Sunday, January 24, 2010

ಕಾಲೇಜುಗಳಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿ

ಅದು ಬಾಲ್ಯ... ಅದು ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯೋತ್ಸವೇ ಆಗಿರಲಿ ಅಂದು ಇಡೀ ಶಾಲೆಯೇ ಆ ದಿನದ ಆಚರಣೆಯ ಸಂಭ್ರಮದಲ್ಲಿ ಮಿಂದು ತೋಯುವುತ್ತಿತ್ತು. ಇದು ನನ್ನ ಬಾಲ್ಯದ ಅಥವಾ ಶಾಲಾದಿನಗಳ ಕಥೆ ಮಾತ್ರವಲ್ಲ, ಬಹುಪಾಲು ಎಲ್ಲರದ್ದು. ಈಗ ಶಾಲೆಗೆ ಹೋಗುತಿರುವವರದ್ದು ಕೂಡ!

ಬಹುಶ: ಹತ್ತನೇ ತರಗತಿ ತನಕ ಸ್ವಾತಂತ್ರ್ಯ ದಿನಾಚರಣೆಯಲ್ಲಿನ ಪಾಲ್ಗೊಳ್ಳುವಿಕೆಯ ಸಂಭ್ರಮ ಅನಂತರ ಎಂದಿಗೂ ನಮಗೆ ದಕ್ಕುವುದಿಲ್ಲ. ಕಾಲೇಜುಗಳಿಗೆ ಬಂದರೆ, ರಾಷ್ಟ್ರೀಯ ಹಬ್ಬಗಳೆಂಬುದು ಕ್ಯಾಲೆಂಡರಿನಲ್ಲಿ ಕೆಂಪು ಅಂಕಿಯಲ್ಲಿ ಬರೆದಿಟ್ಟ ರಜಾದಿನವಾಗಿ ಬಿಡುತ್ತದೆ.

ಇಲ್ಲಿ ಇಂತಹ ದಿನಾಚರಣೆಗಳ ನಿರ್ವಹಣೆಯ ಜವಾಬ್ದಾರಿ ಎನ್ಎಸ್ಎಸ್, ಎನ್ಸಿಸಿ ಮುಂತಾದವುಗಳ ಕರ್ತವ್ಯ ಎಂಬ ಭಾವನೆ. ಅಥವಾ ಇದಕ್ಕೆಂದೇ ರಚಿಸಲ್ಪಟ್ಟಿರುವ ಸಮಿತಿ ಈ ಕಾರ್ಯ ನಿರ್ವಹಿಸುತ್ತದೆ. ಅಂದರೆ ವಿದ್ಯಾರ್ಥಿಗಳ ಸಾಮೂಹಿಕ ಪಾಲ್ಗೋಳ್ಳುವಿಕೆಯೇ ಇರುವುದಿಲ್ಲ! ಆ ಕಾರಣದಿಂದ ಇದು ಹತ್ತರ ಜತೆ ಹನ್ನೊಂದನೇ ರಜಾ ದಿನವಾಗುತ್ತದೆ. ಅದ್ದರಿಂದ ಕಾಲೇಜುಗಳಲ್ಲಿನ ಈ ದಿನದ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲೇಬೇಕು.

ಈ ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವಿಲ್ಲ ಎಂದರ್ಥವಲ್ಲ. ಈ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ದೇಶಪ್ರೇಮವನ್ನು ಪ್ರಕಟಿಸುವ ಒಂದು ವಿಧಾನವಷ್ಟೇ. ಈ ಸತ್ಯವನ್ನು ಒಪ್ಪಿಕೊಂಡು ನಾವು ಮುಂದುವರಿಯೋಣ.

ಶಾಲೆಗಳಲ್ಲಿ ತುಂಬು ಉತ್ಸಾಹದಿಂದ ಭಾಗವಹಿಸುವ ವಿದ್ಯಾರ್ಥಿಯೊಬ್ಬ ಕಾಲೇಜು ಮೆಟ್ಟಿಲೇರಿದೊಡನೇ ಈ ಅಚರಣೆಯಿಂದ ಯಾಕೆ ವಿಮುಖನಾಗುತ್ತಾನೆ? ಶಾಲೆಗಳಲ್ಲಿ ಕಡ್ಡಾಯ ಭಾಗವಹಿಸುವಿಕೆಯ ಒತ್ತಡವಿರಬಹುದು, ನಾನದನ್ನು ನಿರಾಕರಿಸುವುದಿಲ್ಲ. ಆದರೆ ಅವರಲ್ಲಿ ಈ ಕಡ್ಡಾಯದ ಕಟ್ಟಪ್ಪಣೆಯನ್ನು ಮೀರಿದ ಸಂಭ್ರಮವಿದ್ದೇ ಇರುತ್ತದೆ. ಇಲ್ಲದಿದ್ದಲ್ಲಿ ಅವರಲ್ಲಿ ಆ ಉತ್ಸಾಹ ಕಂಡು ಬರಲು ಸಾಧ್ಯವೇ ಇಲ್ಲ. ಮತ್ತು ಈ ಉತ್ಸಾಹ ಹುಟ್ಟಲು ಕೂಡ ಅನೇಕ ಕಾರಣ ಮತ್ತು ವಿಷಯಗಳಿರುತ್ತವೆ.

ಇದು ನಾವೆಲ್ಲ ಯೋಚನೆ ಮಾಡುವ ಕಾರಣಗಳಿಗಿಂತ ಭಿನ್ನ. ಉದಾಹರಣೆಗೆ ಒಂದನೇ ತರಗತಿಯ ಮಗುವಿಗೆ ಸ್ವಾತಂತ್ರ್ಯವೆಂದರೇನು? ಅದನ್ನು ಯಾರು ಕೊಟ್ಟರು? ಯಾಕೆ ಕೊಟ್ಟರು? ಅದು ಅಲ್ಲಿವರೆಗೆ ಎಲ್ಲಿತ್ತು? ಹೇಗಿತ್ತು? ಈಗ ಹೇಗಿದೆ? ಅದಿಲ್ಲದಿದ್ದರೇ ಏನಾಗುತ್ತ್ತಿತ್ತು? ಅದನ್ನು ಪಡೆಯಲು ಏನು ಮಾಡಿದರು? ಹೋರಾಟವೆಂದರೇನು? ಬ್ರಿಟಿಷರು ಎಂದರೆ ಯಾರು? ಅವರ್ಯಾಕೆ ಕೆಟ್ಟವರಾಗಿದ್ದರು? ಮುಂತಾದ ಅದರ ಮುಗ್ದ ಮನಸ್ಸಿನ ಪ್ರಶ್ನೆಗಳಿಗೆ ಆ ದಿನ ಉತ್ತರ ಸಿಗುತ್ತದೆ. ಅಥವಾ ಆ ದಿನ ಅ ಮಗುವಿನ ನೃತ್ಯ, ಭಾಷಣ, ನಾಟಕ ಅಥವಾ ಇನ್ನೀತರ ಕಾರ್ಯಕ್ರಮಗಳಿರಬಹುದು. ಇಲ್ಲ, ಎಲ್ಲರೂ ಈ ದಿನವನ್ನು ಆಚರಿಸುತ್ತಾರೆ, ನಾನೂ ಆಚರಿಸುತ್ತೇನೆ ಅದ್ದರಿಂದ ನಾನೂ ’ಆ ಎಲ್ಲರೊಂದಿಗೆ’ ಗುರುತಿಸಿಕೊಂಡಂತಾಗುತ್ತದೆ ಎಂಬ ಕಾರಣಕ್ಕಾಗಿ ಆ ಸಂಭ್ರಮ ಹುಟ್ಟಿಕೊಂಡಿರಲುಬಹುದು.

ಆದೇನೇ ಆದರೂ ಅ ಮಗು, ಈ ದಿನದ ಆಚರಣೆಯಲ್ಲಿ ಭಾಗಿಯಾಗಿ ಒಂದು ರಜೆ ಕಳೆದುಕೊಂಡರು ಅದಕ್ಕಿಂತ ಮಿಗಿಲಾದ ಇನ್ನೇನಾನ್ನೋ ಪಡೆದುಕೊಂಡಿರುತ್ತದೆ. ಆದರೆ ಕಾಲೇಜಿಗಳಲ್ಲಿನ ಸ್ವಾತಂತ್ರ್ಯದಿನ ಆಚರಣೆ ಇಲ್ಲೇ ಎಡವಿದೆ ಎಂದೇ ನನಗನಿಸುತ್ತಿದೆ. ಕಾಲೇಜುಗಳಲ್ಲಿನ ಸ್ವಾತಂತ್ರ್ಯದಿನದ ಕಾರ್ಯಕ್ರಮಗಳು ತೀರಾ ನೀರಸ.

ಅದ್ದರಿಂದ ಕಾಲೇಜುಗಳಲ್ಲಿನ ರಾಷ್ಟ್ರೀಯ ಆಚರಣೆಗಳನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಚಿಂತಿಸುವುದು ಅನಿವಾರ್ಯ. ಇಲ್ಲಿ ’ಅಕರ್ಷಕ’ ಅಂದರೆ ಮನರಂಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಅಂದು ಆಯೋಜಿಸುವುದು ಎಂದಲ್ಲ.

ಇಂದು ಕಾಲೇಜುಗಳಲ್ಲಿ ಸ್ವಾತಂತ್ರ್ಯದಿನದ ಕಾರ್ಯಕ್ರಮವೆಂದರೆ ಧ್ವಜಾರೋಹಣ, ಜನಗಣಮಣ, ವಂದೇ ಮಾತರಂ, ಸಾರೇ ಜಹಾಂಸೇ ಅಚ್ಚಾ, ಮುಂತಾದ ರಾಷ್ಟ್ರಗೀತೆ ಅಥವಾ ದೇಶಭಕ್ತಿ ಗೀತೆಗಳ ಹಾಡುವಿಕೆ ಮತ್ತು ತದನಂತರ ಒಂದು ಸಭಾ ಕಾರ್ಯಕ್ರಮ ಅಮೇಲೆ ಸಿಹಿತಿಂಡಿ ಹಂಚುವಿಕೆ ಇಷ್ಟಕ್ಕೆಯೇ ಮುಗಿದು ಹೋಗುತ್ತಿದೆ.

ಇಲ್ಲಿ ಧ್ವಜಾರೋಹಣ ಮತ್ತದಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳಲ್ಲಿ ನಮಗೆ ಒಂದಿನಿತೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಮತ್ತು ದಲಾವಣೆ ಸಾಧೂವೂ ಅಲ್ಲ. ಆದರೆ ಉಳಿದ ಕಾರ್ಯಕ್ರಮಗಳನ್ನು ರಂಗೇರಿಸಬಹುದಲ್ಲವೇ?

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ದೇಶದಲ್ಲಿ ಹತ್ತಾರು ಸಮಸ್ಯೆಗಳಿದ್ದವು, ಇಂದೂ ಅವೇ ಸಮಸ್ಯೆಗಳಿವೆ ಅದರೊಂದಿಗೆ ಹೆಚ್ಚುವರಿಯಾಗಿ ಇನ್ನೂ ಕೆಲ ಸಮಸ್ಯೆಗಳು ಸೇರಿಕೊಂಡಿವೆ. ಅದರೆ ಈ ಎಲ್ಲ ಸಮಸ್ಯೆಗಳ ನಡುವೆ ಬ್ರಿಟಿಷ್ ಆಳ್ವಿಕೆಯೇ ದೊಡ್ಡ ಸಮಸ್ಯೆಯಾಗಿ ಕಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಜನರೆಲ್ಲ ಸಂಘಟಿತರಾದರು ಮತ್ತದರಲ್ಲಿ ಯಶ ಪಡೆದರು. ಇಂದು ನಮ್ಮ ಶಿಕ್ಷಣ ಮಟ್ಟ, ಜೀವನ ಮಟ್ಟ, ಆರೋಗ್ಯ ಮಟ್ಟ ಎಲ್ಲವೂ ಹೆಚ್ಚಾಗಿದೆ. ಆದರೆ, ನಾವು ಯಾವುದೇ ಒಂದು ಕಾರಣಕ್ಕೇ ಸಂಘಟಿತರಾಗಿಯೇ ಇಲ್ಲ. ಆದೂ ಒಟ್ಟಾಗಲೂ ಹತ್ತಾರು ಕಾರಣಗಳಿದ್ದರು!

ಸ್ವಾತಂತ್ರ್ಯದಿನದ ಆಚರಣೆಯ ಮೂಲಕ ನಾವು ಸಂಘಟಿತರಾಗುವ ಪ್ರಕ್ರಿಯೆ ಶುರು ಮಾಡಬಹುದು. ಅದು ಹೇಗೆಂದರೆ...

ಕರ್ನಾಟಕ ಸರಕಾರ ಯುವಜನರಲ್ಲಿ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿಯುಂಟು ಮಾಡಲು ಕಳೆದ ವರ್ಷ ಇದೇ ಸಮಯದಲ್ಲಿ ರಾಜ್ಯಾದ್ಯಂತ ’ಭಯೋತ್ಪಾದನಾ ವಿರೋಧಿ ಜಾಗೃತಿ ಅಭಿಯಾನ’ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಆ ಕಾರ್ಯಕ್ರಮ ಯಶ ಕಂಡಿತು. ಕೆಲ ಮಂದಿ ರಾಜಕೀಯ ಕಾರಣಕ್ಕಾಗಿ ಈ ಅಭಿಯಾನವನ್ನು ವಿರೋಧಿಸಿದರೂ ಕೂಡ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಂಘಟಿತರಾಗಿಯೇ ಭಾಗವಹಿಸಿದರು. ಅಂದರೆ ಭಯೋತ್ಪಾದನೆ ಎಂಬ ರಕ್ಕಸನಿಗೆ ನಮ್ಮೆಲ್ಲರನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ ಎಂದಾಯಿತಲ್ಲವೇ? ಹಾಗೇ ಸರಕಾರ ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲದು ಎಂದೂ ಕೂಡ ಅಲ್ಲೇ ಸಾಬೀತಾಗಿದೆ.

ವಾಸ್ತವವಾಗಿ ನಮ್ಮನ್ನು ಈಗ ಕಾಡುತ್ತಿರುವ ಭಯೋತ್ಪಾದನಾ ಸಮಸ್ಯೆ ಬಹಳ ದೊಡ್ಡ ಇತಿಹಾಸವನ್ನು ಹೊಂದಿಲ್ಲ. ಮತ್ತು ಈ ಸಮಸ್ಯೆಯಿಂದ ದೇಶದ ಸಮಸ್ತರು ತೊಂದರೆಗೀಡಾಗಿದ್ದಾರೆ ಎಂದು ಹೇಳುವುದು ಕೂಡ ಸರಿಯಲ್ಲ. ಇಂದು ದೇಶದಲ್ಲಿ ಭಯೋತ್ಪಾದನೆಯ ಕಾರಣದಿಂದ ಸಾಯುವುದಕ್ಕಿಂತ ಹೆಚ್ಚಾಗಿ ಆತ್ಮಹತ್ಯೆ, ಅಪಘಾತ, ಸೂಕ್ತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಸಿಗದಿರುವುದು, ಮೂಡನಂಬಿಕೆ ಮುಂತಾದ ಕಾರಣಗಳಿಂದ ಸಾಯುತ್ತಾರೆ. ಹಾಗೆಯೇ ಜಾತಿಯತೆ, ಭ್ರಷ್ಟಾಚಾರ, ಪ್ರಾದೇಶಿಕತೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ವಿದೇಶಿ ವಸ್ತುಗಳ ಮೇಲಿನ ಮೋಹ, ದೇಶದ ಬಗೆಗಿನ ಅಸಡ್ಡೆ ಮುಂತಾದ ಅಪಾಯಕಾರಿ ಸಮಸ್ಯೆಗಳಿವೆ.

ಹಿಂದೆ ಬ್ರಿಟಿಷರನ್ನು ಓಡಿಸಿ ಒಂದು ಸಮಸ್ಯೆಗೆ ಮಂಗಳ ಹಾಡಿದ ನಾವು ಉಳಿದ ಸಮಸ್ಯೆಗಳ ಜೊತೆಜೊತೆಗೆ ಬದುಕುವ ಜೀವನವನ್ನೂ ರೂಢಿಸಿಕೊಂಡೆವು. ಇಂದು ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲೂ ಇದೇ ಮರುಕಳಿಸುತ್ತದೆ ಎಂದು ನನಗನಿಸುತ್ತಿದೆ. ಭಯೋತ್ಪಾದನೆ ನಾಶವಾಗಬಹುದು ಮತ್ತು ಆಗುತ್ತದೆ. ಆದೇ ಉಳಿದ ಸಮಸ್ಯೆಗಳು ಆಳಿಯದೇ ಉಳಿದು ಬಿಡುತ್ತವೆ. ಆಗ?

ಪ್ರತಿ ವರ್ಷ ರಾಷ್ಟ್ರೀಯ ದಿನಗಳಿಗೆ ರಾಷ್ಟ್ರವ್ಯಾಪಿ ಒಂದು ಗುರಿ, ಉದ್ದೇಶ ಅಥವಾ ಅಭಿಯಾನವನ್ನು ಸರಕಾರ ಇಟ್ಟುಕೊಳ್ಳಬೇಕು. ಎಲ್ಲ ರಾಷ್ಟ್ರಿಯ ಹಬ್ಬಗಳಿಗೆ ಇದು ಸಾಧ್ಯವಾಗದೇ ಹೋದರು ಯಾವುದಾದರೂ ಒಂದು ಹಬ್ಬಕ್ಕೆ ಖಂಡಿತವಾಗಿ ಮಾಡಬಹುದು. ಉದಾಹರಣೆಗೆ ಈ ವರ್ಷದ ಗಣರಾಜ್ಯೋತ್ಸವವನ್ನು ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನಾಗಿಸಿಕೊಂಡು ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ದೇಶಾದ್ಯಂತ ಮಾಡುತ್ತೇವೆ ಎಂದು ಕೇಂದ್ರ ಸರಕಾರವೇ ಘೋಷಿಸಬೇಕು. ಮತ್ತು ತಿಂಗಳ ಆರಂಭದಿಂದಲೇ ಆ ವರ್ಷದ ಗುರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇಶದ ಗಲ್ಲಿ ಗಲ್ಲಿಗೂ ಸಂದಿಗೊಂದಿಗೂ ಈ ಅಭಿಯಾನ ತಲುಪಬೇಕು. ಜನವರಿ ೨೬ಕ್ಕೇ ಈ ಅಭಿಯಾನದ ಸಮಾಪನಾ ಜರುಗುವಂತೆ ಯೋಜನೆ ಮಾಡಬೇಕು. ಇದಕ್ಕೆ ಕರ್ನಾಟಕ ಸರಕಾರದ ಭಯೋತ್ಪಾದನಾ ವಿರೋಧಿ ಅಭಿಯಾನದ ಮಾದರಿಯನ್ನೇ ತೆಗೆದುಕೊಳ್ಳಬಹುದು.

ಪ್ರತಿ ವರ್ಷ ಒಂದೊಂದು ಉದ್ದೇಶವಿಟ್ಟುಕೊಂಡಾಗ ಯುವ ಜನತೆಗೆ ದೇಶದ ಹಲವಾರು ಸಮಸ್ಯೆಗಳ ಪರಿಚಯವಾಗುತ್ತದೆ. ಅದಕ್ಕೇನು ಕಾರಣ? ಪರಿಹಾರವೇನು?ಆ ಸಮಸ್ಯೆಯಲ್ಲಿ ಮತ್ತದರ ಪರಿಹಾರದಲ್ಲಿ ತಮ್ಮ ಪಾತ್ರವೇನು ಮುಂತಾದ ಅಂಶಗಳು ಅವರಿಗೆ ತಿಳಿಯುತ್ತದೆ. ಇದರರ್ಥ ಅವರಿಗೆ ದೇಶದ ಜ್ವಲಂತ ಸಮಸ್ಯೆಗಳ ಆರಿವು ಇಲ್ಲವೆಂದಲ್ಲ. ಆರಿವಿದೆ, ಆದರೆ ಆ ಆರಿವು ಸಾಮೂಹಿಕವಾದಾಗ ಪ್ರಯತ್ನವೂ ಸಾರ್ವತ್ರಿಕವಾಗುತ್ತದೆ ಮತ್ತು ಕಣ್ಣಿಗೆ ಕಾಣಿಸುವ ಬದಲಾವಣೆ ಸಾಧ್ಯವಾಗುತ್ತದೆ. ಸಮಾನ ಮನಸ್ಕರು ಒಟ್ಟು ಸೇರಿ ಒಂದು ವ್ಯವಸ್ಥಿತ ಬದಲಾವಣೆ ಸಂಭವಿಸುತ್ತದೆ.

ಇದನ್ನು ಮನಗಂಡ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸುವುದನ್ನೇ ಒಂದು ಸಾಧನವನ್ನಾಗಿಸಿಕೊಂಡು ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ದದ ಹೋರಾಟಕ್ಕೇ ಅಣಿಗೊಳಿಸಿದ್ದು.

ನಾನು ಹೇಳುತ್ತಿರುವುದೂ ಅದೇ, ಈ ದಿನಾಚರಣೆಯ ನೆವದಲ್ಲಿ ನಾವೆಲ್ಲಾ ಒಂದಾಗಿ ನಮ್ಮನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಅರಿತು ಕೊಂಡು ಅದರ ವಿರುದ್ದ ಹೋರಾಡೋಣ. ಕನಿಷ್ಟ ಪಕ್ಷ ಈ ಸಮಸ್ಯೆಗಳು ಒಂದು ಸವಾಲಾಗಿಯಾದರೂ ಪರಿವರ್ತನೆಗೊಳ್ಳಬಹುದು.

ಉದಾಹರಣೆಗೆ ಬಹುಪಾಲು ರಸ್ತೆ ಅಪಘಾತಗಳು ಬೇಜವಾಬ್ದಾಯಿಂದಲೇ ಘಟಿಸುತ್ತವೇ ಎಂಬುದು ಸರ್ವವೇದ್ಯ. ಇದರ ಆರಿವು ಜನರಿಗೆ ತಮ್ಮ ಅನುಭವ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳಿಂದ ದಕ್ಕಿದೆ. ಆದರೆ ಅದನ್ನು ಓದಿದ ಬಹುಪಾಲು ಮಂದಿ ಹೆಚ್ಚೆಂದರೆ ಒಂದು ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತಾರೆ. ಆದರೆ ರಸ್ತೆ ನಿಯಮಗಳನ್ನು ಪಾಲಿಸುವುದು ಕೂಡ ದೇಶಪ್ರೇಮದ ಒಂದು ಭಾಗ ಅಥವಾ ಅಂಗವೆಂದಾದಾಗ ಜನರ ಚಿಂತನಕ್ರಮದಲ್ಲಿ ಬದಲಾವಣೆ ಸಾಧ್ಯವಾಗಬಹುದು.

ಯಾಕೆಂದರೆ ನಾವು ದೇಶಪ್ರೇಮವೆಂದರೆ ಪರಕೀಯರ ವಿರುದ್ಧ ಹೋರಾಡುವುದು, ಹೋರಾಡುವವರನ್ನು ಹುರಿದುಂಬಿಸುವುದು ಮತ್ತು ಅಗತ್ಯವಾದರೆ ತಾವೇ ಬಲಿದಾನ ಮಾಡುವುದು ಎಂಬುದಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದೇವೆ. ಮತ್ತೋಬ್ಬರ ಜೀವವನ್ನು ಅಥವಾ ಜೀವನವನ್ನು ರಕ್ಷಿಸುವುದು ಅಥವಾ ಗೌರವಿಸುವುದಕ್ಕೂ ದೇಶಪ್ರೇಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಮನೋಭಾವ ನಮ್ಮದು. ’ಇಲ್ಲ, ನೀನು ನಿನ್ನ ದೇಶಪ್ರೇಮವನ್ನು ಈ ಮೂಲಕ ಪ್ರಕಟಿಸಬಹುದು’ ಅಂದಾಗ ಮತು ಈ ಮನೋಭಾವ ಎಲ್ಲ ಕಡೆ ಒಮ್ಮೆಗೆ ಹಬ್ಬಿದಾಗ ಎಲ್ಲೋ ಒಂದು ಕಡೆ ರಸ್ತೆ ನಿಯಮಗಳನ್ನು ಪಾಲಿಸದಿರುವುದು ದೇಶದ್ರೋಹಕ್ಕೆ ಸಮಾನ ಎಂಬ ಭಾವ ನಮ್ಮ ಪ್ರಜ್ಞೆಯೊಳಗೆ ಸೇರಿಕೊಳ್ಳುತ್ತದೆ. ಅಷ್ಟಾದರೆ ಜನರಲ್ಲಿ ಜಾಗೃತಿ ಮೂಡಿದಂತೆಯೇ. ಇದಾಗಬೇಕಾದರೆ ಈ ಆರಿವು ಜನ ಮಾನಸಕ್ಕೇ ಸುನಾಮಿ ರೀತಿಯಲ್ಲಿ ಅಪ್ಪಳಿಸಬೇಕು. ಈ ಅಪ್ಪಳಿಸುವಿಕೆ ಸೃಷ್ಟಿಸಲು ಈ ರೀತಿ ಏಕಕಾಲದಲ್ಲಿ ದೇಶವ್ಯಾಪಿ ಜಾಗೃತಿ ಹುಟ್ಟಿಸುವ ಪ್ರಕ್ರಿಯೆ ಅನಿವಾರ್ಯ. ಆದಕ್ಕೇ ರಾಷ್ಟ್ರೀಯ ಹಬ್ಬಗಳಿಗಿಂತ ಮಜಬೂತಾದ ವೇದಿಕೆ ಮತ್ತು ಸಂದರ್ಭ ಬೇರ್ಯಾವುದಿದೆ?

ಇದೇ ಮಾತನ್ನು ಭ್ರಷ್ಟಾಚಾರಕ್ಕೂ ಅನ್ವಯಿಸಬಹುದು. ಭ್ರಷ್ಟ = ದೇಶದ್ರೋಹಿ ಎಂಬ ಸಮೀಕರಣ ಹುಟ್ಟಿಕೊಂಡದ್ದೇ ಆದರೆ ದೇಶಕ್ಕೇ ಬೇರೇನೂ ಬೇಕಾಗಿಲ್ಲ. ಇಲ್ಲಿ ಕೊಡುವವ ತೆಗೆದುಕೊಳ್ಳುವವ ಇಬ್ಬರೂ ಪರಮ ಪಾಪಿಗಳು ಎಂಬ ಮನೋಭಾವ ಸೃಷ್ಟಿಯಾದರೆ ಸಾಕು. ಭ್ರಷ್ಟರಿಗೆ ಸಾಮಾಜಿಕ ಬಹಿಷ್ಕಾರ ಕಟ್ಟಿಟ್ಟ ಬುತ್ತಿ. ಇದು ಖಂಡಿತ ತಿರುಕನ ಕನಸಲ್ಲ. ಸಮಾಜದ ಪಾಲ್ಗೊಳ್ಳುವಿಕೆ ಇದ್ದಲ್ಲಿ ಸುಲಭವಾಗಿ ನನಸಾಗಬಹುದಾದ ಕನಸು.

ನಾನ ಕಾರಣ, ಉದ್ದೇಶಗಳಿಂದ ನಾನ ಸ್ತರಗಳಲ್ಲಿ ಚದುರಿ ಹೋಗಿರುವ ದೇಶವಾಸಿಗಳನ್ನು ಕಂಗೆಡಿಸಿರುವ, ಕಂಗೆಡಿಸುತ್ತಿರುವ ಸಮಸ್ಯೆಗಳನ್ನೇ ದಾರವಾಗಿಸಿಕೊಂಡು ಅವರನ್ನು ಬೆಸೆಯುವ ಕೆಲಸ ಮಾಡಿದ್ದೆ ಆದಲ್ಲಿ ಈ ಸಮಸ್ಯೆಗಳು ನಮ್ಮ ನಿಯಂತ್ರಣಕ್ಕೆ ಬರುತ್ತವೆ. ಜನರಲ್ಲೂ ಪರಸ್ಪರ ವಿಶ್ವಾಸ ಮೂಡುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಯುವಜನತೆ ದೇಶದ ಮುಖ್ಯವಾಹಿನಿಗೆ ರಾಜಪಥದಲ್ಲೇ ತಲುಪಿದಂತಾಗುತ್ತದೆ.

ಇದರಿಂದ ಇಂತಹ ಮಹಾನ್ ದಿನಗಳ ಆಚರಣೆಗೂ ಒಂದು ಕಳೆ ಬರುತ್ತದೆ, ಸಾರ್ಥಕತೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಚಿವುದೇ?

No comments: