Saturday, May 14, 2011

ನಾನೇನು ಮಾಡಲಿ?

ನಿರೀಕ್ಷೆ, ಕಾತರ ಇತ್ತು
ಮಿಗಿಲೆತ್ತರ, ಮುಗಿಲೆತ್ತರ

ಕಾಲದ ಉರುಳಿಗೆ ನೀನು
ತತ್ತರ, ನಾನೋ ನಿರುತ್ತರ
ನಾವಿಬ್ಬರು ಸೇರಿ
ನೀಡಲಾರದೆ ಹೋದೆವೆ ಉತ್ತರ?

ಆ ನಿಗೂಢ ಮೌನದ ಅಂಚಿನಿಂದ
ನಿನ್ನ ನೋವಿನ ಗರ್ಭದಿಂದ
ನನ್ನ ಅಸಹಾಯಕತೆಯ ಮಧ್ಯದಿಂದ
ಜೋತು ಬಿದ್ದಿದ್ದ ಬೆರಳುಗಳ
ಮಧ್ಯೆ 'ಸುಳಿ'ದಾಡುತ್ತಿದ್ದ ಗಾಳಿಯ ಪರಿಮಳದಿಂದ
ಆ ಗಾಳಿ ನನ್ನ ಚರ್ಮದ ಕಣಕಣಗಳಿಗೆ ಸೋಕಿ
ಹುಟ್ಟಿಸಿದ ರೋಮಾಂಚನದಿಂದ
ಆ ಅರೆ ಪ್ರಜ್ಞಾವಸ್ಥೆಯ ಮರ್ಮಕ್ಕೆ
ಹುಟ್ಟಿಕೊಂಡ ಶಿಶುವಿಗೆ
ನಾಮಕರಣ ಮಾಡಲಾಗದೇ ಸೋತ
ಅನೇಕಾನೇಕ ಕ್ಷಣಗಳಿಂದ...

ನನ್ನ ನಿನ್ನ ನಡುವೆ ಅಲೆಅಲೆಯಾಗಿ
ಸಂಚರಿಸಿ, ವಿಹಾರಿಸಿ, ಕೆಣಕಿ, ಕೆಡವಿ
ಬಂಧಿಸಿಟ್ಟ ಅದೇನೋ ಇತ್ತಲ್ಲ...
ಅದೇ ಏನೂ?
ನನಗಂತೂ ಗೊತ್ತಿಲ್ಲ, ನಿನಗೆ?

ಇಂದು ದಾರಿಗೆ ತಿರುವು, ಕಣ್ಣ ಮುಂದೆ, ಹಿಂದೆ,
ಅತ್ತ, ಇತ್ತ ಗೊಂದಲಗಳ ಹರವು
ನನ್ನ ಹೆಜ್ಜೆ ಎತ್ತ? ನಿನ್ನ ಹೆಜ್ಜೆ ಖಚಿತ
ಎದೆಯ ಚಿಟ್ಟೆ ಹಾರ ಬಯಸುತ್ತೇ ನಿನ್ನ ಸುತ್ತ
ಆ ಚಿಟ್ಟೆಗೋ ನೀನೇ ಉಸಿರು
ನೀನೋ ಉರಿಸಿರುವೆ ಕೊಳ್ಳಿ, ಬಿದ್ದ ಬೆಂಕಿಯಿಂದಲೋ?
ಅಲ್ಲ, ಬೆಂಕಿ ಹಾಕಲೋ?
ಚಿಟ್ಟೆಯ ಉಸಿರು ಗಟ್ಟುತ್ತಿದೆ...!

ಕನಸುಗಳು ಜರ್ಝರಿತ, ಬಯಕೆಯ ಕಾಲು ಮುರಿತ
...ಡಬ್...ಡಬ್....ಡಅಅಅಅಬ್... ಎದೆಯಲ್ಲಿ ನಿನ್ನದೆ
ಮಿಡಿತ, ಊಹುಂ... ಆದರೂ ಇನ್ನೂ ಆಗಿಲ್ಲ ನಿನ್ನ
ಪ್ರೀತಿಯ ಮೇಲೆ ಕಡಿತ, ಎದೆಯೊಳಗೆಯೇ ಹಾಗೆಯೇ
ಇದೆ ನೆನಪುಗಳ ಕಡತ...

ಈಗ ಹುಟ್ಟಿಕೊಳ್ಳುತ್ತಿದೆ ಭಯ, ಆತಂಕ
ಅನಿಸುತ್ತಿದೆ, ಅಲ್ಲೇ ಎಲ್ಲೋ ಅಥವಾ ನಿನ್ನೊಳಗೆಯೇ ನಿಂತಿದ್ದಾನೆ
ನಿನ್ನೊಳಗಿನ ನಿನ್ನನ್ನು
ಸೂರೆ ಹೊಡೆಯುವ ಹಂತಕ...!

ಅವನೆದುರು ಹೋರಾಡೋಣ ಎಂದರೆ ನಾ
ಬಲಹೀನ...
ನನ್ನ ಬಲವೂ ನೀನೇ... ಒಲವೂ ನೀನೇ
ಆಗಿರೋಳು ತಾನೇ... ನೀನೇ ಜೊತೆಗಿಲ್ಲ
ಎಂದ ಮೇಲೆ...
ಇನ್ನಲ್ಲಿಯ ಬಲವು?
ಇನ್ನೆಲ್ಲಿಯ ಒಲವು?

ಈಗ ಯುದ್ಧಭೂಮಿಗೆ ಬೆನ್ನು ಹಾಕಿದ್ದೇನೆ
ಹೇಡಿಯಾಗಿ ಅಲ್ಲ, ಹೊಡಿಬಡಿಯುವ ತಾಕತ್ತಿಲ್ಲವೆಂದೂ
ಅಲ್ಲ; ಯಾರಿಗಾಗಿ, ಯಾಕಾಗಿ ಹೋರಾಡಲಿ
ಎಂಬ ವೈರಾಗ್ಯದಿಂದ

ಮತ್ತೇ... ನನ್ನನ್ನು ಯುದ್ಧ ಮಾಡಲು ಪ್ರೇರೆಪಿಸುವ
ಕೃಷ್ಣ... ನೀನು.. ನಿನಗೆಯೇ ಯುದ್ಧ ಬೇಡವಂತೆ
ನೀನೇ ಈಗ 'ಬುದ್ಧಂ ಶರಣಂ ಗಚ್ಚಾಮಿ...'
ಸ್ಮರಣೆ ಮಾಡುತ್ತಿರಲು... ನಾನೇನು ಮಾಡಲಿ...?

No comments: