Wednesday, November 17, 2010

ಸಿದ್ಧವಾಗಬೇಕಿದೆ!

ಬೆಳಕಿಲ್ಲ
ರಸ್ತೆಯಿಲ್ಲ
ಮನೆಯಿಲ್ಲ
ಬಟ್ಟೆಯಿಲ್ಲ
ಅದು ಇಲ್ಲ, ಇದು ಇಲ್ಲ
ಒಟ್ಟಿನಲ್ಲಿ ಏನೂ ಇಲ್ಲ
ದೇಶ ಉದ್ಧಾರವಾಗಿಲ್ಲ, ಆಗೋದು ಇಲ್ಲ.

ಬೆಳಕಿತ್ತು ಮನೆ ಮನದಲ್ಲಿ
ದಾರಿಯಿತ್ತು ಹೃದಯದಲ್ಲಿ
ಗೂಡಿತ್ತು ಮಾನವೀಯತೆಯ
ನೆಲೆಯಲ್ಲಿ
ಹೊದಿಕೆಯಿತ್ತು ಪ್ರೀತಿಯ
ಸ್ಪರ್ಶದಲ್ಲಿ
ಅದೂ ಭಾರತ, ಇದೂ ಭಾರತವೇ!

ಇತಿಹಾಸ ಕಣ್ಣು ಬಿಡೋ ಮೊದಲು
ನಾವು ಏರಿದ್ದೇವು ನಾಗರಿಕತೆಯ
ತುತ್ತತುದಿಗೆ
ಬಲಿಬಿದ್ದೆವು ಅನಂತರ
ಕಣ್ಣು ಬಿಟ್ಟವರ ತುತ್ತೂರಿಗೆ
ಹೊಟ್ಟೆ ಉರಿಗೆ.

ಕುರಿಮಂದೆ ಮುಂದೆ, ಆಡು ಹಿಂದೆ
ವಿಧಿವಿಲಾಸ ವಿಪರೀತ
ಕನಸುಗಳಿಗೆ ಗರ್ಭಪಾತ
ಕುಸಿದು ಕುಳಿತಿದೆ ಭಾರತ
ಹೆಮ್ಮೆಯ ಮಗ ಹುಟ್ಟಬಹುದೆಂದು
ವಂಶೋದ್ಧಾರಕ ಬೇಡ ದೇಶ ಉದ್ಧಾರಕ ಬೇಕೆಂದು

ಏನಾಯಿತು, ಆ ಪರಂಪರೆಗೆ?
ದ್ವೇಷ ಬೋಧಿಸದ ಆ ಸಂಸ್ಕ್ರತಿಗೆ?
ಬಿಸಿ ರಕ್ತ, ಹೀರಿಕೊಳ್ಳುತ್ತಿಲ್ಲ
ತನ್ನೊಳಗಿನ ಸತ್ವವನ್ನು
ಅರಿತುಕೊಳ್ಳುತ್ತಿಲ್ಲ
ರಕ್ತದೊಳಗಿನ ತತ್ವವನ್ನು

ನೋಡುತ್ತಿದೆ ಯುವ ಮನ
ಅತ್ತ, ಅವರತ್ತ... ಅಗೋ
ಅವರದ್ದೆ... ಅತ್ತ... ಬಂದವರತ್ತ...

ಮಣ್ಣಿನಿಂದ ಹೀರುವ ಬದಲು
ಆಕಾಶದಿಂದ ಹೀರುವ ಕೆಲಸ
ಮಣ್ಣುಪಾಲಾಯಿತು ಕಳಸ
ಅಮೃತವೇ ಇಲ್ಲಿ ಕಾಲ ಕಸ.

ಬರುತ್ತಾರೆ ಅವರು ಹಿಂಬಾಗಿಲಿನಿಂದ
ಹೋಗುತ್ತಾರೆ ಮುಂಬಾಗಿಲಿನಿಂದ
ಮನೆಮಗ ಹೋರಾಡುತ್ತಿದ್ದಾನೆ,
ಬಡಿದಾಡುತ್ತಿದ್ದಾನೆ, ಬಾಗುತ್ತಿದ್ದಾನೆ,
ಸೋತು ಸುಣ್ಣವಾಗಿದ್ದಾನೆ ಅವರಿಂದ
ಅಲ್ಲ.... ತನ್ನವರಿಂದ!

ಬೇಕು... ಬದಲಾಗಬೇಕು
ಅಲ್ಲಿಂದ... ಇಲ್ಲಿಂದ... ಎಲ್ಲಿಂದ?
ನಮ್ಮೋಳಗಿನಿಂದ... ನಿಮ್ಮೊಳಗಿನ  
ತನಕ...
ನನ್ನತನ ಹೋಗಿ ನಮ್ಮತನ
ಬರೋ ತನಕ...
ಭಾರತ ಮತ್ತೊಮ್ಮೆ ಪುಟಿದೆದ್ದು
ಬಂದು ಬನ್ನಿ, ಸೋದರರೇ, ಒಟ್ಟಾಗಿ ಬಾಳೋಣ...
ಒಟ್ಟಾಗಿ ಸಾಗೋಣ.. ಎಂದು ಧೈರ್ಯದಿಂದ
ಜಗಕ್ಕೆ ಹೇಳೋ ತನಕ....

ನಮ್ಮ ಮನದ ಬೆಳಕು ಸಾಕು
ವಿದ್ಯುತ್ತಿನ ಆ ಬೆಳಕು ಯಾಕೆ ಬೇಕು?
ಎಂದು ತೋರಿಸುತ್ತೇವೆ
ಒಂದು ದಿನ
ಅಂದೇ
ಜಗದ ಪುನರುತ್ಥಾನ
ಕೊಳ್ಳುಬಾಕನ ಅವಸಾನ

ನಿಲ್ಲುತ್ತದೆ... ಎದ್ದು
ನಿಲ್ಲುತ್ತದೆ... ಗೆದ್ದು ಸಾಗುತ್ತದೆ
ಭಾರತ... ಕಾಯಬೇಕು
ಅಷ್ಟರವರೆಗೆ ಕಾಯಿಸಬೇಕು

ಯಾಕೆಂದರೆ
ನಮ್ಮ ಯುವಜನಾಂಗ ಇನ್ನೂ
ಸಿದ್ಧವಾಗಬೇಕಿದೆ!

2 comments:

ಬಾನಾಡಿ said...

Oye ... excellent feeling ... maaraya..

Prakash G R said...

Sakkatagide maga.....