Saturday, September 5, 2009

ನ್ಯಾನೋಗೆ ಉತ್ತರವಾಗಬಲ್ಲದೇ ರೈನೋ?



ನ್ಯಾನೋ ಕಾರು ಆರ್ಥಿಕವಾಗಿ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ಅದು ನಮ್ಮ ಚಿಂತನಕ್ರಮದಲ್ಲೊಂದು ಬದಲಾವಣೆ ತಂದಿದೆ. ಇಂದು ಬಹುತೇಕ ಕಾರು ಉತ್ಪಾದಕರು ಚಿಕ್ಕ ಕಾರು ತಯಾರಿಸುವತ್ತ ಗಮನಹರಿಸುತ್ತಿರುವಾಗಲೇ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರೊಬ್ಬರು ಅದನ್ನು ಸಾಧಿಸಿ ತೋರಿಸಿದ್ದಾರೆ.
'ರೈನೋ' ಎಂಬ ನಾಮಧೇಯದ ಈ ಕಾರು ನೋಡಲು ರೈನೋಸಾರಸ್ ನಂತೆಯೆ ಇದೆ.ಅಚ್ಚರಿಯೆಂದರೇ ರೈನೋ ಬರೀ 150 ಕೆಜಿ ತೂಗುತ್ತದೆ. ಆದರೆ 30 ರಿಂದ 35 ಕಿ.ಮೀ ಮೈಲೇಜ್ ಕೊಡುತ್ತದೆ. ಗಂಟೆಗೆ 60 ಕಿ.ಮೀ ವೇಗದಲ್ಲಿ ಸರಾಗವಾಗಿ ಚಲಿಸಬಲ್ಲದು.ನಾಲ್ಕು ಫೀಟ್ ಅಗಲ, ನಾಲ್ಕು ಫೀಟ್ ಎತ್ತರ ಮತ್ತು ಎಂಟು ಫೀಟ್ ಉದ್ದವಿರುವ ಈ ಕಾರಲ್ಲಿ ಡ್ರೈವರ್ ಸೇರಿ ಇಬ್ಬರು ಕೂರಬಹುದು. 25 ಕೆ.ಜಿ ಲಗೇಜ್ ಇಟ್ಟುಕೊಳ್ಳಬಹುದು.ಮಡಚಬಹುದಾದ ಸ್ಟೇರಿಂಗ್ ಮತ್ತು ಒಂದೇ ಬಾಗಿಲು ಈ ಕಾರಿನ ವೈಶಿಷ್ಟ್ಯ. ಯಾವುದೇ ಇಂಜಿನ್ ಕೂಡ ಬಳಸಬಹುದು.ಗೇರ್ ವ್ಯವಸ್ಥೆ ಇರುವ ಕಾರು ಇದಾಗಿರುವುದರಿಂದ ಎತ್ತರ ಪ್ರದೇಶಕ್ಕೂ ನಿರಾಯಾಸವಾಗಿ ಚಲಿಸಬಲ್ಲದು ಆದರೆ ಚಕ್ರ ಚಿಕ್ಕದಾಗಿರುವುದರಿಂದ ಗುಂಡಿಗಳಿರುವ ರಸ್ತೆಯಾದ್ರೆ ಸ್ವಲ್ಪ ಕಷ್ಟ, ಆದರೆ
ದೊಡ್ಡ ಚಕ್ರವನ್ನು ಬೇಕಾದರೆ ಆಳವಡಿಸಿಕೊಳ್ಳಬಹುದು ಎಂಬುದು ನಿರ್ಮಾತೃವಿನ ಅಭಿಪ್ರಾಯ.
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಯಿಂದ ಬೇಸತ್ತು ಅದಕ್ಕೆ ಪರಿಹಾರವಾಗಿ ನಾನು ಈ ಕಾರು ತಯಾರಿಸುವ ನಿಟ್ಟಿನಲ್ಲಿ ಯೋಚಿಸಿದೆ ಎನ್ನುತ್ತಾರೆ ಇದರ ರೂವಾರಿ ನರಸಿಂಹರಾಜು. ಇಂಜಿನ್ ಮತ್ತು ಚಕ್ರಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವನ್ನು ನಾನೇ ವಿನ್ಯಾಸ ಮಾಡಿಕೊಂಡೆ ಎನ್ನುತ್ತಾರವರು. ಅಂಗವಿಕಲರಿಂದ ಈ ಕಾರಿಗೆ ಹೆಚ್ಚಿನ ಬೇಡಿಕೆ ಇದೆ ಆದರೆ ಕ್ಲಚ್ ಮತ್ತು ಬ್ರೇಕ್ ಕಾಲಲ್ಲೇ ಉಪಯೋಗಿಸುವ ರೀತಿಯಲ್ಲಿ ವಿನ್ಯಾಸವಿರುವುದರಿಂದ ಅದರ ಬಳಕೆಗೆ ಕಷ್ಟವಾಗಬಹುದು ಅದ್ದರಿಂದ ಅವನ್ನು ಕೈಯಿಂದ ಬಳಸುವಂತೆ ರೂಪಿಸುವ ದಿಸೆಯಲ್ಲಿ ಅವರು ಗಂಭೀರವಾಗಿ ಚಿಂತಿಸುತ್ತಿದ್ದಾರೆ.ನನ್ನಿಂದ ಇದರ ಬೃಹತ್ ಪ್ರಮಾಣದ ಉತ್ಪಾದನೆ ಸಾಧ್ಯವಿಲ್ಲ, ದೊಡ್ಡ ಕಂಪೆನಿಗಳು ಮುಂದೆ ಬಂದರೆ ನಾನು ಇದರ ತಂತ್ರಜ್ಙಾನ ಕೊಡುತ್ತೇನೆ ಎನ್ನುವ ಇವರು ಹೀಗಾದರೆ ಈ ಕಾರು ರೂ. 80,000ಕ್ಕೆ ಗ್ರಾಹಕರ ಕೈಸೇರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕಿಸೆಗೂ, ರಸ್ತೆಗೂ ಹಗುರವಾಗಿರುವ ಈ ಕಾರು ಅದಷ್ಟೂ ಬೇಗ ನಮ್ಮ ರಸ್ತೆಗಳಲ್ಲಿ ಓಡುವಂತಾದರೆ ಅನೇಕರ ಕಾರು ಕೊಳ್ಳುವ ಕನಸು ನನಸಾಗಬಹುದು. ಹಾಗೆಯೇ ನಗರಗಳ ಪಾರ್ಕಿಂಗ್ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಇವರ ಪ್ರಯೋಗಶೀಲತೆ ಇಷ್ಟಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಜನತೆಯನ್ನು ಗಮನವಿಟ್ಟುಕೊಂಡು ಸೈಕಲ್ ಗೆ ಶಾಕ್ ಅಬ್ಸರ್ವರ್ ಅಳವಡಿಸುವ ಪ್ರಯತ್ನ ಮಾಡಿ ಅದರಲ್ಲೂ ಯಶ ಕಂಡಿದ್ದಾರೆ. ಇದು ಬೆನ್ನು ನೋವಿನಿಂದ ನರಳುತ್ತಿರುವವರಿಗೆ ಉಪಯುಕ್ತ ಎಂಬುದು ಅವರ ಅನಿಸಿಕೆ. ರಕ್ಷಣಾ ಉದ್ದೇಶಕ್ಕೆ ಬಳಸಬಹುದಾದ ರೊಬೊಟ್ ಕೂಡ ಇವರ ಕೈಯಲ್ಲಿ ರೂಪುಗೊಂಡಿದೆ. ಇದನ್ನು ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಸಬಹುದಾಗಿದ್ದು ತನ್ನ ಕೈಯಲ್ಲಿ ಮೂರು ಕೆಜಿ ಭಾರ
ಎತ್ತಿ ಅದನ್ನು ಅತ್ತಿತ್ತ ಕೊಂಡೊಯ್ಯಬಲ್ಲದು ಅಲ್ಲದೆ ಅದನ್ನು ನಾಶಮಾಡಬಲ್ಲದು. ಇದು ಬಾಂಬ್ ನಿಷ್ಕ್ರೀಯಗೊಳಿಸಲು ಸಹಕಾರಿ. ತಲೆ ಮೇಲೆ ಗನ್ ಇಟ್ಟುಕೊಳ್ಳುವ ವ್ಯವಸ್ಥೆಯಿದ್ದು ಅದನ್ನು 360 ಡಿಗ್ರಿಯಷ್ಟು ತಿರುಗಿಸಬಹುದಾಗಿದೆ. ಮೇಲೆ ಕೆಳಗೆ ಚಲಿಸುವಂತೆಯೂ ಮಾಡಬಹುದು. ಇದು ಶತ್ರುಗಳ ಮೇಲೆ ಗುಂಡಿನ ದಾಳಿ ನಡೆಸಲು ಉಪಯುಕ್ತ. ಇದು ಚಕ್ರದ ಸಹಾಯದಿಂದ ಚಲಿಸುತ್ತದೆ ಅದುದರಿಂದ ಸಮತಟ್ಟಾದ ಜಾಗಗಳಲ್ಲಿ ಮಾತ್ರ ಇದರ ಬಳಕೆ ಸಾಧ್ಯ. ಅದರೆ ಚಕ್ರದ ಬದಲು ಟ್ರ್ಯಾಕ್ ಬಳಸಿ ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಬಳಸುವಂತೆ ಮಾಡಬಹುದಾಗಿದೆ.
ಇದರೊಂದಿಗೆ ರೋಟಿ ಮೇಕರ್ ಎಂಬ ಅಡುಗೆ ಮನೆಯಲ್ಲಿ ಬಳಸುವ ಉಪಕರಣವೊಂದನ್ನು ಅವರು ತಯಾರಿಸಿದ್ದು ಇದರ ಸಹಾಯದಿಂದ ಅರೆ ನಿಮಿಷದಲ್ಲಿ ಎಣ್ಣೆ ರಹಿತ ಚಪಾತಿ ಮಾಡಲು ಸಾಧ್ಯ. ಇನ್ನು ಬೆಂಗಳೂರಿನ ಚರಂಡಿ, ಮೋರಿಗಳಲ್ಲಿ ಹರಿದ ವ್ಯರ್ಥವಾಗುತ್ತಿರುವ ಕೊಳಚೆ ನೀರನ್ನು ಬಳಸಿ ವಿದ್ಯುತ್‌ ತಯಾರಿಸುವ ಹಂಬಲ ಇವರದ್ದು. ಆಸಕ್ತರು ನರಸಿಂಹರಾಜು ಅವರನ್ನು (9845115142) ಸಂಪರ್ಕಿಸಬಹುದು.

No comments: