Tuesday, June 30, 2009

ಕುದುರೆ ನಿಂತರೆ, ಇನ್ನೇನು ಓಡುತ್ತೆ?

ಬೆಂಗಳೂರಿನ್ನು ರೇಸ್ ಕುದುರೆಗಳ ಕೆನೆಯುವಿಕೆ ಮತ್ತು ಖರಪುಟದಿಂದ ಮುಕ್ತವಾಗುವುದು ನಿಶ್ಚಿತ. ನಗರದ ಕೇಂದ್ರ ಭಾಗದಲ್ಲಿದ್ದ ರೇಸ್ ಕೋರ್ಸ್ ನ್ನು ಸ್ಥಳಾಂತರಿಸಲು ಸರಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಸುಮಾರು 90 ವರ್ಷಗಳ ಒಂದು ಪರಂಪರೆ ಬೆಂಗಳೂರಿನಿಂದ ಕಳಚಿಕೊಳ್ಳಲಿದೆ. ಇದು ಸರಕಾರದ ಪಾಲಿಗೆ ಅನಿವಾರ್ಯ, ಅತ್ಯಗತ್ಯ ಎರಡೂ ಹೌದು.
ಇಲ್ಲೊಂದು ಉದ್ಯಾನ ಬರಲಿದೆ, ಬಸ್ ನಿಲ್ದಾಣ ಆಗಲಿದೆ, ವೀಕ್ಷಣಾ ಗೋಪುರ ನಿರ್ಮಾಣವಾಗಲಿದೆ, ಮೃಗಾಲಯವೂ ಆಗಬಹುದು ಎಂಬಿತ್ಯಾದಿ ಗಾಳಿ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಇದೊಂದು ರೇಸ್ ಕೋರ್ಸ್ ಆಗಿದ್ದ ಸಂದರ್ಭದಲ್ಲಿ ಆದುದಕ್ಕಿಂತ ಹೆಚ್ಚಿನ ಚರ್ಚೆಗಳು ಇದೀಗ ಆರಂಭವಾಗಿದೆ.
ಹೌದು, ಚರ್ಚೆಗೆ ಇದು ಸಕಾಲ. ಈ ಹಿಂದೆ ಕೇಂದ್ರ ಕಾರಾಗೃಹ ಬದಲಾದಗಲೂ ಇದೇ ಮಾದರಿ ಚರ್ಚೆಗಳು ಕೇಳಿ ಬಂದಿದ್ದವು. ಜನ ಇದೇ ರೀತಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಕೊನೆಗೆ ಆದದ್ದು ಇವುಗಳಲ್ಲಿ ಕೆಲವು ಮಾತ್ರ. ಅದೇ ಮಾದರಿ ಚರ್ಚೆ ಈಗ ಆರಂಭವಾಗಿದೆ.
ಬಹುಶಃ ಕುದುರೆ ರೇಸ್ ಗಾಗ ನಗರದ ಹೃದಯಭಾಗದಲ್ಲಿ ನೂರಾರು ಕೋಟಿ ರೂ. ಬೆಲೆಬಾಳುವ 85 ಎಕರೆ ಜಾಗ ಬಳಕೆಯಾಗುತ್ತಿರುವುದು ಜಗತ್ತಿನ ಯಾವುದೇ ಭಾಗದಲ್ಲೂ ಕಂಡುಬರಲಿಕ್ಕಿಲ್ಲ.
ರೇಸ್ ಕೋರ್ಸ್ ಅದು ಈಗೀರುವ ಜಾಗದಿಂದ ಸ್ಥಳಾಂತರ ಮಾಡಿದ ತಕ್ಷಣ ಸರಕಾರದ ಕೆಲಸ ಮುಗಿಯಿತು ಎಂದಲ್ಲ. ಸರಕಾರದ ನಿಜಬಣ್ಣ/ ಯೊಗ್ಯತೆ ಗೊತ್ತಾಗುವುದು ಸರಕಾರ ಮುಂದೆ ಆ ಜಾಗವನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ.
ಆದರೆ ನಮ್ಮ ಸರಕಾರದ ಬಳಿ ಈ ಅಮೂಲ್ಯ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಯೋಚನೆಯಾಗಲಿ, ಯೋಜನೆಯಾಗಲಿ ಇಲ್ಲ.
ಬೆಂಗಳೂರು ಕಾಂಕ್ರಿಟ್ ಕಾಡಾಗಿದೆ. ತುಂಡು ಭೂಮಿಯನ್ನು ಬಿಡದಂತೆ ರಿಯಲ್ ಎಸ್ಟೇಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಾಲ್ ಗಳು ಮತ್ತಿತ್ತರ ವಾಣಿಜ್ಯ ಬಳಕೆಯ ಕಟ್ಟಡಗಳು ಎಲ್ಲ ಮಿತಿಯನ್ನು ಮೀರಿ ನಿರ್ಮಾಣಗೊಳ್ಳುತ್ತಿವೆ. ಅದರೊಂದಿಗೆ ಕೆಳ ರಸ್ತೆ, ಮೇಲು ರಸ್ತೆ. ಮೆಟ್ರೋ ರೈಲಿಗಾಗಿ ಸಾಕಷ್ಟು ಮರಗಳ ಮಾರಣ ಹೋಮ ನಡೆದಿದೆ. ಇದರಿಂದ ಬೆಂಗಳೂರಿಗಿರುವ 'ಹಸಿರು ನಗರಿ' ಎಂಬ ಪಟ್ಟಕ್ಕೂ ಧಕ್ಕೆ ಬಂದಿದೆ. ಅದ್ದರಿಂದ ಈ ಸ್ಥಳದಲ್ಲಿ ಉದ್ಯಾನವನ ನಿರ್ಮಿಸುವುದೇ ಸೂಕ್ತ ಎಂದು ಬಹುಪಾಲು ಜನರ ಅಭಿಪ್ರಾಯ.
'ಇಂದು ಬೆಂಗಳೂರಿನ ಟ್ರೇಡ್ ಮಾರ್ಕ್ ನಂತಿರುವುದು ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಉದ್ಯಾನ ವನಗಳು. ಇವುಗಳೊಂದಿಗೆ ಅನೇಕ ಚಿಕ್ಕ ಪುಟ್ಟ ಉದ್ಯಾನವನಗಳಿವೆ. ಇಲ್ಲಿ ಉದ್ಯಾನ ನಿರ್ಮಿಸಿದ್ದೆ ಆದರೆ ಇದನ್ನು ಲಾಲ್ ಭಾಗ್. ಕಬ್ಬನ್ ಪಾರ್ಕ್ ಗಳ ಮಟ್ಟಕ್ಕೆ ಅಥವಾ ಅವುಗಳನ್ನು ಮೀರಿಸುವಂತೆ ಮಾಡಬಹುದು' ಎನ್ನುತ್ತಾರೆ ವಿದ್ಯಾನಗರದ ಶ್ರೀಧರ್ ದೀಕ್ಷಿತ್.
ಉದ್ಯಾನವನ ಎಂದೊಡನೇ 50 ಮರ, 25 ಕಲ್ಲು ಬೆಂಚುಹಾಕಿ ಪ್ರೇಮಿಗಳಿಗೆ, ಜಾಗಿಂಗ್, ವಾಕಿಂಗ್ ಮಾಡುವವರಿಗೆ ಸೀಮಿತ ಮಾಡುವುದರ ಬದಲು ನಾನಾ ಔಷಧೀಯ ಗುಣವಿರುವ ಗಿಡಮರಗಳನ್ನು ಜೊತೆಜೊತೆಗೆ ಅಪರೂಪದ ವಿನಾಶದಂಚಿನಲ್ಲಿರುವ ಮತ್ತು ಇನ್ನಿತರ ಕಾರಣಗಳಿಗಾಗಿ ಉಪಯುಕ್ತವಾಗಿರುವ ಗಿಡಮರಗಳನ್ನು ಬೆಳೆಸಿದ್ದೆ ಆದಲ್ಲಿ ಇದು ಜಗತ್ತಿನ ಮಹತ್ವದ ಉದ್ಯಾನವೆಂದು ಕರೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದು ಪರಿಸರ ಉಳಿಸುವಿಕೆಗಿನ ಸರಕಾರದ ಬದ್ದತೆಯನ್ನು ಕೂಡ ಎತ್ತಿಹಿಡಿಯುತ್ತದೆ. ಹೊಗೆ. ಧೂಳು ಮುಂತಾದ ಕಲ್ಮಶಗಳನ್ನೆ ಸೇವಿಸಿ ಸೇವಿಸಿ ಜಡ್ಡುಗೊಂಡಿರುವ ಬೆಂಗಳೂರಿಗರ ಮೂಗಿಗೆ, ಕಣ್ಣಿಗೆ ಸ್ವಲ್ಪ ಮಟ್ಟಿನ ಆಹ್ಲಾದತೆಯನ್ನು ನೀಡಬಲ್ಲದು ಎನ್ನುತ್ತಾರೆ ಅವರು.
ಇಲ್ಲೊಂದು ಮೃಗಾಲಯ ನಿರ್ಮಿಸುವುದರ ಬಗ್ಗೆಯೂ ಸರಕಾರ ಗಂಭೀರವಾಗಿ ಚಿಂತಿಸಬಹುದು. ಬೆಂಗಳೂರಿನಲ್ಲಿ ಎಲ್ಲವೂ ಇದೆ. ಆದರೆ ಮೃಗಾಲಯವೊಂದಿಲ್ಲ. ಈ ಸ್ಥಳ ಬಿಟ್ಟರೆ ಮೃಗಾಲಯ ನಿರ್ಮಿಸಲು ಬೇರೆ ಪ್ರಶಸ್ತ ಜಾಗ ಇಷ್ಟು ಸುಲಭವಾಗಿ ದೊರಕುವುದು ಅನುಮಾನ. ಮೃಗಾಲಯ ನಿರ್ಮಿಸಿದ್ದೆ ಆದರೆ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ವಿಜಯನಗರದ ವೆಂಕಟೇಶ್ ಗೌಡರ ಅಭಿಪ್ರಾಯ.
ಆದರೆ ಗೋವಿಂದರಾಜನಗರದ ಶ್ರೀನಿವಾಸ್ ಪ್ರಕಾರ, ಇಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸರಕಾರ ಯೋಚಿಸುವುದು ಉತ್ತಮ. ನಗರದ ದರ್ಶನ ಮಾಡಿಸಲು ಇಲ್ಲೊಂದು ವೀಕ್ಷಣ ಗೋಪುರ ರಚಿಸಬಹುದು. ಇದರಿಂದ ಬೆಂಗಳೂರಿಗರಿಗೆಯೇ ಅಪರಿಚಿತವಾಗುತ್ತಿರುವ ನಗರವನ್ನು ಪರಿಚಯ ಮಾಡಿಕೊಳ್ಳಬಹುದು.
ಈ ಮೂರು ಸಾಧ್ಯತೆಗಳನ್ನು ಒಟ್ಟಿಗೆ ಸಾಕರಗೊಳಿಸಲು ಸಾಧ್ಯವಿದೆ ಕೂಡ.
ನಗರದ ದಟ್ಟಣೆಯ ನಡುವೆ ನಿಲುಗಡೆಗೆ ಎಲ್ಲೂ ತಾಣವೇ ಇಲ್ಲದಂತಾಗಿದೆ. ಅದ್ದರಿಂದ ಈ ಸ್ಥಳವನ್ನು ವಾಹನ ನಿಲುಗಡೆ ತಾಣವನ್ನಾಗಿ ಬಳಸಿಕೊಳ್ಳಬಹುದು. ಹಾಗಂತ ಇದನ್ನು ಸಂಪೂರ್ಣ ನಿಲುಗಡೆಗೂ ಬಳಸಿಕೊಳ್ಳಲು ಆಗದು. ಕಾರಣ ಇಷ್ಟು ವಿಶಾಲ ಸ್ಥಳದಲ್ಲಿ ನಿಲ್ಲಿಸಬಹುದಾದಷ್ಟು ವಾಹನ ಇತ್ತ ಬರುವುದೂ ಇಲ್ಲ. ಒಂದಿಷ್ಟು ಜಾಗ ಇದಕ್ಕಾಗಿ ಬಳಸಿಕೊಳ್ಳಬಹುದು ಎಂಬ ಸಲಹೆ ನೀಡುತ್ತಾರೆ ವಸಂತನಗರದದ ಶೇಖ್ ಅಬ್ದುಲ್ ರಶೀದ್.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಗಳು ತುಂಬಿಕೊಂಡು ಕೆಲವೊಮ್ಮೇ ಇಡೀ ಸಂಚಾರಿ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ. ಅದ್ದರಿಂದ ಅಲ್ಲಿಂದ ಒಂದಿಷ್ಟು ಬಸ್ ಗಳನ್ನು ಇಲ್ಲಿಗೆ ವರ್ಗಾಯಿಸಿ ಇಲ್ಲಿಂದಲೆ ಸಾಗುವಂತೆ ಮಾಡಬಹುದು ಎಂಬುದು ಶೇಷಾದ್ರಿಪುರದ ನಾಗರಾಜ್ ಅಭಿಪ್ರಾಯ.
ಒಟ್ಟಿನಲ್ಲಿ ಬೆಂಗಳೂರಿನ ಮುಂದಿನ ಬೆಳವಣಿಗೆಯಲ್ಲಿ ಅತ್ಯಂತ ಉಪಯುಕ್ತ ಪಾತ್ರ ವಹಿಸಲಿರುವ ಈ ಜಾಗ ಮತ್ತೊಂದು ಸಮಸ್ಯೆಯಾಗುವ ಬದಲು ಇರುವ ಸಮಸ್ಯೆಗೆ ಪರಿಹಾರವಾಗಲಿ ಎಂಬುದೇ ಬಹುಪಾಲು ಜನರ ಆಶಯ. ಸರಕಾರ ಕೂಡ ಈ ನಿಟ್ಟಿನಲ್ಲಿ ಯೋಚಿಸಲಿ.

Tuesday, June 23, 2009

ಬಿಜೆಪಿ ನಾಯಕರು ಕಥೆ ಹೇಳುತ್ತ ಕೂರಬೇಕಾದೀತು, ಎಚ್ಚರ!


ಬಿಜೆಪಿ ಕಳೆದ ಲೋಕಸಭೆಯಲ್ಲಿ ಇಷ್ಟು ಹೀನಾಯ ಪ್ರದರ್ಶನ ನೀಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅದರೆ ಫಲಿತಾಂಶ ಪ್ರಕಟವಾದೊಡನೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದದ್ದು ನಿರೀಕ್ಷಿತವಾಗಿತ್ತು. ವಾಸ್ತವವಾಗಿ ಚುನಾವಣಾಪೂರ್ವದಲ್ಲೇ ಪಕ್ಷದಲ್ಲಿ 'ಎಲ್ಲವೂ ನೆಟ್ಟಗಿರ ಆದರೂ ನಾವೆಲ್ಲ ಒಂದೇ ಎಂಬ ಮುಖವಾಡತೊಟ್ಟು ಪಕ್ಷ ಚುನಾವಣೆ ಎದುರಿಸಿತ್ತು.

ಭಿನ್ನಮತ, ಬಂಡಾಯ ಮತ್ತು ಪಕ್ಷದಿಂದ ಹೊರಹೋಗುವುದು, ಹೊರಹಾಕುವುದು ಭಾರತೀಯ ರಾಜಕಾರಣಕ್ಕೆ ತೀರಾ ಪರಿಚಿತ ಸಂಗತಿ. ದೇಶದ ಜನರಿಗೆ ಇದರಲ್ಲೇನು ಹೊಸದು ಕಾಣಿಸೋದಿಲ್ಲ. ಆದರೆ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮ್ಮ ರಾಜಕೀಯ ವ್ಯವಸ್ಢೆಯಲ್ಲಿ ಒಂದು ಅಪರಿಚಿತ ವಾತವರಣ ಸೃಷ್ಟಿಸಿಬಿಟ್ಟಿದೆ. 'ಪಾರ್ಟಿ ವಿತ್ ಡಿಫರೆನ್ಸ್' ಎಂದು ಬೀಗುತ್ತಿದ್ದವರು 'ಡಿಫರೆನ್ಸ್ ಇನ್ ಪಾರ್ಟಿ’ಯಿಂದ ನರಳುತ್ತಿದ್ದಾರೆ.

ಭಿನ್ನಮತ ಬಿಜೆಪಿಗೆ ಹೊಸದಲ್ಲ. ವಾಜಪೇಯಿ ಮತ್ತು ಅಡ್ವಾಣಿ ಅದೇಷ್ಟೆ ಅತ್ಮೀಯರಾಗಿದ್ದರೂ ಕೂಡ ಪಕ್ಷದಲ್ಲಿ ಹಿಂದಿನಿಂದಲೂ ವಾಜಪೇಯಿ ಬಣ ಮತ್ತು ಅಡ್ವಾಣಿ ಬಣ ಎಂಬ 'ಬಣ ಸಂಸ್ಕ್ರತಿ' ಗುಪ್ತಗಾಮಿನಿಯಾಗಿ ಹರಿಯುತ್ತಲೆ ಇತ್ತು. ಆದರೆ ಅದು ಎಂದಿಗೂ ಭಿನ್ನಮತದ ಸ್ವರೂಪ ಪಡೆದಿರಲಿಲ್ಲ. ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ 2004ರಲ್ಲಿ ಅಧಿಕಾರ ಕಳೆದುಕೊಂಡದ್ದೆ ತಡ ಭಿನ್ನಮತದ ಗೆದ್ದಲು ಪಕ್ಷವನ್ನು ಕೊರೆಯುತ್ತಲೆ ಬಂದಿತ್ತು. ಈ ಗೆದ್ದಲು ಪಕ್ಷದ ಎಲ್ಲೊ ಹುಟ್ಟಿಕೊಂಡಿರಲಿಲ್ಲ ಬಿಜೆಪಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರಲ್ಲಿ ಮತ್ತು ಅವರಿಂದಲೇ ಹುಟ್ಟಿಕೊಂಡಿತ್ತು. ಇದು ಉಮಾಭಾರತಿ, ಕಲ್ಯಾಣ್ ಸಿಂಗ್, ಗೋವಿಂದಾಚಾರ್ಯ ಮುಂತಾದ ಮೂಂಚೂಣಿ ನಾಯಕರು ಪಕ್ಷದಿಂದ ಹೊರ ಹೋಗುವಂತೆ ಮಾಡಿತ್ತು. ಇದರಿಂದ ಪಕ್ಷಕ್ಕೆ ನೇರವಾದ ಹೊಡೆತ ಬೀಳಲಿಲ್ಲ ಅದರೆ ಪಕ್ಷದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳು ಅಥವಾ ಯಾರ್‍ಯಾರೋ ಉನ್ನತ ಹುದ್ದೆ ಅಲಂಕರಿಸಲಾಂಭಿಸಿದರು. ಇವತ್ತಿನ ಎಲ್ಲಾ ಅಸಮಧಾನಗಳ ಮೂಲವಿರವುದೇ ಇಲ್ಲಿ!

ಬಿಜೆಪಿ ತನ್ನದು ಸಿದ್ಧಾಂತ ನಿಷ್ಠ ಪಕ್ಷವೆಂದು ಅದೇಷ್ಟೇ ಹೇಳಿಕೊಂಡರೂ ಅದು ಅ(ಒ)ಪ್ಪಿಕೊಂಡಿರುವುದು ವಾಜಪೇಯಿ ಮತ್ತು ಎಲ್. ಕೆ ಅಡ್ವಾಣಿಯವರ ನಡೆಯನ್ನು. ಅವರ ನಡೆ ನುಡಿ ಪಕ್ಷದ ಪಂಚಾಂಗವಾಯಿತು. ಆದರೆ ಅವರ ನಡೆ ನುಡಿಗೆ ಒಂದು ಚೌಕಟ್ಟಿತ್ತು ಆದನ್ನು ಮೀರಿದ ಅವರ ಚಿಂತನೆಯನ್ನಾಗಲಿ ಕಾರ್ಯವನ್ನಾಗಲೀ ಪಕ್ಷ ಸರ್ವಸಮ್ಮತವಾಗಿ ಒಪ್ಪಿಕೊಂಡಿರಲಿಲ್ಲ. ಉದಾಹರಣೆಗೆ ವಾಜಪೇಯಿ ರೈಲು ಮೂಲಕ ಪಾಕಿಸ್ತಾನಕ್ಕೆ ನೀಡಿದ ಭೇಟಿ ಮತ್ತು ಅದರೊಂದಿಗಿನ ಸ್ನೇಹ ಸಂಬಂಧಕ್ಕಾಗಿನ ಅವರ ಒತ್ತಾಸೆಗಳನ್ನು ಪಕ್ಷದಲ್ಲಿನ ಎಲ್ಲರೂ ಒಪ್ಪಿರಲಿಲ್ಲ. ಅದೇ ರೀತಿ, ಕಂದಹಾರ್ ವಿಮಾನ ಅಪಹರಣದ ಸಮಯದಲ್ಲಿ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗಾಗಿ ಭಾರತದ ಜೈಲಿನಲ್ಲಿದ್ದ ಪರಮ ಪಾತಕಿ ಉಗ್ರರನ್ನು ಅಪಹರಣಕಾರರ ಕೈಗೆ ಒಪ್ಪಿಸಿದ್ದನ್ನು ಕೂಡ. ಆದರೆ ಆಗ ಕೈಯಲ್ಲಿದ್ದ ಅಧಿಕಾರವೆಂಬ ಮಂತ್ರದಂಡ ಎಲ್ಲ ನವೆಗಳಿಗೂ ಮದ್ದರಿಯಿತು.

ಪಕ್ಷದ ಮತ್ತೊಬ್ಬ ನಾಯಕ ಅಡ್ವಾಣಿ, ಜಿನ್ನಾರನ್ನು 'ಜಾತ್ಯಾತೀತವಾದಿ' ಎಂದು ಕರೆದು ಇಕ್ಕಟ್ಟು ಸೃಷ್ಟಿಸಿಕೊಂಡರು. ವಿವಾದ ಹೆಮ್ಮರವಾಗಿ ಬೆಳೆಯಿತು, ಜಿನ್ನಾರನ್ನು ಜಾತ್ಯತೀತವಾದಿ ಎಂದದ್ದು ಪಕ್ಷದ ಸಿದ್ಧಾಂತಕ್ಕೆ ಮಾಡಿದ ಅಪಚಾರ ಎಂದೆ ಬಗೆಯಲಾಯಿತು. ಇದೆಲ್ಲದಕ್ಕಿಂತ ಹೆಚ್ಚು ರಾಷ್ಟೀಯ ಸ್ವಯಂ ಸೇವಕ ಸಂಘಕ್ಕೆ ಈ ಮಾತು ಅಪಥ್ಯವೆನಿಸಿತು. ಆಗ ಪಕ್ಷ ಅಧಿಕಾರದಲ್ಲಿರಲಿಲ್ಲ, ಅದ್ದರಿಂದ ಅಡ್ವಾಣಿ ಸಾಕಷ್ಟು ತೊಂದರೆಗೀಡಾದದ್ದು ಮಾತ್ರ ಸತ್ಯ. ಇದು ವ್ಯಕ್ತಿಗಿಂತ ಪಕ್ಷದ ಸಿದ್ಧಾಂತ ದೊಡ್ಡದು ಎಂಬುದಕ್ಕೆ ಪುರಾವೆ ಖಂಡಿತವಾಗಿಯೂ ಅಲ್ಲ. ಯಾಕೆಂದರೆ ಬಿಜೆಪಿಗೆ ತನ್ನ ಸಿದ್ಧಾಂತವೇ ಮುಖ್ಯ ಎಂಬುದಾದರೆ ಅವತ್ತೇ ಪಕ್ಷ ಅಡ್ವಾಣಿಯ ಮೇಲೆ ಉಳಿದ ಭಿನ್ನಮತೀಯರ ಮೇಲೆ ಕೈಗೊಂಡ ಕ್ರಮ ತೆಗೆದುಕೊಂಡು 'ಮುಖ ನೋಡಿ ಮಣೆ ಹಾಕುವುದು' ತನ್ನ ಸಂಸ್ಕ್ರತಿಯಲ್ಲ ಎಂದು ಸಾಬೀತು ಮಾಡುತ್ತಿತ್ತು. ಆದರೆ ಹಾಗಾಗಲಿಲ್ಲ. ಅಂದರೆ ಬಿಜೆಪಿಯಲ್ಲಿ ಪಕ್ಷ ನಿಷ್ಠೆ ವ್ಯಕ್ತಿ ನಿಷ್ಠೆಯೊಂದಿಗೆ ಮಿಳಿತವಾಗಿದೆ ಎಂದು ಅರ್ಥ ತಾನೇ?

ಪಕ್ಷದ ಈಗಿನ ಭಿನ್ನಮತಗಳತ್ತ ಗಮನ ಹರಿಸೋಣ. ಇವತ್ತು ಬಿಜೆಪಿ ಕೇಂದ್ರ, ತಾನು ಅಧಿಕಾರದಲ್ಲಿರುವ ಕರ್ನಾಟಕ ಮತ್ತು ಉತ್ತರಾಖಂಡದಲ್ಲಿ ಭಿನ್ನಮತದ ಸಮಸ್ಯೆ ಎದುರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಪಕ್ಷದ ಶೂನ್ಯ ಸಾಧನೆಯನ್ನು ಅಧರಿಸಿ ಅಲ್ಲಿನ ಕೆಲ ಶಾಸಕರು ಮುಖ್ಯಮಂತ್ರಿ ಬಿ.ಸಿ. ಖಂಡೂರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿನ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಈಶ್ವರಪ್ಪ ಬಣದ ಬಂಡಾಯದಲ್ಲಿ ಸೈಧಾಂತಿಕ ಕಾರಣಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಸೈಧಾಂತಿಕವಾಗಿ ನೋಡಿದರೆ ಈಶ್ವರಪ್ಪರೇ ನೈಜ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೇನೋ ಎಂದೆನಿಸುತ್ತದೆ. ಆದರೆ ಸದ್ಯ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲ.

ಪಕ್ಷದ ರಾಜ್ಯ ಘಟಕಗಳಲ್ಲಿನ ಭಿನ್ನಮತಿಯರಿಗೆ ಮಂಗಳಾರತಿ ಎತ್ತಬೇಕಾದವರೆ ಬೆಂಕಿ ಹಾಕಿಕೊಂಡು ಕುಣಿಯುತ್ತಿದ್ದಾರೆ!

ಕಳೆದ ಲೋಕಸಭಾ ಚುನಾವಣಾ ಸಂದರ್ಭ ಪಕ್ಷದ ಪಿಲಿಭಿತ್ ಅಭ್ಯರ್ಥಿಯಾಗಿದ್ದ ವರುಣ್ ಗಾಂಧಿ ಮಾಡಿದ ವಿವಾದಾಸ್ಪದ ಭಾಷಣಕ್ಕೆ ಬಿಜೆಪಿ ನಾಯಕರ ಪ್ರತಿಕಿಯಿಸಿದ ವಿಧಾನದಲ್ಲೇ ಪಕ್ಷದೊಳಗಿನ ಗೊಂದಲಗಳು ಬೆಳಕಿಗೆ ಬಂದಿದ್ದವು. ಅನಂತರ ಅಡ್ವಾಣಿಯ ನಂತರ ಮೋದಿ ಪಕ್ಷದ ಪ್ರಧಾನಿ ಅಭ್ಯರ್ಥಿಯೆಂಬ ಅರುಣ್ ಶೌರಿ ಮತ್ತು ಅರುಣ್ ಜೇಟ್ಲಿ ಹೇಳಿಕೆಗಳು ಈ ಗೊಂದಲವನ್ನು ಸಿಕ್ಕಾಗಿಸಿದವು.ಸುಧಾನ್ಷು ಮಿತ್ತಾಲ್ ರನ್ನು ಈಶಾನ್ಯ ರಾಜ್ಯಗಳ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ರಾಜನಾಥ್ ಸಿಂಗ್ ನೇಮಿಸಿದ್ದು ಜೇಟ್ಲಿಯ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ ಚುನಾವಣೋತ್ತರದಲ್ಲಿ ವರುಣ್ ಗಾಂಧಿಯನ್ನು ಚುನಾವಣಾ ಸೋಲಿಗೆ ಹೊಣೆಗಾರರಾನ್ನಾಗಿಸುವ ಪ್ರಯತ್ನ ಕೂಡ ನಡೆಯಿತು. ಇದೀಗ ಸುಧಿಂದ್ರ ಕುಲಕರ್ಣಿ, ಜಸ್ವಂತ್ ಸಿಂಗ್ ಮತ್ತು ಯಶವಂತ ಸಿನ್ಹಾರಂತ ಪ್ರಭಾವಿ ನಾಯಕರುಗಳು ಪಕ್ಷದಲ್ಲಿನ ಸಮಸ್ಯೆಗೆ ಪರಿಹಾರವಾಗುವ ಬದಲು ತಾವೇ ಒಂದು ಸಮಸ್ಯೆಯಾಗಿ ಪರಿವರ್ತನೆಗೊಂಡಿದ್ದಾರೆ.

ಇಲ್ಲಿ ಸಿನ್ಹಾ ಎತ್ತಿರುವ ಪ್ರಶ್ನೆಗಳಲ್ಲಿ ಖಂಡಿತವಾಗಿಯೂ ಸಾರವಿದೆ. ಅವರು ಪಕ್ಷದ ಕರ್ನಾಟಕ ಘಟಕದ ಉಸ್ತುವಾರಿ ವಹಿಸಿಕೊಂಡಿದ್ದರೂ ರಾಜ್ಯ ಬಿಜೆಪಿಯಲ್ಲಿ ಏನೇ ಅದರೂ ಅದು ತಲುಪುತ್ತಿದ್ದದ್ದು ಜೇಟ್ಲಿ ಬಳಿಗೆ. ಇದು ಕೂಡ ಸಿನ್ಹಾ ಅಸಮಧಾನಕ್ಕೆ ಕಾರಣವಾಗಿರಬಹುದು. ಇಂದು ಬಿಜೆಪಿಯ ಕೇಂದ್ರ ಮಟ್ಟದ ನಾಯಕರಲ್ಲಿ ಎಲ್ ಕೆ ಅಡ್ವಾಣಿ ಮತ್ತು ನರೇಂದ್ರ ಮೋದಿಯವರನ್ನು ಹೊರತುಪಡಿಸಿದರೆ ಬೇರೆ ನೈಜ ನಾಯಕರುಗಳೇ ಇಲ್ಲ. ಉಳಿದವರೆಲ್ಲ ಕೇವಲ ಬಾಯಿ ಮಾತಿನಿಂದ ಮತ್ತು ಬುದ್ಧಿ ಬಲದಿಂದ ನಾಯಕರೆಂದು ಗುರುತಿಸಿಕೊಳ್ಳುತ್ತಿರುವವರು. ಅವರಿಗೆ ಜನ ಬೆಂಬಲ ಮತ್ತು ಯಾವುದೇ ಹೋರಾಟದ ಹಿನ್ನೆಲೆಯಿಲ್ಲ. ಇದರೊಂದಿಗೆ ಸಂಘಟನೆಯಲ್ಲೂ ವಿಫಲರಾಗಿದ್ದಾರೆ. 'ಹೂವಿನೊಂದಿಗೆ ನಾರು ಸ್ವರ್ಗ ಸೇರಿತು' ಎಂಬಂತೆ ವಾಜಪೇಯಿ. ಎಲ್ ಕೆ ಅಡ್ವಾಣಿ ಮತ್ತು ಲಕ್ಷಾಂತರ ಕಾರ್ಯಕರ್ತರ ಹೆಸರು ಹೇಳಿಕೊಂಡು ಅವರು ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ.

ಬಿಜೆಪಿಯ ನಾಯಕರೆನಿಸಿಕೊಂಡಿರುವವರ ನಡುವಿನ ಕೆಸರೆರಚಾಟ ಅದರ ಮುಂದಿನ ರಾಜಕಿಯ ಭವಿಷ್ಯಕ್ಕೆ ಮತ್ತು ಪಕ್ಷಕ್ಕೆ ತೀರಾ ಕಂಟಕಪ್ರಾಯವಾಗಬಲ್ಲದು, ಅದೂ ಅಲ್ಲದೇ ಈಗ ಪಕ್ಷದೊಳಗೆ ಸೈಧಾಂತಿಕ ಗೊಂದಲಗಳು ಸೇರಿಕೊಂಡಿವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪಕ್ಷದ ಮಾತೃಸಂಸ್ಠೆ ಆರೆಸ್ಸೆಸ್ ಪಕ್ಷದಿಂದ ದೂರ ಸರಿಯುತ್ತಿದೆ. ಆರೆಸ್ಸೆಸ್ ನ ಹಿರಿಯ ನಾಯಕ ಬಾಬುರಾವ್ ವೈದ್ಯ ಪಕ್ಷದ ಹಿಂದುತ್ವ ಸಿದ್ಧಾಂತದೊಂದಿಗಿನ ಆಟವನ್ನು ಖಂಡಿಸಿ ಅದು ಈ ಸಿಧ್ಧಾಂತದಿಂದ ದೂರ ಸರಿಯುವುದೇ ಲೇಸು ಎಂದಿದ್ದಾರೆ. ಹೌದು, ಬಿಜೆಪಿ ಹಿಂದುತ್ವಕ್ಕೆ 1991ರ ಅಯೋಧ್ಯೆ ಚಳುವಳಿಯ ನಂತರ ಎಂದಿಗೂ ನ್ಯಾಯ ಸಲ್ಲಿಸಿಲ್ಲ. ಆದರೆ ಅದನ್ನೆ ತನ್ನ ಮುಖ್ಯ ಸಿಧ್ಧಾಂತ ಎಂದು ಹೇಳುತ್ತ ಬಂದಿದೆ. ಇದರಿಂದ ಹಿಂದೂಗಳು ಕೂಡ ಭ್ರಮನಿರಶನಗೊಂಡಿದ್ದಾರೆ ಅಲ್ಪಸಂಖ್ಯಾತರಂತು ಬಿಜೆಪಿಯಿಂದ ಮಾರುದ್ದ ದೂರ ನಿಂತಿದ್ದಾರೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ವಾಜಪೇಯಿ 'ಒಮ್ಮೆಯಾದರೂ' ದೇಶದ ಪ್ರಧಾನಿಯಾಗಲಿ ಎಂಬ ಜನತೆಯ ಆಶಯ ಮತ್ತು ಕಾಂಗ್ರೆಸ್ನಲ್ಲಿ ಆಗ ಇದ್ದ ನಾಯಕತ್ವದ ಸಮಸ್ಯೆಗಳು ಪ್ರಮುಖ ಕಾರಣವಾಗಿತ್ತು. ಆದರೆ ಇಂದು ವಾಜಪೇಯಿ ಹಾಸಿಗೆ ಹಿಡಿದಿದ್ದಾರೆ, ಕಾಂಗ್ರೆಸ್ನ ನಾಯಕತ್ವ ಬಹಳ ಗಟ್ಟಿಯಾಗಿದೆ. ಅದ್ದರಿಂದ ಬಿಜೆಪಿಯ ಮುಂದೆ ಇರುವುದು ಈಗ ಎರಡೇ ಆಯ್ಕೆ ಒಂದೋ ತನ್ನ ಸಿದ್ಧಾಂತವನ್ನು ಗಟ್ಟಿಮಾಡಿಕೊಳ್ಳಬೇಕು. ಇಲ್ಲ, ತನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡಿಕೊಂಡು ಅವರ ಪರ ದೇಶಾದದ್ಯಂತ ಒಂದು ಅಲೆ ಸೃಷ್ಟಿಯಾಗುವಂತೆ ನೋಡಿಕೊಳ್ಳಬೇಕು.

ಪಕ್ಷಕ್ಕೆ ಈಗಿನ ಭಿನ್ನಮತದ ತೊಡಕಿನಿಂದ ಹೊರಬರುವುದು ಅಷ್ಟು ಸುಲಭವಾಗಿಲ್ಲ, ಯಾಕೆಂದರೆ ಸಮಸ್ಯೆ ನಾನ ದಿಕ್ಕಿನಲ್ಲಿ, ನಾನ ಸ್ಥಳಗಳಲ್ಲಿ ಮತ್ತು ನಾನ ರೀತಿಯಲ್ಲಿ ಹುಟ್ಟಿಕೊಂಡಿದೆ. ಇಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಮತ್ತು ಸಿಧ್ಢಾಂತತೊಂದಿಗಿನ ಭಿನ್ನಮತ ಮುಖ್ಯವಾದದ್ದು. ಅದ್ದರಿಂದ ಏಕೌಷಧ ಈ ಸಮಸ್ಯೆಯನ್ನು ಪರಿಹರಿಸದು. ಅದೆಲ್ಲದಕ್ಕಿಂತ ಹೆಚ್ಚಾಗಿ ಈ ಸಮಸ್ಯೆಗಳನ್ನು ಪರಿಹರೀಸೋದು ಯಾರು? ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕೆಂದರೆ ಪಕ್ಷದಲ್ಲಿ ಯಾರು ಯಾರನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಬೆಳೆದಿದ್ದ ಬಿಜೆಪಿ ಈಗ ಇಳಿಜಾರಿನಲ್ಲಿ ಸಾಗುತ್ತಿದೆ. ಅದು ಪಾತಳ ಸೇರುವ ಮುಂಚೆ ಅದರ ನಾಯಕರುಗಳು ಎಚ್ಚೆತ್ತುಕೊಂಡರೆ ಕ್ಷೇಮ. ಇಲ್ಲ ಅಂದರೆ, ’ಹಿಂದೆ ಬಿಜೆಪಿಯೆಂಬ ಪಕ್ಷವಿತ್ತು, ಕಮಲ ಅದರ ಚಿಹ್ನೆಯಾಗಿತ್ತು. ಅದು ದೇಶವನ್ನು 6 ವರ್ಷಗಳ ಕಾಲ ಆಳಿತ್ತು’ ಎಂದು ಬಿಜೆಪಿ ನಾಯಕರುಗಳು ತಮ್ಮ ಮಕ್ಕಳಿಗೆ ಕಥೆ ಹೇಳುತ್ತ ಕೂರಬೇಕಾದೀತು! ಎಚ್ಚರ!

Thursday, May 21, 2009

ಈ ಸೋಲು ಆಡ್ವಾಣಿಯದ್ದು ಮಾತ್ರವಲ್ಲ ಸೋನಿಯಾ ಗಾಂಧಿಯದ್ದು ಹೌದು!

ಲೋಕಸಭೆಗೆ ನಡೆದ ಚುನಾವಣೆ ನಿರೀಕ್ಷಿತ ‌ಫಲಿತಾಂಶ ನೀಡಿದರೂ ಒಂದು ಅಚ್ಚರಿ ಮಾತ್ರ ಎಲ್ಲರಿಗೂ ಕಾದಿತ್ತು. ಅದೇ ಕಾಂಗ್ರೆಸ್ ಗೆ ದಕ್ಕಿದ ಸ್ಥಾನಗಳು! ಇದು ಕಾಂಗ್ರೆಸ್ ಪಕ್ಷದ ಅದ್ಬುತ ಬೆಳವಣಿಗೆ ಎಂದೆನಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ಇದು ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಆದ ಮುಖಭಂಗ!
ಹಿಂದಿನ ಅಂದರೆ ೨೦೦೪ ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅಗ ಆಡಳಿತ ನಡೆಸುತ್ತಿದ್ದ ಎನ್‌ಡಿಎ ಈ ಚುನಾವಣೆ ’ಗೆದ್ದೆ ಗೆಲ್ಲುತ್ತೇವೆ’ ಎಂಬ ಹುಮ್ಮಸಿನಲ್ಲಿ ಪಡೆದುಕೊಂಡ ’ಶಾಕ್’ ಕೂಡ ಒಂದು ಅಚ್ಚರಿಯೇ! ಆ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್‌ನ ಗೆಲುವು ಅನ್ನುವುದಕ್ಕಿಂತ ಬಿಜೆಪಿಯ ಸೋಲು ಅನ್ನುವುದು ಹೆಚ್ಚು ಸೂಕ್ತ. ಆ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ’ಜಾತ್ಯತೀತತೆ’ ಎಂಬ ’ಸಿಮೆಂಟ್’ ಬಳಸಿ ಯುಪಿಎ ಎಂಬ 'ಕಟ್ಟಡ' ಕಟ್ಟಿಕೊಂಡು ೫ ವರ್ಷಗಳ ಆಡಳಿತ ನಡೆಸಿದ್ದು ಎಲ್ಲರಿಗೂ ತಿಳಿದಿರುವಂತದ್ದೆ.
ಇದೀಗ ನನ್ನ ಮುಖ್ಯ ಪ್ರಶ್ನೆಗೆ ಬರುತ್ತೆನೆ, ಅಂದು ಕಾಂಗ್ರೆಸ್ ಪಕ್ಷ ಶ್ರೀಮತಿ ಸೋನಿಯಾ ಗಾಂಧಿಯವರ ನೇತ್ರತ್ವದಲ್ಲಿ ಚುನಾವಣೆ ಎದುರಿಸಿತ್ತು. ಆದರೆ ಈ ಬಾರಿ ಸೋನಿಯಾ ಯುಪಿಎ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದರೂ ಕೂಡ ಅವರ ಮುಂದಾಳತ್ವದಲ್ಲೇ ಕಾಂಗ್ರೆಸ್ ಮತಯಾಚಿಸಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅದು ಪ್ರಧಾನಿ ಮನಮೋಹನ್ ಸಿಂಗ್‌ ಮತ್ತು ಅವರ ಸರ್ಕಾರದ ಸಾಧನೆಯ ಆಧಾರದಲ್ಲಿ ಜನರ ಬಳಿಗೆ ಬಂದಿತ್ತು. ಒಟ್ಟಿನಲ್ಲಿ ಇಲ್ಲಿ ಮನಮೋಹನ್ ಸಿಂಗ್‌ರೇ ಕೇಂದ್ರಬಿಂದು. ಆದ ಕಾರಣ ಈ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದದ್ದು ಸಿಂಗ್‌ಗೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಳಿ ಇದ್ದದ್ದು ೧೪೫ ಸೀಟುಗಳು ಮಾತ್ರ. ಆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಸೋನಿಯಾ ಗಾಂಧಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಅದನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಇಲ್ಲಿ ಕಾಂಗ್ರೆಸಿಗರು ಎನ್‌ಡಿಎ ಆಡಳಿತದಿಂದ ಜನ ಬೇಸತ್ತಿದ್ದರು ಎಂದರೂ ಕೂಡ
ಅದಕ್ಕೆ ಪರ್ಯಾಯವಾಗಿ ಸೋನಿಯಾ ಗಾಂಧಿಯವರನ್ನು ಅವರು ಒಪ್ಪಿಕೊಂಡಿರಲಿಲ್ಲ ಎಂಬುದನ್ನು ಈ ಸಂಖ್ಯೆ ಸ್ಪಷ್ಟವಾಗಿ ಸೂಚಿಸುತ್ತದೆ. ಇದರ ಒಟ್ಟು ತಾತ್ಪರ್ಯ ಸೋನಿಯಾರನ್ನು ದೇಶದ ಜನರು ಕಾಂಗ್ರೆಸ್‌ನ ನಾಯಕಿಯಾಗಿ ಒಪ್ಪಿಕೊಳ್ಳುತ್ತಾರೆಯೇ ಹೊರತು ದೇಶದ ನಾಯಕಿಯಾಗಿ ಅಲ್ಲ.
ಈ ಚುನಾವಣೆಯಲ್ಲಿ ಅದೇ ಪಕ್ಷ ಕಳೆದ ಸಲಕ್ಕಿಂತ ೬೧ ಸೀಟ್‌ಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಇದು ಸಿಂಗ್ ಸೋನಿಯಾರಿಗಿಂತ ಪ್ರಬಲ ನಾಯಕ ಎಂಬುದರ ದ್ಯೋತಕವಲ್ಲದೆ ಮತ್ತೇನು? ಮತ್ತೊಂದು ಗಮನಿಸಬೇಕಾದ ಆಂಶವೆಂದರೆ ಸಿಂಗ್‌ರನ್ನು ತನ್ನ ನಾಯಕನನ್ನಾಗಿ ದೇಶವೂ ಒಪ್ಪಿಕೊಂಡಿದೆ, ವಾಸ್ತವವಾಗಿ ಸಿಂಗ್‌ಗೆ ಅವರ ಪಕ್ಷದಲ್ಲೆ ನಾಯಕನ ಸ್ಥಾನವಿಲ್ಲ! ಇದರರ್ಥ ನೆಹರು ಕುಟುಂಬದವರಲ್ಲದೆ ಅನೇಕ ನಾಯಕರು ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ ಮತ್ತು ಜನರೂ ಕೂಡ ಅವರನ್ನು ತಮ್ಮ ನಾಯಕನನ್ನಾಗಿ ಅಂಗೀಕರಿಸುತ್ತಾರೆ ಎಂದು ತಾನೇ? ಆದರೆ ಕಾಂಗ್ರೆಸಿಗರು ಮತ್ತೆ ಮತ್ತೆ ಆ ಕುಟುಂಬದ ಹಿಂದೆಯೇ ಮೊರೆ ಹೋಗುತ್ತಿರುವುದು ವಿಪರ್ಯಾಸವೇ ಸರಿ.
ಇಂದಿಗೂ ಕಾಂಗ್ರೆಸ್‌ ಪಕ್ಷದ ಬ್ಯಾನರ್‍, ಕಛೇರಿ ಅಥವಾ ಕಾರ್ಯಕ್ರಮಗಳಲ್ಲಿ ಶಾಶ್ವತವಾಗಿರುವುದು ಜವಹರ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯ ಚಿತ್ರಗಳು ಮತ್ತದರೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಧ್ರರ ಚಿತ್ರಗಳು ಮತ್ತು ಸಾಧನೆಗಳು. ಮನಮೋಹನ್ ಸಿಂಗ್‌ಗೆ ಈಗ ಪ್ರಧಾನ್ಯತೆ ಸಿಕ್ಕಿದ್ದರೂ ಕೂಡ ಅದು ಸೀಮಿತ ಆವಧಿಗೆ ಮಾತ್ರ.
ಉದಾಹರಣೆಗೆ ಕಾಂಗ್ರೆಸ್ ಪಕ್ಷದಿಂದಲೇ ದೇಶದ ಪ್ರಧಾನಿಗಳಾದ ಲಾಲ್ ಬಹುದ್ದೂರ್‍ ಶಾಸ್ತ್ರಿ ಅಥವಾ ಪಿ.ವಿ ನರಸಿಂಹ ರಾವ್‌ರ ಬಗೆಗೆ ಆ ಪಕ್ಷ ತೋರಿಸುತ್ತಿರುವ ಅನಾದರ ನಮ್ಮ ಕಣ್ಣ ಮುಂದೆ ಇದೆ.
ಬಿಜೆಪಿಯ ಎರಡನೇ ಪೀಳಿಗೆ ನಾಯಕರು ಕಾಯುವದರಲ್ಲಿ ತಪ್ಪೇನಿಲ್ಲ!
ಇನ್ನು ಬಿಜೆಪಿ ಈ ಸೋಲಿನಿಂದ ತೀವ್ರ ಹತಾಶವಾಗಿದ್ದು ಸಿಕ್ಕ ಸಿಕ್ಕವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಅದು ಯಾವ ಮಟ್ಟಕ್ಕೆ ಬಂದು ಮುಟ್ಟಿದೆಯೆಂದರೆ ತನ್ನ ಮೂಲ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವವರನ್ನೇ ಅಸ್ಪ್ರಶ್ಯರು ಎಂದು ಪರಿಗಣಿಸುಷ್ಟು. ಇದು ಅದರ ಸೈದ್ಧಾಂತಿಕ ಟೊಳ್ಳುತನವನ್ನು ಬಯಲು ಮಾಡಿದೆ.
ಇಂದು ದೇಶದಾದ್ಯಂತ ಬಿಜೆಪಿಯೆಂಬ ಹೆಸರನ್ನು ನೀವು ಕೇಳುತ್ತಿರುವಿರೆಂದರೆ ಅದಕ್ಕೆ ಕಾರಣ ಅದು ಬಲವಾಗಿ ಪ್ರತಿಪಾದಿಸುತ್ತ ಬಂದಿರುವ ಹಿಂದುತ್ವ. ಅದು ಎಲ್ಲಿ ತನಕ ಹಿಂದುತ್ವವನ್ನೇ ತನ್ನ ಚುನಾವಣಾ ವಿಷಯವನ್ನಾಗಿಸಿಕೊಂಡಿತ್ತೋ ಅಲ್ಲಿ ತನಕ ಅದು ಲೋಕಸಭೆಯಲ್ಲಿ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಬಂದಿತ್ತು ಮತ್ತು ಆಡಳಿತದ ಚುಕ್ಕಾಣಿಯನ್ನು ಕೂಡ ಹಿಡಿಯಿತು. ಆದರೆ ಅದೇ ದಿನಗಳಲ್ಲಿ ತನ್ನ ಮೂಲ ಸಿದ್ಧಾಂತದಿಂದ ದೂರ ಸರಿಯಲಾರಂಭಿಸಿತು ಅಂದಿನಿಂದ ಅದರ ಕೆಟ್ಟದಿನಗಳು ಶುರುವಾಯಿತು.
ಅದರ ಸೈದ್ಧಾಂತಿಕ ಪಲಾಯನವಾದಕ್ಕೆ ಇತ್ತೀಚಿನ ನಿದರ್ಶನವೆಂದರೆ ವರುಣ್ ಗಾಂಧಿಯವರ ಹೇಳಿಕೆಗೆ ಅದು ಪ್ರತಿಕ್ರಿಯಿಸಿದ ರೀತಿ. ಅವರನ್ನೇ ಬಿಜೆಪಿಯ ಕಳಪೆ ನಿರ್ವಹಣೆಗೆ ಹೊಣೆಗಾರರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ಸಲದ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ಗಲಭೆಯೆ ಪಕ್ಷದ ಸೋಲಿಗೆ ಕಾರಣ ಎಂದು ಅದು ಕಂಡುಕೊಂಡಿತ್ತು. ಆದರೆ ಇಂದು ಬಿಜೆಪಿ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತ ಇದೆ, ಒಮ್ಮೆ ದೇಶವನ್ನೂ ಆಳಿತ್ತು ಹಾಗೆ ಲೋಕಸಭಾ ಚುನಾವಣೆಗಳಲ್ಲಿ ಲೀಲಾಜಾಲವಾಗಿ ೧೦೦ಕ್ಕಿಂತ ಹೆಚ್ಚು ಸೀಟ್‌ಗಳನ್ನು ಪಡೆಯುತ್ತದೆ ಎಂದಾದರೆ ಅದಕ್ಕೆ ಕಾರಣ ೧೯೯೦ರಲ್ಲಿ ನಡೆದ ಅಯೋಧ್ಯ ಚಳುವಳಿ. ಅದು ಹಿಂದುತ್ವದ ಹೆಸರಲ್ಲೇ ನಡೆದದ್ದು ಅಲ್ಲವೇ? ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಕರ್ನಾಟಕದಿಂದ ಒಂದು ಅಂಶವನ್ನು ಕಲಿತುಕೊಳ್ಳುವ ಜರೂರತ್ತಿದೆ ಅದೇನೆಂದರೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಲ್ಲಿ ಹಿಂದುತ್ವದ ಮಂತ್ರ ಪಠಿಸಿತ್ತೋ ಅಲ್ಲೆಲ್ಲಾ ವಿಜಯಶಾಲಿಯಾಗಿದೆ! ಇದರರ್ಥ ಹಿಂದುತ್ವಕ್ಕೆ ಮತಗಳಿಸಿ ಗೆಲ್ಲಿಸಿ ಕೊಡುವ ಸಾಮರ್ಥ್ಯವಿದೆ ಎಂಬದು ತಾನೇ?
ಇನ್ನು ಮುಂದಿನ ಲೋಕಸಭೆ ಚುನಾವಣೆಗೆ ಸಾಕಷ್ಟು ಸಮಯಾವಕಾಶವಿದೆ. ಆದ್ದರಿಂದ ಈಗಲೇ ನಾಯಕತ್ವದ ಬಗೆಗಿನ ಗೊಂದಲ ಪರಿಹರಿಸಿಕೊಂಡು ಸೈದ್ಧಾಂತಿಕ ನಿಷ್ಟೆ ಮೆರೆದರೆ ಮುಂದಿನ ಲೋಕಸಭಾ ಚುನಾವಣೆ ಬಹುಶ: ೨೦೧೪ (ಇದು ನಿಜವಾಗಲಿ ಎಂಬ ಆಶಯದೊಂದಿಗೆ)ರಲ್ಲಿ ಏಕಾಂಗಿಯಾಗಿ ಬಹುಮತ ಪಡೆಯುವ ಪಡೆಯುವ ಸಾಧ್ಯತೆ ಕಡಿಮೆ ಇದ್ದರು ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಬಲ್ಲದು. ಬಿಜೆಪಿಗೆ ೨೦೦+ ಸೀಟ್ ಸಿಕ್ಕರೆ ನಂತರ ಮಿತ್ರಪಕ್ಷಗಳನ್ನು ಹುಡುಕಿಕೊಳ್ಳವಿದು ಕಷ್ಟವಲ್ಲ, ಅವೇ ಹುಡುಕಿಕೊಂಡು ಬರುತ್ತವೆ! ಅವುಗಳ ಅಧಿಕಾರಕ್ಕಾಗಿನ ಹಪಾಹಪಿ ಯಾವ ಪರಿಯದ್ದು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಅವುಗಳ ನಾಯಕರುಗಳು ತಮ್ಮ ಸ್ವಂತ ಮಾನ ಮಾರ್ಯಾದೆ ಬಿಟ್ಟು ವರ್ತಿಸುತ್ತಾರೆ ಇನ್ನು ಸಿದ್ಧಾಂತ ಸುಮ್ಮನೆ ಹೆಸರಿಗೆ ಮಾತ್ರ!
ಇಂದು ಬಿಜೆಪಿ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದರು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್, ಛತ್ತೀಸ್‌ಗಢದ ರಮಣ್ ಸಿಂಗ್ ಮತ್ತು ಗುಜರಾತಿನ ನರೇಂದ್ರ ಮೋದಿಯವರ ಆಡಳಿತ ಹೆಚ್ಚು ಗಮನ ಸೆಳೆದಿದೆ ಮತ್ತು ಉತ್ತಮವಾಗಿದೆ. ಆದರೆ ಮೊದಲ ಇಬ್ಬರಿಗಿಂತ ಮೋದಿ ಹೆಚ್ಚು ಜನಪ್ರಿಯ. ಇದಕ್ಕೆ ಕಾರಣಗಳು ಏನೇ ಇದ್ದರೂ ಅವರು ಬಿಜೆಪಿಯ ಮೂಲ ಸಿದ್ಧಾಂತ ಮತ್ತು ಪಕ್ಷ ಈಗ ಹೆಚ್ಚಾಗಿ ಪ್ರತಿಪಾದಿಸುವ ಪ್ರಗತಿ ಸಿದ್ದಾಂತ ಎರಡಕ್ಕೂ ಅಗತ್ಯವಾದ ಮುಖ ಹೊಂದಿದ್ದಾರೆ. ಒಂದು ರೀತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಆಡ್ವಾಣಿಯವರ ವ್ಯಕ್ತಿತ್ವದ ಸಮ್ಮೀಶ್ರಣ ಈ ಮೋದಿ! ಅವರು ಪಕ್ಷದ ಮುಂದಿನ ಪ್ರಧಾನಿ ಆಭ್ಯರ್ಥಿ ಎಂದಾದರೆ ಅವರನ್ನು ದೇಶದ ಮೂಲೆ ಮೂಲೆಗೂ ಪರಿಚಯಿಸುವ ಕೆಲಸ ಈಗಿನಿಂದಲೇ ಆಗಬೇಕು. ಅವರು ಪಕ್ಷದ ಪ್ರಧಾನಿ ಆಭ್ಯರ್ಥಿ ಅಲ್ಲ, ಎಂದಾದರೆ ಮತ್ತ್ಯಾರು? ಅದು ಕೂಡ ಈಗಾಲೇ ನಿರ್ಧಾರವಾಗಿರಲಿ. ಇದು ಅಂತರಿಕವಾಗಿದ್ದರೂ ಸರಿ. ಉಳಿದಂತೆ ಬಿಜೆಪಿಯಲ್ಲಿ ಅನೇಕ ನಾಯಕರಿದ್ದರೂ ಅವರ್‍ಯಾರಿಗೂ ಒಂದು ಹೋರಾಟದ ಅಥವಾ ಜನಬೆಂಬಲದ ನಾಯಕತ್ವವಿಲ್ಲ, ಇದರೊಂದಿಗೆ ಅವರು ಪಕ್ಷದ ಸಂಘಟನೆಯಲ್ಲೂ ವಿಫಲರಾಗಿದ್ದಾರೆ. ಈ ನಾಯಕರು ಕೇವಲ ಬುದ್ಧಿಶಕ್ತಿ ಮತ್ತು ಬಾಯಿಬಲದಿಂದ ನಾಯಕರಾದವರು. ಅವರೆಲ್ಲರನ್ನು ಅವರವರ ರಾಜ್ಯಗಳಿಗೆ ಕಳುಹಿಸಿ ಅಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುವಂತೆ ಮಾಡಬೇಕು ಇದರಿಂದ ಅವರಿಗೂ ಪಕ್ಷಕ್ಕೂ ಲಾಭವಿದೆ.
ಉದಾಹರಣೆಗೆ ವೆಂಕಯ್ಯ ನಾಯ್ಡು ಬಿಜೆಪಿಯಲ್ಲಿ ಮಹಾನ್ ನಾಯಕನೆಂದೇ ಗುರುತಿಸಲ್ಪಡುವವರು. ಆದರೆ ಆವರ ಸ್ವಂತ ರಾಜ್ಯ ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನ ಗೆಲ್ಲುವ ತಾಕತ್ತಿಲ್ಲ! ಅವರು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗುತ್ತಾರೆ. ಇನ್ನು ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರಧ್ಯಕ್ಷರು ಅವರು ಉತ್ತರ ಪ್ರದೇಶದವರು. ಕೇವಲ ದಶಕಗಳ ಹಿಂದೆ ಅಲ್ಲಿ ಬಿಜೆಪಿ ಅತ್ಯಂತ ಬಲಶಾಲಿಯಾಗಿತ್ತು ಆದರೆ ಇಂದು ಅಲ್ಲೇ ತೀರಾ ದುರ್ಬಲ. ಅಂದರೆ ಇದು ಅವರ ನಾಯಕತ್ವ ಎಂತದ್ದು ಎಂಬುದನ್ನು ಸೂಚಿಸುತ್ತದೆ.
ಬಿಜೆಪಿಯ ಇನ್ನುಳಿದ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಸ್ವಂತ್ ಸಿಂಗ್, ಯಶವಂತ ಸಿನಾ ಎಲ್ಲರೂ ಇದೇ ವರ್ಗಕ್ಕೆ ಸೇರಿದವರು. ಅಂದರೆ ಪಕ್ಷದ ಮೇಲ್‌ಸ್ತರದ ನಾಯಕರುಗಳೆಲ್ಲ ಇಂತವರೇ! ಒಂದೋ ಈ ನಾಯಕರನ್ನು ಸಂಘಟನೆಯ ಕೆಲಸಕ್ಕಾಗಿ ಅವರವರ ರಾಜ್ಯಕ್ಕೆ ಕಳುಹಿಸಬೇಕು ಅಥವಾ ಜನಬೆಂಬಲವಿರುವ ನಾಯಕರುಗಳಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕು. ಮುಂದಿನ ಚುನಾವಣೆಗಳಲ್ಲಿ ಪಕ್ಷ ಕೆಟ್ಟ ನಿರ್ವಹಣೆ ತೋರಿಸಿದರೆ ಈ ನಾಯಕರುಗಳನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಬೇಕು. ಆಗ ಜವಾಬ್ದಾರಿಯುತವಾಗಿ ಎಲ್ಲರೂ ಕಾರ್ಯನಿರ್ವಹಿಸುತ್ತಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಸರದಿಯಂತೆ ದೇಶವನ್ನಾಳಬೇಕು ಎಂಬುದು ನನ್ನ ಕನಸು. ಈಗ ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ನಡೆಯುತ್ತಿರುವಂತೆ. ಆಗ ಎರಡೂ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಮೂಡುತ್ತದೆ ಇದರಿಂದ ದೇಶಕ್ಕೆ ಒಳಿತಾಗುತ್ತದೆ ಎಂಬುದು ನನ್ನ ನಿರೀಕ್ಷೆ.
ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮಹಾನ್ ನಾಯಕರಾಗಿದ್ದರೂ ದೇಶದ ಪ್ರಧಾನಿಯಾಗಲು ೫೦ ವರ್ಷ ಕಾಯಬೇಕಾಯಿತು, ಇನ್ನು ಅವರಿಗಿಂತ ಒಂದು ಹಿಡಿ ಹೆಚ್ಚೇ ಎಂದೆನ್ನಬಹುದಾದ ಆಡ್ವಾಣಿಯವರಿಗೆ ಆ ಭಾಗ್ಯ ಸಿಗಲಿಲ್ಲ ಬಹುಶ: ಸಿಗಲಿಕ್ಕೂ ಇಲ್ಲ (ಇದು ಸುಳ್ಳಾಗಲೀ ಎಂಬ ಆಶಯ). ಅಂತದ್ದರಲ್ಲಿ ಈ ಇಬ್ಬರ ನಾಯಕತ್ವ ಗುಣ, ಸಂಘಟನಾ ಚಾತುರ್ಯ ಮತ್ತು ಹೋರಾಟದ ಹಿನ್ನೆಲೆಯಿಂದ ಮಾರುದ್ದ ದೂರದಲ್ಲಿರುವ ಬಿಜೆಪಿಯ ಎರಡನೇ ಪೀಳಿಗೆ ನಾಯಕರು ಕಾಯುವದರಲ್ಲಿ ತಪ್ಪೇನಿಲ್ಲ!

Thursday, April 23, 2009

ಯಡಿಯೂರಪ್ಪ ಎಂಬ ಬಿಜೆಪಿಯ ವಿರೋಧ ಪಕ್ಷ

’ಕತ್ತಲು ಕರಗುವುದು, ಕಮಲ ಅರಳುವುದು’ ಇದು ಜನಸಂಘ ಭಾರತೀಯ ಜನತಾ ಪಕ್ಷವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ ಭಾಷಣದಲ್ಲಿದ್ದ ಆಶಯ.
ಸಮಯ ಸಾಗಿದೆ, ವರ್ಷಗಳು ಉರುಳಿದೆ. ಕಮಲ ಅರಳಿದೆ. ಆದರೆ ಕತ್ತಲೆ...? ವಿಪರ್ಯಾಸವೆಂದರೆ ಕಮಲದೊಳಗೆ ಕತ್ತಲೆ ಆವರಿಸಿಕೊಳ್ಳತ್ತಿದೆಯಾ ಎಂಬ ಭಯ ಕಾಡುತ್ತಿದೆ. ಅದರಲ್ಲೂ ರಾಜ್ಯ ಬಿಜೆಪಿಯನ್ನು ಕಂಡಾಗ!
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉದಾತ್ತ ಗುರಿಗಳನ್ನಿಟ್ಟುಕೊಂಡು ಅದನ್ನು ಸಾಧಿಸಲು ಸನ್ಮಾರ್ಗವನ್ನೇ ಆಯ್ದುಕೊಂಡು ಅದರಲ್ಲೆ ಸಾಗುತಿರುವ ಸಂಘಟನೆ. ಬಿಜೆಪಿ ಅದರ ರಾಜಕೀಯ ಉದ್ದೇಶಗಳನ್ನು ಪೂರೈಸಲಿರುವ ಸಂಘಟನೆಯಾಗಿದ್ದುಕೊಂಡು ಯಾಕಿಷ್ಟು ನೈತಿಕ‌‌‌‌‌‌‌‌‌‌‌ ಅಧ:ಪತನಕ್ಕಿಡಾಗುತ್ತಿದೆ? ಎಂಬುದೇ ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದಿದೆ.
ಬಿಜೆಪಿ ಕೇಂದ್ರದಲ್ಲಿ ಸುಮಾರು ಆರು ವರ್ಷಗಳ ಕಾಲ ಆಡಳಿತ ನಡೆಸಿದ ಎನ್ ಡಿ ಎ ಮೈತ್ರಿಕೂಟದ ನೇತ್ರತ್ವ ವಹಿಸಿತ್ತು. ಉತ್ತಮ ಆಡಳಿತವನ್ನೇ ನೀಡಿತ್ತು ಕೂಡ. ಆದರೆ ಅಧಿಕಾರ ಕಳೆದುಕೊಂಡಿದ್ದು ಅನಿರೀಕ್ಷಿತ. ಅದರ ಬಗ್ಗೆ ಇಂದಿಗೂ ಒಂದು ಬಗ್ಗೆಯ ಅವ್ಯಕ್ತ ಖೇದವಿದೆ. ಇವತ್ತಿಗೂ ಒಬ್ಬ ಬಿಜೆಪಿ ಕಾರ್ಯಕರ್ತ ಆ ಆರು ವರ್ಷಗಳ ಬಗ್ಗೆ ಹೆಮ್ಮೆಯಿಂದ ಎದೆ ತಟ್ಟಿ ಮಾತನಾಡುತ್ತಾನೆ ಅದಾಗಿ ಐದು ವರ್ಷಗಳ ಬಳಿಕವೂ!
ಅದೇ ವಾಜಪೇಯಿ ಮತ್ತವರೊಂದಿಗೆ ಹೆಚ್ಚುವರಿಯಾಗಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಆದರ್ಶ ಎಂದು ಹೇಳುತ್ತ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯಿತು. ಅಧಿಕಾರಕ್ಕೆ ಬಂದದ್ದೆ ತಡ ಈ ಆದರ್ಶಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದೆ.
ಬರಿ ಹತ್ತು ತಿಂಗಳ ಹಿಂದೆ ಕರ್ನಾಟಕದ ಬಿಜೆಪಿ ಕಾರ್ಯಕರ್ತನಿಗೆ ಮಾದರಿ ಹೋರಾಟಗಾರ ಮತ್ತು ಆದರ್ಶ ವ್ಯಕ್ತಿಯಾಗಿದ್ದ ಯಡಿಯೂರಪ್ಪ ಇಂದು ಅದೇ ಕಾರ್ಯಕರ್ತರಿಗೆ ಅಸಹ್ಯ ಹುಟ್ಟಿಸಿದ್ದಾರೆ.
ಒಂದೂರು. ಅಲ್ಲಿ ಬಹು ಹಿಂದಿನಿಂದಲೂ ಒಂದು ಮನೆ ಅರೆಸ್ಸೆಸ್ ಮನೆಯೆಂದೆ ಗುರುತಿಸಲ್ಪಟ್ಟಿತ್ತು. ಆ ಮನೆಯ ಯಜಮಾನ ಜನಸಂಘದ ಕಾಲದಿಂದಲೂ ಇಂದಿನ ಬೆಜೆಪಿಯ ಮೂಲ ತತ್ವಗಳ ಪ್ರತಿಪಾದಕರು.ಅ ಊರಿನಲ್ಲಿ ಈ ಪಕ್ಷದ ಐಡೆಂಟಿಟಿಯಾಗಿ ಗುರುತಿಸಲ್ಪಟ್ಟವರು. ಹಿಂದುತ್ವದ ಕೆಲಸಕ್ಕಾಗಿ ತಮ್ಮ ಕೈಯಿಂದಲೇ ಖರ್ಚು ಮಾಡುತ್ತಿದ್ದವರು. ಸಂಘ ಅಥವಾ ಪಕ್ಷದಿಂದ ಅವರೇನು ಬಯಸಿದವರಲ್ಲ. ಸಂಘಟನೆಗಾಗಿ ಅವರು ಹಲವರ ವಿರೋಧ ಕಟ್ಟಿಕೊಂಡವರು. ಅವರು ಈಗಲೂ ಹಾಗೆಯೇ ಇದ್ದಾರೆ. ಅದೇ ಬಡತನ, ತನ್ನತನ ಮತ್ತು ಆದರ್ಶದೊಂದಿಗೆ!
ಅವರ ಮನೆಯಿಂದ ೨-೩ ಕಿಲೋಮಿಟರ್‍ ದೂರದಲ್ಲಿ ಹೊಸದೊಂದು ಮನೆ ನಿರ್ಮಾಣವಾಗಿದೆ. ಅದಕ್ಕೆ ಸುಮಾರು ೪೦ ಲಕ್ಷ ಖರ್ಚಾಗಿರಬಹುದು. ಆ ಮನೆ ತುಂಬಾ ಐಷಾರಾಮಿ ವಸ್ತುಗಳಿವೆ. ಮನೆ ಸದಸ್ಯರ ಹೆಸರಲ್ಲಿ ಸಾಕಷ್ಟು ಅಕೌಂಟ್ ಗಳಿವೆ. ಅವನಲ್ಲಿ ಕನಿಷ್ಟ ೧ ಕೋಟಿ ರೂಪಾಯಿಯ ಆಸ್ತಿಯಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ವಷðಗಳ ಹಿಂದೆ ಅವನು ಕೇವಲ ಎರಡು ಎಕರೆ ಭೂಮಿಗೆ ಒಡೆಯನಾಗಿದ್ದ. 'ಇಷ್ಟೆಲ್ಲಾ ಅಸ್ತಿಯನ್ನು ಸಂಪಾದಿಸುತ್ತೇನೆ' ಎಂದು ಅವನು ಕನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಅವನು ಇಷ್ಟೆಲ್ಲ ಹೇಗೆ, ಎಲ್ಲಿಂದ, ಯಾವಗ ಸಂಪಾದಿಸಿದ? ಉತ್ತರ ಸರಳವಾಗಿದೆ. ಅವನು ಯಡಿಯೂರಪ್ಪನವರ ಹತ್ತಿರದವರೊಬ್ಬರ ಆಪ್ತ ಕಾರ್ಯದರ್ಶಿಯಾಗಿದ್ದಾನೆ ಅಷ್ಟೇ!
ನನಗೆ ಗೊತ್ತಿರುವಂತೆ ಒಬ್ಬರು ಬಿಜೆಪಿ ನಾಯಕರಿದ್ದಾರೆ. ಅವರು ಎಲ್ಲಾ ರೀತಿಯಲ್ಲೂ ಚುನಾವಣೆಗೆ ಸ್ಪರ್ಧಿಸಲು ಆರ್ಹರಾಗಿದ್ದರು. ಆದರೆ ಚುನಾವಣೆಗೆ ಚೆಲ್ಲಲ್ಲು ಬೇಕಾಗಿದ್ದ ಹಣ ಅವರಲ್ಲಿರಲಿಲ್ಲ. ಅವರಿಗೆ ಟಿಕೆಟ್ ನಿರಾಕರಿಸಲು ಇದೇ ವಾಸ್ತವ ಕಾರಣ!
ರಾಜಕೀಯ ಪಕ್ಷಗಳ ಮುಖ್ಯ ಉದ್ದೇಶ ಅಧಿಕಾರ ಗಳಿಸುವುದು ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಯೇ, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತನ ಕನಸು ಆಡಳಿತ ನಡೆಸುವುದು. ಅವರಿಗೂ ಈ ಕನಸಿದೆ. ಇನ್ನಾವರು ಏನೂ ಮಾಡಬೇಕು? ತನ್ನ ’ಜನಪರ’ ಕೆಲಸ ಬಿಟ್ಟು ’ಹಣ’ ಮಾಡಬೇಕು ಅಷ್ಟೇ.
ಹತ್ತು ತಿಂಗಳ ಹಿಂದೆ ಅಂದರೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಅಂದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ದುಡಿದಿದ್ದ ಅನೇಕ ಕಾರ್ಯಕರ್ತರು ಈ ಚುನಾವಣ ಸಂದರ್ಭ ಮನೆಯಲ್ಲಿ ಕುಳಿತಿದ್ದಾರೆ. ಕಾರಣ, ಅವರು ಇಷ್ಟರವರೆಗೆ ಕಾಂಗ್ರೇಸ್, ತ್ರತೀಯ ರಂಗ ಏನು ಮಾಡಿದೆ, ಮಾಡಿತ್ತು, ಮಾಡಬಹುದು ಎಂದು ಹೇಳುತ್ತ ಬಂದಿದ್ದರೋ ಅದನ್ನೀಗ ಅವರ ಪಕ್ಷ ಮಾಡುತ್ತಿದೆ. ಇದನ್ನು ಜನ ಸಾಮಾನ್ಯ ಇವರಲ್ಲಿ ಪ್ರಶ್ನಿಸಿದರೆ ಅವರಿಗೆ ಉತ್ತರ ನೀಡಲು ಆಗುತ್ತಿಲ್ಲವಂತೆ.
ಹಿರಿಯ ಅರೆಸ್ಸೆಸ್ ಸ್ವಯಂಸೇವಕರೊಬ್ಬರ ಜತೆ ಮಾತನಾಡುತ್ತಿದೆ ಆಗ ಅವರು " ಹಿಂದೆ ಅರೆಸ್ಸೆಸ್ ಸ್ವಯಂಸೇವಕ ಎಂದರೆ ಊರಿಗೆ ಸ್ವಾಮೀಜಿ ಇದ್ದಂತೆ, ಜನರು ಅಷ್ಟು ಗೌರವದಿಂದ ಕಾಣುತ್ತಿದ್ದರು, ಇಂದಿಗೂ ಅರೆಸ್ಸೆಸ್ ಸ್ವಯಂಸೇವಕರಿಗೆ ಆ ಮಾರ್ಯಾದೆ ಇದ್ದೆ ಇದೆ. ಅದರೆ ಬಿಜೆಪಿಯಲ್ಲಿ ಎಲ್ಲೂ ಸಲ್ಲದ, ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದವರೇ ಕಾರ್ಯಕರ್ತರಾಗುತ್ತಿದ್ದರೆ ಮತ್ತು ಅವರಿಗೆ ಪಕ್ಷದಲ್ಲಿ ಒಳ್ಳೆ ಸ್ಥಾನಮಾನ ಸಿಗುತ್ತಿದೆ" ಈ ನೋವು ಯಡ್ಡಿಗೆ ಅರ್ಥವಾಗುತ್ತದೆಯೇ?
ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ೨೦೦೮ರಲ್ಲಿ ಅಣು ಒಪ್ಪಂದದ ಸಂಬಂಧ ನಡೆದ ಅವಿಶ್ವಾಸ ಗೊತ್ತುವಳಿ ಸಂದರ್ಭ ತಿಪ್ಪರಲಾಗ ಹಾಕಿದ ರಾಜ್ಯದ ಮೂವರು ಸಂಸದರ ಉದಾಹರಣೆ ಯಡ್ಡಿ ಮುಂದೆ ಇದೆ. ಅದರೂ...?
ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಗೋಚರಿಸಿರುವ ಕರ್ನಾಟಕ ಅದರ ಪಾಲಿಗೆ ಮತ್ತೊಂದು ಉತ್ತರ ಪ್ರದೇಶವಾಗದಿದ್ದರೆ ಸಾಕು!
ಬಿಜೆಪಿ ಆಡಳಿತದ ಖದರು ನೆರೆಯ ರಾಜ್ಯಗಳಿಂದ ರಾಜ್ಯದ ಗಡಿ ಪ್ರವೇಶಿಸಿದೊಡನೆ ಗೊತ್ತಾಗಬೇಕು, ಈ ರಾಜ್ಯ ಪ್ರಕಾಶಿಸುತ್ತಿದೆ ಎಂದೆನಿಸಬೇಕು. ಬಿಜೆಪಿಯ ಬಗ್ಗೆ ಧನಾತ್ಮಕ ಆಭಿಪ್ರಾಯ ಮೂಡಬೇಕು. ಆದರೆ ಈಗ ಹಾಗಾಗುತ್ತಿದೆ ಎಂದು ಯಾರಿಗದರೂ ಅನಿಸುತ್ತಿದೆಯೇ?
ಒಬ್ಬ ವ್ಯಕ್ತಿಯ ಆಡಳಿತ ಸಾಮರ್ಥ್ಯವನ್ನು ಅಳೆಯಲು ಹತ್ತು ತಿಂಗಳು ಸಾಕಾಗುವುದಿಲ್ಲ ಅದರೆ ಕಳೆದುಕೊಂಡಿರುವ ಸೈದ್ದಾಂತಿಕ ನೆಲೆಗಟ್ಟನ್ನು ಇನ್ನು ಹತ್ತು ವರ್ಷ ಕಳೆದರೂ ಗಳಿಸಿಕೊಳ್ಳಲು ಸಾಧ್ಯನಾ? ವಾಜಪೇಯಿ ಸರ್ಕಾರ ಹದಿಮೂರು ತಿಂಗಳು ಆಡಳಿತ ನಡೆಸಿ ಅಧಿಕಾರದಿಂದ ಕೆಳಗಿಳಿದಾಗ ಒಬ್ಬ ಸಾಮಾನ್ಯ ಕಾರ್ಯಕರ್ತ ಮುಂದಿನ ಬಾರಿ ಬಿಜೆಪಿಯೇ ಆಡಳಿತ ನಡೆಸಬೇಕು ಎಂದು ಹಠ ಕಟ್ಟಿ ದುಡಿದಿದ್ದ, ಆಗ ಯಾರೂ ಕೊಂಕು ನುಡಿದಿರಲಿಲ್ಲ. ಯಾಕೆಂದರೆ ವಾಜಪೇಯಿ, ಅಡ್ವಾಣಿ ರೂಪಿಸಿದ್ದ ಮಾದರಿ ಮತ್ತು ಆ ಬಗೆಗಿನ ಅವರ ನಿಷ್ಟೆ ಅಷ್ಟು ಉನ್ನತವಾಗಿತ್ತು. ಆದರೆ ಯಡ್ಡಿಯದ್ದು?
ವಾಜಪೇಯಿಗೆ ಮಂತ್ರಿಯಾಗಬೇಕು ಎಂದೆನಿಸಿದ್ದರೆ ಅವರು ಆ ಅಸೆ ಯಾವತ್ತೋ ಈಡೇರುತ್ತಿತ್ತು. ಆದರೆ ಆವರು ಹಾಗೇ ಮಾಡಲಿಲ್ಲ ಯಾಕೆಂದರೆ ಅವರಿಗೆ ಸಿದ್ದಾಂತ ಮುಖ್ಯವಾಗಿತ್ತು. ಅದ್ದರಿಂದಲೇ ಅವರು ಇಂದಿಗೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಹ್ರದಯ ಸಿಂಹಾಸನದೀಶ್ವರ. ಈ ಕಾರಣಕ್ಕೇಯೆ ಅವರ ಬಗ್ಗೆ ಬಿ. ಕೆ. ಹರಿಪ್ರಸಾದ್ ಎಂಬ ಕಾಂಗ್ರೇಸ್ ನಾಯಕ ಕೇವಲವಾಗಿ ಮಾತನಾಡಿದಾಗ ನಮ್ಮ ರಕ್ತ ಕುದಿಯುವುದು. ಅದೇ ಯಡ್ಡಿ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅವರಿಗೆ ಮಾತ್ರ ಕೋಪ ಬರುತ್ತದೆ. ಉಳಿದವರು ಮುಸಿಮುಸಿ ನಗುತ್ತಿರುತ್ತಾರೆ!
ಇಂದು ರಾಜ್ಯ ಬಿಜೆಪಿಗೆ ನಾಯಕರ ಕೊರತೆಯಿಲ್ಲ, ಕೊರತೆ ಇರುವುದು ಸೈದ್ದಾಂತಿಕತೆ ಮತ್ತು ನೈತಿಕತೆಯದ್ದು. ಯಡ್ಡಿ ಸಾಗುತ್ತಿರುವ ಹಾದಿಯಲ್ಲಿ ಸಾಗಿದರೆ ಅವರು ಮತ್ತು ಕೆಲವರು ಮಾತ್ರ ಲಾಭ ಪಡೆಯುತ್ತಾರೆ. ಬಿಜೆಪಿಗೆ ತನಗಿದರಿಂದ ಲಾಭವಾಗಿದೆ ಎಂದೆನಿಸಬಹುದು ಆದರೆ ಇದರ ದೂರಾಗಾಮಿ ಪರಿಣಾಮ ಮಾತ್ರ ಋಣಾತ್ಮಕ. ಮುಂದೊಂದು ದಿನ ಆಥವಾ ಶೀಘ್ರದಲ್ಲೇ ಬಿಜೆಪಿಗೆ ನೈಜ ಮತ್ತು ಜನಪರ ನಾಯಕರು, ಕಾರ್ಯಕರ್ತರೇ ಇಲ್ಲದೇ ಹೋಗಬಹುದು.
ಕೆಲವೇ ದಿನಗಳ ಹಿಂದೆ ಚುನಾವಣೆಯ ಅಮಲಿನಲ್ಲಿ, ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳುವ ಬರದಲ್ಲಿ ನಾನು ಆಧಿಕಾರದಲ್ಲಿರುವ ತನಕ ಅಲ್ಪಸಂಖ್ಯಾತರ ಒಂದು ಕೂದಲನ್ನು ಕೂಡ ಕೊಂಕಲು ಬಿಡುವುದಿಲ್ಲ ಎಂದು ಆರ್ಭಟಿಸಿದ್ದರು ನಮ್ಮ ಮುಖ್ಯ ಮಂತ್ರಿಗಳು. ಅದನ್ನೇ ಕೋಮು ಗಲಭೆಯ ಹೆಸರಿನಲ್ಲಿ ರಾಜ್ಯದ ಯಾವುದೇ ನಾಗರಿಕನ ಕೂದಲು ಕೂಡ ಮುಟ್ಟಲು ಬಿಡುವುದಿಲ್ಲ ಎಂದನ್ನುತ್ತಿದ್ದಾರೆ ಅದೇಷ್ಟು ಅರ್ಥಪೂðಣವಾಗಿರುತ್ತಿತ್ತು. ಈ ಮಾತು ಬಿಜೆಪಿ ಬಹುಸಂಖ್ಯಾತರ ಪಕ್ಷ ಅಲ್ಲವೆಂಬುದನ್ನು ಸಾಬೀತು ಪಡಿಸಿತು. ತಾವು ಜಾತ್ಯತೀತರು ಎಂದು ಕರೆದುಕೊಳ್ಳವ ಪಕ್ಷಗಳು ಮತ್ತು ಅಲ್ಪಸಂಖ್ಯಾತ ವರ್ಗದ ಬಹುಪಾಲು ನಾಯಕರುಗಳು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದೇ ಹೇಳುತ್ತಾರೆ. ಇನ್ನೂ ರಾಜ್ಯದ ಬಿಜೆಪಿ ಸರಕಾರವನ್ನು ಅಭಿವ್ರಧಿಪರ ಪಕ್ಷ ಎಂದು ಒಪ್ಪಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಾದರೆ ಬಿಜೆಪಿ ಯಾರ ಪಕ್ಷ?
ನನಗಂತೂ ಆಡ್ವಾಣಿ ಪ್ರಧಾನಿಯಾಗಬೇಕೆಂಬ ಆಸೆ ಬೆಟ್ಟದಷ್ಟಿದೆ. ಆದರೆ ರಾಜ್ಯ ಬಿಜೆಪಿಯ ಬಗ್ಗೆ ಮತ್ತು ಅದು ಸಾಗುತ್ತಿರುವ ಹಾದಿಯ ಬಗ್ಗೆ ರೇಜಿಗೆಯಿದೆ.
ನನ್ನ ಯೋಚನೆ ಹೀಗಿದೆ, ಆಡ್ವಾಣಿ ದೇಶದ ಪ್ರಧಾನಿ ಆಗಬೇಕು ಆದರೆ ರಾಜ್ಯದಲ್ಲಿ ಬಿಜೆಪಿ ನಿರಾಶಾದಾಯಕ ಪ್ರದರ್ಶನ ನೀಡಬೇಕು. ಇಲ್ಲದೇ ಹೋದಲ್ಲಿ ಯಡ್ಡಿ ಮತ್ತವರ ಸಂಗಡಿಗರು ತಾವು ಮಾಡಿದ್ದು ಸರಿ ಮತ್ತು ಇದಕ್ಕೆ ಜನರ ಆಶಿರ್ವಾದ ಇದೆಯೆಂದು ಭಾವಿಸಿ ರಾಜ್ಯದಲ್ಲಿನ ನೈಜ ಬಿಜೆಪಿಯನ್ನು ಬುಡಸಮೇತ ಕಿತ್ತೆಸೆಯುವುದ ಖಂಡಿತ.

Wednesday, April 8, 2009

ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ....

ಕನ್ನಡ ಪತ್ರಿಕೋದ್ಯಮ ನಿಂತ ನೀರಾಗಿದ್ದ ಕಾಲದಲ್ಲಿ ಹುಟ್ಟಿಕೊಂಡು ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾದ ಪತ್ರಿಕೆ ’ವಿಜಯ ಕರ್ನಾಟಕ’. ’ವಿಜಯ ಕರ್ನಾಟಕ’ ಒಳ್ಳೆಯದನ್ನೇ ಮಾಡಿತು ಎಂಬುದಕ್ಕಿಂತ ಈ ಪತ್ರಿಕೆಯ ಕ್ಷಿಪ್ರ ಬೆಳವಣಿಗೆಗೆ ಇಡೀ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಆ ಮೂಲಕ ಓದುಗರಿಗೆ ಸಾಕಷ್ಟು ಒಳಿತನ್ನು ಮಾಡಿತು. ಇಂದು ಎಲ್ಲ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ತಾವು ’ಚಂದ’ ಕಾಣಿಸಿಕೊಳ್ಳಬೇಕೆಂಬ ಹಪಾಹಪಿ ಹುಟ್ಟಲು ’ವಿಜಯ ಕರ್ನಾಟಕ’ವೇ ಕಾರಣ. ವಿಜಯ ಕರ್ನಾಟಕ ಬೇರೆ ಪತ್ರಿಕೆಯ ಓದುಗರನ್ನು ತನ್ನತ್ತ ಸೆಳೆದುಕೊಂಡದಕ್ಕಿಂತ ಹೆಚ್ಚಾಗಿ ಪತ್ರಿಕೆಗಳನ್ನು ಓದುವ ಒಂದು ಓದುಗ ವಲಯವನ್ನೇ ಸ್ರಷ್ಟಿಸಿತು.

ಇದಕ್ಕೇ ಸಾಕ್ಷಿ ಇಂದು ಮುಖ್ಯವಾಹಿನಿ ಪತ್ರಿಕೆಗಳನ್ನು ’ಕೊಂಡು’ ಓದುವ ಸುಮಾರು ಹದಿನೈದು ಲಕ್ಷ ಓದುಗರು. ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ನಾನಿಲ್ಲಿ ಚರ್ಚೆ ಮಾಡುತ್ತಿಲ್ಲ. ಆದರೆ ವಿಜಯ ಕರ್ನಾಟಕದ ಈ ಸಾಧನೆಯ ಹಿಂದಿರುವ ವ್ಯಕ್ತಿ ಮತ್ತು ಒಂದು ಅಂಶ ಅಥವಾ ಸಿಧಾಂತದ ಬಗ್ಗೆ ಕೆಲವರು ಉರಿ ಕಾರುತ್ತಿದ್ದಾರೆ ಅದರಲ್ಲೂ ಒಂದು ಸಂಜೆ ಪತ್ರಿಕೆಯ ಸಂಪಾದಕರು.

ಅದಕ್ಕೆ ಕಾರಣವೂ ಇದೆ! ವಿಕ ಅಂದೊಡನೆ ತಕ್ಷಣ ನೆನಪಿಗೆ ಬರುವುದು ಅದರ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಅದರ ಅಂಕಣಕಾರರ ದಂಡು! ಇಂದು ಕನ್ನಡ ದಿನಪತ್ರಿಕೆಗಳ ಸಂಪಾದಕರಲ್ಲಿ ವಿಶ್ವೇಶ್ವರ ಭಟ್ ರಷ್ಟು ಜನಪ್ರಿಯ (ಅದೂ ಒಳ್ಳೆಯ ಕಾರಣಕ್ಕೆ) ಮತ್ತು ಬರವಣಿಗೆಯ ಮೂಲಕ ಓದುಗರಿಗೆ ಆಪ್ತರಾಗಿರುವ ಸಂಪಾದಕ ಇನ್ನೊಬ್ಬರಿಲ್ಲ. ಬೇರೆ ಯಶಸ್ವಿ ಸಂಪಾದಕರಿರಬಹುದು ಅದು ಬೇರೆ ವಿಷಯ. ವಿಕದಲ್ಲಿ ಪ್ರಕಟಗೊಳ್ಳುವ ಪ್ರತಾಪ್ ಸಿಂಹ ಮತ್ತು ಭಟ್ರ ಅಂಕಣಗಳು ಓದುಗರಲ್ಲಿ ಸಂಚಲನ ಉಂಟುಮಾಡುವ ಸಾಮರ್ಥ್ಯ ಇರುವಂತಹವು, ಇದು ಈ ಮೊದಲೇ ಹತ್ತಾರು ಸಂದರ್ಭಗಳಲ್ಲಿ ಸಾಬೀತಾಗಿದೆ ಕೂಡ.

ಅವರ ಅಂಕಣದಲ್ಲಿನ ವಿಷಯ ಅಥವಾ ಅಭಿಪ್ರಾಯವನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು. ಆದರೆ ಅವರ ಪ್ರತಿಭೆಯನ್ನೇ ಪ್ರಶ್ನಿಸುವ ಚಾಳಿಯನ್ನು ಕೆಲವರು ಬೆಳೆಸಿಕೊಂಡಿರುವುದು ಕನ್ನಡ ಪತ್ರಿಕೋದ್ಯಮದ ಆರೋಗ್ಯದ ದೃಷ್ಟಿಯಲ್ಲಿ ತೀರಾ ಅನಾಹುತಕಾರಿ. ಇನ್ನು ವಿಕ ಬಲಪಂಥಿಯ ಪತ್ರಿಕೆ ಎಂಬ ಕಾರಣಕ್ಕೇ ಕೆಲವರು ಇದನ್ನು ಟೀಕಿಸುತ್ತಾರೆ. ಈ ದೇಶದಲ್ಲಿ ಎಡಪಂಥಿಯರು ಪತ್ರಿಕೆ ನಡೆಸಬಹುದಾದರೆ ಅವರು ಬರೆಯಬಹುದಾದರೆ ಬಲಪಂಥಿಯರು ಯಾಕೆ ಆ ಕೆಲಸ ಮಾಡಬಾರದು? ಒಂಚೂರು ಅಚೀಚೆ ಆದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇದೆ, ಎಲ್ಲರಿಗೂ ತಮಗನಿಸಿದನ್ನು ಹೇಳುವ ಸಂವಿಧಾನದತ್ತ ಹಕ್ಕಿದೆ ಎಂದು ಕೂಗು ಹಾಕುವವರೇ ಬಲಪಂಥಿಯರು ಪತ್ರಿಕೆ ಮಾಡಿ ಅದನ್ನು ಪ್ರಸರಣದಲ್ಲಿ ಮೊದಲ ಸ್ಥಾನಕ್ಕೆ ತಂದರೆ ಅದರಲ್ಲಿ ಅವರ ಅನಿಸಿಕೆ ಹೇಳಿದರೆ ಮೈ ಮೇಲೆ ಇರುವೆ ಬಿಟ್ಟುಕೊಂಡವರ ಥರ ವರ್ತಿಸುವುದು ಯಾಕೆ? ಪಾಪ, ಬಲಪಂಥಿಯರಿಗೆ ಅಭಿವ್ಯಕ್ತಿ ಸ್ವಾತಂತ್ರ ಇಲ್ಲವೇ? ಪ್ರಜಾಪ್ರಭುತ್ವ ನಿಂತಿರುವುದೇ ಅಭಿಪ್ರಾಯ ಹೇಳುವ ಸ್ವಾತಂತ್ರದ ಮೇಲೆ.

ಯಾರದ್ದೇ ಅಭಿಪ್ರಾಯ ನಮಗೆ ಪಥ್ಯವಾಗದಿದ್ದಲ್ಲಿ ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವ್ಯಕ್ತಿ ನಿಂದನೆ ಆಗದಂತೆ ಟೀಕಿಸುವುದು ಬಿಟ್ಟು ವ್ಯಕ್ತಿ ನಿಂದನೆ ಮಟ್ಟಕ್ಕೆ ಇಳಿಯುವುದು ಎಷ್ಟು ಸರಿ? ನಂತರ ಅವರೇ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಪಾಠ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚು ಜನರ ಆಭಿಪ್ರಾಯಕ್ಕೆ ಮನ್ನಣೆ, ವಿಕವನ್ನು ೬ ಲಕ್ಷ ಜನ ಓದುತ್ತಾರೆ ಅಂದರೆ ಕರ್ನಾಟಕದಲ್ಲಿ ಹೆಚ್ಚು ಜನರು ಬಲಪಂಥಿಯ ಬರಹವನ್ನು ಇಷ್ಟಪಡುತ್ತಾರೆ ಎಂದರ್ಥ ತಾನೇ? ಅಂದರೆ ವಿಕ ಬೇರೊಂದು ಪಂಥದ ಪತ್ರಿಕೆಯಾದರೆ ಈ ೬ ಲಕ್ಷ ಜನರ ಅಭಿರುಚಿ ಮತ್ತು ಧ್ವನಿ ಏನಾಗಬೇಡ?

ಮತ್ತೇ ವಿಕದ ಪ್ರಸರಣ ಸಂಖ್ಯೆ ಕಡಿಮೆಯಾಗಲು ಕೆಲವರು ಊಹಿಸುತ್ತಿರುವ ಕಾರಣಕ್ಕಿ೦ತ ತೀರಾ ಭಿನ್ನ ಕಾರಣವಿದೆ ಆ ಬಗ್ಗೆ ತಾವು ಯೋಚನೆ ಮಾಡದೆ ತಮ್ಮ ತಮ್ಮ ಪತ್ರಿಕೆಗಳ ಪ್ರಸರಣ ಹೆಚ್ಚಿಸುವ ಬಗ್ಗೆ ವಿಕದ ’ಹಿತ ಚಿಂತಕರು’ ಚಿಂತಿಸುವುದು ಒಳಿತು. ಇನ್ನೂ ಸಿಎನ್ಎನ್ ಐಬಿಎನ್ ನ ಮ್ಯಾನೇಜಿಂಗ್ ಎಡಿಟರ್‍ ರಾಜದೀಪ್ ಸರ್‍ ದೇಸಾಯಿಯವರು ಬಿ ವಿ ಸೀತಾರಾಂರನ್ನು ಬೇಟಿಯಾಗಲು ನಿರಾಕರಿಸಿದ್ದರು ಎಂದು ಭಟ್ರು ತಮ್ಮ ’ಜನಗಳ ಮನ’ ಅಂಕಣದಲ್ಲಿ ಬರೆದಿದ್ದರು. "ಇಲ್ಲ, ನಾನು ಸರ್‍ ದೇಸಾಯಿಯವರನ್ನು ಭೇಟಿಯಾಗಿ ಮಾತುಕಥೆ ನಡೆಸಿದ್ದೇನೆ, ಸರ್‍ ದೇಸಾಯಿ ದಂಪತಿ ತಮ್ಮನ್ನು ಬಹಳ ಚೆನ್ನಾಗಿ ಸತ್ಕರಿಸಿದ್ದಾರೆ" ಎಂದೆನ್ನುತ್ತಾರೆ ಸಿತಾರಾಂ. ಇವರಲ್ಲಿ ಯಾರದ್ದು ಸತ್ಯ? ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ಸತ್ಯ ತಿಳಿದುಕೊಳ್ಳಲು ನನ್ನದೆ ಆದ ಮೂಲಗಳೂ ಇಲ್ಲ.

ಭಟ್ರು ಬರೆದದ್ದು ಸುಳ್ಳೇ ಆಗಿದ್ದರೆ ಸಿತಾರಾಂಗೆ ಆ ಬಗ್ಗೇ ಸ್ಪಷ್ಟೀಕರಣ ಕೊಡುವ ಹಕ್ಕಿದೆ. ಆದರೆ ಭಟ್ರು ಪ್ಯಾರಾನಾಯ್ಡ್ ಕಾಯಿಲೆ ಹಿಡಿದವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ಹಕ್ಕು ಬಿವಿಸೀ ಯವರಿಗೆ ಇಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಭಟ್ರ ಕೊಡುಗೆ ಅಪಾರವಾದದ್ದು. ಅದು ಲೇಖನ, ಅಂಕಣ, ಪುಸ್ತಕ, ಅಥವಾ ಪತ್ರಿಕೆಯ ರೂಪದಲ್ಲಿರಬಹುದು. ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ ಅವರ ಮೇಲೆ ಒಂದಿಷ್ಟು ಗೌರವವಿಟ್ಟುಕೊಂಡು ರಚನಾತ್ಮಕವಾಗಿ ಟೀಕಿಸಿದರೆ ಆ ರೀತಿ ಟೀಕಿಸುವವರಿಗೂ ಒಂದಿಷ್ಟು ಗೌರವ ಸಿಗಬಹುದೇನೋ...!

Sunday, April 5, 2009

ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!

ರಾಜಕಾರಣ ’ಮೂರನ್ನು’ ಬಿಟ್ಟು ಸಾಕಷ್ಟು ವರ್ಷಗಳೇ ಸಂದಿವೆ. ರಾಜಕೀಯಕ್ಕೂ ಒಳ್ಳೆಯತನಕ್ಕೂ ಹಿಂದಿನಿಂದಲೂ ಎಣ್ನೆ ಸೀಗೆ ಸಂಬಂಧ. ಅದರ ಜನರೂ ಕನಿಷ್ಟ ಅಷ್ಟೋ ಇಷ್ಟೋ ಒಳ್ಳೆಯತನವನ್ನು ರಾಜಕಾರಣಿಗಳಿಂದ ನಿರೀಕ್ಷಿಸುತ್ತಿದ್ದರು. ಆದರೆ ಈಗ ಆ ನಿರೀಕ್ಷೆಯಿಂದಲೂ ದೂರ ಸರಿಯುತ್ತಿದ್ದಾರೆ.
ಹೌದು, ಇದಕ್ಕಿಂತ ಹೊಣೆಗೇಡಿತನ, ಅನೈತಿಕ ಮತ್ತು ಬೇಜವಾಬ್ದಾರಿ ರಾಜಕಾರಣ ಇರಲು ಸಾಧ್ಯಾನಾ? ಕೇಂದ್ರ ಸರ್ಕಾರ ೫೦,೦೦೦ ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ನರೇಂದ್ರ ಮೋದಿಯವರ ಅರೋಪದ ಬಗ್ಗೆ ಯಾರೂ ಉತ್ತರಿಸುತ್ತಿಲ್ಲ, ಅದೂ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವೂ ಅಗಿಲ್ಲ. ಆದರೆ ವರುಣ್ ಗಾಂಧಿ ಹೇಳಿದ ಆ ಒಂದು ಮಾತು...!
ವರುಣ್ ಗಾಂಧಿ ಹೇಳಿದ್ದದರು ಏನು? "ಹಿಂದೂಗಳ ವಿರುದ್ಧ ಎತ್ತುವ ಕೈಯನ್ನು ಕಡಿಯಬೇಕು" ಎಂದು ತಾನೆ? ಅದರಲ್ಲಿ ತಪ್ಪೇನಿದೆ? ಅದು ಮುಸ್ಲಿಮರದ್ದೆ ’ಕೈ’ಯೆಂದು ನಾವು ಹೇಗೆ ನಿರ್ಧಾರಕ್ಕೆ ಬರುವುದು? ಅದು ಮುಸ್ಲಿಮರದ್ದೆ ’ಕೈ’ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅವರು ಅಂದರೆ ಮುಸ್ಲಿಮರು ಹಿಂದೆ ಹಿಂದೂಗಳ ವಿರುದ್ಧ ’ಕೈ’ ಮಾಡಿರಬೇಕು ತಾನೆ? ಇದೆಲ್ಲದಕ್ಕಿಂತ ಮುಖ್ಯವಾಗಿ ಮುಸ್ಲಿಮರ ವಿರುದ್ಧವೇ ಈ ಮಾತು ವರುಣ್ ಬಾಯಿಂದ ಬಂದಿದೆ ಎಂದೆನ್ನುವುದಾದರೆ ಅದೂ ಮುಸ್ಲಿಮರು ಹಿಂದೂಗಳ ಮೇಲೆ ’ಕೈ’ಯೆತ್ತಿದ ನಂತರ ಅವರ ’ಕೈ’ ಕಡಿಯಬೇಕು ಎಂದು ಅವರು ಹೇಳಿದ್ದು ತಾನೆ? ಅಂದರೆ ಮುಸ್ಲಿಮರು ಹಿಂದೂಗಳ ವಿರುದ್ದ ’ಕೈ’ಯೆತ್ತದಿದ್ದಾರೆ ಅವರ ’ಕೈ’ ಕಡಿಯುವುದಿಲ್ಲ ಎಂಬುದೂ ಕೂಡ ಅಲ್ಲೇ ಸ್ಪಷ್ಟವಾಗಿದೆ. ಅದ್ದರಿಂದ ಇಲ್ಲಿ ರಾಷ್ಟ್ರದ ಭದ್ರತೆಗೆ ಹಾನಿಯಗುವಂತದ್ದು ಏನಿಲ್ಲ ತಾನೆ? ಆದರೆ ಹಿಂದೂಗಳ ವಿರುದ್ಧ ಮುಸ್ಲಿಮರೂ ’ಕೈ’ಯಿತ್ತಿದ್ದರೂ ಸುಮ್ಮನಿರಬೇಕು ಎಂದು ಬಯಸುವುದು ಯಾವ ಸೀಮೆ ನ್ಯಾಯ?
ವರುಣ್, ಯೂ ಅರ್‍ ರೈಟ್.
ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಕಾಂಗ್ರೇಸ್ ಮತ್ತು ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!
ವರುಣ್ ರ ಸೋದರಿ ಪ್ರಿಯಾಂಕ ವಾಧ್ರ ಭಗವದ್ಗೀತೆಯನ್ನು ಓದುವಂತೆ ವರುಣ್ ಗೆ ಸಲಹೆ ನೀಡಿದ್ದಾರೆ. ನನ್ನ ಪ್ರಶ್ನೆ, ಶ್ರೀಮತಿ ವಾಧ್ರ ಭಗವದ್ಗೀತೆಯನ್ನು ಓದಿದ್ದಾರಾ? ಓದಿದ್ದರೆ ಅದರಲ್ಲಿನ ಯಾವ ಅಂಶವನ್ನು ಪಾಲಿಸುತ್ತಿದ್ದಾರಂತೆ? ಅದರಲ್ಲಿ ಎಲ್ಲಾದರೂ ಧರ್ಮಕ್ಕೆ ಚ್ಯುತಿಯಾದಗ ಸುಮ್ಮನೇ ನೋಡುತ್ತಿರು ಎಂದಿದೆ ಅಂತೆಯಾ? ಭಗವದ್ಗೀತೆಯಾ ಮೂಲ ಇರುವುದೇ ಧರ್ಮ ಸಂಸ್ಥಾಪನೆಯ ಆಶಯದಲ್ಲಿ. ಅದು ಬಿಜೆಪಿ ಹೇಳುವ ಹಿಂದುತ್ವ ಅಲ್ಲದಿರಬಹುದು ಆದರೆ ಹಿಂದುತ್ವವೇ ಇಲ್ಲದಿದ್ದಾರೆ ಭಗವದ್ಗೀತೆ ಇರುತ್ತಾ? ವರುಣ್ ಗಾಂಧಿ ಉಳಿಸುತ್ತೇನೆ ಎಂದದ್ದು ಈ ಹಿಂದುತ್ವವನ್ನು, ಆ ಮೂಲಕ ಶ್ರೀಮತಿ ವಾಧ್ರ ಹೇಳುತ್ತಿರುವ ಭಗವದ್ಗೀತೆಯನ್ನು ಮತ್ತು ಅದರೊಂದಿಗೆ ಹೊಸೆದು ಕೊಂಡಿರುವ ಜೀವನ ಕ್ರಮವನ್ನು. ಆದರೆ ವಂಶದ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರಿಗೆ ಇದೆಲ್ಲ ಅರ್ಥವಾದರೆ ತಾನೆ?
ಇನ್ನು ಮಹಾಭಾರತದ ಶೈಲಿಯಲ್ಲೇ ಹೇಳಬೇಕಾದರೆ ಕಾಂಗ್ರೆಸ್ ದುಯೋ‌ðಧನನಂತೆ! ಅದು ಕ್ರಷ್ಣ ಮತ್ತು ಆಕ್ಷೋಹಿಣಿ ಸೈನ್ಯದ ಮಧ್ಯ ಆಯ್ಕೆ ಮಾಡುವುದು ಅಕ್ಷೋಹಿಣಿ ಸೈನ್ಯವನ್ನೇ! ಯಾಕೆಂದರೆ ಸಾವಿರಾರು ವೋಟ್ ಗಳಿವೆ ಅಲ್ವಾ?
ಇನ್ನು ವರುಣ್ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಅಂದರೆ ಕಸಬ್, ರಶೀದ್ ಮಲ್ಬಾರಿ, ಅ‌ಫ್ಜಲ್ ಗುರುವಿಗೂ ವರುಣ್ ಗಾಂಧಿಗೂ ವ್ಯತ್ಯಾಸವೇ ಇಲ್ವಾ?
ಹಿಂದಿನ ಎನ್ ಡಿಎ ಸರ್ಕಾರ ರಚಿಸಿದ್ದ ಪೊಟಾ ಕಾಯ್ದೆ ದುರುಪಯೋಗವಾಗುತ್ತದೆ ಎಂದು ಬೊಬ್ಬಿರಿದವರು ಇಂದು ಎನ್ ಎಸ್ ಎಯನ್ನು ಸದುಪಯೋಗ ಪಡಿಸಿಕೊಳುತ್ತಿದ್ದಾರ? ತಮ್ಮ ದ್ವೇಷದ ರಾಜಕಾರಣಕ್ಕೆ ಅದನ್ನೆ ದಾಳವಾಗಿರಿಸಿಕೊಳುತ್ತಿರುವುದು ವಿಪರ್ಯಾಸವೆ ಸರಿ. ಇತ್ತ ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಎನ್ನುವವರು ಯಾವುದೇ ಹುದ್ದೆ ಅಲಂಕರಿಸಲು ಯೋಗ್ಯರಲ್ಲವೆಂದು ವರದಿ ಇದ್ದರೂ ನವೀನ್ ಚಾವ್ಲರನ್ನು ಮುಖ್ಯ ಹುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದು ಸಂವಿಧಾನ, ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯಲಾ? ಸದ್ದಾಂ ಹುಸೇನ್ ನ ಪೋಟೋ ಹಿಡಿದು ವೋಟ್ ಕೇಳುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದದ್ದ?
ಅದರೂ ಈ ಚುನಾವಣಾ ಸಂದರ್ಭದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹಿಂದುತ್ವ ವರುಣ್ ಗಾಂಧಿಯ ಹೇಳಿಕೆಗೆ ಸಿಕ್ಕ ಪ್ರತಿಫಲದಿಂದಾಗಿ ಪುನ: ಭೊರ್ಗರೆಯುವಂತಾಗಿದೆ. ನಾಳೆ ಹಿಂದುತ್ವದ ಬಗ್ಗೆ ಮಾತನಾಡಿದರೆ ನಮಗೂ ಎನ್ ಎಸ್‌ಎಯಡಿ ಶಿಕ್ಷೆ ಗ್ಯಾರಂಟಿ ಎಂಬ ಸ್ಥಿತಿ. ಬಿಜೆಪಿ ಇದನ್ನು ತನ್ನ ಅನುಕೂಲಕ್ಕಾಗಿ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ತಾನು ಮಾಡಿದ ಖೆಡ್ಡಾಕ್ಕೆ ತಾನೇ ಬೀಳುತ್ತಿದೆಯೇನೋ ಅನಿಸುತ್ತಿದೆ.
ನನ್ನನ್ನು ಕಾಡುತ್ತಿರುವ ಬಹುದೊಡ್ಡ ಸಂಶಯವೆಂದರೆ ಈ ಇಡೀ ಪ್ರಕರಣ ವರುಣ್ ಗಾಂಧಿಯ ವಿರುದ್ಧದ ಸಂಚೋ ಅಥವಾ ಹಿಂದುತ್ವದ ವಿರುದ್ಧದ ಸಂಚೋ? ಕಾಲವೇ ಉತ್ತರಿಸಬೇಕಿದೆ.

Wednesday, April 1, 2009

ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?

ಪ್ರಶ್ನೆ ಕಾಡುತ್ತಿದೆ. ಉತ್ತರ ಗೊತ್ತಿದ್ದರೂ ಶಾಲೆಯ ಕೆಂಪು ಕಣ್ಣಿನ ನ ಮೇಷ್ಟರ ಮುಂದೆ ನಿಂತು ತತ್ತರಿಸಿದ್ದ ಅಂದಿನ ವ್ಯೆಯುಕ್ತಿಕ ಭಯವಿಂದು ಒಂದು ಸಮಾಜದ ಭಯವಾಗಿದೆಯಾ? ಎಂದೆನಿಸುತ್ತದೆ. ನಾವ್ಯಕೆ ನಿದ್ದೆ ಮಾಡುತ್ತಿರುವವರ ಹಾಗೆ ನಟಿಸುತ್ತಿದ್ದೇವೆ? ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?
ಲೆಕ್ಕಕ್ಕೆ ಸಿಗುವಂತೆ ೩,೦೦೦ ದೇಗುಲಗಳನ್ನು ಹಿಂದುಗಳು ಕಳೆದುಕೊಂಡಿದ್ದಾರೆ. ಒಂದು ಹಿಡಿ ಮಣ್ಣಿಗಾಗಿ ನಾವೇ ಅಣ್ಣ ತಮ್ಮಂದಿರು ಕತ್ತಿ ಹಿಡಿದು ಕಾಳಗ ಮಾಡುತ್ತೇವೆ. ಕೋಟ್
ಜೀವನಪೂರ್ತಿ ಅಲೆಯುತ್ತೇವೆ. ಅತ್ತ ಚೀನಾ ಇಡೀ ಅರುಣಾಚಲ ಪ್ರದೇಶವನ್ನೇ ತನ್ನೋಳಗೆ ನುಂಗಿಕೊಳ್ಳವ ಪ್ರಯತ್ನ ಮಾಡುತ್ತಿದೆ. ತಾಜ್ ಮಹಲ್ ಮೂಲತ; ಶಿವ ದೇವಾಲಯವಾಗಿತ್ತು ಎಂದಾಗ ಯಾವುದೇ ತನಿಖೆ ನಡೆಸದೆ ಆ ಸತ್ಯವನ್ನು ಮರೆಮಾಡಿ ನಮಗೆ ಹೇಳುವ ಬುದ್ದಿಮಾತು ಸಾಮಾಜಿಕ ಸೌಹಾರ್ದತೆ. ಆದರೆ ಎದು ಎಷ್ಟರವರೆಗೆ? ಪ್ರತಿಯೊಂದಕ್ಕೂ
ಕೊನೆಯಿದೆಯಂತೆ! ಆದರೆ ಹಿಂದುಗಳ ನಂಬಿಕೆಯ ಮೇಲಿನ ದಾಳಿಗೆ ಕೊನೆ ಯಾವಾಗ? ಇದು ಕೊನೆಗೊಳ್ಳುವಾಗ ನಮ್ಮ ಸಂಸ್ಕ್ರತಿಯೇ ಕೊನೆಯಾಗಿರಬಹುದಾ? ಯೋಚಿಸಲು ಹೊರಟರೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳತ್ತಲೆ ಇರುತ್ತದೆ.
ಅನೇಕ ಬಾಹ್ಯ ಅಕ್ರಮಣಗಳಿಗೆ ಸಡ್ಡು ಹೊಡೆದು ಉಳಿದ ಸಂಸ್ಕ್ರತಿ ಭಾರತದ್ದು. ಈ ಆಕ್ರಮಣಗಳನ್ನು ನಾವು ಕರಗಿಸಿ ಅರಗಿಸಿಕೊಂಡಿದ್ದೇವೆ. ವಾಸ್ತವವಾಗಿ ಈ ದಾಳಿಗಳು ನಮ್ಮನ್ನು ಅಂತರಿಕವಾಗಿ ಬಲಿಷ್ಠಗೊಳ್ಳಲು ಸಹಾಯ ಮಾಡಿದವು. ನಮ್ಮಲ್ಲೊಂದು ಒಗ್ಗಟ್ಟು, ಹೋರಾಟದ ಕೆಚ್ಚು ಮತ್ತು ಸಮಾನತೆಯ ಅಗತ್ಯತೆಯನ್ನು ತೋರಿಸಿಕೊಟ್ಟಿತು. ಮೂಢನಂಬಿಕೆಗಳಿಂದ ಆಗುವ ಅನಾಹುತಗಳನ್ನು ತೆರೆದಿಟ್ಟಿತು. ತಕ್ಷಣ ಕಾರ್ಯಪ್ರವ್ರತ್ತವಾದ ಸಮಾಜ ಅದಕ್ಕೊಂದು ಮೂಲಿಕೆ ಕಂಡುಹಿಡಿಯಿತು. ಇದು ನಿಧಾನವಾಗಿ ಪರಿಣಾಮ ಬೀರುತ್ತಿರುವಾಗ ಬ್ರಿಟಿಷ್ ಆಕ್ರಮಣವಾಯಿತು. ಅವರು ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡಿದರು. ಪುನ: ಸಮಾಜ ಅಂಧಕಾರದತ್ತ ನಡೆದಾಗ ಹತ್ತಾರು ಧಾರ್ಮಿಕ ಮುಖಂಡರು ಸಮಾಜಕ್ಕೆ ಬೆಳಕು ನೀಡುವ ಪ್ರಯತ್ನ ಮಾಡಿದರು.ಇದರಿಂದ ಹಿಂದೂ ಸಮಾಜ ಪುನಶ್ಚೇತನಗೊಂಡಿತು.
ಕೆಲವು ಧರ್ಮಗಳು ಬದಲಾವಣೆಗೆ ಒಳಗಾಗುವುದೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಇದು ಸಕಾರಾತ್ಮಕ ಎಂದೆನಿಸಿಕೊಳ್ಳುತ್ತದೆ. ಆದರೆ ಹಿಂದೂ ಸಮಾಜದಲ್ಲಿ ಬದಲಾವಣೆ ಬಹಳ ನಿಧಾನ ಪ್ರಕ್ರಿಯೆ. ಈ ಬದಲಾವಣೆಗಳು ಮುಡಿಯಿಂದ ಅಡಿಗೆ ಬರುವಾಗ ಶತಶತಮಾನಗಳೇ ಉರುಳಿ ಹೋಗಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ಧರ್ಮದ ಮೇಲೆ ಅಂತರಿಕ ಆಕ್ರಮಣ ಅಥವಾ ಮತಾಂತರವಾಗುತ್ತಿದೆ.
ನಮ್ಮ ಸಂಸ್ಕ್ರತಿಯ ಆಶಯಗಳನ್ನು ಉಳಿಸಿಕೊಂಡು ಕಾಲದ ಹರಿವಿನಲ್ಲಿ ಹಿಂದೂ ಧರ್ಮದೊಂದಿಗೆ ಸೇರಿಕೊಂಡ ಕಲ್ಮಶಗಳನ್ನು ಹೊರಗಟ್ಟುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು. ಆಗ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸ ಲಾಸ್ಯವಾಡುತ್ತದೆ. ನಿದ್ರೆ ಮಾಡುವವರಂತೆ ನಟಿಸಬೇಕಾದ ಜರೂರತ್ತು ಇರುವುದಿಲ್ಲ, ’ವೋಟ್ ಬ್ಯಾಂಕ್’ ರಾಜಕೀಯ ತನ್ನಿಂದ ತಾನೆ ಕೊನೆಗೊಳ್ಳುತ್ತದೆ. ಹಿಂದೂ
ಸಮಾಜವನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇ(ಬ)ರುವುದಿಲ್ಲ. ಆಗ ನೈಜಾರ್ಥದ ಸಮಾನತೆ ಒಡಮೂಡುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜ್ಯೆನ. ಬೌದ್ಧರು, ಪಾರ್ಸಿ. ಸಿಖ್ಖರು ಸೌಹಾರ್ದತೆಯಿಂದ ಬಾಳುತ್ತಾರೆ. ದೇಶದ ಉಳಿವಿಗಾಗಿ ಹೋರಾಡುತ್ತಾರೆ. ಅದು ’ಸಹಜ’ ಸಾಮರಸ್ಯ. ಮತಬ್ಯಾಂಕ್ ಗಳಾಗಿರುವ ಧರ್ಮಗಳನ್ನು ಓಲೈಕೆ ಮಾಡಿ ತಾವು ದೇಶದ ಜಾತ್ಯತೀತತೆ ಉಳಿಸುತ್ತಿದ್ದೇವೆ ಎನ್ನುವುದು ತೀರಾ ಅಸಹಜ ಮತ್ತು ಬಾಲಿಶ. ಇದು ಒಂದು ಧರ್ಮದ ಜನರಲ್ಲಿ ಭಯ ಮೂಡಿಸುತ್ತದೆ. ಭಯ ಇರುವಲ್ಲಿ ಅಪಾಯ, ದಂಗೆಯೇಳುವಿಕೆ, ಆಕ್ರಮಣಶೀಲತೆ ಮುಂತಾದ ಲಕ್ಷಣಗಳಿರುತ್ತವೆಯೇ ಹೊರತು ನಂಬಿಕೆ, ವಿಶ್ವಾಸ, ಪರಸ್ಪರ ಗೌರವ ಇರಲು ಸಾಧ್ಯನಾ? ಅದರಲ್ಲೂ ಬಹುಸಂಖ್ಯಾತರ ವಿರೋಧ ಕಟ್ಟಿಕೊಳ್ಳುವುದು ಪೆಟ್ರೋಲ್ ಸುರಿದು ಬೆಂಕಿ ಪೊಟ್ಟಣದಿಂದ ಬೆಂಕಿಕಡ್ಡಿ ಗೀಚುವುದು ಸಮ.