Saturday, November 27, 2010

ಇಂದು ಎಲ್ಲ ಭಾರತೀಯ ಭಾಷೆಗಳಲ್ಲೂ ಒಳ್ಳೆಯ ಬೆಳವಣಿಗೆ ಆಗುತ್ತಿದೆ: ಅಗ್ರಹಾರ ಕೃಷ್ಣಮೂರ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರ ಜೊತೆ ‘ದ ಸಂಡೇ ಇಂಡಿಯನ್’ ಪತ್ರಿಕೆಗಾಗಿ ನಾನು ನಡೆಸಿದ ವಿಶೇಷ ಸಂದರ್ಶನವಿದು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ತಾವು ಇಡೀ ದೇಶದ ಎಲ್ಲಾ ಭಾಷೆಗಳ ಸಾಹಿತ್ಯವನ್ನು ಹತ್ತಿರದಿಂದ ಗಮನಿಸುತ್ತಿದ್ದೀರಿ. ಒಟ್ಟಾರೆ ದೇಶದಲ್ಲಿನ ಸಾಹಿತ್ಯ ಸೃಷ್ಟಿ ಹೇಗಿದೆ?
ನಿಮಗೆ ಗೊತ್ತಿರುವಂತೆ ಭಾರತದಲ್ಲಿ ಬಹಳಷ್ಟು ಭಾಷೆಗಳಿವೆ. ಇವುಗಳಲ್ಲಿ ಅನೇಕ ಭಾಷೆಗಳು ಶ್ರಿಮಂತವಾಗಿ ಬೆಳೆದಿದ್ದು ಅದಕ್ಕೆ ದೀರ್ಘ ಸಾಹಿತ್ಯಿಕ ಪರಂಪರೆಯಿದೆ. ಉದಾಹರಣೆಗೆ ತಮಿಳು, ಕನ್ನಡ, ಬಂಗಾಳಿ ಹೀಗೆ. ಸ್ವಾತಂತ್ರ್ಯ ನಂತರದಲ್ಲಿ ಹೊಸ ಜಾಗ್ರತಿ ಮೂಡಿದ ಮೇಲೆ ಅನೇಕರು ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಅನೇಕ ಸಾಹಿತ್ಯ ಹೋರಾಟಗಳು ನಡೆದಿವೆ. ಇದಕ್ಕೆ ಭಕ್ತಿ ಚಳವಳಿ ಒಳ್ಳೆಯ ಉದಾಹರಣೆ. ಪರಂಪರೆ ಭಕ್ತಿಯ ಹಿನ್ನೆಲೆ ಹೊಂದಿದ್ದರೂ ಕೂಡ ಅದಕ್ಕೆ ಸಾಹಿತ್ಯಿಕ ಒಳ ಹರಿವು ಮತ್ತು ತಾತ್ವಿಕ ಹಿನ್ನೆಲೆ ಇದೆ. ಕರ್ನಾಟಕದೊಳಗೆ ವಚನ ಪರಂಪರೆ, ತಮಿಳುನಾಡಿನ ಆಳ್ವರ್ ಪರಂಪರೆ, ಆಗ್ನೆಯ ಭಾರತದಲ್ಲಿ ಚೈತನ್ಯರ ಪರಂಪರೆ, ಉತ್ತರ ಭಾರತದಲ್ಲಿ ಕಬೀರ್ ಮುಂತಾದವರ ಪರಂಪರೆ ಹೀಗೆ ಸ್ವಾತಂತ್ರ್ಯ ಪೂರ್ವದಲ್ಲೂ ಕೂಡ ಒಟ್ಟಾರೆ ಸಾಹಿತ್ಯಿಕ ಹರಿವಿತ್ತು. ಸ್ವಾತಂತ್ರ್ಯ ನಂತರ ಇದಕ್ಕೊಂದು ಸಾಂಸ್ಥಿಕ ರೂಪ ಕೊಡಬೇಕು ಎಂದು ಅಕಾಡೆಮಿ ಸ್ಥಾಪನೆ ಆಯಿತು. ಆದರೆ ಈ ಸಂಘಟನೆಯಿಂದಲೇ ಸಾಹಿತ್ಯ ಸೃಷ್ಠಿಯಾಗುತ್ತಿದೆ ಎಂದು ಯಾರು ಭಾವಿಸಬಾರದು. ಇದೊಂದು ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿದೆ ಅಷ್ಟೆ. ಇಂದು ಎಲ್ಲ ಭಾರತೀಯ ಭಾಷೆಗಳಲ್ಲೂ ಒಳ್ಳೆಯ ಬೆಳವಣಿಗೆ ಆಗುತ್ತಿದೆ. ಅಂತಹದ್ದರಲ್ಲಿ ಇಲ್ಲಿ ಕಡಿಮೆ ಬೆಳವಣಿಗೆ ಆಗುತ್ತಿದೆ ಅಲ್ಲಿ ಜಾಸ್ತಿ ಬೆಳವಣಿಗೆ ಆಗುತ್ತಿದೆ ಎಂದು ಹೇಳುವುದು ಈ ಕಾಲಕ್ಕೆ ತಕ್ಕ ಮಾತಲ್ಲ. ಇವತ್ತು ಮಾಹಿತಿ ಕ್ರಾಂತಿ, ಅನುವಾದ ಬಹಳ ಅದ್ಭುತವಾಗಿ ನಡೆಯುತ್ತಿದೆ. ಅದ್ದರಿಂದ ಇಂದು ಸಾಹಿತ್ಯ ಒಂದು ಭಾಷೆಗೆ ಸೀಮಿತವಾಗಿಲ್ಲದೆ ಅದು ಇತರ ಭಾಷೆಗೂ ಬಹುಬೇಗ ಹಬ್ಬುತ್ತಿದೆ. ಅದ್ದರಿಂದ ಇಡೀ ದೇಶದಲ್ಲಿ ಬಹುದೊಡ್ಡ ಸಾಹಿತ್ಯ ಜಾಗೃತಿ ಆಗುತ್ತಿದೆ. ಒಬ್ಬ ಬರಹಗಾರ ಬರೆಯುತ್ತಾನೆ ಮತ್ತು ಅದು ಅನುವಾದ ವಾಗುತ್ತಿದೆ. ಈ ದೃಷ್ಟಿಯಿಂಲೇ ನಾವು ಇಂದಿನ ಸಾಹಿತ್ಯವನ್ನು ನೋಡಬೇಕು. ಭಾರತೀಯ ಸಾಹಿತ್ಯದಲ್ಲಿ ದೇಶದ ಹೊರಗಡೆ ಇಂಗ್ಲೀಷ್‌ನಲ್ಲಿ ಬರೆಯುವವರು ಬಹಳ ಪ್ರಖ್ಯಾತರಾಗಿದ್ದರೆ. ಅದರ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಅವರಿಗೆ ಸಮನಾಗಿ ಭಾರತೀಯ ಭಾಷೆಗಳಲ್ಲೂ ಸಾಹಿತ್ಯ ಸೃಷ್ಠಿಯಾಗುತ್ತಿದೆ. ಪ್ರತಿ ಭಾಷೆಯಲ್ಲೂ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿದೆ. ಮಲಯಾಳಂನಲ್ಲಿ ೪ - ೫ ಸಾವಿರ, ಕನ್ನಡದಲ್ಲಿ ೩ ಸಾವಿರ ಮತ್ತು ಹಿಂದಿಯಲ್ಲಿ ಸುಮಾರು ೫- ೧೦ ಸಾವಿರದಷ್ಟು ಪುಸ್ತಕಗಳು ಪ್ರತಿವರ್ಷ ಪ್ರಕಟವಾಗುತ್ತಿವೆ.

ಓದುವಿಕೆ ಪ್ರಮಾಣ ಹೇಗಿದೆ?
ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದನ್ನು ತಿಳಿಯಲು ಯಾವುದಾದರೂ ಸಮೀಕ್ಷೆ ಮಾಡಬೇಕಷ್ಟೆ. ಅಥವಾ ಅಚ್ಚಾದ ಪುಸ್ತಕಗಳು ಖರ್ಚು ಆಗುತ್ತಿವೆಯಾ ಎಂದು ನೋಡಿದರೆ ಗೊತ್ತಾಗುತ್ತದೆ. ಕಳೆದ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಸುಮಾರು ೮ - ೧೦ ಕೋಟಿ ರೂ ವಹಿವಾಟು ನಡೆಸಿದೆ. ನಾಲ್ಕು ವರ್ಷಗಳ ಹಿಂದೆ ೪ ಕೋಟಿ ರೂಗಳ ವಹಿವಾಟು ನಡೆಸುತ್ತಿತ್ತು. ಕೆಲವರು ಈ ಪುಸ್ತಕಗಳು ಗ್ರಂಥಾಲಯಕ್ಕೆ ಹೋಗುತ್ತಿದೆ ಎನ್ನಬಹುದು. ಇರಬಹುದು, ಇಲ್ಲಿ ಪುಸ್ತಕ ಒಬ್ಬ ಓದುಗನ ಕೈಗೆ ಸಿಗುವಾಗ ಒಂದು ದಿನ ತಡವಾಗಬಹುದು. ಆದರೆ  ಓದುಗನ ಕೈಗೆ ಸಿಕ್ಕೆ ಸಿಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂದು ವಿಶ್ವದಲ್ಲಿ ಪುಸ್ತಕಗಳ ಉತ್ಪಾದನೆಯಲ್ಲಿ ಭಾರತ ಹಿಂದುಳಿದಿಲ್ಲ.


ಅಂದರೆ ಪುಸ್ತಕ ಉದ್ಯಮ ಕೂಡ ಲಾಭದಲ್ಲಿದೆ ಅಲ್ಲವೇ?
ಪುಸ್ತಕೋದ್ಯಮ ಅತ್ಯಂತ ಶ್ರೇಷ್ಠ ಉದ್ಯಮ. ಪುಸ್ತಕದ ಅಂಗಡಿ ಇಟ್ಟುಕೊಳ್ಳುವುದು ಗೌರವಯುತ ಕೆಲಸ. ಈಗ ಭಾರತದಲ್ಲಿ ವಿದೇಶಿ ಪ್ರಕಟಣ ಸಂಸ್ಥೆಗಳು ಕೂಡ ತಮ್ಮ ಚಟುವಟಿಕೆ ಮಾಡುತ್ತಿವೆ.

ಬೇರೆ ಭಾಷೆಗಳ ಸಾಹಿತ್ಯ ಕೃಷಿಯೊಂದಿಗೆ ತುಲನೆ ಮಾಡಿ ನೋಡಿದಾಗ ಪ್ರಸಕ್ತ ಕನ್ನಡ ಸಾಹಿತ್ಯ ಚಟುವಟಿಕೆಗಳು ಹೇಗಿವೆ?
ಕನ್ನಡದಲ್ಲಿ ತುಂಬ ಉತ್ತಮ ಸಾಹಿತ್ಯ ಕೃಷಿ ನಡೆಯುತ್ತಿದೆ. ಹೊಸ ತಲೆಮಾರಿನವರು ತುಂಬ ಪ್ರತಿಭಾವಂತರಿದ್ದಾರೆ. ಹಳೆ ತಲೆಮಾರಿನವರು ಕೂಡ ಬರೆಯದೇ ಕುಳಿತಿಲ್ಲ. ಚಂದ್ರಶೇಖರ ಕಂಬಾರ, ಅನಂತಮೂರ್ತಿ ಈಗಲೂ ಬರೆಯುತ್ತಿದ್ದಾರೆ. ಹೀಗೆ ಅನೇಕ ಮಂದಿ ಹಿರಿಯ ಲೇಖಕರು ಬರೆಯುತ್ತಿದ್ದಾರೆ. ಹೊಸ ತಲೆಮಾರಿನ ಆರೀಫ್, ಅಂಕುರ್ ಬೆಟಗೇರಿ, ವಿಮರ್ಶಕರಾದ ಎಮ್ ಎಸ್ ಅಶಾದೇವಿ, ಕಥೆಗಾರರಾದ ವಿವೇಕ ಶಾನ್‌ಭಾಗ್, ಸತ್ಯನಾರಾಯಣ ಮುಂತಾದವರು ಬಹಳ ಚೆನ್ನಾಗಿ ಬರೆಯುತ್ತಿದ್ದಾರೆ. ಅದ್ದರಿಂದ ಹೆದರುವ ಅಗತ್ಯವಿಲ್ಲ.

ಪ್ರಸ್ತುತವಾಗಿ ಯಾವ ಭಾರತೀಯ ಭಾಷೆಯಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿದೆ?
ದೇಶದ ಎಲ್ಲ ಭಾಷೆಗಳಲ್ಲೂ ಉತ್ತಮ ಸಾಹಿತ್ಯ ಸೃಷ್ಠಿಯಾಗುತ್ತಿದೆ.


ಒಟ್ಟಾರೆ ಎಲ್ಲಾ ಭಾಷೆಗಳ ಸಾಹಿತ್ಯ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಉತ್ತೇಜನ ನಿಮಗೆ ತೃಪ್ತಿ ತಂದಿದೆಯೆ?
ಕೇಂದ್ರ ಸರ್ಕಾರ ಎಲ್ಲಾ ಭಾಷೆಗಳ ಸಾಹಿತ್ಯ ಚಟುವಟಿಕೆಗಳಿಗೆ ಯಾವುದೇ ರೀತಿಯ ಕೊರತೆ ಉಂಟು ಮಾಡಿಲ್ಲ. ಆ ಪ್ರೋತ್ಸಾಹ ಕೂಡ ಒಳ್ಳೆಯ ರೀತಿಯಲ್ಲಿ ಬಳಕೆಯಾಗುತ್ತಿದೆ. ಆದರೆ ನಮ್ಮದು ಬಹುದೊಡ್ಡ ದೇಶ. ಇಲ್ಲಿ ಅನೇಕ ಭಾಷೆಗಳಿವೆ. ಇಲ್ಲಿ ಒಂದು ಅಕಾಡೆಮಿಯಿಂದ ನಡೆಯುವ ಕಾರ್ಯಕ್ರಮ ಎಲ್ಲೆಲ್ಲೂ ಸಾಕಾಗುವುದಿಲ್ಲ. ಇದು ೫ ರಿಂದ ೧೦ ಪಟ್ಟು ಹೆಚ್ಚಾಗಬೇಕು. ಆದರೆ ಹೆಚ್ಚು ಮಾಡುವ ಪ್ರಮಾಣ ಯೋಜಿತ ರೀತಿಯಲ್ಲಿ ಆಗಬೇಕು. ಇಲ್ಲವೆಂದಾದರೆ ಎಲ್ಲವೂ ಕೈ ತಪ್ಪುವ ಸಾಧ್ಯತೆ ಇದೆ. ಭಾರತದಲ್ಲಿ ಸಾಹಿತ್ಯ ಅಕಾಡೆಮಿ ಅಂಗೀಕಾರ ಗೊಳಿಸಿದ ೨೪ ಭಾಷೆಗಳಲ್ಲದೆ ಇನ್ನೂ ಅನೇಕ ಭಾಷೆಗಳಿವೆ. ಅದರ ಸಾಹಿತ್ಯಕ್ಕಾಗಿ 'ಭಾಷಾ ಸಮ್ಮಾನ್' ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಮಕ್ಕಳ ಸಾಹಿತ್ಯ ರಚನೆಗಾಗಿ ೨೪ ಭಾಷೆಗಳಲ್ಲಿ 'ಬಾಲ ಸಾಹಿತ್ಯ ಪುರಸ್ಕಾರ'ವನ್ನು ಈ ವರ್ಷ ಪ್ರಾರಂಭಿಸಲಾಗಿದೆ. ಇನ್ನೂ ಕೆಲವೇ ತಿಂಗಳಲ್ಲಿ ಹೊಸದಾಗಿ ಯುವ ಲೇಖಕರಿಗೆ ಅಂದರೆ ೩೦ ವರ್ಷದೊಳಗಿನವರ ಪ್ರಥಮ ಕೃತಿಗೆ ರೂ. ೫೦,೦೦೦ ಬಹುಮಾನ ನೀಡಲಾಗುವುದು. ಇತರ ಚಟುವಟಿಕೆಗಳಾದ ವಿಚಾರ ಸಂಕಿರಣಗಳನ್ನು ಹೆಚ್ಚಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಯುವ ಸಾಹಿತಿಗಳಿಗೆ ನೀಡುವ ಪ್ರಶಸ್ತಿ ಯಾವ ಪ್ರಕಾರದ ಸಾಹಿತ್ಯಕ್ಕೆ ಸಲ್ಲಲಿದೆ?
ಈ ೨೪ ಭಾಷೆಗಳಲ್ಲಿ ಬರುವ ಯಾವುದೇ ಪ್ರಕಾರದ ಅತ್ಯುತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ನೀಡಲಾಗುವುದು. ಆದರೆ ಇದು ಆತನ ಪ್ರಥಮ ಕೃತಿಯಾಗಿರಬೇಕು ಅಷ್ಟೆ.

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಬ್ಲಾಗ್ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಈ ಬೆಳವಣಿಗೆಯನ್ನು ನೀವು ಹೇಗೆ ನೋಡುತ್ತೀರಿ?
ನಾನು ಇದನ್ನು ಒಳ್ಳೆಯದು ಮತ್ತು ಕೆಟ್ಟದು ಎಂಬ ಎರಡು ದೃಷ್ಟಿಯಿಂದ ನೋಡುತ್ತೇನೆ. ಒಳ್ಳೆಯದು ಹೇಗೆಂದರೆ ಒಳ್ಳೆಯ ಲೇಖಕರು ಕೂಡ ಬರೆಯುತ್ತಿದ್ದಾರೆ. ಆಸಕ್ತರು ಅದನ್ನು ಓದಬಹುದು. ಆದರೆ ಸಮಸ್ಯೆ ಏನೆಂದರೆ ಇಲ್ಲಿ ಮುಖರಹಿತ ಬರವಣಿಗೆಯಿದೆ. ಅದ್ದರಿಂದ ನೀವು ಏನು ಬೇಕಾದರೂ ಬರೆಯಬಹುದು, ಹೀನಾಮಾನವಾಗಿ ನಿಂದಿಸಬಹುದು, ಇದು ಒಬ್ಬ ಲೇಖಕನಿಗೆ ತಕ್ಕುದಲ್ಲ. ಲೇಖಕನಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನವಿದೆ. ಈ ಮುಖರಹಿತತೆ ಒಂದು ರಾಕ್ಷಸಿ ಗುಣ.ಆದರೆ ಇದರಿಂದ ಅಪಾಯವಿಲ್ಲ. ಅದೇನೇ ಇದ್ದರೂ ಇದು ಹೊಸ ತಂತ್ರದ ಜೊತೆ ಆಟ. ಹೊಸದೊಂದು ಬಂದಾಗ ಮನುಷ್ಯ ಅದರ ಜೊತೆ ಸ್ವಲ್ಪ ಸಮಯ ಆಡುವುದು ಸಾಮಾನ್ಯ.


ಸಾಹಿತ್ಯ ಆಕಾಡೆಮಿಯು ಭಾರತದ 24 ಭಾಷೆಗಳನ್ನು ಮಾತ್ರ ಅಧಿಕೃತವಾಗಿ ಬೆಂಬಲಿಸುತ್ತದೆ. ಆದರೆ ತುಳು ಮತ್ತು ಗೊಂಡಿಗಳಂತಹ ಅನೇಕ ಭಾಷೆಗಳನ್ನು ಜನ ದೊಡ್ಡ ಪ್ರಮಾಣದಲ್ಲಿ ಆಡುತ್ತಿದ್ದಾರೆ ಹಾಗೂ ಆ ಭಾಷೆಯಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಯೂ ಆಗುತ್ತಿದೆ. ಆದರೂ ಅವುಗಳನ್ನು ಅಕಾಡೆಮಿಯು ಹೊರಗಿಟ್ಟಿರುವುದು ಅನ್ಯಾಯವಲ್ಲವೆ?
ಇಲ್ಲ, ಆ ಭಾಷೆಗಳಲ್ಲಿನ ಸಾಹಿತ್ಯಕ್ಕೆ ನಾವು ಭಾಷಾ ಸಮ್ಮಾನ್ ಪ್ರಶಸ್ತಿ ನೀಡುತ್ತಿದ್ದೇವೆ. ಆ ಭಾಷೆಗಳಲ್ಲಿನ ಪರಿಣತರು ಕೃತಿಗಳ ಮೌಲ್ಯ ಮಾಪನ ಮಾಡಿ ಪ್ರಶಸ್ತಿಗೆ ಆರ್ಹವಾದ ಕೃತಿಯನ್ನು ಆಯ್ಕೆಮಾಡುತ್ತಾರೆ. ಈ ಹಿಂದೆ ಪ್ರತಿ ವರ್ಷ ೨ ಭಾಷಾ  ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿತ್ತು, ಈಗ ೬ ಭಾಷೆಗಳಿಗೆ ನೀಡುತ್ತಿದ್ದೇವೆ. ಮುಂದೆ ಇದು ಜಾಸ್ತಿಯಾಗಬಹುದು.


ಭವಿಷ್ಯದಲ್ಲಿ ಉಳಿದ ಭಾಷೆಗಳನ್ನು ಸೇರಿಸುವ ನಿರ್ದಿಷ್ಟ ಯೋಚನೆ ಮತ್ತು ಯೋಜನೆಗಳೇನಾದರೂ ಇವೆಯೆ?
ಸದ್ಯಕ್ಕೆ ಇಲ್ಲ. ಆದರೆ ಭಾಷೆಗಳ ವಿಷಯದಲ್ಲಿ ಅಕಾಡೆಮಿ ತುಂಬಾ ಉದಾರವಿದೆ.

ಸಾಹಿತ್ಯ ಅಕಾಡೆಮಿಯ ದ್ವಿಮಾಸಿಕ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬರುತ್ತಿದೆ. ಇದೂ ಒಂದು ರೀತಿಯಲ್ಲಿ ಇತರ ಭಾಷೆಗಳ ಮೇಲೆ ಹಿಂದಿ-ಇಂಗ್ಲಿಷ್‌ನ ಆಧಿಪತ್ಯ ಅಲ್ಲವೆ?
ನಮಗೆ ಇತರ ಭಾಷೆಗಳಲ್ಲಿ ಮಾಡಬಹುದು. ಆದರೆ ಅದನ್ನು ೨೪ ಭಾಷೆಗಳಲ್ಲಿ ಮಾಡಬೇಕಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿಗೆ ಭಾಷೆಗೆ ಸಮರ್ಥ ಸಂಪಾದಕರನ್ನು ಹುಡುಕುವುದೇ ನಮಗೆ ಕಷ್ಟವಾಗಿದೆ. ಈಗ ಇಂಗ್ಲೀಷ್ ಸಂಪರ್ಕ ಭಾಷೆಯಾಗುತ್ತಿದ್ದು ಹಿಂದಿ ಕೂಡ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದ್ದರಿಂದ ನಾವು ಈ ಎರಡು ಭಾಷೆಗಳಲ್ಲಿ ನಮ್ಮ ದ್ವಿಮಾಸಿಕವನ್ನು ಹೊರತರುತ್ತಿದ್ದೇವೆ.
ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿರುವ ೭೭ನೇ ಸಾಹಿತ್ಯ ಸಮ್ಮೇಳನಕ್ಕೆ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆಯ್ಕೆ ಸರಿಯಾಗಿದೆ ಅನ್ನಿಸುತ್ತದೆಯೇ ಅಥವಾ ನಿರ್ದಿಷ್ಟವಾಗಿ ಇಂಥವರು ಆಗಬೇಕಿತ್ತು ಅಂತ ಏನಾದರೂ ಅನ್ನಿಸುತ್ತಿದೆಯೆ?
ಅದು ಅತ್ಯಂತ ಪ್ರತಿಷ್ಠಿತ ಸ್ಥಾನ. ಜಿ. ವೆಂಕಟಸುಬ್ಬಯ್ಯ ಕನ್ನಡಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ, ಹಿರಿಯರಿದ್ದಾರೆ. ಅವರಿಗೆ ದೊರೆತ ಸ್ಥಾನಮಾನದ ಬಗ್ಗೆ ಕೊಂಕು ಮಾತನಾಡುವುದು ಅರಿಯಲ್ಲ.

ಈ ಸಮ್ಮೇಳನಗಳಿಂದ ಪ್ರಯೋಜನವಿದೆಯಾ?
ಪ್ರಯೋಜನವಾಗಬೇಕು ಎಂಬುದು ಸಂಘಟಕರ ಉದ್ದೇಶ. ಸಾಹಿತ್ಯ ಸಮ್ಮೇಳನದ ಆರಂಭದಲ್ಲಿ ಅಂದರೆ ಸುಮಾರು ೭೫ ವರ್ಷಗಳ ಹಿಂದೆ ಈ ಸಮ್ಮೇಳನದಿಂದ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವುದು, ಕರ್ನಾಟಕದ ಏಕೀಕರಣ ಮಾಡುವ ಉದ್ದೇಶಹೊಂದಲಾಗಿತ್ತು, ಅದರೆ ಒಂದೊಂದು ಕಾಲಕ್ಕೂ ಯಾವುದೇ ಭಾಷೆಗೆ, ಸಂಸ್ಕೃತಿಗೆ ಆ ಕಾಲಕ್ಕೆ ತಕ್ಕ ಆಗತ್ಯವಿರುತ್ತದೆ. ಈಗ ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಮುಂದಿರುವ ಹೊಸ ಸವಾಲುಗಳೇನು, ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ ಹೇಗೆ, ಕನ್ನಡದಲ್ಲಿ ಸಂಪರ್ಕ ಕ್ರ್ರಾಂತಿಯ ಬಗ್ಗೆ ಚರ್ಚೆಯಾಗಬೇಕು. ಆ ನಿಟ್ಟಿನಲ್ಲಿ ಸಮ್ಮೇಳನವನ್ನು ಸಂಘಟಿಸಬೇಕು.  

ನಿಮ್ಮ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ/ಸಾಹಿತಿ ಯಾರು?
ನನ್ನ ಮೇಲೆ ಹಲವಾರು ಪ್ರಭಾವಗಳಾಗಿವೆ. ಒಂದು ಬಾಲ್ಯದಲ್ಲಿ ನಾನು ಓದುತ್ತಿದ್ದ ಕೃತಿಗಳು. ಅದರಲ್ಲೂ ವಯಸ್ಕರ ಶಿಕ್ಷಣ ಸಂಸ್ಥೆಯವರು ಹೊರತರುತ್ತಿದ್ದ ಬೆಳಕು ಎಂಬ ಮ್ಯಾಗಜೀನ್ ನನ್ನ ಮೇಲೆ ಪ್ರಭಾವ ಬೀರಿದೆ. ಅದರಲ್ಲಿ ಬರುತ್ತಿದ್ದ ಗೊರೂರು ರಾಮಸ್ವಾಮಿ ಆಯ್ಯಂಗರ್‌ರ ಬರಹ, ಇನ್ನೀತರ ಬರಹಗಳು ನನ್ನ ಮೇಲೆ ಪ್ರಭಾವ ಬೀರಿವೆ. ಕುವೆಂಪುರ ಬರಹಗಳು, ಜನಪದ ಸಾಹಿತ್ಯ, ಡಿವಿಜಿಯವರ ಕೃತಿ, ಕೆಎಸ್‌ನರ ಮೈಸೂರು ಮಲ್ಲಿಗೆ ನನ್ನ ಮೇಲೆ ಪ್ರಭಾವ ಬೀರಿದೆ. ನಾವು ಕಾಲೇಜ್‌ಗೆ ಬಂದಾಗ ನವ್ಯ ಸಾಹಿತ್ಯ ಅತ್ಯುನ್ನತ ಹಂತದಲ್ಲಿತ್ತು. ಆಗ ಗೋಪಾಲಕೃಷ್ಣ ಅಡಿಗ, ಲಂಕೇಶ್‌ರ ಪ್ರಭಾವ ಹಾಗಿದೆ.

ಈ ಕಾರ್ಯದರ್ಶಿ ಹುದ್ದೆಯಿಂದ ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಏನಾದರೂ ಪ್ರಯೋಜನ ಆಗಿದೆಯೆ?
ಇದು ಬಹಳ ಮುಖ್ಯವಾದ ಹುದ್ದೆ, ಅಪರೂಪದ ಹುದ್ದೆ. ಇದು ಸಿಕ್ಕಿದ್ದರಿಂದ ಕರ್ನಾಟಕದ ಮಟ್ಟಿಗಿದ್ದ ನಾನು ದೇಶದ ಅನೇಕ ಭಾಷೆಗಳ ಲೇಖಕರನ್ನು ಭೇಟಿಯಾಗುವಂತಾಯಿತು, ಅನೇಕ ಸ್ಥಳಗಳಿಗೆ ಹೋಗುವಂತಾಯಿತು. ಇದನ್ನು ನಾನು ಗಳಿಕೆ ಎಂದೇ ಭಾವಿಸುತ್ತೇನೆ.

ಭಾರತೀಯ ಭಾಷೆಗಳ ನಡುವಿನ ಕೊಡು ಕೊಳ್ಳುವಿಕೆಗೆ, ಅಂದರೆ ಒಳ್ಳೆಯ ಕೃತಿಗಳ ಭಾಷಾಂತರಕ್ಕೆ ಪ್ರೋತ್ಸಾಹ ನೀಡಲು ಅಕಾಡೆಮಿ ಏನಾದರೂ ಕ್ರಮ ಕೈಗೊಂಡಿದೆಯೇ?
ಭಾಷಾಂತರಕ್ಕೆ ಪ್ರೋತ್ಸಾಹ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಇದು ಇನ್ನೂ ಹೆಚ್ಚಾಗಬೇಕು. ಅದು ಹೆಚ್ಚಾದಷ್ಟು ಒಳ್ಳೆಯದಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಎಲ್ಲ ಕೃತಿಗಳು ದೇಶದ ಎಲ್ಲ ಭಾಷೆಗಳಿಗೂ ಅನುವಾದ ಆಗಬೇಕು. ಅದು ನಡೆಯುತ್ತಿದೆ. ಇಂದು ದೇಶದ ಅನೇಕ ಪ್ರಕಟನ ಸಂಸ್ಥೆಗಳು ಅನುವಾದದಲ್ಲಿ ತೊಡಗಿದೆ. ೬ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾಷಾಂತರವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಟ್ರಾನ್ಸ್‌ಲೇಷನ್ ಮಿಷನ್ ಸ್ಥಾಪನೆಯಾಗಿದ್ದು ಅದಕ್ಕೆ ಸಾಕಷ್ಟು ಹಣ ಬಿಡುಗಡೆಯಾಗಿದೆ.

ಕರ್ನಾಟಕದ ಹದಗೆಟ್ಟ ರಾಜಕಾರಣವನ್ನು ನೋಡುತ್ತಿದ್ದೀರಿ. ಇದಕ್ಕೆ ಪರಿಹಾರ ಅಂತಿಲ್ಲವೆ?
ಪ್ರಜಾಸತ್ತಾತ್ಮಕವಾಗಿ ಹೇಳುವುದಾದರೆ ಮುಂದಿನ ಚುನಾವಣೆಯೇ ಇದಕ್ಕೆ ಪರಿಹಾರ. ಪ್ರತಿ ಸರ್ಕಾರದಲ್ಲೂ ಯಾವುದೇ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಆಡಳಿತ ಪಕ್ಷಕ್ಕೆ ಎಷ್ಟಿರುತ್ತದೆಯೋ ಅದರ ೧೦ ಪಟ್ಟಿನಷ್ಟು ವಿರೋಧ ಪಕ್ಷಕ್ಕಿರುತ್ತದೆ. ರಾಜ್ಯದಲ್ಲಿ ಇಂಥಹ ಗೊಂದಲ ಸೃಷ್ಠಿಯಾಗಲೂ ವಿರೋಧ ಪಕ್ಷಗಳೇ ಕಾರಣ ಹಾಗೆಂದು ನಾನು ಆಡಳಿತ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ತಿಳಿದುಕೊಳ್ಳಬಾರದು.

ಆದರೆ ಈಗ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳಲ್ಲೂ ಕೆಲ ಸ್ಥಾಪಿತ ಹಿತಾಸಕ್ತಿಗಳಿವೆ ಅದ್ದರಿಂದ ಮುಂದಿನ ಚುನಾವಣೆ ರಾಜ್ಯದ ಅರಾಜಕತೆಗೆ ಪರಿಹಾರವಾಗಬಹುದೇ? ಬೇರೆ ಪರ್ಯಾಯ ರಾಜಕೀಯ ಚೌಕಟ್ಟಿನ ಅವಶ್ಯಕತೆ ಇದೆ ಅನ್ನಿಸುತ್ತದೆಯೆ?
ಇದು ಹೊಸಕಾಲದ ರಾಜಕಾರಣವನ್ನು ಸೂಚಿಸುತ್ತದೆ. ನೀವು ಪಕ್ಷ ಸ್ಥಾಪಿಸಿ ೩ ಜನ ಶಾಸಕರನ್ನು ಇಟ್ಟುಕೊಂಡು ಅವರನ್ನು ಆಯಕಟ್ಟಿನ ಸಂದರ್ಭದಲ್ಲಿ ಬಳಸಿಕೊಂಡರೆ ಸಾಕು. ಜನರೇ ತಮ್ಮ ಅನುಭವದ ಮೂಲಕ ಇದಕ್ಕೆ ಪರಿಹಾರ ಸೂಚಿಸಬಲ್ಲರು ಎಂಬುದು ನನ್ನ ಅನಿಸಿಕೆ.


ಒಬಾಮಾರ ಭಾರತ ಭೇಟಿಯಿಂದ ದೇಶಕ್ಕೇನಾದರೂ ಲಾಭವಿದೆಯೇ?
ನಮ್ಮ ದೇಶ ಇಂದು ಅತ್ಯಂತ ಪ್ರಮುಖ ರಾಷ್ಟವಾಗಿದೆ. ಇಂತಹ ದೇಶವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ನಡುವೆ ಕೂಡ ನಾವು ಅರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದೇವೆ. ಇದು ಒಂದು ವೈರುಧ್ಯ. ಆದರೆ ಎಲ್ಲ ಅಭಿವೃಧಿ ಹೊಂದುತ್ತಿರುವ ರಾಷ್ಟರಗಳಲ್ಲಿ ಈ ಸಮಸ್ಯೆ ಇದೆ. ಒಬಾಮಾರ ಭಾರತ ಭೇಟಿ ನಮ್ಮ ದೇಶದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.


ಕನ್ನಡ ಅನ್ನ ಕೊಡುವ ಭಾಷೆಯಾಗಬಹುದೇ?
ಅನ್ನ ಕೊಡುವ ಭಾಷೆಯಾಗಬೇಕು ಎಂಬುದು ನಮ್ಮ ಅಶಯ. ಹಾಗೆ ಆದರೆ ಅದು ಮಾದರಿ ರಾಜ್ಯ. ಆದರೆ ವಾಸ್ತವ ಹಾಗಿಲ್ಲ. ಇದಕ್ಕೆ ಜಾಗತಿಕ ಪ್ರಭಾವ, ದೇಶದ ಪ್ರಭಾವ ಅಥವಾ ರಾಜಕಾರಣಿಗಳ ಸಂಕಲ್ಪ ಹೀನತೆ ಕಾರಣವಾಗಿರಬಹುದು. ನಾವು ತಮಿಳಿನಿಂದ ಪಾಠ ಕಲಿಯಬೇಕು. ತಮಿಳು ತನ್ನ ಅಸ್ಮಿತೆಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ, ಅದು ಭಾಷೆ, ಸಂಸ್ಕೃತಿ, ಮತ್ತು ರಾಷ್ಟ್ರರಾಜಕಾರಣದಲ್ಲಿ ತನ್ನತನವನ್ನು ಉಳಿಸಿಕೊಂಡಿದೆ. ಆದರೆ ನಮ್ಮಲ್ಲಿ ಅನೇಕರು ತಮಿಳನ್ನು ದ್ವೇಷಿಸುತ್ತಾರೆ, ತಮಿಳುನಾಡನ್ನು ಪರ ರಾಷ್ಟ್ರ ಎಂದು ಭಾವಿಸುತ್ತಾರೆ. ಆ ಭಾವನೆಯನ್ನು ನಾವು ಕಳೆದುಕೊಂಡದಷ್ಟು ಒಳ್ಳೆಯದು.

Wednesday, November 17, 2010

ಸಿದ್ಧವಾಗಬೇಕಿದೆ!

ಬೆಳಕಿಲ್ಲ
ರಸ್ತೆಯಿಲ್ಲ
ಮನೆಯಿಲ್ಲ
ಬಟ್ಟೆಯಿಲ್ಲ
ಅದು ಇಲ್ಲ, ಇದು ಇಲ್ಲ
ಒಟ್ಟಿನಲ್ಲಿ ಏನೂ ಇಲ್ಲ
ದೇಶ ಉದ್ಧಾರವಾಗಿಲ್ಲ, ಆಗೋದು ಇಲ್ಲ.

ಬೆಳಕಿತ್ತು ಮನೆ ಮನದಲ್ಲಿ
ದಾರಿಯಿತ್ತು ಹೃದಯದಲ್ಲಿ
ಗೂಡಿತ್ತು ಮಾನವೀಯತೆಯ
ನೆಲೆಯಲ್ಲಿ
ಹೊದಿಕೆಯಿತ್ತು ಪ್ರೀತಿಯ
ಸ್ಪರ್ಶದಲ್ಲಿ
ಅದೂ ಭಾರತ, ಇದೂ ಭಾರತವೇ!

ಇತಿಹಾಸ ಕಣ್ಣು ಬಿಡೋ ಮೊದಲು
ನಾವು ಏರಿದ್ದೇವು ನಾಗರಿಕತೆಯ
ತುತ್ತತುದಿಗೆ
ಬಲಿಬಿದ್ದೆವು ಅನಂತರ
ಕಣ್ಣು ಬಿಟ್ಟವರ ತುತ್ತೂರಿಗೆ
ಹೊಟ್ಟೆ ಉರಿಗೆ.

ಕುರಿಮಂದೆ ಮುಂದೆ, ಆಡು ಹಿಂದೆ
ವಿಧಿವಿಲಾಸ ವಿಪರೀತ
ಕನಸುಗಳಿಗೆ ಗರ್ಭಪಾತ
ಕುಸಿದು ಕುಳಿತಿದೆ ಭಾರತ
ಹೆಮ್ಮೆಯ ಮಗ ಹುಟ್ಟಬಹುದೆಂದು
ವಂಶೋದ್ಧಾರಕ ಬೇಡ ದೇಶ ಉದ್ಧಾರಕ ಬೇಕೆಂದು

ಏನಾಯಿತು, ಆ ಪರಂಪರೆಗೆ?
ದ್ವೇಷ ಬೋಧಿಸದ ಆ ಸಂಸ್ಕ್ರತಿಗೆ?
ಬಿಸಿ ರಕ್ತ, ಹೀರಿಕೊಳ್ಳುತ್ತಿಲ್ಲ
ತನ್ನೊಳಗಿನ ಸತ್ವವನ್ನು
ಅರಿತುಕೊಳ್ಳುತ್ತಿಲ್ಲ
ರಕ್ತದೊಳಗಿನ ತತ್ವವನ್ನು

ನೋಡುತ್ತಿದೆ ಯುವ ಮನ
ಅತ್ತ, ಅವರತ್ತ... ಅಗೋ
ಅವರದ್ದೆ... ಅತ್ತ... ಬಂದವರತ್ತ...

ಮಣ್ಣಿನಿಂದ ಹೀರುವ ಬದಲು
ಆಕಾಶದಿಂದ ಹೀರುವ ಕೆಲಸ
ಮಣ್ಣುಪಾಲಾಯಿತು ಕಳಸ
ಅಮೃತವೇ ಇಲ್ಲಿ ಕಾಲ ಕಸ.

ಬರುತ್ತಾರೆ ಅವರು ಹಿಂಬಾಗಿಲಿನಿಂದ
ಹೋಗುತ್ತಾರೆ ಮುಂಬಾಗಿಲಿನಿಂದ
ಮನೆಮಗ ಹೋರಾಡುತ್ತಿದ್ದಾನೆ,
ಬಡಿದಾಡುತ್ತಿದ್ದಾನೆ, ಬಾಗುತ್ತಿದ್ದಾನೆ,
ಸೋತು ಸುಣ್ಣವಾಗಿದ್ದಾನೆ ಅವರಿಂದ
ಅಲ್ಲ.... ತನ್ನವರಿಂದ!

ಬೇಕು... ಬದಲಾಗಬೇಕು
ಅಲ್ಲಿಂದ... ಇಲ್ಲಿಂದ... ಎಲ್ಲಿಂದ?
ನಮ್ಮೋಳಗಿನಿಂದ... ನಿಮ್ಮೊಳಗಿನ  
ತನಕ...
ನನ್ನತನ ಹೋಗಿ ನಮ್ಮತನ
ಬರೋ ತನಕ...
ಭಾರತ ಮತ್ತೊಮ್ಮೆ ಪುಟಿದೆದ್ದು
ಬಂದು ಬನ್ನಿ, ಸೋದರರೇ, ಒಟ್ಟಾಗಿ ಬಾಳೋಣ...
ಒಟ್ಟಾಗಿ ಸಾಗೋಣ.. ಎಂದು ಧೈರ್ಯದಿಂದ
ಜಗಕ್ಕೆ ಹೇಳೋ ತನಕ....

ನಮ್ಮ ಮನದ ಬೆಳಕು ಸಾಕು
ವಿದ್ಯುತ್ತಿನ ಆ ಬೆಳಕು ಯಾಕೆ ಬೇಕು?
ಎಂದು ತೋರಿಸುತ್ತೇವೆ
ಒಂದು ದಿನ
ಅಂದೇ
ಜಗದ ಪುನರುತ್ಥಾನ
ಕೊಳ್ಳುಬಾಕನ ಅವಸಾನ

ನಿಲ್ಲುತ್ತದೆ... ಎದ್ದು
ನಿಲ್ಲುತ್ತದೆ... ಗೆದ್ದು ಸಾಗುತ್ತದೆ
ಭಾರತ... ಕಾಯಬೇಕು
ಅಷ್ಟರವರೆಗೆ ಕಾಯಿಸಬೇಕು

ಯಾಕೆಂದರೆ
ನಮ್ಮ ಯುವಜನಾಂಗ ಇನ್ನೂ
ಸಿದ್ಧವಾಗಬೇಕಿದೆ!

Saturday, November 13, 2010

ಬೌಲಿಂಗ್ ಕಲಿಗಳ ಬ್ಯಾಲೆಟ್ ಕದನ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಇದೀಗ ಮತ್ತೊಂದು ಮನ್ವಂತರದ ಪರ್ವಕಾಲ ಬಂದಿದೆ. ಹೊಸ ನೀರು ಹರಿದು ವರ್ಷಗಳಿಂದ ನಿಂತಿರುವ ಕೊಳಚೆಯನ್ನೆಲ್ಲ ದೂರ ಸಾಗಿಸಲೇಬೇಕಾದ ಸಮಯವಿದು. ಈ ಸುಸಂದರ್ಭಕ್ಕೆ ಸೆಪ್ಟೆಂಬರ್ ೨೧ರ ಮೂಹೂರ್ತ ನಿಗದಿಯಾಗಿದ್ದು ಕ್ರಿಕೆಟ್ ಲೋಕದ ಅತಿರಥ ಮಹಾರಥರು ಈ `ಶುದ್ಧೀಕರಣ ಕ್ರಿಯೆ'ಯ ನೇತೃತ್ವ ವಹಿಸಿದ್ದಾರೆ.
ಕೆಎಸ್‌ಸಿಎಗೆ ಸುಮಾರು ೮೦ ವರ್ಷಗಳ ಪೊಗದಸ್ತಾದ ಇತಿಹಾಸವಿದೆ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆಯ (ಬಿಸಿಸಿಐ) ಅಧೀನದಲ್ಲಿರುವ ಕ್ರಿಕೆಟ್ ಸಂಸ್ಥೆಗಳಲ್ಲೇ 'ಶ್ರೀಮಂತ' ಸಂಸ್ಥೆ. ಆದರೆ ಈ ಶ್ರ್ರೀಮಂತಿಕೆ ಸಲ್ಲದ ಕಾರಣಗಳಿಗೆ ಬಳಕೆಯಾಗುತ್ತಾ ಹಣ ಕಂಡಲ್ಲಿ ಸುಳಿದಾಡುವ ರಾಜಕೀಯದ ಕೆಟ್ಟ ಚದುರಂಗದಾಟಕ್ಕೆ ಆಹಾರವಾಯಿತೇ ಹೊರತು ರಾಜ್ಯದ ಕ್ರಿಕೆಟ್ ಅಭಿವೃದ್ಧಿಗೆ ಚಿಕ್ಕಾಸು ಪ್ರಯೋಜನವಾಗದೇ ಹೋದದ್ದು ದುರಂತ. ಇಂದು ರಾಜ್ಯದ ಕ್ರಿಕೆಟ್ ಬಿಪಿಎಲ್ ರೇಖೆಗಿಂತ ಕೆಳಗಿದ್ದರೆ ಕೆಎಸ್‌ಸಿಎ ಕೆಪಿಎಲ್ ಎಂಬ ಹಣದ ಚುಂಗನ್ನು ಎಳೆಯುತ್ತ 'ಇದೇ ರಾಜ್ಯದ ಕ್ರಿಕೆಟ್ ಅಭಿವೃದ್ಧಿ' ಎಂಬಂತೆ ಜನರ ಕಿವಿಯಲ್ಲಿ ಹೂವು ಇಡಲು ಪ್ರಯತ್ನಿಸುತ್ತಿದೆ. ಈ ಸಲವಂತೂ ಕೆಪಿಎಲ್ ಕೂಡ ಬೋರಲಾಗಿ ಬಿದ್ದಿದೆ. ಇವರನ್ನು ಹೀಗೆ ಬಿಟ್ಟರೇ ರಾಜ್ಯದ ಕ್ರಿಕೆಟ್ ಹೆಳ ಹೆಸರಿಲ್ಲದೇ ಹೋಗುತ್ತದೆ ಎಂದು ಅರಿತು ಸಜ್ಜನ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಕರ್ನಾಟಕ ಕ್ರಿಕೆಟ್‌ನ ಹಿತರಕ್ಷಣೆಗಾಗಿ ಮೈದಾನದ ಹೊರಗಿನ ಮಹಾ ಕದನಕ್ಕೆ ಧುಮುಕಿದ್ದಾರೆ. 
ಅದು ೧೯೯೮ನೇ ಇಸವಿ. ಅಂದರೆ ೧೨ ವರ್ಷಗಳ ಹಿಂದಿನ ಮಾತು. ಕರ್ನಾಟಕದ ಕ್ರಿಕೆಟ್‌ನ ಸುವರ್ಣ ದಿನಗಳ ಪುಟ ಒಂದೊಂದಾಗಿ ಸರಿಯುತ್ತಿತ್ತು. ಅಂದು ಕೆ. ಎಮ್. ರಾಮ್‌ಪ್ರಸಾದ್ ಕೆಎಸ್‌ಸಿಎದ ನೂತನ ಅಧ್ಯಕ್ಷರಾಗಿ ಮತ್ತು ಬ್ರಿಜೇಶ್ ಪಟೇಲ್ ಕೆಎಸ್‌ಸಿಎಯ ನೂತನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದರು. ಅಂದಿನಿಂದ ಇಂದಿನವರೆಗಿನ ೧೨ ವರ್ಷಗಳ ಕಾಲ ಕೆಎಸ್‌ಸಿಎಯಲ್ಲಿದದ್ದು `ಪಟೇಲ್‌ಗಿರಿ'. ಬ್ರಿಜೇಶ್ ಈ ಹುದ್ದೆ ಪಡೆಯಲು ಅದಕ್ಕಿಂತ ಹಿಂದೆ ೨೦ ವರ್ಷಗಳ ಕಾಲ ಕಾರ್ಯದರ್ಶಿ ಆಗಿದ್ದ ಸಿ. ನಾಗರಾಜ್‌ರನ್ನು ಮಣಿಸಿದ್ದರು. ಸಿ. ನಾಗರಾಜ್‌ಗಿಂತ ಮುಂಚಿತವಾಗಿ ಎಮ್. ಚಿನ್ನಸ್ವಾಮಿ ಬರೊಬ್ಬರಿ ೨೫ ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಅನಂತರ ಅವರು ಅಧ್ಯಕ್ಷರಾಗಿ ೧೯೭೮ರಿಂದ ೧೯೯೦ರವರೆಗೆ ಕೆಎಸ್‌ಸಿಎಯ ಜುಟ್ಟು ಹಿಡಿದುಕೊಂಡಿದ್ದರು. ಆಮೇಲೆ ೧೯೯೦ರಲ್ಲಿ ಡಾ. ಕೆ. ತಿಮ್ಮಪ್ಪಯ್ಯ (ರಣಜಿಯಲ್ಲಿ ಕರ್ನಾಟಕದ ಪರ ಪ್ರಪ್ರಥಮ ಶತಕ ಬಾರಿಸಿದವರು) ಕೆಎಸ್‌ಸಿಎಯ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.
೧೯೯೮ರ ಕೆಎಸ್‌ಸಿಎಯ ಗೆಲುವು ಕೇವಲ ಬ್ರಿಜೇಶ್ ಪಟೇಲ್‌ರ ಗೆಲುವಾಗಿರದೇ ಕ್ರಿಕೆಟಿಗರ ಗೆಲುವು ಅಗಿತ್ತು. ಅಂದು ಬ್ರಿಜೇಶ್ ಮಾಜಿ ಕ್ರಿಕೆಟಿಗರಾದ ಮತ್ತು ತಮ್ಮ ಡ್ರೆಸ್ಸಿಂಗ್ ರೂಮ್‌ಮೇಟ್‌ಗಳಾದ ಜಿ. ಆರ್. ವಿಶ್ವನಾಥ್, ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ, ಸುಧಾಕರ್ ರಾವ್ ಮತ್ತು ಅಭಿರಾಮ್ ಜೊತೆ ಸೇರಿ ಈ ಹುದ್ದೆಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಇಂದು ಇದೇ ತಂತ್ರವನ್ನು ಅವರ ಮೇಲೆಯೇ ಗೂಗ್ಲಿಯ ರೀತಿಯಲ್ಲಿ ಅನಿಲ್ ಕುಂಬ್ಳೆ ಬಳಸಿದ್ದಾರೆ. ಈ 'ಜಂಬೋ' ತಂತ್ರಗಾರಿಕೆಗೆ ಕಕ್ಕಾಬಿಕ್ಕಿಯಾಗಿರುವ ಬ್ರಿಜೇಶ್ ಪಡೆ ಬ್ಯಾಟ್ ಕೂಡ ಎತ್ತದೇ ಸೋಲೊಪ್ಪಿಕೊಂಡಿತು. ಆದರೆ ಹಿಂಬಾಗಿಲ ಮೂಲಕ ಕುಂಬ್ಳೆ ಬಣವನ್ನೇ ಹೈಜಾಕ್ ಮಾಡುವಲ್ಲಿ ಅದು ಯಶಸ್ವಿಯಾಗಿದೆ.
ಕಳೆದ ೧೦ ವರ್ಷಗಳಲ್ಲಿ ಕರ್ನಾಟಕ ಕ್ರಿಕೆಟ್‌ಗೆ ಒಂದು ರೀತಿಯಲ್ಲಿ ಗ್ರಹಣ ಬಡಿದಂತಾಗಿತ್ತು. ಇದಕ್ಕೆ ಬ್ರಿಜೇಶ್ ಪಟೇಲ್ ಒಬ್ಬರೇ ಕಾರಣ ಎಂದರೆ ತಪ್ಪಾದೀತು. ಆದರೆ ಅವರ ಪಾಲಿನ ಕೊಡುಗೆಯಂತೂ ಇದೆ. ಕಳೆದ ದಶಕದಲ್ಲಿನ ಕರ್ನಾಟಕದ ರಣಜಿ ಸಾಧನೆಯೇ ಒಂದು ನಿರಾಶಪರ್ವ. ಕಳೆದ ವರ್ಷ ರಣಜಿ ಫೈನಲ್ ತಲುಪಿದ್ದೆ ಮಹಾಸಾಧನೆ ಉಳಿದಂತೆ ಬರಿ ವೇದನೆ. ಇನ್ನೂ ೨೦೦೦ನೇ ಇಸವಿಗಿಂತ ಹಿಂದೆ ರಣಜಿ ಕ್ರಿಕೆಟಿಗೆ ಪಾದಾರ್ಪಣೆ ಮಾಡಿ, ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದ ರಾಜ್ಯದ ಕಲಿಗಳನ್ನು ಹೊರತುಪಡಿಸಿದರೆ ರಾಜ್ಯದ ಮತ್ತೊಬ್ಬ ಕ್ರಿಕೆಟಿಗ `ಟೀಮ್ ಇಂಡಿಯಾ'ದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿಲ್ಲ. ಇದಕ್ಕೆ ಆಟಗಾರರ ಪ್ರದರ್ಶನ ಕಾರಣವಾಗಿರಬಹುದು; ಇದಕ್ಕೂ ಕೆಎಸ್‌ಸಿಎಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಆದರೆ ಇದನ್ನು ಕೆಎಸ್‌ಸಿಎ ಒಂದು ಸಮಸ್ಯೆ ಎಂದು ಪರಿಗಣಿಸಿದೆಯೇ? ಪರಿಗಣಿಸಿದ್ದರೆ, ಅದನ್ನು ಪರಿಹರಿಸಲು ಏನು ಕ್ರಮ ಕೈಗೊಂಡಿದೆ?
ಕೇವಲ ಮೂರು ನಾಲ್ಕು ವರ್ಷಗಳ ಹಿಂದೆ ರಾಜ್ಯದ ೬ - ೭ ಮಂದಿ ಕ್ರಿಕೆಟಿಗರು ದೇಶವನ್ನು ಪ್ರತಿನಿಧಿಸುತ್ತಿದ್ದರು. ಈಗ ತಂಡದಲ್ಲಿರುವುದು ಹಳೆ ಹುಲಿಗಳು ಮಾತ್ರ ಅವರ ನಿವೃತ್ತಿಯ ನಂತರ ರಾಜ್ಯದ ಯಾವೊಬ್ಬ ಆಟಗಾರ ಕೂಡ ಭಾರತ ತಂಡದಲ್ಲಿ ಶಾಶ್ವತ ಸ್ಥಾನ ಪಡೆಯದೇ ಹೋದರೆ ಅದು ರಾಜ್ಯಕ್ಕಾಗುವ ಅವಮಾನ ಎಂದು ಕೆಎಸ್‌ಸಿಎ ಆಗ ಯೋಚಿಸಲಿಲ್ಲ. ಅದು ಕ್ರಿಕೆಟ್ ಅನ್ನು ಶ್ರೀಮಂತಗೊಳಿಸುವ ಬದಲಾಗಿ ಕ್ರಿಕೆಟ್ ಸಂಸ್ಥೆಯನ್ನು ಶ್ರೀಮಂತಗೊಳಿಸ ಹೊರಟಿತು.
ಇಂದು ಪಟೇಲ್ ಬಣಕ್ಕೆ ಎದುರಾಳಿ ಆಗಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ರ ಬಣ ಕೂಡ ರಾಜ್ಯದ ಕ್ರಿಕೆಟ್‌ನ ಅಭ್ಯುದಯಕ್ಕೆ ದುಡಿಯುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಕಳೆದ ಅವಧಿಯಲ್ಲಿ ಒಡೆಯರ್ ಅಧ್ಯಕ್ಷರಾಗಿದ್ದರು. ಅವರು ಕಡಿದು ಕಟ್ಟೆ ಹಾಕಿರುವುದು ಅಷ್ಟರಲ್ಲೇ ಇದೆ. ಇನ್ನೂ ನಾವು ಸುಮ್ಮನಿದ್ದರೆ ಈ ಎರಡು ಮದಗಜಗಳ ಕಾದಾಟದಲ್ಲಿ ಸಿಕ್ಕ ಬಾಳೆ ಗಿಡದ ಪರಿಸ್ಥಿತಿ ರಾಜ್ಯ ಕ್ರಿಕೆಟ್‌ಗೆ ಬರುತ್ತದೆ ಎಂದರಿತ ತಾವೇ ಅದರ ರಕ್ಷಣೆಗೆ ಮುಂದಾಗಿರುವುದು ಸಮಯೋಚಿತ. ಆದರೆ ಕೊನೆ ಕ್ಷಣದಲ್ಲಿ ಇವರು ಬ್ರಿಜೇಶ್ ಜೊತೆ ಕೈಜೋಡಿಸಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಟಿಎಸ್‌ಐ ಅವರ ಪ್ರತಿಕ್ರಿಯೆಯನ್ನು ಕೇಳಿದಾಗ ಅವರೆಲ್ಲರು `ಜಾಣ ಮೌನ' ವಹಿಸಿದ್ದಾರೆ.   
ಅನಿಲ್ ಕುಂಬ್ಳೆ ಆಗಲಿ ಅಥವಾ ಜಾವಗಲ್ ಶ್ರೀನಾಥ್ ಆಗಲಿ ಕೆಎಸ್‌ಸಿಎ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಹೊರಟಿರುವುದು ರಾತ್ರಿ ಬೆಳಗಾಗುವುದರಲ್ಲಿ ತೆಗೆದುಕೊಂಡ ನಿರ್ಧಾರವಂತೂ ಅಲ್ಲವೇ ಅಲ್ಲ. ಅವರಿಬ್ಬರಿಗೆ ಕೆಎಸ್‌ಸಿಎಯ ವ್ಯವಹಾರಗಳ ಬಗ್ಗೆ ಹಿಂದಿನಿಂದಲೂ ಅಸಮಾಧಾನವಿತ್ತು. ಶ್ರೀನಾಥ್ ಮತ್ತು ಕುಂಬ್ಳೆ ಇಬ್ಬರು ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಅನ್ನು ಕಟು ಮಾತುಗಳಿಂದ ವಿರೋಧಿಸಿದ್ದರು. ಕೆಎಸ್‌ಸಿಎಯ ಕಾರ್ಪೋರೇಟ್ ಆಗುವ ತವಕ ಕೊನೆಗೆ ಕ್ರಿಕೆಟ್‌ಗೆ ಸಂಬಂಧಿಸಿರದ ಯಾರ‍್ಯಾರೋ ಕೆಎಸ್‌ಸಿಎಯ ಒಳಗೆ ಅಡಿಯಿಡಲು ಅವಕಾಶ ಮಾಡಿಕೊಡುತ್ತದೆ ಎಂಬುದು ಕುಂಬ್ಳೆ ಆತಂಕಕ್ಕೆ ಕಾರಣವಾಗಿತ್ತು. ಶ್ರೀನಾಥ್, "ಯುವಕರನ್ನು ಮೊದಲು ದೀರ್ಘಾವಧಿಯ ಆಟಕ್ಕೆ ಕುದುರುವ ಹಾಗೆ ಮಾಡಬೇಕು ಮತ್ತು ಎಳೆ ವಯಸ್ಸಿನಲ್ಲೇ ಆಟಗಾರರಿಗೆ ಹಣದ ರುಚಿ ಸಿಕ್ಕರೆ ಅವರ ಕ್ರಿಕೆಟ್ ಜೀವನ ಹಾಳಾಗಬಹುದು" ಎಂಬ ಅಭಿಪ್ರಾಯಪಟ್ಟಿದ್ದರು. ಹೀಗೆ, ಕೆಎಸ್‌ಸಿಎಯ ರೀತಿ ನೀತಿಗಳ ಬಗ್ಗೆ ಇಬ್ಬರಿಗೂ ವರ್ಷಗಳ ಹಿಂದೆಯೇ ತೀವ್ರ ಅಸಮಾಧಾನವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಅದನ್ನು ಆಗಾಗ ಹೊರ ಹಾಕುತ್ತ 'ಮಾತಿನ ಮಲ್ಲ'ರಾಗುವುದು ಅವರಿಗೆ ಇಷ್ಟವಿರಲಿಲ್ಲ ಮತ್ತು ಅದು ಅವರ ಜಾಯಾಮಾನವೂ ಅಲ್ಲ. ಇವರೆನ್ನಿದ್ದರು 'ಅಂಗಣದ ಮಲ್ಲರು'! ಒಳ್ಳೆ ಸಮಯ ಸಿಗಲಿ ಎಂದು ಕಾಯುತ್ತಿದ್ದ ಈ ಇಬ್ಬರಿಗೂ ಕೆಎಸ್‌ಸಿಎಯ ಚುನಾವಣೆ ಕೆಂಪು ಹಾಸಿನ ಸ್ವಾಗತ ನೀಡಿತು. ಈ ಸವಾಲನ್ನೇ ಅವಕಾಶವೆಂದು ಬಗೆದ ಇವರಿಬ್ಬರು ಇನ್ನಿತರ ಸಹ ಆಟಗಾರರಾದ ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ವಿಜಯ್ ಭಾರಧ್ವಾಜ್, ಸುಜಿತ್ ಸೋಮಸುಂದರ್ ಮುಂತಾದವರ ಬೆಂಬಲದೊಂದಿಗೆ ಚುನಾವಣಾ ಕ್ರೀಸ್‌ಗೆ ಇಳಿದೇ ಬಿಟ್ಟಿದ್ದಾರೆ.
ಇದರಲ್ಲಿ ರಾಹುಲ್ ದ್ರಾವಿಡ್ ಈಗಾಗಲೇ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನ (ಈ ಸಂಸ್ಥೆ ಕೆಎಸ್‌ಸಿಎಗಿಂತಲೂ ಪುರಾತನವಾದದ್ದು) ಅಧ್ಯಕ್ಷರಾಗಿದ್ದಾರೆ. ಅದ್ದರಿಂದ ಅವರಿಗೆ ಕೆಎಸ್‌ಸಿಎಯ ಆಡಳಿತ ಕೆಲಸಗಳಲ್ಲಿ ಬ್ಯಾಟ್ ಬೀಸಬಹುದು.
ಕುಂಬ್ಳೆ ಕೆಎಸ್‌ಸಿಎ ಚುನಾವಣೆಗೆ ನಿಲ್ಲಬೇಕು ಎಂಬುದು ಬಿಸಿಸಿಐಯ ಒತ್ತಾಸೆ ಕೂಡ ಆಗಿತ್ತು ಎಂದು ಕೆಲ ನಂಬಲರ್ಹ ಮೂಲಗಳು ಹೇಳುತ್ತವೆ. ಇದಕ್ಕೆ ಕಾರಣವೂ ಇದೆ. ಬ್ರಿಜೇಶ್ ಪಟೇಲ್ ಹಿಂದಿನಿಂದಲೂ ಜಗಮೋಹನ್ ದಾಲ್ಮೀಯಾರೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದವರು. ಇಂದು ಬಿಸಿಸಿಐಯಲ್ಲಿ ದಾಲ್ಮೀಯಾ ಪ್ರಭಾವಳಿ ಕುಸಿಯುತ್ತಿದೆ. ಅದು ಮತ್ತಷ್ಟು ಕುಸಿಯಬೇಕು ಎಂಬುದು ಪ್ರಸಕ್ತ ಬಿಸಿಸಿಐನ ಮುಂದಾಳುಗಳ ಲೆಕ್ಕಾಚಾರ. ಅದಕ್ಕಾಗಿ ಕುಂಬ್ಳೆಗೆ ಅದು ತನ್ನ ಶ್ರೀ ರಕ್ಷೆ ನೀಡಿದೆ ಎಂದು ಹೇಳಲಾಗುತ್ತಿದೆ. ಬ್ರಿಜೇಶ್ ಇತ್ತೀಚಿನ ದಿನಗಳಲ್ಲಿ ಐಸಿಸಿ ಅಧ್ಯಕ್ಷ ಮತ್ತು ಬಿಸಿಸಿಐನ ಮಾಜಿ ಅಧ್ಯಕ್ಷ ಶರದ್ ಪವಾರ್‌ಗೆ ಹತ್ತಿರವಾಗಲೂ ಪ್ರಯತ್ನಿಸಿದ್ದರೂ ಕೂಡ ಅವರಿಗೆ ’ಹೊಸ ನೀರು’ ಬೇಕಿತ್ತು ಎಂದು ಹೇಳಲಾಗುತ್ತಿದೆ.
ಬ್ರಿಜೇಶ್ ಪಟೇಲರ ವಿರುದ್ಧ ೨೦೦೧ರ ಜನವರಿಯಲ್ಲಿ ಒಂದು ಭ್ರಷ್ಟಾಚಾರದ ಆರೋಪ ಬಂದಿತ್ತು. ಅಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉದ್ಯೋಗಿಗಳ ಒಕ್ಕೂಟ ಈ ಆರೋಪ ಹೊರಿಸಿತ್ತು. ಅಂದಿನಿಂದ ಅನೇಕ ಆರೋಪ ಪ್ರತ್ಯಾರೋಪಗಳು ಅಲ್ಲೊಂದು ಇಲ್ಲೊಂದು ಕೇಳಿಸುತ್ತಲೇ ಇದ್ದವು. ಅನಂತರ ಇತ್ತೀಚಿಗೆ ಒಡೆಯರ್ ತಮ್ಮರಿವಿಗೆ ಬಾರದಂತೆ ದಾಖಲೆಗಳ ಕಳ್ಳಸಾಗಣೆ ನಡೆಯುತ್ತಿದೆ ಎಂದು ಹೊರಿಸಿದ ಆರೋಪಗಳವರೆಗೂ ಇಲ್ಲಿ ಅನೇಕ ಕೆಸರೆರಚಾಟ ಪ್ರಸಂಗಗಳು ನಡಿದಿವೆ. ಇತ್ತೀಚೆಗಷ್ಟೆ ಬ್ರಿಜೇಶ್ ಪಟೇಲ್  'ಶುದ್ಧ ಹಸ್ತರು' ಎಂದು ರಿಜಿಸ್ಟ್ರಾರ್ ಆಫ್ ಸೊಸೈಟಿ ಹೇಳಿದ್ದರಿಂದ ಅಷ್ಟರಮಟ್ಟಿಗೆ ನೆಮ್ಮದಿಯ ನಿರ್ಗಮನ ಕಾಣುತ್ತಿದ್ದಾರೆ.
ಬ್ರಿಜೇಶ್‌ರ ಮತ್ತೊಂದು ನಡೆ ಕೂಡ ಅವರಿಗೆ ಉರುಳಾಗಿದೆ. ಅವರು ಅಧಿಕಾರಕ್ಕೆ ಬಂದ ಆರಂಭದಲ್ಲಿ ಕ್ರಿಕೆಟ್ ಆಟಗಾರರಿಗೂ ಕೆಎಸ್‌ಸಿಎಯ ಸದಸ್ಯತ್ವವನ್ನು ನೀಡುವ ಪ್ರಶಂಸನೀಯ ಕ್ರಮ ಕೈಗೊಂಡಿದ್ದರು. ಅದೇ ನಡೆ ಈಗ ಕುಂಬ್ಳೆ ಮತ್ತಿತ್ತರರು ಕೆಎಸ್‌ಸಿಎ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ಇಲ್ಲಿ ಗಮನಿಸಬೇಕು. ಬ್ರಿಜೇಶ್ ಈಗ ಕಣದಿಂದ ದೂರ ಸರಿದು ಕುಂಬ್ಳೆ ಪಡೆಯ ಬೆಂಗಾವಲಿಗೆ ನಿಂತಿರುವುದನ್ನು ಕಂಡಾಗ ಅವರು ಮತ್ತೊಂದು ತಂತ್ರಗಾರಿಕೆ ಮಾಡಿರುವುದು ಸ್ಪಷ್ಟವಾಗುತ್ತದೆ. ಕಳೆದ ಚುನಾವಣೆಯಲ್ಲಿ ಅವರಿಗೆ ಒಂದು ರೀತಿಯ ಮುಖಭಂಗವಾಗಿತ್ತು. ಇನ್ನೂ ಈ ಬಾರಿ ಅವರಿಗೆ ಕುಂಬ್ಳೆ ಪಡೆಯನ್ನು ಎದುರು ಹಾಕಿಕೊಂಡು ಉಸಿರಾಡುವುದು ಕಷ್ಟ. ಒಡೆಯರ್ ಬಣವಂತೂ ಅವರ ಶತ್ರು ಪಾಳಯ. ಅದನ್ನು ಸೇರಿಕೊಳ್ಳುವುದು ಅಥವಾ ಅದಕ್ಕೆ ತಮ್ಮ ಬೆಂಬಲ ಕೊಡುವುದು 'ಆತ್ಮಹತ್ಯೆ' ಮಾಡಿಕೊಳ್ಳುವುದಕ್ಕೆ ಸಮ. ತಾವು ಚುನಾವಣ ಕಣಕ್ಕೆ ಧುಮುಕ್ಕಿದ್ದರೆ ಸೋಲುವುದಲ್ಲದೇ ಕುಂಬ್ಳೆ ಪಡೆಗೂ ಕುಣಿಕೆ ಹಾಕಿದಂತಾಗುತ್ತದೆ. ಅದ್ದರಿಂದ ಈ ಉಸಾಬರಿಯೇ ಬೇಡ ಎಂದು ಅವರು 'ಪೋಷಕ ಪಾತ್ರ' ನಿರ್ವಹಿಸಲು ಬಯಸಿದ್ದಾರೆ. ಹೇಗಿದ್ದರೂ ತಮ್ಮವರನ್ನು ೨೪ ಸದಸ್ಯರ ಸಮಿತಿಯಲ್ಲಿ ಅದಷ್ಟು ತುರುಕುವುದು ಮತ್ತು ಕುಂಬ್ಳೆ, ಶ್ರೀನಾಥ್ ಜೊತೆಗೆ ಅದಷ್ಟು ಸೌಹಾರ್ದ ಸಂಬಂಧ ಇಟ್ಟುಕೊಳ್ಳುವುದು - ಇದು ಅವರ ಸದ್ಯದ ಕಾರ್ಯತಂತ್ರ. ಆದರೆ ಇದೆಲ್ಲದರ ಅರಿವಿದ್ದರೂ ಕೂಡ ಕುಂಬ್ಳೆ ಪಡೆ ಬ್ರಿಜೇಶ್ ಜೊತೆ ಕೈಜೋಡಿಸಿರುವುದು ತನ್ನ 'ಗೇಮ್ ಪ್ಲ್ಯಾನ್'ನಲ್ಲಿ ಎಡವಿದೆ ಎಂಬುದನ್ನು ಸೂಚಿಸುತ್ತದೆ.    
ಆದರೆ ಬ್ರಿಜೇಶ್‌ರ ಈ ನಡೆ ಕುಂಬ್ಳೆ ಪಡೆಯ ಪಾಲಿಗೆ ಲಾಭ ತಂದಿದ್ದಕ್ಕಿಂತ ಅಪಾಯದ ಚಾದರ ಹೊರಿಸಿರುವುದು ಅಶ್ಚರ್ಯದ ಸಂಗತಿ. ಒಡೆಯರ್ ಬಣದ ಅಶೋಕ್ ರಾಘವನ್ ಹೇಳುವಂತೆ, "ನಮಗೆ ಕುಂಬ್ಳೆ, ಶ್ರೀನಾಥ್‌ರ ಮೇಲೆ ಅಪಾರ ಗೌರವವಿದೆ. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಬ್ರಿಜೇಶ್‌ರ ಬೆಂಬಲ ಪಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಈ ಕ್ರಿಕೆಟಿಗರು ಕೂಡ ಬ್ರಿಜೇಶ್‌ರನ್ನು ವಿರೋಧಿಸುತ್ತ ಬಂದವರು. ಸಂಸ್ಥೆಯಲ್ಲಿ ಕೇವಲ ಕ್ರಿಕೆಟಿಗರು ಇದ್ದ ಮಾತ್ರಕ್ಕೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ ಎಂದರ್ಥವಲ್ಲ, ಇಲ್ಲಿ ನುರಿತ ಆಡಳಿತಗಾರರ ಅಗತ್ಯವಿದೆ."
ಅದ್ದರಿಂದ ಕುಂಬ್ಳೆ ತನ್ನತ್ತ ಬೆಂಬಲದ ಹಸ್ತ ಚಾಚಿದ ಬ್ರಿಜೇಶ್‌ರನ್ನು ಒಮ್ಮಲೇ ಆಲಿಂಗಿಸಿಕೊಳ್ಳುವುದರ ಬದಲು ಒಡೆಯರ್‌ರ ಬಣವನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೆ ಆಗಿದ್ದರೆ ಈ ಚುನಾವಣೆ ಇಷ್ಟು ಗೊಂದಲಗಳ ಗೂಡಾಗುತ್ತಿರಲಿಲ್ಲ. ಒಂದೋ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಿದ್ದರು ಇಲ್ಲವೆ ಸೌಹಾರ್ದಯುತವಾಗಿ ಚುನಾವಣೆ ನಡೆಯುತ್ತಿತ್ತು. ಹೀಗೆ ಪರಸ್ಪರ ಕತ್ತಿ ಮಸೆಯುತ್ತ, ಹಲ್ಲು ಕಡಿಯುತ್ತ ಇದ್ದವರ ಮಧ್ಯೆ ಇವರು ಹೆಣಗಾಡಬೇಕಾದ ಸ್ಥಿತಿ ಇರುತ್ತಿರಲಿಲ್ಲ. ಇದರಿಂದ ಕೆಎಸ್‌ಸಿಎಯಲ್ಲೂ ಒಂದು ಅಪೂರ್ವ ಒಗ್ಗಟ್ಟು ಮೂಡಿರುತ್ತಿತ್ತು.               
ಪತ್ರಿಕೆ ಅಚ್ಚಿಗೆ ಹೋಗುವ ಸಂದರ್ಭದಲ್ಲಿ ಕುಂಬ್ಳೆ ಪಡೆಯ ಪ್ರಬಲ ದಾಳಿಗೆ ಉತ್ತರಿಸಲು ಒಡೆಯರ್ ಬಣ ಪ್ಯಾಡ್ ಕಟ್ಟಿಕೊಂಡು ಸಿದ್ಧವಾಗಿದೆ. ಖುದ್ದು ಒಡೆಯರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಐಸಿಸಿ ಅಂಪೈರ್ ಸಮಿತಿಯ ಎ. ವಿ ಜಯಪ್ರಕಾಶ್, ಖಜಾಂಜಿ ಹುದ್ದೆಗೆ ಸಂಜಯ್ ಜಗದಾಳೆ, ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಕೃಷ್ಣಮೂರ್ತಿ ಮತ್ತು ಎಮ್. ಕೆ. ಪಾಂಡುರಂಗ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ರೋಜರ್ ಬಿನ್ನಿ  ಆದರೆ ಕುಂಬ್ಳೆ ಪಡೆ ಮತ್ತು ಒಡೆಯರ್ ಬಣದ ನಡುವೆ ಒಳ ಒಪ್ಪಂದಗಳಾಗುವ ಸಾಧ್ಯತೆ ಕೂಡ ಇದೆ. ಕುಂಬ್ಳೆ ಪಡೆ ಎಲ್ಲ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ ಒಡೆಯರ್ ಬಣ ವ್ಯವಸ್ಥಿತವಾಗಿ, ಯಾವುದೊ ಒಂದು ತಂತ್ರದ ಮೂಲಕ ಜಾಣ್ಮೆಯ ಬಲೆ ಬೀಸಿದೆ ಎಂದು ಹೇಳಲಾಗಿದೆ. ಆದರೆ ಪ್ರಸಕ್ತ ಕುಂಬ್ಳೆ ಪಡೆಯ ಜನಪ್ರಿಯತೆ ಮುಂದೆ ಒಡೆಯರ್ ಪಡೆ ಮಂಕಾಗಿರುವಂತೆ ಕಂಡರೂ ಕೂಡ ಸುಲಭವಾಗಿ ಸೊಲೊಪ್ಪಿಕೊಳ್ಳುವುದು ಒಡೆಯರ್ ಅವರ ಜಾಯಾಮಾನವಲ್ಲ. ಈ ಕೆಎಸ್‌ಸಿಎ ಚುನಾವಣಾ ಕಣ ಕೂಡ ಕ್ರಿಕೆಟ್ ಪಂದ್ಯದ ರೀತಿಯಲ್ಲಿ ಕೊನೆ ಕ್ಷಣದವರೆಗೂ ಕೂತೂಹಲ ಕಾದುಕೊಳ್ಳುವುದು ಮಾತ್ರ ನಿಶ್ಚಿತ.         
ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕುಂಬ್ಳೆ, ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಆಗ ಬಯಸಿರುವ ಶ್ರೀನಾಥ್ ಇವರೆಲ್ಲರಿಗೂ ರಾಜ್ಯ ಕ್ರಿಕೆಟ್ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಅರಿವಿದೆ. ಇಂದು ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯದ ಬೇರೆ ಯಾವುದೇ ಭಾಗದಲ್ಲಿ ಕ್ರಿಕೆಟ್ ಪಟುಗಳಿಗೆ ಹೇಳಿಕೊಳ್ಳವಂತಹ ಪ್ರೋತ್ಸಾಹವಾಗಲಿ, ಮೂಲಭೂತ ಸೌಕರ್ಯಗಳಾಗಲಿ ಇಲ್ಲ. ಶಾಲಾ ಮತ್ತು ಕ್ಲಬ್ ಮಟ್ಟಗಳಲ್ಲಿ ಕ್ರಿಕೆಟ್ ನಿಂತ ನೀರು. ಈವರೆಗೆ ಕ್ರಿಕೆಟ್ ಅಭಿವೃದ್ಧಿಗೆಂದು ತೆಗೆದುಕೊಂಡ ಹೆಚ್ಚಿನೆಲ್ಲ ಕ್ರಮಗಳು ಬೆಂಗಳೂರು ಕೇಂದ್ರಿತವಾಗಿದ್ದವು. ದೂರದ ಜಿಲ್ಲೆಗಳಿಗೆ ಸೌಲತ್ತು ಒದಗಿಸುವ ಭರವಸೆ ಕೆಎಸ್‌ಸಿಎ ಕಚೇರಿಯಿಂದ ತೂತದ ಗೆರಟೆಯಲ್ಲಿ ನೀರು ಕೊಂಡು ಹೋದ ರೀತಿ ಇರುತ್ತಿತ್ತು. ಅದಕ್ಕೆ ಇಂದು ಬಡಕಲಾಗಿರುವ ರಾಜ್ಯ ಕ್ರಿಕೆಟ್‌ನ ಪ್ರತಿಭೆಗಳೇ ಸಾಕ್ಷಿ. ಇದೆಲ್ಲವನ್ನು ಈ ಕ್ರಿಕೆಟಿಗರು ಚೆನ್ನಾಗಿಯೇ ಅರಿತಿದ್ದಾರೆ. ಗೆದ್ದರೆ ಮತ್ತೆ ಕರ್ನಾಟಕ ಕ್ರಿಕೆಟ್‌ಗೆ ವಸಂತ ಕಾಲ ಬರುತ್ತದೆ ಎಂದು ಆಶಿಸಬಹುದು. ಈ ಆಶಯ ವಾಸ್ತವವಾಗಲು ಈ ಆಟಗಾರರು ಮೈದಾನದಲ್ಲಿ ತೋರಿಸಿದ ಬದ್ಧತೆ, ಸಮರ್ಪಣ ಭಾವ ಮತ್ತು ಒಗ್ಗಟ್ಟನ್ನು ಆಡಳಿತದಲ್ಲೂ ತೋರಿಸಬೇಕಾಗುತ್ತದೆ. ರಾಜಕೀಯದಾ(ಕಾ)ಟ ಏನೇ ಇರಲಿ ಇಲ್ಲಿ ಕ್ರಿಕೆಟ್ ಗೆದ್ದರೆ ಸಾಕು.

Monday, November 1, 2010

ಕುಮಾರಸ್ವಾಮಿ ಮತ್ತು ಸಂಪಂಗಿ ಜೊತೆ ನಡೆಸಿದ ವಿಶೇಷ ಸಂದರ್ಶನ

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನಾನು ಕುಮಾರಸ್ವಾಮಿ ಮತ್ತು ವೈ. ಸಂಪಂಗಿ ಜೊತೆ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಇದು 'ದಿ ಸಂಡೆ ಇಡಿಯನ್' ನಲ್ಲಿ ಪ್ರಕಟಿತ.

ಕುಮಾರಸ್ವಾಮಿ
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಮುಖಂಡ

ಪ್ರಸಕ್ತ ಸಂದರ್ಭದಲ್ಲಿ ನಿಮ್ಮ ಪಕ್ಷದ ಮುಂದಿನ ನಡೆಯೇನು?
ಈ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿರುದ್ಧ ನಾವು ಕಳೆದ ಎರಡೂವರೆ ವರ್ಷಗಳಿಂದ ಪರಿಣಾಮಕಾರಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಇದನ್ನು ನಾವು ಮುಂದುವರಿಸುತ್ತೇವೆ. ಈ ಸರ್ಕಾರ ತನ್ನ ತಪ್ಪುಗಳಿಂದ ಪಾಠ ಕಲಿತಿಲ್ಲ. ಅದ್ದರಿಂದ ನಮ್ಮ ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ.

ರಾಜ್ಯದಲ್ಲಿನ ಪ್ರಸಕ್ತ ಗೊಂದಲಗಳಿಗೆ ನಿಮ್ಮ ಪಕ್ಷದ ಕೊಡುಗೆಯೇನು?
ಇದು ಗೊಂದಲ ಅಲ್ಲ. ಗೊಂದಲಕ್ಕಿಂತ ಹೆಚ್ಚಾಗಿ ಈ ಸರ್ಕಾರದ ಹಣದಾಹ ಮತ್ತು ಅಧಿಕಾರ ಎಂದರೆ ದುಡ್ಡು ಮಾಡಲಿರುವುದು ಎಂದು ಕೊಂಡಿದೆ.   ನೆರೆ ಹಾವಳಿಗೆ ತುತ್ತಾದ ಜನರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ, ಗಣಿ ಅಕ್ರಮ, ಬಿಡಿಎ ಮತ್ತು ಸರ್ಕಾರದ ಬೆಲೆಬಾಳುವ ಆಸ್ತಿಯನ್ನು ಮುಖ್ಯಮಂತ್ರಿ ಸ್ವಹಿತಾಸಕ್ತಿಗಾಗಿ ಕಬಳಿಸಿದ್ದಾರೆ, ಇಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ. ಈ ಕೆಟ್ಟ ಸರ್ಕಾರವನ್ನು ರಾಜ್ಯದಿಂದ ತೆಗೆಯದಿದ್ದರೆ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ಪರಿಗಣಿಸಿ ನಾವು ಹೋರಾಟಕ್ಕೆ ಇಳಿದಿದ್ದೇವೆ. ಸರ್ಕರದ ಕಾರ್ಯವೈಖರಿಯ ವಿರುದ್ಧ ನಮ್ಮ ಹೋರಾಟವಿದೆ ನಮಗೆ ಮುಖ್ಯಮಂತ್ರಿಗಳ ಮೇಲೆ ಯಾವುದೇ ರೀತಿಯ ದ್ವೇಷವೂ ಇಲ್ಲ. ಕಾಂಗ್ರೆಸ್ ನಾಯಕರು ತಾವು ಸರ್ಕಾರವನನ್ನು ಉರುಳಿಸಲು ಪ್ರಯತ್ನಿಸುತ್ತಿಲ್ಲ ಎಂಬ ಮಡಿವಂತಿಕೆಯ ಮಾತುಗಳನ್ನಾಡಿ ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಆ ರೀತಿ ಹೇಳುವುದಿಲ್ಲ. ನನ್ನದೇನಿದ್ದರೂ ಜನರ ಒಳಿತಿಗಾಗಿನ ಹೋರಾಟ.

ನೀವು ಬಿಜೆಪಿ ಸರಕಾರವನ್ನು ಉರುಳಿಸಲು ಹೋಗಿ ಇದೀಗ ನಿಮ್ಮ ಶಾಸಕರನ್ನೇ ಕಳೆದುಕೊಳ್ಳುತ್ತಿದ್ದೀರಿ ಮತ್ತು ಅವರನ್ನು ನಿಮ್ಮೊಂದಿಗೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೀರಿ ಅಲ್ಲವೇ?
ನನ್ನ ಪಕ್ಷದಲ್ಲಿ ಆ ರೀತಿಯ ಯಾವುದೇ ಬೆಳವಣಿಗೆಯಾಗಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕೇಂದ್ರದ ಕೆಳ ನಾಯಕರ ವರ್ತನೆಯಿಂದ ನಿರಾಶರಾದ ಆ ಪಕ್ಷದ ಶಾಸಕರು ತಮ್ಮ ರಾಜಿನಾಮೆ ಸಲ್ಲಿಸುತ್ತಿದ್ದಾರೆ.

ನಿಮ್ಮ ಲೆಕ್ಕಾಚಾರ ತಪ್ಪಿದೆ ಎಂದು ನಿಮಗೆ ಅನಿಸುತ್ತಿದೆಯೇ?
ನನ್ನ ಲೆಕ್ಕಾಚಾರ ತಪ್ಪಿಲ್ಲ, ರಾಜ್ಯ ಮತ್ತು ಕೇಂದ್ರದ ಸರ್ಕಾರ ದೇಶದ ಇತಿಹಾಸದಲ್ಲೇ ಅನೇಕ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ. ಹೊಸ ಹೊಸ ಸಂಪ್ರದಾಯಗಳನ್ನು ಹುಟ್ಟುಹಾಕಿವೆ. ಆ ಎರಡು ಪಕ್ಷಗಳು ಒಂದಾಗಿವೆ. ಅಕ್ಟೋಬರ್ ೧೧ರಂದು ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ಅದನ್ನು ಹಾಗೆಯೇ ಇಟ್ಟುಕೊಂಡು ಮೂರೇ ದಿನದಲ್ಲಿ ಪುನಃ ವಿಶ್ವಾಸ ಮತ ಯಾಚಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟರು. ಇದಕ್ಕೆ ಸಂವಿಧಾನದ ಮಾನ್ಯತೆ ಇದೆಯಾ? ಎಂಬುದರ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇಲ್ಲಿ ನನ್ನ ಲೆಕ್ಕಾಚಾರ ತಪ್ಪಿದೆ ಅನ್ನುವುದಕ್ಕಿಂತಲೂ ಪ್ರಜಾಪ್ರಭುತ್ವದ ಆಶಯಗಳು ಬುಡಮೇಲಾಗಿವೆ ಎಂದು ಹೇಳುವುದು ಹೆಚ್ಚು ಸರಿ. ಇಲ್ಲ ನನ್ನ ಪ್ರಜಾಪ್ರಭುತ್ವವನನು ಉಳಿಸುವ ಹೋರಾಟಕ್ಕೆ ಹಿನ್ನೆಡೆಯಾಗಿದೆ.

ನಿಮ್ಮ ಪ್ರಯತ್ನಗಳಿಗೆ ದೆಹಲಿಯ ಕಾಂಗ್ರೆಸ್ ನಾಯಕರು ತಣ್ಣೀರು ಎರಚಿದರು ಎಂದು ಹೇಳಲಾಗುತ್ತಿದೆ ಇದು ನಿಜವೇ?
ವಿಶ್ವಾಸ ಮತ ಯಾಚನೆಯ ಬಳಿಕದ ಎಲ್ಲ ಬೆಳವಣಿಗೆಗಳಿಗೆ ಕೇಂದ್ರ ಕಾರಣ ಇದರಲ್ಲಿ ಯಾರ ಪಾಲು ಎಷ್ಟಿದೆ ಎಂದು ಹೇಳುವುದು ಕಷ್ಟ, ಮುಂದಿನ ದಿನಗಳಲ್ಲಿ ಇದು ಗೊತ್ತಾಗುತ್ತದೆ.

ನಿಮ್ಮ ಎಷ್ಟು ಶಾಸಕರನ್ನು ಬಿಜೆಪಿ ಖರೀದಿಸಲು ಪ್ರಯತ್ನಿಸಿದೆ? ಅವರು ಎಷ್ಟು ಹಣ ಕೊಡಲು ಸಿದ್ಧರಾಗಿದ್ದಾರೆ?
ನಮ್ಮ ಶಾಸಕರನ್ನು ಬಿಜೆಪಿ ಖರೀದಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಬಿಡುಗಡೆ ಮಾಡಿರುವ ಕ್ಯಾಸೆಟ್ ಜನರ ಮುಂದೆ ತಂದಿದೆ. ಅವರು ಶಾಸಕರಿಗೆ ೨೫-೫೦ ಕೋಟಿ ಕೊಡಲು ಸಿದ್ಧರಾಗಿದ್ದಾರೆ. ಹೆಚ್ಚಿನ ಬೇಡಿಕೆ ಇಟ್ಟರೆ ಅದನ್ನು ಕೂಡ ಪರಿಶೀಲಿಸಲು ಅವರು ಸಿದ್ಧರಿದ್ದಾರೆ. ಅವರು ೨೫ - ೫೦ ಕೋಟಿಯನ್ನು ಫಿಕ್ಸ್ ಮಾಡಿದ್ದಾರೆ. ಇನ್ನೂ ಹೆಚ್ಚು ಡಿಮಾಂಡ್ ಮಾಡಿದರೆ ಅದನ್ನು ಪರಿಶೀಲಿಸಲು ಅವರು ಸಿದ್ಧರಾಗಿದ್ದಾರೆ. ನಮ್ಮ ೮ - ೧೦ ಶಾಸಕರನ್ನು ಅವರು ಬಲೆಗೆ ಹಾಕಲು ಪ್ರಯತ್ನ ಪಟ್ಟಿದ್ದಾರೆ.

ನಿಮ್ಮ ಸಿಡಿ ಬಾಂಬ್ ನಿರೀಕ್ಷಿತ ಪರಿಣಾಮ ಬೀರಿಲ್ಲ ಅಲ್ಲವೇ?
ಇಷ್ಟು ಮಾಡಿದ ಮೇಲು ಕೇಂದ್ರ ಸರ್ಕಾರ ಯಾಕೆ ದಿವ್ಯ ಮೌನ ವಹಿಸುತ್ತಿದೆ ಅಂಥ ಗೊತ್ತಿಲ್ಲ ಈ ಬಗ್ಗೆ ನನಗೆ ಖೇದವಿದೆ. ಕಾನೂನಬದ್ಧ ಸಂಸ್ಥೆಗಳ ಮೌನ ನನಗೆ ನೋವು ತಂದಿದೆ.

ಬಿಜೆಪಿ ಸರಕಾರವನ್ನು ಬೀಳಿಸಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿಸುವುದು, ರೇವಣ್ಣ ಉಪಮುಖ್ಯಮಂತ್ರಿ ಮತ್ತು ಕುಮಾರ ಸ್ವಾಮಿಯನ್ನು ಕೇಂದ್ರದಲ್ಲಿ ಮಂತ್ರಿಯನ್ನಾಗಿಸುವುದು ಎಂಬ ಒಳ ಒಪ್ಪಂದ ಆಗಿತ್ತು ಎಂಬ ಮಾತು ಎಲ್ಲೆಡೆಯಿಂದ ಕೇಳಿಸುತ್ತಿದೆ ಇದು ನಿಜವೇ?
ನಾನು ಕೇಂದ್ರದ ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ. ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾರನ್ನೂ ಕೇಳಿಲ್ಲ. ಈ ಕಾರಣಗಳನ್ನಿಟ್ಟು ಕೊಂಡು ನಾನು ಈ ಪ್ರಕ್ರಿಯೆ ಶುರು ಮಾಡಿಲ್ಲ. ಇಂಥಹ ಯಾವುದೇ ಅಜೆಂಡಾಗಳು ನಮ್ಮಲಿಲ್ಲ. ನಮ್ಮ ಮೂಲೋದ್ದೇಶ ಈ ಭ್ರ್ರಷ್ಟ ಸರ್ಕಾರವನ್ನು ಪತನಗೊಳಿಸುವುದಾಗಿದೆ.

ಬಿಜೆಪಿಯ ಬಂಡಾಯ ಚಟುವಟಿಕೆಯಲ್ಲಿ ನಿಮ್ಮ ಪಾತ್ರ?
ಬಿಜೆಪಿಯ ಬಂಡಾಯ ಚಟುವಟಿಕೆಯಲ್ಲಿ ನನ್ನ ಪಾತ್ರವಿಲ್ಲ. ಅವರು ಸ್ವಪ್ರೇರಣೆಯಿಂದ ಬಂಡೆದಿದ್ದಾರೆ. ಇಲ್ಲಿ ನನ್ನ ಇಲ್ಲಿ ನನ್ನ ಚಿತಾವಾಣೆ ಏನು ಇಲ್ಲ. ಮೊದಲ ಸಲ ಬಿಜೆಪಿಯ ಶಾಸಕರು ಚೆನೈಗೆ ಹೋಗಿದ್ದಾಗ ಬಿಜೆಪಿ ೪ - ೫ ಮಂತ್ರಿಗಳು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು ಅನಂತರ ಗೋವಾಕ್ಕೆ ಈ ಶಾಸಕರು ಹೋದರು, ಅಲ್ಲಿಗೂ ಈ ಮಂತ್ರಿಗಳು ಹೋದರು. ಆದರೆ ಈ ಶಾಸಕರು ಅವರಿಗೆ ಮಣೆ ಹಾಕಲಿಲ್ಲ. ಅವರ ದೂರನ್ನು, ನೋವನ್ನು ಕೇಳಲು, ಈ ಬಗ್ಗೆ ಕೂತುಕೊಂಡು ಚರ್ಚಿಸಲು ಬಿಜೆಪಿ ಸಿದ್ಧವಿರಲಿಲ್ಲ್ಲ. ಅನಂತರ ಆ ಶಾಸಕರ ಆಹ್ವಾನ ಮೇಲೆ ತಾನು ಹೋಗಿ ಅವರನ್ನು ಭೇಟಿ ಮಾಡಿಕೊಂಡು ಬಂದದ್ದು ನಿಜ. ನಾನು ಈ ಶಾಸಕರಿಗೆ ಯಾವುದೇ ರೀತಿಯ ಆಮಿಷ ಒಡ್ಡಿಲ್ಲ.

ನಿಮ್ಮ ಪಕ್ಷದ ಸದಸ್ಯರನ್ನು ಉಳಿಸಿಕೊಳ್ಳಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ?
ನಮ್ಮ ಶಾಸಕರು ನಮಗೆ ನಿಷ್ಠರಾಗಿದ್ದಾರೆ. ಅವರು ಪಕ್ಷ ಬಿಡುವ ಅಥವಾ ಪಕ್ಷದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ.
ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ಮೇಲೆ ರಾಷ್ಟ್ರಪತಿಗಳಿಗೆ ದೂರು ಕೊಡುತ್ತೇನೆ ಎಂದಿದ್ದಾರೆ ಇದರ ಪರಿಣಾಮ ಏನಾಗಬಹುದು?
ರಾಷ್ಟ್ರಪತಿ ಮಾತ್ರವಲ್ಲ ಸೋನಿಯಾ ಗಾಂಧಿಯವರಿಗೂ ದೂರು ಕೊಡುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ಕಾಂಗ್ರೆಸ್‌ನ ಪಕ್ಷದ ಆಧ್ಯಕ್ಷೆಯ ಬಳಿಗೆ ದೂರು ಕೊಂಡೊಯ್ಯುತ್ತಿರುವುದು ಬಾಲಿಶ ನಿರ್ಧಾರ. ಈ ಬೆಳವಣಿಗೆಯಿಂದ ಬಿಜೆಪಿ ಸರ್ಕಾರ ಸ್ಥಿರವಾಗಿಲ್ಲ, ಈ ಪಕ್ಷ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಮತ್ತು ಈಗಿರುವ ವ್ಯವಸ್ಥೆ ತಾತ್ಕಾಲಿಕ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಬಿಜೆಪಿ ವಿಶ್ವಾಸಮತ ಕೋರುವ ಸಂದರ್ಭದಲ್ಲಿ ರಾಜ್ಯಪಾಲರು ಮತ್ತು ಸ್ಪೀಕರ್‌ರ ವರ್ತನೆ ಬಗ್ಗೆ ನಿಮ್ಮ ಅನಿಸಿಕೆ ಏನು?
ಈ ಇಬ್ಬರು ಕೂಡ ಕಾನೂನಿನ ಚೌಕಟ್ಟನ್ನು ಮೀರಿ ವರ್ತಿಸಿದ್ದಾರೆ. ಇಬ್ಬರು ಕೂಡ ಹೊಸ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರದ ಪಾತ್ರವೂ ಇದೆ. ಇದು ಮಂದೆ ಚರಿತ್ರೆ ಬರೆಯುವವರಿಗೆ, ಸಂವಿಧಾನ ಪಂಡಿತರಿಗೆ ಒಳ್ಳೆ ಸಾಮಾಗ್ರಿ ಒದಗಿಸುವುದು ನಿಶ್ಚಿತ.

ಮುಂದೆ ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ಆಗಬಹುದು?
ನ್ಯಾಯಾಲಯದ ತೀರ್ಪುನ್ನು ಆಧಾರಿಸಿ ಮುಂದಿನ ಬೆಳವಣಿಗೆಗಳು ಆಗಬಹುದು.

ಈ ತಿಂಗಳ ಆರಂಭದಿಂದ ನಡೆದ ಸರಣಿ ರಾಜಕೀಯ ವಿದ್ಯಮಾನಗಳಿಂದ ನೀವು ಯಾವ ಪಾಠ ಕಲಿತುಕೊಂಡಿರಿ?
ನಾನು ಇಲ್ಲಿ ಪಾಠ ಕಲಿಯುವಂತದ್ದೇನಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಹುದ್ದೆಯನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳಬಹುದು ಮತ್ತು ಕಾನೂನಿನಲ್ಲಿ ಇನ್ನೂ ಸಾಕಷ್ಟು ಲೋಪ ದೋಷಗಳಿವೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಇದನ್ನು ರಾಜ್ಯದ ಜನತೆ ಕೂಡ ಆರ್ಥ ಮಾಡಿಕೊಳ್ಳಬೇಕಿದೆ.

ರಾಜ್ಯದಲ್ಲಿ ಪ್ರತಿಪಕ್ಷಗಳು ಇರುವುದೇ ಬೇಡ ಅಂದರೆ ಹೇಳಲಿ ನಾವೆಲ್ಲ ರಾಜಿನಾಮೆ ಕೊಡುತ್ತೇವೆ ಎಂದು ಹೇಳಿದ್ದೀರಿ ಅಲ್ಲವೇ? ನೀವು ಕೂಡ ಮುಖ್ಯಮಂತ್ರಿಗಳ ಅಣತಿಯಂತೆ ವರ್ತಿಸುತಿದ್ದೀರಾ?  
ಇಲ್ಲಿ ನಾವು ರಾಜಿನಾಮೆ ಕೊಡುವುದು ಬೇರೆ ವಿಷಯ, ಇವತ್ತು ನಮಗೆ ಬೇಕಾಗಿರುವುದು ಈ ರಾಜ್ಯದ ಜನತೆಗೆ ಈ ಸರ್ಕಾರದಿಂದ ಒಳ್ಳೆಯ ಕಾರ್ಯಕೃಮ ನೀಡಲು ಸಾಧ್ಯವೋ ಇಲ್ಲವೋ ಎಂಬುದು.

-----------------------------------------------------------------------------------------------------
ವೈ. ಸಂಪಂಗಿ
(ಕೆಜಿಎಫ್‌ನ ಭಿನ್ನ ಮತೀಯ ಶಾಸಕ) 

ನೀವು ಚುನಾವಣೆಯಲ್ಲಿ ಆರಿಸಿ ಬಂದದ್ದು ರೆಸಾರ್ಟ್‌ಗಳಲ್ಲಿ ಹೋಗಿ ಇರಲಿಕ್ಕಾ?
ರೆಸಾರ್ಟ್‌ಗಳಲ್ಲಿ ಇರುವುದು ಹೊಸದೇನು ಅಲ್ಲ, ದೊಡ್ಡ ದೊಡ್ಡ ನಾಯಕರೇ ರೆಸಾರ್ಟ್‌ಗಳಲ್ಲಿ ಇದ್ದು ಬಂದವರು.

ಆದರೆ ನೀವೇ ಹೇಳಿಕೊಂಡಂತೆ ನೀವು ಜನರ ಪ್ರೀತಿಗೆ ಪಾತ್ರರಾಗಿರುವರು, ನೀವೇ ಜನರಿಂದ ದೂರವಾದರೆ ಅವರ ಆಶೋತ್ತರಗಳಿಗೆ ಸ್ಪಂದಿಸುವವರು ಯಾರು?
ನಾನು ರೆಸಾರ್ಟ್‌ನಲ್ಲಿದ್ದರು ಕೂಡ ನನ್ನ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ನಾನು ಎಲ್ಲ ಬೆಳವಣಿಗೆಗಳನ್ನು ಅವರಿಗೆ ತಿಳಿಸಿದ್ದೇನೆ.

ನೀವು ಸರ್ಕಾರದ ವಿರುದ್ಧ ಬಂಡೇಳಲು ಕಾರಣವೇನು?
ನಾವು ಯಾವತ್ತೂ ಸರ್ಕಾರದ ವಿರುದ್ಧ, ರೆಡ್ಡಿ ಸೋದರರ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ನಾವು ಹೇಳಿಕೆ ನೀಡಿಲ್ಲ. ಈ ಕೆಲಸವನ್ನು ರೇಣುಕಾಚಾರ್ಯನೇ ಮಾಡಿದ್ದ. ಅದರೆ ಇದರಿಂದ ನಮ್ಮ ಮೇಲೆ ಬಿಜೆಪಿ ನಾಯಕರಿಗೆ ತಪ್ಪು ಅಭಿಪ್ರಾಯಗಳು ಬಂದವು. ರೇಣುಕಾಚಾರ್ಯ ಸ್ವಹಿತಾಸಕ್ತಿಗಾಗಿ ನಮ್ಮನ್ನು ಬಳಸಿಕೊಂಡು ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾನೆ. ನಮ್ಮನೆಲ್ಲ ಬಳಸಿಕೊಂಡು ತಾನು ಮಂತ್ರಿಯಾಗಿ ತಮ್ಮನ್ನು ತಾನು ‘ನಾನು ಈ ಗುಂಪಿನ ನಾಯಕ’ ಎಂದು ತೋರಿಸಿಕೊಂಡರು. ನಾವು ಕೂಡ ಈತ ನಮ್ಮ ಸ್ನೇಹಿತ ಎಂದು ಆತನ ಬೆಂಬಲಕ್ಕೆ ನಿಂತೆವು. ನಾನು ಈವರೆಗೆ ಮುಖ್ಯಮಂತ್ರಿಗಳ ಬಳಿ ಯಾವುದೇ ಕೆಲಸ ಇಟ್ಟುಕೊಂಡು ಹೋಗಿಲ್ಲ, ನಾನು ಬಿಡಿಎ ಸೈಟ್ ಕೂಡ ತೆಗೆದುಕೊಂಡಿಲ್ಲ. ನಾವು ೧೦-೨೦ ವರ್ಷದಿಂದ ಹೊರಟ ಮಾಡಿಕೊಂಡು ಬಂದು ಚುನಾವಣೆಯಲ್ಲಿ ಗೆದ್ದು ಶಾಸಕರಾದರು, ಅಧಿಕಾರಕ್ಕೆ ಬಂದರು ನಮ್ಮ ಮೇಲಿನ ಶೋಷಣೆ ಇನ್ನೂ ನಿಂತಿಲ್ಲ ಎಂಬುದಕ್ಕೆ ಇದೇ ಉದಾಹರಣೆ.


ಈ ರೀತಿ ಶೋಷಣೆ ಮಾಡುತ್ತಿರುವುದು ರೇಣುಕಾಚಾರ್ಯರಾ? ಯಡಿಯೂರಪ್ಪನವರಾ?
ಮುಖ್ಯಮಂತ್ರಿಗಳು ಹಿರಿಯರಿದ್ದಾರೆ. ಅವರು ೩೦ - ೪೦ ವರ್ಷಗಳ ಕಾಲ ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ನಮಗೆ ಮಾತ್ರ ಯಾಕೆ ಈ ರೀತಿ ಆಯಿತೆಂಬುದೇ  ಗೊತ್ತಾಗುತ್ತಿಲ್ಲ. ನಾವು ರಾಜ್ಯಪಾಲರಿಗೆ ನೀಡಿದ ದೂರಿಗೆ ಮೊದಲು ಸಹಿ ಹಾಕಿದ್ದು ರೇಣುಕಾಚಾರ್ಯ, ನಮ್ಮ ಎಲ್ಲ ಚಟುಚಟಿಕೆಗಳಿಗೆ ಅವರು ನಾಯಕತ್ವ ವಹಿಸಿದ್ದಾರೆ. ಆದರೆ ಅವರೇ ಇಂದು ಪಕ್ಷದಲ್ಲಿ ಇದ್ದಾರೆ. ಆದರೆ ನಾವು ಹೊರಗಿದ್ದೇವೆ. ನಮಗೆ ಅನ್ಯಾಯವಾಗಿದೆ. ಇಷ್ಟರವರೆಗಿನ ಬಂಡಾಯ ಚಟುವಟಿಕೆಗಳಿಗೆ ನಾಯಕತ್ವ ವಹಿಸಿದ್ದು ಯಾರು? ಆತನೆ. ನಮ್ಮ ಮುಗ್ದತೆಯನ್ನು ಆತ ದುರುಪಯೋಗ ಪಡಿಸಿಕೊಂಡಿದ್ದಾನೆ. ಪಕ್ಷದ ಹಿರಿಯರು ನಮಗೆ ಇನ್ನೊಂದು ಅವಕಾಶ ಮಾಡಿಕೊಡಬೇಕು.


ನಿಮಗೆ ನಿಮ್ಮ ವರ್ತನೆಯ ಬಗ್ಗೆ ಬೇಸರವಾಗಿದೆಯಾ? ಈಗ ಪಶ್ಚಾತಾಪ ಪಡುತ್ತಿದ್ದೀರಾ?
ಹೌದು ಅಷ್ಟೆ. ನನ್ನ ವರ್ತನೆ ಬಗೆ ನನಗೆ ಬೇಸರವಾಗಿದೆ, ನನಗೆ ಮಂತ್ರಿಗಿರಿ ಬೇಡ, ನನಗೆ ನನ್ನ ಜನತೆಗೆ ಒಳ್ಳೆಯದನ್ನು ಮಾಡಬೇಕು.  ಮುಖ್ಯಮಂತ್ರಿಗಳು ನನ್ನ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುತ್ತೇನೆ ಎಂದಿದ್ದರು. ಆದರೆ ಈ ವರ್ತನೆಗೂ ಅವರು ಅಂದು ನೀಡಿದ ಆಶ್ವಾಸನೆಯನ್ನು ಈಡೇರಿಸದಿರುವುದಕ್ಕೂ ಸಂಬಂಧವಿಲ್ಲ. ನಾವು ರೆಸಾರ್ಟ್‌ಗೆ ಹೋದ ಮೇಲೆ ನಮ್ಮನ್ನು ಸಂಪರ್ಕಿಸಿ ಯಾರೂ ಪಕ್ಷಕ್ಕೆ ಕರೆದಿಲ್ಲ. ಎಲ್ಲವನ್ನು ರೇಣುಕಾಚಾರ್ಯರೇ ನಿಭಾಯಿಸಿದ್ದರು. ಎಲ್ಲರು ಅವರ ಜೊತೆಯೇ ಮಾತನಾಡಿದರು. ನಮಗೆ ಅಲ್ಲಿ ಏನು ಆಗುತ್ತಿತ್ತು ಅಂತ ಗೊತ್ತಾಗುತ್ತಿರಲಿಲ್ಲ. ಆದರೂ ನಮಗೆ ಈ ಶಿಕ್ಷೆ ನೀಡಲಾಗಿದೆ. ಇದು ಸರೀನಾ?


ನೀವು ೧೧ ಮಂದಿ ಸೇರಿ ಯಡಿಯೂರಪ್ಪರವರನ್ನು ಬಗ್ಗು ಬಡಿದು ಸಿಕ್ಕಷ್ಟು ಬಾಚಿಕೊಳ್ಳಬೇಕು ಎಂಬು ಉದ್ದೇಶ ನಿಮ್ಮದಾಗಿತ್ತು ಅಲ್ಲವೇ?
ಇಲ್ಲಿ ನಾನು ಎಲ್ಲರ ಅಭಿಪ್ರಾಯ ಹೇಳುತ್ತಿಲ್ಲ, ಆದರೆ ನಾವು ೧೧ ಮಂದಿಯೂ ಒಟ್ಟಿಗಿದ್ದೇವೆ. ನನಗೆ ಮಂತ್ರಿಗಿರಿಯ ಆಸೆಯಿಲ್ಲ, ಬೇರೆಯವರ ಮನಸ್ಸಲ್ಲಿ ಇರಲೂಬಹುದು. ಮಂತ್ರಿ ಗಿರಿ ಸಿಗುವುದು ಬಿಡುವುದು ದೇವರ ಕೈಯಲ್ಲಿದೆ.


ನೀವು ಬಿಜೆಪಿ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಆದರೆ ಯಡಿಯೂರಪ್ಪರಿಗೆ ನಮ್ಮ ವಿರೋಧವಿದೆ ಎಂದು ಹೇಳುತ್ತಿದ್ದೀರಿ, ಇದು ಹೇಗೆ ಸಾಧ್ಯ?
ನಾನು ನ್ಯಾಯಾಲಯದಲ್ಲಿ ಆ ರೀತಿ ವಾದ ಮಾಡುತ್ತಿದ್ದೆವೆ ಅದು ಒಂದೆಡೆಗಿರಲಿ.


ಅಂದರೆ ನೀವು ನ್ಯಾಯಲಯದ ದಿಕ್ಕು ತಪ್ಪಿಸುತ್ತಿದ್ದೀರಾ?
ಇಲ್ಲಿ ನ್ಯಾಯಾಲುದ ದಿಕ್ಕನ್ನು ತಪ್ಪಿಸುವ ಪ್ರಶ್ನೆಯಿಲ್ಲ. ನಮಗೆ ಯಡಿಯೂರಪ್ಪರ ಮೇಲೆ ಯಾವುದೇ ಕೋಪವಿಲ್ಲ. ರೆಣುಕಾಚಾರ್ಯ ಆ ರೀತಿ ಬರೆದು ನಮ್ಮ ಸಹಿ ತೆಗೆದುಕೊಂಡು ನಮಗೆ ಮೋಸ ಮಾಡಿದ. ನಾವು ಒಳ್ಳೆಯ ಗೆಳೆಯ ಎಂದು ಅವನ ಮಾತನ್ನು ನಂಬಿದ್ದೇವು. ಆದರೆ ಆತ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾನೆ. ಆದರೆ ಈಗ ಅವರು ತಾವು ಬಹಳ ಸಾಚ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಹಿಂದೆ ದಿನ ಬೆಳಗಾದರೆ ಮುಖ್ಯಮಂತ್ರಿ, ಶೋಭಾ ಕರಂದ್ಲಾಜೆ, ಬಳಿಗಾರ್ ವಿರುದ್ದ ಅವರನ್ನು ನಿಂದಿಸಿ ಮಾತನಾಡುತ್ತಿದ್ದರು. ಇದನ್ನೆಲ್ಲ ರಾಜ್ಯದ ಜನತೆ ಕಂಡಿದ್ದಾರೆ, ಈ ರೀತಿ ಮಾತನಾಡಲು ರಾಜ್ಯ ಜನತೆ ಕಣ್ಣುಮುಚ್ಚಿ ಕುಳಿತುಕೊಂಡಿದ್ದರಾ?


ನಿಮ್ಮನ್ನು ರೇಣುಕಾಚಾರ್ಯರು ಬಳಸಿಕೊಳ್ಳುತ್ತಿದ್ದಾರೆ ಎಂದು ಅರಿವಾದಾಗ ಭಿನ್ನ ಮತೀಯರ ಕ್ಯಾಂಪ್ ಬಿಟ್ಟು ಬಂದು ಬಿಜೆಪಿ ಪಾಳಯ ಸೇರಬಹುದಿತ್ತಲ್ಲವೇ? ಈ ರೀತಿ ಮಾಡಿದವರನ್ನು ಬಿಜೆಪಿ ಸ್ವಾಗತ್ತಿಸಿತ್ತು ಅಲ್ಲವೇ?
ನಮಗೆ ರೇಣುಕಾಚಾರ್ಯ ಆ ಅವಕಾಶವನ್ನೇ ಮಾಡಿಕೊಡಲಿಲ್ಲ. ಆತ ತಾನೆ ಎಲ್ಲವನ್ನು ನಿಭಾಯಿಸುತೇನೆ ಎಂದು ನಮ್ಮನ್ನು ಕತ್ತಲೆಯಲ್ಲಿಟ್ಟ.


ನಿಮ್ಮ ವರ್ತನೆಯಿಂದಾಗಿ ನೀವೀಗ ತ್ರಿಶಂಕು ಸ್ಥಿತಿಯಲ್ಲಿದ್ದಿರಿ ಅಲ್ಲವೇ?
ಇಲ್ಲ, ನನಗೆ ಎಲ್ಲ ಜನರ ಬೆಂಬಲ ಸಿಕ್ಕಿದೆ. ನನ್ನ ಕ್ಷೇತ್ರದ ಜನ ೧೦೦ರಲ್ಲಿ ೯೫ ಮಂದಿ ಅವರಿಗೆ ಮೋಸ ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಆದರೆ ಅಂಬೇಡ್ಕರ್ ರೂಪಿಸಿದ ಸಂವಿಧಾನ, ಕಾನೂನು ಧೂಳಿಪಟವಾಗುತ್ತಿದೆ ಅದನ್ನು ಉಳಿಸಿ ಅಂತ ನಾವು ಹೋರಾಟ ಮಾಡಬೇಕಾಗಿದೆ ಎಂಬುದು ನನ್ನ ನೋವು. ಈ ಪ್ರಕರಣದಲ್ಲಿ ಯಾರ ಪರವಾದ ತೀರ್ಪು ಬಂದರೂ ಕೂಡ ಮತ್ತೊಂದು ತಂಡ ಮೇಲಿನ ನ್ಯಾಯಾಲಯಕ್ಕೆ ಹೋಗುವುದು ನಿಶ್ಚಯ. ಅದ್ದರಿಂದ ಸರ್ಕಾರ ಕೂಡ ಅತಂತ್ರವಾಗಿದೆ. ಅವರು ನೆಮ್ಮದಿಯಾಗಿಲ್ಲ. ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ನಾಡಿನ ಎಸ್‌ಸಿ- ಎಸ್‌ಟಿ ಜನಾಂಗಕ್ಕೆ ಕೆಟ್ಟ ಸಂದೇಶ ಹೋಗಿದೆ. ನಮ್ಮಲ್ಲಿರುವ ಹೆಚ್ಚಿನ ಶಾಸಕರು ಈ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿಗೆ ಎಸ್‌ಸಿ- ಎಸ್‌ಟಿ ಜನಾಂಗಕ್ಕೆ ಆ ಮತಗಳು ಬೇಡವೇ?


ಅಂದರೆ ಬಿಜೆಪಿ ಸರ್ಕಾರ ಈ ಜನಾಂಗದವರ ಮೇಲೆ ದಬ್ಬಾಳಿಕೆ ಮಾಡುತ್ತಿದೆಯೇ?
ಇಂದು ನಾವು ರಾಜ್ಯದಲ್ಲಿರುವ ಎಸ್‌ಸಿ - ಎಸ್‌ಟಿ ಜನಾಂಗವನ್ನು ಪ್ರತಿನಿಧಿಸುತ್ತಿದ್ದೇವೆ. ಅದ್ದರಿಂದ ಸಂಪಂಗಿಗೆ ಅನ್ಯಾಯದರೆ ರಾಜ್ಯದಲ್ಲಿರುವ ಎಲ್ಲ ದಲಿತರಿಗೆ ಅನ್ಯಾಯವಾದಂತೆ. ಇದನ್ನು ನಾನು ನೋವಿನಿಂದ ಹೇಳುತ್ತಿದ್ದೇನೆ.

ನಿಮ್ಮನ್ನು ಪಕ್ಷ ಸ್ವಿಕರಿಸುವುದಿಲ್ಲ ಎಂದು ಬಿಜೆಪಿಯ ಉನ್ನತ ನಾಯಕರಲ್ಲಿ ಒಬ್ಬರಾಗಿರುವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಆದರೂ ನೀವು ಬಿಜೆಪಿಯ ಕದ ತಟ್ಟುವುದು ಎಷ್ಟು ಸರಿ.
ಅವರು ಮಾಧ್ಯಮಗಳ ಮುಂದೆ ಆ ರೀತಿ ಹೇಳಿರಬಹುದು. ಅವರು ಹೇಳಿರುವ ಧಾಟಿ ನನಗೆ ಗೊತ್ತಿಲ್ಲ, ಅವರು ಹಿರಿಯರಿದ್ದಾರೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.

ಇಷ್ಟೆಲ್ಲ ಅವಮಾನವಾದರೂ ಕೂಡ ತಾನು ಬಿಜೆಪಿಯ ಸದಸ್ಯ ಎಂದು ನೀವು ಹೇಳಿಕೊಳ್ಳುವುದು ಎಷ್ಟು ಸರಿ?
ನಾನು ಯಾವುದೇ ತಪ್ಪು ಮಾಡಿಲ್ಲ, ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಪಕ್ಷದ ವಿಪ್ ಉಲ್ಲಂಘಿಸಿಲ್ಲ, ಬೇರೆ ಯಾರಿಗಾದರೂ ನಾವು ವೋಟ್ ಹಾಕಿದ್ದೇವಾ? ನಾನು ಮನಸಾಕ್ಷಿ, ಆತ್ಮ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ನಾವು ರೆಸಾರ್ಟ್‌ಗೆ ಹೋದದ್ದು, ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು ಎಲ್ಲವೂ ಸತ್ಯ. ಇದು ಎಲ್ಲರಿಗೂ ಗೊತ್ತಿದೆ. ನಾವು ಜನಪ್ರತಿನಿಧಿಗಳಾದ ಕಾರಣ ಸುಳ್ಳು ಹೇಳಲಿಕ್ಕಾಗುವುದಿಲ್ಲ. ಆದರೆ ಬೇರೆ ಪಕ್ಷದವರ ಜೊತೆ ಮಾತನಾಡಿದ ತಕ್ಷಣ ಅದು ಬಂಡಾಯ ಅಥವಾ ಪಕ್ಷಾಂತರ ಹೇಗಾಗುತ್ತದೆ. ನಮ್ಮ ಮೇಲೆ ಸುಮ್ಮನೆ ಸಂಶಯ ಪಡಲಾಗಿದೆ. ನಾನು ಬಿಜೆಪಿಯ ಶಾಸಕನಾಗಿಯೇ ಉಳಿಯುತ್ತೇನೆ.

ಹಾಗಾದರೆ ಬಿಜೆಪಿಗೆ ತಮ್ಮ ಶಾಸಕರ ಮೇಲೆಯೇ ನಂಬಿಕೆ ಇಲ್ಲವೆ?


ನಮ್ಮ ಮೇಲೆ ಅವರಿಗೆ ಸಂಶಯವಿತ್ತು. ಅವರು ಎಲ್ಲಿ ತಮಗೆ ಕೈ ಕೊಡುತ್ತಾರೋ ಎಂಬುದು ಅವರ ಸಂಶಯಕ್ಕೆ ಕಾರಣ. ಆದರೆ ನಾವು ಯಾವತ್ತು ಮುಖ್ಯಮಂತ್ರಿಗಳ ವಿರುದ್ಧ ನಿಂತಿಲ್ಲ. ಆದರೆ ಅವರ ವಿರುದ್ಧ ತೊಡೆ ತಟ್ಟಿ ನಿಂತ ರೇಣುಕಾಚಾರ್ಯರನ್ನೇ ನೀವು ಯಾಕೆ ಸ್ವೀಕರಿಸಿದ್ದೀರಿ? ನಮ್ಮನೆಲ್ಲ ಯಾಕೆ ದೂರ ತಳ್ಳಿದ್ದೀರಿ ಎಂಬುದೇ ನನ್ನ ನೋವು.
ತನ್ನಲ್ಲಿರುವ ಹಿಂದುಳಿದ ಜನಾಂಗಕ್ಕೇ ಸೇರಿದ ನಾಯಕರನ್ನು ಬಿಜೆಪಿ ಹುಡುಕಿ ಹುಡುಕಿ ಕ್ರಮ ಕೈಗೊಳ್ಳುತ್ತಿಯೇ?
ಹೌದು ಹೌದು.

ನ್ಯಾಯಾಲಯದ ತೀರ್ಪು ನಿಮ್ಮ ಪರ ಬಂದರೆ ನಿಮ್ಮ ಮುಂದಿನ ನಡೆಯೇನು?
 ನಾನು ಬಿಜೆಪಿ ಸದಸ್ಯ ಮತ್ತು ಆ ಪಕ್ಷದೊಂದಿಗೆಯೇ ಇರುತ್ತೇನೆ. ಆದರೆ ಸ್ಪೀಕರ್ ರಾತ್ರೋರಾತ್ರಿ ಆ ರೀತಿ ವರ್ತಿಸಬಾರದಿತ್ತು.


ಈ ಬಂಡಾಯ ಚಟುವಟಿಕೆಯಲ್ಲಿ ಕುಮಾರಸ್ವಾಮಿಯವರ ಪಾತ್ರವೇನು?
ಕುಮಾರಸ್ವಾಮಿಯವರ ಜೊತೆ ನಾನು ಮಾತನಾಡಿಲ್ಲ, ಈ ಎಲ್ಲಾ ಚಟುವಟಿಕೆಗಳಿಂದ ಬೇಸತ್ತಿದ್ದೇನೆ. ನಾವು ೧೧ ಜನ ಒಟ್ಟಾಗಿದೇವೆ. ಕುಮಾರಸ್ವಾಮಿ ಜಾತ್ಯತೀತ ಜನತಾದಳದ ಉನ್ನತ ನಾಯಕರಾಗಿದ್ದಾರೆ. ನಾವು ಅವರ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನಾವು ಚುನಾವಣೆಯಲ್ಲಿ ಬಿಜೆಪಿಯಿಂದ ಆ ಪಕ್ಷದ ಚಿಹ್ನೆಯಡಿಯಲ್ಲಿ ನಿಂತಿದ್ದೆವು. ನಾವು ಈಗಲೂ ಬಿಜೆಪಿಯ ಶಾಸಕರಾಗಿಯೇ ಇದ್ದೇವೆ.