Thursday, June 30, 2011

ಒಂಚೂರು ಕಾಯಿರಿ... ಬರ್ತಾ ಇದೆ...

ಸಾಕಷ್ಟು ಗೆಳೆಯ/ಗೆಳತಿಯರು ನನ್ನ ’ಅಟೋ’ಬಯೋಗ್ರಾಫಿ ಯಾವಾಗ ಬರುತ್ತೆ ಅಂತ ಮೆಸೇಜ್‌ಗಳ ಮೇಲೆ ಮೆಸೇಜ್ ಮಾಡಿ ಕೇಳುತ್ತಿದ್ದಾರೆ... ಅವರಿಗೆ ಸ್ವಲ್ಪ ದಿನದಲ್ಲಿ, ಇನ್ನೇನು ಬಂದೆ ಬಿಟ್ಟಿತು, ಒಂಚೂರು ಕಾಯಿರಿ ಎಂದು ಟೈಪಿಸಿ ಟೈಪಿಸಿ ನನಗೂ ಸುಸ್ತಾಗಿದೆ. ಆದರೂ ನಿಮ್ಮ ಪ್ರೀತಿಗೆ ನಾನು ಶರಣು ಹೇಳಲೇ ಬೇಕು. ನಿಮ್ಮ ಈ ಪ್ರೀತಿ ತಾನೆ ನನ್ನ ಪೆನ್ನನ್ನು, ಬರೆಯುವ ಮನಸ್ಸನ್ನು ಜೀವಂತವಾಗಿಟ್ಟಿರುವುದು! ಇನ್ನು ಕೆಲವರು ದಯಮಾಡಿ ನನ್ನ ಹೆಸರನ್ನು ಅಥವಾ ನಮ್ಮ ಬಗ್ಗೆ ಎಲ್ಲೂ ಬರೆಯಬೇಡ ಪ್ಲೀಸ್ ಎಂದಿದ್ದೀರಿ. ನನಗೆ ನಿಮ್ಮ ಸ್ಥಿತಿ ಅರ್ಥ ಆಗುತ್ತದೆ... ನಾನು ನನ್ನ ಹುಡುಗಿಯಷ್ಟು ಕಟುಕನ್ನಲ್ಲ! ನಾನು ಈ ಬರಹದಲ್ಲಿ ‘ಆದಷ್ಟು’ ಪ್ರಾಮಾಣಿಕವಾಗಿ  ನನಗನಿಸಿದ್ದನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ. ಮಾಡುತ್ತಿದ್ದೇನೆ. ಇದರರ್ಥ ನನ್ನ ಹಿಂದಿನ ಯಾವುದೇ ಬರಹಗಳಲ್ಲಿ ನಾನು ಪ್ರಾಮಾಣಿಕವಾಗಿರಲಿಲ್ಲ ಎಂದಲ್ಲ. ಇಲ್ಲಿನ ನನ್ನ ಅಭಿಪ್ರಾಯ ನೇರವಾಗಿ ನನ್ನ ಹೃದಯದಿಂದ ಬಂದಿರುವಂತದ್ದು... ಅದೇ ರೀತಿ ಇಲ್ಲಿ ನಾನು ಹೇಳುವ ಅಭಿಪ್ರಾಯಗಳೇ ನನ್ನ ನಿಲುವು, ಯೋಚನೆ ಮತ್ತು ಚಿಂತನೆಗಳ ಅಂತಿಮ ನಿಲ್ದಾಣವಲ್ಲ...



ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... ನಾನು ಎಷ್ಟೇ ಕೆಟ್ಟವನಾದರೂ ಕೂಡ ವರ್ಷಗಟ್ಟಳೆ ಶಿಕ್ಷೆ ಪಡೆಯುವ ಯಾವ ಕೆಲಸ ಕೂಡ ಮಾಡುತ್ತಿರಲಿಲ್ಲ... ಅದು ಗ್ಯಾರಂಟಿ... ಆದರೆ ಒಳ್ಳೆ ಹುಡುಗ ಎಂದು ಕರೆಸಿಕೊಂಡು 4 ವರ್ಷಗಳ ಕಾಲ ಅದೇಷ್ಟು ಹಿಂಸೆ ಪಟ್ಟಿಲ್ಲ... 


‘ಆಟೋ’ಬಯೋಗ್ರಾಫಿ... 


ಬರುತ್ತಿದೆ...


ಬರುತ್ತಲಿದೆ...



ಬಂದೇ ಬಿಟ್ಟಿತು...




ನೋಡ್ತಾ ಇರಿ ಏನೇನು ಬರೀತಿನಿಂತ...!

Saturday, June 25, 2011

ಜಾತಿ ಸೂಚಕ ಹೆಸರಿಗೆ ನಿರ್ಬಂಧ, ಹಿಮಾಚಲ ಪೊಲೀಸರ ಮಾದರಿ ನೀತಿ

ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ಅತ್ಯುತ್ತಮ ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ತನ್ನ ಪೊಲೀಸರ ಪೂರ್ಣ ಹೆಸರಿನ ಜೊತೆ ಸಾಮಾನ್ಯವಾಗಿ ಒಂದು ಭಾಗವಾಗಿರುವ ಜಾತಿ ಸೂಚಕ ಹೆಸರನ್ನು ಕಿತ್ತು ಹಾಕುವ ವಿಶಿಷ್ಟ ಯೋಜನೆಯನ್ನು ಅದು ಹಾಕಿಕೊಂಡಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಜೂನ್ ೨೪ರ ನವದೆಹಲಿ ಆವೃತ್ತಿಯ ಮುಖಪುಟದಲ್ಲಿನ ವರದಿಯೊಂದು ಹೇಳುತ್ತಿತ್ತು.

ಇಂದು ಜಾತಿ ಈ ಹಿಂದಿಗಿಂತಲೂ ಹೆಚ್ಚು ಬಲಿಷ್ಠವಾಗಿ ತನ್ನ ಕಬಂಧ ಬಾಹುವನ್ನು ಚಾಚುತ್ತಿರುವುದು ಅಧುನಿಕತೆಯ ಮುಖವಾಡ ಹಾಕಿಕೊಂಡಿರುವ ನಮಗೆಲ್ಲ ನಾಚಿಕೆಗೇಡಿನ ಸಂಗತಿ. ಆದರೂ ವೈಯುಕ್ತಿಕ ಜೀವನದಲ್ಲಿ ‘ಜಾತೀಯ ಭಾವನೆ’ ಹೊಂದಿದ್ದೇ ಆದರೆ ಅದನ್ನು ಸುಮ್ಮನೆ ಬಿಟ್ಟು ಬಿಡಬಹುದು. ಆದರೆ ಸಾರ್ವಜನಿಕ ಜೀವನ ನಡೆಸುವ ಜನರು ಕೂಡ ಜಾತಿಯ ಹೊಲಸನ್ನು ಮೈಮೇಲೆ ಹಾಕಿಕೊಂಡು ವ್ಯವಹಾರ ನಡೆಸುತ್ತಿರುವುದು ನಿಜವಾದ ದುರಂತ. ರಾಜಕಾರಣಿಗಳಲ್ಲಿ, ಸರ್ಕಾರಿ ಅಧಿಕಾರಿಗಳಲ್ಲಿ (ಪತ್ರಕರ್ತರಲ್ಲೂ ಇದು ಹೆಚ್ಚಿನ ಪ್ರಮಾಣದಲ್ಲಿ ಇದೆ) ಜಾತಿಯ ಭಾವನೆ ಇರುವುದು ಮತ್ತು ಅದು ಅವರ ವ್ಯವಹಾರದಲ್ಲಿ ಪ್ರತಿಫಲಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ. ಇಂತಹ ಸಂದರ್ಭದಲ್ಲಿ ಹಿಮಾಚಲ ಪೊಲೀಸರ ಈ ನಿರ್ಧಾರ ನಮ್ಮ ಕಣ್ಣು ತೆರೆಸುವಂತದ್ದಾಗಿದೆ.

ಇಂದು ಅದೇಷ್ಟೋ ಸರ್ಕಾರಿ ನೌಕರರಿಗೆ ತಮ್ಮ ಜಾತಿಯ ಜನರೆಂದರೆ ವಿಶಿಷ್ಟ ಒಲವು ಮತ್ತು ಬಲ. ತಮ್ಮ ಜಾತಿ ಬಾಂಧವರ ಬೇಕು ಬೇಡಗಳಿಗೆ ವಿಶೇಷವಾಗಿ ಸ್ಪಂದಿಸಿ ಉಳಿದ ಜಾತಿಯ ಜನರನ್ನು ಬೇರೆಯೇ ರೀತಿಯಲ್ಲಿ ನೋಡುವ ಗುಣವನ್ನು ಈ ನೌಕರರು ಹೊಂದಿದ್ದಾರೆ. ಇಂದು ಸರ್ಕಾರಿ ಅಧಿಕಾರಿಗಳಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ಉಳಿದಿರುವ ಎರಡೇ ಅಸ್ತ್ರ ಅಂದರೆ ಅವರಿಗೆ ಲಂಚ ಅಥವಾ ಜಾತಿಯ ಬಿಸ್ಕೇಟ್ ಬಿಸಾಕುವುದು. ಇದೆರಡಕ್ಕೂ ಬಗ್ಗದ ಅಧಿಕಾರಿಗಳು ನಮ್ಮಲ್ಲಿರುವುದು ವಿರಳ.

ಇನ್ನೂ ಒಬ್ಬ ಮಂತ್ರಿ ಕೂಡ ಹೆಚ್ಚಾಗಿ ತನ್ನ ಜಾತಿಯವರನ್ನೇ ತನ್ನ ಸುಪರ್ದಿಯಲ್ಲಿರುವ ಪ್ರಮುಖ ಮತ್ತು ಆಯಾಕಟ್ಟಿನ ಹುದ್ದೆಗಳಿಗೆ ಆಯ್ಕೆ ಮಾಡುವುದು, ಅವರಿಗೆ ವಿಶೇಷ ಸ್ಥಾನಮಾನ ನೀಡುವುದು ಅನಾಚೂನವಾಗಿ ನಡೆದು ಬಂದಿರುವ ಸಂಪ್ರದಾಯ. ರಾಜ್ಯದ ಪ್ರಸಕ್ತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದಕ್ಕೆ ‘ಮೇರು’ ಉದಾಹರಣೆ. ಹೀಗೆ ಸರ್ಕಾರಿ ವ್ಯವಹಾರದಲ್ಲಿ ಜಾತಿ ಸಾಮ್ರಾಜ್ಯದ ಹಿಡಿತ ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.

ಇಂತಹ ಸಂದರ್ಭದಲ್ಲಿ ಜಾತಿ ಮುಕ್ತ ಸಮಾಜ ನಿರ್ಮಾಣವಾಗುವ ಕನಸು ಸಧ್ಯದಲ್ಲೇ ನನಸಾಗುತ್ತದೆ ಎಂದು ಹೇಳುವಂತಿಲ್ಲ. ಅದ್ದರಿಂದ ಜಾತಿ ಮುಕ್ತ ಸಮಾಜ ನಿರ್ಮಾಣವಾಗುವ ಮುಂಚಿತವಾಗಿ ಜಾತಿ ಮುಕ್ತ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಜರೂರತ್ತಿದೆ. ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಆ ನಿಟ್ಟನಲ್ಲಿ ಅತ್ಯಂತ ಮಹತ್ವಪೂರ್ಣ ಮತ್ತು ಒಂದು ಮೈಲಿಗಲ್ಲು.

ಈ ನಿರ್ಧಾರದಿಂದ ಸರ್ಕಾರಿ ಅಧಿಕಾರಿಗಳ ಮನಸ್ಸಲ್ಲಿರುವ ಜಾತೀಯ ಭಾವನೆ ಕಡಿಮೆ ಆಗುತ್ತದೆ ಎಂದು ನಂಬುವಷ್ಟು ಮೂರ್ಖ ನಾನಲ್ಲ. ಜಾತಿ ಸೂಚಕ ಹೆಸರಿನ ಅಧಿಕಾರಿಯೊಬ್ಬನ ಬಳಿ ಯಾವುದಾದರೂ ಕೆಲಸಕ್ಕಾಗಿ ಬರುವಾತನ ಮೇಲೆ ಆತನ ಜಾತಿ ಬೀರುವ ತಕ್ಷಣದ ಪರಿಣಾಮ ಕಡಿಮೆ ಆಗುತ್ತದೆ ಎಂಬುದು ಮಾತ್ರ ದಿಟ.

ನನ್ನ ಜೊತೆ ಕೇಳಿದರೆ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಒಬ್ಬ ವ್ಯಕ್ತಿಯ ಜಾತಿಯನ್ನು ಸೂಚಿಸಲೇ ಬಾರದು ಎಂದು ಹೇಳುತ್ತೇನೆ. ಇಂದು ಶಾಲೆಯ ಪ್ರವೇಶ ಪತ್ರಗಳಲ್ಲೂ ಜಾತಿಯನ್ನು ಸೂಚಿಸುವ ಬಾಕ್ಸ್‌ಗಳಿರುವುದು ಖೇದನೀಯ. ಏನಿದ್ದರೂ ಕೂಡ ಜಾತಿ ಸೂಚಕ ಸಂಖ್ಯೆ, ಅಕ್ಷರಗಳಲ್ಲಿ ಈ ಕೆಲಸವನ್ನು ಮುಗಿಸಿಬಿಡಬೇಕು (ಅದೂ ನಮ್ಮಲಿ ಮೀಸಲಾತಿ ವ್ಯವಸ್ಥೆ ಇರುವುದರಿಂದ, ಇಲ್ಲದಿದ್ದಲ್ಲಿ ಅದು ಬೇಕಾಗಿರಲಿಲ್ಲ.)

ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯ ನಿರ್ಧಾರ ನಮ್ಮ ಕೇಂದ್ರ, ರಾಜ್ಯ ಸರ್ಕಾರಗಳಿಗೂ ಒಂದು ಮಾದರಿಯಾಗಲಿ ಎಂಬ ಆಶಯ ನನ್ನದು. ಭಟ್, ಗೌಡ, ಶೆಟ್ಟಿ, ರಾವ್, ಮೂರ್ತಿ, ನಾಯಕ್, ಪ್ರಭು, ಪೂಜಾರಿ... ಇತ್ಯಾದಿ ಇತ್ಯಾದಿ ಅಸಂಖ್ಯಾತ ಜಾತಿ ಸೂಚಕ ಪದಗಳು ನಮ್ಮ ನಮ್ಮ ಹೆಸರಿನಿಂದ ಮರೆಯಾಗಲಿ ಎಂಬ ಆಶಯ ನನ್ನದು. ಆದೂ ಪ್ರಸಕ್ತ ಸ್ಥಿತಿಯಲ್ಲಿ ಕಷ್ಟ ಸಾಧ್ಯ... ಆದರೆ ಸರ್ಕಾರಿ ನೌಕರರ ಮಟ್ಟಿಗಾದರೂ ಈ ಆಶಯ ನಿಜವಾಗಲಿ...

Wednesday, June 22, 2011

ನೋಡ್ತಾ ಇರಿ ಏನೇನು ಬರೀತಿನಿಂತ...!


ಗ್ಲೇ ತಾನೇ ಅವಳು ಎಷ್ಟು ಒಳ್ಳೆ ಹುಡುಗಿ ಅಂತ ನನಗನಿಸಿದ್ದು... ಅವಳನ್ನು ಮದುವೆ ಆಗೋ ಹುಡುಗ ಅದೃಷ್ಟ ಮಾಡಿರಬೇಕು ಎಂದು ಅನಿಸಿದ್ದು... ಅಮೇಲೆ ನಾನೇ ಏಕೆ ಆ ಆದೃಷ್ಟ ಮಾಡಿರಬಾರದು ಎಂದು ಅನಿಸಿದ್ದು... ಅಮೇಲೆ.... 


‘ಆಟೋ’ಬಯೋಗ್ರಾಫಿ... 


ಬರುತ್ತಿದೆ...


ಬರುತ್ತಲಿದೆ...



ಬಂದೇ ಬಿಟ್ಟಿತು...




ನೋಡ್ತಾ ಇರಿ ಏನೇನು ಬರೀತಿನಿಂತ...!

Tuesday, June 14, 2011

ಹಕ್ಕಿ ಹೊಕ್ಕವರು

ಸದ್ದಿಲ್ಲದೆ
ನನಗೆ ಗೊತ್ತಾಗದ ಹಾಗೆ
ನನ್ನೆದೆಯ ಗೂಡಿನಲ್ಲೊಂದು
ಹಕ್ಕಿ ಆಶ್ರಯ ಪಡೆದಿದೆ
ಇದೀಗ ಬಂದ ಸುದ್ದಿಯಂತೆ
ನನ್ನೆದೆಯ ಮೇಲೆ ಅದು ಹಕ್ಕು ಚಲಾಯಿಸುತ್ತಿದೆ.

ಈ ಗಾಳಿ, ಮಳೆ, ಚಳಿಗೆ
ಇರಲಿ ನಾಲ್ಕುದಿನ ಬೆಚ್ಚಗೆ
ಅಂದು ನಾ ಸುಮ್ಮನಿದ್ದರೆ
ಮುಂದೊಂದು ದಿನ
ಅಗಬಹುದೇ ಅದು ಯಜಮಾನ
ನಾನು ಜವಾನ?

ನಿನ್ನೆ ಬಂದಿದ್ದ ಗೆಳೆಯ
ನನ್ನ ಹತ್ತಿರ ಬರಲು
ಇದೇನು ಗೆಳೆಯ?
ನಿನ್ನೆದೆಯಲ್ಲಿ ಕಸಕಡ್ಡಿ
ಇನ್ನೇನೋ ವಾಸನೆ
ಅಂದಾಗಲೇ ತಿಳಿದದ್ದು ನನಗೆ
ನನ್ನ ನಿಜ ಸ್ಥಿತಿ

ಅದರೂ ವಿಷಯ ಮುಚ್ಚಿಡಲು
ಒಂದು ಚಿಕ್ಕ ಸುಳ್ಳು ಹೇಳಿದೆ
ಛೆ! ಈ ಎದೆಯ
ಕೋಟೆಯನ್ನು ದಾಟಿ ಹಕ್ಕಿಯ
ಚಿಲಿಪಿಲಿ ಅವನಿಗೇ ಕೇಳಿಯೇ ಬಿಟ್ಟಿತು.

ಅವನಂದ, ಗೆಳೆಯ
ಈ ಹಕ್ಕಿ ಹೊಕ್ಕವರು
ನಿನ್ನಂತೆಯೇ!