Thursday, February 16, 2012

" ಯಹ್ ದಿಲ್ಲಿ ಹೇ ದಿಲ್‌ವಾಲೊಂಕಿ" ಎಂಬುದನ್ನು ಆತ ನನಗೆ ತೋರಿಸಿಕೊಟ್ಟಿದ್ದ

ಸುಪ್ರೀಂ ಕೋರ್ಟ್‌ನ ಮುಂದೆ ಇಂದು ನಮ್ಮ ರಾಜ್ಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಕರಣಗಳು ಇಲ್ಲ ಮತ್ತು ಎಂದು ಖಾತ್ರಿ ಮಾಡಿಕೊಂಡ ಬಳಿಕ ಕಚೇರಿಗೆ ಆರಾಮವಾಗಿಯೇ ಹೊರಟಿದ್ದೆ. ಅಪಾರ್ಟ್‌ಮೆಂಟ್‌ನಿಂದ ಹೊರ ಬರುತ್ತಲೆ ರಿಕ್ಷಾವೊಂದು ಬಂತು. ಅದನ್ನು ಏರಿ ಆತ್ಮೀಯರಿಗೆ ಮೆಸೇಜ್ ಕಳಿಸುವ ನನ್ನ ನಿತ್ಯ ಪೂಜೆಯನ್ನು ಶುರು ಮಾಡಿಕೊಂಡೆ. ನಮ್ಮಲ್ಲಿಂದ ಕೌಶಂಬಿ ಮೆಟ್ರೋ ಸ್ಟೇಶನ್‌ಗೆ ೧೫ ನಿಮಿಷಗಳ ಪ್ರಯಾಣ (ಟ್ರಾಫಿಕ್ ಇಲ್ಲದೇ ಹೋದರೆ). ಮೆಟ್ರೋ ಸ್ಟೇಶನ್‌ನ ಬಳಿ ರಿಕ್ಷಾ ಇಳಿದು ಹಣ ಕೊಡೋಣ ಎಂದು ಕಿಸೆಗೆ ಕೈ ಹಾಕಿದರೆ ಪರ್ಸ್ ಇಲ್ಲ. ತಕ್ಷಣವೇ ಶಾಕ್ ಹೊಡೆದಂತೆ ಆಯಿತು. ಇದೀಗ ಕೆಲಸ ಕೆಟ್ಟಿತ್ತು ಅಂತ ಅಂದು ಕೊಂಡರು ವಿಚಲಿತನಾಗಲಿಲ್ಲ. ಪರ್ಸ್ ಮನೆಯಲ್ಲೆ ಬಿಟ್ಟಿದ್ದೇನಾ ಅಥವಾ ಪಿಕ್ ಪಾಕೆಟ್ ಅಯಿತಾ ಅಥವಾ ಎಲ್ಲದರೂ ಬಿತ್ತಾ ಎಂಬ ಗೊಂದಲ ತಲೆಯಲ್ಲಿ ಫ್ಯಾನ್‌ನಂತೆ ತಿರುಗುತ್ತಿತ್ತು. ಹಾಗಂತ ಮೊದಲ ಕಾರಣವನ್ನು ಈ ರಿಕ್ಷಾ ಡ್ರೈವರ್ ಜೊತೆ ಹೇಳುವ ಹಾಗಿಲ್ಲ. ಹೇಳಿದ್ದೆ ಆದರೆ ಅವನು ಯಾವ ಭಾಷೆ ಪ್ರಯೋಗ ಮಾಡುತ್ತಾನೆ ಅನ್ನುವುದು ತಕ್ಷಣವೆ ಫ್ಲಾಶ್ ಆಗಿ ಹೋಗಿತ್ತು. ಇನ್ನು ಯಾರಾದರೂ ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ಏನು ಮಾಡುವುದು ಅಂದು ಕೊಂಡು ತಕ್ಷಣವೇ ಪರ್ಸ್ ಹುಡುಕುವ ರೀತಿ ಮಾಡಿದೆ. ಪರ್ಸ್ ಸಿಗಲೇ ಇಲ್ಲ. ನಾನು ಸಾಮಾನ್ಯವಾಗಿ ನನ್ನ ಪ್ಯಾಂಟ್‌ನ ಮುಂದಿನ ಕಿಸೆಯಲ್ಲಿ ನೂರಿನ್ನೂರು ರೂಪಾಯಿ ಇಟ್ಟುಕೊಂಡಿರುತ್ತೇನೆ. ಆದರೆ ಇಂದು ಆ ರೀತಿಯೂ ಮಾಡಿಲ್ಲ ಎಂಬುದನ್ನು ಕಿಸೆಗೆ ಕೈ ಹಾಕಿ ಖಾತ್ರಿ ಪಡಿಸಿಕೊಂಡೆ. ಸರಿ, ರಿಕ್ಷಾದವನಿಗೆ ನನ್ನ ಸ್ಥಿತಿ ಅರ್ಥವಾಯಿತು. ಅವನು ಏನೂ ಹೇಳಲಿಲ್ಲ. ನನ್ನ ಪುಣ್ಯ. ನನ್ನನ್ನು ಅಲ್ಲೇ ಬಿಟ್ಟು ಮುಂದೆ ಹೋದ. ನನ್ನ ಪ್ರಕಾರ ಅವನು ಮಾಡಿದ ದೊಡ್ಡ ಪುಣ್ಯದ ಕೆಲಸ ಅದೇ.

ನಿಂತಿದ್ದೇನೆ ರಸ್ತೆ ಬದಿಯಲ್ಲಿ. ಮೆಟ್ರೋದಲ್ಲಿ ಕಚೇರಿಗೆ ಹೋಗಲು ಕೂಡ ಸಾಧ್ಯವಿರಲಿಲ್ಲ ಏಕೆಂದರೆ ನನ್ನ ಮೆಟ್ರೋ ಕಾರ್ಡ್ ಪರ್ಸ್‌ನಲ್ಲೆ ಇತ್ತು. ಅದರ ಜೊತೆಗೆ ಡೆಬಿಟ್ ಕಾರ್ಡ್, ವಿಸಿಟಿಂಗ್ ಕಾರ್ಡ್, ವೋಟರ್ ಕಾರ್ಡ್, ಪಾನ್ ಕಾರ್ಡ್, ಪೆನ್ ಡ್ರೈವ್, ಒಂದಷ್ಟು ಹಣ ಎಲ್ಲವೂ ಇತ್ತು. ಸರಿ, ಈಗ ಏನು ಮಾಡೋಣ ಅಂತ ಯೋಚಿಸಿದೆ. ನಾನು ಆ ಕ್ಷಣ ಎದೆ ಗುಂದಿಯೂ ಇರಲಿಲ್ಲ, ಆತಂಕಿತನೂ ಆಗಿರಲಿಲ್ಲ. ಅಗತ್ಯಬಿದ್ದರೆ ನಡೆದುಕೊಂಡು ಹೋಗಲು ಕೂಡ ಸಿದ್ಧನೇ ಆಗಿದ್ದೆ. ಏಕೆಂದರೆ ದೆಹಲಿಯಲ್ಲಿ ಒಂದು ಸಲ ಮಧ್ಯ ರಾತ್ರಿಯಲ್ಲಿ ನಾನು ಪ್ರಕಾಶ್, ಮೇಲ್ವಿನ್ ಅಪರಾತ್ರಿಯ ಹೊತ್ತು ಸುಮಾರು ೭-೮ ಕಿಮೀ ನಡೆದಿದ್ದೇವು.
ಈಗ ಸಾವಧಾನವಾಗಿ ನನ್ನ ಮುಂದಿದ್ದ ಆಯ್ಕೆಗಳ ಬಗ್ಗೆ ಯೋಚಿಸಿದ್ದೆ. ೧) ಯಾರಲ್ಲದರೂ ಕಾಡಿ ಬೇಡಿ ಹಣ ಪಡೆದು ಕಚೇರಿಗೆ ಹೋಗಿ ಅಲ್ಲಿ ಮತ್ತೇ ಗೆಳೆಯರಿಂದ ಹಣ ಪಡೆದು ಇವರಿಗೆ ವಾಪಾಸ್ ಕೊಡುವುದು. ಆದರೆ ಆ ಸಾಧ್ಯತೆ ವರ್ಕ್‌ಔಟ್ ಆಗುತ್ತೆ ಅನ್ನುವ ನಂಬಿಕೆ ನನಗಿರಲಿಲ್ಲ. ಏಕೆಂದರೆ ಅ ಹೊತ್ತಿನಲ್ಲಿ ನನಗೆ ೨೦ ರೂಪಾಯಿ ಸಾಕಿದ್ದರೂ ಕೂಡ ಅದನ್ನು ಕೇಳಬೇಕು, ಕೊಡಬೇಕು ಅದೆಲ್ಲ ಆಗುವಂತದ್ದಲ್ಲ ಎಂದು ಕೊಂಡೆ.

೨) ಯಾರನ್ನದರೂ ಗೆಳೆಯ ಅಥವಾ ಗೆಳತಿಯನ್ನು ಇಲ್ಲಿಗೆ ಬರ ಹೇಳಿ ನಂತರ ಅವರ ಜೊತೆ ಹೋಗುವುದು ಅಥವಾ ಅವರಿಂದ ಹಣ ಪಡೆದು ನನ್ನ ಕೆಲಸ ಮುಂದುವರಿಸುವುದು. ದೆಹಲಿಯಲ್ಲಿ ನನಗೆ ಸ್ನೇಹಿತರು ಸಾಕಷ್ಟಿದ್ದರು ಕೂಡ ಅವರು ನನ್ನಿದ್ದ ಸ್ಥಳಕ್ಕೆ ಬರಲು ಕನಿಷ್ಠ ಪಕ್ಷ ೧ ಗಂಟೆಯಾದರೂ ಬೇಕಿತ್ತು. ಇರಲಿ ಈ ಆಯ್ಕೆ ಎಂದು ಕೊಂಡೆ.

೩) ಇನ್ನು ಪ್ರಕಾಶ್ ನೈಟ್ ಶಿಫ್ಟ್ ಮಾಡಿ ಬಂದು ಮಲಗಿದ್ದಾರೆ ಅದ್ದರಿಂದ ಅವರಿಗೆ ಕಾಲ್ ಮಾಡಿದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತೆ ಆದರೆ ಅವರು ಕಾಲ್ ರಿಸೀವ್ ಮಾಡುವುದೇ ಸಂಶಯ. ಏಕೆಂದರೆ ನಾನು ರೂಮ್‌ಲ್ಲಿದ್ದಾಗಲೇ ಅವರಿಗೆ ಒಂದು ಕರೆ ಬಂದಿತ್ತು. ಮೊಬೈಲ್ ಟೇಬಲ್‌ನ ಮೇಲಿತ್ತು. ನಾನು ಆ ಕರೆ ಅನ್‌ನೋನ್ ನಂಬರ್‌ನಿಂದ ಬಂದಿದ್ದ ಕಾರಣಕ್ಕೆ ಅದನ್ನು ರಿಸೀವ್ ಮಾಡದೆ ಟೇಬಲ್ ಮೇಲೆಯೇ ಇಟ್ಟಿದ್ದೆ. ಆದ ಕಾರಣ ಅವರಿಗೆ ಕಾಲ್ ಮಾಡಿದರೂ ಅವರು ರಿಸೀವ್ ಮಾಡೋದಿಲ್ಲ ಅನ್ನುವುದು ಗೊತ್ತಿತ್ತು. ಇರಲಿ ಕೆಲವೊಮ್ಮೆ ಮಂತ್ರಕ್ಕೂ ಮಾವಿನ ಕಾಯಿ ಉದುರುತ್ತದೆ ಎಂದು ಕೊಂಡು ಕಾಲ್ ಮಾಡಿದೆ. ಯಾವ ಮಂತ್ರವೂ ನಡೆಯಲಿಲ್ಲ. ಇನ್ನು ಗುಡಿ ಕೂಡ ಮಲಗಿದ್ದಾನೆ. ಆದರೆ ಅವನು ನಾನು ಹೊರಡುವಾಗ ಇನ್ನು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಕ್ಕೋಬೇಕು ಎಂದು ಹೇಳಿದ್ದ. ಅದ್ದರಿಂದ ಅವನು ಕಾಲ್ ರಿಸಿವ್ ಮಾಡಲಾರ ಎಂದು ಕೊಳ್ಳುತ್ತಲೇ ಕಾಲ್ ಮಾಡಿದೆ. ಸ್ವಿಚ್ ಆಫ್ ಬಂತು. ಅವರು ಕಾಲ್ ರಿಸೀವ್ ಮಾಡಿದ್ರೆ ಅವರನ್ನು ಆದಿತ್ಯ ಮಾಲ್‌ನ ಮುಂದೆ ಬರ ಹೇಳಿ ಅವರಿಂದ ಹಣ ಪಡೆದುಕೊಂಡು ರಿಕ್ಷಾದವನಿಗೆ ಕೊಡಬಹುದಿತ್ತು ಅಥವಾ ಅವರನ್ನೇ ಇಲ್ಲಿಗೆ ಬರ ಹೇಳಬಹುದಿತ್ತು. ಹೀಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಸಮಸ್ಯೆ ಪರಿಹಾರವಾಗುತ್ತಿತ್ತು.

೪) ಇನ್ನು ಯಾವುದಾದರೂ ಗಾಡಿಯವರಲ್ಲಿ ಡ್ರಾಪ್ ಕೇಳುವ ಆಯ್ಕೆ ನನ್ನ ಮುಂದಿತ್ತು. ಆದರೆ ಅದೆಲ್ಲ ಬೇಡ ಎಂದು ಕೊಂಡೆ.
ಏನೇ ಆಗಲಿ, ನಾನು ಇಲ್ಲಿ ನಿಂತು ಏನು ಮಾಡಲಾಗದು. ರಸ್ತೆ ದಾಟಲೇ ಬೇಕು. ಇಲ್ಲಿ ಸೀದಾ ರಸ್ತೆ ದಾಟುವ ಹಾಗಿಲ್ಲ. ಮೆಟ್ರೋದವರು ಮಾಡಿರುವ ಸೇತುವೆಯ ಮೂಲಕ ಸಾಗಬೇಕು. ಆ ಕೆಲಸ ಮೊದಲು ಮಾಡೋಣ ಎಂದು ಅನಿಸಿತು.

ಅದರೆಡೆಯಲ್ಲಿ ಪರ್ಸ್ ಮತ್ತದರ ಒಳಗಿರುವುದು ಏನಾಯಿತು ಎಂಬ ಚಿಂತೆ. ಏಕೆಂದರೆ ಕೆಲವು ತಿಂಗಳ ಹಿಂದೆ ನನ್ನ ಮೊಬೈಲ್ ಪಿಕ್ ಪಾಕೆಟ್ ಆಗಿತ್ತು. ಒಂದೂವರೆ ತಿಂಗಳ ಹಿಂದೆಯಷ್ಟೆ ಪ್ರಕಾಶ್ ದಾರುಣವಾಗಿ ತನ್ನ ಮೊಬೈಲ್ ಕಳೆದುಕೊಂಡಿದ್ದರು. ಆದರೂ ಈ ಬಾರಿ ನನ್ನಲ್ಲಿ ಅದೇನೋ ಅತ್ಮವಿಶ್ವಾಸವಿತ್ತು. ಈಗ ಈ  ಸಮಸ್ಯೆಯನ್ನು ಮೊದಲು ಪರಿಹರಿಸಿಕೋ ಮತ್ತು ಉಳಿದದ್ದೆಲ್ಲ ಯೋಚನೆಗಳು ಎಂದು ಅಂದು ಕೊಂಡೆ. ಇಲ್ಲ, ನನ್ನ ಪರ್ಸ್ ಮನೆಯಲ್ಲೇ ಇದೆ ಎಂದು ಒಳ ಮನಸ್ಸು ಹೇಳುತ್ತಿತ್ತು.

ಈಗ ರಿಕ್ಷಾದಲ್ಲಿ ಹೋಗುವುದಾದರೆ ಎರಡು ಆಯ್ಕೆಗಳು. ಒಂದೋ ಅತ್ತ ಹೋಗುವ ಸವಾರಿ ರಿಕ್ಷಾದಲ್ಲಿ ಹೋಗಬೇಕು. ಇಲ್ಲವಾದರೆ ರಿಕ್ಷಾವನ್ನು ಬಾಡಿಗೆ ಮಾಡಿಕೊಂಡು ಹೋಗಬೇಕು. ಸವಾರಿ ರಿಕ್ಷಾದಲ್ಲಿ ಹೋದರೆ ೧೦ ರೂಪಾಯಿಯಲ್ಲಿ ರೂಮ್ ಸೇರಿಕೊಳ್ಳಬಹುದು. ಆದರೆ ಅವನನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರೂಮ್‌ಗೆ ಹೋಗಿ ಹಣ ತರುವುದು ಕಷ್ಟ ಕಷ್ಟ. ಅವ ಪಿರಿಪಿರಿ ಮಾಡಿಯೇ ಮಾಡುತ್ತಾನೆ. ನಮ್ಮ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿಯವರ ಪರಿಚಯ ನನಗಿದೆ. ಅವರ ಕೈಯಿಂದ ಹಣ ತೆಗೆದುಕೊಡಬಹುದು. ಅದರೆ ಅದಕ್ಕೂ ೨ ನಿಮಿಷ ತೆಗೆದುಕೊಳ್ಳುತ್ತದೆ. ರಸ್ತೆ ದಾಟಬೇಕಾಗುತ್ತದೆ. ನಂತರ ನನ್ನ ಪರಿಚಯದ ಸೆಕ್ಯೂರಿಟಿಯವರೇ ಇದ್ದಾರೆ ಎಂದು ಹೇಳಲಾಗದು. ಬೇಡ, ಬೇಡ ಅದು ಸಾಧ್ಯವೇ ಇಲ್ಲ. ಇನ್ನೂ ಏನೇ ಆಗಲಿ ರಿಕ್ಷಾ ಮಾಡಿಕೊಂಡೆ ಹೋಗೋಣ. ೫೦ ರೂಪಾಯಿ ಕೇಳಬಹುದು. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂನೂ ಕಳ್ಳನೇ. ಈಗ ಆನೆಗೆಯೇ ಕೈ ಹಾಕೋಣ ಎಂದು ಕೊಂಡೆ! ರಿಕ್ಷಾ ಮಾಡಿದರೆ ಅವನನ್ನು ೩-೪ ನಿಮಿಷ ನಿಲ್ಲಿಸಿ ರೂಮ್‌ಗೆ ಹೋಗಿ ಪರ್ಸ್ ತರಬಹುದು ಅನ್ನುವುದು ನನ್ನ ಲೆಕ್ಕಾಚಾರವಾಗಿತ್ತು.

ಸೇತುವೆಯ ಮೆಟ್ಟಿಲುಗಳನ್ನು ಇಳಿಯುತ್ತಲೇ ಹತ್ತಾರು ರಿಕ್ಷಾದವರು ಗಾಜಿಪುರ, ಇಂದಿರಾಪುರ, ಬಾಸಠ್, ರೈಲ್ವೇ ವಿಹಾರ್, ಕಾಳ ಪತ್ಥರ್ ಎಂದು ಬೊಬ್ಬಿರಿದು, ಕೈ ಬೀಸಿ, ಕೈ ಅಡ್ಡ ಹಿಡಿದು ಕರೆಯುತ್ತಿದ್ದರು. ಇನ್ನು ೭-೮ ಮೆಟ್ಟಿಲುಗಳ ಬಾಕಿ ಇರುವಾಗಲೇ ಅವರನ್ನೆಲ್ಲ ಅರೆ ಕ್ಷಣ ನಿಂತು ನೋಡಿದೆ. ಇವರು ಯಾರೂ ಕೂಡ ಒಬ್ಬ ಮನುಷ್ಯನನ್ನು ಕರೆಯುತ್ತಿಲ್ಲ, ನನ್ನ ಕಿಸೆಯೊಳಗಿರುವ ಪರ್ಸ್‌ನಲ್ಲಿರುವ ಆ ೧೦ ರೂಪಾಯಿಯನ್ನು ಕರೆಯುತ್ತಿದ್ದಾರೆ ಎಂದು ಅನಿಸಿತ್ತು. ನನಗಿಂತ ನನ್ನಲ್ಲಿರಬಹುದಾದ ೧೦ ರೂಪಾಯಿಯೇ ಅವರಿಗೆ ಅಗತ್ಯ ಮತ್ತು ಬೇಕಾಗಿರುವುದು ಎಂದು ಮನಸ್ಸು ಹೇಳುತ್ತಿತ್ತು.

ಅಷ್ಟರಲ್ಲೇ ನನ್ನ ಆಪ್ತ ಸ್ನೇಹಿತ ನನ್ನ ಸಹಾಯಕ್ಕೆ ಬಂದೇ ಬಿಟ್ಟ. ನಾನು ಮೆಟ್ಟಿಲು ಇಳಿದು ಹತ್ತಾರು ರಿಕ್ಷಾಗಳನ್ನು ನೋಡುತ್ತಿದ್ದಾಂತೆ ಈ ಎಲ್ಲ ರಿಕ್ಷಾಗಳ ಸಂತೆಯಿಂದ ದೂರ ಇದ್ದ ಒಂದು ರಿಕ್ಷಾ ನನ್ನ ಗಮನ ಸೆಳೆಯಿತು. ಅದು ಹೇಗೋ, ಏನೋ ಗೊತ್ತಿಲ್ಲ ಆ ರಿಕ್ಷಾದತ್ತ ದೌಡಾಯಿಸಿದೆ. ಬೇರೆ ಅನೇಕ ರಿಕ್ಷಾದವರು ಬಂದರು, ಕರೆದರು ನಾನು ಅವರಿಗೆ ಕ್ಯಾರೇ ಮಾಡದೆ ಆ ರಿಕ್ಷಾದತ್ತ ಸಾಗಿದೆ.

ಆ ರಿಕ್ಷಾದವನಲ್ಲಿ ಭೈಯ್ಯಾ, ಇಂದಿರಾಪುರಂಗೆ ಹೋಗಬೇಕಿತ್ತು ಎಂದು ಹೇಳಿದೆ. ಸರಿ, ಬಾ ಕೂತುಕೋ ಎಂದು ಅವನು ಹೇಳಿದ. ಎಷ್ಟಾಗುತ್ತದೆ? ಎಂದೆ. ’೬೦’ ಅಂದ. ಇಲ್ಲ, ಜಾಸ್ತಿಯಾಯಿತು ಎಂದೆ ಮತ್ತೆ ಎಷ್ಟು ಕೊಡುತ್ತಿ? ಎಂದಾಗ ೫೦ ಅಂದೆ. ಕೆಟ್ಟು ಬೀದಿಯಲ್ಲಿ ನಿಂತರೂ ಇದಕ್ಕೇನು ಕಮ್ಮಿ ಇಲ್ಲ ಎಂದು ಅದ್ಕೊಂಡು ೬೦ ರೂಪಾಯಿ ಎಂದು ಸರಿಯಾಗಿಯೇ ಹೇಳಿದ್ದಾನೆ ನನ್ನದೇ ಅಧಿಕ ಪ್ರಸಂಗ ಎಂದು ಕೊಂಡು ಆಯಿತು ಎಂದೆ. 

ಆಮೇಲೆ ನನ್ನ ಪ್ರವರ ಬಿಚ್ಚಿಟ್ಟೆ. ನೀನು ಮತ್ತೆ ಅಲ್ಲಿ ಬಂದು ಕಾಯಿಸಿದ್ದಕ್ಕೆ ಹಣ ಕೇಳಬಾರದು ಮತ್ತು ಹಣಕ್ಕಾಗಿ ೫ ನಿಮಿಷ ಕಾಯಬೇಕಾಗಬಹುದು ಎಂದೆ. ಅವನು ಹೇಳಿದ ಮಾತು ಹೀಗಿದೆ ಕೇಳಿ... ನಿಮ್ಮ ಕಾಫಿ, ತಿಂಡಿ ಆಗಿದೆಯಾ? ಬನ್ನಿ, ತಿಂದುಕೊಂಡು ಬರೋಣ, ನೀವು ನಾಚಿಕೆ ಪಡಬೇಡಿ. ಇಲ್ಲ, ಅಂದರೆ ಹೇಳಿ ಹಣ ನಾನು ಕೊಡುತ್ತೇನೆ, ನಿಮ್ಮನ್ನು ಉಚಿತವಾಗಿಯೇ ಮನೆ ತಲುಪಿಸುತ್ತೇನೆ ಎಂದ. ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಮೂಕವಿಸ್ಮಿತನಾಗುವುದು ಅಂತಾರಲ್ಲ ಹಾಗೇ ಆಗಿದ್ದೆ. ನಂತರ ಇಲ್ಲ, ಬೇಡ, ನಾವು ಹೋಗೋಣ ಎಂದೆ. ಸರಿ ಎಂದು ಅವ ಹೇಳಿದ.

ನಂತರ ಮಾತು ಮುಂದುವರಿಸುತ್ತ ಆತ, ಹಂ ಗರೀಬ್ ಹೇ ಲೇಕಿನ್ ಹಮಾರಾ ದಿಲ್ ಗರೀಬ್ ನಹಿ ಹೇ ಎಂದು ಆತ ಹೇಳಿದ ಮತ್ತು ಅದನ್ನು ಸಾಬೀತು ಪಡಿಸಿದ ಕೂಡ. ನಂತರ ಅಪಾರ್ಟ್‌ಮೆಂಟ್ ಬಳಿ ಕರೆದುಕೊಂಡು ಬಂದ. ಸೆಕ್ಯೂರಿಟಿ ಗಾರ್ಡ್‌ನವರು ನನ್ನ ಪರಿಚಯದವರೇ ಆಗಿದ್ದರು. ಅವರ ಕೈಯಿಂದ ೧೦೦ ರೂಪಾಯಿ ತೆಗೆದುಕೊಂಡು ಕೊಟ್ಟೆ. ಬಲವಂತವಾಗಿ ಚಿಲ್ಲರೆಯನ್ನು ನೀನೇ ಇಟ್ಟು ಕೋ ಎಂದೆ. ಮನಸ್ಸಿಲ್ಲದ ಮನಸ್ಸಿನಿಂದ ಆಯಿತು ಎಂದು ಹೇಳಿದ.

"ಯಹ್  ದಿಲ್ಲಿ ಹೇ ದಿಲ್‌ವಾಲೋಂಕಿ" ಎಂಬುದನ್ನು ಆತ ನನಗೆ ತೋರಿಸಿಕೊಟ್ಟಿದ್ದ. ಕಾಂಕ್ರಿಟ್ ಕಾಡಿನ ಜಟಿಲ ಬಲೆಗಳೊಳಗೆ, ಪೊದೆಗಳೊಳಗೆ ನಾವು ಬಿದ್ದು ತತ್ತರಿಸಿ ಸಿನಿಕರಾಗುತ್ತ ಸಾಗುತ್ತಿರುವಾಗ ಮಾನವೀಯತೆಯ ಅಚಲ ಮೂರ್ತಿಗಳಂತೆ ಕಾಣಿಸುವ ಇಂತಹವರು ಜೀವನಕ್ಕೆ ಸೌಂದರ್ಯ ತಂದುಕೊಡುತ್ತಾರೆ. ಇದೇ ಜೀವನದ ಸೌಂದರ್ಯ ಎಂಬುದುನ್ನು ಸಾಬೀತು ಪಡಿಸುತ್ತ ಅದರ ದರ್ಶನ ಮಾಡಿಸುತ್ತಾರೆ.

ಅಟೋಚಾಲಕರನ್ನು ಹಳದಿ ಭಯೋತ್ಪಾದಕರು ಎಂದೆ ಭಾವಿಸಿದ್ದ ನನ್ನ ಕಾಮಾಲೆ ಕಣ್ಣಿಗೆ ಮತ್ತು ಆ ರೀತಿ ಭಾವಿಸುವಂತೆ ಮಾಡಿದ್ದವರಿಗೆ ನನ್ನ ದಿಕ್ಕಾರವಿರಲಿ.

2 comments:

Anonymous said...

yes, 'Yeh Dilli hai Dilwalonki'. There may be some bad people. But there are many good people around u in Delhi. Delhi is not yet commercialised.

-Mel

ಬಾನಾಡಿ said...

Really you are lucky today!