Monday, March 16, 2009

ನಾನ್ಯಕೆ ಬರೆಯುತ್ತೇನೆ?

ಕಳೆದ ಮೂರು ವರ್ಷದಿಂದಲ್ಲೂ ಈ ಪ್ರಶ್ನೆಗೆ ನನ್ನಲ್ಲಿ ಉತ್ತರ ಸಿಕ್ಕಿಲ್ಲ. ಮುಂದಿನ ನೂರು ವರ್ಷಕ್ಕೂ ಬಹುಶ: ಉತ್ತರ ಸಿಗಲಿಕ್ಕಿಲ್ಲ! ಸಿಕ್ಕರೆ ...? ಒಡನೆಯೇ ನಾ ಬರೆಯುವುದನ್ನು ನಿಲ್ಲಿಸಿ ಬಿಡುತ್ತೇನೆ ಅಷ್ಟೇ!

ನನ್ನ ಬರಹದಿಂದ ಇಡೀ ಜಗತ್ತನ್ನೇ ಬದಲಾಯಿಸುತ್ತೇನೆ ಎಂಬ ಭ್ರಮೆ ನನಗಿಲ್ಲ. ಅಥವಾ ಯಾರದೋ ಜೀವನದಲ್ಲಿ ಬದಲಾವಣೆ ತರುತ್ತೇನೆ ಎಂಬ ಅಶಾವಾದವೂ ನನಗಿಲ್ಲ. ಅದರೂ ನಾನು ಬರೆಯುತ್ತೇನೆ ಯಾಕೆಂದರೆ "ಈ ಜಗತ್ತಿನಲ್ಲಿ ನಾನಿದ್ದೇನೆ" ಅದೂ ಜೀವಂತವಾಗಿ! ಅರಳುವ ಹೂವಿಗೂ ಸ್ಪಂದಿಸಬೇಕು, ನರಳುವ ಜೀವಕ್ಕೂ ದನಿಯಾಗಬೇಕು; ಬಾನೆತ್ತರದಿಂದ ಧುಮ್ಮಿಕ್ಕಿ ನೆಲ ಸೇರಿ ಮಾಯಾವಾಗೋ ನೀರ ಹನಿಯನ್ನು ಕೂಡ ಒಂದು ಕಡೆ ಕಡೆದಿಡಬೇಕು. ಬ್ರಹತ್ತಾದ ಸಾಗರದಲ್ಲೂ ಅಂತದ್ದೇ ಹನಿಯನ್ನು ಹುಡುಕಬೇಕು: ಮಗುವಿನ ಕಣ್ಣಲ್ಲಿನ ಮುಗ್ದತೆ, ಅಜ್ಜನ ಸುಕ್ಕುಗಟ್ಟಿದ ಮೊಗದಲ್ಲಿ ಹೆಪ್ಪುಗಟ್ಡಿರುವ ಅನುಭವ ಇವೆಲ್ಲವನ್ನೂ ನಾನು ಸಮಾನವಾಗಿ ಗುರುತಿಸಬಲ್ಲೆ ಎಂದು ಜಗತ್ತಿಗೆ ತೋರಿಸಬೇಕು; ಹಳ್ಳಿ, ದಿಲ್ಲಿ ನನಗೆ ಬೇರೆಯಲ್ಲ ಅರಡನ್ನೂ ನಾ ಬಲ್ಲೆ ಮತ್ತು ’ಎಷ್ಟು ಚೆನ್ನಾಗಿ’ ಅರಿತಿದ್ದೇನೆ ಎಂಬುದನ್ನು ಜಗತ್ತಿಗೆ ತೆರೆದಿಡಬೇಕು ..ಹೀಗೆ ನನ್ನ ಬರವಣಿಗೆಗೆ ಇರುವುದು ಇಂಥದೇ ಕೆಲಸಕ್ಕೆ ಬಾರದ ಹಂಬಲಗಳು.ಇವುಗಳೆಡೆಯಲ್ಲಿ ಮುಂದೆ ಇನ್ನೂ ಕೆಲವು ಸಂಗತಿಗಳು ಸೇರಿಕೊಳ್ಳಬಹುದು ಯಾಕೆಂದರೆ ನಾನು ನಿಂತ ನೀರಾಗಿರಲು ಇಷ್ಡಪಡುವುದಿಲ್ಲ ನನ್ನ ಈ ಗುಣ ನನ್ನ ಬರಹಕ್ಕೂ ಅನ್ವಯಿಸುತ್ತದೆ. ಚಲನಶೀಲತೆಯನ್ನು ಅಹ್ವಾನಿಸಿಕೊಂಡೆ ನಾ ಮುಂದುವರುಯುತ್ತೇನೆ ಅದುದರಿಂದ ಈ ಬ್ಲಾಗ್ ನ ಓದುಗರು ನನ್ನಿಂದ ಯಾವುದೇ ಸಿದ್ಧ ಮಾದರಿಯನ್ನು ಹುಡುಕಬೇಡಿ ಅಥವಾ ಯಾವುದೇ ಪಂಥಕ್ಕೆ ನನ್ನನ್ನು ಕಲ್ಲು ಕಟ್ಟಿ ಹಾಕಬೇಡಿ ಇದು ನಿಮ್ಮಲ್ಲಿ ನನ್ನ ವಿನಮ್ರ ವಿನಂತಿ.
ಚಲನಶೀಲತೆ ಎಂದರೆ ಸ್ವೀಕಾರ, ಅಳವಡಿಕೆ, ಸ್ಪಂದನೆ ಇವೆಲ್ಲಕ್ಕಿಂತ ಹೆಚ್ಚಾಗಿ ಮುಕ್ತತೆ. ಓದುಗ ದೊರೆಗಳ ಅನಿಸಿಕೆ, ಅಭಿಪ್ರಾಯಗಳಿಗೆ ತೆರೆದೆದೆಯ ಸ್ವಾಗತ ....