Wednesday, February 9, 2011

ಈಜಿಪ್ಟ್ ಮಾದರಿ ಕ್ರಾಂತಿ, ಭಾರತ ಸಜ್ಜಾಗಿದೆಯೇ?


ಕಳೆದ ಶತಮಾನದ ಆರಂಭ ಗುಲಾಮಿ ದೇಶಗಳಿಗೆ ವಸಾಹತು ಶಾಹಿಗಳಿಂದ ವಿಮೋಚನೆ ಪಡೆಯುವ ಪರ್ವಕಾಲವಾಗಿತ್ತು. ಆಗ ಗುಲಾಮಿ ದೇಶಗಳ ಜನಮಾನಸದಲ್ಲಿ ದೇಶದ ಅಸ್ಮಿತೆಯ ಬಗೆಗಿನ ತಿಳುವಳಿಕೆ, ಗೌರವ, ಪ್ರೀತಿ ಉಚ್ಚ್ರಾಯ ಸ್ಥಿತಿ ಮುಟ್ಟಿತ್ತು. ಅದೇ ರೀತಿ ಜನರು ಬಡತನ, ಕಷ್ಟಕಾರ್ಪಣ್ಯಗಳ ಸರೋವರದಲ್ಲಿ ಸ್ವಚ್ಚಂದವಾಗಿ ಈಜಾಡುತ್ತಿದ್ದರು!

ಹೆಚ್ಚು ಕಡಿಮೆ ಒಂದು ಶತಮಾನದ ಬಳಿಕ ಮತ್ತೇ ಹೋರಾಟದ ಪರ್ವ ಚಿಗುರೊಡೆಯುತ್ತಿದೆ. ನಮ್ಮ ಈಗಿನ ವರ್ತಮಾನ ಮುಂದೊಂದು ದಿನ ಇತಿಹಾಸ ಪುಟ ಸೇರುವಾಗ ಅಲ್ಲೂ ರೋಚಕ ಅಧ್ಯಾಯಗಳು ಅಚ್ಚಾಗುವ ಆಶಾಕಿರಣ ಗೋಚರಿಸುತ್ತಿದೆ. ಇದೆಲ್ಲದಕ್ಕೂ ಅತಿ ಪ್ರಾಚೀನ ನಾಗರಿಕತೆಯ ಮಡಿಲು ಈಜಿಪ್ಟ್ ಓನಾಮ ಹಾಕುತ್ತಿದೆ ಎಂದೆನಿಸುತ್ತಿದೆ.

ಇಂದು ಎಲ್ಲೆಲ್ಲೂ ಈಜಿಪ್ಟ್‌ನ ಕ್ರಾಂತಿಯದ್ದೆ ಚರ್ಚೆ. ಈಜಿಪ್ಟ್‌ನಲ್ಲಿನ ಜನರ ಹೋರಾಟ ಅನೇಕ ದೇಶಗಳ ಜನರಿಗೆ ಪ್ರೇರಣೆಯಾಗುವ ಸಾಧ್ಯತೆ ಇರುವುದು ಭ್ರಷ್ಟ, ಅನೈತಿಕ, ಸರ್ವಾಧಿಕಾರಿ ಮತ್ತು ಅಕ್ರಮ ಸರ್ಕಾರ ಅಥವಾ ಆಡಳಿತ ಶಕ್ತಿಗಳ ಬೆನ್ನೆಲುಬು ನಡುಗುವಂತೆ ಮಾಡಿದೆ.

ಹೌದು, ಜಗತ್ತಿನ ದುರುಳ ಆಡಳಿತ ವ್ಯವಸ್ಥೆಗಳಿಗೆ ಬಿಸಿ ಮುಟ್ಟಿಸಲು ಜಗತ್ತಿನ ಯಾವುದಾದರೂ ಒಂದು ಭಾಗದಲ್ಲಿ ಇಂತಹ ಕ್ರಾಂತಿ ಅತ್ಯಗತ್ಯವಾಗಿತ್ತು. ಆದರೆ ಈ ಹೋರಾಟ ೧೮ನೇ ಶತಮಾನದ ಉತ್ತಾರಾರ್ಧದಲ್ಲಿ ನಡೆದ ಮತ್ತು ಜಗತ್ತಿನ ಚಹರೆಯನ್ನು ಬದಲಾಯಿಸಿದ, ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಅಡಿಗಲ್ಲು ಹಾಕಿದ ಫ್ರಾನ್ಸ್ ಮತ್ತು ಅಮೆರಿಕ ಕ್ರಾಂತಿಯ ೨೧ನೇ ಶತಮಾನದ ಅಪರಾವತಾರ ವಾಗುತಗ್ತದೆಯಾ ಎಂಬ ಕುತೂಹಲ ಮೂಡುತ್ತಿದೆ.

ಹೌದು. ಇಂದು ಏಷ್ಯಾ, ಆಫ್ರಿಕಾ, ಲ್ಯಾಟೀನ್ ಅಮೆರಿಕದ ಹೆಚ್ಚಿನೆಲ್ಲ ದೇಶಗಳಲ್ಲಿ ಸಮಸ್ಯೆಗಳದ್ದೆ ಕಾರುಬಾರು. ಅಲ್ಲಿನ ಸಾಮಾನ್ಯ ಜನರ ಬದುಕು, ಕನಸು ಚಿಂದಿ ಚಿತ್ರಾನ್ನ. ಈ ರಾಷ್ಟ್ರಗಳಲ್ಲಿ ಹೆಚ್ಚಿನವು ಪ್ರಜಾಪ್ರಭುತ್ವ ಅಥವಾ ಸರ್ವಾಧಿಕಾರಿಗಳ ಆಡಳಿತ ವ್ಯವಸ್ಥೆ ಹೊಂದಿದೆ. ಪ್ರಜಾಪ್ರಭುತ್ವದ ಮಾದರಿ ಯೂರೋಪ್ ಹೊರತು ಪಡಿಸಿ ಬೇರೆಲ್ಲ ಕಡೆ ದಯನೀಯವಾಗಿ ಸೋತಿದೆ ಎಂದು ಹೇಳದೆ ವಿಧಿಯಿಲ್ಲ. ಇದು ಹೊಸ ಹೊಸ ಸರ್ವಾಧಿಕಾರಿಗಳ ಸೃಷ್ಟಿ ಮತ್ತು ಜನರ ಕೊನೆಗಾಣದ ಸಮಸ್ಯೆಗಳಿಗೆ ಹೇತುವಾಗಿದೆ. ಈಜಿಪ್ಟ್‌ನಲ್ಲಿ ಇದು ಅತಿರೇಕಕ್ಕೆ ಹೋಯಿತೋ, ಜನರ ಆಕ್ರೋಶ ವ್ಯವಸ್ಥಿತವಾಗಿ ಮತ್ತು ಗಟ್ಟಿಯಾಗಿ ಮೊಳಗಿತೋ ಅಥವಾ ಮಾಧ್ಯಮಗಳು ಅಲ್ಲಿನ ಜನರ ಹೋರಾಟಕ್ಕೆ ಅತಿರಂಜಿತ ಮತ್ತು ಹೆಚ್ಚಿನ ಪ್ರಚಾರ ನೀಡಿದವೋ ಎಂಬುದು ಸದ್ಯದ ಮಟ್ಟಿಗೆ ನನ್ನರಿವಿನ ತೆಕ್ಕೆಗೆಟುಕದ ಸಂಗತಿ. ಅದ್ದರಿಂದ ಈಜಿಪ್ಟ್‌ನಲ್ಲಿ ಏನಾಗಿದೆ, ಏನಾಗುತ್ತಿದೆ, ಏನಾಗಬಹುದು, ಏನಾದರೆ ಒಳ್ಳೆಯದು ಮುಂತಾದ ವಿಷಯಗಳ ಬಗ್ಗೆ ನಾನಿಲ್ಲಿ ಬರೆಯಲಾರೆ. ಆದರೆ ಈಜಿಪ್ಟ್‌ನ ಕ್ರಾಂತಿಯನ್ನು ಭಾರತಕ್ಕೂ ವಿಸ್ತರಿಸುವ ಬಗ್ಗೆ ಕೆಲ ಹೇಳಿಕೆಗಳು, ಪ್ರೇತ ಕರೆಗಳು ಕೇಳಿಸುತ್ತಿದೆ. ಆ ಬಗ್ಗೆ ನನ್ನ ಈ ಲೇಖನವನ್ನು ಕೇಂದ್ರಿಕರಿಸುತ್ತಿದ್ದೇನೆ.

ಯಾವುದೇ ಕ್ರಾಂತಿಗೆ ಬೇಕಾದ ಮನಸ್ಥಿತಿ ಜನರಲ್ಲಿ ರಾತ್ರಿ ಹಗಲಾಗುವುದರೊಂದಿಗೆ ಕಾಣಿಸಿಕೊಳ್ಳುವುದಿಲ್ಲ. ಅದು ನಿಧಾನವಾಗಿ ಹಬ್ಬಿಕೊಂಡು, ಗಟ್ಟಿಯಾಗುವ ಲಾವಾರಸ. ಅದು ಒಂದು ಹಂತದವರೆಗೆ ಶಾಂತವಾಗಿಯೇ ಇರುತ್ತದೆ. ಆಗೊಮ್ಮೆ, ಈಗೊಮ್ಮೆ ಅದು ಅಲ್ಲಲ್ಲಿ ಚಿಕ್ಕ ಪುಟ್ಟ ಕಿಡಿಯಾಗಿ ಚಿಮ್ಮುತ್ತಿರುತ್ತದೆಯೇ ಹೊರತು ಒಮ್ಮೆಲ್ಲೆ ಭುಗಿಲೇಳುವುದಿಲ್ಲ. ತಣ್ಣನೆ ಹರಡುವ ಕ್ರಾಂತಿಯ ಪಸೆ ಒಂದು ಹಂತದಲ್ಲಿ ತನಗೆ ಬೇಕಾದ ನಾಯಕ, ಸ್ಪಷ್ಟ ಗುರಿ, ಸೈದ್ಧಾಂತಿಕ ನೆಲೆಗಟ್ಟನ್ನು ಪಡೆದುಕೊಂಡು ಶಕ್ತಿಶಾಲಿಯಾಗಿ ರೂಪುಗೊಂಡು ಸಿಡಿದು ತನ್ನ ಉದ್ದೇಶ ಈಡೇರಿಸಿಕೊಳ್ಳುತ್ತದೆ. ಉದಾಹರಣೆಗಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಗಮನಿಸಿದರೆ ಅದು ೯೦ ವರ್ಷಗಳ ದೀರ್ಘ ಇತಿಹಾಸ ಹೊಂದಿದೆ. ಆದರೆ ೧೮೫೭ಕ್ಕಿಂತಲೂ ಹಿಂದೆ ಕೂಡ ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳು ಜರುಗಿದ್ದವು. ಇದೇ ಮಾತು ಜನ ಸಾಮಾನ್ಯರು ಪಾಲ್ಗೊಂಡ ಹೆಚ್ಚಿನೆಲ್ಲ ಕ್ರಾಂತಿಗಳಿಗೆ ಅನ್ವಯವಾಗುತ್ತದೆ.

ಆದರೆ ನಮ್ಮಲ್ಲಿನ ಕೆಲ ನಾಯಕರು ತಮಗೂ ಲೋಕ ಜ್ಞಾನವಿದೆ ಎಂಬುದನ್ನು ತೋರಿಸಿಕೊಳ್ಳಲು ಭಾರತದಲ್ಲೂ ಈಜಿಪ್ಟ್ ಮಾದರಿಯ ಕ್ರಾಂತಿಯಾಗಬೇಕು ಎಂದು ಬಂಬಡ ಬಾರಿಸುತ್ತಿದ್ದಾರೆ. ಈ ಮಾತನ್ನು ಮೊದಲು ಹೇಳಿದ್ದು ಕಾಂಗ್ರೆಸ್ ನಾಯಕ ಜಾಫರ್ ಷರೀಫ್. ಅವರು ಕರ್ನಾಟಕದಲ್ಲಿನ ಯಡಿಯೂರಪ್ಪ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದಲ್ಲಿ ಈಜಿಪ್ಟ್ ಮಾದರಿ ಕ್ರಾಂತಿಯಾಗಬೇಕು ಎಂದು ಕರೆ ನೀಡಿ ತಮ್ಮ ಲೋಕ ಜ್ಞಾನವನ್ನು ಜಗಜಾಹೀರು ಮಾಡಿದ್ದಾರೆ. ಇದೇ ಮಾತನ್ನು ಸಿಪಿಐ (ಎಂ) ನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕೂಡ ಹೇಳಿದ್ದಾರೆ. ಆದರೆ ಅವರ ಗುರಿ ಕೇಂದ್ರ ಸರ್ಕಾರವಾಗಿದೆ.

ಇಂದು ದೇಶದಲ್ಲಿ ಅವ್ಯವಸ್ಥೆ ಇದೆ ಮತ್ತು ಇದನ್ನು ಸರಿಪಡಿಸಲು ಕ್ರಾಂತಿಯೇ ದಾರಿ ಎನ್ನುವುದಾದರೆ ಈ ಎಲ್ಲ ಗೊಂದಲಗಳಿಗೆ ಜಾಫರ್ ಷರೀಫ್‌ರ ಅನ್ನದಾತ ಕಾಂಗ್ರೆಸ್ ಪಕ್ಷವೇ ಹೊಣೆ. ಇಂದಿನ ಹಣದುಬ್ಬರವೇ ಇದಕ್ಕೆ ಸಾಕ್ಷಿ. ಅದ್ದರಿಂದ ಈಜಿಪ್ಟ್ ಮಾದರಿ ಕ್ರಾಂತಿ ದೇಶದಲ್ಲಿ ನಡೆಯಬೇಕೆ ಹೊರತು ಕರ್ನಾಟಕಕ್ಕೇ ಸೀಮಿತವಾಗಿಯಲ್ಲ.

ಪಶ್ಚಿಮ ಬಂಗಾಳದಲ್ಲಿ ಕಳೆದ ೩೦ ವರ್ಷಗಳಿಂದ ಕಾರಟ್‌ರ ಕಮ್ಯುನಿಷ್ಟ್ ಪಕ್ಷ ಆಡಳಿತ ನಡೆಸುತ್ತಿದೆ. ಇಂದು ಈಜಿಪ್ಟ್ ಮಾದರಿ ಕ್ರಾಂತಿಗೆ ಪಶ್ಚಿಮ ಬಂಗಾಳದಷ್ಟು ಹುಲುಸಾದ ಜಾಗ ಸಿಗಲಿಕ್ಕಿಲ್ಲ.

ನಿತಿನ್ ಗಡ್ಕರಿಯವರು ಈಜಿಪ್ಟ್ ಮಾದರಿ ಕ್ರಾಂತಿ ಆಗಬೇಕು ಎಂದು ಹೇಳುವುದೇ ಬಾಲಿಶತನದಿಂದ ಕೂಡಿದ್ದು. ಭ್ರಷ್ಟಾಚಾರದ ಆಪಾದನೆಗೆ ಸಿಲುಕಿರುವ ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಲು ಅಸಮರ್ಥರಾದರು ಕ್ರಾಂತಿಯ ಮಾತನಾಡುವುದೇ ಸೋಜಿಗದ ಸಂಗತಿ. ಅಂದರೆ ದೇಶದ ಮೂರು ಪ್ರಧಾನ ರಾಜಕೀಯ ಶಕ್ತಿಗಳಿಗೂ ದೇಶದಲ್ಲಿ ಕ್ರಾಂತಿ ಸಂಘಟಿಸುವ ಯಾವುದೇ ನೈತಿಕತೆ ಉಳಿದಿಲ್ಲ.

ಆದರೂ ದೇಶದಲ್ಲಿ ಖಂಡಿತವಾಗಿಯೂ ಕ್ರಾಂತಿ ನಡೆದೆ ನಡೆಯುತ್ತದೆ.



ಇಂದು ದೇಶದಲ್ಲಿರುವ ಯಾವುದೇ ಸಮುದಾಯಕ್ಕೆ ದೇಶ ಸಾಗುತ್ತಿರುವ ದಾರಿಯ ಬಗ್ಗೆ ಸಮಾಧಾನವಿಲ್ಲ. ಎಲ್ಲ ಜನರಲ್ಲೂ ಅಸಮಾಧಾನದ ಕಾರ್ಮುಗಿಲು, ರೋಷದ ಲಾವಾರಸ, ಅತೃಪ್ತಿಯ ಅಲೆ ಹುಟ್ಟಲು ಶುರುಮಾಡಿದೆ.

ಬಲಪಂಥೀಯರು (ಕೇವಲ ಹಿಂದೂಗಳು ಮಾತ್ರ ಎಂದುಕೊಳ್ಳಬೇಡಿ, ಎಲ್ಲ ಮತಗಳಲ್ಲಿರುವ ತೀವ್ರಗಾಮಿಗಳು) ತಮ್ಮ ಕನಸಿನ ಭಾರತ ನಿರ್ಮಾಣವಾಗಿಲ್ಲ ಎಂಬ ಚಿಂತೆಯಲ್ಲಿದ್ದರೆ, ಎಡಪಂಥೀಯರು ದೇಶದ ಬಡತನ ಮತ್ತು ಕಾರ್ಮಿಕ ವರ್ಗದ ಸ್ಥಿತಿ ಬಗ್ಗೆ ಮರುಗುತ್ತಿದ್ದಾರೆ. ಈ ಎರಡು ಪಂಥಕ್ಕೂ ಸೇರದ ಜನರು ಮೂಲಭೂತವಾದ ಮತ್ತು ಮಾವೋವಾದಿಗಳ ಅಟ್ಟಹಾಸ ಮತ್ತು ದೇಶವನ್ನು ಕಾಡುತ್ತಿರುವ ಇನ್ನಿತರ ಸಮಸ್ಯೆಗಳಿಂದ ಜರ್ಜರಿತರಾಗಿದ್ದಾರೆ. ಜನಸಾಮಾನ್ಯರ ಪಾಡಂತು ಹೇಳಿ ತೀರದ ಕಷ್ಟ ಕೋಟಲೆಗಳ ಸರಣಿ ಚಕ್ರದೊಳಗೆ ಕುಸಿದು ಕುಳಿತಿದೆ. ಇವರಿಗೆಲ್ಲ ಕ್ರಾಂತಿ ಅತ್ಯಗತ್ಯವಾಗಿ ಬೇಕಿದೆ.

ಆದರೆ ಭಾರತದ ಜನಮಾನಸ ಇನ್ನೂ ಹೋರಾಟ ಅಥವಾ ಕ್ರಾಂತಿಗೆ ಧುಮುಕುವಷ್ಟು ಬೆಂದಿಲ್ಲ ಮತ್ತು ಪಕ್ವವಾಗಿಲ್ಲ. ಆದರೆ ಆ ಹಾದಿಯಲ್ಲಿ ಮಾತ್ರ ಮುನ್ನಡೆಯುತ್ತಿದೆ.

ಇಂದು ಅಲ್ಲಲ್ಲಿ ನಡೆಯುತ್ತಿರುವ, ಅಥವಾ ಬಿಡಿಬಿಡಿಯಾಗಿ ನಡೆಯುತ್ತಿರುವ ಯಾವುದೇ ಹೋರಾಟಗಳಿಗೆ ದೇಶದಲ್ಲಿ ಕ್ರಾಂತಿ ತರುವ ಸಾಮರ್ಥ್ಯವಿಲ್ಲ. ಈ ಹೋರಾಟವನ್ನು ಸಂಘಟಿಸುವ ಸಂಸ್ಥೆಗಳಿಗೂ ಕೂಡ ಈ ತಾಕತ್ತಿಲ್ಲ.

ಮಾವೋವಾದಿ ಸಂಘಟನೆಗಳು ದೇಶದಲ್ಲಿ ಕ್ರಾಂತಿ ತರುತ್ತವೆ ಅಥವಾ ಅವರ ಹೋರಾಟ ಜನಪರವಾಗಿದೆ ಎಂದು ಅನೇಕ ಮಂದಿ ಹಗಲುಗನಸು ಕಾಣುತ್ತಿದ್ದಾರೆ. ಇಲ್ಲ, ಮಾವೋವಾದಿಗಳು ಖಂಡಿತವಾಗಿಯೂ ದೇಶದಲ್ಲಿ ಕ್ರಾಂತಿ ತರಲಾರರು. ಏಕೆಂದರೆ ಅವರಿಗೆ ದೇಶದೊಳಗಿನಿಂದಲೇ ತೀವ್ರ ವಿರೋಧವಿದೆ. ಸರ್ಕಾರಿ ಸಂಸ್ಥೆಗಳ ಜೊತೆ ಅವರ ತಾಕಲಾಟವನ್ನು ಬದಿಗಿಟ್ಟು ನೋಡಿದ್ದರು ಕೂಡ ದೇಶದ ಬಹುತೇಕ ಜನರಲ್ಲಿ ಅವರ ಬಗ್ಗೆ ಸದಾಭಿಪ್ರಾಯವಿಲ್ಲ. ಹಾಗೆಯೇ ನಕ್ಸಲ್ ಚಳವಳಿಯ ಆರಂಭ ಜನರಿಂದಲೇ ಆಗಿದ್ದರೂ ಕೂಡ ಇಂದು ಮಾವೋವಾದಿಗಳು ಜನಕಲ್ಯಾಣದ ಉದ್ದೇಶ ಹೊಂದಿದ್ದಾರೆ ಎಂದರೆ ನಂಬಲು ಸಾಧ್ಯವೇ ಇಲ್ಲ. ಅವರಿಗೆ ಜನ ಕತ್ತಲಲ್ಲಿದ್ದಷ್ಟು ಒಳ್ಳೆಯದು.

ಅವರು ಸರ್ಕಾರಿ ಉದ್ಯೋಗಿಗಳನ್ನು ಮತ್ತು ಜನಸಾಮಾನ್ಯರನ್ನು ಕೊಲ್ಲುವ ಕ್ರಿಯೆಯಲ್ಲಿ ಯಶಸ್ವಿಯಾಗಬಹುದೇ ಹೊರತು ಜನಮಾನಸವನ್ನು ಗೆಲ್ಲಲಾರರು.

ಉಳಿದಂತೆ ಈಗಿರುವ ಯಾವುದೇ ಸಂಘಟನೆಗಳಿಗೆ ದೇಶದಲ್ಲಿ ಕ್ರಾಂತಿ ತರುವ ಅಥವಾ ಒಂದು ಕ್ರಾಂತಿಯನ್ನು ರೂಪಿಸುವ, ಕ್ರಾಂತಿಯತ್ತ ಜನರನ್ನು ಸೆಳೆಯುವ, ಜನರಿಗೆ ನಾಯಕತ್ವ ಕೊಡುವ ಸಾಮರ್ಥ್ಯವಿಲ್ಲ. ಇನ್ನು ಎಲ್ಲರೂ ಒಪ್ಪಿಕೊಳ್ಳಬಹುದಾದ ಒಬ್ಬನೇ ಒಬ್ಬ ನಾಯಕ ಈ ದೇಶದಲ್ಲಿ ಈಗಿಲ್ಲ. ಎಲ್ಲರೂ ಒಪ್ಪಿಕೊಳ್ಳುವ ನಾಯಕ ಮತ್ತು ಸಂಘಟನೆ ಬೇಕು ಎಂಬುದು ಕ್ರಾಂತಿಗೆ ಕಡ್ಡಾಯ ಸಂಗತಿಯೇನಲ್ಲ. ಆದರೆ ಒಂದು ಕೇಂದ್ರ ಶಕ್ತಿ ಅನ್ನುವುದು ಇರಲೇ ಬೇಕು. ಇಲ್ಲದೇ ಹೋದಲ್ಲಿ ಹೋರಾಟ ಅನ್ನುವುದು ಅಧಿಕಾರ, ಸ್ವಹಿತ, ಪ್ರತಿಷ್ಠೆಗಾಗಿನ ಬಡಿದಾಟವಾಗುತ್ತದೆ. ಇದು ಕ್ರಾಂತಿ ಬಳಿಕದ ದೇಶದ ಭವಿಷ್ಯ ನಿರ್ಮಾಣಕ್ಕೆ ಅಡಿಗಲ್ಲು ಆಗುವುದರ ಬದಲು ಅಡ್ಡಿಗಲ್ಲು ಅಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದರೂ ಕೂಡ ಭಾರತದಲ್ಲಿ ಕ್ರಾಂತಿ ಆಗಬೇಕಾದರೆ ಇನ್ನಷ್ಟು ವರ್ಷ ಕಾಯಲೇ ಬೇಕಾಗುತ್ತದೆ ಎಂಬರಿವು ನಮಗಾಗುತ್ತದೆ.

ಮುಂದಿನ ದಿನಗಳಲ್ಲಿ ದೇಶದ ಜನರು ಹೋರಾಟಕ್ಕೆ ಆಹಿಂಸೆಯನ್ನೇ ಅಸ್ತ್ರ ಮಾಡಿಕೊಳ್ಳಬಹುದು ಮತ್ತದನ್ನು ಹತ್ತಿಕ್ಕಬಹುದು ಎಂಬ ಭ್ರಮೆಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಟ್ಟುಕೊಳ್ಳಬೇಕಿಲ್ಲ. ಇಂದು ಅಹಿಂಸಾತ್ನಕ ಪ್ರತಿಭಟನೆ ಮೊನಚು ಕಳೆದುಕೊಂಡ ಅಸ್ತ್ರವಾಗಿದ್ದು ಜನರಿಗೂ ಈ ಅರಿವಿದೆ. ಅದ್ದರಿಂದ ಅವರು ಹೆಚ್ಚು ಪರಿಣಾಮ ಬೀರುವ ಹೋರಾಟವನ್ನು ಆಯ್ದುಕೊಳ್ಳುವುದು ನಿಶ್ಚಿತ. ಇದು ನೇರ ಹಿಂಸೆಯ ದಾರಿಯಾಗಿರದಿದ್ದರು ಕೂಡ ಪರೋಕ್ಷ ಹಿಂಸೆಯ ಹಾದಿಯಾಗಿರುವ ಸಂಭವವಿದೆ.

ಥಾಮಸ್ ಜೆಫರ್‌ಸನ್ ಹೇಳಿದ್ದ "Every generation needs a new revolution” ಎಂಬ ಮಾತು ಇಲ್ಲಿ ಪ್ರಸ್ತುತ. ಹೌದು ನಾವು ಈ ಶತಮಾನದಲ್ಲಿ ಕುಳಿತು ಕ್ರಾಂತಿಯ ಬಗ್ಗೆ ಮಾತನಾಡುವಾಗ ಮಾಹಿತಿ ಕ್ರಾಂತಿಯಾಗಿದೆ, ವೈದ್ಯಕೀಯ ರಂಗದಲ್ಲಿ ಕ್ರಾಂತಿಯಾಗಿದೆ, ಇಂಜಿನಿಯರಿಂಗ್ ರಂಗದಲ್ಲಿ ಕ್ರಾಂತಿಯಾಗಿದೆ ಎನ್ನುತ್ತೇವೆ. ಇದರಿಂದ ಜನರಿಗೆ ಜೀವಿಸುವುದು ಸುಲಭವಾಗಿದೆ ಎನ್ನುತ್ತೇವೆ. ಆದರೆ ಇದೆಲ್ಲವು ಕೂಡ ಆರ್ಥಿಕವಾಗಿ ಸಬಲರಾಗಿರುವವರನ್ನು ಮಾತ್ರ ಸುಲಭವಾಗಿ ತಲುಪುತ್ತಿದೆಯೇ ಹೊರತು ಎಲ್ಲರನ್ನೂ ತಲುಪುತ್ತಿಲ್ಲ. ಇದು ಒಂದು ರೀತಿಯ ಅಸಮಾನತೆ ಹಬ್ಬಲು ಕಾರಣವಾಗಿದೆ. ಅಂದರೆ ನಮ್ಮಲ್ಲಿ ಅಥವಾ ನಮ್ಮಂತಹದ್ದೆ ಪರಿಸ್ಥಿತಿ ಎದುರಿಸುತ್ತಿರುವ ದೇಶಗಳಲ್ಲಿ ಆಗಬೇಕಿರುವ ಕ್ರಾಂತಿಯೇ ಬೇರೆ. ಈ ಅಸಮಾನತೆ, ಬಡತನ, ಅನಕ್ಷರತೆ ಸೇರಿದಂತೆ ಇನ್ನಿತರ ಋಣಾತ್ಮಕ ಸಂಗತಿಗಳನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ವಿಫಲವಾದಾಗ ಕ್ರಾಂತಿಯ ಬೀಜಾಂಕುರವಾಗುತ್ತದೆ. ಅಂದರೆ ಇಲ್ಲಿ ಆಡಳಿತ ವ್ಯವಸ್ಥೆಯ ಪಾತ್ರ ಪ್ರಮುಖವಾಗಿದೆ. ಉದಾಹರಣೆಗೆ ಏಡ್ಸ್‌ಗೆ ಮದ್ದಿಲ್ಲದಿರುವುದರಿಂದ ಒಬ್ಬ ಬಡ ವ್ಯಕ್ತಿ ಏಡ್ಸ್‌ನಿಂದ ಸತ್ತರೆ ಅದು ಬೀರುವ ಸಾಮಾಜಿಕ ಪರಿಣಾಮ ಬಹಳ ಸೀಮಿತವಾಗಿರುತ್ತದೆ. ಅದೇ ಏಡ್ಸ್‌ಗೆ ಮದ್ದು ಕಂಡು ಹುಡುಕಿ ಅದು ಸಮಾಜದ ಒಂದು ವರ್ಗದ ಜನರ ಕೈಗೇ ಮಾತ್ರ ಎಟುಕುತ್ತಿದ್ದು ಮತ್ತೊಂದು ವರ್ಗದಲ್ಲಿ ಏಡ್ಸ್‌ನಿಂದ ಸಾಯುತ್ತಿರುವವರ ಪ್ರಮಾಣ ತೀವ್ರವಾಗಿ ಹೆಚ್ಚಾದರೆ ಮತ್ತು ಆಡಳಿತ ಅಥವಾ ರಾಜಕೀಯ ವ್ಯವಸ್ಥೆ ಈ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ ಆಗ ಜನರು ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾರೆ. ಭಾರತದಲ್ಲಿ ಆಗಿರುವುದು ಇದೇ.

ಇಲ್ಲಿ ಸಾಕಷ್ಟು ’ಕ್ರಾಂತಿ’ಗಳು ಆಗಿದೆ. ಆದರೆ ಅದು ತಳಮಟ್ಟ ತಲುಪಲು ವಿಫಲವಾಗಿದೆ. ಅಂದರೆ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಯಾಗದೆ ಬೇರೆಲ್ಲಿ ಯಾವುದೇ ಬದಲಾವಣೆಯಾದರೂ ಅದು ದೇಶದ ಮನಸ್ಸುಗಳು ಕ್ರಾಂತಿಯತ್ತ ಸಾಗುವುದನ್ನು ತಡೆಯಲಾರವು.

ಅದರಿಂದ ರಾಜಕೀಯ ನಾಯಕರು ಮೊದಲು ವ್ಯವಸ್ಥೆಯನ್ನು ಸರಿಪಡಿಸಲು ಶ್ರಮಿಸಬೇಕೆ ಹೊರತು ಸುಖಾಸುಮ್ಮನೆ ಕ್ರಾಂತಿಯ ಬಗ್ಗೆ ಬೊಗಳೆ ಬಿಡುವುದಲ್ಲ!

1 comment:

ಬಾನಾಡಿ said...

ಭಾರತದ ರಾಜಕೀಯ ಪರಿಸ್ಥಿತಿ ಅರಾಜಕತೆಯತ್ತ ಮುನ್ನುಗುತ್ತಿದೆ ಎಂದು ಇಂದು ಸಂಜೆ ನಾವು ಗೆಳೆಯರು ಚರ್ಚಿಸುತ್ತಿದ್ದೆವು. ಇಲ್ಲಿ ಕ್ರಾಂತಿಗಾಗಿ ಜನ ಹಪಹಪಿಸುತ್ತಿದ್ದಾರೆ ನಿಜ, ಆದರೆ ದೇಶದಗಲ ಕ್ರಾಂತಿಯಾಗುವ ಲಕ್ಷಣವಿಲ್ಲ ಸದ್ಯ. ಟಿ.ವಿ., ಪತ್ರಿಕೆಗಳು ವರದಿ ಮಾಡದ ಅದೆಷ್ಟೋ ಕ್ರಾಂತಿಕಾರಿ ಚಟುವಟಿಕೆಗಳು ದೇಶದ ವಿವಿಧ ಕಡೆ ನಡೆಯುತ್ತಲೇ ಇವೆ. ಆದರೆ ಅವೆಲ್ಲಾ ಒಂದು ಶಕ್ತಿಯಾಗಿ ಒಂದೆಡೆಯಿಂದ ಹೊರ ಬರಲಾರದು. ಕ್ರಾಂತಿಗಾಗಿ ಕಾಯುವೆನು. ಒಳ್ಳೆಯ ಬರಹ ಓದಿದ ತೃಪ್ತಿ.
ಒಲವಿನಿಂದ
ಬಾನಾಡಿ