Monday, November 1, 2010

ಕುಮಾರಸ್ವಾಮಿ ಮತ್ತು ಸಂಪಂಗಿ ಜೊತೆ ನಡೆಸಿದ ವಿಶೇಷ ಸಂದರ್ಶನ

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನಾನು ಕುಮಾರಸ್ವಾಮಿ ಮತ್ತು ವೈ. ಸಂಪಂಗಿ ಜೊತೆ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಇದು 'ದಿ ಸಂಡೆ ಇಡಿಯನ್' ನಲ್ಲಿ ಪ್ರಕಟಿತ.

ಕುಮಾರಸ್ವಾಮಿ
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಮುಖಂಡ

ಪ್ರಸಕ್ತ ಸಂದರ್ಭದಲ್ಲಿ ನಿಮ್ಮ ಪಕ್ಷದ ಮುಂದಿನ ನಡೆಯೇನು?
ಈ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿರುದ್ಧ ನಾವು ಕಳೆದ ಎರಡೂವರೆ ವರ್ಷಗಳಿಂದ ಪರಿಣಾಮಕಾರಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಇದನ್ನು ನಾವು ಮುಂದುವರಿಸುತ್ತೇವೆ. ಈ ಸರ್ಕಾರ ತನ್ನ ತಪ್ಪುಗಳಿಂದ ಪಾಠ ಕಲಿತಿಲ್ಲ. ಅದ್ದರಿಂದ ನಮ್ಮ ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ.

ರಾಜ್ಯದಲ್ಲಿನ ಪ್ರಸಕ್ತ ಗೊಂದಲಗಳಿಗೆ ನಿಮ್ಮ ಪಕ್ಷದ ಕೊಡುಗೆಯೇನು?
ಇದು ಗೊಂದಲ ಅಲ್ಲ. ಗೊಂದಲಕ್ಕಿಂತ ಹೆಚ್ಚಾಗಿ ಈ ಸರ್ಕಾರದ ಹಣದಾಹ ಮತ್ತು ಅಧಿಕಾರ ಎಂದರೆ ದುಡ್ಡು ಮಾಡಲಿರುವುದು ಎಂದು ಕೊಂಡಿದೆ.   ನೆರೆ ಹಾವಳಿಗೆ ತುತ್ತಾದ ಜನರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ, ಗಣಿ ಅಕ್ರಮ, ಬಿಡಿಎ ಮತ್ತು ಸರ್ಕಾರದ ಬೆಲೆಬಾಳುವ ಆಸ್ತಿಯನ್ನು ಮುಖ್ಯಮಂತ್ರಿ ಸ್ವಹಿತಾಸಕ್ತಿಗಾಗಿ ಕಬಳಿಸಿದ್ದಾರೆ, ಇಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ. ಈ ಕೆಟ್ಟ ಸರ್ಕಾರವನ್ನು ರಾಜ್ಯದಿಂದ ತೆಗೆಯದಿದ್ದರೆ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ಪರಿಗಣಿಸಿ ನಾವು ಹೋರಾಟಕ್ಕೆ ಇಳಿದಿದ್ದೇವೆ. ಸರ್ಕರದ ಕಾರ್ಯವೈಖರಿಯ ವಿರುದ್ಧ ನಮ್ಮ ಹೋರಾಟವಿದೆ ನಮಗೆ ಮುಖ್ಯಮಂತ್ರಿಗಳ ಮೇಲೆ ಯಾವುದೇ ರೀತಿಯ ದ್ವೇಷವೂ ಇಲ್ಲ. ಕಾಂಗ್ರೆಸ್ ನಾಯಕರು ತಾವು ಸರ್ಕಾರವನನ್ನು ಉರುಳಿಸಲು ಪ್ರಯತ್ನಿಸುತ್ತಿಲ್ಲ ಎಂಬ ಮಡಿವಂತಿಕೆಯ ಮಾತುಗಳನ್ನಾಡಿ ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಆ ರೀತಿ ಹೇಳುವುದಿಲ್ಲ. ನನ್ನದೇನಿದ್ದರೂ ಜನರ ಒಳಿತಿಗಾಗಿನ ಹೋರಾಟ.

ನೀವು ಬಿಜೆಪಿ ಸರಕಾರವನ್ನು ಉರುಳಿಸಲು ಹೋಗಿ ಇದೀಗ ನಿಮ್ಮ ಶಾಸಕರನ್ನೇ ಕಳೆದುಕೊಳ್ಳುತ್ತಿದ್ದೀರಿ ಮತ್ತು ಅವರನ್ನು ನಿಮ್ಮೊಂದಿಗೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೀರಿ ಅಲ್ಲವೇ?
ನನ್ನ ಪಕ್ಷದಲ್ಲಿ ಆ ರೀತಿಯ ಯಾವುದೇ ಬೆಳವಣಿಗೆಯಾಗಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕೇಂದ್ರದ ಕೆಳ ನಾಯಕರ ವರ್ತನೆಯಿಂದ ನಿರಾಶರಾದ ಆ ಪಕ್ಷದ ಶಾಸಕರು ತಮ್ಮ ರಾಜಿನಾಮೆ ಸಲ್ಲಿಸುತ್ತಿದ್ದಾರೆ.

ನಿಮ್ಮ ಲೆಕ್ಕಾಚಾರ ತಪ್ಪಿದೆ ಎಂದು ನಿಮಗೆ ಅನಿಸುತ್ತಿದೆಯೇ?
ನನ್ನ ಲೆಕ್ಕಾಚಾರ ತಪ್ಪಿಲ್ಲ, ರಾಜ್ಯ ಮತ್ತು ಕೇಂದ್ರದ ಸರ್ಕಾರ ದೇಶದ ಇತಿಹಾಸದಲ್ಲೇ ಅನೇಕ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ. ಹೊಸ ಹೊಸ ಸಂಪ್ರದಾಯಗಳನ್ನು ಹುಟ್ಟುಹಾಕಿವೆ. ಆ ಎರಡು ಪಕ್ಷಗಳು ಒಂದಾಗಿವೆ. ಅಕ್ಟೋಬರ್ ೧೧ರಂದು ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ಅದನ್ನು ಹಾಗೆಯೇ ಇಟ್ಟುಕೊಂಡು ಮೂರೇ ದಿನದಲ್ಲಿ ಪುನಃ ವಿಶ್ವಾಸ ಮತ ಯಾಚಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟರು. ಇದಕ್ಕೆ ಸಂವಿಧಾನದ ಮಾನ್ಯತೆ ಇದೆಯಾ? ಎಂಬುದರ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇಲ್ಲಿ ನನ್ನ ಲೆಕ್ಕಾಚಾರ ತಪ್ಪಿದೆ ಅನ್ನುವುದಕ್ಕಿಂತಲೂ ಪ್ರಜಾಪ್ರಭುತ್ವದ ಆಶಯಗಳು ಬುಡಮೇಲಾಗಿವೆ ಎಂದು ಹೇಳುವುದು ಹೆಚ್ಚು ಸರಿ. ಇಲ್ಲ ನನ್ನ ಪ್ರಜಾಪ್ರಭುತ್ವವನನು ಉಳಿಸುವ ಹೋರಾಟಕ್ಕೆ ಹಿನ್ನೆಡೆಯಾಗಿದೆ.

ನಿಮ್ಮ ಪ್ರಯತ್ನಗಳಿಗೆ ದೆಹಲಿಯ ಕಾಂಗ್ರೆಸ್ ನಾಯಕರು ತಣ್ಣೀರು ಎರಚಿದರು ಎಂದು ಹೇಳಲಾಗುತ್ತಿದೆ ಇದು ನಿಜವೇ?
ವಿಶ್ವಾಸ ಮತ ಯಾಚನೆಯ ಬಳಿಕದ ಎಲ್ಲ ಬೆಳವಣಿಗೆಗಳಿಗೆ ಕೇಂದ್ರ ಕಾರಣ ಇದರಲ್ಲಿ ಯಾರ ಪಾಲು ಎಷ್ಟಿದೆ ಎಂದು ಹೇಳುವುದು ಕಷ್ಟ, ಮುಂದಿನ ದಿನಗಳಲ್ಲಿ ಇದು ಗೊತ್ತಾಗುತ್ತದೆ.

ನಿಮ್ಮ ಎಷ್ಟು ಶಾಸಕರನ್ನು ಬಿಜೆಪಿ ಖರೀದಿಸಲು ಪ್ರಯತ್ನಿಸಿದೆ? ಅವರು ಎಷ್ಟು ಹಣ ಕೊಡಲು ಸಿದ್ಧರಾಗಿದ್ದಾರೆ?
ನಮ್ಮ ಶಾಸಕರನ್ನು ಬಿಜೆಪಿ ಖರೀದಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಬಿಡುಗಡೆ ಮಾಡಿರುವ ಕ್ಯಾಸೆಟ್ ಜನರ ಮುಂದೆ ತಂದಿದೆ. ಅವರು ಶಾಸಕರಿಗೆ ೨೫-೫೦ ಕೋಟಿ ಕೊಡಲು ಸಿದ್ಧರಾಗಿದ್ದಾರೆ. ಹೆಚ್ಚಿನ ಬೇಡಿಕೆ ಇಟ್ಟರೆ ಅದನ್ನು ಕೂಡ ಪರಿಶೀಲಿಸಲು ಅವರು ಸಿದ್ಧರಿದ್ದಾರೆ. ಅವರು ೨೫ - ೫೦ ಕೋಟಿಯನ್ನು ಫಿಕ್ಸ್ ಮಾಡಿದ್ದಾರೆ. ಇನ್ನೂ ಹೆಚ್ಚು ಡಿಮಾಂಡ್ ಮಾಡಿದರೆ ಅದನ್ನು ಪರಿಶೀಲಿಸಲು ಅವರು ಸಿದ್ಧರಾಗಿದ್ದಾರೆ. ನಮ್ಮ ೮ - ೧೦ ಶಾಸಕರನ್ನು ಅವರು ಬಲೆಗೆ ಹಾಕಲು ಪ್ರಯತ್ನ ಪಟ್ಟಿದ್ದಾರೆ.

ನಿಮ್ಮ ಸಿಡಿ ಬಾಂಬ್ ನಿರೀಕ್ಷಿತ ಪರಿಣಾಮ ಬೀರಿಲ್ಲ ಅಲ್ಲವೇ?
ಇಷ್ಟು ಮಾಡಿದ ಮೇಲು ಕೇಂದ್ರ ಸರ್ಕಾರ ಯಾಕೆ ದಿವ್ಯ ಮೌನ ವಹಿಸುತ್ತಿದೆ ಅಂಥ ಗೊತ್ತಿಲ್ಲ ಈ ಬಗ್ಗೆ ನನಗೆ ಖೇದವಿದೆ. ಕಾನೂನಬದ್ಧ ಸಂಸ್ಥೆಗಳ ಮೌನ ನನಗೆ ನೋವು ತಂದಿದೆ.

ಬಿಜೆಪಿ ಸರಕಾರವನ್ನು ಬೀಳಿಸಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿಸುವುದು, ರೇವಣ್ಣ ಉಪಮುಖ್ಯಮಂತ್ರಿ ಮತ್ತು ಕುಮಾರ ಸ್ವಾಮಿಯನ್ನು ಕೇಂದ್ರದಲ್ಲಿ ಮಂತ್ರಿಯನ್ನಾಗಿಸುವುದು ಎಂಬ ಒಳ ಒಪ್ಪಂದ ಆಗಿತ್ತು ಎಂಬ ಮಾತು ಎಲ್ಲೆಡೆಯಿಂದ ಕೇಳಿಸುತ್ತಿದೆ ಇದು ನಿಜವೇ?
ನಾನು ಕೇಂದ್ರದ ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ. ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾರನ್ನೂ ಕೇಳಿಲ್ಲ. ಈ ಕಾರಣಗಳನ್ನಿಟ್ಟು ಕೊಂಡು ನಾನು ಈ ಪ್ರಕ್ರಿಯೆ ಶುರು ಮಾಡಿಲ್ಲ. ಇಂಥಹ ಯಾವುದೇ ಅಜೆಂಡಾಗಳು ನಮ್ಮಲಿಲ್ಲ. ನಮ್ಮ ಮೂಲೋದ್ದೇಶ ಈ ಭ್ರ್ರಷ್ಟ ಸರ್ಕಾರವನ್ನು ಪತನಗೊಳಿಸುವುದಾಗಿದೆ.

ಬಿಜೆಪಿಯ ಬಂಡಾಯ ಚಟುವಟಿಕೆಯಲ್ಲಿ ನಿಮ್ಮ ಪಾತ್ರ?
ಬಿಜೆಪಿಯ ಬಂಡಾಯ ಚಟುವಟಿಕೆಯಲ್ಲಿ ನನ್ನ ಪಾತ್ರವಿಲ್ಲ. ಅವರು ಸ್ವಪ್ರೇರಣೆಯಿಂದ ಬಂಡೆದಿದ್ದಾರೆ. ಇಲ್ಲಿ ನನ್ನ ಇಲ್ಲಿ ನನ್ನ ಚಿತಾವಾಣೆ ಏನು ಇಲ್ಲ. ಮೊದಲ ಸಲ ಬಿಜೆಪಿಯ ಶಾಸಕರು ಚೆನೈಗೆ ಹೋಗಿದ್ದಾಗ ಬಿಜೆಪಿ ೪ - ೫ ಮಂತ್ರಿಗಳು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು ಅನಂತರ ಗೋವಾಕ್ಕೆ ಈ ಶಾಸಕರು ಹೋದರು, ಅಲ್ಲಿಗೂ ಈ ಮಂತ್ರಿಗಳು ಹೋದರು. ಆದರೆ ಈ ಶಾಸಕರು ಅವರಿಗೆ ಮಣೆ ಹಾಕಲಿಲ್ಲ. ಅವರ ದೂರನ್ನು, ನೋವನ್ನು ಕೇಳಲು, ಈ ಬಗ್ಗೆ ಕೂತುಕೊಂಡು ಚರ್ಚಿಸಲು ಬಿಜೆಪಿ ಸಿದ್ಧವಿರಲಿಲ್ಲ್ಲ. ಅನಂತರ ಆ ಶಾಸಕರ ಆಹ್ವಾನ ಮೇಲೆ ತಾನು ಹೋಗಿ ಅವರನ್ನು ಭೇಟಿ ಮಾಡಿಕೊಂಡು ಬಂದದ್ದು ನಿಜ. ನಾನು ಈ ಶಾಸಕರಿಗೆ ಯಾವುದೇ ರೀತಿಯ ಆಮಿಷ ಒಡ್ಡಿಲ್ಲ.

ನಿಮ್ಮ ಪಕ್ಷದ ಸದಸ್ಯರನ್ನು ಉಳಿಸಿಕೊಳ್ಳಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ?
ನಮ್ಮ ಶಾಸಕರು ನಮಗೆ ನಿಷ್ಠರಾಗಿದ್ದಾರೆ. ಅವರು ಪಕ್ಷ ಬಿಡುವ ಅಥವಾ ಪಕ್ಷದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ.
ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ಮೇಲೆ ರಾಷ್ಟ್ರಪತಿಗಳಿಗೆ ದೂರು ಕೊಡುತ್ತೇನೆ ಎಂದಿದ್ದಾರೆ ಇದರ ಪರಿಣಾಮ ಏನಾಗಬಹುದು?
ರಾಷ್ಟ್ರಪತಿ ಮಾತ್ರವಲ್ಲ ಸೋನಿಯಾ ಗಾಂಧಿಯವರಿಗೂ ದೂರು ಕೊಡುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ಕಾಂಗ್ರೆಸ್‌ನ ಪಕ್ಷದ ಆಧ್ಯಕ್ಷೆಯ ಬಳಿಗೆ ದೂರು ಕೊಂಡೊಯ್ಯುತ್ತಿರುವುದು ಬಾಲಿಶ ನಿರ್ಧಾರ. ಈ ಬೆಳವಣಿಗೆಯಿಂದ ಬಿಜೆಪಿ ಸರ್ಕಾರ ಸ್ಥಿರವಾಗಿಲ್ಲ, ಈ ಪಕ್ಷ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಮತ್ತು ಈಗಿರುವ ವ್ಯವಸ್ಥೆ ತಾತ್ಕಾಲಿಕ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಬಿಜೆಪಿ ವಿಶ್ವಾಸಮತ ಕೋರುವ ಸಂದರ್ಭದಲ್ಲಿ ರಾಜ್ಯಪಾಲರು ಮತ್ತು ಸ್ಪೀಕರ್‌ರ ವರ್ತನೆ ಬಗ್ಗೆ ನಿಮ್ಮ ಅನಿಸಿಕೆ ಏನು?
ಈ ಇಬ್ಬರು ಕೂಡ ಕಾನೂನಿನ ಚೌಕಟ್ಟನ್ನು ಮೀರಿ ವರ್ತಿಸಿದ್ದಾರೆ. ಇಬ್ಬರು ಕೂಡ ಹೊಸ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರದ ಪಾತ್ರವೂ ಇದೆ. ಇದು ಮಂದೆ ಚರಿತ್ರೆ ಬರೆಯುವವರಿಗೆ, ಸಂವಿಧಾನ ಪಂಡಿತರಿಗೆ ಒಳ್ಳೆ ಸಾಮಾಗ್ರಿ ಒದಗಿಸುವುದು ನಿಶ್ಚಿತ.

ಮುಂದೆ ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ಆಗಬಹುದು?
ನ್ಯಾಯಾಲಯದ ತೀರ್ಪುನ್ನು ಆಧಾರಿಸಿ ಮುಂದಿನ ಬೆಳವಣಿಗೆಗಳು ಆಗಬಹುದು.

ಈ ತಿಂಗಳ ಆರಂಭದಿಂದ ನಡೆದ ಸರಣಿ ರಾಜಕೀಯ ವಿದ್ಯಮಾನಗಳಿಂದ ನೀವು ಯಾವ ಪಾಠ ಕಲಿತುಕೊಂಡಿರಿ?
ನಾನು ಇಲ್ಲಿ ಪಾಠ ಕಲಿಯುವಂತದ್ದೇನಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಹುದ್ದೆಯನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳಬಹುದು ಮತ್ತು ಕಾನೂನಿನಲ್ಲಿ ಇನ್ನೂ ಸಾಕಷ್ಟು ಲೋಪ ದೋಷಗಳಿವೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಇದನ್ನು ರಾಜ್ಯದ ಜನತೆ ಕೂಡ ಆರ್ಥ ಮಾಡಿಕೊಳ್ಳಬೇಕಿದೆ.

ರಾಜ್ಯದಲ್ಲಿ ಪ್ರತಿಪಕ್ಷಗಳು ಇರುವುದೇ ಬೇಡ ಅಂದರೆ ಹೇಳಲಿ ನಾವೆಲ್ಲ ರಾಜಿನಾಮೆ ಕೊಡುತ್ತೇವೆ ಎಂದು ಹೇಳಿದ್ದೀರಿ ಅಲ್ಲವೇ? ನೀವು ಕೂಡ ಮುಖ್ಯಮಂತ್ರಿಗಳ ಅಣತಿಯಂತೆ ವರ್ತಿಸುತಿದ್ದೀರಾ?  
ಇಲ್ಲಿ ನಾವು ರಾಜಿನಾಮೆ ಕೊಡುವುದು ಬೇರೆ ವಿಷಯ, ಇವತ್ತು ನಮಗೆ ಬೇಕಾಗಿರುವುದು ಈ ರಾಜ್ಯದ ಜನತೆಗೆ ಈ ಸರ್ಕಾರದಿಂದ ಒಳ್ಳೆಯ ಕಾರ್ಯಕೃಮ ನೀಡಲು ಸಾಧ್ಯವೋ ಇಲ್ಲವೋ ಎಂಬುದು.

-----------------------------------------------------------------------------------------------------
ವೈ. ಸಂಪಂಗಿ
(ಕೆಜಿಎಫ್‌ನ ಭಿನ್ನ ಮತೀಯ ಶಾಸಕ) 

ನೀವು ಚುನಾವಣೆಯಲ್ಲಿ ಆರಿಸಿ ಬಂದದ್ದು ರೆಸಾರ್ಟ್‌ಗಳಲ್ಲಿ ಹೋಗಿ ಇರಲಿಕ್ಕಾ?
ರೆಸಾರ್ಟ್‌ಗಳಲ್ಲಿ ಇರುವುದು ಹೊಸದೇನು ಅಲ್ಲ, ದೊಡ್ಡ ದೊಡ್ಡ ನಾಯಕರೇ ರೆಸಾರ್ಟ್‌ಗಳಲ್ಲಿ ಇದ್ದು ಬಂದವರು.

ಆದರೆ ನೀವೇ ಹೇಳಿಕೊಂಡಂತೆ ನೀವು ಜನರ ಪ್ರೀತಿಗೆ ಪಾತ್ರರಾಗಿರುವರು, ನೀವೇ ಜನರಿಂದ ದೂರವಾದರೆ ಅವರ ಆಶೋತ್ತರಗಳಿಗೆ ಸ್ಪಂದಿಸುವವರು ಯಾರು?
ನಾನು ರೆಸಾರ್ಟ್‌ನಲ್ಲಿದ್ದರು ಕೂಡ ನನ್ನ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ನಾನು ಎಲ್ಲ ಬೆಳವಣಿಗೆಗಳನ್ನು ಅವರಿಗೆ ತಿಳಿಸಿದ್ದೇನೆ.

ನೀವು ಸರ್ಕಾರದ ವಿರುದ್ಧ ಬಂಡೇಳಲು ಕಾರಣವೇನು?
ನಾವು ಯಾವತ್ತೂ ಸರ್ಕಾರದ ವಿರುದ್ಧ, ರೆಡ್ಡಿ ಸೋದರರ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ನಾವು ಹೇಳಿಕೆ ನೀಡಿಲ್ಲ. ಈ ಕೆಲಸವನ್ನು ರೇಣುಕಾಚಾರ್ಯನೇ ಮಾಡಿದ್ದ. ಅದರೆ ಇದರಿಂದ ನಮ್ಮ ಮೇಲೆ ಬಿಜೆಪಿ ನಾಯಕರಿಗೆ ತಪ್ಪು ಅಭಿಪ್ರಾಯಗಳು ಬಂದವು. ರೇಣುಕಾಚಾರ್ಯ ಸ್ವಹಿತಾಸಕ್ತಿಗಾಗಿ ನಮ್ಮನ್ನು ಬಳಸಿಕೊಂಡು ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾನೆ. ನಮ್ಮನೆಲ್ಲ ಬಳಸಿಕೊಂಡು ತಾನು ಮಂತ್ರಿಯಾಗಿ ತಮ್ಮನ್ನು ತಾನು ‘ನಾನು ಈ ಗುಂಪಿನ ನಾಯಕ’ ಎಂದು ತೋರಿಸಿಕೊಂಡರು. ನಾವು ಕೂಡ ಈತ ನಮ್ಮ ಸ್ನೇಹಿತ ಎಂದು ಆತನ ಬೆಂಬಲಕ್ಕೆ ನಿಂತೆವು. ನಾನು ಈವರೆಗೆ ಮುಖ್ಯಮಂತ್ರಿಗಳ ಬಳಿ ಯಾವುದೇ ಕೆಲಸ ಇಟ್ಟುಕೊಂಡು ಹೋಗಿಲ್ಲ, ನಾನು ಬಿಡಿಎ ಸೈಟ್ ಕೂಡ ತೆಗೆದುಕೊಂಡಿಲ್ಲ. ನಾವು ೧೦-೨೦ ವರ್ಷದಿಂದ ಹೊರಟ ಮಾಡಿಕೊಂಡು ಬಂದು ಚುನಾವಣೆಯಲ್ಲಿ ಗೆದ್ದು ಶಾಸಕರಾದರು, ಅಧಿಕಾರಕ್ಕೆ ಬಂದರು ನಮ್ಮ ಮೇಲಿನ ಶೋಷಣೆ ಇನ್ನೂ ನಿಂತಿಲ್ಲ ಎಂಬುದಕ್ಕೆ ಇದೇ ಉದಾಹರಣೆ.


ಈ ರೀತಿ ಶೋಷಣೆ ಮಾಡುತ್ತಿರುವುದು ರೇಣುಕಾಚಾರ್ಯರಾ? ಯಡಿಯೂರಪ್ಪನವರಾ?
ಮುಖ್ಯಮಂತ್ರಿಗಳು ಹಿರಿಯರಿದ್ದಾರೆ. ಅವರು ೩೦ - ೪೦ ವರ್ಷಗಳ ಕಾಲ ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ನಮಗೆ ಮಾತ್ರ ಯಾಕೆ ಈ ರೀತಿ ಆಯಿತೆಂಬುದೇ  ಗೊತ್ತಾಗುತ್ತಿಲ್ಲ. ನಾವು ರಾಜ್ಯಪಾಲರಿಗೆ ನೀಡಿದ ದೂರಿಗೆ ಮೊದಲು ಸಹಿ ಹಾಕಿದ್ದು ರೇಣುಕಾಚಾರ್ಯ, ನಮ್ಮ ಎಲ್ಲ ಚಟುಚಟಿಕೆಗಳಿಗೆ ಅವರು ನಾಯಕತ್ವ ವಹಿಸಿದ್ದಾರೆ. ಆದರೆ ಅವರೇ ಇಂದು ಪಕ್ಷದಲ್ಲಿ ಇದ್ದಾರೆ. ಆದರೆ ನಾವು ಹೊರಗಿದ್ದೇವೆ. ನಮಗೆ ಅನ್ಯಾಯವಾಗಿದೆ. ಇಷ್ಟರವರೆಗಿನ ಬಂಡಾಯ ಚಟುವಟಿಕೆಗಳಿಗೆ ನಾಯಕತ್ವ ವಹಿಸಿದ್ದು ಯಾರು? ಆತನೆ. ನಮ್ಮ ಮುಗ್ದತೆಯನ್ನು ಆತ ದುರುಪಯೋಗ ಪಡಿಸಿಕೊಂಡಿದ್ದಾನೆ. ಪಕ್ಷದ ಹಿರಿಯರು ನಮಗೆ ಇನ್ನೊಂದು ಅವಕಾಶ ಮಾಡಿಕೊಡಬೇಕು.


ನಿಮಗೆ ನಿಮ್ಮ ವರ್ತನೆಯ ಬಗ್ಗೆ ಬೇಸರವಾಗಿದೆಯಾ? ಈಗ ಪಶ್ಚಾತಾಪ ಪಡುತ್ತಿದ್ದೀರಾ?
ಹೌದು ಅಷ್ಟೆ. ನನ್ನ ವರ್ತನೆ ಬಗೆ ನನಗೆ ಬೇಸರವಾಗಿದೆ, ನನಗೆ ಮಂತ್ರಿಗಿರಿ ಬೇಡ, ನನಗೆ ನನ್ನ ಜನತೆಗೆ ಒಳ್ಳೆಯದನ್ನು ಮಾಡಬೇಕು.  ಮುಖ್ಯಮಂತ್ರಿಗಳು ನನ್ನ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುತ್ತೇನೆ ಎಂದಿದ್ದರು. ಆದರೆ ಈ ವರ್ತನೆಗೂ ಅವರು ಅಂದು ನೀಡಿದ ಆಶ್ವಾಸನೆಯನ್ನು ಈಡೇರಿಸದಿರುವುದಕ್ಕೂ ಸಂಬಂಧವಿಲ್ಲ. ನಾವು ರೆಸಾರ್ಟ್‌ಗೆ ಹೋದ ಮೇಲೆ ನಮ್ಮನ್ನು ಸಂಪರ್ಕಿಸಿ ಯಾರೂ ಪಕ್ಷಕ್ಕೆ ಕರೆದಿಲ್ಲ. ಎಲ್ಲವನ್ನು ರೇಣುಕಾಚಾರ್ಯರೇ ನಿಭಾಯಿಸಿದ್ದರು. ಎಲ್ಲರು ಅವರ ಜೊತೆಯೇ ಮಾತನಾಡಿದರು. ನಮಗೆ ಅಲ್ಲಿ ಏನು ಆಗುತ್ತಿತ್ತು ಅಂತ ಗೊತ್ತಾಗುತ್ತಿರಲಿಲ್ಲ. ಆದರೂ ನಮಗೆ ಈ ಶಿಕ್ಷೆ ನೀಡಲಾಗಿದೆ. ಇದು ಸರೀನಾ?


ನೀವು ೧೧ ಮಂದಿ ಸೇರಿ ಯಡಿಯೂರಪ್ಪರವರನ್ನು ಬಗ್ಗು ಬಡಿದು ಸಿಕ್ಕಷ್ಟು ಬಾಚಿಕೊಳ್ಳಬೇಕು ಎಂಬು ಉದ್ದೇಶ ನಿಮ್ಮದಾಗಿತ್ತು ಅಲ್ಲವೇ?
ಇಲ್ಲಿ ನಾನು ಎಲ್ಲರ ಅಭಿಪ್ರಾಯ ಹೇಳುತ್ತಿಲ್ಲ, ಆದರೆ ನಾವು ೧೧ ಮಂದಿಯೂ ಒಟ್ಟಿಗಿದ್ದೇವೆ. ನನಗೆ ಮಂತ್ರಿಗಿರಿಯ ಆಸೆಯಿಲ್ಲ, ಬೇರೆಯವರ ಮನಸ್ಸಲ್ಲಿ ಇರಲೂಬಹುದು. ಮಂತ್ರಿ ಗಿರಿ ಸಿಗುವುದು ಬಿಡುವುದು ದೇವರ ಕೈಯಲ್ಲಿದೆ.


ನೀವು ಬಿಜೆಪಿ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಆದರೆ ಯಡಿಯೂರಪ್ಪರಿಗೆ ನಮ್ಮ ವಿರೋಧವಿದೆ ಎಂದು ಹೇಳುತ್ತಿದ್ದೀರಿ, ಇದು ಹೇಗೆ ಸಾಧ್ಯ?
ನಾನು ನ್ಯಾಯಾಲಯದಲ್ಲಿ ಆ ರೀತಿ ವಾದ ಮಾಡುತ್ತಿದ್ದೆವೆ ಅದು ಒಂದೆಡೆಗಿರಲಿ.


ಅಂದರೆ ನೀವು ನ್ಯಾಯಲಯದ ದಿಕ್ಕು ತಪ್ಪಿಸುತ್ತಿದ್ದೀರಾ?
ಇಲ್ಲಿ ನ್ಯಾಯಾಲುದ ದಿಕ್ಕನ್ನು ತಪ್ಪಿಸುವ ಪ್ರಶ್ನೆಯಿಲ್ಲ. ನಮಗೆ ಯಡಿಯೂರಪ್ಪರ ಮೇಲೆ ಯಾವುದೇ ಕೋಪವಿಲ್ಲ. ರೆಣುಕಾಚಾರ್ಯ ಆ ರೀತಿ ಬರೆದು ನಮ್ಮ ಸಹಿ ತೆಗೆದುಕೊಂಡು ನಮಗೆ ಮೋಸ ಮಾಡಿದ. ನಾವು ಒಳ್ಳೆಯ ಗೆಳೆಯ ಎಂದು ಅವನ ಮಾತನ್ನು ನಂಬಿದ್ದೇವು. ಆದರೆ ಆತ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾನೆ. ಆದರೆ ಈಗ ಅವರು ತಾವು ಬಹಳ ಸಾಚ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಹಿಂದೆ ದಿನ ಬೆಳಗಾದರೆ ಮುಖ್ಯಮಂತ್ರಿ, ಶೋಭಾ ಕರಂದ್ಲಾಜೆ, ಬಳಿಗಾರ್ ವಿರುದ್ದ ಅವರನ್ನು ನಿಂದಿಸಿ ಮಾತನಾಡುತ್ತಿದ್ದರು. ಇದನ್ನೆಲ್ಲ ರಾಜ್ಯದ ಜನತೆ ಕಂಡಿದ್ದಾರೆ, ಈ ರೀತಿ ಮಾತನಾಡಲು ರಾಜ್ಯ ಜನತೆ ಕಣ್ಣುಮುಚ್ಚಿ ಕುಳಿತುಕೊಂಡಿದ್ದರಾ?


ನಿಮ್ಮನ್ನು ರೇಣುಕಾಚಾರ್ಯರು ಬಳಸಿಕೊಳ್ಳುತ್ತಿದ್ದಾರೆ ಎಂದು ಅರಿವಾದಾಗ ಭಿನ್ನ ಮತೀಯರ ಕ್ಯಾಂಪ್ ಬಿಟ್ಟು ಬಂದು ಬಿಜೆಪಿ ಪಾಳಯ ಸೇರಬಹುದಿತ್ತಲ್ಲವೇ? ಈ ರೀತಿ ಮಾಡಿದವರನ್ನು ಬಿಜೆಪಿ ಸ್ವಾಗತ್ತಿಸಿತ್ತು ಅಲ್ಲವೇ?
ನಮಗೆ ರೇಣುಕಾಚಾರ್ಯ ಆ ಅವಕಾಶವನ್ನೇ ಮಾಡಿಕೊಡಲಿಲ್ಲ. ಆತ ತಾನೆ ಎಲ್ಲವನ್ನು ನಿಭಾಯಿಸುತೇನೆ ಎಂದು ನಮ್ಮನ್ನು ಕತ್ತಲೆಯಲ್ಲಿಟ್ಟ.


ನಿಮ್ಮ ವರ್ತನೆಯಿಂದಾಗಿ ನೀವೀಗ ತ್ರಿಶಂಕು ಸ್ಥಿತಿಯಲ್ಲಿದ್ದಿರಿ ಅಲ್ಲವೇ?
ಇಲ್ಲ, ನನಗೆ ಎಲ್ಲ ಜನರ ಬೆಂಬಲ ಸಿಕ್ಕಿದೆ. ನನ್ನ ಕ್ಷೇತ್ರದ ಜನ ೧೦೦ರಲ್ಲಿ ೯೫ ಮಂದಿ ಅವರಿಗೆ ಮೋಸ ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಆದರೆ ಅಂಬೇಡ್ಕರ್ ರೂಪಿಸಿದ ಸಂವಿಧಾನ, ಕಾನೂನು ಧೂಳಿಪಟವಾಗುತ್ತಿದೆ ಅದನ್ನು ಉಳಿಸಿ ಅಂತ ನಾವು ಹೋರಾಟ ಮಾಡಬೇಕಾಗಿದೆ ಎಂಬುದು ನನ್ನ ನೋವು. ಈ ಪ್ರಕರಣದಲ್ಲಿ ಯಾರ ಪರವಾದ ತೀರ್ಪು ಬಂದರೂ ಕೂಡ ಮತ್ತೊಂದು ತಂಡ ಮೇಲಿನ ನ್ಯಾಯಾಲಯಕ್ಕೆ ಹೋಗುವುದು ನಿಶ್ಚಯ. ಅದ್ದರಿಂದ ಸರ್ಕಾರ ಕೂಡ ಅತಂತ್ರವಾಗಿದೆ. ಅವರು ನೆಮ್ಮದಿಯಾಗಿಲ್ಲ. ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ನಾಡಿನ ಎಸ್‌ಸಿ- ಎಸ್‌ಟಿ ಜನಾಂಗಕ್ಕೆ ಕೆಟ್ಟ ಸಂದೇಶ ಹೋಗಿದೆ. ನಮ್ಮಲ್ಲಿರುವ ಹೆಚ್ಚಿನ ಶಾಸಕರು ಈ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿಗೆ ಎಸ್‌ಸಿ- ಎಸ್‌ಟಿ ಜನಾಂಗಕ್ಕೆ ಆ ಮತಗಳು ಬೇಡವೇ?


ಅಂದರೆ ಬಿಜೆಪಿ ಸರ್ಕಾರ ಈ ಜನಾಂಗದವರ ಮೇಲೆ ದಬ್ಬಾಳಿಕೆ ಮಾಡುತ್ತಿದೆಯೇ?
ಇಂದು ನಾವು ರಾಜ್ಯದಲ್ಲಿರುವ ಎಸ್‌ಸಿ - ಎಸ್‌ಟಿ ಜನಾಂಗವನ್ನು ಪ್ರತಿನಿಧಿಸುತ್ತಿದ್ದೇವೆ. ಅದ್ದರಿಂದ ಸಂಪಂಗಿಗೆ ಅನ್ಯಾಯದರೆ ರಾಜ್ಯದಲ್ಲಿರುವ ಎಲ್ಲ ದಲಿತರಿಗೆ ಅನ್ಯಾಯವಾದಂತೆ. ಇದನ್ನು ನಾನು ನೋವಿನಿಂದ ಹೇಳುತ್ತಿದ್ದೇನೆ.

ನಿಮ್ಮನ್ನು ಪಕ್ಷ ಸ್ವಿಕರಿಸುವುದಿಲ್ಲ ಎಂದು ಬಿಜೆಪಿಯ ಉನ್ನತ ನಾಯಕರಲ್ಲಿ ಒಬ್ಬರಾಗಿರುವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಆದರೂ ನೀವು ಬಿಜೆಪಿಯ ಕದ ತಟ್ಟುವುದು ಎಷ್ಟು ಸರಿ.
ಅವರು ಮಾಧ್ಯಮಗಳ ಮುಂದೆ ಆ ರೀತಿ ಹೇಳಿರಬಹುದು. ಅವರು ಹೇಳಿರುವ ಧಾಟಿ ನನಗೆ ಗೊತ್ತಿಲ್ಲ, ಅವರು ಹಿರಿಯರಿದ್ದಾರೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.

ಇಷ್ಟೆಲ್ಲ ಅವಮಾನವಾದರೂ ಕೂಡ ತಾನು ಬಿಜೆಪಿಯ ಸದಸ್ಯ ಎಂದು ನೀವು ಹೇಳಿಕೊಳ್ಳುವುದು ಎಷ್ಟು ಸರಿ?
ನಾನು ಯಾವುದೇ ತಪ್ಪು ಮಾಡಿಲ್ಲ, ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಪಕ್ಷದ ವಿಪ್ ಉಲ್ಲಂಘಿಸಿಲ್ಲ, ಬೇರೆ ಯಾರಿಗಾದರೂ ನಾವು ವೋಟ್ ಹಾಕಿದ್ದೇವಾ? ನಾನು ಮನಸಾಕ್ಷಿ, ಆತ್ಮ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ನಾವು ರೆಸಾರ್ಟ್‌ಗೆ ಹೋದದ್ದು, ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು ಎಲ್ಲವೂ ಸತ್ಯ. ಇದು ಎಲ್ಲರಿಗೂ ಗೊತ್ತಿದೆ. ನಾವು ಜನಪ್ರತಿನಿಧಿಗಳಾದ ಕಾರಣ ಸುಳ್ಳು ಹೇಳಲಿಕ್ಕಾಗುವುದಿಲ್ಲ. ಆದರೆ ಬೇರೆ ಪಕ್ಷದವರ ಜೊತೆ ಮಾತನಾಡಿದ ತಕ್ಷಣ ಅದು ಬಂಡಾಯ ಅಥವಾ ಪಕ್ಷಾಂತರ ಹೇಗಾಗುತ್ತದೆ. ನಮ್ಮ ಮೇಲೆ ಸುಮ್ಮನೆ ಸಂಶಯ ಪಡಲಾಗಿದೆ. ನಾನು ಬಿಜೆಪಿಯ ಶಾಸಕನಾಗಿಯೇ ಉಳಿಯುತ್ತೇನೆ.

ಹಾಗಾದರೆ ಬಿಜೆಪಿಗೆ ತಮ್ಮ ಶಾಸಕರ ಮೇಲೆಯೇ ನಂಬಿಕೆ ಇಲ್ಲವೆ?


ನಮ್ಮ ಮೇಲೆ ಅವರಿಗೆ ಸಂಶಯವಿತ್ತು. ಅವರು ಎಲ್ಲಿ ತಮಗೆ ಕೈ ಕೊಡುತ್ತಾರೋ ಎಂಬುದು ಅವರ ಸಂಶಯಕ್ಕೆ ಕಾರಣ. ಆದರೆ ನಾವು ಯಾವತ್ತು ಮುಖ್ಯಮಂತ್ರಿಗಳ ವಿರುದ್ಧ ನಿಂತಿಲ್ಲ. ಆದರೆ ಅವರ ವಿರುದ್ಧ ತೊಡೆ ತಟ್ಟಿ ನಿಂತ ರೇಣುಕಾಚಾರ್ಯರನ್ನೇ ನೀವು ಯಾಕೆ ಸ್ವೀಕರಿಸಿದ್ದೀರಿ? ನಮ್ಮನೆಲ್ಲ ಯಾಕೆ ದೂರ ತಳ್ಳಿದ್ದೀರಿ ಎಂಬುದೇ ನನ್ನ ನೋವು.
ತನ್ನಲ್ಲಿರುವ ಹಿಂದುಳಿದ ಜನಾಂಗಕ್ಕೇ ಸೇರಿದ ನಾಯಕರನ್ನು ಬಿಜೆಪಿ ಹುಡುಕಿ ಹುಡುಕಿ ಕ್ರಮ ಕೈಗೊಳ್ಳುತ್ತಿಯೇ?
ಹೌದು ಹೌದು.

ನ್ಯಾಯಾಲಯದ ತೀರ್ಪು ನಿಮ್ಮ ಪರ ಬಂದರೆ ನಿಮ್ಮ ಮುಂದಿನ ನಡೆಯೇನು?
 ನಾನು ಬಿಜೆಪಿ ಸದಸ್ಯ ಮತ್ತು ಆ ಪಕ್ಷದೊಂದಿಗೆಯೇ ಇರುತ್ತೇನೆ. ಆದರೆ ಸ್ಪೀಕರ್ ರಾತ್ರೋರಾತ್ರಿ ಆ ರೀತಿ ವರ್ತಿಸಬಾರದಿತ್ತು.


ಈ ಬಂಡಾಯ ಚಟುವಟಿಕೆಯಲ್ಲಿ ಕುಮಾರಸ್ವಾಮಿಯವರ ಪಾತ್ರವೇನು?
ಕುಮಾರಸ್ವಾಮಿಯವರ ಜೊತೆ ನಾನು ಮಾತನಾಡಿಲ್ಲ, ಈ ಎಲ್ಲಾ ಚಟುವಟಿಕೆಗಳಿಂದ ಬೇಸತ್ತಿದ್ದೇನೆ. ನಾವು ೧೧ ಜನ ಒಟ್ಟಾಗಿದೇವೆ. ಕುಮಾರಸ್ವಾಮಿ ಜಾತ್ಯತೀತ ಜನತಾದಳದ ಉನ್ನತ ನಾಯಕರಾಗಿದ್ದಾರೆ. ನಾವು ಅವರ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನಾವು ಚುನಾವಣೆಯಲ್ಲಿ ಬಿಜೆಪಿಯಿಂದ ಆ ಪಕ್ಷದ ಚಿಹ್ನೆಯಡಿಯಲ್ಲಿ ನಿಂತಿದ್ದೆವು. ನಾವು ಈಗಲೂ ಬಿಜೆಪಿಯ ಶಾಸಕರಾಗಿಯೇ ಇದ್ದೇವೆ.

2 comments:

ತಿಪ್ಪೇಸ್ವಾಮಿ ನಾಕೀಕೆರೆ said...

ರಾಕೇಶಣ್ಣ ಸಂದರ್ಶನ ಚೆನ್ನಾಗಿದೆ.

ತಿಪ್ಪೇಸ್ವಾಮಿ ನಾಕೀಕೆರೆ said...

ಸಂದರ್ಶನ ಚೆನ್ನಾಗಿದೆ. ನೈಸ್.