Friday, February 25, 2011
ಎದೆಯ ತುಂಬ ದೆಹಲಿಯದ್ದೇ ಗಾನ...
ದೆಹಲಿ ದೇಶದ ರಾಜಧಾನಿಯೂ ಹೌದು. ದೇಶದ ಎಲ್ಲ ಸಮಸ್ಯೆಗಳ ರಾಜಧಾನಿಯೂ ಹೌದು! ದೆಹಲಿ ನೆಟ್ಟಗಿದ್ದರೆ ದೇಶ ನೆಟ್ಟಗಿರುತ್ತಿತ್ತು. ದೆಹಲಿ ಸೊಟ್ಟಗಿರುವುದರಿಂದಲೇ ದೇಶವೂ ಸೊಟ್ಟಗಿದೆ! ಎರಡೇ ಸಾಲಿನ ತೀರ್ಪಿದು.
ಭಾರತದಂತ ವಿವಿಧತೆಯನ್ನೇ ತನ್ನ ಹಿರಿಮೆ ಮಾಡಿಕೊಂಡ ದೇಶದಲ್ಲಿ ಈ ರೀತಿಯ ತೀರ್ಪು ಅಸಂಬದ್ಧವಾದದ್ದು ಅಥವಾ ಬಾಲಿಶತನದಿಂದ ಕೂಡಿದ್ದು ಎಂದು ನಿಮಗೆ ಅನಿಸಿ ಬಿಡಲು ಅರೆ ಕ್ಷಣ ಸಾಕು. ಆದರೆ ಇದು ನಿಜ ಎಂದು ಒಪ್ಪಿಕೊಳ್ಳಬೇಕಾದರೆ ನಮ್ಮ ದೇಶದ ಇತಿಹಾಸ ಮತ್ತು ವರ್ತಮಾನಗಳ ಒಂದಿಷ್ಟು ಅರಿವಾದರೂ ಬೇಕು.
ದೆಹಲಿಗೆ ಸುಮ್ಮನಿದ್ದು ಗೊತ್ತಿಲ್ಲ ಅಥವಾ ದೆಹಲಿಯನ್ನು ಸುಮ್ಮನಿರಲೂ ಯಾರೂ ಬಿಟ್ಟಿಲ್ಲ. ತುರಿಸಿಕೊಳ್ಳುತ್ತಿರುವುದೇ ದೆಹಲಿಯ ಖಯಾಲಿ! ಪುರಾಣ, ಇತಿಹಾಸಗಳ ಪುಟದಲ್ಲಿ ದೆಹಲಿಯ ಬಗೆಗಿನ ವಿವರಣೆಗಳು ಇದಕ್ಕಿಂತ ಹೆಚ್ಚಾಗಿ ದೆಹಲಿ ಕೇಂದ್ರಿತ ಆಗುಹೋಗುಗಳು ಸ್ಪುಟವಾಗಿ ದೊರೆಯುತ್ತವೆ, ಈ ವಿಷಯದಲ್ಲಿ ದೇಶದ ಇತರ ಮಹಾನಗರಗಳಾದ ಕೋಲ್ಕತ್ತಾ, ಮುಂಬೈ, ಚೆನೈ, ಬೆಂಗಳೂರು, ಹೈದರಾಬಾದ್‌ಗಳು ಬರೀ ಬಚ್ಚಾಗಳು!
ಇಂದ್ರಪ್ರಸ್ಥ, ಕುರುಕ್ಷೇತ್ರ, ಹಸ್ತಿನಾಪುರ ಮುಂತಾದವು ಪುರಾಣದಲ್ಲಿನ ದೆಹಲಿ ಆದರೆ ಅನಂತರ ಮೊಘಲರ ದೆಹಲಿ, ಬ್ರಿಟಿಷರ ದೆಹಲಿ ಮತ್ತೇ ಈಗ ...? ಯಾರ ದೆಹಲಿ? ಅಥವಾ ಯಾರದ್ದೋ ದೆಹಲಿ... ಎಲ್ಲರ ದೆಹಲಿ ಆಗಬೇಕಾದ ಪ್ರಸಂಗದಲ್ಲಿ ಯಾರದ್ದೂ ಆಗಲಾರದೆ ಹೋಗುವ ಸ್ಥಿತಿ. ಒಂದು ರೀತಿಯಲ್ಲಿ ವೇಷ್ಯೆಯಂತೆ! ಸುಖಕ್ಕೆ ಬೇಕು... ಅನಿವಾರ್ಯತೆಗೆ ಬೇಕು... ಆದರೆ ಅದರ ಕಣ್ಣೀರು ಬೇಡವೇ ಬೇಡ.
ಇತಿಹಾಸದ ಆಧಾರದಲ್ಲಿ ನೋಡುವುದಾದರೆ ದೆಹಲಿಯ ಸ್ಥಾಪನೆ ತೋಮರ್ ವಂಶಸ್ಥ ಅನಂಗಪಾಲನಿಂದ ಆಗಿತ್ತು. ಅನಂತರ ಮಾಮ್ಲುಕರು, ಖಿಲ್ಜಿ, ತುಘಲಕ್, ಸೈಯದಿಗಳು, ಲೋಧಿ, ಮುಘಲರು ಮತ್ತು ಬ್ರಿಟಿಷರು ಇಲ್ಲಿಂದ ರಾಜ್ಯಭಾರ ಮಾಡಿದ್ದರು. ಆದರೆ ದೆಹಲಿಗೆ ತಾಕಿಕೊಂಡೇ ಇರುವ ನೊಯ್ಡಾದ ಶ್ರೀನಿವಾಸಪುರಿಯಲ್ಲಿ ಕ್ರಿ. ಪೂ ೩೦೦ರ ಕಾಲಘಟ್ಟದ ಆಶೋಕನ ಕಾಲದ ಶಾಸನ ಪತ್ತೆಯಾಗಿರುವುದು ಮತ್ತು ಕುತುಬ್ ಮಿನಾರ್‌ನ ಬಳಿ ಇರುವ ಉಕ್ಕಿನ ಕಂಬ ಸರಿಸುಮಾರು ಇದೇ ಕಾಲಕ್ಕೆ ಸೇರಿರುವುದು ಈ ಪ್ರದೇಶದಲ್ಲಿದ್ದ ಜನವಸತಿ ಅಥವಾ ಜನ ಚಟುವಟಿಕೆಯ ಇತಿಹಾಸವನ್ನು ಇನ್ನೂ ಹಿಂದೊಯ್ಯುತ್ತದೆ. ಹಾಗೇ ಹಿಂದಿನ ದೆಹಲಿ ಅಂದರೆ ಈಗಿನ ದೆಹಲಿಯನ್ನೇ ಆಧಾರವಾಗಿಟ್ಟು ನೋಡಲಾಗದು. ಒಂದೊಂದು ಕಾಲದಲ್ಲಿ ಈಗ ವಿಶಾಲವಾಗಿ ಹಬ್ಬಿರುವ ದೆಹಲಿಯ ಒಂದೊಂದು ಭಾಗ ಪ್ರಾಮುಖ್ಯತೆ ಪಡೆದುಕೊಂಡಿತ್ತು.
ಆದರೆ ನಾವು ಮಹಾಭಾರತದಲ್ಲಿನ ದೆಹಲಿಯ ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದರೆ ಕ್ರಿ ಪೂ ೨೫೦೦ರಷ್ಟು ಹಿಂದೆಯೇ ದೆಹಲಿಯ ಅಸ್ತಿತ್ವವಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಈ ಲೇಖನದಲ್ಲಿ ಮೊದಲೇ ಹೇಳಿದಂತೆ ದೆಹಲಿಯನ್ನು ಇಂದ್ರಪ್ರಸ್ಥ ಎಂದು ಕರೆಯುತ್ತಿದ್ದರು. ಇಂದ್ರಪ್ರಸ್ಥ ಎಂಬ ಪ್ರದೇಶ ಆಧುನಿಕ ದೆಹಲಿಯಲ್ಲಿ ೧೯ನೇ ಶತಮಾನದವರೆಗೂ ಇತ್ತು! ಆದರೆ ನವದೆಹಲಿ ಕಟ್ಟುವ ಬ್ರಿಟಿಷರ ಆಸೆಗೆ ಈ ಪ್ರದೇಶ ಹೇಳಹೆಸರಿಲ್ಲದಾಯಿತು. ಪುರಾಣ ಕಿಲಾ ಬಳಿ ಇಂದ್ರಪ್ರಸ್ಥ ಇದ್ದದ್ದಕ್ಕೆ ಪುರಾತತ್ವ ಸಾಕ್ಷ್ಯಗಳು ದೊರಕಿವೆ. ಇಂದಿನ ನವದೆಹಲಿಯ ವಿನ್ಯಾಸ ಮಾಡಿದ ಕೀರ್ತಿ ಎಡ್ವೀನ್ ಲುಟಾಯಿಸ್‌ಗೆ ಸಲ್ಲುತ್ತದೆ.
ದೆಹಲಿ ವಿಶ್ವದ ಆತ್ಯಂತ ಪ್ರಾಚೀನ ಮತ್ತು ಇಂದಿಗೂ ಅಸ್ತಿತ್ವದಲ್ಲಿರುವ ಹಾಗೂ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದ ಜಗತ್ತಿನ ಕೆಲವೇ ಕೆಲವು ನಗರಗಳಲ್ಲಿ ಒಂದು. ಈ ನಗರದ ಪ್ರಾಚೀನತೆಯ ಮುಂದೆ ವಾಷಿಂಗ್ಟನ್, ಲಂಡನ್ ಇತ್ಯಾದಿ ಜಾಗತಿಕ ರಾಜಧಾನಿಗಳು ಅಂಬೆಗಾಲಿಡುವ ಮಗು. ಆದರೆ ವಯಸ್ಸೇ ಎಲ್ಲವೂ ಅಲ್ಲವಲ್ಲ!
ಅಂದು, ಇಂದು ಆ ನಗರಗಳು ಎದ್ದು ಫಾರ್ಮುಲಾ ೧ ಕಾರ್‌ನ ವೇಗದಲ್ಲಿ ಅಭಿವೃದ್ಧಿಯ ನೊಗ ಹೆಗಲಿಗೇರಿಸಿಕೊಂಡು ಸಾಗುತ್ತಿದ್ದರೆ ದೆಹಲಿ ಮಾತ್ರ ಸೈಕಲ್ ತುಳಿಯುತ್ತಿದೆ! ಒಂದು ನಗರವನ್ನು ಹುಟ್ಟು ಹಾಕಿ ಅದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು (ಪಕ್ಕಾ ಯೋಜನೆ, ಇಚ್ಚಾಶಕ್ತಿ ಇದಲ್ಲಿ ಮಾತ್ರ) ಒಂದೆರಡು ದಶಕ ಸಾಕು. ಆದರೆ ದೆಹಲಿ ಈ ವಿಷಯದಲ್ಲಿ ಎಲ್ಲಿ ಸೋತಿತು? ಉತ್ತರ ಕಂಡುಕೊಳ್ಳುವುದು ತೀರಾ ಕಷ್ಟ. ಇಂದಿಗೂ ದೆಹಲಿಯ ಕೆಲ ಭಾಗಗಳು ಅತ್ಯುತ್ತಮವಾಗಿದ್ದು, ವ್ಯವಸ್ಥಿತವಾಗಿವೆ. ಆದರೆ ಬಹುತೇಕ ಭಾಗಗಳು ಗಬ್ಬೆದ್ದು ನಾರುತ್ತಿವೆ.
ಇದಕ್ಕೆ ಕಾರಣ ಒಮ್ಮಲೇ ಹರಿದು ಬಂದ ಜನಸಂಖ್ಯೆ ಮತ್ತು ದೂರದೃಷ್ಟಿ ಇಲ್ಲದ ನಗರ ಯೋಜನೆ ಮತ್ತು ಜನ ಸಂಯೋಜನೆಯೇ ಆಗಿದೆ. ಇಲ್ಲಿನ ಜನಸಂಯೋಜನೆ ತೀರಾ ತೀರಾ ವಿಚಿತ್ರ. ಆದರೆ ಮಹಾನಗರಗಳ ಹಣೆ ಬರಹ ಇಷ್ಟೇ ಅಲ್ಲವೇ? ಅಂದರೆ ಮೂಲ ನಿವಾಸಿಗಳಿಗಿಂತ ವಲಸಿಗರನ್ನು ಪೊರೆಯುವ ಚಟ ಅವಕ್ಕೆ. ಅದೇ ರೀತಿ ದೆಹಲಿ ಕೂಡ ಶತ ಶತಮಾನಗಳಿಂದ ವಲಸಿಗರಿಗೆ ತನ್ನ ದ್ವಾರ ತೆರೆದಿಟ್ಟುಕೊಂಡೇ ಇದೆ. ಅದು ಈಗಲೂ ಮುಂದುವರಿಯುತ್ತಿದೆ. ಮುಂದೆಯೂ ಮುಂದುವರಿಯುತ್ತದೆ. ಅದ್ದರಿಂದ ಅದನ್ನು ಸಮಸ್ಯೆ ಎಂದು ಪರಿಗಣಿಸುವುದರಲ್ಲಿಯೇ ದೆಹಲಿಯ ಸೋಲು ಅಡಗಿದೆ. ಬದಲಾಗಿ ಅದನ್ನು ಒಂದು ಸವಾಲಾಗಿ ಅದು ತೆಗೆದುಕೊಳ್ಳಬೇಕಿದೆ.
ಅದು ಹೇಗೆ? ಇದಕ್ಕಾಗಿ ತನ್ನೆರಡು ಉಪಗ್ರಹ ನಗರಗಳಾದ ನೋಯ್ಡಾ ಮತ್ತು ಗುರ್ಗಾಂವ್ ಅನ್ನು ಮತ್ತಷ್ಟು ವಿಶಾಲವಾಗಿ ಹಬ್ಬಿಸಲು ಕೆಲ ಕ್ರಮ ಕೈಗೊಳ್ಳುವುದರ ಜೊತೆ ಜೊತೆಗೆ ತನ್ನಲ್ಲಿ ಅದಷ್ಟು ಸರ್ಕಾರಿ ಕಚೇರಿಗಳು ಮಾತ್ರ ಇರುವಂತೆ ನೋಡಿಕೊಂಡು ಖಾಸಗಿ ಸಂಸ್ಥೆಗಳನ್ನು ಅದಷ್ಟು ಈ ಉಪಗ್ರಹ ನಗರಗಳಿಗೆ ದಾಟಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಜನ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಬದಲಾವಣೆ ತಂದುಕೊಳ್ಳುವುದು ಅದಕ್ಕೆ ಸಾಧ್ಯ. ಈ ಜನಸಂಖ್ಯೆ ಹೆಚ್ಚಳದ ಸಮಸ್ಯೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳೆಂದರೆ ಸುರಕ್ಷತೆ, ಭದ್ರತೆ, ವಸತಿ, ವಿದ್ಯುತ್, ಉತ್ತಮ ರಸ್ತೆ, ನೀರಿನ ವ್ಯವಸ್ಥೆ ಮತ್ತು ಶುಚಿತ್ವ ಕಾಪಾಡಿಕೊಳ್ಳುವ ಸಮಸ್ಯೆಗಳು.
ಇಂದು ದೆಹಲಿಯಲ್ಲಿ ಜನರಿಗೆ ನೀಡುವ ಭದ್ರತೆ ಅಥವಾ ಜನರ ಸುರಕ್ಷತೆ ಪ್ರಶ್ನಾರ್ಹವಾಗಿದೆ. ಇಲ್ಲಿ ಅಪರಾಧ ಪ್ರಮಾಣ ಎಗ್ಗಿಲ್ಲದೆ ಏರುತ್ತಿದೆ. ಜನರ ಭದ್ರತೆಯ ಜವಾಬ್ಧಾರಿ ವಹಿಸಿಕೊಳ್ಳಬೇಕಾದ ಪೊಲೀಸರು ದೊಡ್ಡವರ ಗೇಟ್ ಕಾಯುತ್ತಿದ್ದಾರೆ. ಉತ್ತಮ ರಸ್ತೆ ನೀಡುವ ನಿಟ್ಟಿನಲ್ಲಿ ದೆಹಲಿ ಒಂಚೂರು ಯಶ ಕಂಡಿದೆ. ಇದಕ್ಕೆ ಕಾಮನ್‌ವೆಲ್ತ್ ಗೇಮ್ಸ್ ಕೂಡ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಆದರೆ ವಾಹನಗಳ ಸಂಖ್ಯೆಗೆ ಹೋಲಿಸಿದರೆ ರಸ್ತೆಗಳ ಅಗಲ ಏನೇನು ಸಾಲದು. ಇನ್ನೂ ಕೆಲ ಕಡೆ ರಸ್ತೆ ಸಾಕಷ್ಟು ಅಗಲವಾಗಿದ್ದರೂ ಅದರ ಶೇ. ೭೫ ಭಾಗದಲ್ಲಿ ವಾಹನಗಳು ನಿಂತು ಇಡೀ ಟ್ರಾಫಿಕ್ ವ್ಯವಸ್ಥೆಯನ್ನೆ ಗೊಂದಲದ ಗೂಡಾಗಿಸಿ ಬಿಡುವುದು ಸಾಮಾನ್ಯ. ಬಸ್ ವ್ಯವಸ್ಥೆ ಚೆನ್ನಾಗಿಲ್ಲ. ಇನ್ನೂ ಮೆಟ್ರೋ ಜನಪ್ರಿಯವಾಗಿದ್ದರೂ ಈ ಜನಪ್ರಿಯತೆಯೆ ಅದರ ಸುಗಮ ಪಯಣಕ್ಕೆ ಮುಳುವಾಗಿದೆ. ಒಂದು ಕಡೆ ಮಿತಿ ಮೀರಿದ ಪ್ರಯಾಣಿಕರು ಮತ್ತೊಂದು ಕಡೆ ಆಗಾಗ ಕಾಡುವ ತಾಂತ್ರಿಕ ಅಡಚಣೆಗಳು ಮೆಟ್ರೋಕ್ಕೆ ಬಗಲ ಮುಳ್ಳಾಗಿ ಕಾಡುತ್ತಿದೆ. ಯಮುನೆಯ ಕೃಪೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಚೆನ್ನಾಗಿದೆ. ವಿದ್ಯುತ್ ವ್ಯವಸ್ಥೆಯ ಬಗ್ಗೆ ಯಾವುದೇ ತಕರಾರು ತೆಗೆಯುವಂತಿಲ್ಲ.
ದೆಹಲಿಯ ವಾಯುಗುಣವಂತೂ ಅತಿರೇಕಗಳ ಸಂಗಮ. ಚಳಿಗಾಲದಲ್ಲಿ ಶೂನ್ಯದ ಬಳಿ ಸುಳಿದಾಡುವ ಪಾದರಸ ಬೇಸಿಗೆಯಲ್ಲಿ ೫೦ ಡಿಗ್ರಿಯ ಬಳಿ ಕುಣಿದಾಡುತ್ತಿರುತ್ತದೆ. ಒಮ್ಮೆ ಚಳಿಯ ತಂಪಿಗೆ ಮರಗಟ್ಟುವ ದೇಹ ಮತ್ತೊಮ್ಮೆ ಬೇಸಿಗೆಯ ತಾಪಕ್ಕೆ ಥರಗಟ್ಟಿ ಹೋಗುತ್ತದೆ. ಇಲ್ಲಿ ಚಳಿ ಮತ್ತು ಬೇಸಿಗೆ ಕೆಲ ಜೀವಗಳಿಗೆ ಕಂಟಕವಾಗುವುದು ಸಾಮಾನ್ಯ. ದೆಹಲಿಯಲ್ಲಿ ಬದುಕುವುದೆಂದರೆ ಈ ಎರಡು ಅತಿರೇಕಗಳ ನಡುವಿನ ಒದ್ದಾಟ ಮತ್ತು ನರಳಾಟ!
ಆದರೂ ದೆಹಲಿಗೆ ಅದೆಂಥದ್ದೋ ಒಂದು ಚುಂಬಕತೆಯಿದೆ... ಇಲ್ಲವಾದರೆ ಇಂತಹ ವೈರುಧ್ಯಗಳನ್ನು ಬಗಲಲ್ಲಿ, ಮುಗಿಲಲ್ಲಿ ಕಟ್ಟಿಕೊಂಡು ಸಹಸ್ರ ಸಹಸ್ರ ವರ್ಷಗಳಿಂದ ಈ ನಗರ ರಾಜನಂತೆ ಬಾಳಿ ಬದುಕುತ್ತಿರಲಿಲ್ಲ. ದರೋಡೆ, ಲೂಟಿ, ಆಕ್ರಮಣ ಮತ್ತು ದಾಸ್ಯಗಳಿಗೆ ಸತತವಾಗಿ ಒಳಪಟ್ಟರು ದೆಹಲಿ ತನ್ನತನವನ್ನು ಎಲ್ಲೂ ಸೂರೆಗೊಳ್ಳಲು ಬಿಡಲಿಲ್ಲ; ಬದಲಾಗಿ ಅವರ ತನವನ್ನು ತನ್ನಲ್ಲಿ ಅಂತರ್ಗತ ಮಾಡಿಕೊಳ್ಳುತ್ತ ಸಾಗಿತು, ಸಾಗಿದೆ.
ನನಗಂತೂ ದೆಹಲಿ ರೋಮಾಂಚನಗಳ ರಸ ಬೀಡು, ಕುಣಿದಾಟದ ಮೈದಾನ, ನನ್ನೂರಿನಲ್ಲಿ ಕಳೆದುಕೊಂಡದನ್ನು ಮೊಗೆಮೊಗೆದು ಪಡೆಯೋ ತಾಣ...
ನಾನು ಸವಾಲುಗಳನ್ನು ಇಷ್ಟಪಡುತ್ತೇನೆ. ಅದಕ್ಕಾಗಿಯೇ ಇರಬೇಕು ದೆಹಲಿಯನ್ನೂ ಕೂಡ ...
Subscribe to:
Post Comments (Atom)
No comments:
Post a Comment