Thursday, February 16, 2012

" ಯಹ್ ದಿಲ್ಲಿ ಹೇ ದಿಲ್‌ವಾಲೊಂಕಿ" ಎಂಬುದನ್ನು ಆತ ನನಗೆ ತೋರಿಸಿಕೊಟ್ಟಿದ್ದ

ಸುಪ್ರೀಂ ಕೋರ್ಟ್‌ನ ಮುಂದೆ ಇಂದು ನಮ್ಮ ರಾಜ್ಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಕರಣಗಳು ಇಲ್ಲ ಮತ್ತು ಎಂದು ಖಾತ್ರಿ ಮಾಡಿಕೊಂಡ ಬಳಿಕ ಕಚೇರಿಗೆ ಆರಾಮವಾಗಿಯೇ ಹೊರಟಿದ್ದೆ. ಅಪಾರ್ಟ್‌ಮೆಂಟ್‌ನಿಂದ ಹೊರ ಬರುತ್ತಲೆ ರಿಕ್ಷಾವೊಂದು ಬಂತು. ಅದನ್ನು ಏರಿ ಆತ್ಮೀಯರಿಗೆ ಮೆಸೇಜ್ ಕಳಿಸುವ ನನ್ನ ನಿತ್ಯ ಪೂಜೆಯನ್ನು ಶುರು ಮಾಡಿಕೊಂಡೆ. ನಮ್ಮಲ್ಲಿಂದ ಕೌಶಂಬಿ ಮೆಟ್ರೋ ಸ್ಟೇಶನ್‌ಗೆ ೧೫ ನಿಮಿಷಗಳ ಪ್ರಯಾಣ (ಟ್ರಾಫಿಕ್ ಇಲ್ಲದೇ ಹೋದರೆ). ಮೆಟ್ರೋ ಸ್ಟೇಶನ್‌ನ ಬಳಿ ರಿಕ್ಷಾ ಇಳಿದು ಹಣ ಕೊಡೋಣ ಎಂದು ಕಿಸೆಗೆ ಕೈ ಹಾಕಿದರೆ ಪರ್ಸ್ ಇಲ್ಲ. ತಕ್ಷಣವೇ ಶಾಕ್ ಹೊಡೆದಂತೆ ಆಯಿತು. ಇದೀಗ ಕೆಲಸ ಕೆಟ್ಟಿತ್ತು ಅಂತ ಅಂದು ಕೊಂಡರು ವಿಚಲಿತನಾಗಲಿಲ್ಲ. ಪರ್ಸ್ ಮನೆಯಲ್ಲೆ ಬಿಟ್ಟಿದ್ದೇನಾ ಅಥವಾ ಪಿಕ್ ಪಾಕೆಟ್ ಅಯಿತಾ ಅಥವಾ ಎಲ್ಲದರೂ ಬಿತ್ತಾ ಎಂಬ ಗೊಂದಲ ತಲೆಯಲ್ಲಿ ಫ್ಯಾನ್‌ನಂತೆ ತಿರುಗುತ್ತಿತ್ತು. ಹಾಗಂತ ಮೊದಲ ಕಾರಣವನ್ನು ಈ ರಿಕ್ಷಾ ಡ್ರೈವರ್ ಜೊತೆ ಹೇಳುವ ಹಾಗಿಲ್ಲ. ಹೇಳಿದ್ದೆ ಆದರೆ ಅವನು ಯಾವ ಭಾಷೆ ಪ್ರಯೋಗ ಮಾಡುತ್ತಾನೆ ಅನ್ನುವುದು ತಕ್ಷಣವೆ ಫ್ಲಾಶ್ ಆಗಿ ಹೋಗಿತ್ತು. ಇನ್ನು ಯಾರಾದರೂ ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ಏನು ಮಾಡುವುದು ಅಂದು ಕೊಂಡು ತಕ್ಷಣವೇ ಪರ್ಸ್ ಹುಡುಕುವ ರೀತಿ ಮಾಡಿದೆ. ಪರ್ಸ್ ಸಿಗಲೇ ಇಲ್ಲ. ನಾನು ಸಾಮಾನ್ಯವಾಗಿ ನನ್ನ ಪ್ಯಾಂಟ್‌ನ ಮುಂದಿನ ಕಿಸೆಯಲ್ಲಿ ನೂರಿನ್ನೂರು ರೂಪಾಯಿ ಇಟ್ಟುಕೊಂಡಿರುತ್ತೇನೆ. ಆದರೆ ಇಂದು ಆ ರೀತಿಯೂ ಮಾಡಿಲ್ಲ ಎಂಬುದನ್ನು ಕಿಸೆಗೆ ಕೈ ಹಾಕಿ ಖಾತ್ರಿ ಪಡಿಸಿಕೊಂಡೆ. ಸರಿ, ರಿಕ್ಷಾದವನಿಗೆ ನನ್ನ ಸ್ಥಿತಿ ಅರ್ಥವಾಯಿತು. ಅವನು ಏನೂ ಹೇಳಲಿಲ್ಲ. ನನ್ನ ಪುಣ್ಯ. ನನ್ನನ್ನು ಅಲ್ಲೇ ಬಿಟ್ಟು ಮುಂದೆ ಹೋದ. ನನ್ನ ಪ್ರಕಾರ ಅವನು ಮಾಡಿದ ದೊಡ್ಡ ಪುಣ್ಯದ ಕೆಲಸ ಅದೇ.

ನಿಂತಿದ್ದೇನೆ ರಸ್ತೆ ಬದಿಯಲ್ಲಿ. ಮೆಟ್ರೋದಲ್ಲಿ ಕಚೇರಿಗೆ ಹೋಗಲು ಕೂಡ ಸಾಧ್ಯವಿರಲಿಲ್ಲ ಏಕೆಂದರೆ ನನ್ನ ಮೆಟ್ರೋ ಕಾರ್ಡ್ ಪರ್ಸ್‌ನಲ್ಲೆ ಇತ್ತು. ಅದರ ಜೊತೆಗೆ ಡೆಬಿಟ್ ಕಾರ್ಡ್, ವಿಸಿಟಿಂಗ್ ಕಾರ್ಡ್, ವೋಟರ್ ಕಾರ್ಡ್, ಪಾನ್ ಕಾರ್ಡ್, ಪೆನ್ ಡ್ರೈವ್, ಒಂದಷ್ಟು ಹಣ ಎಲ್ಲವೂ ಇತ್ತು. ಸರಿ, ಈಗ ಏನು ಮಾಡೋಣ ಅಂತ ಯೋಚಿಸಿದೆ. ನಾನು ಆ ಕ್ಷಣ ಎದೆ ಗುಂದಿಯೂ ಇರಲಿಲ್ಲ, ಆತಂಕಿತನೂ ಆಗಿರಲಿಲ್ಲ. ಅಗತ್ಯಬಿದ್ದರೆ ನಡೆದುಕೊಂಡು ಹೋಗಲು ಕೂಡ ಸಿದ್ಧನೇ ಆಗಿದ್ದೆ. ಏಕೆಂದರೆ ದೆಹಲಿಯಲ್ಲಿ ಒಂದು ಸಲ ಮಧ್ಯ ರಾತ್ರಿಯಲ್ಲಿ ನಾನು ಪ್ರಕಾಶ್, ಮೇಲ್ವಿನ್ ಅಪರಾತ್ರಿಯ ಹೊತ್ತು ಸುಮಾರು ೭-೮ ಕಿಮೀ ನಡೆದಿದ್ದೇವು.
ಈಗ ಸಾವಧಾನವಾಗಿ ನನ್ನ ಮುಂದಿದ್ದ ಆಯ್ಕೆಗಳ ಬಗ್ಗೆ ಯೋಚಿಸಿದ್ದೆ. ೧) ಯಾರಲ್ಲದರೂ ಕಾಡಿ ಬೇಡಿ ಹಣ ಪಡೆದು ಕಚೇರಿಗೆ ಹೋಗಿ ಅಲ್ಲಿ ಮತ್ತೇ ಗೆಳೆಯರಿಂದ ಹಣ ಪಡೆದು ಇವರಿಗೆ ವಾಪಾಸ್ ಕೊಡುವುದು. ಆದರೆ ಆ ಸಾಧ್ಯತೆ ವರ್ಕ್‌ಔಟ್ ಆಗುತ್ತೆ ಅನ್ನುವ ನಂಬಿಕೆ ನನಗಿರಲಿಲ್ಲ. ಏಕೆಂದರೆ ಅ ಹೊತ್ತಿನಲ್ಲಿ ನನಗೆ ೨೦ ರೂಪಾಯಿ ಸಾಕಿದ್ದರೂ ಕೂಡ ಅದನ್ನು ಕೇಳಬೇಕು, ಕೊಡಬೇಕು ಅದೆಲ್ಲ ಆಗುವಂತದ್ದಲ್ಲ ಎಂದು ಕೊಂಡೆ.

೨) ಯಾರನ್ನದರೂ ಗೆಳೆಯ ಅಥವಾ ಗೆಳತಿಯನ್ನು ಇಲ್ಲಿಗೆ ಬರ ಹೇಳಿ ನಂತರ ಅವರ ಜೊತೆ ಹೋಗುವುದು ಅಥವಾ ಅವರಿಂದ ಹಣ ಪಡೆದು ನನ್ನ ಕೆಲಸ ಮುಂದುವರಿಸುವುದು. ದೆಹಲಿಯಲ್ಲಿ ನನಗೆ ಸ್ನೇಹಿತರು ಸಾಕಷ್ಟಿದ್ದರು ಕೂಡ ಅವರು ನನ್ನಿದ್ದ ಸ್ಥಳಕ್ಕೆ ಬರಲು ಕನಿಷ್ಠ ಪಕ್ಷ ೧ ಗಂಟೆಯಾದರೂ ಬೇಕಿತ್ತು. ಇರಲಿ ಈ ಆಯ್ಕೆ ಎಂದು ಕೊಂಡೆ.

೩) ಇನ್ನು ಪ್ರಕಾಶ್ ನೈಟ್ ಶಿಫ್ಟ್ ಮಾಡಿ ಬಂದು ಮಲಗಿದ್ದಾರೆ ಅದ್ದರಿಂದ ಅವರಿಗೆ ಕಾಲ್ ಮಾಡಿದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತೆ ಆದರೆ ಅವರು ಕಾಲ್ ರಿಸೀವ್ ಮಾಡುವುದೇ ಸಂಶಯ. ಏಕೆಂದರೆ ನಾನು ರೂಮ್‌ಲ್ಲಿದ್ದಾಗಲೇ ಅವರಿಗೆ ಒಂದು ಕರೆ ಬಂದಿತ್ತು. ಮೊಬೈಲ್ ಟೇಬಲ್‌ನ ಮೇಲಿತ್ತು. ನಾನು ಆ ಕರೆ ಅನ್‌ನೋನ್ ನಂಬರ್‌ನಿಂದ ಬಂದಿದ್ದ ಕಾರಣಕ್ಕೆ ಅದನ್ನು ರಿಸೀವ್ ಮಾಡದೆ ಟೇಬಲ್ ಮೇಲೆಯೇ ಇಟ್ಟಿದ್ದೆ. ಆದ ಕಾರಣ ಅವರಿಗೆ ಕಾಲ್ ಮಾಡಿದರೂ ಅವರು ರಿಸೀವ್ ಮಾಡೋದಿಲ್ಲ ಅನ್ನುವುದು ಗೊತ್ತಿತ್ತು. ಇರಲಿ ಕೆಲವೊಮ್ಮೆ ಮಂತ್ರಕ್ಕೂ ಮಾವಿನ ಕಾಯಿ ಉದುರುತ್ತದೆ ಎಂದು ಕೊಂಡು ಕಾಲ್ ಮಾಡಿದೆ. ಯಾವ ಮಂತ್ರವೂ ನಡೆಯಲಿಲ್ಲ. ಇನ್ನು ಗುಡಿ ಕೂಡ ಮಲಗಿದ್ದಾನೆ. ಆದರೆ ಅವನು ನಾನು ಹೊರಡುವಾಗ ಇನ್ನು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಕ್ಕೋಬೇಕು ಎಂದು ಹೇಳಿದ್ದ. ಅದ್ದರಿಂದ ಅವನು ಕಾಲ್ ರಿಸಿವ್ ಮಾಡಲಾರ ಎಂದು ಕೊಳ್ಳುತ್ತಲೇ ಕಾಲ್ ಮಾಡಿದೆ. ಸ್ವಿಚ್ ಆಫ್ ಬಂತು. ಅವರು ಕಾಲ್ ರಿಸೀವ್ ಮಾಡಿದ್ರೆ ಅವರನ್ನು ಆದಿತ್ಯ ಮಾಲ್‌ನ ಮುಂದೆ ಬರ ಹೇಳಿ ಅವರಿಂದ ಹಣ ಪಡೆದುಕೊಂಡು ರಿಕ್ಷಾದವನಿಗೆ ಕೊಡಬಹುದಿತ್ತು ಅಥವಾ ಅವರನ್ನೇ ಇಲ್ಲಿಗೆ ಬರ ಹೇಳಬಹುದಿತ್ತು. ಹೀಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಸಮಸ್ಯೆ ಪರಿಹಾರವಾಗುತ್ತಿತ್ತು.

೪) ಇನ್ನು ಯಾವುದಾದರೂ ಗಾಡಿಯವರಲ್ಲಿ ಡ್ರಾಪ್ ಕೇಳುವ ಆಯ್ಕೆ ನನ್ನ ಮುಂದಿತ್ತು. ಆದರೆ ಅದೆಲ್ಲ ಬೇಡ ಎಂದು ಕೊಂಡೆ.
ಏನೇ ಆಗಲಿ, ನಾನು ಇಲ್ಲಿ ನಿಂತು ಏನು ಮಾಡಲಾಗದು. ರಸ್ತೆ ದಾಟಲೇ ಬೇಕು. ಇಲ್ಲಿ ಸೀದಾ ರಸ್ತೆ ದಾಟುವ ಹಾಗಿಲ್ಲ. ಮೆಟ್ರೋದವರು ಮಾಡಿರುವ ಸೇತುವೆಯ ಮೂಲಕ ಸಾಗಬೇಕು. ಆ ಕೆಲಸ ಮೊದಲು ಮಾಡೋಣ ಎಂದು ಅನಿಸಿತು.

ಅದರೆಡೆಯಲ್ಲಿ ಪರ್ಸ್ ಮತ್ತದರ ಒಳಗಿರುವುದು ಏನಾಯಿತು ಎಂಬ ಚಿಂತೆ. ಏಕೆಂದರೆ ಕೆಲವು ತಿಂಗಳ ಹಿಂದೆ ನನ್ನ ಮೊಬೈಲ್ ಪಿಕ್ ಪಾಕೆಟ್ ಆಗಿತ್ತು. ಒಂದೂವರೆ ತಿಂಗಳ ಹಿಂದೆಯಷ್ಟೆ ಪ್ರಕಾಶ್ ದಾರುಣವಾಗಿ ತನ್ನ ಮೊಬೈಲ್ ಕಳೆದುಕೊಂಡಿದ್ದರು. ಆದರೂ ಈ ಬಾರಿ ನನ್ನಲ್ಲಿ ಅದೇನೋ ಅತ್ಮವಿಶ್ವಾಸವಿತ್ತು. ಈಗ ಈ  ಸಮಸ್ಯೆಯನ್ನು ಮೊದಲು ಪರಿಹರಿಸಿಕೋ ಮತ್ತು ಉಳಿದದ್ದೆಲ್ಲ ಯೋಚನೆಗಳು ಎಂದು ಅಂದು ಕೊಂಡೆ. ಇಲ್ಲ, ನನ್ನ ಪರ್ಸ್ ಮನೆಯಲ್ಲೇ ಇದೆ ಎಂದು ಒಳ ಮನಸ್ಸು ಹೇಳುತ್ತಿತ್ತು.

ಈಗ ರಿಕ್ಷಾದಲ್ಲಿ ಹೋಗುವುದಾದರೆ ಎರಡು ಆಯ್ಕೆಗಳು. ಒಂದೋ ಅತ್ತ ಹೋಗುವ ಸವಾರಿ ರಿಕ್ಷಾದಲ್ಲಿ ಹೋಗಬೇಕು. ಇಲ್ಲವಾದರೆ ರಿಕ್ಷಾವನ್ನು ಬಾಡಿಗೆ ಮಾಡಿಕೊಂಡು ಹೋಗಬೇಕು. ಸವಾರಿ ರಿಕ್ಷಾದಲ್ಲಿ ಹೋದರೆ ೧೦ ರೂಪಾಯಿಯಲ್ಲಿ ರೂಮ್ ಸೇರಿಕೊಳ್ಳಬಹುದು. ಆದರೆ ಅವನನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರೂಮ್‌ಗೆ ಹೋಗಿ ಹಣ ತರುವುದು ಕಷ್ಟ ಕಷ್ಟ. ಅವ ಪಿರಿಪಿರಿ ಮಾಡಿಯೇ ಮಾಡುತ್ತಾನೆ. ನಮ್ಮ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿಯವರ ಪರಿಚಯ ನನಗಿದೆ. ಅವರ ಕೈಯಿಂದ ಹಣ ತೆಗೆದುಕೊಡಬಹುದು. ಅದರೆ ಅದಕ್ಕೂ ೨ ನಿಮಿಷ ತೆಗೆದುಕೊಳ್ಳುತ್ತದೆ. ರಸ್ತೆ ದಾಟಬೇಕಾಗುತ್ತದೆ. ನಂತರ ನನ್ನ ಪರಿಚಯದ ಸೆಕ್ಯೂರಿಟಿಯವರೇ ಇದ್ದಾರೆ ಎಂದು ಹೇಳಲಾಗದು. ಬೇಡ, ಬೇಡ ಅದು ಸಾಧ್ಯವೇ ಇಲ್ಲ. ಇನ್ನೂ ಏನೇ ಆಗಲಿ ರಿಕ್ಷಾ ಮಾಡಿಕೊಂಡೆ ಹೋಗೋಣ. ೫೦ ರೂಪಾಯಿ ಕೇಳಬಹುದು. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂನೂ ಕಳ್ಳನೇ. ಈಗ ಆನೆಗೆಯೇ ಕೈ ಹಾಕೋಣ ಎಂದು ಕೊಂಡೆ! ರಿಕ್ಷಾ ಮಾಡಿದರೆ ಅವನನ್ನು ೩-೪ ನಿಮಿಷ ನಿಲ್ಲಿಸಿ ರೂಮ್‌ಗೆ ಹೋಗಿ ಪರ್ಸ್ ತರಬಹುದು ಅನ್ನುವುದು ನನ್ನ ಲೆಕ್ಕಾಚಾರವಾಗಿತ್ತು.

ಸೇತುವೆಯ ಮೆಟ್ಟಿಲುಗಳನ್ನು ಇಳಿಯುತ್ತಲೇ ಹತ್ತಾರು ರಿಕ್ಷಾದವರು ಗಾಜಿಪುರ, ಇಂದಿರಾಪುರ, ಬಾಸಠ್, ರೈಲ್ವೇ ವಿಹಾರ್, ಕಾಳ ಪತ್ಥರ್ ಎಂದು ಬೊಬ್ಬಿರಿದು, ಕೈ ಬೀಸಿ, ಕೈ ಅಡ್ಡ ಹಿಡಿದು ಕರೆಯುತ್ತಿದ್ದರು. ಇನ್ನು ೭-೮ ಮೆಟ್ಟಿಲುಗಳ ಬಾಕಿ ಇರುವಾಗಲೇ ಅವರನ್ನೆಲ್ಲ ಅರೆ ಕ್ಷಣ ನಿಂತು ನೋಡಿದೆ. ಇವರು ಯಾರೂ ಕೂಡ ಒಬ್ಬ ಮನುಷ್ಯನನ್ನು ಕರೆಯುತ್ತಿಲ್ಲ, ನನ್ನ ಕಿಸೆಯೊಳಗಿರುವ ಪರ್ಸ್‌ನಲ್ಲಿರುವ ಆ ೧೦ ರೂಪಾಯಿಯನ್ನು ಕರೆಯುತ್ತಿದ್ದಾರೆ ಎಂದು ಅನಿಸಿತ್ತು. ನನಗಿಂತ ನನ್ನಲ್ಲಿರಬಹುದಾದ ೧೦ ರೂಪಾಯಿಯೇ ಅವರಿಗೆ ಅಗತ್ಯ ಮತ್ತು ಬೇಕಾಗಿರುವುದು ಎಂದು ಮನಸ್ಸು ಹೇಳುತ್ತಿತ್ತು.

ಅಷ್ಟರಲ್ಲೇ ನನ್ನ ಆಪ್ತ ಸ್ನೇಹಿತ ನನ್ನ ಸಹಾಯಕ್ಕೆ ಬಂದೇ ಬಿಟ್ಟ. ನಾನು ಮೆಟ್ಟಿಲು ಇಳಿದು ಹತ್ತಾರು ರಿಕ್ಷಾಗಳನ್ನು ನೋಡುತ್ತಿದ್ದಾಂತೆ ಈ ಎಲ್ಲ ರಿಕ್ಷಾಗಳ ಸಂತೆಯಿಂದ ದೂರ ಇದ್ದ ಒಂದು ರಿಕ್ಷಾ ನನ್ನ ಗಮನ ಸೆಳೆಯಿತು. ಅದು ಹೇಗೋ, ಏನೋ ಗೊತ್ತಿಲ್ಲ ಆ ರಿಕ್ಷಾದತ್ತ ದೌಡಾಯಿಸಿದೆ. ಬೇರೆ ಅನೇಕ ರಿಕ್ಷಾದವರು ಬಂದರು, ಕರೆದರು ನಾನು ಅವರಿಗೆ ಕ್ಯಾರೇ ಮಾಡದೆ ಆ ರಿಕ್ಷಾದತ್ತ ಸಾಗಿದೆ.

ಆ ರಿಕ್ಷಾದವನಲ್ಲಿ ಭೈಯ್ಯಾ, ಇಂದಿರಾಪುರಂಗೆ ಹೋಗಬೇಕಿತ್ತು ಎಂದು ಹೇಳಿದೆ. ಸರಿ, ಬಾ ಕೂತುಕೋ ಎಂದು ಅವನು ಹೇಳಿದ. ಎಷ್ಟಾಗುತ್ತದೆ? ಎಂದೆ. ’೬೦’ ಅಂದ. ಇಲ್ಲ, ಜಾಸ್ತಿಯಾಯಿತು ಎಂದೆ ಮತ್ತೆ ಎಷ್ಟು ಕೊಡುತ್ತಿ? ಎಂದಾಗ ೫೦ ಅಂದೆ. ಕೆಟ್ಟು ಬೀದಿಯಲ್ಲಿ ನಿಂತರೂ ಇದಕ್ಕೇನು ಕಮ್ಮಿ ಇಲ್ಲ ಎಂದು ಅದ್ಕೊಂಡು ೬೦ ರೂಪಾಯಿ ಎಂದು ಸರಿಯಾಗಿಯೇ ಹೇಳಿದ್ದಾನೆ ನನ್ನದೇ ಅಧಿಕ ಪ್ರಸಂಗ ಎಂದು ಕೊಂಡು ಆಯಿತು ಎಂದೆ. 

ಆಮೇಲೆ ನನ್ನ ಪ್ರವರ ಬಿಚ್ಚಿಟ್ಟೆ. ನೀನು ಮತ್ತೆ ಅಲ್ಲಿ ಬಂದು ಕಾಯಿಸಿದ್ದಕ್ಕೆ ಹಣ ಕೇಳಬಾರದು ಮತ್ತು ಹಣಕ್ಕಾಗಿ ೫ ನಿಮಿಷ ಕಾಯಬೇಕಾಗಬಹುದು ಎಂದೆ. ಅವನು ಹೇಳಿದ ಮಾತು ಹೀಗಿದೆ ಕೇಳಿ... ನಿಮ್ಮ ಕಾಫಿ, ತಿಂಡಿ ಆಗಿದೆಯಾ? ಬನ್ನಿ, ತಿಂದುಕೊಂಡು ಬರೋಣ, ನೀವು ನಾಚಿಕೆ ಪಡಬೇಡಿ. ಇಲ್ಲ, ಅಂದರೆ ಹೇಳಿ ಹಣ ನಾನು ಕೊಡುತ್ತೇನೆ, ನಿಮ್ಮನ್ನು ಉಚಿತವಾಗಿಯೇ ಮನೆ ತಲುಪಿಸುತ್ತೇನೆ ಎಂದ. ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಮೂಕವಿಸ್ಮಿತನಾಗುವುದು ಅಂತಾರಲ್ಲ ಹಾಗೇ ಆಗಿದ್ದೆ. ನಂತರ ಇಲ್ಲ, ಬೇಡ, ನಾವು ಹೋಗೋಣ ಎಂದೆ. ಸರಿ ಎಂದು ಅವ ಹೇಳಿದ.

ನಂತರ ಮಾತು ಮುಂದುವರಿಸುತ್ತ ಆತ, ಹಂ ಗರೀಬ್ ಹೇ ಲೇಕಿನ್ ಹಮಾರಾ ದಿಲ್ ಗರೀಬ್ ನಹಿ ಹೇ ಎಂದು ಆತ ಹೇಳಿದ ಮತ್ತು ಅದನ್ನು ಸಾಬೀತು ಪಡಿಸಿದ ಕೂಡ. ನಂತರ ಅಪಾರ್ಟ್‌ಮೆಂಟ್ ಬಳಿ ಕರೆದುಕೊಂಡು ಬಂದ. ಸೆಕ್ಯೂರಿಟಿ ಗಾರ್ಡ್‌ನವರು ನನ್ನ ಪರಿಚಯದವರೇ ಆಗಿದ್ದರು. ಅವರ ಕೈಯಿಂದ ೧೦೦ ರೂಪಾಯಿ ತೆಗೆದುಕೊಂಡು ಕೊಟ್ಟೆ. ಬಲವಂತವಾಗಿ ಚಿಲ್ಲರೆಯನ್ನು ನೀನೇ ಇಟ್ಟು ಕೋ ಎಂದೆ. ಮನಸ್ಸಿಲ್ಲದ ಮನಸ್ಸಿನಿಂದ ಆಯಿತು ಎಂದು ಹೇಳಿದ.

"ಯಹ್  ದಿಲ್ಲಿ ಹೇ ದಿಲ್‌ವಾಲೋಂಕಿ" ಎಂಬುದನ್ನು ಆತ ನನಗೆ ತೋರಿಸಿಕೊಟ್ಟಿದ್ದ. ಕಾಂಕ್ರಿಟ್ ಕಾಡಿನ ಜಟಿಲ ಬಲೆಗಳೊಳಗೆ, ಪೊದೆಗಳೊಳಗೆ ನಾವು ಬಿದ್ದು ತತ್ತರಿಸಿ ಸಿನಿಕರಾಗುತ್ತ ಸಾಗುತ್ತಿರುವಾಗ ಮಾನವೀಯತೆಯ ಅಚಲ ಮೂರ್ತಿಗಳಂತೆ ಕಾಣಿಸುವ ಇಂತಹವರು ಜೀವನಕ್ಕೆ ಸೌಂದರ್ಯ ತಂದುಕೊಡುತ್ತಾರೆ. ಇದೇ ಜೀವನದ ಸೌಂದರ್ಯ ಎಂಬುದುನ್ನು ಸಾಬೀತು ಪಡಿಸುತ್ತ ಅದರ ದರ್ಶನ ಮಾಡಿಸುತ್ತಾರೆ.

ಅಟೋಚಾಲಕರನ್ನು ಹಳದಿ ಭಯೋತ್ಪಾದಕರು ಎಂದೆ ಭಾವಿಸಿದ್ದ ನನ್ನ ಕಾಮಾಲೆ ಕಣ್ಣಿಗೆ ಮತ್ತು ಆ ರೀತಿ ಭಾವಿಸುವಂತೆ ಮಾಡಿದ್ದವರಿಗೆ ನನ್ನ ದಿಕ್ಕಾರವಿರಲಿ.

Thursday, February 9, 2012

ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ

ಭಾರತದ ರಾಷ್ಟ್ರಪತಿ ಹುದ್ದೆ, ಮುಖ್ಯ ನ್ಯಾಯಾಧೀಶ ಸ್ಥಾನ ಹೀಗೆ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ದಲಿತರು ಒಂದಿಲ್ಲ ಒಂದು ಕಾಲಘಟ್ಟದಲ್ಲಿ ಅಲಂಕರಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಹುದ್ದೆ ಮಾತ್ರ ಅವರಿಗೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಎಲ್ಲವೂ ಲೆಕ್ಕಾಚಾರ, ಸಾಮರ್ಥ್ಯ ಮತ್ತು ಪ್ರತಿಭೆಗನುಗುಣವಾಗಿ ನಡೆದಿದ್ದರೆ ಇಂದು ಲೋಕಸಭೆಯ ಸ್ಪೀಕರ್ ಆಗಿರುವ ಮೀರಾಕುಮಾರ್‌ರವರ ತಂದೆ, ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗ ಜೀವನ್ ರಾಮ್ ೮೦ರ ದಶಕದ ಅಸುಪಾಸಿನಲ್ಲೇ ಈ ದೇಶದ ಮೊದಲ ದಲಿತ ಪ್ರಧಾನಿಯಾಗಬೇಕಿತ್ತು. ಆದರೆ ಆಗಲಿಲ್ಲ, ಆಗಲೂ ಬಿಡಲಿಲ್ಲ! ಕಾರಣ ಅವರ ಮಗ, ಮೀರಕುಮಾರ್‌ರ ಸೋದರ ಸುರೇಶ್ ರಾಮ್‌ನ ಚಿತ್ರ ೧೯೭೮ರಲ್ಲಿ ಮಾಸಿಕ ಪತ್ರಿಕೆಯೊಂದರಲ್ಲಿ ಒಬ್ಬಳು ಮಹಿಳೆಯ ಜೊತೆ ಪ್ರಕಟಗೊಂಡು ಲೈಂಗಿಕ ಹಗರಣದ ಕಿಡಿ ಹೊತ್ತಿಸಿದ್ದು. ಈ ರೀತಿ ಭಾರತ ಕಂಡ ಒಬ್ಬ ಧೀಮಂತ ನಾಯಕನ ರಾಜಕೀಯ ಅಧಃಪತನಕ್ಕೆ ಆತನ ಮಗನೇ ಮುನ್ನುಡಿಯಾದ.

ಇಂದು ಭಾರತೀಯ ರಾಜಕಾರಣದಲ್ಲಿ ಜಗ ಜೀವನ್ ರಾಮ್‌ರ ಪರಂಪೆಯನ್ನು ಬಳವಳಿಯಾಗಿ ಪಡೆದವರು ದುರ್ಬಿನಿಟ್ಟು ಹುಡುಕಿದರು ಸಿಗುವುದು ಅನುಮಾನ. ಆದರೆ ಅವರ ಮಗನಂತವರ ಸಂತತಿ ಸಾವಿರ ಸಾವಿರವಾಗಿ ದೇಶದ ಬಹುತೇಕ ಎಲ್ಲ ಶಾಸನ ಸಭೆಗಳೊಳಗೆ ನುಸುಳಿ ಬಿಟ್ಟಿವೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಉತ್ತರಖಂಡ, ಜಾರ್ಖಂಡ್, ರಾಜಸ್ತಾನ ಹೀಗೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಶಾಸನ ಸಭೆಗಳಲ್ಲಿ ದುಶ್ಯಾಸನರು ಆಸೀನರಾಗಿದ್ದಾರೆ. ಮತ್ತೊಂದು ಸಂಗತಿಯೆಂದರೆ ಈ ದುಶ್ಯಾಸನರು ಉತ್ತರದ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಹೆಚ್ಚಿನೆಲ್ಲ ರಾಜಕೀಯ ಪಕ್ಷಗಳಲ್ಲಿದ್ದು ಪಕ್ಷಾತೀತ ರಾಜ(ಕಾಮ)ಕಾರಣ ಮಾಡುತ್ತಿದ್ದಾರೆ.

ಜಮ್ಮು & ಕಾಶ್ಮೀರದ ಶ್ರೀನಗರದಲ್ಲಿ ೨೦೦೬ರಲ್ಲಿ ನಡೆದ ಲೈಂಗಿಕ ಹಗರಣವೊಂದು ೨೦೦೯ರಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾರ ಸ್ಥಾನಕ್ಕೆ ಕುತ್ತು ತಂದಿತ್ತು. ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿಯೂ ಇದ್ದರು ಆದರೆ ರಾಜ್ಯಪಾಲರು ಅದನ್ನು ಅಂಗೀಕರಿಸದ ಕಾರಣ ಬಚಾವ್ ಆಗಿದ್ದರು. ಆದರೆ ಪ್ರತಿಪಕ್ಷಗಳ ಕೈಯಲ್ಲಿ ಅವರು ಸಾಕಷ್ಟು ಅವಮಾನ ಎದುರಿಸಬೇಕಾಯಿತು. ಅವರು ಅದೇಷ್ಟು ಎದೆಗುಂದಿದ್ದರು ಎಂದರೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಹೋಗುವ ಮೊದಲು ಸದನದಲ್ಲಿ ನಾನು ಈ ರೀತಿಯ ಅವಮಾನವನ್ನು ತಾಳಿಕೊಳ್ಳಲಾರೆ ಎಂದು ಭಾವುಕರಾಗಿ ನುಡಿದಿದ್ದರು. ಆವರು ಇಂದಿಗೂ ಅಲ್ಲಿನ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೂ ಕೂಡ ಆ ಘಟನೆಯ ಬಳಿಕ ಅವರ ಚರಿಷ್ಮಾ ಮಾತ್ರ ಕಳೆಗುಂದಿದೆ.

ಇತ್ತ ದಕ್ಷಿಣದ ಕೇರಳದಲ್ಲಿ ನಡೆದ ಐಸ್‌ಕ್ರೀಮ್ ಲೈಂಗಿಕ ಹಗರಣವಂತೂ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಲ್ಲಿನ ಕೈಗಾರಿಕ ಸಚಿವರಾಗಿರುವ ಪಿ ಕೆ ಕುಙ್ಹಲಿಕುಟ್ಟಿ ಇದರಲ್ಲಿ ಭಾಗಿಯಾಗಿರುವ ಆರೋಪವಿದ್ದು ಈ ಬಗ್ಗೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ತನ್ನ ಅಂತಿಮ ವರದಿಯನ್ನು ಕೇರಳ ಹೈಕೋರ್ಟಿಗೆ ಸಲ್ಲಿಸಿದೆ. ಮುಸ್ಲಿಂ ಲೀಗ್‌ನ ಪ್ರಬಲ ನಾಯಕರಾಗಿರುವ ಕುಙ್ಹಲಿಕುಟ್ಟಿ ತನ್ನನ್ನು ೯೦ರ ದಶಕದಲ್ಲಿ ಲೈಂಗಿಕವಾಗಿ ಶೋಷಿಸಿದ್ದರು ಎಂದು ರೆಜಿನಾ ಎಂಬ ಮಹಿಳೆ ಅಲವತ್ತುಕೊಂಡಿದ್ದರು. ಇದರಿಂದಾಗಿ ೨೦೦೫ರಲ್ಲಿ ಕುಙ್ಹಲಿಕುಟ್ಟಿ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಈ ಪ್ರಕರಣ ೧೯೯೭ರಲ್ಲಿ ಬೆಳಕಿಗೆ ಬಂದಿತ್ತು. ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣ ಮುಸ್ಲೀಂ ಲೀಗ್‌ನ ಇಮೇಜ್‌ಗೆ ಭಾರಿ ಹಾನಿಯುಂಟು ಮಾಡಿತ್ತು.

ಸದ್ಯ ದೇಶದ ಸೆಕ್ಸ್ ಮತ್ತು ಪೊಲಿಟಿಕ್ಸ್‌ನ ಕೊಂಡಿಯ ಕುಪ್ರಸ್ಸಿದ್ದ ಘಟನೆ ನಡೆದಿರುವುದು ರಾಜಸ್ತಾನದಲ್ಲಿ. ಅಲ್ಲಿನ ಜಲ ಸಂಪನ್ಮೂಲ ಸಚಿವ ಮಹಿಪಾಲ್ ಮಧರ್ನಾ ಮತ್ತು ನರ್ಸ್ ಭನ್ವಾರಿ ದೇವಿ ನಡೆಸಿದ ಲೈಂಗಿಕ ಕ್ರಿಯೆಯ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಈ ಪ್ರಕರಣದ ದೆಸೆಯಿಂದ ಭನ್ವಾರಿ ದೇವಿಯ ಕೊಲೆಯಾಗಿದೆ ಎಂದು ನಂಬಲಾಗಿದೆ. ಮಧಾರ್ನಾ ’ಮಾಜಿ’ ಸಚಿವರಾಗಿ ಹಾಲಿ ಕಂಬಿ ಎಣಿಸುವ ಕಾಯಕ ಮಾಡುವಂತಾಗಿದೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ ಆರೋಪಕ್ಕೆ ತುತ್ತಾಗಿರುವ ಶಾಸಕ ಮಲ್ಕಾನ್ ಸಿಂಗ್‌ರನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯ ಜವಾಬ್ಧಾರಿಯನ್ನು ಸಿಬಿಐ ವಹಿಸಿಕೊಂಡಿದೆ.

ಇನ್ನು ಆಂಧ್ರ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದ, ಉತ್ತರ ಪ್ರದೇಶ ಮತ್ತು ಉತ್ತರಖಂಡದ ಮಾಜಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಗ (೨೦೦೯ರಲ್ಲಿ) ೮೬ರ ಹರೆಯದವರಾಗಿದ್ದ ನಾರಾಯಣ ದತ್ತ ತಿವಾರಿ ರಾಜಭವನವನ್ನೇ ತನ್ನ ರತಿ ವಿಲಾಸದ ಕೇಂದ್ರವನ್ನಾಗಿಸಿಕೊಂಡು ಮೂವರು ಬೆತ್ತಲೆ ಮಹಿಳೆಯರೊಂದಿಗೆ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದು sಸಾರ್ವಜನಿಕರ ಮುಂದೆ ತನ್ನ ಮಾನ ಮಾರ್ಯಾದೆಯ್ನ ಬೆತ್ತಲಾಗಿಸಿಕೊಂಡರು. ಈ ಪ್ರಕರಣ ಹೊರಬೀಳುವ ಕೆಲವೇ ದಿನಗಳ ಹಿಂದೆ ಯವಕನೋರ್ವ ತಿವಾರಿ ತನ್ನ ತಂದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ. ಅಂದರೆ ಸೆಕ್ಸ್ ಅನ್ನುವುದು ತಿವಾರಿಯವರ ಜೀವನದ ಥಿಯರಿಯೇ ಆಗಿತ್ತು ಎಂದು ಹೇಳಬಹುದೇನೋ?

ಕವಯಿತ್ರಿ ಮಧುಮಿತಾ ಶುಕ್ಲಾಳ ಜೀವನಗಾಥೆಯಲ್ಲಿ ಖಳನಾಯಕನಾಗಿ ಬಂದು ಆಕೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ಆತನ ಪತ್ನಿ ಬಂದಿಖಾನೆ ಸೇರಿದ್ದಾರೆ. ಶುಕ್ಲಾಳಿಗೂ ತ್ರಿಪಾಠಿಗೂ ದೈಹಿಕ ಸಂಪರ್ಕವಿತ್ತು ಮತ್ತು ಆಕೆ ಸಾಯುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದಳು. ಈ ಪ್ರಕರಣ ೨೦೦೩ರಲ್ಲಿ ಜರುಗಿತ್ತು.

೧೯೮೮ರಲ್ಲಿ ನಡೆದ ಬ್ಯಾಡ್ಮಿಟನ್ ಆಟಗಾರ ಸೈಯ್ಯದ್ ಮೋದಿಯ ಹತ್ಯೆಗೂ ರಾಜಕಾರಣಿ ಸಂಜಯ್ ಸಿಂಗ್‌ಗೂ ಸಂಬಂಧವಿತ್ತು ಇದಕ್ಕೆ ಮೋದಿಯ ಹೆಂಡತಿ ಅಮಿತಾಳಿಗೂ ಸಂಜಯ್‌ಗೂ ಇದ್ದ ಅನೈತಿಕ ಸಂಬಂಧವೇ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ.

ಉತ್ತರ ಪ್ರದೇಶದ ರಾಜಕೀಯದಲ್ಲಿ ಕಲ್ಲೋಲ ಉಂಟು ಮಾಡಿದ್ದ ಮತ್ತೊಂದು ಪ್ರಕರಣ ಕವಿತಾ ಚೌಧರಿಯ ಹತ್ಯೆ. ಆಕೆಗೂ ಅಲ್ಲಿನ ನೀರಾವರಿ ಸಚಿವರಾಗಿದ್ದ ಮೇರಾಜುದ್ದೀನ್ ಅಹ್ಮದ್‌ಗೂ ನಿಕಟ ಸಂಪರ್ಕವಿತ್ತು. ಇದನ್ನು ಬಳಸಿಕೊಂಡ ಕವಿತಾ ತಾವಿಬ್ಬರು ರಾಸಲೀಲೆಯಲ್ಲಿ ತೊಡಗಿದ್ದ ಕ್ಷಣಗಳನ್ನು ಚಿತ್ರಿಕರಿಸಿಕೊಂಡು ಅಹ್ಮದ್‌ರಿಂದ ಹಣ ಪೀಕುವ ಯೋಚನೆ ಮಾಡಿದ್ದಳು. ಈ ಎಲ್ಲಾ ಚಿತಾವಣೆಗೆ ಆಕೆಗೆ ಸಾಥ್ ನೀಡಿದ್ದು ರವೀಂದರ್ ಪ್ರಧಾನ್. ಆದರೆ ಹಣ ಹಂಚಿಕೊಳ್ಳುವ ಸಂದರ್ಭದಲ್ಲಾದ ’ಹೆಚ್ಚು ಕಡಿಮೆ’ ಕವಿತಾಳ ಪ್ರಾಣಕ್ಕೆ ಕುತ್ತು ತಂದಿತ್ತು. ಪ್ರಧಾನ್ ಜೈಲಿನಲ್ಲಿ ನಿಗೂಢವಾಗಿ ಸತ್ತ. ಕವಿತಾಳ ಅಪಹರಣ ಮತ್ತು ಕೊಲೆ ೨೦೦೬ರಲ್ಲಿ ಘಟಿಸಿತ್ತು.

ಓಡಿಶಾದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ನಾಯಕ ಜೆ ಬಿ ಪಾಟ್ನಾಯಕ್‌ರ ಹೆಸರು ಕೂಡ ಅಂಜನಾ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಇದು ೧೯೯೮ರಲ್ಲಿ ನಡೆದಿದ್ದ ಪ್ರಕರಣ.

ಅಸ್ಸಾಂನ ಮಾಜಿ ಮುಖ್ಯಮಂತ್ರಿ, ಅಸ್ಸಾಂ ಗಣ ಪರಿಷತ್‌ನ ವರಿಷ್ಠ ನಾಯಕರಾಗಿದ್ದ ಪ್ರಫುಲ್ಲ ಕುಮಾರ್ ಮಹಾಂತರ ರಾಜಕೀಯ ಭವಿಷ್ಯಕ್ಕೆ ಅವರು ಸಂಘಮಿತ್ರ ಎಂಬಾಕೆಯೊಂದಿಗೆ ಹೊಂದಿದ್ದ ವಿವಾಹೇತರ ಸಂಬಂಧವೆ ಮುಳುವಾಯಿತು.
ದೇಶದ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಮೊಹಮ್ಮದ್ ತಸ್ಲಿಮುದ್ದೀನ್ ೧೯೮೩ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ, ಉತ್ತರಖಂಡದ ಮಾಜಿ ಸಚಿವ ಕಾಂಗ್ರೆಸ್‌ನ ಹರಕ್ ಸಿಂಗ್ ರಾವತ್‌ಗೂ ಅಸ್ಸಾಮಿ ಮಹಿಳೆಯೊಬ್ಬಳಿಗೂ ಇದ್ದ ಸಂಬಂಧ, ಒರಿಸ್ಸಾದ ಮಾಜಿ ಸಚಿವ ಮನಮೋಹನ್ ಸನಾಲ್ ೨೦೦೮ರಲ್ಲಿ ಲೈಂಗಿಕ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪದಿಂದ ತಮ್ಮ ಸಾರ್ವಜನಿಕ ಜೀವನಕ್ಕೆ ಎಳ್ಳುನೀರು ಬಿಡಬೇಕಾಯಿತು.
೧೯೮೨ರಲ್ಲಿ ಬಿಹಾರದಲ್ಲಿ ಘಟಿಸಿದ್ದ ಬಾಬಿ ಕೊಲೆ ಪ್ರಕರಣ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ಜಗನ್ನಾಥ ಮಿಶ್ರಾ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೀವೃ ಇಕ್ಕಟ್ಟಿಕೆ ಸಿಳುಕಿಸಿತ್ತು. ಈ ಪ್ರಕರಣದಲ್ಲಿ ಅನೇಕ ಸಚಿವರು ಭಾಗಿಯಾದ ಆರೋಪ ಹುಟ್ಟಿಕೊಂಡಿತ್ತು. ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ೧೯೯೪ರಲ್ಲಿ ಒಂದು ಕಾಮಕಾಂಡ ಬಯಲಾಗಿತ್ತು. ಅಲ್ಲಿ ಸುಮಾರು ೫೦೦ರಷ್ಟು ಹುಡುಗಿಯರನ್ನು ಬಲವಂತವಾಗಿ ಇಟ್ಟುಕೊಂಡು ಕಾಮದಂಧೆ ನಡೆಸುತ್ತಿದ್ದ ಪ್ರಕರಣವದು. ಇವರಲ್ಲಿ ಬಹುತೇಕ ಹುಡುಗಿಯರು ಅಪ್ರಾಪ್ತರಾಗಿದ್ದರು. ಈ ದಂಧೆಯಲ್ಲಿ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತು ಕುಸುಮ ರೈಗೂ ಇದ್ದ ಭಾವನಾತ್ಮಕ ಸಂಬಂಧ ಹಾಗೂ ಅಮರ್ ಸಿಂಗ್ ಮತ್ತು ಬಹುಭಾಷಾ ನಟಿ ಜಯಪ್ರದಾರ ಒಡನಾಟವೂ ಅನೇಕ ಜನರ ಕಣ್ಣು ಕೆಂಪಾಗಿಸಿತ್ತು. 
ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್ ಮತ್ತು ಜಯಾ ಜೇತ್ಲಿ, ಉಮಾ ಭಾರತಿ ಹಾಗೂ ಗೋವಿಂದಾಚಾರ್ಯರ ನಡುವೆ ಇದೆ ಎಂದು ಭಾವಿಸಲಾಗಿರುವ ಸಂಬಂಧಗಳನ್ನು ’ಸಾಮಾನ್ಯ ಸಂಬಂಧ’ದ ಚೌಕಟ್ಟಿನಲ್ಲಿ ಕಾಣುವುದಕ್ಕೆ ಒಂಚೂರು ಕಷ್ಟವಾಗಬಹುದು.

ಇವೆಲ್ಲವೂ ಸ್ಯಾಂಪಲ್‌ಗೆ ಇರಲಿ ಎಂದು ಉದಾಹರಿಸಬಹುದಾದ ಕೆಲವೇ ಕೆಲವು ಪ್ರೇಮ, ಕಾಮ ಮತ್ತು ರಾಜಕೀಯದ ಆಯಾಮಗಳು ಬೆಸೆದು ಕೊಂಡಿರುವ ಪ್ರಕರಣಗಳಷ್ಟೆ. ಇನ್ನು ಅನೇಕ ಇಂತಹ ಪ್ರಕರಣಗಳು ಬೀದಿಗೆ ಬಿದ್ದಿವೆ. ಅದೇ ರೀತಿ ’ಸಾಕ್ಷ್ಯಾಧಾರಗಳ ಕೊರತೆ ಇರುವ ಆದರೆ ’ನಂಬಲು ಕಾರಣಗಳಿರುವ’ ಅನೇಕ ಪ್ರಕರಣಗಳು ಹಿಂದೆಯೂ ಇದ್ದವು ಈಗಲು ಇವೆ.

ನಮ್ಮ ವಿಧಾನ ಸಭೆಯಲ್ಲಿ ಇಬ್ಬರು ಮಂತ್ರಿಗಳು ಆಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದಿರಬಹುದು. ಹಾಲಪ್ಪರ ಅತ್ಯಾಚಾರ ಪ್ರಕರಣ, ರೇಣುಕಾಚಾರ್ಯ ಕಿಸ್ ಪುರಾಣ ಈಗ ಹಳತಾಗಿರಬಹುದು. ಆದರೆ ’ವರ್ಣ ರಂಜಿತ ವ್ಯಕ್ತಿತ್ವ’ದ ಅನೇಕ ಮುಖ್ಯಮಂತಿಗಳು, ಮಂತ್ರಿಗಳು, ಶಾಸಕರು ನಮ್ಮನ್ನು ಆಳಿದ್ದಾರೆ, ಈಗಲೂ ಆಳುತ್ತಿರಬಹುದು. ಸಿಕ್ಕಿ ಬಿದ್ದಿಲ್ಲ ಅಷ್ಟೆ!

ಅದ್ದರಿಂದ ಈ ಪೋರ್ನೋ ಪುರಾಣದ ಬಗ್ಗೆ ಹೇಳಿಕೆಗಳ ಪಾರಾಯಣ ಮಾಡುತ್ತ ಕಾಲಹರಣ ಮಾಡುವುದರ ಬದಲು ಸಾರ್ವಜನಿಕ ಜೀವನದಲ್ಲಿರುವವರು ಈ ಪ್ರಕರಣವನ್ನು ತಮಗೂ ಒಂದು ಪಾಠ ಎಂದು ಭಾವಿಸಿದರೆ ತಮ್ಮ ರಾಜಕೀಯ ಭವಿಷ್ಯ ಮತ್ತು ಮಾರ್ಯಾದೆ ಎರಡನ್ನು ಕೂಡ ಸುಭದ್ರವಾಗಿಡಟ್ಟು ಕೊಳ್ಳಬಹುದು. ಏಕೆಂದರೆ ಭಾರತೀಯರೂ ಇಂದಿಗೂ ಮುಕ್ತ ಕಾಮದ ಮನಸ್ಥಿತಿ ಹೊಂದಿಲ್ಲ ಅಥವಾ ಮುಕ್ತ ಕಾಮದ ಸಂಸ್ಕೃತಿ ಹೊಂದಿರುವ ಅಮೆರಿಕಾದಲ್ಲಿ ಕೂಡ ಅಲ್ಲಿನ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರಿಗೆ ತಾನು ಮೋನಿಕಾ ಲುವಿನುಸ್ಕಿ ಜೊತೆಗೆ ಹೊಂದಿದ್ದ ಲೈಂಗಿಕ ಸಂಬಂಧವನ್ನು ಸಮರ್ಥಿಸಿಕೊಳ್ಳಲಾಗದೆ ಪಡಿಪಾಟಲು ಪಟ್ಟ ನಿದರ್ಶನವೇ ನಮ್ಮ ಮುಂದಿದೆ.

ನಮ್ಮ ರಾಜಕೀಯ ರಂಗಕ್ಕೆ ಮಹಿಳೆಯರು ಬರಲಿ ಮತ್ತು ಬರಬೇಕು ಆದರೆ ರಾಜಕಾರಣಿಗಳ ಪಲ್ಲಂಗಕ್ಕಲ್ಲ.

Friday, February 3, 2012

ನಮ್ಮ ಸಿದ್ಧಾಂತಕ್ಕೆ ಇದು ವಿರುದ್ಧ....!

(ಇದು ನನ್ನ ’ಅಟೋ’ಬಯೋಗ್ರಾಫಿಯ ಐದನೇ ಭಾಗ)

ಅಲ್ಲಾ.... ಈ ರಸ್ತೆ ಮಧ್ಯೆ ಡಿವೈಡರ್‌ನಲ್ಲಿ ಹೂವಿನ ಗಿಡ... ಎಷ್ಟು ಚಂದದ ಹೂವುಗಳು... ಸೂಪರ್... ನೋಯ್ಡಾ ಉದ್ಯಾನ ನಗರಿಯೂ ಹೌದು... ಇಲ್ಲಿ ಗಾಜಿಯಾಬಾದ್ ವಿಕಾಸ್ ಪರಿಷತ್ ಮತ್ತು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ಮಧ್ಯೆ ಕಾಂಪಿಟೇಷನ್... ಇವೆರಡು ಸೇರಿ ದೆಹಲಿಗೆ ಕೊಕ್ ಕೊಡುತ್ತಿವೆ... ಹುಂ ನಮಗೂ ಅಷ್ಟೆ... ದೆಹಲಿ ಬಿಟ್ಟರೆ ನೋಯ್ಡಾವೇ ಕಾಣುವುದು... ಈ ಗಾಜಿಯಾಬಾದ್‌ನ್ನು ಹಾರಿಸಿ ಬಿಡುತ್ತೇವೆ... ನಮ್ಮ ಮನೆ ಪಕ್ಕ ವಿಕಾಸ್ ಪರಿಷತ್‌ನವರು ಮಾಡಿರೋ ಸ್ವರ್ಣ ಜಯಂತಿ ಪಾರ್ಕ್... ವಾಹ್... ನಾನು ದೆಹಲಿ, ನೋಯ್ಡಾ ಹಾಗೇ ಇದೆ, ಹೀಗೆ ಇದೆ ಎಂದರೆ ಯಾರೂ ನಂಬುವುದಿಲ್ಲ... ಎಲ್ಲ ಎಕ್ಸಜ್ಯುರೇಷನ್ ಮಾಡುತ್ತಿದ್ದಾನೆ ಅಂತ ಅಂದ್ಕೊಳ್ಳುತ್ತಾರೆ... ಅವರ ಮನಸ್ಸಿನಲ್ಲಿ ಇಲ್ಲಿನ ಕ್ರೈಂ ಬಗ್ಗೆ ಕೆಟ್ಟ ಒಪಿನಿಯನ್ ಇದೆ... ಈ ಊರಲ್ಲಿ ಎಷ್ಟು ಚೆಲುವಿದೆ, ಸುಖವಿದೆ ಎಂಬುದನ್ನು ಅವರು ನಂಬೋದೆ ಇಲ್ಲ... ಅದ್ರಲ್ಲೂ ಅಂಕಿತಾಳಂತೂ ಅಸೂಯೆಯಲ್ಲಿ ಸಾಯುತ್ತಾಳೆ... ಗಮ್ಮತ್ತು ನಾನು ಲಾಸ್ಟ್ ಟೈಂ ಊರಿಗೆ ಹೋಗಿ ವಾಪಾಸ್ ದೆಹಲಿಗೆ ಹಿಂತಿರುಗುವಾಗ ನಾನು ಸದ್ದಾನು ಒಂದು ಹುಡುಗಿಯನ್ನು ಫಾಲೋ ಮಾಡಿಕೊಂಡು ಹೋಗಿದ್ದು... ಪಾಪ... ಮಂಗಳೂರಿನಲ್ಲಿ ಆ ದುರ್ಗಮ ಬೆಟ್ಟದಲ್ಲಿ ಕಡಿದಾದ ರಸ್ತೆಯಲ್ಲಿ ಸದ್ದಾ ಹೇಳಿದ್ದ ಅಲ್ವಾ... ಮಂಗಳೂರಿನೊಳಗೆ ಇಂತಹ ಒಂದು ಪ್ರದೇಶ ಇದೆ ಎಂಬುದೇ ನಂಬಲು ಸಾಧ್ಯವಿಲ್ಲ ಎಂದು... ಆಕೆಯ ಪ್ಲೇಷರ್ ಮುಂದೆ ಮುಂದೆ... ಸದ್ದಾನ ಪಲ್ಸರ್ ಹಿಂದೆ ಹಿಂದೆ... ಅವಳ ಪ್ಲೇಷರ್ ಹಾಳಾಗಿದ್ದು... ಹೌದು ನಾವ್ಯಾಕೆ ಅವತ್ತು ಅವಳಿಗೆ ಹೆಲ್ಪ್ ಮಾಡಲು ಹೋಗಲಿಲ್ಲ...? ಸದ್ದಾ ಹೇಳಿದ ಮಾಡೋಣ ಅಂತ... ಆದ್ರೆ ನಾನೇ ಬೇಡ ಎಂದೆ...ಏಕೆ ಹಾಗೇ ಹೇಳಿದೆ... ಏನೋ ಲೆಕ್ಕ ಹಾಕಿರಬಹುದು... ಹುಂ ಈಗ ನೆನಪಾಗುತ್ತಿಲ್ಲ... ಹೇ... ಈ ಹುಡುಗಿಯನ್ನು ಎಲ್ಲೋ ನೋಡಿದ ಹಾಗೆ ಇದೆ... ಎಲ್ಲಿ... ಎಲ್ಲಿ.... ಗೊತ್ತಾಗುತ್ತಿಲ್ಲವೆ...? ಇವತ್ತೇನು ನನ್ನ ಮೆಮೋರಿ ನನಗೆ ಕೈ ಕೊಡುತ್ತಿದೆ...

ಹೋ ಈ ಅಜ್ಜ... ಈ ರೀತಿಯ ರಿಕ್ಷಾ ಪಯಣಕ್ಕೆ ಹೊಸಬರು ಎಂದು ಅನಿಸುತ್ತೆ... ಈತ ಮಾತ್ರ ಈ ದಾರಿಯಲ್ಲಿ ಮೊದಲ ಸಲ ಬರುತ್ತಿದ್ದಾನೆ... ನೋಡುವಾಗ ಗೊತ್ತಾಗುತ್ತೆ...ಹುಂ ಈ ನೋಯ್ಡಾಕ್ಕೆ ಮೊದಲ ಸಲ ಬರುವವರಿಗೆ ಸ್ವಲ್ಪ ಕಷ್ಟ... ಸ್ವಲ್ಪ ಎಂತ ತುಂಬಾನೇ ಕಷ್ಟ... ಕೇವಲ ಮೊದಲ ಸಲ ಮಾತ್ರವಲ್ಲ ಒಂದು ದಾರಿ ನಮಗೆ ಪಕ್ಕ ಆಗುವವರೆಗೆ ಕಷ್ಟವೇ... ಅದರಲ್ಲಿ ನೋಯ್ಡಾದ ವಿಶೇಷತೆ ಏನಿದೆ... ಎಲ್ಲ ಹೊಸ ಪ್ರದೇಶಗಳು ಇಷ್ಟೆ ತಾನೇ? ಇಲ್ಲ, ಇಲ್ಲ, ನೋಯ್ಡಾ ಒಂದು ಪ್ಲಾನ್ಡ್ ಸಿಟಿ ... ಸೋ ಇಲ್ಲಿ ಬಹುತೇಕ ಎಲ್ಲವು ಒಂದೇ ರೀತಿ ಕಾಣುತ್ತೆ.. ಲ್ಯಾಂಡ್ ಮಾರ್ಕ್ ಗುರುತಿಸುವುದು ಅದನ್ನು ನೆನಪಿಟ್ಟುಕೊಳ್ಳುವುದು... ಅದೇ ಸಮಸ್ಯೆ... ನನಗೆ ಈ ದಾರಿ ಸರಿ ಹಿಡಿಬೇಕಾದರೆ ಕನಿಷ್ಠ ೧೫ ದಿನವಾದರೂ ಆಗಿತ್ತು. ಆದರೆ ಬೆಂಗಳೂರಲ್ಲಿ ಒಂದೇ ದಿನದಲ್ಲಿ ನನಗೆ ಅರ್ಥವಾಗಿತ್ತು... ಬಹುಶಃ ನಾನು ಅಲ್ಲಿ ದಾರಿಯೇ ತಪ್ಪಿಲ್ಲ... ಹುಂ ಒಂದು ಸಲ ಇಂಟರ್ನ್‌ಶಿಪ್‌ನಲ್ಲಿದ್ದಾಗ ಒಬ್ಬ ರಿಕ್ಷಾ ಡ್ರೈವರ್ ಮೋಸ ಮಾಡಲು ನೋಡಿದ್ದ... ಆದ್ರೆ ನನಗೆ ಅದು ಗೊತ್ತಾಗಿ... ನಾನು ಈ ವಿಷಯದಲ್ಲಿ ನನ್ನ ಸಿಕ್ತ್ ಸೆನ್ಸ್‌ಗೆ ಥಾಂಕ್ಸ್ ಹೇಳಬೇಕು... ಎಷ್ಟೋ ಸಲ ಸರಿಯಾದ ಸ್ಥಳದಲ್ಲೇ.... ಅದಕ್ಕೆ ತಾನೇ ನಾನು ಈಗಲೂ ಅಷ್ಟೆ ಯಾರು ದಾರಿ ಕೇಳಿದರೂ ಅವರಿಗೆ ಸ್ಪಷ್ಟವಾಗಿ ದಾರಿ ತೋರಿಸುವುದು... ದಾರಿ ಗೊತ್ತಿಲ್ಲವೆಂದರೆ ಇಲ್ಲ ಎಂದು... ಅಲ್ಲ ನನಗೆ ಸಾಕಷ್ಟು ಇಂಜಿನಿಯರ್ ಫ್ರೆಂಡ್ಸ್ ಇದ್ದಾರೆ... ಈ ಕೆಲ ಸಾಹಿತಿಗಳು, ಬುದ್ಧಿಜೀವಿಗಳು ಈ ಇಂಜಿನಿಯರ್‌ಗಳನ್ನು ಏಕೆ ಬೈಯ್ಯುತ್ತಾರೆ? ಅವರ ಸಂಪಾದನೆ ಜಾಸ್ತಿ ಇದೆ ಅನ್ನುವ ಕಾರಣಕ್ಕಿರಬಹುದು... ಅವರನ್ನು ನೋಡುವಾಗ ನನಗೆ ಅವರೇನು ನಮಗಿಂತ ಭಿನ್ನ ಅನ್ನಿಸುವುದಿಲ್ಲ... ಹೇ ಹುಡುಗಿ... ನನ್ನ ಮುಖನೇ ನೋಡುತ್ತಿದ್ದಾಳೆ... ಇಲ್ಲ, ಇವಳಿಗೆ ನನ್ನ ಮುಖ ನೋಡುವಾಗ ಬೇರೆ ಯಾರದೋ ನೆನಪಾಗುತ್ತಿದೆ... ಖಂಡಿತ... ಅಣ್ಣನಾ? ತಮ್ಮನಾ... ಇಲ್ಲ ಲವರ್, ಫ್ರೇಂಡ್... ಹುಂ ಹೇಳುವುದು ಕಷ್ಟ... ಬಟ್ ನೆನಪಾಗುತ್ತಿದೆ ಅನ್ನುವುದು ನಿಜ... ಮೋಸ್ಟ್‌ಲೀ ಅದು ಯಾರೇ ಆಗಿದ್ದರು ಕೂಡ ಆತ ಅವಳ ಜೊತೆ ಈಗ ಇಲ್ಲ... ಹುಂ... ಮಾತನಾಡಿಸೋಣವೇ... ಬೇಡ... ಬೇಡ... ನಮ್ಮ ಸಿದ್ಧಾಂತಕ್ಕೆ ಇದು ವಿರುದ್ಧ.... ಆದ್ರಿಂದ... ಇರಲಿ ಅವಳು ಅವಳ ಪಾಡಿಗೆ... ಅವಳ ನೆನಪುಗಳೊಂದಿಗೆ... ಹುಂ... ಇಲ್ಲ ಅವಳ ಕಣ್ಣುಗಳನ್ನು ನೋಡಲಾಗುತ್ತಿಲ್ಲ... ಓ... ಮೈ ಗಾಡ್ ನನಗೆ ಸ್ಟೇರ್ ಕೊಡಲು ಆಗುತ್ತಿಲ್ಲ!

ಅಬ್ಬಾ.... ಮಥುರೆಯ ಆ ಹುಡುಗಿಯ ಐ ಮೀನ್ ರಾಧೆಯ ಮಾಯಾವಿ ಕಣ್ಣಿನ ಬಲೆಯೆಂದ ನಾನು ಇನ್ನೂ ಹೊರಬಂದಿಲ್ಲ... ನಿಜಕ್ಕೂ ಆ ಕಣ್ಣುಗಳನ್ನು ನಾನು ಈಗ ಲ್ಯಾಪ್‌ಟಾಪ್‌ನಲ್ಲಿ ನೋಡಿದರು ಬೆಚ್ಚಿ ಬೀಳುತ್ತೇನೆ...  ಆ ಹೆದರಿಕೆ ಆದರು ಎಂಥದ್ದು... ಛೇ... ಅದು ನನ್ನೆದೆಯಲ್ಲಿ ಹುಟ್ಟಿಸುವ ಅತಂಕ, ಕಳವಳ.... ಅದೇಷ್ಟು ಕಷ್ಟ ಪಟ್ಟರು ಆಕೆಯನ್ನು ಅರೆ ನಿಮಿಷಕ್ಕಿಂತ ಹೆಚ್ಚು ನೋಡಲಾಗುವುದಿಲ್ಲ... ಇನ್ನು ಈಕೆಯೂ ಹಾಗೆ ಅಟಕಾಯಿಸಿಕೊಳ್ಳುತ್ತಾಳಾ? ಈ ಟ್ರಾಫಿಕ್ ಮತ್ತು ಕಳೆದು ಕೊಂಡ ಹುಡುಗಿಯ ನೆನಪು ಒಂದೆ... ಒಮ್ಮೆ ನಿಲ್ಲುತ್ತೆ... ಒಮ್ಮೆ ಸಾಗುತ್ತೆ... ಆ ನೆನಪಲ್ಲಿ ಮತ್ತು ಈ ರಸ್ತೆಯಲ್ಲಿ  ನಿಲ್ಲಲು ಯಾರೂ ಬಯಸೋದಿಲ್ಲ... ಆದ್ರೂ ನಿಲ್ಲಲೇ ಬೇಕಾಗುತ್ತೆ... ಗಾಡಿ ಸಾಗುವಾಗ ಅದೇನೋ ರಿಲೀಫ್ ಸಿಗುತ್ತೆ ಅಲ್ವಾ.... ಹುಂ... ಆ ನೆನಪಿನಿಂದ ಹೊರ ಬರುವಾಗಲು ಅದೇ ರಿಲೀಫ್...