Saturday, May 28, 2011

ಹಗರಣಗಳಿಗೆ ಇದು ಸುಗ್ಗಿ ಕಾಲ!

(ಇದು ನಮ್ಮ ಪತ್ರಿಕೆ ದಿ ಸಂಡೇ ಇಂಡಿಯನ್ ನಲ್ಲಿ ಪ್ರಕಟಿತ)

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೂರು ವರ್ಷದಲ್ಲೇ ಹತ್ತಾರು ಹಗರಣಗಳ ಹುತ್ತ ಎದ್ದು ನಿಂತಿದ್ದು ಇದು ರಾಷ್ಟ್ರಮಟ್ಟದಲ್ಲಿ ರಾಜ್ಯದ ಪ್ರತಿಷ್ಠೆಗೆ ಕಳಂಕ ಹಚ್ಚಿವೆ. ಇಂತಹ ಕೆಲವು ಪ್ರಮುಖ ಹಗರಣಗಳ ಪಟ್ಟಿ ಇಲ್ಲಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಮಿತಿ (ಕೆಐಎಡಿಬಿ) ಭೂ ಹಗರಣ:
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಮಿತಿಯು ಭೂಮಿ ವಶ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಎಸಗಿರುವುದನ್ನು ಲೋಕಾಯುಕ್ತ ಪತ್ತೆ ಮಾಡಿದೆ. ದೇವನಹಳ್ಳಿಯಲ್ಲಿ ನಡೆದ 3 ಸಾವಿರ ಎಕರೆ ಭೂ ಸ್ವಾಧೀನ ಪ್ರಕರಣದಲ್ಲಿ ಮಾಜಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ಮತ್ತವರ ಪುತ್ರ ಭಾಗಿಯಾದ ಆರೋಪವಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಗರಣ:

ಈ ಹಗರಣದಲ್ಲಿ ಮುಖ್ಯಮಂತ್ರಿ ತನ್ನ ಮಗ ಮತ್ತು ಅಳಿಯನಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಡಿನೋಟಿಪೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅರ್ಕಾವತಿ ಲೇ ಔಟ್ ನಿರ್ಮಾಣಕ್ಕಾಗಿ ಕೃಷ್ಣರಾಜಪುರಂನ ರಾಚೇನಹಳ್ಳಿ ಗ್ರಾಮದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಅಂತಿಮ ನೋಟಿಫಿಕೇಶನ್‌ನ್ನು 2004ರಲ್ಲಿ ನೀಡಲಾಗಿತ್ತು. ಆದರೆ ನಿಯಮ ಬಾಹಿರವಾಗಿ ಬಿಡಿಎ ವಶದಲ್ಲಿದ್ದ ಭೂಮಿಯನ್ನು ಮುಖ್ಯಮಂತ್ರಿ ಕುಟುಂಬ ಖರೀದಿ ಮಾಡಿದೆ ಎನ್ನಲಾಗಿದೆ. ಮತ್ತೊಂದು ಇಂತಹುದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಆದೇಶವನ್ನು ಮೀರಿ ನಾಗರಬಾವಿಯಲ್ಲಿನ ಬಿಡಿಎಯ ಭೂಮಿಯನ್ನು ಡಿನೋಟಿಫೈ ಮಾಡಿದ ಆರೋಪವಿದೆ.

ಪ್ರೇರಣಾ ಟ್ರಸ್ಟ್ ದೇಣಿಗೆ ಹಗರಣ

ಯಡಿಯೂರಪ್ಪ ಅವರ ಪುತ್ರ ಮತ್ತು ಅಳಿಯನಿಗೆ ಸೇರಿದ ಶಿವಮೊಗ್ಗದಲ್ಲಿರುವ ಪ್ರೇರಣಾ ಟ್ರಸ್ಟ್‌ಗೆ ಹಲವಾರು ಕಂಪನಿಗಳು ಕೋಟ್ಯಾಂತರ ರೂಪಾಯಿ ದೇಣಿಗೆ ನೀಡಿವೆ. ಈ ರೀತಿ ದೇಣಿಗೆ ಮೂಲಕ ಸಂಗ್ರಹಿಸಿದ ಒಟ್ಟಾರೆ ಮೊತ್ತ 27.18 ಕೋಟಿ ರೂಪಾಯಿಗಳಾಗಿವೆ. ಇಲ್ಲಿ ಅಧಿಕಾರದ ದುರ್ಬಳಕೆ ಮತ್ತು ಭ್ರಷ್ಟ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 2009ರಲ್ಲಿ ಅವರ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ತಮ್ಮ ವಿವೇಚಣಾ ಕೋಟಾದಡಿಯಲ್ಲಿ ಸೈಟ್ ವಿತರಿಸಿದ ಆರೋಪವೂ ಮುಖ್ಯಮಂತ್ರಿಗಳ ಮೇಲಿದೆ.

ಅಕ್ರಮ ಗಣಿಗಾರಿಕೆ:
ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವ, ಮಾಡುತ್ತಿರುವ ಗಣಿಗಾರಿಕೆಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರವನ್ನು ಗಣಿಗಾರಿಕೆ ತನ್ನ ಮುಷ್ಠಿಯಲ್ಲಿಟ್ಟುಕೊಂಡಿದೆ ಎಂಬುದಕ್ಕೆ ಕಾರವಾರದ ಬೇಲಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿರುವ ಪ್ರಕರಣವೇ ಸಾಕ್ಷಿ. ಬೇಲಿಕೇರಿ ಬಂದರಿನಲ್ಲಿ ಕಾನೂನುಬಾಹಿರವಾಗಿ ಭೂಗರ್ಭ ಬಗೆದು ತಂದ ಬರೊಬ್ಬರಿ 35 ಲಕ್ಷ ಮೆಟ್ರಿಕ್ ಟನ್ ಅಕ್ರಮ ಕಬ್ಬಿಣದ ಅದಿರನ್ನು ದಾಸ್ತಾನು ಮಾಡಲಾಗಿತ್ತು. ಗೋಕುಲ್ ಎಂಬ ದಕ್ಷ ಅರಣ್ಯಾಧಿಕಾರಿ ಈ ಅದಿರನ್ನು ವಶಪಡಿಸಿಕೊಂಡಿದ್ದರೆ ಅವರನ್ನು ಬಂದರು ಮಂತ್ರಿ ಕೃಷ್ಣ ಪಾಲೇಮಾರ್ ಸಸ್ಪೆಂಡ್ ಮಾಡಿದರು. ಆ ಅದಿರು ರಾತ್ರೋರಾತ್ರಿ ನಾಪತ್ತೆಯಾಯಿತು.

ಪ್ರವಾಹ ಸಂತ್ರಸ್ತರ ಪುನರ್ವಸತಿ ಪ್ರಕರಣ:
2009ರ ಸೆಪ್ಟೆಂಬರ್ ತಿಂಗಳ ಅಂತ್ಯ ಮತ್ತು ಅಕ್ಟೋಬರ್ ತಿಂಗಳ ಆದಿಯಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಅಲ್ಲಿನ ಜನತೆ ಭಾರಿ ಸಂಕಷ್ಟಕ್ಕೀಡಾಗಿದ್ದರು. ಆ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ನಿಧಿ ಸಂಗ್ರಹಿಸುವುದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರೋಡ್ ಶೋ ಮಾಡಿದ್ದರು. ಜನರು ಮಾನವೀಯತೆಯಿಂದ ಹಣ ನೀಡಿದ್ದರು. ಆದರೆ ಆ ನಿಧಿ ಇನ್ನೂ ಸದ್ಭಳಕೆಯಾಗಿಲ್ಲ. 2010ರ ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಒಂದೇ ಒಂದು ಮನೆ ನಿರ್ಮಾಣವಾಗಿರಲಿಲ್ಲ.

ಭೂ ಬ್ಯಾಂಕ್ ವಿವಾದ:
2010ರ ಜೂನ್‌ನಲ್ಲಿ ನಡೆದ ಜಾಗತಿಕ ಬಂಡವಾಳ ಸಮಾವೇಶಕ್ಕೆ ಪೂರಕವಾಗಿ ಸರ್ಕಾರ ಒಂದು ಲಕ್ಷ ಎಕರೆ ಭೂಮಿಯನ್ನೊಳಗೊಂಡ ಒಂದು 'ಭೂ ಬ್ಯಾಂಕ್' ಸ್ಥಾಪಿಸಲು ನಿರ್ಧರಿಸಿತು. ಸಮಾವೇಶ ನಡೆಯುವ ಸಂದರ್ಭದಲ್ಲಿ ಸುಮಾರು 49.136 ಎಕರೆ ಭೂಮಿಗೆ ಅಂತಿಮ ನೋಟಿಫಿಕೇಷನ್‌ನ್ನು ಜಾರಿಮಾಡಲಾಯಿತು. ಬೆಂಗಳೂರಿನ ಹೊರವಲಯದ ರಾಮನಗರದಲ್ಲಿ ಸುಮಾರು 12,200 ಎಕರೆಯನ್ನು ಗುರುತಿಸಲಾಯಿತು. ಬೆಳಗಾವಿಯಲ್ಲಿ ಸುಮಾರು 10,800 ಎಕರೆ ಭೂಮಿ ಮತ್ತು ಧಾರವಾಡದಲ್ಲಿ ಸುಮಾರು 9,300 ಎಕರೆ ಭೂಮಿಯನ್ನು ಗುರುತಿಸಲಾಯಿತು. ಈ ಹಿಂದೆ ಕೆಐಎಡಿಬಿ ಸರ್ಕಾರ ಯೋಜನೆಗೆ ಸಹಿ ಹಾಕಿದ ಬಳಿಕ ಮಾತ್ರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಯೋಜನೆಯ ಪ್ರಸ್ತಾಪ ಬರುವ ಮುಂಚೆಯೇ ಸರ್ಕಾರ ಸಾವಿರಾರು ಎಕರೆ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಈಶ್ವರಪ್ಪ ಕೆಐಎಡಿಬಿಯಿಂದ ಭೂಮಿ ಪಡೆದ ಹಗರಣ:
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಇಂಧನ ಸಚಿವ ಈಶ್ವರಪ್ಪ ಮತ್ತು ಅವರ ಕುಟುಂಬ ಬೆಂಗಳೂರು, ನೆಲಮಂಗಲ ಹಾಗೂ ಬಳ್ಳಾರಿಯಲ್ಲಿ ಕೆಐಎಡಿಬಿಯಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ವೈದ್ಯಕೀಯ ಕಾಲೇಜ್ ಹಗರಣ:
ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಹಗರಣವೊಂದರ ಸುಳಿಗೆ ಸಿಲುಕಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ರಾಜ್ಯ ಸರ್ಕಾರದ ಅಧೀನದಲ್ಲಿರುವ ಎರಡು ವೈದ್ಯಕೀಯ ಕಾಲೇಜ್‌ಗಳ ಸಹಾಯಕ ಸಿಬ್ಬಂದಿಗಳ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳು ಹೊರ ಬರುತ್ತಲೇ ಅವರು ಗಂಟು ಮೂಟೆ ಕಟ್ಟ ಬೇಕಾಯಿತು.

ಕೃಷ್ಣಯ್ಯ ಸೆಟ್ಟಿ ಭೂಹಗರಣ:
ಮಾಜಿ ವಸತಿ ಸಚಿವ ಎನ್. ಕೃಷ್ಣಯ್ಯ ಸೆಟ್ಟಿ ಕೂಡ ಭೂ ಹಗರಣದ ಸುಳಿಗೆ ಸಿಲುಕಿ ರಾಜೀನಾಮೆ ನೀಡಬೇಕಾಯಿತು.

ಸಹ್ಯಾದ್ರಿ ಹೆಲ್ತ್ ಕೇರ್‌ಗೆ ಪರವಾನಗಿ ಹಗರಣ:

ಬಿ.ವೈ. ವಿಜಯೇಂದ್ರ ನಿರ್ದೇಶಕರಾಗಿರುವ ಸಹ್ಯಾದ್ರಿ ಹೆಲ್ತ್ ಕೇರ್ ಡಯಾಗ್ನಸ್ಟಿಕ್ ಪ್ರೈ. ಲಿ.ನ ಕಟ್ಟಡಕ್ಕೆ ನಿಯಮ ಬಾಹಿರವಾಗಿ ಪರವಾನಗಿ ಪಡೆದುಕೊಂಡ ಆರೋಪ.

ಭಾಗ್ಯಲಕ್ಷ್ಮಿ ಸೀರೆ ಹಗರಣ:
ಭಾಗ್ಯಲಕ್ಷ್ಮಿ ಯೋಜನೆಗಾಗಿ ಸರ್ಕಾರ ರಚನಾ ಗ್ರೂಪ್‌ನಿಂದ ಸೀರೆ ಖರೀದಿಸಿತ್ತು. ಆದರೆ ಆ ಹೆಸರಿನ ಯಾವುದೇ ಕಂಪೆನಿ ಇಲ್ಲ ಎಂಬ ಆರೋಪ ಹುಟ್ಟಿಕೊಂಡಿತ್ತು. ಅಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಒಂದು ಸೀರೆಗೆ 195 ರೂಪಾಯಿ ಕೊಡಲಾಗಿದೆ ಎನ್ನುತ್ತಾರೆ. ಅದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ತಾನು ಅಲ್ಲಿಂದ ಅದೇ ಗುಣಮಟ್ಟದ ಸೀರೆಯನ್ನು 120 ರೂಪಾಯಿಗೆ ತಂದಿದ್ದೇನೆ ಎಂದು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಭಾರತಿ ಶೆಟ್ಟಿ ಸೋದರನ ಭೂದಾಹ ಪ್ರಕರಣ:
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿಯವರ ಸಹೋದರ ಭಾಸ್ಕರ ಶೆಟ್ಟಿ ಸರಕಾರಿ ಪ್ರೌಢಶಾಲೆ ಹಾಗೂ ದೇವಾಲಯಕ್ಕೆ ಮೀಸಲಾಗಿಟ್ಟಿದ್ದ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ತಂದ ಪ್ರಕರಣ.

ಸಮಾಜ ಕಲ್ಯಾಣ ಸಚಿವರ ಸ್ವ ಕಲ್ಯಾಣ:

ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ ತಮ್ಮ ಪತ್ನಿ ವಿಜಯ ಕುಮಾರಿಯ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಜಿಗಣಿ ಹೋಬಳಿಯ ಮುನಿಮಾರಯ್ಯ ದೊಡ್ಡಿ ಗ್ರಾಮದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತಾಗಿಕೊಂಡಿರುವಂತೆ ಇರುವ ಎರಡು ಎಕರೆ 20 ಗುಂಟೆ ಜಮೀನನ್ನು ಕೇವಲ 4.37 ಲಕ್ಷಕ್ಕೆ ಕೊಂಡು ಕೊಂಡ ಪ್ರಕರಣ.

ರೈತ ಸಂಪರ್ಕ ಕೇಂದ್ರಗಳ ಕಟ್ಟಡ ಹಗರಣ:
ರೈತ ಸಂಪರ್ಕ ಕೇಂದ್ರಗಳ ಕಟ್ಟಡ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲದಿದ್ದರೂ ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿ ಕೊಟ್ಟಿದೆ ಎಂಬ ಆರೋಪ. ಮುಖ್ಯಮಂತ್ರಿ ಈ ವರ್ಷ 100 ರೈತ ಸಂಪರ್ಕ ಕೇಂದ್ರ ಸ್ಥಾಪಿಸುವ ಘೋಷಣೆ ಮಾಡಿ, ಪ್ರತಿ ಕೇಂದ್ರಕ್ಕೂ ೨೫ ಲಕ್ಷ ಕೋಟಿ ರೂಪಾಯಿ ನೀಡಲಾಗುವುದು ಎಂದಿದ್ದರು. ಆದರೆ ಇನ್ನೂ ಕೆಲಸ ಪ್ರಾರಂಭಿಸಿಲ್ಲದಿದ್ದರೂ ಸುಳ್ಳು ಲೆಕ್ಕ ತೋರಿಸಿ 12,24,37,000 ಕೋಟಿ ರೂಪಾಯಿಗಳನ್ನು ಗುತ್ತಿಗೆದಾರರಿಗೆ ನೀಡಲಾಗಿದೆ.

ಆರ್. ಆಶೋಕ್‌ರ ಡಿನೋಟಿಫಿಕೇಶನ್ ಹಗರಣ:
ಗೃಹ ಮತ್ತು ಸಾರಿಗೆ ಸಚಿವ ಆರ್. ಆಶೋಕ್ ಅವರ ಮೇಲೆ ಆರ್‌ಎಮ್‌ವಿ ಎಕ್ಸ್‌ಟೆನ್ಷನ್ ಪ್ರದೇಶದ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ ಆರೋಪವಿದ್ದು ಅವರ ಮೇಲೆ ಎಮ್. ಮಂಜುನಾಥ್ ಎಂಬವರು ನೀಡಿದ ದೂರಿನ ಮೇಲೆ ಭಾರತೀಯ ದಂಡ ಸಂಹಿತೆಯ 420 ಮತ್ತು 406 ಸೆಕ್ಷನ್‌ನಡಿಯಲ್ಲಿ ಪ್ರಕರಣ ದಾಖಲಾಗಿದೆ.

ಡಿ ಸುಧಾಕರ್ ಬ್ಯಾಂಕ್‌ವೊಂದಕ್ಕೆ ವಂಚನೆ ಮಾಡಿದ ಪ್ರಕರಣ:
ಮಾಜಿ ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಮತ್ತಿಬ್ಬರ ಜೊತೆ ಸೇರಿ ಸಾರ್ವಜನಿಕ ವಲಯದ ಬ್ಯಾಂಕ್‌ವೊಂದಕ್ಕೆ 2003-06ರ ಅವಧಿಯಲ್ಲಿ 5.5 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್ ದಾಖಲಿಸಿದೆ.

ಮಹಿಳೆಯರ ಕಣ್ಣೀರಿದು
ಮಾಜಿ ಆಹಾರ ಸಚಿವ ಹರತಾಳು ಹಾಲಪ್ಪ ತನ್ನ ಸ್ನೇಹಿತ ವೆಂಕಟೇಶ್ ಮೂರ್ತಿಯ ಪತ್ನಿ ಚಂದ್ರಾವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ.

ಅಬಕಾರಿ ಸಚಿವ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮಿ ಜೊತೆಗೆ ಹೊಂದಿದ್ದ ಸಂಬಂಧ ಮತ್ತು ಆದು ಬೀದಿ ಜಗಳವಾಗಿ ಮಾರ್ಪಟ್ಟದ್ದು.

ಉಡುಪಿಯ ಶಾಸಕ ರಘುಪತಿ ಭಟ್‌ರ ಪತ್ನಿ ಪದ್ಮಪ್ರಿಯಾ ನಾಪತ್ತೆ ಮತ್ತು ಸಾವಿನ ಪ್ರಕರಣ.

Saturday, May 14, 2011

ನಾನೇನು ಮಾಡಲಿ?

ನಿರೀಕ್ಷೆ, ಕಾತರ ಇತ್ತು
ಮಿಗಿಲೆತ್ತರ, ಮುಗಿಲೆತ್ತರ

ಕಾಲದ ಉರುಳಿಗೆ ನೀನು
ತತ್ತರ, ನಾನೋ ನಿರುತ್ತರ
ನಾವಿಬ್ಬರು ಸೇರಿ
ನೀಡಲಾರದೆ ಹೋದೆವೆ ಉತ್ತರ?

