Sunday, April 11, 2010

ಬೌಲಿಂಗ್ ಅಪಕ್ವ ಕ್ರಿಕೆಟ್‌ಗೆ ಹೊಡೆಯಿತೇ ಲಕ್ವ?

ಇದು ವಿಶ್ವದ ನಾನ ಕಡೆ ಮತ್ತು ಕ್ರಿಕೆಟ್‌ನ ಹುಚ್ಚಿನಿಂದ ಮುಕ್ತವಾಗುತ್ತಿರುವ ಅಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಅಫ್ರಿಕಾದಲ್ಲಿ ಮತ್ತೇ ಕ್ರಿಕೆಟ್‌ನ ಮತ್ತೇರಿಸಲು ವಿವಿಧ ತಂತ್ರಗಳನ್ನು ಹೆಣೆಯುತ್ತಿರುವ ಕಾಲ. ಇದಕ್ಕಾಗಿ ಕ್ರಿಕೆಟ್ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಕ್ರಿಕೆಟ್‌ಗೆ ಗ್ಲ್ಯಾಮರ್ ಸೇರಿಸಲಾಗುತ್ತಿದೆ. ಹೊಸ ಹೊಸ ತಂತ್ರಜ್ಞಾನವನ್ನು ಕ್ರಿಕೆಟ್‌ನೊಳಗೆ ತೂರಲಾಗುತ್ತಿದೆ. ಕ್ರಿಕೆಟ್ ತನ್ನ ಹೆಕ್ಕಿ ತೆಗೆಯಬಹುದಾದ ೫೦೦ ವರ್ಷಗಳ ಚರಿತ್ರೆಯಲ್ಲಿ ಇಂತಹ ಸಾಕಷ್ಟು ಬದಲಾವಣೆ, ಮಾರ್ಪಾಡುಗಳನ್ನು ಮಡಿಬಿಟ್ಟು ಮಾಡಿಕೊಂಡಿದ್ದರಿಂದಲೇ ಇಂದು ತಕ್ಕಮಟ್ಟಿನ ಪರಿಪಕ್ವತೆ ಪಡೆದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ.
ಕ್ರಿಕೆಟ್‌ನಲ್ಲಿನ ಬದಲಾವಣೆ ಅಂದಾಗ ಅದು ಕ್ರಿಕೆಟ್ ಆಡುವ ರೀತಿ, ನೀತಿ ನಿಯಮಗಳಲ್ಲಿ ಆದ ಬದಲಾವಣೆ ಮಾತ್ರವಲ್ಲದೇ ಅದರೊಂದಿಗೆ ಸೇರಿಕೊಂಡಿರುವ ಆಡಳಿತ, ವಾಣಿಜ್ಯ ಮತ್ತು ವ್ಯವಹಾರ ಸಂಬಂಧಿ ಬದಲಾವಣೆಗಳು ಕೂಡ ಮುಖ್ಯವಾಗುತ್ತದೆ.

ಕ್ರೀಡೆ ಇರುವುದು ಮನರಂಜನೆ, ಪ್ರತಿಷ್ಟೆ ಮೆರೆಯಲು ಎಂಬೆರಡು ಹಂತಗಳನ್ನು ದಾಟಿ ವ್ಯಾಪಾರಕ್ಕೆ ಅಥವಾ ವ್ಯಾಪಾರವಾಗಿ ಬಳಕೆಯಾಗುತ್ತಿದೆ. ಕ್ರಿಕೆಟ್ ಕೂಡ ಇದಕ್ಕೇ ಹೊರತಾಗಿಲ್ಲ. ಇದರಿಂದ ಕ್ರಿಕೆಟ್‌ನ ದೊಣ್ಣೆ ನಾಯಕರು, ಆಟಗಾರರು ಶ್ರಿಮಂತರಾಗುತ್ತಿದ್ದಾರೆ. ಆದರೆ, ಕ್ರಿಕೆಟ್ ಬಡವಾಗುತ್ತಿದೆ!

ಕಳೆದ ಶತಮಾನದಾದಿಯಿಂದ ೧೯೯೦ರ ತನಕ ಕೂಡ ಅನೇಕ ಶ್ರೇಷ್ಟ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳು ಜಾಗತಿಕ ಕ್ರಿಕೆಟ್‌ನ್ನು ಆಳಿದ್ದರು.

ಅವರೆಲ್ಲರನ್ನೂ ನೆನಪಿಸಿಕೊಳ್ಳುತ್ತ ಕಳೆದ ಸಹಸ್ರಮಾನದ ಕೊನೆಯ ದಶಕದತ್ತ ಒಮ್ಮೆ ಕಣ್ಣು ಹಾಯಿಸೋಣ. ಅಲ್ಲಿ ಸಾಲು ಸಾಲಾಗಿ ಘಟಾನುಘಾಟಿಗಳಿದ್ದಾರೆ. ಬ್ಯಾಂಟಿಗ್‌ನಲ್ಲಿ ತೆಂಡುಲ್ಕರ್, ದ್ರಾವಿಡ್, ಗಂಗೂಲಿ, ಅಜರುದ್ದೀನ್, ಪಾಂಟಿಂಗ್, ವೋ ಸಹೋದರರು, ಮಾರ್ಕ್ ಟೇಲರ್, ಬಾರ್ಡರ್, ಲಾರಾ, ರಣತುಂಗಾ, ಅರವಿಂದ ಡಿ ಸಿಲ್ವಾ, ಜಯಸೂರ್ಯ, ಅನ್ವರ್, ಇಂಜುಮಾಮ್ ಉಲ್ ಹಕ್, ಕ್ಯಾಲಿಸ್ ಇದ್ದಾರೆ. ಇವರಲ್ಲಿ ಕೆಲವರು ಈಗಲೂ ಆಡುತ್ತಿದ್ದಾರೆ. ಇವರೆಲ್ಲರನ್ನೂ ಕ್ರಿಕೆಟ್‌ನ ಹಾಲ್ ಅಫ್ ಫೇಮರ್ಗಳು ಎಂದು ಒಪ್ಪಿಕೊಳ್ಳಬಹುದೇನೋ. ಇವರು ರನ್ ರಾಶಿ ಹಾಕಲು ಎದುರಿಸಿದ್ದ ಬೌಲರ್‌ಗಳ ಪಟ್ಟಿಯನ್ನೊಮ್ಮೇ ನೋಡಿ ಮುರುಳೀಧರನ್, ವಾರ್ನ್, ಕುಂಬ್ಳೆ, ಶ್ರೀನಾಥ್, ಮೆಕ್‌ಗ್ರಾಥ್, ವಸಿಂ ಆಕ್ರಂ, ವಕಾರ್ ಯೂನಿಸ್, ವಾಸ್, ಶಾನ್ ಪೊಲಾಕ್, ಡೊನಾಲ್ಡ್, ವಾಲ್ಷ್, ಯಂಬ್ರೋಸ್, ಡ್ಯಾರೋನ್ ಗಾವ್ ಇತ್ಯಾದಿ. ಇವರೆಲ್ಲರು ವಿಶ್ವ ಕ್ರಿಕೆಟ್‌ನ ಬೌಲಿಂಗ್ ದಿಗ್ಗಜರ ಪಟ್ಟಿಯಲ್ಲಿ ಮೊದಲ ಪಂಕ್ತಿಯಲ್ಲಿ ಕೂರಬಲ್ಲವರು. ಈ ಶ್ರೇಷ್ಟರುಗಳ ಕದನದಲ್ಲಿ ಕ್ರಿಕೆಟ್‌ನ ಹಿರಿಮೆ ಹೆಚ್ಚಾಯಿತು ಮತ್ತು ಬ್ಯಾಂಟಿಗ್‌ನಲ್ಲಿ ಅಥವಾ ಬೌಲಿಂಗ್‌ನಲ್ಲಿ ಗಟ್ಟಿ ವಿಕೆಟ್‌ಗಳು ಮಾತ್ರ ಉಳಿದವು.

ಆನಂತರದ ಅಂದರೆ ೧೯೯೬ರಿಂದ ೨೦೦೦ದ ನಡುವೆ ಈಗಲೂ ಚಾಲ್ತಿಯಲ್ಲಿರುವ ಕೆಲ ಬೌಲರ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಶುರುವಿಟ್ಟುಕೊಂಡರು. ಅವರಲ್ಲಿ ಮುಖ್ಯವಾದವರು ಅಥವಾ ದಶಕಗಳ ಕಾಲ ಬಾಳಿಕೆ ಬಂದವರು ಎನ್‌ಟಿನಿ, ಹರ್ಭಜನ್ ಸಿಂಗ್, ವೆಟೊರಿ, ಬ್ರೆಟ್ ಲೀ ಮತ್ತು ಜಹೀರ್ ಖಾನ್. ಆದರೆ ಇವರಲ್ಲಿ ವೆಟೊರಿಯನ್ನು ಬಿಟ್ಟು ಯಾರಿಗೂ ತಮ್ಮ ಸೀನಿಯರ್ ಬೌಲರ್‌ಗಳಲ್ಲಿ ಇದ್ದ ಘಾತಕತನತನ, ಸ್ಥಿರತೆ ಮತ್ತು ಫಿಟ್‌ನೆಸ್ ಇಲ್ಲವೇ ಇಲ್ಲ.

ಆದರೆ ಈ ಅವಧಿಯಲ್ಲಿ ಮತ್ತು ಮುಂದಿನ ದಶಕದಲ್ಲಿ ಅನೇಕ ಬ್ಯಾಟಿಂಗ್ ತಾರೆಗಳು ಉದಯಿಸಿದರು. ಉದಾಹರಣೆಗೆ ಸೆಹವಾಗ್, ಗಿಲ್‌ಕ್ರೈಸ್ಟ್, ಧೋನಿ, ಸಂಗಕ್ಕಾರ, ಮಹೇಲಾ ಜಯವರ್ಧನೆ, ಮೈಕ್ ಹಸ್ಸಿ, ಮೈಕಲ್ ಕ್ಲಾರ್ಕ್, ಗೈಲ್, ಕೆವಿನ್ ಪಿಟರ್ಸನ್, ಗ್ರೇಮ್ ಸ್ಮಿತ್, ಮಹಮ್ಮದ್ ಯೂಸುಫ್, ಗಿಬ್ಸ್ ಇತ್ಯಾದಿ ಇತ್ಯಾದಿ.

ದುರಂತವೆಂದರೆ ಈ ಇಡಿ ದಶಕದಲ್ಲಿ ಮುಂದೆ ಲೆಜೆಂಡ್ ಎಂದು ಹೇಳಬಹುದಾದ ಒಬ್ಬನೇ ಒಬ್ಬ ಬೌಲರ್ ಕಾಣಿಸಿಕೊಳ್ಳಲೇ ಇಲ್ಲ. ನಿರೀಕ್ಷೆ ಹುಟ್ಟಿಸಿದ್ದವರು ಕೂಡ ಒಂದೆರಡು ಸಿರೀಸ್ ಆಗುವಷ್ಟರಲ್ಲೇ ಸಿರೀಯಸ್ ಆಗಿ ಸುಸ್ತಾಗಿಬಿಟ್ಟರು!

ಇವತ್ತು ಗಮನಿಸಬೇಕಾಗಿರುವ ಬೌಲರ್‌ಗಳೆಂದರೆ ಸ್ಟೈನ್, ಮಿಚೆಲ್ ಜಾನ್ಸನ್, ಮಹಮ್ಮದ್ ಅಸಿಫ್, ಬಾಂಡ್ ಅಷ್ಟೇ. ಆಜಂತಾ ಮೆಂಡಿಸ್, ಇಶಾಂತ್ ಶರ್ಮ, ಇರ್ಪಾನ್ ಪಠಾಣ್, ಮಾಲಿಂಗ, ಸ್ಟೀವ್ ಹಾರ್ಮಿಸನ್ ಅದೇನೋ ಮಾಡ್ತಾರೆ ಅಂತ ನಾವು ಅದ್ಕೊಂಡದ್ದೇ ಬಂತು! ಮಹಮ್ಮದ್ ಅಮೀರ್, ವೆಯ್ನ್ ಪಾರ್ನೆಲ್, ಶಾನ್ ಟೇಟ್, ವೆಲಗೆಡೆರಾ, ಕ್ಯಾಮರೋನ್ ರೋಷ್‌ರ ಮೇಲೆ ಸದ್ಯಕ್ಕೆ ಒಂದು ಕಣ್ಣಿಡಬಹುದು ಅಷ್ಟೇ.

ಕ್ರಿಕೆಟ್‌ನ ಬೌಲಿಂಗ್ ವಿಭಾಗ ಯಾಕೆ ಕಳೆಗುಂದಿತು? ದಶಕಗಳ ಹಿಂದೆ ಒಂದು ತಂಡದಲ್ಲೇ ಎರಡೆರಡು ಲೆಜೆಂಡ್ ಬೌಲರ್‌ಗಳಿರುತ್ತಿದ್ದರೆ ಇಂದು ಜಗವಿಡೀ ಹುಡುಕಿದರೂ ಒಬ್ಬನೇ ಒಬ್ಬ ಅಂತಹ ಬೌಲರ್ ಯಾಕೆ ಕಾಣ ಸಿಗುತ್ತಿಲ್ಲ? ಇದ್ದರೂ ಅವರ‍್ಯಾಕೆ ಸ್ಥಿರತೆ ಮತ್ತು ಫಿಟ್‌ನೆಸ್ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆ? ಸ್ಪಿನ್ ಬೌಲಿಂಗ್ ವಿಭಾಗವಂತೂ ಪಾರ್ಟ್ ಟೈಮ್ ಬೌಲರ್‌ಗಳ ಅಥವಾ ಬ್ಯಾಟಿಂಗ್ ಅಲ್‌ರೌಂಡರ್‌ಗಳ ವಿಭಾಗವೇ ಆಗಿ ಬಿಟ್ಟಿದೆ.

ಕ್ರಿಕೆಟ್‌ನಲ್ಲಿ ಇರುವುದು ಮೂರೇ ಸಂಗತಿಗಳು. ಬ್ಯಾಟಿಂಗ್, ಬೌಲಿಂಗ್ ಮತ್ತು ಫಿಲ್ಡಿಂಗ್. ಕ್ರಿಕೆಟ್‌ನಲ್ಲಿ ಅದೇನೇ ಬದಲಾವಣೆ ತಂದರೂ, ಅದೇಷ್ಟೇ ಮಾರ್ಪಾಡು ಮಾಡಿದರೂ ಈ ಮೂರೂ ಒಂದಕ್ಕೊಂದು ಜೊತೆಯಾಗಿ ನಿಲ್ಲದೆ ಒಳ್ಳೆಯ ಕ್ರಿಕೆಟ್ ಸಾಧ್ಯವೇ ಇಲ್ಲ. ಕ್ರಿಕೆಟ್‌ನಲ್ಲಿ ಯಾವುದೇ ತಂಡ ಅತ್ಯುತ್ತಮ ಎಂದೆನಿಸಿಕೊಳ್ಳಬೇಕಾದರೆ ಅದು ಈ ಮೂರರಲ್ಲೂ ಅತ್ಯುನ್ನತ್ತ ಪ್ರದರ್ಶನ ನೀಡಲೇಬೇಕು.

ಆದರೆ ಕ್ರಿಕೆಟ್ ತನ್ನ್ನಲ್ಲಿ ಬದಲಾವಣೆ ತಂದುಕೊಳ್ಳುಲು ತುಳಿದದ್ದು ಹೆಚ್ಚು ಹೆಚ್ಚು ಬ್ಯಾಟ್ಸ್‌ಮನ್‌ಗಳ ಪರವಾಗುವ ಹಾದಿಯನ್ನು. ಅದರಲ್ಲೂ ಕ್ರಿಕೆಟ್ ವ್ಯಾಪಾರದ ಮುಷ್ಟಿಯೊಳಗೆ ಸಿಳುಕಿಕೊಂಡ ಮೇಲಂತೂ ಬೌಲರ್‌ಗಳ ಮೇಲೆ ಅದೇನೋ ದ್ವೇಷ ಇಟ್ಟುಕೊಂಡೇ ನಿಯಮಗಳನ್ನೂ ರೂಪಿಸಲಾಗುತ್ತಿದೆ ಎಂಬಷ್ಟು ಏಕಮುಖ ನಿಯಮಗಳನ್ನು ತೂರಕಾಗುತ್ತಿದೆ. ಈ ಬೆಳವಣಿಗೆಯ ಫಲಿತಾಂಶ ಈ ದಶಕದಲ್ಲಿ ಕಾಲದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉಳಿಯಬಲ್ಲ ಒಬ್ಬನೇ ಒಬ್ಬ ಬೌಲರ್ ಯಾವ ಮೈದಾನದಲ್ಲೂ ಕಾಣಿಸಿಕೊಳ್ಳುತ್ತಲೇ ಇಲ್ಲ!

ಇತರ ಪ್ರಸಿದ್ಧ ತಂಡ ಆಟಗಳಾದ ಹಾಕಿ, ಫುಟ್ಬಾಲ್‌ನ್ನು ಗಮನಿಸಿ, ಅಲ್ಲಿ ಮುನ್ಪಡೆ, ರಕ್ಷಣ ಮತ್ತು ಸಂಪರ್ಕ ಆಟಗಾರರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದ್ದರೆ ಮಾತ್ರ ಆ ತಂಡ ಗೆಲ್ಲುತ್ತದೆ. ಕ್ರಿಕೆಟ್‌ನಲ್ಲಿ ಈ ಮೂರು ವಿಭಾಗಗಳ ಸ್ಥಾನವನ್ನು ಬ್ಯಾಟ್ಸ್‌ಮನ್, ಬೌಲರ್ ಮತ್ತು ಫಿಲ್ಡರ್‌ಗಳು ತುಂಬುತ್ತಾರೆ. ಕೀಪರ್‌ನ ಪಾತ್ರ ಈ ಮೂರು ಆಟದಲ್ಲೂ ಮಹತ್ವದ್ದೇ. ಹಾಕಿ, ಫುಟ್ಬಾಲ್‌ಗಳಲ್ಲಿ ಹೆಚ್ಚಾಗಿ ತಾರೆಗಳಾಗುವ ಭಾಗ್ಯ ಮುನ್ಪಡೆ ಆಟಗಾರರಿಗೆ ಹೆಚ್ಚು ಸಲೀಸಾಗಿ ಲಭ್ಯವಾದರೆ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಈ ಯೋಗ. ಈ ಬಗ್ಗೆ ನನ್ನ ತಕರಾರಿಲ್ಲ. ಇದು ಜನರ ಇಷ್ಟದ ಪ್ರಶ್ನೆ. ಆದರೆ ಜಾಗತಿಕ ಕ್ರಿಕೆಟ್‌ನ ಯೋಗಕ್ಷೇಮ ನೋಡಿಕೊಳ್ಳುವ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (Iಅಅ)ಗೆ ಏನಾಗಿದೆ? ಬೌಲರ್‌ಗಳ ಕೊರಳ್‌ಗೆ ಉರುಳು ಹಾಕುವುದೇ ಕ್ರಿಕೆಟ್‌ನ್ನು ಹೆಚ್ಚು ಜನಪ್ರಿಯಗೊಳಿಸುವ ಕ್ರಮ ಎಂದು ಅದಕ್ಕೆ ತೋಚಿದದಾರೂ ಹೇಗೆ?

ಬೌಲರ್‌ಗಳ ಅವನತಿಗೆ ಮುನ್ನುಡಿ ಬರೆಯ ಹೊರಟದ್ದು ಟೆಸ್ಟ್‌ನ ಅವನತಿ ಮತ್ತು ಏಕದಿನ ಪಂದ್ಯಗಳ ಹುಚ್ಚು. ಏಕದಿನ ಪಂದ್ಯಗಳಲ್ಲದರೂ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆ ಉಳಿಸಿಕೊಂಡಿದ್ದ ಬೌಲರ್‌ಗಳಿಗೆ ಟ್ವೆಂಟಿ - ಟ್ವೆಂಟಿಯ ಸುನಾಮಿ ವೇಗ ಮೈದಾನವನ್ನೇ ಸ್ಮಶಾನವನ್ನಾಗಿಸಿ ಬಿಟ್ಟಿದೆ.

ಬೌಲರ್‌ಗಳಿಗೆ ಮಾರಕವಾದ ಕೆಲ ಸಂಗತಿಗಳನ್ನೇ ತೆಗೆದುಕೊಳ್ಳಿ. ಏಕದಿನ ಮತ್ತು ಟ್ವೆಂಟಿ ಟ್ವೆಂಟಿ ಪಂದ್ಯಗಳಲ್ಲಿ ಬೌಲರ್ ಒಬ್ಬ ಓವರಿಗೆ ಒಂದೇ ಬೌನ್ಸರ್ ಹಾಕಬಹುದು ಆದರೆ ಬ್ಯಾಟ್ಸ್‌ಮನ್ ಆರು ಎಸೆತಗಳಿಗೂ ಸಿಕ್ಸ್‌ರ್ ಬಾರಿಸಬಹುದು! ನೋಬಾಲ್ ಹಾಕಿದರೆ ಮುಂದಿನ ಎಸೆತ ಫ್ರೀ ಹಿಟ್, ಬ್ಯಾಟ್ಸ್‌ಮೆನ್‌ಗೆ ಆಡಬಹುದಾದ ಜಾಗದಲ್ಲೇ ಅವನಿಗೆ ಆಡಲಾಗದ ರೀತಿಯಲ್ಲಿ ಬೌಲಿಂಗ್ ಮಾಡಬೇಕು ಮತ್ತು ನಿಗದಿತ ಸಂಖ್ಯೆಯ ಓವರ್‌ಗಳನ್ನು ಮಾತ್ರ ಎಸೆಯಬೇಕು ಇತ್ಯಾದಿ. ಟೆಸ್ಟ್‌ನಲ್ಲಿ ಇದಕ್ಕೆ ರಿಯಾಯಿತಿ ಇರಬಹುದು ಆದರೆ ಭವಿಷ್ಯದ ಕ್ರಿಕೆಟ್ ಟ್ವೆಂಟಿ ಟ್ವೆಂಟಿ ಸುತ್ತಲೇ ಗಿರಕಿ ಹೊಡಿಯುವ ಎಲ್ಲ ಸಾಧ್ಯತೆಗಳಿರುವುದರಿಂದ ಈ ನಿಯಮಗಳು ಭವಿಷ್ಯದ ಬೌಲರ್ ತಾನಗಬೇಕು ಎಂದು ಬಯಸುವ ಕ್ರಿಕೆಟಿಗ ಆ ಆಸೆಗೆ ತರ್ಪಣ ಬಿಟ್ಟು ಬ್ಯಾಟ್ ಹಿಡಿಯುವಂತೆ ಮಾಡುತ್ತದೆ.

ಇಂತಹ ಸಮಸ್ಯೆಗಳು ಉದ್ಭವಿಸಿದಾಗ ಸಾಮಾನ್ಯವಾಗಿ ಎಲ್ಲರೂ ಮುಗಿಬಿದ್ದು ಕೊಡುವ ಸಲಹೆ, ಅಕಾಡೆಮಿ ಸ್ಥಾಪಿಸಬೇಕು ಇದರಿಂದ ಯುವ ಮತ್ತು ಬಾಲ ಪ್ರತಿಭೆಗಳ ಸಾಮರ್ಥ್ಯಕ್ಕೆ ಪಾಲಿಶ್ ನೀಡಲಾಗುತ್ತದೆ ಎಂಬುದು. ಆದರೆ ಈ ಅಕಾಡೆಮಿಗಳು ಬೌಲರ್‌ಗಳಿಗೆ ಸಾಮರ್ಥ್ಯ ತುಂಬುವುದರ ಬದಲು ಅವರಲ್ಲಿ ಇರುವ ಸಾಮರ್ಥ್ಯವನ್ನೇ ಪಿನಿಶ್ ಮಾಡುತ್ತಿವೆಯೋ ಎಂದೆನಿಸುತ್ತದೆ. ಹಿಂದೆ ಆಡುತ್ತಿದ್ದದ್ದು ಬಹುತೇಕ ಕಚ್ಚಾ ಪ್ರತಿಭೆಗಳು. ಆದರೆ ಇಂದು ಎಲ್ಲ ರೀತಿಯ ತರಬೇತಿ ಪಡೆದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸುವ ಬೌಲರ್ ಒಬ್ಬ ಯಾವುದೇ ಜಾದೂ ಮಾಡಲು ವಿಫಲನಾಗುತ್ತಿದ್ದನೆ ಎಂದರೆ ಅದು ಅಕಾಡೆಮಿಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ.

ಎಲ್ಲ ಸ್ವರೂಪದ ಕ್ರಿಕೆಟ್ ಸರಣಿಗಳಲ್ಲೂ ಕನಿಷ್ಟ ಶೇ ೪೦ ಪಂದ್ಯಗಳದರೂ ಬೌಲಿಂಗ್ ಪಿಚ್‌ನಲ್ಲೇ ನಡೆಸಬೇಕು. ಹಾಂಕಾಂಗ್ ಸೂಪರ್ ಸಿಕ್ಸ್ ಕೂಟದಲ್ಲಿ ಬ್ಯಾಟ್ಸ್‌ಮನ್ ೩೦ ರನ್ ಮಾಡಿದೊಡನೆ ಪೆವಿಲಿಯನ್ ಸೇರಿಕೊಳ್ಳಬೇಕು ಅದೇ ರೀತಿಯ ನಿಯಮವನ್ನು ದೇಶಿಯ ಟ್ವೆಂಟಿ ಟ್ವೆಂಟಿ ಪಂದ್ಯಗಳಲ್ಲಿ ಜಾರಿಗೆ ತರಬಹುದು. ಪವರ್ ಪ್ಲೆಯ ಒವರ್‌ಗಳ ಸಂಖ್ಯೆಗೆ ಕಡಿವಾಣ ಹಾಕಬೇಕು. ಮತ್ತೆ ಬೌಲರ್ ಒಬ್ಬನಿಗೆ ತನಗೆ ಅನುಕೂಲಕರವಾದ ಫಿಲ್ಡಿಂಗ್ ವ್ಯೂಹವನ್ನು ರಚಿಸಲು ಮುಕ್ತ ಸ್ವಾತಂತ್ರ್ಯವಿರಬೇಕು. ಫ್ರೀ ಹಿಟ್‌ನಂತಹ ಸೌಲಭ್ಯವನ್ನು ಬೌಲರ್‌ನಿಂದ ಕಿತ್ತುಕೊಳ್ಳಬೇಕು. ಇಲ್ಲವೆಂದರೆ ಫ್ರೀ ಹಿಟ್‌ಗೆ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಬ್ಯಾಟ್ಸ್‌ಮನ್ ವಿಫಲನಾದರೆ ತಂಡದ ಅಥವಾ ಅವನ ಖಾತೆಯಿಂದ ಒಂದಿಷ್ಟು ರನ್ ಕಸಿಯಬೇಕು. ಹಳೆ ಚೆಂಡು, ಹೊಸ ಚೆಂಡು ಬಳಸುವುದರ ಬಗ್ಗೆ ಇಲ್ಲಸಲ್ಲದ ನಿಯಮಗಳನ್ನು ಮಾಡುವುದರ ಬದಲು ಬೌಲರ್‌ಗೆ ತನಗಿಷ್ಟದ ಬಾಲ್ ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಬೇಕು.

ಬೌಲಿಂಗ್‌ನ ಗುಣಮಟ್ಟ ಕುಸಿದರೆ ಅದು ಕ್ರಿಕಟ್‌ನ ಸಮಗ್ರತೆಗೆ ದೊಡ್ಡ ಹಾನಿಯುಂಟು ಮಾಡುತ್ತದೆ. ಅದ್ದರಿಂದ ಐಸಿಸಿ ಕ್ರಿಕೆಟ್‌ನ ಮೂರು ವಿಭಾಗಗಳ ನಡುವೆ ಸಮತೋಲನ ತರುವ ಬಗ್ಗೆ ಚಿಂತಿಸಬೇಕು. ಬೌಲರ್‌ಗಳಿಗೆ ಸಹಕಾರಿಸುವ ಒಂದಿಷ್ಟು ಕ್ರಮಗಳನ್ನು ಐಸಿಸಿ ತುರ್ತಾಗಿ ತೆಗೆದುಕೊಳ್ಳದಿದ್ದರೆ ಒಂದೆರಡು ದಶಕದೊಳಗೆ ಕ್ರಿಕೆಟ್‌ನಲ್ಲಿ ಬೌಲರ್‌ಗಳು ನೇಪಥ್ಯಕ್ಕೆ ಸೇರಬಹುದು ಮತ್ತು ಅವರ ಸ್ಥಾನವನ್ನು ಬೌಲಿಂಗ್ ಮೇಷಿನ್ ತುಂಬುವುದು ಖಂಡಿತ! ಹೀಗಾದಲ್ಲಿ ಕ್ರಿಕೆಟ್‌ಗೆ ಲಕ್ವ ಹೊಡೆದಂತೆ!

No comments: