ನವೆಂಬರ ತಿಂಗಳಿನ ಮೊದಲ ಅಷ್ಟ ದಿನಗಳು ನಾನಾ ಸಂಕಷ್ಟದೊಳಗೆ ಸಿಳುಕಿರುವ ಜಗತ್ತಿನ ಮುಂದಿನ ರೂಪುರೇಷೆಗಳ ದಿಕ್ಸೂಚಕ. ವಿಶ್ವದ ನಂಬರ್ ೧ ಆರ್ಥಿಕತೆ ಎಂದು ಕರೆಸಿಕೊಳ್ಳುವ ಅಮೆರಿಕಕ್ಕೆ ಮತ್ತೆ ನಾಲ್ಕು ವರ್ಷಗಳ ಕಾಲ ಬರಾಕ್ ಒಬಾಮಾರೇ ಅಧ್ಯಕ್ಷರು ಎಂಬುದು ಅಖೈರಾಗಿದೆ. ಇದೀಗ ವಿಶ್ವದ ನಂಬರ್ ೨ ಅರ್ಥ ವ್ಯವಸ್ಥೆ ಎಂದು ಕರೆಸಿಕೊಳ್ಳುವ ಚೀನಾವನ್ನು ಮುಂದಿನ ದಶ ವರ್ಷಗಳ ಕಾಲ ನೂತನ ಅಧ್ಯಕ್ಷ ಕ್ಷಿ ಜಿಂಪಿಂಗ್ ಮುನ್ನಡೆಸುವುದು ಸ್ಪಷ್ಟ. ಅವರಿಗೆ ಪ್ರಧಾನಮಂತ್ರಿಯಾಗಿ ಲೀ ಕ್ವಿಗಿಂಗ್ ಸಾಥ್ ನೀಡಲಿದ್ದಾರೆ.
ಇಳಿಜಾರಿನ ಹಾದಿಯಲ್ಲಿ ಪಾತಾಳ ಮುಖಿಯಾಗಿ ಸಾಗುತ್ತಿರುವ ಈ ಎರಡು ’ದೈತ್ಯ ಶಕ್ತಿಗಳು’ ತಾವು ಮುಳುಗುವುದರೊಂದಿಗೆ ಇಡೀ ಜಗತ್ತಿನ ಅರ್ಥ ವ್ಯವಸ್ಥೆಯನ್ನೇ ವಿಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಈ ದೇಶಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ವಿಶ್ವ ಅರ್ಥಿಕತೆಯನ್ನೆ ಪಲ್ಲಟ ಮಾಡುವ ಪ್ರಚ್ಛನ್ನ ಶಕ್ತಿ ಹೊಂದಿದೆ.
ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರ. ಅಲ್ಲಿ ಮುಕ್ತತೆ ಸೀಮಾತೀತ. ಅದ್ದರಿಂದ ಅಮೆರಿಕದ ತಪ್ಪು ಒಪ್ಪುಗಳ ವಿಮರ್ಶೆ, ಟೀಕೆ ಟಿಪ್ಪಣಿ ನಡೆಸುವುದು ಸುಲಭ ಮತ್ತು ಸರಳ. ಆದರೆ ಚೀನಾ ಆಗಲ್ಲ. ಅಲ್ಲಿನ ಪ್ರಜೆಗಳು ಬಾಯಿಗೆ ಬೀಗ, ಲೇಖನಿಗೆ ನಿರ್ಬಂಧ ಹಾಕಿಕೊಂಡೆ ಬದುಕಬೇಕು. ಅದು ಅಪ್ಪಟ ಕಮ್ಯುನಿಷ್ಟ್ ಮಾದರಿಯ ಆಡಳಿತ ಹೊಂದಿರುವ ಬಂಡವಾಳಶಾಹಿ ಆರ್ಥಿಕತೆಯನ್ನು ಒಪ್ಪಿಕೊಂಡಿರುವ ರಾಷ್ಟ್ರ. ಇಂತಹ ರಾಷ್ಟ್ರವೊಂದು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿರುವ ಅಭಿವೃದ್ಧಿಗೆ, ವ್ಯವಸ್ಥೆಗೆ ಇದೀಗ ಆಪತ್ತು ಎದುರಾಗಿದೆ. ಇಂತಹ ಇಳಿ ಸಮಯದಲ್ಲಿ ಚೀನಾದ ಚುಕ್ಕಾಣಿಯನ್ನು ಕ್ಷಿ ಜಿಂಪಿಂಗ್ ವಹಿಸಿಕೊಳ್ಳಲಿದ್ದಾರೆ.
ಗುಪ್ತತೆಯ ಮೈವೆತ್ತ ರೂಪವಾಗಿರುವ ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಕ್ಷಿ ಜಿಂಪಿಂಗ್ ಅವರ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವುದು ಮೀನಿನ ಹೆಜ್ಜೆಯನ್ನು ಪತ್ತೆ ಹಚ್ಚಿದಂತಹ ಸಾಹಸ.
ಆದರೂ ಕ್ಷಿ ಜಿಂಪಿಂಗ್ ಅವರನ್ನು ಕಮ್ಯುನಿಷ್ಟ್ ಚೀನಾದ ೫ನೇ ಪೀಳಿಗೆ ನಾಯಕ. ಅವರಿಗೆ ಈಗ ೫೯ರ ಹರೆಯ. ಅವರು ಹಿರಿಯ ಕಮ್ಯುನಿಷ್ಟ್ ನಾಯಕ ಕ್ಷಿ ಝಾಕ್ಷನ್ ಅವರ ಪುತ್ರ. ಕೆಮಿಕಲ್ ಇಂಜಿನಿಯರಿಂಗ್ ಮತ್ತು ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಅವರು ೨೦೦೭ರಲ್ಲಿ ಶಾಂಘೈಯಲ್ಲಿ ಪಕ್ಷದ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಲೆ ಚೀನಾದ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಸಂಕೇತ ರವಾನೆಯಾಗಿತ್ತು.
ಆ ಬಳಿಕ ನವ ಸದಸ್ಯರ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾಗಿ ಅವರನ್ನು ನೇಮಿಸಲಾಗುತ್ತದೆ. ಬಳಿಕ ಕೇಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ನಂತರ ಚೀನಾದ ಉಪ ಅಧ್ಯಕ್ಷರಾಗಿ ಪದೋನ್ನತಿ ಹೊಂದುತ್ತಾರೆ.
ಯಾವುದೆ ಹಗರಣಗಳ ಸುಳಿಗೆ ಸಿಲುಕಿಕೊಳ್ಳದಿರುವುದು ಮತ್ತು ಅಜಾತ ಶತ್ರು ಎಂಬ ಇಮೇಜ್‌ಗಳು ಕ್ಷಿ ಜಿಂಪಿಂಗ್‌ರ ಯಶಸ್ಸಿನ ಹಾದಿಗೆ ಉರುಗೋಲಾಗಿದೆ. ಆದರೆ ೨೦೦೮ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ ಅಭೂತಪೂರ್ವ ಯಶಸ್ಸು ಕ್ಷಿ ಜಿಂಪಿಂಗ್‌ರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಅವರು ಈ ಕ್ರೀಡಾಕೂಟದ ಉಸ್ತುವಾರಿ ವಹಿಸಿಕೊಂಡಿದ್ದರು.
ಆದರೆ ಕ್ಷಿ ಜಿಂಪಿಂಗ್‌ರ ಸವಾಲಿನ ದಿನಗಳು ಇನ್ನಷ್ಟೆ ಶುರುವಾಗಲಿದೆ. ಏಕೆಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಪ್ರಗತಿ ಪಥದಲ್ಲಿ ಶರವೇಗದಲ್ಲಿ ದೌಡಾಯಿಸುತ್ತಿದ್ದ ಚೀನಾ ಕಳೆದೊಂದು ವರ್ಷದಿಂದ ಬಸವಳಿದಿದೆ. ಇಂತಹ ಸಂಕ್ರಾಂತಿ ಸಮಯದಲ್ಲಿ ಚೀನಾದ ಹೊಣೆ ಹೊರುವ ಜವಾಬ್ದಾರಿ ಜಿಂಪಿಂಗ್‌ರದ್ದು. ಚೀನಾದ ಅಭಿವೃದ್ಧಿಯ ವ್ಯಾಖ್ಯೆಗೆ ಹೊಸ ಭಾಷ್ಯ ಬರೆಯುವುದೇ ಅಥವಾ ಚೀನಾಕ್ಕೆ ಹೊಸ ಅಭಿವೃದ್ಧಿ ಮಂತ್ರವನ್ನು ನೀಡಬೇಕೆ ಎಂಬ ಸಂದಿಗ್ಧತೆಯನ್ನು ಹೊತ್ತುಕೊಂಡೆ ಅವರು ಪಟ್ಟವೇರುತ್ತಿದ್ದಾರೆ.
ವಿಶ್ವದ ಅತ್ಯಂತ ದೊಡ್ಡ ಕಮ್ಯುನಿಷ್ಟ್ ರಾಷ್ಟ್ರ ಚೀನಾ. ಇಲ್ಲಿ ಏಕಪಕ್ಷೀಯ ಆಡಳಿತ ವ್ಯವಸ್ಥೆ ಇರುವುದರಿಂದ ಪ್ರತಿಪಕ್ಷಗಳ ಕಾಟ ಇಲ್ಲ. ಅಲ್ಲಿ ಒಮ್ಮೆ ಬಂದ ಅಧಿಕಾರ ಕಳೆದುಕೊಳ್ಳಬೇಕಾದರೆ ಸ್ವಯಂಕೃತ ಅಪರಾಧ ಅಥವಾ ಅಂತರಿಕ ಕಚ್ಚಾಟಗಳೇ ಕಾರಣವಾಗಬೇಕು. ಹೊಸ ಪೀಳಿಗೆಯ ಕಮ್ಯುನಿಷ್ಟ್ ನಾಯಕರಲ್ಲಿ ಹುಟ್ಟಿಕೊಂಡಿರುವ ಅಧಿಕಾರ ಮೋಹ ಕ್ಷಿ ಜಿಂಪಿಂಗ್‌ರಿಗೆ ಕಿರಿಕಿರಿ ತರುವ ಸಾಧ್ಯತೆ ಇದೆ. ಕ್ಷಿ ಜಿಂಪಿಂಗ್ ಸದ್ಯ ಕ್ಲೀನ್ ಇಮೇಜ್ ಹೊಂದಿರುವುದು ನಿಜ. ಆದರೆ ಅವರ ಕುಟುಂಬ ಸದಸ್ಯರು ಅನೇಕ ಪ್ರಸಿದ್ಧ ಉದ್ಯಮಿಗಳ ಮತ್ತು ಉದ್ದಿಮೆಗಳ ಜೊತೆ ಸಂಪರ್ಕ ಹೊಂದಿರುವುದು ಈಗಾಗಲೇ ಅನೇಕರ ಕಣ್ಣು ಕೆಂಪಾಗಿಸಿದೆ.
ಸದ್ಯ ಚೀನಾದ ಮುಂದಿರುವ ಅತ್ಯಂತ ದೊಡ್ಡ ಸವಾಲೆಂದರೆ ಅಸಮಾನತೆ. ಒಂದು ಕಡೆ ಕೋಟಿ ಕೋಟಿ ಕೊಪ್ಪರಿಗೆ ಮೇಲೆ ಉಂಡಾಡುವ ಕೋಟ್ಯಾಧೀಶರಿದ್ದರೆ ಮತ್ತೊಂದು ಕಡೆ ತುತ್ತು ಅನ್ನಕ್ಕಾಗಿ ಪರದಾಡುವ ಗತಿ ಹೀನರು, ನಿರ್ಗತಿಕರು. ಈ ಸಮಸ್ಯೆ ವಿಶ್ವದಾದ್ಯಂತ ಇದ್ದರು ಕೂಡ ಚೀನಾದಲ್ಲಿ ಮಾತ್ರ ಮಿತಿ ಮೀರಿದೆ. ವಿಶ್ವದ ಅತ್ಯಂತ ದೊಡ್ಡ ರಫ್ತುದಾರ, ವಾರ್ಷಿಕ ೯.೩೧ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಚೀನಾದಲ್ಲಿ ಸುಮಾರು ೨ ಕೋಟಿಯಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಇಷ್ಟೆ ಅಲ್ಲದೆ ನಗರ ಮತ್ತು ಹಳ್ಳಿಗಳ ಜನರ ನಡುವಿನ ತಲಾ ಅದಾಯ ಪ್ರಮಾಣದಲ್ಲಿ ಭಾರಿ ಅಂತರ ಸೃಷ್ಟಿಯಾಗಿದೆ.
ಭಾರತದಂತೆ ಚೀನಾದಲ್ಲಿಯೂ ಈಗ ಭ್ರಷ್ಟಾಚಾರ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು ನಡೆಸಿದ ಭ್ರಷ್ಟ ಚಟುವಟಿಕೆಗಳು ಒಂದೊಂದಾಗಿ ಹೊರ ಬರುತ್ತಿರುವಂತೆ ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಳೆದ ವಾರವಷ್ಟೆ ಚೀನಾದ ಅಧಿಕಾರಿಯೊಬ್ಬ ಇಡೀ ಚೀನಾದ ಇತಿಹಾಸದಲ್ಲೆ ಮೊತ್ತ ಮೊದಲ ಬಾರಿಗೆ ತನ್ನ ಆಸ್ತಿ ವಿವರವನ್ನು ಅಂತರ್ಜಾಲದಲ್ಲಿ ಸ್ವಘೋಷಿಸಿಕೊಂಡು ಉಳಿದವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾನೆ. ಆತನ ಮಾದರಿಯ ಅನುಕರಣೆಯಾಗಬೇಕು ಎಂದು ಪ್ರತಿಭಟನೆಗಳ ಕಿಡಿ ಹುಟ್ಟಿಕೊಂಡಿದೆ. ಪಕ್ಷ ಮತ್ತು ಸರ್ಕಾರದ ಅಧಿಕಾರಿಗಳ ಆಸ್ತಿ, ಆದಾಯ ವಿವರವನ್ನು ಬಹಿರಂಗ ಪಡಿಸುವ ಕಾಯ್ದೆಯೊಂದು ೧೯೯೪ರಿಂದಲೂ ಚೀನಾದಲ್ಲಿ ಧೂಳು ತಿನ್ನುತ್ತಿದೆ. ಈ ಕಾಯ್ದೆ ಬೆಳಕು ಕಾಣವುದೇ ಅನ್ನುವ ಪ್ರಶ್ನೆ ಕ್ಷಿ ಜಿಂಪಿಂಗ್‌ರ ಅಧಿಕಾರರೋಹಣ ದೊಂದಿಗೆ ಮತ್ತೆ ತಲೆ ಎತ್ತಿದೆ.
ಕಳೆದ ಕೆಲ ವರ್ಷಗಳಲ್ಲಿ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಸಾಲು ಸಾಲಾಗಿ ಹೊರ ಬರುತ್ತಿವೆ. ಹಿರಿಯ ಕಮ್ಯುನಿಷ್ಟ್ ನಾಯಕ ಬೋ ಕ್ಷಿಲಾಯಿ ಲಂಚ ಸ್ವೀಕರಿಸುತ್ತಿರುವುದನ್ನು ಅಮೆರಿಕದ ನ್ಯೂಯಾರ್ಕ್ ಅಫ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಆದೇ ರೀತಿ ಚೀನಾದ ಪ್ರಧಾನಿ ವೆನ್ ಜಿಬಾಬೊ ಅವರ ಕುಟುಂಬ ಅಪಾರ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವುದು ಕೂಡ ಇದೀಗ ಬಯಲಾಗಿರುವ ಸತ್ಯ. ಅದ್ದರಿಂದ ಚೀನಾದ ಜನರು ತಮ್ಮ ಆಡಳಿತ ವ್ಯವಸ್ಥೆ ಬಗ್ಗೆ ಭ್ರಮನಿರಶನ ಹೊಂದಿದ್ದಾರೆ. ಈ ಹುಳುಕುಗಳನ್ನು ಮರೆಮಾಡಿ ಚೀನಿಯರಿಗೆ ’ಹೊಸ ಬೆಳಕು’ ತೋರಿಸುವ ಹೊಣೆಯನ್ನು ಕ್ಷಿ ಜಿಂಪಿಂಗ್ ಹೊರಬೇಕಾಗಿದೆ.
ಚೀನಾ ಅಕಾಡೆಮಿ ಅಫ್ ಸೋಷಿಯಲ್ ಸೈನ್ಸ್‌ನ ಒಂದು ವರದಿ ಪ್ರಕಾರ ೨೦೧೦ರಲ್ಲಿ ಚೀನಾದದ್ಯಂತ ೧,೮೦,೦೦ ಭ್ರಷ್ಟಾಚಾರ ವಿರೋಧಿ ಹೋರಾಟಗಳು ನಡೆದಿದ್ದವಂತೆ. ಈ ಕಾರಣಕ್ಕಾಗಿಯೇ ನಿಕಟಪೂರ್ವ ಅಧ್ಯಕ್ಷ ಹೂ ಜಿಂಟಾವೋ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಚೀನಾದ ಅಳಿವು ಉಳಿವಿನ ಪ್ರಶ್ನೆ ಅಡಗಿದೆ ಎಂದು ಹೇಳುತ್ತಲೇ ಇದ್ದಾರೆ. ’ಭಾರತೀಯ ಮಾದರಿ ಭ್ರಷ್ಟಾಚಾರ’ (ರಾಜಕಾರಣಿಗಳ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗುವುದು) ಚೀನಾದಲ್ಲಿ ಮುಗಿಲಿಗಿಂತಲು ಮಿಗಿಲಾಗಿ ಬೆಳೆದಿದೆ.
ಅವೈಜ್ಞಾನಿಕ ರೀತಿಯಲ್ಲಿ ಸರ್ಕಾರ ಜನರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದರಿಂದ ಜನರು ಸರ್ಕಾರದ ವಿರುದ್ಧ ಕ್ರುದ್ಧರಾಗಿದ್ದಾರೆ. ಇದು ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ. ಪ್ರತಿವರ್ಷ ಸುಮಾರು ೪೦ ಲಕ್ಷ ಜನ ತಮ್ಮ ಕೃಷಿ ಭೂಮಿಯನ್ನು ಕಾರ್ಖಾನೆ, ರಿಯಲ್ ಎಸ್ಟೇಟ್ ಮುಂತಾದ ಚಟುವಟಿಕೆಗಳಿಗೆ ಕಳೆದುಕೊಳ್ಳುತ್ತಿದ್ದಾರೆ. ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲೇ ಬೇಕಾದ ಜವಾಬ್ದಾರಿ ಜಿಂಪಿಂಗ್‌ರದ್ದು.
ಈ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಿ ಹೊರ ಜಗತ್ತಿನ ಮುಂದೆ ರಹಸ್ಯ ಕಾಪಾಡುವ ಹಾದಿ ಬಹು ಸುಲಭವಿತ್ತು. ಆದರೆ ಇದೀಗ ಸಾಮಾಜಿಕ ತಾಣಗಳ ಕ್ರಾಂತಿಯಿಂದಾಗಿ ಪ್ರತಿಯೊಂದು ಸಂಗತಿಯೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ಹೊರ ಜಗತ್ತಿಗೆ ಗೊತ್ತಾಗುತ್ತಿದೆ. ಚೀನಾ ತನ್ನ ನೋವು ತನಗಿರಲಿ, ಅದು ಬಹಿರಂಗಗೊಳ್ಳದಿರಲಿ ಎಂದು ಅಸಂಖ್ಯಾತ ವೆಬ್ ತಾಣಗಳಿಗೆ ನಿರ್ಬಂಧ ಹಾಕಿದೆ, ತನ್ನದೇ ಶೋಧನಾ ಇಂಜಿನ್ ಸ್ಥಾಪಿಸಿದೆ. ಆದರೆ ಚೀನಾದಲ್ಲಿನ ಹೊಸ ಪ್ರತಿಭಟನೆಗಳು ಅಂತರ್ಜಾಲದ ನೆರವಿನಿಂದಲೆ ಚಿಗಿತುಕೊಳ್ಳುತ್ತಿರುವುದು ಗಮನಿಸತಕ್ಕ ಅಂಶ. ಅದ್ದರಿಂದ ಕ್ಷಿ ಜಿಂಪಿಂಗ್ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ತೆಗೆದುಕೊಳ್ಳುವ ನಿಲುವಿನ ಬಗ್ಗೆ ಇಡೀ ಜಗತ್ತೆ ಕಾತರಿಸುತ್ತಿದೆ.
ಕ್ಷಿ ಜಿಂಪಿಂಗ್ ಉದ್ಯಮ ಕೇಂದ್ರಿತ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಅಮೆರಿಕದ ಪಾರುಪತ್ಯವನ್ನು ಮುರಿಯವ ದಿಕ್ಕಿನಲ್ಲಿ ಅವರು ಸಾಗಬಹುದು, ಆದರೆ ಅಮೆರಿಕದ ಜೊತೆ ತಿಕ್ಕಾಟ ನಡೆಸುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತ ನೆರೆಯ ಭಾರತದ ಜೊತೆಗೂ ಸ್ನೇಹ ಸಂಬಂಧವನ್ನು ಕಾದು ಕೊಂಡು ಹೋಗಲು ಅವರು ಉತ್ಸುಕರಾಗಿದ್ದಾರೆ. ಭಾರತ ಮತ್ತು ಚೀನಾದ ಮಧ್ಯೆ ಇರುವ ಗಡಿ ವಿವಾದ ಮತ್ತು ವ್ಯಾಪಾರ ವಹಿವಾಟಿನ ಪ್ರಮಾಣದಲ್ಲಿರುವ ಅಗಾಧ ಅಂತರ ಉಭಯ ದೇಶಗಳ ತಕ್ಷಣದ ಕಾಳಜಿಯ ವಿಷಯಗಳು.
ಅಸಮತೋಲಿತ, ಅಸಂಘಟಿತ ಅಭಿವೃದ್ಧಿಯ ಸವಾಲನ್ನು ನಿಭಾಯಿಸಿಕೊಂಡು ಕಳೆದ ೯ ತಿಂಗಳಿನಿಂದ ದಾಖಲಿಸಿರುವ ಶೇ ೭.೭ರ ಜಿಡಿಪಿ ಅಭಿವೃದ್ಧಿ ದರವನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆ ಜಿಂಪಿಂಗ್‌ಗಿದೆ.
ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸವಾಲಿನ ಪರ್ವತವನ್ನು ಜಿಂಪಿಂಗ್ ಯಾವ ರೀತಿ ’ಜಂಪ್’ ಮಾಡುತ್ತಾರೆ ಎಂಬ ಕುತೂಹಲ ಚೀನಾಕ್ಕೆ ಮಾತ್ರ ಸೀಮಿತವಾದುದಲ್ಲ. ಜಿಂಪಿಂಗ್ ತನ್ನ ಕೈಂಕರ್ಯದಲ್ಲಿ ಗೆದ್ದರೆ ಜಗತ್ತಿನ ಬಹುದೊಡ್ಡ ರಾಷ್ಟವೊಂದರಲ್ಲಿ ಕಮ್ಯುನಿಸಂ ಉಳಿಯಬಹುದು, ಒಂದು ವೇಳೆ ವಿಫಲರಾದರೆ ವಿಶ್ವ ಭೂಪಟದಲ್ಲಿ ಕಮ್ಯುನಿಸಂ ಕಳೆದೇ ಹೋಗಬಹುದೇನೋ...!?
ಕಾದು ನೋಡೋಣ, ಫಲಿತಾಂಶದ ಹಾದಿ ದೂರವಿಲ್ಲ.
No comments:
Post a Comment