Thursday, January 27, 2011

ಚಿನ್ನದ ಹುಡುಗಿ ಅಶ್ವಿನಿ ಅಕ್ಕುಂಜಿ


ಕ್ರೀಡೆಯ ಕಡೆಗೆ ಮನ ಹೊರಳಿದ್ದು ಹೇಗೆ?
ಕ್ರೀಡೆಯತ್ತ ನನ್ನ ಮನ ಹೊರಳಲು ಈ ಹಿಂದಿನ ಅಥ್ಲೀಟ್‌ಗಳೇ ಕಾರಣ. ನಾನು ಚಿಕ್ಕಂದಿನಿಂದಲೇ ಪಿ.ಟಿ. ಉಷಾ, ರೋಸಾ ಕುಟ್ಟಿ ಮೊದಲಾದ ಅಥ್ಲೀಟ್‌ಗಳ ಸಾಧನೆಯನ್ನು ಗಮನಿಸುತ್ತಿದ್ದೆ. ಅವರೇ ನನಗೆ ಸ್ಫೂರ್ತಿ. ಅವರ ಸಾಧನೆ ನನ್ನನ್ನು ಅಥ್ಲೆಟಿಕ್ಸ್ ರಂಗದತ್ತ ಸೆಳೆಯಿತು.

ಓಟವನ್ನೇ ಆರಿಸಿಕೊಳ್ಳಲು ಕಾರಣ? ೪೦೦ ಮೀಟರ್ ಓಟ ನಿಮ್ಮದೇ ಆಯ್ಕೆಯೇ?
ಹಳ್ಳಿಯಲ್ಲಿ ಅದರಲ್ಲೂ ಶಾಲೆಗಳಲ್ಲಿ ಓಟದ ಸ್ಪರ್ಧೆಗಳನ್ನು ಹೆಚ್ಚು ಆಯೋಜಿಸುತ್ತಾರೆ. ಅದೇ ರೀತಿ ಹಳ್ಳಿ ಕಡೆ ಒಡಾಟ ಹೆಚ್ಚಿರುತ್ತಿತ್ತು. ನಾನೂ ಚೆನ್ನಾಗಿ ಓಡುತ್ತಿದ್ದೆ. ನನ್ನ ಮಟ್ಟಿಗೆ ನನ್ನ ಓಟದ ಜೀವನಕ್ಕೆ ನನ್ನ ಹಳ್ಳಿ ಬದುಕು ಒಳ್ಳೆ ಅಡಿಪಾಯ ಹಾಕಿದೆ.
ನಾನು ೨೦೦೧ರಲ್ಲಿ ೪೦೦ ಮೀ. ಓಡಲು ಶುರುಮಾಡಿದೆ. ನನಗೆ ೪೦೦ ಮೀ. ಓಡಲು ಆಸಕ್ತಿಯೇನೋ ಇತ್ತು. ಆದರೆ ನನಗಿಂತ ನನ್ನ ತರಬೇತುದಾರರು ನಾನು ೪೦೦ ಮೀ. ಓಡಬೇಕು ಎಂಬ ಆಸೆ ಹೊಂದಿದ್ದರು. ಅವರಿಗೆ ನನ್ನ ಮೇಲೆ ವಿಶ್ವಾಸವಿತ್ತು. ೨೦೦೪ರಲ್ಲಿ ನಾನು ೮೦೦ ಮೀ. ಓಡಲು ಶುರು ಮಾಡಿದೆ. ಆದರೆ ಅದರಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ. ನಂತರ ಪುನಃ ೪೦೦ ಮಿ. ಓಟದತ್ತ ಗಮನ ಕೇಂದ್ರೀಕರಿಸಿದೆ. ಇದು ನನಗೆ ಹರ್ಡಲ್ಸ್ ಮತ್ತು ರಿಲೇಗೂ ನೆರವಾಯಿತು.

ಕುಟುಂಬ ಹಾಗೂ ಸಮಾಜದಿಂದ ಪ್ರೋತ್ಸಾಹ ಸಿಕ್ಕಿತ್ತೇ?
ಮನೆಯವರು ತುಂಬ ಪ್ರೋತ್ಸಾಹ ನೀಡಿದ್ದಾರೆ. ತಂದೆಗೂ ನಾನು ಕ್ರೀಡಾಪಟು ಆಗಬೇಕೆಂದು ಆಸೆಯಿತ್ತು. ಅವರು ತುಂಬಾ ಪ್ರೋತ್ಸಾಹ ನೀಡಿದರು. ಅವರೇ ನನ್ನ ಈ ಸಾಧನೆಯ ಬೆನ್ನೆಲುಬು. ಹುಡುಗಿಯಾಗಿದ್ದರೂ ನನ್ನ ಮೇಲೆ ಅವರಿಗೆ ವಿಶ್ವಾಸವಿದೆ. ನನಗೆ ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಈ ಸಾಧನೆಗೆ ಅವರೇ ಮೂಲ ಕಾರಣ. ಇನ್ನು ಸಂಘಸಂಸ್ಥೆಗಳಲ್ಲಿ ಟಾಟಾ ಸಂಸ್ಥೆ, ಸಾಯ್, ವಿದ್ಯಾನಗರ ಕ್ರೀಡಾ ಶಾಲೆ ನೀಡಿದ ಪ್ರೋತ್ಸಾಹದಿಂದ ನನಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು.

ಕ್ರಿಕೆಟ್‌ನ ಜನಪ್ರಿಯತೆ ದೇಶದಲ್ಲಿ ಉಳಿದ ಕ್ರೀಡೆಗಳ ಪಾಲಿಗೆ ಕಂಟಕವಾಗಿದೆ ಎಂದು ಹೇಳುತ್ತಾರೆ. ಇದು ನಿಜವೇ?
ಹೌದು, ಏಕೆಂದರೆ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ ಇಲ್ಲ. ಅದು ಸಾಂಘಿಕ ಆಟವಾಗಿರುವುದರಿಂದ ಕ್ರಿಕೆಟ್‌ನ್ನು ಎಲ್ಲರೂ ಮೆಚ್ಚುತ್ತಾರೆ. ಮಕ್ಕಳೂ ಕೂಡ ಕ್ರಿಕೆಟ್ ಆಡಲು ಹೆಚ್ಚಿನ ಆದ್ಯತೆ ನೀಡುತ್ತಾರೆಯೇ ಹೊರತು ಹಾಕಿ, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳತ್ತ ಗಮನ ಕೊಡುವುದು ಕಡಿಮೆ. ಕ್ರಿಕೆಟ್ ಒಂದು ಮನೋರಂಜನಾ ಕ್ರೀಡೆ. ಅಲ್ಲಿ ಹೆಚ್ಚು ದೇಹಾಯಾಸ ಆಗುವ ಸಂಭವ ಕಡಿಮೆ. ಒಬ್ಬ ವ್ಯಕ್ತಿ ೪ ಸುತ್ತು ಓಡಿದ ನಂತರ ನನ್ನಿಂದ ಓಡಲು ಆಗುವುದಿಲ್ಲ ಎನ್ನುತ್ತಾನೆ. ಆದರೆ ಕ್ರಿಕೆಟ್‌ನಲ್ಲಿ ಬಾಲ್ ಬಂದಾಗ ಹಿಡಿಯಲು ಅಥವಾ ಬಾಲೆಸೆಯಲು ಆಥವಾ ಬ್ಯಾಟ್‌ನಿಂದ ಬಾಲ್‌ಗೆ ಹೊಡೆದಾಗ ಮಾತ್ರ ಓಟದ ಆವಶ್ಯಕತೆ ಇರುತ್ತದೆ. ಆ ಕಾರಣದಿಂದ ಜನರಿಗೂ ಇದು ಆರಾಮದಾಯಕ ಕ್ರೀಡೆಯಾಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ನಲ್ಲಿ ಹೆಚ್ಚು ತಂಡಗಳಿಲ್ಲ. ಅದ್ದರಿಂದ ಅಲ್ಲಿ ಸ್ಪರ್ಧೆಯ ಮಟ್ಟ ಕಡಿಮೆ. ಭಾರತದ ಪ್ರದರ್ಶನ ಚೆನ್ನಾಗಿರುವುದರಿಂದ ಜನರು ಆ ಕಡೆ ವಾಲಿದ್ದಾರೆ.

ಕ್ರಿಕೆಟ್ ಹಿಂದೆ ಮಾರುಕಟ್ಟೆ ಲೋಕವೇ ಇದೆ. ಆದರೆ ಉಳಿದ ಕ್ರೀಡೆಗಳು ಮಾರುಕಟ್ಟೆಯನ್ನು ಇಷ್ಟೊಂದು ಸ್ವರೂಪದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ?
ಕ್ರಿಕೆಟ್‌ಗೆ ಜನಪ್ರಿಯತೆ ಇದೆ. ಕ್ರಿಕೆಟ್‌ನ್ನು ಪ್ರೇಕ್ಷಕರು ಕ್ರೀಡಾಂಗಣ ಮತ್ತು ಮನೆಗಳಲ್ಲಿ ಟಿವಿ ಮೂಲಕ ನೋಡುತ್ತಾರೆ. ಆದರೆ ಬೇರೆ ಕ್ರೀಡೆಗಳಿಗೆ ಜನರಿಂದ ಇಂತಹ ಸ್ಪಂದನೆ ಸಿಗುತ್ತಿಲ್ಲ. ಅದ್ದರಿಂದ ಮಾರುಕಟ್ಟೆ ಲೋಕದ ಮಂದಿ ತಮಗೆ ಎಲ್ಲಿ ವ್ಯಾಪಾರ ಕಾಣುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಇದರಿಂದ ಉಳಿದ ಕ್ರೀಡೆಗಳ ಮೇಲೆ ದುಷ್ಪರಿಣಾಮವಾಗುತ್ತಿರುವುದು ನಿಜ.

ಕ್ರೀಡೆಯ ಅಭಿವೃದ್ಧಿ ಜಾಹೀರಾತು ಕಂಪನಿಗಳನ್ನು ಆಧರಿಸಿದೆ. ಶುದ್ಧ ಕ್ರೀಡೆಯಾಗಿ ಯಾವ ಆಟವೂ ಉಳಿದಿಲ್ಲ. ಕ್ರೀಡೆಗಳನ್ನು ಈ ಜಾಹೀರಾತು ಕಂಪನಿಗಳಿಂದ ಹೊರ ತರುವ ಬಗೆ ಹೇಗೆ?
ಜನರಲ್ಲಿ ಕ್ರಿಕೆಟ್ ಒಂದೇ ಕ್ರೀಡೆ ಎಂಬ ಮನೋಭಾವವಿದೆ. ಬೇರೆ ಕ್ರೀಡೆಗಳಲ್ಲಿ ಪದಕ ಗೆದ್ದರೂ ಅವರಿಗೆ ಗೊತ್ತಾಗುವುದಿಲ್ಲ. ಇದು ಎಲ್ಲೂ ಪ್ರಮುಖ ಅಂಶವಾಗಿ ಪರಿಗಣನೆಯಾಗುವುದಿಲ್ಲ. ಮೊನ್ನೆ ನಡೆದ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ಗಿಂತಲೂ ಹಿಂದೆ ಅನೇಕರು ಪದಕ ಪಡೆದಿದ್ದಾರೆ. ಆದರೆ ಅವರ ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ಕಾಮನ್‌ವೆಲ್ತ್ ಗೇಮ್ಸ್‌ನ ಬಳಿಕ ಮಾಧ್ಯಮ ಈ ಬಗ್ಗೆ ಹೆಚ್ಚು ಗಮನ ಹರಿಸಿದೆ. ಅದ್ದರಿಂದ ಜನರಿಗೂ ಈ ಬಗ್ಗೆ ಗೊತ್ತಾಗಿದೆ. ಹಿಂದೆಯೂ ಭಾರತ ಅನೇಕ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಈ ಸಾಧನೆ ಜನರನ್ನು ತಲುಪಿಲ್ಲ. ಏಕೆಂದರೆ ಇದಕ್ಕೆ ಪ್ರಚಾರ ಸಿಕ್ಕಿಲ್ಲ. ಅದ್ದರಿಂದ ಇಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಯಾವುದೇ ಕ್ರೀಡೆಯ ಉತ್ಕರ್ಷತೆಗೆ ಮಾಧ್ಯಮಗಳ ಪಾತ್ರ ಅತಿ ಮುಖ್ಯ. ಜನರಿಗೆ ಗೊತ್ತಾಗುವುದೇ ಮಾಧ್ಯಮಗಳಿಂದ. ಅದ್ದರಿಂದ ಜಾಹೀರಾತು ಕಂಪನಿಗಳ ಕಪಿ ಮುಷ್ಠಿಯಿಂದ ಕ್ರೀಡೆ ಹೊರ ಬರಬೇಕಾದರೆ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕಿದೆ.

ಕೆಲವರು ಕ್ರೀಡೆಯನ್ನು ಸರ್ಕಾರಿ ಹುದ್ದೆ ಅಥವಾ ಕ್ರೀಡಾಖೋಟದಲ್ಲಿ ಇನ್ನಿತರ ಸವಲತ್ತುಗಳನ್ನು ಪಡೆಯಲು ಮಾತ್ರ ಬಳಸಿಕೊಳ್ಳುತ್ತಾರೆ ಎಂಬ ಆಪಾದನೆಯಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ನಿಜಕ್ಕೂ ತಪ್ಪು. ಕ್ರೀಡಾಖೋಟದ ಸವಲತ್ತುಗಳನ್ನು ಕ್ರೀಡೆಯಲ್ಲಿ ಮುಂದುವರಿಯುವ ಆಸಕ್ತಿ ಇರುವವರಿಗೆ ಮಾತ್ರ ನೀಡಬೇಕು. ಇಲ್ಲದೇ ಹೋದರೆ ದೇಶ ಒಳ್ಳೆ ಅಥ್ಲೀಟ್‌ನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ರೀತಿ ಆಗಬಾರದು. ಕ್ರೀಡೆಯಲ್ಲಿ ಮುಂದುವರಿಯುತ್ತೇವೆ ಎನ್ನುವವರಿಗೆ ಮಾತ್ರ ಸೀಟ್ ನೀಡಬೇಕು. ಇಲ್ಲ, ನಾನು ಅರ್ಧದಲ್ಲಿ ಬಿಡುತ್ತೇನೆ ಎನ್ನುವವರಿಗೆ ಸೀಟ್ ಕೊಡಬಾರದು. ಏಕೆಂದರೆ ಇದರಿಂದ ಮತ್ತೊಬ್ಬ ಅಥ್ಲೀಟ್‌ನ ದಾರಿ ಬಂದ್ ಆಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅಂಕ ಪಡೆಯುವ ಒತ್ತಡ ಕೂಡ ಕ್ರೀಡಾಪಟುಗಳು ಕ್ರೀಡೆಯನ್ನು ತ್ಯಜಿಸಲು ಕಾರಣವಾಗುತ್ತದೆ. ಅದ್ದರಿಂದ ಶಿಕ್ಷಣ ಸಂಸ್ಥೆಗಳು ಕೂಡ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು.

ಕ್ರೀಡಾ ಪ್ರಾಧಿಕಾರಗಳ ಜವಾಬ್ದಾರಿಯನ್ನು ಕ್ರೀಡಾಪಟುಗಳೇ ಹೊರಬೇಕು ಎಂಬ ಅಭಿಪ್ರಾಯ ಇದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?
ಇಲ್ಲ, ಕ್ರೀಡಾ ಪ್ರಾಧಿಕಾರ ಅಥವಾ ಕ್ರೀಡಾ ಸಂಸ್ಥೆಗಳ ಜವಾಬ್ದಾರಿ ಹೊರುವವರಿಗೆ ಕ್ರೀಡೆಯ ಬಗ್ಗೆ ಒಳ್ಳೆ ಜ್ಞಾನವಿರಬೇಕು, ಆತ ಬರೀ ಕ್ರೀಡಾಪಟು ಆಗಿದ್ದರೆ ಸಾಲದು. ಕೆಲವು ಕಡೆ ಕ್ರೀಡಾಪಟುಗಳೇ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಸೋಲುತ್ತಿದ್ದಾರೆ. ಇನ್ನೂ ಕೆಲ ಸಂದರ್ಭಗಳಲ್ಲಿ ಆ ಕ್ರೀಡಾಪಟುಗಳಲ್ಲಿ ತಾವು ಮಾಡಿದ ಸಾಧನೆಯನ್ನು ಬೇರೆ ಯಾರೂ ಮಾಡಬಾರದು ಎಂಬ ಮನೋಭಾವ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರ ಅಸೂಯೆಗೆ ಉದಯೋನ್ಮುಖ ಕ್ರೀಡಾಪಟುಗಳು ಬಲಿಯಾಗಬೇಕಾಗುತ್ತದೆ. ಅದ್ದರಿಂದ ಕ್ರೀಡಾ ಪ್ರಾಧಿಕಾರಗಳ ಜವಾಬ್ದಾರಿಯನ್ನು ಯಾರು ಹೊತ್ತರೂ ಪರವಾಗಿಲ್ಲ. ಅವರಲ್ಲಿ ನಾಯಕತ್ವ ಗುಣ ಮತ್ತು ಜಗತ್ತಿನ ಕ್ರೀಡಾರಂಗದಲ್ಲಿನ ಅಗುಹೋಗುಗಳ ಬಗ್ಗೆ ಅರಿವು ಇರಬೇಕು.

ಭಾರತೀಯ ಅಥ್ಲೆಟಿಕ್ಸ್ ರಂಗದ ಪ್ರಸಕ್ತ ಸ್ಥಿತಿ ಹೇಗಿದೆ?
ಭಾರತದಲ್ಲಿ ಒಂದಷ್ಟು ಸಾಧನೆ ಮಾಡಿದ ಮೇಲೆ ಸಾಕಷ್ಟು ಸವಲತ್ತುಗಳು ಸಿಗುತ್ತದೆ. ಆದರೆ ಬೇರು ಮಟ್ಟದಲ್ಲಿ ಇಲ್ಲ. ದೇಶದಲ್ಲಿ ಕ್ರೀಡಾಕೇಂದ್ರಗಳ ಕೊರತೆ ಇದೆ. ದೈಹಿಕ ಶಿಕ್ಷಕರಿಗೆ ಕ್ರೀಡಾ ಚಟುವಟಿಕೆಗಳ ಬಗ್ಗೆ ತರಬೇತಿ, ಮಾಹಿತಿ ನೀಡಬೇಕು.

ಇಂದು ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಅವಧಿಯಲ್ಲಿ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸುತ್ತಾರೆ ಎಂದು ಮಕ್ಕಳು ಹೇಳುತ್ತಿರುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ತಪ್ಪು. ಶಾರೀರಿಕ ಫಿಟ್‌ನೆಸ್‌ಗೆ ನಾವು ಮಹತ್ವ ಕೊಡಲೇಬೇಕು. ಮಕ್ಕಳು ಶಾಲೆಗಳಲ್ಲಿ ೫- ೬ ಗಂಟೆ ಪಾಠ ಕೇಳುತ್ತಾರೆ. ಅಂತಹದರಲ್ಲಿ ಒಂದು ಗಂಟೆ ಆಡಿದರೆ ಏನೂ ಆಗುವುದಿಲ್ಲ. ಶಾರೀರಿಕವಾಗಿ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ.

ಗ್ರಾಮೀಣ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಇರುವ ಸವಲತ್ತುಗಳು ಎಲ್ಲಿಗೂ ಸಾಲದು. ಇದರ ಅಭಿವೃದ್ಧಿಗೆ ಏನು ಮಾಡಬೇಕಿದೆ?
ಎಲ್ಲ ಕ್ಷೇತ್ರಕ್ಕೂ ಪ್ರಾಮುಖ್ಯತೆ ಕೊಟ್ಟರೆ ಮಾತ್ರ ಒಂದು ಸಮಾಜ ಪ್ರಗತಿ ಹೊಂದಬಲ್ಲದು. ಗ್ರಾಮೀಣ ಪ್ರದೇಶ ಬಿಡಿ ನಗರ ಪ್ರದೇಶದಲ್ಲೂ ಕ್ರೀಡಾಪಟುಗಳಿಗೆ ಸೌಲಭ್ಯದ ಕೊರತೆ ಇದೆ. ಮಕ್ಕಳಿಗೆ ಆಟ ಆಡಲು ಜಾಗವೇ ಸಿಗುತ್ತಿಲ್ಲ. ಇಂದಿನ ಮಕ್ಕಳಿಗೆ ಆಟಗಳೇ ಗೊತ್ತಿಲ್ಲ. ಶಾಲೆಯಲ್ಲಿ ಆಡುತ್ತಾರೆ, ಹೈಸ್ಕೂಲಿನಲ್ಲಿ ಸ್ವಲ್ಪ ಆಡುತ್ತಾರೆ, ಅನಂತರ ಬಿಟ್ಟೇ ಬಿಡುತ್ತಾರೆ. ಮತ್ತೆ ಮನೆಯಲ್ಲೂ ಕೂಡ, ಆಟ ಆಡುವುದರಿಂದ ಏನೂ ಪ್ರಯೋಜನ ಎಂದು ಕೇಳಲು ಶುರು ಮಾಡುತ್ತಾರೆ. ಮಕ್ಕಲೂ ಸೋಮಾರಿಗಳಾಗಿದ್ದಾರೆ.

ನಿಮ್ಮ ಪ್ರಕಾರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳ ಮುಂದಿರುವ ಸವಾಲುಗಳೇನು? ಇದರಿಂದ ಅವರು ಹೇಗೆ ಹೊರಬರಬಹುದು?
ನಮ್ಮಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ನನಗೆ ನ್ಯಾಷನಲ್ ಕ್ಯಾಂಪ್‌ನಲ್ಲಿರುವುದರಿಂದ ವೈದ್ಯರು, ಪಿಸಿಯೋ, ತರಬೇತುದಾರ ಲಭ್ಯರಿದ್ದಾರೆ. ಆದರೆ ಬೇರೆ ಕೇಂದ್ರಗಳಲ್ಲಿ ಈ ಕೊರತೆ ಇದೆ. ಒಬ್ಬ ಕ್ರೀಡಾಪಟು ಸಾಧನೆ ಮಾಡಬೇಕಾದರೆ ಇದೆಲ್ಲ ಬೇಕೇ ಬೇಕು. ಅದೇ ರೀತಿ ಕ್ರೀಡಾ ಕೇಂದ್ರಗಳ ಕೊರತೆ ಇದೆ. ನಮ್ಮಲ್ಲಿರುವ ತರಬೇತುದಾರರಿಗೆ ಇನ್ನೂ ಉನ್ನತ ಶಿಕ್ಷಣ ನೀಡಬೇಕು. ವಿದೇಶಿ ತರಬೇತುದಾರನ್ನು ಕರೆಸಬೇಕು. ಇನ್ನು ಮಕ್ಕಳಿಗೂ ಆಸಕ್ತಿ ಇರಬೇಕು. ಅವರು ಕಾಲ ಹರಣ ಮಾಡುವ ಮನೋಭಾವದವರಾಗಿದ್ದರೆ ಏನು ಪ್ರಯೋಜನ? ಸುಮ್ಮನೆ ಸ್ಟೇಡಿಯಂ, ಟ್ರ್ಯಾಕ್ ಮಾಡಿ ಅಲ್ಲಿ ವಾಕಿಂಗ್ ಮಾಡಿದರೆ ಪ್ರಯೋಜನ ಇಲ್ಲ. ಎಲ್ಲಿ ಅಗತ್ಯವಿದೆ ಅಲ್ಲಿ ಸ್ಟೇಡಿಯಂ ಮಾಡಿ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯ ಮತ್ತು ಕೋಚ್ ಇರುವಂತೆ ನೋಡಿಕೊಳ್ಳಬೇಕು. ನಾವಿಲ್ಲಿ ಚೀನಾ ಮಾದರಿಯನ್ನು ಅನುಸರಿಸಬೇಕು. ಎಲ್ಲವನ್ನು ಕ್ರಮಬದ್ಧವಾಗಿ ಮಾಡಬೇಕು. ಕ್ರೀಡೆಯಿಂದಲೇ ಬದುಕುವ ಸ್ಥಿತಿ ನಿರ್ಮಾಣವಾಗಬೇಕು. ಗ್ರಾಮೀಣ ಮಟ್ಟದಲ್ಲಿ ಮೈದಾನ, ತರಬೇತುದಾರ ಸಿಗಬೇಕು. ತರಬೇತುದಾರ ಸಿಗುವುದೇ ದೊಡ್ಡ ಸವಾಲು. ಹಾಗೆಯೇ ದೇಶ ಸುತ್ತಬೇಕು. ಅಂದರೆ ದೇಶದ ಬೇರೆ ಬೇರೆ ಕಡೆ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಆಗ ನಮ್ಮ ಕ್ರೀಡಾ ಕ್ಷೇತ್ರದಲ್ಲಿನ ಬೆಳವಣಿಗೆಗಳು ಗೊತ್ತಾಗುತ್ತದೆ ಇದು ಅತಿ ಮುಖ್ಯ.

ನಿಮ್ಮ ಪ್ರಕಾರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಬೇಕು?
ಕ್ರೀಡೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಬೇಕು. ಒಂದು ಕ್ರೀಡಾ ಕೇಂದ್ರ ಸ್ಥಾಪನೆ ಮಾಡುವಾಗ ಅಲ್ಲಿ ಶಾಲೆ, ಪ್ರೌಢ ಶಾಲೆ ಮತ್ತು ಕಾಲೇಜು ಮಟ್ಟದ ತನಕದ ಕ್ರೀಡಾ ಚಟುವಟಿಕೆಗಳು ಒಂದೇ ಸೂರಿನಡಿ ಸಿಗುವಂತೆ ಮಾಡಬೇಕು. ಅಲ್ಲಿ ಫಿಸಿಯೋ, ವೈದ್ಯರು ಮತ್ತು ತರಬೇತುದಾರರಿರಬೇಕು. ಕ್ರೀಡಾಪಟುಗಳಲ್ಲಿ ಆಹಾರ ಪದ್ದತಿ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆ ಇರಬೇಕು. ಈ ದುಬಾರಿ ಯುಗದಲ್ಲಿ ಕ್ರೀಡಾಪಟುಗಳಿಗೆ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ ಇದು ಕೆಲವೊಮ್ಮೆ ನಮ್ಮ ಕ್ರೀಡಾ ಜೀವನಕ್ಕೆ ಅಡ್ಡಿಯಾಗುತ್ತದೆ.

ಮುಂದಿನ ಒಲಿಂಪಿಕ್ಸ್‌ನಲ್ಲಿ ನಾವು ಭಾರತೀಯ ಅಥ್ಲೀಟ್‌ಗಳಿಂದ ಪದಕ ನಿರೀಕ್ಷಿಸಬಹುದೇ?
ನಿರೀಕ್ಷಿಸಬಹುದು. ನಮಗೆ ಇನ್ನೂ ಹೆಚ್ಚಿನ ತರಬೇತಿ ಸಿಕ್ಕರೆ ಖಂಡಿತ ನಾವು ಪದಕ ಗೆಲ್ಲಲು ಸಾಧ್ಯ. ಒಲಿಂಪಿಕ್ಸ್‌ನಲ್ಲಿ ಫೈನಲ್‌ಗಂತೂ ತಲುಪಲಿದ್ದೇವೆ ಎಂಬ ವಿಶ್ವಾಸ ನಮ್ಮದು. ನಮಗೆ ಇನ್ನೂ ಹೆಚ್ಚಿನ ಅಂತರರಾಷ್ಟ್ರೀಯ ತರಬೇತಿ ಮತ್ತು ಸ್ಪರ್ಧೆಗಳು ಬೇಕು. ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಳು ಕಠಿಣವಾಗಿರುತ್ತದೆ. ಒಳ್ಳೆಯ ಸಾಧನೆ ಮಾಡುವ ಭರವಸೆ ನನ್ನದು.

ಅಥ್ಲೆಟಿಕ್ಸ್‌ನ ಯಾವ ವಿಭಾಗದಲ್ಲಿ ನಾವು ಒಲಿಂಪಿಕ್ಸ್ ಪದಕ ನಿರೀಕ್ಷಿಸಬಹುದು?
ಇತ್ತೀಚೆಗೆ ನಾವು ಈ ಬಗ್ಗೆ ಮಾಜಿ ಒಲಿಂಪಿಕ್ ಚಾಂಪಿಯನ್ ಒಬ್ಬರಲ್ಲಿ ಮಾತನಾಡುತ್ತಿದ್ದಾಗ ಅವರು ಹೇಳಿದ ಪ್ರಕಾರ ನಮಗೆ ಒಲಿಂಪಿಕ್ಸ್‌ನಲ್ಲಿ ರಿಲೇ ಮತ್ತು ಹರ್ಡಲ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ಇದೆ. ನೋಡೋಣ, ಭವಿಷ್ಯದಲ್ಲಿ ಏನಾಗುತ್ತದೆ ಗೊತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಎಲ್ಲರ ಕನಸು.

ಮುಂದೆ ಯಾವ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದೀರಿ?
ಮುಂದೆ ಏಷ್ಯನ್ ಚಾಂಪಿಯನ್ ಶಿಪ್, ವಿಶ್ವ ಚಾಂಪಿಯನ್‌ಶಿಪ್ ಇದೆ. ಯೂರೋಪಿಯನ್ ಸ್ಪರ್ಧೆಗಳಲ್ಲಿ ಓಡಬೇಕು ಎಂಬ ಅಸೆ ಇದೆ. ಸರ್ಕಾರ ಅನುಮತಿ ಕೊಡಬೇಕು. ಮತ್ತೆ ರಾಷ್ಟ್ರೀಯ ಕ್ರೀಡಾಕೂಟಗಳು ಇದ್ದೇ ಇವೆ.

ಅಕಾಡೆಮಿ ಸ್ಥಾಪಿಸುವ ಯೋಚನೆ ಇದೆಯೇ?
ಅಂತಹ ಉದ್ದೇಶ ಇಲ್ಲ. ನಾನು ಒಳ್ಳೆ ತರಬೇತು ಕೋಡುತ್ತೇನೆ ಎಂಬ ಭರವಸೆ ಇಲ್ಲ. ಒಳ್ಳೆಯ ಅಥ್ಲೀಟ್ ಒಳ್ಳೆಯ ತರಬೇತುದಾರ ಆಗುವ ಸಾಧ್ಯತೆ ತುಂಬಾ ಕಡಿಮೆ. ಒಬ್ಬ ಅಥ್ಲೀಟ್‌ನ್ನು ತಯಾರು ಮಾಡುವುದು ನಿಜಕ್ಕೂ ಕಠಿಣ ಕೆಲಸ. ಆದರೆ ಕ್ರೀಡೆಗೆ ಸಂಬಂಧಿಸಿದ ಆಡಳಿತಾತ್ಮಕ ಕೆಲಸ ಮಾಡಲು ಸಿದ್ಧಳಿದ್ದೇನೆ. ನಾನು ಈಗಾಗಲೇ ೧೦ ವರ್ಷದಿಂದ ಇದೇ ಕ್ಷೇತ್ರದಲ್ಲಿದ್ದೇನೆ. ಇನ್ನೂ ೪ ವರ್ಷ ಇರಬಹುದು.

ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್?
ನನ್ನ ಜೀವನ ಪೂರ್ತಿ ತಿರುವುಗಳೇ ಇದೆ ಎಂದರೆ ಸರಿಯೇನೋ. ನಾನು ೮೦೦ ಮೀ. ಓಟ ಬಿಟ್ಟು ಪುನಃ ೪೦೦ ಮೀ. ಓಡಲು ಶುರುಮಾಡಿದ್ದು, ಗಾಯಗಳು, ಸಮಸ್ಯೆಗಳು, ತರಬೇತುದಾರ ಇಲ್ಲದೆ ಇದ್ದದು ಹೀಗೆ. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾದದ್ದು ಅಲ್ಲಿ ಪದಕ ಗೆದ್ದದ್ದು ಕೂಡ ಒಂದು ತಿರುವು. ಅನಂತರ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದು ಕೂಡ ಒಂದು ಮಹಾನ್ ತಿರುವೇ ಅಗಿದೆ.

ನಿಮ್ಮ ದಿನಚರಿ ಹೇಗಿರುತ್ತದೆ?
ಬೆಳಗೆದ್ದು ಅಭ್ಯಾಸ, ಅನಂತರ ಬ್ರೇಕ್ ಫಾಸ್ಟ್, ಅನಂತರ ವಿಶ್ರಾಂತಿ ಪಡೆಯುತ್ತೇವೆ. ಹೊರಗಡೆ ನಾವು ಹೋಗೋದು ತುಂಬಾ ಕಡಿಮೆ. ಮಧ್ಯಾಹ್ನ ಊಟ, ಆನಂತರ ವಿಶ್ರಾಂತಿ ಅಮೇಲೆ ಪುನಃ ಅಭ್ಯಾಸ. ಭಾನುವಾರ ನಾವು ಸಂಪೂರ್ಣ ವಿಶ್ರಾಂತಿ ಪಡೆಯುತ್ತೇವೆ.

ನೀವು ಸ್ಪರ್ಧೆಗಳಿಗೆ ಹೇಗೆ ಮಾನಸಿಕವಾಗಿ ಸಿದ್ಧರಾಗುತ್ತೀರಿ?
ಮಾನಸಿಕ ಸಿದ್ಧತೆ ಅತ್ಯಗತ್ಯ. ಶಾರೀರಿಕವಾಗಿ ಶ್ರಮ ಪಟ್ಟರೂ ಮಾನಸಿಕ ದೃಢತೆ ಇಲ್ಲವೆಂದರೆ ಅದು ವ್ಯರ್ಥ. ಕ್ರೀಡಾಪಟುವಿಗೆ ಇಚ್ಚಾ ಶಕ್ತಿ ಬೇಕು. ಇಲ್ಲವೆಂದರೆ ಒತ್ತಡ, ಭಯ ಪಡುತ್ತಾರೆ.

ನಿಮಗೆ ಯಾರು ಆದರ್ಶ?
ಅಥ್ಲೆಟಿಕ್ಸ್‌ಗೆ ಸಂಬಂಧಿಸಿದಂತೆ ಪಿ.ಟಿ. ಉಷಾ, ಆಶ್ವಿನಿ ನಾಚಪ್ಪ. ಇನ್ನುಳಿದಂತೆ ನನಗೆ ಅನೇಕ ರೋಲ್ ಮಾಡೆಲ್‌ಗಳಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲಿಯಲು ಇರುತ್ತದೆ.

ಹಿಂದಿನ ಅಥ್ಲೀಟ್‌ಗಳು ತಾವು ಪಿ.ಟಿ. ಉಷಾ ರೀತಿ ಆಗಬೇಕು ಎಂದು ಕನಸು ಕಾಣುತ್ತಿದ್ದರೆ ಈಗ ಅಶ್ವಿನಿ ಅಕ್ಕುಂಜಿ ರೀತಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಇದನ್ನು ನೀವು ಹೇಗೆ ಸ್ವೀಕರಿಸುತ್ತೀರಿ?
ಇದು ಒಂದು ರೀತಿ ಸಂತೋಷವನ್ನುಂಟು ಮಾಡಿದೆ. ನನಗೆ ಏನೋ ಸಾಧಿಸಿದ್ದೇನೆ ಎಂದೆನಿಸುತ್ತದೆ. ಈ ಕ್ಷಣದಲ್ಲಿ ನಾನಿರಬಹುದು ಭವಿಷ್ಯದಲ್ಲಿ ಈ ಸ್ಥಾನಕ್ಕೆ ಮತ್ತೊಬ್ಬರು ಬರುತ್ತಾರೆ. ಇದು ಒಳ್ಳೆಯ ಬೆಳವಣಿಗೆ.

ಯುವ ಕ್ರೀಡಾಪಟುಗಳಿಗೆ ನಿಮ್ಮ ಸಲಹೆ?
ಪ್ರಾಮಾಣಿಕತೆ, ಸಮರ್ಪಣಾ ಮನೋಭಾವ, ಸೋಲು-ಗೆಲುವನ್ನು ಸಮಾನವಾಗಿ ಸ್ವಿಕರಿಸಿ. ತಾಳ್ಮೆ ಇರಲಿ, ಕಠಿಣ ಪರಿಶ್ರಮ ಪಡಿ, ನಿಮ್ಮಲ್ಲಿ ನಿಮಗೆ ವಿಶ್ವಾಸ ಇರಲಿ. ದೇವರ ಮೇಲೆ ನಂಬಿಕೆ ಕಳೆದುಕೊಳ್ಳಬೇಡಿ.

ನಿಮ್ಮ ಇಷ್ಟದ ಆಹಾರ?
ದಕ್ಷಿಣ ಕನ್ನಡ ಶೈಲಿಯಲ್ಲಿ ಮಾಡಿದ ಮೀನಿನ ಪದಾರ್ಥ ಇಷ್ಟ. ಇನ್ನೂ ಐಸ್ ಕ್ರೀಮ್ ಅಂದರೂ ಇಷ್ಟ. ನನಗೆ ಎಲ್ಲಾ ರೀತಿಯ ಆಹಾರ ಪದಾರ್ಥಗಳು ಇಷ್ಟವಾಗುತ್ತದೆ. ಆದರೆ ತಯಾರಿ ಚೆನ್ನಾಗಿರಬೇಕು. ಜಂಕ್ ಫುಡ್ ಮತ್ತು ಎಣ್ಣೆಯ ಆಂಶವಿರುವ ಆಹಾರ ಎಂದರೆ ಒಂಚೂರು ದೂರ.

ಬೇರೆ ಏನಾದರೂ ಹವ್ಯಾಸಗಳು?
ಬೇರೆ ಹವ್ಯಾಸಗಳೇನು ನನಗಿಲ್ಲ. ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಮಯಾವಕಾಶ ಕೂಡ ಸಿಗುತ್ತಿಲ್ಲ.

ಸಿನಿಮಾ ನೋಡುತ್ತೀರಾ?
ತುಂಬಾ ಕಡಿಮೆ. ನ್ಯಾಷನಲ್ ಜಿಯೋಗ್ರಾಫಿ, ಡಿಸ್ಕವರಿ ಚಾನೆಲ್‌ಗಳನ್ನು ನೋಡುತ್ತೇನೆ. ವಾರ್ತೆಯ ಬಗ್ಗೆ ಆಸಕ್ತಿಯಿದೆ.

ರಾಜಕೀಯದಲ್ಲಿ ಆಸಕ್ತಿ ಇದೆಯಾ?
ಇಲ್ಲ.

ಮದುವೆಯ ಬಗ್ಗೆ ಏನಾದರೂ ಯೋಚನೆ?
ಸದ್ಯಕ್ಕೆ ಇಲ್ಲ. ಒಲಿಂಪಿಕ್ಸ್ ಬಳಿಕ ನೋಡಬೇಕು.

ನಿಮ್ಮ ಕನಸಿನ ರಾಜಕುಮಾರ ಹೇಗಿರಬೇಕು?
ಕ್ರೀಡೆಯಲ್ಲಿ ಆಸಕ್ತಿ ಇರಬೇಕು. ಆತ ಕ್ರೀಡಾಪಟುವಾಗಿದ್ದರೆ ಒಳ್ಳೆಯದು.

ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ? ಯಾವುದಾದರೂ ಅವಕಾಶ ಬಂದದ್ದಿದೆಯೆ?
ನಟಿ ಆಗಬೇಕು ಎನ್ನುವ ಆಸೆಯೇನೂ ಇಲ್ಲ. ಆದರೆ ಯಾವುದಾದರೂ ಸಿನಿಮಾದಲ್ಲಿ ಅತಿಥಿ ಪಾತ್ರ ಸಿಕ್ಕರೆ ನಟಿಸಲು ಅಡ್ಡಿಯೇನು ಇಲ್ಲ.

Saturday, January 22, 2011

ಶ್ರೀಕಾಂತ್ ದಾಳಿಗೆ ಕರ್ನಾಟಕ ತತ್ತರ

ಕರ್ನಾಟಕದ ಕ್ರಿಕೆಟಿಗರು ಯಾವ ಪಾಪ ಮಾಡಿದ್ದಾರೆ?
ರಾಜ್ಯದ ಲಕ್ಷ ಲಕ್ಷ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು.
ಈ ವರ್ಷದ ಆರಂಭದಿಂದಲೇ ರಾಜ್ಯ ಕ್ರಿಕೆಟ್ ಒಂದರ ಮೇಲೊಂದು ಅಘಾತ ಅನುಭವಿಸುತ್ತಿದೆ. ದೇಶದ ಪ್ರತಿಷ್ಠಿತ ಟೂರ್ನಿ ರಣಜಿ ಟ್ರೋಪಿಯ ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಬರೋಡ ತಂಡದೆದುರು ಅಘಾತಕಾರಿಯಾಗಿ ಮಕಾಡೆ ಮಲಗಿತು. ಅಮೇಲೆ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ‍್ಸ್ ಬ್ಯಾಂಗಳೂರು’ ರಾಜ್ಯದ ಅಭಿಮನ್ಯು ಮಿಥುನ್‌ರನ್ನು ಹೊರತುಪಡಿಸಿ ಯಾವೊಬ್ಬ ಕ್ರಿಕೆಟಿಗನನ್ನು ಉಳಿಸಿಕೊಳ್ಳಲು ಮನಸ್ಸು ಮಾಡಲಿಲ್ಲ. ಈ ಎಲ್ಲ ಕೆಟ್ಟ ಬೆಳವಣಿಗೆಗಳಿಗೆ ಮುಳ್ಳಿನ ಕಿರೀಟವಿಟ್ಟಂತೆ ಈ ಬಾರಿ ಭಾರತ ಉಪಖಂಡದಲ್ಲಿ ಫೆಬ್ರುವರಿ ೧೯ರಿಂದ ನಡೆಯುವ ಏಕದಿನ ಕ್ರಿಕೆಟ್‌ನ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಗೆ ಸ್ಥಾನ ಸಿಕ್ಕಿಲ್ಲ!
ಈ ಮೂರು ಕೆಟ್ಟ ಬೆಳವಣಿಗೆಗಳ ಹಿಂದೆಯೂ ರಾಜ್ಯದ ಆಟಗಾರರ ಸಾಮರ್ಥ್ಯ, ಪ್ರತಿಭೆಯನ್ನು ಮೀರಿದ ಸಂಗತಿಗಳು ಪ್ರಮುಖ ಪಾತ್ರ ವಹಿಸಿರುವುದು ಖೇದಕರ. ೧೯೭೫ರಿಂದ ಹಿಡಿದು ಇಲ್ಲಿಯ ತನಕ ನಡೆದಿರುವ ೯ ಏಕದಿನ ವಿಶ್ವಕಪ್‌ನಲ್ಲಿ ಕರ್ನಾಟಕದ ಒಬ್ಬ ಕ್ರಿಕೆಟಿಗನಾದರೂ ಭಾರತ ತಂಡದಲ್ಲಿರುತ್ತಿದ್ದರು. ಅಂದರೆ ಮೊಟ್ಟ ಮೊದಲ ಬಾರಿಗೆ ಕನ್ನಡಿಗನಿಲ್ಲದ ವಿಶ್ವಕಪ್ ತಂಡ ಇದಾಗಿದೆ!
೧೯೯೯ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ರಾಜ್ಯದ ೪ ಮಂದಿ ಕ್ರಿಕೆಟಿಗರಿದ್ದರೆ, ಅನಂತರ ನಡೆದ ಎರಡು ವಿಶ್ವಕಪ್‌ಗಳಲ್ಲಿ ರಾಜ್ಯದ ೩ ಮಂದಿ ಆಡಿದ್ದರು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ತಂಡದ ಶೇ. ೨೦ ಭಾಗ ರಾಜ್ಯದ ಆಟಗಾರರಿದ್ದರು. ೨೦೦೭ ಮತ್ತು ೨೦೧೦ರಲ್ಲಿ ನಡೆದ ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ಕ್ರಮವಾಗಿ ರಾಜ್ಯದ ರಾಬಿನ್ ಉತ್ತಪ್ಪ ಮತ್ತು ಆರ್. ವಿನಯ್ ಕುಮಾರ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ೨೦೦೯ರಲ್ಲಿ ರಣಜಿ ಚಾಂಪಿಯನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ, ಪ್ರಸಕ್ತ ರಣಜಿ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರಾಜ್ಯ ತಂಡ ಆರ್ಹವಾಗಿ ಪ್ರಶಸ್ತಿ ಗೆಲ್ಲಬೇಕಿತ್ತು. ಆದರೆ ಸೆಮಿಫೈನಲ್‌ನಲ್ಲಿ ಬರೋಡ ತೋಡಿದ ಖೆಡ್ಡಾಕ್ಕೆ ಬಿದ್ದು ಒದ್ದಾಡಬೇಕಾಯಿತು. ರಾಜ್ಯದ ಆಟಗಾರರಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆ ಇದ್ದರೆ ರಾಜ್ಯ ತಂಡ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದೂವರೆ ದಶಕದ ಹಿಂದೆ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ರಾಜ್ಯದ ಆರು ಮಂದಿ ಇರುತ್ತಿದ್ದರು. ಇಂದು ರಾಷ್ಟ್ರೀಯ ತಂಡವನ್ನು ಮೂರು ಬಗೆಯ ಕ್ರಿಕೆಟ್‌ನಲ್ಲೂ (ಟೆಸ್ಟ್, ಏಕದಿನ, ಟಿ-ಟ್ವೆಂಟಿ) ಪ್ರತಿನಿಧಿಸುವ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಟೆಸ್ಟ್ ತಂಡದಲ್ಲಿ ರಾಹುಲ್ ದ್ರಾವಿಡ್ ಇದ್ದರು ಅವರ ಕುರ್ಚಿ ಕೂಡ ಅಲುಗಾಡುತ್ತಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನಿಡುವ ನೆಪದಲ್ಲಿ ಅವರನ್ನು ಏಕದಿನ ತಂಡದಿಂದ ಸತತವಾಗಿ ಹೊರಗಿಡುತ್ತಿದ್ದರಿಂದ ಅವರು ಮತ್ತೇ ತಂಡ ಸೇರಿಕೊಳ್ಳುತ್ತಾರೆ ಎಂದು ಭಾವಿಸುವ ಸ್ಥಿತಿ ಇರಲಿಲ್ಲ. ಅವರು ಮೊದಲು ವಿಶ್ವಕಪ್‌ಗಾಗಿ ಘೋಷಿಸಿದ್ದ ೩೦ ಆಟಗಾರರ ಪಟ್ಟಿಯಲ್ಲೇ ಸ್ಥಾನ ಪಡೆದಿರಲ್ಲಿಲ್ಲ.
ಇನ್ನುಳಿದಂತೆ ಪ್ರಸಕ್ತ ರಾಜ್ಯ ರಣಜಿ ತಂಡ ಪ್ರತಿನಿಧಿಸುವ ಆಟಗಾರರಲ್ಲಿ ಸುನಿಲ್ ಜೋಷಿ, ರಾಬಿನ್ ಉತ್ತಪ್ಪ, ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದರಲ್ಲಿ ಜೋಷಿ ಮುಂದೆದೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಉಳಿದ ಮೂವರು ಆಟಗಾರರೂ ಯಾವಾಗ ಬೇಕಾದರೂ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರತಿಭೆ ಹೊಂದಿದ್ದಾರೆ. ಆದರೆ ಕೆ. ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ ಮಾತ್ರ ರಾಜ್ಯದ ಕ್ರಿಕೆಟಿಗರನ್ನು ಮೂಲೆ ಗುಂಪು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುವುದರಿಂದ ಅದೂ ಕೂಡ ಮರೀಚಿಕೆಯಾಗಿಬಿಟ್ಟಿದೆ. ಇಲ್ಲವೆಂದರೆ, ಕಳೆದ ವರ್ಷದ ಮಧ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಭಿಮನ್ಯು ಮಿಥುನ್‌ರನ್ನು ಹೊರಗಿಟ್ಟು ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಉಮೇಶ್ ಯಾದವ್ ಮತ್ತು ಜೈದೇವ್ ಉನ್ಕದತ್ ಎಂಬ ಮಾಮೂಲಿ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾದರೂ ಯಾವ ಮಾನದಂಡದ ಮೇಲೆ? ಐಪಿಎಲ್ ಸೇರಿದಂತೆ ರಣಜಿ ಟ್ರೋಪಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಹಾಗೂ ತಾನಾಡಿದ ಏಕೈಕ ಟಿ-ಟ್ವೆಂಟಿ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿನಯ್ ಕುಮಾರ್‌ನನ್ನು ಏಕೆ ಆಯ್ಕೆ ಮಾಡಿಲ್ಲ?
ಸ್ಪೋಟಕ ಬ್ಯಾಟ್ಸ್‌ಮನ್‌ಗಳ ಅಗತ್ಯ ಬಿದ್ದರೆ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ರಾಬಿನ್ ಉತ್ತಪ್ಪರನ್ನು ಮೊದಲು ಘೋಷಿಸಿದ್ದ ೩೦ ಜನರ ಪಟ್ಟಿಗೂ ಪರಿಗಣಿಸಿರಲಿಲ್ಲ. ಪುಣೆ ವಾರಿಯರ‍್ಸ್ ತಂಡ ಐಪಿಎಲ್ ಹರಾಜಿನಲ್ಲಿ ಎರಡನೇ ಗರಿಷ್ಠ ಮೊತ್ತ ನೀಡಿ ಅವರನ್ನು ಖರೀದಿಸಿದೆ. ಇದು ಅವರ ಮಹತ್ವವನ್ನು ತೋರಿಸುತ್ತದೆ. ಉತ್ತಪ್ಪರಲ್ಲಿ ಸ್ಥಿರತೆಯ ಕೊರತೆಯಿದೆ ಎಂಬುದು ಒಪ್ಪಿಕೊಳ್ಳುವ ವಿಚಾರ. ಇದೇ ಮಾನದಂಡವಾದರೆ ವಿಶ್ವಕಪ್‌ಗೆಂದು ಘೋಷಿಸಿರುವ ೧೫ ಜನರ ತಂಡದಲ್ಲಿರುವ ಪ್ರತಿಯೊಬ್ಬರಲ್ಲೂ ಈ ಸಮಸ್ಯೆಯಿದೆ. ಅದರಲ್ಲೂ ಆಕ್ರಮಣಕಾರಿ ಆಟಗಾರರ ವಿಚಾರದಲ್ಲಂತೂ ಇದು ಇನ್ನಷ್ಟು ಸತ್ಯ. ಆದರೂ ಉಳಿದವರನ್ನು ತೆಗೆದುಕೊಂಡು ಅವರಿಗೆ ಕೊಕ್ ಕೊಡಲಾಗಿದೆ ಎಂದರೆ ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕಾಗಿದ್ದ ಮತ್ತೊಬ್ಬ ರಾಜ್ಯದ ಆಟಗಾರ ಮನೀಷ್ ಪಾಂಡೆ. ಐಪಿಎಲ್‌ನಲ್ಲಿ ಶತಕ ಹೊಡೆದ ಮೊದಲ ಭಾರತೀಯ ಆಟಗಾರ ಈತ. ತನ್ನ ಪ್ರತಿಭೆಯ ಆಳವನ್ನು ತೆರೆದಿಟ್ಟು ಮೂರು ವರ್ಷಗಳಾಗುತ್ತ ಬಂದರು ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಅವರನ್ನು ಕೇಳುವವರಿಲ್ಲ್ಲ. ಈಗ ರಾಷ್ಟ್ರೀಯ ತಂಡಕ್ಕೆ ಬೌಲರ್‌ಗಳನ್ನು ಆಯ್ಕೆ ಮಾಡುವಾಗ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಕೂಡ ಪರಿಗಣಿಸುವ ವಿಚಿತ್ರ ಅಭ್ಯಾಸ ಶುರುವಾಗಿದೆ. ಆ ಮೂಲಕ ಆರ್. ಆಶ್ವಿನ್, ಪಿಯೂಷ್ ಚಾವ್ಲ, ಪ್ರವೀಣ್ ಕುಮಾರ್ ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ವಿನಯ್, ಪಾಂಡೆ ಮತ್ತು ಮಿಥುನ್ ಇವರಿಗಿಂತ ಚೆನ್ನಾಗಿ ಬ್ಯಾಟ್ ಬೀಸಬಲ್ಲರು ಎಂಬುದು ಈಗಾಗಲೇ ಸಾಬೀತಾಗಿದೆ. ಆದರೂ ಅವರನ್ನು ಪರಿಗಣಿಸಿಲ್ಲ.
ಭಾರತೀಯ ಆಯ್ಕೆ ಸಮಿತಿಯ ಮುಖ್ಯಸ್ಥ ತಮಿಳುನಾಡಿನವರಾದ ಕೆ. ಶ್ರೀಕಾಂತ್ ತನ್ನ ತವರು ನೆಲದ ಕ್ರಿಕೆಟಿಗರಿಗೆ ನೀಡುತ್ತಿರುವ ಆದ್ಯತೆ ಮತ್ತು ಇತರ ದಕ್ಷಿಣ ಭಾರತದ ಕ್ರಿಕೆಟಿಗರತ್ತ ಅವರ ಮಲತಾಯಿ ಧೋರಣೆ ಗುಟ್ಟಾಗಿಯೇನೂ ಉಳಿದಿಲ್ಲ. ವಿಶ್ವಕಪ್‌ಗಾಗಿ ಘೋಷಿಸಲಾದ ತಂಡದಲ್ಲೂ ಅದು ಮತ್ತೊಮ್ಮೆ ಬಯಲಾಗಿದೆ. ಅವರ ಈ ಚಿತಾವಣೆಗಳಿಗೆ ಬಿಸಿಸಿಐಯ ಕಾರ್ಯದರ್ಶಿ ಅವರದ್ದೆ ನಾಡಿನವರಾದ ಶ್ರೀನಿವಾಸನ್‌ರ ಪೂರ್ಣ ಆಶಿರ್ವಾದವೂ ಇದೆ. ತಮಿಳುನಾಡಿನ ಕ್ರಿಕೆಟಿಗರು ಮತ್ತು ಐಪಿಎಲ್‌ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಆಟಗಾರರು ಸರಾಗವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಮುರುಳಿ ವಿಜಯ್, ಮನಪ್ರೀತ್ ಗೋನಿ, ಸುದೀಪ್ ತ್ಯಾಗಿ, ಆರ್. ಅಶ್ವಿನ್ ಹೀಗೆ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನೊಂದು ದುರಂತವೆಂದರೆ ಅವರು ತಮಿಳುನಾಡಿನ ಪ್ರತಿಭಾವಂತ ಕ್ರಿಕೆಟಿಗರಿಗೂ ಮಣೆ ಹಾಕುತ್ತಿಲ್ಲ. ಇಲ್ಲವೆಂದರೆ ಪ್ರಸಕ್ತ ತಮಿಳು ನಾಡಿನ ರಣಜಿ ತಂಡದಲ್ಲಿ ಆಡುವ ಎಸ್. ಬದ್ರಿನಾಥ್ ರಾಷ್ಟ್ರೀಯ ತಂಡದಲ್ಲಿ ಸಾಕಷ್ಟು ಅವಕಾಶ ಪಡೆಯಬೇಕಿತ್ತು.
ಇದೀಗ ತಮಿಳುನಾಡಿನ ಮುರುಳಿ ವಿಜಯ್ ಮತ್ತು ಆರ್. ಅಶ್ವೀನ್ ರಾಷ್ಟ್ರೀಯ ತಂಡದ ಒಳ ಹೊರಗೆ ಹೋಗುತ್ತಿದ್ದಾರೆ. ವಿಜಯ್ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿದ್ದರೂ ಕೂಡ ಏಕದಿನ ಮತ್ತು ಟ್ವೆಂಟಿ - ಟ್ವೆಂಟಿಯಲ್ಲಿ ವಿಫಲರಾಗಿದ್ದಾರೆ. ಆದರೆ ಅವರಿಗೆ ಸಿಗುವ ಅವಕಾಶಗಳ ಒರತೆ ಬತ್ತಿಲ್ಲ. ವಿಜಯ್‌ರ ಆಯ್ಕೆಗೆ ನೀಡುವ ಮಾನದಂಡ ಎಂದರೆ ಅವರು ಐಪಿಎಲ್‌ನಲ್ಲಿ ಗಳಿಸಿದ ಶತಕ. ಆದರೆ ಅದೇ ರೀತಿಯ ಶತಕವನ್ನು ಮನೀಷ್ ಪಾಂಡೆಯೂ ಐಪಿಎಲ್‌ನಲ್ಲಿ ಬಾರಿಸಿದ್ದಾರೆ. ಹಾಗೇ ಕಳೆದ ಎರಡು ರಣಜಿ ಋತುಗಳಲ್ಲೂ ಪಾಂಡೆ ರನ್ ಹೊಳೆಯನ್ನೇ ಹರಿಸಿದ್ದಾರೆ. ಹಾಗಿದ್ದ ಮೇಲೆ ವಿಜಯ್ ಮಾತ್ರ ಯಾಕೆ ಬೇಕು, ಪಾಂಡೆ ಮಾತ್ರ ಯಾಕೆ ಬೇಡ?
ಇನ್ನೂ ಒಂದೆರಡು ಪಂದ್ಯಗಳಿಂದ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯಲಾಗುವುದಿಲ್ಲ. ಅದ್ದರಿಂದ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಧೋನಿ, ರೋಹಿತ್ ಶರ್ಮ, ಯೂಸುಫ್ ಪಠಾಣ್‌ರಿಗೆ ಸತತವಾಗಿ ಅವಕಾಶ ನೀಡಿದ್ದಾಗ ಹೇಳಿದ್ದುಂಟು. ಆದರೆ ಈ ನುಡಿ ಮತ್ತು ನಡೆ ರಾಜ್ಯದ ಮಿಥುನ್, ವಿನಯ್‌ರಿಗೆ ಅನ್ವಯವಾಗಲಿಲ್ಲ. ಅವರು ಉತ್ತಮ ಪ್ರದರ್ಶನ ನೀಡಿದರೂ ಕೂಡ ಒಂದು ಪಂದ್ಯದ ಬಳಿಕ ರಾಷ್ಟ್ರೀಯ ತಂಡದಿಂದ ಗಂಟುಮೂಟೆ ಕಟ್ಟವಂತಾಗಿದೆ.
ಈ ಬಾರಿ ವಿಶ್ವಕಪ್‌ಗಾಗಿ ಆಯ್ಕೆ ಮಾಡಿದ ತಂಡದಲ್ಲಿನ ಎರಡು ಸ್ಥಾನಗಳು ಧೋನಿ ಮತ್ತು ಶ್ರೀಕಾಂತ್‌ರ ನಡುವಿನ ರಾಜಿ ಸೂತ್ರಕ್ಕೆ ಬಲಿಯಾಗಿದೆ. ಅಶ್ವಿನ್‌ನ ಬೆನ್ನಿಗೆ ನಿಂತ ಶ್ರೀಕಾಂತ್ ಅವರನ್ನು ೧೫ರ ಬಳಗದೊಳಗೆ ತಳ್ಳಿದ್ದರೆ, ನಾನೂ ಅವರಿಗಿಂತ ಕಡಿಮೆ ಇಲ್ಲ ಎಂದು ಪಿಯೂಷ್ ಚಾವ್ಲರನ್ನು ಧೋನಿ ವಿಶ್ವಕಪ್ ತಂಡದೊಳಗೆ ತುರುಕಿದ್ದಾರೆ.
ಇಬ್ಬರು ಬಲಗೈ ಆಫ್ ಸ್ಪಿನ್ನರ್‌ಗಳನ್ನು ಆಡಿಸುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿ. ಅಶ್ವಿನ್‌ರ ಬದಲು ಪ್ರಗ್ಯಾನ್ ಓಜಾರನ್ನು ಆಯ್ಕೆ ಮಾಡಿದ್ದರೆ ಅವರು ಆಫ್ ಸ್ಪಿನ್ನರ್ ಆಗಿದ್ದರು ಕೂಡ ಎಡಗೈ ಸ್ಪಿನ್ನರ್ ಆಗಿರುತ್ತಿದ್ದರಿಂದ ತಂಡದ ಸ್ಪಿನ್ ದಾಳಿಗೆ ವೈವಿಧ್ಯತೆ ಸಿಗುತ್ತಿತ್ತು. ಆದರೆ ಇಲ್ಲಿ ಅಶ್ವೀನ್‌ಗೆ ಮಣೆ ಹಾಕಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಸಾಮರ್ಥ್ಯ ಇನ್ನೂ ನಿಗೂಢವಾಗಿದೆ. ಚಾವ್ಲರ ಅಯ್ಕೆ ಮಾತ್ರ ಎಲ್ಲರನ್ನೂ ಸಖೇದಾಶ್ಚರ್ಯಗೊಳಿಸಿದೆ. ಕಳೆದ ಮೇ ತಿಂಗಳಲ್ಲಿ ಸುರೇಶ್ ರೈನಾ ನೇತೃತ್ವದಲ್ಲಿ ತನ್ನ ಎರಡನೇ ದರ್ಜೆ (ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು) ತಂಡವನ್ನು ಏಕದಿನ ತ್ರಿಕೋನ ಸರಣಿಯನ್ನಾಡಲು ಜಿಂಬಾಬ್ವೆಗೆ ಕಳುಹಿಸಲಾಗಿತ್ತು. ಆ ತಂಡದಲ್ಲೂ ಚಾವ್ಲ ಇರಲಿಲ್ಲ. ಅವರು ೨೦೦೮ನೇ ಜುಲೈ ಬಳಿಕ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಇಷ್ಟರವರೆಗೆ ಅವರು ಭಾರತದಲ್ಲಿ ಒಂದೇ ಒಂದು ಏಕದಿನ ಪಂದ್ಯ ಆಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರು ಪಂದ್ಯಗಳ (ಈ ಲೇಖನ ಅಚ್ಚಿಗೆ ಹೋಗುವ ಸಮಯದಲ್ಲಿ) ಮುಗಿದಿದ್ದರು ಅವರು ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಎಸೆತಗಳನ್ನು ಎದುರಿಸಲು ಇಂಗ್ಲೆಂಡ್, ಅಸ್ಟ್ರೇಲಿಯ, ವೆಸ್ಟ್ ಇಂಡೀಸ್ ತಂಡದ ಆಟಗಾರರು ಒದ್ದಾಡುತ್ತಾರೆ ಎಂದು ಧೋನಿ ಸಂಶೋಧಿಸಿದ್ದಾರೆ! ಆಗಿದ್ದರೆ ಈ ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯ ತಂಡಗಳು ಭಾರತ ಪ್ರವಾಸ ಕೈಗೊಂಡಿದ್ದಾಗ ಅವರನ್ಯಾಕೆ ಅಡಿಸಿರಲಿಲ್ಲ? ವಿಶ್ವಕಪ್‌ಗಾಗಿನ ಈ ಎರಡು ತಪ್ಪು ಆಯ್ಕೆಗಳು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬುದಕ್ಕೆ ಮೇರು ಉದಾಹರಣೆ. ಆದರೆ ಈ ಅಪಾರದರ್ಶಕತೆಗೆ ರಾಜ್ಯದ ಕ್ರಿಕೆಟಿಗರು ಬಲಿಯಗುತ್ತಿರುವುದು ನಮ್ಮ ದುರದೃಷ್ಟ.
೨೦೧೦ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ನಡೆದ ಸಂದರ್ಭದಲ್ಲಿ ಭಾರತ ಹೀನಾಯವಾಗಿ ನೆಲಕಚ್ಚಿತ್ತು. ಅಗ ಈ ಸೋಲಿನ ಬಗ್ಗೆ ನಡೆದ ಪೋಸ್ಟ್ ಮಾರ್ಟಂ ವರದಿಯಲ್ಲಿ ಭಾರತದ ಹೆಚ್ಚಿನ ಮತ್ತು ಪ್ರಮುಖ ಆಟಗಾರರು ಅಂತರರಾಷ್ಟ್ರೀಯ ಪಂದ್ಯವಾಡಲು ತಕ್ಕಷ್ಟು ದೈಹಿಕ ಕ್ಷಮತೆ ಹೊಂದಿರಲಿಲ್ಲ ಎಂಬುದು ಗೊತ್ತಾಗಿತ್ತು. ಈ ವಿಶ್ವಕಪ್‌ಗೂ ೪ ಮಂದಿಯನ್ನು ವಿಶ್ವಕಪ್ ಸಮಯಕ್ಕೆ ಸಮರ್ಥರಾಗಬಹುದು ಎಂಬ ಊಹೆಯ ಆಧಾರದಲ್ಲಿ ಆರಿಸಲಾಗಿದೆ. ಈವರಲ್ಲಿ ಮೂವರು ಭಾರತದ ಆಗ್ರ ಕ್ರಮಾಂಕದ ದಾಂಡಿಗರು.
ಈ ಬೆಳವಣಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸಾರಥ್ಯ ವಹಿಸಿರುವ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್‌ರ ಪಾಲಿಗೂ ಒಂದು ಎಚ್ಚರಿಕೆಯ ಘಂಟೆ. ಅವರು ರಾಜ್ಯದ ಮೂಲೆ ಮೂಲೆಯಲ್ಲೂ ಕ್ರಿಕೆಟ್ ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸ ಸಾಕಷ್ಟಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಆಯ್ಕೆ ಮಂಡಳಿ ಮಾಡಿದ ಎಡವಟ್ಟು ಕೈ ಮೀರಿದಾಗಿದ್ದರೂ ರಾಜ್ಯದ ಕ್ರಿಕೆಟ್ ಅಭಿವೃದ್ಧಿಯಲ್ಲಿ ದೂರಗಾಮಿ ಯೋಜನೆ ಹಾಕಿಕೊಂಡು ಅದರಂತೆ ಕಾರ್ಯನಿರ್ವಹಿಸುವ ಹೊಣೆ ಈಗ ಕೆಎಸ್‌ಸಿಎಯದ್ದು. ಅದು ಬೆಂಗಳೂರು ಕೇಂದ್ರಿತ ರಾಜ್ಯ ಕ್ರಿಕೆಟ್‌ನ್ನು ವಿಕೇಂದ್ರಿತಗೊಳಿಸಬೇಕಾಗಿದೆ ಆಗ ರಾಜ್ಯ ರಣಜಿ ತಂಡದ ಪ್ರತಿ ಸ್ಥಾನಕ್ಕೂ ೪ - ೫ ಸ್ಫರ್ಧಿಗಳು ಹುಟ್ಟಿಕೊಳ್ಳುತ್ತಾರೆ. ಆ ಸ್ಪರ್ಧೆಯಲ್ಲಿ ಜೊಳ್ಳೆಲ್ಲ ಹಾರಿ ಗಟ್ಟಿ ಕಾಳು ಮಾತ್ರ ಉಳಿಯುತ್ತದೆ. ಆ ರೀತಿ ಆಗಬೇಕಾದರೆ ರಾಜ್ಯದ ಎಲ್ಲ ಮೂಲೆಗಳಲ್ಲೂ ಅತ್ಯಾಧುನಿಕ ಕ್ರಿಕೆಟ್ ತರಬೇತಿ ಕೇಂದ್ರಗಳ ನಿರ್ಮಾಣವಾಗಬೇಕು. ಪ್ರತಿ ಆಯ್ಕೆಯಲ್ಲೂ ಪಾರದರ್ಶಕತೆ ತರಬೇಕು ಹಾಗೂ ವಶೀಲಿ ಬಾಜಿಗೆ ಅವಕಾಶ ನೀಡಬಾರದು.
ಅವರು ಕೆಎಸ್‌ಸಿಎಯ ಚುನಾವಣಾ ಪೂರ್ವ ಪ್ರಚಾರ ಸಂದರ್ಭಗಳಲ್ಲಿ ಈ ಹಿಂದಿನ ಆವಧಿಗಳಲ್ಲಿ ಆಗಿದ್ದ ತಪ್ಪುಗಳ ಬಗ್ಗೆ ಹಾಗೂ ರಾಜ್ಯ ಕ್ರಿಕೆಟ್ ಅಭಿವೃದ್ಧಿಗಾಗಿ ಅವಶ್ಯವಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದಿದ್ದುಂಟು. ಆಡಿದ ಮಾತುಗಳನ್ನು ಮಾಡಿ ತೋರುವ ಜವಾಬ್ದಾರಿ ಅವರ ಮೇಲಿದೆ.
ವಯಸ್ಸು ಉತ್ತಪ್ಪ, ವಿನಯ್, ಮಿಥುನ್ ಮತ್ತು ಪಾಂಡೆಯವರ ಪರವಾಗಿದೆ. ಮುಂದೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್‌ಗೆ ಕರ್ನಾಟಕದ ೩ ಮಂದಿಯಾದರೂ ಆಯ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಕರ್ನಾಟಕದ ಕ್ರಿಕೆಟ್ ಕಲಿಗಳು ಮುಂದೆ ತಾವಾಡುವ ಪ್ರತಿ ಪಂದ್ಯದಲ್ಲೂ ಅಮೋಘ ನಿರ್ವಹಣೆ ನೀಡಿ ಆಯ್ಕೆ ಮಂಡಳಿಗೆ ತಮ್ಮನ್ನು ಆಯ್ಕೆ ಮಾಡದೆ ಬೇರೆ ಆಯ್ಕೆಯೇ ಇಲ್ಲ ಎಂಬ ಸ್ಥಿತಿ ನಿರ್ಮಾಣ ಮಾಡಬೇಕಿದೆ.

Thursday, January 20, 2011

ಕಾಂಗ್ರೆಸ್‌ನಲ್ಲಿ ಬೆಂಕಿ ಜೆಡಿ(ಎಸ್)ಗೆ ಲಕ್ಕಿ!

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ತಲಾ ಮಟ್ಟದಲ್ಲಿ ರಾಜ್ಯದಲ್ಲಿ ತಲೆ ಹೋಗುವಂತಹ ರಾಜಕೀಯ ಬದಲಾವಣೆಗಳು ಆಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿವೆ. ಆದರೆ ರಾಜ್ಯ ಮಟ್ಟದಲ್ಲಿ ಕೆಲವರ (ಮೂರು ಪಕ್ಷದಲ್ಲೂ) ತಲೆ ಕೆಡಿಸುವ ಸಮೀಕರಣಕ್ಕೆ ಹೇತುವಾಗಿರುವುದು ಮಾತ್ರ ವಿಚಿತ್ರ.

ಅಂಕಿ ಅಂಶಗಳನ್ನು ಆಧಾರಿಸಿ ಹೇಳುವುದಾದರೆ ಬಿಜೆಪಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಮುಂದಿರುವುದು ನಿಜ. ಆದರೆ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದೇ ಆದರೆ ಬಿಜೆಪಿ ಈ ಚುನಾವಣೆಯನ್ನು ಸೋತಿದೆ ಎಂದು ಹೇಳಬಹುದು.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಬಿಜೆಪಿಯ ಪ್ರಗತಿಗೆ ಅಥವಾ ನಿರಂಕುಶತೆಗೆ ಅಂಕುಶವಾಗಿರುವುದು ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಎಂದು ಯಾರಾದರೂ ಭಾವಿಸಿದ್ದೇ ಆದರೆ ಅದು ಸಂಪೂರ್ಣ ತಪ್ಪು. ರಾಜ್ಯದಲ್ಲಂತೂ ಕಾಂಗ್ರೆಸ್ ಪಕ್ಷ ನಿಂತಲ್ಲೆ ಕೊಳೆಯುತ್ತಿದೆ. ಅದರ ಸಾರಥಿ ಬದಲಾದರು ಗತಿ ಬದಲಾಗಿಲ್ಲ. ಆ ಪಕ್ಷದಲ್ಲಿರುವವರು ಕೈಗೆ ಬಂದ ತುತ್ತಿಗೆ ಹತ್ತಾರು ಕೈಗಳು ಕೈ ಹಾಕಿ ಅದನ್ನು ಮಣ್ಣುಪಾಲು ಮಾಡುವಲ್ಲಿ ನಿಸ್ಸಿಮತೆಯನ್ನು ಸಂಪಾದಿಸಿದ್ದಾರೆ.

ಆದರೆ ರಾಜ್ಯದಲ್ಲಿನ ಬಿಜೆಪಿಗೆ ಒಂಚೂರಾದರೂ ಭಯವಿದ್ದರೆ ಅದು ಜೆಡಿಎಸ್ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯದ್ದು. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತವರ ಮನೆಯವರು ಹಾಗೂ ರಾಜ್ಯ ಸಚಿವ ಸಂಪುಟದಲ್ಲಿನ ಸಚಿವರುಗಳ 'ಭೂಲೀಲೆ'ಗಳು ಒಂದೊಂದಾಗಿ ಜಗಜಾಹೀರಾಗಲು ಕಾರಣರಾದವಲ್ಲಿ ಕುಮಾರಸ್ವಾಮಿ ಒಬ್ಬರು. ಅವರ ಪ್ರಯತ್ನಕ್ಕೆ ಈ ಪಂಚಾಯತ್ ಚುನಾವಣೆಗಳು ಸಾಧಾರಣ ಪ್ರತಿಫಲ ನೀಡಿದೆ. ಅದರೆ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ಕಸರತ್ತು ಮತ್ತು ದೇಶದ ರಾಜಕೀಯದಲ್ಲಿ ಅಗುತ್ತಿರುವ ಕೆಲ ಬೆಳವಣಿಗೆಗಳು ಕುಮಾರಸ್ವಾಮಿ ಮುಂಬರುವ ದಿನಗಳಲ್ಲಿ 'ಬಂಪರ್ ಬೆಳೆ' ಕಟಾವ್ ಮಾಡಲಿದ್ದಾರೆ ಎಂಬುದನ್ನು ನಂಬಲು ಕಾರಣಗಳನ್ನು ಒದಗಿಸಿ ಕೊಟ್ಟಿದೆ.

ಇಂದು ಕೇಂದ್ರದಲ್ಲಿನ ಯುಪಿಎ ಸರ್ಕಾರ ಹಗರಣ, ವಿಫಲತೆ ಮತ್ತು ಗೊಂದಲಗಳ ಗೂಡಾಗಿದೆ. ಯುಪಿಎ - ೨ ದೇಶದ ಜನರ ಪಾಲಿಗೆ ಮತ್ತು ಸ್ವತಃ ಸೋನಿಯಾ ಗಾಂಧಿಗೆ ದುಸ್ವಪ್ನವಾಗಿದೆ! ೨ಜಿ ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗೆ ಸಂಬಂಧಪಟ್ಟ ಹಗರಣಗಳು ಯುಪಿಎ ಮಧುಚಂದ್ರವನ್ನು ಕೊನೆಗೊಳಿಸಿದ್ದು ಮಾತ್ರವಲ್ಲದೆ ಕಾಂಗ್ರೆಸ್ ವಿರೋಧಿಗಳಿಗೆ ಅದನ್ನು ಹಣಿಯಲು ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಇನ್ನು ಹಣದುಬ್ಬರದಿಂದ ತತ್ತರಿಸಿರುವ ಜನತೆಯ ಸಹಾಯಕ್ಕೆ ಬರುವ ಯಾವೊಂದು ಪ್ರಯತ್ನವನ್ನು ಅದು ಮಾಡಿಲ್ಲ. ಹಾಗೇ ಅದು ಸದ್ಯದ ಮಟ್ಟಿಗೆ ತನ್ನ ಬತ್ತಳಿಕೆಯಲ್ಲಿ ದೇಶದ ಜನಸಾಮಾನ್ಯರನ್ನು ಮುಟ್ಟುವ ಯಾವೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಕೂಡ ಹೊಂದಿಲ್ಲ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಯಾವೊಂದು ಗೊಂದಲಗಳಿಲ್ಲದಿದ್ದರೂ ಕೂಡ ಬಾಹ್ಯವಾಗಿ ಅದು ಸಾಕಷ್ಟು ಸಮಸ್ಯೆಗಳನ್ನು ಹೊಂದಿದೆ.
ಕಾಂಗ್ರೆಸ್‌ನಲ್ಲಿನ ಈ ಬಾಹ್ಯ ಗೊಂದಲಗಳೇ ಕುಮಾರಸ್ವಾಮಿಯ ಭಾಗ್ಯದ ಬಾಗಿಲು ತೆರೆಯಬಲ್ಲುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಯುಪಿಎ - ೨ರಲ್ಲಿ ಕಾಂಗ್ರೆಸ್ ೨೦೫ ಶಾಸಕರನ್ನು ಹೊಂದಿ ಸದ್ಯದ ಮಟ್ಟಿಗೆ ಮಜಬೂತಾದ ಸ್ಥಿತಿಯಲ್ಲಿದೆ ಅದರೆ ಇದೇ ಮಾತನ್ನು ಮುಂದೆಯೂ ಹೇಳಲು ಸಾಧ್ಯವಿಲ್ಲ.

ಕಾಂಗ್ರೆಸ್ ಮೈತ್ರಿಕೂಟದ ಎರಡು ಮುಖ್ಯ ಪಕ್ಷಗಳೆಂದರೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ. ಈ ಎರಡು ಪಕ್ಷಗಳ ಜೀವ ಬೇರು ಇರುವ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆಗಳು ನಡೆಯಲಿದೆ. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆ ಆಡಗಿರದಿದ್ದರೂ ಕೂಡ ಅದರ ಈ ಮಿತ್ರಪಕ್ಷಗಳಿಗೆ ಮಾತ್ರ ಈ ಚುನಾವಣೆ ಅತೀ ನಿರ್ಣಾಯಕ.
ಮೊದಲಿಗೆ ಪಶ್ಚಿಮ ಬಂಗಾಳದಲ್ಲಿನ ಸ್ಥಿತಿ ಬಗ್ಗೆ ಗಮನ ಹರಿಸೋಣ. ಅಲ್ಲಿನ ಬಲಿಷ್ಠ ಕೆಂಪುಕೋಟೆಗೆ ಕಾಂಗ್ರೆಸ್ ಏಕಾಂಗಿಯಾಗಿ ಮುತ್ತಿಗೆ ಹಾಕುವ ಸ್ಥಿತಿಯಲ್ಲಿಲ್ಲ. ಆದರೆ ತೃಣಮೂಲ ಕಾಂಗ್ರೆಸ್‌ಗೆ ಆ ಧಮ್ ಸಿದ್ದಿಸಿದೆ. ತೃಣಮೂಲ ಕಾಂಗ್ರೆಸ್‌ನ ಆಧಿನಾಯಕಿ ಮಮತಾ ಬ್ಯಾನರ್ಜಿ ಇಂದು ಕೇಂದ್ರದಲ್ಲಿ ರೈಲ್ವೇ ಮಂತ್ರಿಯಾಗಿದ್ದರು ಕೂಡ ಅವರ ಕನಸು ಪಶ್ಚಿಮ ಬಂಗಾಳದಲ್ಲಿ ತಾನು ಮುಖ್ಯಮಂತ್ರಿಯಾಗುವುದು. ಅದಕ್ಕಾಗಿ ತನ್ನ ಇಲಾಖೆಯನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದ ಅನೇಕ ನೀತಿಗಳ ಬಗ್ಗೆ ಅವರಿಗೆ ಅಸಮಾಧಾನವಿದೆ ಅದನ್ನು ಕೆಲವು ಸಂದರ್ಭಗಳಲ್ಲಿ ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಕೂಡ. ಇತ್ತೀಚಿಗೆ ಪೆಟ್ರೋಲ್ ಬೆಲೆ ಏರಿಕೆಗೆ ಮನಸ್ಸು ಮಾಡಿರುವ ಕಾಂಗ್ರೆಸ್‌ನ ನೀತಿಗೆ ಅವರು ಕೆಂಡಾಮಂಡಲರಾಗಿದ್ದಾರೆ.

ನಂಬಲರ್ಹ ಮೂಲಗಳ ಪ್ರಕಾರ ಈ ಬಾರಿಯ ರೈಲ್ವೇ ಬಜೆಟ್ ಮಂಡಿಸಿ ತನ್ನ ತವರು ರಾಜ್ಯಕ್ಕೆ ರೈಲ್ವೇಯ ಭರಪೂರ ಯೋಜನೆಗಳನ್ನು ಘೋಷಿಸಿ ಯುಪಿಎಯಿಂದ ಹೊರ ಬರುವ ಯೋಜನೆ ಮಮತಾ ಹಾಕಿಕೊಂಡಿದ್ದಾರಂತೆ. ಇದರಿಂದ ತಾನು ಜನಪರ ಎಂದು ತೋರ್ಪಾಡಿಸಿದಂತಾಗುತ್ತದೆ. ಇದೇ ವೇಳೆ ಇನ್ನೊಂದಿಷ್ಟು ಸಮಯ ಕಾದು ಅವರ ಪಕ್ಷ ಪ. ಬಂಗಾಳದಲ್ಲಿ ಏಕಾಂಗಿಯಾಗಿ ಗದ್ದುಗೆಗೆ ಏರಿದ್ದೆ ಆದರೆ ಅನಂತರ ಅವರಿಗೆ ಯುಪಿಎ ಎಂಬ ಕಾಂಗ್ರೆಸ್‌ನ ಹಂಗಿನರಮನೆ ಬೇಕಿಲ್ಲ. ಆಗ ಆದು ಯುಪಿಎಗೆ ಘೋಷಿಸಿರುವ ತನ್ನ ೧೯ ಸಂಸತ್ ಸದಸ್ಯರ ಬೆಂಬಲವನ್ನು ಯಾವ ಕ್ಷಣವದರೂ ವಾಪಾಸ್ ಪಡೆಯುವ ಸಾಮರ್ಥ್ಯ ಪಡೆಯುತ್ತದೆ. ಆಗ ಯುಪಿಎಗೆ ನಿಜವಾದ ಸಂಕಟ ಶುರುವಾಗಲಿದೆ.

ಇನ್ನು ತಮಿಳುನಾಡಿನಲ್ಲಿ ೨ಜಿ ಹಗರಣ ಬೆಳಕಿಗೆ ಬಂದ ಬಳಿಕ ಅಧಿಕಾರರೂಢ ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿ ಹಳಸಿದೆ. ಆದರೆ ಕೆಲ ಅನಿವಾರ್ಯತೆಗಳು ಈ ಹಳಸಿದ ಸಂಬಂಧ ಅಗಲುವಂತೆ ಮಾಡಿಲ್ಲ. ಮುಂದಿನ ಮೇಯಲ್ಲಿ ಅಲ್ಲಿ ನಡೆಯಬಹುದಾದ ಚುನಾವಣೆಯನ್ನು ಈ ಎರಡು ಪಕ್ಷಗಳು ಹೇಗೆ ಎದುರಿಸುತ್ತವೆ ಎಂಬುದು ಇನ್ನೂ ನಿಗೂಢ. ಎ. ರಾಜಾ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಡಿಎಂಕೆ ಜೊತೆಗಿನ ತನ್ನ ಮೈತ್ರಿಯನ್ನು ಕಡಿದುಕೊಂಡರೆ ತಾನು ಯುಪಿಎಗೆ ಬೆಂಬಲ ನೀಡುವುದಾಗಿ ಎಐಎಡಿಎಂಕೆಯ ನಾಯಕಿ ಜಯಲಲಿತಾ ಈ ಮೊದಲೇ ಘೋಷಿಸಿದ್ದಾರೆ. ಆದರೆ ಇದು ತೀರಾ ಲೆಕ್ಕಾಚಾರದ ಹೇಳಿಕೆ ಎಂಬುದನ್ನು ಇಲ್ಲಿ ಮರೆಯಬಾರದು. ಈ ಹೇಳಿಕೆಯನ್ನು ಕಾಂಗ್ರೆಸ್ ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಕಾಂಗ್ರೆಸ್‌ಗೆ ಅಲ್ಲಿ ಲೆಕ್ಕಕ್ಕೆ ಸಿಗುವಷ್ಟು ಸ್ಥಾನಗಳನ್ನು ಗೆಲ್ಲಲೇ ಬೇಕಿದೆ. ಆ ಮೂಲಕ ಅಲ್ಲಿ ಮೈತ್ರಿ ಸರ್ಕಾರ ಬರುವಂತೆ ನೋಡಿಕೊಂಡರೆ ಅದು ಕೇಂದ್ರದಲ್ಲಿ ಕ್ಷೇಮವಾಗಿರಬಲ್ಲದು. ಎಲ್ಲಾದರೂ ಅಲ್ಲಿ ಎಐಎಡಿಎಂಕೆ ಹೆಚ್ಚಿನ ಸ್ಥಾನ ಗಳಿಸಿ ಬಹುಮತ ಪಡೆಯಲು ವಿಫಲವಾದರೆ ಮತ್ತು ಡಿಎಂಕೆ ಸರಳ ಬಹುಮತ ಪಡೆಯಲು ಬೇಕಾದ ಸ್ಥಾನದಿಂದ ಬಹುದೂರ ಉಳಿದದ್ದೇ ಆದರೆ ಕಾಂಗ್ರೆಸ್ ಆ ಸ್ಥಾನವನ್ನು ತುಂಬಲು ವಿಫಲವಾಗಿ ಅದು ಎಐಎಡಿಎಂಕೆ ಜೊತೆ ತನ್ನನ್ನು ತಾನು ಗುರುತಿಸಿಕೊಂಡು ಅಲ್ಲಿ ಅಧಿಕಾರ ಪಡೆಯಲು ಹವಣಿಸಿದರೆ ಡಿಎಂಕೆ ಜೊತೆಗಿನ ಮೈತ್ರಿ ಕಡಿದು ಬಿದ್ದಂತೆ. ಅದರೆ ಡಿಎಂಕೆ ಲೋಕಸಭೆಯಲ್ಲಿ ೧೮ ಸ್ಥಾನ ಹೊಂದಿದ್ದರೆ ಎಐಎಡಿಎಂಕೆ ಹೊಂದಿರುವುದು ಕೇವಲ ೯ ಸ್ಥಾನ. ಅಲ್ಲಿ ಕಡಿಮೆ ಬೀಳುವ ೯ ಸ್ಥಾನ ಮತ್ತು ಯಾವ ಕ್ಷಣವಾದರೂ ಕಡಿದು ಬೀಳಬಹುದಾದ ಹಗ್ಗದ ಮೇಲಿನ ನಡಿಗೆಯಂತಿರುವ ತೃಣ ಮೂಲ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದು ಬಿದ್ದಲ್ಲಿ ಆ ಪಕ್ಷದ ೧೯ ಸದಸ್ಯರನ್ನು ಯುಪಿಎ ಕಳೆದುಕೊಳ್ಳಬೇಕಾಗುತ್ತದೆ. ಆಗ ಯುಪಿಎಗೆ ನಿಜವಾದ ಬಿಕ್ಕಟ್ಟು ಅಟಕಾಯಿಸಿಕೊಳ್ಳುತ್ತದೆ. ಆಗ ಯುಪಿಎ ಹೆಚ್ಚು ಕಡಿಮೆ ೩೭ ಸಂಸದರ ಬೆಂಬಲ ಕಳೆದುಕೊಳ್ಳುತ್ತದೆ. ಆದರೆ ಎಐಎಡಿಎಂಕೆ ಬೆಂಬಲ ನೀಡಿದ್ದೆ ಆದರೆ ಆಗ ಯುಪಿಎಗೆ ಮತ್ತೆ ೨೮ ಸಂಸತ್ ಸದಸ್ಯರ ಬೆಂಬಲ ಬೇಕಾಗುತ್ತದೆ.

ಈ ಸಂದರ್ಭದಲ್ಲಿ ಅದು ಉತ್ತರ ಪ್ರದೇಶದಲ್ಲಿನ ಎರಡು ರಾಜಕೀಯ ಶಕ್ತಿಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಅಥವಾ ಬಹುಜನ ಸಮಾಕವಾದಿ ಪಕ್ಷ (ಬಿಎಸ್‌ಪಿ) ಇವುಗಳಲ್ಲಿ ಒಂದರ ಸಹವಾಸ ಮಾಡುವುದು ಅನಿವಾರ್ಯವಾಗುತ್ತದೆ. ಈ ಪಕ್ಷಗಳಿಗೂ ಕಾಂಗ್ರೆಸ್ ಸಹವಾಸ ಹೊಸದಲ್ಲ. ಆದರೆ ಇಂತಹ ಪರಿಸ್ಥಿತಿ ಉದ್ಭವಿಸಿದಲ್ಲಿ ಈ ಎರಡು ಪಕ್ಷಗಳಲ್ಲಿ ಯಾವ ಪಕ್ಷ ಕಾಂಗ್ರೆಸ್ ಜೊತೆಗೆ ಹೋಗಬಹುದು ಎಂಬುದಕ್ಕೆ ಮುಂಬರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ. ಎಸ್‌ಪಿ ಲೋಕಸಭೆಯಲ್ಲಿ ೨೩ ಸ್ಥಾನ ಹೊಂದಿದ್ದರೆ ಬಿಎಸ್‌ಪಿ ೨೧ ಸ್ಥಾನ ಹೊಂದಿದೆ. ಈ ಎರಡು ಪಕ್ಷಗಳಲ್ಲಿ ಯಾವ ಪಕ್ಷ ಯುಪಿಎ ಜೊತೆ ತನ್ನನ್ನು ತಾನು ಗುರುತಿಸಿಕೊಂಡರು ಕಾಂಗ್ರೆಸ್‌ಗೆ ಲಾಭವಾಗಲಿದೆ. ಆದರೆ ಮತ್ತೂ ಕೆಲ ಸ್ಥಾನದ ಕೊರತೆ ಕಾಡಲಿದೆ. ಆ ಸ್ಥಾನವನ್ನೂ ಸಮಾಜವಾದಿ ಪಕ್ಷದ ಗೆಳೆಯನಾಗಿರುವ ರಾಷ್ಟ್ರಿಯ ಜನತಾದಳಕ್ಕೆ ತುಂಬುವ ಸಾಮರ್ಥ್ಯವಿದೆ. ಅಂದರೆ ಚತುರ್ಥ ರಂಗ ಸಂಪೂರ್ಣವಾಗಿ ಯುಪಿಎ ಜೊತೆ ಕೂಡಿಕೊಳ್ಳಬೇಕು. ಆದರೆ ಯುಪಿಎಗೆ ಇದಕ್ಕಿಂತ ಅವಮಾನಕಾರಿ ಮತ್ತು ಸಂದಿಗ್ಧ ಪರಿಸ್ಥಿತಿ ಬೇರೆ ಇರದು. ಏಕೆಂದರೆ ಯುಪಿಎ - ೨ ಸರ್ಕಾರ ರಚನೆ ಆಗುವ ಸಂದರ್ಭದಲ್ಲಿ ಈ ಪಕ್ಷಗಳನ್ನು ಕಾಂಗ್ರೆಸ್ ಅಸ್ಪಶ್ಯತೆಯಿಂದ ಕಂಡಿತ್ತು. ಬಿಹಾರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೂ ಕೂಡ ಅದು ರಾಷ್ಟ್ರೀಯ ಜನತಾದಳದಿಂದ ದೂರ ನಿಂತು ಚುನಾವಣೆ ಎದುರಿಸಿತ್ತು. ಭ್ರಷ್ಟರನ್ನು ಕಂಡರೆ ನಾವು ಮಾರುದ್ದ ದೂರ ಸರಿಯುತ್ತೇವೆ ಎಂಬ ಸಂದೇಶ ನೀಡಿತ್ತು. ಆದರೆ ಈ ಮಾರುದ್ಧ ಸರಿಯುವಿಕೆ, ಅನುಕೂಲ ಸಿಂಧು ರಾಜಕಾರಣ ಮತ್ತು ಮಡಿವಂತಿಕೆ ಎಷ್ಟು ಕಾಲ ಉಳಿಯಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಕಾಂಗ್ರೆಸ್‌ನ ಇಕ್ಕಟ್ಟು ಇಲ್ಲಿಗೆ ಮುಗಿದಿಲ್ಲ. ಎನ್‌ಸಿಪಿ ಜೊತೆಗಿನ ಕಾಂಗ್ರೆಸ್ ಸಂಬಂಧ ಕೂಡ ಇಳಿಜಾರು ಮುಖಿಯಾಗಿದೆ. ಅದಕ್ಕೆ ಇತ್ತೀಚೆಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯೊಂದು ತುಪ್ಪ ಸುರಿದಿದೆ. ಎನ್‌ಸಿಪಿ ಲೋಕಸಭೆಯಲ್ಲಿ ೯ ಸ್ಥಾನ ಹೊಂದಿದೆ. ಅದರೊಂದಿಗೆ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಜಗನ್ ಮೋಹನ್ ರೆಡ್ಡಿ ಎಂಬ ಬಿರುಗಾಳಿಗೆ ತತ್ತರಿಸಿ ಹೋಗಿದೆ. ಅಲ್ಲಿ ತೆಲಂಗಾಣ ಮತ್ತು ಕೃಷ್ಣಾ ನದಿ ನೀರಿನ ಹಂಚಿಕೆ ವಿವಾದಗಳ ಹೆಸರಿನ ಕಿಡಿ ಹೊತ್ತಿಕೊಂಡಿದೆ. ಇದು ಕಾಂಗ್ರೆಸ್‌ನ ಕೆಲ ಲೋಕಸಭೆ ಸದಸ್ಯರ ರಾಜೀನಾಮೆ ಮತ್ತು ಉಚ್ಚಾಟನೆಗೆ ಕಾರಣವಾಗಬಹುದು. ಈಗ ಲೋಕಸಭೆಗೆ ಚುನಾವಣೆ ನಡೆದದ್ದೆ ಆದರೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಪ್ರಧಾನಿ ಗದ್ದುಗೆನ ರಾಹುಲ್ ಗಾಂಧಿಯ ವಾರಸ್ದಾರಿಕೆಯ ಕನಸು ನುಚ್ಚು ನೂರಾಗಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟು ಕೊಂಡ ಯುಪಿಎ ಈಗ ಮೈತ್ರಿ ವಿಸ್ತರಣಾ ಕೈಂಕರ್ಯಕ್ಕೆ ಸದ್ದಿಲ್ಲದೆ ಕೈ ಹಾಕಿದೆ. ಈ ಬೆಳವಣೆಗೆ ಜೆಡಿ(ಎಸ್)ಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ಜೆಡಿ(ಎಸ್) ಲೋಕಸಭೆಯಲ್ಲಿ ಒಟ್ಟು ೩ ಸ್ಥಾನ ಹೊಂದಿದೆ.

ಇದು ನಿಜಕ್ಕೂ ದೊಡ್ಡ ಸಂಖ್ಯೆಯೇನು ಅಲ್ಲ. ಆದರೆ ಲೋಕಸಭೆಯುಲ್ಲಿ ಏಕ ಸ್ಥಾನ ಪಡೆದಿರುವ ಆದರೆ ಯುಪಿಎ ಜೊತೆಗೆ ಗುರುತಿಸಿಕೊಳ್ಳದ ಅನೇಕ ಪಕ್ಷಗಳಿವೆ. ಅವುಗಳೆಲ್ಲವನ್ನು ಬುಟ್ಟಿಗೆ ಹಾಕಿಕೊಂಡು ತೃಪ್ತಿ ಪಡಿಸಿಕೊಂಡು ಕೂರುವುದರ ಬದಲು ಜೆಡಿ(ಎಸ್)ಗೆ ಮಣೆ ಹಾಕುವುದು ಕ್ಷೇಮ ಎಂಬುದು ಕಾಂಗ್ರೆಸ್‌ನ ಚಿಂತಕರ ಚಾವಡಿಯ ಅಭಿಪ್ರಾಯ.

ಇದೇ ಕಾರಣದಿಂದ ರಾಜ್ಯದಲ್ಲಿ ಜೆಡಿ(ಎಸ್) ಮತ್ತು ಕಾಂಗ್ರೆಸ್‌ನ ದೋಸ್ತಿ ರಾಜಕೀಯ ರಾಜಾರೋಷವಾಗಿ ನಡೆಯುತ್ತಿದೆ. ಇಲ್ಲವೆಂದರೆ ದೇವೇ ಗೌಡರ ಸಹವಾಸ ಬೇಡವೇ ಬೇಡ ಎಂದು ಹೇಳುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಪಂಚಾಯತ್ ಚುನಾವಣೆಯಲ್ಲಿ ಸೋತ ತಕ್ಷಣ ಜೆಡಿ(ಎಸ್) ಕಡೆ ಮೆತ್ತಗಾಗುವ ಸಾಧ್ಯತೆಯೇ ಇರಲಿಲ್ಲ.

ಕುಮಾರಸ್ವಾಮಿಗೆ ಕೂಡ ಹೇಗಾದರೂ ಮಾಡಿ ತಾನು ಕೇಂದ್ರದಲ್ಲಿ ಮಂತ್ರಿಯಾಗಬೇಕು ಎಂಬ ಆಸೆ ಇದೆ. ಅವರ ಆಸೆ ಈಡೇರಿದ್ದೆ ಆದರೆ ಆನಂತರ ರಾಜ್ಯದಲ್ಲಿ ಅವರ ಪಕ್ಷವನ್ನು ಬಲಗೊಳಿಸುವುದು ಸುಲಭ. ರಾಜ್ಯದಲ್ಲಿ ಜೆಡಿ(ಎಸ್) ಬಲಗೊಳ್ಳುವುದೆಂದರೆ ಅದು ಕಾಂಗ್ರೆಸ್‌ನ ಪಾಲಿಗೆ ಬಂದಣಿಕೆ ಇದ್ದಂತೆ. ಜೆಡಿ(ಎಸ್) ಕಣ್ಣು ಹಾಕುವುದು ಕಾಂಗ್ರೆಸ್‌ನ ವೋಟ್ ಬ್ಯಾಂಕ್‌ನ ಮೇಲೆ. ಅದ್ದರಿಂದ ಈ ಮೈತ್ರಿ ಮುಂದಿನ ವಿಧಾನ ಸಭೆ, ಲೋಕಸಭೆಯಚೆಯೂ ವಿಸ್ತರಿಸಿದ್ದೇ ಆದರೆ ಉಭಯ ಪಕ್ಷಗಳಿಗೂ ಲಾಭವಿದೆ.

ಆದರೆ ಈ ಮೈತ್ರಿ ತಾತ್ಕಾಲಿಕವಾಗಿದ್ದು, ಅವಕಾಶವಾದಿತನದಿಂದ ಕೂಡಿದ್ದರೆ ಈ ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮಾರಣಾಂತಿಕ ಪೆಟ್ಟು ತಿನ್ನುವುದು ಮಾತ್ರ ನಿಶ್ಚಿತ.

ವಿಧಾನ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕರಾಗಿರುವ ಸಿದ್ದರಾಮಯ್ಯ ತನ್ನ ತವರು ಪಕ್ಷ ಜೆಡಿ(ಎಸ್) ಜೊತೆ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಉತ್ಸುಕರಾಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್‌ನ ಇತರ ’ದಂಡ’ ನಾಯಕರು ಜೆಡಿ(ಎಸ್) ಜೊತೆ ಹೋಗಲು ಅಷ್ಟೊಂದು ಮನಸ್ಸು ಮಾಡಿದ ಹಾಗಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಜೆಡಿ(ಎಸ್)ನ್ನು ತನ್ನ ಮಿತ್ರ ಪಕ್ಷವೆಂದು ಸ್ಪಷ್ಟವಾಗಿ ಪರಿಗಣಿಸಿದರೆ ರಾಜ್ಯ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಮತ್ತು ಅಸಹಾಯಕರಾಗಿ ಹೈಕಮಾಂಡ್ ಆದೇಶವನ್ನು ಪಾಲಿಸ ಬೇ ಬೇಕಾಗುತ್ತದೆ. ಆಗ ಈ ನಾಯಕರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿ(ಎಸ್) ಮೈತ್ರಿಯ ಗೆಲುವಿಗೆ ಶ್ರಮಿಸುವುದು ಅನುಮಾನ. ಇದು ಒಂದು ಕಡೆ ಬಿಜೆಪಿಗೆ ಲಾಭ ತರಲಿದೆ.

ಮತ್ತೊಂದು ಕಡೆ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್‌ನಲ್ಲಿನ ಒಡಕು ಮತ್ತೂ ಹೆಚ್ಚಾಗುವಂತೆ ಮಾಡಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಬರುವ ಆಥವಾ ಅವರನ್ನು ಹೊರತಳ್ಳುವ ಪ್ರಕ್ರಿಯೆ ಕೂಡ ನಡೆಯುವ ಸಾಧ್ಯತೆಯಿದೆ. ಹಾಗಾದರೆ ಅವರು ಮತ್ತೇ ಜೆಡಿ(ಎಸ್) ತೆಕ್ಕೆಗೆ ಸೇರುವ ಸಾಧ್ಯತೆಯಿದೆ. ಏಕೆಂದರೆ ಅವರಲ್ಲಿ ಪ್ರಸಕ್ತ ’ಅಹಿಂದ’ ಚಳುವಳಿ ಕಟ್ಟುವ ಸಾಮರ್ಥ್ಯ ಉಳಿದಿಲ್ಲ. ಇನ್ನೊಂದು ಕಡೆ ಅವರು ನೇರವಾಗಿ ಜೆಡಿ(ಎಸ್) ಪಾಳಯಕ್ಕೆ ಮತ್ತೇ ಹಾರುತ್ತಾರೆ ಎಂಬ ಮಾತು ಗಟ್ಟಿಯಾಗಿ ಕೇಳಿಸುತ್ತಿದೆ. ಈ ಯಾವುದೇ ಬೆಳವಣಿಗೆ ನಡೆದರೂ ಕೂಡ ಇದರಿಂದ ಲಾಭವಾಗುವುದು ಜೆಡಿ(ಎಸ್)ಗೆ ಮತ್ತು ಕುಮಾರಸ್ವಾಮಿಗೆ.

Tuesday, January 11, 2011

ನನ್ನವಳು!

ಮಳೆಯಂತೆ ಗೆಳೆಯ
ನನ್ನವಳು
ಒಮ್ಮೊಮ್ಮೆ ಮಾತಲ್ಲಿ ಗುಡುಗು
ನಡೆಯಲ್ಲಿ ಮಿಂಚು
ಆದರೂ ಬಣ್ಣಿಸಲಾಗದ
ಬೆಡಗು

ನೀರಂತೆ ಗೆಳೆಯ
ನನ್ನವಳು
ಕೆರೆಯಲ್ಲಿರಲು ಪ್ರಶಾಂತ
ನದಿಯಲ್ಲಿರಲು ಭೊರ್ಗರೆತ
ಆದರೂ ಅವಳ ಮಾತೇ
ನನಗೆ ಸಂಗೀತ

ಪುಸ್ತಕದಂತೆ ಗೆಳೆಯ
ನನ್ನವಳು
ಎಲ್ಲವೂ ತೆರೆದಿಟ್ಟಂತೆ
ಖುಲ್ಲಾಂ ಖುಲ್ಲಾ
ಯಾರಾದೋ ಬೆನ್ನುಡಿ
ಇನ್ಯಾರದೋ ಮುನ್ನುಡಿ
ಆದರೂ ನನ್ನ ಹೆಸರೇ
ಅರ್ಪಣೆಯಲ್ಲಿ

ಬೆಳಕಂತೆ ಗೆಳೆಯ
ನನ್ನವಳು
ಹಗಲಲ್ಲಿ ಸುತ್ತುವಳು
ನನ್ನ ಸುತ್ತಲೂ
ಕತ್ತಲಲ್ಲಿ ನನ್ನೆದುರೆ
ಬೆತ್ತಲು

ಆದರೂ ಆಕೆ
ನನ್ನ ಬಾಳ ಭರವಸೆ ಬಾಗಿಲು
ಪ್ರೀತಿಯ ಮುಗಿಲು
ಎಲ್ಲದಕ್ಕಿಂತ ಮಿಗಿಲು