[ಈ ಬರಹ ಸ್ವಲ್ಪ ಅಲ್ಲ ತುಂಬಾನೇ ಉದ್ದವಿದೆ... ಇದನ್ನು ಟ್ರೀಮ್ ಮಾಡಿ ಬ್ಲಾಗ್ ಗೆ ಹಾಕೋಣ ಎಂದು ಒಮ್ಮೆ ಯೋಚಿಸಿದ್ದೆ. ಆದರೆ ಹಾಗೆ ಮಾಡಿಲ್ಲ... ಇಲ್ಲಿನ ಕೆಲ ವಿಷಯಗಳು ಕೆಲವರಿಗೆ ಅಪ್ರಸ್ತುತ ಎಂದು ಅನಿಸಬಹುದು ಅದರೆ ಕೆಲವರಿಗೆ ಅದು ಬೇಕಾಗಿರುವುದರಿಂದ ಅದನ್ನು 'ಕಟ್' ಮಾಡಿಲ್ಲ. ಅದ್ದರಿಂದ ಸಹೃದಯಿ ಓದುಗರು ಸಹಕರಿಬೇಕು.]
ಇದನ್ನು ನಾನು ವಿಶ್ಲೇಷಣ ವರದಿ ಅಂತ ಅಂದ್ಕೊಡಿದ್ದೇನೆ...!
ಅಂದು ಗುರುವಾರ, ದಿನಾಂಕ 8/10/2009. ಸಮಯ ಮಧ್ಯಾಹ್ನ 2 ಗಂಟೆ. ನಮ್ಮ ಕಾಲೇಜಿನ (ಎಸ್ ಡಿ ಎಂ ಕಾಲೇಜು) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 16 ವಿದ್ಯಾರ್ಥಿಗಳು ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಏರಿ ಆಗಿತ್ತು. ನಮ್ಮೊಂದಿಗೆ ಚಂದ್ರಲೇಖ ಮ್ಯಾಮ್ ಕೂಡ ಇದ್ದರು. ಆ ಬಸ್ ನಲ್ಲಿ ನಾವು 17 ಮಂದಿಯ ಹೊರತಾಗಿ ಒಬ್ಬನೇ ಪಯಣಿಗನಿದ್ದದ್ದು! ಅದ್ದರಿಂದ ಆ ಬಸ್ಸು ನಮ್ಮದೇ ಆಗಿತ್ತು ಎನ್ನಲೂ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ!
ಬಸ್ಸಿನ ಕುಲುಕಾಟಕ್ಕೆ ನಮ್ಮ ಹುಡುಗಾಟದ ಸಾಥ್ ಸೇರಿ ಪಯಣವಂತೂ ಬೊಂಬಾಟ್. ಬಗೆ ಬಗೆ ತಿಂಡಿತಿನಿಸುಗಳು ಗೆಳೆಯ - ಗೆಳತಿಯರ ಜೋಳಿಗೆಯಲ್ಲಿತ್ತು. ಅದನ್ನು ನಾವೆಲ್ಲ ಹಂಚಿಕೊಂಡು ತಿನ್ನುತ್ತಾ 'ಹಂಚಿ ತಿನ್ನುವುದರಲ್ಲಿ ಸ್ವರ್ಗಸುಖವಿದೆ' ಎಂಬ ಹಿರಿಯರ ಮಾತನ್ನು ಪರಾಂಬರಿಸಿ ನೋಡಿದೇವು. ಚೇತನ್ ಅಲಿಯಾಸ್ ಚೇತು ತಿಂಡಿ ವಿತರಣೆಯ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದ ಮತ್ತು ಇದರಿಂದ ಅವನು ಸಾಕಷ್ಟು ಲಾಭಮಾಡಿಕೊಂಡಿದ್ದಾನೆ ಎಂದು ಜನರಾಡಿಕೊಳ್ಳುತ್ತಿದ್ದಾರೆ! ನಂದಂತೂ 'ಓಸಿ ಜೀವನವೇ ಲೇಸು ಸರ್ವಜ್ಙ' ಎಂಬ ಜನರ ಮಾತನ್ನು ಸತ್ಯಮಾಡಲೇಬೇಕು ಎಂಬ ಪಣ.
ನಾವು ರಾತ್ರಿ 9 ಗಂಟೆಯ ಸುಮಾರಿಗೆ ಮೈಸೂರು ತಲುಪಿದೆವು. ಅಲ್ಲಿ ಊಟ ಮುಗಿಸ್ಕೊಂಡು ಎರಡು ಗುಂಪಾಗಿ ಭಾಗವಾದೇವು. ಒಂದು ಗುಂಪು ಕೇಂದ್ರ ಸರಕಾರದ ಒಡೆತನದ ಯೂತ್ ಹಾಸ್ಟೆಲ್ ಗೆ ಹೋದರೆ ಮತ್ತೊಂದು ಗುಂಪು ಕರ್ನಾಟಕ ಒಪನ್ ಯುನಿವರ್ಸಿಟಿಯ ಹಾಸ್ಟೇಲ್ ಸೇರಿಕೊಂಡಿತು.
ನಾವು ಸುಖಾಸುಮ್ಮನೆ ಮೈಸೂರಿಗೆ ಹೋದದ್ದಲ್ಲ. ಅಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನಲ್ಲಿ ಅಕ್ಟೋಬರ್ 9 ಮತ್ತು 10 ರಂದು ಆಯೋಸಲಾಗಿದ್ದ 'ಪ್ರಸ್ತುತ ಪತ್ರಿಕೋದ್ಯಮ: ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು' ಎಂಬ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲು.
ಕಾರ್ಯಗಾರ: ಮಾಹಿತಿಯ ಆಗರ
ನಾನು ಅಲ್ಲಿ ಕಳೆದ ಎಲ್ಲಾ ಕ್ಷಣಗಳನ್ನು ಇಲ್ಲಿ ಬರೆಯುವುದಿಲ್ಲ. ಬರೆದರೆ, ಅದು ನನ್ನ ಡೈರಿ ಅಥವಾ ವರದಿಯಾಗಿ ಬಿಡಬಹುದು. ಅದ್ದರಿಂದ ಹೇಳಲೇ ಬೇಕು ಎಂದೆನಿಸಿ, ಹೇಳದೆ ಇರಲಾಗದ್ದನ್ನು ಮತ್ತು ಈ ಬ್ಲಾಗ್ ನ ಓದುಗರಿಗೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂಚೂರಾದರೂ ಪ್ರಯೋಜನವಾಗಬಹುದು ಎಂದೆನಿಸಿದನ್ನು ಮಾತ್ರ ಇಲ್ಲಿ ಬರೆಯುತ್ತೇನೆ.
ಕಾರ್ಯಗಾರವನ್ನು 'ವಾಯ್ಸ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ರಾಜಕಾರಣಿ, ವಾಸು ಉದ್ಘಾಟಿಸಿದರು.
ಆದರೆ ಕಾರ್ಯಕ್ರಮದಲ್ಲಿ ಚಿಂತನೆಯ ಕಿಡಿ ಹೊತ್ತಿಸಿದ್ದು 'ಮೈಸೂರು ಮಿತ್ರ’ ಮತ್ತು 'ಸ್ಟಾರ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ವಿ. ಗಣಪತಿ. ಅವರು ಅಕ್ಷರಶ: ಸಿಡಿಗುಂಡೇ ಆಗಿದ್ದರು. ಅದರಲ್ಲೂ ಕೆಲ ಪತ್ರಿಕೆಗಳ ’ತಲೆಬರಹ’ ಶೈಲಿಯನ್ನು ಉದಾಹರಣೆ ಸಹಿತ ಖಂಡಿಸಿದ ಅವರು ಪತ್ರಿಕೆಗಳ ಮನೋಭಾವವನ್ನು ಪ್ರಶ್ನಿಸುತ್ತಾ ಸಾಗಿದರು. ಸ್ವಾತಂತ್ರ್ಯ ಪೂರ್ವದಲ್ಲೂ ಜನಪ್ರಿಯ ಅಂಗ್ಲ ಪತ್ರಿಕೆಗಳ ಬ್ರಿಟೀಷ್ ಸೇವೆ ಮತ್ತು ಅದರ ಇಬ್ಬಂದಿತನವನ್ನು ಬೆತ್ತಲೆ ಮಾಡಿದ ಅವರು ಭಾಷಾ ಪತ್ರಿಕೆಗಳು ಮಾತ್ರ ಸ್ವಾತಂತ್ರ್ಯ ಹೋರಾಟದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವು ಎಂದರು. 'ಕಾರ್ಯಕಾರಿ ಸಂಪಾದಕ' ಎಂಬ ಹೊಸ ಬೆಳವಣಿಗೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪರ್ತಕರ್ತರು ಸ್ವತಂತ್ರ ಮತ್ತು ವೃತ್ತಿಪರರಾಗಿರಬೇಕು ಎಂದರು.
ಅವರು ಕನ್ನಡದ ಜನಪ್ರಿಯ ಪತ್ರಿಕೆಯೊಂದನ್ನು ಗುರಿಯಾಗಿಸಿಕೊಂಡೇ ಮಾತನಾಡಿದರು ಎಂದು ಯಾರಿಗಾದರೂ ಅನಿಸದೇ ಹೋಗಿದ್ದರೆ ಅವರ ಮಾತಿಗೆಯೇ ಅವಮಾನ ಮಾಡಿದಂತೆ.
ಕೆ.ವಿ. ಗಣಪತಿ ಹೇಳಿದ ಅನೇಕ ಸಂಗತಿಗಳು ಸತ್ಯವಾದದ್ದು. ಆದರೆ ಅವರು ಎಲ್ಲೋ ಒಂದು ಕಡೆ ವಸ್ತುನಿಷ್ಟತೆಯನ್ನು ಮರೆತು 'ಇಸಂ'ನಿಷ್ಟತೆಗೆ ಬಲಿಯಾದರು ಎಂದು ಅನಿಸದೇ ಇರಲಿಲ್ಲ. ಅದರಲ್ಲು ಅವರು 'ತಲೆ ಬರಹ'ಕ್ಕೆ ಉದಾಹರಣೆ ಕೊಡುತ್ತ ಒಂದು ಅಥವಾ ಎರಡು ಪತ್ರಿಕೆಯ 'ತಲೆಬರಹ'ಗಳ ಉದಾಹರಣೆ ಮಾತ್ರ ಕೊಟ್ಟರು. ಅದರರ್ಥ, ಕನ್ನಡದಲ್ಲಿ ನೂರಾರು ಪತ್ರಿಕೆಗಳಿದ್ದರು ಎರಡು ಪತ್ರಿಕೆಗಳು ಮಾತ್ರ ಕೆಟ್ಟ 'ತಲೆಬರಹ' ಕೊಡುತ್ತವೆ ಎಂದಾ? ಹಾಗಾದರೆ ಇದು ಸಂತಸ ಪಡಬೇಕಾದ ಸಂಗತಿ ಅಲ್ಲವೇ?
ಮುಂದಿನದ್ದು ಅವಧಿಗಳ ಯುಗ...
ಬೀಟ್ ನಲ್ಲಿ ಬೇರು ಬಿಡಿ ಆದರೆ ತಳವೂರಬೇಡಿ: ಭಟ್
ಮೊದಲ ಅವಧಿ 'ಸಂಪಾದಕೀಯ ಪುಟ'ದ ಬಗೆ ಇತ್ತು. ಸಂಪನ್ಮೂಲ ವ್ಯಕ್ತಿಯಾಗಿ ’ವಿಜಯ ಕರ್ನಾಟಕ’ದ ಕಾರ್ಯನಿವಾರ್ಹಕ ಸಂಪಾದಕ, ವಿಶ್ವೇಶ್ವರ ಭಟ್ ಆಗಮಿಸಿದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವರು 'ಸಂಪಾದಕೀಯ ಪುಟ'ದ ಬಗೆ ಒಂದೇ ಒಂದು ಮಾತು ಆಡಲಿಲ್ಲ! ಹಾಗಂತ ಗೊತ್ತುಗುರಿಯಿಲ್ಲದ ಮಾತು ಅವರದಾಗಿರಲಿಲ್ಲ. ಅವರ ಮಾತು ಗಿರಕಿ ಹೊಡೆದದ್ದು ಒಬ್ಬ ಪತ್ರಕರ್ತನಿಗೆ ಅದರಲ್ಲೂ ಭಾವಿ ಪತ್ರಕರ್ತನಿಗೆ ಇ- ಮೈಲ್, ಟ್ವೀಟರ್, ಬ್ಲಾಗ್ ಮುಂತಾದವು ಎಷ್ಟು ಅವಶ್ಯಕ ಎಂಬುದರ ಬಗೆ.
ಆಧುನಿಕ ಸಂಪರ್ಕ ಸಾಧನಗಳ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲವೆಂದರೆ ನೀವು ಎಷ್ಟು ಚೆನ್ನಾಗಿ ಬರೆಯುವವರಾದರೂ ನಾನಂತು ನಿಮಗೆ ಖಂಡಿತವಾಗಿಯೂ ಕೆಲಸ ಕೊಡುವುದಿಲ್ಲ ಎಂದು ಭಟ್ರು ಇದೇ ಸಂದರ್ಭದಲ್ಲಿ ಒಂಚೂರು ಖಾರವಾಗಿ ಹೇಳಿದರು.. ಒಬ್ಬ ಪತ್ರಕರ್ತನಿಗೆ ಅಧುನಿಕ ಸಂಪರ್ಕ ಸಾಧನಗಳ ಬಗೆಗಿನ ಆರಿವು ಇರಬೇಕು, ನಿಜ. ಆದರೆ ಆದೇ ಅವನ ಬರವಣಿಗೆಗೆ ಬದಲಿ ಎಂದೆನಿಸಿಕೊಳ್ಳುವುದು ಸರಿಯಾ? ಉದಾಹರಣೆಗೆ ಇ - ಮೈಲ್ ಬಳಕೆಯನ್ನು ಒಂದು ಗಂಟೆಯೊಳಗೆ ಯಾರು ಬೇಕಾದರೂ ಕಲಿತುಕೊಳ್ಳಬಹುದು, ಅದೇ ಬರವಣಿಗೆಯನ್ನು ಹಾಗೆ ಬಗ್ಗಿಸಿಕೊಳ್ಳಲು ಸಾಧ್ಯನಾ?
ಇನ್ನೂ ಎರಡು ವರ್ಷಗಳಲ್ಲೇ ಭಾಷಣ ವರದಿಗಾರಿಕೆ ಎಂಬುದೇ ಇರುವುದಿಲ್ಲ ಎಂಬ ಅಭಿಪ್ರಾಯ ಅವರದ್ದು. ಅದ್ದರಿಂದ ಭಾಷಣಗಳ ವರದಿ ಮಾಡಿ ನಾನು ಪತ್ರಕರ್ತನಾಗುತ್ತೇನೆ ಅಥವಾ ಆಗಿದ್ದೇನೆ ಎಂದು ಭಾವಿಸುವವರ ಅಥವಾ ಭಾವಿಸುತ್ತಿರುವವರ ತಲೆ ಮೇಲೆ ಅಪಾಯದ ಬಾವುಟ ನೆಟ್ಟಿದ್ದಾರೆ ಭಟ್ರು. ಇದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯೂ ಹೌದು ಪತ್ರಿಕಾವರದಿಗಾರಿಕೆ ಹೊಸ ಸಾದ್ಯತೆಯೊಂದನ್ನು ಕಂಡುಕೊಳ್ಳಲಿದೆ ಎಂಬುದರ ಸೂಚನೆಯೂ ಹೌದು.
ಭಟ್ರು, ಮತ್ತೊಂದು ವಾಗ್ಬಾಣ ಬಿಟ್ಟದ್ದು ಹುಡುಗಿಯರ ಮೇಲೆ. ಅವರು ತಮ್ಮ ದೈನಂದಿನ ಅಂಕಣ, 'ವಕ್ರತುಂಡೋಕ್ತಿ'ಯಲ್ಲಿ ಹುಡುಗಿಯರ ಮೇಲೆ ಸಾಕಷ್ಟು ಬಾಣ ಪ್ರಯೋಗಿಸಿದ್ದರೂ ಕೂಡ ಇಲ್ಲಿ ಅವರು ಎತ್ತಿಕೊಂಡಿದ್ದ ವಿಷಯ ತುಸು ಗಂಭೀರ. ನಾನು ಎರಡು ಮೂರು ವರ್ಷ ಪರ್ತಕರ್ತೆಯಾಗಿರುತ್ತೇನೆ ಅಥವಾ ಮದುವೆಯಾಗುವ ತನಕ ಮಾತ್ರ ಈ ವೃತ್ತಿ ನನ್ನದು ಎಂದು ಭಾವಿಸಿಕೊಂಡು ದಯಮಾಡಿ ಈ ಕ್ಷೇತ್ರಕ್ಕೆ ಬರಬೇಡಿ ಎಂಬುದು ಅವರ ವಿನಂತಿ. ವಿಷಯ ಸರಳವಾಗಿದ್ದರು ಕೂಡ ಇದರೊಳಗೊಂದು ಗಂಭೀರ ಪ್ರಶ್ನೆ ಮತ್ತು ಕಟು ಸತ್ಯವಿದೆ.
ನಮ್ಮನ್ನು ನಾವು 'ರಿ - ಇನ್ವೇಂಟ್' ಮಾಡಿಕೊಳ್ಳುತ್ತಿರಬೇಕು ಇಲ್ಲದಿದ್ದಲ್ಲಿ ಅಪ್ರಸ್ತುತರಾಗಿ ಬಿಡುತ್ತೇವೆ, ನಮ್ಮ ಯೋಚನೆಗಳು ಉಳಿದವರಿಗಿಂತ ಭಿನ್ನವಾಗಿರಲಿ ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಲ್ಲ ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯ ಹೀಗೆ ಅವರ ಮಾತು ಸಾಗಿತು.
'ನೀವು ನೀಡುವ ವರದಿ ವಿಭಿನ್ನವಾಗಿರಲಿ' ಎಂಬ ಅವರ ಮಾತು ಕೂಡ ಚಚರ್ಗೆ ಕಾರಣವಾಗುವಂತದ್ದು ಮತ್ತು ಕಾರಣವಾಗಿದ್ದು. ಯಾಕೆಂದರೆ 'ವರದಿ' ಅಂದಾಗ ನಮ್ಮ ಕಣ್ಣ ಮುಂದೆ ಕೆಲವು ಸಿದ್ಧ ಮಾದರಿಗಳು ಬರುತ್ತವೆ. ಆದರೆ ಅದರೊಂದಿಗೆ ಕೆಲವು ಸುದ್ದಿ ಮೌಲ್ಯಗಳು ಕೂಡ ಸೇರಿಕೊಂಡಿರುತ್ತದೆ ಅದರಲ್ಲೂ ಸರಳ ಭಾಷೆ, ವಸ್ತುನಿಷ್ಟತೆ ಮತ್ತು ನಿಖರತೆ ಮುಖ್ಯವಾದದು ಅನ್ನುವುದಕ್ಕಿಂತ ಇರಲೇ ಬೇಕಾದದ್ದು ಎಂದರೆ ಸೂಕ್ತ. ಇನ್ನೂ ಯಾವ ಪತ್ರಿಕೆ, ಎಷ್ಟರ ಮಟ್ಟಿಗೆ ಈ ಮೌಲ್ಯಗಳನ್ನು ಪಾಲಿಸುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದೆ ಬರಬಹುದು. ಅದರೆ ಅದನ್ನು ಬದಿಗಿಟ್ಟು ಯೋಚಿಸಿದರೆ 'ವರದಿಗಾರಿಕೆ'ಗೆ ವಿಭಿನ್ನತೆ ಕೊಡುವ ಪ್ರಯತ್ನ ಪತ್ರಿಕೋದ್ಯಮದ ಬುಡವನ್ನೇ ಅಲುಗಾಡಿಸುವಂತದ್ದು ಎಂದು ನನಗನಿಸುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ವರದಿಗಾರ ತನ್ನ 'ವರದಿ'ಯ ಮೇಲೆ ಒಂದು ರೀತಿಯ ಸ್ವಾಯತ್ತತೆ ಪಡೆದುಕೊಳ್ಳುತ್ತಾನೆ ಮತ್ತು ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಕಾಣಲು ಶುರುಮಾಡುತ್ತಾನೆ ಇದರಿಂದ ಸುದ್ದಿಯ ವಿಶ್ವಾಸಾರ್ಹತೆ ಕುಂದುತ್ತದೆ ಅದರೊಂದಿಗೆ ಪತ್ರಿಕೆಯ 'ಇಸಂ' ಕೂಡ ಸೇರಿ ಸುದ್ದಿಯ ಶುದ್ದತೆ ಹಾಳಾಗಿ ಸುದ್ದಿ ಎಂಜಲೆಲೆ ಆಗಬಹುದು. ಆದರೆ ಪ್ರಬುದ್ಧ ವರದಿಗಾರ ಮತ್ತು ಉಪಸಂಪಾದಕರಿದ್ದಲ್ಲಿ ಇದು ಒಳಿತನ್ನುಂಟು ಮಾಡಬಹುದು. ಆದರೆ ಪತ್ರಕರ್ತ ಮತ್ತು ಪ್ರಬುದ್ದತೆ ಎಂಬುದು ಪರಸ್ಸರ ವಿರುದ್ಧ ಪದಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಯೋಚನೆಯೇ ತಿರುಕನ ಕನಸು ಎಂದು ನನಗನಿಸುತ್ತದೆ.
ಭಟ್ರು 'ಪವರ್ ಪಾಯಿಂಟ್ ಪ್ರಸೆಂಟೇಶನ್' ಮೂಲಕ ತಮ್ಮ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ 'ಸಾಸಿವೆ ಬಿದ್ದರು ಕೇಳಿಸುವಷ್ಟು ಮೌನ'ವಿತ್ತು. ಇದರರ್ಥ ಎಲ್ಲರೂ ನಿದ್ದೆ ಮಾಡುತ್ತಿದ್ದರು ಎಂದಲ್ಲ! ಅಷ್ಟೂ ತದೇಕಚಿತ್ತರಾಗಿ ಭಟ್ರ ಮಾತು ಕೇಳಿಸುತ್ತಿದ್ದರು.
ಅವರ ಸರಳತೆಯ ಅರಿವು ನನಗಾದದ್ದು, ಅವರು ಊಟಕ್ಕೆ ಕುಳಿತಾಗ. ಒಬ್ಬ ಅರೆ ಹುಚ್ಚ ತಾನು ಕೂಡ ಅವರ ಜತೆ ಊಟಕ್ಕೆ ಕೂರುತ್ತೇನೆ ಎಂದು ಹಠ ಹಿಡಿದಿದ್ದ. ಸಂಘಟಕರು ಅವನನ್ನು ಒದ್ದು ಹೊರ ಹಾಕಲು ಸಿದ್ಧರಾಗಿದ್ದರು ಆದರೆ ಭಟ್ರು ಅವನನ್ನು ತನ್ನ ಜೊತೆ ಕುಳ್ಳಿರಿಸಿ ಸಹಭೋಜನ ಮಾಡಿದರು.
ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕದ ಅವಧಿಯನ್ನು ಪ್ರಖ್ಯಾತ ಸುದ್ದಿ ಚಿತ್ರ ಬರಹಗಾರ್ತಿ ಸುಶೀಲಾ ನಾಯರ್ ತೆಗೆದುಕೊಂಡರು. ಅವರು ವಿಶೇಷ ವಿಷಯಗಳನ್ನೇನೂ ಹೇಳಲಿಲ್ಲ. ಬಹುಶ: ಒಂಚೂರಾದರೂ ಸಪ್ಪೆ ಎನಿಸಿಕೊಂಡ ಅವಧಿ ಇವರದ್ದೇ ಇರಬೇಕು. ಪ್ರತಿ ಅವಧಿಯಲ್ಲಿ ಮುಗಿ ಬಿದ್ದು ಪ್ರಶ್ನೆ ಕೇಳುತ್ತಿದ್ದವರು ಆಗ ನಿದ್ದೆಗೆ ಶರಣಾಗಿದ್ದರು!
ಅನಂತರದ ಅವಧಿ ಬಿಸಿಬಿಸಿ ಸುದ್ದಿಗೆ ಹೆಸರಾದ ಕನ್ನಡದ ಮೊದಲ 24*7 ಸುದ್ದಿ ಚಾನೆಲ್ ಟಿವಿ 9ನ ಕಾರ್ಯಕ್ರಮ ನಿರ್ಮಾಪಕ ರಾಘವೇಂದ್ರರಿಂದ. ಅವರು ಮಾತನಾಡಿದ್ದು ಕ್ರೈಮ್ ರಿಪೋರ್ಟಿಂಗ್ ಬಗೆಗೆ.
ಅವರು ಆರಂಭ ಮಾಡಿದ್ದೆ 'ವರದಿ' ಯೆಂಬುದು ನಿರಾಭರಣ ಸುಂದರಿ ಎಂಬುದರ ಮೂಲಕ. ಅಂದರೆ ಭಟ್ರು ಹೇಳಿದ ಮಾತಿಗೆ ಸರಿ ಉಲ್ಟಾ! ಆದರೆ ಅವರ ಚಾನೆಲ್ ಇದನ್ನು ಎಷ್ಟು ಪಾಲಿಸುತ್ತದೆ ಎಂದು ಕೇಳಿದರೆ ಖಂಡಿತವಾಗಿಯೂ ಅವರಲ್ಲಿ ಉತ್ತರವಿರಲಿಕ್ಕಿಲ್ಲ. ಬಹುಶ: ಭಟ್ರ ಮಾತನ್ನು ಪಾಲಿಸಿದ್ದೆ ಆದರೆ ಮಾಧ್ಯಮಗಳು ಯಾವ ರೀತಿ ಆಗಬಹುದು ಎಂಬುದಕ್ಕೇ ಈ ಚಾನೆಲ್ ನಷ್ಟು ಒಳ್ಳೆಯ ನಿದರ್ಶನ ಬೇರೆ ಎಲ್ಲೂ ಸಿಗಲಿಕ್ಕಿಲ್ಲ!
'ಒಬ್ಬ ಕ್ರೈಂ ರಿಪೋರ್ಟರ್ ಮನುಷ್ಯನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು, ಸುದ್ದಿಯ ಮೂಲ ಮತ್ತು ಅದರಾಚೆಯೂ ಹುಡುಕುವ ಛಾತಿ ಇರಬೇಕು. ಆದರೆ ಯಾವ ಕಾರಣಕ್ಕೂ ಇನ್ನೊಬ್ಬರ ತೆಜೋವಧೆ ಮಾಡಬಾರದು' ಎಂಬ 'ವಾರಾಂಟ್' ಅವರಿಂದ. ಸಹಜವಾಗಿಯೇ ಅವರಿಗೆ ಪ್ರಶ್ನೆಗಳ ಸುರಿಮಳೆ, ಅಷ್ಟೇ ಚಾಣಕ್ಷತನದ ಉತ್ತರ ಅವರಿಂದ.
ನಂತರ ಮನರಂಜನಾ ಕಾರ್ಯಕ್ರಮ.
ಜೋಗಿ ಜೋಳಿಗೆಯಿಂದ...
ಎರಡನೇ ದಿನ ಅರ್ಥಾತ್ ಕೊನೆಯ ದಿನದ ಮೊದಲ ಅವಧಿಯನ್ನು ಕನ್ನಡದ ಖ್ಯಾತ ಬರಹಗಾರ, 'ಜೋಗಿ'ಯೆಂದೆ ಪ್ರಸಿದ್ದರಾಗಿರುವ ಗಿರೀಶ್ ರಾವ್ ತೆಗೆದುಕೊಂಡರು.
ಪತ್ರಕರ್ತರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುರುವಿಟ್ಟುಕೊಂಡ ಅವರು ಅನಂತರ ಅಂಕಣ ಅಂದರೆ ಹೇಗಿರಬೇಕು ಎಂಬುದರ ಬಗೆಗೆಯೇ ತಮ್ಮ ಗಮನ ಹರಿಸಿದರು.
ಬರೆಯುತ್ತ ಬರೆಯುತ್ತ ಬರಹ ಮತ್ತು ಬರಹಗಾರ ಪಕ್ವವಾಗುತ್ತಾನೆ ಎಂಬುದು ಅವರ ಅನಿಸಿಕೆ.
ಅವರು ಮಾತನಾಡುತ್ತ 'ಸತ್ಯ’ ಬದಲಾಗುತ್ತದೆ ಎಂದು ಹೇಳಿದರು. ಅದು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ. ಒಂದೋ ಬರಹಗಾರನ ಮನೋಭಾವ, ದೃಷ್ಟಿಕೋನ ಬದಲಾಗಬಹುದು ಅಥವಾ ಅವನು ವಿಷಯವನ್ನು ಗ್ರಹಿಸಿಕೊಂಡ ರೀತಿ ಅಥವಾ ಗ್ರಹಿಸುವ ರೀತಿ ಬದಲಾಗಬಹುದೇ ಹೊರತು 'ಸತ್ಯ' ಹೇಗೆ ಬದಲಾಗುತ್ತದೆ? ಹಾಗೆ ಬದಲಾಗುವುದಿದ್ದರೇ ಅದನ್ನು 'ಸತ್ಯ' ಎಂದು ಕರೆಯುತ್ತೇವೇಯೇ?
ಭಡ್ತಿ ಹೇಳಿದ್ದು...
ಅನಂತರದ ಅವಧಿ 'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಉಪಸಂಪಾದಕ ಮತ್ತು ತಮ್ಮ 'ನೀರು ನೆರಳು' ಅಂಕಣದಿಂದ ಪ್ರಖ್ಯಾತರಾಗಿರುವ ರಾಧಕೃಷ್ಣ ಭಡ್ತಿ ಅವರಿಂದ 'ಪುಟ ವಿನ್ಯಾಸ'ದ ಬಗ್ಗೆ. ಅವರು 'ಪವರ್ ಪಾಯಿಂಟ್'ನ ಬಳಕೆಯನ್ನು ಅತ್ಯುತ್ತಮವಾಗಿ ಮಾಡಿದರು. ಅವರು ಅಡುಗೆ ಭಟ್ಟನ ಕೆಲಸ ಮತ್ತು ಒಬ್ಬ ಉಪಸಂಪಾದಕನ ಕೆಲಸಕ್ಕಿರುವ ಸಾಮ್ಯತೆಯ ಮೂಲಕವೇ ಉದಾಹರಣೆಗಳನ್ನು ಪೋಣಿಸುತ್ತ ಸಾಗಿದರು. ಒಂದು ಪುಟದಲ್ಲಿರುವ ಬೇರೆ ಬೇರೆ ಭಾಗಗಳು ಮತ್ತು ಅಂಶಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬ್ಲಬ್ð, ಬಾಕ್ಸ್, ಇಂಟ್ರೋ, ಬುಲೆಟ್ ಪಾಯಿಂಟ್ ಗಳ ಬಳಕೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ ಅವರು ಇವುಗಳ ಬಳಕೆ ಇಲ್ಲದಿದ್ದಲ್ಲಿ ಸುದ್ದಿ ಮತ್ತು ಪುಟ ಹೇಗೆ ನೀರಸವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.
ಅವರು ಒಳ್ಳೆಯ ಪುಟ ವಿನ್ಯಾಸಕ್ಕೆ ವಿಜಯ ಕರ್ನಾಟಕವನ್ನೇ ಉದಾಹರಣೆಯಾಗಿಸಿಕೊಂಡು ಕೆಟ್ಟ ಪುಟ ವಿನ್ಯಾಸಕ್ಕೇ ಕನ್ನಡದ ಮತ್ತೊಂದು ಜನಪ್ರಿಯ ಪತ್ರಿಕೆಯನ್ನು ಹೆಚ್ಚಾಗಿ ಬಳಸಿದ್ದು ಮುಂದಿನ ಅವಧಿ ತೆಗೆದು ಕೊಳ್ಳಲಿದ್ದವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದರೊಂದಿಗೆ ದಕ್ಷಿಣ ಕನ್ನಡದ ಜನ 'ಉದಯವಾಣಿ'ಯನ್ನು ಅದರಲ್ಲಿರುವ ಸತ್ತವರ ಜಾಹೀರಾತು ನೋಡಲು ಮತ್ತು ಬೆಂಗಳೂರು ನಗರದ ಜನ 'ಪ್ರಜಾವಾಣಿ' ಪತ್ರಿಕೆಯನ್ನು ಬಿಡಿಎ ಜಾಹೀರಾತಿಗಾಗಿ ನೋಡುತ್ತಾರೆ ಎಂದದ್ದು ನನಗಂತೂ ಒಂಚೂರು ಕಸಿವಿಸಿಯುಂಟು ಮಾಡಿತು. ನಿಮಗೇ ಭಡ್ತಿ ಹೇಳಿದ ಈ ಮಾತು ಸತ್ಯ ಎಂದೆನಿಸುತ್ತಾ?
'ನಾಲ್ಕಾನೆ ಆಯಾಮ' ನೀಡಿದ ಪದ್ಮರಾಜ ದಂಡಾವತಿ
ಪ್ರಜಾವಾಣಿಯ ಸುದ್ದಿ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿದ್ದು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ. ಆರಂಭದಲ್ಲೇ ತಮ್ಮ ಖಡಕ್ ಮಾತಿನಿಂದ ಉಸಿರು ಬಿಗೆ ಹಿಡಿದು ಅವರ ಮಾತಿಗೆ ಕಿವಿಯಾಗುವಂತೆ ಮಾಡಿದ ಅವರು ಅನಂತರ ತಮ್ಮ ಮಾತಿಗೆ ಕೇಳುಗರು ತನ್ಮಯರಾಗುವಂತೆ ಮಾಡಿದರು.
ಅವರು 'ಕನ್ನಡ ಪತ್ರಿಕೋದ್ಯಮದ ಪಿತಾಮಹ' ಡಿ. ವಿ. ಗುಂಡಪ್ಪರ 'ವೃತ್ತ ಪತ್ರಿಕೆ'ಯನ್ನು ಎಷ್ಟು ಮಂದಿ ಓದಿದ್ದೀರಿ? ಎಂದು ಕೇಳಿದಾಗ ಒಂದೇ ಒಂದು ಕೈ ಮೇಲೆಳಲಿಲ್ಲ.
"ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಶ್ರಧ್ಧೆಯ ಕೊರತೆಯಿದೆ. ಕುವೆಂಪು, ಶಿವರಾಮ ಕಾರಂತ, ಮಾಸ್ತಿ, ಲಂಕೇಶ್ ಮುಂತಾದವರನ್ನು ಓದಿಲ್ಲ, ಓದುತ್ತಿಲ್ಲ. ಹೀಗಾದ್ದಲ್ಲಿ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ" ಎಂದು ತಿಳಿಸಿದರು.
ಡಿವಿಜಿಯವರ ’ಪತ್ರಿಕೆಗಳು ಕಲಿಸಬೇಕಾದದ್ದು ಸಿದ್ದಾಂತವನ್ನಲ್ಲ, ಸಿದ್ದಾಂತ ಮಾಡುವ ಪ್ರಕ್ರಿಯೆಯನ್ನು’ ಎಂಬ ಮಾತನ್ನು ಉದ್ದರಿಸಿ ಇಂದಿನ ಪತ್ರಿಕೋದ್ಯಮದ ವಿಶ್ಲೇಷಣೆಗೆ ಇಳಿದರು.
ಇಂದು ಪತ್ರಿಕೋದ್ಯಮ ವಿಭಾಗಗಳು ಮತ್ತು ಪತ್ರಿಕಾ ಕಚೇರಿಗಳ ನಡುವಿನ ಸಂಬಂಧ ಇಂಟನ್ðಶಿಪ್ ಗೆ ಮಾತ್ರ ಸೀಮಿತವಾಗುತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.
ವಾಚಕರ ವಾಣಿಯ ವೇದಿಕೆಯನ್ನು ಯುವ ಬರಹಗಾರರು ಬಳಸಿಕೊಳ್ಳಬೇಕು, ಪರ್ತಕರ್ತರಲ್ಲಿ ವಿನಯವಿರಲೇಬೇಕು ಎಂದರು.
ಮಾಧ್ಯಮಗಳ ಬ್ರೇಕಿಂಗ್ ದಿ ಸೊಸೈಟಿ ಟ್ರೆಂಡ್ ಹೋಗಿ ಬ್ರೀಡ್ಜೀಂಗ್ ದ ಸೊಸೈಟಿ ಆಗಲಿ ಎಂದು ಆಶಿಸಿದರು.
ಪತ್ರಿಕೆಗಳನ್ನು ಪ್ರತಿಕ್ರಿಯಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಓದಬೇಕು, ಸಾಹಿತ್ಯವನ್ನು ಮಾನವೀಯ ಮುಖ ನೀಡಲು ಓದಬೇಕು ಎಂಬುದು ಅವರ ಸಲಹೆ.
ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಉಪನ್ಯಾಸಕ ಕೆ. ಜಿ. ಜೋಸೆಫ್, "ಪದವಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಬರೆಯುತ್ತಾರೆ ಆದರೆ ಸ್ನಾತಕೋತ್ತರ ಪದವಿಗೆ ಬಂದಾಗ ಬರವಣಿಗೆ ಕಡಿಮೆಯಾಗುತ್ತದೆ. ಇದಕ್ಕೆ ಮನಸ್ಸು ಕಲ್ಮಷವಾಗುವುದೇ ಕಾರಣ" ಎಂದರು. ಇದರೊಂದಿಗೆ ನನಗನಿಸುವ ಮಟ್ಟಿಗೆ ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ಸಿಲೆಬಸ್ ಗಳು ವಿಧ್ಯಾರ್ಥಿಯನ್ನು ಒಬ್ಬ ಪತ್ರಕರ್ತನನ್ನಾಗಿ ಮಾಡೋದಕ್ಕಿಂತ ಲೆಕ್ಚರರ್ ಮಾಡೋದು ಹೇಗೆ ಎಂಬುದರ ಸುತ್ತಲೇ ಸುತ್ತುತ್ತಿರುವುದು ಕೂಡ ಒಂದು ಮುಖ್ಯ ಕಾರಣ ಎಂದು ನನಗನಿಸುತ್ತದೆ.
ಸುಮಾರು 16 ಕಾಲೇಜುಗಳಿಂದ 300ಕ್ಕೂ ಮಿಕ್ಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಹುಶ: ಕಾರ್ಯಾಗಾರದ ಮಟ್ಟಿಗೆ ಇದು ಮೂರು ಪಟ್ಟು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು ಎಂದು ನನಗನಿಸುತ್ತದೆ. ಅದ್ದರಿಂದ ಇದು ಸ್ವಲ್ಪ ಮಟ್ಟಿಗೆ ಜಾತ್ರೆ ರೀತಿ ಆಯಿತು ಎಂದು ನನಗನಿಸಿತ್ತು.
ಅದರೊಂದಿಗೆ ಕಾರ್ಯಗಾರದ ಶೀರ್ಷಿಕೆಗೆ ಪೂರಕವಾದ ಅವಧಿಯೇ ಇರಲಿಲ್ಲ!
ಪತ್ರಕರ್ತರು, ರಾಜಕಾರಣಿಗಳನ್ನು ಮೀರಿಸುವಂತೆ ಪರಸ್ಪರರ ಕಾಲೆಲೆದರು, ಕೆಸರೆರಚಿಕೊಂಡರು. ’ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ’ ಎಂಬ ಗಾದೆಮಾತನ್ನು ಸತ್ಯ ಮಾಡಿದರು!
ಉಳಿದಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು. ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
ಮರುದಿನ ಮೈಸೂರು ದರ್ಶನ. ರಾತ್ರಿ 11ಕ್ಕೆ ಮರಳಿ ಗೂಡಿಗೆ...
ಒಂದಷ್ಟು ನೆನಪು ಮತ್ತು ಪಾಠದೊಂದಿಗೆ!
No comments:
Post a Comment