ಹೀಗೊಂದು ನೈಜ ಮೆಸೆಜ್ ಸಂಭಾಷಣೆ.
ಇವತ್ತು ನೀವು ಸೂಪರ್ಬ್ ಆಗಿ ಕಾಣುತ್ತಿದ್ದೀರಿ...
ಥ್ಯಾಂಕ್ಯೂ, ಹು ಇಸ್ ದಿಸ್?
ನಾನು ನಿಮ್ಮ ಅಭಿಮಾನಿ...
ಅಭಿಮಾನಿಯಾ? ವೆರಿ ನೈಸ್. ನೀವ್ಯಾಕೆ ನನ್ನ ಅಭಿಮಾನಿ?
ನಿಮ್ಮ ಡ್ರೆಸ್ ಸೆನ್ಸ್, ಮಾತನಾಡೋ ಸ್ಟೈಲ್, ನಿಮ್ಮ ಕಣ್ಣು... ಅದ್ಬುತ ಅದಕ್ಕೆ...
ನೀವು ನನ್ನನ್ನು ಎಷ್ಟು ದಿನದಿಂದ ನೋಡುತ್ತಿದ್ದೀರಿ?
೧೫ ದಿನದಿಂದ...
ಹೌದಾ! ನಿಮ್ಮ ಹೆಸರು ಹೇಳಿ ಪ್ಲೀಸ್.
ಇಲ್ಲ, ನೀವೇ ಹುಡುಕಿ... ಹೀಗೆ ಮುಂದುವರಿದ ಈ ಮೆಸೆಜ್ ಅವಳು ತನ್ನ ಮನೆ ವಿಳಾಸ ಕೊಡುವ ತನಕ ತಲುಪಿತ್ತು. ನಂತರ ನಾವು ಭೇಟಿಯಾಗುವ ದಿನ, ಸ್ಥಳ ಎಲ್ಲ ನಿಗದಿಯಾಯಿತು ಕೂಡ.
ವಾಸ್ತವವಾಗಿ ಆ ಹುಡುಗಿ ನನಗೆ ಪರಿಚಿತಳು. ಅವಳಿಗೂ ನನ್ನ ಪರಿಚಯವಿದ್ದೆ ಇದೆ. ಆದರೆ ಇದು ನನ್ನ ನಂಬರ್ ಮತ್ತು ನಾನು ಈ ರೀತಿ ’ಆಟವಾಡಿಸುತ್ತಿದ್ದೇನೆ’ ಎಂದು ಅವಳಿಗೆ ಗೊತ್ತಿರಲಿಲ್ಲ.
ನೀವು ಅಂಗನವಾಡಿಯಲ್ಲಿ ಟೀಚರಾ? ಎಂಬ ಪ್ರಶ್ನೆಯೊಂದಿಗೆ ಮಾತು ಶುರುಮಾಡಿ, ಹುಡುಗಿಯರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಸೈನೈಡ್ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮೋಹನ್ ಕುಮಾರ್‌ನ ವಿದ್ಯೆಗೂ, ಈ ತಂತ್ರಕ್ಕೂ ಏನಾದರೂ ವ್ಯತ್ಯಾಸವಿದೆಯಾ? ಅದರೂ ನಮ್ಮ ಹುಡುಗಿಯರು ಬುದ್ದಿ ಕಲಿತಿಲ್ಲ! ಸಮಾಜ, ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಶಾಪ ಹಾಕುವುದನ್ನು ಬಿಟ್ಟಿಲ್ಲ!
ಮೇಲೆ ನಾ ಹೇಳಿದ ರೀತಿಯ ಮೊಬೈಲ್ ಚ್ಯಾಟ್‌ಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರೆ ಅದು ಒಂದು ಮಿತಿಯನ್ನು ದಾಟಿದರೆ ಮೋಹನ್ ಕುಮಾರ್ ನಂತವರು ಹುಟ್ಟಿಕೊಳ್ಳುತ್ತಾರೆ.
ಮೋಹನ್ ಕುಮಾರ್‌ನ ಪಾಶವೀ ಕೃತ್ಯ ಬೆಳಕಿಗೆ ಬರುತ್ತಲೇ ಆತನ ಪ್ರತಿ ಚಲನವಲನಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದವು. ಈ ನಡುವೆ ’ಲವ್ ಜಿಹಾದ್’ ಎಂಬ ಪಿಡುಗಿನ ಬಗೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನೂರಾರು ಯುವತಿಯರು ’ಲವ್ ಜಿಹಾದ್’ಗೆ ಈಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ವೇಶ್ಯಾವಟಿಕೆಗೆ ತಳ್ಳಿದ ಸಾಕಷ್ಟು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಷ್ಟೆಲ್ಲಾ ಅಗಬಾರದ ಅನಾಹುತಗಳಾಗುತ್ತಿದ್ದರೂ ಹುಡುಗಿಯರ ನಾಪತ್ತೆ ಮತ್ತು ಪರಾರಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ.
ಎಲ್ಲರಿಗೂ ಗೊತ್ತಿರುವಂತೆ ಮಾಧ್ಯಮಗಳ ಮುಖ್ಯ ಜವಾಬ್ದಾರಿ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡುವುದು. ಅದರಲ್ಲೂ ಮಾಧ್ಯಮಗಳು ಮಾಹಿತಿ ಮತ್ತು ಶಿಕ್ಷಣ ನೀಡಿದಾಗ ಜನರಲ್ಲಿ ’ಜಾಗ್ರತಿ’ ಮೂಡುತ್ತದೆ. ಈ ’ಜಾಗ್ರತಿ’ಯಿಂದ ಜನರು ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ. ಅದ್ದರಿಂದ ಮಾಧ್ಯಮಗಳಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನ.
ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ. ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ?
ಮೋಹನ್ ಕುಮಾರ್‌ನ ಪ್ರಕರಣದ ಎಳೆ ಎಳೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದರೂ ಕೂಡ ಓಡಿ ಸುಸ್ತಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಸಮಾಜವೇ ಕಾರಣ ಅಲ್ಲವೇ? ಈ ವಿಷಯದಲ್ಲಿ ಮಾಧ್ಯಮಗಳು ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸವನ್ನು ಮಾಡಿದವು. ಅದ್ದರಿಂದ ಇಂದು ಈ ಜಿಲ್ಲೆಯ ಬಹುತೇಕ ಎಲ್ಲರಿಗೂ ಮೋಹನ್ ಕುಮಾರ್‌ನ ಕುಕೃತ್ಯಗಳ ಪರಿಚಯವಿದೆ ಆ ಮೂಲಕ ತಾವೂ ಕೂಡ ಯಾವ ರೀತಿ ಮೋಸದ ಜಾಲಕ್ಕೆ ಸಿಲುಕಬಹುದು ಎಂಬರಿವಿದೆ. ಹಾಗೆಯೇ ತಾವು ಅನೈತಿಕ ದಂಧೆಯ ಪಾಲಾಗಬಹುದು ಎಂಬುದು ಕೂಡ ತಿಳಿದಿದೆ. ಆದರೇನು ಪ್ರಯೋಜನ? ಓಡಿ ಹೋಗುವವರು ನಿಲ್ಲುತ್ತಲೇ ಇಲ್ಲ!
ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು.
ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು.
ಮಾಧ್ಯಮಗಳಿಗೆ ರೈತರ ಅತ್ಮಹತ್ಯೆಗಳಿಗಿಂತ ಫ್ಯಾಶನ್ ಶೋಗಳು, ಸೆಲೆಬ್ರಿಟಿಗಳು ಮುಖ್ಯವಾಗಿದ್ದಾರೆ, ಮುಖ್ಯವಾಗುತ್ತಿದ್ದಾರೆ, ಈ ಮಾಧ್ಯಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹುಯಿಲೆಬ್ಬಿಸುವ ಕೆಲಸ ಒಂದು ಕಡೆ ನಡೆಯುತ್ತಿದೆ. ಹೌದು, ಮಾಧ್ಯಮಗಳು ರೈತನ ಅತ್ಮಹತ್ಯೆಗೆ ಎಲ್ಲೋ ಒಂದು ಮೂಲೆಯಲ್ಲಿ ಸ್ಥಾನ ಕೊಟ್ಟಿರಬಹುದು. ಆದರೆ ಇಂದು ದೇಶದ ಬಹುತೇಕ ವಿದ್ಯಾವಂತ ಜನರಿಗೆ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬರಿವು ಮಾಧ್ಯಮಗಳಿಂದ ದಕ್ಕಿದೆ. ಆದರೆ, ಎಷ್ಟು ಮಂದಿ ರ‍್ಯೆತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?
ಜನರಿಗೆ ವರ್ಷಕ್ಕೆ ಸಾವಿರಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುವಂತದ್ದು ಒಂದು ಸಾಮಾನ್ಯ ಸುದ್ದಿಯಾಗಿಯೇ ಉಳಿಯುವುದಾದರೆ, ಅದಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದಾದರೆ ಆ ಜಾಗವನ್ನು ಸೆಲೆಬ್ರಿಟಿಗಳ ಸುದ್ದಿ ಅಲಂಕರಿಸುವುದರಲ್ಲಿ ತಪ್ಪೇನಿದೆ?
ಇವತ್ತು ರೈತರ ಸಮಸ್ಯೆಗಳ ಅರಿವು ಇರುವವರು ಎಂದೆನಿಸಿಕೊಂಡವರು ಕೂಡ ಸಂತೆಗೆ ಹೋಗಿ ೧ ರೂಪಾಯಿಗೆ ೨ ಕೆಜಿ ಟೊಮೆಟೊ ಕೊಡು ಅನ್ನುತ್ತಾರೆ. ಅದೇ ಮಾಲ್‌ಗಳಿಗೆ ಹೋಗಿ ಅದೇ ಟೊಮೆಟೊಕ್ಕೆ ಕೆಜಿಗೆ ೩೦ ರೂಪಾಯಿ ಅಂದರೂ ತುಟಿ ಬಿಚ್ಚದೇ ನೋಟು ಬಿಚ್ಚುತ್ತಾನೆ. ಈಗ ಹೇಳಿ, ತಮ್ಮ ಜವಾಬ್ದಾರಿ ಮರೆತಿರುವುದು ಮಾಧ್ಯಮಗಳಾ? ಅಥವಾ ಸಮಾಜವಾ?
ಇಂದು ದೇಶದ ಬಹುತೇಕ ಎಲ್ಲ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ವ್ಯವಸ್ಥೆಯ ಗಮನಕ್ಕೆ ತಂದಿವೆ. ಆದರೆ ಎಲ್ಲೂ ಎಲ್ಲ ಕೃಷಿಕರನ್ನು ಒಂದೇ ಸೂರಿನಡಿಗೆ ತಂದು ಒಂದು ಹೋರಾಟ ಸಂಘಟಿಸಲು ಸಾಧ್ಯವಾಗಿಲ್ಲ, ಯಾಕೆ? ಜನರನ್ನು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಸಂಘಟಿಸಿ ಆಧಿಕಾರದ ರುಚಿ ಸವಿದವರಿದ್ದಾರೆ, ರೈತರ ಹೆಸರು ಹೇಳಿ ಅಧಿಕಾರದ ದಿಬ್ಬಣ ಏರಿದ ಹೆಗ್ಗಣಗಳ ಸಂಖ್ಯೆಗೂ ಮಿತಿಯಿಲ್ಲ. ಅದರೂ ಇಂದಿಗೂ ರೈತ ಅನಾಥ. ಈ ಬಗ್ಗೆ ಮಾಧ್ಯಮಗಳು ’ಜಾಗೃತಿ’ಯುಂಟು ಮಾಡುವ ಕೆಲಸ ಮಾಡಿಲ್ಲವೇ?
ಶೋಷಣೆ, ಭ್ರಷ್ಟಾಚಾರ, ಲಂಚಕೋರತನ, ದುಷ್ಟ ರಾಜಕೀಯದ ಬಗ್ಗೆ ಸಿನಿಮಾ ಸೇರಿದಂತೆ ಎಲ್ಲ ಮಾಧ್ಯಮಗಳು ಜನರೇ ಜಾಗ್ರತರಾಗಿ, ಈ ದುಷ್ಟಕೂಟದಿಂದ ಯಾವ ರೀತಿ ಹೊರಬರಬಹುದು ಎಂದು ಬಾಯಿ ಬಾಯಿ ಬಡಿದುಕೊಂಡಿವೆ ಅದರೂ ಈ ಪಿಡುಗು ಕಿಂಚಿತ್ ಕಡಿಮೆಯಾಗಿಲ್ಲ. ಹೋಗಲಿ, ನಮ್ಮ ಲೋಕಾಯುಕ್ತವಂತೂ ಭ್ರಷ್ಟ ಖದೀಮರ ವಿರುದ್ದ ಸಾರಿರುವ ಸಮರಕ್ಕೆ ಎಲ್ಲ ಮಾಧ್ಯಮಗಳು ತುಂಬು ಪ್ರಚಾರ ನೀಡುತ್ತಿವೆ. ಆದರೂ ಜನ ತಮ್ಮ ಕೆಲಸ ಮಾಡಿ ಕೊಡಲು ಅಧಿಕಾರಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಹಣ ಕೇಳುವ ಅಧಿಕಾರಿಗಳ ವಿರುದ್ದ ದೂರು ಕೂಡ ಕೊಡುತ್ತಿಲ್ಲ. ಕೊಟ್ಟರು ಅಂಥವರ ಪ್ರಮಾಣ ತೀರಾ ಕಡಿಮೆ. ಎಲ್ಲವನ್ನೂ ಮಾಧ್ಯಮಗಳ ತನಿಖಾ ವರದಿ ಅಥವಾ ಕುಟುಕು ಕಾರ್ಯಾಚರಣೆಯೇ ಮಾಡಲಿ, ಇಂತಹ ಪಿಡುಗುಗಳ ವಿರುದ್ದ ಹೋರಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಕರ್ತವ್ಯ ಮತ್ತು ಜವಾಬ್ದಾರಿ ಎಂಬ ಮನೋಭಾವ ಸಮಾಜದಲ್ಲಿ ಈಗಾಗಲೇ ಬಲವಾಗಿ ಬೇರುಬಿಟ್ಟಿದೆ.
ಇದು ಮಾಧ್ಯಮಗಳ ಮಹಿಮೆ, ಸಾಮರ್ಥ್ಯ, ಮತ್ತು ಶಕ್ತಿಯನ್ನು ಪರಿಗಣಿಸಿ ಸಮಾಜ ನೀಡಿದ ಗೌರವ ಎಂದು ಭಾವಿಸುವ ಸಂಗತಿಯಾಗಿ ಉಳಿದಿದ್ದರೆ ಖಂಡಿತವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ ಬಹು ಹೆಮ್ಮ ಪಡಬೇಕಾದ ವಿಷಯವಾಗಿರುತ್ತಿತ್ತು. ಅಥವಾ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ವ್ಯವಸ್ಥೆ ಮತ್ತು ಸಮಾಜ ಅದಕ್ಕೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದರ ಹಿಂದೆ ಇದ್ದಿದ್ದರೂ ಕೂಡ ಅದು ಮಾಧ್ಯಮಗಳ ಹಿರಿಮೆಯೆನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಇಂದಿನ ಮಾಧ್ಯಮಗಳ ಮೇಲಿನ ಸಮಾಜದ ನಿರೀಕ್ಷೆಯ ಹಿಂದಿರುವುದು ಅದರ ಪಲಾಯಾನವಾದ.
ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಪತ್ರಿಕೋದ್ಯಮವಿತ್ತು ಈಗ ಇಲ್ಲ ಎಂದು ಕನವರಿಸುವವರು ಆಗೀನ ಸಮಾಜ ಹೇಗಿತ್ತು? ಅದು ಸಮಸ್ಯೆಗಳಿಗೆ, ಹೋರಾಟಗಳಿಗೆ ಯಾವ ರೀತಿ ಸ್ಪಂದಿಸುತ್ತಿತ್ತು ಎಂಬುದನ್ನು ಮೊದಲು ಗಮನಿಸಬೇಕು. ಅಂದು ಒಂದು ಸಮಸ್ಯೆಯ ಬಗ್ಗೆ ಬರೆದರೆ ಅದರ ಬಗ್ಗೆ ಯೋಚಿಸುವ ಸಮಾಜವಿತ್ತು, ಅಗತ್ಯಬಿದ್ದರೆ ಮನೆ ಮಠ ಬಿಟ್ಟು ಕೂಡ ಹೋರಾಡುತ್ತಿದ್ದರು. ಅದ್ದರಿಂದ ಸಮಸ್ಯೆ ಪರಿಹಾರವಾಗುತ್ತಿತ್ತು.
ನೆನಪಿಡಿ, ಆಗ ಇದ್ದದ್ದು ಈಗೀನ ಅಕ್ಷರಸ್ಥರ ಪ್ರಮಾಣದ ಆರ್ಧಕ್ಕಿಂತಲೂ ಕಡಿಮೆ ಅಕ್ಷರಸ್ಥರು. ಮಾಧ್ಯಮ ಎಂದರೆ ಪತ್ರಿಕೆ ಮಾತ್ರ. ರೇಡಿಯೋ ತನ್ನ ಅಸ್ತಿತ್ವ ಕಂಡುಕೊಂಡದ್ದು ೧೯೩೫ರ ಬಳಿಕ. ಸಂಪರ್ಕ ಸಾಧನಗಳಾಗಲೀ, ರಸ್ತೆಗಳಾಗಲೀ ತೀರಾ ಬಾಲಾವಸ್ಥೆಯಲ್ಲಿತ್ತು. ಆದರೂ ಅವರು ಹೋರಾಡಿದರು ಮತ್ತು ಗೆದ್ದರು.
ಆದೇ ಈಗ? ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲೇವು, ಟಿವಿ, ಇಂಟರ್ನೆಟ್‌ಗಳು ರೇಡಿಯೋ ಮತ್ತು ಪತ್ರಿಕೆಗಳ ಜೊತೆ ಸೇರಿ ಮಾಧ್ಯಮ ಕ್ರಾಂತಿಯೇ ಆಗಿದೆ. ಈ ಕ್ರಾಂತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ತಲುಪಿದೆ. ಆದರೂ ಈ ಸಮಾಜಕ್ಕೆ ತನ್ನೋಳಗೊಂದು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.
ಮಾಧ್ಯಮಗಳು ತಮ್ಮ ಮೂಲ ಉದ್ದೇಶಗಳಿಗೆ ನಿಷ್ಠವಾಗಿಯೇ ಇವೆ ಎಂದು ಹೇಳುವುದು ಕಷ್ಟ ಆದರೂ ತಮ್ಮ ಉದ್ದೇಶ ಮರೆತಿಲ್ಲ. ಆದರೆ ಸಮಾಜ ಮಾತ್ರ ಎಲ್ಲವನ್ನೂ ಮಾಧ್ಯಮಗಳ ಮೇಲೆ ಹೊರಿಸಿ ತಾನು ಮಾತ್ರ ನಿಶ್ಚಿಂತವಾಗಿದೆ.
ರಸ್ತೆ ಸರಿಯಿಲ್ಲ ಎಂದು ಪತ್ರಕರ್ತ ಬರೆಯಬಹುದು ಮತ್ತು ಬರೆಯುತ್ತಾನೆ, ಆದರೆ ಅದನ್ನು ಅವನೇ ರಿಪೇರಿ ಮಾಡಿಸಿಕೊಡಬೇಕು ಎಂದು ಬಯಸಲು ಸಾಧ್ಯವಿಲ್ಲ ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ ಅವನಿಗೆ ಸಾಂವಿಧಾನಿಕವಾದ ಯಾವುದೇ ವಿಶೇಷ ಹಕ್ಕಿಲ್ಲ, ಒಬ್ಬ ಜನ ಸಾಮಾನ್ಯನಿಗೆ ಇರುವ ಎಲ್ಲ ನೀತಿ ನಿಯಮಗಳು ಅವನಿಗೂ ಅನ್ವಯಿಸುತ್ತದೆ ಹಾಗೂ ಅವನು ಅದಕ್ಕೆ ಬದ್ದನಾಗಿರಬೇಕು. ಹಾಗೆಯೇ ಸಮಾಜದ ಉಳಿದವರಿಗೆ ಇರುವಂತಹ ಎಲ್ಲ ಸಂಬಂಧಗಳು, ಇತಿ ಮಿತಿಗಳು ಅವನಿಗೂ ಇರುತ್ತದೆ ಎಂಬುದನ್ನು ಮರೆಯಬಾರದು ಅಲ್ಲವೇ?
No comments:
Post a Comment