ಭಾರತ ಗ್ರಾಮಗಳ ದೇಶವೆಂದು ಹೇಳುತ್ತಾ ಗ್ರಾಮ ಜೀವನವೇ ಶ್ರೇಷ್ಠ ಅನ್ನುವ ಪರಿಭಾಷೆ ನೀಡುವುದು ರಾಜಕಾರಣಿಗಳ ಮತ್ತು ದೇಶದ ಆರ್ಥಿಕತೆಗೆ ಸಂಬಂಧಪಟ್ಟ ಸಮ್ಮೇಳನಗಳಲ್ಲಿ ಸ್ವಾಗತ, ಧನ್ಯವಾದಗಳಿರುವಷ್ಟೇ ಕಡ್ಡಾಯವಾಗಿ ನಡೆದು ಬಂದ ’ಸಮಾರಂಭ ಪಾರಂಪರ್ಯ’ ಸಂಗತಿ. ಹಾಗೇ ಇದೆಯೇ? ಇಲ್ಲವೇ? ಅನ್ನುವುದು ಪಿಯಚ್.ಡಿ ಪಡೆಯಲು ಸಂಶೋಧನೆ ನಡೆಸುವವರಿಗೆ ’ಆಹಾರ’ವಾಗುವ ವಿಷಯ. ಅಲ್ಲಿಗೆ ’ದಿ ಎಂಡ್’.
ನಗರಕ್ಕೆ ಅಥವಾ ಸೌಲಭ್ಯಗಳಿರುವ ಪ್ರದೇಶಗಳಿಗೆ ವಲಸೆ ಹೋಗುವುದು ಅಥವಾ ಉದ್ಯೋಗ ಹುಡುಕಿಕೊಂಡು ಹೋಗುವುದು ಜಗತ್ತಿನ ಪ್ರತಿಯೊಂದು ದೇಶ ಮತ್ತು ನಾಗರಿಕತೆಯಲ್ಲಿ ನಡೆದು ಬಂದ ಸಹಜ ಮತ್ತು ಅಷ್ಟೇ ಅನಿವಾರ್ಯ ಪ್ರಕ್ರೀಯೆ. ಈ ಚಟುವಟಿಕೆಯ ಲಾಭವನ್ನು ನಾವೆಲ್ಲರೂ ಸಮನಾಗಿ ಪಡೆದಿದ್ದೇವೆಯಾದರೂ ಈ ಪ್ರಕ್ರೀಯೆಯಲ್ಲಿ ನಗರಕ್ಕೂ ಹಳ್ಳಿಗೂ ’ಅವಶ್ಯಕತೆ’ಯೆಂಬ ಕೊಂಡಿಯಿತ್ತು.
ಆದರೆ ಇದೀಗ ಅಂದರೆ ಕಳೆದ ಶತಮಾನದ ಮಧ್ಯಭಾಗದಿಂದ ಲೋಕದಾದ್ಯಂತ ಹೊಸದೊಂದು ತೆವಲು ಜನಮನದೊಳಗೆ ಹರಿಯಲಾರಂಭಿಸಿದೆ. ಅದೇ, "ನಗರದಲ್ಲಿದ್ದರೆ ಮಾತ್ರ ಜೀವನ ಪಾವನ, ಹಳ್ಳಿಗನ ಬಾಳು ದಾರುಣ, ಹೇಗಾದರೂ ಮಾಡಿ ಪಟ್ಟಣ ಸೇರಿಕೋ" ಎಂಬುದು. ನಗರ ಬದುಕಿನ ವಾಸ್ತವ ಚಿತ್ರಣ ಪಡೆಯದ ಕಲ್ಪನೆಗಳ ಭ್ರಮಾಧೀನ ಮನಸ್ಸಿನ ಅಡಿಯಾಳದ ಗ್ರಾಮೀಣ ಯುವ ಜನಾಂಗವಂತೂ ನಗರಕ್ಕೆ ಎದ್ದೇನೋ, ಬಿದ್ದೇನೊ ಎಂಬಂತೆ ಗುಳೇ ಹೊರಟೇ ಬಿಟ್ಟಿದೆ. "ಹಸಿದವನ ಮುಂದೆ ಉಪದೇಶ ಸಲ್ಲದು" ಎನ್ನುತ್ತಾರೆ ಹಿರಿಯರು. ಈ ಕಾರಣಕ್ಕೆ ಸಾಂಸ್ಕ್ರತಿಕ ವಿಷಯಗಳನ್ನು ಬಿಟ್ಟು ಆರ್ಥಿಕ ವಿಷಯಗಳಿಗೆಯೇ ಬರೋಣ.
ನಗರಗಳು ಆರ್ಥಿಕತೆಯ ಕೇಂದ್ರಬಿಂದು ಒಪ್ಪೊಣ, ಉದ್ಯೋಗದ ಸೆಲೆಗಳು ಅದೆಲ್ಲಾ ಸರಿ. ಆದರೆ ನಮ್ಮ ಯುವಕರು ಅಲ್ಲಿನ ಉದ್ಯೋಗವನ್ನೇ ಅವಲಂಬಿಸಿ ಬದುಕುವ ಭಿಕಾರಿತನವನ್ನೇಕೆ ಪ್ರದರ್ಶಿಸುತ್ತಿದ್ದಾರೆ? ಇದಕ್ಕೆ ಆರ್ಥಿಕ ಕಾರಣಗಳೊಂದಿಗೆ ಅವರ ಅಭಿಲಾಷೆಗಳು ನಗರ ಜೀವನದ ಥಳಕು ಬಳುಕಿನ ಸಂಸ್ಕ್ರತಿಯೊಂದಿಗೆ ತಳಕು ಹಾಕಿಕೊಂಡಿರುವುದೇ ಪ್ರಮುಖ ಕಾರಣವಾಗಿರಬಹುದೆಂಬುದು ನನ್ನ ಅನಿಸಿಕೆ.ನಗರಗಳಲ್ಲಿ ಉದ್ಯೋಗದ ಮತ್ತು ಹಣ ಮಾಡುವ ತರಹೇವಾರಿ ದಾರಿಗಳಿರಬಹುದು ಆದರೆ ಅದೆಲ್ಲದಕ್ಕಿಂತ ಹೆಚ್ಚು ಮಾರ್ಗ ಹಣ ಕಳೆದುಕೊಳ್ಳಲಿಕ್ಕಿದೆ. ಹಾಗೆಯೇ ಅಲ್ಲಿನ ಜೇವನ ವೆಚ್ಚವೂ ಅಧಿಕ. ಅದರೆ ಈ ಸತ್ಯದ ಕಡೆಗೆ ಅವರದ್ದು ಜಾಣ ಕಿವುಡು.
ನಾನೇನು ನಗರ ಕೇಂದ್ರಿತ ಉದ್ಯೋಗದ ದ್ವೇಷಿಯೇನು ಅಲ್ಲ, ನಗರ ಪ್ರದೇಶದಲ್ಲಿ ದೊರೆಯುವ ಕೆಲವೊಂದು ಉದ್ಯೋಗಗಳು ಗ್ರಾಮೀಣ ಹಿನ್ನೆಲೆಯ ಆರೋಗ್ಯವಂತ ಯುವಕರ ದಾರಿ ತಪ್ಪಿಸುತ್ತಿದೆಯೇನೋ ಎಂಬ ಅಳಕು ನನ್ನನ್ನು ತೀವ್ರವಾಗಿ ಕಾಡುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ತಮ್ಮವರೊಂದಿಗೆ ಅತ್ಮೀಯ ವಾತವಾರಣದಲ್ಲಿ ಒಂದಿಷ್ಟು ಶಾರೀರಿಕ ಶ್ರಮ ಬಯಸುವ ನೂರಾರು ಕೆಲಸಗಳಿದ್ದರೂ ಪಟ್ಟಣದ ಕಲುಷಿತ ವಾತವರಣದಲ್ಲಿ ಕಡಿಮೆ ಸಂಬಳಕ್ಕೆ ಅವಿರತವಾಗಿ ದುಡಿಯಬೇಕಾದ ಹೋಟೆಲ್ ಗಳ ಸಪ್ಲ್ಯೆಯರ್, ಮನೆಕೆಲಸ, ಗ್ಯಾರೇಜ್ ಗಳಲ್ಲಿನ ದುಡಿತ, ವಸತಿಗ್ರಹಗಳಲ್ಲಿನ ರೂಂ ಬಾಯ್, ಕಾರ್ಖಾನೆಗಳಲ್ಲಿನ ಕಾರ್ಮಿಕ ಮುಂತಾದ ಕೆಲಸಕ್ಕಾಗಿ ಮನೆ ಬಿಟ್ಟು ಪಟ್ಟಣ ಸೇರುವುದು ಯಾತಕ್ಕಾಗಿ? ಇದರ ಬದಲು ಗ್ರಾಮೀಣ ಭಾಗದಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಮ್ರಣ್ಮಯ ಕಲೆ, ಬೆತ್ತದ ವಸ್ತುಗಳ ತಯಾರಿ, ಮರದ ಕೆತ್ತನೆ ಮುಂತಾದ ಉದ್ಯೋಗಗಳನ್ನು ಪರಿಶ್ರಮದಿಂದ ತಮ್ಮದಾಗಿಸಿಕೊಂಡು ಅದಕ್ಕೆ ತಮ್ಮತನದ ಸ್ಪರ್ಶ ನೀಡಿದರೆ ಭವ್ಯ ಭವಿಷ್ಯ ಆ ಕಲೆಗೂ, ಕಲಾಕಾರನಿಗೂ ಕಾದು ಕುಳಿತಿದೆ.
’ನಗರಗಳಲ್ಲಿ ಬಿಳಿಕಾಲರ್ ಜಾಬ್ ಸಿಗದಿದ್ದರೂ ಪರವಾಗಿಲ್ಲ, ಅಲ್ಲಿ ಭಿಕ್ಷೆ ಬೇಡಿಯಾದರೂ ಬದುಕುತ್ತೇನೆ. ಹಳ್ಳಿಯಲ್ಲಿ ಮಣ್ಣು ಮುಟ್ಟವ ಕೆಲಸ ಬೇಡವೇ ಬೇಡ " ಎಂದು ಶಪಥ ಮಾಡಿರುವವರು ನಗರಗಳತ್ತ ಕೆಲಸಕ್ಕಾಗಿ ಗುಳೆ ಹೊರಟವರು ಒಂದು ಮಾತನ್ನು ನೆನಪಿಟ್ಟುಕೊಳ್ಳುವುದು ಒಳಿತು, ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಗಾರರು ಮತ್ತು ಅಲ್ಲಿನ ಸೊಗಡನ್ನು ಸಾಂಸ್ಕ್ರತಿಕ ಸೊಗಡನ್ನು ಉಳಿಸಿ ಪಸರಿಸುವವರ ತೀವ್ರ ಕೊರತೆ ಉದ್ಭವಿಸಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಮುಂದಿನ ಪೀಳಿಗೆ ಹಳ್ಳಿಗಳನ್ನೇ ಕೆಲಸಕ್ಕಾಗಿ ಅವಲಂಬಿಸ ಬೇಕಾದ ಸ್ಥಿತಿ ಬರಬಹುದು. ಇದಕ್ಕಿಂತ ಮುಂಚೆ ನಾವು ಎಚ್ಚೆತ್ತು ನಗರ ಮತ್ತು ಹಳ್ಳಿಗಳ ಮಧ್ಯೆ ಒಂದು ’ಸಮತೋಲನ’ ಸ್ಥಿತಿ ನಿರ್ಮಾಣ ಮಾಡೋಣ ಅಲ್ಲವೇ?
No comments:
Post a Comment