Friday, May 6, 2011

ಪ್ರೀತಿಯೂ... ವಿರಹವೂ

ಪ್ರೀತಿಯಿಂದ ಅನ್ನುವ ಸಾಲುಗಳ
ಬರೆಯದೆ ಇನ್ನೇನು ಬರೆಯಬಹುದು ನಾನು?
ಒಂದು ವೇಳೆ ಬೇರೊಂದು ಪದ ಬರೆದರೆ
ಎದೆ ತುಂಬಿ ಪ್ರವಾಹವಾಗಿರುವ ಪ್ರೀತಿಗೆ
ಬರ ಬಂದು ಬಿಡಬಹುದೇನೋ

ಪ್ರೀತಿಯಿಲ್ಲದೆ, ಹೃದಯ ತುಂಬ
ಒಲುಮೆ ನಲಿಯದೆ
ದೇಹ, ಮನ ತುಂಬಿ ಪ್ರೀತಿ
ಹೊರ ಚೆಲ್ಲುತ್ತಿತ್ತೇ?

ಈ ಅಭಾವ
ಕಾಲದಲ್ಲೂ, ನಿರ್ಭಾವ ಮೊಗದಲ್ಲೂ
ಮುಷ್ಠಿ ಪ್ರೀತಿ ನಿನಗಾಗಿ
ಮೀಸಲಾಗಿರುತ್ತಿತ್ತೆ?

ಅಗಣಿತ ತಾರೆಗಳು; ನೆಲೆ ಕಾಣದ ತೆರೆಗಳು
ಆ ದೇವರಲ್ಲಿ ನನ್ನ ಮೊರೆಗಳು; ನಿನ್ನ ನೆನಪಿನ ಸೆರೆಗಳು
ಉರಿದ ಎದೆಯ ಧರೆ; ನಿನಗೆ ಕೇಳಿಸದ ನನ್ನ ಕರೆ
ಗೆಳತಿ, ನಿನ್ನೆದೆಯ ಅರೆತೆರೆ, ಮೇರೆ ಮೀರಿ ಹರಿದು
ನಿನ್ನ ತೋಯಿಸುವುದು ನನ್ನ ಪ್ರೀತಿಯ ತೊರೆ

ಆದರೇನು? ನಿನಗೆ ಅದು ಬೇಕಾಗಿಲ್ಲ
ಮತ್ತೇನು? ಇದೂ ಬೇಕಾಗಿಲ್ಲ
ನನ್ನದೋ ಬದುಕು ಮುಕ್ಕಾಲು
ನಿನಗೋ ಒಲುಮೆ ಮುಕ್ಕಾಲು
ಈಗ ಸಾಗಬೇಕಿದೆ ಬದುಕ ನಾವೆಯಲ್ಲಿ
ಅಲ್ಲೋ ನೀರು ಮೊಣಕಾಲು

ಪ್ರೀತಿಯಿಲ್ಲದೆ ಇರುತ್ತಿದ್ದರೆ
ನಮ್ಮ ನಡುವೆ ಏನಿರುತ್ತಿತ್ತು?
ಉತ್ತರ ಸರಳ ಮತ್ತು ವಿರಳ
ಏನಿಲ್ಲ...!
ಏನಿಲ್ಲ... ಹಾಗೆಂದರೆ
ಆ ನಾಟಕಗಳು, ಬಯ್ಗಳು, ನೋವುಗಳು, ನಲಿವುಗಳು,
ಕಣ್ಣೆವೆಯ ಮಿಲನ, ಮನ ಮನದ ಸಮ್ಮಿಲನ
ಮಾತು ನಿಂತಾಗ ಆಗೋ ತಲ್ಲಣ, ಮಾತಿಗೆ ಮಾತು
ಬೆರೆತಾಗ ಧಿಂತನನ ಧಿಂತನನ
ಅವು ಇದ್ದದಾದರೂ ಎಲ್ಲಿ?

ಪ್ರೇಮ ಚೈತ್ರ, ನೆನಪು ವಸಂತ,
ನೀನೋ ಶಿಶಿರ, ನೀನು ನಿಮಿಷ, ನೀನೇ ಆಗಿರಬೇಕು ಕ್ಷಣ
ನಾನೋ ಕಾಲ!
ನಿನ್ನ ಹೆಸರು ನನ್ನೊಡನೇ
ಅಚ್ಚಾಗದಿದ್ದರೆ ನನಗೆ
ಗುರುತೇ ಇಲ್ಲ,
ಸೆಳೆತವೂ ಇಲ್ಲ, ಮತ್ತೇನೂ ಇಲ್ಲ...
ನಿಜ ಹೇಳಬೇಕೆಂದರೆ, ನನಗೇನೂ ಬೇಕಾಗಿಯೂ ಇಲ್ಲ...!

ಗೆಳತಿ, ಗುರುತಾಗು, ಎದೆಯ ಚಂದಿರನನ್ನು
ನಿನ್ನ ಸೆರಗಲ್ಲಿ ಬಚ್ಚಿಟ್ಟು, ಅದಕ್ಕೋ ಪ್ರೀತಿಯ ಕಾವಿಟ್ಟು, ತುಟಿಗೆ
ತುಟಿಯ ಸಲ್ಲಾಪ ಕಲಿಸಿ, ನೋವ ಆಲಾಪಕ್ಕೆ ವಿರಾಮದ ಪಾಠ ಮಾಡಿ
ಪ್ರಣಯದ ಹೂದೋಟಕ್ಕೆ ನೀರುಣಿಸಿ
ನನ್ನೆದೆಯ ಸಸಿಯಲ್ಲಿ ನಳನಳಿಸಿ...

No comments: