Saturday, November 13, 2010

ಬೌಲಿಂಗ್ ಕಲಿಗಳ ಬ್ಯಾಲೆಟ್ ಕದನ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಇದೀಗ ಮತ್ತೊಂದು ಮನ್ವಂತರದ ಪರ್ವಕಾಲ ಬಂದಿದೆ. ಹೊಸ ನೀರು ಹರಿದು ವರ್ಷಗಳಿಂದ ನಿಂತಿರುವ ಕೊಳಚೆಯನ್ನೆಲ್ಲ ದೂರ ಸಾಗಿಸಲೇಬೇಕಾದ ಸಮಯವಿದು. ಈ ಸುಸಂದರ್ಭಕ್ಕೆ ಸೆಪ್ಟೆಂಬರ್ ೨೧ರ ಮೂಹೂರ್ತ ನಿಗದಿಯಾಗಿದ್ದು ಕ್ರಿಕೆಟ್ ಲೋಕದ ಅತಿರಥ ಮಹಾರಥರು ಈ `ಶುದ್ಧೀಕರಣ ಕ್ರಿಯೆ'ಯ ನೇತೃತ್ವ ವಹಿಸಿದ್ದಾರೆ.
ಕೆಎಸ್‌ಸಿಎಗೆ ಸುಮಾರು ೮೦ ವರ್ಷಗಳ ಪೊಗದಸ್ತಾದ ಇತಿಹಾಸವಿದೆ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆಯ (ಬಿಸಿಸಿಐ) ಅಧೀನದಲ್ಲಿರುವ ಕ್ರಿಕೆಟ್ ಸಂಸ್ಥೆಗಳಲ್ಲೇ 'ಶ್ರೀಮಂತ' ಸಂಸ್ಥೆ. ಆದರೆ ಈ ಶ್ರ್ರೀಮಂತಿಕೆ ಸಲ್ಲದ ಕಾರಣಗಳಿಗೆ ಬಳಕೆಯಾಗುತ್ತಾ ಹಣ ಕಂಡಲ್ಲಿ ಸುಳಿದಾಡುವ ರಾಜಕೀಯದ ಕೆಟ್ಟ ಚದುರಂಗದಾಟಕ್ಕೆ ಆಹಾರವಾಯಿತೇ ಹೊರತು ರಾಜ್ಯದ ಕ್ರಿಕೆಟ್ ಅಭಿವೃದ್ಧಿಗೆ ಚಿಕ್ಕಾಸು ಪ್ರಯೋಜನವಾಗದೇ ಹೋದದ್ದು ದುರಂತ. ಇಂದು ರಾಜ್ಯದ ಕ್ರಿಕೆಟ್ ಬಿಪಿಎಲ್ ರೇಖೆಗಿಂತ ಕೆಳಗಿದ್ದರೆ ಕೆಎಸ್‌ಸಿಎ ಕೆಪಿಎಲ್ ಎಂಬ ಹಣದ ಚುಂಗನ್ನು ಎಳೆಯುತ್ತ 'ಇದೇ ರಾಜ್ಯದ ಕ್ರಿಕೆಟ್ ಅಭಿವೃದ್ಧಿ' ಎಂಬಂತೆ ಜನರ ಕಿವಿಯಲ್ಲಿ ಹೂವು ಇಡಲು ಪ್ರಯತ್ನಿಸುತ್ತಿದೆ. ಈ ಸಲವಂತೂ ಕೆಪಿಎಲ್ ಕೂಡ ಬೋರಲಾಗಿ ಬಿದ್ದಿದೆ. ಇವರನ್ನು ಹೀಗೆ ಬಿಟ್ಟರೇ ರಾಜ್ಯದ ಕ್ರಿಕೆಟ್ ಹೆಳ ಹೆಸರಿಲ್ಲದೇ ಹೋಗುತ್ತದೆ ಎಂದು ಅರಿತು ಸಜ್ಜನ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಕರ್ನಾಟಕ ಕ್ರಿಕೆಟ್‌ನ ಹಿತರಕ್ಷಣೆಗಾಗಿ ಮೈದಾನದ ಹೊರಗಿನ ಮಹಾ ಕದನಕ್ಕೆ ಧುಮುಕಿದ್ದಾರೆ. 
ಅದು ೧೯೯೮ನೇ ಇಸವಿ. ಅಂದರೆ ೧೨ ವರ್ಷಗಳ ಹಿಂದಿನ ಮಾತು. ಕರ್ನಾಟಕದ ಕ್ರಿಕೆಟ್‌ನ ಸುವರ್ಣ ದಿನಗಳ ಪುಟ ಒಂದೊಂದಾಗಿ ಸರಿಯುತ್ತಿತ್ತು. ಅಂದು ಕೆ. ಎಮ್. ರಾಮ್‌ಪ್ರಸಾದ್ ಕೆಎಸ್‌ಸಿಎದ ನೂತನ ಅಧ್ಯಕ್ಷರಾಗಿ ಮತ್ತು ಬ್ರಿಜೇಶ್ ಪಟೇಲ್ ಕೆಎಸ್‌ಸಿಎಯ ನೂತನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದರು. ಅಂದಿನಿಂದ ಇಂದಿನವರೆಗಿನ ೧೨ ವರ್ಷಗಳ ಕಾಲ ಕೆಎಸ್‌ಸಿಎಯಲ್ಲಿದದ್ದು `ಪಟೇಲ್‌ಗಿರಿ'. ಬ್ರಿಜೇಶ್ ಈ ಹುದ್ದೆ ಪಡೆಯಲು ಅದಕ್ಕಿಂತ ಹಿಂದೆ ೨೦ ವರ್ಷಗಳ ಕಾಲ ಕಾರ್ಯದರ್ಶಿ ಆಗಿದ್ದ ಸಿ. ನಾಗರಾಜ್‌ರನ್ನು ಮಣಿಸಿದ್ದರು. ಸಿ. ನಾಗರಾಜ್‌ಗಿಂತ ಮುಂಚಿತವಾಗಿ ಎಮ್. ಚಿನ್ನಸ್ವಾಮಿ ಬರೊಬ್ಬರಿ ೨೫ ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಅನಂತರ ಅವರು ಅಧ್ಯಕ್ಷರಾಗಿ ೧೯೭೮ರಿಂದ ೧೯೯೦ರವರೆಗೆ ಕೆಎಸ್‌ಸಿಎಯ ಜುಟ್ಟು ಹಿಡಿದುಕೊಂಡಿದ್ದರು. ಆಮೇಲೆ ೧೯೯೦ರಲ್ಲಿ ಡಾ. ಕೆ. ತಿಮ್ಮಪ್ಪಯ್ಯ (ರಣಜಿಯಲ್ಲಿ ಕರ್ನಾಟಕದ ಪರ ಪ್ರಪ್ರಥಮ ಶತಕ ಬಾರಿಸಿದವರು) ಕೆಎಸ್‌ಸಿಎಯ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.
೧೯೯೮ರ ಕೆಎಸ್‌ಸಿಎಯ ಗೆಲುವು ಕೇವಲ ಬ್ರಿಜೇಶ್ ಪಟೇಲ್‌ರ ಗೆಲುವಾಗಿರದೇ ಕ್ರಿಕೆಟಿಗರ ಗೆಲುವು ಅಗಿತ್ತು. ಅಂದು ಬ್ರಿಜೇಶ್ ಮಾಜಿ ಕ್ರಿಕೆಟಿಗರಾದ ಮತ್ತು ತಮ್ಮ ಡ್ರೆಸ್ಸಿಂಗ್ ರೂಮ್‌ಮೇಟ್‌ಗಳಾದ ಜಿ. ಆರ್. ವಿಶ್ವನಾಥ್, ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ, ಸುಧಾಕರ್ ರಾವ್ ಮತ್ತು ಅಭಿರಾಮ್ ಜೊತೆ ಸೇರಿ ಈ ಹುದ್ದೆಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಇಂದು ಇದೇ ತಂತ್ರವನ್ನು ಅವರ ಮೇಲೆಯೇ ಗೂಗ್ಲಿಯ ರೀತಿಯಲ್ಲಿ ಅನಿಲ್ ಕುಂಬ್ಳೆ ಬಳಸಿದ್ದಾರೆ. ಈ 'ಜಂಬೋ' ತಂತ್ರಗಾರಿಕೆಗೆ ಕಕ್ಕಾಬಿಕ್ಕಿಯಾಗಿರುವ ಬ್ರಿಜೇಶ್ ಪಡೆ ಬ್ಯಾಟ್ ಕೂಡ ಎತ್ತದೇ ಸೋಲೊಪ್ಪಿಕೊಂಡಿತು. ಆದರೆ ಹಿಂಬಾಗಿಲ ಮೂಲಕ ಕುಂಬ್ಳೆ ಬಣವನ್ನೇ ಹೈಜಾಕ್ ಮಾಡುವಲ್ಲಿ ಅದು ಯಶಸ್ವಿಯಾಗಿದೆ.
ಕಳೆದ ೧೦ ವರ್ಷಗಳಲ್ಲಿ ಕರ್ನಾಟಕ ಕ್ರಿಕೆಟ್‌ಗೆ ಒಂದು ರೀತಿಯಲ್ಲಿ ಗ್ರಹಣ ಬಡಿದಂತಾಗಿತ್ತು. ಇದಕ್ಕೆ ಬ್ರಿಜೇಶ್ ಪಟೇಲ್ ಒಬ್ಬರೇ ಕಾರಣ ಎಂದರೆ ತಪ್ಪಾದೀತು. ಆದರೆ ಅವರ ಪಾಲಿನ ಕೊಡುಗೆಯಂತೂ ಇದೆ. ಕಳೆದ ದಶಕದಲ್ಲಿನ ಕರ್ನಾಟಕದ ರಣಜಿ ಸಾಧನೆಯೇ ಒಂದು ನಿರಾಶಪರ್ವ. ಕಳೆದ ವರ್ಷ ರಣಜಿ ಫೈನಲ್ ತಲುಪಿದ್ದೆ ಮಹಾಸಾಧನೆ ಉಳಿದಂತೆ ಬರಿ ವೇದನೆ. ಇನ್ನೂ ೨೦೦೦ನೇ ಇಸವಿಗಿಂತ ಹಿಂದೆ ರಣಜಿ ಕ್ರಿಕೆಟಿಗೆ ಪಾದಾರ್ಪಣೆ ಮಾಡಿ, ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದ ರಾಜ್ಯದ ಕಲಿಗಳನ್ನು ಹೊರತುಪಡಿಸಿದರೆ ರಾಜ್ಯದ ಮತ್ತೊಬ್ಬ ಕ್ರಿಕೆಟಿಗ `ಟೀಮ್ ಇಂಡಿಯಾ'ದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿಲ್ಲ. ಇದಕ್ಕೆ ಆಟಗಾರರ ಪ್ರದರ್ಶನ ಕಾರಣವಾಗಿರಬಹುದು; ಇದಕ್ಕೂ ಕೆಎಸ್‌ಸಿಎಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಆದರೆ ಇದನ್ನು ಕೆಎಸ್‌ಸಿಎ ಒಂದು ಸಮಸ್ಯೆ ಎಂದು ಪರಿಗಣಿಸಿದೆಯೇ? ಪರಿಗಣಿಸಿದ್ದರೆ, ಅದನ್ನು ಪರಿಹರಿಸಲು ಏನು ಕ್ರಮ ಕೈಗೊಂಡಿದೆ?
ಕೇವಲ ಮೂರು ನಾಲ್ಕು ವರ್ಷಗಳ ಹಿಂದೆ ರಾಜ್ಯದ ೬ - ೭ ಮಂದಿ ಕ್ರಿಕೆಟಿಗರು ದೇಶವನ್ನು ಪ್ರತಿನಿಧಿಸುತ್ತಿದ್ದರು. ಈಗ ತಂಡದಲ್ಲಿರುವುದು ಹಳೆ ಹುಲಿಗಳು ಮಾತ್ರ ಅವರ ನಿವೃತ್ತಿಯ ನಂತರ ರಾಜ್ಯದ ಯಾವೊಬ್ಬ ಆಟಗಾರ ಕೂಡ ಭಾರತ ತಂಡದಲ್ಲಿ ಶಾಶ್ವತ ಸ್ಥಾನ ಪಡೆಯದೇ ಹೋದರೆ ಅದು ರಾಜ್ಯಕ್ಕಾಗುವ ಅವಮಾನ ಎಂದು ಕೆಎಸ್‌ಸಿಎ ಆಗ ಯೋಚಿಸಲಿಲ್ಲ. ಅದು ಕ್ರಿಕೆಟ್ ಅನ್ನು ಶ್ರೀಮಂತಗೊಳಿಸುವ ಬದಲಾಗಿ ಕ್ರಿಕೆಟ್ ಸಂಸ್ಥೆಯನ್ನು ಶ್ರೀಮಂತಗೊಳಿಸ ಹೊರಟಿತು.
ಇಂದು ಪಟೇಲ್ ಬಣಕ್ಕೆ ಎದುರಾಳಿ ಆಗಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ರ ಬಣ ಕೂಡ ರಾಜ್ಯದ ಕ್ರಿಕೆಟ್‌ನ ಅಭ್ಯುದಯಕ್ಕೆ ದುಡಿಯುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಕಳೆದ ಅವಧಿಯಲ್ಲಿ ಒಡೆಯರ್ ಅಧ್ಯಕ್ಷರಾಗಿದ್ದರು. ಅವರು ಕಡಿದು ಕಟ್ಟೆ ಹಾಕಿರುವುದು ಅಷ್ಟರಲ್ಲೇ ಇದೆ. ಇನ್ನೂ ನಾವು ಸುಮ್ಮನಿದ್ದರೆ ಈ ಎರಡು ಮದಗಜಗಳ ಕಾದಾಟದಲ್ಲಿ ಸಿಕ್ಕ ಬಾಳೆ ಗಿಡದ ಪರಿಸ್ಥಿತಿ ರಾಜ್ಯ ಕ್ರಿಕೆಟ್‌ಗೆ ಬರುತ್ತದೆ ಎಂದರಿತ ತಾವೇ ಅದರ ರಕ್ಷಣೆಗೆ ಮುಂದಾಗಿರುವುದು ಸಮಯೋಚಿತ. ಆದರೆ ಕೊನೆ ಕ್ಷಣದಲ್ಲಿ ಇವರು ಬ್ರಿಜೇಶ್ ಜೊತೆ ಕೈಜೋಡಿಸಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಟಿಎಸ್‌ಐ ಅವರ ಪ್ರತಿಕ್ರಿಯೆಯನ್ನು ಕೇಳಿದಾಗ ಅವರೆಲ್ಲರು `ಜಾಣ ಮೌನ' ವಹಿಸಿದ್ದಾರೆ.   
ಅನಿಲ್ ಕುಂಬ್ಳೆ ಆಗಲಿ ಅಥವಾ ಜಾವಗಲ್ ಶ್ರೀನಾಥ್ ಆಗಲಿ ಕೆಎಸ್‌ಸಿಎ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಹೊರಟಿರುವುದು ರಾತ್ರಿ ಬೆಳಗಾಗುವುದರಲ್ಲಿ ತೆಗೆದುಕೊಂಡ ನಿರ್ಧಾರವಂತೂ ಅಲ್ಲವೇ ಅಲ್ಲ. ಅವರಿಬ್ಬರಿಗೆ ಕೆಎಸ್‌ಸಿಎಯ ವ್ಯವಹಾರಗಳ ಬಗ್ಗೆ ಹಿಂದಿನಿಂದಲೂ ಅಸಮಾಧಾನವಿತ್ತು. ಶ್ರೀನಾಥ್ ಮತ್ತು ಕುಂಬ್ಳೆ ಇಬ್ಬರು ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಅನ್ನು ಕಟು ಮಾತುಗಳಿಂದ ವಿರೋಧಿಸಿದ್ದರು. ಕೆಎಸ್‌ಸಿಎಯ ಕಾರ್ಪೋರೇಟ್ ಆಗುವ ತವಕ ಕೊನೆಗೆ ಕ್ರಿಕೆಟ್‌ಗೆ ಸಂಬಂಧಿಸಿರದ ಯಾರ‍್ಯಾರೋ ಕೆಎಸ್‌ಸಿಎಯ ಒಳಗೆ ಅಡಿಯಿಡಲು ಅವಕಾಶ ಮಾಡಿಕೊಡುತ್ತದೆ ಎಂಬುದು ಕುಂಬ್ಳೆ ಆತಂಕಕ್ಕೆ ಕಾರಣವಾಗಿತ್ತು. ಶ್ರೀನಾಥ್, "ಯುವಕರನ್ನು ಮೊದಲು ದೀರ್ಘಾವಧಿಯ ಆಟಕ್ಕೆ ಕುದುರುವ ಹಾಗೆ ಮಾಡಬೇಕು ಮತ್ತು ಎಳೆ ವಯಸ್ಸಿನಲ್ಲೇ ಆಟಗಾರರಿಗೆ ಹಣದ ರುಚಿ ಸಿಕ್ಕರೆ ಅವರ ಕ್ರಿಕೆಟ್ ಜೀವನ ಹಾಳಾಗಬಹುದು" ಎಂಬ ಅಭಿಪ್ರಾಯಪಟ್ಟಿದ್ದರು. ಹೀಗೆ, ಕೆಎಸ್‌ಸಿಎಯ ರೀತಿ ನೀತಿಗಳ ಬಗ್ಗೆ ಇಬ್ಬರಿಗೂ ವರ್ಷಗಳ ಹಿಂದೆಯೇ ತೀವ್ರ ಅಸಮಾಧಾನವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಅದನ್ನು ಆಗಾಗ ಹೊರ ಹಾಕುತ್ತ 'ಮಾತಿನ ಮಲ್ಲ'ರಾಗುವುದು ಅವರಿಗೆ ಇಷ್ಟವಿರಲಿಲ್ಲ ಮತ್ತು ಅದು ಅವರ ಜಾಯಾಮಾನವೂ ಅಲ್ಲ. ಇವರೆನ್ನಿದ್ದರು 'ಅಂಗಣದ ಮಲ್ಲರು'! ಒಳ್ಳೆ ಸಮಯ ಸಿಗಲಿ ಎಂದು ಕಾಯುತ್ತಿದ್ದ ಈ ಇಬ್ಬರಿಗೂ ಕೆಎಸ್‌ಸಿಎಯ ಚುನಾವಣೆ ಕೆಂಪು ಹಾಸಿನ ಸ್ವಾಗತ ನೀಡಿತು. ಈ ಸವಾಲನ್ನೇ ಅವಕಾಶವೆಂದು ಬಗೆದ ಇವರಿಬ್ಬರು ಇನ್ನಿತರ ಸಹ ಆಟಗಾರರಾದ ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ವಿಜಯ್ ಭಾರಧ್ವಾಜ್, ಸುಜಿತ್ ಸೋಮಸುಂದರ್ ಮುಂತಾದವರ ಬೆಂಬಲದೊಂದಿಗೆ ಚುನಾವಣಾ ಕ್ರೀಸ್‌ಗೆ ಇಳಿದೇ ಬಿಟ್ಟಿದ್ದಾರೆ.
ಇದರಲ್ಲಿ ರಾಹುಲ್ ದ್ರಾವಿಡ್ ಈಗಾಗಲೇ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನ (ಈ ಸಂಸ್ಥೆ ಕೆಎಸ್‌ಸಿಎಗಿಂತಲೂ ಪುರಾತನವಾದದ್ದು) ಅಧ್ಯಕ್ಷರಾಗಿದ್ದಾರೆ. ಅದ್ದರಿಂದ ಅವರಿಗೆ ಕೆಎಸ್‌ಸಿಎಯ ಆಡಳಿತ ಕೆಲಸಗಳಲ್ಲಿ ಬ್ಯಾಟ್ ಬೀಸಬಹುದು.
ಕುಂಬ್ಳೆ ಕೆಎಸ್‌ಸಿಎ ಚುನಾವಣೆಗೆ ನಿಲ್ಲಬೇಕು ಎಂಬುದು ಬಿಸಿಸಿಐಯ ಒತ್ತಾಸೆ ಕೂಡ ಆಗಿತ್ತು ಎಂದು ಕೆಲ ನಂಬಲರ್ಹ ಮೂಲಗಳು ಹೇಳುತ್ತವೆ. ಇದಕ್ಕೆ ಕಾರಣವೂ ಇದೆ. ಬ್ರಿಜೇಶ್ ಪಟೇಲ್ ಹಿಂದಿನಿಂದಲೂ ಜಗಮೋಹನ್ ದಾಲ್ಮೀಯಾರೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದವರು. ಇಂದು ಬಿಸಿಸಿಐಯಲ್ಲಿ ದಾಲ್ಮೀಯಾ ಪ್ರಭಾವಳಿ ಕುಸಿಯುತ್ತಿದೆ. ಅದು ಮತ್ತಷ್ಟು ಕುಸಿಯಬೇಕು ಎಂಬುದು ಪ್ರಸಕ್ತ ಬಿಸಿಸಿಐನ ಮುಂದಾಳುಗಳ ಲೆಕ್ಕಾಚಾರ. ಅದಕ್ಕಾಗಿ ಕುಂಬ್ಳೆಗೆ ಅದು ತನ್ನ ಶ್ರೀ ರಕ್ಷೆ ನೀಡಿದೆ ಎಂದು ಹೇಳಲಾಗುತ್ತಿದೆ. ಬ್ರಿಜೇಶ್ ಇತ್ತೀಚಿನ ದಿನಗಳಲ್ಲಿ ಐಸಿಸಿ ಅಧ್ಯಕ್ಷ ಮತ್ತು ಬಿಸಿಸಿಐನ ಮಾಜಿ ಅಧ್ಯಕ್ಷ ಶರದ್ ಪವಾರ್‌ಗೆ ಹತ್ತಿರವಾಗಲೂ ಪ್ರಯತ್ನಿಸಿದ್ದರೂ ಕೂಡ ಅವರಿಗೆ ’ಹೊಸ ನೀರು’ ಬೇಕಿತ್ತು ಎಂದು ಹೇಳಲಾಗುತ್ತಿದೆ.
ಬ್ರಿಜೇಶ್ ಪಟೇಲರ ವಿರುದ್ಧ ೨೦೦೧ರ ಜನವರಿಯಲ್ಲಿ ಒಂದು ಭ್ರಷ್ಟಾಚಾರದ ಆರೋಪ ಬಂದಿತ್ತು. ಅಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉದ್ಯೋಗಿಗಳ ಒಕ್ಕೂಟ ಈ ಆರೋಪ ಹೊರಿಸಿತ್ತು. ಅಂದಿನಿಂದ ಅನೇಕ ಆರೋಪ ಪ್ರತ್ಯಾರೋಪಗಳು ಅಲ್ಲೊಂದು ಇಲ್ಲೊಂದು ಕೇಳಿಸುತ್ತಲೇ ಇದ್ದವು. ಅನಂತರ ಇತ್ತೀಚಿಗೆ ಒಡೆಯರ್ ತಮ್ಮರಿವಿಗೆ ಬಾರದಂತೆ ದಾಖಲೆಗಳ ಕಳ್ಳಸಾಗಣೆ ನಡೆಯುತ್ತಿದೆ ಎಂದು ಹೊರಿಸಿದ ಆರೋಪಗಳವರೆಗೂ ಇಲ್ಲಿ ಅನೇಕ ಕೆಸರೆರಚಾಟ ಪ್ರಸಂಗಗಳು ನಡಿದಿವೆ. ಇತ್ತೀಚೆಗಷ್ಟೆ ಬ್ರಿಜೇಶ್ ಪಟೇಲ್  'ಶುದ್ಧ ಹಸ್ತರು' ಎಂದು ರಿಜಿಸ್ಟ್ರಾರ್ ಆಫ್ ಸೊಸೈಟಿ ಹೇಳಿದ್ದರಿಂದ ಅಷ್ಟರಮಟ್ಟಿಗೆ ನೆಮ್ಮದಿಯ ನಿರ್ಗಮನ ಕಾಣುತ್ತಿದ್ದಾರೆ.
ಬ್ರಿಜೇಶ್‌ರ ಮತ್ತೊಂದು ನಡೆ ಕೂಡ ಅವರಿಗೆ ಉರುಳಾಗಿದೆ. ಅವರು ಅಧಿಕಾರಕ್ಕೆ ಬಂದ ಆರಂಭದಲ್ಲಿ ಕ್ರಿಕೆಟ್ ಆಟಗಾರರಿಗೂ ಕೆಎಸ್‌ಸಿಎಯ ಸದಸ್ಯತ್ವವನ್ನು ನೀಡುವ ಪ್ರಶಂಸನೀಯ ಕ್ರಮ ಕೈಗೊಂಡಿದ್ದರು. ಅದೇ ನಡೆ ಈಗ ಕುಂಬ್ಳೆ ಮತ್ತಿತ್ತರರು ಕೆಎಸ್‌ಸಿಎ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ಇಲ್ಲಿ ಗಮನಿಸಬೇಕು. ಬ್ರಿಜೇಶ್ ಈಗ ಕಣದಿಂದ ದೂರ ಸರಿದು ಕುಂಬ್ಳೆ ಪಡೆಯ ಬೆಂಗಾವಲಿಗೆ ನಿಂತಿರುವುದನ್ನು ಕಂಡಾಗ ಅವರು ಮತ್ತೊಂದು ತಂತ್ರಗಾರಿಕೆ ಮಾಡಿರುವುದು ಸ್ಪಷ್ಟವಾಗುತ್ತದೆ. ಕಳೆದ ಚುನಾವಣೆಯಲ್ಲಿ ಅವರಿಗೆ ಒಂದು ರೀತಿಯ ಮುಖಭಂಗವಾಗಿತ್ತು. ಇನ್ನೂ ಈ ಬಾರಿ ಅವರಿಗೆ ಕುಂಬ್ಳೆ ಪಡೆಯನ್ನು ಎದುರು ಹಾಕಿಕೊಂಡು ಉಸಿರಾಡುವುದು ಕಷ್ಟ. ಒಡೆಯರ್ ಬಣವಂತೂ ಅವರ ಶತ್ರು ಪಾಳಯ. ಅದನ್ನು ಸೇರಿಕೊಳ್ಳುವುದು ಅಥವಾ ಅದಕ್ಕೆ ತಮ್ಮ ಬೆಂಬಲ ಕೊಡುವುದು 'ಆತ್ಮಹತ್ಯೆ' ಮಾಡಿಕೊಳ್ಳುವುದಕ್ಕೆ ಸಮ. ತಾವು ಚುನಾವಣ ಕಣಕ್ಕೆ ಧುಮುಕ್ಕಿದ್ದರೆ ಸೋಲುವುದಲ್ಲದೇ ಕುಂಬ್ಳೆ ಪಡೆಗೂ ಕುಣಿಕೆ ಹಾಕಿದಂತಾಗುತ್ತದೆ. ಅದ್ದರಿಂದ ಈ ಉಸಾಬರಿಯೇ ಬೇಡ ಎಂದು ಅವರು 'ಪೋಷಕ ಪಾತ್ರ' ನಿರ್ವಹಿಸಲು ಬಯಸಿದ್ದಾರೆ. ಹೇಗಿದ್ದರೂ ತಮ್ಮವರನ್ನು ೨೪ ಸದಸ್ಯರ ಸಮಿತಿಯಲ್ಲಿ ಅದಷ್ಟು ತುರುಕುವುದು ಮತ್ತು ಕುಂಬ್ಳೆ, ಶ್ರೀನಾಥ್ ಜೊತೆಗೆ ಅದಷ್ಟು ಸೌಹಾರ್ದ ಸಂಬಂಧ ಇಟ್ಟುಕೊಳ್ಳುವುದು - ಇದು ಅವರ ಸದ್ಯದ ಕಾರ್ಯತಂತ್ರ. ಆದರೆ ಇದೆಲ್ಲದರ ಅರಿವಿದ್ದರೂ ಕೂಡ ಕುಂಬ್ಳೆ ಪಡೆ ಬ್ರಿಜೇಶ್ ಜೊತೆ ಕೈಜೋಡಿಸಿರುವುದು ತನ್ನ 'ಗೇಮ್ ಪ್ಲ್ಯಾನ್'ನಲ್ಲಿ ಎಡವಿದೆ ಎಂಬುದನ್ನು ಸೂಚಿಸುತ್ತದೆ.    
ಆದರೆ ಬ್ರಿಜೇಶ್‌ರ ಈ ನಡೆ ಕುಂಬ್ಳೆ ಪಡೆಯ ಪಾಲಿಗೆ ಲಾಭ ತಂದಿದ್ದಕ್ಕಿಂತ ಅಪಾಯದ ಚಾದರ ಹೊರಿಸಿರುವುದು ಅಶ್ಚರ್ಯದ ಸಂಗತಿ. ಒಡೆಯರ್ ಬಣದ ಅಶೋಕ್ ರಾಘವನ್ ಹೇಳುವಂತೆ, "ನಮಗೆ ಕುಂಬ್ಳೆ, ಶ್ರೀನಾಥ್‌ರ ಮೇಲೆ ಅಪಾರ ಗೌರವವಿದೆ. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಬ್ರಿಜೇಶ್‌ರ ಬೆಂಬಲ ಪಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಈ ಕ್ರಿಕೆಟಿಗರು ಕೂಡ ಬ್ರಿಜೇಶ್‌ರನ್ನು ವಿರೋಧಿಸುತ್ತ ಬಂದವರು. ಸಂಸ್ಥೆಯಲ್ಲಿ ಕೇವಲ ಕ್ರಿಕೆಟಿಗರು ಇದ್ದ ಮಾತ್ರಕ್ಕೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ ಎಂದರ್ಥವಲ್ಲ, ಇಲ್ಲಿ ನುರಿತ ಆಡಳಿತಗಾರರ ಅಗತ್ಯವಿದೆ."
ಅದ್ದರಿಂದ ಕುಂಬ್ಳೆ ತನ್ನತ್ತ ಬೆಂಬಲದ ಹಸ್ತ ಚಾಚಿದ ಬ್ರಿಜೇಶ್‌ರನ್ನು ಒಮ್ಮಲೇ ಆಲಿಂಗಿಸಿಕೊಳ್ಳುವುದರ ಬದಲು ಒಡೆಯರ್‌ರ ಬಣವನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೆ ಆಗಿದ್ದರೆ ಈ ಚುನಾವಣೆ ಇಷ್ಟು ಗೊಂದಲಗಳ ಗೂಡಾಗುತ್ತಿರಲಿಲ್ಲ. ಒಂದೋ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಿದ್ದರು ಇಲ್ಲವೆ ಸೌಹಾರ್ದಯುತವಾಗಿ ಚುನಾವಣೆ ನಡೆಯುತ್ತಿತ್ತು. ಹೀಗೆ ಪರಸ್ಪರ ಕತ್ತಿ ಮಸೆಯುತ್ತ, ಹಲ್ಲು ಕಡಿಯುತ್ತ ಇದ್ದವರ ಮಧ್ಯೆ ಇವರು ಹೆಣಗಾಡಬೇಕಾದ ಸ್ಥಿತಿ ಇರುತ್ತಿರಲಿಲ್ಲ. ಇದರಿಂದ ಕೆಎಸ್‌ಸಿಎಯಲ್ಲೂ ಒಂದು ಅಪೂರ್ವ ಒಗ್ಗಟ್ಟು ಮೂಡಿರುತ್ತಿತ್ತು.               
ಪತ್ರಿಕೆ ಅಚ್ಚಿಗೆ ಹೋಗುವ ಸಂದರ್ಭದಲ್ಲಿ ಕುಂಬ್ಳೆ ಪಡೆಯ ಪ್ರಬಲ ದಾಳಿಗೆ ಉತ್ತರಿಸಲು ಒಡೆಯರ್ ಬಣ ಪ್ಯಾಡ್ ಕಟ್ಟಿಕೊಂಡು ಸಿದ್ಧವಾಗಿದೆ. ಖುದ್ದು ಒಡೆಯರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಐಸಿಸಿ ಅಂಪೈರ್ ಸಮಿತಿಯ ಎ. ವಿ ಜಯಪ್ರಕಾಶ್, ಖಜಾಂಜಿ ಹುದ್ದೆಗೆ ಸಂಜಯ್ ಜಗದಾಳೆ, ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಕೃಷ್ಣಮೂರ್ತಿ ಮತ್ತು ಎಮ್. ಕೆ. ಪಾಂಡುರಂಗ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ರೋಜರ್ ಬಿನ್ನಿ  ಆದರೆ ಕುಂಬ್ಳೆ ಪಡೆ ಮತ್ತು ಒಡೆಯರ್ ಬಣದ ನಡುವೆ ಒಳ ಒಪ್ಪಂದಗಳಾಗುವ ಸಾಧ್ಯತೆ ಕೂಡ ಇದೆ. ಕುಂಬ್ಳೆ ಪಡೆ ಎಲ್ಲ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ ಒಡೆಯರ್ ಬಣ ವ್ಯವಸ್ಥಿತವಾಗಿ, ಯಾವುದೊ ಒಂದು ತಂತ್ರದ ಮೂಲಕ ಜಾಣ್ಮೆಯ ಬಲೆ ಬೀಸಿದೆ ಎಂದು ಹೇಳಲಾಗಿದೆ. ಆದರೆ ಪ್ರಸಕ್ತ ಕುಂಬ್ಳೆ ಪಡೆಯ ಜನಪ್ರಿಯತೆ ಮುಂದೆ ಒಡೆಯರ್ ಪಡೆ ಮಂಕಾಗಿರುವಂತೆ ಕಂಡರೂ ಕೂಡ ಸುಲಭವಾಗಿ ಸೊಲೊಪ್ಪಿಕೊಳ್ಳುವುದು ಒಡೆಯರ್ ಅವರ ಜಾಯಾಮಾನವಲ್ಲ. ಈ ಕೆಎಸ್‌ಸಿಎ ಚುನಾವಣಾ ಕಣ ಕೂಡ ಕ್ರಿಕೆಟ್ ಪಂದ್ಯದ ರೀತಿಯಲ್ಲಿ ಕೊನೆ ಕ್ಷಣದವರೆಗೂ ಕೂತೂಹಲ ಕಾದುಕೊಳ್ಳುವುದು ಮಾತ್ರ ನಿಶ್ಚಿತ.         
ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕುಂಬ್ಳೆ, ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಆಗ ಬಯಸಿರುವ ಶ್ರೀನಾಥ್ ಇವರೆಲ್ಲರಿಗೂ ರಾಜ್ಯ ಕ್ರಿಕೆಟ್ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಅರಿವಿದೆ. ಇಂದು ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯದ ಬೇರೆ ಯಾವುದೇ ಭಾಗದಲ್ಲಿ ಕ್ರಿಕೆಟ್ ಪಟುಗಳಿಗೆ ಹೇಳಿಕೊಳ್ಳವಂತಹ ಪ್ರೋತ್ಸಾಹವಾಗಲಿ, ಮೂಲಭೂತ ಸೌಕರ್ಯಗಳಾಗಲಿ ಇಲ್ಲ. ಶಾಲಾ ಮತ್ತು ಕ್ಲಬ್ ಮಟ್ಟಗಳಲ್ಲಿ ಕ್ರಿಕೆಟ್ ನಿಂತ ನೀರು. ಈವರೆಗೆ ಕ್ರಿಕೆಟ್ ಅಭಿವೃದ್ಧಿಗೆಂದು ತೆಗೆದುಕೊಂಡ ಹೆಚ್ಚಿನೆಲ್ಲ ಕ್ರಮಗಳು ಬೆಂಗಳೂರು ಕೇಂದ್ರಿತವಾಗಿದ್ದವು. ದೂರದ ಜಿಲ್ಲೆಗಳಿಗೆ ಸೌಲತ್ತು ಒದಗಿಸುವ ಭರವಸೆ ಕೆಎಸ್‌ಸಿಎ ಕಚೇರಿಯಿಂದ ತೂತದ ಗೆರಟೆಯಲ್ಲಿ ನೀರು ಕೊಂಡು ಹೋದ ರೀತಿ ಇರುತ್ತಿತ್ತು. ಅದಕ್ಕೆ ಇಂದು ಬಡಕಲಾಗಿರುವ ರಾಜ್ಯ ಕ್ರಿಕೆಟ್‌ನ ಪ್ರತಿಭೆಗಳೇ ಸಾಕ್ಷಿ. ಇದೆಲ್ಲವನ್ನು ಈ ಕ್ರಿಕೆಟಿಗರು ಚೆನ್ನಾಗಿಯೇ ಅರಿತಿದ್ದಾರೆ. ಗೆದ್ದರೆ ಮತ್ತೆ ಕರ್ನಾಟಕ ಕ್ರಿಕೆಟ್‌ಗೆ ವಸಂತ ಕಾಲ ಬರುತ್ತದೆ ಎಂದು ಆಶಿಸಬಹುದು. ಈ ಆಶಯ ವಾಸ್ತವವಾಗಲು ಈ ಆಟಗಾರರು ಮೈದಾನದಲ್ಲಿ ತೋರಿಸಿದ ಬದ್ಧತೆ, ಸಮರ್ಪಣ ಭಾವ ಮತ್ತು ಒಗ್ಗಟ್ಟನ್ನು ಆಡಳಿತದಲ್ಲೂ ತೋರಿಸಬೇಕಾಗುತ್ತದೆ. ರಾಜಕೀಯದಾ(ಕಾ)ಟ ಏನೇ ಇರಲಿ ಇಲ್ಲಿ ಕ್ರಿಕೆಟ್ ಗೆದ್ದರೆ ಸಾಕು.

No comments: