Thursday, January 20, 2011

ಕಾಂಗ್ರೆಸ್‌ನಲ್ಲಿ ಬೆಂಕಿ ಜೆಡಿ(ಎಸ್)ಗೆ ಲಕ್ಕಿ!

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ತಲಾ ಮಟ್ಟದಲ್ಲಿ ರಾಜ್ಯದಲ್ಲಿ ತಲೆ ಹೋಗುವಂತಹ ರಾಜಕೀಯ ಬದಲಾವಣೆಗಳು ಆಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿವೆ. ಆದರೆ ರಾಜ್ಯ ಮಟ್ಟದಲ್ಲಿ ಕೆಲವರ (ಮೂರು ಪಕ್ಷದಲ್ಲೂ) ತಲೆ ಕೆಡಿಸುವ ಸಮೀಕರಣಕ್ಕೆ ಹೇತುವಾಗಿರುವುದು ಮಾತ್ರ ವಿಚಿತ್ರ.

ಅಂಕಿ ಅಂಶಗಳನ್ನು ಆಧಾರಿಸಿ ಹೇಳುವುದಾದರೆ ಬಿಜೆಪಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಮುಂದಿರುವುದು ನಿಜ. ಆದರೆ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದೇ ಆದರೆ ಬಿಜೆಪಿ ಈ ಚುನಾವಣೆಯನ್ನು ಸೋತಿದೆ ಎಂದು ಹೇಳಬಹುದು.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಬಿಜೆಪಿಯ ಪ್ರಗತಿಗೆ ಅಥವಾ ನಿರಂಕುಶತೆಗೆ ಅಂಕುಶವಾಗಿರುವುದು ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಎಂದು ಯಾರಾದರೂ ಭಾವಿಸಿದ್ದೇ ಆದರೆ ಅದು ಸಂಪೂರ್ಣ ತಪ್ಪು. ರಾಜ್ಯದಲ್ಲಂತೂ ಕಾಂಗ್ರೆಸ್ ಪಕ್ಷ ನಿಂತಲ್ಲೆ ಕೊಳೆಯುತ್ತಿದೆ. ಅದರ ಸಾರಥಿ ಬದಲಾದರು ಗತಿ ಬದಲಾಗಿಲ್ಲ. ಆ ಪಕ್ಷದಲ್ಲಿರುವವರು ಕೈಗೆ ಬಂದ ತುತ್ತಿಗೆ ಹತ್ತಾರು ಕೈಗಳು ಕೈ ಹಾಕಿ ಅದನ್ನು ಮಣ್ಣುಪಾಲು ಮಾಡುವಲ್ಲಿ ನಿಸ್ಸಿಮತೆಯನ್ನು ಸಂಪಾದಿಸಿದ್ದಾರೆ.

ಆದರೆ ರಾಜ್ಯದಲ್ಲಿನ ಬಿಜೆಪಿಗೆ ಒಂಚೂರಾದರೂ ಭಯವಿದ್ದರೆ ಅದು ಜೆಡಿಎಸ್ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯದ್ದು. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತವರ ಮನೆಯವರು ಹಾಗೂ ರಾಜ್ಯ ಸಚಿವ ಸಂಪುಟದಲ್ಲಿನ ಸಚಿವರುಗಳ 'ಭೂಲೀಲೆ'ಗಳು ಒಂದೊಂದಾಗಿ ಜಗಜಾಹೀರಾಗಲು ಕಾರಣರಾದವಲ್ಲಿ ಕುಮಾರಸ್ವಾಮಿ ಒಬ್ಬರು. ಅವರ ಪ್ರಯತ್ನಕ್ಕೆ ಈ ಪಂಚಾಯತ್ ಚುನಾವಣೆಗಳು ಸಾಧಾರಣ ಪ್ರತಿಫಲ ನೀಡಿದೆ. ಅದರೆ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ಕಸರತ್ತು ಮತ್ತು ದೇಶದ ರಾಜಕೀಯದಲ್ಲಿ ಅಗುತ್ತಿರುವ ಕೆಲ ಬೆಳವಣಿಗೆಗಳು ಕುಮಾರಸ್ವಾಮಿ ಮುಂಬರುವ ದಿನಗಳಲ್ಲಿ 'ಬಂಪರ್ ಬೆಳೆ' ಕಟಾವ್ ಮಾಡಲಿದ್ದಾರೆ ಎಂಬುದನ್ನು ನಂಬಲು ಕಾರಣಗಳನ್ನು ಒದಗಿಸಿ ಕೊಟ್ಟಿದೆ.

ಇಂದು ಕೇಂದ್ರದಲ್ಲಿನ ಯುಪಿಎ ಸರ್ಕಾರ ಹಗರಣ, ವಿಫಲತೆ ಮತ್ತು ಗೊಂದಲಗಳ ಗೂಡಾಗಿದೆ. ಯುಪಿಎ - ೨ ದೇಶದ ಜನರ ಪಾಲಿಗೆ ಮತ್ತು ಸ್ವತಃ ಸೋನಿಯಾ ಗಾಂಧಿಗೆ ದುಸ್ವಪ್ನವಾಗಿದೆ! ೨ಜಿ ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗೆ ಸಂಬಂಧಪಟ್ಟ ಹಗರಣಗಳು ಯುಪಿಎ ಮಧುಚಂದ್ರವನ್ನು ಕೊನೆಗೊಳಿಸಿದ್ದು ಮಾತ್ರವಲ್ಲದೆ ಕಾಂಗ್ರೆಸ್ ವಿರೋಧಿಗಳಿಗೆ ಅದನ್ನು ಹಣಿಯಲು ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಇನ್ನು ಹಣದುಬ್ಬರದಿಂದ ತತ್ತರಿಸಿರುವ ಜನತೆಯ ಸಹಾಯಕ್ಕೆ ಬರುವ ಯಾವೊಂದು ಪ್ರಯತ್ನವನ್ನು ಅದು ಮಾಡಿಲ್ಲ. ಹಾಗೇ ಅದು ಸದ್ಯದ ಮಟ್ಟಿಗೆ ತನ್ನ ಬತ್ತಳಿಕೆಯಲ್ಲಿ ದೇಶದ ಜನಸಾಮಾನ್ಯರನ್ನು ಮುಟ್ಟುವ ಯಾವೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಕೂಡ ಹೊಂದಿಲ್ಲ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಯಾವೊಂದು ಗೊಂದಲಗಳಿಲ್ಲದಿದ್ದರೂ ಕೂಡ ಬಾಹ್ಯವಾಗಿ ಅದು ಸಾಕಷ್ಟು ಸಮಸ್ಯೆಗಳನ್ನು ಹೊಂದಿದೆ.
ಕಾಂಗ್ರೆಸ್‌ನಲ್ಲಿನ ಈ ಬಾಹ್ಯ ಗೊಂದಲಗಳೇ ಕುಮಾರಸ್ವಾಮಿಯ ಭಾಗ್ಯದ ಬಾಗಿಲು ತೆರೆಯಬಲ್ಲುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಯುಪಿಎ - ೨ರಲ್ಲಿ ಕಾಂಗ್ರೆಸ್ ೨೦೫ ಶಾಸಕರನ್ನು ಹೊಂದಿ ಸದ್ಯದ ಮಟ್ಟಿಗೆ ಮಜಬೂತಾದ ಸ್ಥಿತಿಯಲ್ಲಿದೆ ಅದರೆ ಇದೇ ಮಾತನ್ನು ಮುಂದೆಯೂ ಹೇಳಲು ಸಾಧ್ಯವಿಲ್ಲ.

ಕಾಂಗ್ರೆಸ್ ಮೈತ್ರಿಕೂಟದ ಎರಡು ಮುಖ್ಯ ಪಕ್ಷಗಳೆಂದರೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ. ಈ ಎರಡು ಪಕ್ಷಗಳ ಜೀವ ಬೇರು ಇರುವ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆಗಳು ನಡೆಯಲಿದೆ. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆ ಆಡಗಿರದಿದ್ದರೂ ಕೂಡ ಅದರ ಈ ಮಿತ್ರಪಕ್ಷಗಳಿಗೆ ಮಾತ್ರ ಈ ಚುನಾವಣೆ ಅತೀ ನಿರ್ಣಾಯಕ.
ಮೊದಲಿಗೆ ಪಶ್ಚಿಮ ಬಂಗಾಳದಲ್ಲಿನ ಸ್ಥಿತಿ ಬಗ್ಗೆ ಗಮನ ಹರಿಸೋಣ. ಅಲ್ಲಿನ ಬಲಿಷ್ಠ ಕೆಂಪುಕೋಟೆಗೆ ಕಾಂಗ್ರೆಸ್ ಏಕಾಂಗಿಯಾಗಿ ಮುತ್ತಿಗೆ ಹಾಕುವ ಸ್ಥಿತಿಯಲ್ಲಿಲ್ಲ. ಆದರೆ ತೃಣಮೂಲ ಕಾಂಗ್ರೆಸ್‌ಗೆ ಆ ಧಮ್ ಸಿದ್ದಿಸಿದೆ. ತೃಣಮೂಲ ಕಾಂಗ್ರೆಸ್‌ನ ಆಧಿನಾಯಕಿ ಮಮತಾ ಬ್ಯಾನರ್ಜಿ ಇಂದು ಕೇಂದ್ರದಲ್ಲಿ ರೈಲ್ವೇ ಮಂತ್ರಿಯಾಗಿದ್ದರು ಕೂಡ ಅವರ ಕನಸು ಪಶ್ಚಿಮ ಬಂಗಾಳದಲ್ಲಿ ತಾನು ಮುಖ್ಯಮಂತ್ರಿಯಾಗುವುದು. ಅದಕ್ಕಾಗಿ ತನ್ನ ಇಲಾಖೆಯನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದ ಅನೇಕ ನೀತಿಗಳ ಬಗ್ಗೆ ಅವರಿಗೆ ಅಸಮಾಧಾನವಿದೆ ಅದನ್ನು ಕೆಲವು ಸಂದರ್ಭಗಳಲ್ಲಿ ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಕೂಡ. ಇತ್ತೀಚಿಗೆ ಪೆಟ್ರೋಲ್ ಬೆಲೆ ಏರಿಕೆಗೆ ಮನಸ್ಸು ಮಾಡಿರುವ ಕಾಂಗ್ರೆಸ್‌ನ ನೀತಿಗೆ ಅವರು ಕೆಂಡಾಮಂಡಲರಾಗಿದ್ದಾರೆ.

ನಂಬಲರ್ಹ ಮೂಲಗಳ ಪ್ರಕಾರ ಈ ಬಾರಿಯ ರೈಲ್ವೇ ಬಜೆಟ್ ಮಂಡಿಸಿ ತನ್ನ ತವರು ರಾಜ್ಯಕ್ಕೆ ರೈಲ್ವೇಯ ಭರಪೂರ ಯೋಜನೆಗಳನ್ನು ಘೋಷಿಸಿ ಯುಪಿಎಯಿಂದ ಹೊರ ಬರುವ ಯೋಜನೆ ಮಮತಾ ಹಾಕಿಕೊಂಡಿದ್ದಾರಂತೆ. ಇದರಿಂದ ತಾನು ಜನಪರ ಎಂದು ತೋರ್ಪಾಡಿಸಿದಂತಾಗುತ್ತದೆ. ಇದೇ ವೇಳೆ ಇನ್ನೊಂದಿಷ್ಟು ಸಮಯ ಕಾದು ಅವರ ಪಕ್ಷ ಪ. ಬಂಗಾಳದಲ್ಲಿ ಏಕಾಂಗಿಯಾಗಿ ಗದ್ದುಗೆಗೆ ಏರಿದ್ದೆ ಆದರೆ ಅನಂತರ ಅವರಿಗೆ ಯುಪಿಎ ಎಂಬ ಕಾಂಗ್ರೆಸ್‌ನ ಹಂಗಿನರಮನೆ ಬೇಕಿಲ್ಲ. ಆಗ ಆದು ಯುಪಿಎಗೆ ಘೋಷಿಸಿರುವ ತನ್ನ ೧೯ ಸಂಸತ್ ಸದಸ್ಯರ ಬೆಂಬಲವನ್ನು ಯಾವ ಕ್ಷಣವದರೂ ವಾಪಾಸ್ ಪಡೆಯುವ ಸಾಮರ್ಥ್ಯ ಪಡೆಯುತ್ತದೆ. ಆಗ ಯುಪಿಎಗೆ ನಿಜವಾದ ಸಂಕಟ ಶುರುವಾಗಲಿದೆ.

ಇನ್ನು ತಮಿಳುನಾಡಿನಲ್ಲಿ ೨ಜಿ ಹಗರಣ ಬೆಳಕಿಗೆ ಬಂದ ಬಳಿಕ ಅಧಿಕಾರರೂಢ ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿ ಹಳಸಿದೆ. ಆದರೆ ಕೆಲ ಅನಿವಾರ್ಯತೆಗಳು ಈ ಹಳಸಿದ ಸಂಬಂಧ ಅಗಲುವಂತೆ ಮಾಡಿಲ್ಲ. ಮುಂದಿನ ಮೇಯಲ್ಲಿ ಅಲ್ಲಿ ನಡೆಯಬಹುದಾದ ಚುನಾವಣೆಯನ್ನು ಈ ಎರಡು ಪಕ್ಷಗಳು ಹೇಗೆ ಎದುರಿಸುತ್ತವೆ ಎಂಬುದು ಇನ್ನೂ ನಿಗೂಢ. ಎ. ರಾಜಾ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಡಿಎಂಕೆ ಜೊತೆಗಿನ ತನ್ನ ಮೈತ್ರಿಯನ್ನು ಕಡಿದುಕೊಂಡರೆ ತಾನು ಯುಪಿಎಗೆ ಬೆಂಬಲ ನೀಡುವುದಾಗಿ ಎಐಎಡಿಎಂಕೆಯ ನಾಯಕಿ ಜಯಲಲಿತಾ ಈ ಮೊದಲೇ ಘೋಷಿಸಿದ್ದಾರೆ. ಆದರೆ ಇದು ತೀರಾ ಲೆಕ್ಕಾಚಾರದ ಹೇಳಿಕೆ ಎಂಬುದನ್ನು ಇಲ್ಲಿ ಮರೆಯಬಾರದು. ಈ ಹೇಳಿಕೆಯನ್ನು ಕಾಂಗ್ರೆಸ್ ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಕಾಂಗ್ರೆಸ್‌ಗೆ ಅಲ್ಲಿ ಲೆಕ್ಕಕ್ಕೆ ಸಿಗುವಷ್ಟು ಸ್ಥಾನಗಳನ್ನು ಗೆಲ್ಲಲೇ ಬೇಕಿದೆ. ಆ ಮೂಲಕ ಅಲ್ಲಿ ಮೈತ್ರಿ ಸರ್ಕಾರ ಬರುವಂತೆ ನೋಡಿಕೊಂಡರೆ ಅದು ಕೇಂದ್ರದಲ್ಲಿ ಕ್ಷೇಮವಾಗಿರಬಲ್ಲದು. ಎಲ್ಲಾದರೂ ಅಲ್ಲಿ ಎಐಎಡಿಎಂಕೆ ಹೆಚ್ಚಿನ ಸ್ಥಾನ ಗಳಿಸಿ ಬಹುಮತ ಪಡೆಯಲು ವಿಫಲವಾದರೆ ಮತ್ತು ಡಿಎಂಕೆ ಸರಳ ಬಹುಮತ ಪಡೆಯಲು ಬೇಕಾದ ಸ್ಥಾನದಿಂದ ಬಹುದೂರ ಉಳಿದದ್ದೇ ಆದರೆ ಕಾಂಗ್ರೆಸ್ ಆ ಸ್ಥಾನವನ್ನು ತುಂಬಲು ವಿಫಲವಾಗಿ ಅದು ಎಐಎಡಿಎಂಕೆ ಜೊತೆ ತನ್ನನ್ನು ತಾನು ಗುರುತಿಸಿಕೊಂಡು ಅಲ್ಲಿ ಅಧಿಕಾರ ಪಡೆಯಲು ಹವಣಿಸಿದರೆ ಡಿಎಂಕೆ ಜೊತೆಗಿನ ಮೈತ್ರಿ ಕಡಿದು ಬಿದ್ದಂತೆ. ಅದರೆ ಡಿಎಂಕೆ ಲೋಕಸಭೆಯಲ್ಲಿ ೧೮ ಸ್ಥಾನ ಹೊಂದಿದ್ದರೆ ಎಐಎಡಿಎಂಕೆ ಹೊಂದಿರುವುದು ಕೇವಲ ೯ ಸ್ಥಾನ. ಅಲ್ಲಿ ಕಡಿಮೆ ಬೀಳುವ ೯ ಸ್ಥಾನ ಮತ್ತು ಯಾವ ಕ್ಷಣವಾದರೂ ಕಡಿದು ಬೀಳಬಹುದಾದ ಹಗ್ಗದ ಮೇಲಿನ ನಡಿಗೆಯಂತಿರುವ ತೃಣ ಮೂಲ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದು ಬಿದ್ದಲ್ಲಿ ಆ ಪಕ್ಷದ ೧೯ ಸದಸ್ಯರನ್ನು ಯುಪಿಎ ಕಳೆದುಕೊಳ್ಳಬೇಕಾಗುತ್ತದೆ. ಆಗ ಯುಪಿಎಗೆ ನಿಜವಾದ ಬಿಕ್ಕಟ್ಟು ಅಟಕಾಯಿಸಿಕೊಳ್ಳುತ್ತದೆ. ಆಗ ಯುಪಿಎ ಹೆಚ್ಚು ಕಡಿಮೆ ೩೭ ಸಂಸದರ ಬೆಂಬಲ ಕಳೆದುಕೊಳ್ಳುತ್ತದೆ. ಆದರೆ ಎಐಎಡಿಎಂಕೆ ಬೆಂಬಲ ನೀಡಿದ್ದೆ ಆದರೆ ಆಗ ಯುಪಿಎಗೆ ಮತ್ತೆ ೨೮ ಸಂಸತ್ ಸದಸ್ಯರ ಬೆಂಬಲ ಬೇಕಾಗುತ್ತದೆ.

ಈ ಸಂದರ್ಭದಲ್ಲಿ ಅದು ಉತ್ತರ ಪ್ರದೇಶದಲ್ಲಿನ ಎರಡು ರಾಜಕೀಯ ಶಕ್ತಿಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಅಥವಾ ಬಹುಜನ ಸಮಾಕವಾದಿ ಪಕ್ಷ (ಬಿಎಸ್‌ಪಿ) ಇವುಗಳಲ್ಲಿ ಒಂದರ ಸಹವಾಸ ಮಾಡುವುದು ಅನಿವಾರ್ಯವಾಗುತ್ತದೆ. ಈ ಪಕ್ಷಗಳಿಗೂ ಕಾಂಗ್ರೆಸ್ ಸಹವಾಸ ಹೊಸದಲ್ಲ. ಆದರೆ ಇಂತಹ ಪರಿಸ್ಥಿತಿ ಉದ್ಭವಿಸಿದಲ್ಲಿ ಈ ಎರಡು ಪಕ್ಷಗಳಲ್ಲಿ ಯಾವ ಪಕ್ಷ ಕಾಂಗ್ರೆಸ್ ಜೊತೆಗೆ ಹೋಗಬಹುದು ಎಂಬುದಕ್ಕೆ ಮುಂಬರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ. ಎಸ್‌ಪಿ ಲೋಕಸಭೆಯಲ್ಲಿ ೨೩ ಸ್ಥಾನ ಹೊಂದಿದ್ದರೆ ಬಿಎಸ್‌ಪಿ ೨೧ ಸ್ಥಾನ ಹೊಂದಿದೆ. ಈ ಎರಡು ಪಕ್ಷಗಳಲ್ಲಿ ಯಾವ ಪಕ್ಷ ಯುಪಿಎ ಜೊತೆ ತನ್ನನ್ನು ತಾನು ಗುರುತಿಸಿಕೊಂಡರು ಕಾಂಗ್ರೆಸ್‌ಗೆ ಲಾಭವಾಗಲಿದೆ. ಆದರೆ ಮತ್ತೂ ಕೆಲ ಸ್ಥಾನದ ಕೊರತೆ ಕಾಡಲಿದೆ. ಆ ಸ್ಥಾನವನ್ನೂ ಸಮಾಜವಾದಿ ಪಕ್ಷದ ಗೆಳೆಯನಾಗಿರುವ ರಾಷ್ಟ್ರಿಯ ಜನತಾದಳಕ್ಕೆ ತುಂಬುವ ಸಾಮರ್ಥ್ಯವಿದೆ. ಅಂದರೆ ಚತುರ್ಥ ರಂಗ ಸಂಪೂರ್ಣವಾಗಿ ಯುಪಿಎ ಜೊತೆ ಕೂಡಿಕೊಳ್ಳಬೇಕು. ಆದರೆ ಯುಪಿಎಗೆ ಇದಕ್ಕಿಂತ ಅವಮಾನಕಾರಿ ಮತ್ತು ಸಂದಿಗ್ಧ ಪರಿಸ್ಥಿತಿ ಬೇರೆ ಇರದು. ಏಕೆಂದರೆ ಯುಪಿಎ - ೨ ಸರ್ಕಾರ ರಚನೆ ಆಗುವ ಸಂದರ್ಭದಲ್ಲಿ ಈ ಪಕ್ಷಗಳನ್ನು ಕಾಂಗ್ರೆಸ್ ಅಸ್ಪಶ್ಯತೆಯಿಂದ ಕಂಡಿತ್ತು. ಬಿಹಾರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೂ ಕೂಡ ಅದು ರಾಷ್ಟ್ರೀಯ ಜನತಾದಳದಿಂದ ದೂರ ನಿಂತು ಚುನಾವಣೆ ಎದುರಿಸಿತ್ತು. ಭ್ರಷ್ಟರನ್ನು ಕಂಡರೆ ನಾವು ಮಾರುದ್ದ ದೂರ ಸರಿಯುತ್ತೇವೆ ಎಂಬ ಸಂದೇಶ ನೀಡಿತ್ತು. ಆದರೆ ಈ ಮಾರುದ್ಧ ಸರಿಯುವಿಕೆ, ಅನುಕೂಲ ಸಿಂಧು ರಾಜಕಾರಣ ಮತ್ತು ಮಡಿವಂತಿಕೆ ಎಷ್ಟು ಕಾಲ ಉಳಿಯಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಕಾಂಗ್ರೆಸ್‌ನ ಇಕ್ಕಟ್ಟು ಇಲ್ಲಿಗೆ ಮುಗಿದಿಲ್ಲ. ಎನ್‌ಸಿಪಿ ಜೊತೆಗಿನ ಕಾಂಗ್ರೆಸ್ ಸಂಬಂಧ ಕೂಡ ಇಳಿಜಾರು ಮುಖಿಯಾಗಿದೆ. ಅದಕ್ಕೆ ಇತ್ತೀಚೆಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯೊಂದು ತುಪ್ಪ ಸುರಿದಿದೆ. ಎನ್‌ಸಿಪಿ ಲೋಕಸಭೆಯಲ್ಲಿ ೯ ಸ್ಥಾನ ಹೊಂದಿದೆ. ಅದರೊಂದಿಗೆ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಜಗನ್ ಮೋಹನ್ ರೆಡ್ಡಿ ಎಂಬ ಬಿರುಗಾಳಿಗೆ ತತ್ತರಿಸಿ ಹೋಗಿದೆ. ಅಲ್ಲಿ ತೆಲಂಗಾಣ ಮತ್ತು ಕೃಷ್ಣಾ ನದಿ ನೀರಿನ ಹಂಚಿಕೆ ವಿವಾದಗಳ ಹೆಸರಿನ ಕಿಡಿ ಹೊತ್ತಿಕೊಂಡಿದೆ. ಇದು ಕಾಂಗ್ರೆಸ್‌ನ ಕೆಲ ಲೋಕಸಭೆ ಸದಸ್ಯರ ರಾಜೀನಾಮೆ ಮತ್ತು ಉಚ್ಚಾಟನೆಗೆ ಕಾರಣವಾಗಬಹುದು. ಈಗ ಲೋಕಸಭೆಗೆ ಚುನಾವಣೆ ನಡೆದದ್ದೆ ಆದರೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಪ್ರಧಾನಿ ಗದ್ದುಗೆನ ರಾಹುಲ್ ಗಾಂಧಿಯ ವಾರಸ್ದಾರಿಕೆಯ ಕನಸು ನುಚ್ಚು ನೂರಾಗಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟು ಕೊಂಡ ಯುಪಿಎ ಈಗ ಮೈತ್ರಿ ವಿಸ್ತರಣಾ ಕೈಂಕರ್ಯಕ್ಕೆ ಸದ್ದಿಲ್ಲದೆ ಕೈ ಹಾಕಿದೆ. ಈ ಬೆಳವಣೆಗೆ ಜೆಡಿ(ಎಸ್)ಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ಜೆಡಿ(ಎಸ್) ಲೋಕಸಭೆಯಲ್ಲಿ ಒಟ್ಟು ೩ ಸ್ಥಾನ ಹೊಂದಿದೆ.

ಇದು ನಿಜಕ್ಕೂ ದೊಡ್ಡ ಸಂಖ್ಯೆಯೇನು ಅಲ್ಲ. ಆದರೆ ಲೋಕಸಭೆಯುಲ್ಲಿ ಏಕ ಸ್ಥಾನ ಪಡೆದಿರುವ ಆದರೆ ಯುಪಿಎ ಜೊತೆಗೆ ಗುರುತಿಸಿಕೊಳ್ಳದ ಅನೇಕ ಪಕ್ಷಗಳಿವೆ. ಅವುಗಳೆಲ್ಲವನ್ನು ಬುಟ್ಟಿಗೆ ಹಾಕಿಕೊಂಡು ತೃಪ್ತಿ ಪಡಿಸಿಕೊಂಡು ಕೂರುವುದರ ಬದಲು ಜೆಡಿ(ಎಸ್)ಗೆ ಮಣೆ ಹಾಕುವುದು ಕ್ಷೇಮ ಎಂಬುದು ಕಾಂಗ್ರೆಸ್‌ನ ಚಿಂತಕರ ಚಾವಡಿಯ ಅಭಿಪ್ರಾಯ.

ಇದೇ ಕಾರಣದಿಂದ ರಾಜ್ಯದಲ್ಲಿ ಜೆಡಿ(ಎಸ್) ಮತ್ತು ಕಾಂಗ್ರೆಸ್‌ನ ದೋಸ್ತಿ ರಾಜಕೀಯ ರಾಜಾರೋಷವಾಗಿ ನಡೆಯುತ್ತಿದೆ. ಇಲ್ಲವೆಂದರೆ ದೇವೇ ಗೌಡರ ಸಹವಾಸ ಬೇಡವೇ ಬೇಡ ಎಂದು ಹೇಳುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಪಂಚಾಯತ್ ಚುನಾವಣೆಯಲ್ಲಿ ಸೋತ ತಕ್ಷಣ ಜೆಡಿ(ಎಸ್) ಕಡೆ ಮೆತ್ತಗಾಗುವ ಸಾಧ್ಯತೆಯೇ ಇರಲಿಲ್ಲ.

ಕುಮಾರಸ್ವಾಮಿಗೆ ಕೂಡ ಹೇಗಾದರೂ ಮಾಡಿ ತಾನು ಕೇಂದ್ರದಲ್ಲಿ ಮಂತ್ರಿಯಾಗಬೇಕು ಎಂಬ ಆಸೆ ಇದೆ. ಅವರ ಆಸೆ ಈಡೇರಿದ್ದೆ ಆದರೆ ಆನಂತರ ರಾಜ್ಯದಲ್ಲಿ ಅವರ ಪಕ್ಷವನ್ನು ಬಲಗೊಳಿಸುವುದು ಸುಲಭ. ರಾಜ್ಯದಲ್ಲಿ ಜೆಡಿ(ಎಸ್) ಬಲಗೊಳ್ಳುವುದೆಂದರೆ ಅದು ಕಾಂಗ್ರೆಸ್‌ನ ಪಾಲಿಗೆ ಬಂದಣಿಕೆ ಇದ್ದಂತೆ. ಜೆಡಿ(ಎಸ್) ಕಣ್ಣು ಹಾಕುವುದು ಕಾಂಗ್ರೆಸ್‌ನ ವೋಟ್ ಬ್ಯಾಂಕ್‌ನ ಮೇಲೆ. ಅದ್ದರಿಂದ ಈ ಮೈತ್ರಿ ಮುಂದಿನ ವಿಧಾನ ಸಭೆ, ಲೋಕಸಭೆಯಚೆಯೂ ವಿಸ್ತರಿಸಿದ್ದೇ ಆದರೆ ಉಭಯ ಪಕ್ಷಗಳಿಗೂ ಲಾಭವಿದೆ.

ಆದರೆ ಈ ಮೈತ್ರಿ ತಾತ್ಕಾಲಿಕವಾಗಿದ್ದು, ಅವಕಾಶವಾದಿತನದಿಂದ ಕೂಡಿದ್ದರೆ ಈ ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮಾರಣಾಂತಿಕ ಪೆಟ್ಟು ತಿನ್ನುವುದು ಮಾತ್ರ ನಿಶ್ಚಿತ.

ವಿಧಾನ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕರಾಗಿರುವ ಸಿದ್ದರಾಮಯ್ಯ ತನ್ನ ತವರು ಪಕ್ಷ ಜೆಡಿ(ಎಸ್) ಜೊತೆ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಉತ್ಸುಕರಾಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್‌ನ ಇತರ ’ದಂಡ’ ನಾಯಕರು ಜೆಡಿ(ಎಸ್) ಜೊತೆ ಹೋಗಲು ಅಷ್ಟೊಂದು ಮನಸ್ಸು ಮಾಡಿದ ಹಾಗಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಜೆಡಿ(ಎಸ್)ನ್ನು ತನ್ನ ಮಿತ್ರ ಪಕ್ಷವೆಂದು ಸ್ಪಷ್ಟವಾಗಿ ಪರಿಗಣಿಸಿದರೆ ರಾಜ್ಯ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಮತ್ತು ಅಸಹಾಯಕರಾಗಿ ಹೈಕಮಾಂಡ್ ಆದೇಶವನ್ನು ಪಾಲಿಸ ಬೇ ಬೇಕಾಗುತ್ತದೆ. ಆಗ ಈ ನಾಯಕರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿ(ಎಸ್) ಮೈತ್ರಿಯ ಗೆಲುವಿಗೆ ಶ್ರಮಿಸುವುದು ಅನುಮಾನ. ಇದು ಒಂದು ಕಡೆ ಬಿಜೆಪಿಗೆ ಲಾಭ ತರಲಿದೆ.

ಮತ್ತೊಂದು ಕಡೆ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್‌ನಲ್ಲಿನ ಒಡಕು ಮತ್ತೂ ಹೆಚ್ಚಾಗುವಂತೆ ಮಾಡಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಬರುವ ಆಥವಾ ಅವರನ್ನು ಹೊರತಳ್ಳುವ ಪ್ರಕ್ರಿಯೆ ಕೂಡ ನಡೆಯುವ ಸಾಧ್ಯತೆಯಿದೆ. ಹಾಗಾದರೆ ಅವರು ಮತ್ತೇ ಜೆಡಿ(ಎಸ್) ತೆಕ್ಕೆಗೆ ಸೇರುವ ಸಾಧ್ಯತೆಯಿದೆ. ಏಕೆಂದರೆ ಅವರಲ್ಲಿ ಪ್ರಸಕ್ತ ’ಅಹಿಂದ’ ಚಳುವಳಿ ಕಟ್ಟುವ ಸಾಮರ್ಥ್ಯ ಉಳಿದಿಲ್ಲ. ಇನ್ನೊಂದು ಕಡೆ ಅವರು ನೇರವಾಗಿ ಜೆಡಿ(ಎಸ್) ಪಾಳಯಕ್ಕೆ ಮತ್ತೇ ಹಾರುತ್ತಾರೆ ಎಂಬ ಮಾತು ಗಟ್ಟಿಯಾಗಿ ಕೇಳಿಸುತ್ತಿದೆ. ಈ ಯಾವುದೇ ಬೆಳವಣಿಗೆ ನಡೆದರೂ ಕೂಡ ಇದರಿಂದ ಲಾಭವಾಗುವುದು ಜೆಡಿ(ಎಸ್)ಗೆ ಮತ್ತು ಕುಮಾರಸ್ವಾಮಿಗೆ.

1 comment:

ಬಾನಾಡಿ said...

ಒಂದು ಒಳ್ಳೆಯ ರಾಜಕೀಯ ವಿಶ್ಲೇಷಣೆ. ಹೀಗೇ ಮುಂದುವರಿಯಿರಿ. ಶುಭವಾಗಲಿ.