(ಈ ಲೇಖನ ನಮ್ಮ ಪತ್ರಿಕೆ ’ದ ಸಂಡೆ ಇಂಡಿಯನ್’ನಲ್ಲಿ ಪ್ರಕಟಿತ)
ಅಕ್ರಮ ಗಣಿಗಾರಿಕೆ, ಬಿಡಿಎ ಹಗರಣ, ಕೆಐಎಡಿಬಿ ಹಗರಣ, ಪ್ರೇರಣಾ ಟ್ರಸ್ಟ್ ದೇಣಿಗೆ ವಿವಾದ, ಪ್ರವಾಹ ಪೀಡಿತರಿಗೆ ಸೂರು ನೀಡುವ ಆಸರೆ ಯೋಜನೆಯಲ್ಲಿನ ವಿಫಲತೆ, ಅಧಿಕಾರ ದುರುಪಯೋಗ, ಸಂವಿಧಾನ ಬಾಹಿರ ಚಟುವಟಿಕೆಗಳು, ಸ್ವಜನ ಪಕ್ಷಪಾತ, ಗುಂಪುಗಾರಿಕೆ... ಹೀಗೆ ಸಾಲು ಸಾಲು ಆರೋಪಗಳಿಗೆ ತುತ್ತಾದರೂ ಕೂಡ ಪದಚ್ಯುತಗೊಳ್ಳದ ದೇಶದ ಏಕೈಕ ಮತ್ತು ಪ್ರಪ್ರಥಮ ಮುಖ್ಯಮಂತ್ರಿ ಬಹುಶಃ ಯಡಿಯೂರಪ್ಪರೇ ಇರಬೇಕು.
ದಕ್ಷಿಣ ಭಾರತದಲ್ಲಿ ತನ್ನ ಅಧಿಕಾರದ ಖಾತೆಯನ್ನು ತೆರೆಯಬೇಕು ಎಂಬ ಬಿಜೆಪಿಯ ತುಡಿತವನ್ನು ಮೂರು ವರ್ಷಗಳ ಹಿಂದೆ ಸಾಕಾರಗೊಳಿಸಿದವರು ಯಡಿಯೂರಪ್ಪ. ಇದಕ್ಕಾಗಿ ಅವರು ಸುಮಾರು ೩ ದಶಕಗಳಿಗೂ ಹೆಚ್ಚಿನ ಕಾಲ ಅವಿರತವಾಗಿ ದುಡಿದಿದ್ದಾರೆ, ಹೋರಾಡಿದ್ದಾರೆ ಆ ಮೂಲಕ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಪೊರೆದಿದ್ದಾರೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯದಲ್ಲೂ ಬಿಜೆಪಿಗೆ ಇಂತಹ ಒಬ್ಬ ಕಾರ್ಯಕರ್ತ ಸಿಗಲಿಲ್ಲ. ಅದ್ದರಿಂದ ದಕ್ಷಿಣದ ದೊಡ್ಡ ರಾಜ್ಯಗಳಾದ ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ನೆಲೆ, ಬೆಲೆ ಎರಡೂ ಇಲ್ಲ. ಆದರೆ ತಮ್ಮಿಂದಲೇ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ, ತಾನಿಲ್ಲದೆ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬ ಯಡಿಯೂರಪ್ಪರ ಭ್ರಮೆಗೆ ಸಿಲುಕಿ ರಾಜ್ಯದ ಬಿಜೆಪಿ ಮತ್ತದರ ಸಿದ್ಧಾಂತ ಚಿಂದಿ ಚಿತ್ರಾನ್ನವಾಗಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಎಂಬುದು ತಿರುಕನ ಕನಸಿನಂತಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇನ್ನೆರಡು ತಿಂಗಳಿ(ಮೇ ೨೮)ಗೆ ಮೂರು ವರ್ಷ ತುಂಬಲಿದೆ. ಆದರೆ ಈ ಮೂರು ವರ್ಷಗಳಲ್ಲಿ ಯಡಿಯೂರಪ್ಪ ಮಾಡಿದ ಸಾಧನೆ ಎಂದರೆ ಮಾತಿಗೊಂದರಂತೆ ಈಡೇರಿಸಲಾಗದ ಭರವಸೆ ನೀಡಿ, ಹೆಜ್ಜೆಗೊಂದರಂತೆ ಹಗರಣಗಳಲ್ಲಿ ಭಾಗಿಯಾಗಿ, ದಿನ ಬೆಳಗಾಗುತ್ತಲೇ ಸ್ವಪಕ್ಷೀಯರ ಜೊತೆ ಗುದ್ದಾಡಿ ಇನ್ನೂ ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಉಳಿಸಿಕೊಂಡಿರುವುದು ಮಾತ್ರ.
ಯಡಿಯೂರಪ್ಪ ಜೆಡಿಎಸ್ ಬೆಂಬಲದೊಂದಿಗೆ ಮೊತ್ತ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು ನವೆಂಬರ್ ೨೦೦೭ರಲ್ಲಿ. ಅಂದು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ಪರಮೋಚ್ಛ ನಾಯಕ ಎಲ್ ಕೆ ಅಡ್ವಾಣಿ ಅವರು, "ಈ ದಿನ ಅತಿ ಸಂತಸದ ದಿನ. ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ಆರಂಭವಾಗಿದೆ. ಇನ್ನೆಲ್ಲ ಶುಭವಾಗಲಿದೆ" ಎಂದಿದ್ದರು. ಆದರೆ ಇಂದು ಅಡ್ವಾಣಿಯವರೇ ಮುಖ ಕೊಟ್ಟು ಮಾತನಾಡಲಾಗದಷ್ಟು ಹೇಸಿಗೆಯನ್ನು ತಮ್ಮ ಪಕ್ಷದ ಮುಖಕ್ಕೆ ಯಡಿಯೂರಪ್ಪ ಬಳಿದಿದ್ದಾರೆ. ಇಂದಿಗೂ ಕೇಂದ್ರ ಸರ್ಕಾರದ ಅನಾಚಾರಗಳ ವಿರುದ್ಧ ಸಮರ ಸಾರಿರುವ ಬಿಜೆಪಿಗೆ ಯಡಿಯೂರಪ್ಪರ ಅಕ್ರಮಗಳೇ ಬಗಲ ಮುಳ್ಳಾಗಿದೆ. ಶುಭ ನುಡಿಯಲಿದೆ ಎಂದು ಬಿಜೆಪಿ ವರಿಷ್ಠರು ಮತ್ತು ರಾಜ್ಯದ ಜನತೆ ಭಾವಿಸಿದ್ದ ಹಕ್ಕಿ ಇಂದು ಒಂದರ ಮೇಲೊಂದರಂತೆ ಅಪಶಕುನದ ಸುದ್ದಿಗಳನ್ನೇ ನೀಡುತ್ತಿದೆ.
ಮಾರ್ಚ್‌ನ ಆರಂಭದಿಂದಲೇ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು (ವಾಸ್ತವವಾಗಿ ಬಿಜೆಪಿ ಗದ್ದುಗೆಗೆ ಬಂದಂದಿನಿಂದಲೇ ಈ ಚಟುವಟಿಕೆಗಳು ನಡೆಯುತ್ತಿವೆ). ಯಡಿಯೂರಪ್ಪ ನಮ್ಮ ನಾಯಕರು ಎಂದು ಹೇಳುತ್ತಲೇ ಪಕ್ಷದ ರಾಜ್ಯ ಅಧ್ಯಕ್ಷ ಕೆ ಎಸ್ ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ರೆಡ್ಡಿ ಸೋದರರು, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಸಿ ಟಿ ರವಿ ಮುಂತಾದ ಘಟಾನುಘಟಿಗಳು ಅವರನ್ನು ಖೆಡ್ಡಾಕ್ಕೆ ಹಾಕಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳು ಶಾಸಕ, ಸಚಿವರನ್ನು ಅತ್ಯಂತ ಕೀಳಾಗಿ ಕಂಡ ಅನೇಕ ಘಟನೆಗಳ ಜೊತೆಗೆ, ಅವರ ದರ್ಪ, ಸ್ವಜನ ಪಕ್ಷಪಾತ, ಭ್ರಷ್ಟತೆಗಳೆಲ್ಲ ಈ ಬಂಡುಕೋರ ಚಟುವಟಿಕೆಗೆ ಇಂಧನವಾಯಿತು. ಬಿಜೆಪಿಯ ಅನೇಕ ನಿಷ್ಠಾವಂತರೇ ಹೇಳುವ ಪ್ರಕಾರ ಈ ಬಂಡುಕೋರ ಚಟುವಟಿಕೆಗಳಲ್ಲಿ ಯಾವುದೇ ತಪ್ಪಿಲ್ಲವಂತೆ ಏಕೆಂದರೆ ಪಕ್ಷದಲ್ಲಿ ಕುದಿ ಜ್ವಾಲಾಮುಖಿ ಹುಟ್ಟಲು ಯಡಿಯೂರಪ್ಪರೇ ಕಾರಣವಂತೆ.
ರಾಜ್ಯದ ಲಿಂಗಾಯತ ಸಮುದಾಯಕ್ಕೆ ತಾನೊಬ್ಬನೆ ರಾಜಕೀಯ ನಾಯಕನಾಗಬೇಕು ಎಂಬ ಅವರ ಧೋರಣೆ ಮತ್ತದಕ್ಕಾಗಿ ಅವರು ಹೆಣೆದ ಯೋಜನೆಗಳು ಇಂದು ಅವರನ್ನು ಒಂಚೂರು ರಕ್ಷಿಸುತ್ತಿದೆ. ಅವರ ಈ ಸಂಚು ೧೯೯೯ರ ಹೊತ್ತಿಗೆ ಅಂದರೆ ದಶಕಗಳ ಹಿಂದೆಯೇ ಜನ್ಮತಾಳಿತ್ತು. ಅವರ ನಾಯಕನಾಗುವ ದಾಹಕ್ಕೆ ಮೊದಲ ಬಲಿ ಬಿ ಬಿ ಶಿವಪ್ಪರಾದರೆ ಅದರ ಫಲಾನುಭವಿಯಾಗಿದ್ದು ಈಗ ಯಡಿಯೂರಪ್ಪರ ವಿರುದ್ಧ ತೊಡೆ ತಟ್ಟಿ ನಿಂತಿರುವ ಜಗದೀಶ್ ಶೆಟ್ಟರ್! ಆದರೆ ಶೆಟ್ಟರ್ ಯಡಿಯೂರಪ್ಪರಿಗೆ ಸುಲಭ ತುತ್ತಾಗಲಾರರು. ಏಕೆಂದರೆ ಈ ಹಿಂದೆ ಯಡಿಯೂರಪ್ಪರ ಒಳನಡೆಗಳಿಗೆ ಅನಂತ್ ಕುಮಾರ್‌ರ ಆಶಿರ್ವಾದವಿದ್ದರೇ ಈಗ ಯಡಿಯೂರಪ್ಪರ ಹೆಡೆಮುರಿ ಕಟ್ಟಲು ಅನಂತ್ ಕುಮಾರ್‌ಗೆ ಶೆಟ್ಟರೇ ಅಸ್ತ್ರ. ಇದರ ಜೊತೆಗೆ ಈ ಹಿಂದೆ ಯಡಿಯೂರಪ್ಪರಿಗೆ ಪಕ್ಷದೊಳಗೆ ಒಂದು ರೀತಿಯ ಗೌರವ, ಅಭಿಮಾನಗಳಿದ್ದವು ಅವರು ಏನು ಮಾಡಿದರೂ ಪಕ್ಷದೊಳಿತಿಗಾಗಿ ಮಾಡುತ್ತಾರೆ ಎಂಬ ಭಾವನೆ ಇರುತ್ತಿತ್ತು. ಆದರೆ ಈಗ ಎಲ್ಲರಿಗೆ ಯಡ್ಡಿಯ ನಿಜ ಬಣ್ಣ ಗೊತ್ತಾಗಿದೆ. ಹಾಗೆಯೇ ಯಡ್ಡಿಗೂ ಹುಟ್ಟು ಬಿಜೆಪಿಗರ ಮೇಲೆ ನಂಬಿಕೆಯಿಲ್ಲ ಅದಕ್ಕಾಗಿಯೇ ಅವರು ತಮ್ಮ ಆಪ್ತ ವಲಯದಲ್ಲಿ ವಲಸಿಗರನ್ನೇ ತುಂಬಿಸಿಕೊಂಡಿದ್ದಾರೆ.
ಇದೀಗ ಬಂಡಾಯ ಚಟುವಟಿಕೆಗಳು ರಾಜ್ಯ ಬಿಜೆಪಿ ಪಾಲಿಗೆ ನಿತ್ಯ ಪ್ರಾರ್ಥನೆಯಾಗಿದೆ. ಆದರೆ ಈ ಬಾರಿಯ ಬಂಡಾಯ ಚಟುವಟಿಕೆಗಳು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದಕ್ಕೆ ಕಾರಣ ಯಡಿಯೂರಪ್ಪರ ಒಂದ ಕಾಲತ್ತಿಲ್’ನ ಆಪ್ತ ಸ್ನೇಹಿತ, ಕೇಂದ್ರದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಅನಂತ್ ಕುಮಾರ್ ಮತ್ತು ಈಶ್ವರಪ್ಪ ಸ್ವತಃ ಈ ಬಂಡುಕೋರ ಚಟುವಟಿಕೆಯ ಮೂಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಎಂದಿನಂತೆ ರೆಡ್ಡಿ ಸೋದರರು ಇದಕ್ಕೆ ಕೋರಸ್’ ಹಾಡಿದ್ದರು. ಆದರೂ ಈ ಬಂಡಾಯ ಯಶಸ್ವಿ ಸ್ವಾತಂತ್ರ್ಯ ಹೋರಾಟವಾಗದೆ ಮತ್ತೊಂದು ಬಂಡಾಯ ಚಟುವಟಿಕೆಯಾಗಿ ಕಾಲಗರ್ಭ ಸೇರಿದೆ. ಇದಕ್ಕೆ ಪ್ರಮುಖ ಕಾರಣ ಬಂಡಾಯ ಹುಟ್ಟಿಕೊಂಡ ಮೂಹೂರ್ತ!
ಏಪ್ರಿಲ್ ೯ ರಂದು ಜಗಳೂರು, ಬಂಗಾರಪೇಟೆ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಬುದ್ಧಿವಂತರು ಯಾರೂ ಕೂಡ ನಾಯಕತ್ವ ಬದಲಾಯಿಸಬೇಕು ಎಂದು ಒತ್ತಾಯಿಸುವುದಿಲ್ಲ. ಒತ್ತಾಯಿಸಿದರೂ ಕೂಡ ಅದಕ್ಕೆ ಪ್ರಬಲವಾದ ಕಾರಣವನ್ನೇ ಕೊಡಬೇಕಾಗುತ್ತದೆ. ಈಗ ಯಡಿಯೂರಪ್ಪರನ್ನು ಕೆಳಗಿಳಿಸಲು ಗಟ್ಟಿಯಾದ ಕಾರಣಗಳಿವೆ, ಆದರೆ ಬಿಜೆಪಿಯ ನಾಯಕರಿಗೆ ಇದು ಇನ್ನೂ ಗಟ್ಟಿ ಕಾರಣಗಳು ಎಂದೆನಿಸಿಲ್ಲ! ಆದ್ದರಿಂದ ಇನ್ನೂ ಗಟ್ಟಿ ಕಾರಣಗಳನ್ನು ಕಳೆ ಹಾಕಿ ಅದನ್ನು ವರಿಷ್ಠರಿಗೆ ಅರ್ಥ ಮಾಡಿಸಿಕೊಡಲು ಈ ನಾಯಕರು ಇನ್ನೂ ಹೆಚ್ಚಿನ ಹೋಮ್‌ವರ್ಕ್ ಮಾಡುವುದು ಅಗತ್ಯವಾಗಿತ್ತು. ಅದರ ಜೊತೆ ಜೊತೆಗೆ ಈಶ್ವರಪ್ಪರ ಮೇಲೂ ಭ್ರಷ್ಟಾಚಾರದ ಆರೋಪವಿದೆ, ಅನಂತ್ ಕುಮಾರ್ ಬಿಜೆಪಿಯ ರಾಷ್ಟ್ರ ನಾಯಕರಾಗಿದ್ದರು ಕೂಡ ಅವರು ಸುಷ್ಮಾ ಸ್ವರಾಜ್ ಬಣದವರು. ರೆಡ್ಡಿಗಳು ಕೂಡ ಅಷ್ಟೆ. ಅದ್ದರಿಂದ ಈ ನಾಯಕರು ಯಡಿಯೂರಪ್ಪರ ವಿರುದ್ಧ ಅದೆಷ್ಟು ದೂರು ಕೊಂಡು ಹೋದರು ಕೂಡ ಅದರಲ್ಲಿ ಕೇಂದ್ರ ನಾಯಕರು ಇವರ ಸ್ವಾರ್ಥ ಹುಡುಕಿ ಅಲ್ಲಿಂದಲ್ಲಿಗೆ ತೇಪೆ ಹಾಕಿ ಯಡಿಯೂರಪ್ಪ ಉಘೇ ಉಘೇ ಎನ್ನುತ್ತಾರೆಯೇ ಹೊರತು ಇವರ ಮಾತಿಗೆ ಕವಡೆ ಕಿಮ್ಮತನ್ನು ಕೂಡ ನೀಡುವುದಿಲ್ಲ. ಕಳೆದ ನವೆಂಬರ್‌ನಲ್ಲಿ ಕೂಡ ಆಗಿದ್ದು ಇದೇ ತಾನೆ.
ಈ ಬಂಡಾಯದ ಮೂಲಕ ಯಡಿಯೂರಪ್ಪರಿಗೆ ಪಾಠ ಕಲಿಸುವ ಮತ್ತೊಂದು ಸುವರ್ಣಾವಕಾಶವನ್ನು ಕೂಡ ಈ ನಾಯಕರು ಕಳೆದುಕೊಂಡಿದ್ದಾರೆ. ಅದೇನೆಂದರೆ ಈ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಆ ಮೂಲಕ ರಾಜ್ಯದ ಜನತೆ ಯಡಿಯೂರಪ್ಪರ ವಿರುದ್ಧ ಇದ್ದಾರೆ ಎಂಬುದನ್ನು ಪಕ್ಷದ ಹಿರಿತಲೆಗಳಿಗೆ ತೋರಿಸಿ ಕೊಡಬಹುದಾಗಿದ್ದ ಅವಕಾಶವದು. ಆ ಸಾಧ್ಯತೆ ಈಗಲೂ ನಿಚ್ಛಳವಾಗಿಯೇ ಇದೆ. ಆದರೆ ಆ ರೀತಿಯಾದರೆ ಯಡಿಯೂರಪ್ಪ ಬಿಜೆಪಿಯ ಸೋಲಿಗೆ ಭಿನ್ನಮತೀಯರು ತೆರೆಮರೆಯಲ್ಲಿ ಡಬಲ್ ಗೇಮ್ ಆಡಿದ್ದೆ ಕಾರಣ ಎಂದು ಸಾರಿ ಬಂಡುಕೋರರಿಗೆ ಪಕ್ಷ ವಿರೋಧಿ ಪಟ್ಟ ಕೊಡುವುದು ಶತಃಸಿದ್ಧ. ಅಗ ಪುನಃ ಯಡಿಯೂರಪ್ಪರೇ ಕಿಂಗ್ ಆಗಲಿದ್ದಾರೆ. ಅದ್ದರಿಂದ ಈ ಉಪಚುನಾವಣೆ ಮುಗಿಯುವ ತನಕ ಸುಮ್ಮನಿದ್ದು ಫಲಿತಾಂಶ ನೋಡಿಕೊಂಡು ತಮ್ಮ ಚಟುವಟಿಕೆಗಳಿಗೆ ರೆಕ್ಕೆ ಮೂಡಿಸುತ್ತಿದ್ದರೆ ಈ ಬಂಡಾಯ ಯಶ ಕಾಣುವ ಸಾಧ್ಯತೆ ಹೆಚ್ಚಿತ್ತು.
ಇದರ ಜೊತೆ ಜೊತೆಗೆ ಬದಲಿ ಮುಖ್ಯಮಂತ್ರಿಯಾಗಿ ಯಾರನ್ನೂ ಬಿಂಬಿಸಬೇಕು ಎಂಬ ಗೊಂದಲ ಕೂಡ ಈ ಬಂಡುಕೋರರಲ್ಲಿದೆ. ಅದೇ ರೀತಿ ಯಡಿಯೂರಪ್ಪರನ್ನು ಕೆಳಗಿಳಿಸದ್ದೇ ಆದರೆ ಮುಂದೆ ಯಾರನ್ನೂ ಮುಖ್ಯಮಂತ್ರಿ ಮಾಡುವುದು ಎಂಬುದು ಹೈಕಮಾಂಡ್‌ಗೆ ತಲೆನೋವು ತಂದಿದೆ. ಏಕೆಂದರೆ ಪಕ್ಷ ಮಧ್ಯಂತರ ಚುನಾವಣೆ ಎದುರಿಸುವುದನ್ನು ಯಾವ ಕಾರಣಕ್ಕೂ ಬಯಸುತ್ತಿಲ್ಲ ಈ ಮಾತನ್ನು ಅನಂತ್ ಕುಮಾರ್ ಎರಡು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆಗ ಸಿಎಮ್ ಮಧ್ಯಾಂತರ ಚುನಾವಣೆಯ ಮಂತ್ರ ಮೊಳಗಿಸುತ್ತಿದ್ದರು! ಸರ್ಕಾರದ ಗುಪ್ತಚಾರ ಇಲಾಖೆ ನೀಡಿದ ವರದಿ ಪ್ರಕಾರ ಈಗ ಚುನಾವಣೆ ನಡೆದರೆ ಬಿಜೆಪಿ ಸುಮಾರು ಶೇ. ೨೦ರಷ್ಟು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿತ್ತು.
ಅದೇ ರೀತಿ ರಾಜ್ಯದಲ್ಲಿರುವ ಪ್ರತಿಪಕ್ಷಗಳಿಗೂ ಮಧ್ಯಂತರ ಚುನಾವಣೆ ನಡೆಯುವುದು ಬೇಡದ ಕೂಸೇ ಆಗಿದೆ.
ಆದರೆ ಮುಂದಿನ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಗೆದ್ದರೂ ಆ ಬಳಿಕ ಯಡಿಯೂರಪ್ಪರನ್ನು ಹಿಡಿಯುವುದು ಕಷ್ಟ ಎಂಬುದು ಈ ಭಿನ್ನಮತೀಯರಿಗೆ ಚೆನ್ನಾಗಿ ಗೊತ್ತಿದೆ. ಅದರ ಜೊತೆಗೆ ಸದ್ಯ ನ್ಯಾಯಾಲಯದ ಮುಂದೆಯಿರುವ ಶಾಸಕರ ಅನರ್ಹ ಪ್ರಕರಣದಲ್ಲಿ ಸರ್ಕಾರಕ್ಕೆ ಜಯ ಸಿಕ್ಕರೆ ಆಗ ತೆರವಾಗುವ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯಬೇಕಿದೆ. ಆದರೆ ಇಲ್ಲಿ ಸರ್ಕಾರಕ್ಕೆ ಸೋಲಾದರೆ ಮತ್ತೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಅದ್ದರಿಂದ ಭಿನ್ನಮತೀಯರು ತಮ್ಮ ಬಂಡಾಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಈ ಮೂರರಲ್ಲಿ ಒಂದು ಸ್ಥಾನ ಗೆಲ್ಲುವಂತೆ ನೋಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಈ ಚುನಾವಣೆ ಬಳಿಕ ಮತ್ತೊಂದು ಸುತ್ತಿನ ಬಂಡಾಯ ಚಟುವಟಿಕೆ ಗರಿ ಕೆದರಿಕೊಳ್ಳುವುದು ಕೂಡ ನಿಶ್ಚಿತ. ಸಿಎಮ್ ತಮ್ಮ ತಪ್ಪುಗಳಿಂದ ಇನ್ನೂ ಪಾಠ ಕಲಿತಿಲ್ಲ, ಕಲಿಯುವ ಲಕ್ಷಣವು ಕಾಣುತ್ತಿಲ್ಲ. ಈಗ ಹಾಕಿರುವ ತೇಪೆ ತಾತ್ಕಲಿಕ.
ಅದ್ದರಿಂದ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ತನಕ ಬಿಜೆಪಿಯಲ್ಲಿ ಬಂಡುಕೋರರಿಗೂ ತುಂಬು ಕೆಲಸವಿರುತ್ತದೆ ಎನ್ನಲು ಯಾವುದೇ ಭಯವಿಲ್ಲ!
No comments:
Post a Comment