Saturday, October 16, 2010

‘ಅನ್`ಕಾಮನ್`ವೆಲ್ತ್' ಕ್ರೀ(ಪೀ) ಡಾಕೂಟ...

ಅಂತಿಮವಾಗಿ ಗುಲಾಮರಲ್ಲಿ ನಾವೇ ಎರಡನೇಯ ಶ್ರೇಷ್ಠರು ಎಂಬುದನ್ನು ಕಾಮನ್‌ವೆಲ್ತ್ ಗೇಮ್ಸ್‌ನ ಪದಕ ಪಟ್ಟಿ ನಿಸ್ಸಂಶಯವಾಗಿ ಸಾಬೀತುಮಾಡಿದೆ. ಒಡೆಯರನ್ನೇ ನಾವು ಮೀರಿ ನಿಂತಿದ್ದೇವೆ. ಇದಕ್ಕೆ ಕಾರಣಕರ್ತರಾದ, ಕಾರಣಕರ್ತರಾಗಿರುವ ಎಲ್ಲರಿಗೂ ಅಭಿನಂದನೆಗಳು. ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅತಿಥೇಯರಾಗಿ ಮತ್ತು ಸ್ಪರ್ಧಿಗಳಾಗಿ ನಾವಿಂದು ಹೆಮ್ಮೆಪಟ್ಟುಕೊಳ್ಳುವ ಸಾಧನೆ ಮಾಡಿದ್ದೇವೆ ಅಂದರೆ ಇದಕ್ಕಾಗಿ ನಾವು ೪೦೦ ವರ್ಷಗಳ ಕಾಲ ಸಾಕಷ್ಟು ಶ್ರಮ ಪಟ್ಟಿದ್ದೇವೆ, ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರ್ಥ. ನಮಗಾದ ಅವಮಾನ, ನೋವುಗಳನ್ನೆಲ್ಲ ನಗುನಗುತ್ತಾ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆದಿದ್ದೇವೆ. ನಮ್ಮ ಈ ನಿಷ್ಠೆಗೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ. ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಬಹಳ ಯಶಸ್ವಿಯಾಗಿ ಅಯೋಜಿಸಿದ್ದೇವೆ ಎಂದು ಅಧಿಕೃತ ಮೂಲಗಳು ನಮ್ಮ ಬೆನ್ನು ತಟ್ಟಿವೆ. ನಮ್ಮ ಗುಲಾಮಿ ಹಿರಿಮೆಯನ್ನು ಸಾರಿ ಸಾರಿ ಹೇಳಲು ಇನ್ನೇನು ಬೇಕು?
   ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ನಾವು ಆಯೋಜಿಸುತ್ತೇವೆ ಎಂದು ಸರ್ಕಾರ ಹೇಳಿದಾಗ ಭಾರತಿಯರೆಲ್ಲರು ಅದನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಆದರೂ ಆಗ ಈ ಕಾಮನ್‌ವೆಲ್ತ್ ಎಂಬ ಗುಲಾಮರ ಒಕ್ಕೂಟದ ಕ್ರೀಡಾಕೂಟದ ಹೆಸರಿನಲ್ಲದರೂ ದೆಹಲಿ ಸುಂದರವಾಗುತ್ತದೆ, ದೆಹಲಿಯ ಮೂಲಭೂತ ಸವಲತ್ತು ಸುಧಾರಿಸುತ್ತದೆ ಒಟ್ಟಿನಲ್ಲಿ ಆ ಮೂಲಕ ದೇಶದ ಒಳಿತು ಮತ್ತು ಅಧುನಿಕತೆಯನ್ನು ಸೀಮಿತ ವಿಶ್ವ ಸಮುದಾಯದ ಮುಂದೆ ಪ್ರಸ್ತುತ ಪಡಿಸಬಹುದು ಎಂಬ ಒಂದು ನಿರೀಕ್ಷೆಯಿತ್ತು.
   ಆದರೆ ಕೊನೆಗೆ ಆದದ್ದು ಏನು ಅನ್ನುವುದು ಎಲ್ಲರಿಗೂ ಗೊತ್ತಿದೆ. ಭ್ರಷ್ಟಾಚಾರದ ಭಸ್ಮಾಸುರನ ರುದ್ರ ನರ್ತನಕ್ಕೆ ಮುಟ್ಟಿದೆಲ್ಲ, ತಟ್ಟಿದೆಲ್ಲ ಉದುರಿ ಬೀಳುತ್ತಿದ್ದದು ಎಲ್ಲರಿಗೂ ತಿಳಿದಿರುವ ಸತ್ಯ, ಕೊನೆಗೆ `ದೇಶದ ಮಾನದ` ಪ್ರಶ್ನೆ ಬಂದು ಅದು ಯಾರು ಮಾಡಿದ ಪುಣ್ಯವೋ ಎಂಬಂತೆ ಎಲ್ಲವೂ ಸುಸೂತ್ರವಾಗಿ ನಡೆದು ಕಾಮನ್‌ವೆಲ್ತ್ ಕ್ರೀಡಾಕೂಟ ಸಾಂಗವಾಗಿ ನಡೆದಿದೆ ಎಂಬ ಭಾವನೆಯನ್ನು ಮೂಡಿಸಿದೆ.
   ಆದರೆ ವಾಸ್ತವ? ಭಾರತೀಯ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ, ಉದ್ಘಾಟನ ಸಮಾರಂಭ ಅದ್ಭುತವಾಗಿ ನಡೆದಿತ್ತು, ಎಲ್ಲೂ ಭಯೋತ್ಪಾದಕ ದಾಳಿಯ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ ಎಂದ ಮಾತ್ರಕ್ಕೆ ಕ್ರೀಡಾಕೂಟ ಯಶ ಕಂಡಿತು ಎಂದರ್ಥವೇ? ದೇಶದ ಮಾರ್ಯಾದೆ ಉಳಿಯಿತು ಎಂದರೆ ಒಂದಿಷ್ಟು ಅರ್ಥಪೂರ್ಣವಾಗಬಹುದೇನೋ. ತಾಳಿ ಕಟ್ಟಿದ ತಕ್ಷಣ ಮದುವೆ ಯಶಸ್ವಿ ಆಗುವುದಿಲ್ಲ, ಒಳ್ಳೆಯ ಊಟ ಹಾಕಿದ ತಕ್ಷಣವೂ ಯಶಸ್ವಿ ಆಗುವುದಿಲ್ಲ ಈ ಎಲ್ಲ ಪ್ರಕ್ರಿಯೆಗಳು ಕಾರ್ಯಕ್ರಮವನ್ನು ಯಶಸ್ವಿ ಎಂದು ಕರೆಯುವಂತೆ ಮಾಡಬಲ್ಲುದೇ ಹೊರತು ಆ ದಾಂಪತ್ಯವನ್ನಲ್ಲ! ದಾಂಪತ್ಯದ ಯಶಸ್ಸಿನ ಮಾನದಂಡಗಳು ಬೇರೆಯೇ ಇರುತ್ತವೆ. ಈ ಕ್ರೀಡಾಕೂಟದ ಕಾರಣದಿಂದ ದೆಹಲಿಯ ಮೂಲಭೂತ ಸೌಕರ್ಯ ಹೆಚ್ಚಾಗಿದ್ದರೆ, ದೇಶದ ಸಾಂಸ್ಕ್ರತಿಕ ಶ್ರಿಮಂತಿಕೆ ಜಗತ್ತಿನ ಮುಂದೆ ತೆರೆದುಕೊಂಡಿದ್ದರೆ, ದೇಶದ ಕ್ರೀಡಾ ಚಟುವಟಿಕೆಗಳ ಹರಿವಿಗೆ ಹೊಸ ರಭಸ ದಕ್ಕಿದ್ದೆ ಆದರೆ, ಮುಂದಿನ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಕೊಳ್ಳೆ ಹೊಡೆದದ್ದೇ ಆದರೆ ಈ ಕ್ರೀಡಾಕೂಟ ಯಶಸ್ವಿ ಆಗಿದೆ ಎಂದು ಹೇಳಬಹುದೇ ಹೊರತು ಈಗಲೇ ಅಲ್ಲ. ಅದೂ ಇಷ್ಟೆಲ್ಲ ಅಪಸವ್ಯ, ಮಾನವ ಹಕ್ಕುಗಳ ಉಲ್ಲಂಘನೆ, ದೆಹಲಿ ನಾಗರಿಕರ ಬದುಕನ್ನು ಹಣ್ಣು ಗಾಯಿ ಮಾಡಿದ ಬಳಿಕವೂ ಈ ಕ್ರೀಡಾಕೂಟವನ್ನು ಯಶಸ್ವಿ ಕ್ರೀಡಾಕೂಟ ಎಂದು ಹೇಳಿದ್ದೆ ಆದರೆ ಅದನ್ನು ಆಯೋಜಿಸಿದ ಉದ್ದೇಶದ ಬಗ್ಗೆಯೇ ಸಂಶಯ ಬರುತ್ತದೆ.
   'ಅನ್'ಕಾಮನ್'ವೆಲ್ತ್' ಇರುವವರಿಗಾಗಿ ಈ ಕ್ರೀಡಾಕೂಟ ನಡೆದಿದೆ ಎಂಬುದಕ್ಕೆ ಟಿಕೆಟ್ ದರಗಳೇ ಸಾಕ್ಷಿ. ಹಣ ಕೊಡುತ್ತೇವೆ ಟಿಕೆಟ್ ಕೊಡಿ ಎಂದವರಿಗೂ ಟಿಕೆಟ್ ಇಲ್ಲ ಎಂಬ ನಿರಾಶೆಯ ಟಿಕೆಟ್. ಸರಿ, ಸ್ಟೇಡಿಯಂನಲ್ಲಿ ಪ್ರೇಕ್ಷಕರಿದ್ದಾರಾ ಅದೂ ಇಲ್ಲ... ಟಿಕೆಟ್ ಇಲ್ಲ... ಜನರೂ ಇಲ್ಲ... ಮತ್ತೊಂದು ಮಕ್ಮಲ್ ನಡೆದಿದೆ ಎಂಬುದನ್ನು ಸಾಬೀತು ಮಾಡಿದವು. ಸಮಾರೋಪ ಸಮಾರಂಭಕ್ಕೆ ದೆಹಲಿಯ ಎಲ್ಲ ಅಧಿಕಾರಿಗಳ ದಂಡು ತಮ್ಮ ಬಂಧು ಮಿತ್ರರ ಸಮೇತರಾಗಿ ಆಗಮಿಸಿದ್ದರು, ಅವರಿಗೆ ಪಾಸ್ ಎಲ್ಲಿಂದ ಬಂತು ಎಂದು ಕೇಳಿದರೆ ಇನ್ನೊಂದು ಹಗರಣ ಹೆಡೆ ಬಿಚ್ಚಿಕೊಳ್ಳುವುದು ಶತಃಸಿದ್ಧ.
   ಇನ್ನೂ ಪೊಲೀಸರ ಸ(ದ)ರ್ಪಗಾವಲು ಎಲ್ಲ ಮಿತಿಗಳನ್ನು ಮೀರಿತ್ತು. ಭಾರತದ ನ್ಯಾಯಾಂಗ ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರು ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದರೆ ಪೊಲೀಸರದ್ದು ದೇಶದ ಸಮಸ್ತ ನಾಗರಿಕರು ತೊಂದರೆಗೀಡಾದರೂ ಪರವಾಗಿಲ್ಲ ಒಬ್ಬ ಟಿಕೆಟ್ ಇಲ್ಲದವರು ಸ್ಟೇಡಿಯಂನತ್ತ ಸುಳಿಯಲೇ ಬಾರದು ಎಂದು ಪಣ ತೊಟ್ಟಿದ್ದ ಹಾಗೆ ಕಾಣುತ್ತಿತ್ತು. ಸ್ಟೇಡಿಯಂನ ಒಳಗಡೆ ಹೋಗಲು ಟಿಕೆಟ್ ಕಡ್ಡಾಯ ಮಾಡಬೇಕು ಒಪ್ಪಿಕೊಳ್ಳೋಣ. ಆದರೆ ಸ್ಟೇಡಿಯಂನ ಪಕ್ಕ ಇರುವ ರಸ್ತೆಯಲ್ಲೂ ಟಿಕೆಟ್ ಇಲ್ಲದವರಿಗೆ ಪ್ರವೇಶ ಇಲ್ಲವೆಂದರೆ ಇದೆಂತ ಭದ್ರತಾ ವ್ಯವಸ್ಥೆ? ಇದು ಭದ್ರತಾ ವ್ಯವಸ್ಥೆ ಅಲ್ಲವೇ ಅಲ್ಲ ಭದ್ರತಾ ಪುಕ್ಕಲುತನ. ತಮ್ಮ ಮೇಲೆ ತಮಗೆ ವಿಶ್ವಾಸ ಇಲ್ಲದವರು ಮಾತ್ರ ಈ ರೀತಿ ಮಾಡಲು ಸಾಧ್ಯ. ಒಂದಿಷ್ಟು ಕಿಡಿಗೇಡಿಗಳಿದ್ದಾರೆ ಎಂದು ಇಡೀ ದೇಶದ ಜನರನ್ನು ಅನುಮಾನದ ದೃಷ್ಠಿಯಿಂದ ನೋಡುವ, ಅವಮಾನಿಸುವ ವ್ಯವಸ್ಥೆ ಇದು. ನೋಡಿದ ತಕ್ಷಣ ಯಾರು ಒಳ್ಳೆಯವರು, ಯಾರೂ ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಎಲ್ಲ ರೀತಿಯ ಪರೀಕ್ಷೆ ಮಾಡಿದ ಬಳಿಕವೂ ನಮ್ಮ ಸಾಚಾತನವನ್ನು ಪ್ರತಿ ಹೆಜ್ಜೆಯಲ್ಲಿ ಸಾಬೀತು ಮಾಡಿದ ಬಳಿಕವೂ ಟಿಕೆಟ್ ಇದ್ದವರಿಗೆ ಮಾತ್ರ ಸ್ಟೇಡಿಯಂ ಬಳಿಗೆ ಪ್ರವೇಶ ಉಳಿದವರಿಗೆ ಇಲ್ಲ ಎಂದರೆ ಅದು ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಅಲ್ಲದೇ ಮತ್ತೇನು?ಸಾಮಾನ್ಯ ನಾಗರಿಕರನ್ನು ಹೀಗೆ ಗೋಳು ಹೋಯ್ದುಕೊಳ್ಳುವುದರ ಬದಲು ಸರ್ಕಾರ ತನಗೆ ದೇಶದ ಪ್ರಜೆಗಳ ಮೇಲೆ ನಂಬಿಕೆ ಇಲ್ಲ ಎಂದು ನೇರವಾಗಿಯೇ ಹೇಳಲಿ. ವಿದೇಶಿಯರು ಇದನ್ನು ಕಂಡು ಹಿಗ್ಗಾಮುಗ್ಗ ಬಯ್ಯುತ್ತಿದ್ದದ್ದು ಸಾಮಾನ್ಯವಾಗಿತ್ತು.
   ಇನ್ನೂ ಸ್ವಯಂಸೇವಕರನ್ನು ನಡೆಸಿಕೊಂಡ ರೀತಿ ಮತ್ತು ಅವರು ನಡೆದುಕೊಂಡ ಬಗೆ ಎರಡರಲ್ಲೂ ಸಾಕಷ್ಟು ಹುಳುಕುಗಳಿದ್ದವು. ಅನೇಕ ಸ್ವಯಂಸೇವಕರು ಸಮವಸ್ತ್ರ ಧರಿಸಿಕೊಂಡು ತಮ್ಮ ಗೆಳೆಯ/ಗೆಳತಿಯರ ಜೊತೆ ಪಾರ್ಕ್, ಹೋಟೆಲ್ ಎಂದು ಸುತ್ತಾಡುತ್ತಿದ್ದರು. ಇನ್ನು ಸ್ವಯಂಸೇವಕರನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಳ್ಳಲಾಗಿದೆ ಎಂದು ಅನೇಕ ಸ್ವಯಂಸೇವಕರು ಕೂಡ ದೂರಿಕೊಂಡಿದ್ದಾರೆ.
   ಇದೆಲ್ಲದರಿಂದ ಬೇಸತ್ತಿದ್ದ ದೆಹಲಿ ಜನತೆಗೆ `ಗೋ ಕಾಮನ್‌ವೆಲ್ತ್ ಗೋ' ಎಂಬುದೇ ನಿತ್ಯ ಮಂತ್ರವಾಗಿತ್ತು.
   ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಸ್ಯಾಫ್ ಕ್ರೀಡಾಕೂಟಗಳನ್ನು ಆಯೋಜಿಸುವ ಸಂದರ್ಭದಲ್ಲಿ ನೈತಿಕ ಘನತೆಯಾದರೂ ಇರುತ್ತದೆ, ಆದರೆ, ಕಾಮನ್‌ವೆಲ್ತ್ ಕ್ರೀಡಾಕೂಟ ಎಂಬುದು ತಮ್ಮ ತಮ್ಮ ಗುಲಾಮಿತನವನ್ನು ಮತ್ತೇ ಮತ್ತೇ ಸಾಬೀತು ಮಾಡಲು ಇರುವ ಕ್ರೀಡಾಕೂಟವಷ್ಟೆ. ಇದೀಗ ಮತ್ತೇ ಎಲ್ಲ ಹಗರಣಗಳ ತನಿಖೆ ಮಾಡುವುದಾಗಿ ಸರ್ಕಾರ ಹೇಳಿಕೊಂಡು ಹೊಸದೊಂದು ಸಮಿತಿ ಮಾಡಿದೆ. ಇಂಥಹ ಸಮಿತಿಗಳ ರಚನೆ ನಮ್ಮಲ್ಲಿನ ನಿತ್ಯ ರಾಮಾಯಣ! ಕಲ್ಮಾಡಿಗಂತೂ ಪ್ರಧಾನಿ ಪದಕ ವಿಜೇತರ ಮನಮೋಹನ್ ಸಿಂಗ್ ಕರೆಯದೇ ಮಂಗಳಾರತಿ ಎತ್ತಿರುವುದು ಈ ಹಗರಣದ ತನಿಖೆ ಹಳ್ಳ ಹಿಡಿಯದು ಎಂಬುದನ್ನು ಸೂಚಿಸುತ್ತಿದೆ. ಇದು ಮನಮೋಹನ್‌ರಿಗೂ ತಮ್ಮ ಪ್ರಮಾಣಿಕತೆಯನ್ನು ದೇಶದ ಮುಂದೆ ತೆರೆದಿಡುವ ಅವಕಾಶ....
   ಹೋದ ಮಾರಿ ಮತ್ತೊಮ್ಮೆ ಬಾರದಿರಲಿ ಎಂದು ಎಲ್ಲರು ಬಯಸುತ್ತಿದ್ದಾರೆ ಆದರೆ ಅಧಿಕಾರಿಗಳು ಮಾತ್ರ ಇನ್ನು ಎಲ್ಲಿದೆ ಇಂಥಹ ಅವಕಾಶ ಎಂದು ಹುಡುಕುತ್ತಿದ್ದಾರೆ...

No comments: