Wednesday, April 8, 2009

ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ....

ಕನ್ನಡ ಪತ್ರಿಕೋದ್ಯಮ ನಿಂತ ನೀರಾಗಿದ್ದ ಕಾಲದಲ್ಲಿ ಹುಟ್ಟಿಕೊಂಡು ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾದ ಪತ್ರಿಕೆ ’ವಿಜಯ ಕರ್ನಾಟಕ’. ’ವಿಜಯ ಕರ್ನಾಟಕ’ ಒಳ್ಳೆಯದನ್ನೇ ಮಾಡಿತು ಎಂಬುದಕ್ಕಿಂತ ಈ ಪತ್ರಿಕೆಯ ಕ್ಷಿಪ್ರ ಬೆಳವಣಿಗೆಗೆ ಇಡೀ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಆ ಮೂಲಕ ಓದುಗರಿಗೆ ಸಾಕಷ್ಟು ಒಳಿತನ್ನು ಮಾಡಿತು. ಇಂದು ಎಲ್ಲ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ತಾವು ’ಚಂದ’ ಕಾಣಿಸಿಕೊಳ್ಳಬೇಕೆಂಬ ಹಪಾಹಪಿ ಹುಟ್ಟಲು ’ವಿಜಯ ಕರ್ನಾಟಕ’ವೇ ಕಾರಣ. ವಿಜಯ ಕರ್ನಾಟಕ ಬೇರೆ ಪತ್ರಿಕೆಯ ಓದುಗರನ್ನು ತನ್ನತ್ತ ಸೆಳೆದುಕೊಂಡದಕ್ಕಿಂತ ಹೆಚ್ಚಾಗಿ ಪತ್ರಿಕೆಗಳನ್ನು ಓದುವ ಒಂದು ಓದುಗ ವಲಯವನ್ನೇ ಸ್ರಷ್ಟಿಸಿತು.

ಇದಕ್ಕೇ ಸಾಕ್ಷಿ ಇಂದು ಮುಖ್ಯವಾಹಿನಿ ಪತ್ರಿಕೆಗಳನ್ನು ’ಕೊಂಡು’ ಓದುವ ಸುಮಾರು ಹದಿನೈದು ಲಕ್ಷ ಓದುಗರು. ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ನಾನಿಲ್ಲಿ ಚರ್ಚೆ ಮಾಡುತ್ತಿಲ್ಲ. ಆದರೆ ವಿಜಯ ಕರ್ನಾಟಕದ ಈ ಸಾಧನೆಯ ಹಿಂದಿರುವ ವ್ಯಕ್ತಿ ಮತ್ತು ಒಂದು ಅಂಶ ಅಥವಾ ಸಿಧಾಂತದ ಬಗ್ಗೆ ಕೆಲವರು ಉರಿ ಕಾರುತ್ತಿದ್ದಾರೆ ಅದರಲ್ಲೂ ಒಂದು ಸಂಜೆ ಪತ್ರಿಕೆಯ ಸಂಪಾದಕರು.

ಅದಕ್ಕೆ ಕಾರಣವೂ ಇದೆ! ವಿಕ ಅಂದೊಡನೆ ತಕ್ಷಣ ನೆನಪಿಗೆ ಬರುವುದು ಅದರ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಅದರ ಅಂಕಣಕಾರರ ದಂಡು! ಇಂದು ಕನ್ನಡ ದಿನಪತ್ರಿಕೆಗಳ ಸಂಪಾದಕರಲ್ಲಿ ವಿಶ್ವೇಶ್ವರ ಭಟ್ ರಷ್ಟು ಜನಪ್ರಿಯ (ಅದೂ ಒಳ್ಳೆಯ ಕಾರಣಕ್ಕೆ) ಮತ್ತು ಬರವಣಿಗೆಯ ಮೂಲಕ ಓದುಗರಿಗೆ ಆಪ್ತರಾಗಿರುವ ಸಂಪಾದಕ ಇನ್ನೊಬ್ಬರಿಲ್ಲ. ಬೇರೆ ಯಶಸ್ವಿ ಸಂಪಾದಕರಿರಬಹುದು ಅದು ಬೇರೆ ವಿಷಯ. ವಿಕದಲ್ಲಿ ಪ್ರಕಟಗೊಳ್ಳುವ ಪ್ರತಾಪ್ ಸಿಂಹ ಮತ್ತು ಭಟ್ರ ಅಂಕಣಗಳು ಓದುಗರಲ್ಲಿ ಸಂಚಲನ ಉಂಟುಮಾಡುವ ಸಾಮರ್ಥ್ಯ ಇರುವಂತಹವು, ಇದು ಈ ಮೊದಲೇ ಹತ್ತಾರು ಸಂದರ್ಭಗಳಲ್ಲಿ ಸಾಬೀತಾಗಿದೆ ಕೂಡ.

ಅವರ ಅಂಕಣದಲ್ಲಿನ ವಿಷಯ ಅಥವಾ ಅಭಿಪ್ರಾಯವನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು. ಆದರೆ ಅವರ ಪ್ರತಿಭೆಯನ್ನೇ ಪ್ರಶ್ನಿಸುವ ಚಾಳಿಯನ್ನು ಕೆಲವರು ಬೆಳೆಸಿಕೊಂಡಿರುವುದು ಕನ್ನಡ ಪತ್ರಿಕೋದ್ಯಮದ ಆರೋಗ್ಯದ ದೃಷ್ಟಿಯಲ್ಲಿ ತೀರಾ ಅನಾಹುತಕಾರಿ. ಇನ್ನು ವಿಕ ಬಲಪಂಥಿಯ ಪತ್ರಿಕೆ ಎಂಬ ಕಾರಣಕ್ಕೇ ಕೆಲವರು ಇದನ್ನು ಟೀಕಿಸುತ್ತಾರೆ. ಈ ದೇಶದಲ್ಲಿ ಎಡಪಂಥಿಯರು ಪತ್ರಿಕೆ ನಡೆಸಬಹುದಾದರೆ ಅವರು ಬರೆಯಬಹುದಾದರೆ ಬಲಪಂಥಿಯರು ಯಾಕೆ ಆ ಕೆಲಸ ಮಾಡಬಾರದು? ಒಂಚೂರು ಅಚೀಚೆ ಆದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇದೆ, ಎಲ್ಲರಿಗೂ ತಮಗನಿಸಿದನ್ನು ಹೇಳುವ ಸಂವಿಧಾನದತ್ತ ಹಕ್ಕಿದೆ ಎಂದು ಕೂಗು ಹಾಕುವವರೇ ಬಲಪಂಥಿಯರು ಪತ್ರಿಕೆ ಮಾಡಿ ಅದನ್ನು ಪ್ರಸರಣದಲ್ಲಿ ಮೊದಲ ಸ್ಥಾನಕ್ಕೆ ತಂದರೆ ಅದರಲ್ಲಿ ಅವರ ಅನಿಸಿಕೆ ಹೇಳಿದರೆ ಮೈ ಮೇಲೆ ಇರುವೆ ಬಿಟ್ಟುಕೊಂಡವರ ಥರ ವರ್ತಿಸುವುದು ಯಾಕೆ? ಪಾಪ, ಬಲಪಂಥಿಯರಿಗೆ ಅಭಿವ್ಯಕ್ತಿ ಸ್ವಾತಂತ್ರ ಇಲ್ಲವೇ? ಪ್ರಜಾಪ್ರಭುತ್ವ ನಿಂತಿರುವುದೇ ಅಭಿಪ್ರಾಯ ಹೇಳುವ ಸ್ವಾತಂತ್ರದ ಮೇಲೆ.

ಯಾರದ್ದೇ ಅಭಿಪ್ರಾಯ ನಮಗೆ ಪಥ್ಯವಾಗದಿದ್ದಲ್ಲಿ ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವ್ಯಕ್ತಿ ನಿಂದನೆ ಆಗದಂತೆ ಟೀಕಿಸುವುದು ಬಿಟ್ಟು ವ್ಯಕ್ತಿ ನಿಂದನೆ ಮಟ್ಟಕ್ಕೆ ಇಳಿಯುವುದು ಎಷ್ಟು ಸರಿ? ನಂತರ ಅವರೇ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಪಾಠ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚು ಜನರ ಆಭಿಪ್ರಾಯಕ್ಕೆ ಮನ್ನಣೆ, ವಿಕವನ್ನು ೬ ಲಕ್ಷ ಜನ ಓದುತ್ತಾರೆ ಅಂದರೆ ಕರ್ನಾಟಕದಲ್ಲಿ ಹೆಚ್ಚು ಜನರು ಬಲಪಂಥಿಯ ಬರಹವನ್ನು ಇಷ್ಟಪಡುತ್ತಾರೆ ಎಂದರ್ಥ ತಾನೇ? ಅಂದರೆ ವಿಕ ಬೇರೊಂದು ಪಂಥದ ಪತ್ರಿಕೆಯಾದರೆ ಈ ೬ ಲಕ್ಷ ಜನರ ಅಭಿರುಚಿ ಮತ್ತು ಧ್ವನಿ ಏನಾಗಬೇಡ?

ಮತ್ತೇ ವಿಕದ ಪ್ರಸರಣ ಸಂಖ್ಯೆ ಕಡಿಮೆಯಾಗಲು ಕೆಲವರು ಊಹಿಸುತ್ತಿರುವ ಕಾರಣಕ್ಕಿ೦ತ ತೀರಾ ಭಿನ್ನ ಕಾರಣವಿದೆ ಆ ಬಗ್ಗೆ ತಾವು ಯೋಚನೆ ಮಾಡದೆ ತಮ್ಮ ತಮ್ಮ ಪತ್ರಿಕೆಗಳ ಪ್ರಸರಣ ಹೆಚ್ಚಿಸುವ ಬಗ್ಗೆ ವಿಕದ ’ಹಿತ ಚಿಂತಕರು’ ಚಿಂತಿಸುವುದು ಒಳಿತು. ಇನ್ನೂ ಸಿಎನ್ಎನ್ ಐಬಿಎನ್ ನ ಮ್ಯಾನೇಜಿಂಗ್ ಎಡಿಟರ್‍ ರಾಜದೀಪ್ ಸರ್‍ ದೇಸಾಯಿಯವರು ಬಿ ವಿ ಸೀತಾರಾಂರನ್ನು ಬೇಟಿಯಾಗಲು ನಿರಾಕರಿಸಿದ್ದರು ಎಂದು ಭಟ್ರು ತಮ್ಮ ’ಜನಗಳ ಮನ’ ಅಂಕಣದಲ್ಲಿ ಬರೆದಿದ್ದರು. "ಇಲ್ಲ, ನಾನು ಸರ್‍ ದೇಸಾಯಿಯವರನ್ನು ಭೇಟಿಯಾಗಿ ಮಾತುಕಥೆ ನಡೆಸಿದ್ದೇನೆ, ಸರ್‍ ದೇಸಾಯಿ ದಂಪತಿ ತಮ್ಮನ್ನು ಬಹಳ ಚೆನ್ನಾಗಿ ಸತ್ಕರಿಸಿದ್ದಾರೆ" ಎಂದೆನ್ನುತ್ತಾರೆ ಸಿತಾರಾಂ. ಇವರಲ್ಲಿ ಯಾರದ್ದು ಸತ್ಯ? ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ಸತ್ಯ ತಿಳಿದುಕೊಳ್ಳಲು ನನ್ನದೆ ಆದ ಮೂಲಗಳೂ ಇಲ್ಲ.

ಭಟ್ರು ಬರೆದದ್ದು ಸುಳ್ಳೇ ಆಗಿದ್ದರೆ ಸಿತಾರಾಂಗೆ ಆ ಬಗ್ಗೇ ಸ್ಪಷ್ಟೀಕರಣ ಕೊಡುವ ಹಕ್ಕಿದೆ. ಆದರೆ ಭಟ್ರು ಪ್ಯಾರಾನಾಯ್ಡ್ ಕಾಯಿಲೆ ಹಿಡಿದವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ಹಕ್ಕು ಬಿವಿಸೀ ಯವರಿಗೆ ಇಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಭಟ್ರ ಕೊಡುಗೆ ಅಪಾರವಾದದ್ದು. ಅದು ಲೇಖನ, ಅಂಕಣ, ಪುಸ್ತಕ, ಅಥವಾ ಪತ್ರಿಕೆಯ ರೂಪದಲ್ಲಿರಬಹುದು. ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ ಅವರ ಮೇಲೆ ಒಂದಿಷ್ಟು ಗೌರವವಿಟ್ಟುಕೊಂಡು ರಚನಾತ್ಮಕವಾಗಿ ಟೀಕಿಸಿದರೆ ಆ ರೀತಿ ಟೀಕಿಸುವವರಿಗೂ ಒಂದಿಷ್ಟು ಗೌರವ ಸಿಗಬಹುದೇನೋ...!

1 comment:

Anonymous said...

nimma blog ivattu modalu noduttiruvudu...
vijay joshi blog alli link siktu...
nimma barahagaLu, chintane chennagive