Saturday, February 13, 2010

ಕತ್ತಲ ಕೋಣೆ ಸೇರಿದ ಛಾಯಾಚಿತ್ರ ಮಾರಾಟಗಾರರು!

   ಮಾನವ ಹೊಟ್ಟೆಪಾಡಿಗಾಗಿ ಹತ್ತಾರು ಕೆಲಸ ಅಥವಾ ಉದ್ಯೋಗ ಮಾಡುತ್ತಿರುತ್ತಾನೆ. ಅವುಗಳಲ್ಲಿ ಕೆಲವು ಸಾಂಪ್ರದಾಯಿಕ ಕೆಲಸಗಳಾಗಿದ್ದು ಅವುಗಳಿಗೆ ಸಾಂಸ್ಕ್ರತಿಕ ಮಹತ್ವ ಮತ್ತು ಗುರುತು ಇರುತ್ತದೆ.
  
   ಇನ್ನು ಕೆಲ ಉದ್ಯೋಗಗಳು ಅಧುನಿಕತೆಯ ಕೊಡುಗೆ ಎಂದು ಪರಿಗಣಿಸುವ ರೀತಿಯದ್ದು. ಈ ಕೆಲಸಗಳಿಗೆ ಹೆಚ್ಚು ಸಾಮಾಜಿಕ ಗೌರವ ಮತ್ತು ಅದಾಯ ಇರುತ್ತದೆ. ಆದರೆ ಈ ಎರಡರ ಮಧ್ಯೆ ಕೆಲ ಉದ್ಯೋಗಗಳಿರುತ್ತವೆ. ಅವುಗಳು ಅಧುನಿಕತೆಯ ಕೊಡುಗೆಗಳಾದರೂ ಅವಕ್ಕೆ ಸಮಾಜದಲ್ಲಿ ಗೌರವ ಮತ್ತು ನಿಶ್ಚಿತ ಅದಾಯ ಇರುವುದಿಲ್ಲ. ಇಂತಹ ಉದ್ಯೋಗಗಳಲ್ಲಿ ನಿರತರಾಗಿರುವವರಿಗೆ ಯಾವುದೇ ಭದ್ರತೆಗಳಿರುವುದಿಲ್ಲ. ಯಾಕೆಂದರೆ ಅಧುನಿಕತೆ ಎಂಬುದು ತುಂಬ ತುಂಬ ಚಲನಶೀಲ. ಅಲ್ಲಿ ನಿನ್ನೆಯ ಹೊಸತು ಇಂದಿನ ಹಳತು ಎಂಬ ಸ್ಥಿತಿ. ಅದಕ್ಕಿಂತ ಹೆಚ್ಚಾಗಿ ಇಂದು ಅಧುನಿಕತೆ ಎಂಬುದು ಒಬ್ಬ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿಸುವ ಆಥವಾ ಅವಲಂಬಿಸುವುದಾದರೆ ದೊಡ್ಡ ದೊಡ್ಡ ಕಂಪೆನಿಗಳನ್ನೇ ಅವಲಂಬಿಸುವಂತೆ ಮಾಡುವ ಗುಪ್ತ ಅಜೆಂಡಾ ಹೊಂದಿದೆ. ಅದ್ದರಿಂದ ಈ ಅಧುನಿಕತೆ ಕೊಡುಗೆಗಳನ್ನೇ ನಂಬಿ ಬದುಕು ಕಟ್ಟ ಹೊರಟ್ಟಿದ್ದ ಬಹಳಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಬೀಳುತ್ತಿದ್ದಾರೆ.

   ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಛಾಯಾಚಿತ್ರ ಮಾರಿ ಬದುಕ ಬಂಡಿ ಎಳೆಯುತ್ತಿದ್ದವರ ಕಥೆ.

   ಕೆಲ ವರ್ಷಗಳ ಹಿಂದೆ ನೀವು ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೂ ಇಂತವರು ದಂಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ’ಇಪ್ಪತ್ತು ರೂಪಾಯಿಗೆ ೧೦ ಪೋಟೋ’ ಎಂದು ಬೊಬ್ಬೆ ಹಾಕುತ್ತ, ’ನಿಮ್ಮ ಭೇಟಿಯ ನೆನಪಿಗೆ ಇರಲಿ’ ಎಂದು ಹೇಳುತ್ತ ಪೋಟೋ ಕೊಟ್ಟು ನಮ್ಮ ನೆನಪಿನ ಮತ್ತು ಅವರ ಅನ್ನದ ಬುತ್ತಿ ತುಂಬಿಸಿ ಕೊಳ್ಳುತ್ತಿದ್ದರು.

   ಅದರಲ್ಲೂ ಮೈಸೂರು, ನಂಜನ ಗೂಡು, ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್, ಬೇಲೂರು, ಹಳೆಬೀಡು, ಬಾದಾಮಿ, ಹಂಪಿಗಳಲ್ಲಿ ಇಂತಹವರ ಸಂಖ್ಯೆ ಬಹಳಷ್ಟಿತ್ತು.

   ಈಗ ಆ ನೆನಪಿನ ಪಳೆಯುಳಿಕೆಯೆಂಬಂತೆ ಕೆಲ ಮಂದಿ ಮಾತ್ರ ಈ ಕೆಲಸ ನಿರತರಾಗಿದ್ದಾರೆ. ಅದೂ ಒಲ್ಲದ ಮನಸ್ಸಿನಿಂದ!

   ಇದಕ್ಕೆಲ್ಲ ಕಾರಣ ಡಿಜಿಟಲ್ ಕ್ಯಾಮರಾ ತಂದಿಟ್ಟ ಪೋಟೊ ಕ್ರಾಂತಿ!

   ಮ್ಯೆಸೂರಿನ ಜಗದ್ವಿಖ್ಯಾತ ಚಾಮುಂಡೇಶ್ವರಿ ದೇಗುಲದ ಮುಂದೆ ಕಳೆದ ೧೫ ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡಿರುವ ಮಣಿಕಂಠರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, ಹಿಂದೆ ನಮಗೆ ದಿನಕ್ಕೆ ೩೦೦ ರೂಪಾಯಿಗಳಷ್ಟು ವ್ಯಾಪಾರವಾಗುತ್ತಿತ್ತು, ಈಗ ೧೦೦ ರೂ ಆದರೆ ಅದೇ ಹೆಚ್ಚು. ಈಗ ಜನರು ತಮಗೆ ಬೇಕಾದ ಚಿತ್ರಗಳನ್ನು ತಾವೇ ತೆಗೆದುಕೊಂಡು ಹೋಗುತ್ತಿದ್ದಾರೆ, ಇದರಿಂದ ನಮ್ಮ ಹೊಟ್ಟೆಗೆ ತಣ್ಣೀರೇ ಗತಿ ಎಂಬಂತಾಗಿದೆ

   ಇಂದು ಮೂರರ ಹರೆಯದ ಮಗುವಿನಿಂದ ಹಿಡಿದು ೯೦ರ ಮುದುಕನ ವರೆಗೆ ಎಲ್ಲರೂ ಡಿಜಿಟಲ್ ಕ್ಯಾಮೆರ ಬಳಸುತ್ತಿದ್ದಾರೆ. ಅಲ್ಲಿ ತಮಗೆ ಬೇಕಾದ ಪೋಟೋ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುತ್ತದೆ ಹಾಗೆಯೇ ಬೇಡದ ಪೋಟೋಗಳನ್ನು ನಿವಾಳಿಸಿಕೊಳ್ಳಬಹುದು. ಇದರಿಂದ ನಮಗೆ ವೈಯುಕ್ತಿಕವಾಗಿ ತುಂಬ ಲಾಭವಿದೆ. ಆದರೆ ಸಾಮಾಜಿಕವಾಗಿ ನೋಡಿದಾಗ ನೂರಾರು ಕುಟುಂಬಗಳು ಬೇರೊಂದು ಉದ್ಯೋಗವನ್ನರಸ ಬೇಕಾಗಿ ಬಂದಿದೆ. ಅಲ್ಲೊಂದು ಸ್ಥಿತ್ಯಂತರವೇ ನಡೆದು ಹೋಗಿದೆ.

   ಇದೇ ವೃತ್ತಿ ನಿರತ ಗೋವಿಂದ ರಾಜುವನ್ನು ಮಾತನಾಡಿಸಿದಾಗ, ನಮಗೆ ಬೇರೊಂದು ವೃತ್ತಿ ಮಾಡೋಣ ಎಂದರೆ ಅದು ಗೊತ್ತಿಲ್ಲ, ಈ ಕೆಲಸ ನಂಬಿದರೆ ಬದುಕು ಸಾಗೋದಿಲ್ಲ, ಒಟ್ಟಿನಲ್ಲಿ ನಮಗೆ ಏನೂ ಮಾಡಬೇಕೆಂದೇ ಗೊತ್ತಾಗುತ್ತಿಲ್ಲ.

   ಈ ಪೋಟೋ ಮಾರುತ್ತಿದ್ದ ಪರಂಪರೆ ಒಳ್ಳೆದು ಅಂತ ನಾನು ಹೇಳುತ್ತಿಲ್ಲ, ಇವರಿಂದ ಮೋಸ ಹೋದವರು ಮತ್ತು ಬೈಗುಳ ತಿನ್ನಬೇಕಾದ ಪ್ರಸಂಗ ಎದುರಿಸಿದ ಅನೇಕ ಸಂದರ್ಭಗಳು ಎದುರಾದದ್ದು ಇದೆ. ಆದೇನೇ ಆಗಿದ್ದರೂ ಕೂಡ ನಮ್ಮ ಹಿಂದಿನ ಎರಡು ಪೀಳಿಗೆಯ ಪ್ರವಾಸಕ್ಕೆ ಮತ್ತದರ ನೆನಪಿಗೆ ತಮ್ಮದೆ ಕೊಡುಗೆ ನೀಡಿದ್ದ ವೃತ್ತಿಯೊಂದು ನಮ್ಮ ಕಣ್ಣೇದುರೇ ಕಾಲಗರ್ಭ ಸೇರುತ್ತಿರುವುದು ಮಾತ್ರ ದಿಟ.

No comments: