Wednesday, July 20, 2011

ನಾಳೆ ಮದುವೆ ಆದ ಮೇಲೂ ನಾನು ತರಕಾರಿ ಕೊಂಡು ಹೋಗ್ಬೇಕಾಗುತ್ತಾ?

’ಆಟೋ’ಬಯೋಗ್ರಾಫಿ - ಭಾಗ ೨

ಯಾವುದಕ್ಕೆ ಕೈ ಹಿಡಿಯೋದು... ಜನ ಕಡಿಮೆ ಇರುವುದಕ್ಕಾ? ಹುಡುಗಿಯರು ಇರುವುದಕ್ಕಾ? ಅಲ್ಲಾ ಉದ್ದನೆದಕ್ಕಾ...? ನೋಡುವ ಯಾವುದಾದರೆ ಏನು? ಹಣೆಯಲ್ಲಿ ಬರೆದದ್ದು.... ಹೋ... ದೇವರು ಇದನ್ನು ಕೂಡ ಹಣೆಯಲ್ಲಿ ಬರೆದಿರುತ್ತಾನಾ? ಇಲ್ಲ... ಇದೆಲ್ಲಾ ಬರೆದಿರಲಿಕ್ಕಿಲ್ಲ... ಅಲ್ಲಾ ನಾನು ಹೋಗುವಾಗ ಎಲ್ಲಾದರೂ ಆಕ್ಸಿಡೆಂಟ್ ಆದರೆ... ಹೌದಲ್ಲ... ಇಲ್ಲ ಅವನು ಆಕ್ಸಿಡೆಂಟ್ ಆಗುವಂತದನ್ನು ಮಾತ್ರ ಬರೆದಿರಬಹುದು... ಇರಬಹುದೇನೋ... ಈ ಕಳ್ಳ ಜ್ಯೋತಿಷಿಗಳು ನಮ್ಮ ದೇವರ ಕಲ್ಪನೆಯನ್ನೇ ಹಾಳು ಮಾಡುತ್ತಿದ್ದಾರೆ... ನಾಯಿ ಮಕ್ಕಳು... ಇಲ್ಲ ನಾನು ಆವತ್ತು ಭೇಟಿ ಆದ ಜ್ಯೋತಿಷಿ ನನ್ನ ಬಗ್ಗೆ ಅದೆಷ್ಟು ನಿಖರವಾಗಿ ಹೇಳಿದ್ನಲ್ಲ... ಹುಂ ಜ್ಯೋತಿಷ್ಯ ಸತ್ಯ... ಆದರೆ ಈ ಟಿವಿಯಲ್ಲಿ ಬರೋ ಜ್ಯೋತಿಷಿಗಳಲ್ಲ... ಅವರು ಕಳ್ ನನ್ ಮಕ್ಕಳು... ಏನನ್ನು ಸಾರ್ವತ್ರಿಕರಣ ಮಾಡಬಾರದು... ಹೌದು ನಾನು ಕೂಡ ಅದೆಷ್ಟೋ ಬಾರಿ ಹಾಗೆ ಅಂದ್ಕೊಳ್ಳುತ್ತೇನೆ... ಆದರೂ ಮಾಡಿಯೇ ಬಿಡುತ್ತೇನೆ... ಹೋ... ಇಲ್ಲ ಆ ತರಹ ನಾನು ಮಾಡೋದಿಲ್ಲ... ಮೊದಲಿಗೆ ಹಾಗೇ ಭಾವಿಸಿಕೊಂಡ್ರು ಕೊನೆಗೆ ಪರ್ಟಿಕ್ಯುಲರ್ ಆಗಿರುತ್ತೀನಿ... ಇವತ್ತೇನು ಎಲ್ಲ ರಿಕ್ಷಾಗಳು ಬಸುರಿಯಾಗಿವೆ... ನೋಡೋಣ ರೂಮ್‌ಗೆ ಹೋಗಿ ಕಡಿದು ಕಟ್ಟೆ ಹಾಕೋದು ಏನಿದೆ... 'ಪರ್ವ' ಓದೋಕ್ಕಿದೆ... ನೆಕ್ಸ್ಟ್ ಬರೋ ಗಾಡಿ ಹತ್ತೋದೆ... ಏನು ಬೇಕಾದರೂ ಆಗಲಿ... ಹೋ ಅದು ಖಾಲಿ ಇದೆ... ಕೈ ಹಿಡಿಬೇಕಾ... ಬೇಡ ಅವನೇ ಸ್ಲೋ ಆದ... ಅವನಿಗೆ ಅರ್ಥ ವಾಯಿತು... ಮುಂದೆ ಕೂರೋದ ಅಲ್ಲ... ಹಿಂದೆನಾ... ಹಿಂದೆನೇ ಕೂರೋಣ... ಬೈಯ್ಯಾ ಬಾಸಠ್... ಇವತ್ತು ತರಕಾರಿ ಅಗಬೇಕಲ್ಲ... ಹುಂ... ಏನು ತಗೊಳ್ಳೋದು... ಮಾರ್ಕೆಟ್‌ಗೆ ಹೋಗಿ ನೊಡೋಣ... ತರಕಾರಿ ಜೊತೆ ಏನು ಆಗ್ಬೇಕು... ಸದ್ಯ ಏನು ಬೇಡ ಅನ್ನಿಸುತ್ತೆ.... ಬೇಕು ಅಂದ್ರೆ ಶೆಟ್ರು ಹೇಳ್ತಾರೆ... ಸರಿ ಇವತ್ತು ಜ್ಯೂಸ್... ಕಲ್ಲಂಗಡಿದ್ದೇ ಮಾಡೋಣ... ರೂಂ ಕೀ... ಕಿಸೆಯಲ್ಲೇ ಇದೇ ತಾನೇ... ಮನೆಯಲ್ಲಿ ಅಜ್ಜಿ, ಅಮ್ಮ ಎಲ್ಲ ಅಡಿಗೆ ಮಾಡೋದನ್ನು ದೊಡ್ಡ ಕುಂಬಳಕಾಯಿ ಕೆಲಸದ ಹಾಗೆ ಮಾಡುತ್ತಿದ್ದರು... ಆದರೆ ಇದು ಎಷ್ಟು ಸುಲಭ... ಹುಂ ಎಲ್ಲರಿಗೂ ಅಷ್ಟೆ ಅವರವರ ಕೆಲಸವೇ ದೊಡ್ಡದು... ನಾಳೆ ಮದುವೆ ಆದ ಮೇಲೂ ನಾನು ತರಕಾರಿ ಕೊಂಡು ಹೋಗ್ಬೇಕಾಗುತ್ತಾ? ಯಾರಿಗೆ ಗೊತ್ತು... ಹಣೆಯಲ್ಲಿ ಏನೂ ಬರೆದಿದೆ ಅಂತ... ನಾಲ್ಕು ಜನರ ಮಧ್ಯೆ ರಿಕ್ಷಾ ನಿಲ್ಲಿಸುತ್ತಾನೆ... ತಲೆ ಸರಿಯಿಲ್ವಾ ಇವನಿಗೆ.... ಇವನಲ್ಲ... ಎಲ್ಲ ರಿಕ್ಷಾದವರು ಹೀಗೆಯೇ... ಇಲ್ಲ, ಈಗ ಜನ ಆಗೋದಿಲ್ಲ ಅದರೂ... ಬಾಸಠ್, ವಿಜಯ ನಗರ ಅಂತ ಕರೆಯುತ್ತಾನೆ... ಹೋ ಅವರು ಒಂದು ಈ ರಿಕ್ಷಾ ಹತ್ತದಿದ್ದರೆ ಸಾಕು... ಇಲ್ಲಿನ ಬಸ್ಸಿನವರಿಗೆ ಭಾಷೆ ಅನ್ನುವುದೇ ಇಲ್ಲ... ಮೆಸೆಜ್ ಬಂತಾ ಅಂತ... ಇವನು ಫಾರ್ವರ್ಡ್ ಮೆಸೆಜ್ ಮಾಡಿದ್ದಾನೆ... ಇವರ‍್ಯಾಕೆ ಇಂತಹ ಫಾರ್ವರ್ಡ್ ಮೆಸೆಜ್ ಮಾಡುತ್ತಾರೆ... ಉಪದೇಶ ಕೊಡುತ್ತಾ, ಲವ್ ಅಂದ್ರೆ ಹಾಗೇ, ಫ್ರೆಂಡ್‌ಶಿಪ್ ಅಂದ್ರೆ ಹೀಗೆ ಅಂತ... ಅದ್ರ ಬದಲು ಫನ್ನಿ ಅಗಿರೋ ಮೆಸೆಜ್ ಮಾಡೋಕ್ಕೆ ಆಗೋದಿಲ್ವಾ? ಎಲ್ಲರೂ ಉಪದೇಶ ಕೊಡುವವರೇ ಅಯಿತು... ಅಪ್ಪ, ಅಮ್ಮನಿಂದ ಹಿಡಿದು.... ಇವನ ತನಕ... ನನಗೆ ಬ್ಲ್ಯಾಕ್ ಬೆರಿ ಸೆಟ್ ತಗೋಬೇಕು ಅಂತ ಇತ್ತು... ತಪ್ಪಿದ್ರೆ ಗ್ಯಾಲಕ್ಸಿ... ಕರ್ಮ ಅವೆರಡರಲ್ಲೂ ಡ್ಯೂಯಲ್ ಸಿಮ್ ಇಲ್ಲ... ಸುಧೀರ್ ಜೊತೆ ಬ್ಲ್ಯಾಕ್ ಬೆರಿಯಲ್ಲೂ ಡ್ಯೂಯಲ್ ಸಿಮ್ ಹಾಕಿಸ್ಲಿಕ್ಕೆ ಹೇಳಬೇಕು... ಅವರು ಎನು ಹೇಳ್ತಾರೆ... ನಗ್ತಾರೆ ಅಷ್ಟೆ... ಈ ನೊಯ್ಡಾ ಮುಂದೊಂದು ದಿನ ಇನ್ನು ನಾಲ್ಕೈದು ವರ್ಷದಲ್ಲೇ ಭಾರತದ ನ್ಯೂಯಾರ್ಕ್ ಆಗುತ್ತೆ... ನಾನು ಅದೆಷ್ಟು ಲಕ್ಕಿ... ಮಾಯಾವತಿ ಇಲ್ಲಿ ಒಳ್ಳೆ ಕೆಲಸ ಮಾಡ್ತಾ ಇದ್ದಾಳೆ... ಈ ಫೋರ್ಟಿಸ್ ಪಕ್ಕ ಜಾಮ್ ಆಯಿತಾ... ಈ ಅಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ತುಂಬ ಕೊಸ್ಟ್‌ಲೀ ಅಂತೆ... ಈ ಹಾಸ್ಟಿಟಲ್ ಪಕ್ಕನೂ ಒಂದು ಸಿಗ್ನಲ್ ಲೈಟ್... ಇಲ್ಲೂ ಗಾಡಿ ನಿಲ್ಲಬೇಕು... ನಮ್ಮ ಲೈಫ್‌ಗೂ ಈ ಸಿಗ್ನಲ್‌ಗೂ ಏನೋ ಸಂಬಂಧವಿದೆ... ಹೌದು ನಾವು ಕೂಡ ಅಸ್ಪತ್ರೆಯಲ್ಲಿ ಇರುವಾಗ ವಿಶ್ರಾಂತಿ ಪಡಿತೇವೆ... ಇಲ್ಲೂ ಗಾಡಿ ಪಡೆಯುತ್ತಾ ಇದೆ... ಆದ್ರೆ... ಈ ಸಿಗ್ನಲ್‌ಗೆ ನಮ್ಮ ಗಾಡಿಯವ ಸ್ಪಂದಿಸದಿದ್ದರೆ... ಅದೇ ರೀತಿ ಅಸ್ಪತ್ರೆಯಲ್ಲಿ ಡಾಕ್ಟರ್‌ಗಳ ಮದ್ದಿಗೆ ನಾವು ಸ್ಪಂದಿಸದಿದ್ದರೆ... ಹೋಗೋದು ಯಮಪುರಿಗೆ... ಹೀಗೆ ಸುಮ್ಮನೆ ಕೂತ್ಕೊಂಡಿದ್ದಾಗ ಎಷ್ಟೆಲ್ಲ ಯೋಚನೆ ಬರುತ್ತೆ... ಇದನ್ನು ಬರೆದು ಇಟ್ಕೊಬೇಕು... ಅದೆಲ್ಲಾ ಅಗಿ ಹೋಗೋದು ಅಲ್ಲಾ... ನಾನು ಬರೆದದ್ದೆಲ್ಲವನ್ನು ಇನ್ನೂ ಟೈಪ್ ಮಾಡಿಲ್ಲ... ಇನ್ನೂ ಹೊಸದಾಗಿ ಬರೆಯೋದು... ಅಷ್ಟರಲ್ಲೇ ಇದೆ... ಸಿಗ್ಮಲ್ ಪಾಸ್ ಆಯಿತು ಬಚಾವ್... ಹೋ ಈ ಅಂಟಿ ಹತ್ತುತ್ತಾರ... ಒಳ್ಳೆ ಮಾಂಸ ಪರ್ವತ... ಇವರು ರಮ್ಯನ ತರಹ ಇದ್ದಾರಲ್ಲ... ಹುಂ... ರಮ್ಯನು ೪೦ ವರ್ಷ ಅದಾಗ ಇದೇ ರೀತಿ ಆಗಬಹುದಾ? ಇಲ್ಲ... ಇಲ್ಲ... ಅವಳು ಅಷ್ಟೆ ದಪ್ಪ... ಅದಕ್ಕಿಂತ ದಪ್ಪ ಆಗ್ಲಿಕ್ಕಿಲ್ಲ... ಅದೇ ಮ್ಯಾಕ್ಸಿಮಮ್...ಇನ್ನೂ ದಪ್ಪ ಆದ್ರೆ... ಅವಳದ್ದು ಅವಳ ಅಮ್ಮನ ರೀತಿಯ ಶರೀರ... ಮತ್ತೇ ಹುಡುಗಿಯರನ್ನು ಹೇಳಲು ಆಗುತ್ತಾ... ಎಲ್ಲರೂ ಹುಡುಗಿಯರ ಮನಸ್ಸು ಚಂಚಲ ಅಂತಾರೆ...ಅವರೇನು ಯೋಚಿಸ್ತಾರೆ ಅನ್ನೋದೆ ಗೊತ್ತಾಗುವುದಿಲ್ಲ ಅಂತಾರೆ... ನನ್ನ ಜೊತೆ ಕೇಳಿದ್ರೆ ಅವರ ಮನಸ್ಸು ಮಾತ್ರವಲ್ಲ ದೇಹನೂ ಚಂಚಲ ಅಂತಾ ಹೇಳ್ತೇನೆ...ಯಾವಾಗ ಹೇಗೆ ಆಗುತ್ತೋ... ಆ ಹುಡುಗಿ ಈ ಬಾರಿ ನನಗೆ ಬರ್ತ್ ಡೇ ವಿಶ್ ಮಾಡಿಲ್ಲ ಅಲ್ವಾ... ನಾಲ್ಕು ವರ್ಷದಿಂದ ತಪ್ಪದೇ ವಿಶ್ ಮಾಡುತ್ತಿದ್ದಳು... ಬಿಡು... ಅದೆಲ್ಲ ಯೋಚಿಸುತ್ತ ಇರ‍್ಲಿಕ್ಕಾಗುತ್ತಾ... ಅವಳೇನು ನನಗೆ ಲೈಫ್ ಲಾಂಗ್ ವಿಶ್ ಮಾಡುತ್ತಿರುತ್ತೇನೆ ಅಂದಿದ್ಲಾ... ಇಲ್ಲ ತಾನೇ? ಮತ್ತೇ? ಅವಳ ಜೊತೆ... ನನ್ನ ಫ್ರೆಂಡ್ಸ್ ಅಂದ್ರೆ ಪಿಯುಸಿಯಲ್ಲಿ ಇದ್ದವರು... ಅಬ್ಬಾ... ಏನು ಗಮ್ಮತ್ತು... ಆಗ ಅದೆಷ್ಟು ಕಾರುಬಾರು ಮಾಡಿದ್ವಿ... ಯಾರಿಗೂ ಕ್ಯಾರ್ ಮಾಡುತ್ತಿರಲಿಲ್ಲ... ಪ್ರವೀಣ್‌ಗೆ ಹೊಡೆಯಲು ಹೋದದ್ದು... ಇಲ್ಲ, ನಾನು ಹೊಡಿಯಲು ಹೋಗಿರಲಿಲ್ಲ... ನನ್ನ ಐಡಿ ಸೀಜ್ ಆಗಿದ್ದು... ಹುಂ... ಪುಷ್ಟ, ವಚನ್ ಎಲ್ಲ ಹೊಡಿಯಲು ಹೋಗಿದ್ದು... ನಾನು ಆಗ ಇವರನ್ನೆಲ್ಲ ಬಚಾವ್ ಮಾಡಿದ್ದು... ಆ ಪ್ಲ್ಯಾನ್ ಅಬ್ಬಾ... ಅರ್ಧ ಗಂಟೆಯಲ್ಲಿ ಐಡಿ ನಮ್ಮ ಕೈಯಲ್ಲಿ... ಅಬ್ಬಾ... ಆ ಮಟ್ಟಿಗೆ ಹೋಲಿಸಿದ್ರೆ ಡಿಗ್ರಿ ಬುರ್ನಾಸ್... ಬಿಂಗ್ರಿ ಬರೋದೆ ಆಯಿತು... ಎಲ್ಲ ಫ್ರೆಂಡ್ಸ್ ಹುಡುಗಿಯರ ಹಿಂದೆ ಬಿದ್ದು ಹಾಳಾಗಿ ಹೋದ್ರೂ... ನಾನು... ನಾನೇನು ಡಿಗ್ರಿ ಫೈನಲ್ ಇಯರ್ ತನಕ ಸರಿ ಇದ್ದೆಯಲ್ಲ... ಅಮೇಲೆ... ಹಾಳದ್ನಾ... ಉಮ್ಮಾ... ಇಲ್ಲ... ನಾನು ಹಾಳಗಿಲ್ಲ... ನನ್ನ ಫ್ರೆಂಡ್ಸ್... ಅವರೂ ಹಾಳಗಿಲ್ಲ... ಪಿಯುವಲ್ಲಿ ಐಶ್ವರ್ಯಾ... ಹುಂ ಹೌದು... ಏನೆಲ್ಲ ಸುದ್ದಿ ನಮ್ಮ ಬಗ್ಗೆ... ಆದರೆ ನಿಜ ಗೊತ್ತಿದದ್ದು ನನಗೂ ಅಭಿಗೂ ಮಾತ್ರ... ಇಂದಿಗೂ ಐಶ್ವರ್ಯಾ ಐಶ್ವರ್ಯಾನೇ...

ಅಮೇಲೆ ಲಕ್ಷ್ಮೀ... ನಾನು ಈ ಸಂಪತ್ತನನ್ನು ಸೂಚಿಸುವ ಹೆಸರಿನ ಹುಡುಗಿಯರಿಗೆ ಅದು ಹೇಗೆ ಅಂಟಿಕೊಳ್ಳುತ್ತೇನೋ... ಅವಳು ಆಗ ಹೈಸ್ಕೂಲ್ ಹುಡುಗಿ ತಾನೇ... ಹುಡುಗಿಯರ ಮನಸ್ಸನ್ನು ಹಠದಿಂದ ಗೆಲ್ಲಲಾಗುವುದಿಲ್ಲ ಅಂತಾರಲ್ಲ... ಅದನ್ನು ಸುಳ್ಳು ಎಂದು ನಾನು ಆಗಲೇ ಸಾಬೀತು ಮಾಡಿರಲಿಲ್ವಾ... ಹಠ ಎಂದರೆ ಎಂತಹ ಹಠ... ಅದನ್ನು ನಾನು ಒಳ್ಳೆದಕ್ಕೆ ಬಳಸಿಕೊಂಡಿದ್ದರೆ ಏನೋ ಆಗಿ ಹೋಗುತ್ತಿದೆ... ಆದರೆ ಅವಳು ಇನ್ನೇನೂ ಪ್ರಪೋಸ್ ಮಾಡುತ್ತಾಳೆ ಅಂದಾಗ... ಅದು ಹೇಗೆ ಜಾರಿ ಕೊಂಡು ಬಿಟ್ಟೆ... ನನ್ನದು ಥರ್ಡ್ ಕ್ಲಾಸ್ ಜೀವನ... ನಾನು ಆಗ ಹಾಗೆ ಏಕೆ ಮಾಡಿದೆ...? ಕಾರಣವಿತ್ತು... ಸ್ಪಷ್ಟ ಕಾರಣವಿತ್ತು... ಮೊನ್ನೆ ಅವಳು ಸಿಕ್ಕಾಗ ಹೇಳಿದ್ನಲ್ಲ... ಅವಳ ಎದೆಯಲ್ಲಿ ಇನ್ನೂ ಪ್ರೀತಿ ಸತ್ತಿರಲಿಲ್ಲ... ಮೊದಲ ಪ್ರೀತಿನೇ ಹಾಗೆ... ನಾ ಹೇಳಿ ಮುಗಿಸಿದಾಗ ಅವಳ ಕಣ್ಣಲ್ಲಿ ನೀರು... ನಾನು ಅದೆಷ್ಟು ಹುಡುಗಿಯರ ಕಣ್ಣೀರು ನೋಡಿಲ್ಲ... ಅವರನ್ನು ಸಮಾಧಾನ ಮಾಡುವುದೇ ಒಂದು ಕಲೆ... ನನ್ನ ಕಾರಣ ಕೇಳಿ... ಅವಳಿಗೆ ನನ್ನ ಮೇಲಿದ್ದ ಪ್ರೀತಿ ಮತ್ತೂ ಹೆಚ್ಚಾಗಿದೆ... ನನ್ನದು ಬಿಕ್ನಾಸಿ ಲೈಫ್... ನಾ ಹೇಳಲೇ ಬಾರದಿತ್ತು... ಅಬ್ಬಾ ಈ ರೇಖಾ ನನ್ನನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು... ಅದಕ್ಕೆ ಅವಳು ಬರೆದ ಅಟೋಗ್ರಾಫ್ ಸಾಕ್ಷಿ... ನಿಜಕ್ಕೂ... ನಾನು ಇವತ್ತಿಗೂ ಅಟೋಗ್ರಾಫ್ ತೆಗೆದಿಟ್ಟುಕೊಂಡಿದ್ದೇನೆ ಅಂದರೆ ಅದಕ್ಕೆ ಅವಳು ಬರೆದದ್ದು ಕಾರಣ ಆಗಿರಬಹುದು... ಆದರೆ ಅರ್ಥ ಮಾಡಿಕೊಳ್ಳುವುದು ಅಂದರೆ ಏನು... ಅನ್ನೋದೆ ನನ್ನನ್ನು ಕಾಡೋದು... ನಾನು ಹೇಳೋದೆ ಬೇರೆ... ಮನುಷ್ಯ ಅಂದರೆ ಒಂದು ಕಲಾಕೃತಿ ರೀತಿ... ನೀವು ಅವನನ್ನು ಹೇಗೆ ನೋಡುತ್ತೀರೋ ಅವನು ಕೂಡ ನಿಮಗೆ ಹಾಗೆ ಕಾಣುತ್ತಾನೆ... ನಾ ರೇಖಾನಿಗೆ ಕಂಡ ರೀತಿ ಸೌಮ್ಯಳಿಗೋ, ಅನುರಾಧಳಿಗೋ, ಶಂಶೀರ್‌ಗೋ, ಅವಿಲ್‌ಗೋ, ಶ್ರೀಜಾಳಿಗೋ ಕಾಣಿಸಿಕೊಳ್ಳಬೇಕಿಲ್ಲ... ಮತ್ತೇ... ಅದ್ದರಿಂದ ಒಬ್ಬರನ್ನು ಅರ್ಥ ಮಾಡಿಕೊಂಡಿದ್ದೇನೆ ಅನ್ನುವುದೇ ಅರ್ಥವಿಲ್ಲದ ಮಾತು... ಆದ್ರೂ... ಈ ರಿಕ್ಷಾದವ ಎಲ್ಲಿ ನಿಲ್ಲಿಸುತ್ತಾನೋ... ಈ ಬದಿಯೋ... ಆ ಬದಿಯೋ... ಯಾವ ಬದಿ ಆದರೂ ನಮ್ಮತ್ತ ಹೋಗೋ ರೀಕ್ಷಾ ಏರಬೇಕು ಅಂದರೆ ರಸ್ತೆ ದಾಟಬೇಕು... ಅದಕ್ಕೆ ಮತ್ತೆ ಐದು ನಿಮಿಷ...ಆನಂದ್ ವಿಹಾರ್‌ಗೆ ಹೋಗೋ ಯಾವ ರಿಕ್ಷಾ ಏರೋದು... ಖೋಡದ ಮೂಲಕ ಹೋಗೋದೋ... ವೈಶಾಲಿ ಮೂಲಕ ಹೋಗೋದೋ... ಯಾವುದಾದರೇ ಏನು... ಎರಡು ಒಂದೇ... ಸರಿ... ಇದರಲ್ಲೇ ಕೂರೋಣವಂತೆ... ಅಡ್ಡ ಸೀಟಲ್ಲೇ ಕೂರೋಣ... ಇದರಲ್ಲೂ ಹುಡುಗಿಯರು ಇಲ್ಲ... ಈ ಹುಡುಗಿಯರು ಅಂದರೆ ಮಳೆಯಂತೆ... ಮಳೆಗಾಲದಲ್ಲಿ ಬೇಡ ಬೇಡ ಅಂದರೂ ಬರ‍್ತಾರೆ... ಬೇಸಿಗೆಯಲ್ಲಿ ಬೇಕು ಬೇಕು ಅಂದರೂ ಬರೋದಿಲ್ಲ... ಸುಡುಗಾಡು...ಇವತ್ತು ಸೌಮ್ಯಳಿಗೆ ಕಾಲ್ ಮಾಡಬೇಕು... ಹುಂ... ಸ್ಮೀತಾ ಅದೇಷ್ಟು ಒಳ್ಳೆಯವಳು... ಸುಮ್ಮನೆ ಬೆಟ್ ಕಟ್ಟಿದ್ದು... ಆದರೂ ಕಟ್ಲೀಸ್ ಕಳುಹಿಸಿದಳು... ಎಲ್ಲಾದರೂ ನಾನು ಸೋತಿದ್ರೆ ಕಳುಹಿಸುತ್ತಿದ್ನಾ? ಇಲ್ಲ... ಮೋಸ್ಟ್‌ಲಿ ಇಲ್ಲ... ಹೋ ಅವಳಲ್ಲಿ ಈ ಹಾಡು ಯಾವ ಸಿನೆಮಾದ್ದು ಅಂತ ಕೇಳಿದ್ರೆ ಹೇಳಬಹುದು... ಅವಳಿಗೆ ಗೊತ್ತಿರುತ್ತೆ... ಇಲ್ಲ ಅಂದ್ರೆ ಸುಪ್ರಭಾನಿಗೆ ಗೊತ್ತಿರಬಹುದು... ಹುಂ ಹಾಡು ಕೇಳದೆ, ಸಿನೆಮಾ ನೋಡದೇ ಎಷ್ಟು ದಿನ ಆಯಿತು... ಹಾಡು ಆದ್ರೂ ಕೇಳಬಹುದು... ಸಿನೆಮಾ ನೋಡುವಷ್ಟು ಟೈಮ್ ಇರೋದಿಲ್ಲ... ಏನೂ ಟೈಮ್ ಇರೋದಿಲ್ಲ... ಅಷ್ಟು ಟೈಮ್ ಇರುತ್ತೆ... ಟೈಮ್ ಮ್ಯಾನೇಜ್‌ಮೆಂಟ್ ಗೊತ್ತಿಲ್ಲ... ಇಲ್ಲ ನನ್ನಲ್ಲಿರುವ ಸಿನೆಮಾಗಳನ್ನು ನೋಡಲು ತುಂಬ ತಾಳ್ಮೆ ಬೇಕು...ಹೌದೌದು... ಈಗ ಕ್ರಿಕೆಟ್ ನೋಡಲು ಕೂಡ ಮೊದಲಿನಷ್ಟು ಆಸಕ್ತಿ ಇಲ್ಲ... ಏನು ಆಯಿತು... ಮೊದಲಿಗೆ ಕ್ರಿಕೆಟ್ ಮ್ಯಾಚ್ ಇದೆ ಎಂದಾಗ ತಪಸ್ಸಿಗೆ ಕುಳಿತ ಹಾಗೇ ಕೂರುತ್ತಿದ್ದೆ... ಇವತ್ತು ಟ್ರಾಫಿಕ್ ತುಂಬ ಕ್ಲೀಯರ್ ಇದೆ... ಈ ಮನುಷ್ಯ ಏಕೆ ಹೀಗೆ ಒದ್ದಾಡುತ್ತಿದ್ದಾನೆ... ಇರುವೆ ಬಿಟ್ಟು ಕೊಂಡಿದ್ದಾನೆ... ಎಲ್ಲದರೂ ನನ್ನ ಪಕ್ಕ ಚಂದದ ಹುಡುಗಿ ಕೂತುಕೊಂಡು ಹೀಗೆ ಒದ್ದಾಡಿದ್ದೆ ಆಗಿದ್ರೆ ನಾನು ಈ ರೀತಿ ಹೇಳ್ತಾ ಇದ್ನಾ... ಹುಡುಗಿಯರು ಈ ರೀತಿ ಒದ್ದಾಡೋದಿಲ್ಲ... ಯಾರೂ ಹೇಳಿದ್ದು... ನಮ್ಮೂರಿನ ಹುಡುಗಿಯರು ಒದ್ದಾಡೋದಿಲ್ಲ ನಿಜ... ಇವರು ದೆಹಲಿ ಹುಡುಗಿಯರು ತಾನೇ... ಬೋಲ್ಡ್ ಆಂಡ್... ಇಲ್ಲಿ ಮಾರ್ಗದ ಬದಿ ಅದೇಷ್ಟು ಚೆನ್ನಾಗಿ ಗಿಡ ನೆಟ್ಟಿದ್ದಾರೆ... ನಮ್ಮೂರಲ್ಲಿ ಎಲ್ಲ ರಸ್ತೆಗಾಗಿ ಮರ ಕಡಿತಾರೆ... ಮುಂದೊಂದು ದಿನ ಇದು ಉದ್ಯಾನ ನಗರಿ ಆಗುತ್ತೆ... ಬೆಂಗಳೂರು ಬರಡು ನಗರಿ ಆಗುತ್ತೆ... ಹಾಗೇ ಆಗ್ಬೇಕು...ಇಲ್ಲ ಅಂದ್ರೆ ಜನರಿಗೆ ಬುದ್ದಿ ಬರೋದಿಲ್ಲ... ಈ ಮನುಷ್ಯನನ್ನು ಈಗ ರೀಕ್ಷಾದಿಂದ ಕೆಳಗೆ ಹಾಕಬೇಕು... ಒಂಚೂರು ಮ್ಯಾನರ್ಸ್ ಇಲ್ಲ ಇವನಿಗೆ... ಇನ್ನೂ ಗಾಡಿ ನಿಲ್ಲಿಸಲು ಹೇಳಬೇಕು... ಮುಂದೆ ಇಳಿಯುವವರು ಇದ್ದಾರೆ... ಅವರು ಇಳಿದಾಗ ಇಳಿದ್ರೆ ಆಯಿತು...

No comments: