Friday, September 18, 2009

ಬಾಲ್ಯದ ನೆನಪುಗಳವು!

ನೆನಪಿನ ರಾಶಿಯನ್ನು ಕೆದಕಿದಾಗ ದೊಡ್ಡ ಪೆಟ್ಟಿಗೆಯಲ್ಲಿ ಕಟ್ಟಿಟ್ಟ ಪೊಗದಸ್ತಾದ ನೆನಪೊಂದು ಸಿಕ್ಕಿತ್ತು. ಬಿಚ್ಚಿ ನೋಡುತ್ತೇನೆ... ಇಂದಿಗೂ ಘಮಘಮಿಸುವ ಬಾಲ್ಯದ ನೆನಪುಗಳವು! ಅದರಲ್ಲೂ ಚಿಕ್ಕ ರಜೆ ಸಿಗಲೆಂದು ಕಾತರಿಸಿ ಸಿಕ್ಕಾಗ ಕುಣಿದು ಕುಪ್ಪಳಿಸಿ ಸಿಕ್ಕ ನಂತರ ಪ್ರತಿಕ್ಷಣವನ್ನು ಅಸ್ವಾದಿಸಿದ ಸುಮಧುರ ನೆನಪದು.
ಆಡೋದು, ಓಡೋದು, ನೆಂಟರ ಮನೆಗೆ ಹೋಗೋದು, ಚಿಕ್ಕ ತೊರೆಯಲ್ಲಿ ಮೀನು ಹಿಡಿಯೋದು ಇವೆಲ್ಲ ಪ್ರತಿ ರಜೆಯ ಸಹಜ ದಿನಚರಿ. ಅಂದು ಚಿಕ್ಕ ಚಿಕ್ಕ ಸಂತೋಷಗಳನ್ನು ಬೃಹತ್ತಾಗಿ ಕಂಡು ಅನುಭವಿಸುವ ಮುಗ್ದ ಮನಸ್ಸಿತ್ತು. ಆ ಮನಸ್ಸಿಗೋ ತನಗನಿಸಿದ ಕೀಟಲೆ ಮಾಡುವ ಸ್ವಾತಂತ್ರ್ಯವಿತ್ತು. ಆ ಸ್ವಾತಂತ್ರ್ಯ ಸ್ವೇಚ್ಚೆಯಾದಗ ನಿಯಂತ್ರಿಸಲು ಅಪ್ಪನ ಗದರಿಕೆ, ಬೆತ್ತ ಅಥವಾ ಅಮ್ಮನ ಬುದ್ದಿಮಾತಿನ ಕಡಿವಾಣವಿತ್ತು. ನೋವಾದಾಗ ಆಳುವ ಅವಕಾಶವಿತ್ತು. ಖುಷಿಯಾದಾಗ ನಮ್ಮ ಅಭಿವ್ಯಕ್ತಿಯನ್ನು ಕಂಡೇ ಸಂತೋಷಪಡುವ ಬಂಧುಬಳಗವಿತ್ತು. ಆಡಿದ, ಆಡುವ ಪ್ರತಿ ಮಾತಲ್ಲೂ ಮುಗ್ದತೆಯನ್ನು ಕಂಡು ಅದಕ್ಯಾವುದೇ ಅರ್ಥ ಆರೋಪಿಸದೆ ಅದರ ಸ್ನಿಗ್ದ ಸೌಂದರ್ಯವನ್ನು ಅನುಭವಿಸುವ ನೆಂಟರಿಷ್ಟರಿದ್ದರು. ನಮ್ಮ ಬಗ್ಗೆ ನಮಗಿಂತ ಹೆಚ್ಚು ಕಾಳಜಿ ವಹಿಸುವ ಮನೆಯವರಿದ್ದರು.
ಅವರೇ ಈಗಲೂ ಇದ್ದಾರೆ. ರಜೆಯೀಗಲೂ ಬರುತ್ತದೆ. ಆದರೆ ಅವರಿಗೂ ನಮಗೂ ಪ್ರಬುದ್ಧತೆ ಎಂಬ ಬೇಡಿ ಹಾಕಲಾಗಿದೆ. ಇವತ್ತೇನಿದ್ದರೂ ಆಟವೆಂದರೆ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಗಳೆಂಬ ಆಟಗಳನ್ನೇ ಆಡಬೇಕಾಗಿದೆ. ಮನಸ್ಸಿಗನಿಸಿದ ಕೀಟಲೆ ಮಾಡ ಹತ್ತಿದರೆ ಸಾರ್ವಜನಿಕರಿಂದ ಧರ್ಮದೇಟು ತಿನ್ನಬೇಕು!. ಅದರೊಂದಿಗೆ ಅನಾಮತ್ತಾಗಿ ಹುಚ್ಚನ ಸ್ಥಾನ ಸಿಗುತ್ತದೆ. ಬೇಸರವೆನಿಸಿ ಅತ್ತರೆ ಧಮಿಲ್ಲದವನೆಂಬ ಪಟ್ಟ ಕಾದಿರುತ್ತದೆ. ಖುಷಿಯಾದರೆ ನಗಬೇಕು ಅಥವಾ ಪಾರ್ಟಿ ಕೊಡಬೇಕು. ಅದು ಬಿಟ್ಟು ಬೇರೇನೋ ಮಾಡ ಹತ್ತಿದರೆ ಅದಕ್ಕೆ ನೂರಾರು ಅರ್ಥ. ಆಡುವ ಪ್ರತಿ ಮಾತು ಕೂಡ ಜಾಗರೂಕವಾಗಿರಬೇಕು. ಇಲ್ಲದೇ ಹೋದಲ್ಲಿ ಆಡಿದವನ ಯೋಚನೆಗೆ ನಿಲುಕದ ಭಾವಗಳು ಮಾತಿನ ಹಿಂದೆ ಇದೆ ಎಂಬ ಗುಮಾನಿ. ನಮ್ಮ ಬಗ್ಗೆ ಯಾರಾದರೂ ಹೆಚ್ಚಿನ ಕಾಳಜಿ ವಹಿಸಿದರೆ 'ಏನೋ ಇದೆ' ಎಂಬ ಶಂಕೆ ಅದರಲ್ಲೂ ಅವರು ನಮ್ಮ ವಿರುಧ್ಧ ಲಿಂಗಿಯಾಗಿದ್ದಾರೆ ಕತೆ ಮುಗಿಯಿತು. ನೋಡು ನೋಡುತ್ತಲೇ ಅದೇಷ್ಟು ಬದಲಾವಣೆ!
ಬಾಲ್ಯ, ಈ ಯವ್ವನ ಎರಡು ಬೇರೆ ಬೇರೆ ತುಂಡುಗಳು ಎಂದು ಅನಿಸುತ್ತಿಲ್ಲವೇ?

No comments: