ಕರ್ನಾಟಕದ ಕ್ರಿಕೆಟಿಗರು ಯಾವ ಪಾಪ ಮಾಡಿದ್ದಾರೆ?
ರಾಜ್ಯದ ಲಕ್ಷ ಲಕ್ಷ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು.
ಈ ವರ್ಷದ ಆರಂಭದಿಂದಲೇ ರಾಜ್ಯ ಕ್ರಿಕೆಟ್ ಒಂದರ ಮೇಲೊಂದು ಅಘಾತ ಅನುಭವಿಸುತ್ತಿದೆ. ದೇಶದ ಪ್ರತಿಷ್ಠಿತ ಟೂರ್ನಿ ರಣಜಿ ಟ್ರೋಪಿಯ ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಬರೋಡ ತಂಡದೆದುರು ಅಘಾತಕಾರಿಯಾಗಿ ಮಕಾಡೆ ಮಲಗಿತು. ಅಮೇಲೆ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ‍್ಸ್ ಬ್ಯಾಂಗಳೂರು’ ರಾಜ್ಯದ ಅಭಿಮನ್ಯು ಮಿಥುನ್‌ರನ್ನು ಹೊರತುಪಡಿಸಿ ಯಾವೊಬ್ಬ ಕ್ರಿಕೆಟಿಗನನ್ನು ಉಳಿಸಿಕೊಳ್ಳಲು ಮನಸ್ಸು ಮಾಡಲಿಲ್ಲ. ಈ ಎಲ್ಲ ಕೆಟ್ಟ ಬೆಳವಣಿಗೆಗಳಿಗೆ ಮುಳ್ಳಿನ ಕಿರೀಟವಿಟ್ಟಂತೆ ಈ ಬಾರಿ ಭಾರತ ಉಪಖಂಡದಲ್ಲಿ ಫೆಬ್ರುವರಿ ೧೯ರಿಂದ ನಡೆಯುವ ಏಕದಿನ ಕ್ರಿಕೆಟ್‌ನ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಗೆ ಸ್ಥಾನ ಸಿಕ್ಕಿಲ್ಲ!
ಈ ಮೂರು ಕೆಟ್ಟ ಬೆಳವಣಿಗೆಗಳ ಹಿಂದೆಯೂ ರಾಜ್ಯದ ಆಟಗಾರರ ಸಾಮರ್ಥ್ಯ, ಪ್ರತಿಭೆಯನ್ನು ಮೀರಿದ ಸಂಗತಿಗಳು ಪ್ರಮುಖ ಪಾತ್ರ ವಹಿಸಿರುವುದು ಖೇದಕರ. ೧೯೭೫ರಿಂದ ಹಿಡಿದು ಇಲ್ಲಿಯ ತನಕ ನಡೆದಿರುವ ೯ ಏಕದಿನ ವಿಶ್ವಕಪ್‌ನಲ್ಲಿ ಕರ್ನಾಟಕದ ಒಬ್ಬ ಕ್ರಿಕೆಟಿಗನಾದರೂ ಭಾರತ ತಂಡದಲ್ಲಿರುತ್ತಿದ್ದರು. ಅಂದರೆ ಮೊಟ್ಟ ಮೊದಲ ಬಾರಿಗೆ ಕನ್ನಡಿಗನಿಲ್ಲದ ವಿಶ್ವಕಪ್ ತಂಡ ಇದಾಗಿದೆ!
೧೯೯೯ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ರಾಜ್ಯದ ೪ ಮಂದಿ ಕ್ರಿಕೆಟಿಗರಿದ್ದರೆ, ಅನಂತರ ನಡೆದ ಎರಡು ವಿಶ್ವಕಪ್‌ಗಳಲ್ಲಿ ರಾಜ್ಯದ ೩ ಮಂದಿ ಆಡಿದ್ದರು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ತಂಡದ ಶೇ. ೨೦ ಭಾಗ ರಾಜ್ಯದ ಆಟಗಾರರಿದ್ದರು. ೨೦೦೭ ಮತ್ತು ೨೦೧೦ರಲ್ಲಿ ನಡೆದ ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ಕ್ರಮವಾಗಿ ರಾಜ್ಯದ ರಾಬಿನ್ ಉತ್ತಪ್ಪ ಮತ್ತು ಆರ್. ವಿನಯ್ ಕುಮಾರ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ೨೦೦೯ರಲ್ಲಿ ರಣಜಿ ಚಾಂಪಿಯನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ, ಪ್ರಸಕ್ತ ರಣಜಿ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರಾಜ್ಯ ತಂಡ ಆರ್ಹವಾಗಿ ಪ್ರಶಸ್ತಿ ಗೆಲ್ಲಬೇಕಿತ್ತು. ಆದರೆ ಸೆಮಿಫೈನಲ್‌ನಲ್ಲಿ ಬರೋಡ ತೋಡಿದ ಖೆಡ್ಡಾಕ್ಕೆ ಬಿದ್ದು ಒದ್ದಾಡಬೇಕಾಯಿತು. ರಾಜ್ಯದ ಆಟಗಾರರಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆ ಇದ್ದರೆ ರಾಜ್ಯ ತಂಡ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದೂವರೆ ದಶಕದ ಹಿಂದೆ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ರಾಜ್ಯದ ಆರು ಮಂದಿ ಇರುತ್ತಿದ್ದರು. ಇಂದು ರಾಷ್ಟ್ರೀಯ ತಂಡವನ್ನು ಮೂರು ಬಗೆಯ ಕ್ರಿಕೆಟ್‌ನಲ್ಲೂ (ಟೆಸ್ಟ್, ಏಕದಿನ, ಟಿ-ಟ್ವೆಂಟಿ) ಪ್ರತಿನಿಧಿಸುವ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಟೆಸ್ಟ್ ತಂಡದಲ್ಲಿ ರಾಹುಲ್ ದ್ರಾವಿಡ್ ಇದ್ದರು ಅವರ ಕುರ್ಚಿ ಕೂಡ ಅಲುಗಾಡುತ್ತಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನಿಡುವ ನೆಪದಲ್ಲಿ ಅವರನ್ನು ಏಕದಿನ ತಂಡದಿಂದ ಸತತವಾಗಿ ಹೊರಗಿಡುತ್ತಿದ್ದರಿಂದ ಅವರು ಮತ್ತೇ ತಂಡ ಸೇರಿಕೊಳ್ಳುತ್ತಾರೆ ಎಂದು ಭಾವಿಸುವ ಸ್ಥಿತಿ ಇರಲಿಲ್ಲ. ಅವರು ಮೊದಲು ವಿಶ್ವಕಪ್‌ಗಾಗಿ ಘೋಷಿಸಿದ್ದ ೩೦ ಆಟಗಾರರ ಪಟ್ಟಿಯಲ್ಲೇ ಸ್ಥಾನ ಪಡೆದಿರಲ್ಲಿಲ್ಲ.
ಇನ್ನುಳಿದಂತೆ ಪ್ರಸಕ್ತ ರಾಜ್ಯ ರಣಜಿ ತಂಡ ಪ್ರತಿನಿಧಿಸುವ ಆಟಗಾರರಲ್ಲಿ ಸುನಿಲ್ ಜೋಷಿ, ರಾಬಿನ್ ಉತ್ತಪ್ಪ, ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದರಲ್ಲಿ ಜೋಷಿ ಮುಂದೆದೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಉಳಿದ ಮೂವರು ಆಟಗಾರರೂ ಯಾವಾಗ ಬೇಕಾದರೂ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರತಿಭೆ ಹೊಂದಿದ್ದಾರೆ. ಆದರೆ ಕೆ. ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ ಮಾತ್ರ ರಾಜ್ಯದ ಕ್ರಿಕೆಟಿಗರನ್ನು ಮೂಲೆ ಗುಂಪು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುವುದರಿಂದ ಅದೂ ಕೂಡ ಮರೀಚಿಕೆಯಾಗಿಬಿಟ್ಟಿದೆ. ಇಲ್ಲವೆಂದರೆ, ಕಳೆದ ವರ್ಷದ ಮಧ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಭಿಮನ್ಯು ಮಿಥುನ್‌ರನ್ನು ಹೊರಗಿಟ್ಟು ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಉಮೇಶ್ ಯಾದವ್ ಮತ್ತು ಜೈದೇವ್ ಉನ್ಕದತ್ ಎಂಬ ಮಾಮೂಲಿ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾದರೂ ಯಾವ ಮಾನದಂಡದ ಮೇಲೆ? ಐಪಿಎಲ್ ಸೇರಿದಂತೆ ರಣಜಿ ಟ್ರೋಪಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಹಾಗೂ ತಾನಾಡಿದ ಏಕೈಕ ಟಿ-ಟ್ವೆಂಟಿ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿನಯ್ ಕುಮಾರ್‌ನನ್ನು ಏಕೆ ಆಯ್ಕೆ ಮಾಡಿಲ್ಲ?
ಸ್ಪೋಟಕ ಬ್ಯಾಟ್ಸ್‌ಮನ್‌ಗಳ ಅಗತ್ಯ ಬಿದ್ದರೆ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ರಾಬಿನ್ ಉತ್ತಪ್ಪರನ್ನು ಮೊದಲು ಘೋಷಿಸಿದ್ದ ೩೦ ಜನರ ಪಟ್ಟಿಗೂ ಪರಿಗಣಿಸಿರಲಿಲ್ಲ. ಪುಣೆ ವಾರಿಯರ‍್ಸ್ ತಂಡ ಐಪಿಎಲ್ ಹರಾಜಿನಲ್ಲಿ ಎರಡನೇ ಗರಿಷ್ಠ ಮೊತ್ತ ನೀಡಿ ಅವರನ್ನು ಖರೀದಿಸಿದೆ. ಇದು ಅವರ ಮಹತ್ವವನ್ನು ತೋರಿಸುತ್ತದೆ. ಉತ್ತಪ್ಪರಲ್ಲಿ ಸ್ಥಿರತೆಯ ಕೊರತೆಯಿದೆ ಎಂಬುದು ಒಪ್ಪಿಕೊಳ್ಳುವ ವಿಚಾರ. ಇದೇ ಮಾನದಂಡವಾದರೆ ವಿಶ್ವಕಪ್‌ಗೆಂದು ಘೋಷಿಸಿರುವ ೧೫ ಜನರ ತಂಡದಲ್ಲಿರುವ ಪ್ರತಿಯೊಬ್ಬರಲ್ಲೂ ಈ ಸಮಸ್ಯೆಯಿದೆ. ಅದರಲ್ಲೂ ಆಕ್ರಮಣಕಾರಿ ಆಟಗಾರರ ವಿಚಾರದಲ್ಲಂತೂ ಇದು ಇನ್ನಷ್ಟು ಸತ್ಯ. ಆದರೂ ಉಳಿದವರನ್ನು ತೆಗೆದುಕೊಂಡು ಅವರಿಗೆ ಕೊಕ್ ಕೊಡಲಾಗಿದೆ ಎಂದರೆ ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕಾಗಿದ್ದ ಮತ್ತೊಬ್ಬ ರಾಜ್ಯದ ಆಟಗಾರ ಮನೀಷ್ ಪಾಂಡೆ. ಐಪಿಎಲ್‌ನಲ್ಲಿ ಶತಕ ಹೊಡೆದ ಮೊದಲ ಭಾರತೀಯ ಆಟಗಾರ ಈತ. ತನ್ನ ಪ್ರತಿಭೆಯ ಆಳವನ್ನು ತೆರೆದಿಟ್ಟು ಮೂರು ವರ್ಷಗಳಾಗುತ್ತ ಬಂದರು ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಅವರನ್ನು ಕೇಳುವವರಿಲ್ಲ್ಲ. ಈಗ ರಾಷ್ಟ್ರೀಯ ತಂಡಕ್ಕೆ ಬೌಲರ್‌ಗಳನ್ನು ಆಯ್ಕೆ ಮಾಡುವಾಗ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಕೂಡ ಪರಿಗಣಿಸುವ ವಿಚಿತ್ರ ಅಭ್ಯಾಸ ಶುರುವಾಗಿದೆ. ಆ ಮೂಲಕ ಆರ್. ಆಶ್ವಿನ್, ಪಿಯೂಷ್ ಚಾವ್ಲ, ಪ್ರವೀಣ್ ಕುಮಾರ್ ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ವಿನಯ್, ಪಾಂಡೆ ಮತ್ತು ಮಿಥುನ್ ಇವರಿಗಿಂತ ಚೆನ್ನಾಗಿ ಬ್ಯಾಟ್ ಬೀಸಬಲ್ಲರು ಎಂಬುದು ಈಗಾಗಲೇ ಸಾಬೀತಾಗಿದೆ. ಆದರೂ ಅವರನ್ನು ಪರಿಗಣಿಸಿಲ್ಲ.
ಭಾರತೀಯ ಆಯ್ಕೆ ಸಮಿತಿಯ ಮುಖ್ಯಸ್ಥ ತಮಿಳುನಾಡಿನವರಾದ ಕೆ. ಶ್ರೀಕಾಂತ್ ತನ್ನ ತವರು ನೆಲದ ಕ್ರಿಕೆಟಿಗರಿಗೆ ನೀಡುತ್ತಿರುವ ಆದ್ಯತೆ ಮತ್ತು ಇತರ ದಕ್ಷಿಣ ಭಾರತದ ಕ್ರಿಕೆಟಿಗರತ್ತ ಅವರ ಮಲತಾಯಿ ಧೋರಣೆ ಗುಟ್ಟಾಗಿಯೇನೂ ಉಳಿದಿಲ್ಲ. ವಿಶ್ವಕಪ್‌ಗಾಗಿ ಘೋಷಿಸಲಾದ ತಂಡದಲ್ಲೂ ಅದು ಮತ್ತೊಮ್ಮೆ ಬಯಲಾಗಿದೆ. ಅವರ ಈ ಚಿತಾವಣೆಗಳಿಗೆ ಬಿಸಿಸಿಐಯ ಕಾರ್ಯದರ್ಶಿ ಅವರದ್ದೆ ನಾಡಿನವರಾದ ಶ್ರೀನಿವಾಸನ್‌ರ ಪೂರ್ಣ ಆಶಿರ್ವಾದವೂ ಇದೆ. ತಮಿಳುನಾಡಿನ ಕ್ರಿಕೆಟಿಗರು ಮತ್ತು ಐಪಿಎಲ್‌ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಆಟಗಾರರು ಸರಾಗವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಮುರುಳಿ ವಿಜಯ್, ಮನಪ್ರೀತ್ ಗೋನಿ, ಸುದೀಪ್ ತ್ಯಾಗಿ, ಆರ್. ಅಶ್ವಿನ್ ಹೀಗೆ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನೊಂದು ದುರಂತವೆಂದರೆ ಅವರು ತಮಿಳುನಾಡಿನ ಪ್ರತಿಭಾವಂತ ಕ್ರಿಕೆಟಿಗರಿಗೂ ಮಣೆ ಹಾಕುತ್ತಿಲ್ಲ. ಇಲ್ಲವೆಂದರೆ ಪ್ರಸಕ್ತ ತಮಿಳು ನಾಡಿನ ರಣಜಿ ತಂಡದಲ್ಲಿ ಆಡುವ ಎಸ್. ಬದ್ರಿನಾಥ್ ರಾಷ್ಟ್ರೀಯ ತಂಡದಲ್ಲಿ ಸಾಕಷ್ಟು ಅವಕಾಶ ಪಡೆಯಬೇಕಿತ್ತು.
ಇದೀಗ ತಮಿಳುನಾಡಿನ ಮುರುಳಿ ವಿಜಯ್ ಮತ್ತು ಆರ್. ಅಶ್ವೀನ್ ರಾಷ್ಟ್ರೀಯ ತಂಡದ ಒಳ ಹೊರಗೆ ಹೋಗುತ್ತಿದ್ದಾರೆ. ವಿಜಯ್ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿದ್ದರೂ ಕೂಡ ಏಕದಿನ ಮತ್ತು ಟ್ವೆಂಟಿ - ಟ್ವೆಂಟಿಯಲ್ಲಿ ವಿಫಲರಾಗಿದ್ದಾರೆ. ಆದರೆ ಅವರಿಗೆ ಸಿಗುವ ಅವಕಾಶಗಳ ಒರತೆ ಬತ್ತಿಲ್ಲ. ವಿಜಯ್‌ರ ಆಯ್ಕೆಗೆ ನೀಡುವ ಮಾನದಂಡ ಎಂದರೆ ಅವರು ಐಪಿಎಲ್‌ನಲ್ಲಿ ಗಳಿಸಿದ ಶತಕ. ಆದರೆ ಅದೇ ರೀತಿಯ ಶತಕವನ್ನು ಮನೀಷ್ ಪಾಂಡೆಯೂ ಐಪಿಎಲ್‌ನಲ್ಲಿ ಬಾರಿಸಿದ್ದಾರೆ. ಹಾಗೇ ಕಳೆದ ಎರಡು ರಣಜಿ ಋತುಗಳಲ್ಲೂ ಪಾಂಡೆ ರನ್ ಹೊಳೆಯನ್ನೇ ಹರಿಸಿದ್ದಾರೆ. ಹಾಗಿದ್ದ ಮೇಲೆ ವಿಜಯ್ ಮಾತ್ರ ಯಾಕೆ ಬೇಕು, ಪಾಂಡೆ ಮಾತ್ರ ಯಾಕೆ ಬೇಡ?
ಇನ್ನೂ ಒಂದೆರಡು ಪಂದ್ಯಗಳಿಂದ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯಲಾಗುವುದಿಲ್ಲ. ಅದ್ದರಿಂದ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಧೋನಿ, ರೋಹಿತ್ ಶರ್ಮ, ಯೂಸುಫ್ ಪಠಾಣ್‌ರಿಗೆ ಸತತವಾಗಿ ಅವಕಾಶ ನೀಡಿದ್ದಾಗ ಹೇಳಿದ್ದುಂಟು. ಆದರೆ ಈ ನುಡಿ ಮತ್ತು ನಡೆ ರಾಜ್ಯದ ಮಿಥುನ್, ವಿನಯ್‌ರಿಗೆ ಅನ್ವಯವಾಗಲಿಲ್ಲ. ಅವರು ಉತ್ತಮ ಪ್ರದರ್ಶನ ನೀಡಿದರೂ ಕೂಡ ಒಂದು ಪಂದ್ಯದ ಬಳಿಕ ರಾಷ್ಟ್ರೀಯ ತಂಡದಿಂದ ಗಂಟುಮೂಟೆ ಕಟ್ಟವಂತಾಗಿದೆ.
ಈ ಬಾರಿ ವಿಶ್ವಕಪ್‌ಗಾಗಿ ಆಯ್ಕೆ ಮಾಡಿದ ತಂಡದಲ್ಲಿನ ಎರಡು ಸ್ಥಾನಗಳು ಧೋನಿ ಮತ್ತು ಶ್ರೀಕಾಂತ್‌ರ ನಡುವಿನ ರಾಜಿ ಸೂತ್ರಕ್ಕೆ ಬಲಿಯಾಗಿದೆ. ಅಶ್ವಿನ್‌ನ ಬೆನ್ನಿಗೆ ನಿಂತ ಶ್ರೀಕಾಂತ್ ಅವರನ್ನು ೧೫ರ ಬಳಗದೊಳಗೆ ತಳ್ಳಿದ್ದರೆ, ನಾನೂ ಅವರಿಗಿಂತ ಕಡಿಮೆ ಇಲ್ಲ ಎಂದು ಪಿಯೂಷ್ ಚಾವ್ಲರನ್ನು ಧೋನಿ ವಿಶ್ವಕಪ್ ತಂಡದೊಳಗೆ ತುರುಕಿದ್ದಾರೆ.
ಇಬ್ಬರು ಬಲಗೈ ಆಫ್ ಸ್ಪಿನ್ನರ್‌ಗಳನ್ನು ಆಡಿಸುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿ. ಅಶ್ವಿನ್‌ರ ಬದಲು ಪ್ರಗ್ಯಾನ್ ಓಜಾರನ್ನು ಆಯ್ಕೆ ಮಾಡಿದ್ದರೆ ಅವರು ಆಫ್ ಸ್ಪಿನ್ನರ್ ಆಗಿದ್ದರು ಕೂಡ ಎಡಗೈ ಸ್ಪಿನ್ನರ್ ಆಗಿರುತ್ತಿದ್ದರಿಂದ ತಂಡದ ಸ್ಪಿನ್ ದಾಳಿಗೆ ವೈವಿಧ್ಯತೆ ಸಿಗುತ್ತಿತ್ತು. ಆದರೆ ಇಲ್ಲಿ ಅಶ್ವೀನ್‌ಗೆ ಮಣೆ ಹಾಕಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಸಾಮರ್ಥ್ಯ ಇನ್ನೂ ನಿಗೂಢವಾಗಿದೆ. ಚಾವ್ಲರ ಅಯ್ಕೆ ಮಾತ್ರ ಎಲ್ಲರನ್ನೂ ಸಖೇದಾಶ್ಚರ್ಯಗೊಳಿಸಿದೆ. ಕಳೆದ ಮೇ ತಿಂಗಳಲ್ಲಿ ಸುರೇಶ್ ರೈನಾ ನೇತೃತ್ವದಲ್ಲಿ ತನ್ನ ಎರಡನೇ ದರ್ಜೆ (ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು) ತಂಡವನ್ನು ಏಕದಿನ ತ್ರಿಕೋನ ಸರಣಿಯನ್ನಾಡಲು ಜಿಂಬಾಬ್ವೆಗೆ ಕಳುಹಿಸಲಾಗಿತ್ತು. ಆ ತಂಡದಲ್ಲೂ ಚಾವ್ಲ ಇರಲಿಲ್ಲ. ಅವರು ೨೦೦೮ನೇ ಜುಲೈ ಬಳಿಕ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಇಷ್ಟರವರೆಗೆ ಅವರು ಭಾರತದಲ್ಲಿ ಒಂದೇ ಒಂದು ಏಕದಿನ ಪಂದ್ಯ ಆಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರು ಪಂದ್ಯಗಳ (ಈ ಲೇಖನ ಅಚ್ಚಿಗೆ ಹೋಗುವ ಸಮಯದಲ್ಲಿ) ಮುಗಿದಿದ್ದರು ಅವರು ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಎಸೆತಗಳನ್ನು ಎದುರಿಸಲು ಇಂಗ್ಲೆಂಡ್, ಅಸ್ಟ್ರೇಲಿಯ, ವೆಸ್ಟ್ ಇಂಡೀಸ್ ತಂಡದ ಆಟಗಾರರು ಒದ್ದಾಡುತ್ತಾರೆ ಎಂದು ಧೋನಿ ಸಂಶೋಧಿಸಿದ್ದಾರೆ! ಆಗಿದ್ದರೆ ಈ ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯ ತಂಡಗಳು ಭಾರತ ಪ್ರವಾಸ ಕೈಗೊಂಡಿದ್ದಾಗ ಅವರನ್ಯಾಕೆ ಅಡಿಸಿರಲಿಲ್ಲ? ವಿಶ್ವಕಪ್‌ಗಾಗಿನ ಈ ಎರಡು ತಪ್ಪು ಆಯ್ಕೆಗಳು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬುದಕ್ಕೆ ಮೇರು ಉದಾಹರಣೆ. ಆದರೆ ಈ ಅಪಾರದರ್ಶಕತೆಗೆ ರಾಜ್ಯದ ಕ್ರಿಕೆಟಿಗರು ಬಲಿಯಗುತ್ತಿರುವುದು ನಮ್ಮ ದುರದೃಷ್ಟ.
೨೦೧೦ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ನಡೆದ ಸಂದರ್ಭದಲ್ಲಿ ಭಾರತ ಹೀನಾಯವಾಗಿ ನೆಲಕಚ್ಚಿತ್ತು. ಅಗ ಈ ಸೋಲಿನ ಬಗ್ಗೆ ನಡೆದ ಪೋಸ್ಟ್ ಮಾರ್ಟಂ ವರದಿಯಲ್ಲಿ ಭಾರತದ ಹೆಚ್ಚಿನ ಮತ್ತು ಪ್ರಮುಖ ಆಟಗಾರರು ಅಂತರರಾಷ್ಟ್ರೀಯ ಪಂದ್ಯವಾಡಲು ತಕ್ಕಷ್ಟು ದೈಹಿಕ ಕ್ಷಮತೆ ಹೊಂದಿರಲಿಲ್ಲ ಎಂಬುದು ಗೊತ್ತಾಗಿತ್ತು. ಈ ವಿಶ್ವಕಪ್‌ಗೂ ೪ ಮಂದಿಯನ್ನು ವಿಶ್ವಕಪ್ ಸಮಯಕ್ಕೆ ಸಮರ್ಥರಾಗಬಹುದು ಎಂಬ ಊಹೆಯ ಆಧಾರದಲ್ಲಿ ಆರಿಸಲಾಗಿದೆ. ಈವರಲ್ಲಿ ಮೂವರು ಭಾರತದ ಆಗ್ರ ಕ್ರಮಾಂಕದ ದಾಂಡಿಗರು.
ಈ ಬೆಳವಣಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸಾರಥ್ಯ ವಹಿಸಿರುವ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್‌ರ ಪಾಲಿಗೂ ಒಂದು ಎಚ್ಚರಿಕೆಯ ಘಂಟೆ. ಅವರು ರಾಜ್ಯದ ಮೂಲೆ ಮೂಲೆಯಲ್ಲೂ ಕ್ರಿಕೆಟ್ ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸ ಸಾಕಷ್ಟಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಆಯ್ಕೆ ಮಂಡಳಿ ಮಾಡಿದ ಎಡವಟ್ಟು ಕೈ ಮೀರಿದಾಗಿದ್ದರೂ ರಾಜ್ಯದ ಕ್ರಿಕೆಟ್ ಅಭಿವೃದ್ಧಿಯಲ್ಲಿ ದೂರಗಾಮಿ ಯೋಜನೆ ಹಾಕಿಕೊಂಡು ಅದರಂತೆ ಕಾರ್ಯನಿರ್ವಹಿಸುವ ಹೊಣೆ ಈಗ ಕೆಎಸ್‌ಸಿಎಯದ್ದು. ಅದು ಬೆಂಗಳೂರು ಕೇಂದ್ರಿತ ರಾಜ್ಯ ಕ್ರಿಕೆಟ್‌ನ್ನು ವಿಕೇಂದ್ರಿತಗೊಳಿಸಬೇಕಾಗಿದೆ ಆಗ ರಾಜ್ಯ ರಣಜಿ ತಂಡದ ಪ್ರತಿ ಸ್ಥಾನಕ್ಕೂ ೪ - ೫ ಸ್ಫರ್ಧಿಗಳು ಹುಟ್ಟಿಕೊಳ್ಳುತ್ತಾರೆ. ಆ ಸ್ಪರ್ಧೆಯಲ್ಲಿ ಜೊಳ್ಳೆಲ್ಲ ಹಾರಿ ಗಟ್ಟಿ ಕಾಳು ಮಾತ್ರ ಉಳಿಯುತ್ತದೆ. ಆ ರೀತಿ ಆಗಬೇಕಾದರೆ ರಾಜ್ಯದ ಎಲ್ಲ ಮೂಲೆಗಳಲ್ಲೂ ಅತ್ಯಾಧುನಿಕ ಕ್ರಿಕೆಟ್ ತರಬೇತಿ ಕೇಂದ್ರಗಳ ನಿರ್ಮಾಣವಾಗಬೇಕು. ಪ್ರತಿ ಆಯ್ಕೆಯಲ್ಲೂ ಪಾರದರ್ಶಕತೆ ತರಬೇಕು ಹಾಗೂ ವಶೀಲಿ ಬಾಜಿಗೆ ಅವಕಾಶ ನೀಡಬಾರದು.
ಅವರು ಕೆಎಸ್‌ಸಿಎಯ ಚುನಾವಣಾ ಪೂರ್ವ ಪ್ರಚಾರ ಸಂದರ್ಭಗಳಲ್ಲಿ ಈ ಹಿಂದಿನ ಆವಧಿಗಳಲ್ಲಿ ಆಗಿದ್ದ ತಪ್ಪುಗಳ ಬಗ್ಗೆ ಹಾಗೂ ರಾಜ್ಯ ಕ್ರಿಕೆಟ್ ಅಭಿವೃದ್ಧಿಗಾಗಿ ಅವಶ್ಯವಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದಿದ್ದುಂಟು. ಆಡಿದ ಮಾತುಗಳನ್ನು ಮಾಡಿ ತೋರುವ ಜವಾಬ್ದಾರಿ ಅವರ ಮೇಲಿದೆ.
ವಯಸ್ಸು ಉತ್ತಪ್ಪ, ವಿನಯ್, ಮಿಥುನ್ ಮತ್ತು ಪಾಂಡೆಯವರ ಪರವಾಗಿದೆ. ಮುಂದೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್‌ಗೆ ಕರ್ನಾಟಕದ ೩ ಮಂದಿಯಾದರೂ ಆಯ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಕರ್ನಾಟಕದ ಕ್ರಿಕೆಟ್ ಕಲಿಗಳು ಮುಂದೆ ತಾವಾಡುವ ಪ್ರತಿ ಪಂದ್ಯದಲ್ಲೂ ಅಮೋಘ ನಿರ್ವಹಣೆ ನೀಡಿ ಆಯ್ಕೆ ಮಂಡಳಿಗೆ ತಮ್ಮನ್ನು ಆಯ್ಕೆ ಮಾಡದೆ ಬೇರೆ ಆಯ್ಕೆಯೇ ಇಲ್ಲ ಎಂಬ ಸ್ಥಿತಿ ನಿರ್ಮಾಣ ಮಾಡಬೇಕಿದೆ.
No comments:
Post a Comment