Thursday, April 23, 2009

ಯಡಿಯೂರಪ್ಪ ಎಂಬ ಬಿಜೆಪಿಯ ವಿರೋಧ ಪಕ್ಷ

’ಕತ್ತಲು ಕರಗುವುದು, ಕಮಲ ಅರಳುವುದು’ ಇದು ಜನಸಂಘ ಭಾರತೀಯ ಜನತಾ ಪಕ್ಷವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ ಭಾಷಣದಲ್ಲಿದ್ದ ಆಶಯ.
ಸಮಯ ಸಾಗಿದೆ, ವರ್ಷಗಳು ಉರುಳಿದೆ. ಕಮಲ ಅರಳಿದೆ. ಆದರೆ ಕತ್ತಲೆ...? ವಿಪರ್ಯಾಸವೆಂದರೆ ಕಮಲದೊಳಗೆ ಕತ್ತಲೆ ಆವರಿಸಿಕೊಳ್ಳತ್ತಿದೆಯಾ ಎಂಬ ಭಯ ಕಾಡುತ್ತಿದೆ. ಅದರಲ್ಲೂ ರಾಜ್ಯ ಬಿಜೆಪಿಯನ್ನು ಕಂಡಾಗ!
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉದಾತ್ತ ಗುರಿಗಳನ್ನಿಟ್ಟುಕೊಂಡು ಅದನ್ನು ಸಾಧಿಸಲು ಸನ್ಮಾರ್ಗವನ್ನೇ ಆಯ್ದುಕೊಂಡು ಅದರಲ್ಲೆ ಸಾಗುತಿರುವ ಸಂಘಟನೆ. ಬಿಜೆಪಿ ಅದರ ರಾಜಕೀಯ ಉದ್ದೇಶಗಳನ್ನು ಪೂರೈಸಲಿರುವ ಸಂಘಟನೆಯಾಗಿದ್ದುಕೊಂಡು ಯಾಕಿಷ್ಟು ನೈತಿಕ‌‌‌‌‌‌‌‌‌‌‌ ಅಧ:ಪತನಕ್ಕಿಡಾಗುತ್ತಿದೆ? ಎಂಬುದೇ ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದಿದೆ.
ಬಿಜೆಪಿ ಕೇಂದ್ರದಲ್ಲಿ ಸುಮಾರು ಆರು ವರ್ಷಗಳ ಕಾಲ ಆಡಳಿತ ನಡೆಸಿದ ಎನ್ ಡಿ ಎ ಮೈತ್ರಿಕೂಟದ ನೇತ್ರತ್ವ ವಹಿಸಿತ್ತು. ಉತ್ತಮ ಆಡಳಿತವನ್ನೇ ನೀಡಿತ್ತು ಕೂಡ. ಆದರೆ ಅಧಿಕಾರ ಕಳೆದುಕೊಂಡಿದ್ದು ಅನಿರೀಕ್ಷಿತ. ಅದರ ಬಗ್ಗೆ ಇಂದಿಗೂ ಒಂದು ಬಗ್ಗೆಯ ಅವ್ಯಕ್ತ ಖೇದವಿದೆ. ಇವತ್ತಿಗೂ ಒಬ್ಬ ಬಿಜೆಪಿ ಕಾರ್ಯಕರ್ತ ಆ ಆರು ವರ್ಷಗಳ ಬಗ್ಗೆ ಹೆಮ್ಮೆಯಿಂದ ಎದೆ ತಟ್ಟಿ ಮಾತನಾಡುತ್ತಾನೆ ಅದಾಗಿ ಐದು ವರ್ಷಗಳ ಬಳಿಕವೂ!
ಅದೇ ವಾಜಪೇಯಿ ಮತ್ತವರೊಂದಿಗೆ ಹೆಚ್ಚುವರಿಯಾಗಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಆದರ್ಶ ಎಂದು ಹೇಳುತ್ತ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯಿತು. ಅಧಿಕಾರಕ್ಕೆ ಬಂದದ್ದೆ ತಡ ಈ ಆದರ್ಶಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದೆ.
ಬರಿ ಹತ್ತು ತಿಂಗಳ ಹಿಂದೆ ಕರ್ನಾಟಕದ ಬಿಜೆಪಿ ಕಾರ್ಯಕರ್ತನಿಗೆ ಮಾದರಿ ಹೋರಾಟಗಾರ ಮತ್ತು ಆದರ್ಶ ವ್ಯಕ್ತಿಯಾಗಿದ್ದ ಯಡಿಯೂರಪ್ಪ ಇಂದು ಅದೇ ಕಾರ್ಯಕರ್ತರಿಗೆ ಅಸಹ್ಯ ಹುಟ್ಟಿಸಿದ್ದಾರೆ.
ಒಂದೂರು. ಅಲ್ಲಿ ಬಹು ಹಿಂದಿನಿಂದಲೂ ಒಂದು ಮನೆ ಅರೆಸ್ಸೆಸ್ ಮನೆಯೆಂದೆ ಗುರುತಿಸಲ್ಪಟ್ಟಿತ್ತು. ಆ ಮನೆಯ ಯಜಮಾನ ಜನಸಂಘದ ಕಾಲದಿಂದಲೂ ಇಂದಿನ ಬೆಜೆಪಿಯ ಮೂಲ ತತ್ವಗಳ ಪ್ರತಿಪಾದಕರು.ಅ ಊರಿನಲ್ಲಿ ಈ ಪಕ್ಷದ ಐಡೆಂಟಿಟಿಯಾಗಿ ಗುರುತಿಸಲ್ಪಟ್ಟವರು. ಹಿಂದುತ್ವದ ಕೆಲಸಕ್ಕಾಗಿ ತಮ್ಮ ಕೈಯಿಂದಲೇ ಖರ್ಚು ಮಾಡುತ್ತಿದ್ದವರು. ಸಂಘ ಅಥವಾ ಪಕ್ಷದಿಂದ ಅವರೇನು ಬಯಸಿದವರಲ್ಲ. ಸಂಘಟನೆಗಾಗಿ ಅವರು ಹಲವರ ವಿರೋಧ ಕಟ್ಟಿಕೊಂಡವರು. ಅವರು ಈಗಲೂ ಹಾಗೆಯೇ ಇದ್ದಾರೆ. ಅದೇ ಬಡತನ, ತನ್ನತನ ಮತ್ತು ಆದರ್ಶದೊಂದಿಗೆ!
ಅವರ ಮನೆಯಿಂದ ೨-೩ ಕಿಲೋಮಿಟರ್‍ ದೂರದಲ್ಲಿ ಹೊಸದೊಂದು ಮನೆ ನಿರ್ಮಾಣವಾಗಿದೆ. ಅದಕ್ಕೆ ಸುಮಾರು ೪೦ ಲಕ್ಷ ಖರ್ಚಾಗಿರಬಹುದು. ಆ ಮನೆ ತುಂಬಾ ಐಷಾರಾಮಿ ವಸ್ತುಗಳಿವೆ. ಮನೆ ಸದಸ್ಯರ ಹೆಸರಲ್ಲಿ ಸಾಕಷ್ಟು ಅಕೌಂಟ್ ಗಳಿವೆ. ಅವನಲ್ಲಿ ಕನಿಷ್ಟ ೧ ಕೋಟಿ ರೂಪಾಯಿಯ ಆಸ್ತಿಯಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ವಷðಗಳ ಹಿಂದೆ ಅವನು ಕೇವಲ ಎರಡು ಎಕರೆ ಭೂಮಿಗೆ ಒಡೆಯನಾಗಿದ್ದ. 'ಇಷ್ಟೆಲ್ಲಾ ಅಸ್ತಿಯನ್ನು ಸಂಪಾದಿಸುತ್ತೇನೆ' ಎಂದು ಅವನು ಕನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಅವನು ಇಷ್ಟೆಲ್ಲ ಹೇಗೆ, ಎಲ್ಲಿಂದ, ಯಾವಗ ಸಂಪಾದಿಸಿದ? ಉತ್ತರ ಸರಳವಾಗಿದೆ. ಅವನು ಯಡಿಯೂರಪ್ಪನವರ ಹತ್ತಿರದವರೊಬ್ಬರ ಆಪ್ತ ಕಾರ್ಯದರ್ಶಿಯಾಗಿದ್ದಾನೆ ಅಷ್ಟೇ!
ನನಗೆ ಗೊತ್ತಿರುವಂತೆ ಒಬ್ಬರು ಬಿಜೆಪಿ ನಾಯಕರಿದ್ದಾರೆ. ಅವರು ಎಲ್ಲಾ ರೀತಿಯಲ್ಲೂ ಚುನಾವಣೆಗೆ ಸ್ಪರ್ಧಿಸಲು ಆರ್ಹರಾಗಿದ್ದರು. ಆದರೆ ಚುನಾವಣೆಗೆ ಚೆಲ್ಲಲ್ಲು ಬೇಕಾಗಿದ್ದ ಹಣ ಅವರಲ್ಲಿರಲಿಲ್ಲ. ಅವರಿಗೆ ಟಿಕೆಟ್ ನಿರಾಕರಿಸಲು ಇದೇ ವಾಸ್ತವ ಕಾರಣ!
ರಾಜಕೀಯ ಪಕ್ಷಗಳ ಮುಖ್ಯ ಉದ್ದೇಶ ಅಧಿಕಾರ ಗಳಿಸುವುದು ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಯೇ, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತನ ಕನಸು ಆಡಳಿತ ನಡೆಸುವುದು. ಅವರಿಗೂ ಈ ಕನಸಿದೆ. ಇನ್ನಾವರು ಏನೂ ಮಾಡಬೇಕು? ತನ್ನ ’ಜನಪರ’ ಕೆಲಸ ಬಿಟ್ಟು ’ಹಣ’ ಮಾಡಬೇಕು ಅಷ್ಟೇ.
ಹತ್ತು ತಿಂಗಳ ಹಿಂದೆ ಅಂದರೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಅಂದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ದುಡಿದಿದ್ದ ಅನೇಕ ಕಾರ್ಯಕರ್ತರು ಈ ಚುನಾವಣ ಸಂದರ್ಭ ಮನೆಯಲ್ಲಿ ಕುಳಿತಿದ್ದಾರೆ. ಕಾರಣ, ಅವರು ಇಷ್ಟರವರೆಗೆ ಕಾಂಗ್ರೇಸ್, ತ್ರತೀಯ ರಂಗ ಏನು ಮಾಡಿದೆ, ಮಾಡಿತ್ತು, ಮಾಡಬಹುದು ಎಂದು ಹೇಳುತ್ತ ಬಂದಿದ್ದರೋ ಅದನ್ನೀಗ ಅವರ ಪಕ್ಷ ಮಾಡುತ್ತಿದೆ. ಇದನ್ನು ಜನ ಸಾಮಾನ್ಯ ಇವರಲ್ಲಿ ಪ್ರಶ್ನಿಸಿದರೆ ಅವರಿಗೆ ಉತ್ತರ ನೀಡಲು ಆಗುತ್ತಿಲ್ಲವಂತೆ.
ಹಿರಿಯ ಅರೆಸ್ಸೆಸ್ ಸ್ವಯಂಸೇವಕರೊಬ್ಬರ ಜತೆ ಮಾತನಾಡುತ್ತಿದೆ ಆಗ ಅವರು " ಹಿಂದೆ ಅರೆಸ್ಸೆಸ್ ಸ್ವಯಂಸೇವಕ ಎಂದರೆ ಊರಿಗೆ ಸ್ವಾಮೀಜಿ ಇದ್ದಂತೆ, ಜನರು ಅಷ್ಟು ಗೌರವದಿಂದ ಕಾಣುತ್ತಿದ್ದರು, ಇಂದಿಗೂ ಅರೆಸ್ಸೆಸ್ ಸ್ವಯಂಸೇವಕರಿಗೆ ಆ ಮಾರ್ಯಾದೆ ಇದ್ದೆ ಇದೆ. ಅದರೆ ಬಿಜೆಪಿಯಲ್ಲಿ ಎಲ್ಲೂ ಸಲ್ಲದ, ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದವರೇ ಕಾರ್ಯಕರ್ತರಾಗುತ್ತಿದ್ದರೆ ಮತ್ತು ಅವರಿಗೆ ಪಕ್ಷದಲ್ಲಿ ಒಳ್ಳೆ ಸ್ಥಾನಮಾನ ಸಿಗುತ್ತಿದೆ" ಈ ನೋವು ಯಡ್ಡಿಗೆ ಅರ್ಥವಾಗುತ್ತದೆಯೇ?
ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ೨೦೦೮ರಲ್ಲಿ ಅಣು ಒಪ್ಪಂದದ ಸಂಬಂಧ ನಡೆದ ಅವಿಶ್ವಾಸ ಗೊತ್ತುವಳಿ ಸಂದರ್ಭ ತಿಪ್ಪರಲಾಗ ಹಾಕಿದ ರಾಜ್ಯದ ಮೂವರು ಸಂಸದರ ಉದಾಹರಣೆ ಯಡ್ಡಿ ಮುಂದೆ ಇದೆ. ಅದರೂ...?
ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಗೋಚರಿಸಿರುವ ಕರ್ನಾಟಕ ಅದರ ಪಾಲಿಗೆ ಮತ್ತೊಂದು ಉತ್ತರ ಪ್ರದೇಶವಾಗದಿದ್ದರೆ ಸಾಕು!
ಬಿಜೆಪಿ ಆಡಳಿತದ ಖದರು ನೆರೆಯ ರಾಜ್ಯಗಳಿಂದ ರಾಜ್ಯದ ಗಡಿ ಪ್ರವೇಶಿಸಿದೊಡನೆ ಗೊತ್ತಾಗಬೇಕು, ಈ ರಾಜ್ಯ ಪ್ರಕಾಶಿಸುತ್ತಿದೆ ಎಂದೆನಿಸಬೇಕು. ಬಿಜೆಪಿಯ ಬಗ್ಗೆ ಧನಾತ್ಮಕ ಆಭಿಪ್ರಾಯ ಮೂಡಬೇಕು. ಆದರೆ ಈಗ ಹಾಗಾಗುತ್ತಿದೆ ಎಂದು ಯಾರಿಗದರೂ ಅನಿಸುತ್ತಿದೆಯೇ?
ಒಬ್ಬ ವ್ಯಕ್ತಿಯ ಆಡಳಿತ ಸಾಮರ್ಥ್ಯವನ್ನು ಅಳೆಯಲು ಹತ್ತು ತಿಂಗಳು ಸಾಕಾಗುವುದಿಲ್ಲ ಅದರೆ ಕಳೆದುಕೊಂಡಿರುವ ಸೈದ್ದಾಂತಿಕ ನೆಲೆಗಟ್ಟನ್ನು ಇನ್ನು ಹತ್ತು ವರ್ಷ ಕಳೆದರೂ ಗಳಿಸಿಕೊಳ್ಳಲು ಸಾಧ್ಯನಾ? ವಾಜಪೇಯಿ ಸರ್ಕಾರ ಹದಿಮೂರು ತಿಂಗಳು ಆಡಳಿತ ನಡೆಸಿ ಅಧಿಕಾರದಿಂದ ಕೆಳಗಿಳಿದಾಗ ಒಬ್ಬ ಸಾಮಾನ್ಯ ಕಾರ್ಯಕರ್ತ ಮುಂದಿನ ಬಾರಿ ಬಿಜೆಪಿಯೇ ಆಡಳಿತ ನಡೆಸಬೇಕು ಎಂದು ಹಠ ಕಟ್ಟಿ ದುಡಿದಿದ್ದ, ಆಗ ಯಾರೂ ಕೊಂಕು ನುಡಿದಿರಲಿಲ್ಲ. ಯಾಕೆಂದರೆ ವಾಜಪೇಯಿ, ಅಡ್ವಾಣಿ ರೂಪಿಸಿದ್ದ ಮಾದರಿ ಮತ್ತು ಆ ಬಗೆಗಿನ ಅವರ ನಿಷ್ಟೆ ಅಷ್ಟು ಉನ್ನತವಾಗಿತ್ತು. ಆದರೆ ಯಡ್ಡಿಯದ್ದು?
ವಾಜಪೇಯಿಗೆ ಮಂತ್ರಿಯಾಗಬೇಕು ಎಂದೆನಿಸಿದ್ದರೆ ಅವರು ಆ ಅಸೆ ಯಾವತ್ತೋ ಈಡೇರುತ್ತಿತ್ತು. ಆದರೆ ಆವರು ಹಾಗೇ ಮಾಡಲಿಲ್ಲ ಯಾಕೆಂದರೆ ಅವರಿಗೆ ಸಿದ್ದಾಂತ ಮುಖ್ಯವಾಗಿತ್ತು. ಅದ್ದರಿಂದಲೇ ಅವರು ಇಂದಿಗೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಹ್ರದಯ ಸಿಂಹಾಸನದೀಶ್ವರ. ಈ ಕಾರಣಕ್ಕೇಯೆ ಅವರ ಬಗ್ಗೆ ಬಿ. ಕೆ. ಹರಿಪ್ರಸಾದ್ ಎಂಬ ಕಾಂಗ್ರೇಸ್ ನಾಯಕ ಕೇವಲವಾಗಿ ಮಾತನಾಡಿದಾಗ ನಮ್ಮ ರಕ್ತ ಕುದಿಯುವುದು. ಅದೇ ಯಡ್ಡಿ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅವರಿಗೆ ಮಾತ್ರ ಕೋಪ ಬರುತ್ತದೆ. ಉಳಿದವರು ಮುಸಿಮುಸಿ ನಗುತ್ತಿರುತ್ತಾರೆ!
ಇಂದು ರಾಜ್ಯ ಬಿಜೆಪಿಗೆ ನಾಯಕರ ಕೊರತೆಯಿಲ್ಲ, ಕೊರತೆ ಇರುವುದು ಸೈದ್ದಾಂತಿಕತೆ ಮತ್ತು ನೈತಿಕತೆಯದ್ದು. ಯಡ್ಡಿ ಸಾಗುತ್ತಿರುವ ಹಾದಿಯಲ್ಲಿ ಸಾಗಿದರೆ ಅವರು ಮತ್ತು ಕೆಲವರು ಮಾತ್ರ ಲಾಭ ಪಡೆಯುತ್ತಾರೆ. ಬಿಜೆಪಿಗೆ ತನಗಿದರಿಂದ ಲಾಭವಾಗಿದೆ ಎಂದೆನಿಸಬಹುದು ಆದರೆ ಇದರ ದೂರಾಗಾಮಿ ಪರಿಣಾಮ ಮಾತ್ರ ಋಣಾತ್ಮಕ. ಮುಂದೊಂದು ದಿನ ಆಥವಾ ಶೀಘ್ರದಲ್ಲೇ ಬಿಜೆಪಿಗೆ ನೈಜ ಮತ್ತು ಜನಪರ ನಾಯಕರು, ಕಾರ್ಯಕರ್ತರೇ ಇಲ್ಲದೇ ಹೋಗಬಹುದು.
ಕೆಲವೇ ದಿನಗಳ ಹಿಂದೆ ಚುನಾವಣೆಯ ಅಮಲಿನಲ್ಲಿ, ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳುವ ಬರದಲ್ಲಿ ನಾನು ಆಧಿಕಾರದಲ್ಲಿರುವ ತನಕ ಅಲ್ಪಸಂಖ್ಯಾತರ ಒಂದು ಕೂದಲನ್ನು ಕೂಡ ಕೊಂಕಲು ಬಿಡುವುದಿಲ್ಲ ಎಂದು ಆರ್ಭಟಿಸಿದ್ದರು ನಮ್ಮ ಮುಖ್ಯ ಮಂತ್ರಿಗಳು. ಅದನ್ನೇ ಕೋಮು ಗಲಭೆಯ ಹೆಸರಿನಲ್ಲಿ ರಾಜ್ಯದ ಯಾವುದೇ ನಾಗರಿಕನ ಕೂದಲು ಕೂಡ ಮುಟ್ಟಲು ಬಿಡುವುದಿಲ್ಲ ಎಂದನ್ನುತ್ತಿದ್ದಾರೆ ಅದೇಷ್ಟು ಅರ್ಥಪೂðಣವಾಗಿರುತ್ತಿತ್ತು. ಈ ಮಾತು ಬಿಜೆಪಿ ಬಹುಸಂಖ್ಯಾತರ ಪಕ್ಷ ಅಲ್ಲವೆಂಬುದನ್ನು ಸಾಬೀತು ಪಡಿಸಿತು. ತಾವು ಜಾತ್ಯತೀತರು ಎಂದು ಕರೆದುಕೊಳ್ಳವ ಪಕ್ಷಗಳು ಮತ್ತು ಅಲ್ಪಸಂಖ್ಯಾತ ವರ್ಗದ ಬಹುಪಾಲು ನಾಯಕರುಗಳು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದೇ ಹೇಳುತ್ತಾರೆ. ಇನ್ನೂ ರಾಜ್ಯದ ಬಿಜೆಪಿ ಸರಕಾರವನ್ನು ಅಭಿವ್ರಧಿಪರ ಪಕ್ಷ ಎಂದು ಒಪ್ಪಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಾದರೆ ಬಿಜೆಪಿ ಯಾರ ಪಕ್ಷ?
ನನಗಂತೂ ಆಡ್ವಾಣಿ ಪ್ರಧಾನಿಯಾಗಬೇಕೆಂಬ ಆಸೆ ಬೆಟ್ಟದಷ್ಟಿದೆ. ಆದರೆ ರಾಜ್ಯ ಬಿಜೆಪಿಯ ಬಗ್ಗೆ ಮತ್ತು ಅದು ಸಾಗುತ್ತಿರುವ ಹಾದಿಯ ಬಗ್ಗೆ ರೇಜಿಗೆಯಿದೆ.
ನನ್ನ ಯೋಚನೆ ಹೀಗಿದೆ, ಆಡ್ವಾಣಿ ದೇಶದ ಪ್ರಧಾನಿ ಆಗಬೇಕು ಆದರೆ ರಾಜ್ಯದಲ್ಲಿ ಬಿಜೆಪಿ ನಿರಾಶಾದಾಯಕ ಪ್ರದರ್ಶನ ನೀಡಬೇಕು. ಇಲ್ಲದೇ ಹೋದಲ್ಲಿ ಯಡ್ಡಿ ಮತ್ತವರ ಸಂಗಡಿಗರು ತಾವು ಮಾಡಿದ್ದು ಸರಿ ಮತ್ತು ಇದಕ್ಕೆ ಜನರ ಆಶಿರ್ವಾದ ಇದೆಯೆಂದು ಭಾವಿಸಿ ರಾಜ್ಯದಲ್ಲಿನ ನೈಜ ಬಿಜೆಪಿಯನ್ನು ಬುಡಸಮೇತ ಕಿತ್ತೆಸೆಯುವುದ ಖಂಡಿತ.

No comments: