Saturday, April 23, 2011

ಹುಟ್ಟು ದಿನದ ಸ್ವಗತಗಳು

ಓ, ಆ ಒಂದು ವರ್ಷ ಕಳೆಯಿತೇ?
ನಾನಂದು ಹುಟ್ಟುಹಬ್ಬ ಆಚರಿಸಿದ್ದೆನೇ?
ನೆನಪಾಗುತ್ತಿಲ್ಲ, ಏಕೆಂದರೆ
ನಾ ಅದನ್ನು ಮರೆತೇ ಇಲ್ಲ
ಮರೆತರೆ ತಾನೇ ನೆನಪಾಗುವುದು!

ನಾ ಸಾವಿಗೆ ೩೬೫ ದಿನಗಳಷ್ಟು ಹತ್ತಿರವಾದೆನೇ?
ದೇವರೇ ಎಂತಹ ವೇದನೆ?
ನಾ ಮಾಡಿದ್ದು ಬರಿ ಶೂನ್ಯ ಸಾಧನೆ
ಇನ್ನು ಮಾಡಬೇಕಿದೆ
ಮಹಾ ಸಾಧನೆ, ಜಗಮಾನ್ಯ ಸಾಧನೆ
ಅದಕ್ಕಾಗಿ ಈ ದಿನವೇ, ಈ ಕ್ಷಣವೇ
ನನ್ನ ಈ ಪ್ರತಿಜ್ಞೆ ಮುಂದಿನ ಯುಗ ನಂದೆನೇ!

ಯುಗದೊಳ್ ಜಗ ಅರಳಿತೇ?
ಜಗದೊಳ್ ಯುಗ ಅರಳಿತೇ?
ನನಗದು ಬೇಕಾಗಿಲ್ಲ
ಮೊಗದಲ್ಲಿ ನಗೆ ಅರಳಿ
ನಗೆಯೇ ಮೊಗವಾಗಲು
ಬೇರೊಂದು ಸುಖ ಬೇಕಾಗಿಲ್ಲ.

ರಾಷ್ಟ್ರದ ತೇರೆಳೆಯಲು
ಉಸಿರ ನಾದಸುಧೆ ಹರಿಯಬಿಡಲೇ?
ತಾಯೇ ಭಾರತಿ ನಿನ್ ಹೆಸರ
ದಿಕ್‌ಪಟಗಳಲ್ಲಿ ಅನುರಣಿಸಲೇ?
ನಿನ್ನೊಂದು ಕರೆಗೆ ಕ್ಷಣಾರ್ಧದೊಳು
ಓ ಗೊಡುವೆ, ಶತ್ರುಗಳ ರುಂಡ ಚೆಂಡಾಡಲು
ಧುಮ್ಮಿಕ್ಕುತ್ತ ಓಡುವೇ...

ದೀಪ ಆರಿಸಲೇ? ಇಲ್ಲ, ಉರಿಸಲೇ?
ಉರಿಸೇ ಉರಿಸುವೆ ನಾ ದೀಪ
ಸುಟ್ಟುಹೋಗಬೇಕು ಅರೆಬೆಂದ
ತಿಂಡಿತೀರ್ಥ, ಕರಗಬೇಕು
ಒಳ್ಳೆಯದಕ್ಕಿರುವ ಕೆಟ್ಟದರ ಲೇಪ.

ಜ್ಞಾನದೀಪ, ಅರಿವದೀಪ,
ಪ್ರಾಯದೀಪ, ಪ್ರೇಮದೀಪ
ಉರಿಯುತ್ತಲೇ ಇರಬೇಕು
ಬೆಳಕ ಸೂಸುತ್ತಲೇ ಬಾಳಬೇಕು
ತಾ ಉರಿದು ನೊಂದರು ಜಗಕ್ಕೆ
ಜ್ಯೋತಿಯಾಗಬೇಕು.

ಗರಿಕೆ ಹುಲ್ಲ ಮೇಲಿನ ಇಬ್ಬನಿ
ಆ ನೇಸರನ ತಾಪದೊಳು ಮರಣಿ
ಹಾಗಾಗಬಾರದು ನನ್ನಯ ಬದುಕು
ಕೇಳು ನನ್ನಯ ರಾಣಿ,
ಆಗಬೇಕು ಅದು ಸಾವಿರ ವರುಷವಾದರೂ
ಜನಮಾನಸದಿ ರಿಂಗಣಿಸೊ
ಬಾಳ ಸರಣಿ
ಆ ನೀಳಬಾನದೊಳ್
ಸ್ವಚ್ಛಂದವಾಗಿ ಹಾರೋ ಅರಗಿಣಿ.

ಅನನ್ಯ ಪ್ರೀತಿಗಾಗಿ ಅದಮ್ಯ ಒಳತುಡಿತ
ಬಾಳ ಪರಿಶುಭ್ರತೆಗಾಗಿ ಪ್ರಬುದ್ಧ ನಡೆತ
ಆ ಕಾವ್ಯಕನ್ನಿಕೆಯ ಕೈಯೊಳ್ ಹಿಡಿದು
ಎದೆಯ ರಂಗಸ್ಥಳದಿ ನಡೆಸುವೇ ಕುಣಿತ
ಬದಲಾಯಿಸುವೇ ನಾ ಜಗದ
ವ್ಯವಹಾರ ಗಣಿತ!

No comments: