕು. ಅಂದು ಒಂದು ಸಮಸ್ಯೆಯ ಬಗ್ಗೆ ಬರೆದರೆ ಅದರ ಬಗ್ಗೆ ಯೋಚಿಸುವ ಸಮಾಜವಿತ್ತು, ಅಗತ್ಯಬಿದ್ದರೆ ಮನೆ ಮಠ ಬಿಟ್ಟು ಕೂಡ ಹೋರಾಡುತ್ತಿದ್ದರು. ಅದ್ದರಿಂದ ಸಮಸ್ಯೆ ಪರಿಹಾರವಾಗುತ್ತಿತ್ತು.

ನೆನಪಿಡಿ, ಆಗ ಇದ್ದದ್ದು ಈಗೀನ ಅಕ್ಷರಸ್ಥರ ಪ್ರಮಾಣದ ಆರ್ಧಕ್ಕಿಂತಲೂ ಕಡಿಮೆ ಅಕ್ಷರಸ್ಥರು. ಮಾಧ್ಯಮ ಎಂದರೆ ಪತ್ರಿಕೆ ಮಾತ್ರ. ರೇಡಿಯೋ ತನ್ನ ಅಸ್ತಿತ್ವ ಕಂಡುಕೊಂಡದ್ದು ೧೯೩೫ರ ಬಳಿಕ. ಸಂಪರ್ಕ ಸಾಧನಗಳಾಗಲೀ, ರಸ್ತೆಗಳಾಗಲೀ ತೀರಾ ಬಾಲಾವಸ್ಥೆಯಲ್ಲಿತ್ತು. ಆದರೂ ಅವರು ಹೋರಾಡಿದರು ಮತ್ತು ಗೆದ್ದರು.

ಆದೇ ಈಗ? ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲೇವು, ಟಿವಿ, ಇಂಟರ್ನೆಟ್‌ಗಳು ರೇಡಿಯೋ ಮತ್ತು ಪತ್ರಿಕೆಗಳ ಜೊತೆ ಸೇರಿ ಮಾಧ್ಯಮ ಕ್ರಾಂತಿಯೇ ಆಗಿದೆ. ಈ ಕ್ರಾಂತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ತಲುಪಿದೆ. ಆದರೂ ಈ ಸಮಾಜಕ್ಕೆ ತನ್ನೋಳಗೊಂದು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.

ಮಾಧ್ಯಮಗಳು ತಮ್ಮ ಮೂಲ ಉದ್ದೇಶಗಳಿಗೆ ನಿಷ್ಠವಾಗಿಯೇ ಇವೆ ಎಂದು ಹೇಳುವುದು ಕಷ್ಟ ಆದರೂ ತಮ್ಮ ಉದ್ದೇಶ ಮರೆತಿಲ್ಲ. ಆದರೆ ಸಮಾಜ ಮಾತ್ರ ಎಲ್ಲವನ್ನೂ ಮಾಧ್ಯಮಗಳ ಮೇಲೆ ಹೊರಿಸಿ ತಾನು ಮಾತ್ರ ನಿಶ್ಚಿಂತವಾಗಿದೆ.
ರಸ್ತೆ ಸರಿಯಿಲ್ಲ ಎಂದು ಪತ್ರಕರ್ತ ಬರೆಯಬಹುದು ಮತ್ತು ಬರೆಯುತ್ತಾನೆ, ಆದರೆ ಅದನ್ನು ಅವನೇ ರಿಪೇರಿ ಮಾಡಿಸಿಕೊಡಬೇಕು ಎಂದು ಬಯಸಲು ಸಾಧ್ಯವಿಲ್ಲ ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ ಅವನಿಗೆ ಸಾಂವಿಧಾನಿಕವಾದ ಯಾವುದೇ ವಿಶೇಷ ಹಕ್ಕಿಲ್ಲ, ಒಬ್ಬ ಜನ ಸಾಮಾನ್ಯನಿಗೆ ಇರುವ ಎಲ್ಲ ನೀತಿ ನಿಯಮಗಳು ಅವನಿಗೂ ಅನ್ವಯಿಸುತ್ತದೆ ಹಾಗೂ ಅವನು ಅದಕ್ಕೆ ಬದ್ದನಾಗಿರಬೇಕು. ಹಾಗೆಯೇ ಸಮಾಜದ ಉಳಿದವರಿಗೆ ಇರುವಂತಹ ಎಲ್ಲ ಸಂಬಂಧಗಳು, ಇತಿ ಮಿತಿಗಳು ಅವನಿಗೂ ಇರುತ್ತದೆ ಎಂಬುದನ್ನು ಮರೆಯಬಾರದು ಅಲ್ಲವೇ?

ಇದು ಕನ್ನಡ ಸಾಹಿತ್ಯಕ್ಕೆ ಸಮನ್ವಯ ಸಂಧಿ ಕಾಲ

ಕನ್ನಡಿಗರ ಸಾಹಿತ್ಯದ ಹಸಿವು ಮತ್ತು ಸಾಮರ್ಥ್ಯಕ್ಕೆ ಕಳೆದ ಒಂದಿಡೀ ಸಹಸ್ರಮಾನವೇ ಸಾಕ್ಷಿಯಾಗಿ ನಿಂತಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಕನ್ನಡಿಗರ ಕೈ ಹಿಡಿಯದ ಸಾಹಿತ್ಯ ಪ್ರಕಾರವೇ ಉಳಿದಿಲ್ಲ ಎಂಬಷ್ಟು ವಿಶಾಲವಾಗಿ ಮತ್ತು ಆಳವಾಗಿ ನಮ್ಮ ಸಾಹಿತ್ಯದ ಬೇರು ಹಬ್ಬಿದೆ.

ಇಲ್ಲಿ ನಾನು ಯಾವುದೇ ಸಾಹಿತಿಯ, ಸಾಹಿತ್ಯದ ಕಾಲಘಟ್ಟ ಅಥವಾ ಸಾಹಿತ್ಯ ಪ್ರಕಾರದ ಬಗ್ಗೆ ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡುತ್ತಿಲ್ಲ. ಯಾಕೆಂದರೆ ಕನ್ನಡದ ಲಭ್ಯವಿರುವ ಮೊದಲ ಲಿಖಿತ ಸಾಹಿತ್ಯ ಕೃತಿ ಕವಿರಾಜಮಾರ್ಗ ದಿಂದ ಹಿಡಿದು ಜನಪದವೂ ಸೇರಿದಂತೆ ಇಂದಿನ ಸಾಹಿತ್ಯದ ವರೆಗೂ ಪ್ರತಿಯೊಂದು ಸಾಹಿತ್ಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದೆ ಇದೆ. ಎಲ್ಲ ಸಾಹಿತ್ಯ ಪ್ರಕಾರಗಳ ಸಮ್ಮೀಳನದಿಂದ, ಹಿರಿಮೆಯಿಂದ ಮತ್ತು ಕೊಡುಗೆಯಿಂದ ತಾನೇ ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆ ಮತ್ತು ಶ್ರೇಷ್ಟತೆ ದಕ್ಕಿದ್ದು. ಒಂದು ಒಳ್ಳೆಯ ಸಾಂಬಾರಿಗೆ ನಾನ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಹೇಗೆ ಸೇರಬೇಕೋ ಹಾಗೆ ಇದು ಕೂಡ. ಎಲ್ಲವೂ ಒಂದೇ ಪ್ರಮಾಣದಲ್ಲಿ ಸೇರಿದರೆ ಏನಾಗಬಹುದು? ಆಡುಗೆ ಮಾಡುವವ ಯಾವ ರೀತಿ ಆಡುಗೆ ಪದಾರ್ಥಗಳ ಮೇಲೆ ನಿಯಂತ್ರಣ ಹೊಂದಿರುತ್ತಾನೋ ಅದೇ ರೀತಿ ಕನ್ನಡದ ಮಟ್ಟಿಗೆ ಕಾಲ ಚಕ ಆ ಕೆಲಸ ಮಾಡಿತು ಎಂದು ನನಗನಿಸುತ್ತಿದೆ.

ಆದರೆ ಒಂದು ಮಾತನ್ನು ನಾನಿಲ್ಲಿ ಬರೆದೆ ಮುಂದುವರಿಯಬೇಕು. ಹಿಂದಿನ ಹೆಚ್ಚಿನೆಲ್ಲ ಸಾಹಿತಿಗಳು ವಿದ್ವಾಂಸರಾಗಿದ್ದರು ಇಲ್ಲವೇ ಅವರಲ್ಲಿ ಜೀವನಾನುಭವ ಪೊಗದಸ್ತಾಗಿತ್ತು . ಜನಪದ ಸಾಹಿತಿಗಳು ವಿದ್ವಾಂಸರು ಎಂಬ ಪರಿಧಿಯೊಳಗೆ ಬಾರದಿದ್ದರು ಅವರವರು ಬದುಕಿದ ರೀತಿ ಮತ್ತು ತಮ್ಮ ಪರಿಸರವನ್ನು ಕಟ್ಟಿ ಕೊಟ್ಟ ರೀತಿಯನ್ನು ಗಮನಿಸಿದಾಗ ಅವರನ್ನೂ ಕೂಡ ಪಂಡಿತರು ಎಂದು ಪರಿಗಣಿಸಬಹುದು.

ಆಗಿನ ಶಿಷ್ಟ ಸಾಹಿತಿಯೊಬ್ಬನಿಗೆ ತನ್ನ ಕೃತಿಯನ್ನು ಅಥವಾ ಬರಹವನ್ನು ಜನರ ಮುಂದೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಅದೇ ರೀತಿ ಒಬ್ಬ ಜನಪದ ಸಾಹಿತಿಗೆ ಕೂಡ ತನ್ನ ಸಾಹಿತ್ಯವನ್ನು ಇನ್ನೊಬ್ಬರಿಗೆ ದಾಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದ್ದರಿಂದ ನನಗನಿಸುವಂತೆ ಈ ಎರಡು ಸಾಹಿತ್ಯ ಪ್ರಕಾರದಲ್ಲೂ ಜೊಳ್ಳುಗಳು ಕಾಲಗರ್ಭ ಸೇರಿ ಗಟ್ಟಿಕಾಳುಗಳು ಮಾತ್ರ ಉಳಿದವು. ಆದರೆ ಇಂದು ಏನಾಗಿದೆ?

ನಾವು ಇಪ್ಪತ್ತನೆಯ ಶತಮಾನವನ್ನು ಸಾಹಿತ್ಯದ ದೃಷ್ಟಿಯಿಂದ ನವೋದಯ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ವಿಂಗಡಿಸುತ್ತೇವೆ. ಆದರೆ ಕಳೆದ ಶತಮಾನದ ಕೊನೆಯ ಒಂದುವರೆ ದಶಕ ಮತ್ತು ಈ ಶತಮಾನದ ಆದಿಯನ್ನು ಯಾವ ವೇದಿಕೆಯಡಿ ತರುವುದು ಎಂಬದೇ ದೊಡ್ಡ ಸಮಸ್ಯೆ. ಇಲ್ಲಿಂದಲೇ ಇಂದಿನ ಕನ್ನಡ ಸಾರಸ್ವತ ಲೋಕದ ಅಜಲುಗೊಜಲು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಕಾಲಘಟ್ಟದ ಸಾಹಿತ್ಯವನ್ನು ಒಂದೇ ವೇದಿಕೆಯಡಿ ತಾರದಿದ್ದರೆ ಏನಾಗುತ್ತದೆ? ಎಂದು ನೀವು ಕೇಳಲೇ ಬೇಕಾದ ಪ್ರಶ್ನೆ. ನನ್ನ ಉತ್ತರವೂ ಸ್ಪಷ್ಟವಾಗಿದೆ. ಏನೂ ಆಗುವುದಿಲ್ಲ, ಒಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತದೆ, ಸಾಹಿತ್ಯಕ್ಕೆ ಚೌಕಟ್ಟು ಹಾಕುವುದು, ಸಾಹಿತ್ಯವೆಂದರೆ ಇದೇ ರೀತಿ ಇರಬೇಕು ಎಂದು ಹೇಳುವುದು ಸರಿಯಲ್ಲ. ಆದರೆ ಇದನ್ನೇ ಸ್ಪಷ್ಟವಾಗಿ ಆಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಇಂದಿನ ಸಾಹಿತ್ಯಕ್ಕೆ ನಿರ್ದಿಷ್ಟ ಉದ್ದೇಶ, ಗುರಿ, ಅಥವಾ ಇಂದಿನ ಸಾಹಿತಿಗಳು ಯಾವುದೋ ಒಂದು ಉದ್ದೇಶಕ್ಕಾಗಿ ಅಥವಾ ಏಕ ಉದ್ದೇಶವಿಟ್ಟುಕೊಂಡು ಬರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ. ಅಂದರೆ ಬಿಡಿಯಾದ ಪ್ರಜ್ಞೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಇದರೊಂದಿಗೆ ಈ ಕಾಲಘಟ್ಟದ ಆಗುಹೋಗುಗಳಿಗೆ ಅಕ್ಷರದ ಮೂಲಕ ಮೂರ್ತ ರೂಪ ನೀಡುವ ಸಾಮರ್ಥ್ಯವಿರುವ ಒಬ್ಬ ಮಹಾನ್ ಸಾಹಿತಿಯ ಕೊರತೆ ನಮ್ಮನ್ನು ಕಾಡುತ್ತಿದೆ. ಹಿಂದೆ ನಾನು ಹೇಳಿದ ನಾಲ್ಕು ವಿಂಗಡನೆಗಳ ಸಮಯದಲ್ಲಿ ಅದಕ್ಕೆ ಹೊರತಾದ ಸಾಹಿತ್ಯ ರಚನೆಗಳೂ ಕೂಡ ಬಂದಿದ್ದವು ಎಂಬುದನ್ನು ನಾನಿಲ್ಲಿ ನಿರಾಕರಿಸುತ್ತಿಲ್ಲ.
ಕನ್ನಡದಲ್ಲಿ ಇಂದಿಗೂ ಮಹಾನ್ ಸಾಹಿತಿಗಳಿದ್ದಾರೆ. ಆದರೆ, ಅದರಲ್ಲಿ ಎಷ್ಟು ಮಂದಿ ಸಾಹಿತ್ಯಿಕವಾಗಿ ಬದುಕಿದ್ದಾರೆ ಎಂಬುದು ಮುಖ್ಯ. ಹೆಚ್ಚಿನ ಸಾಹಿತಿಗಳು ಇತಿಹಾಸದ ಬೆನ್ನು ಹಿಡಿದಿದ್ದಾರೆ ಎಂದೆನಿಸುತ್ತದೆ. ಇದು ಅವರ ಪಲಾಯನವಾದ ಖಂಡಿತವಾಗಿಯೂ ಆಲ್ಲ, ಬದಲಾಗಿ ಅವರ ಮಿತಿ.

ಇಂದು ಪತ್ರಿಕೆಗಳು ಬರಹಗಾರರಿಗೆ ಸಾಕಷ್ಟು ಆವಕಾಶ ಕೊಡುತ್ತಿವೆ. ಹಿಂದೆ ಇಂತಹ ಅವಕಾಶಗಳು ಕಡಿಮೆ ಇತ್ತು. ಗುಣಮಟ್ಟದ ಬರಹಗಳು ಮಾತ್ರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಅದ್ದರಿಂದಲೇ ಇರಬೇಕು ಕಳೆದ ಶತಮಾನದ ಕೊನೆಯ ದಶಕದವರೆಗೂ ಗುಣಮಟ್ಟದ ಬರಹಗಳು ಮತ್ತು ಬರಹಗಾರರು ಮಾತ್ರ ನಿಯತಕಾಲಿಕಗಳಲ್ಲಿ ಮತ್ತು ದಿನ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಸ್ಥಾನ ಪಡೆಯುತ್ತಿದ್ದರು.

ಆದರೆ ಪತ್ರಿಕೆಗಳು ಕೊಟ್ಟಿರುವ, ಕೊಡುತ್ತಿರುವ ವೇದಿಕೆಯನ್ನು ಯುವ ಬರಹಗಾರರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಮನಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಇಂದಿನ ಯುವ ಸಾಹಿತಿಗಳು ಅದರಲ್ಲೂ ಕಾಲೇಜು ಸಾಹಿತ್ಯವೆಂಬುದು ಪ್ರೀತಿ, ಪ್ರೇಮ, ಪ್ರಣಯದ ಸುತ್ತಲೇ ಗಿರಕಿ ಹೊಡಿಯುತ್ತಿದೆ. ತಪ್ಪಿದರೆ ಮೊಬೈಲ್, ಕಾಲೇಜಿನಲ್ಲಿನ ಮೊದಲ ದಿ, ಬಾಲ್ಯದ ನೆನಪು, ಕಾಲೇಜ್ ಕಾರಿಡಾರ್, ಗೆಳೆತನ, ಅಥವಾ ಉಪದೇಶ ನೀಡುವುದಕ್ಕೇ ಸೀಮಿತವಾಗುತ್ತಿದೆ. ಅದು ಸುತ್ತಲಿನ ಪರಿಸರಕ್ಕೆ ಕುರುಡಾಗಿದೆ. ಕುರುಡಾಗಿದ್ರೂ ಪರ‍್ವಾಗಿರಲಿಲ್ಲ ತನ್ನ ಸ್ಪರ್ಶಜ್ಞಾನವನ್ನೇ ಕಳೆದುಕೊಂಡಿದೇಯೇನೋ ಎಂದೆನಿಸುತ್ತದೆ.

ಬರವಣಿಗೆಯ ಆರಂಭದ ದಿನಗಳಲ್ಲಿ ಇಂತಹ ಬರಹಗಳನ್ನು ಬರೆದರೆ ತಪ್ಪಿಲ್ಲ, ಇದು ಬರಹಗಾರನ ಅತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾಕೆಂದರೆ ಆಗ ಬರಹ ಪ್ರಕಟಗೊಳ್ಳುವುದೇ ಮುಖ್ಯ. ಅದರೆ ಅದೇ ಅಭ್ಯಾಸವಾದರೇ?

ಪ್ರೀತಿ ಬಗ್ಗೆ ಒಂದೆರಡು ಸರಳ ಪದ್ಯ ಬರೆದರೆ ಒಂದಿಷ್ಟು ಹಣ, ಹೆಸರು ದಕ್ಕಿ ಬಿಡುತ್ತದೆ. ಅದರಾಚೆ, ಅಧ್ಯಯನ ಮಾಡಿ ಬರೆಯಬೇಕು, ಸಮಾಜದ ನೋವು ನಲಿವು ನನ್ನ ಬರಹದ ಮೂಲಕ ಧ್ವನಿ ಪಡೆದುಕೊಳ್ಳಬೇಕು ಎಂಬ ಆಶಯ ಇಂತಹ ಬರಹಗಳಲ್ಲಿ ಕಾಣುತ್ತಿಲ್ಲ. ಸಮಾಜದ ಬದಲು ವೈಯುಕ್ತಿಕ ವಿಷಯವನ್ನೇ ಅಥವಾ ಡೈರಿಯಲ್ಲಿ ಬರೆದು ಮುಚ್ಚಿಡಬೇಕಾದ ವಿಷಯಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಬರಹಗಾರನೆಂದು ಕರೆಸಿಕೊಳ್ಳುವ ಜಾಯಮಾನ ಇವರದ್ದು. ಇಂತಹ ಅರೆಬೆಂದ ಸಾಹಿತಿಗಳಿಂದ ನಮ್ಮ ಸಾಹಿತ್ಯ ಪರಂಪರೆಯ ಮುಂದುವರಿಕೆ ಸಾಧ್ಯಾನಾ? ಸಾಧ್ಯವಾದರೂ ಕೂಡ ಅದಕ್ಕೆ ಶ್ರೀಮಂತಿಕೆ ತುಂಬಲು ಇವರಿಂದ ಸಾಧ್ಯವಾಗುತ್ತಾ?

ಇಂತಹ ಬರಹಗಾರರು ಎರಡು ರೀತಿಯಲ್ಲಿ ಸೋಲುತ್ತಿದ್ದಾರೆ. ಮೊದಲನೆಯದಾಗಿ ಅವರು ತಮ್ಮ ಹಿಂದಿನ ಪರಂಪರೆಯನ್ನು ಅರಿತು ಕೊಳ್ಳುತ್ತಿಲ್ಲ. ಅಂದರೆ, ಓದು ಕಡಿಮೆಯಾಗುತ್ತಿದೆ. ಎರಡನೆಯದಾಗಿ ಸಮಾಜವನ್ನು ಗಮನಿಸುತ್ತಿಲ್ಲ. ಜೊತೆಗೆ ಏನು ಬರೆದರೂ ಪತ್ರಿಕೆಗಳು ಪ್ರಕಟಿಸುತ್ತವೆ ಅದ್ದರಿಂದ ಯಾಕೆ ಸುಮ್ಮನೆ ಕಷ್ಟ ಪಡುವುದು ಎಂಬ ಮನೋಭಾವ.

ಇನ್ನೂ ಹಿರಿಯ ಸಾಹಿತಿಗಳನ್ನು ಗಮನಿಸಿದರೆ ಅವರು ಕಾರಣವಿ(ವ)ಲ್ಲದ ಕಾರಣಗಳಿಂದ ಒಡೆದು ಹಂಚಿ ಹೋಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇದೊಂದು ದೊಡ್ಡ ಹೊಡೆತ. ಇದರಿಂದ ಮುಖ್ಯ ಬರಹಗಳಿಗೆ ಅಥವಾ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುನಿಷ್ಟ ವಿಮರ್ಶೆ ಮರೆಯಾಗಿ ವ್ಯಕ್ತಿ ನಿಷ್ಟ ಮತ್ತು ಸಿದ್ಧಾಂತ ನಿಷ್ಟ ವಿಮರ್ಶೆ ಮತ್ತು ಬರಹಗಳು ಅವರಿಂದ ಬರುತ್ತಿದೆ.
ಹಿಂದೆ ಗುರು ಇಲ್ಲ, ಮುಂದೆ ಗುರಿ ಇಲ್ಲದ ಈ ಸ್ಥಿತಿಯ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ನಿರ್ವಾತವೊಂದು ಸೃಷ್ಟಿಯಾಗುವಂತಾಗಿದೆ.

ಹಾಗಂತ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿಲ್ವಾ? ಖಂಡಿತವಾಗಿಯೂ ತರಹೇವಾರಿ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಅವುಗಳ ಮುದ್ರಣ ಮತ್ತು ವಿನ್ಯಾಸ ಚೇತೋಹಾರಿಯಾಗಿದೆ. ಭೌತಿಕವಾದ ಹೊಸತನ ತುಂಬುವುದರಲ್ಲಿ ನಮ್ಮ ಸಾಹಿತ್ಯ ಲೋಕ ಹಿಂದೆ ಬಿದ್ದಿಲ್ಲ ಆದರೆ ನಾವು ಸೋಲುತ್ತಿರುವುದು ಒಳಗಿನ ಹೂರಣ ತುಂಬುವುದರಲ್ಲಿ. ಅಂದರೆ ಯಂತ್ರ ಮಾಡುವ ಕೆಲಸಕ್ಕಿಂತ ಮನಸ್ಸು ಮಾಡಬೇಕಾದ ಕೆಲಸ ಕನ್ನಡದಲ್ಲಿ ಆಗಬೇಕಿದೆ.

ಇಂದಿನ ಕನ್ನಡ ಸಾಹಿತ್ಯದ ಧನಾತ್ಮಕ ಅಂಶವೆಂದರೆ ವಿವಿಧ ಬಗೆಯ ಸಾಹಿತ್ಯ ಹುಟ್ಟಿಕೊಳ್ಳುತ್ತಿದೆ, ಜೊತೆಗೆ ಹಿಂದೆ ಹುಟ್ಟಿದ ಕೆಲ ಸಾಹಿತ್ಯ ಪ್ರಕಾರಗಳು ಅಭಿವೃದ್ಧಿಕಾಣುತ್ತಿದೆ. ಇದರ ಜೊತೆ ಜೊತೆಗೆ ಜಾಗತೀಕರಣದ ಪ್ರಭಾವದಿಂದ ಹುಟ್ಟಿಕೊಂಡ ವೃತ್ತಿಗಳನ್ನು ಮಾಡುತ್ತಿರುವವರು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಇದೊಂದು ಹೊಸ ಬಗೆಯ ಸಮನ್ವಯ ಸಂಧಿ ಕಾಲ. ಹಿರಿಕಿರಿಯರು ಒಟ್ಟಾಗಿ ಈ ಸ್ಥಿತಿಯನ್ನು ಎದುರಿಸಬೇಕು. ಹಿರಿಯರ ಅನುಭವ, ಕಿರಿಯರ ಉತ್ಸಾಹ ಸಮನ್ವಯಗೊಂಡರೆ ಮಾತ್ರ ಕನ್ನಡ ಸಾಹಿತ್ಯ ಉಳಿಯಬಹುದು, ಹಬ್ಬಬಹುದು, ಬೆಳೆಯಬಹುದು.

ಇಲ್ಲದಿದ್ದಲ್ಲಿ ಇಂದಿನ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಜಾಗತೀಕರಣದ ವಿರುದ್ದದ ಬೈಗುಳ ನಿತ್ಯಮಂತ್ರವಾಗಿ ಬಿಡಬಹುದು. ಕನ್ನಡ ಸಾಹಿತ್ಯದ ಹರಿವು ಬತ್ತಿ ಹೋಗಬಹುದು!