Friday, September 11, 2009

ಗುರು

ಅಂದು ಗುರು ಸಾಕ್ಷತ್ ಪರಬ್ರಹ್ಮ ಸ್ವರೂಪ. ಇದ್ದದ್ದು, ಇ(ಬ)ರುತ್ತಿದ್ದದ್ದು ಪೂಜ್ಯ ಭಾವನೆಯೊಂದೇ. ಅವರು ಏನು ಹೇಳಿದರು, ಮಾಡಿದರು ಅದರಲ್ಲಿ ಜಿನುಗುತ್ತಿದ್ದದ್ದು ಸದಾಶಯ. ಆ ಗುರುವಿನ ಶಿಷ್ಯನಾಗುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸತ್ವ ಪರೀಕ್ಷೆಗಳಿಗೆ ಈಡಾಗಬೇಕಿತ್ತು, ಅದರಲ್ಲಿ ಯಶ ಪಡೆಯಬೇಕಿತ್ತು. ಅಷ್ಟರಲ್ಲೇ ವಿದ್ಯಾಕಾಂಕ್ಷಿ ಹಣ್ಣುಗಾಯಿ ನೀರುಗಾಯಿಯಾಗುತ್ತಿದ್ದ. ಮತ್ತೂ ಗುರುಮುಖೇನ ಕಲಿಯುವ ತುಡಿತ ಉಳಿದಿದ್ದೇ ಆದರೆ ಅನಂತರ 'ಮಾಗುವ' ಪ್ರಕ್ರಿಯೆ ಶುರು.
ಕಲಿಕೆ ಅಂದರೆ ಅದೊಂದು ತಪಸ್ಸು. ಕಲಿಯುವಿಕೆಯ ಹಂತಗಳಲ್ಲಿ ಗುರು ಶಿಷ್ಯರು ಪರಸ್ಪರ ವಶ ಮತ್ತು ವಿವಶ. ಗುರು ಕೊಡುವ ಶಿಕ್ಷೆ ಅಂದರೆ ಆದು ಆಶಿರ್ವಾದ ಸ್ವರೂಪ. ಅದರಲ್ಲೂ ಕಲಿಯುವಿಕೆಯ ಆನಂದ. ಗುರುವಿನ ಶಿಕ್ಷೆ ಆತನ ಮನಸ್ಸಿನ ಅಸಹನೆ, ದ್ವೇಷ, ಅಹಂ ಅಥವಾ ಹೆಂಡತಿ ಜೊತೆ ಜಗಳವಾಡಿದ ಕಾರಣದಿಂದ ಬರುತ್ತಿದ್ದಲ್ಲ. ಅದು ಸಹಜ, ಅನಿವಾರ್ಯ ಮತ್ತು ಶಿಷ್ಯನಲ್ಲಿ ಕಲಿಯುವಿಕೆಯ ಹಪಾಹಪಿ ಹುಟ್ಟಿಸುವಂತದ್ದು ಮತ್ತು ಆ ಕಲಿಕೆಗೆ ಸಮಗ್ರತೆಗೆ ತುಂಬುತ್ತಿತ್ತು. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲ, ಬದಲು ಗುರು ಪರಂಪರೆ. ಗುರುಕುಲವೇ ಅಂದಿನ ಜ್ಞಾನದೇಗುಲ.
ಅನಂತರ
ಗುರು ಪರಂಪರೆಯನ್ನು ಆವರಿಸಿಕೊಂಡದ್ದು ಶಿಕ್ಷಣ ವ್ಯವಸ್ಥೆ. ಇದು ಮೊಳಕೆಯೊಡೆದದ್ದು 1835ರಲ್ಲಿ. ಈ ವ್ಯವಸ್ಥೆಯ ಓಘ 1990ರ ತನಕ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿತ್ತು. ಇದೇ ಸಂದರ್ಭ ಭಾರತದ ಸ್ವಾತಂತ್ರ್ಯ ಹೋರಾಟ, ಅದರಲ್ಲಿನ ಗೆಲುವು ಮತ್ತು ಎಲ್ಲಾ ರೀತಿಯ ಐರೋಪ್ಯ ಮತ್ತು ಪೌರತ್ಯ ಪ್ರಣೀತ ಚಿಂತನೆಗಳು ಮತ್ತು ಸಾಧನಗಳು ನಮ್ಮ ನೆಲವನ್ನು ಪ್ರವೇಶಿಸಿದ್ದು. ಮತ್ತು ನಾವು ಕೂಡ ಆ ಸಂಗತಿಗಳಲ್ಲಿ ಸಾಧನೆ ಮಾಡಿದ್ದು. ಇದಕ್ಕೆಲ್ಲ ಕಲಶವಿಟ್ಟಂತೆ ಪ್ರಜಾಪ್ರಭುತ್ವವನ್ನು ನಮ್ಮ ಆಡಳಿತ ವಿಧಾನವಾಗಿ ಸ್ವೀಕರಿಸಿದ್ದು. ಈ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಪ್ರಶ್ನೆಗಳಿದ್ದರೂ ವಿದ್ಯೆಯನ್ನು ಸಾರ್ವತ್ರಿಕ ಮಾಡಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಇದರ ಒಳಿತು ಕೆಡುಕುಗಳು ಮತ್ತು ಈ ವ್ಯವಸ್ಥೆ ಹುಟ್ಟಿಕೊಳ್ಳಲು ಕಾರಣವಾದ ಸಂಗತಿಗಳು ಒತ್ತಟ್ಟಿಗಿರಲಿ. ಇಲ್ಲಿ 'ಗುರು' 'ಶಿಕ್ಷಕ'ನಾದ. ಆದರೆ ಆಶಯ ಬದಲಾಗಲಿಲ್ಲ, ಬರಡಾಗಲಿಲ್ಲ. ಕಾರಣವಿಷ್ಟೇ ಈ ವ್ಯವಸ್ಥೆ ಹೀರಿಕೊಂಡದ್ದು ಆ ಪರಂಪರೆಯಿಂದ!
ಶಿಕ್ಷಕ, ಮೇಷ್ಟ್ರು, ಟೀಚರ್, ಲೆಕ್ಚರರ್ ಅಂದರೆ ತುಂಬು ಗೌರವ ಅ ಗುರುವಿಗೆ ಸಂದಂತೆ ಇವರಿಗೂ ಸಲ್ಲುತ್ತಿತ್ತು. ಇಲ್ಲಿ ಅವರಿಗೆ ದೈವಂಶ ಸಂಭೂತರೆಂಬ ಪಟ್ಟವಿರದಿದ್ದರು ಬೀದಿಯಲ್ಲಿ ಅವರ ತಲೆ ಕಂಡರೆ ಸಾಕು ಹಿರಿಕಿರಿಯರೆನ್ನದೇ ಎಲ್ಲರಿಂದಲೂ ನಮಸ್ತೆಗಳ ಸುರಿಮಳೆ. ಅದೇನೂ ಒತ್ತಾಯಪೂರ್ವಕವಾಗಿ ಬರುತ್ತಿದ್ದದ್ದಲ್ಲ. ಅದು ಸಹಜ ಮತ್ತು ಭಕ್ತಿ ಪೂರ್ವಕ. ನಮ್ಮ ಹಳ್ಳಿಗಳಲ್ಲಿ ಈ ಟೀಚರ್ ಕೈಗೇ ಮಕ್ಕಳನ್ನು ಒಪ್ಪಿಸಿ ಅಂದರೆ ಶಾಲೆಗೆ ಕಳುಹಿಸಿದರೆ ಮನೆಮಂದಿಯಲ್ಲಿ ಅದೇನೋ ಒಂದು ಸಂತೃಪ್ತ ಭಾವ ಮತ್ತೊಂದು ಸುಂದರ ಕನಸು.
ಈ ವ್ಯವಸ್ಥೆಯಲ್ಲಿ ಪ್ರೀತಿಯಿಂದ ತೀಡುವ ವಿಠಲ ಮೇಷ್ಟ್ರು ಇದ್ದರು, ಕೋಲಿನಿಂದ ಬಡಿಯುವ ರುದ್ರಪ್ಪ ಮೇಷ್ಟ್ರು ಇದ್ದರು. ಅವೆಲ್ಲವನ್ನು, ಅವರೆಲ್ಲರನ್ನೂ ಮಕ್ಕಳು ಜೀರ್ಣಿಸಿಕೊಳ್ಳುತ್ತಿದ್ದರು ಅದಕ್ಕಿಂತ ಹೆಚ್ಚಾಗಿ ಹೆತ್ತವರು ಕೂಡ! ಆ ಪೆಟ್ಟಿನ ಭಯದಿಂದ ಕಲಿತು ಮಹನೀಯರಾದವರು ಬಹಳಷ್ಟು ಮಂದಿ. ನಮ್ಮ ನಮ್ಮ ಅಪ್ಪ ಅಮ್ಮಂದಿರೂ ಕೂಡ!
ಈಗ
ಹೊಡೆತಕ್ಕೆ ಬಿದ್ದಿದೆ ಫುಲ್ ಸ್ಟಾಪ್. ಸ್ವತಃ ಸರಕಾರವೇ ಈ ನಿರ್ದೆಶನವಿತ್ತಿದೆ. ಶಿಕ್ಷಣ ವ್ಯವಸ್ಥೆ, ಶಿಕ್ಷಣ ಕ್ಷೇತ್ರವಾಗಿದೆ. ಶಿಕ್ಷಕನದ್ದು ಒಂದು ವೃತ್ತಿ ಅಷ್ಟೆ. ಅದಕ್ಕಿಂತ ಆಚೆ ಅವನು ವಿಸ್ತರಿಸಲಾರ. ವಿಸ್ತರಿಸಿದರೂ ಕತ್ತರಿಸುವ ಕೈಗಳು ಸಮಾಜದಲ್ಲೇ ಇದೆ. ಒಬ್ಬ ವಿಧ್ಯಾರ್ಥಿಯ ಮೇಲಿರುವ ತನ್ನ ಜವಾಬ್ದಾರಿಗಳನ್ನು ಆತ ಸಂಕುಚಿತಗೊಳಿಸಿಕೊಂಡಿದ್ದಾನೆ ಅಥವಾ ಹಾಗೇ ಮಾಡುವಂತೆ ನಿರ್ಬಂಧಿಸಲಾಗುತ್ತಿದೆ. ಈ ಶಿಕ್ಷಕನಿಗೆ ವೃತ್ತಿ ಪರತೆ ತುಂಬುವ ಪ್ರಯತ್ನ ನಡೆಯುತ್ತದೆಯೇ ಹೊರತು ಸಮಗ್ರತೆ ಮತ್ತು ಸಂಸ್ಕಾರವನಲ್ಲ. ಅವನಿಗೆ ಸಿಗದ ಸಂಸ್ಕಾರವನ್ನು ಅವ ಹೇಗೆ ತಾನೇ ತನ್ನ ವಿಧ್ಯಾರ್ಥಿಗಳಿಗೆ ಅಂದರೆ ಮುಂದಿನ ಪೀಳಿಗೆಗೆ ದಾಟಿಸಬಲ್ಲ?
ಈಗ ಮಕ್ಕಳಿಗೆ ಹೊಡೆಯುವಂತಿಲ್ಲ. ನಿಜ, ಯಾವ ರೀತಿಯ ಹೊಡೆತವೂ ಅಕ್ಷಮ್ಯವೇ. ಆದರೆ ಕೆಲ ಮಕ್ಕಳು ಪೆಟ್ಟು ತಿನ್ನದೇ ಸರಿಯಾಗುವುದಿಲ್ಲ. ಕಲ್ಲು ಮೂರ್ತಿಯಾಗುವುದು ಉಳಿ ಪೆಟ್ಟಿನಿಂದಾಗಿಯೇ ಹೊರತು ಪ್ರಾರ್ಥನೆಯಿಂದ ಅಲ್ಲ! ನಾ ಆಗಲೇ ಬರೆದಂತೆ ನಮ್ಮಲ್ಲಿ ಅಥವಾ ನಮ್ಮ ಹಿಂದಿನ ಪೀಳಿಗೆಯ ಬಹಳಷ್ಟು ಮಂದಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದೆ ಗಟ್ಟಿಯಾದವರು.
ಈಗ ಶಿಕ್ಷಕನ ಜ್ಞಾನಕ್ಕೂ ಅಷ್ಟೊಂದು ಮಹತ್ವವಿಲ್ಲ. ಅದು ಎಲ್ಲ ಕಡೆಯೂ ಸಿಗುವ ಸಂಗತಿಯಾಗಿ ಬಿಟ್ಟಿದೆ. ಮಕ್ಕಳನ್ನು ಬೇಕಾಬಿಟ್ಟಿ ಪಾಸ್ ಮಾಡಿಸಬೇಕೆಂಬ ಸರಕಾರದ ಹವಣಿಕೆಗೆ ಈ ಮೇಷ್ಟ್ರುಗಳು ಬಲಿಪಶುಗಳು. ಈ ಕ್ಷೇತ್ರದ ಮೇಲೆ ಮತ್ತು ಇಲ್ಲಿ ದುಡಿಯುವವರ ಮೇಲೆ ಇಡಬಹುದಾದ ನಂಬಿಕೆ ಧರಾಶಾಯಿಯಾಗುತ್ತಿದೆ. ಇದು ಜಾಗತಿಕರಣದ ಕೊಡುಗೆ. ಇಲ್ಲಿ ಶಿಕ್ಷಕನ ಮಾದರಿತನಕ್ಕೆ ಕುರುಹು ಆತ ವಿಧ್ಯಾರ್ಥಿಗಳಿಗೆ ತುಂಬಿರುವ ಆದರ್ಶವಲ್ಲ ಬದಲು ಆವರಿಗೆ ಉದ್ಯೋಗ ಲೋಕದಲ್ಲಿ ಐದಂಕಿ ಸಂಬಳ ಗಳಿಸುವ ಆರ್ಹತೆ ಇದೆಯಾ? ಎಂಬುದು. ಈಗ ಗುರುವಿಗೂ ಗುರಿ ಇಲ್ಲ ಇದ್ದರೂ ಆದಕ್ಕೇ ಬೆಲೆ ಇಲ್ಲ!
ನಾಳೆ
ಮಾನವ ಪಾಠ ಮಾಡುವುದು ಅನುಮಾನ. ಯಂತ್ರ ಮಾನವನಿಗೆ ಸಿಗಬಹುದು ಈ ಸ್ಥಾನಮಾನ. ಮಾನವ ಪಾಠ ಮಾಡಿದರೂ ಮಕ್ಕಳು ಮತ್ತು ಮೇಷ್ಟ್ರ ಮಧ್ಯೆ ಭಾವನಾ ಶೂನ್ಯತೆ ಆಥವಾ ನಿರ್ವಾತ ನೆಲೆ ಮಾಡಿರಬಹುದು. ಬಿಳಿ ಚಾಕ್, ಕರಿ ಬೋರ್ಡ್ ನಮ್ಮ ನೆನಪಿನ ಕೋಶ ಸೇರಿರಬಹುದು. ಸಮಾಜದ ದೃಷ್ಟಿಯಲ್ಲಿ ಮೇಷ್ಟ್ರು ಕೆಲಸಕ್ಕೂ ಕಾರಕೂನನ ಕೆಲಸಕ್ಕೂ ಒಂದಿನಿತೂ ವ್ಯತ್ಯಾಸ ಉಳಿದಿರಲಾರದು. ಈ ಮೇಷ್ಟ್ರುಗಳು ಮತ್ತವರು ಕಲಿಸಿದ ಪಾಠ ಎರಡು ವರ್ಷವೂ ವಿಧ್ಯಾರ್ಥಿಗಳ ಮನದಲ್ಲಿ ಬಾಳದೇ ಹೋಗಬಹುದು. ಮಗುವಿನ ಅಗತ್ಯಕ್ಕೂ ಮಿಗಿಲಾದ ಕಂಪ್ಯೂಟರ್ ಬಳಕೆ ಸೇರಿಕೊಳ್ಳಬಹುದು. ಶಿಸ್ತಿನ ಹೆಸರಲ್ಲಿ ಅನೇಕ ಸರ್ಕಸ್ ಗಳು ನಡೆಯಬಹುದು.
ಶಿಕ್ಷಕರ ದಿನಾಚರಣೆ ಮಾತ್ರ ಅದ್ದೂರಿಯಾಗಿ ಜರುಗಬಹುದು!

No comments: