ರಾಜ್ಯದ ಘನತೆವೆತ್ತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜೆಡಿ(ಎಸ್)ನ ಮುಖಂಡ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು. ನಿಮ್ಮ ಮತ್ತು ನಿಮ್ಮ ಹಿಂಬಾಲಕರ ಅವಿರತ 'ದುಡಿಮೆ'ಯಿಂದ ಕರ್ನಾಟಕದ ಖ್ಯಾತಿ ದೇಶದ ಉದ್ದಗಲಕ್ಕೂ ಹಬ್ಬುವಂತಾಗಿದೆ. ಬಿಹಾರ, ಉತ್ತರ ಪ್ರದೇಶಗಳು ಒಂದೆರಡು ದಶಕಗಳಲ್ಲಿ ಸಾಧಿಸಿದ್ದನ್ನು ನೀವು ಕಳೆದ ನಾಲ್ಕು ವರ್ಷಗಳಲ್ಲಿ ಸಾಧಿಸಿ 'ಸ್ವಅಭಿವೃದ್ಧಿ'ಯ ಹೊಸ ಶಕೆಯನ್ನು ತೆರೆದಿದ್ದೀರಿ. ಇಂದು ರಾಜಕೀಯ ಹೊಲಸು ಆಟ ಆಡುವುದರಲ್ಲಿ ಇಡೀ ಭರತಖಂಡದಲ್ಲೇ ನಾವು ಅಗ್ರಗಣ್ಯರು. ಇಲ್ಲಿ ಅಧಿಕಾರದ ಪಲ್ಲಂಗವೇರಲು ನೀವು ತುಳಿದ್ದದ್ದೇ ದಾರಿ ಯಾಕೆಂದರೆ ನೀವು ತುಳಿಯದೇ ಬಿಟ್ಟ ದಾರಿಗಳು ಮತ್ತು ಸೃಷ್ಟಿಸದಿರುವ ದಾರಿಗಳು ಉಳಿದೇ ಇಲ್ಲ. ನಿಮಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತಾ ಸೂರ್ಯ ಚಂದ್ರರಿರುವವರೆಗೂ ನಿಮ್ಮ ಕೀರ್ತಿ ಹೀಗೆ ಇರಲಿ ಮತ್ತು ಎಲ್ಲರಿಗೂ ಪಾಠವಾಗಲಿ ಎಂದು ಸಮಸ್ತ ಕನ್ನಡಿಗರು ನಿಮಗೆ ಹಾರೈಸುತ್ತಿದ್ದಾರೆ!
ರಾಜಕಾರಣಿಗಳು ಎಲ್ಲ ಆಸೆಗಳನ್ನು ತ್ಯಜಿಸಿ ರಾಜಕಾರಣ ಮಾಡಬೇಕು ಎಂದು ಯಾರು ಬಯಸುತ್ತಿಲ್ಲ ಅದು ಸಾಧುವು ಅಲ್ಲ. ರಾಜಕಾರಣದ ಗುರಿ ಅಧಿಕಾರ ನಡೆಸುವುದು ಅಥವಾ ತಮಗೆ ಬೇಕಾದವರಿಗೆ ಅಧಿಕಾರ ಸಿಗುವಂತೆ ಮಾಡುವುದು ಇದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಅಧಿಕಾರ ಪಡೆಯಲು ಆಯ್ದಕೊಳ್ಳುವ ದಾರಿ, ಅಧಿಕಾರ ಪಡೆದ ಮೇಲೆ ನಡೆದುಕೊಳ್ಳುವ ರೀತಿ ಮತ್ತು ಅಧಿಕಾರ ಉಳಿಸಿಕೊಳ್ಳಲು ನಡೆಸುವ ಪ್ರಯತ್ನ ಇವುಗಳು ಒಬ್ಬ ರಾಜಕಾರಣಿಯ ನೈತಿಕತೆಯನ್ನು ಅಳೆಯುವ ಮಾನದಂಡಗಳು. ಈ ಮೂರು 'ಮಾನ'ದಂಡ'ಗಳನ್ನು ಇಟ್ಟುಕೊಂಡು ರಾಜ್ಯದಲ್ಲಿನ ಮೂರು ಪ್ರಧಾನ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಮೌಲ್ಯಮಾಪನ ಮಾಡಹೊರಟರೆ.... ಜಗತ್ತಿಗೆ ಭಾರತದ ಹೆಮ್ಮೆಯ ಕೊಡುಗೆ ಆಗಿರುವ 'ಶೂನ್ಯ'ಕ್ಕೆಯೇ ಅವಮಾನ ಮಾಡಿದಂತಾಗಿತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ರಾಜಕೀಯ ಸ್ಥಿತಿ ಸರಿಪಡಿಸಲಾರದಷ್ಟು ಹಾಳಾಗಿದೆ. ಕಾಂಗ್ರೆಸ್ ನೇತೃತ್ವದ ಧರಂ ಸಿಂಗ್ ಸರ್ಕಾರದ ಪತನದೊಂದಿಗೆ ಶುರುವಾದ ರಾಜಕೀಯ ಏರಿಳಿತದ ನಾಟಕ ಅನೇಕ ಅಂಕಗಳ ಬಳಿಕವೂ ಅಂತಿಮ ಹಂತಕ್ಕೆ ಬಂದು ನಿಂತಿಲ್ಲ, ನಿಲ್ಲುವ ಲಕ್ಷಣವೂ ಕಾಣಿಸುತ್ತಿಲ್ಲ. ಯಡಿಯೂರಪ್ಪವನರನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವರು ಟ್ರೈಮಿಸ್ಟರ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ. ವರ್ಷಕ್ಕೆ ಇಂಥಹ ಮೂರು ನಾಲ್ಕು ಪರೀಕ್ಷೆಗಳನ್ನಾದರೂ ಅವರು ಎದುರಿಸಲೇ ಬೇಕು. ಇಲ್ಲದೇ ಹೋದಲ್ಲಿ ಅವರಿಗೆ ತಾವೇನೋ ಕಳೆದುಕೊಂಡಿದ್ದೇನೆ ಎಂಬ ಭಾವ ಕಾಡುತ್ತದೆ. ಅದ್ದರಿಂದಲೇ ಅವರು ಕೀವು ತುಂಬಿದ ವೃಣಗಳನ್ನು ತಮ್ಮ ಜೊತೆ ಇಟ್ಟುಕೊಂಡು ಆಗಾಗ ಅದನ್ನು ತುರಿಸುತ್ತ, ಅದು ಉಲ್ಪಣಿಸಿದಾಗ ತಾತ್ಕಾಲಿಕ ಶಮನ ಪಡೆದುಕೊಂಡು ನಂತರ ಮತ್ತೆ ಮತ್ತೆ ತುರಿಸುವ ಚಾಳಿಯನ್ನು ಅಖಂಡ ಮೂರು ವರ್ಷಗಳಿಂದ ತಪ್ಪದೇ ಪಾಲಿಸುತ್ತಿದ್ದಾರೆ.
ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು, ಜೆಡಿಎಸ್ ಬೆಂಬಲ ತಮಗಿದೆ ಎಂದು ಹೇಳುತ್ತ ಯಡಿಯೂರಪ್ಪ ನವೆಂಬರ್ ೧೨, ೨೦೦೭ (ಹೆಚ್ಚು ಕಡಿಮೆ ೩ ವರ್ಷಗಳ ಹಿಂದೆ)ರಂದು ಅಧಿಕಾರಕ್ಕೆ ಬಂದು ಒಂದೇ ವಾರದಲ್ಲಿ ಅಂದರೆ ನವೆಂಬರ್ ೧೯, ೨೦೦೭ರಂದು ಆ ಪಕ್ಷ ಕೈ ಕೊಟ್ಟಾಗ ಅಧಿಕಾರದ ರಾಜ ಭವನದಲ್ಲಿ ಮಕಾಡೆ ಮಲಗಿದ್ದರು. ಆದರೆ ಅವರು ಅಷ್ಟರಲ್ಲೇ ಉಪಮುಖ್ಯಮಂತ್ರಿಯಾಗಿ ಅಧಿಕಾರದ ರುಚಿ ಅನುಭವಿಸಿದ್ದವರು. ಅದ್ದರಿಂದ ಮತ್ತೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಅನುಭವಿಸಲೇ ಬೇಕು ಎಂದು ಪಣ ತೊಟ್ಟು, ತಮ್ಮೆಲ್ಲ ಸಿದ್ಧಾಂತಗಳಿಗೆ, ಹೋರಾಟದ ಹಿನ್ನೆಲೆಗೆ, ಜನಪರ ಕಾಳಜಿಗೆ ಎಳ್ಳುನೀರು ಬಿಟ್ಟು ಚುನಾವಣ ಕಣಕ್ಕೆ ಧುಮುಕಿಯೇ ಬಿಟ್ಟರು ಮತ್ತು ಅದರಲ್ಲಿ ಭಾಗಶಃ ಯಶಸ್ಸು ಪಡೆದರು ಕೂಡ. ಅಂದೇ ಅವರ ಚಾರಿತ್ರ್ಯ ಕೂಡ ಜಾರು ಹಾದಿಯಲ್ಲಿ ಉರುಳಲು ಶುರು ಮಾಡಿಕೊಂಡಿತ್ತು.
ಮೇ ೩೦, ೨೦೦೮ರಂದು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ರಾಜ್ಯ ರಾಜಕಾರಣ ತನ್ನ ಮಗ್ಗಲು ಬದಲಿಸಿಕೊಂಡಿತು ಮತ್ತು ಒಂದಿಷ್ಟು ನೈತಿಕತೆ ಉಳಿಸಿಕೊಂಡಿದ್ದ ರಾಜ್ಯ ರಾಜಕಾರಣಕ್ಕೆ ಅವರು ಮಗ್ಗಲು ಮುಳ್ಳಾದರು. ಈಗ ಆ ಮುಳ್ಳು ಅವರ ಗಂಟಲಲ್ಲೇ ಸಿಲುಕಿಕೊಂಡಿದೆ!
ರಾಜ್ಯ ರಾಜಕಾರಣ ಈ ಪರಿ ಹೊತ್ತಿ ಉರಿಯಲು ಇಂಧನವಾದ ಅನೇಕ ಪ್ರಕ್ರಿಯೆಗಳು ಬಿಜೆಪಿಯಲ್ಲಿ ೩ ತಿಂಗಳ ಹಿಂದಿನಿಂದಲೇ ನಡೆದುಕೊಂಡು ಬರುತ್ತಿದ್ದವು. ಆದರೆ ಸೆಪ್ಟೆಂಬರ್ ೨೧ ರಂದು ನಡೆದ ಸಂಪುಟ ವಿಸ್ತರಣೆ ಮತ್ತು ಇದರ ಹಿಂದಿದ್ದ ಮಸಲತ್ತುಗಳು ಆ ಇಂಧನಕ್ಕೆ ಕಿಡಿ ತಾಕಿಸಿದವು. ಯಡಿಯೂರಪ್ಪರಿಗೆ ಈಗ ತಮ್ಮ ಶತ್ರು, ಮಿತ್ರ, ಹಿತಶತ್ರು ಯಾರು ಎಂದೇ ಗೊತ್ತಾಗುತ್ತಿಲ್ಲ. ವಿರೋಧ ಪಕ್ಷೀಯರನ್ನೇ ಶತ್ರುಗಳು ಎಂದು ಪರಿಗಣಿಸಿ ಹೋರಾಟಕ್ಕಿಳಿದರೇ ಅವರಿಗಿಂತ ಖತರ್‌ನಾಕ್ ಮತ್ತು ಬಲಶಾಲಿ ಶತ್ರುಗಳು (ರೇಣುಕಾಚಾರ್ಯ, ಅನಂತಕುಮಾರ್ ಮುಂತಾದವರು) ಪಕ್ಷದೊಳಗೆ ಇದ್ದಾರೆ. ಇನ್ನು ರೆಡ್ಡಿ ಸೋದರರನ್ನು ಯಾವ ರೀತಿ ಗುರುತಿಸಬೇಕು ಎಂದು ಅವರಿಗೆ ಗೊತ್ತೇ ಆಗುತ್ತಿಲ್ಲ.
ಇನ್ನು ಎಲ್ಲದಕ್ಕೂ ಮದ್ದು ಅರಿಯುವ ಸಾಮರ್ಥ್ಯವಿರುವ ಮತ್ತು ಇರಬೇಕಾದ ಬಿಜೆಪಿಯ ಹೈಕಮಾಂಡ್ ಅಂತೂ ಮನೆಯೊಂದು ನೂರು ಬಾಗಿಲು ಅನ್ನುವ ಹಾಗಿದೆ. ಎಲ್. ಕೆ ಅಡ್ವಾಣಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಮುಂತಾದವರು ತಮ್ಮ ತಮ್ಮ ಬಣ ಕಟ್ಟಿಕೊಳ್ಳುವುದರಲ್ಲಿ ವ್ಯಸ್ತರಾಗಿದ್ದಾರೆ. ಅವರಿಗೆ ಪಕ್ಷದ ಉಳಿವಿಗಿಂತ ತಮ್ಮ ಉಳಿವೇ ಮುಖ್ಯವಾಗಿದೆ. ಅದ್ದರಿಂದ ಅವರು ಇಡುವ ಪ್ರತಿ ಹೆಜ್ಜೆಯು ಅವರ ಹಿತಾಸಕ್ತಿಯನ್ನೇ ಆಧರಿಸಿರುತ್ತದೆ. ಅದ್ದರಿಂದ ಅವರು ಯಾವುದೇ ವಿಷಯದಲ್ಲೂ ದೃಢ ನಿರ್ಧಾರ ಕೈಗೊಳ್ಳಲಾರರು.
ಬಿಜೆಪಿ ಹೈಕಮಾಂಡ್ ಕಾಂಗ್ರೆಸ್‌ನ ಹೈಕಮಾಂಡ್‌ನಿಂದ ಪಾಠ ಕಲಿತುಕೊಳ್ಳಬೇಕಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿಯ ಆಕಸ್ಮಿಕ ಮರಣದ ಬಳಿಕ ಅವರ ಪುತ್ರ ಜಗಮೋಹನ ರೆಡ್ಡಿ ತಾನು ಆ ಸ್ಥಾನಕ್ಕೆ ಏರಲು ಅದೆಷ್ಟೆ ಸರ್ಕಸ್ ಮಾಡಿದರೂ, ಕಾಂಗ್ರೆಸ್ ಅದಕ್ಕೆ ಸೊಪ್ಪು ಹಾಕಲೇ ಇಲ್ಲ, ಜಾರ್ಖಂಡ್‌ನಲ್ಲೂ ಶಿಬು ಸೊರೆನ್ ಎಂಬ ಕ್ರಿಮಿನಲ್‌ನ ಕೈ ಹಿಡಿದು ಅಧಿಕಾರ ಅನುಭವಿಸುವುದಕ್ಕಿಂತ ಸುಮ್ಮನಿರುವುದೇ ಒಳ್ಳೆಯದು ಎಂಬ ಪ್ರೌಢ ನಿರ್ಧಾರ ತೆಗೆದುಕೊಂಡಿತ್ತು. ಇನ್ನು ಯುಪಿಎ ೨ ಸರ್ಕಾರ ರಚಿಸುವ ಸಂದರ್ಭದಲ್ಲೂ ಮಹಾ ಭ್ರಷ್ಟರನ್ನು ಅದು ಸಾಕಷ್ಟು ದೂರವೇ ಇಟ್ಟಿತ್ತು. ಬಿಹಾರದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲೂ ಕೂಡ ರಾಮ್ ವಿಲಾಸ್ ಪಾಸ್ವಾನ್‌ರ ಲೋಕ ಜನಾ ಶಕ್ತಿ, ಲಾಲು ಪ್ರಸಾದ್ ಯಾದವ್‌ರ ರಾಷ್ಟ್ರೀಯ ಜನತಾ ದಳದ ಜೊತೆ ಜೊತೆಯಾಟವಾಡದೇ ಒಂದು ಹಂತದ ಪ್ರಬುದ್ಧ ನಿರ್ಧಾರವನ್ನೇ ತೆಗೆದುಕೊಂಡಿದೆ. ಆದರೆ ಬಿಜೆಪಿ ತನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೇ ನಿತೀಶ್ ಕುಮಾರ್ ಅವಮಾನ ಮಾಡಿದ್ದರೂ ಕೂಡ ಅದನ್ನು ಸೈರಿಸಿಕೊಂಡು ಅವರ ಸಂಯುಕ್ತ ಜನತಾದಳದ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಕಟ್ಟಾ ಕಾಂಗ್ರೆಸಿಗನಾದರೂ ಭಾರತೀಯ ಒಲಿಂಪಿಕ್ಸ್ ಅಸೋಷಿಯೆಷನ್‌ನ ಅಧ್ಯಕ್ಷ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಅಯೋಜನ ಸಮಿತಿಯ ಮುಖ್ಯಸ್ಥ, ಸುರೇಶ್ ಕಲ್ಮಾಡಿಯನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಪ್ರಶಂಸನೀಯ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರು ಶಿಫಾರಸು ಮಾಡಿದ್ದರು ಕೂಡ ಅದನ್ನು ಕಿವಿಗೆ ಹಾಕಿಕೊಳ್ಳದೇ ಮತ್ತೊಂದು ಉತ್ತಮ ನಿರ್ಧಾರವನ್ನು ಅದು ತೆಗೆದುಕೊಂಡಿದೆ. ಆದರೆ ಬಿಜೆಪಿ ತನ್ನನ್ನು 'ಭ್ರಷ್ಟ ಜನರ ಪಕ್ಷ' ಎಂದು ಪ್ರತಿ ನಡೆಯಲ್ಲೂ ಸಾಬೀತು ಮಾಡುತ್ತಿದೆ. ಇಂಥಹ ದುರ್ಬಲ ಹೆಜ್ಜೆಗಳನ್ನು ಇಟ್ಟುಕೊಂಡು ಸಾಗುತ್ತಿರುವ ಬಿಜೆಪಿಯಿಂದ ಕಠಿಣ ಮತ್ತು ಸೂಕ್ತ ನಿರ್ಧಾರ ನಿರೀಕ್ಷಿಸುವುದು ಮೂರ್ಖತನ.
ಇದನ್ನು ಚೆನ್ನಾಗಿ ಅರಿತುಕೊಂಡಿದ್ದ ಯಡಿಯೂರಪ್ಪ, ಅನಂತ ಕುಮಾರ್, ಜನಾರ್ದನ ರೆಡ್ಡಿ ಮತ್ತು ರೇಣುಕಾಚಾರ್ಯ ಒಳಗೊಳಗಿನಿಂದಲೇ ಏನೆಲ್ಲ ಕಸರತ್ತು ಮಾಡಬೇಕು ಅದನ್ನೆಲ್ಲ ಮಾಡುತ್ತ, ತಮ್ಮ ಗುಪ್ತ ಕಾರ್ಯಸೂಚಿ ಮತ್ತು ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಮೇಲಿನವರನ್ನು ಬಳಸಿಕೊಳ್ಳುತ್ತಿದ್ದಾರೆ. ಆ 'ಮೇಲಿನವರು' ಕೂಡ ಇವರ ತಾಳಕ್ಕೆ, ಮೇಳಕ್ಕೆ ತಕ್ಕಂತೆ ಥಕಧಿಮಿ ತಕಧಿಮಿ ಮಾಡುತ್ತಿದ್ದಾರೆ. ಇದರಿಂದ ಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ಶಿಸ್ತಿರಲು ಸಾಧ್ಯವೇ?
ಇನ್ನು ಯಡಿಯೂರಪ್ಪ ತಮ್ಮ ಎರಡೂವರೆ ವರ್ಷಗಳ ಅಡಳಿತಾವಧಿಯಲ್ಲಿ ಇಬ್ಬರಿಗೆ ಮಾತ್ರ ಮಣೆ ಹಾಕಿದ್ದು. ಮೊದಲನೆಯದಾಗಿ ತಮ್ಮ ಆಪ್ತೇಷ್ಟರಿಗೆ ಎರಡನೆಯದಾಗಿ ಮತ್ತು ಕೊನೆಯದಾಗಿ ಪಕ್ಷಕ್ಕೆ, ಪಕ್ಷದ ಸಿದ್ಧಾಂತಗಳಿಗೆ ಪರಕೀಯರಾಗಿದ್ದುಕೊಂಡು ಯಡಿಯೂರಪ್ಪ ನಿಷ್ಠೆ ಮೆರೆದ ಮಂದಿಗೆ. ಇದರಿಂದಾಗಿ ಪಕ್ಷ ಕಟ್ಟಲು ಕಳೆದ ಮೂವತ್ತು ವರ್ಷಗಳಿಂದ ಅವಿರತವಾಗಿ ಶ್ರಮಿಸಿದವರು ಮೂಲೆ ಗುಂಪಾದರೆ, ಸಮಯ ಸಾಧಕರು ಮೇರೆ ಮೀರಿ ಮೆರೆದರು. ಇದು ನೈಜ ಬಿಜೆಪಿಗರ ಹೊಟ್ಟೆ ಉರಿಗೆ ಕಾರಣವಾಯಿತು ಮತ್ತು ಇದರಲ್ಲಿ ಅವರದ್ದು ಏನೇನೂ ತಪ್ಪಿಲ್ಲ ಕೂಡ. ತಮ್ಮ ಪ್ರತಿಸ್ಪರ್ಧಿಗಳನ್ನು ಮೂಲೆ ಗುಂಪು ಮಾಡುವುದರಲ್ಲಿ ಯಡಿಯೂರಪ್ಪ ಸಿದ್ಧ ಹಸ್ತರು. ಬಿ. ಬಿ ಶಿವಪ್ಪ, ಬಸವರಾಜ್ ಪಾಟೀಲ ಸೇಡಂ, ಜಗದೀಶ್ ಶೆಟ್ಟರ್ ಮುಂತಾದವರನ್ನು ಮೆಲ್ಲನೆ ಗುಡಿಸಿ ಹಾಕಿದ್ದರು. ಆದರೆ ಗುಡಿಸಿ ಹಾಕುವ ಪ್ರಕ್ರಿಯೆಯ ಪ್ರಮಾಣ ಹೆಚ್ಚಾದಂತೆ, ಬಲಿ ಪಶುಗಳ ಸಂಖ್ಯೆ ಒಂದು ಮಿತಿ ದಾಟಿದಾಗ ಎಲ್ಲರಿಗೂ ಯಡಿಯೂರಪ್ಪರ ಬುದ್ಧಿ ಮನದಟ್ಟಾಯಿತು ಮತ್ತು ಅದಕ್ಕಾಗಿ ಒಟ್ಟಾಗಿ ಹೋ(ಹಾ)ರಾಡಲು ಶುರುವಿಟ್ಟು ಕೊಂಡರು. ಇಂದು ಬಿಜೆಪಿಯಲ್ಲಿ ಸ್ಪಷ್ಟವಾಗಿ ಗುರುತಿಸಿಕೊಂಡಿರುವ ೧೦೫ ಶಾಸಕರಲ್ಲಿ ಬಹುತೇಕ ಮಂದಿಗೆ ಯಡಿಯೂರಪ್ಪರ ಮೇಲೆ ತೀವ್ರ ಅಸಮಾಧಾನವಿದೆ ಮತ್ತು ಇದು ಯಡಿಯೂರಪ್ಪನವರಿಗೂ ಗೊತ್ತಿದೆ. ಅವರು ಇಂದು ಪಕ್ಷದಲ್ಲಿನ ಸುಮಾರು ೨೫ ಶಾಸಕರನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ನಂಬುತ್ತಿದ್ದಾರೆ ಮತ್ತು ಉಳಿದವರನ್ನು ನಂಬಿದಂತೆ ನಟಿಸುತ್ತಿದ್ದಾರೆ. ಆದರೆ ಈ ನಟನೆ ಎಷ್ಟು ಸಮಯ ಸಾಗಬಹುದು? ಅದಕ್ಕಾಗಿಯೇ ಅವರು ಮತ್ತೆ ಅಪರೇಷನ್ ಕಮಲದ ಮೊರೆ ಹೋಗುತ್ತಿರುವುದು. ನಿನ್ನೆ ನಡೆದ ಸಿಡಿ ಪ್ರಕರಣ ಅದರ ಮುಂದುವರಿದ ಎಳೆಯಷ್ಟೆ.
ಯಡಿಯೂರಪ್ಪನವರು ಪಕ್ಷದ ಚಹರೆ ಬದಲಾದರೂ ಚಿಂತೆಯಿಲ್ಲ ತನ್ನ ಬಿಗಿ ಚಹರೆಯನ್ನು ಬದಲಾಯಿಸುವುದಿಲ್ಲ ಎಂದು ಕೂತಿದ್ದಾರೆ ಮತ್ತು ಅದಕ್ಕೆ ಪೂರಕವಾದ ವರ್ತನೆಯನ್ನೇ ಮುಂದುವರಿಸುತ್ತಿದ್ದಾರೆ. ಅದೇನೋ ಕಸರತ್ತು ಮಾಡಿಕೊಂಡು ಅವರು ಅಧಿಕಾರ ಅವಧಿಯನ್ನು ಪೂರ್ಣಗೊಳಿಸುಬಹುದು.
ಅವರ ಅದೃಷ್ಟವೋ, ರಾಜ್ಯದ ದುರಾದೃಷ್ಟವೋ ರಾಜ್ಯದಲ್ಲಿರುವ ಪ್ರತಿಪಕ್ಷಗಳು ಬೂಸ್ಟ್ ಹಿಡಿದ ಬ್ರೆಡ್ ತರಹವಾಗಿ ಬಿಟ್ಟಿದೆ.
ಇದನ್ನು ಸರಳವಾಗಿ ಹೇಳಬೇಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೧೦, ಕಾಂಗ್ರೆಸ್ ೭೩ ಮತ್ತು ಜೆಡಿ(ಎಸ್) ೨೮ ಸ್ಥಾನ ಪಡೆದಿದ್ದವು. ಯಡಿಯೂರಪ್ಪ ಒಂದು ವಾರ ಮುಖ್ಯಮಂತ್ರಿಯಲ್ಲಿಯ ಸ್ಥಾನದಲ್ಲಿರುವ ಮೊದಲು ಕುಮಾರ ಸ್ವಾಮಿ ಅಡಳಿತ ನಡೆಸಿದ್ದರು. ಅದ್ದರಿಂದ ಅಲ್ಲಿ ಬಂದ ಜನಾದೇಶ ಅತ್ಯಂತ ಸ್ಪಷ್ಟ, ಕುಮಾರ ಸ್ವಾಮಿಯವರೇ ನಿಮ್ಮ ಆಡಳಿತ ಸಾಕು, ನೀವು ಸುಮ್ಮನಿರಿ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ದರು. ಸದನದಲ್ಲಿ ಕೇವಲ ಶೇ. ೧೨.೫ರಷ್ಟು ಶಾಸಕರನ್ನು ಹೊಂದಿರುವ ಪಕ್ಷದ ನಾಯಕನೊಬ್ಬ ಸದನದಲ್ಲಿ ಸುಮಾರು ಶೇ. ೪೫ರಷ್ಟು ಸ್ಥಾನ ಹೊಂದಿರುವ ಪಕ್ಷವನ್ನು ಆಡಳಿತದಿಂದ ಕೆಳಗಿಳಿಸಿ ಜನರ ಆಸೆಗೆ ವಿರುದ್ಧವಾಗಿ ತಾನೇ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದು ಪ್ರಜಾಪ್ರಭುತ್ವದ ಅಣಕವಲ್ಲದೇ ಮತ್ತೇನು? ತಮ್ಮ ತಂದೆ ಕೇಂದ್ರದಲ್ಲಿ ರಚಿಸಿದ್ದ ಇತಿಹಾಸವನ್ನು ರಾಜ್ಯದಲ್ಲಿ ಪುನರಾವರ್ತಿಸುವ ಇರಾದೆ ಅವರಿಗಿರಬಹುದು.
ಕಾಂಗ್ರೆಸ್‌ಗಂತೂ ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಲು ಗೊತ್ತೇ ಇಲ್ಲ. ಆ ಪಕ್ಷವಂತೂ ತಾನು ಜನ್ಮ ತಾಳಿರುವುದೇ ಆಡಳಿತ ನಡೆಸಲು ಎಂದು ಭಾವಿಸಿದೆ. ಬಿಜೆಪಿಯ ದುರಾಡಳಿತದ ಲಾಭವನ್ನು ಅದು ಪಡೆಯುವ ಎಲ್ಲಾ ಅವಕಾಶಗಳಿವೆ. ಆದರೆ ಅದು ಈಗ ತಾನು ಜೆಡಿ(ಎಸ್) ಜೊತೆ ಸೇರಿ ತೋಡುತ್ತಿರುವ ಕಂದಕಕ್ಕೆ ಉರುಳಿ ಬೀಳವ ಸನಿಹದಲ್ಲಿದ್ದು ತನ್ನಲ್ಲಿರುವ ಶಾಸಕರನ್ನು ಕೂಡ ಕಳೆದುಕೊಳ್ಳುವ ಹಾದಿಯಲ್ಲಿ ಸಾಗಿದೆ.
ದೇಶದ ರಾಜಧಾನಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುತ್ತಿದ್ದಾಗ ರಾಜ್ಯದ ರಾಜಧಾನಿಯಲ್ಲಿ 'ಪೋಲಿ'ಟಿಕಲ್ ಕ್ರೀಡಾಕೂಟ ಜೋರಾಗಿಯೇ ನಡೆದಿತ್ತು ಭವಿಷ್ಯದಲ್ಲಿಯೂ ಅದು ಮುಂದುವರಿಯುವ ಎಲ್ಲ ಲಕ್ಷಣಗಳಿವೆ. ಸದ್ಯ ಬಿಜೆಪಿ ಎರಡು ಬಾರಿ ವಿಶ್ವಾಸಮತ ಗೆದ್ದಿರಬಹುದು, ಕಾಂಗ್ರೆಸ್, ಜೆಡಿ(ಎಸ್) ಸರ್ಕಾರದ ಬೆವರಿಳಿಸುವಲ್ಲಿ ಯಶಸ್ವಿ ಆಗಿರಬಹುದು, ಹೆಚ್. ಆರ್. ಭಾರಧ್ವಾಜ್ ತಮ್ಮ ಇರುವಿಕೆಯನ್ನು ರಾಜ್ಯದ ಜನತೆಗೆ, ದೇಶದ ಕಾಂಗ್ರೆಸ್ ಮುಖಂಡರಿಗೆ ತೋರಿಸಿಕೊಡಲು ಸಫಲರಾಗಿರಬಹುದು.... ಆದರೆ ಈ ಎಲ್ಲ 'ಬಹುದು'ಗಳಿಗಾಗಿ ಪ್ರಜಾಪ್ರಭುತ್ವದ ಮೌಲ್ಯಗಳು ಒಂದೊಂದಾಗಿ ಜೀವಚ್ಛವವಾದದ್ದು ಮಾತ್ರ ನಿಜಕ್ಕೂ ದಾರುಣ.
ಜೈ ಕರು `ನಾಟಕ' ಮಾತೆ
ಸಿರಿ ಪ್ರಜಾಪ್ರಭುತ್ವ ಗಲ್ಲಿಗೆ !!!
No comments:
Post a Comment