ಆ ನಿಗೂಢ ಮೌನದ ಅಂಚಿನಿಂದ
ನಿನ್ನ ನೋವಿನ ಗರ್ಭದಿಂದ
ನನ್ನ ಅಸಹಾಯಕತೆಯ ಮಧ್ಯದಿಂದ
ಜೋತು ಬಿದ್ದಿದ್ದ ಬೆರಳುಗಳ
ಮಧ್ಯೆ 'ಸುಳಿ'ದಾಡುತ್ತಿದ್ದ ಗಾಳಿಯ ಪರಿಮಳದಿಂದ
ಆ ಗಾಳಿ ನನ್ನ ಚರ್ಮದ ಕಣಕಣಗಳಿಗೆ ಸೋಕಿ
ಹುಟ್ಟಿಸಿದ ರೋಮಾಂಚನದಿಂದ
ಆ ಅರೆ ಪ್ರಜ್ಞಾವಸ್ಥೆಯ ಮರ್ಮಕ್ಕೆ
ಹುಟ್ಟಿಕೊಂಡ ಶಿಶುವಿಗೆ
ನಾಮಕರಣ ಮಾಡಲಾಗದೇ ಸೋತ
ಅನೇಕಾನೇಕ ಕ್ಷಣಗಳಿಂದ...

ನನ್ನ ನಿನ್ನ ನಡುವೆ ಅಲೆಅಲೆಯಾಗಿ
ಸಂಚರಿಸಿ, ವಿಹಾರಿಸಿ, ಕೆಣಕಿ, ಕೆಡವಿ
ಬಂಧಿಸಿಟ್ಟ ಅದೇನೋ ಇತ್ತಲ್ಲ...
ಅದೇ ಏನೂ?
ನನಗಂತೂ ಗೊತ್ತಿಲ್ಲ, ನಿನಗೆ?

ಇಂದು ದಾರಿಗೆ ತಿರುವು, ಕಣ್ಣ ಮುಂದೆ, ಹಿಂದೆ,
ಅತ್ತ, ಇತ್ತ ಗೊಂದಲಗಳ ಹರವು
ನನ್ನ ಹೆಜ್ಜೆ ಎತ್ತ? ನಿನ್ನ ಹೆಜ್ಜೆ ಖಚಿತ
ಎದೆಯ ಚಿಟ್ಟೆ ಹಾರ ಬಯಸುತ್ತೇ ನಿನ್ನ ಸುತ್ತ
ಆ ಚಿಟ್ಟೆಗೋ ನೀನೇ ಉಸಿರು
ನೀನೋ ಉರಿಸಿರುವೆ ಕೊಳ್ಳಿ, ಬಿದ್ದ ಬೆಂಕಿಯಿಂದಲೋ?
ಅಲ್ಲ, ಬೆಂಕಿ ಹಾಕಲೋ?
ಚಿಟ್ಟೆಯ ಉಸಿರು ಗಟ್ಟುತ್ತಿದೆ...!

ಕನಸುಗಳು ಜರ್ಝರಿತ, ಬಯಕೆಯ ಕಾಲು ಮುರಿತ
...ಡಬ್...ಡಬ್....ಡಅಅಅಅಬ್... ಎದೆಯಲ್ಲಿ ನಿನ್ನದೆ
ಮಿಡಿತ, ಊಹುಂ... ಆದರೂ ಇನ್ನೂ ಆಗಿಲ್ಲ ನಿನ್ನ
ಪ್ರೀತಿಯ ಮೇಲೆ ಕಡಿತ, ಎದೆಯೊಳಗೆಯೇ ಹಾಗೆಯೇ
ಇದೆ ನೆನಪುಗಳ ಕಡತ...

ಈಗ ಹುಟ್ಟಿಕೊಳ್ಳುತ್ತಿದೆ ಭಯ, ಆತಂಕ
ಅನಿಸುತ್ತಿದೆ, ಅಲ್ಲೇ ಎಲ್ಲೋ ಅಥವಾ ನಿನ್ನೊಳಗೆಯೇ ನಿಂತಿದ್ದಾನೆ
ನಿನ್ನೊಳಗಿನ ನಿನ್ನನ್ನು
ಸೂರೆ ಹೊಡೆಯುವ ಹಂತಕ...!

ಅವನೆದುರು ಹೋರಾಡೋಣ ಎಂದರೆ ನಾ
ಬಲಹೀನ...
ನನ್ನ ಬಲವೂ ನೀನೇ... ಒಲವೂ ನೀನೇ
ಆಗಿರೋಳು ತಾನೇ... ನೀನೇ ಜೊತೆಗಿಲ್ಲ
ಎಂದ ಮೇಲೆ...
ಇನ್ನಲ್ಲಿಯ ಬಲವು?
ಇನ್ನೆಲ್ಲಿಯ ಒಲವು?

ಈಗ ಯುದ್ಧಭೂಮಿಗೆ ಬೆನ್ನು ಹಾಕಿದ್ದೇನೆ
ಹೇಡಿಯಾಗಿ ಅಲ್ಲ, ಹೊಡಿಬಡಿಯುವ ತಾಕತ್ತಿಲ್ಲವೆಂದೂ
ಅಲ್ಲ; ಯಾರಿಗಾಗಿ, ಯಾಕಾಗಿ ಹೋರಾಡಲಿ
ಎಂಬ ವೈರಾಗ್ಯದಿಂದ

ಮತ್ತೇ... ನನ್ನನ್ನು ಯುದ್ಧ ಮಾಡಲು ಪ್ರೇರೆಪಿಸುವ
ಕೃಷ್ಣ... ನೀನು.. ನಿನಗೆಯೇ ಯುದ್ಧ ಬೇಡವಂತೆ
ನೀನೇ ಈಗ 'ಬುದ್ಧಂ ಶರಣಂ ಗಚ್ಚಾಮಿ...'
ಸ್ಮರಣೆ ಮಾಡುತ್ತಿರಲು... ನಾನೇನು ಮಾಡಲಿ...?

Friday, May 6, 2011

ಪ್ರೀತಿಯೂ... ವಿರಹವೂ

ಪ್ರೀತಿಯಿಂದ ಅನ್ನುವ ಸಾಲುಗಳ
ಬರೆಯದೆ ಇನ್ನೇನು ಬರೆಯಬಹುದು ನಾನು?
ಒಂದು ವೇಳೆ ಬೇರೊಂದು ಪದ ಬರೆದರೆ
ಎದೆ ತುಂಬಿ ಪ್ರವಾಹವಾಗಿರುವ ಪ್ರೀತಿಗೆ
ಬರ ಬಂದು ಬಿಡಬಹುದೇನೋ

ಪ್ರೀತಿಯಿಲ್ಲದೆ, ಹೃದಯ ತುಂಬ
ಒಲುಮೆ ನಲಿಯದೆ
ದೇಹ, ಮನ ತುಂಬಿ ಪ್ರೀತಿ
ಹೊರ ಚೆಲ್ಲುತ್ತಿತ್ತೇ?

ಈ ಅಭಾವ
ಕಾಲದಲ್ಲೂ, ನಿರ್ಭಾವ ಮೊಗದಲ್ಲೂ
ಮುಷ್ಠಿ ಪ್ರೀತಿ ನಿನಗಾಗಿ
ಮೀಸಲಾಗಿರುತ್ತಿತ್ತೆ?

ಅಗಣಿತ ತಾರೆಗಳು; ನೆಲೆ ಕಾಣದ ತೆರೆಗಳು
ಆ ದೇವರಲ್ಲಿ ನನ್ನ ಮೊರೆಗಳು; ನಿನ್ನ ನೆನಪಿನ ಸೆರೆಗಳು
ಉರಿದ ಎದೆಯ ಧರೆ; ನಿನಗೆ ಕೇಳಿಸದ ನನ್ನ ಕರೆ
ಗೆಳತಿ, ನಿನ್ನೆದೆಯ ಅರೆತೆರೆ, ಮೇರೆ ಮೀರಿ ಹರಿದು
ನಿನ್ನ ತೋಯಿಸುವುದು ನನ್ನ ಪ್ರೀತಿಯ ತೊರೆ

ಆದರೇನು? ನಿನಗೆ ಅದು ಬೇಕಾಗಿಲ್ಲ
ಮತ್ತೇನು? ಇದೂ ಬೇಕಾಗಿಲ್ಲ
ನನ್ನದೋ ಬದುಕು ಮುಕ್ಕಾಲು
ನಿನಗೋ ಒಲುಮೆ ಮುಕ್ಕಾಲು
ಈಗ ಸಾಗಬೇಕಿದೆ ಬದುಕ ನಾವೆಯಲ್ಲಿ
ಅಲ್ಲೋ ನೀರು ಮೊಣಕಾಲು

ಪ್ರೀತಿಯಿಲ್ಲದೆ ಇರುತ್ತಿದ್ದರೆ
ನಮ್ಮ ನಡುವೆ ಏನಿರುತ್ತಿತ್ತು?
ಉತ್ತರ ಸರಳ ಮತ್ತು ವಿರಳ
ಏನಿಲ್ಲ...!
ಏನಿಲ್ಲ... ಹಾಗೆಂದರೆ
ಆ ನಾಟಕಗಳು, ಬಯ್ಗಳು, ನೋವುಗಳು, ನಲಿವುಗಳು,
ಕಣ್ಣೆವೆಯ ಮಿಲನ, ಮನ ಮನದ ಸಮ್ಮಿಲನ
ಮಾತು ನಿಂತಾಗ ಆಗೋ ತಲ್ಲಣ, ಮಾತಿಗೆ ಮಾತು
ಬೆರೆತಾಗ ಧಿಂತನನ ಧಿಂತನನ
ಅವು ಇದ್ದದಾದರೂ ಎಲ್ಲಿ?

ಪ್ರೇಮ ಚೈತ್ರ, ನೆನಪು ವಸಂತ,
ನೀನೋ ಶಿಶಿರ, ನೀನು ನಿಮಿಷ, ನೀನೇ ಆಗಿರಬೇಕು ಕ್ಷಣ
ನಾನೋ ಕಾಲ!
ನಿನ್ನ ಹೆಸರು ನನ್ನೊಡನೇ
ಅಚ್ಚಾಗದಿದ್ದರೆ ನನಗೆ
ಗುರುತೇ ಇಲ್ಲ,
ಸೆಳೆತವೂ ಇಲ್ಲ, ಮತ್ತೇನೂ ಇಲ್ಲ...
ನಿಜ ಹೇಳಬೇಕೆಂದರೆ, ನನಗೇನೂ ಬೇಕಾಗಿಯೂ ಇಲ್ಲ...!

ಗೆಳತಿ, ಗುರುತಾಗು, ಎದೆಯ ಚಂದಿರನನ್ನು
ನಿನ್ನ ಸೆರಗಲ್ಲಿ ಬಚ್ಚಿಟ್ಟು, ಅದಕ್ಕೋ ಪ್ರೀತಿಯ ಕಾವಿಟ್ಟು, ತುಟಿಗೆ
ತುಟಿಯ ಸಲ್ಲಾಪ ಕಲಿಸಿ, ನೋವ ಆಲಾಪಕ್ಕೆ ವಿರಾಮದ ಪಾಠ ಮಾಡಿ
ಪ್ರಣಯದ ಹೂದೋಟಕ್ಕೆ ನೀರುಣಿಸಿ
ನನ್ನೆದೆಯ ಸಸಿಯಲ್ಲಿ ನಳನಳಿಸಿ...