Friday, June 22, 2012

ತುಂಬಿದೆ ಎಪ್ಪತ್ತು, ನಮಗೆಲ್ಲಿದೆ ನೆನಪಿಸಿಕೊಳ್ಳಲು ಪುರುಸೊತ್ತು?

ಭಾರತವನ್ನು ಅವರಿಸಿಕೊಂಡಿದ್ದ ಬ್ರಿಟೀಷ್ ಬಂದಣಿಕೆಯ ಬಂಧವನ್ನು ಕಡಿದು ಹಾಕಲು ಹೋರಾಡಿದ ಶಕ್ತಿಗಳು ಒಂದೇ, ಎರಡೇ. ಆದರೆ ಕೆಲವೇ ಕೆಲವು ಶಕ್ತಿಗಳಿಗೆ, ವ್ಯಕ್ತಿಗಳಿಗೆ ಇತಿಹಾಸದ ಪುಟದಲ್ಲಿ ದಾಖಲಾಗಿ, ನಿತ್ಯ ಆರಾಧನೆಯನ್ನು ಪಡೆಯುವ ಭಾಗ್ಯ. ಆದರೆ ಇತಿಹಾಸ ಪುಟ ಸೇರುವ, ಅಲ್ಲಿ ಮೆರೆಯುವ ಆಸೆಗಳನ್ನು ಇಟ್ಟುಕೊಳ್ಳದೆ ತಮ್ಮ ಚಟುವಟಿಕೆಯಿಂದಲೇ ಇತಿಹಾಸಕ್ಕೆ ಹೊಸ ದಿಸೆ ನೀಡಿದ, ಹೊಸ ಇತಿಹಾಸವನ್ನೆ ಬರೆದ ಮಹಾನ್ ಶಕ್ತಿಗಳಲ್ಲಿ ಒಂದು ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ)!
ಟೈಟಾನಿಕ್ ಮುಳುಗಿ ೧೦೦ ವರ್ಷವಾದ ನೋವಿನಲ್ಲಿ ಮುಳುಗಿರುವ ನಮಗೆ ಐಎನ್‌ಎಯ ಸ್ಥಾಪನೆಯಾಗಿ ೭೦ ವರ್ಷವಾದ ಸಂಭ್ರಮವನ್ನು ಆಚರಿಸಲು ಪುರುಸೊತ್ತೆಲ್ಲಿ? ಆ ನೆನಪೆಲ್ಲಿ? ಹೌದು, ಈ ವರ್ಷಕ್ಕೆ ಐಎನ್‌ಎಯ ವೀರ ಸೈನಿಕರ ಹೆಜ್ಜೆಗೆ ಚರಿತ್ರೆಯ ಧೂಳಿನ ಕಣಗಳ ಲೇಪನವಾಗಿ ೭೦ ತುಂಬಲಿದೆ. ನಮ್ಮಲ್ಲಿ ಬಹುತೇಕ ಮಂದಿ ಸುಭಾಷ್ ಚಂದ್ರ ಭೋಸ್ ಐಎನ್‌ಎಯನ್ನು ಕಟ್ಟಿದ್ದರು ಎಂದೇ ಭಾವಿಸಿದ್ದಾರೆ. ಆದರೆ ಐಎನ್‌ಎಯನ್ನು ಕಟ್ಟಿದ್ದು ಸುಭಾಷ್ ಅಲ್ಲ. ಸುಭಾಷ್ ಐಎನ್‌ಎಯನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಪ್ರಥಮ ವಿಶ್ವ ಯುದ್ಧ (೧೯೧೪-೧೮) ನಡೆದ ಸಂದರ್ಭದಲ್ಲಿ ಭಾರತೀಯ ಸೈನಿಕರು ಬ್ರಿಟೀಷರ ಪರವಾಗಿ ಹೋರಾಡಿದ್ದರು. ಆದರೆ ಭಾರತೀಯ ಸೈನಿಕರಿಗೆ ಅವರ ಯೋಗ್ಯತೆಗೆ ತಕ್ಕ ಸ್ಥಾನಮಾನವನ್ನು ಬ್ರಿಟೀಷರು ಎಂದೂ ನೀಡಲೇ ಇಲ್ಲ. ಮೊದಲ ವಿಶ್ವ ಯುದ್ಧದಲ್ಲಿ ಅವರ ಪರವಾಗಿ ಹೋರಾಡಿ ಮಡಿದ ೯೦,೦೦೦ ಸೈನಿಕರ ಸ್ಮರಣಾರ್ಥ ದೆಹಲಿಯಲ್ಲಿ ಇಂಡಿಯಾ ಗೇಟ್ ಕಟ್ಟಿದೊಡನೆ ಅವರು ಭಾರತೀಯ ಸೈನಿಕರಿಗೆ ಮಾಡಿದ ಅಪಮಾನದ ಪಾಪವೇನು ತೊಳೆದುಹೋಗಲಾರದು.
ಮೊದಲ ವಿಶ್ವ ಯುದ್ಧದ ಆರಂಭದವರೆಗೆ ಭಾರತೀಯ ಸೈನಿಕನೊಬ್ಬ ಅದೇಷ್ಟೆ ಸಾಧನೆ ಮಾಡಿದರೂ ಕೂಡ ಹೆಚ್ಚೆಂದರೆ ಸುಬೇದರ್ ಅಥವಾ ಸುಬೇದರ್ ಮೇಜರ್ ಆಗಬಹುದಿತ್ತು ಅಷ್ಟೆ. ಆದರೆ ಆ ಹುದ್ದೆಗೊಂದು ಸುಂದರ ಹೆಸರು ಜೂನಿಯರ್ ಕಮೀಷನ್ಡ್ ಅಫೀಸರ್ ಎಂದು ದಯಪಾಲಿಸಿದ್ದರು. ಆದರೆ ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಭಾರತೀಯರಲ್ಲಿ ಕೆಲವರು ಕ್ಯಾಪ್ಟನ್ ಹುದ್ದೆಗೆ ಏರಿದ್ದರು.

ಆದರೆ ೧೯೨೦ರ ಬಳಿಕ ಭಾರತೀಯರಿಗೆ ಕೂಡ ಕಿಂಗ್ಸ್ ಕಮೀಷನ್ ನೀಡುವ ಉದಾರತೆಯನ್ನು ಬ್ರಿಟೀಷ್ ಮನಸ್ಸುಗಳು ಮಾಡಿದವು. ಇಂತಹ ಅವಕಾಶವನ್ನು ಪಡೆದವರಲ್ಲಿ ಮುಂದೆ ದೇಶದ ಸೇನಾ ಮುಖ್ಯಸ್ಥರಾದ ಕೆ ಎಂ ಕಾರಿಯಪ್ಪ ಅವರು ಒಬ್ಬರು. ಆದರೆ ೧೯೩೯ರಲ್ಲಿ ದ್ವಿತೀಯ ವಿಶ್ವ ಮಹಾಯುದ್ಧ ಶುರುವಾಗುವ ಒಪ್ಪೊತ್ತಿಗೆ ಭಾರತೀಯ ಸೈನ್ಯದಲ್ಲಿ ಭಾರತೀಯನೊಬ್ಬ ಹೊಂದಿದ್ದ ಅತ್ಯುನ್ನತ ಹುದ್ದೆ ಎಂದರೆ ಅದು ಮೇಜರ್ ಹುದ್ದೆ ಅಷ್ಟೆ.

ಆದರೆ ೧೯೪೧ರಲ್ಲಿ ಶುರುವಾದ ಮಲಯನ್ ಯುದ್ಧ ಐಎನ್‌ಎಯ ಪರಿಕಲ್ಪನೆ ಅಂಕುರಿಸಲು ಕಾರಣವಾಯಿತು. ಬ್ರಿಟೀಷ್ ಅಧಿಕಾರಿಗಳಿಂದ ಸತತವಾಗಿ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ತಿನ್ನುತ್ತಿದ್ದ ಮತ್ತು ಜನಾಂಗೀಯ ನಿಂದನೆಯಿಂದ ರೋಸಿ ಹೋಗಿದ್ದ ಭಾರತೀಯರು ಅವರಿಗೆ ಸೂಕ್ತ ಏದಿರೇಟು ನೀಡುವ ಒಂದು ಅವಕಾಶ ಮತ್ತು ಸಂದರ್ಭಕ್ಕೊಸ್ಕರ ಕಾಯುತ್ತಿದ್ದರು. ಸ್ವಾತಂತ್ರ್ಯ ಭಾರತದ ಸೇನಾ ಮುಖ್ಯಸ್ಥರಾಗಿದ್ದ ಕೆ ಎಸ್ ತಿಮ್ಮಯ್ಯ, ಎಸ್ ಎಮ್ ಶ್ರೀನಾಗೇಶ್ ಮತ್ತು ಪಾಕಿಸ್ಥಾನದ ಸೇನಾ ಮುಖ್ಯಸ್ಥರಾಗಿದ್ದ ಎಮ್ ಐ ಮಜೀದ್ ಮುಂತಾದ ಉನ್ನತ ಅಧಿಕಾರಿಗಳೇ ಬ್ರಿಟೀಷರಿಂದ ಅವಹೇಳನಕ್ಕೀಡಾಗಿದ್ದರು ಎಂದಾದ ಮೇಲೆ ಉಳಿದ ಸಾಮಾನ್ಯ ಸೈನಿಕರ ಪಾಡು ಏನಾಗಿದ್ದಿರಬಹುದು?

ಸೂರ್ಯ ಮುಳುಗದ ನಾಡಿನ ಎಲ್ಲ ಲೆಕ್ಕಾಚಾರಗಳು ಬೋರಾಲಾಗಿ ಬಿದ್ದು ಸಿಂಗಾಪುರ ೧೯೪೨ರ ಫೆಬ್ರುವರಿ ೧೫ರಂದು ಜಪಾನ್‌ನ ವಶವಾಯಿತು. ಅದೇ ದಿನ ಬ್ರಿಟೀಷರು ಜಪಾನ್‌ನ ಮುಂದೆ ಮಂಡಿಯೂರಿದ್ದರು.

ಆದರೆ ಈ ಯುದ್ಧದ ಸಂದರ್ಭದಲ್ಲಿ ಆಯಕಟ್ಟಿನ ಪ್ರದೇಶವಾಗಿದ್ದ ಜಿತ್ರಾ ರಕ್ಷಣಾ ರೇಖೆ (ಈಗ ಮಲೇಷ್ಯಾದ ಭಾಗವಾಗಿದೆ) ಪ್ರದೇಶದಲ್ಲಿ ಬ್ರಿಟೀಷ್‌ರು ಜಪಾನಿಯರನ್ನು ಎದುರಿಸದಿದ್ದದ್ದು ಅವರ ಸೋಲಿನ ಮುನ್ನುಡಿ ಯಾಗಿತ್ತು. ಬ್ರಿಟೀಷರು ಕೊನೆ ಕ್ಷಣದಲ್ಲಿ ಅಲ್ಲಿ ಕಾವಲು ಕಾಯುತ್ತಿದ್ದ ೧/೧೪ ಪಂಜಾಬ್ ರೆಜಿಮೆಂಟ್‌ಗೆ ಅಲ್ಲಿಂದ ಮುಂದೆ ಹೋಗುವಂತೆ ಆದೇಶಿಸಿದ್ದರು. ಅದೇ ರೆಜಿಮೆಂಟ್‌ನಲ್ಲಿ ಐಎನ್‌ಎಯ ರೂವಾರಿಗಳಾದ ಕ್ಯಾಪ್ಟನ್ ಮೋಹನ್ ಸಿಂಗ್ ಮತ್ತು ಮೊಹಮ್ಮದ್ ಅಕ್ರಮ್ ಖಾನ್ ಇದ್ದರು!
ಜಪಾನ್‌ನ ತೀವೃ ದಾಳಿಗೆ ಸುಲಭ ತುತ್ತಾಗುವುದರಿಂದ ಪಾರಾಗಲು ಮೋಹನ್ ಸಿಂಗ್ ಮತ್ತು ಖಾನ್ ಇಬ್ಬರು ರಸ್ತೆ ಬಿಟ್ಟು ಅಲ್ಲೇ ಇದ್ದ ಕಾಡೊಳಗೆ ನುಗ್ಗಿದ್ದರು. ಇದೇ ಸಂದರ್ಭದಲ್ಲಿ ಜಪಾನ್ ಸೈನ್ಯದೊಡನೆ ಕೆಲ ಸಿಖ್ಖರು ಬರುವುದು ಅವರಿಗೆ ಕಂಡಿತ್ತು. ಆ ಸಿಖ್ಖರ ನಾಯಕನಾಗಿದ್ದ ಪ್ರೀತಂ ಸಿಂಗ್. ಆತ ಮೋಹನ್ ಸಿಂಗ್‌ಗೆ ಜಪಾನಿಯರ ಸಂದೇಶವನ್ನು ಮುಟ್ಟಿಸಿದ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜಪಾನ್‌ನ ಬೆಂಬಲದ ಒತ್ತಾಸೆ ಸಿಕ್ಕಿತ್ತು. ಅವರಿಬ್ಬರ ಆ ಭೇಟಿ ಐಎನ್‌ಎಯ ಹುಟ್ಟಿಗೆ ನಾಂದಿ ಹಾಡಿತ್ತು. ಬಳಿಕ ಮೋಹನ್ ಸಿಂಗ್ ಮೇಜರ್ ಜನರಲ್ ಯಮಶಿಟರನ್ನು ಭೇಟಿಯಾಗಿ ಈ ಬಗೆಗಿನ ಮಾತುಕತೆ ನಡೆಸಿದರು.
ಈ ಮಲಯನ್ ಯುದ್ಧ ಶುರುವಾಗಿ ಕೇವಲ ೧೦ ದಿನಗಳಲ್ಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಬಲ್ಲ ದಳವೊಂದನ್ನು ಈ ಸೈನ್ಯದೊಳಗಿನಿಂದಲೇ ರಚಿಸಲು ಬೇಕಾದ ಎಲ್ಲಾ ಏರ್ಪಾಟು ಕೂಡ ನಡೆಯಿತು.

ಸಿಂಗಾಪುರದ ಪತನದ ಎರಡು ದಿನದ ಬಳಿಕ ಅಂದರೆ ಫೇಬ್ರವರಿ ೧೭ರಂದು ಭಾರತೀಯ ಮೂಲದ ಎಲ್ಲ ಖೈದಿಗಳನ್ನು ಫರೇರ್ ಪಾರ್ಕ್‌ನಲ್ಲಿ ಕಳೆ ಹಾಕಲಾಯಿತು. ಅಂದು ಜಪಾನಿನ ಸೇನಾನಾಯಕ ಮೇಜರ್ ಫ್ಯುಜಿವೆರಾನ ಕೈಗೇ ಬ್ರಿಟೀಷ್ ಕರ್ನಲ್ ಹಂಟ್ ಭಾರತೀಯರನ್ನು ಒಪ್ಪಿಸಿದ್ದ. ಅಂದು ಹಂಟ್ ಮಾಡಿದ ಘೋಷಣೆ, ಇಂದು, ನಾನು ಬ್ರಿಟೀಷ್ ಸರ್ಕಾರದ ಪರವಾಗಿ ನಿಮ್ಮನ್ನು ಜಪಾನ್ ಸರ್ಕಾರಕ್ಕೆ ಹಸ್ತಾಂತರಿಸುತ್ತೇನೆ. ನೀವು ಈವರೆಗೆ ಹೇಗೆ ನಮ್ಮ ಆದೇಶವನ್ನು ಪಾಲಿಸುತ್ತಿದ್ದೀರೋ ಹಾಗೇ ಇನ್ನು ಮುಂದೆ ಅವರ ಆದೇಶವನ್ನು ಪಾಲಿಸಿ ಎಂದಿದ್ದ. ಈ ಘೋಷಣೆ ಬ್ರಿಟೀಷ್ ಅಧಿಪತ್ಯಕ್ಕೆ ಕಪ್ಪು ಮಸಿ ಬಳೆದಿತ್ತು ಜೊತೆಗೆ ಮುಂದೆ ನಡೆದ ಕೆಂಪು ಕೋಟೆ ವಿಚಾರಣೆ (೧೯೪೫-೪೬) ಸಂದರ್ಭದಲ್ಲಿ ಭಾರತೀಯರಿಗೆ ಭಾರಿ ಲಾಭ ತಂದಿತ್ತು.

ಮಾರ್ಚ್‌ನಲ್ಲಿ ಟೋಕಿಯೋ ಕಾನ್ಫರೆನ್ಸ್ ನಡೆಸುವುದು ಮತ್ತು ಅಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳ ಜೊತೆಗೆ ಐಎನ್‌ಎಯ ಪ್ರತಿನಿಧಿಗಳು ಕೂಡ ಸಭೆ ಸೇರಿ ಮಾತುಕತೆ ನಡೆಸುವುದು ಎಂದು ನಿಶ್ಚಯಿಸಲಾಯಿತು. ಆದರೆ ವಿಧಿ ಬೇರೆಯದ್ದೆ ಬಗೆದಿದ್ದ. ಅ ಸಮ್ಮೇಳನದಲ್ಲಿ ಭಾಗವಹಿಸಲೆಂದು ಸಿಂಗಾಪುರದಿಂದ ಹೊರಟಿದ್ದ ವಿಮಾನವೊಂದು ಜಪಾನಿನ ದಕ್ಷಿಣ ಭಾಗದ ಕಡಲ ಗರ್ಭ ಸೇರಿತು. ಅದರಲ್ಲಿದ್ದ ಪ್ರೀತಮ್ ಸಿಂಗ್, ಸ್ವಾಮಿ ಸತ್ಯಾನಂದ ಪುರಿ, ಎನ್. ಕೆ ಆಯ್ಯರ್ ಮತ್ತು ಕ್ಯಾ. ಅಕ್ರಂ ಖಾನ್ ವಿಧಿವಶರಾದರು. ಆ ಮೂಲಕ ಐಎನ್‌ಎಯ ಮೊದಲ ಹುತಾತ್ಮರ ಪಡೆ ಸೃಷ್ಟಿಯಾಯಿತು!

ಇದೇ ಸಂದರ್ಭದಲ್ಲಿ ಪೂರ್ವದಲ್ಲಿನ ಎಲ್ಲ ಭಾರತೀಯರ ಹೊಣೆ ಹೊತ್ತಿಕೊಳ್ಳಲು ೧೯೨೮ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (ಐಐಎಲ್)ನ ಸ್ಥಾಪನೆಯಾಗಿತ್ತು. ಆ ಸಮಯದಲ್ಲಿ ರಾಜಾ ಮಹೇಂದ್ರ ಪ್ರತಾಪ ಇದರ ಅಧ್ಯಕ್ಷರಾಗಿದ್ದರೆ ರಾಸ್ ಬಿಹಾರಿ ಬೋಸ್ ಉಪಾಧ್ಯಕ್ಷರಾಗಿದ್ದರು. ಆದರೆ ಸೈನ್ಯದ ಪ್ರತಿನಿಧಿಗಳು ಅಲ್ಲಿಗೆ ತಲುಪುತ್ತಲೇ ರಾಜಾ ಮಹೇಂದ್ರ ಪ್ರತಾಪ್ ಪದಚ್ಯುತರಾಗಿ ರಾಸ್ ಬಿಹಾರಿ ಬೋಸ್ ಅಧ್ಯಕ್ಷರಾಗಿದ್ದರು! ಅಷ್ಟೇ ಅಲ್ಲ ರಾಜಾ ಮಹೇಂದ್ರರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಕಾರಣ, ರಾಜಾ ಮಹೇಂದ್ರ ಜಪಾನಿಯರು ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಜಾಯಮಾನದವರಾಗಿರಲಿಲ್ಲ.

ಮಾರ್ಚ್ ೨೮ರಿಂದ ಮಾರ್ಚ್ ೩೧ರವರೆಗೆ ಬೋಸ್‌ರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಐಐಎಲ್‌ನ್ನು ಪೂರ್ವ ದೇಶಗಳಲ್ಲಿ ವಿಸ್ತರಿಸುವುದು, ಐಎನ್‌ಎಯ ರಚನೆ ಮತ್ತು ಈ ಚಳವಳಿಯನ್ನು ಮುನ್ನಡೆಸಲು ಯೂರೋಪ್‌ನಿಂದ ಸುಭಾಶ್ ಚಂದ್ರ ಬೋಸ್‌ರನ್ನು ಕರೆಸುವುದು ಮುಂತಾದ ನಿರ್ಣಯ ಕೈಗೊಳ್ಳಲಾಯಿತು.

ಸಿಂಗಾಪುರದಲ್ಲಿ ಜಪಾನಿಯರಿಗೆ ಶರಣಾದ ೯೦,೦೦೦ದಷ್ಟು ಸೈನಿಕರಲ್ಲಿ ಸುಮಾರು ಅರ್ಧದಷ್ಟು ಭಾರತೀಯ ಮೂಲದ ಸೈನಿಕರಿದ್ದರು. ಅವರಲ್ಲಿ ಕೆಲವರು ಯುದ್ಧದ ಮಧ್ಯೆಯೇ ಮೋಹನ್ ಸಿಂಗ್‌ರನ್ನು ಸೇರಿಕೊಂಡಿದ್ದರು. ಮತ್ತೆ ಉಳಿದವರನ್ನು ಬಳಸಿಕೊಂಡು ಐಎನ್‌ಎ ಕಟ್ಟುವ ಕೆಲಸ ಏಪ್ರಿಲ್ ತಿಂಗಳಲ್ಲೇ ಪ್ರಾರಂಭಿಸಲಾಯಿತು.

ಮೊದಲ ಹಂತದಲ್ಲಿ ಮೂರು ಬ್ರಿಗೇಡ್ ಮತ್ತು ಸಹಾಯಕ ಪಡೆಗಳಿರುವ ಒಂದು ಡಿವಿಷನ್‌ನ್ನು ರಚಿಸಲಾಯಿತು. ಮೋಹನ್ ಸಿಂಗ್ ಮೇಜರ್ ಜನರಲ್ ಆಗಿ ಆಯ್ಕೆಯಾದರು. ಜೂನಿಯರ್ ಕಮೀಷನ್ಡ್ ಆಫೀಸರ್ ಹುದ್ದೆಯನ್ನು ಕಿತ್ತು ಹಾಕಲಾಯಿತು. ಹಿಂದೂ, ಮುಸ್ಲಿಂ ಮತ್ತು ಸಿಖ್ಖರು ಒಂದೇ ಕಡೆ ಊಟ ಮಾಡಬೇಕಿತ್ತು. ಈ ರೀತಿ ಸಮಾನತೆ ಮತ್ತು ಜಾತ್ಯತೀತತೆಯ ಅಂಶವನ್ನು ಐಎನ್‌ಎ ತನ್ನ ಬೇರಿನಲ್ಲೇ ಅಳವಡಿಸಿಕೊಂಡಿತ್ತು. ಕಮಾಂಡ್ ನೀಡಲು ಹಿಂದಿ ಪದಗಳನ್ನು ಪರಿಚಯಿಸಲಾಯಿತು. ಬ್ರಿಗೇಡ್‌ಗಳಿಗೆ ಗಾಂಧಿ, ನೆಹರು ಮತ್ತು ಅಜಾದ್‌ರ ಹೆಸರು ಇಡಲಾಯಿತು.

ಆ ಬಳಿಕ ೧೯೪೨ರ ಜೂನ್ ೧೫ ರಿಂದ ೨೩ರವರೆಗೆ ಬ್ಯಾಂಕಾಕ್ ಕಾನ್ಫರೆನ್ಸ್ ನಡೆಯಿತು. ಈ ಸಮ್ಮೇಳನದಲ್ಲಿ ಈ ಚಳವಳಿಯ ಮುಖ್ಯ ಉದ್ದೇಶ ಭಾರತದ ಸಂಪೂರ್ಣ ಸ್ವರಾಜ್ಯ ಎಂಬ ನಿರ್ಣಯ ಕೈಗೊಳ್ಳುವುದರ ಜೊತೆಗೆ ಕಾಂಗ್ರೆಸ್‌ನ ಹೋರಾಟದ ಆಶಯಗಳ ಬಗ್ಗೆ ಸಮ್ಮತಿ ಮುಂತಾದ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಸ್ ಬಿಹಾರಿ ಬೋಸ್‌ರ ನೇತೃತ್ವದಲ್ಲಿ ಕ್ರಿಯಾ ಸಮಿತಿವೊಂದನ್ನು ರಚಿಸಲಾಯಿತು. ಇದರಲ್ಲಿ ಸೇನೆಯ ಕಡೆಯಿಂದ ಮೋಹನ್ ಸಿಂಗ್, ಎ ಕ್ಯೂ ಗಿಲಾನಿ ಮತ್ತು ನಾಗರಿಕರ ಕಡೆಯಿಂದ ಕೆ ಪಿ ಕೆ ಮೆನನ್ ಮತ್ತು ಎನ್ ರಾಘವನ್ ಇದ್ದರು. ಇಡೀ ಚಳವಳಿಯ ನಿಯಂತ್ರಣ ಮತ್ತು ಮಾರ್ಗದರ್ಶನ ಈ ಸಮಿತಿಯ ಜವಾಬ್ಧಾರಿಯಾಗಿತ್ತು.

ಐಎನ್‌ಎಯ ಮೊದಲ ಡಿವಿಷನ್‌ನಲ್ಲಿ ಕಮಾಂಡರ್ ಆಗಿ ಮೋಹನ್ ಸಿಂಗ್ ಮತ್ತು ದ್ವಿತೀಯ ಕಮಾಂಡರ್ ಮತ್ತು ಮುಖ್ಯ ಸಲಹೆಗಾರರಾಗಿ ನರಂಜನ್ ಸಿಂಗ್ ಗಿಲ್ (ಇವರಿಗೂ ಜಪಾನಿಯರಿಗೂ ಅಷ್ಟೊಂದು ಅಗಿ ಬರುತ್ತಿರಲಿಲ್ಲವಂತೆ)ಇದ್ದರು. ಗಾಂಧಿ ಬ್ರಿಗೇಡ್‌ಗೆ ಐ ಕೆ ಕಿಯಾನಿ, ನೆಹರು ಬ್ರಿಗೇಡ್‌ಗೆ ಅಜೀಜ್ ಅಹಮ್ಮದ್ ಖಾನ್ ಮತ್ತು ಅಜಾದ್ ಬ್ರಿಗೇಡ್‌ಗೆ ಪ್ರಕಾಶ್ ಚಾಂದ್ ನೇತೃತ್ವ ವಹಿಸಿಕೊಂಡರು. 

ಈ ಪಡೆ ಅದೇ ವರ್ಷ ಅಕ್ಟೋಬರ್‌ನಲ್ಲಿ ಬರ್ಮಾದತ್ತ ದಾಪುಗಾಲಿಡಲು ಸಿದ್ಧವಾಗಿತ್ತು. ಆದರೆ ದುರದೃಷ್ಟವಶಾತ್ ಹಾಗೇ ಆಗಲಿಲ್ಲ. ಭಾರತೀಯರನ್ನು ಮತ್ತು ಭಾರತೀಯ ಸೈನ್ಯವನ್ನು ತನ್ನ ಮೂಗಿನ ನೇರಕ್ಕೆ ನಿರ್ದೇಶಿಸುವ ಹಾಗೂ ಭಾರತೀಯ ಸೇನೆಯನ್ನು ತನ್ನ ಅಧೀನದಲ್ಲೆ ಇಟ್ಟುಕೊಳ್ಳಬೇಕೆಂಬ ಜಪಾನಿಯರ ಹವಣಿಕೆ ಮತ್ತು ವರ್ತನೆ ಮೋಹನ್ ಸಿಂಗ್‌ರಿಗೆ ಭಾರಿ ನೋವು ತಂದಿತ್ತು. ಕ್ರಿಯಾ ಸಮಿತಿ ಒಡೆದು ಹೋಯಿತು. ಬ್ಯಾಂಕಾಕ್ ಸಮ್ಮೇಳನದ ನಿರ್ಣಯವನ್ನು ಜಪಾನ್ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದದ್ದು ಅಸಮಾಧಾನದ ಹೊಗೆ ಕವಿಯುವಂತೆ ಮಾಡಿತ್ತು. ಇದರಿಂದ ಬೇಸತ್ತ ಮೋಹನ್ ಸಿಂಗ್ ಜಪಾನಿಯರ ಜೊತೆ ಅಸಹಕಾರ ಮತ್ತು ಐಎನ್‌ಎಯ ವಿಸರ್ಜನೆಯ ನಿರ್ಧಾರಕ್ಕೆ ಬಂದರು.

೧೯೪೨ನೇ ಇಸವಿಯ ಡಿಸೆಂಬರ್ ೨೧ಕ್ಕೆ ಐಎನ್‌ಎ ವಿಸರ್ಜನೆಯಾಯಿತು. ನರಂಜನ್ ಸಿಂಗ್‌ರನ್ನು ಮೊದಲೇ ಬಂದಿಸಿಟ್ಟಿದ್ದ ಜಪಾನಿಯರು ಆ ಬಳಿಕ ಡಿಸೆಂಬರ್ ೨೯ಕ್ಕೆ ಮೋಹನ್ ಸಿಂಗ್‌ರನ್ನು ಕೂಡ ಬಂಧಿಸಿದರು. ಅದ್ದರಿಂದ ೧೯೪೨ರ ಫೇಬ್ರುವರಿ ೧೫ರಿಂದ ಅದೇ ವರ್ಷದ ಡಿಸೆಂಬರ್ ೨೧ರವರೆಗೆ ಅಸ್ತಿತ್ವದಲ್ಲಿದ್ದ ಐಎನ್‌ಎಯ ಮೊದಲ ಅಧ್ಯಾಯ ಮುಕ್ತಾಯಗೊಂಡಿತು.
ಆ ಚಳಿಗಾಲದಲ್ಲಿ ಬರ್ಮಾದ ಮೂಲಕ ಭಾರತದ ಮೇಲೆ ದಾಳಿ ಮಾಡಬೇಕು ಎಂಬ ಭಾರತೀಯರ ರಣತಂತ್ರಕ್ಕೆ ಮಣೆ ಹಾಕದ್ದು ಜಪಾನಿಗೆ ಭಾರಿ ನಷ್ಟ ಉಂಟು ಮಾಡಿತು ಎಂದು ಆ ಬಳಿಕ ಜಪಾನ್ ಸೈನ್ಯದ ಜನರಲ್ ಅದ ಫುಜಿವಾರ ಕೂಡ ಒಪ್ಪಿಕೊಳ್ಳುತ್ತಾರೆ.

ಐಎನ್‌ಎಯ ಮೊದಲ ಪರ್ವದ ಬಗ್ಗೆ ನರಂಜನ್ ಸಿಂಗ್ ಹೇಳುವುದನ್ನು ಕೇಳಿ, "ಐಎನ್‌ಎಯ ಎರಡು ಭಾಗಗಳು ಪರಸ್ಪರ ಪೂರಕವಾಗಿದ್ದವು. ಇದನ್ನು ಒಂದೇ ಕಥೆಯ ಎರಡು ಭಾಗಗಳೆಂದು ಪರಿಗಣಿಸಬಹುದು. ಮೊದಲನೆ ಭಾಗ ಇಲ್ಲದೇ ಇದ್ದಲ್ಲಿ ಐಎನ್‌ಎಯ ಎರಡನೇ ಯಶಸ್ಸಿನ ಪರ್ವ ಸೃಷ್ಟಿಯಾಗುತ್ತಿರಲಿಲ್ಲ ಮತ್ತು ಎರಡನೇ ಭಾಗ ಇಲ್ಲದೆ ಹೋಗಿದ್ದರೆ ಐಎನ್‌ಎ ಸಾಧಿಸಿದ್ದು ಏನು ಇರುತ್ತಿರಲಿಲ್ಲ".

ಅ ಬಳಿಕ ೧೯೪೩ರ ಜುಲೈ ೨ರಂದು ಸಿಂಗಾಪುರಕ್ಕೆ ನೇತಾಜಿಯ ಆಗಮನ, ಬಂದ ಎರಡೇ ದಿನದಲ್ಲಿ ಅವರು ಐಐಎಲ್‌ನ ಜವಾಬ್ಧಾರಿ ವಹಿಸಿಕೊಂಡ ತದನಂತರ ಆಗಸ್ಟ್‌ನಲ್ಲಿ ಐಎನ್‌ಎಯ ದಂಡನಾಯಕರಾಗಿ ನಿಯುಕ್ತರಾಗುತ್ತಾರೆ. ಆ ಬಳಿಕದ ರೋಚಕ ಕತೆ ಚಿರಪರಿಚಿತ.

ನಾವು ವ್ಯಕ್ತಿ ಪೂಜೆ ಮಾಡುತ್ತ ಆ ವ್ಯಕ್ತಿಯ ಹಿಂದಿರುವ ಶಕ್ತಿಗಳನ್ನು ಮರೆಯುವುದರಲ್ಲಿ ಮತ್ತು ಮುಚ್ಚಿಡುವುದರಲ್ಲಿ ನಿಸ್ಸಿಮರು. ಇಂದು ಐಎನ್‌ಎಗೆ ಅಡಿಪಾಯ ಹಾಕಿದವರನ್ನು ಕೇಳುವವರಿಲ್ಲ, ನೇತಾಜಿಗೆ ಸಲ್ಲಲೇ ಬೇಕಾದ ಮಾನ್ಯತೆ ಸಲ್ಲಲಿಲ್ಲ.
ಇಂದು ೧೨ ಲಕ್ಷ ಭೂ ಸೈನಿಕರ ರಕ್ಷಣೆಯಲ್ಲಿರುವ, ಸುಮಾರು ಒಂದೂವರೆ ಲಕ್ಷ ಕೋಟಿ ರೂ ಸುರಿದು ನಮ್ಮ ರಕ್ಷಣೆ ಮಾಡಿಸಿಕೊಳ್ಳುತ್ತಿರುವ, ಬಗೆ ಬಗೆಯ ಕ್ಷಿಪಣಿಗಳನ್ನು ಉಡಾಯಿಸಿ ನೆರೆಯ ದೇಶಗಳಿಗೆಗೆ ಬಿಸಿ ಮುಟ್ಟಿಸಿದ್ದೇವೆ ಎಂದು ಬೀಗುತ್ತಿರುವ ನಮಗೆ ಈ ಮಣ್ಣಿನ ಪರಾಧೀನತೆಯನ್ನು ಕಡಿದು ಹಾಕಿ ೩೮ ಕೋಟಿ ಭಾರತೀಯರ ರಕ್ಷಣೆಗೆ ಪರದೇಶಗಳ ಕಾಡುಮೇಡುಗಳಲ್ಲಿ ಪಡಬಾರದ ಪಾಡು ಪಟ್ಟ ಆ ೪೫,೦೦೦ ಕದನ ಕಲಿಗಳನ್ನು ನೆನಪಿಸಿಕೊಳ್ಳುವಷ್ಟು ವ್ಯವಧಾನವಿಲ್ಲದೆ ಹೋಯಿತೇ?