೨೦೦೧ರ ಜುಲೈ. ಹೊಸ ಸರ್ಕಾರಕ್ಕೆ ವರ್ಷ ತುಂಬುವ ಸಂಭ್ರಮ. ಅದೇ ಸಂದರ್ಭದಲ್ಲಿ ಮೂವರು ಘಟಾನುಘಟಿ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ. ಕ್ಷಣಾರ್ಧದಲ್ಲೇ ಆ ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚನೆ. ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಅದಕ್ಷತೆ, ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದ ೧೨ ಸಚಿವರಿಗೆ ಗೇಟ್‌ಪಾಸ್. ತನ್ನ ಸಹೋದ್ಯೋಗಿಯೇ ಆಗಲಿ ಆಧಿಕಾರಶಾಹಿಯೇ ಆಗಲಿ ಯಾವುದೆ ಹಗರಣದ ಆರೋಪ ಕೇಳಿ ಬಂದದ್ದೆ ಆದರೆ ಆತನನ್ನು ಮನೆಗೆ ಕಳುಹಿಸಲು ಹಿಂದೆ ಮುಂದೆ ನೋಡದ ಒಬ್ಬ ವ್ಯಕ್ತಿ ಇಂದಿನ ರಾಜಕೀಯ ಕ್ಷೇತ್ರವನ್ನು ಆಳುತ್ತಿದ್ದಾನೆ, ಆತ ೧೨ ವರ್ಷದಿಂದ ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರೆ ನಂಬುವವರು ಯಾರು? ಅಂತಹ ಒಂದು ಆಶಾಕಿರಣವನ್ನು ಕೂಡ ಭ್ರಷ್ಟ್ಟಾಚಾರದ ಪ್ರಖರ ಪ್ರಭೆ ಇದೀಗ ಮಂಕಾಗಿಸಿದೆ.
ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗಿದ್ದ ಕ್ಲೀನ್ ಇಮೇಜ್‌ನ ದಂತ ಗೋಪುರ ಕುಸಿದು ಬಿದ್ದಿದೆ. ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಸಾಲಿಗೆ ಒಡಿಶಾ ಭರ್ಜರಿಯಾಗಿ ಎಂಟ್ರಿ ಮಾಡಿದ್ದು ಅಷ್ಟರಮಟ್ಟಿಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನವೀನ್ ಕಳೆದ ೧೨ ವರ್ಷಗಳಲ್ಲಿ ತನ್ನವರನ್ನು ಬಲಿಕೊಟ್ಟು ಕಾಪಾಡಿಕೊಂಡು ಬಂದಿದ್ದ ’ಭ್ರಷ್ಟತೆಯ ಅಸಹಿಷ್ಣು’ ಎಂಬ ಬಿರುದಿನ ಗುಳ್ಳೆ ಒಡೆದು ಕೀವುಗಳು ಹೊರಬರುತ್ತಿದೆ.
ಜೂನಿಯರ್ ಪಾಟ್ನಯಕ್ ೨೦೦೦ನೇ ಇಸವಿಯಿಂದಲೂ ಒಡಿಶಾದ ಮುಖ್ಯಮಂತ್ರಿ. ಈ ಬಾರಿಯದ್ದು ಅವರದ್ದು ಮೂರನೆ ಸರದಿ. ಕಳೆದ ಚುನಾವಣೆ (೨೦೦೯) ಅವರಿಗೆ ಅತ್ಯಂತ ಮಹತ್ವದಾಗಿತ್ತು. ಕಾರಣ ಅಂದು ಅವರ ಬಿಜು ಜನತಾದಳ ವಿಧಾನಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಾಗಲಷ್ಟೆ ತನ್ನ ಬಹುಕಾಲದ ಗೆಳೆಯ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತ್ತು. ಆದರೂ ಚುನಾವಣೆಯಲ್ಲಿ ನಿರಾಯಾಸ (೧೪೭ರಲ್ಲಿ ೧೦೩ ಸ್ಥಾನ ಗೆದ್ದು) ವಾಗಿ ಬಹುಮತ ಪಡೆದು ಮೂರನೇ ಬಾರಿಗೆ ಸಿಎಂ ಆಗಿದ್ದರು.
ಬಿಜೆಪಿ - ಬಿಜೆಡಿಯ ಮೈತ್ರಿ ಮುರಿದುಬೀಳಲು ಪ್ರಮುಖ ಕಾರಣ ಬಿಜೆಪಿಯೂ ಸರ್ಕಾರದ ಮೇಲೆ ಗಣಿ ಅಕ್ರಮ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ನವೀನ್ ಪಾಟ್ನಾಯಕ್ ತನಗೆ ಮೋಸ ಮಾಡಿದರು ಎಂಬುದು ಬಿಜೆಪಿಯ ಅಧಿಕೃತ ಹೇಳಿಕೆ. ಇದೀಗ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಶ್ರೀಕಾಂತ್ ಜೆನಾ ನವೀನ್‌ರ ಮೇಲೆ ಆರೋಪ ಹೊರಿಸಿದ್ದು ಮಾತ್ರವಲ್ಲದೆ ಅವರ ರಾಜೀನಾಮೆ ಕೇಳಿದ್ದಾರೆ. ನವೀನ್‌ರ ತಪ್ಪು ನೀತಿಗಳಿಂದಾಗಿ ಬೊಕ್ಕಸಕ್ಕೆ ೪ ಲಕ್ಷ ಕೋಟಿ ನಷ್ಟವಾಗಿದೆ, ಒಡಿಶಾ ಗಣಿ ಅಕ್ರಮಕ್ಕೆ ಕುಪ್ರಸಿದ್ಧವಾಗಿರುವ ಕರ್ನಾಟಕ ಮತ್ತು ಗೋವಾವನ್ನು ಮೀರಿಸಿದೆ ಎಂಬುದು ಅವರ ಆರೋಪ. ಕೇಂದ್ರದ ಸಚಿವರೊಬ್ಬರು ಈ ರೀತಿಯ ಆರೋಪ ಮಾಡಿರುವುದರಿಂದ ನವೀನ್ ಫಜೀತಿಗೆ ಸಿಲುಕಿಕೊಂಡಿದ್ದಾರೆ.
ನವೀನ್ ಗಣಿ ಅಕ್ರಮದಲ್ಲಿ ಭಾಗಿಯಾಗಿ ದೇಶದ ಬೊಕ್ಕಸಕ್ಕೆ ೭,೦೦೦ ಕೋಟಿ ರೂ ನಷ್ಟ ತಂದಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಆಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಬೇಳೆ ಹಗರಣಕ್ಕೆ ನವೀನ್ ತನ್ನ ಸಚಿವ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಪ್ರಮೀಳಾ ಮಲ್ಲಿಕ್‌ರಿಂದ ರಾಜೀನಾಮೆ ಪಡೆಯಬೇಕಾಯಿತು.
ಕಲ್ಲಿದ್ದಲು ಹಗರಣದ ಕೋಲಾಹಲ ಮೊದಲು ಕೇಳಿಸಿದ್ದೆ ಒಡಿಶಾದಿಂದ. ಈ ಹಗರಣದಿಂದ ಉನ್ನತ ಶಿಕ್ಷಣ ಸಚಿವರಾಗಿದ್ದ ಬದ್ರಿ ನಾರಯಣ ಪಾತ್ರ ಮತ್ತು ಸಾರ್ವಜನಿಕ ಶಿಕ್ಷಣ ಸಚಿವ ಪ್ರತಾಪ್ ಜೆನಾ ಸಚಿವ ಸಂಪುಟದಿಂದ ಹೊರ ನಡೆಯಬೇಕಾಯಿತು. ಕಳೆದ ೯ ವರ್ಷಗಳಲ್ಲಿ ನವೀನ್ ಸರ್ಕಾರ ೫,೦೦೦ ಹೆಕ್ಟೇರ್ ಗಣಿ ಗುತ್ತಿಗೆ ನೀಡಿದೆ. ಕಲ್ಲಿದ್ದಲು ಹಗರಣದಿಂದ ಬೊಕ್ಕಸಕ್ಕೆ ೧೨೫ ಬಿಲಿಯನ್ ನಷ್ಟ ಎಂದು ಅಂದಾಜಿಸಲಾಗಿದೆ.
ನಿಯಮಗಿರಿಯಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ವೇದಾಂತಕ್ಕೆ ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಸೆ. ಆದರೆ ಕೇಂದ್ರ ಪರಿಸರ ಇಲಾಖೆಯಿಂದ ಅಸಮ್ಮತಿ. ಆ ಬಳಿಕ ವೇದಾಂತ ವಿಶ್ವವಿದ್ಯಾಲಯದ ರಾದ್ಧಾಂತ! ಪೋಸ್ಕೋ ಎಂಬ ಮತ್ತೊಂದು ದೈತ್ಯ ಉಕ್ಕು ಕಂಪೆನಿಗೆ ತನ್ನ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡಲು ಪ್ರಯತ್ನಿಸಿದ ನವೀನ್‌ಗೆ ಜನರಿಂದ ತೀವ್ರ ವಿರೋಧ. ಕಳೆದ ವರ್ಷದ ಜೂನ್‌ನಲ್ಲಿ ನಡೆದ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ಸಚಿವರಿಬ್ಬರು ಕಾಂಗ್ರೆಸ್ ಶಾಸಕನೊಬ್ಬನ ಜೊತೆ ಕುದುರೆ ವ್ಯಾಪಾರಕ್ಕೆ ಇಳಿದದ್ದು ಜಗ ಜಾಹೀರಾಗುತ್ತಲೆ ನವೀನ್‌ಗೆ ಮತ್ತೊಂದು ಸಂಕಟ. ಹೀಗೆ ನವೀನ್‌ರ ಮೂರನೆ ಪಾಳಿ ಅನೇಕ ಗೊಂದಲಗಳ ಗೂಡು.
ಆದರೆ ಇಂತಹದ್ದೆಲ್ಲ ಕಠಿಣ ಸಮಯದಲ್ಲಿ ನವೀನ್ ’ಹರಕೆಯ ಕುರಿ’ ಹುಡುಕಿ ಬಚಾವ್ ಆಗುತ್ತಿದ್ದರು. ತಮ್ಮ ಕ್ಲೀನ್ ಇಮೇಜ್‌ನ್ನು ಮತ್ತಷ್ಟು ಎತ್ತರಕ್ಕೆ ಏರಿಸಿಕೊಳ್ಳುತ್ತಿದ್ದರು. ಆದರೆ ರಾಜ್ಯದಲ್ಲಿ ಇಷ್ಟೆಲ್ಲ ಅಕ್ರಮಗಳು ಮುಖ್ಯಮಂತ್ರಿಯ ಅರಿವಿಗೆ ನಿಲುಕದೆ ನಡೆದಿತ್ತು ಎಂಬುದನ್ನು ನಂಬುವುದು ಪರಮ ಕಷ್ಟ. ತನ್ನ ರಾಜಕೀಯ ಮಾರ್ಗದರ್ಶಕ ಪ್ಯಾರಿಲಾಲ್ ಮಹಾಪಾತ್ರ ತನ್ನ ವಿರುದ್ಧವೇ ದಂಗೆ ಎದ್ದು ತನ್ನ ಪದಚ್ಯುತಿಯ ಎಣಿಕೆ ಹಾಕಿದ್ದಾರೆ ಎಂಬ ವರದಿ ವಿದೇಶ ಪ್ರವಾಸದಲ್ಲಿದ್ದ ನವೀನ್‌ಗೆ ಸುಲಭವಾಗಿ ದಕ್ಕುತ್ತದೆ. ಆದರೆ ತನ್ನ ಕೈಗೆಳಗೆಯೇ ಒರಿಸ್ಸಾದ ದಟ್ಟ ಕಾಡುಗಳು ಅಕ್ರಮ ಗಣಿಗಾರಿಕೆಯ ಅಟ್ಟಹಾಸಕ್ಕೆ ನಲುಗುತ್ತಿರುವುದು ಗೊತ್ತಾಗಿಲ್ಲ ಎಂಬುದನ್ನು ಹೇಗೆ ತಾನೇ ನಂಬುವುದು?
ಗೋವಾದಲ್ಲಿ ನಡೆದಿದ್ದ ಗಣಿ ಅಕ್ರಮದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕಾರಣವಾಗಿದ್ದ ನ್ಯಾ. ಎಮ್ ಬಿ ಷಾ ನೇತೃತ್ವದ ಆಯೋಗ ಇದೀಗ ಒರಿಸ್ಸಾದ ಗಣಿ ಹುಳುಕು, ಕೊಳಕುಗಳ ಬಗ್ಗೆ ವರದಿ ತಯಾರಿಸುತ್ತಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಗಣಿ ಲೂಟಿಕೋರರಿಗೆ ದುಃಸ್ವಪ್ನವಾಗಿದ್ದ ಅರಣ್ಯಾಧಿಕಾರಿ ಯು. ವಿ. ಸಿಂಗ್ ಕೂಡ ಇದ್ದಾರೆ.
ಗಣಿ ಲೂಟಿಯ ಸುಗ್ಗಿ ಪ್ರಾರಂಭವಾದ ಅನೇಕ ವರ್ಷಗಳ ಬಳಿಕ ಇತ್ತೀಚೆಗಷ್ಟೆ ನವೀನ್ ತನ್ನ ಇಮೇಜ್ ರಕ್ಷಣೆಗಾಗಿ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ೨೭ ಗಣಿ ಕಂಪೆನಿಗಳಿಗೆ ೫೮ ಸಾವಿರ ಕೋಟಿ ದಂಡ ವಿಧಿಸಿದ್ದಾರೆ. ಯಾಕೋ ಗಣಿ ಅಕ್ರಮ ತನ್ನೆಲ್ಲ ಸೀಮೆಯನ್ನು ಮೀರಿದ ಬಳಿಕ ಕರ್ನಾಟಕದ ಆಗಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ೨೦೧೦ರಲ್ಲಿ ಅದಿರು ರಫ್ತಿಗೆ ನಿಷೇಧ ಹೇರಿ ’ಕುರ್ಚಿ ಮತ್ತು ಇಮೇಜ್’ನ್ನು ರಕ್ಷಣೆ ಮಾಡಿಕೊಳ್ಳುವ ಅಂತಿಮ ಪ್ರಯತ್ನ ನಡೆಸಿದ್ದರು. ಇದೀಗ ಎಮ್ ಬಿ ಷಾ ಆಯೋಗ ತನ್ನ ವರದಿ ನೀಡುವ ಮುಂಚಿತವಾಗಿ ದಂಡ ವಿಧಿಸಿ ತನ್ನನ್ನು ಬಚಾವ್ ಮಾಡಿಕೊಳ್ಳುವ ಪ್ರಯತ್ನವನ್ನು ನವೀನ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಅವರ ಕ್ರಮವನ್ನು ಬಣ್ಣಿಸಲಾಗುತ್ತಿದೆ. ಆದರೆ ಯಡಿಯೂರಪ್ಪ ಗಣಿ ಉರುಳಿಗೆ ಕೊರಳು ಕೊಡಲೇ ಬೇಕಾಯಿತು. ನವೀನ್‌ರ ಕೊರಳಿಗೆ ಗಣಿ ಉರುಳಾಗಬಹುದೇ ಅಥವಾ ಹರಕೆಯ ಕುರಿಗಳ ಕೊರಳಿಗೆ ಈ ಉರುಳು ಬೀಳಬಹುದೇ ಎಂಬ ಕುತೂಹಲ ಈಗಾಗಲೇ ಗರಿಗೆದರಿದೆ.
ನವೀನ್‌ರ ತಂದೆ ಬಿಜು ಪಾಟ್ನಾಯಕ್ ದೇಶದ ಜನಪ್ರಿಯ ಮತ್ತು ದೂರದರ್ಶಿತ್ವ ಹೊಂದಿದ್ದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ’ಭ್ರಷ್ಟರನ್ನು ಹಿಡಿದು ಥಳಿಸಿ’ ಎಂದು ಹೇಳುವಷ್ಟು ಭ್ರಷ್ಟತೆಯನ್ನು ವಿರೋಧಿಸಿದ್ದ ವ್ಯಕ್ತಿ ಅವರು. ಅವರ ಸುಪುತ್ರ ನವೀನ್‌ರ ಸನಿಹದಲ್ಲೆ ಕಳಂಕದ ಸುಳಿ ಸುತ್ತುತ್ತಿದೆ. ಇದು ಅವರ ಕ್ಲೀನ್ ಇಮೇಜ್‌ಗೆ ಧಕ್ಕೆ ತಂದಿರುವುದು ನಿಜ, ಆದರೆ ಅವರ ರಾಜಕೀಯ ಭವಿಷ್ಯವನ್ನು ಆಹುತಿ ತೆಗೆದುಕೊಳ್ಳಲಿದೆಯೇ ಎಂಬುದು ಸ್ಪಷ್ಟವಾಗುವ ದಿನ ಸನಿಹದಲ್ಲೇ ಇದೆ.
No comments:
Post a Comment