Thursday, February 9, 2012

ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ

ಭಾರತದ ರಾಷ್ಟ್ರಪತಿ ಹುದ್ದೆ, ಮುಖ್ಯ ನ್ಯಾಯಾಧೀಶ ಸ್ಥಾನ ಹೀಗೆ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ದಲಿತರು ಒಂದಿಲ್ಲ ಒಂದು ಕಾಲಘಟ್ಟದಲ್ಲಿ ಅಲಂಕರಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಹುದ್ದೆ ಮಾತ್ರ ಅವರಿಗೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಎಲ್ಲವೂ ಲೆಕ್ಕಾಚಾರ, ಸಾಮರ್ಥ್ಯ ಮತ್ತು ಪ್ರತಿಭೆಗನುಗುಣವಾಗಿ ನಡೆದಿದ್ದರೆ ಇಂದು ಲೋಕಸಭೆಯ ಸ್ಪೀಕರ್ ಆಗಿರುವ ಮೀರಾಕುಮಾರ್‌ರವರ ತಂದೆ, ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗ ಜೀವನ್ ರಾಮ್ ೮೦ರ ದಶಕದ ಅಸುಪಾಸಿನಲ್ಲೇ ಈ ದೇಶದ ಮೊದಲ ದಲಿತ ಪ್ರಧಾನಿಯಾಗಬೇಕಿತ್ತು. ಆದರೆ ಆಗಲಿಲ್ಲ, ಆಗಲೂ ಬಿಡಲಿಲ್ಲ! ಕಾರಣ ಅವರ ಮಗ, ಮೀರಕುಮಾರ್‌ರ ಸೋದರ ಸುರೇಶ್ ರಾಮ್‌ನ ಚಿತ್ರ ೧೯೭೮ರಲ್ಲಿ ಮಾಸಿಕ ಪತ್ರಿಕೆಯೊಂದರಲ್ಲಿ ಒಬ್ಬಳು ಮಹಿಳೆಯ ಜೊತೆ ಪ್ರಕಟಗೊಂಡು ಲೈಂಗಿಕ ಹಗರಣದ ಕಿಡಿ ಹೊತ್ತಿಸಿದ್ದು. ಈ ರೀತಿ ಭಾರತ ಕಂಡ ಒಬ್ಬ ಧೀಮಂತ ನಾಯಕನ ರಾಜಕೀಯ ಅಧಃಪತನಕ್ಕೆ ಆತನ ಮಗನೇ ಮುನ್ನುಡಿಯಾದ.

ಇಂದು ಭಾರತೀಯ ರಾಜಕಾರಣದಲ್ಲಿ ಜಗ ಜೀವನ್ ರಾಮ್‌ರ ಪರಂಪೆಯನ್ನು ಬಳವಳಿಯಾಗಿ ಪಡೆದವರು ದುರ್ಬಿನಿಟ್ಟು ಹುಡುಕಿದರು ಸಿಗುವುದು ಅನುಮಾನ. ಆದರೆ ಅವರ ಮಗನಂತವರ ಸಂತತಿ ಸಾವಿರ ಸಾವಿರವಾಗಿ ದೇಶದ ಬಹುತೇಕ ಎಲ್ಲ ಶಾಸನ ಸಭೆಗಳೊಳಗೆ ನುಸುಳಿ ಬಿಟ್ಟಿವೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಉತ್ತರಖಂಡ, ಜಾರ್ಖಂಡ್, ರಾಜಸ್ತಾನ ಹೀಗೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಶಾಸನ ಸಭೆಗಳಲ್ಲಿ ದುಶ್ಯಾಸನರು ಆಸೀನರಾಗಿದ್ದಾರೆ. ಮತ್ತೊಂದು ಸಂಗತಿಯೆಂದರೆ ಈ ದುಶ್ಯಾಸನರು ಉತ್ತರದ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಹೆಚ್ಚಿನೆಲ್ಲ ರಾಜಕೀಯ ಪಕ್ಷಗಳಲ್ಲಿದ್ದು ಪಕ್ಷಾತೀತ ರಾಜ(ಕಾಮ)ಕಾರಣ ಮಾಡುತ್ತಿದ್ದಾರೆ.

ಜಮ್ಮು & ಕಾಶ್ಮೀರದ ಶ್ರೀನಗರದಲ್ಲಿ ೨೦೦೬ರಲ್ಲಿ ನಡೆದ ಲೈಂಗಿಕ ಹಗರಣವೊಂದು ೨೦೦೯ರಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾರ ಸ್ಥಾನಕ್ಕೆ ಕುತ್ತು ತಂದಿತ್ತು. ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿಯೂ ಇದ್ದರು ಆದರೆ ರಾಜ್ಯಪಾಲರು ಅದನ್ನು ಅಂಗೀಕರಿಸದ ಕಾರಣ ಬಚಾವ್ ಆಗಿದ್ದರು. ಆದರೆ ಪ್ರತಿಪಕ್ಷಗಳ ಕೈಯಲ್ಲಿ ಅವರು ಸಾಕಷ್ಟು ಅವಮಾನ ಎದುರಿಸಬೇಕಾಯಿತು. ಅವರು ಅದೇಷ್ಟು ಎದೆಗುಂದಿದ್ದರು ಎಂದರೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಹೋಗುವ ಮೊದಲು ಸದನದಲ್ಲಿ ನಾನು ಈ ರೀತಿಯ ಅವಮಾನವನ್ನು ತಾಳಿಕೊಳ್ಳಲಾರೆ ಎಂದು ಭಾವುಕರಾಗಿ ನುಡಿದಿದ್ದರು. ಆವರು ಇಂದಿಗೂ ಅಲ್ಲಿನ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೂ ಕೂಡ ಆ ಘಟನೆಯ ಬಳಿಕ ಅವರ ಚರಿಷ್ಮಾ ಮಾತ್ರ ಕಳೆಗುಂದಿದೆ.

ಇತ್ತ ದಕ್ಷಿಣದ ಕೇರಳದಲ್ಲಿ ನಡೆದ ಐಸ್‌ಕ್ರೀಮ್ ಲೈಂಗಿಕ ಹಗರಣವಂತೂ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಲ್ಲಿನ ಕೈಗಾರಿಕ ಸಚಿವರಾಗಿರುವ ಪಿ ಕೆ ಕುಙ್ಹಲಿಕುಟ್ಟಿ ಇದರಲ್ಲಿ ಭಾಗಿಯಾಗಿರುವ ಆರೋಪವಿದ್ದು ಈ ಬಗ್ಗೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ತನ್ನ ಅಂತಿಮ ವರದಿಯನ್ನು ಕೇರಳ ಹೈಕೋರ್ಟಿಗೆ ಸಲ್ಲಿಸಿದೆ. ಮುಸ್ಲಿಂ ಲೀಗ್‌ನ ಪ್ರಬಲ ನಾಯಕರಾಗಿರುವ ಕುಙ್ಹಲಿಕುಟ್ಟಿ ತನ್ನನ್ನು ೯೦ರ ದಶಕದಲ್ಲಿ ಲೈಂಗಿಕವಾಗಿ ಶೋಷಿಸಿದ್ದರು ಎಂದು ರೆಜಿನಾ ಎಂಬ ಮಹಿಳೆ ಅಲವತ್ತುಕೊಂಡಿದ್ದರು. ಇದರಿಂದಾಗಿ ೨೦೦೫ರಲ್ಲಿ ಕುಙ್ಹಲಿಕುಟ್ಟಿ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಈ ಪ್ರಕರಣ ೧೯೯೭ರಲ್ಲಿ ಬೆಳಕಿಗೆ ಬಂದಿತ್ತು. ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣ ಮುಸ್ಲೀಂ ಲೀಗ್‌ನ ಇಮೇಜ್‌ಗೆ ಭಾರಿ ಹಾನಿಯುಂಟು ಮಾಡಿತ್ತು.

ಸದ್ಯ ದೇಶದ ಸೆಕ್ಸ್ ಮತ್ತು ಪೊಲಿಟಿಕ್ಸ್‌ನ ಕೊಂಡಿಯ ಕುಪ್ರಸ್ಸಿದ್ದ ಘಟನೆ ನಡೆದಿರುವುದು ರಾಜಸ್ತಾನದಲ್ಲಿ. ಅಲ್ಲಿನ ಜಲ ಸಂಪನ್ಮೂಲ ಸಚಿವ ಮಹಿಪಾಲ್ ಮಧರ್ನಾ ಮತ್ತು ನರ್ಸ್ ಭನ್ವಾರಿ ದೇವಿ ನಡೆಸಿದ ಲೈಂಗಿಕ ಕ್ರಿಯೆಯ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಈ ಪ್ರಕರಣದ ದೆಸೆಯಿಂದ ಭನ್ವಾರಿ ದೇವಿಯ ಕೊಲೆಯಾಗಿದೆ ಎಂದು ನಂಬಲಾಗಿದೆ. ಮಧಾರ್ನಾ ’ಮಾಜಿ’ ಸಚಿವರಾಗಿ ಹಾಲಿ ಕಂಬಿ ಎಣಿಸುವ ಕಾಯಕ ಮಾಡುವಂತಾಗಿದೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ ಆರೋಪಕ್ಕೆ ತುತ್ತಾಗಿರುವ ಶಾಸಕ ಮಲ್ಕಾನ್ ಸಿಂಗ್‌ರನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯ ಜವಾಬ್ಧಾರಿಯನ್ನು ಸಿಬಿಐ ವಹಿಸಿಕೊಂಡಿದೆ.

ಇನ್ನು ಆಂಧ್ರ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದ, ಉತ್ತರ ಪ್ರದೇಶ ಮತ್ತು ಉತ್ತರಖಂಡದ ಮಾಜಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಗ (೨೦೦೯ರಲ್ಲಿ) ೮೬ರ ಹರೆಯದವರಾಗಿದ್ದ ನಾರಾಯಣ ದತ್ತ ತಿವಾರಿ ರಾಜಭವನವನ್ನೇ ತನ್ನ ರತಿ ವಿಲಾಸದ ಕೇಂದ್ರವನ್ನಾಗಿಸಿಕೊಂಡು ಮೂವರು ಬೆತ್ತಲೆ ಮಹಿಳೆಯರೊಂದಿಗೆ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದು sಸಾರ್ವಜನಿಕರ ಮುಂದೆ ತನ್ನ ಮಾನ ಮಾರ್ಯಾದೆಯ್ನ ಬೆತ್ತಲಾಗಿಸಿಕೊಂಡರು. ಈ ಪ್ರಕರಣ ಹೊರಬೀಳುವ ಕೆಲವೇ ದಿನಗಳ ಹಿಂದೆ ಯವಕನೋರ್ವ ತಿವಾರಿ ತನ್ನ ತಂದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ. ಅಂದರೆ ಸೆಕ್ಸ್ ಅನ್ನುವುದು ತಿವಾರಿಯವರ ಜೀವನದ ಥಿಯರಿಯೇ ಆಗಿತ್ತು ಎಂದು ಹೇಳಬಹುದೇನೋ?

ಕವಯಿತ್ರಿ ಮಧುಮಿತಾ ಶುಕ್ಲಾಳ ಜೀವನಗಾಥೆಯಲ್ಲಿ ಖಳನಾಯಕನಾಗಿ ಬಂದು ಆಕೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ಆತನ ಪತ್ನಿ ಬಂದಿಖಾನೆ ಸೇರಿದ್ದಾರೆ. ಶುಕ್ಲಾಳಿಗೂ ತ್ರಿಪಾಠಿಗೂ ದೈಹಿಕ ಸಂಪರ್ಕವಿತ್ತು ಮತ್ತು ಆಕೆ ಸಾಯುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದಳು. ಈ ಪ್ರಕರಣ ೨೦೦೩ರಲ್ಲಿ ಜರುಗಿತ್ತು.

೧೯೮೮ರಲ್ಲಿ ನಡೆದ ಬ್ಯಾಡ್ಮಿಟನ್ ಆಟಗಾರ ಸೈಯ್ಯದ್ ಮೋದಿಯ ಹತ್ಯೆಗೂ ರಾಜಕಾರಣಿ ಸಂಜಯ್ ಸಿಂಗ್‌ಗೂ ಸಂಬಂಧವಿತ್ತು ಇದಕ್ಕೆ ಮೋದಿಯ ಹೆಂಡತಿ ಅಮಿತಾಳಿಗೂ ಸಂಜಯ್‌ಗೂ ಇದ್ದ ಅನೈತಿಕ ಸಂಬಂಧವೇ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ.

ಉತ್ತರ ಪ್ರದೇಶದ ರಾಜಕೀಯದಲ್ಲಿ ಕಲ್ಲೋಲ ಉಂಟು ಮಾಡಿದ್ದ ಮತ್ತೊಂದು ಪ್ರಕರಣ ಕವಿತಾ ಚೌಧರಿಯ ಹತ್ಯೆ. ಆಕೆಗೂ ಅಲ್ಲಿನ ನೀರಾವರಿ ಸಚಿವರಾಗಿದ್ದ ಮೇರಾಜುದ್ದೀನ್ ಅಹ್ಮದ್‌ಗೂ ನಿಕಟ ಸಂಪರ್ಕವಿತ್ತು. ಇದನ್ನು ಬಳಸಿಕೊಂಡ ಕವಿತಾ ತಾವಿಬ್ಬರು ರಾಸಲೀಲೆಯಲ್ಲಿ ತೊಡಗಿದ್ದ ಕ್ಷಣಗಳನ್ನು ಚಿತ್ರಿಕರಿಸಿಕೊಂಡು ಅಹ್ಮದ್‌ರಿಂದ ಹಣ ಪೀಕುವ ಯೋಚನೆ ಮಾಡಿದ್ದಳು. ಈ ಎಲ್ಲಾ ಚಿತಾವಣೆಗೆ ಆಕೆಗೆ ಸಾಥ್ ನೀಡಿದ್ದು ರವೀಂದರ್ ಪ್ರಧಾನ್. ಆದರೆ ಹಣ ಹಂಚಿಕೊಳ್ಳುವ ಸಂದರ್ಭದಲ್ಲಾದ ’ಹೆಚ್ಚು ಕಡಿಮೆ’ ಕವಿತಾಳ ಪ್ರಾಣಕ್ಕೆ ಕುತ್ತು ತಂದಿತ್ತು. ಪ್ರಧಾನ್ ಜೈಲಿನಲ್ಲಿ ನಿಗೂಢವಾಗಿ ಸತ್ತ. ಕವಿತಾಳ ಅಪಹರಣ ಮತ್ತು ಕೊಲೆ ೨೦೦೬ರಲ್ಲಿ ಘಟಿಸಿತ್ತು.

ಓಡಿಶಾದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ನಾಯಕ ಜೆ ಬಿ ಪಾಟ್ನಾಯಕ್‌ರ ಹೆಸರು ಕೂಡ ಅಂಜನಾ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಇದು ೧೯೯೮ರಲ್ಲಿ ನಡೆದಿದ್ದ ಪ್ರಕರಣ.

ಅಸ್ಸಾಂನ ಮಾಜಿ ಮುಖ್ಯಮಂತ್ರಿ, ಅಸ್ಸಾಂ ಗಣ ಪರಿಷತ್‌ನ ವರಿಷ್ಠ ನಾಯಕರಾಗಿದ್ದ ಪ್ರಫುಲ್ಲ ಕುಮಾರ್ ಮಹಾಂತರ ರಾಜಕೀಯ ಭವಿಷ್ಯಕ್ಕೆ ಅವರು ಸಂಘಮಿತ್ರ ಎಂಬಾಕೆಯೊಂದಿಗೆ ಹೊಂದಿದ್ದ ವಿವಾಹೇತರ ಸಂಬಂಧವೆ ಮುಳುವಾಯಿತು.
ದೇಶದ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಮೊಹಮ್ಮದ್ ತಸ್ಲಿಮುದ್ದೀನ್ ೧೯೮೩ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ, ಉತ್ತರಖಂಡದ ಮಾಜಿ ಸಚಿವ ಕಾಂಗ್ರೆಸ್‌ನ ಹರಕ್ ಸಿಂಗ್ ರಾವತ್‌ಗೂ ಅಸ್ಸಾಮಿ ಮಹಿಳೆಯೊಬ್ಬಳಿಗೂ ಇದ್ದ ಸಂಬಂಧ, ಒರಿಸ್ಸಾದ ಮಾಜಿ ಸಚಿವ ಮನಮೋಹನ್ ಸನಾಲ್ ೨೦೦೮ರಲ್ಲಿ ಲೈಂಗಿಕ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪದಿಂದ ತಮ್ಮ ಸಾರ್ವಜನಿಕ ಜೀವನಕ್ಕೆ ಎಳ್ಳುನೀರು ಬಿಡಬೇಕಾಯಿತು.
೧೯೮೨ರಲ್ಲಿ ಬಿಹಾರದಲ್ಲಿ ಘಟಿಸಿದ್ದ ಬಾಬಿ ಕೊಲೆ ಪ್ರಕರಣ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ಜಗನ್ನಾಥ ಮಿಶ್ರಾ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೀವೃ ಇಕ್ಕಟ್ಟಿಕೆ ಸಿಳುಕಿಸಿತ್ತು. ಈ ಪ್ರಕರಣದಲ್ಲಿ ಅನೇಕ ಸಚಿವರು ಭಾಗಿಯಾದ ಆರೋಪ ಹುಟ್ಟಿಕೊಂಡಿತ್ತು. ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ೧೯೯೪ರಲ್ಲಿ ಒಂದು ಕಾಮಕಾಂಡ ಬಯಲಾಗಿತ್ತು. ಅಲ್ಲಿ ಸುಮಾರು ೫೦೦ರಷ್ಟು ಹುಡುಗಿಯರನ್ನು ಬಲವಂತವಾಗಿ ಇಟ್ಟುಕೊಂಡು ಕಾಮದಂಧೆ ನಡೆಸುತ್ತಿದ್ದ ಪ್ರಕರಣವದು. ಇವರಲ್ಲಿ ಬಹುತೇಕ ಹುಡುಗಿಯರು ಅಪ್ರಾಪ್ತರಾಗಿದ್ದರು. ಈ ದಂಧೆಯಲ್ಲಿ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತು ಕುಸುಮ ರೈಗೂ ಇದ್ದ ಭಾವನಾತ್ಮಕ ಸಂಬಂಧ ಹಾಗೂ ಅಮರ್ ಸಿಂಗ್ ಮತ್ತು ಬಹುಭಾಷಾ ನಟಿ ಜಯಪ್ರದಾರ ಒಡನಾಟವೂ ಅನೇಕ ಜನರ ಕಣ್ಣು ಕೆಂಪಾಗಿಸಿತ್ತು. 
ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್ ಮತ್ತು ಜಯಾ ಜೇತ್ಲಿ, ಉಮಾ ಭಾರತಿ ಹಾಗೂ ಗೋವಿಂದಾಚಾರ್ಯರ ನಡುವೆ ಇದೆ ಎಂದು ಭಾವಿಸಲಾಗಿರುವ ಸಂಬಂಧಗಳನ್ನು ’ಸಾಮಾನ್ಯ ಸಂಬಂಧ’ದ ಚೌಕಟ್ಟಿನಲ್ಲಿ ಕಾಣುವುದಕ್ಕೆ ಒಂಚೂರು ಕಷ್ಟವಾಗಬಹುದು.

ಇವೆಲ್ಲವೂ ಸ್ಯಾಂಪಲ್‌ಗೆ ಇರಲಿ ಎಂದು ಉದಾಹರಿಸಬಹುದಾದ ಕೆಲವೇ ಕೆಲವು ಪ್ರೇಮ, ಕಾಮ ಮತ್ತು ರಾಜಕೀಯದ ಆಯಾಮಗಳು ಬೆಸೆದು ಕೊಂಡಿರುವ ಪ್ರಕರಣಗಳಷ್ಟೆ. ಇನ್ನು ಅನೇಕ ಇಂತಹ ಪ್ರಕರಣಗಳು ಬೀದಿಗೆ ಬಿದ್ದಿವೆ. ಅದೇ ರೀತಿ ’ಸಾಕ್ಷ್ಯಾಧಾರಗಳ ಕೊರತೆ ಇರುವ ಆದರೆ ’ನಂಬಲು ಕಾರಣಗಳಿರುವ’ ಅನೇಕ ಪ್ರಕರಣಗಳು ಹಿಂದೆಯೂ ಇದ್ದವು ಈಗಲು ಇವೆ.

ನಮ್ಮ ವಿಧಾನ ಸಭೆಯಲ್ಲಿ ಇಬ್ಬರು ಮಂತ್ರಿಗಳು ಆಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದಿರಬಹುದು. ಹಾಲಪ್ಪರ ಅತ್ಯಾಚಾರ ಪ್ರಕರಣ, ರೇಣುಕಾಚಾರ್ಯ ಕಿಸ್ ಪುರಾಣ ಈಗ ಹಳತಾಗಿರಬಹುದು. ಆದರೆ ’ವರ್ಣ ರಂಜಿತ ವ್ಯಕ್ತಿತ್ವ’ದ ಅನೇಕ ಮುಖ್ಯಮಂತಿಗಳು, ಮಂತ್ರಿಗಳು, ಶಾಸಕರು ನಮ್ಮನ್ನು ಆಳಿದ್ದಾರೆ, ಈಗಲೂ ಆಳುತ್ತಿರಬಹುದು. ಸಿಕ್ಕಿ ಬಿದ್ದಿಲ್ಲ ಅಷ್ಟೆ!

ಅದ್ದರಿಂದ ಈ ಪೋರ್ನೋ ಪುರಾಣದ ಬಗ್ಗೆ ಹೇಳಿಕೆಗಳ ಪಾರಾಯಣ ಮಾಡುತ್ತ ಕಾಲಹರಣ ಮಾಡುವುದರ ಬದಲು ಸಾರ್ವಜನಿಕ ಜೀವನದಲ್ಲಿರುವವರು ಈ ಪ್ರಕರಣವನ್ನು ತಮಗೂ ಒಂದು ಪಾಠ ಎಂದು ಭಾವಿಸಿದರೆ ತಮ್ಮ ರಾಜಕೀಯ ಭವಿಷ್ಯ ಮತ್ತು ಮಾರ್ಯಾದೆ ಎರಡನ್ನು ಕೂಡ ಸುಭದ್ರವಾಗಿಡಟ್ಟು ಕೊಳ್ಳಬಹುದು. ಏಕೆಂದರೆ ಭಾರತೀಯರೂ ಇಂದಿಗೂ ಮುಕ್ತ ಕಾಮದ ಮನಸ್ಥಿತಿ ಹೊಂದಿಲ್ಲ ಅಥವಾ ಮುಕ್ತ ಕಾಮದ ಸಂಸ್ಕೃತಿ ಹೊಂದಿರುವ ಅಮೆರಿಕಾದಲ್ಲಿ ಕೂಡ ಅಲ್ಲಿನ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರಿಗೆ ತಾನು ಮೋನಿಕಾ ಲುವಿನುಸ್ಕಿ ಜೊತೆಗೆ ಹೊಂದಿದ್ದ ಲೈಂಗಿಕ ಸಂಬಂಧವನ್ನು ಸಮರ್ಥಿಸಿಕೊಳ್ಳಲಾಗದೆ ಪಡಿಪಾಟಲು ಪಟ್ಟ ನಿದರ್ಶನವೇ ನಮ್ಮ ಮುಂದಿದೆ.

ನಮ್ಮ ರಾಜಕೀಯ ರಂಗಕ್ಕೆ ಮಹಿಳೆಯರು ಬರಲಿ ಮತ್ತು ಬರಬೇಕು ಆದರೆ ರಾಜಕಾರಣಿಗಳ ಪಲ್ಲಂಗಕ್ಕಲ್ಲ.

No comments: