Friday, January 1, 2010

ಇದು ಕನ್ನಡ ಸಾಹಿತ್ಯಕ್ಕೆ ಸಮನ್ವಯ ಸಂಧಿ ಕಾಲ

ಕನ್ನಡಿಗರ ಸಾಹಿತ್ಯದ ಹಸಿವು ಮತ್ತು ಸಾಮರ್ಥ್ಯಕ್ಕೆ ಕಳೆದ ಒಂದಿಡೀ ಸಹಸ್ರಮಾನವೇ ಸಾಕ್ಷಿಯಾಗಿ ನಿಂತಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಕನ್ನಡಿಗರ ಕೈ ಹಿಡಿಯದ ಸಾಹಿತ್ಯ ಪ್ರಕಾರವೇ ಉಳಿದಿಲ್ಲ ಎಂಬಷ್ಟು ವಿಶಾಲವಾಗಿ ಮತ್ತು ಆಳವಾಗಿ ನಮ್ಮ ಸಾಹಿತ್ಯದ ಬೇರು ಹಬ್ಬಿದೆ.

ಇಲ್ಲಿ ನಾನು ಯಾವುದೇ ಸಾಹಿತಿಯ, ಸಾಹಿತ್ಯದ ಕಾಲಘಟ್ಟ ಅಥವಾ ಸಾಹಿತ್ಯ ಪ್ರಕಾರದ ಬಗ್ಗೆ ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡುತ್ತಿಲ್ಲ. ಯಾಕೆಂದರೆ ಕನ್ನಡದ ಲಭ್ಯವಿರುವ ಮೊದಲ ಲಿಖಿತ ಸಾಹಿತ್ಯ ಕೃತಿ ಕವಿರಾಜಮಾರ್ಗ ದಿಂದ ಹಿಡಿದು ಜನಪದವೂ ಸೇರಿದಂತೆ ಇಂದಿನ ಸಾಹಿತ್ಯದ ವರೆಗೂ ಪ್ರತಿಯೊಂದು ಸಾಹಿತ್ಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದೆ ಇದೆ. ಎಲ್ಲ ಸಾಹಿತ್ಯ ಪ್ರಕಾರಗಳ ಸಮ್ಮೀಳನದಿಂದ, ಹಿರಿಮೆಯಿಂದ ಮತ್ತು ಕೊಡುಗೆಯಿಂದ ತಾನೇ ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆ ಮತ್ತು ಶ್ರೇಷ್ಟತೆ ದಕ್ಕಿದ್ದು. ಒಂದು ಒಳ್ಳೆಯ ಸಾಂಬಾರಿಗೆ ನಾನ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಹೇಗೆ ಸೇರಬೇಕೋ ಹಾಗೆ ಇದು ಕೂಡ. ಎಲ್ಲವೂ ಒಂದೇ ಪ್ರಮಾಣದಲ್ಲಿ ಸೇರಿದರೆ ಏನಾಗಬಹುದು? ಆಡುಗೆ ಮಾಡುವವ ಯಾವ ರೀತಿ ಆಡುಗೆ ಪದಾರ್ಥಗಳ ಮೇಲೆ ನಿಯಂತ್ರಣ ಹೊಂದಿರುತ್ತಾನೋ ಅದೇ ರೀತಿ ಕನ್ನಡದ ಮಟ್ಟಿಗೆ ಕಾಲ ಚಕ ಆ ಕೆಲಸ ಮಾಡಿತು ಎಂದು ನನಗನಿಸುತ್ತಿದೆ.

ಆದರೆ ಒಂದು ಮಾತನ್ನು ನಾನಿಲ್ಲಿ ಬರೆದೆ ಮುಂದುವರಿಯಬೇಕು. ಹಿಂದಿನ ಹೆಚ್ಚಿನೆಲ್ಲ ಸಾಹಿತಿಗಳು ವಿದ್ವಾಂಸರಾಗಿದ್ದರು ಇಲ್ಲವೇ ಅವರಲ್ಲಿ ಜೀವನಾನುಭವ ಪೊಗದಸ್ತಾಗಿತ್ತು . ಜನಪದ ಸಾಹಿತಿಗಳು ವಿದ್ವಾಂಸರು ಎಂಬ ಪರಿಧಿಯೊಳಗೆ ಬಾರದಿದ್ದರು ಅವರವರು ಬದುಕಿದ ರೀತಿ ಮತ್ತು ತಮ್ಮ ಪರಿಸರವನ್ನು ಕಟ್ಟಿ ಕೊಟ್ಟ ರೀತಿಯನ್ನು ಗಮನಿಸಿದಾಗ ಅವರನ್ನೂ ಕೂಡ ಪಂಡಿತರು ಎಂದು ಪರಿಗಣಿಸಬಹುದು.

ಆಗಿನ ಶಿಷ್ಟ ಸಾಹಿತಿಯೊಬ್ಬನಿಗೆ ತನ್ನ ಕೃತಿಯನ್ನು ಅಥವಾ ಬರಹವನ್ನು ಜನರ ಮುಂದೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಅದೇ ರೀತಿ ಒಬ್ಬ ಜನಪದ ಸಾಹಿತಿಗೆ ಕೂಡ ತನ್ನ ಸಾಹಿತ್ಯವನ್ನು ಇನ್ನೊಬ್ಬರಿಗೆ ದಾಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದ್ದರಿಂದ ನನಗನಿಸುವಂತೆ ಈ ಎರಡು ಸಾಹಿತ್ಯ ಪ್ರಕಾರದಲ್ಲೂ ಜೊಳ್ಳುಗಳು ಕಾಲಗರ್ಭ ಸೇರಿ ಗಟ್ಟಿಕಾಳುಗಳು ಮಾತ್ರ ಉಳಿದವು. ಆದರೆ ಇಂದು ಏನಾಗಿದೆ?

ನಾವು ಇಪ್ಪತ್ತನೆಯ ಶತಮಾನವನ್ನು ಸಾಹಿತ್ಯದ ದೃಷ್ಟಿಯಿಂದ ನವೋದಯ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ವಿಂಗಡಿಸುತ್ತೇವೆ. ಆದರೆ ಕಳೆದ ಶತಮಾನದ ಕೊನೆಯ ಒಂದುವರೆ ದಶಕ ಮತ್ತು ಈ ಶತಮಾನದ ಆದಿಯನ್ನು ಯಾವ ವೇದಿಕೆಯಡಿ ತರುವುದು ಎಂಬದೇ ದೊಡ್ಡ ಸಮಸ್ಯೆ. ಇಲ್ಲಿಂದಲೇ ಇಂದಿನ ಕನ್ನಡ ಸಾರಸ್ವತ ಲೋಕದ ಅಜಲುಗೊಜಲು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಕಾಲಘಟ್ಟದ ಸಾಹಿತ್ಯವನ್ನು ಒಂದೇ ವೇದಿಕೆಯಡಿ ತಾರದಿದ್ದರೆ ಏನಾಗುತ್ತದೆ? ಎಂದು ನೀವು ಕೇಳಲೇ ಬೇಕಾದ ಪ್ರಶ್ನೆ. ನನ್ನ ಉತ್ತರವೂ ಸ್ಪಷ್ಟವಾಗಿದೆ. ಏನೂ ಆಗುವುದಿಲ್ಲ, ಒಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತದೆ, ಸಾಹಿತ್ಯಕ್ಕೆ ಚೌಕಟ್ಟು ಹಾಕುವುದು, ಸಾಹಿತ್ಯವೆಂದರೆ ಇದೇ ರೀತಿ ಇರಬೇಕು ಎಂದು ಹೇಳುವುದು ಸರಿಯಲ್ಲ. ಆದರೆ ಇದನ್ನೇ ಸ್ಪಷ್ಟವಾಗಿ ಆಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಇಂದಿನ ಸಾಹಿತ್ಯಕ್ಕೆ ನಿರ್ದಿಷ್ಟ ಉದ್ದೇಶ, ಗುರಿ, ಅಥವಾ ಇಂದಿನ ಸಾಹಿತಿಗಳು ಯಾವುದೋ ಒಂದು ಉದ್ದೇಶಕ್ಕಾಗಿ ಅಥವಾ ಏಕ ಉದ್ದೇಶವಿಟ್ಟುಕೊಂಡು ಬರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ. ಅಂದರೆ ಬಿಡಿಯಾದ ಪ್ರಜ್ಞೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಇದರೊಂದಿಗೆ ಈ ಕಾಲಘಟ್ಟದ ಆಗುಹೋಗುಗಳಿಗೆ ಅಕ್ಷರದ ಮೂಲಕ ಮೂರ್ತ ರೂಪ ನೀಡುವ ಸಾಮರ್ಥ್ಯವಿರುವ ಒಬ್ಬ ಮಹಾನ್ ಸಾಹಿತಿಯ ಕೊರತೆ ನಮ್ಮನ್ನು ಕಾಡುತ್ತಿದೆ. ಹಿಂದೆ ನಾನು ಹೇಳಿದ ನಾಲ್ಕು ವಿಂಗಡನೆಗಳ ಸಮಯದಲ್ಲಿ ಅದಕ್ಕೆ ಹೊರತಾದ ಸಾಹಿತ್ಯ ರಚನೆಗಳೂ ಕೂಡ ಬಂದಿದ್ದವು ಎಂಬುದನ್ನು ನಾನಿಲ್ಲಿ ನಿರಾಕರಿಸುತ್ತಿಲ್ಲ.
ಕನ್ನಡದಲ್ಲಿ ಇಂದಿಗೂ ಮಹಾನ್ ಸಾಹಿತಿಗಳಿದ್ದಾರೆ. ಆದರೆ, ಅದರಲ್ಲಿ ಎಷ್ಟು ಮಂದಿ ಸಾಹಿತ್ಯಿಕವಾಗಿ ಬದುಕಿದ್ದಾರೆ ಎಂಬುದು ಮುಖ್ಯ. ಹೆಚ್ಚಿನ ಸಾಹಿತಿಗಳು ಇತಿಹಾಸದ ಬೆನ್ನು ಹಿಡಿದಿದ್ದಾರೆ ಎಂದೆನಿಸುತ್ತದೆ. ಇದು ಅವರ ಪಲಾಯನವಾದ ಖಂಡಿತವಾಗಿಯೂ ಆಲ್ಲ, ಬದಲಾಗಿ ಅವರ ಮಿತಿ.

ಇಂದು ಪತ್ರಿಕೆಗಳು ಬರಹಗಾರರಿಗೆ ಸಾಕಷ್ಟು ಆವಕಾಶ ಕೊಡುತ್ತಿವೆ. ಹಿಂದೆ ಇಂತಹ ಅವಕಾಶಗಳು ಕಡಿಮೆ ಇತ್ತು. ಗುಣಮಟ್ಟದ ಬರಹಗಳು ಮಾತ್ರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಅದ್ದರಿಂದಲೇ ಇರಬೇಕು ಕಳೆದ ಶತಮಾನದ ಕೊನೆಯ ದಶಕದವರೆಗೂ ಗುಣಮಟ್ಟದ ಬರಹಗಳು ಮತ್ತು ಬರಹಗಾರರು ಮಾತ್ರ ನಿಯತಕಾಲಿಕಗಳಲ್ಲಿ ಮತ್ತು ದಿನ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಸ್ಥಾನ ಪಡೆಯುತ್ತಿದ್ದರು.

ಆದರೆ ಪತ್ರಿಕೆಗಳು ಕೊಟ್ಟಿರುವ, ಕೊಡುತ್ತಿರುವ ವೇದಿಕೆಯನ್ನು ಯುವ ಬರಹಗಾರರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಮನಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಇಂದಿನ ಯುವ ಸಾಹಿತಿಗಳು ಅದರಲ್ಲೂ ಕಾಲೇಜು ಸಾಹಿತ್ಯವೆಂಬುದು ಪ್ರೀತಿ, ಪ್ರೇಮ, ಪ್ರಣಯದ ಸುತ್ತಲೇ ಗಿರಕಿ ಹೊಡಿಯುತ್ತಿದೆ. ತಪ್ಪಿದರೆ ಮೊಬೈಲ್, ಕಾಲೇಜಿನಲ್ಲಿನ ಮೊದಲ ದಿ, ಬಾಲ್ಯದ ನೆನಪು, ಕಾಲೇಜ್ ಕಾರಿಡಾರ್, ಗೆಳೆತನ, ಅಥವಾ ಉಪದೇಶ ನೀಡುವುದಕ್ಕೇ ಸೀಮಿತವಾಗುತ್ತಿದೆ. ಅದು ಸುತ್ತಲಿನ ಪರಿಸರಕ್ಕೆ ಕುರುಡಾಗಿದೆ. ಕುರುಡಾಗಿದ್ರೂ ಪರ‍್ವಾಗಿರಲಿಲ್ಲ ತನ್ನ ಸ್ಪರ್ಶಜ್ಞಾನವನ್ನೇ ಕಳೆದುಕೊಂಡಿದೇಯೇನೋ ಎಂದೆನಿಸುತ್ತದೆ.

ಬರವಣಿಗೆಯ ಆರಂಭದ ದಿನಗಳಲ್ಲಿ ಇಂತಹ ಬರಹಗಳನ್ನು ಬರೆದರೆ ತಪ್ಪಿಲ್ಲ, ಇದು ಬರಹಗಾರನ ಅತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾಕೆಂದರೆ ಆಗ ಬರಹ ಪ್ರಕಟಗೊಳ್ಳುವುದೇ ಮುಖ್ಯ. ಅದರೆ ಅದೇ ಅಭ್ಯಾಸವಾದರೇ?

ಪ್ರೀತಿ ಬಗ್ಗೆ ಒಂದೆರಡು ಸರಳ ಪದ್ಯ ಬರೆದರೆ ಒಂದಿಷ್ಟು ಹಣ, ಹೆಸರು ದಕ್ಕಿ ಬಿಡುತ್ತದೆ. ಅದರಾಚೆ, ಅಧ್ಯಯನ ಮಾಡಿ ಬರೆಯಬೇಕು, ಸಮಾಜದ ನೋವು ನಲಿವು ನನ್ನ ಬರಹದ ಮೂಲಕ ಧ್ವನಿ ಪಡೆದುಕೊಳ್ಳಬೇಕು ಎಂಬ ಆಶಯ ಇಂತಹ ಬರಹಗಳಲ್ಲಿ ಕಾಣುತ್ತಿಲ್ಲ. ಸಮಾಜದ ಬದಲು ವೈಯುಕ್ತಿಕ ವಿಷಯವನ್ನೇ ಅಥವಾ ಡೈರಿಯಲ್ಲಿ ಬರೆದು ಮುಚ್ಚಿಡಬೇಕಾದ ವಿಷಯಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಬರಹಗಾರನೆಂದು ಕರೆಸಿಕೊಳ್ಳುವ ಜಾಯಮಾನ ಇವರದ್ದು. ಇಂತಹ ಅರೆಬೆಂದ ಸಾಹಿತಿಗಳಿಂದ ನಮ್ಮ ಸಾಹಿತ್ಯ ಪರಂಪರೆಯ ಮುಂದುವರಿಕೆ ಸಾಧ್ಯಾನಾ? ಸಾಧ್ಯವಾದರೂ ಕೂಡ ಅದಕ್ಕೆ ಶ್ರೀಮಂತಿಕೆ ತುಂಬಲು ಇವರಿಂದ ಸಾಧ್ಯವಾಗುತ್ತಾ?

ಇಂತಹ ಬರಹಗಾರರು ಎರಡು ರೀತಿಯಲ್ಲಿ ಸೋಲುತ್ತಿದ್ದಾರೆ. ಮೊದಲನೆಯದಾಗಿ ಅವರು ತಮ್ಮ ಹಿಂದಿನ ಪರಂಪರೆಯನ್ನು ಅರಿತು ಕೊಳ್ಳುತ್ತಿಲ್ಲ. ಅಂದರೆ, ಓದು ಕಡಿಮೆಯಾಗುತ್ತಿದೆ. ಎರಡನೆಯದಾಗಿ ಸಮಾಜವನ್ನು ಗಮನಿಸುತ್ತಿಲ್ಲ. ಜೊತೆಗೆ ಏನು ಬರೆದರೂ ಪತ್ರಿಕೆಗಳು ಪ್ರಕಟಿಸುತ್ತವೆ ಅದ್ದರಿಂದ ಯಾಕೆ ಸುಮ್ಮನೆ ಕಷ್ಟ ಪಡುವುದು ಎಂಬ ಮನೋಭಾವ.

ಇನ್ನೂ ಹಿರಿಯ ಸಾಹಿತಿಗಳನ್ನು ಗಮನಿಸಿದರೆ ಅವರು ಕಾರಣವಿ(ವ)ಲ್ಲದ ಕಾರಣಗಳಿಂದ ಒಡೆದು ಹಂಚಿ ಹೋಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇದೊಂದು ದೊಡ್ಡ ಹೊಡೆತ. ಇದರಿಂದ ಮುಖ್ಯ ಬರಹಗಳಿಗೆ ಅಥವಾ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುನಿಷ್ಟ ವಿಮರ್ಶೆ ಮರೆಯಾಗಿ ವ್ಯಕ್ತಿ ನಿಷ್ಟ ಮತ್ತು ಸಿದ್ಧಾಂತ ನಿಷ್ಟ ವಿಮರ್ಶೆ ಮತ್ತು ಬರಹಗಳು ಅವರಿಂದ ಬರುತ್ತಿದೆ.
ಹಿಂದೆ ಗುರು ಇಲ್ಲ, ಮುಂದೆ ಗುರಿ ಇಲ್ಲದ ಈ ಸ್ಥಿತಿಯ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ನಿರ್ವಾತವೊಂದು ಸೃಷ್ಟಿಯಾಗುವಂತಾಗಿದೆ.

ಹಾಗಂತ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿಲ್ವಾ? ಖಂಡಿತವಾಗಿಯೂ ತರಹೇವಾರಿ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಅವುಗಳ ಮುದ್ರಣ ಮತ್ತು ವಿನ್ಯಾಸ ಚೇತೋಹಾರಿಯಾಗಿದೆ. ಭೌತಿಕವಾದ ಹೊಸತನ ತುಂಬುವುದರಲ್ಲಿ ನಮ್ಮ ಸಾಹಿತ್ಯ ಲೋಕ ಹಿಂದೆ ಬಿದ್ದಿಲ್ಲ ಆದರೆ ನಾವು ಸೋಲುತ್ತಿರುವುದು ಒಳಗಿನ ಹೂರಣ ತುಂಬುವುದರಲ್ಲಿ. ಅಂದರೆ ಯಂತ್ರ ಮಾಡುವ ಕೆಲಸಕ್ಕಿಂತ ಮನಸ್ಸು ಮಾಡಬೇಕಾದ ಕೆಲಸ ಕನ್ನಡದಲ್ಲಿ ಆಗಬೇಕಿದೆ.

ಇಂದಿನ ಕನ್ನಡ ಸಾಹಿತ್ಯದ ಧನಾತ್ಮಕ ಅಂಶವೆಂದರೆ ವಿವಿಧ ಬಗೆಯ ಸಾಹಿತ್ಯ ಹುಟ್ಟಿಕೊಳ್ಳುತ್ತಿದೆ, ಜೊತೆಗೆ ಹಿಂದೆ ಹುಟ್ಟಿದ ಕೆಲ ಸಾಹಿತ್ಯ ಪ್ರಕಾರಗಳು ಅಭಿವೃದ್ಧಿಕಾಣುತ್ತಿದೆ. ಇದರ ಜೊತೆ ಜೊತೆಗೆ ಜಾಗತೀಕರಣದ ಪ್ರಭಾವದಿಂದ ಹುಟ್ಟಿಕೊಂಡ ವೃತ್ತಿಗಳನ್ನು ಮಾಡುತ್ತಿರುವವರು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಇದೊಂದು ಹೊಸ ಬಗೆಯ ಸಮನ್ವಯ ಸಂಧಿ ಕಾಲ. ಹಿರಿಕಿರಿಯರು ಒಟ್ಟಾಗಿ ಈ ಸ್ಥಿತಿಯನ್ನು ಎದುರಿಸಬೇಕು. ಹಿರಿಯರ ಅನುಭವ, ಕಿರಿಯರ ಉತ್ಸಾಹ ಸಮನ್ವಯಗೊಂಡರೆ ಮಾತ್ರ ಕನ್ನಡ ಸಾಹಿತ್ಯ ಉಳಿಯಬಹುದು, ಹಬ್ಬಬಹುದು, ಬೆಳೆಯಬಹುದು.

ಇಲ್ಲದಿದ್ದಲ್ಲಿ ಇಂದಿನ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಜಾಗತೀಕರಣದ ವಿರುದ್ದದ ಬೈಗುಳ ನಿತ್ಯಮಂತ್ರವಾಗಿ ಬಿಡಬಹುದು. ಕನ್ನಡ ಸಾಹಿತ್ಯದ ಹರಿವು ಬತ್ತಿ ಹೋಗಬಹುದು!

No comments: