Monday, December 7, 2009

ಅವರಿಗೆ ’ಮತ’ದಾಸೆ, ನಮಗೆ ದೇಶದಾಸೆ!

ಛೇ, ಏನಿದು? ಇಲ್ಲ, ಅವರು ದೇಶದ ಮುಖ್ಯವಾಹಿನಿಗೆ ಸೇರುವುದೇ ಇಲ್ಲ. ಉಳಿದವರನ್ನು ಸೇರಲು ಕೂಡ ಬಿಡುವುದಿಲ್ಲ. ಅವರ ಸ್ವಾರ್ಥಕ್ಕೆ ಮತದ ಮುಖವಾಡ, ಅಲ್ಲಿ ಮತವೇ ಫುಟ್‌ಬಾಲ್ ಮತ್ತು ಅಂಪೈರ್‌ಗಳಾದ್ದೇ ಆಟ!
ಈ ರೀತಿ ಹೇಳದೆ, ಬರೆಯದೆ ವಿಧಿಯಿಲ್ಲ. ಕಾರಣ, ಮುಸ್ಲಿಂಮರು ’ವಂದೇ ಮಾತರಂ’ ಹಾಡುವುದರ ವಿರುದ್ದ ಜಾಮತೇ ಉಲೇಮಾ ಈ ಹಿಂದ್ ಹೊರಡಿಸಿರುವ ಫತ್ವಾ!
ವಾರೆವ್ಹಾ ಜಾಮತೇ ಉಲೇಮಾ ಈ ಹಿಂದ್ ವಾರೆವ್ಹಾ!
ಮುಸ್ಲಿಂಮರು, ಕೊಲೆ, ಕಳ್ಳತನ, ಅತ್ಯಾಚಾರ, ದೇಶದ್ರೋಹ ಮಾಡುವುದು ವಿಶಾಲವಾಗಿ ಹೇಳುವುದಾದರೆ ದೇಶದ ಕಾನೂನನ್ನು , ಮಾನವೀಯತೆಯನ್ನು ಗೌರವಿಸದಿರುವುದು ಇಸ್ಲಾಂ ವಿರೋಧಿಯಲ್ಲ ಆದರೆ ’ವಂದೇ ಮಾತರಂ’ ಹಾಡುವುದು ಮಾತ್ರ ಇಸ್ಲಾಂ ವಿರೋಧಿ! ಎಂಥಹ ಪರಿಕಲ್ಪನೆ ನಿಮ್ಮದು. ಅದ್ಭುತ... ಅದ್ಭುತ!
’ವಂದೇ ಮಾತರಂ’ನ್ನು ಬಂಕಿಮ ಚಂದ್ರ ಚಟರ್ಜಿ ಬರೆದದ್ದು ೧೮೭೫ರಲ್ಲಿ. ಆದರೆ ಅದು ಅವರ ಕಾದಂಬರಿ ’ಅನಂದ ಮಠ’ದ ಮೂಲಕ ಬೆಳಕು ಕಂಡದ್ದು ಮುಂದಿನ ದಶಕದ ಆದಿಯಲ್ಲಿ.
’ವಂದೇ ಮಾತರಂ’ನ್ನು ೧೮೯೬ರ ಕಾಂಗ್ರೇಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೋರ್ ಹಾಡಿದರು. ತದನಂತರ ೧೯೦೫ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ. ಈ ಸಂದರ್ಭದಲ್ಲೇ ’ವಂದೇ ಮಾತರಂ’ ಎಂಬ ಸುಪ್ತ ಜ್ವಾಲಾಮುಖಿ ಸ್ಪೋಟಗೊಂಡು ಇಡೀ ಬೆಂಗಾಳಿಯರನ್ನು ಬೆಸೆದು ಬ್ರಿಟೀಷ್ ಆದಿಪತ್ಯದ ಮೇಲೆ ಬೆಂಕಿಯ ವರ್ಷಧಾರೆ ಸುರಿಸಿದ್ದು.
ವಂಗ ಭಂಗ ಚಳವಳಿಯ ಬೀಜಮಂತ್ರವಾಯಿತು ಈ ಹಾಡು. ೧೯೧೧ರಲ್ಲಿ ಬಂಗಾಳ ಮತ್ತೆ ಒಂದಾಯಿತು. ಅಷ್ಟರಲ್ಲೇ ’ವಂದೇ ಮಾತರಂ’ ಗಿದ್ದ ಅಗಾಧ ಶಕ್ತಿ ಮತ್ತು ಚೈತನ್ಯ ಬೆಂಗಾಳಿಯರಿಗೆ ಮನದಟ್ಟಾಗಿತ್ತು ಮತ್ತು ಬ್ರಿಟೀಷ್ ದೊರೆಗಳಿಗೆ ಆರ್ಥವಾಗಿತ್ತು!
ಇದೇ ಕಾಲದಲ್ಲಿ ಮತ್ತು ತದನಂತರ ಈ ಹಾಡು ಬಂಗಾಳದ ಎಲ್ಲೆಗಳನ್ನು ದಾಟಿ, ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಹೃದಯಗಳನ್ನು ಮೀಟಿ ಬ್ರೀಟಿಷರ ಹುಟ್ಟಡಗಿಸಲೆಂದೇ ಹುಟ್ಟಿಕೊಂಡ ಹೊಸ ಅಸ್ತ್ರ ಅಥವಾ ಶಕ್ತಿಯಾಗಿ ಪರಿಗಣಿಸಲ್ಪಟ್ಟಿತ್ತು.
ಅಲ್ಲಿಂದ ೧೯೨೩ರ ಕಾಕಿನಾಡ ಕಾಂಗ್ರೇಸ್ ಅಧಿವೇಶನದ ತನಕ ’ವಂದೇ ಮಾತರಂ’ ಯಾವುದೇ ವಿವಾದಗಳಿಗೆ ತುತ್ತಾಗದೇ ದೇಶ ಬಾಂಧವರನ್ನು ಒಟ್ಟುಗೂಡಿಸುತ್ತ ಸಾಗಿತು.
ಆದರೆ ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಹಮ್ಮದ್ ಆಲಿ, ಅಧಿವೇಶನದಲ್ಲಿ ಈ ಹಾಡನ್ನು ಹಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ಈ ಹಾಡಿಗೆ ಮತ್ತು ಈ ಹಾಡಿನ ಆಶಯಕ್ಕೆ ಮೈಲಿಗೆ ಮಾಡುವ ಕೆಲಸಕ್ಕೆ ಮೂಹುರ್ತವಿಟ್ಟರು.
ಅಲ್ಲಿಂದ ನಂತರ ಹೆಚ್ಚಿನ ಮುಸ್ಲಿಂ ನಾಯಕರುಗಳಿಂದ ’ವಂದೇ ಮಾತರಂ’ನ ವಿರೋಧ ಪರ್ವ. ಇದೀಗ ಜಮಾತೆ ಉಲೇಮಾ ಸಂಘಟನೆ ಈ ಪರಂಪರೆಗೆ ಮತ್ತೊಂದು ಕೊಂಡಿ ಸೇರಿಸಿದೆ. ಇದು ಆ ಸಂಘಟನೆ ಸಂಕುಚಿತ ಚಿಂತನೆ ಮತ್ತು ಮನೋಭಾವದ ತುತ್ತಾತುದಿ ತಲುಪಿದೆ ಎಂಬುದನ್ನು ಸಾರಿದೆ. ಇಂತಹ ಮನಸ್ಥಿತಿ ಹುಟ್ಟಿಕೊಳ್ಳಲು ದೇಶದ ’ಜಾತ್ಯತೀತ’ಪಕ್ಷಗಳ ಕೊಡುಗೆ ಅಪಾರ. ಮುಸ್ಲಿಂ ಒಲವಿಗಾಗಿ ಪರಿತಪಿಸುವ ಪಕ್ಷಗಳಿಗೆ ’ವಂದೇ ಮಾತರಂ’ಅಸ್ಪಶ್ಯ,
ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ. ಅದೇನೇಂದರೆ ೧೮೮೦ ರಿಂದ ೧೯೨೩ರವರೆಗೆ ಯಾವೊಬ್ಬ ಮುಸ್ಲಿಂ ಮತ ಪಂಡಿತನೂ ಈ ಹಾಡಿನ ಬಗ್ಗೆ ತಕರಾರು ಎತ್ತಿರಲಿಲ್ಲ. ಸ್ವತ: ಈಗ ಫತ್ವಾ ಹೊರಡಿಸಿರುವ ಜಾಮಾತೇ ಉಲೇಮಾ ಕೂಡ! ಅಂದರೆ ಇದರರ್ಥ, ಆಗಿದ್ದ ಇಸ್ಲಾಂ ಮತ ಪಂಡಿತರಲ್ಲಿ ಮತ ಪಾಂಡಿತ್ಯದ ಕೊರತೆಯಿತ್ತೆಂದ? ಅಥವಾ ಅವರಿಗೆ ವಂದೇ ಮಾತರಂನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಲಿಲ್ಲ ಎಂದಾ? ಅಥವಾ ಅವರಿಗೆ ಇಸ್ಲಾಂ ಸರಿಯಾಗಿ ಗೊತ್ತಿರಲಿಲ್ಲ ಎಂದಾ? ಅಥವಾ ೧೯೨೦ರ ನಂತರದ ಹಲವು ಮುಸ್ಲಿಂ ನಾಯಕರು ಅಧಿಕಾರ ದಾಹಕ್ಕಾಗಿ ಈ ಹಾಡನ್ನು ಗೊತ್ತಿದ್ದು ಗೊತ್ತಿದ್ದು ತಪ್ಪಾಗಿ ಅರ್ಥೈಸಿಕೊಂಡರಾ?
ಮುಸ್ಲಿಂ ನಾಯಕರ ’ವಂದೇ ಮಾತರಂ’ದ್ವೇಷಕ್ಕೆ ಮತ್ತೊಂದು ಕಾರಣವನ್ನು ಊಹಿಸಬಹುದು. ಅದೇನೆಂದರೆ ಈ ಹಾಡು ಇರುವ ’ಅನಂದ ಮಠ’ಕಾದಂಬರಿಯ ಕಥಾವಸ್ತು. ಇಲ್ಲಿ ಬಂಗಾಳದ ಸಂತಾನ ಎಂಬ ಗುಡ್ಡಗಾಡು ಜನರು, ಆಕ್ರಮಣಕಾರಿ ಮುಸ್ಲಿಂರ ವಿರುದ್ಧ ಹೋರಾಡುತ್ತಾರೆ. ಈ ಗುಡ್ಡಗಾಡು ಜನರಿಗೆ ಸ್ಪೂರ್ತಿಯಾಗಿ ಈ ಹಾಡು ಕಾದಂಬರಿಯಲ್ಲಿ ಬಳಕೆಯಾಗುತ್ತದೆ. ಇದು ಮುಸ್ಲಿಂ ನಾಯಕರುಗಳಿಗೆ ನೋವು ತಂದಿರಬಹುದು.
ಸರಿ, ಒಪ್ಪೋಣ. ದೇಶದ ಜನರು ಆ ಕಾದಂಬರಿಯನ್ನು ಬಾಯಿ ಪಾಠ ಹೊಡೆಯಲಿ, ಆ ಪುಸ್ತಕವನ್ನ ’ರಾಷ್ಟ್ರ ಪುಸ್ತಕ’ಎಂದು ಘೋಷಿಸಲಿ ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಇನ್ನು ಈ ಕಾದಂಬರಿಯ ಬಗ್ಗೆ ದೇಶದ ಶೇ. ೯೯ ಮಂದಿಗೆ ಅರಿವೆ ಇರಲಿಕ್ಕಿಲ್ಲ. ಇದ್ದರೂ ಅದರ ಕಥಾಹಂದರದ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ. ಅವರಿಗೆ ಈ ಹಾಡು ಹುಟ್ಟಿಸುವ ದೇಶಭಕ್ತಿ ಮುಖ್ಯ ಉಳಿದ ವಿಷಯಗಳು ನಗಣ್ಯ.
ಅದರಲ್ಲೂ ಆ ’ಹಿರಿದಾದ’ಹಾಡಿನಲ್ಲಿರುವ ಹಿಂದೂ ದೇವತೆಗಳ ವರ್ಣನೆಯನ್ನು ತೆಗೆದು ಟ್ರಿಮ್ ಮಾಡಿ ಮುಸ್ಲಿಂಮರ ಧಾರ್ಮಿಕ ನಂಬಿಕೆಗೆ ಯಾವ ಚ್ಯುತಿಯೂ ಆಗದ ರೀತಿಯಲ್ಲಿ ಈ ಹಾಡನ್ನು ಈಗ ಬಳಸಿಕೊಳ್ಳಲಾಗುತ್ತಿದೆ. ಆದರೂ ಉಲೇಮಾದ ನಖಾರ ಅದರ ಉದ್ದಟತನದ ಪ್ರತೀಕ.
ಈಗ ದೇಶದ ರಾಷ್ಟ್ರಗೀತೆ ’ಜನಗಣಮನ’ವನ್ನು ತೆಗೆದುಕೊಳ್ಳಿ. ಈ ಹಾಡನ್ನು ಎಲ್ಲರೂ ಗೌರವಿಸುತ್ತಾರೆ ನಿಜ. ಅದರೆ ಈ ಹಾಡು ’ಉತ್ಸವ ಮೂರ್ತಿ’ ರೀತಿ ಅನಿಸಿಬಿಟ್ಟಿದೆ. ಅದು ಇಂದಿಗೂ ದೇಶವಾಸಿಗಳ ಹೃದಯದ ಹಾಡಗಿಲ್ಲ, ಜನರನ್ನು ಬೆಸೆದಿಲ್ಲ, ಜನರಲ್ಲಿ ಯಾವುದೋ ಒಂದು ಉದ್ದೇಶಕ್ಕಾಗಿ ಶ್ರಮಿಸುವಂತೆ, ಹೋರಾಡುವಂತೆ ಮಾಡಿಲ್ಲ, ಜನರಿಗೆ ಸ್ಪೂರ್ತಿಯಾಗಿಲ್ಲ ಅದಕ್ಕಿಂತ ಹೆಚ್ಚಾಗಿ ಜನರ ಪ್ರಜ್ಞೆಗೆ ಇಳಿದೇ ಇಲ್ಲ.
’ವಂದೇ ಮಾತರಂ’ ಆ ಕಾಲದಲ್ಲಿ ಕೇವಲ ಹತ್ತು ವರ್ಷದಲ್ಲಿ ಸಾಧಿಸಿದನ್ನು ’ಜನಗಣಮನ’ಕ್ಕೇ ಈ ಕಾಲದಲ್ಲಿ ಕಳೆದ ೬೦ ವರ್ಷಗಳಿಂದ ಸಾಧಿಸಲು ಸಾಧ್ಯವಾಗಿಲ್ಲ.
ಇನ್ನು ಜಮಾತೇ ಉಲೇಮಾದ ವಿಷಯಕ್ಕೆ ಬರೋಣ, ಇದು ಅಸ್ತಿತ್ವಕ್ಕೆ ಬಂದದ್ದು ೧೯೧೯ರಲ್ಲಿ. ಭಾರತದಲ್ಲಿನ ಮುಸ್ಲಿಂಮರ ಶ್ರೇಯೋಭಿವೃಧಿ ಇದರ ಉದ್ದೇಶ. ಇದರ ಮುಖ್ಯ ಕಚೇರಿ ೧, ಬಹದ್ದೂರ್ ಶಾ ಜಾಫರ್ ರಸ್ತೆ, ನವದೆಹಲಿಯಲ್ಲಿದೆ.
ಇದು ಪಾಕಿಸ್ತಾನದ ಸೃಷ್ಟಿಯನ್ನು ವಿರೋಧಿಸಿತ್ತು. ಇದಕ್ಕಿಂತ ಅಶ್ಚರ್ಯದ ವಿಷಯವೆಂದರೆ ಕಳೆದವರ್ಷ ಭಯೋತ್ಪಾದನೆ ವಿರುದ್ದ ಪತ್ವಾ ಹೋರಡಿಸಿತ್ತು. ಈಗ ’ವಂದೇ ಮಾತರಂ’ವಿರುದ್ದ ಫತ್ವಾ! ಅಂದರೆ ಮುಗ್ದರನ್ನು ಕೊಲ್ಲವವರು ಮತ್ತು ’ವಂದೇ ಮಾತರಂ’ಹಾಡುವ ಮುಸ್ಲಿಂಮರು ಒಂದೇ ಎಂದ ಹಾಗಯ್ತು.
ಒಬ್ಬ ಮುಗ್ದನನ್ನು ಕೊಲ್ಲುವುದು, ಇಡೀ ಮಾನವ ಜನಾಂಗದ ಹತ್ಯೆ ಮಾಡಿದ ಪಾಪಕ್ಕೆ ಸಮ ಎಂದು ಕುರಾನ್‌ನಲ್ಲಿ ಇದೆಯೆಂದು ಬಲ್ಲವರು ಹೇಳುತ್ತಾರೆ. ಆದರೆ ಅದೆಲ್ಲದಕ್ಕಿಂತ ಹೆಚ್ಚು ಪಾಪದ ಕೆಲಸ ’ವಂದೇ ಮಾತರಂ’ಹಾಡುವುದು!
’ವಂದೇ ಮಾತರಂ’ಹಾಡಿದೊಡನೆ ಕುಸಿದು ಬೀಳುವಷ್ಟು ಜಾಳಾಗಿದೆಯಾ ಇಸ್ಲಾಂ? ಇದು ಪ್ರಶ್ನೆಯಲ್ಲ, ಸಂಶಯ.
ಸೂಡಾನ್‌ನ ಶೇಕ್ ಸಾದಿಕ್ ಅಬ್ದದಲ್ಲಾ ಬಿನ್ ಮಜೀದ್ ಎಂಬ ಮುಸ್ಲಿಂ ನಾಯಕ ಮಕ್ಕಳಿಗೆ ಲಸಿಕೆ ಕೊಡಿಸುವುದರ ವಿರುದ್ದ ಫತ್ವಾ ಹೊರಡಿಸಿದ್ದ. ಇರಾನ್‌ನ ಅಯೆತೊಲ್ಲ ಆಲಿ ಕಮೇನಿ, ಅಣ್ವಸ್ತ್ರ ಬಳಕೆ ಮತ್ತು ಶೇಖರಣೆ ವಿರುದ್ದ ಫತ್ವಾ ಹೊರಡಿಸಿದ್ದ. ಇನ್ನು, ಒಸಮಾ ಬಿನ್ ಲಾದನ್ ೧೯೯೬ ಮತ್ತು ೧೯೯೮ರಲ್ಲಿ ಹೊರಡಿಸಿದ್ದ ಫತ್ವಾದಲ್ಲಿ ಅಮೆರಿಕ, ಇಸ್ರೇಲ್‌ಗೆ ತನ್ನ ಬೆಂಬಲ ವಾಪಸ್ ಪಡೆದುಕೊಳ್ಳುವವರೆಗೆ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿರುವ ತನ್ನ ಸೈನ್ಯವನ್ನು ವಾಪಸ್ ಪಡೆದುಕೊಳ್ಳುವವರೆಗೆ ಅದರ ನಾಗರಿಕರನ್ನು ಮತ್ತು ಸೈನಿಕರನ್ನು ಕೊಲ್ಲುವಂತೆ ಹೇಳಿದ್ದ. ಇವು ಕೆಲವೇ ಕೆಲವು ಸಾಮಾಜಿಕ ಪರಿಣಾಮ ಬೀರುವ ಮತ್ತು ಬೀರಿದ ಫತ್ವಾಗಳು.
ಇದರ ಜೊತೆ ಜೊತೆಗೆ ಸಿಗರೇಟ್ ಸೇವನೆಯ ವಿರುದ್ದ ಫತ್ವಾವಿದೆ. ಭಯೋತ್ಪಾದನೆಯ ವಿರುದ್ದವೂ ಫತ್ವಾವಿದೆ. ಇಂತಹ ಫತ್ವಾ ಇದ್ದರೂ ಮುಸ್ಲಿಂಮರು ಎಗ್ಗಿಲ್ಲದೆ ಸಿಗರೇಟ್ ಸೇದುತ್ತಾರೆ. ಭಯೋತ್ಪಾದನ ಚಟುವಟಿಕೆ ಅಥವಾ ಕೊಲ್ಲುವ, ಹಲ್ಲೆ ಮಾಡುವ ಚಟುವಟಿಕೆಗಳಲ್ಲಿ ’ಉತ್ಸಾಹ’ದಿಂದ ಪಾಲ್ಗೊಳ್ಳುತ್ತಾರೆ. ಇದರರ್ಥ, ಅವರು ಫತ್ವಾಕ್ಕೆ ಸೊಪ್ಪು ಹಾಕುತ್ತಿಲ್ಲ ಬದಲು ಟೋಪಿ ಹಾಕುತ್ತಿದ್ದರೆ ಎಂದಾಯಿತು.
ಅದ್ದರಿಂದ ’ವಂದೇ ಮಾತರಂ’ಬಗೆಗೂ ಅವರ ಪ್ರತಿಕ್ರಿಯೆ ಅದೇ ರೀತಿ ಇರಬಹುದು ಎಂದು ಊಹಿಸಬಹುದು. ಹಾಗೇ ಆಗಿದ್ದೇ ಆದಲ್ಲಿ ಖಂಡಿತ ಇದೊಂದು ಅಭೂತ ಪೂರ್ವ ಬೆಳವಣಿಗೆ. ಆದರೆ ಇದು ಹಾಗೇ ಆಗುವುದಿಲ್ಲ ಎಂದು ನಂಬಲು ಬಲವಾದ ಕಾರಣವಿದೆ. ಯಾಕೆಂದರೆ ’ವಂದೇ ಮಾತರಂ’ನ್ನು ವಿರೋಧಿಸಲು ಮತ ಪಂಡಿತರು ನೀಡಿರುವ ಕಾರಣ ಅದು ಹಿಂದೂ ದೇವತೆಗಳನ್ನು ಹೊಗಳುತ್ತದೆ ಎಂಬುದು. ಇಸ್ಲಾಂ ’ಅಲ್ಲಾಹು’ನ ಹೊರತಾಗಿ ಯಾರನ್ನೂ ಮತ್ತೂ ಯಾವುದನ್ನು ದೇವರೆಂದು ಪರಿಗಣಿಸುವುದಿಲ್ಲ. ಈಗ ನೀ ’ವಂದೇ ಮಾತರಂ’ಹಾಡಿದರೆ ಅದು ನೀನು ’ಅಲ್ಲಾಹು’ವಿಗೆ ಮಾಡುವ ಅಪಚಾರ ಎಂದು ಬಿಂಬಿಸಿದರೆ ಸಾಕು. ಮುಸ್ಲಿಂಮರು ತಪ್ಪಿಯೂ ಅ ಪದವನ್ನು ಉಸುರುವುದಿಲ್ಲ.
ಫತ್ವಾ ಹೊರಡಿಸುವವರು ’ಪರಿಶುದ್ದ’ರು ಎಂದು ನೀವು ತಿಳಿದುಕೊಳ್ಳಬೇಡಿ. ೨೦೦೮ರಲ್ಲಿ ಟಿವಿ ಚಾನೆಲ್‌ವೊಂದು ನಡೆಸಿದ ’ಕುಟುಕು ಕಾರ್ಯಾಚರಣೆ’ಯಲ್ಲಿ ಹಣ ಪಡೆದು ಫತ್ವಾ ಹೋರಾಡಿಸುತ್ತಿದ್ದ ಅನೇಕ ಮುಸ್ಲಿಂ ನಾಯಕರು ’ಬೆಳಕಿಗೆ’ ಬಂದಿದ್ದರು.
ದೇಶದ ೯೦ ಕೋಟಿ ಜನರಿಂದ ಈ ೧೬ ಕೋಟಿ ಮುಸ್ಲಿಂಮರನ್ನು ದೂರವಿಡುವ ಕೆಲಸವನ್ನು ಕಾಲಕಾಕ್ಕೆ ಈ ಮುಸ್ಲಿಂ ನಾಯಕರುಗಳು ಯಾಕೆ ಮಾಡುತ್ತಿದ್ದಾರೆ? ಈ ಹಿಂದೆಯೂ ಇಂತಹ ನಾಯಕರುಗಳ ಮಾತು ಕೇಳಿದ ಮುಸ್ಲಿಂಮರು ಇಂದು ಪಾಕಿಸ್ತಾನ ಮತ್ತು ಬಾಂಗ್ಲದೇಶಗಳಲ್ಲಿ ಪಡಬಾರದ ಯಾತನೆ ಪಡುತ್ತಿದ್ದಾರೆ. ಅದ್ದರಿಂದ ಇಂತಹ ದೊಣ್ಣೆ ನಾಯಕರುಗಳ ವಿಷ ಮಾತುಗಳಿಗೆ ದೇಶದ ಮುಸ್ಲಿಂಮರು ಮಣೆ ಹಾಕಬಾರದು.
ಇಲ್ಲಿನ ಬಹುಸಂಖ್ಯಾತರ ಜೊತೆ ಕೂಡಿ ಬಾಳುವ ದಿಸೆಯಲ್ಲಿ, ಮತ್ತವರ ನಂಬಿಕೆಯನ್ನು ಗೌರವಿಸಿ ಸಾಮರಸ್ಯದ ಬದುಕು ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ದೇಶ ಖಂಡಿತವಾಗಿಯೂ ಅವರನ್ನು ಹೃದಯದಲ್ಲಿಟ್ಟು ಗೌರವಿಸುತ್ತದೆ. ಉದಾಹರಣೆಗೆ ಪ್ರಸಕ್ತ ಭಾರತದ ಸರ್ವಶ್ರೇಷ್ಟ ನಾಯಕ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಚಲನಚಿತ್ರ ತಾರೆಯರು, ಕ್ರೀಡಾ ಕಲಿಗಳನ್ನು, ನಾನ ಕ್ಷೇತ್ರಗಳಲ್ಲಿನ ಸಾಧಕರನ್ನು ನಾವು ಜಾತಿ ಮತದ ಹಂಗಿಲ್ಲದೆ ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ ಮುಂದೆಯೂ ನಾವು ಈ ಕಾರ್ಯ ಮಾಡಲಿದ್ದೇವೆ.
ಇಲ್ಲ, ನಿಮಗೆ ಇಂತಹ ಫತ್ವಾಗಳೇ ಮುಖ್ಯವಾಗುವುದಾದರೇ ಅಂದು ಫತ್ವಾ ಹೊರಡಿಸುವಾಗ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಇದ್ದರು ಮತ್ತು ಅವರು ಸುಮ್ಮನಿದ್ದರು ಮತ್ತು ಈಗಲೂ ಸುಮ್ಮನಿದ್ದಾರೆ ಬಹುಶಃ ಮುಂದೆಂಯೂ ಸುಮ್ಮನಿರುತ್ತಾರೆ. ಅವರಿಗೆ ಮತ್ತು ಫತ್ವಾ ಹೊರಡಿಸಿದವರಿಗೆ ’ಮತ’ದಾಸೆ. ಆದರೆ ದೇಶದ ೯೦ ಕೋಟಿ ಜನರು ಹಾಗಿಲ್ಲ, ಹಾಗಿರುವುದು ಇಲ್ಲ! ಯಾಕೆಂದರೆ ಅವರಿಗಿರುವುದು ದೇಶದ ಸಮಗ್ರತೆಯನ್ನು ಉಳಿಸಿಕೊಳ್ಳುತ್ತೇವೆ ಎಂಬ ಮಹಾದಾಸೆ!

Friday, October 23, 2009

ಮೈಸೂರಿನಲ್ಲೊಂದು ಪತ್ರಿಕೋದ್ಯಮ ಕಾರ್ಯಾಗಾರ... ಈಗ ನನ್ನದು ವರದಿ ನೀಡೋ ಸರದಿ!

[ಈ ಬರಹ ಸ್ವಲ್ಪ ಅಲ್ಲ ತುಂಬಾನೇ ಉದ್ದವಿದೆ... ಇದನ್ನು ಟ್ರೀಮ್ ಮಾಡಿ ಬ್ಲಾಗ್ ಗೆ ಹಾಕೋಣ ಎಂದು ಒಮ್ಮೆ ಯೋಚಿಸಿದ್ದೆ. ಆದರೆ ಹಾಗೆ ಮಾಡಿಲ್ಲ... ಇಲ್ಲಿನ ಕೆಲ ವಿಷಯಗಳು ಕೆಲವರಿಗೆ ಅಪ್ರಸ್ತುತ ಎಂದು ಅನಿಸಬಹುದು ಅದರೆ ಕೆಲವರಿಗೆ ಅದು ಬೇಕಾಗಿರುವುದರಿಂದ ಅದನ್ನು 'ಕಟ್' ಮಾಡಿಲ್ಲ. ಅದ್ದರಿಂದ ಸಹೃದಯಿ ಓದುಗರು ಸಹಕರಿಬೇಕು.]
ಇದನ್ನು ನಾನು ವಿಶ್ಲೇಷಣ ವರದಿ ಅಂತ ಅಂದ್ಕೊಡಿದ್ದೇನೆ...!
ಅಂದು ಗುರುವಾರ, ದಿನಾಂಕ 8/10/2009. ಸಮಯ ಮಧ್ಯಾಹ್ನ 2 ಗಂಟೆ. ನಮ್ಮ ಕಾಲೇಜಿನ (ಎಸ್ ಡಿ ಎಂ ಕಾಲೇಜು) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 16 ವಿದ್ಯಾರ್ಥಿಗಳು ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಏರಿ ಆಗಿತ್ತು. ನಮ್ಮೊಂದಿಗೆ ಚಂದ್ರಲೇಖ ಮ್ಯಾಮ್ ಕೂಡ ಇದ್ದರು. ಆ ಬಸ್ ನಲ್ಲಿ ನಾವು 17 ಮಂದಿಯ ಹೊರತಾಗಿ ಒಬ್ಬನೇ ಪಯಣಿಗನಿದ್ದದ್ದು! ಅದ್ದರಿಂದ ಆ ಬಸ್ಸು ನಮ್ಮದೇ ಆಗಿತ್ತು ಎನ್ನಲೂ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ!
ಬಸ್ಸಿನ ಕುಲುಕಾಟಕ್ಕೆ ನಮ್ಮ ಹುಡುಗಾಟದ ಸಾಥ್ ಸೇರಿ ಪಯಣವಂತೂ ಬೊಂಬಾಟ್. ಬಗೆ ಬಗೆ ತಿಂಡಿತಿನಿಸುಗಳು ಗೆಳೆಯ - ಗೆಳತಿಯರ ಜೋಳಿಗೆಯಲ್ಲಿತ್ತು. ಅದನ್ನು ನಾವೆಲ್ಲ ಹಂಚಿಕೊಂಡು ತಿನ್ನುತ್ತಾ 'ಹಂಚಿ ತಿನ್ನುವುದರಲ್ಲಿ ಸ್ವರ್ಗಸುಖವಿದೆ' ಎಂಬ ಹಿರಿಯರ ಮಾತನ್ನು ಪರಾಂಬರಿಸಿ ನೋಡಿದೇವು. ಚೇತನ್ ಅಲಿಯಾಸ್ ಚೇತು ತಿಂಡಿ ವಿತರಣೆಯ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದ ಮತ್ತು ಇದರಿಂದ ಅವನು ಸಾಕಷ್ಟು ಲಾಭಮಾಡಿಕೊಂಡಿದ್ದಾನೆ ಎಂದು ಜನರಾಡಿಕೊಳ್ಳುತ್ತಿದ್ದಾರೆ! ನಂದಂತೂ 'ಓಸಿ ಜೀವನವೇ ಲೇಸು ಸರ್ವಜ್ಙ' ಎಂಬ ಜನರ ಮಾತನ್ನು ಸತ್ಯಮಾಡಲೇಬೇಕು ಎಂಬ ಪಣ.
ನಾವು ರಾತ್ರಿ 9 ಗಂಟೆಯ ಸುಮಾರಿಗೆ ಮೈಸೂರು ತಲುಪಿದೆವು. ಅಲ್ಲಿ ಊಟ ಮುಗಿಸ್ಕೊಂಡು ಎರಡು ಗುಂಪಾಗಿ ಭಾಗವಾದೇವು. ಒಂದು ಗುಂಪು ಕೇಂದ್ರ ಸರಕಾರದ ಒಡೆತನದ ಯೂತ್ ಹಾಸ್ಟೆಲ್ ಗೆ ಹೋದರೆ ಮತ್ತೊಂದು ಗುಂಪು ಕರ್ನಾಟಕ ಒಪನ್ ಯುನಿವರ್ಸಿಟಿಯ ಹಾಸ್ಟೇಲ್ ಸೇರಿಕೊಂಡಿತು.
ನಾವು ಸುಖಾಸುಮ್ಮನೆ ಮೈಸೂರಿಗೆ ಹೋದದ್ದಲ್ಲ. ಅಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನಲ್ಲಿ ಅಕ್ಟೋಬರ್ 9 ಮತ್ತು 10 ರಂದು ಆಯೋಸಲಾಗಿದ್ದ 'ಪ್ರಸ್ತುತ ಪತ್ರಿಕೋದ್ಯಮ: ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು' ಎಂಬ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲು.
ಕಾರ್ಯಗಾರ: ಮಾಹಿತಿಯ ಆಗರ
ನಾನು ಅಲ್ಲಿ ಕಳೆದ ಎಲ್ಲಾ ಕ್ಷಣಗಳನ್ನು ಇಲ್ಲಿ ಬರೆಯುವುದಿಲ್ಲ. ಬರೆದರೆ, ಅದು ನನ್ನ ಡೈರಿ ಅಥವಾ ವರದಿಯಾಗಿ ಬಿಡಬಹುದು. ಅದ್ದರಿಂದ ಹೇಳಲೇ ಬೇಕು ಎಂದೆನಿಸಿ, ಹೇಳದೆ ಇರಲಾಗದ್ದನ್ನು ಮತ್ತು ಈ ಬ್ಲಾಗ್ ನ ಓದುಗರಿಗೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂಚೂರಾದರೂ ಪ್ರಯೋಜನವಾಗಬಹುದು ಎಂದೆನಿಸಿದನ್ನು ಮಾತ್ರ ಇಲ್ಲಿ ಬರೆಯುತ್ತೇನೆ.
ಕಾರ್ಯಗಾರವನ್ನು 'ವಾಯ್ಸ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ರಾಜಕಾರಣಿ, ವಾಸು ಉದ್ಘಾಟಿಸಿದರು.
ಆದರೆ ಕಾರ್ಯಕ್ರಮದಲ್ಲಿ ಚಿಂತನೆಯ ಕಿಡಿ ಹೊತ್ತಿಸಿದ್ದು 'ಮೈಸೂರು ಮಿತ್ರ’ ಮತ್ತು 'ಸ್ಟಾರ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ವಿ. ಗಣಪತಿ. ಅವರು ಅಕ್ಷರಶ: ಸಿಡಿಗುಂಡೇ ಆಗಿದ್ದರು. ಅದರಲ್ಲೂ ಕೆಲ ಪತ್ರಿಕೆಗಳ ’ತಲೆಬರಹ’ ಶೈಲಿಯನ್ನು ಉದಾಹರಣೆ ಸಹಿತ ಖಂಡಿಸಿದ ಅವರು ಪತ್ರಿಕೆಗಳ ಮನೋಭಾವವನ್ನು ಪ್ರಶ್ನಿಸುತ್ತಾ ಸಾಗಿದರು. ಸ್ವಾತಂತ್ರ್ಯ ಪೂರ್ವದಲ್ಲೂ ಜನಪ್ರಿಯ ಅಂಗ್ಲ ಪತ್ರಿಕೆಗಳ ಬ್ರಿಟೀಷ್ ಸೇವೆ ಮತ್ತು ಅದರ ಇಬ್ಬಂದಿತನವನ್ನು ಬೆತ್ತಲೆ ಮಾಡಿದ ಅವರು ಭಾಷಾ ಪತ್ರಿಕೆಗಳು ಮಾತ್ರ ಸ್ವಾತಂತ್ರ್ಯ ಹೋರಾಟದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವು ಎಂದರು. 'ಕಾರ್ಯಕಾರಿ ಸಂಪಾದಕ' ಎಂಬ ಹೊಸ ಬೆಳವಣಿಗೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪರ್ತಕರ್ತರು ಸ್ವತಂತ್ರ ಮತ್ತು ವೃತ್ತಿಪರರಾಗಿರಬೇಕು ಎಂದರು.
ಅವರು ಕನ್ನಡದ ಜನಪ್ರಿಯ ಪತ್ರಿಕೆಯೊಂದನ್ನು ಗುರಿಯಾಗಿಸಿಕೊಂಡೇ ಮಾತನಾಡಿದರು ಎಂದು ಯಾರಿಗಾದರೂ ಅನಿಸದೇ ಹೋಗಿದ್ದರೆ ಅವರ ಮಾತಿಗೆಯೇ ಅವಮಾನ ಮಾಡಿದಂತೆ.
ಕೆ.ವಿ. ಗಣಪತಿ ಹೇಳಿದ ಅನೇಕ ಸಂಗತಿಗಳು ಸತ್ಯವಾದದ್ದು. ಆದರೆ ಅವರು ಎಲ್ಲೋ ಒಂದು ಕಡೆ ವಸ್ತುನಿಷ್ಟತೆಯನ್ನು ಮರೆತು 'ಇಸಂ'ನಿಷ್ಟತೆಗೆ ಬಲಿಯಾದರು ಎಂದು ಅನಿಸದೇ ಇರಲಿಲ್ಲ. ಅದರಲ್ಲು ಅವರು 'ತಲೆ ಬರಹ'ಕ್ಕೆ ಉದಾಹರಣೆ ಕೊಡುತ್ತ ಒಂದು ಅಥವಾ ಎರಡು ಪತ್ರಿಕೆಯ 'ತಲೆಬರಹ'ಗಳ ಉದಾಹರಣೆ ಮಾತ್ರ ಕೊಟ್ಟರು. ಅದರರ್ಥ, ಕನ್ನಡದಲ್ಲಿ ನೂರಾರು ಪತ್ರಿಕೆಗಳಿದ್ದರು ಎರಡು ಪತ್ರಿಕೆಗಳು ಮಾತ್ರ ಕೆಟ್ಟ 'ತಲೆಬರಹ' ಕೊಡುತ್ತವೆ ಎಂದಾ? ಹಾಗಾದರೆ ಇದು ಸಂತಸ ಪಡಬೇಕಾದ ಸಂಗತಿ ಅಲ್ಲವೇ?

ಮುಂದಿನದ್ದು ಅವಧಿಗಳ ಯುಗ...

ಬೀಟ್ ನಲ್ಲಿ ಬೇರು ಬಿಡಿ ಆದರೆ ತಳವೂರಬೇಡಿ: ಭಟ್

ಮೊದಲ ಅವಧಿ 'ಸಂಪಾದಕೀಯ ಪುಟ'ದ ಬಗೆ ಇತ್ತು. ಸಂಪನ್ಮೂಲ ವ್ಯಕ್ತಿಯಾಗಿ ’ವಿಜಯ ಕರ್ನಾಟಕ’ದ ಕಾರ್ಯನಿವಾರ್ಹಕ ಸಂಪಾದಕ, ವಿಶ್ವೇಶ್ವರ ಭಟ್ ಆಗಮಿಸಿದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವರು 'ಸಂಪಾದಕೀಯ ಪುಟ'ದ ಬಗೆ ಒಂದೇ ಒಂದು ಮಾತು ಆಡಲಿಲ್ಲ! ಹಾಗಂತ ಗೊತ್ತುಗುರಿಯಿಲ್ಲದ ಮಾತು ಅವರದಾಗಿರಲಿಲ್ಲ. ಅವರ ಮಾತು ಗಿರಕಿ ಹೊಡೆದದ್ದು ಒಬ್ಬ ಪತ್ರಕರ್ತನಿಗೆ ಅದರಲ್ಲೂ ಭಾವಿ ಪತ್ರಕರ್ತನಿಗೆ ಇ- ಮೈಲ್, ಟ್ವೀಟರ್, ಬ್ಲಾಗ್ ಮುಂತಾದವು ಎಷ್ಟು ಅವಶ್ಯಕ ಎಂಬುದರ ಬಗೆ.
ಆಧುನಿಕ ಸಂಪರ್ಕ ಸಾಧನಗಳ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲವೆಂದರೆ ನೀವು ಎಷ್ಟು ಚೆನ್ನಾಗಿ ಬರೆಯುವವರಾದರೂ ನಾನಂತು ನಿಮಗೆ ಖಂಡಿತವಾಗಿಯೂ ಕೆಲಸ ಕೊಡುವುದಿಲ್ಲ ಎಂದು ಭಟ್ರು ಇದೇ ಸಂದರ್ಭದಲ್ಲಿ ಒಂಚೂರು ಖಾರವಾಗಿ ಹೇಳಿದರು.. ಒಬ್ಬ ಪತ್ರಕರ್ತನಿಗೆ ಅಧುನಿಕ ಸಂಪರ್ಕ ಸಾಧನಗಳ ಬಗೆಗಿನ ಆರಿವು ಇರಬೇಕು, ನಿಜ. ಆದರೆ ಆದೇ ಅವನ ಬರವಣಿಗೆಗೆ ಬದಲಿ ಎಂದೆನಿಸಿಕೊಳ್ಳುವುದು ಸರಿಯಾ? ಉದಾಹರಣೆಗೆ ಇ - ಮೈಲ್ ಬಳಕೆಯನ್ನು ಒಂದು ಗಂಟೆಯೊಳಗೆ ಯಾರು ಬೇಕಾದರೂ ಕಲಿತುಕೊಳ್ಳಬಹುದು, ಅದೇ ಬರವಣಿಗೆಯನ್ನು ಹಾಗೆ ಬಗ್ಗಿಸಿಕೊಳ್ಳಲು ಸಾಧ್ಯನಾ?
ಇನ್ನೂ ಎರಡು ವರ್ಷಗಳಲ್ಲೇ ಭಾಷಣ ವರದಿಗಾರಿಕೆ ಎಂಬುದೇ ಇರುವುದಿಲ್ಲ ಎಂಬ ಅಭಿಪ್ರಾಯ ಅವರದ್ದು. ಅದ್ದರಿಂದ ಭಾಷಣಗಳ ವರದಿ ಮಾಡಿ ನಾನು ಪತ್ರಕರ್ತನಾಗುತ್ತೇನೆ ಅಥವಾ ಆಗಿದ್ದೇನೆ ಎಂದು ಭಾವಿಸುವವರ ಅಥವಾ ಭಾವಿಸುತ್ತಿರುವವರ ತಲೆ ಮೇಲೆ ಅಪಾಯದ ಬಾವುಟ ನೆಟ್ಟಿದ್ದಾರೆ ಭಟ್ರು. ಇದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯೂ ಹೌದು ಪತ್ರಿಕಾವರದಿಗಾರಿಕೆ ಹೊಸ ಸಾದ್ಯತೆಯೊಂದನ್ನು ಕಂಡುಕೊಳ್ಳಲಿದೆ ಎಂಬುದರ ಸೂಚನೆಯೂ ಹೌದು.
ಭಟ್ರು, ಮತ್ತೊಂದು ವಾಗ್ಬಾಣ ಬಿಟ್ಟದ್ದು ಹುಡುಗಿಯರ ಮೇಲೆ. ಅವರು ತಮ್ಮ ದೈನಂದಿನ ಅಂಕಣ, 'ವಕ್ರತುಂಡೋಕ್ತಿ'ಯಲ್ಲಿ ಹುಡುಗಿಯರ ಮೇಲೆ ಸಾಕಷ್ಟು ಬಾಣ ಪ್ರಯೋಗಿಸಿದ್ದರೂ ಕೂಡ ಇಲ್ಲಿ ಅವರು ಎತ್ತಿಕೊಂಡಿದ್ದ ವಿಷಯ ತುಸು ಗಂಭೀರ. ನಾನು ಎರಡು ಮೂರು ವರ್ಷ ಪರ್ತಕರ್ತೆಯಾಗಿರುತ್ತೇನೆ ಅಥವಾ ಮದುವೆಯಾಗುವ ತನಕ ಮಾತ್ರ ಈ ವೃತ್ತಿ ನನ್ನದು ಎಂದು ಭಾವಿಸಿಕೊಂಡು ದಯಮಾಡಿ ಈ ಕ್ಷೇತ್ರಕ್ಕೆ ಬರಬೇಡಿ ಎಂಬುದು ಅವರ ವಿನಂತಿ. ವಿಷಯ ಸರಳವಾಗಿದ್ದರು ಕೂಡ ಇದರೊಳಗೊಂದು ಗಂಭೀರ ಪ್ರಶ್ನೆ ಮತ್ತು ಕಟು ಸತ್ಯವಿದೆ.
ನಮ್ಮನ್ನು ನಾವು 'ರಿ - ಇನ್ವೇಂಟ್' ಮಾಡಿಕೊಳ್ಳುತ್ತಿರಬೇಕು ಇಲ್ಲದಿದ್ದಲ್ಲಿ ಅಪ್ರಸ್ತುತರಾಗಿ ಬಿಡುತ್ತೇವೆ, ನಮ್ಮ ಯೋಚನೆಗಳು ಉಳಿದವರಿಗಿಂತ ಭಿನ್ನವಾಗಿರಲಿ ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಲ್ಲ ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯ ಹೀಗೆ ಅವರ ಮಾತು ಸಾಗಿತು.
'ನೀವು ನೀಡುವ ವರದಿ ವಿಭಿನ್ನವಾಗಿರಲಿ' ಎಂಬ ಅವರ ಮಾತು ಕೂಡ ಚಚರ್ಗೆ ಕಾರಣವಾಗುವಂತದ್ದು ಮತ್ತು ಕಾರಣವಾಗಿದ್ದು. ಯಾಕೆಂದರೆ 'ವರದಿ' ಅಂದಾಗ ನಮ್ಮ ಕಣ್ಣ ಮುಂದೆ ಕೆಲವು ಸಿದ್ಧ ಮಾದರಿಗಳು ಬರುತ್ತವೆ. ಆದರೆ ಅದರೊಂದಿಗೆ ಕೆಲವು ಸುದ್ದಿ ಮೌಲ್ಯಗಳು ಕೂಡ ಸೇರಿಕೊಂಡಿರುತ್ತದೆ ಅದರಲ್ಲೂ ಸರಳ ಭಾಷೆ, ವಸ್ತುನಿಷ್ಟತೆ ಮತ್ತು ನಿಖರತೆ ಮುಖ್ಯವಾದದು ಅನ್ನುವುದಕ್ಕಿಂತ ಇರಲೇ ಬೇಕಾದದ್ದು ಎಂದರೆ ಸೂಕ್ತ. ಇನ್ನೂ ಯಾವ ಪತ್ರಿಕೆ, ಎಷ್ಟರ ಮಟ್ಟಿಗೆ ಈ ಮೌಲ್ಯಗಳನ್ನು ಪಾಲಿಸುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದೆ ಬರಬಹುದು. ಅದರೆ ಅದನ್ನು ಬದಿಗಿಟ್ಟು ಯೋಚಿಸಿದರೆ 'ವರದಿಗಾರಿಕೆ'ಗೆ ವಿಭಿನ್ನತೆ ಕೊಡುವ ಪ್ರಯತ್ನ ಪತ್ರಿಕೋದ್ಯಮದ ಬುಡವನ್ನೇ ಅಲುಗಾಡಿಸುವಂತದ್ದು ಎಂದು ನನಗನಿಸುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ವರದಿಗಾರ ತನ್ನ 'ವರದಿ'ಯ ಮೇಲೆ ಒಂದು ರೀತಿಯ ಸ್ವಾಯತ್ತತೆ ಪಡೆದುಕೊಳ್ಳುತ್ತಾನೆ ಮತ್ತು ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಕಾಣಲು ಶುರುಮಾಡುತ್ತಾನೆ ಇದರಿಂದ ಸುದ್ದಿಯ ವಿಶ್ವಾಸಾರ್ಹತೆ ಕುಂದುತ್ತದೆ ಅದರೊಂದಿಗೆ ಪತ್ರಿಕೆಯ 'ಇಸಂ' ಕೂಡ ಸೇರಿ ಸುದ್ದಿಯ ಶುದ್ದತೆ ಹಾಳಾಗಿ ಸುದ್ದಿ ಎಂಜಲೆಲೆ ಆಗಬಹುದು. ಆದರೆ ಪ್ರಬುದ್ಧ ವರದಿಗಾರ ಮತ್ತು ಉಪಸಂಪಾದಕರಿದ್ದಲ್ಲಿ ಇದು ಒಳಿತನ್ನುಂಟು ಮಾಡಬಹುದು. ಆದರೆ ಪತ್ರಕರ್ತ ಮತ್ತು ಪ್ರಬುದ್ದತೆ ಎಂಬುದು ಪರಸ್ಸರ ವಿರುದ್ಧ ಪದಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಯೋಚನೆಯೇ ತಿರುಕನ ಕನಸು ಎಂದು ನನಗನಿಸುತ್ತದೆ.
ಭಟ್ರು 'ಪವರ್ ಪಾಯಿಂಟ್ ಪ್ರಸೆಂಟೇಶನ್' ಮೂಲಕ ತಮ್ಮ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ 'ಸಾಸಿವೆ ಬಿದ್ದರು ಕೇಳಿಸುವಷ್ಟು ಮೌನ'ವಿತ್ತು. ಇದರರ್ಥ ಎಲ್ಲರೂ ನಿದ್ದೆ ಮಾಡುತ್ತಿದ್ದರು ಎಂದಲ್ಲ! ಅಷ್ಟೂ ತದೇಕಚಿತ್ತರಾಗಿ ಭಟ್ರ ಮಾತು ಕೇಳಿಸುತ್ತಿದ್ದರು.
ಅವರ ಸರಳತೆಯ ಅರಿವು ನನಗಾದದ್ದು, ಅವರು ಊಟಕ್ಕೆ ಕುಳಿತಾಗ. ಒಬ್ಬ ಅರೆ ಹುಚ್ಚ ತಾನು ಕೂಡ ಅವರ ಜತೆ ಊಟಕ್ಕೆ ಕೂರುತ್ತೇನೆ ಎಂದು ಹಠ ಹಿಡಿದಿದ್ದ. ಸಂಘಟಕರು ಅವನನ್ನು ಒದ್ದು ಹೊರ ಹಾಕಲು ಸಿದ್ಧರಾಗಿದ್ದರು ಆದರೆ ಭಟ್ರು ಅವನನ್ನು ತನ್ನ ಜೊತೆ ಕುಳ್ಳಿರಿಸಿ ಸಹಭೋಜನ ಮಾಡಿದರು.
ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕದ ಅವಧಿಯನ್ನು ಪ್ರಖ್ಯಾತ ಸುದ್ದಿ ಚಿತ್ರ ಬರಹಗಾರ್ತಿ ಸುಶೀಲಾ ನಾಯರ್ ತೆಗೆದುಕೊಂಡರು. ಅವರು ವಿಶೇಷ ವಿಷಯಗಳನ್ನೇನೂ ಹೇಳಲಿಲ್ಲ. ಬಹುಶ: ಒಂಚೂರಾದರೂ ಸಪ್ಪೆ ಎನಿಸಿಕೊಂಡ ಅವಧಿ ಇವರದ್ದೇ ಇರಬೇಕು. ಪ್ರತಿ ಅವಧಿಯಲ್ಲಿ ಮುಗಿ ಬಿದ್ದು ಪ್ರಶ್ನೆ ಕೇಳುತ್ತಿದ್ದವರು ಆಗ ನಿದ್ದೆಗೆ ಶರಣಾಗಿದ್ದರು!
ಅನಂತರದ ಅವಧಿ ಬಿಸಿಬಿಸಿ ಸುದ್ದಿಗೆ ಹೆಸರಾದ ಕನ್ನಡದ ಮೊದಲ 24*7 ಸುದ್ದಿ ಚಾನೆಲ್ ಟಿವಿ 9ನ ಕಾರ್ಯಕ್ರಮ ನಿರ್ಮಾಪಕ ರಾಘವೇಂದ್ರರಿಂದ. ಅವರು ಮಾತನಾಡಿದ್ದು ಕ್ರೈಮ್ ರಿಪೋರ್ಟಿಂಗ್ ಬಗೆಗೆ.
ಅವರು ಆರಂಭ ಮಾಡಿದ್ದೆ 'ವರದಿ' ಯೆಂಬುದು ನಿರಾಭರಣ ಸುಂದರಿ ಎಂಬುದರ ಮೂಲಕ. ಅಂದರೆ ಭಟ್ರು ಹೇಳಿದ ಮಾತಿಗೆ ಸರಿ ಉಲ್ಟಾ! ಆದರೆ ಅವರ ಚಾನೆಲ್ ಇದನ್ನು ಎಷ್ಟು ಪಾಲಿಸುತ್ತದೆ ಎಂದು ಕೇಳಿದರೆ ಖಂಡಿತವಾಗಿಯೂ ಅವರಲ್ಲಿ ಉತ್ತರವಿರಲಿಕ್ಕಿಲ್ಲ. ಬಹುಶ: ಭಟ್ರ ಮಾತನ್ನು ಪಾಲಿಸಿದ್ದೆ ಆದರೆ ಮಾಧ್ಯಮಗಳು ಯಾವ ರೀತಿ ಆಗಬಹುದು ಎಂಬುದಕ್ಕೇ ಈ ಚಾನೆಲ್ ನಷ್ಟು ಒಳ್ಳೆಯ ನಿದರ್ಶನ ಬೇರೆ ಎಲ್ಲೂ ಸಿಗಲಿಕ್ಕಿಲ್ಲ!
'ಒಬ್ಬ ಕ್ರೈಂ ರಿಪೋರ್ಟರ್ ಮನುಷ್ಯನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು, ಸುದ್ದಿಯ ಮೂಲ ಮತ್ತು ಅದರಾಚೆಯೂ ಹುಡುಕುವ ಛಾತಿ ಇರಬೇಕು. ಆದರೆ ಯಾವ ಕಾರಣಕ್ಕೂ ಇನ್ನೊಬ್ಬರ ತೆಜೋವಧೆ ಮಾಡಬಾರದು' ಎಂಬ 'ವಾರಾಂಟ್' ಅವರಿಂದ. ಸಹಜವಾಗಿಯೇ ಅವರಿಗೆ ಪ್ರಶ್ನೆಗಳ ಸುರಿಮಳೆ, ಅಷ್ಟೇ ಚಾಣಕ್ಷತನದ ಉತ್ತರ ಅವರಿಂದ.
ನಂತರ ಮನರಂಜನಾ ಕಾರ್ಯಕ್ರಮ.

ಜೋಗಿ ಜೋಳಿಗೆಯಿಂದ...

ಎರಡನೇ ದಿನ ಅರ್ಥಾತ್ ಕೊನೆಯ ದಿನದ ಮೊದಲ ಅವಧಿಯನ್ನು ಕನ್ನಡದ ಖ್ಯಾತ ಬರಹಗಾರ, 'ಜೋಗಿ'ಯೆಂದೆ ಪ್ರಸಿದ್ದರಾಗಿರುವ ಗಿರೀಶ್ ರಾವ್ ತೆಗೆದುಕೊಂಡರು.
ಪತ್ರಕರ್ತರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುರುವಿಟ್ಟುಕೊಂಡ ಅವರು ಅನಂತರ ಅಂಕಣ ಅಂದರೆ ಹೇಗಿರಬೇಕು ಎಂಬುದರ ಬಗೆಗೆಯೇ ತಮ್ಮ ಗಮನ ಹರಿಸಿದರು.
ಬರೆಯುತ್ತ ಬರೆಯುತ್ತ ಬರಹ ಮತ್ತು ಬರಹಗಾರ ಪಕ್ವವಾಗುತ್ತಾನೆ ಎಂಬುದು ಅವರ ಅನಿಸಿಕೆ.
ಅವರು ಮಾತನಾಡುತ್ತ 'ಸತ್ಯ’ ಬದಲಾಗುತ್ತದೆ ಎಂದು ಹೇಳಿದರು. ಅದು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ. ಒಂದೋ ಬರಹಗಾರನ ಮನೋಭಾವ, ದೃಷ್ಟಿಕೋನ ಬದಲಾಗಬಹುದು ಅಥವಾ ಅವನು ವಿಷಯವನ್ನು ಗ್ರಹಿಸಿಕೊಂಡ ರೀತಿ ಅಥವಾ ಗ್ರಹಿಸುವ ರೀತಿ ಬದಲಾಗಬಹುದೇ ಹೊರತು 'ಸತ್ಯ' ಹೇಗೆ ಬದಲಾಗುತ್ತದೆ? ಹಾಗೆ ಬದಲಾಗುವುದಿದ್ದರೇ ಅದನ್ನು 'ಸತ್ಯ' ಎಂದು ಕರೆಯುತ್ತೇವೇಯೇ?

ಭಡ್ತಿ ಹೇಳಿದ್ದು...

ಅನಂತರದ ಅವಧಿ 'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಉಪಸಂಪಾದಕ ಮತ್ತು ತಮ್ಮ 'ನೀರು ನೆರಳು' ಅಂಕಣದಿಂದ ಪ್ರಖ್ಯಾತರಾಗಿರುವ ರಾಧಕೃಷ್ಣ ಭಡ್ತಿ ಅವರಿಂದ 'ಪುಟ ವಿನ್ಯಾಸ'ದ ಬಗ್ಗೆ. ಅವರು 'ಪವರ್ ಪಾಯಿಂಟ್'ನ ಬಳಕೆಯನ್ನು ಅತ್ಯುತ್ತಮವಾಗಿ ಮಾಡಿದರು. ಅವರು ಅಡುಗೆ ಭಟ್ಟನ ಕೆಲಸ ಮತ್ತು ಒಬ್ಬ ಉಪಸಂಪಾದಕನ ಕೆಲಸಕ್ಕಿರುವ ಸಾಮ್ಯತೆಯ ಮೂಲಕವೇ ಉದಾಹರಣೆಗಳನ್ನು ಪೋಣಿಸುತ್ತ ಸಾಗಿದರು. ಒಂದು ಪುಟದಲ್ಲಿರುವ ಬೇರೆ ಬೇರೆ ಭಾಗಗಳು ಮತ್ತು ಅಂಶಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬ್ಲಬ್ð, ಬಾಕ್ಸ್, ಇಂಟ್ರೋ, ಬುಲೆಟ್ ಪಾಯಿಂಟ್ ಗಳ ಬಳಕೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ ಅವರು ಇವುಗಳ ಬಳಕೆ ಇಲ್ಲದಿದ್ದಲ್ಲಿ ಸುದ್ದಿ ಮತ್ತು ಪುಟ ಹೇಗೆ ನೀರಸವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.
ಅವರು ಒಳ್ಳೆಯ ಪುಟ ವಿನ್ಯಾಸಕ್ಕೆ ವಿಜಯ ಕರ್ನಾಟಕವನ್ನೇ ಉದಾಹರಣೆಯಾಗಿಸಿಕೊಂಡು ಕೆಟ್ಟ ಪುಟ ವಿನ್ಯಾಸಕ್ಕೇ ಕನ್ನಡದ ಮತ್ತೊಂದು ಜನಪ್ರಿಯ ಪತ್ರಿಕೆಯನ್ನು ಹೆಚ್ಚಾಗಿ ಬಳಸಿದ್ದು ಮುಂದಿನ ಅವಧಿ ತೆಗೆದು ಕೊಳ್ಳಲಿದ್ದವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದರೊಂದಿಗೆ ದಕ್ಷಿಣ ಕನ್ನಡದ ಜನ 'ಉದಯವಾಣಿ'ಯನ್ನು ಅದರಲ್ಲಿರುವ ಸತ್ತವರ ಜಾಹೀರಾತು ನೋಡಲು ಮತ್ತು ಬೆಂಗಳೂರು ನಗರದ ಜನ 'ಪ್ರಜಾವಾಣಿ' ಪತ್ರಿಕೆಯನ್ನು ಬಿಡಿಎ ಜಾಹೀರಾತಿಗಾಗಿ ನೋಡುತ್ತಾರೆ ಎಂದದ್ದು ನನಗಂತೂ ಒಂಚೂರು ಕಸಿವಿಸಿಯುಂಟು ಮಾಡಿತು. ನಿಮಗೇ ಭಡ್ತಿ ಹೇಳಿದ ಈ ಮಾತು ಸತ್ಯ ಎಂದೆನಿಸುತ್ತಾ?

'ನಾಲ್ಕಾನೆ ಆಯಾಮ' ನೀಡಿದ ಪದ್ಮರಾಜ ದಂಡಾವತಿ

ಪ್ರಜಾವಾಣಿಯ ಸುದ್ದಿ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿದ್ದು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ. ಆರಂಭದಲ್ಲೇ ತಮ್ಮ ಖಡಕ್ ಮಾತಿನಿಂದ ಉಸಿರು ಬಿಗೆ ಹಿಡಿದು ಅವರ ಮಾತಿಗೆ ಕಿವಿಯಾಗುವಂತೆ ಮಾಡಿದ ಅವರು ಅನಂತರ ತಮ್ಮ ಮಾತಿಗೆ ಕೇಳುಗರು ತನ್ಮಯರಾಗುವಂತೆ ಮಾಡಿದರು.
ಅವರು 'ಕನ್ನಡ ಪತ್ರಿಕೋದ್ಯಮದ ಪಿತಾಮಹ' ಡಿ. ವಿ. ಗುಂಡಪ್ಪರ 'ವೃತ್ತ ಪತ್ರಿಕೆ'ಯನ್ನು ಎಷ್ಟು ಮಂದಿ ಓದಿದ್ದೀರಿ? ಎಂದು ಕೇಳಿದಾಗ ಒಂದೇ ಒಂದು ಕೈ ಮೇಲೆಳಲಿಲ್ಲ.
"ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಶ್ರಧ್ಧೆಯ ಕೊರತೆಯಿದೆ. ಕುವೆಂಪು, ಶಿವರಾಮ ಕಾರಂತ, ಮಾಸ್ತಿ, ಲಂಕೇಶ್ ಮುಂತಾದವರನ್ನು ಓದಿಲ್ಲ, ಓದುತ್ತಿಲ್ಲ. ಹೀಗಾದ್ದಲ್ಲಿ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ" ಎಂದು ತಿಳಿಸಿದರು.
ಡಿವಿಜಿಯವರ ’ಪತ್ರಿಕೆಗಳು ಕಲಿಸಬೇಕಾದದ್ದು ಸಿದ್ದಾಂತವನ್ನಲ್ಲ, ಸಿದ್ದಾಂತ ಮಾಡುವ ಪ್ರಕ್ರಿಯೆಯನ್ನು’ ಎಂಬ ಮಾತನ್ನು ಉದ್ದರಿಸಿ ಇಂದಿನ ಪತ್ರಿಕೋದ್ಯಮದ ವಿಶ್ಲೇಷಣೆಗೆ ಇಳಿದರು.
ಇಂದು ಪತ್ರಿಕೋದ್ಯಮ ವಿಭಾಗಗಳು ಮತ್ತು ಪತ್ರಿಕಾ ಕಚೇರಿಗಳ ನಡುವಿನ ಸಂಬಂಧ ಇಂಟನ್ðಶಿಪ್ ಗೆ ಮಾತ್ರ ಸೀಮಿತವಾಗುತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.
ವಾಚಕರ ವಾಣಿಯ ವೇದಿಕೆಯನ್ನು ಯುವ ಬರಹಗಾರರು ಬಳಸಿಕೊಳ್ಳಬೇಕು, ಪರ್ತಕರ್ತರಲ್ಲಿ ವಿನಯವಿರಲೇಬೇಕು ಎಂದರು.
ಮಾಧ್ಯಮಗಳ ಬ್ರೇಕಿಂಗ್ ದಿ ಸೊಸೈಟಿ ಟ್ರೆಂಡ್ ಹೋಗಿ ಬ್ರೀಡ್ಜೀಂಗ್ ದ ಸೊಸೈಟಿ ಆಗಲಿ ಎಂದು ಆಶಿಸಿದರು.
ಪತ್ರಿಕೆಗಳನ್ನು ಪ್ರತಿಕ್ರಿಯಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಓದಬೇಕು, ಸಾಹಿತ್ಯವನ್ನು ಮಾನವೀಯ ಮುಖ ನೀಡಲು ಓದಬೇಕು ಎಂಬುದು ಅವರ ಸಲಹೆ.
ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಉಪನ್ಯಾಸಕ ಕೆ. ಜಿ. ಜೋಸೆಫ್, "ಪದವಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಬರೆಯುತ್ತಾರೆ ಆದರೆ ಸ್ನಾತಕೋತ್ತರ ಪದವಿಗೆ ಬಂದಾಗ ಬರವಣಿಗೆ ಕಡಿಮೆಯಾಗುತ್ತದೆ. ಇದಕ್ಕೆ ಮನಸ್ಸು ಕಲ್ಮಷವಾಗುವುದೇ ಕಾರಣ" ಎಂದರು. ಇದರೊಂದಿಗೆ ನನಗನಿಸುವ ಮಟ್ಟಿಗೆ ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ಸಿಲೆಬಸ್ ಗಳು ವಿಧ್ಯಾರ್ಥಿಯನ್ನು ಒಬ್ಬ ಪತ್ರಕರ್ತನನ್ನಾಗಿ ಮಾಡೋದಕ್ಕಿಂತ ಲೆಕ್ಚರರ್ ಮಾಡೋದು ಹೇಗೆ ಎಂಬುದರ ಸುತ್ತಲೇ ಸುತ್ತುತ್ತಿರುವುದು ಕೂಡ ಒಂದು ಮುಖ್ಯ ಕಾರಣ ಎಂದು ನನಗನಿಸುತ್ತದೆ.
ಸುಮಾರು 16 ಕಾಲೇಜುಗಳಿಂದ 300ಕ್ಕೂ ಮಿಕ್ಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಹುಶ: ಕಾರ್ಯಾಗಾರದ ಮಟ್ಟಿಗೆ ಇದು ಮೂರು ಪಟ್ಟು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು ಎಂದು ನನಗನಿಸುತ್ತದೆ. ಅದ್ದರಿಂದ ಇದು ಸ್ವಲ್ಪ ಮಟ್ಟಿಗೆ ಜಾತ್ರೆ ರೀತಿ ಆಯಿತು ಎಂದು ನನಗನಿಸಿತ್ತು.
ಅದರೊಂದಿಗೆ ಕಾರ್ಯಗಾರದ ಶೀರ್ಷಿಕೆಗೆ ಪೂರಕವಾದ ಅವಧಿಯೇ ಇರಲಿಲ್ಲ!
ಪತ್ರಕರ್ತರು, ರಾಜಕಾರಣಿಗಳನ್ನು ಮೀರಿಸುವಂತೆ ಪರಸ್ಪರರ ಕಾಲೆಲೆದರು, ಕೆಸರೆರಚಿಕೊಂಡರು. ’ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ’ ಎಂಬ ಗಾದೆಮಾತನ್ನು ಸತ್ಯ ಮಾಡಿದರು!
ಉಳಿದಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು. ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
ಮರುದಿನ ಮೈಸೂರು ದರ್ಶನ. ರಾತ್ರಿ 11ಕ್ಕೆ ಮರಳಿ ಗೂಡಿಗೆ...
ಒಂದಷ್ಟು ನೆನಪು ಮತ್ತು ಪಾಠದೊಂದಿಗೆ!

Friday, September 18, 2009

ಬಾಲ್ಯದ ನೆನಪುಗಳವು!

ನೆನಪಿನ ರಾಶಿಯನ್ನು ಕೆದಕಿದಾಗ ದೊಡ್ಡ ಪೆಟ್ಟಿಗೆಯಲ್ಲಿ ಕಟ್ಟಿಟ್ಟ ಪೊಗದಸ್ತಾದ ನೆನಪೊಂದು ಸಿಕ್ಕಿತ್ತು. ಬಿಚ್ಚಿ ನೋಡುತ್ತೇನೆ... ಇಂದಿಗೂ ಘಮಘಮಿಸುವ ಬಾಲ್ಯದ ನೆನಪುಗಳವು! ಅದರಲ್ಲೂ ಚಿಕ್ಕ ರಜೆ ಸಿಗಲೆಂದು ಕಾತರಿಸಿ ಸಿಕ್ಕಾಗ ಕುಣಿದು ಕುಪ್ಪಳಿಸಿ ಸಿಕ್ಕ ನಂತರ ಪ್ರತಿಕ್ಷಣವನ್ನು ಅಸ್ವಾದಿಸಿದ ಸುಮಧುರ ನೆನಪದು.
ಆಡೋದು, ಓಡೋದು, ನೆಂಟರ ಮನೆಗೆ ಹೋಗೋದು, ಚಿಕ್ಕ ತೊರೆಯಲ್ಲಿ ಮೀನು ಹಿಡಿಯೋದು ಇವೆಲ್ಲ ಪ್ರತಿ ರಜೆಯ ಸಹಜ ದಿನಚರಿ. ಅಂದು ಚಿಕ್ಕ ಚಿಕ್ಕ ಸಂತೋಷಗಳನ್ನು ಬೃಹತ್ತಾಗಿ ಕಂಡು ಅನುಭವಿಸುವ ಮುಗ್ದ ಮನಸ್ಸಿತ್ತು. ಆ ಮನಸ್ಸಿಗೋ ತನಗನಿಸಿದ ಕೀಟಲೆ ಮಾಡುವ ಸ್ವಾತಂತ್ರ್ಯವಿತ್ತು. ಆ ಸ್ವಾತಂತ್ರ್ಯ ಸ್ವೇಚ್ಚೆಯಾದಗ ನಿಯಂತ್ರಿಸಲು ಅಪ್ಪನ ಗದರಿಕೆ, ಬೆತ್ತ ಅಥವಾ ಅಮ್ಮನ ಬುದ್ದಿಮಾತಿನ ಕಡಿವಾಣವಿತ್ತು. ನೋವಾದಾಗ ಆಳುವ ಅವಕಾಶವಿತ್ತು. ಖುಷಿಯಾದಾಗ ನಮ್ಮ ಅಭಿವ್ಯಕ್ತಿಯನ್ನು ಕಂಡೇ ಸಂತೋಷಪಡುವ ಬಂಧುಬಳಗವಿತ್ತು. ಆಡಿದ, ಆಡುವ ಪ್ರತಿ ಮಾತಲ್ಲೂ ಮುಗ್ದತೆಯನ್ನು ಕಂಡು ಅದಕ್ಯಾವುದೇ ಅರ್ಥ ಆರೋಪಿಸದೆ ಅದರ ಸ್ನಿಗ್ದ ಸೌಂದರ್ಯವನ್ನು ಅನುಭವಿಸುವ ನೆಂಟರಿಷ್ಟರಿದ್ದರು. ನಮ್ಮ ಬಗ್ಗೆ ನಮಗಿಂತ ಹೆಚ್ಚು ಕಾಳಜಿ ವಹಿಸುವ ಮನೆಯವರಿದ್ದರು.
ಅವರೇ ಈಗಲೂ ಇದ್ದಾರೆ. ರಜೆಯೀಗಲೂ ಬರುತ್ತದೆ. ಆದರೆ ಅವರಿಗೂ ನಮಗೂ ಪ್ರಬುದ್ಧತೆ ಎಂಬ ಬೇಡಿ ಹಾಕಲಾಗಿದೆ. ಇವತ್ತೇನಿದ್ದರೂ ಆಟವೆಂದರೆ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಗಳೆಂಬ ಆಟಗಳನ್ನೇ ಆಡಬೇಕಾಗಿದೆ. ಮನಸ್ಸಿಗನಿಸಿದ ಕೀಟಲೆ ಮಾಡ ಹತ್ತಿದರೆ ಸಾರ್ವಜನಿಕರಿಂದ ಧರ್ಮದೇಟು ತಿನ್ನಬೇಕು!. ಅದರೊಂದಿಗೆ ಅನಾಮತ್ತಾಗಿ ಹುಚ್ಚನ ಸ್ಥಾನ ಸಿಗುತ್ತದೆ. ಬೇಸರವೆನಿಸಿ ಅತ್ತರೆ ಧಮಿಲ್ಲದವನೆಂಬ ಪಟ್ಟ ಕಾದಿರುತ್ತದೆ. ಖುಷಿಯಾದರೆ ನಗಬೇಕು ಅಥವಾ ಪಾರ್ಟಿ ಕೊಡಬೇಕು. ಅದು ಬಿಟ್ಟು ಬೇರೇನೋ ಮಾಡ ಹತ್ತಿದರೆ ಅದಕ್ಕೆ ನೂರಾರು ಅರ್ಥ. ಆಡುವ ಪ್ರತಿ ಮಾತು ಕೂಡ ಜಾಗರೂಕವಾಗಿರಬೇಕು. ಇಲ್ಲದೇ ಹೋದಲ್ಲಿ ಆಡಿದವನ ಯೋಚನೆಗೆ ನಿಲುಕದ ಭಾವಗಳು ಮಾತಿನ ಹಿಂದೆ ಇದೆ ಎಂಬ ಗುಮಾನಿ. ನಮ್ಮ ಬಗ್ಗೆ ಯಾರಾದರೂ ಹೆಚ್ಚಿನ ಕಾಳಜಿ ವಹಿಸಿದರೆ 'ಏನೋ ಇದೆ' ಎಂಬ ಶಂಕೆ ಅದರಲ್ಲೂ ಅವರು ನಮ್ಮ ವಿರುಧ್ಧ ಲಿಂಗಿಯಾಗಿದ್ದಾರೆ ಕತೆ ಮುಗಿಯಿತು. ನೋಡು ನೋಡುತ್ತಲೇ ಅದೇಷ್ಟು ಬದಲಾವಣೆ!
ಬಾಲ್ಯ, ಈ ಯವ್ವನ ಎರಡು ಬೇರೆ ಬೇರೆ ತುಂಡುಗಳು ಎಂದು ಅನಿಸುತ್ತಿಲ್ಲವೇ?

Friday, September 11, 2009

ಗುರು

ಅಂದು ಗುರು ಸಾಕ್ಷತ್ ಪರಬ್ರಹ್ಮ ಸ್ವರೂಪ. ಇದ್ದದ್ದು, ಇ(ಬ)ರುತ್ತಿದ್ದದ್ದು ಪೂಜ್ಯ ಭಾವನೆಯೊಂದೇ. ಅವರು ಏನು ಹೇಳಿದರು, ಮಾಡಿದರು ಅದರಲ್ಲಿ ಜಿನುಗುತ್ತಿದ್ದದ್ದು ಸದಾಶಯ. ಆ ಗುರುವಿನ ಶಿಷ್ಯನಾಗುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸತ್ವ ಪರೀಕ್ಷೆಗಳಿಗೆ ಈಡಾಗಬೇಕಿತ್ತು, ಅದರಲ್ಲಿ ಯಶ ಪಡೆಯಬೇಕಿತ್ತು. ಅಷ್ಟರಲ್ಲೇ ವಿದ್ಯಾಕಾಂಕ್ಷಿ ಹಣ್ಣುಗಾಯಿ ನೀರುಗಾಯಿಯಾಗುತ್ತಿದ್ದ. ಮತ್ತೂ ಗುರುಮುಖೇನ ಕಲಿಯುವ ತುಡಿತ ಉಳಿದಿದ್ದೇ ಆದರೆ ಅನಂತರ 'ಮಾಗುವ' ಪ್ರಕ್ರಿಯೆ ಶುರು.
ಕಲಿಕೆ ಅಂದರೆ ಅದೊಂದು ತಪಸ್ಸು. ಕಲಿಯುವಿಕೆಯ ಹಂತಗಳಲ್ಲಿ ಗುರು ಶಿಷ್ಯರು ಪರಸ್ಪರ ವಶ ಮತ್ತು ವಿವಶ. ಗುರು ಕೊಡುವ ಶಿಕ್ಷೆ ಅಂದರೆ ಆದು ಆಶಿರ್ವಾದ ಸ್ವರೂಪ. ಅದರಲ್ಲೂ ಕಲಿಯುವಿಕೆಯ ಆನಂದ. ಗುರುವಿನ ಶಿಕ್ಷೆ ಆತನ ಮನಸ್ಸಿನ ಅಸಹನೆ, ದ್ವೇಷ, ಅಹಂ ಅಥವಾ ಹೆಂಡತಿ ಜೊತೆ ಜಗಳವಾಡಿದ ಕಾರಣದಿಂದ ಬರುತ್ತಿದ್ದಲ್ಲ. ಅದು ಸಹಜ, ಅನಿವಾರ್ಯ ಮತ್ತು ಶಿಷ್ಯನಲ್ಲಿ ಕಲಿಯುವಿಕೆಯ ಹಪಾಹಪಿ ಹುಟ್ಟಿಸುವಂತದ್ದು ಮತ್ತು ಆ ಕಲಿಕೆಗೆ ಸಮಗ್ರತೆಗೆ ತುಂಬುತ್ತಿತ್ತು. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲ, ಬದಲು ಗುರು ಪರಂಪರೆ. ಗುರುಕುಲವೇ ಅಂದಿನ ಜ್ಞಾನದೇಗುಲ.
ಅನಂತರ
ಗುರು ಪರಂಪರೆಯನ್ನು ಆವರಿಸಿಕೊಂಡದ್ದು ಶಿಕ್ಷಣ ವ್ಯವಸ್ಥೆ. ಇದು ಮೊಳಕೆಯೊಡೆದದ್ದು 1835ರಲ್ಲಿ. ಈ ವ್ಯವಸ್ಥೆಯ ಓಘ 1990ರ ತನಕ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿತ್ತು. ಇದೇ ಸಂದರ್ಭ ಭಾರತದ ಸ್ವಾತಂತ್ರ್ಯ ಹೋರಾಟ, ಅದರಲ್ಲಿನ ಗೆಲುವು ಮತ್ತು ಎಲ್ಲಾ ರೀತಿಯ ಐರೋಪ್ಯ ಮತ್ತು ಪೌರತ್ಯ ಪ್ರಣೀತ ಚಿಂತನೆಗಳು ಮತ್ತು ಸಾಧನಗಳು ನಮ್ಮ ನೆಲವನ್ನು ಪ್ರವೇಶಿಸಿದ್ದು. ಮತ್ತು ನಾವು ಕೂಡ ಆ ಸಂಗತಿಗಳಲ್ಲಿ ಸಾಧನೆ ಮಾಡಿದ್ದು. ಇದಕ್ಕೆಲ್ಲ ಕಲಶವಿಟ್ಟಂತೆ ಪ್ರಜಾಪ್ರಭುತ್ವವನ್ನು ನಮ್ಮ ಆಡಳಿತ ವಿಧಾನವಾಗಿ ಸ್ವೀಕರಿಸಿದ್ದು. ಈ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಪ್ರಶ್ನೆಗಳಿದ್ದರೂ ವಿದ್ಯೆಯನ್ನು ಸಾರ್ವತ್ರಿಕ ಮಾಡಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಇದರ ಒಳಿತು ಕೆಡುಕುಗಳು ಮತ್ತು ಈ ವ್ಯವಸ್ಥೆ ಹುಟ್ಟಿಕೊಳ್ಳಲು ಕಾರಣವಾದ ಸಂಗತಿಗಳು ಒತ್ತಟ್ಟಿಗಿರಲಿ. ಇಲ್ಲಿ 'ಗುರು' 'ಶಿಕ್ಷಕ'ನಾದ. ಆದರೆ ಆಶಯ ಬದಲಾಗಲಿಲ್ಲ, ಬರಡಾಗಲಿಲ್ಲ. ಕಾರಣವಿಷ್ಟೇ ಈ ವ್ಯವಸ್ಥೆ ಹೀರಿಕೊಂಡದ್ದು ಆ ಪರಂಪರೆಯಿಂದ!
ಶಿಕ್ಷಕ, ಮೇಷ್ಟ್ರು, ಟೀಚರ್, ಲೆಕ್ಚರರ್ ಅಂದರೆ ತುಂಬು ಗೌರವ ಅ ಗುರುವಿಗೆ ಸಂದಂತೆ ಇವರಿಗೂ ಸಲ್ಲುತ್ತಿತ್ತು. ಇಲ್ಲಿ ಅವರಿಗೆ ದೈವಂಶ ಸಂಭೂತರೆಂಬ ಪಟ್ಟವಿರದಿದ್ದರು ಬೀದಿಯಲ್ಲಿ ಅವರ ತಲೆ ಕಂಡರೆ ಸಾಕು ಹಿರಿಕಿರಿಯರೆನ್ನದೇ ಎಲ್ಲರಿಂದಲೂ ನಮಸ್ತೆಗಳ ಸುರಿಮಳೆ. ಅದೇನೂ ಒತ್ತಾಯಪೂರ್ವಕವಾಗಿ ಬರುತ್ತಿದ್ದದ್ದಲ್ಲ. ಅದು ಸಹಜ ಮತ್ತು ಭಕ್ತಿ ಪೂರ್ವಕ. ನಮ್ಮ ಹಳ್ಳಿಗಳಲ್ಲಿ ಈ ಟೀಚರ್ ಕೈಗೇ ಮಕ್ಕಳನ್ನು ಒಪ್ಪಿಸಿ ಅಂದರೆ ಶಾಲೆಗೆ ಕಳುಹಿಸಿದರೆ ಮನೆಮಂದಿಯಲ್ಲಿ ಅದೇನೋ ಒಂದು ಸಂತೃಪ್ತ ಭಾವ ಮತ್ತೊಂದು ಸುಂದರ ಕನಸು.
ಈ ವ್ಯವಸ್ಥೆಯಲ್ಲಿ ಪ್ರೀತಿಯಿಂದ ತೀಡುವ ವಿಠಲ ಮೇಷ್ಟ್ರು ಇದ್ದರು, ಕೋಲಿನಿಂದ ಬಡಿಯುವ ರುದ್ರಪ್ಪ ಮೇಷ್ಟ್ರು ಇದ್ದರು. ಅವೆಲ್ಲವನ್ನು, ಅವರೆಲ್ಲರನ್ನೂ ಮಕ್ಕಳು ಜೀರ್ಣಿಸಿಕೊಳ್ಳುತ್ತಿದ್ದರು ಅದಕ್ಕಿಂತ ಹೆಚ್ಚಾಗಿ ಹೆತ್ತವರು ಕೂಡ! ಆ ಪೆಟ್ಟಿನ ಭಯದಿಂದ ಕಲಿತು ಮಹನೀಯರಾದವರು ಬಹಳಷ್ಟು ಮಂದಿ. ನಮ್ಮ ನಮ್ಮ ಅಪ್ಪ ಅಮ್ಮಂದಿರೂ ಕೂಡ!
ಈಗ
ಹೊಡೆತಕ್ಕೆ ಬಿದ್ದಿದೆ ಫುಲ್ ಸ್ಟಾಪ್. ಸ್ವತಃ ಸರಕಾರವೇ ಈ ನಿರ್ದೆಶನವಿತ್ತಿದೆ. ಶಿಕ್ಷಣ ವ್ಯವಸ್ಥೆ, ಶಿಕ್ಷಣ ಕ್ಷೇತ್ರವಾಗಿದೆ. ಶಿಕ್ಷಕನದ್ದು ಒಂದು ವೃತ್ತಿ ಅಷ್ಟೆ. ಅದಕ್ಕಿಂತ ಆಚೆ ಅವನು ವಿಸ್ತರಿಸಲಾರ. ವಿಸ್ತರಿಸಿದರೂ ಕತ್ತರಿಸುವ ಕೈಗಳು ಸಮಾಜದಲ್ಲೇ ಇದೆ. ಒಬ್ಬ ವಿಧ್ಯಾರ್ಥಿಯ ಮೇಲಿರುವ ತನ್ನ ಜವಾಬ್ದಾರಿಗಳನ್ನು ಆತ ಸಂಕುಚಿತಗೊಳಿಸಿಕೊಂಡಿದ್ದಾನೆ ಅಥವಾ ಹಾಗೇ ಮಾಡುವಂತೆ ನಿರ್ಬಂಧಿಸಲಾಗುತ್ತಿದೆ. ಈ ಶಿಕ್ಷಕನಿಗೆ ವೃತ್ತಿ ಪರತೆ ತುಂಬುವ ಪ್ರಯತ್ನ ನಡೆಯುತ್ತದೆಯೇ ಹೊರತು ಸಮಗ್ರತೆ ಮತ್ತು ಸಂಸ್ಕಾರವನಲ್ಲ. ಅವನಿಗೆ ಸಿಗದ ಸಂಸ್ಕಾರವನ್ನು ಅವ ಹೇಗೆ ತಾನೇ ತನ್ನ ವಿಧ್ಯಾರ್ಥಿಗಳಿಗೆ ಅಂದರೆ ಮುಂದಿನ ಪೀಳಿಗೆಗೆ ದಾಟಿಸಬಲ್ಲ?
ಈಗ ಮಕ್ಕಳಿಗೆ ಹೊಡೆಯುವಂತಿಲ್ಲ. ನಿಜ, ಯಾವ ರೀತಿಯ ಹೊಡೆತವೂ ಅಕ್ಷಮ್ಯವೇ. ಆದರೆ ಕೆಲ ಮಕ್ಕಳು ಪೆಟ್ಟು ತಿನ್ನದೇ ಸರಿಯಾಗುವುದಿಲ್ಲ. ಕಲ್ಲು ಮೂರ್ತಿಯಾಗುವುದು ಉಳಿ ಪೆಟ್ಟಿನಿಂದಾಗಿಯೇ ಹೊರತು ಪ್ರಾರ್ಥನೆಯಿಂದ ಅಲ್ಲ! ನಾ ಆಗಲೇ ಬರೆದಂತೆ ನಮ್ಮಲ್ಲಿ ಅಥವಾ ನಮ್ಮ ಹಿಂದಿನ ಪೀಳಿಗೆಯ ಬಹಳಷ್ಟು ಮಂದಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದೆ ಗಟ್ಟಿಯಾದವರು.
ಈಗ ಶಿಕ್ಷಕನ ಜ್ಞಾನಕ್ಕೂ ಅಷ್ಟೊಂದು ಮಹತ್ವವಿಲ್ಲ. ಅದು ಎಲ್ಲ ಕಡೆಯೂ ಸಿಗುವ ಸಂಗತಿಯಾಗಿ ಬಿಟ್ಟಿದೆ. ಮಕ್ಕಳನ್ನು ಬೇಕಾಬಿಟ್ಟಿ ಪಾಸ್ ಮಾಡಿಸಬೇಕೆಂಬ ಸರಕಾರದ ಹವಣಿಕೆಗೆ ಈ ಮೇಷ್ಟ್ರುಗಳು ಬಲಿಪಶುಗಳು. ಈ ಕ್ಷೇತ್ರದ ಮೇಲೆ ಮತ್ತು ಇಲ್ಲಿ ದುಡಿಯುವವರ ಮೇಲೆ ಇಡಬಹುದಾದ ನಂಬಿಕೆ ಧರಾಶಾಯಿಯಾಗುತ್ತಿದೆ. ಇದು ಜಾಗತಿಕರಣದ ಕೊಡುಗೆ. ಇಲ್ಲಿ ಶಿಕ್ಷಕನ ಮಾದರಿತನಕ್ಕೆ ಕುರುಹು ಆತ ವಿಧ್ಯಾರ್ಥಿಗಳಿಗೆ ತುಂಬಿರುವ ಆದರ್ಶವಲ್ಲ ಬದಲು ಆವರಿಗೆ ಉದ್ಯೋಗ ಲೋಕದಲ್ಲಿ ಐದಂಕಿ ಸಂಬಳ ಗಳಿಸುವ ಆರ್ಹತೆ ಇದೆಯಾ? ಎಂಬುದು. ಈಗ ಗುರುವಿಗೂ ಗುರಿ ಇಲ್ಲ ಇದ್ದರೂ ಆದಕ್ಕೇ ಬೆಲೆ ಇಲ್ಲ!
ನಾಳೆ
ಮಾನವ ಪಾಠ ಮಾಡುವುದು ಅನುಮಾನ. ಯಂತ್ರ ಮಾನವನಿಗೆ ಸಿಗಬಹುದು ಈ ಸ್ಥಾನಮಾನ. ಮಾನವ ಪಾಠ ಮಾಡಿದರೂ ಮಕ್ಕಳು ಮತ್ತು ಮೇಷ್ಟ್ರ ಮಧ್ಯೆ ಭಾವನಾ ಶೂನ್ಯತೆ ಆಥವಾ ನಿರ್ವಾತ ನೆಲೆ ಮಾಡಿರಬಹುದು. ಬಿಳಿ ಚಾಕ್, ಕರಿ ಬೋರ್ಡ್ ನಮ್ಮ ನೆನಪಿನ ಕೋಶ ಸೇರಿರಬಹುದು. ಸಮಾಜದ ದೃಷ್ಟಿಯಲ್ಲಿ ಮೇಷ್ಟ್ರು ಕೆಲಸಕ್ಕೂ ಕಾರಕೂನನ ಕೆಲಸಕ್ಕೂ ಒಂದಿನಿತೂ ವ್ಯತ್ಯಾಸ ಉಳಿದಿರಲಾರದು. ಈ ಮೇಷ್ಟ್ರುಗಳು ಮತ್ತವರು ಕಲಿಸಿದ ಪಾಠ ಎರಡು ವರ್ಷವೂ ವಿಧ್ಯಾರ್ಥಿಗಳ ಮನದಲ್ಲಿ ಬಾಳದೇ ಹೋಗಬಹುದು. ಮಗುವಿನ ಅಗತ್ಯಕ್ಕೂ ಮಿಗಿಲಾದ ಕಂಪ್ಯೂಟರ್ ಬಳಕೆ ಸೇರಿಕೊಳ್ಳಬಹುದು. ಶಿಸ್ತಿನ ಹೆಸರಲ್ಲಿ ಅನೇಕ ಸರ್ಕಸ್ ಗಳು ನಡೆಯಬಹುದು.
ಶಿಕ್ಷಕರ ದಿನಾಚರಣೆ ಮಾತ್ರ ಅದ್ದೂರಿಯಾಗಿ ಜರುಗಬಹುದು!

Saturday, September 5, 2009

ನ್ಯಾನೋಗೆ ಉತ್ತರವಾಗಬಲ್ಲದೇ ರೈನೋ?



ನ್ಯಾನೋ ಕಾರು ಆರ್ಥಿಕವಾಗಿ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ಅದು ನಮ್ಮ ಚಿಂತನಕ್ರಮದಲ್ಲೊಂದು ಬದಲಾವಣೆ ತಂದಿದೆ. ಇಂದು ಬಹುತೇಕ ಕಾರು ಉತ್ಪಾದಕರು ಚಿಕ್ಕ ಕಾರು ತಯಾರಿಸುವತ್ತ ಗಮನಹರಿಸುತ್ತಿರುವಾಗಲೇ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರೊಬ್ಬರು ಅದನ್ನು ಸಾಧಿಸಿ ತೋರಿಸಿದ್ದಾರೆ.
'ರೈನೋ' ಎಂಬ ನಾಮಧೇಯದ ಈ ಕಾರು ನೋಡಲು ರೈನೋಸಾರಸ್ ನಂತೆಯೆ ಇದೆ.ಅಚ್ಚರಿಯೆಂದರೇ ರೈನೋ ಬರೀ 150 ಕೆಜಿ ತೂಗುತ್ತದೆ. ಆದರೆ 30 ರಿಂದ 35 ಕಿ.ಮೀ ಮೈಲೇಜ್ ಕೊಡುತ್ತದೆ. ಗಂಟೆಗೆ 60 ಕಿ.ಮೀ ವೇಗದಲ್ಲಿ ಸರಾಗವಾಗಿ ಚಲಿಸಬಲ್ಲದು.ನಾಲ್ಕು ಫೀಟ್ ಅಗಲ, ನಾಲ್ಕು ಫೀಟ್ ಎತ್ತರ ಮತ್ತು ಎಂಟು ಫೀಟ್ ಉದ್ದವಿರುವ ಈ ಕಾರಲ್ಲಿ ಡ್ರೈವರ್ ಸೇರಿ ಇಬ್ಬರು ಕೂರಬಹುದು. 25 ಕೆ.ಜಿ ಲಗೇಜ್ ಇಟ್ಟುಕೊಳ್ಳಬಹುದು.ಮಡಚಬಹುದಾದ ಸ್ಟೇರಿಂಗ್ ಮತ್ತು ಒಂದೇ ಬಾಗಿಲು ಈ ಕಾರಿನ ವೈಶಿಷ್ಟ್ಯ. ಯಾವುದೇ ಇಂಜಿನ್ ಕೂಡ ಬಳಸಬಹುದು.ಗೇರ್ ವ್ಯವಸ್ಥೆ ಇರುವ ಕಾರು ಇದಾಗಿರುವುದರಿಂದ ಎತ್ತರ ಪ್ರದೇಶಕ್ಕೂ ನಿರಾಯಾಸವಾಗಿ ಚಲಿಸಬಲ್ಲದು ಆದರೆ ಚಕ್ರ ಚಿಕ್ಕದಾಗಿರುವುದರಿಂದ ಗುಂಡಿಗಳಿರುವ ರಸ್ತೆಯಾದ್ರೆ ಸ್ವಲ್ಪ ಕಷ್ಟ, ಆದರೆ
ದೊಡ್ಡ ಚಕ್ರವನ್ನು ಬೇಕಾದರೆ ಆಳವಡಿಸಿಕೊಳ್ಳಬಹುದು ಎಂಬುದು ನಿರ್ಮಾತೃವಿನ ಅಭಿಪ್ರಾಯ.
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಯಿಂದ ಬೇಸತ್ತು ಅದಕ್ಕೆ ಪರಿಹಾರವಾಗಿ ನಾನು ಈ ಕಾರು ತಯಾರಿಸುವ ನಿಟ್ಟಿನಲ್ಲಿ ಯೋಚಿಸಿದೆ ಎನ್ನುತ್ತಾರೆ ಇದರ ರೂವಾರಿ ನರಸಿಂಹರಾಜು. ಇಂಜಿನ್ ಮತ್ತು ಚಕ್ರಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವನ್ನು ನಾನೇ ವಿನ್ಯಾಸ ಮಾಡಿಕೊಂಡೆ ಎನ್ನುತ್ತಾರವರು. ಅಂಗವಿಕಲರಿಂದ ಈ ಕಾರಿಗೆ ಹೆಚ್ಚಿನ ಬೇಡಿಕೆ ಇದೆ ಆದರೆ ಕ್ಲಚ್ ಮತ್ತು ಬ್ರೇಕ್ ಕಾಲಲ್ಲೇ ಉಪಯೋಗಿಸುವ ರೀತಿಯಲ್ಲಿ ವಿನ್ಯಾಸವಿರುವುದರಿಂದ ಅದರ ಬಳಕೆಗೆ ಕಷ್ಟವಾಗಬಹುದು ಅದ್ದರಿಂದ ಅವನ್ನು ಕೈಯಿಂದ ಬಳಸುವಂತೆ ರೂಪಿಸುವ ದಿಸೆಯಲ್ಲಿ ಅವರು ಗಂಭೀರವಾಗಿ ಚಿಂತಿಸುತ್ತಿದ್ದಾರೆ.ನನ್ನಿಂದ ಇದರ ಬೃಹತ್ ಪ್ರಮಾಣದ ಉತ್ಪಾದನೆ ಸಾಧ್ಯವಿಲ್ಲ, ದೊಡ್ಡ ಕಂಪೆನಿಗಳು ಮುಂದೆ ಬಂದರೆ ನಾನು ಇದರ ತಂತ್ರಜ್ಙಾನ ಕೊಡುತ್ತೇನೆ ಎನ್ನುವ ಇವರು ಹೀಗಾದರೆ ಈ ಕಾರು ರೂ. 80,000ಕ್ಕೆ ಗ್ರಾಹಕರ ಕೈಸೇರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕಿಸೆಗೂ, ರಸ್ತೆಗೂ ಹಗುರವಾಗಿರುವ ಈ ಕಾರು ಅದಷ್ಟೂ ಬೇಗ ನಮ್ಮ ರಸ್ತೆಗಳಲ್ಲಿ ಓಡುವಂತಾದರೆ ಅನೇಕರ ಕಾರು ಕೊಳ್ಳುವ ಕನಸು ನನಸಾಗಬಹುದು. ಹಾಗೆಯೇ ನಗರಗಳ ಪಾರ್ಕಿಂಗ್ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಇವರ ಪ್ರಯೋಗಶೀಲತೆ ಇಷ್ಟಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಜನತೆಯನ್ನು ಗಮನವಿಟ್ಟುಕೊಂಡು ಸೈಕಲ್ ಗೆ ಶಾಕ್ ಅಬ್ಸರ್ವರ್ ಅಳವಡಿಸುವ ಪ್ರಯತ್ನ ಮಾಡಿ ಅದರಲ್ಲೂ ಯಶ ಕಂಡಿದ್ದಾರೆ. ಇದು ಬೆನ್ನು ನೋವಿನಿಂದ ನರಳುತ್ತಿರುವವರಿಗೆ ಉಪಯುಕ್ತ ಎಂಬುದು ಅವರ ಅನಿಸಿಕೆ. ರಕ್ಷಣಾ ಉದ್ದೇಶಕ್ಕೆ ಬಳಸಬಹುದಾದ ರೊಬೊಟ್ ಕೂಡ ಇವರ ಕೈಯಲ್ಲಿ ರೂಪುಗೊಂಡಿದೆ. ಇದನ್ನು ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಸಬಹುದಾಗಿದ್ದು ತನ್ನ ಕೈಯಲ್ಲಿ ಮೂರು ಕೆಜಿ ಭಾರ
ಎತ್ತಿ ಅದನ್ನು ಅತ್ತಿತ್ತ ಕೊಂಡೊಯ್ಯಬಲ್ಲದು ಅಲ್ಲದೆ ಅದನ್ನು ನಾಶಮಾಡಬಲ್ಲದು. ಇದು ಬಾಂಬ್ ನಿಷ್ಕ್ರೀಯಗೊಳಿಸಲು ಸಹಕಾರಿ. ತಲೆ ಮೇಲೆ ಗನ್ ಇಟ್ಟುಕೊಳ್ಳುವ ವ್ಯವಸ್ಥೆಯಿದ್ದು ಅದನ್ನು 360 ಡಿಗ್ರಿಯಷ್ಟು ತಿರುಗಿಸಬಹುದಾಗಿದೆ. ಮೇಲೆ ಕೆಳಗೆ ಚಲಿಸುವಂತೆಯೂ ಮಾಡಬಹುದು. ಇದು ಶತ್ರುಗಳ ಮೇಲೆ ಗುಂಡಿನ ದಾಳಿ ನಡೆಸಲು ಉಪಯುಕ್ತ. ಇದು ಚಕ್ರದ ಸಹಾಯದಿಂದ ಚಲಿಸುತ್ತದೆ ಅದುದರಿಂದ ಸಮತಟ್ಟಾದ ಜಾಗಗಳಲ್ಲಿ ಮಾತ್ರ ಇದರ ಬಳಕೆ ಸಾಧ್ಯ. ಅದರೆ ಚಕ್ರದ ಬದಲು ಟ್ರ್ಯಾಕ್ ಬಳಸಿ ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಬಳಸುವಂತೆ ಮಾಡಬಹುದಾಗಿದೆ.
ಇದರೊಂದಿಗೆ ರೋಟಿ ಮೇಕರ್ ಎಂಬ ಅಡುಗೆ ಮನೆಯಲ್ಲಿ ಬಳಸುವ ಉಪಕರಣವೊಂದನ್ನು ಅವರು ತಯಾರಿಸಿದ್ದು ಇದರ ಸಹಾಯದಿಂದ ಅರೆ ನಿಮಿಷದಲ್ಲಿ ಎಣ್ಣೆ ರಹಿತ ಚಪಾತಿ ಮಾಡಲು ಸಾಧ್ಯ. ಇನ್ನು ಬೆಂಗಳೂರಿನ ಚರಂಡಿ, ಮೋರಿಗಳಲ್ಲಿ ಹರಿದ ವ್ಯರ್ಥವಾಗುತ್ತಿರುವ ಕೊಳಚೆ ನೀರನ್ನು ಬಳಸಿ ವಿದ್ಯುತ್‌ ತಯಾರಿಸುವ ಹಂಬಲ ಇವರದ್ದು. ಆಸಕ್ತರು ನರಸಿಂಹರಾಜು ಅವರನ್ನು (9845115142) ಸಂಪರ್ಕಿಸಬಹುದು.

Thursday, August 13, 2009

ಅವಳನ್ನು ಅದು ಹೇಗೆ ತಾನೇ ಕಥೆ ಮಾಡಲಿ?

ನಾನು 'ಅವಳ' ಹೆಸರು ಬರೆಯುವಂತಿಲ್ಲ. ಯಾಕೆಂದರೆ 'ಅವಳು' ಯಾರೆಂದು ನನ್ನ ಹತ್ತಿರದವರಿಗೆ ಗೊತ್ತಾಗಿ ಬಿಡುತ್ತದೆ. ಅದಕ್ಕಿಂತ ಹೆಚ್ಚಾಗಿ 'ಅವಳಿಗೆ' ಅದು 'ಅವಳೇ' ಎಂದು ಗೊತ್ತಾಗುತ್ತದೆ. ಅದು 'ಅವಳೇ' ಎಂದು 'ಅವಳಿಗೆ' ಗೊತ್ತಾದರೆ 'ಅವಳು' 'ಅವಳಾಗಿ'ಯೇ ಇರುವುದಿಲ್ಲ. (ಈಗ ಹಾಗೆ ಇದ್ದಾಳೆ ಎಂದೇನೂ ನನಗನಿಸುತ್ತಿಲ್ಲ). ಅದು ಮತ್ತೊಂದು ಬಿರುಗಾಳಿಗೆ ಕಾರಣವಾಗುತ್ತದೆ. ಮತ್ತವಳು ಏರಿರುವ ಸಂಸಾರ ನೌಕೆಯಲ್ಲಿ ಅನಾಮತ್ತಾಗಿ ಒಂದು ಬಿರುಕು ಸೃಷ್ಟಿಯಾಗುತ್ತದೆ. ನನಗದು ಇಷ್ಟವಾಗದ ಸಂಗತಿ.
ಇಲ್ಲ, ಅದು 'ಅವಳೇ' ಎಂದು 'ಅವಳಿಗೆ' ಗೊತ್ತಾಗಬಾರದು ಹಾಗೆಯೇ ನಮ್ಮಿಬ್ಬರ ಬಗ್ಗೆ ಗೊತ್ತಿರುವ ಯಾರಿಗೂ ಕೂಡ. ಅದರಲ್ಲೂ ನನ್ನ ಬರವಣಿಗೆಯ ಸೂಕ್ಷ್ಮ ವಿಮರ್ಶಕನಾಗಿರುವ 'ಅವಳ' ಗಂಡನಿಗೆ!
ನಾನು ಏನೇ ಬರೆದರೂ ಅದು ನಮ್ಮಿಬ್ಬರ ನಡುವೆ ನಡೆದ ಯಾವುದೇ ಘಟನೆಯನ್ನು ಪುನರಪಿ ನೆನಪಿಸಲೇ ಬಾರದು. ನೆನಪಿಸಿದರೂ ಅದು ಯಾರ ಜತೆಗೂ ನಡೆಯುವಂತದ್ದೆ ಎಂದು 'ಅವಳು' ಸಹಿತ ಎಲ್ಲರಿಗೂ ಅನಿಸಿ ಬಿಡಬೇಕು. ಅದರಲ್ಲಿ 'ವಿಶೇಷ' ಕಾಣಲೇಬಾರದು.
ನಾ ಬರೆಯುವ ಯಾವ ಪದವೂ ನಮ್ಮ 'ಗೌಪ್ಯ ಪದಕೋಶ'ದಲ್ಲಿದ್ದಿರಬಾರದು. ಅದರ ಬಗ್ಗೆ ನಮ್ಮ ಹತ್ತಿರವರಿಗೆ ಯಾವುದೇ 'ಕ್ಲೂ' ಸಿಗಲೇಬಾರದು. ನಾ ವರ್ಣಿಸುವ ಸ್ಥಳ, ಸನ್ನಿವೇಶ, ಭಾವನೆಗಳೆಲ್ಲವೂ ಅಪರಿಚಿತವೆನಿಸಬೇಕು. ಇಲ್ಲ, ತೀರಾ ಪರಿಚಿತವೆಂದೆನಿಸಿ ಅದು 'ಸಾಮಾನ್ಯೀಕರಣ'ಕ್ಕೊಳಗಾಗಬೇಕು. ಅದರಲ್ಲಿ ನನ್ನ ಅವಳ ಪ್ರೀತಿ, ಒಡನಾಟ, ಮತ್ತೊಂದಿಷ್ಟು ಕಣ್ಣಾಮುಚ್ಚಾಲೆ ವ್ಯವಹಾರಗಳ ಚಿತ್ರಣ ಅವಳಲ್ಲಿ ಇವ 'ಇನ್ಯಾರನ್ನೋ ಇಟ್ಟು ಕೊಂಡಿದ್ನ' ಎಂಬ ಅನುಮಾನ ಮೂಡಿಸಬೇಕು.
ಅದೇ ನಮ್ಮ ಹತ್ತಿರದವರಿದ್ದಾರಲ್ಲ, ಅವರು ಅದ್ಯಾವ ಹುಡುಗಿ ಎಂದು ತಲೆ ಕೆರೆದುಕೊಂಡು, ಕುತೂಹಲದ ಹಿಮಾಲಯ ಏರಿ, ಕಾಲ್ ಮಾಡಿ ಅದ್ಯಾರು ಅಂತ ಹೇಳೋ ಪ್ಲೀಸ್... ಎಂದು ಗೋಗರೆಯಬೇಕು. ಹೇಳು ನಾವು ಯಾರಿಗೂ ಹೇಳುವುದಿಲ್ಲ ಎಂದು ಆಣೆಗಳ ಸುರಿಮಳೆ ಸುರಿಸಿ ನಂತರ ಆಧುನಿಕವಾಗಿ ಚಿಂತಿಸಿ ಬಾಂಡ್ ಪೇಪರ್ ಮೇಲೆ ಸಹಿ ಹಾಕೋ ಮಟ್ಟಕ್ಕೆ ಬರಬೇಕು, ನಮ್ಮ ಮೇಲೆ ನಿನಗೆ ನಂಬಿಕೆ ಇಲ್ವಾ? ಎಂದು ಅವರು ಕೇಳ ಬೇಕು. ಇನ್ನೂ ಹತ್ತಿರವರು ನನ್ನ ಕಾಲರ್ ಹಿಡಿದು ಕೇಳುವ ಸ್ಥಿತಿಗೆ ಬರಬೇಕು. ಊಹೂಂ ಅದರು ಅವರಿಗೆ 'ಅವಳು' ಯಾರು ಎಂದು ಗೊತ್ತಾಗಲೇ ಬಾರದು.
ಬರವಣಿಗೆಯಲ್ಲಿನ ಯಾವುದೇ ಹೆಸರಿನ ಯಾವುದೇ ಪದ ಕೂಡ 'ಅವಳ' ಹೆಸರನ್ನು ಸೂಚಿಸಲೇಬಾರದು. ಒಂದು ಸತ್ಯ ಹೇಳಿದರೆ ಆ ಸತ್ಯವನ್ನು ಸುಳ್ಳು ಮಾಡುವ ನೂರು ಸುಳ್ಳು ಹೇಳಬೇಕು. ಅಥವಾ ನೂರು ಸತ್ಯ ಹೇಳಿ ಒಂದು 'ದೊಡ್ಡ' ಸುಳ್ಳು ಹೇಳಿದರೂ ಆಗುತ್ತದೆ.
ಅವಳ ರೂಪ, ಗುಣ, ಹಾವಭಾವಗಳೆಲ್ಲವನ್ನೂ ಗೊಂದಲ ಹುಟ್ಟಿಸುವಂತೆ ಹೇಳಬೇಕು. ಬೇಡ, ಅದು ಹೇಗೆ ಬರೆದರೂ ಅವಳಿಗೆ ಅದು 'ಅವಳೇ' ಎಂಬ ಅನುಮಾನ ಬಂದೇ ಬರುತ್ತದೆ. ಅವಳಿಗೆ ಬಾರದಿದ್ದರೂ ಅವಳ ಬಗ್ಗೆ ಮನಸಲ್ಲೇ ಮಂಡಿಗೆ ಮೆಲ್ಲುತ್ತಿದ್ದರಿಗಂತೂ ಬಂದೇ ಬರುತ್ತದೆ. ಇದರ ಸಹವಾಸವೇ ಬೇಡ. ಅವಳು ಬಳಸುತ್ತಿದ್ದ ವಸ್ತು, ಇಷ್ಟಪಡುವ ತಿಂಡಿ ತಿನಿಸು, ನಟ ನಟಿ, ಬಣ್ಣ ಹೀಗೆ ಇನ್ನೇನೋ ಗಳನ್ನು ರೂಪಕವಾಗಿ ಬಳಸೋಣ... ಅಂದರೆ ಅದು ಹೆಚ್ಚಿನವರಿಗೆ ಗೊತ್ತಿದೆ.
"ಇಲ್ಲಿನ ಎಲ್ಲ ಸನ್ನಿವೇಶ, ಪಾತ್ರ ಹಾಗೂ ಸಂಭಾಷಣೆಗಳು ಕೇವಲ ಕಾಲ್ಪನಿಕ. ಇದಕ್ಕೂ ನೈಜ ಘಟನೆಗಳಿಗೂ ಯಾವುದೇ ಸಂಬಂಧವಿದೆ ಎಂದೆನಿಸಿದರೆ ಅದು ಕೇವಲ ಕಾಕತಾಳೀಯ" ಎಂದು ಕಥೆಯ ಆರಂಭದಲ್ಲಿ ಬರೆದು ಬಿಟ್ಟರೇ...? ಆದರೆ ಈ ಸಾಲುಗಳು ನಂಬಿಕೆ ಹುಟ್ಟಿಸುವ ಸಾಮರ್ಥ್ಯ ಕಳೆದುಕೊಂಡು ತುಂಬ ಸಮಯವಾಗಿದೆ.
ಈಗೇನು ಮಾಡಲಿ? ನನಗೆ 'ಅದನ್ನು' ಬರೆಯಲೇ ಬೇಕು. ಆದರೆ ಅದರಲ್ಲಿರುವ 'ಅವಳನ್ನು' ಏನು ಮಾಡೋದು?
'ಅವಳ' ಕಥೆ ನನ್ನ ಮನದಲ್ಲಿ ಗರ್ಭಂಕುರವಾಗಿ ಕೆಲ ಸಮಯಗಳೇ ಸಾಗಿದೆ... ಅದನ್ನು ಗರ್ಭಪಾತ ಮಾಡಿಸಲು ನನಗೆ ಸುತಾರಾಂ ಇಷ್ಟವಿಲ್ಲ. ಅದು ನನ್ನ ಬರವಣಿಗೆಯ ಸೋಲು ಅಥವಾ ಅತ್ಮಹತ್ಯೆ. ಹಾಗೇ ಅಥವಾ ಹೀಗೆ ಜನ್ಮ ನೀಡಲು ಸಾಧ್ಯವಿಲ್ಲ, ಅದು ಅವಳ ಬದುಕಿನ ಪ್ರಶ್ನೆ... ಈಗ ತಾನೇ ಗಂಡನ ಮನೆ ಸೇರಿ ಆತನ ಬಿಸಿಯುಸಿರಿಗೆ ಕರಗುತ್ತಿರುವವಳು ನನ್ನ ಬಿಸಿಯುಸಿರಿಗೂ ಕರಗಿದ್ದಳು ಎಂದು 'ಅವನಿಗೆ' ಗೊತ್ತಾದರೆ ನಂತರ 'ಅವಳ' ಉಸಿರೆಲ್ಲ ಬಿಸಿಯೇ. ಆಕೆಯ ಆ ಬಿಸಿ ಉಸಿರಿನ ತಾಪಕ್ಕೆ ನನ್ನ ಬರವಣಿಗೆಯ ಸೆಲೆ ಬತ್ತಿ ಹೋಗಬಹುದು. ಅಲ್ಲಿಗೆ ನನ್ನ ಬರವಣಿಗೆಯ ಶವಸಂಸ್ಕಾರವೂ ನಡೆದು ಹೋಗುತ್ತದೆ! ಕಥೆಯಾಗಲೇ ಬೇಕಾದ ಹುಡುಗಿಯನ್ನು ಅದು ಹೇಗೆ ತಾನೇ ಕಥೆ ಮಾಡಲಿ?

Friday, August 7, 2009

ಕಾಲೇಜು ಚುನಾವಣೆ: ಕಾಸೇ ಬಾಸ್!

ಶಿಕ್ಷಣ ವ್ಯವಸ್ಥೆಗೂ ಆ ದೇಶದ ಆಡಳಿತ ಕ್ರಮಕ್ಕೂ ನೇರ ಸಂಬಂಧವಿದೆ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿ(ಬೆಳೆ)ಯುವಿಕೆಗೆ ಶಿಕ್ಷಣದ ಕೊಡುಗೆ ಅಪಾರ.ನಮ್ಮ ದೇಶದ ಮಕ್ಕಳಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂಬುದು ಆರ್ಥವಾಗುವುದೇ ಶಾಲಾ ಕಾಲೇಜುಗಳ ಮೂಲಕ. ಈ 'ಆರ್ಥವಾಗುವಿಕೆ' ಸೈಧಾಂತಿಕ ಮತ್ತು ಪ್ರಾಯೋಗಿಕ ಅನುಭವಗಳೆರಡನ್ನು ಹೊಂದಿರುತ್ತವೆ.
ಸೈಧಾಂತಿಕ ವಿಷಯಗಳನ್ನು ಪಠ್ಯಗಳ ಮೂಲಕ ತಿಳಿದುಕೊಳ್ಳವ ನಾವುಗಳು ಅದರ ಪ್ರಾಯೋಗಿಕ ಅನುಭವವನ್ನು ಶಾಲಾ ಕಾಲೇಜು ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಡೆಯುತ್ತಿವೆ.
ಆಂದರೆ ಶಾಲಾ ಕಾಲೇಜು ಚುನಾವಣೆಗಳು ದೇಶದ ಭಾವಿ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೊದಲ ಪಾಠಶಾಲೆ ಎಂದಾಯಿತು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಚುನಾವಣೆಗಳಲ್ಲಿ ನಾವು ಇಂದು ಕಾಣುವ ವಾತಾವರಣ ದೇಶದ ಮುಂದಿನ ಚುನಾವಣೆಗಳ ಪರಿಸರ ಯಾವ ರೀತಿ ಇರುತ್ತದೆ ಎಂಬುದರ ಸ್ಪಷ್ಟ ಮುನ್ಸೂಚಣೆ. ಹಾಗಾದರೆ 'ಡೆಮೋಕ್ರಸಿ ಇಸ್ ಇನ್ ಡೇಂಜರ್'!
ಕಾಲೇಜಿನ ವಿದ್ಯಾರ್ಥಿ ಸಂಘಗಳಿಗೆ ನಡೆಯುವ ಚುನಾವಣೆಗಳು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಿಗೆ 'ಎಲ್ಲಾ' ರೀತಿಯಿಂದಲೂ ಪೈಪೋಟಿ ನೀಡುತ್ತಿದೆ. ಸದನದಲ್ಲೊಂದು ಸ್ಥಾನ ಪಡೆಯಲು ಒಬ್ಬ ಅಭ್ಯರ್ಥಿ ಏನೆಲ್ಲಾ ಕಸರತ್ತು ಮಾಡುತ್ತಾನೋ ಅದೆಲ್ಲವನ್ನು ಒಂದು ವರ್ಷದ ಆವಧಿಗೆ ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಲು ವಿಧ್ಯಾರ್ಥಿಯೊಬ್ಬ ಮಾಡುತ್ತಾನೆ ಎಂದರೆ ನೀವು ನಂಬಲೇ ಬೇಕು.
ಚುನಾವಣೆ ಅಂದಾಗ ಪೈಪೋಟಿ ಇದ್ದೆ ಇರುತ್ತದೆ. ರಾಜಕೀಯ ಪಕ್ಷಗಳ ನಡುವೆ ನಡೆಯುವ ಚುನಾವಣೆಯಲ್ಲಿ ಹೆಸರಿಗಾದರೂ ಅಧಿಕಾರಕ್ಕಾಗಿ 'ತತ್ವ ಸಿದ್ದಾಂತಗಳ ನಡುವಿನ ಸೆಣಸಾಟ' ಎಂಬ ಪರಿಕಲ್ಪನೆ ಇದೆ. ಈ ಸೆಣಸಾಟವನ್ನು ವ್ಯವಸ್ಥಿತವಾಗಿ ಮತ್ತು ಕಾನೂನು ಬದ್ಧವಾಗಿ ನಡೆಸಲು ಚುನಾವಣ ಆಯೋಗ ಎಂಬ ಒಂದು ಸಂಸ್ಠೆಯೇ ಇದೆ. ಹಾಗೆಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರಿಗೆ ಶಿಕ್ಷೆಯ ಭಯ ಕೂಡವಿರುತ್ತದೆ. ಆದರೆ ಕಾಲೇಜುಗಳಲ್ಲಿ?
ಇಂದು ಕಾಲೇಜು ಚುನಾವಣೆ ಗೆಲ್ಲಲ್ಲು ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣ ಸುರಿಯುತ್ತಾನೆ. ನನಗೆ ಗೊತ್ತಿರುವಂತೆ, ಕಳೆದ ವರ್ಷ ಒಂದು ಗ್ರಾಮೀಣ ಕಾಲೇಜಿನ ವಿದ್ಯಾರ್ಥಿ ಚುನಾವಣೆ ಗೆಲ್ಲಲ್ಲು ಸುರಿದದ್ದು ಬರೋಬ್ಬರಿ 75,000 ರೂಪಾಯಿಗಳು!
ಇದರರ್ಥ, ಹಿಂದೆ ಕಾಲೇಜು ಚುನಾವಣೆಗಳು ಮಾದರಿಯಾಗಿ ನಡೆಯುತ್ತಿತ್ತು, ಒಳ್ಳೆಯವರು ಮಾತ್ರ ಚುನಾವಣೆಗೆ ನಿಲ್ಲುತ್ತಿದ್ದರು ಮತ್ತು ಗೆಲ್ಲುತ್ತಿದ್ದರು ಎಂದಲ್ಲ. ಆದರೆ ಈಗಿನ ಕಾಲೇಜು ಚುನಾವಣೆಗಳಷ್ಟು ಅಧಃಪತನಕ್ಕೀಡಾಗಿರಲಿಲ್ಲ.
ಕಾಲೇಜು ಚುನಾವಣೆಗಳು ಗಮ್ಮತ್ತಿನ ಮತ್ತು ಮೋಜು ಮಸ್ತಿ ಮಾಡುವ ಅವಕಾಶವೊದಗಿಸುತ್ತದೆ. ಇದನ್ನು ಎಲ್ಲರು ಅನುಭವಿಸಬೇಕು, ಅಸ್ವಾದಿಸಬೇಕು, ಖುಷಿಪಡಬೇಕು. ಆದರೆ ಇದು ಉತ್ತಮ ಚುನಾವಣ ಹವಾ ಇದ್ದಲ್ಲಿ ಮಾತ್ರ ಸಾಧ್ಯ.
ಇಂದು ಕಾಲೇಜು ಚುನಾವಣೆ ಪ್ರತಿಷ್ಟೆಯ ಸಂಕೇತವಾಗಿ ಬಿಟ್ಟಿದೆ. ಇಲ್ಲಿ ಎರಡು ರೀತಿಯ ಪ್ರತಿಷ್ಟೆಗಳು ಮುಖ್ಯವಾಗಿ ವರ್ತಿಸುತ್ತದೆ. ಅದೇ ವ್ಯಕ್ತಿ ಪ್ರತಿಷ್ಟೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಷ್ಟೆ. ಈ ಕಾರಣಕ್ಕಾಗಿಯೇ ಇಂದು ಕಾಲೇಜು ಚುನಾವಣೆಗಳು ಪೊಲೀಸ್ ಭದ್ರತೆಯಲ್ಲಿ ನಡೆಯುತ್ತಿರುವುದು.
ನಮ್ಮ ಸಂಘಟನೆಯ ಅಭ್ಯರ್ಥಿ ಗೆಲ್ಲಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಏನೆಲ್ಲಾ ಕಸರತ್ತು ಮಾಡುತ್ತವೆ. ಹಾಗೆಯೇ, 'ನಮ್ಮ ಮಕ್ಕಳು ಗೆಲ್ಲಬೇಕು' ಎಂದು ಪೋಷಕರು ಹಣ ಸುರಿಯುತ್ತಾರೆ. ಅದರೊಂದಿಗೆ ಕೆಲ ಸಂದರ್ಭಗಳಲ್ಲಿ ತಮ್ಮ ತಂದೆ ತಾಯಿಗಳ ಹೆಸರನ್ನು ಬಂಡವಾಳ ಮಾಡಿಕೊಂಡು ವಿದ್ಯಾರ್ಥಿಗಳು ಸಾಲ ಮಾಡಿ ಚುನಾವಣೆಗೆ ನಿಲ್ಲುವುದು ಇದೆ.
ಸಾಮಾನ್ಯವಾಗಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಒಂದು ವರ್ಷದಿಂದಲೇ ಆ ಸ್ಥಾನದ ಮೇಲೆ ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ವ್ಯವಸ್ಥಿತವಾದ ಕಾರ್ಯಾಚರಣೆ ಮಾಡುತ್ತಾನೆ. ತನ್ನ ಸುತ್ತ 'ಸಮಾನ ಮನಸ್ಕ' ವಿದ್ಯಾರ್ಥಿಗಳ ಪಟಾಲಾಂ ಕಟ್ಟಿಕೊಳ್ಳುತ್ತಾನೆ. ಇದು ಒಂಥರ ಭಟ್ಟಂಗಿಗಳ ಪಡೆ.
ಇನ್ನು ತರಗತಿ ಪ್ರತಿನಿಧಿಗಳ ಅಧ್ಯಕ್ಷನನ್ನು ಆಯ್ಕೆ ಮಾಡುವ ಕಾಲೇಜುಗಳಲ್ಲಿ ಆತ ತನನ್ನು ಬೆಂಬಲಿಸುವ ವಿದ್ಯಾರ್ಥಿಗಳು ಚುನಾವಣೆಗೆ ನಿಲ್ಲುವಂತೆ ನೋಡಿಕೊಳ್ಳುತ್ತಾನೆ. ಇದರಲ್ಲಿ ತಪ್ಪೇನಿಲ್ಲ, ಆದರೆ ಅವರ ಗೆಲುವಿನ ಸಂಪೂರ್ಣ 'ಜವಾಬ್ದಾರಿ' ತಾನೇ ಹೊರುತ್ತಾನೆ. ಇಲ್ಲೇ ಹಣದ ಚಲಾವಣೆ ಮೇರೆ ಮೀರುವುದು. ಇಲ್ಲ, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಯನ್ನು ಕೊಂಡುಕೊಳ್ಳುತ್ತಾನೆ. ಒಂದು ವೇಳೆ ತನ್ನ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ವಿದ್ಯಾರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದಾದರೆ ಅವನನ್ನು ಬೆಂಬಲಿಸುವವರನ್ನು ತೃಪ್ತಿ ಪಡಿಸುವ ಕೆಲಸಕ್ಕೆ ಕೈ ಹಾಕುತ್ತಾನೆ. ಇನ್ನು ನೇರ ಚುನಾವಣೆ ನಡೆಯುವ ಕಾಲೇಜುಗಳಲ್ಲಿ ಅಭ್ಯರ್ಥಿಗೆ 'ರಿಸ್ಕ್' ಹೆಚ್ಚಿರುತ್ತದೆ. ಅಂದರೆ 'ಮಾನವ ಸಂಪನ್ಮೂಲ' ಮತ್ತು ಹಣದ ಹೂಡಿಕೆ ಹೆಚ್ಚು ಬೇಕಾಗುತ್ತದೆ. ಅದರೊಂದಿಗೆ ಪ್ರತಿಫಲದ ಗ್ಯಾರಂಟಿ ಇರುವುದಿಲ್ಲ. ಚುನಾವಣೆಯಲ್ಲಿ ಸೋತರೆ ಯಾರ ಕಾಲರ್ ಹಿಡಿಯುವುದು? ಎಂಬ ಸ್ಥಿತಿ. ಅದರೂ ಇಲ್ಲೂ ಹಣ, ಮದಿರೆ, ಪಾರ್ಟಿ ಯಥೇಚ್ಚವಾಗಿ ನಡೆಯುತ್ತದೆ. ಇಲ್ಲಿ ಕೆಲವು 'ಒಪಿನಿಯನ್ ಲೀಡರ್'ಗಳಿಗೆ ವಿಶೇಷ ಮನ್ನಣೆ.
ಅನಂತರ ಚುನಾವಣೆ... ಕಾಲೇಜುಗಳ ಆಡಳಿತ ಮಂಡಳಿ ನಮ್ಮದು ಬಹಳ ವ್ಯವಸ್ಥಿತವಾಗಿ, ಶಿಸ್ತುಬದ್ದವಾಗಿ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ನಡೆಯುವ ಚುನಾವಣೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತವೆ. ಯಾಕೆಂದರೆ ಅವರಿಗೆ ಚುನಾವಣೆ ಶಾಂತಿಯುತವಾಗಿ ನಡೆದರೆ ಸಾಕು. ಉಳಿದ ವಿಷಯಗಳು ಹೇಗಾದರೂ ಪರವಾಗಿಲ್ಲ. ಮತ್ತೇ ಕೆಲ ಸಂದರ್ಭಗಳಲ್ಲಿ ಅವರಿಗೆ ಈ 'ಭೂಗತ ಚಟುವಟಿಕೆ'ಯ ಅರಿವೇ ಇರುವುದಿಲ್ಲ.
ಇವುಗಳ ಒಟ್ಟು ಫಲವಾಗಿ ಬಡ ವಿದ್ಯಾರ್ಥಿಯೊಬ್ಬ ಚುನಾವಣೆಗೆ ನಿಲ್ಲುವಂತಿಲ್ಲ, ನಿಂತು ಗೆಲ್ಲಬೇಕಾದರೆ ಅವನಿಗೆ ಯಾರದದ್ದರೂ ಆರ್ಥಿಕ ಅಥವಾ ಸಂಘಟನೆಗಳ ಬೆಂಬಲ ಬೇಕೇ ಬೇಕು. ಅದರೊಂದಿಗೆ 'ಸಕಲ ಕಲಾ ವಲ್ಲಭ'ರಾಗಿರಬೇಕು. ಇದೇ ನಾಯಕತ್ವ ಗುಣ! ಹಾಗಂತ, ಕಾಲೇಜು ಚುನಾವಣೆ ನಡೆಸದೇ, ಅಂಕದ ಅಧಾರದ ಮೇಲೆ ಅಥವಾ ಇನ್ನೀತರ ಮಾನದಂಡಗಳ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆರಿಸುವುದು ಆಕ್ಷಮ್ಯ.ವಿದ್ಯಾರ್ಥಿ ಸಂಘದ ನಾಯಕ ಸ್ಥಾನಕ್ಕೆ ಚುನಾವಣೆಗಳ ಮೂಲಕವೇ ಆಯ್ಕೆ ನಡೆಯಬೇಕು. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಬೇಕು. ಯಾವುದೇ ವಿದ್ಯಾರ್ಥಿ ಅನೈತಿಕ ಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾನೆ ಅಥವಾ ಎದುರಿಸಿದ್ದಾನೆ ಎಂಬುದು ಸಾಬೀತಾದರೆ ಅವನ ಅಭ್ಯರ್ಥಿತನವನ್ನು ಅನೂರ್ಜಿತಗೊಳಿಸಬೇಕು.
ಕಾಲೇಜು ಚುನಾವಣೆ ಗೆಲ್ಲಲ್ಲು ಹಣ ಚೆಲ್ಲಿದ್ದೇ ಆದರೆ ಅಥವಾ ಆ ಅಭ್ಯರ್ಥಿಯ ಪರವಾಗಿ ಬೇರೆ ಯಾರದರೂ ಆ ಕೆಲಸ ಮಾಡಿದರೆ ಆ ವಿದ್ಯಾರ್ಥಿಯ ನಾಮಪತ್ರ ತಿರಸ್ಕರಿಸಬೇಕು, ಚುನಾವಣೆ ಬಳಿಕ ಈ ವರ್ತನೆ ಕಂಡರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು.
ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು ಒಂದು ನೀತಿ ಸಂಹಿತೆ ರಚಿಸಿಡಬೇಕು, ಆ ಪ್ರಕಾರವೇ ಅವರು ಪ್ರಚಾರ ನಡೆಸಬೇಕು.
ಕಾಲೇಜು ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ನಡೆಸುವ ಮೆರವಣಿಗೆ ಮತ್ತು ಸುಡುಮದ್ದು ಪ್ರದರ್ಶನಗಳಿಗೆ ಸಂಪೂರ್ಣ ನಿಷೇಧ ಹೇರಬೇಕು.
ಈ ಬಗ್ಗೆ ಕಾಲೇಜುಗಳ ಅಡಳಿತ ಮಂಡಳಿ ಮತ್ತು ಸರಕಾರ ಗಂಭೀರವಾಗಿ ಯೋಚಿಸಬೇಕು. ಕಾಲೇಜು ಚುನಾವಣೆಗಳನ್ನು ನಡೆಸುವ ಜವಾಬ್ಧಾರಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಅಥವಾ ಕಾಲೇಜುಗಳು ಇಡೀ ಚುನಾವಣ ಪ್ರಕಿಯೆಯ ಮೇಲೆಯೇ ನಿಗಾವಿಡುವ ಕೆಲಸ ಮಾಡಬೇಕು.
ಯಾಕೆಂದರೆ ಪ್ರಜಾಪ್ರಭುತ್ವದ ಯಶಸ್ಸಿನ ನಿರೀಕ್ಷೆಗಳು ಹುಟ್ಟ ಬೇಕಾದ ಜಾಗದಲ್ಲೇ ಭ್ರಮನಿರಶನವಾದರೆ ಪ್ರಜಾಪ್ರಭುತ್ವದ ಆಯುಷ್ಯಕ್ಕೆ ಗೆದ್ದಲು ಹಿಡಿದಂತೆ. (ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ)